ಶಾಲಿನಿ ಜ್ಞಾನಸುಬ್ರಮಣಿಯನ್ ‘ಅನಿವಾಸಿ’ಗೆ ಹೊಸಬರು. ಅವರ ಪ್ರಥಮ ಲೇಖನವನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ಅವರ ಸ್ವಪರಿಚಯ: “ನನ್ನ ಹುಟ್ಟೂರು ಬೆಂಗಳೂರು, ಓದಿದ್ದು ಬೆಳೆದಿದ್ದು ಎಲ್ಲಾ ಅಲ್ಲೇ. ಕಳೆದ ಇಪ್ಪತ್ತು ವರ್ಷಗಳಿಂದ ಯುಕೆ ನಲ್ಲಿ ಪರಿವಾರಸಹಿತವಾಗಿ ನೆಲೆಸಿರುವ ಕನ್ನಡತಿ. ಪ್ರಸ್ತುತ ನಾವು ಕಾರ್ಡಿಫ್ ನಲ್ಲಿ ನೆಲೆಸಿದ್ದೇವೆ. ವೃತ್ತಿಯಿಂದ ನಾನೊಬ್ಬ ಕಲಿಕೆ ಮತ್ತು ಅಭಿವೃದ್ಧಿ ತರಬೇತುದಾರಳು (Learning & development Trainer). ಶಾಸ್ತ್ರೀಯ ಸಂಗೀತದಲ್ಲಿ ನನಗೆ ತುಂಬಾ ಆಸಕ್ತಿ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತೇನೆ ಮತ್ತು ಹಾಡುತ್ತೇನೆ.”
ಚಿಕ್ಕಂದಿನಲ್ಲೇ ಜಾಲಿಯನ್ವಾಲಾ ಬಾಗ್ ಹತ್ಯಾಕಾಂಡದ ವಿವರಗಳು ಒಬ್ಬ ಪ್ರತ್ಯಕ್ಷದರ್ಶಿಯಿಂದ ಕೇಳಿ ಪ್ರಭಾವಿತರಾಗಿ ಕೆಲ ವರ್ಷಗಳ ಹಿಂದೆ ಸ್ವತಃ ತಮ್ಮ ಪರಿವಾರದೊಡನೆ ಹೋಗಿ ನೋಡಿಬಂದಿದ್ದಾರೆ. ಇತ್ತೀಚೆಗೆ ಯು ಕೆ ದಲ್ಲಿ ರಿಲೀಸಾದ ಚಿತ್ರ ”ಕೇಸರಿ – 2” ನೋಡಿದ ನಂತರ ಈ ಲೇಖನವನ್ನು ಬರೆದು ಕಳಿಸಿದ್ದಾರೆ. ಆ ಸಿನಿಮಾದ ಹಿನ್ನೆಲೆಯನ್ನರಿತವರಿಗೆ ಅಲ್ಲಿಯ ವಾಸ್ತವತೆ ಮತ್ತು ಅದರಲ್ಲಿಯ ಕಾಲ್ಪನಿಕ ಘಟನೆಗಳ ಬಗ್ಗೆ ಓದಿ ತಿಳಿದಿರ ಬಹುದು. ಇಲ್ಲಿ ಇನ್ನೊಂದು ಸ್ಪಷ್ಟೀಕರಣವೆಂದರೆ: ಬಹಳ ಜನರು ಜಾಲಿಯನ್ವಾಲಾ ಬಾಗ್ ನಲ್ಲಿ ಗೋಲೀಬಾರಿಗೆ ಆಜ್ಞೆ ಕೊಟ್ಟ ಕರ್ನಲ್ ( ಆಗ ತಾತ್ಕಾಲಿಕ ಬ್ರಿಗೇಡಿಯರ್ ಜನರಲ್ ಆಗಿದ್ದ) ರೆಜಿನಾಲ್ಡ್ ಡೈಯರ್ (Dyer) ಮತ್ತು ಆಗಿನ ಪಂಜಾಬ್ ಪ್ರಾಂತದ ಗವರ್ನರಾಗಿದ್ದವ ಮತ್ತು ರೆಜಿನಾಲ್ಡನ ಕುಕೃತ್ಯವನ್ನು ಸಮರ್ಥಿಸಿದ ಮೈಕೇಲ್ ಓ’ಡ್ವೈಯರ್ (O’Dwyer) ಹೆಸರುಗಳನ್ನು ಕನ್ಫ್ಯೂಸ್ ಮಾಡಿಕೊಳ್ಳುವ ಸಾಧ್ಯತೆಯಿದೆ.-ಸಂ)
ಜಾಲಿಯನ್‍ವಾಲಾ ಬಾಗ್ ನೆನಪುಗಳು -ಶಾಲಿನಿ ಅವರ ಲೇಖನ
ಕೆಲವೊಂದು ಚಲನ ಚಿತ್ರಗಳು ಹೀಗೂ ಇರುತ್ತವೆ. ಅದನ್ನು ನೋಡಿದಾಗ ನಮ್ಮೊಳಗಿನ ಭಾವನೆಗಳು ಹೊಮ್ಮುಕ್ಕುವುದಲ್ಲದೆ ನಮ್ಮನ್ನು ಸತ್ಯದೆಡೆಗೆ ಕರೆದೊಯ್ದು, ದೇಶಾಭಿಮಾನವನ್ನು ಕೆರಳಿಸಿ, ಪ್ರಜ್ವಲಿಸಿ ಭಾರತದ ಬಗ್ಗೆ ಹೆಮ್ಮೆಯಿಂದ ಎದೆಯುಬ್ಬಿಸುತ್ತದೆ. ನಿಮಗೂ ಒಮ್ಮೆಯಾದರೂ ಅಂಥ ಅಭಿಮಾನವುಂಟಾಗಿರಲು ಸಾಕು. ”Kesari 2: The untold story of Jallianwala Bagh” ಇಂತಹ ಒಂದು ಚಲನ ಚಿತ್ರ. ಅದನ್ನು ನೋಡುವಾಗ 1919 ರಲ್ಲಿ ಜಾಲಿಯನ್ವಾಲಾ ಬಾಗ್ದಲ್ಲಿ ನಡೆದ ಆ ಕರಾಳ ಘಟನೆಯನ್ನು ಹತ್ತಿರದಿಂದ ’ನೋಡಿ’ ಪ್ರಮಾಣಿಸಿ, ಪ್ರಶ್ನಿಸುವ, ಮತ್ತೊಮ್ಮೆ ಉದ್ವೇಗಿತರಾಗುವ ಅನುಭವ ನಮ್ಮದಾಗುತ್ತದೆ. ಜಾಲಿಯನ್‍ವಾಲಾ ಬಾಗ್! ಈ ಶೀರ್ಷಿಕೆಯೇ ಸಾಕು, ಭಾರತದ ಸ್ವಾತಂತ್ರ್ಯ ಚಳುವಳಿಯ ಅತ್ಯಂತ ದುಃಖದ ಅಧ್ಯಾಯದ ಸ್ಮರಣೆಯನ್ನು ತಂದು ನಮಗೆಲ್ಲ ಭಾರತೀಯರಿಗೆ ವಿವಿಧ ಭಾವನೆಗಳನ್ನೆಬ್ಬಿಸುತ್ತದೆ. ನನಗೆ ಇದರೊಡನೆ ವೈಯಕ್ತಿಕ ಸಂಬಂಧವಿದೆ ಎಂದರೆ ಉತ್ಪ್ರೇಕ್ಷೆ ಅಲ್ಲ ಎಂದು ಭಾವಿಸುತ್ತೇನೆ. ಶಾಲೆಯಲ್ಲಿದ್ದಾಗ ಇತಿಹಾಸದ ಪುಟಗಳಲ್ಲಿ ಓದಿದ್ದು ಪ್ರಾಯಶಃ ದಾಖಲೆಯಾಗಿರಬಹುದೇನೋ, ಆದರೆ ಅದಕ್ಕಿಂತ ಹೆಚ್ಚಾಗಿ ಆ ಹತ್ಯಾಕಾಂಡವನ್ನು ಸ್ವತಃ ವೀಕ್ಷಿಸಿದವರ ವರ್ಣನೆಯನ್ನು ಅವರ ಬಾಯಿಂದಲೇ ಕೇಳಿದ್ದೆನಲ್ಲ ಅದರಿಂದಲೇ ಏನೋ! ಅದು ಹೇಗೆ, ಅಂತೀರೋ? ಮುಂದೆ ಓದಿ!
ಪಂಡಿತ್ ಸುಧಾಕರ ಚತುರ್ವೇದಿ (1897 - 2020) ನನ್ನ ಹದಿಹರೆಯದ ವರ್ಷಗಳಲ್ಲಿ ನಮ್ಮ ತಾಯಿ ನಮ್ಮನ್ನು(ನನ್ನ ತಮ್ಮ ಮತ್ತು ನಾನು) ಹುರಿದುಂಬಿಸಿ ಪಂಡಿತ್ ಸುಧಾಕರ ಚತುರ್ವೇದಿ (20th April 1897-27th February 2020) ಯವರ ಸತ್ಸಂಗಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅದು ನಮ್ಮ ಜೀವನದಲ್ಲಿ ಬಲವಾದ ಮೌಲ್ಯಗಳ ಅಡಿಪಾಯವನ್ನೇ ಹಾಕಿತ್ತು. ಕನ್ನಡಿಗರಾದ ಪಂಡಿತ್ ಜಿ ಅವರು ವೇದಪಾರಂಗತರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಂಧಿತರಾಗಿ ಎರವಾಡ ಜೈಲಿನಲ್ಲಿದ್ದಾಗ 'ಜ್ಯೋತಿ ಸ್ವರೂಪ ಭಗವಾನ್, ಆ ದಿವ್ಯ ಜ್ಯೋತಿ ನೀಡು' ಎಂಬ ಕೃತಿಯನ್ನು ರಚಿಸಿದವರು. ಗಾಂಧೀಜಿಯವರ ಪತ್ರಗಳನ್ನು ರಹಸ್ಯವಾಗಿ ಒಂದೆಡೆಯಿಂದ ಇನ್ನೊಂದೆಡೆ ತಲುಪಿಸುತ್ತಿದ್ದರಿಂದ ಅವರನ್ನು ’ಗಾಂಧೀಜಿಯವರ Postman’ ಎಂದು ಕರೆಯುತ್ತಿದ್ದರು! ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಗಾಂಧೀಜಿ ಅವರ ಮನವಿಯಂತೆ ಲಾಹೋರಿಗೆ ಭೇಟಿನೀಡಿದಾಗ, ಪಾಕಿಸ್ತಾನದಲ್ಲಿ ಅವರ ಮೇಲೆ ದಾಳಿಯಾಗಿ ಅವರನ್ನು ಕತ್ತಿನವರೆಗೆ ಮಣ್ಣಿನಲ್ಲಿ ಜೀವಂತ ಸಮಾಧಿ ಮಾಡಲಾಯಿತು. ಆದರೆ ಹೇಗೋ ಅಲ್ಲಿಗೆ ಬಂದ ಭಾರತೀಯ ಸೈನ್ಯ ಪಡೆಯವರು ಅವರನ್ನು ಪಾರುಮಾಡಿ ರಕ್ಷಿಸಿ ಮುಂದಿನ ರೈಲು ಗಾಡಿಯಲ್ಲಿ ವಾಪಸ್ ಕಳಿಸಿದರು! (ಇದನ್ನು ಶ್ರೀ ಶ್ರೀ ರವಿಶಂಕರವರ ವಿಡಿಯೋದಲ್ಲಿ ಕೇಳಬಹುದು). ಪ್ರತಿ ಶನಿವಾರದಂದು, ಬೆಂಗಳೂರಿನ ಅವರ ಮನೆಯಲ್ಲಿ ನಡೆಯುತ್ತಿದ್ದ ಸತ್ಸಂಗದಲ್ಲಿ, ವೇದಮಂತ್ರಗಳ ಉಪನ್ಯಾಸದ ಜೊತೆಗೆ ಪಂಡಿತ್ ಜಿ ಅವರು ತಮ್ಮ ಜೀವನದ ವಿವಿಧ ರೋಚಕ ಅನುಭವಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. 13-4-1919 ರಂದು, ಅಂದರೆ ಇಂದಿಗೆ 106 ವರ್ಷಗಳ ಹಿಂದೆ ಜನರಲ್ ಡೈಯೆರ್ ನಡೆಸಿದ ಜಾಲಿಯಾನ್ ವಾಲಾ ಬಾಗ್ ಸಾಮೂಹಿಕ ಹತ್ಯೆಯನ್ನು ಪ್ರತ್ಯಕ್ಷವಾಗಿ ನೋಡಿ, ದೈಹಿಕ ಮತ್ತು ಮಾನಸಿಕ ನೋವುಂಡವರು ಆಗಿನ ತರುಣ ಪಂಡಿತ್ ಜಿ ಅವರು. ಆ ದಿನ ಸುತ್ತಲೂ ಬಂದೂಕಿನ ಸುರಿಮಳೆಯಾಗುತ್ತಿದ್ದಂತೆ ಒಂದು ಚರಂಡಿಯಲ್ಲಿ ಬಚ್ಚಿಟ್ಟುಕೊಂಡು ಪಾರಾದರು. ಈ ಹತ್ಯಾಕಾಂಡದ ನಂತರ ಅನೇಕರಿಗೆ ಅಂತ್ಯಕ್ರಿಯೆ ವಿಧಿಯನ್ನು ಸಹ ನಿರ್ವಹಿಸಿದ ಸ್ವಯಂಸೇವಕರು ಅವರು! ಹಲವು ಬಾರಿ ಈ ಘಟನೆಗಳನ್ನು ಅವರ ಬಾಯಿಂದ ಕೇಳಿದ ನನಗೆ ಮನದಾಳದಲ್ಲೆದ್ದ ಭಾವನೆ: ಎಂದೂ ನಮ್ಮ ಇತಿಹಾಸವನ್ನು, ನಮ್ಮ ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರರನ್ನು ಮರೆಯಬಾರದೆಂದು.
ಜಾಲಿಯನ್ವಾಲಾ ಬಾಗ್ ಗೆ ನಮ್ಮ ಭೇಟಿ. ನಮ್ಮ ಮಗಳಿಗೆ ಹನ್ನೆರಡು ವರ್ಷ ವಯಸ್ಸಾದಾಗ ನಾವು ಭಾರತ ಪ್ರವಾಸ ಮಾಡಿದಾಗ, ಅಮ್ರಿತ್ಸರ್ ಗೆ ಹೋಗ ಬೇಕೆಂದು ಯೋಜನೆ ಮಾಡಿದೆವು ಪೋಲೆಂಡ್ ದೇಶದಲ್ಲಿ ಎಲ್ಲ ಶಾಲಾ ಮಕ್ಕಳು ಬಲು ಚಿಕ್ಕ ವಯಸ್ಸಿನಲ್ಲೇ ಎರಡನೆಯ ವಿಶ್ವ ಸಮರದ ಸಮಯದಲ್ಲಿ ಆಶ್ವಿಟ್ಜ್ಎನ್ನುವ ಸ್ಥಳದಲ್ಲಿ ನಡೆದ ಕ್ರೂರ ಕಾನ್ಸಂಟ್ರೇಶನ್ ಕ್ಯಾಂಪನ್ನು ಎಂದೂ ಮರೆಯದಿರಲಿ ಎಂದು, ಆಶ್ವಿಟ್ಜ್ ಗೆ ಶಾಲಾ ಪ್ರವಾಸವನ್ನು ಕಡ್ಡಾಯವಾಗಿ ಏರ್ಪಡಿಸುತ್ತಾರೆ. ನಮ್ಮ ಭಾರತದಲ್ಲಿ ಇದೇನೂ ಇಲ್ಲ. ಇನ್ನು ಇಲ್ಲಿ ಯು ಕೆ ದಂಥ ಪರದೇಶದಲ್ಲಿ ಬೆಳೆಯುತ್ತಿರುವ ನಮ್ಮ ಭಾರತೀಯ ಮಕ್ಕಳಿಗೆ ನಮ್ಮ ಸ್ವಾತಂತ್ರ್ಯದ ಬಗ್ಗೆ ಹೇಗೆ ತಿಳಿದೀತು? ಈ ಮನವರಿಕೆಯಿಂದ ಅಮ್ರಿತ್ಸರ್ ನಲ್ಲಿರುವ ಜಾಲಿಯನ್ವಾಲಾ ಬಾಗ್ ಗೆ ನಾವೆಲ್ಲ 2022 ರಲ್ಲಿ ಭೇಟಿ ನೀಡಿದೆವು. ಜಾಲಿಯನ್ವಾಲಾ ಉದ್ಯಾನದಲ್ಲಿ ಆ ಎಪ್ರಿಲ್ ದಿನ (13-4-1919 ರಂದು) ಪುಟಾಣಿ ಮಕ್ಕಳಿಂದ ಹಿಡಿದು, ಗರ್ಭಿಣಿಯರು, ತಾಯಂದಿರು, ಮಹಿಳೆಯರು, ವೃದ್ಧರು, ಹದಿಹರಿಯದವರು, ಗಂಡಸರು ಯಾರನ್ನೂ ಲೆಕ್ಕಿಸದೆ, ಅವರ ಮೇಲೆ ತನ್ನ ಕೈಕೆಳಗಿನ ಸೈನಿಕ ಪಡೆಯವರಿಗೆ ಸತತ ಹದಿನೈದು ನಿಮಿಷಗಳ ಗುಂಡಿನ ಮಳೆಗರೆದು ಹತ್ಯೆ ಮಾಡಲು ಜನರಲ್ ಡೈಯರ್ ಆರ್ಡರ್ ಕೊಟ್ಟ. ಚೆಲ್ಲಾಪಿಲ್ಲಿಯಾಗಿ ಚದುರಿದ ಜನ ಸಮೂಹ, ಬಾವಿಗೆ ಹಾರಿದ ಜನರೆಷ್ಟು; ಪಾರಾಗಲು ಯತ್ನಿಸುತ್ತಾ ಅಲ್ಲಿದ್ದ ಗೋಡೆಯ ಹಿಂದೆ ಬಚ್ಚಿಟ್ಟುಕೊಂಡು ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸಾವನ್ನಪ್ಪಿದವರೆಷ್ಟು ಸಾವಿರಾರು ಭಾರತೀಯರು! ಮುಗಿಲು ಮುಟ್ಟುವ ಅವರ ಚೀತ್ಕಾರ! ಆ ವಾತಾವರಣವನ್ನು ನೆನೆದು ನಮ್ಮ ಕಿವಿಗಳನ್ನು ತೂತು ಮಾಡಿದಂತೆ ಭಾಸವಾಯಿತು. ಇಂದಿಗೂ ಆ ಉದ್ಯಾನದಲ್ಲಿ ಕಾದಿಟ್ಟ ಗೋಡೆಗಳಲ್ಲಿ ಬುಲ್ಲೆಟ್ಗಳ ಗುರುತುಗಳನ್ನು ನೋಡಬಹುದು. (ಕೆಳಗಿನ ಚಿತ್ರ ನೋಡಿರಿ. ಚಿತ್ರ ಕೃಪೆ: ಶಾಲಿನಿ). ಆ ಹುತಾತ್ಮರ ನೆನಪಿನಲ್ಲಿ ಅಲ್ಲಿ ಉರಿಯುತಿದೆ ಒಂದು ಅಮರ ಜ್ಯೋತಿ. ಅದೆಲ್ಲ ನೋಡುತ್ತ ಪಂಡಿತ್ ಜಿ ಅವರನ್ನು ನೆನೆದುಕೊಂಡೆ. ಅವರೆಲ್ಲಿ ಬಚ್ಚಿಟ್ಟುಕೊಂಡು ಪಾರಾಗಿರಬಹುದು ಅಂತ ನನ್ನ ಕಣ್ಣುಗಳು ಚರಂಡಿಗಳನ್ನು ಅರಸುತ್ತಿತ್ತು! ಈಗಲೂ ನನಗೆ ಆಗಿಂದಾಗ ಆ ಭೇಟಿಯ ನೆನಪಾಗುತ್ತಿರುತ್ತದೆ; ಕಣ್ಣು ಮಂಜಾಗುತ್ತದೆ! .
ಜಾಲಿಯನ್ವಾಲಾ ಬಾಗ್ ನಲ್ಲಿಗೋಡೇಗಳ ಮೇಲೆ ಬುಲೆಟ್ಟುಗಳ ಗುರುತು
ಇತ್ತೀಚೆಗೆ ನಾವು ಕಂಡ ಚಲನ ಚಿತ್ರ- ಕೇಸರಿ -2
ಎಪ್ರಿಲ್ ತಿಂಗಳಿನಲ್ಲಿ ವರ್ಷಾಬ್ದಿಯಂದು ರಿಲೀಸ್ ಆದ ಈ ಚಲನ ಚಿತ್ರದ ಅಧಿಕೃತ ಹೆಸರು Kesari Chapter 2: The Untold Story of Jallianwala Bagh. ನನ್ನ ಪತಿ ಸೇಕರ್ ಮತ್ತು ಮಗಳೊಂದಿಗೆ ಕಾರ್ಡಿಫ್ ನ ಚಿತ್ರಮಂದಿರದಲ್ಲಿ ನೋಡಿದೆವು. ಚಿತ್ರದ ಆರಂಭದಲ್ಲಿ 13-4-1919ರ ಆ ಕರಾಳ ದಿನದ ಘಟನೆಗಳನ್ನು ತೋರಿಸಿದ್ದಾರೆ. ಹೇಗೆ ಮರೆಯಲಾದೀತು ಈ ದೃಶ್ಯಗಳನ್ನು? ಸಿನಿಮಾ ಮುಗಿದ ನಂತರವೂ ಕಣ್ಣ ಮುಂದೆ ಅನವರತ ರೀಲುಗಳಂತೆ ಅದೇ ದೃಶ್ಯ! ಸಿನಿಮಾದ ಕಥಾ ವಸ್ತು ಮೇಲಿನ ಘಟನೆಗಳ ಹಂದರದಲ್ಲಿ ಹೆಣೆದ ರೋಚಕ ಚಲನಚಿತ್ರ (docudrama). ಸಿನಿಮಾದ ’ನಾಯಕ’ ಶಂಕರನ್ ನಾಯರ್(ಅಕ್ಷಯ್ ಕುಮಾರ್). ಆತ ವೃತ್ತಿಯಿಂದ ವಕೀಲ. ಬ್ರಿಟಿಷರಿಂದ ನಿಯುಕ್ತನಾದ ವೈಸರಾಯ್ ಕೌನ್ಸಿಲ್ ನ ಹಿರಿಯ ಸದಸ್ಯ ಹಾಗು ತನ್ನ ’ಸೇವೆಗೆ’ ಬ್ರಿಟಿಶ್ ಸರಕಾರದಿಂದ ನೈಟ್( knighthood) ಪದವಿನ್ನು ಪಡೆದಿದ್ದ ಸಹ. ಜಾಲಿಯಾನ್ವಾಲಾ ಬಾಗ್ ನ ಕ್ರೂರ ಹತ್ಯಾಕಾಂಡದ ನಂತರ ಸತ್ಯಾನ್ವೇಷಣೆಯ ವಿಚಾರಣೆ ನಡೆಸಿ (ತಮ್ಮ ಪರವಾಗಿ)ವರದಿಮಾಡಲು ಸರಕಾರದಿಂದ ನೇಮಿತವಾದವನು ಬರಬರುತ್ತ ಘಟನೆಗಳ ಹಿಂದಿನ ಸತ್ಯ ತೆರೆದುಕೊಂಡಂತೆ ಭಾರತೀಯರ ಪರವಾಗಿ ಹೋರಾಡುತ್ತಾನೆ. ಅಂಥ ಭಾರತಮಾತೆಯ ಧೀರ ಪುತ್ರನ ಕಥೆ ಅದು. ಜಾಲಿಯನ್ವಾಲಾ ಬಾಗ್ನಲ್ಲಿ ಕೂಡಿದ್ದ ಸಿಖ್ ಜನರು ಶಸ್ತ್ರಧಾರಿಗಳಾಗಿದ್ದರೆಂದು ನಂಬುವಂತೆ ಸರಕಾರದಿಂದ ಪ್ರಚಾರ ಮಾಡಲಾಗಿತ್ತು. ನಿಜ ಸಂಗತಿಯಲ್ಲಿ ಬೈಸಾಕಿ ದಿನದಲ್ಲಿ, ಅವರೆಲ್ಲ ರೌಲಟ್ಟ್ ಆಕ್ಟ್ ನ ಕುರಿತು ಶಾಂತಿಯುತ ಪ್ರತಿಭಟನೆಗಾಗಿ ಕೂಡಿದ್ದರು, ಮತ್ತು ಬ್ರಿಟಿಷ್ ಸರ್ಕಾರದ ಜನರಲ್ ಡೈಯರ್ ನೀಡಿದ ಆದೇಶ ಜನಾಂಗೀಯ ಘೋರ ನರಮೇಧಕ್ಕೆ ಕಾರಣವಾಯಿತೆನ್ನುವ ಸತ್ಯವನ್ನು ಮುಚ್ಚಿಡುವ ಪ್ರಯತ್ನಗಳು ಎನ್ನುವದನ್ನು ಸಿನಿಮಾ ಸ್ಪಷ್ಟಪಡಿಸುತ್ತದೆ. ಇದೊಂದು ಮನಸೆಳೆಯುವ ಕೋರ್ಟ್ ರೂಂ ನಾಟಕ. ಬ್ರಿಟಿಷರ ಪರ ವಕೀಲರಾಗಿ ನೆವಿಲ್ ಮೆಕಿನ್ಲಿ (ಮಾಧವನ್) ಮತ್ತು ಬಾರತೀಯರ ಪರವಾಗಿ ಶಂಕರನ್ ನಾಯರ್ (ಅಕ್ಷಯ್ ಕುಮಾರ್) ಅವರ ಮಧ್ಯೆ ನಡೆಯುವ ಘರ್ಷಣೆ ವೀಕ್ಷಿಸಲು ಯೋಗ್ಯವಾಗಿದೆ. ದಿಲ್ರೀತ್ ಕೌರ್ ಗಿಲ್ (ಅನನ್ಯ ಪಾಂಡೆ ) ಕಿರಿಯ ವಕೀಲಳು, ಆದರೆ ನೂರು ವರ್ಷಗಳ ಹಿಂದೆ, ಸತ್ಯಕ್ಕಾಗಿ ಶಂಕರನ್ ನಾಯರ್ ಜೊತೆ ಸೇರಿ, ಅವರನ್ನು ಪ್ರೇರೇಪಿಸಿದ ವೀರ ಯೋಧೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾಳೆ. ಚಿತ್ರಕಥೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ್ದರಿಂದ, (ಉದಾಹರಣೆಗಾಗಿ, ಮೆಕಿನ್ಲಿ ಮತ್ತು ದಿಲ್ರೀತ್ ಗಿಲ್ ಪಾತ್ರಗಳು ಕಾಲ್ಪನಿಕ) ಇದನ್ನು ಸಾಕ್ಷಿಚಿತ್ರ (documentary) ಎಂದು ಪರಿಗಣಿಸಲಾಗದು. ಆದರೂ ಅಜ್ಞಾತವಾಗಿದ್ದ ಯೋಧರ ಬಗ್ಗೆ, ಮುಚ್ಚಿಟ್ಟ ನಮ್ಮ ಭಾರತದ ಸ್ವಾತಂತ್ರದ ಹೋರಾಟದ ಪ್ರಮುಖ ಅಧ್ಯಾಯವನ್ನು ಬಹಿರಂಗ ಪಡಿಸಿರುವ ಈ ಚಲನ ಚಿತ್ರವನ್ನು ಎಲ್ಲ ಭಾರತೀಯರು ನೋಡಲೇ ಬೇಕು. 15 ವರ್ಷದ ಮೇಲಿನ ಮಕ್ಕಳಿದ್ದರೆ ಅವರನ್ನ ಕರೆದುಕೊಂಡು ಹೋಗಿರಿ. ( ಹತ್ಯಾಕಾಂಡದ ತೀವ್ರ ಗ್ರಾಫಿಕ್ ಚಿತ್ರಣದಿಂದಾಗಿ ಯುಕೆನಲ್ಲಿ ಸೆನ್ಸಾರ್ ಬೋರ್ಡ್ನಿಂದ ’15 certificate ಕೊಡಲಾಗಿದೆ). ನೀವೂ ಪರಿವಾರ ಸಮೇತವಾಗಿ ನೋಡಿ ಎಂದು ಶಿಫಾರಸ್ಸು ಮಾಡ ಬಲ್ಲೆ. 106 ವರ್ಷಗಳಾದ ನಂತರವೂ ನ್ಯಾಯಕ್ಕಾಗಿ ಭಾರತೀಯರ ಹೋರಾಟ ಮುಂದುವರಿಯುತ್ತಿದೆ. ಚಿತ್ರದ ಕೊನೆಯಲ್ಲಿ ಬ್ರಿಟಿಷ್ ಸರ್ಕಾರವು ಇನ್ನೂ ಕ್ಷಮಾಪಣೆ ಕೇಳಿಲ್ಲ ಎಂಬ ವಾಸ್ತವವನ್ನು ತಿಳಿಸಿದ್ದಾರೆ. ಇತಿಹಾಸದ ಪುಟಗಳಲ್ಲಿ ಶಂಕರ್ ನಾಯರ್ ಅವರಂತಹ ಉತ್ಕಟ ದೇಶಪ್ರೇಮಿಯ ಕೊಡುಗೆಯ ಬಗ್ಗೆ ಇಲ್ಲಿಯವರೆಗೂ ಕೇಳಿರಲಿಲ್ಲವಲ್ಲ ಎಂದು ನನಗೆ ಬೇಸರವಾಯಿತು.
- ಶಾಲಿನಿ ಜ್ಞಾನಸುಬ್ರಹ್ಮಣಿಯನ್ Learning & Development Trainer Cardiff Wales, U K
ಚಿತ್ರ ಕೃಪೆ: ಎಲ್ಲ ಫೋಟೋಗಳೂ ಲೇಖಕಿಯವರವು: (ಚತುರ್ವೇದಿಯವರದನ್ನು ಬಿಟ್ಟು - CC). ಲೇಖನದ ಅಡಿಯಲ್ಲಿಯ ಚಿತ್ರಗಳು ಜಾಲಿಯನ್ ವಾಲಾ ಬಾಗ್ ದೃಶ್ಯಗಳು. ಭಿತ್ತಿ ಶಿಲ್ಪಗಳು ಮತ್ತು ಸ್ಮಾರಕಗಳು ಮತ್ತು ಒಂದು ಅಮರಜ್ಯೋತಿ
ನಮಸ್ಕಾರ ಅನಿವಾಸಿ ಬಳಗಕ್ಕೆ. ಎಲ್ಲರಿಗೂ ಹೊಸ ಸಂವತ್ಸರದ , ಚೈತ್ರಮಾಸದ ಹಾರ್ದಿಕ ಶುಭಾಶಯಗಳು. “ ದಿನಾ ಸಮಯಕ್ಕೆ ಬರುವ ಬಸ್ಸು ಹತ್ತು ನಿಮಿಷ ತಡ ಮಾಡಿದರೆ ಅಲ್ಲೊಂದು ಕಥೆ ಹುಟ್ಟುತ್ತದೆ” ಎನ್ನುತ್ತಾರೆ ನಮ್ಮ ನೆಚ್ಚಿನ ಕಥೆಗಾರ ಕಾಯ್ಕಿಣಿಯವರು. ಹೌದಲ್ಲವೇ ಕಥೆಯೊಂದು ಹುಟ್ಟಲು ಅದೆಷ್ಟು ಕಾರಣಗಳು?! ಅಂತೆಯೇ ನೀವೆಲ್ಲೋ ನೋಡಿದ, ಒಡನಾಡಿದ ಜೀವಗಳೂ ಅಚಾನಕ್ ಆಗಿ ಪಾತ್ರಗಳಾಗಿ ನಿಮ್ಮ ಕಥೆಯಲ್ಲಿ ನುಸುಳಿ ಸೋಜಿಗವನ್ನುಂಟು ಮಾಡುತ್ತವೆ ಎನ್ನುತ್ತಾರವರು. ಅಂಥದೇ ಒಂದು ಹಳೆಯ ಕಥೆ ನಿಮ್ಮ ಓದಿಗಾಗಿ. ಓದಿ..ಹೇಗನ್ನಿಸಿತು ಹೇಳಿ.
~ ಸಂಪಾದಕಿ.
ಹಿರೇಕೆರೂರ ಬಸ್ಸು
ನಕಾಶೆಯಲ್ಲಿ ಹಗಲು ಹೊತ್ತಿನಲ್ಲಿ ದೀಪ ಹಚ್ಚಿಕೊಂಡು ಹುಡುಕಿದರೂ ಸಿಗದ ಒಂದು ಪುಟ್ಟ ಗ್ರಾಮ ಬಲಕುಂದಿ. ನಕಾಶೆಯಲ್ಲಿ ಅದರ ಅಸ್ತಿತ್ವ ಇರದಿದ್ದರೇನಂತೆ? ನಾರಣಪ್ಪ, ಹನುಮಪ್ಪ , ಈರಭದ್ರ, ದ್ಯಾಮವ್ವ-ದುರ್ಗವ್ವ ಇತ್ಯಾದಿ ದೇವ -ದೇವತೆಗಳ ಸಮೇತ ಬ್ರಾಂಬರು , ಶೆಟ್ಟರು, ಗೌಡರು, ಅಗಸರು , ಬ್ಯಾಗಾರು, ಮ್ಯಾಲಿನ ಓಣಿ, ಕೆಳಗಿನ ಓಣಿ , ಸಿನೀರ ಭಾವಿ, ಸಾದಾ ಭಾವಿ ,ಹಳ್ಳ , ದನಕರು, ಕೋಳಿ-ನಾಯಿ, ಜಗಳ-ಬಡಿದಾಟ, ಪ್ರೀತಿ-ಪ್ರೇಮ, ಹಾದರ…ಮಾನವ ಲೋಕದ ಸಕಲ ಸಲ್ಲಕ್ಷಣಗಳಿಂದ ಜೀವಂತವಿದ್ದ ಹಳ್ಳಿಯದು.
ಅವತ್ತೊಂದು ದಿನ ರವಿವಾರ. ಎಂದಿನಂತೆ ಬಸ್ ಸ್ಟ್ಯಾಂಡಿನ ತನ್ನ ಗೂಡಂಗಡಿಯ ಬಾಗಿಲು ತೆರದು, ಈಚಲು ಬಾರಿಗೆ ತಗೊಂಡು ಅಂಗಡಿ ಮುಂದ ಪರ ಪರ ಕಸ ಬಳಿದು, ನಾಲಕ್ಕು ತಂಬಿಗೆ ನೀರು ಹೊಡೆದು ಅಂಗಡಿ ಮೂಲ್ಯಾಗಿನ ಗ್ವಾಡಿಗೆ ಅಂಟಿಸಿದ್ದ ಬುತ್ತಿ ಬಸಪ್ಪನ ಫೋಟೊಕ್ಕೊಂದಿಷ್ಟು ಈಬತ್ತಿ ಬಳದು ‘ಸಿವ ಸಿವ’ ಅಂತ ಗುಬ್ಬವ್ವ ಕೈ ಮುಗಿತಿದ್ದಾಗ “ಹಿರೇಕೆರೂರ ಬಸ್ ಹೋತೇನ ಬೇ ಯತ್ತಿ” ಅಂತ ದನಿ ಕೇಳಿ ಈ ಕಡೆ ಹೊಳ್ಳಿ ನೋಡಿದಳು. ಆ ಪ್ರಶ್ನೆಗೆಉತ್ತರ ಕೊಡೂದು ತನ್ನ ಕೆಲಸವೇ ಅಲ್ಲ ಅನ್ನೂಹಂಗ ‘ಅಯ್ಯ ಮುತ್ತಪ್ಪಾ ನೀನಾ? ಇವತ್ತ್ಯಾಕಲೇ ಮುಂಜಮುಂಜಾನೆ ಬ್ಯಾಗ್ ಹಾಕ್ಕೊಂಡ ತಯಾರಾಗಿಬಂದಿ? ಆಯಿತವಾರ ಸಾಲಿ-ಕಾಲೇಜು ಸೂಟಿ ಅಂತ ಮರತ ಹೋದ್ಯಾ ಏನು?’ ಅಂತ ಕೇಳಿದಳು. ‘ಏಯ್ ಅದ್ಹೆಂಗ ಮರೀತೈತಿ ಬೇ , ನೀ ಒಂದ s ಇವತ್ತ ಬ್ಯಾಂಕಿನ exam ಐತೆ. ಅದಕ್ಕs ಹೊಂಟೀನಿ. 10:30 ಗೆ ಚಾಲೂ ಆಕ್ಕೈತಿ’ ಅಂದ. ‘ಹೀಂಗs, ಹಂಗಾರ ಆಫೀಸರ್ ಆಗಾವಾ ಬಿಡಪಾ. ಒಂದೀಟುನಮಗೂ ಏನರೇ ಕಡಿಮಿ ಬಡ್ಡಿಗೆ ಸಾಲಾ-ಗೀಲಾ ಕೊಡಸೋ ಯಪ್ಪಾ. ದರಾ ಮಳಿಗಾಲದಾಗ ಮನಿ ಸೋರಿ ಮನ್ಯಾಗ ಇಟ್ಟ ಮಾಲು, ಕಾಳು-ಕಡಿ ಹಾಳಆಗಾಕ್ಹತ್ತಾವ. ನೀ ಏನರೇ ಹಂಗ ಸಾಲಾ ಕೊಡಿಸಿದೆಂದ್ರ ಸಿಮಿಟ್ ಗಾರೀನೇ ಹಾಕಸತೀನೋ ಯಪ್ಪಾ ನಿನ್ನ ಹೆಸರಲೇ’…. ಬಸ್ಸು ಹೋತೋ ಇಲ್ಲೋಹೇಳೂದ ಬಿಟ್ಟು ತನ್ನದೇ ಸಮಸ್ಯೆಗಳ ಸಾಗರದಾಗ ಮುಳುಗಿ ಹೋಗಿದ್ಲು ಅಕಿ. ‘ಬಸ್ ಹೋಗಿದ್ರ ನಡಕೊಂಡ ಹೊಂಟ ಬಿಡತೀನೀ ಬೇ ..ಇಲ್ಲಕಂದ್ರಒಳಗ ಬಿಡಂಗಿಲ್ಲ ಪೇಪರ್ ಬರಿಯಾಕ’ ಅಂದ ಮುತ್ತಪ್ಪನ ಮಾತಿಗೆ ‘ಅಯ್ಯ ಸಿವನ, ಈ ಹಿರೇಕೆರೂರ ಬಸ್ಸು ಎಂದರs ಟೈಂ ಗೆ ಬಂದೈತೇನೋ ಯಪ್ಪಾ? 8 ರ ಬಸ್ಸು ಹೆಸರಿಗಷ್ಟೇ. ಹತ್ತು ವರಸ ಆತು, ನಿಮ್ಮಾಂವ ಹೋದಾಗಿನಿಂದ ಈ ಅಂಗಡ್ಯಾಗ ಕುಂಡ್ರಾಕಂತು ..ಒಂದಿನಾ ಅರೇ 9 ಕ್ಕಿಂತ ಮದಲಹೋಗಿಲ್ಲ ತಗಿ ತಮ್ಮಾ’ ಅಂದು ತನ್ನ ಅಂಗಡಿಯ ಗುಟ್ಕಾ ಪ್ಯಾಕೆಟ್ ಗಳ ಸರವನ್ನು ತೂಗು ಹಾಕೂದರಾಗ, ಪಚ್ಚ ಬಾಳೆಹಣ್ಣುಗಳನ್ನು ಜೋಡಿಸಿಡೂದರಾಗಮಗ್ನ ಆದ್ಲು. ಇರುವ ಎರಡು ಗೇಣಿನ ಅವಳ ಅಂಗಡ್ಯಾಗ ಏನೇನಿಲ್ಲ? ಸುಂಠಿ ಪೆಪ್ಪರ್ ಮಿಂಟು, ಲಿಂಬಿಹುಳಿ, ಅಲೇಪಾಕು, ಸಿಹಿ ಬಿಸ್ಕೀಟು, ಖಾರಾಬಿಸ್ಕೀಟು, ಸಣ್ಣಸಣ್ಣ ಸಿಹಿ ಬಡೇಸೋಪಿನ ಪ್ಯಾಕೆಟ್ ಗಳು, ಚಕ್ಕಲಿ,ಪಾಪಡಿ, ನಿಂಬು ಸೋಡಾ, ವೀಳ್ಯದೆಲಿ, ಅಡಿಕಿ, ಸುಣ್ಣ ಅಂತ ಪಾನಪಟ್ಟಿಗೆ ಬೇಕಾಗೂಸಾಮಾನುಗಳು, ತಂಬಾಕು, ಗಣೇಶ ಬೀಡಿ, ವ್ಹಿಲ್ಸ್ ಫ್ಲೇಕ್ ನಂಥ ಸಿಗರೇಟ್ ಪ್ಯಾಕ್ ಗಳು, ಕಡ್ಡಿಪೆಟ್ಟಿಗೆಗಳು, ಹಿಂದಿನ ದಿನದ ವರ್ತಮಾನ ಪತ್ರಿಕೆ, ಒಂದೆರಡು ಹಳೆಯ ರಾಗಸಂಗಮಗಳು, ಒಂದ್ನಾಕು ಥರದ ಸೀಟಿ-ಪೀಪೀಯಂಥ ಮಕ್ಕಳ ಆಟಿಕೆಗಳು, ಊದುಬತ್ತಿ, ಕಲ್ಲುಸಕ್ಕರೆ, ಟೆಂಗಿನಕಾಯಿಗಳು..
ಅಲ್ಲಿರುವ ಮಸೀದಿಗೆ, ಹೊಸೂರಿನ ಹಣಮಪ್ಪಗ ಗುರುವಾರ, ಶನಿವಾರ ಸುತ್ತಮುತ್ತಲ ಊರುಗಳಿಂದ ಬರುವ ಜನಕ್ಕೆಲ್ಲ ಈಕಿನೇ ಊದುಬತ್ತಿ-ಸಕ್ಕರೆ-ಕಾಯಿ ಸರಬರಾಜು ಮಾಡಾಕಿ.ಮೋಟರ್ ಸೈಕಲ್ ಮೇಲೆ ಫುರ್ ಅಂತ ಓಡಾಡೋ ಪಡ್ಡೆ ಹುಡುಗರಿಗೆ, ಕಾರು-ಜೀಪಿನಾಗ ಓಡಾಡೂ ದೊಡ್ಡಸಾಹೇಬರುಗಳಿಗೆ ಇವಳಂಗಡಿಯ ಪಾನಪಟ್ಟಿ, ಬೀಡಿ ಸಿಗರೇಟ್ ಗಾಗಿ ಒಂದು ಬ್ರೇಕ್ ತಗೋನೇಬೇಕು.
ಬಸ್ ನ ದಾರಿ ಕಾಯಕೋತ ಕೈಯಾಗಿನ ಪುಸ್ತಕ ತಗದು ಮ್ಯಾಲ ಕೆಳಗ ಏನೋ ಲೆಕ್ಕಾ ಮಾಡಕೋತ ಅಲ್ಲೇ ಇದ್ದ ಕಲ್ಲಬಂಡಿಮ್ಯಾಲ ಕೂತ ಮುತ್ತಪ್ಪ. ಬಡಿಗ್ಯಾರ ಈರಪ್ಪನ ಮಗನಾದ ಈ ಮುತ್ತ ಸಣ್ಣತನದಿಂದಲೂ ಓದಿನಾಗ ಮುಂದು. ಮನ್ಯಾಗೂ ಅಷ್ಟೇ ..ಜೋಡ ಕೊಡ ಹೊತ್ತು ನೀರು ತರುವಅವ್ವನಿಗೂ, ಬಡಿಗತನದ ಕೆಲಸದಲ್ಲಿ ಅಪ್ಪನಿಗೂ ತನ್ನಿಂದಾದಷ್ಟು ಸಹಾಯ ಕೇಳದೇ ಮಾಡುವವ. ಫಸ್ಟ್ ಕ್ಲಾಸಿನಾಗ ಮ್ಯಾಟ್ರಿಕ್ ಪರೀಕ್ಷಾ ಪಾಸ್ ಆಗಿ ವಿಜಯ ಮಹಾಂತೇಶ ಕಾಲೇಜಿನಾಗ ಕಾಮರ್ಸ್ ಗೆ ಎಡ್ಮಿಶನ್ ಮಾಡಿಸಿದ್ದ. ಹುಡುಗನ ಚುರುಕುತನ ಕಂಡ ಹೈಸ್ಕೂಲಿನ ಹಾದಿಮನಿ ಮಾಸ್ತರು ಹೆಂಗಓದಬೇಕು, ಫ್ರೀಶಿಪ್, ಸ್ಕಾಲರ್ ಶಿಪ್ ಗಳಿಗೆಲ್ಲ ಅರ್ಜಿ ಹೆಂಗ ತುಂಬಬೇಕು, B.com ಮಾಡಕೋತನs ಬ್ಯಾಂಕಿನ ಪರೀಕ್ಷಾಕ್ಕ ಹೆಂಗ ತಯಾರಿಮಾಡಕೋಬೇಕು ಇತ್ಯಾದಿಯಾಗಿ ಎಲ್ಲ ಸೂಕ್ತ ಮಾರ್ಗದರ್ಶನ, ಆಗಾಗ ಒಂದಿಷ್ಟು ರೊಕ್ಕದ ಸಹಾಯ ಎಲ್ಲ ಮಾಡುತ್ತಿದ್ದರು. ‘ಗುಣಕ್ಕೆ ಮತ್ಸರವೇ?’ ಅನ್ನೂಹಂಗ ಯೋಗ್ಯತೆಯಿದ್ದ ಎಲ್ಲ ಮಕ್ಕಳ ಬಗ್ಗೆಯೂ ಅವರಿಗೆ ಅಷ್ಟೇ ಕಾಳಜಿ. ‘ಹಿಂದಿನ ದಿನವೇ ಬೇಕಾರ ಇಲ್ಲೇ ಬಂದು ಮನ್ಯಾಗಿರು..ಅಲ್ಲೆ ಹಳ್ಳ್ಯಾಗಲೈಟೇ ಇರಂಗಿಲ್ಲ ಓದಾಕ’ ಅಂತ ಇಲಕಲ್ಲಿನಲ್ಲಿರುವ ತಮ್ಮ ಮನೆಗೆ ಬಂದು ಇರುವಂತೆ ಮುತ್ತಪ್ಪನನ್ನು ಕರೆದಿದ್ದರೂ ಹಾಗೆಲ್ಲ ಹೋಗಿ ಅವರಿಗೆ, ಅವರಮನೆಯವರಿಗೆ ಒಜ್ಜೆ ಆಗಬಾರದು ಅನ್ನೋದು ಮುತ್ತನ ಸಭ್ಯತೆ.
‘ಒಂದೀಟು ಕೈ ಕೊಡ ಬೇ ಇಳಸಾಕ’ ವೀಳ್ಯದೆಲೆಯ ಬುಟ್ಟಿಯನ್ನು ಹೊರಲಾರದೇ ಹೊತಗೊಂಡು ಬಂದ ಪಾತಜ್ಜಿ ಗುಬ್ಬವ್ವನ್ನ ಕರದ್ಲು.’ಅಯ್ಯ, ಒಂದ್ನಾಕುಪಿಂಡಿ ಕಮ್ಮಿ ಹೊತಗೊಂಡ ಬರಬೇಕಿಲ್ಲs, ಈ ವಯಸ್ಸನಾಗ ನಡ ಗಿಡ ಮುರದ್ರ ಯಾರ ದಿಕ್ಕ ಅದಾರ ನಿಂಗ? ಇದ್ದೊಬ್ಬ ಮಗಳನ್ನ ದೂರ ಕೊಟ್ಟ ಕುಂತಿ’ ಅಂತ ಬಯ್ಯಕೋತನ ಕಾಳಜಿ ತೋರಸಿ ಕೈ ಹಿಡದು ಬುಟ್ಟಿ ಇಳುಹಾಕ ನೆರವಾದ್ಲು. ‘ಅಂದ ಹಂಗ ಏಟರಾಗ ಗಿರಿಜಿಗೆ ಈಗ? ಆರಾಂ ಅದಾಳ ಅಕಿ? ಗಂಡ,ಅತ್ತಿ ಭೇಷ್ ನೋಡಕೋಂತಾರ?’ಎಂದು ಕೇಳಿ ‘ ಇಷ್ಟ ಯಾಕ ಹೊತಗೊಂಡ ಹೊಂಟಿ? ಇವತ್ತೇನ ಸಂತಿನೂ ಇಲ್ಲ’ ಎಂದು ಕೇಳಿದಳು. ಜೋಶಿಗಲ್ಲಿ ಜಾಗೀರದಾರರ ಮನ್ಯಾಗ ಲಗ್ನ ಐತಿ. ಅವರ ಎರಡೂ ಹೆಣ್ಣಮಕ್ಕಳದೂ ಒಮ್ಮೇ ಲಗ್ನ ಇಟಗೊಂಡಾರು. ಇವತ್ತ ದೇವರ ಕಾರ್ಯ ಐತಿ ಬೇ. ಎರಡ ಸಾವಿರ ಎಲಿ ಕೇಳ್ಯಾರು. ಅದಕ್ಕs ಹೊಂಟೀನಿ. ಆ ಜಾಗೀರದಾರರು ದೊಡ್ಡ ಮನಷಾರು. ‘ತಾಜಾ ಹಸರ ಎಲಿ ತಂದುಕೊಡು. ಛಲೋ ಕಾರ್ಯ. ನಾ ಏನ ಚೌಕಾಸಿ ಮಾಡಂಗಿಲ್ಲ. ಹಂಗs ಬಳಿ ಇಟಗೊಂಡು, ಊಟಾ ಮಾಡಿ, ಸೀರಿ ಉಟಗೊಂಡು ಹೋಗು’ ಅಂದಾಳ ಯವ್ವಾ ಆ ಪುಸ್ಪಕ್ಕ. ‘ಆತಯವ್ವಾ ತರತೀನಿ.ಒಂದು ಮಾತು ಸೀರಿ ಜರದ ಅಂಚಿಂದು, ಹಸರದು ಕೊಟ್ರ..ನನ್ನ ಮಗಳು ಇನ್ನೊಂದು ತಿಂಗಳದಾಗ ಹಡ್ಯಾಕ ಬರಾಕ್ಹತ್ತಾಳು. ಅಕಿಗೆಅದನ್ನೇ ಉಡಿಅಕ್ಕಿ ಹಾಕತೀನಿ’ ಅಂದಿದ್ದಕ್ಕ , ನಕ್ಕೋತ ‘ಆಗಲೇಳು, ಛಲೋ ಸೀರಿನೇ ಕೊಡತೀನಿ ನಿನ್ನ ಮಗಳು ಉಡೋ ಅಂಥಾದ್ದು’ ಅಂದಾಳವ್ವ. ಅಕಿನ್ನ ಹೊಟ್ಟಿ ತಣ್ಣಗಿರಲಿ. ಬಸ್ಸೇನೂ ಹೋಗಿಲ್ಲ ಹೌದಿಲ್ಲ ಬೇ..’ ಅಂತ ಕೇಳಿದ್ಲು. ‘ ನಾ ಅಂಗಡಿ ಕದಾ ತಗದು ತಾಸೊಪ್ಪತ್ತು ಆದಮ್ಯಾಗs ಬರತೈತಿಅದು.ಆ ಮುತ್ತಪ್ಪನೂ ಇಲ್ಲೇ ಅಡ್ಡಾಡಕ್ಹತ್ತಾನು..ನೋಡಲ್ಲೆ.’ ಅಂದು ಎಲೆಗಳ ತುದಿ ಕತ್ತರಿಸಿ ನೀರು ತುಂಬಿದ ಪ್ಲಾಸ್ಟಿಕ್ ಬುಟ್ಟಿಯೊಳಗ ಇಟ್ಟು , ಅಡಕೊತ್ತಿನಿಂದ ಅಡಿಕೆ ಕತ್ತರಿಸತೊಡಗಿದಳು.
ಮದುವೆಯಾಗಿ ಹದಿನೈದು ವರುಷವಾದರೂ ಮಕ್ಕಳಾಗದ ಪಾರೋತವ್ವ, ಪಾತಜ್ಜಿ ಸಂತಾನಕ್ಕಾಗಿ ಹರಸಿಕೊಳ್ಳದ ದೈವಗಳಿರಲಿಲ್ಲ; ಮಾಡಲಾಗದನಾಟಿವೈದ್ಯವಿರಲಿಲ್ಲ. ಅಂತೂ ದೈವ ಕಣ್ತೆರೆದು ಅಕಿ ಬಸುರಿ ಅಂತ ತಿಳಿಯೂದರಾಗ ನಾಟಕದ ಖಯಾಲಿಯಿಂದ ಪಾತ್ರಕ್ಕಂತ ಊರೂರು ಅಲೆಯುತ್ತಿದ್ದಅವಳ ಗಂಡ ನಿಂಗಪ್ಪ ಏನಾಯ್ತೋ ಗೊತ್ತಿಲ್ಲ ಊರಿಗೆ ಮರಳಲೇ ಇಲ್ಲ. ಯಾರೋ ಪಾತರದವಳ ಬೆನ್ನು ಹತ್ತಿ ಹಾಳಾದ ಅಂತಲೂ, ಏನೋ ಬರಬಾರದರೋಗ ಬಂದು ಸತ್ತ ಅಂತಲೂ, ಮಕ್ಕಳಿಲ್ಲದ ಗೊಡ್ಡಿ ಅಂತ ಇಕಿನ್ನ ಬಿಟ್ಟು ಬೇರೊಂದು ಸಂಸಾರ ಕಟಗೊಂಡು ದೂರದೂರಿನಾಗ ಇದ್ದಾನೆಂತಲೂ.. ಜನತಲೆಗೊಂದರಂತೆ ಆಡಿ ಅಂತೂ ಕೊನೆಗೆ ಮೌನವಾದರು. ಹೀಗಾಗಿ ಪಾರೋತಿಗೆ ಮಗಳು ಗಿರಿಜೆಯೇ ಸರ್ವಸ್ವ. ಗುಣ, ರೂಪದಲ್ಲಿ ಅಪ್ಪಟಬಂಗಾರದಂತಿರುವ ಅಕಿಯನ್ನು ಮಹಾಂತೇಶ ತಾನಾಗಿಯೇ ಕೇಳಿಕೊಂಡು ಬಂದು ಮದುವೆಯಾದ. ದೂರದ ಗೋಕಾಕ್ ನ ಸಕ್ಕರೆ ಫ್ಯಾಕ್ಟರಿಯಲ್ಲಿ ಅವನಕೆಲಸ. ತನ್ನ ಮನೆಯ ಹಿತ್ತಲು, ಅಂಗಳದಲ್ಲೇ ವೀಳ್ಯದೆಲೆಯ ಬಳ್ಳಿಗಳನ್ನು ಹಬ್ಬಿಸಿರುವ ಪಾರೋತೆವ್ವ ಹಳ್ಳಿಯ ಯಾರ ಮನೆಯಲ್ಲೇಮಂಗಳಕಾರ್ಯಗಳಾಗಲಿ, ಬಾಣಂತನವಾಗಲಿ ಹೋಗಿ ಹಸಿರಾದ ನಳನಳಿಸೋ ವೀಳ್ಯದೆಲೆಗಳನ್ನು ಒಂದು ತುಂಡು ಅಡಿಕೆಯಿಟ್ಟು ಬಾಯಿ ತುಂಬ ಹರಸಿಕೊಟ್ಟು ಬರುತ್ತಾಳೆ. ಉಳಿದಂತೆ ಗುಬ್ಬವ್ವನಂಥಾ ಸಣ್ಣ ಗೂಡಂಗಡಿಗಳಿಗೆ, ಇಲಕಲ್, ಹನುಮಸಾಗರದ ಸಂತೆಗಳಿಗೆ ಹೋಗಿ ಮಾರಾಟ ಮಾಡಿ ಬರುತ್ತಾಳೆ. ಈಗ ಮಗಳ ಚೊಚ್ಚಲ ಬಾಣಂತನದ ಸಂಭ್ರಮದಲ್ಲಿದ್ದಾಳೆ.
‘ ಯಕ್ಕಾ, ಈ ಸೂಟಕೇಸ್ ನೋಡತಿರಬೇ..ಇನ್ನೂ ಎರಡು ಬ್ಯಾಗ್ ಅದಾವು ಗೌರಕ್ಕಂದು. ತಗೊಂಡ ಬರತೀನಿ’ ಅಂತ ಹೇಳಿದ ಮಾದಪ್ಪನ ಕಡೆ ನೋಡಿದಗುಬ್ಬವ್ವ ‘ಹೌದಾ? ಊರಿಗೆ ಹೊಂಟಾಳೇನ ಇವತ್ತ? ಭಾಳ ಸಾಮಾನು ಮಾಡಕೊಂಡಾಳಲ್ಲಾ? ಕೂಸಿನ ಕಟಗೊಂಡು ಹೆಂಗ ಒಯ್ತಾಳೋ?’ ಅಂತಸ್ವಗತದಲ್ಲೇ ಗೊಣಗುತ್ತ ಕಾಲಾಗಿನ ಸೂಟಕೇಸ್ ಸರಿಸಿ ಬಾಜೂಕಿಡೂದರಾಗ ಒಂದೂವರೆ ವರುಷದ ಮಗನ ಜೋಡಿ ಗೋಣಿಚೀಲದಂಥ ವ್ಯಾನಿಟಿಬ್ಯಾಗ್ ಹೊತಗೊಂಡು ಗೌರಿ ಅಲ್ಲಿಗೆ ಬಂದ್ಲು. ಜೋಡಿಗೆ ತಂಗ್ಯಂದ್ರು, ಅವ್ವ-ಅಪ್ಪನೂ ಇದ್ರು. ‘ಅಯ್ಯ, ಇಷ್ಟ ಜಲ್ದಿ ಹೊಂಟ್ಯಾ? ಇನ್ನೊಂದ ನಾಕದಿನಾಇರಬೇಕ ಬ್ಯಾಡ’ ಅಂದ ಗುಬ್ಬವ್ವನಿಗೆ – ‘ಅಯ್ಯ, ಅಕಿನ್ನ ಗಂಡ ಇಷ್ಟ ದಿನಾ ಬಿಟ್ಟದ್ದs ಹೆಚ್ಚು. ದಿನಾ ಬೆಳಗಾದ್ರ ಫೋನ್ ಬರೂದು ಗೌಡ್ರ ಮನೀಗೆ’ ಉತ್ತರ ಕೊಟ್ಟ ದೇವಕ್ಕನ ದನಿಯಲ್ಲಿ ಮಗಳನ್ನು ಪ್ರೀತಿಸುವ ಅಳಿಯನ ಬಗ್ಗೆ ಅಭಿಮಾನ ಎದ್ದು ಕಾಣುತ್ತಿತ್ತು. ‘ಅಲ್ಲ ಯವ್ವಾ, ಇವತ್ತ ಆಯಿತವಾರ. ಇವತ್ತ್ಯಾಕ ಕಳಸಾಕತ್ತೀ ಗೌರಕ್ಕನ್ನ? ಆಯಿತವಾರ ತಾಯಿ-ಮಗಳು ಅಗಲಬಾರದು’ ಅಂದ್ಲು ಗುಬ್ಬವ್ವ. ‘ಹೌದವಾ, ಆದ್ರ ಈಗಿನ ಕಾಲದ ಹುಡುಗೂರುಅದನ್ನೆಲ್ಲ ಎಲ್ಲಿ ನಂಬತಾರ? ಅಲ್ಲದ s ನೌಕರದಾರ ಮಂದಿ ನೋಡು. ನಾಳೆ ಸ್ವಾಮವಾರದಿಂದ ಈಕಿನೂ ಕಾಲೇಜಿಗೆ ಹೋಗಬೇಕು ಕೆಲಸಕ್ಕ. ಇನ್ನಅಕಿನ್ನ ಗಂಡಗೂ ಆಯಿತವಾರ ಅಂದ್ರ ಆಫೀಸ್ ಇರಂಗಿಲ್ಲ. ಬಸ್ ಸ್ಟ್ಯಾಂಡಿಗೆ ಬಂದು ಕರಕೊಂಡು ಹೋಗಲಿಕ್ಕೆ ಅನುಕೂಲ ಆಗತದ ನೋಡು. ಅದಕ್ಕs ಮೊನ್ನೆನೇ ಪ್ರಯಾಣಕ್ಕ ಛಲೋ ದಿವಸ ಅಂತ ಪ್ರಸ್ಥಾನಗಂಟು ತಗದು ತುಳಸಿಕಟ್ಟ್ಯಾಗ ಇಟ್ಟಿದ್ದೆ ನೋಡು.’ ಅಂದ ದೇವಕ್ಕ ಮಗಳೆಡೆ ತಿರುಗಿ, ಅಂದಹಂಗಆ ಪ್ರಸ್ಥಾನಗಂಟು ಇಟಗೊಂಡಿ ಇಲ್ಲೊ? ಆ ಕೂಸಿನ half-sweater ಅಲ್ಲೇ ಶೇಂಗಾ ಚೀಲದ ಮ್ಯಾಲಿತ್ತು.ತಗೊಂಡ್ಯೋ ಇಲ್ಲೋ’ ಅಂತ ಕಾಳಜಿ ಶುರುಮಾಡಿದ್ಲು. ‘ ಸಣ್ಣ ಡಬ್ಬ್ಯಾಗ ಇಡ್ಲಿಗೆ ತುಪ್ಪ ಹಚ್ಚಿಟ್ಟೀನಿ ಆ ಕೂಸಿನ ಸಲುವಾಗಿ. ಪಾರ್ಲೆ ಜಿ ಬಿಸ್ಕೀಟೂ ಅವ. ನಿಂಗ ಅವಲಕ್ಕಿ, ಖೊಬ್ರಿವಡಿ ಹಾಕೀನಿ.ಬಸ್ನಾಗ ಮಂದಿ ಇರತಾರ ಹೆಂಗ ತಿನ್ನೂದಂತ ಉಪವಾಸ ಕೂಡಬ್ಯಾಡ. ಹಸಿವಾದ್ರ ತಿನ್ನು..ಅದಕ್ಕೂ ತಿನಸು. ಅಮ್ಮ-ಅಪ್ಪ-ತಂಗ್ಯಂದಿರ ಅಂತ:ಕರಣಕ್ಕೆಮೂಕವಾಗಿದ್ದ ಗೌರಿಗೆ ತೌರ ಬಿಟ್ಟು ಹೊರಡುವ ದು:ಖ. ಕಣ್ಣಂಚಲ್ಲಿ ಇಳಿಯಲು ತಯಾರಾಗಿ ನಿಂತಿದ್ದ ಗಂಗಾ-ಭಾಗೀರಥಿ. “ಯವ್ವಾ ದೇವಕ್ಕಾ, ಏಟಇದ್ರೂ ಹೆಣಮಕ್ಕಳು ಬ್ಯಾರೆಯವರ ಸ್ವತ್ತs ನೋಡು. ಆ ಸಿವಾ ಒಂದು ಗಣಮಗಾ ಕೊಡಲಿಲ್ಲ ನೋಡು ನಿನಗ’ ಅಂದ ಗುಬ್ಬವ್ವ ಮತ್ತೆ ತನಗೆ ತಾನೇ ‘ ಇರಲಿ ತಗಿ, ಎದಿ ಸೀಳಿದ್ರ ಎರಡಕ್ಷರ ಇರಲಾರದ ಅಡ್ನಾಡಿ ಗಂಡಮಕ್ಕಳಿಗಿಂತ ಇದ್ಯಾ,ಬುದ್ಧಿ, ನಯಾ-ನಾಜೂಕು ಎಲ್ಲಾ ಇದ್ದ ಇಂಥಾ ಹೆಣಮಕ್ಕಳ ಎಷ್ಷೋಬೇಸಿ ಬೇ ಯವ್ವಾ’ ಅಂದು ‘ಅಂದ್ಹಂಗ ಈಕಿ ಸಾಲಿ ಕಲಸಾಕ ಹೋದ್ರ ಕೂಸಿನ್ನ ಯಾರು ನೋಡಕೊಂತಾರು?’ ಅಂತ ತೆಹಕೀಕಾತ್ ಶುರು ಮಾಡಿದ್ಲು. ‘ಅಕಿನ ಅತ್ತಿ ಅದಾರವ್ವಾ. ಮೊಮ್ಮಗ ಅಂದ್ರ ಜೀವಾ. ಅವರ ಮನ್ಯಾಗೂ ಮದಲನೇ ಕೂಸು ನೋಡು. ಅಂಗೈಯಾಗ ಇಟಗೊಂಡಾರ. ಈಕಿ ಸಾಲಿಗೆಹೋಗಿ ಬರೂತನಾ ಏನು ಬಂದ ಮ್ಯಾಲೂ ಅದರ ದೇಖರೇಕಿ ಎಲ್ಲಾ ಅವರ ಅಜ್ಜೀದೇ..’ಮಗಳು ಒಳ್ಳೆಯ ಮನೆಗೆ ಸೇರಿ ಒಳ್ಳೆಯ ಜನರ ನಡುವೆ ಇರುವಸಮಾಧಾನ ಆ ತಾಯಿಗೆ.
ಅಷ್ಟರಲ್ಲೇ ಎದುರಿಗಿನ ‘ ಸಂಗಮೇಶ್ವರ ಟೀ ಕ್ಲಬ್’ ನಿಂದ ಹೊರಬಂದ ನಾಲ್ಕು ಜನರ ಗುಂಪು ಕಂಡು ‘ ನೀವೆಲ್ಲ ಅತ್ತಾಗ ಸರೀರಿ ಬೇ. ಗೌರಕ್ಕ ಬೇಕಾರಕುಂದರಲಿ ಕೂಸಿನ್ನ ತಗೊಂಡು. ಗಿರಾಕಿ ಬರತಾವು’ ಅಂತ ಅಷ್ಟೊತ್ತು ಆಪ್ತವಾಗಿ ಮಾತಾಡುತ್ತಿದ್ದವಳು ಈಗ ಯಾವ ಮುಲಾಜಿಲ್ಲದೆಯೂ ಎಲ್ಲರನ್ನೂತನ್ನಂಗಡಿಯ ಕಟ್ಟೆಯ ಮೇಲಿಂದ ಎಬ್ಬಿಸಿದಳು.
ಹಂಗ ನೋಡಿದ್ರ ಬಸ್ಸು ನಿಲ್ಲತಾವು ಅಂತ ಬಸ್ ಸ್ಟ್ಯಾಂಡ್ ಅನ್ನಬೇಕೇ ಹೊರತು ಅಲ್ಲಿ ಮಾಮೂಲು ಬಸ್ ಸ್ಟ್ಯಾಂಡಿನ ಯಾವ ಕುರುಹುಗಳೂ ಇರಲಿಲ್ಲ. ಊದ್ದಕ್ಕೂ ಹಾಸಿದ ಡಾಂಬರ್ ರಸ್ತೆ, ರಸ್ತೆ ಆಚೆ ಬದಿ ‘ ಸಂಗಮೇಶ್ವರ ಟೀ ಕ್ಲಬ್ಬು’.. ‘ಏರಿ ಮೇಲೆ ಏರಿ ಮೇಲೆಕೆಳಗೆ ಹಾರಿ ಹಕ್ಕಿ ಬಂದು ಕುಂತೈತಲ್ಲೋ ಓಮಾವಾ’ ಅಂತ ಯಾವಾಗಲೂ ನಡೆಯುತ್ತಿದ್ದ ಜೋರಾದ ಹಾಡಿನ ರೆಕಾರ್ಡು. ಅನತಿ ದೂರದಲ್ಲೇ ಸದಾ ನೆರಳು ಕೊಡುವ ಒಂದು ದೊಡ್ಡಅರಳೀಮರ.ಅದರ ಕೆಳಗಿನ ಕಟ್ಟೆಯಲ್ಲಿ ಹೆಗಲ ಮೇಲೆ ಟವೆಲ್ಲು ಹಾಕಿಕೊಂಡು ಪ್ಯಾಟಿ ಧಾರಣಿ ಮಾತಾಡುತ್ತಲೋ, ಇಸ್ಪೀಟು ಆಡುತ್ತಲೋ ಕುಳಿತ,ಹಲಕೆಲವು ಜನರು..ರಸ್ತೆಯ,ಈ ಕಡೆ ಗುಬ್ಬವ್ವನ ಅಂಗಡಿ. ರಾಷ್ಟ್ರೀಯ ಹೆದ್ದಾರಿ ಆದ್ದರಿಂದ ಓಡಾಡೋ ಬಸ್ಸುಗಳಿಗೆ ಬರವೇನಿರಲಿಲ್ಲ. ಆದರೆ ಎಲ್ಲಾ nonstop express ಬಸ್ಸುಗಳೇ. ಇಲ್ಲಿ, ಈ ಹಳ್ಳಿಯಲ್ಲಿ ನಿಲ್ಲಬೇಕಾದ ಕಿಂಚಿತ್ ಪ್ರಮೇಯವೂ ಅವುಗಳಿಗಿರಲಿಲ್ಲ. ಎಲ್ಲೋ ಹಿರೇಕೆರೂರು, ಅಕ್ಕಿಆಲೂರನಂಥಒಂದೆರಡು ಬಸ್ಸುಗಳು ಮಾತ್ರ ನಿಲ್ಲುತ್ತಿದ್ದವು. ಇಷ್ಟಕ್ಕೂ ಅವೂ ಕೂಡ ಬಸ್ಸಿನೊಳಗೆ ಜಾಗ ಇದ್ರ, ಕಂಡಕ್ಟರ್ ಗ ಸೀಟಿ ಊದಿ ಬಸ್ಸು ನಿಲ್ಲಿಸೋ ಮೂಡ್ಇದ್ರ, ಕೈ ಮಾಡುತ್ತಿದ್ದ ಯಾವುದೋ ಪ್ರಯಾಣಿಕರ ಆಸೆಕಂಗಳು ಡ್ರೈವರ್ ನಿಗೆ ಕರುಣೆ ಉಕ್ಕಿಸಿದ್ರ ನಿಲ್ಲತಿದ್ವು ಅನ್ನಿ. ಇಳಿವ ಒಬ್ಬಿಬ್ರು ಪ್ಯಾಸೆಂಜರಗಳನ್ನುಅರ್ಧ ಕಿಲೋ ಮೀಟರ್ ಹಿಂದೆ ಅಥವಾ ಮುಂದೆ ಇಳಿಸಿ ಪಿ.ಟಿ. ಉಷಾನಗತೆ ಓಡಿಹೋದ ಒಬ್ಬಿಬ್ಬರನ್ನು ಮಾತ್ರ ಹತ್ತಿಸಿಕೊಂಡು ಬುರ್ ಅಂತಧೂಳೆಬ್ಬಿಸಿಕೊಂಡು ಹೋಗಿಬಿಡೂದು ಅಂದ್ರ ಆ KSRTC ಬಸ್ ಗಳಿಗೆ ಆಟವಾಗಿತ್ತೇನೋ?! ಆದ್ರೂ ಕೆಲವು ಮಂದಿಗೆ ಅವುಗಳನ್ನು ನೆಚ್ಚದೇ ಬ್ಯಾರೆಹಾದಿಯಿದ್ದಿಲ್ಲ. ಹಂಗಂತ ಯಾರೂ ಅವುಗಳ ಬಗ್ಗೆ ಕಂಟ್ರೋಲರ್ ಮುಂದಾಗಲೀ, KSRTC ಗಾಗಲೀ ಕಂಪ್ಲೇಂಟ್ ಕೊಡಲೂಹೋಗುತ್ತಿರಲಿಲ್ಲ.ಯಾಕಂದ್ರ ಭಾಳಷ್ಟು ಊರಾಗಿನ ಮಂದಿಗೆ ಬಸ್ಸಿನ ದರಕಾರನೇ ಇದ್ದಿಲ್ಲ ಗೌಡ್ರು, ಶೆಟ್ಟರಂಥ ದೊಡ್ಡ ಕುಳಗಳು ಹೊಂಡಾ, ರಾಜದೂತ್ನಂಥ ಮೋಟಾರುಬೈಕ್ ಗಳನ್ನೋ, ಒಂದಿಬ್ಬರು ಮಾರುತಿ 800 ನ್ನೋ ಇಟ್ಟುಕೊಂಡಿದ್ದರು. ಗ್ರೈನೆಟ್ ವ್ಯವಹಾರದ Gem ಕಂಪನಿ ಲಾರಿಗಳಂತೂತಾಸಿಗೊಮ್ಮೆ ಓಡಾಡೂವು. ಎಷ್ಟೋ ಜನ ಅವುಗಳನ್ನೇರಿ ಹೊರಟುಬಿಡುವರು. ಕೆಲವು ಶ್ರಮಜೀವಿಗಳು, ಬಿಸಿರಕ್ತದ ಉತ್ಸಾಹಿಗಳು ‘ಈ ಬಸ್ಸಿನ ಹೆಣಾಯಾರು ಕಾಯತಾರು? ದೊಡ್ಡದೊಡ್ಡ ಹೆಜ್ಜಿ ಇಟ್ರ ಬಾಯಾಗಿನ ಅಡಿಕಿ ಮುಗಿಯೂದ್ರಾಗ ಇಲಕಲ್ ಮುಟ್ಟತೀವಿ’ ಅಂತ ಒಳಹಾದಿ ಹಿಡಿದುನಡೆದುಬಿಡುವವರು.ಇನ್ನು ಟೆಂಪೊಗಳಂತೂ ಗಜೇಂದ್ರಗಡ, ಹನುಮಸಾಗರದಿಂದ ಇಲಕಲ್ ಗೆ ಸಾಕಷ್ಟು ಓಡಾಡತಿದ್ವು. ಆದ್ರ 15 ಸೀಟಿನ ಅದರೊಳಗಕ್ಲೀನರ್ರು ಕನಿಷ್ಠ 35 ಮಂದಿಯನ್ನಾದರೂ ತುರುಕುತ್ತಿದ್ದ. ಒಮ್ಮೊಮ್ಮೆ ಕೋಳಿ, ಕುರಿಗಳೂ ಇರತಿದ್ವು.
ಹೊತ್ತು ಸರಿಯುತ್ತಿದ್ದಂತೆ ತಮ್ಮ ತಮ್ಮ ಗಮ್ಯಗಳತ್ತ ಹೊರಡಲು ತಯಾರಾಗಿ ನಿಂತಿದ್ದ ಮೂರೂ ಜನ ಪ್ರಯಾಣಿಕರಿಗೂ ಸ್ವಲ್ಪ ಸ್ವಲ್ಪವೇ ಆತಂಕ. ಮುತ್ತಪ್ಪನಿಗೆ ಪರೀಕ್ಷೆಯ ಸಮಯ ಮೀರಿದರೆ ಅಂತ ಚಡಪಡಿಕೆಯಾದರೆ, ‘ 10 ಗಂಟೆ ಒಳಗೆ ಎಲಿ ತಂದುಬಿಡು. ಬಳೆಗಾರ ಸಾಬನೂ ಅಪ್ಟೊತ್ತಿಗೆಬರತಾನು.ಹಂದರ ಪೂಜಾ,ಗಣಪತಿ ಪೂಜಾ, ಮುತ್ತೈದೆಯರಿಗೆ ಅರಿಶಿನ-ಕುಂಕುಮ ಕೊಡಲಿಕ್ಕೆ ..ಎಲ್ಲಾಕ್ಕೂ ಎಲಿ ಬೇಕಾಗತಾವ – ಅಂತ ಜಾಗೀರದಾರಅವ್ವ ಮದಲೇ ಹೇಳ್ಯಾಳು..ಹೊತ್ತಿಗೆ ಹೋಗದಿದ್ರ ಅವರೇನು ರೊಕ್ಕಸ್ತರು..ಒಂದಕ್ಕ ಎರಡು ಕೊಟ್ಟ ಯಾಕಾಗವಲ್ತು ಬ್ಯಾರೆ ಎಲ್ಲಿಂದರ ಪ್ಯಾಟಾಗಿಂದ ಎಲಿತರಸಗೊಂಡು ನಂಗ ‘ಬ್ಯಾಡ ಯವ್ವಾ, ನೀ ಭಾಳ ತಡಮಾಡಿದಿ’ ಅಂತ ವಾಪಸ್ ಕಳಿಸಿಬಿಟ್ರ ಅನ್ನೂ ಆತಂಕ ಪಾತಜ್ಜಿಗೆ. ಹತ್ತು ಸಲ ಎದ್ದು ನಿಂತು ಕಣ್ಣಿಗೆಕೈ ಅಡ್ಡ ಹಿಡಿದು ದೂರದತನಕಾ ದಿಟ್ಟಿಸಿದರೂ ಬಸ್ಸಿನ ಸುಳಿವೇ ಇಲ್ಲ. ‘ತಡ ಆದಷ್ಟು ಬಸ್ಸು ಭಾಳ ರಶ್ ಆಗಿಬಿಡತದ ಸುಡ್ಲಿ. ನೀವು ಡೈರೆಕ್ಟ್ ಬಿಜಾಪೂರಸೀಟ್ ಅದ ಅಂತ ಆ ಕಂಡಕ್ಟರ್ ಗ ಹೇಳ್ರಿ’ ಅಂತ ತನ್ನ ಪತಿಯತ್ತ ಹೊರಳಿ ನಿರ್ದೇಶನ ಕೊಡಲಿಕ್ಹತ್ತಿದ್ಲು ದೇವಕ್ಕ.
8:30 ಹೋಗಿ 9 ಆಗಿ 9:30 ಹೊಡಿಲಿಕ್ಕೆ ಬಂದ್ರೂ ಬಸ್ ಬರಲಿಲ್ಲ. ಆದ್ರ ಬಸ್ ಸ್ಟ್ಯಾಂಡ್ ಮಾತ್ರ ಗಿಜಿಗಿಜಿ ಅನತಿತ್ತು. ಹಂಗಂತ ಬಸ್ಸ್ಟ್ಯಾಂಡಿನಲ್ಲಿದ್ದವರೆಲ್ಲ ಬಸ್ ಹತ್ತಲಿಕ್ಕೇನೂ ಬಂದಿರಲಿಲ್ಲ. ಸಂಗಮೇಶ್ವರ ಟೀ ಕ್ಲ ಬ್ಬಿನ ಚಾ-ಮಿರ್ಚಿ, ಖಾರಾ-ಚುನಮುರಿಗಳ ಸಲುವಾಗಿ ಬಂದವರೆಷ್ಟೋ? ಗುಬ್ಬವ್ವ ನಂಗಡಿ ಗುಟಕಾದ ಸಲುವಾಗಿ ಬಂದವರೆಷ್ಟೋ? ಹಂಗs ಮುಂಜಾನೆದ್ದು ಒಂಚೂರು ಗಾಳಿ ಕುಡದು ಗಾಸಿಪ್ ಮಾಡಿ ತಾಜಾ ಆಗಲುಬಂದವರೆಷ್ಟೋ? ಬಯಲುಕಡೆ ಹೋಗಿ ಹಂಗs ಒಂದಿಷ್ಟು ಪಟ್ಟಾಂಗ ಹೊಡೀತಾ ನಿಂತವರೆಷ್ಟೋ? ಹೊತ್ತಾರೆ ಎದ್ದು ಬಿಸಿಲು ಮ್ಯಾಲೆ ಬರೂದರಾಗಕಟ್ಟಿಗೆ ಮಾಡಿಕೊಂಡು ದೊಡ್ಡ ಹೊರೆ ತಲೆಯಮೇಲಿಟ್ಟುಕೊಂಡು , ಸುಂದರ, ಕಸೂತಿ-ಕನ್ನಡಿಗಳ ಬಣ್ಣ ಬಣ್ಣದ ಲಂಗಗಳನ್ನು ಧರಿಸಿ, ಸೊಗಸಾದಲಂಬಾಣಿ ಭಾಷೆಯಲ್ಲಿ ಹಾಡುತ್ತ ಕ್ಯಾಟ್ ವಾಕ್ ಮಾಠುತ್ತ ನಡೆವ ಲಂಬಾಣಿ ಯುವತಿಯರನ್ನು ನೋಡಲೆಂದೇ ಬರುವರೆಷ್ಟು ಮಂದಿನೋ? ಅಂತೂಬಸ್ ಸ್ಟ್ಯಾಂಡ್ ಅಂತೂ ಗಿಜಿಗುಡುತ್ತಿತ್ತು.ಇನ್ನು ಇಷ್ಟು ಜನರನ್ನು ನೋಡಿ ಡ್ರೈವರ್ ಬಸ್ ನಿಲ್ಲಿಸಿಯಾನೇ ಎಂಬ ಚಿಂತೆ ಮೂವರನ್ನೂ ಕಾಡುತ್ತಿತ್ತು.
‘ಫಟ್ ಫಟ್ ಫಟ್’ ಸಪ್ಪಳ ಮಾಡುತ್ತ ತನ್ನ ಫಟಫಟಿಯನ್ನು ಒಂಟಿಗಾಲಿಯ ಮೇಲೆ ತಂದು ಸೀದಾ ಗೂಡಂಗಡಿಯ ಬಾಗಿಲಿಗೇ ಹಚ್ಚಿ ‘ಹೆಂಗದಿ ಬೇಯತ್ತಿ’ ಅಂದ ಲಮಾಣ್ಯಾರ ಪರಶ್ಯಾಗೆ ‘ಲೇ ಕುರಸ್ಯಾಲಾ, ಮೈಮ್ಯಾಗ ಖಬರ್ ಐತೆ ಇಲ್ಲೋ? ಹೀಂಗಾ ಗಾಡಿ ಹೊಡ್ಯೂದು..ಅದರ ಸಂಗಾಟs ನೀನೂಕುಣ್ಯಾಗ ಹೋಕ್ಕಿಯಲೇ ಒಂದಿನಾ’ ಎಂದು ಬಯ್ದಳು. ‘ಸಿನೆಮಾದಾಗ ಹೀಂಗs ಹೊಡಿತಾರಬೇ ಹಿರೋಗಳು..’ ಅಂದ ಅವನಿಗೆ, ‘ಅವರಿಗೇನಲೇಆಸ್ತಿ,ರೊಕ್ಕ ಅಳತಿರತೈತಿ ಹಿಂದ..ಆ ಯಮಧರ್ಮಗೂ ತಿನಿಸಿ ಬಚಾವ್ ಆಕ್ಕಾರು. ನಿಂದs ನೋಡಕೋಲೆ’ ಅಂದ ಅವಳ ಮಾತಲ್ಲಿ ಕಟುಸತ್ಯ ಅಡಗಿತ್ತು. ‘ಎನಗಿಂತ ಮಿಗಿಲಾದ ಯಮಧರ್ಮನವನಾರಿಹನು? ಹೇಳೈಎಲೆ ಬಾಲೆ’ ಎಂದು ಬಯಲಾಟದ ದಾಟಿಯಲ್ಲಿ ಹಾಡಿದ ಪರಶ್ಯಾಗೆ ‘ದೀಡ್ ಶ್ಯಾಣ್ಯಾ ಅದಿಬಿಡು. ರ ಅಂದ್ರ ಠ ಅನ್ನಾಕ ಬರದಿದ್ರೂ ಇಂಥದ್ದಕ್ಕೇನೂ ಕಮ್ಮಿ ಇಲ್ಲ. ತಗೋ..ನಡಿ ಅತ್ತಾಗ..ಗಿರಾಕಿಗೆ ಜಾಗಾ ಬಿಡು.’ ಅಂತ ಹುಸಿಮುನಿಸಿನಿಂದಬಯ್ಯುತ್ತ ಗುಟಕಾ ಪ್ಯಾಕೆಟ್ ಗಳನ್ನು ಕೊಟ್ಟಳು. ಊರಿನ ಪಡ್ಡೆ ಹುಡುಗರಿಗೆಲ್ಲ ಈ ಗುಬ್ಬವ್ವ ಯತ್ತಿನೇ; ಯಾರಿಗೂ ಚಿಗವ್ವ,ದೊಡ್ಡವ್ವ ಅಲ್ಲ. ಚೆಲುವೆಯರಾದ ಹದಿಹರೆಯಕ್ಕೆ ಕಾಲು ಇಡುತ್ತಿರುವ ಹೆಣ್ಣುಮಕ್ಕಳಿಬ್ಬರ ತಾಯಿ ಅಕಿ ಅಂತ ಬೇರೆ ಹೇಳಬೇಕಾಗಿಲ್ಲ.
‘ ಈ ಬಸ್ ಏನ ಇವತ್ತ ಬರಾಂಗ ಕಾಣಂಗಿಲ್ಲ. ನೀ ಇಲಕಲ್ ಗ ಹೊಂಟಿದ್ರ ನಾನೂ ನಿನ್ನ ಜತೀಲೇ ಬರತೀನಲೇ’ ಅಂದ ಮುತ್ತಪ್ಪನಿಗೆ ಪರಶ್ಯಾ ‘ಕುಂಡ್ರಹಂಗಾರ’ ಅಂತ ತನ್ನ ಹಿಂದಿನ ಸೀಟಿನಲ್ಲಿ ಕೂಡಿಸಿಕೊಂಡು ಭರ್ರನೇ ಗಾಡಿ ಚಾಲೂ ಮಾಡಿದ. ‘ಆ ಹುಡುಗಂದು ಪರೀಕ್ಸಾ ಐತಿ ಅಂತಲೇ. ಜ್ವಾಕ್ಯಾಗಿಕರಕೊಂಡ ಹೋಗಲೇ ಪರಶ್ಯಾ’ ಅಂತ ಅವನನ್ನು ಎಚ್ಚರಿಸಲು ಮರೆಯಲಿಲ್ಲ ಗುಬ್ಬವ್ವ.
ಹತ್ತೂವರೆಯಾದರೂ ಬಸ್ಸು ಬರದಿದ್ದಾಗ ‘ಯವ್ವಾ, ಇವತ್ತೇನ ಆತs ಈ ಬಸ್ಸಿಗೆ’ ಅಂತ ಬಸ್ಸಿಗೂ, ತನ್ನ ಹಣೆಬರಹಕ್ಕೂ ಹಿಡಿಶಾಪ ಹಾಕುತ್ತ ಒಮ್ಮೆ ಎದ್ದು, ಒಮ್ಮೆ ಕೂತು, ಮಗದೊಮ್ಮೆ ನಾಕ್ಹಜ್ಜೆ ಹಿಂದೆ ಮುಂದೆ ಓಡಾಡಿ ತನ್ನ ಆತಂಕವನ್ನು ಮರೆಸುತ್ತಿದ್ದಳು ಪಾತಜ್ಜಿ. ಬೆಳಗ್ಗೆ ಕುಡಿದ ಹಾಲು ಅರಗಿ ಪುಟ್ಟ ಪ್ರಣವ್ನೂ ಹಸಿವು-ನಿದ್ದೆಗಾಗಿ ಕಿರಿಕಿರಿ-ಚಿರಿಪಿರಿ ಶುರು ಮಾಡಿದ. ಬಿಸಿಲಿನ ಝಳವೂ ಏರಿದಂತೆ ಹಂಗೇ ಒಟ್ಟಿಬಂದ ಕೆಲಸವನ್ನೆಲ್ಲ ನೆನೆದು ದೇವಕ್ಕನೂಚಡಪಡಿಸತೊಡಗಿದಳು. ಅಷ್ಟರಲ್ಲಾಗಲೇ 2-3 ಟೆಂಪೊಗಳು ತುಂಬಿ ತುಳುಕುತ್ತ ಬಂದು ನಿಂತವಾದರೂ ಅವು ಪಾತಜ್ಜಿಯನ್ನು ಹತ್ತಿಸಿಕೊಳ್ಳುವ ಸಾಹಸಮಾಡಲಿಲ್ಲ- ಅವಳ ದೊಡ್ಡ ಎಲೆಬುಟ್ಟಿಯನ್ನು ನೋಡಿ.’ತಮ್ಮಾ, ಒಂದೆರಡು ರೂಪಾಯಿ ಹೆಚ್ಚಿಗಿ ತಗೋಳೋ ಬುಟ್ಟೀದೂ’ ಅಂತ ಅಕಿಅಲವತ್ತುಕೊಂಡರೂ .. ‘ಏಯ್ ರೊಕ್ಕದ್ದಲ್ಲ ಬೇ, ಬುಟ್ಟಿ ಇಡಾಕ ಜಾಗಾ ಎಲ್ಲೈತಿ? ನೋಡಿದ್ಯೋ ಇಲ್ಲೋ ಟೆಂಪೋ ಮ್ಯಾಗನೂ ಹೆಂಗ ಕುಂತಾರ ಮಂದಿ’ ಅಂತ ಉತ್ತರ ಕೊಟ್ಟು ‘ರೈಟ್ ರೈಟ್’ ಅಂತ ಕೂಗಿ ಗಾಡಿ ಹೊರಡಿಸಿಯೇಬಿಟ್ಟರು ಆ ಕಿನ್ನರುಗಳು. ಗೌರಿಗಂತೂ ಡೈರೆಕ್ಟ್ ಬಿಜಾಪೂರಕ್ಕೇಹೋಗಬೇಕಾದ್ದರಿಂದ ಟೆಂಪೊ ಹತ್ತಿ ಇಲಕಲ್ಲದಲ್ಲಿಳಿವ ಮಾತೇ ಇರಲಿಲ್ಲ.ಹೀಗಾಗಿ ಪಾತಜ್ಜಿ- ಗೌರಿಯರಿಬ್ಬರಿಗೂ ಹಿರೇಕೆರೂರ ಬಸ್ಸನ್ನು ಧ್ಯಾನಿಸುತ್ತಕುಳಿತಿರಬೇಕಾಯಿತು. ಮಧ್ಯಾಹ್ನದ ಊಟಕ್ಕೆಂದು ಗುಬ್ಬವ್ವನೂ ಅಂಗಡಿ ಬಂದ್ ಮಾಡುವ ಗಡಿಬಿಡಿಯಲ್ಲಿ ‘ ಇವತ್ತೇನ ಬಸ್ ಬರಂಗಿಲ್ಲ ಬಿಡ ಯವ್ವಾ, ಮನಿಗಿ ಹೋಗಿ ಉಂಡ ಮಕ್ಕೊ. ನಾಳಿಗಿ ಹೋಗಾಕಂತಿ.’ಅಂದಳು ಗೌರಿಗೆ. ಗೌರಿ ಸಮ್ಮಿಶ್ರ ಭಾವದಲ್ಲಿದ್ದಳು. ಒಂದೆಡೆ ಒಂದಿನ ಹೆಚ್ಚಿಗೆ ತೌರಲ್ಲಿ ಉಳಿವಸಂಭ್ರಮ ಮತ್ತೊಂದೆಡೆ ದಾರಿ ಕಾಯ್ದು ನಿರಾಶನಾಗುವ ಮನದನ್ನನ ಸಲುವಾಗಿ ಬೇಸರ. ಅಂತೂ ಬಂದ ದಾರಿಗೆ ಸುಂಕವಿಲ್ಲ ಎಂದು 12 ಗಂಟೆಯಹೊತ್ತಿಗೆ ಬಸ್ ಸ್ಟ್ಯಾಂಡ ಖಾಲಿ ಮಾಡಿದರು. ಬಿಸಿಲು ರಣರಣ ಅನತಿತ್ತು. ಪಾತಜ್ಜಿ ಮರುದಿನದ ಹನುಮಸಾಗರದ ಸಂತೀಗರೆ ಹೋಗಿ ಎಲೆ ಮಾರುವವಿಚಾರ ಮಾಡುತ್ತ ಸೋತ ಕಾಲುಗಳೊಂದಿಗೆ ವಾಪಸ್ ಹೊರಟಳು.
ಇಡೀ ದಿನ ರಣರಣ ಬಿಸಿಲು ಕಾಯ್ದು ಸಂಜೆ ಆಗುತ್ತಿದ್ದಂತೆಯೇ ಅಚಾನಕ್ ಆಕಾಶವೆಲ್ಲ ಕಪ್ಪು ಆವರಿಸಿ, ಮಂದಿಗೆ ಬೆಳಕಿಂಡಿ ಹಾಕಲಿಕ್ಕೂ ಪುರುಸೊತ್ತುಕೊಡದೇ ಧಪಾಧಪಾ ಅಂತ ಒಮ್ಮಿಂದೊಮ್ಮೆಲೇ ಶುರುವಾದ ಮಳಿ ಎರಡು ದಿನ ಒಂದು ನಿಮಿಷನೂ ನಿಲ್ಲದs ಸುರದೇ ಸುರೀತು. ಊರ ಮುಂದಿನಬೆಣ್ಣಿ ಹಳ್ಳ ಕಟ್ಟಿ ಬಸ್ಸು, ಟೆಂಪೊ ಎಲ್ಲಾ ಬಂದ್ ಆಗಿ, ಸೂರ್ಯನೂ ಇಲ್ಲದs, ಕರೆಂಟೂ ಇಲ್ಲದs ಇಡೀ ಹಳ್ಳಿ ಎರಡು ದಿನ ಪೂರಾ ‘ಗವ್’ ಅಂತ ಕತ್ತಲಾಗಇರೂ ಹಂಗ ಆಗಿ ಅಂತೂ ಬುಧವಾರದ ಹೊತ್ತಿಗೆ ಮಳಿಯ ಆರ್ಭಟ ಕಡಿಮೆಯಾಗಿ ಗುರುವಾರ ಮತ್ತ ಯಥಾಪ್ರಕಾರ ಸೂರ್ಯ ಹೊಳಕೋತ ಬಂದುಹಳ್ಳ ಇಳಿದು ಬಸ್ಸು ಗಿಸ್ಸು ಎಲ್ಲಾ ಚಾಲೂ ಆದ್ವು.
ಇತ್ತ,ಪಾತಜ್ಜಿಯ ಎಲೆಗಳೆಲ್ಲ ಪಾಪ ಅಕಿನ ಕನಸಿನ ಹಂಗೆನೇ ಬುಟ್ಟ್ಯಾಗೇ ಅರ್ಧ ಕೊಳೆತು, ಅರ್ಧ ಹಳದಿಯಾಗಿ ಕೂತಿದ್ವು. ಒಮ್ಮಿಂದೊಮ್ಮೆ ಅಡ್ಡಮಳಿಶುರು ಆದಾಗ, ಮಗಳ ಬಾಣಂತನಕ್ಕ ಅಗ್ಗಿಷ್ಟಿಗಿಗೆ ಬೇಕಂತ ಆಯ್ದು ತಂದ ಕಾಕುಳ್ಳು,ಇದ್ಲಿಚೀಲ ಎಲ್ಲ ಒಳಗ ತರಬೇಕಂತ ಗಡಿಬಿಡಿನಾಗ ಮಳ್ಯಾಗಹಿತ್ತಲದಾಗ ಹೋಗಿ ಅವನ್ನ ಹೊತಗೊಂಡು ಅವಸರಲೇ ಒಳಗ ಬರೂಮುಂದ ಕಾಲು ಜರದು ಬಿದ್ದು, ಕಾಲು ಉಳಕಿಸಿಕೊಂಡು ತಿಂಗಳುಗಟ್ಟಲೇಸರಿಯಾಗಿ ಅಡ್ಡಾಡಲಾಗದೇ ಪೂರಾ ಲುಕ್ಸಾನದಾಗ ಮುಳುಗಿಹೋದ್ಲು ಪಾತಜ್ಜಿ. ಮಗಳ ಕುಬಸದ ಕಾರ್ಯ,ಅಳ್ಯಾಗೊಂದು ಬಂಗಾರದ ಉಂಗುರ, ಮಗಳ ಸಿಜೇರಿಯನ್ ಹೆರಿಗೆ, ಕೂಸಿನ ತೊಟ್ಟಲಾ-ಬಟ್ಟಲಾ , ಕೂಸಿಗೊಂದು ಜರದಂಗಿ ಕುಂಚಗಿ, ಮುತ್ತಿನ ಜಬಲಾ, ಆಲದೆಲಿ ದುಬಟಿ,ಬೆಳ್ಳಿ ಗಿಲಕಿ, ಹಾಲ್ಗಡಗ.. ಅಂತೆಲ್ಲ ಸಿಕ್ಕಾಪಟ್ಟೆ ಖರ್ಚು ಬಂದು ಊರ ಸಾವಕಾರ ಈಶಪ್ಪನ ಹತ್ರ ಸಾಲ ಮಾಡಬೇಕಾತು. ಅದಕ್ಕಂತ ಇದ್ದೊಂದು ಮನೀದೂ ಪತ್ರ ಅಡಇಡಬೇಕಾತು.
ಆ ಕಡೆ ಪರಶ್ಯಾನ ಗಾಡಿ ಮ್ಯಾಲೆ ಹೊಂಟಿದ್ದ ಮುತ್ತ, ‘ಲೇ ಸಾವಕಾಶಲೇ ಪರಶ್ಯಾ’ ಅಂತ ಹೇಳತಿದ್ರೂ ವೇಗ ತಗ್ಗಿಸದೇ ಇಲಕಲ್ ಕ್ರಾಸ್ ನ ಮಹಾಂತೇಶಟಾಕೀಜ್ ಹತ್ರ ತಿರುವು ತಗೋ ಮುಂದ ಒಮ್ಮಿಂದೊಮ್ಮೆಲೇ ಎದುರಾದ ಟ್ರ್ಯಾಕ್ಟರಿಗೆ ಢಿಕ್ಕಿ ಹೊಡದು ಗಾಡಿ ಉರುಳಿಬಿದ್ದು ಪಕ್ಕದಲ್ಲಿದ್ದ
ದೊಡ್ಡ ಕಲ್ಲುಬಂಡೆಗೆ ಮುತ್ತನ ಬಲಗೈ ಬಡಿದು ‘ಯವ್ವಾ’ ಅಂದವನೇ ಅಸಾಧ್ಯ ನೋವಿನಿಂದ ಒದ್ದಾಡಿದ. ಸಣ್ಣಪುಟ್ಟ ತರಚು ಗಾಯಗಳಾಗಿದ್ದ ಪರಶ್ಯಾಟಾಕೀಜಿನ ಕಾವಲುಗಾರನ ಸಹಾಯದಿಂದ ಗಾಡಿ ಎತ್ತಿ ನಿಲ್ಲಿಸಿ ಮುತ್ತನ್ನ ಮೆತ್ತಗ ನಡೆಸಿಕೊಂಡು ಗಾಡಿ ಮೇಲೆ ಕೂಡಿಸಿಕೊಂಡು ಅಲ್ಲೇ ಹತ್ರ ಇದ್ದಕಾಖಂಡಕಿ ಡಾಕ್ಟರ್ ಹತ್ರ ಕರಕೊಂಡು ಹೋದ. ಕೈಯ ಬಾವು,ನೋವು ಗಮನಿಸಿದ ಅವರು ‘ಕೈಗೆ ಫ್ರಾಕ್ಚರ್ ಆದ್ಹಂಗ ಕಾಣಸತದ. ದೊಡ್ಡಾಸ್ಪತ್ರೆಗೆಕರಕೊಂಡು ಹೋಗು.’ಅಂತ್ಹೇಳಿ ಮುತ್ತನಿಗೆ ನೀರು ಕುಡಿಸಿ, ಪ್ರಥಮೋಪಚಾರ ಮಾಡಿ ಕಳಿಸಿದ್ರು. ಪಾಪ! ಬ್ಯಾಂಕಿನ ಪರೀಕ್ಷೆ ಬರೀಬೇಕಾಗಿದ್ದ ಮುತ್ತ ಕೈಗೆಬ್ಯಾಂಡೇಜ್ ಸುತಕೊಂಡು ಸರಕಾರಿ ದವಾಖಾನಿ ಕಾಟ್ ಮ್ಯಾಲ ಮಕ್ಕೊಳ್ಳೂ ಹಂಗ ಆತು.
ಇತ್ತ ಗೌರಿ ಅಳುಕಿನಿಂದ ಗಂಡನ ಫೋನ್ ಕಾಯ್ದದ್ದೇ ಬಂತು.ಅವನು ಸಿಟ್ಟಿಗೆದ್ದು ಮಾಡಲಿಲ್ಲವೋ, ಮಳಿ ಸಲುವಾಗಿ ಲೈನ್ ಕಟ್ ಆಗಿ ಫೋನ್ಬರವಲ್ತೋ ತಿಳೀಲಾರದೇ ಚಡಪಡಿಸಿದಳು. ಎರಡು ದಿನ ಹೆಚ್ಚಿಗೆ ತೌರಿನಲ್ಲಿರುವ ಸುಖ ವರುಣರಾಯ ಕರುಣಿಸಿದ್ದರೂ ಅದನ್ನು ಅನುಭವಿಸಲಾಗದೇಒಳಗೊಳಗೇ ತಳಮಳಿಸುತ್ತಿದ್ದಳು. ಅಂತೂ ಗುರುವಾರ ಹಿರೇಕೆರೂರು ಬಸ್ಸು 9 ಕ್ಕೆಲ್ಲ ಬಂದು, ಸೀಟೂ ಸಿಕ್ಕು 12 ಅನ್ನೂದರಾಗ ಬಿಜಾಪೂರದ ಬಸ್ಸ್ಟ್ಯಾಂಡ್ ಮಟ್ಟಿಯೂ ಆತು. ತಾನೇ ಬ್ಯಾಗು, ಕೂಸು ಎಲ್ಲ ಹೆಂಗೋ ಸಾವರಿಸಿಕೊಂಡು ಆಟೋ ಹತ್ತಿ ಮನೆಗೆ ಬಂದಿಳಿದಾಗ ಮನೆಯಲ್ಲಿಅತ್ತಿಯವರನ್ನು ಬಿಟ್ಟು ಯಾರೂ ಇರಲಿಲ್ಲ. ಅವರ ಗಂಟಿಕ್ಕಿದ ಮುಖದಿಂದಲೇ ಅವರ ಮನಸ್ಥಿತಿ ಅರಿಯಬಹುದಿತ್ತು. ‘ಬಂದ್ಯಾ ಕೂಸುಮರೀ, ಒಂದುಯುಗ ಆಗಿಹೋಗಿತ್ತಲ್ಲಾ ನಿನ್ನ ನೋಡದs?’ಅಂತ ಮೊಮ್ಮಗನನ್ನು ಎತ್ತಿ ಮಾತಾಡಿಸಿದ ಅವರು ಸೊಸೆಯತ್ತ ತಿರುಗಿ ‘ಹೇಳಿದ ಸಮಯಕ್ಕ ಬರಬೇಕು. ಆಗದಿದ್ರ ಮದಲs ಹೇಳಿಬಿಡಬೇಕು ಬರಂಗಿಲ್ಲ ಅಂತ..ಪ್ರಸನ್ನ ಎಷ್ಟ ಕಿರಿಕಿರಿ ಮಾಡಿಕೊಂಡಾನ ನಾಕ ದಿನದಿಂದ ಅನ್ನೂ ಅಂದಾಜರೇ ಅದನ ನಿನಗ?’ ಅಂತ ತುಸು ಬಿರುಸಾಗೇ ಅಂದು ಅವಳ ಉತ್ತರವನ್ನೂ ಕೇಳಲಿಷ್ಟವಿಲ್ಲದವರಂತೆ ಮಗುವನ್ನೆತ್ತಿಕೊಂಡು ತಮ್ಮ ರೂಮಿಗೆ ನಡೆದರು. ಗೌರಿಗೆ ಯಾಕೋಎಲ್ಲಾ ಖಾಲಿಖಾಲಿ ಎನಿಸಿ ಅಳು ಬರುವಂತಾಯ್ತು. ಸಂಜೆ ಮನೆಗೆ ಬಂದ ಯಜಮಾನರು ‘ಅಂತೂ ಬರಬೇಕನ್ನಿಸಿತಾ ತೌರುಮನೆ ಬಿಟ್ಟು ..ನೆನಪಾತಾನಮ್ಮದು. ಥ್ಯಾಂಕ್ಸ್ ವಾ ಬಂದಿದ್ದಕ್ಕ’ ಎಂದು ಕಹಿಯಾಗೇ ನುಡಿದಾಗ ಗೌರಿಗೆ ನೋವಿನೊಡನೆ ಸಿಟ್ಟೂ ಬಂತು. ಬಸ್ಸೇ ಬರದಿದ್ದುದು, ಎರಡು ದಿನ ಮಳಿಹಚ್ಚಿಹೊಡದು ಹಳ್ಳ ಕಟ್ಟಿದ್ದು ತನ್ನ ತಪ್ಪೇ ಅಂತ ಚೀರಿ ಹೇಳಬೇಕೆನ್ನಿಸಿತಾದರೂ ಮನೆತುಂಬ ಜನರಿರುವಾಗ ಹಾಗೆ ದನಿಯೇರಿಸಿ ಮಾತಾಡುವುದುಉಚಿತವಲ್ಲವೆನಿಸಿ ಏಕಾಂತದ ಗಳಿಗೆಗಾಗಿ ಕಾಯುತ್ತಿದ್ದಳು. ರಾತ್ರಿ ರೂಮಲ್ಲಿ, ತಾನು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಸ್ಸಿಗಾಗಿ ಕಾಯ್ದ ಬವಣೆಯನ್ನುಕಥಿ ಮಾಡಿ ಹೇಳುತ್ತಿದ್ದಾಗ – ‘ಇರಬೇಕು ಅನ್ನಿಸಿದ್ರ ಇದ್ದು ಬಾ ಗೌರಾ. ಆದ್ರ ಬಸ್ ಬಂದಿಲ್ಲ ಅಂತ ಸುಳ್ಳು ಹೇಳೂದು, ಅದೂ ನನ್ನ ಮುಂದ..ನಿನ್ನಕಡೆಯಿಂದ ಇದನ್ನ ನಿರೀಕ್ಷಿಸಿರಲಿಲ್ಲ.ಅವತ್ತ 11:30 ಅಂದ್ರ ಬಸ್ ಬಂದಿತ್ತು. ಕೊನೆಯ ವ್ಯಕ್ತಿ ಇಳದು ಕಂಡಕ್ಟರ್ ಬಾಗಿಲಾ ಬಂದ್ ಮಾಡೂತನಾ ಮೈಯೆಲ್ಲಕಣ್ಣಾಗಿ ಕಾಯತಿದ್ದೆ ನಿನ್ನ, ಪ್ರಣೂನ ಸಲೂವಾಗಿ.ಈಗ ನೋಡಿದ್ರ ನೀ ಹೀಂಗ ಹೇಳಲಿಕ್ಹತ್ತೀ.ನಮ್ಮ ನಡುವನೂ ಇಂಥ ಸುಳ್ಳುಗಳು ಬೇಕಾ? ಇಷ್ಟ ಏನನಮ್ಮ ಪ್ರೀತಿ ಅರ್ಥ?’ ಅಂತಂದು ಪ್ರಸನ್ನ ಹೊಳ್ಳಿ ಮುಸುಕು ಹಾಕಿಕೊಂಡಾಗ ಗೌರಿಗೆ ಎಲ್ಲ ಅಯೋಮಯ!! 4-6 ದಿನ ಇಬ್ಬರ ನಡುವೆಮಾತಿಲ್ಲ-ಕತೆಯಿಲ್ಲ. ನಡೆದದ್ದು ಬರೀ ಹಾಡು. ಅದೂ ಟೇಪ್ ರಿಕಾರ್ಡರಿನಲ್ಲಿ.. ‘ಏಕೆ ಹೀಗೆ ನಮ್ಮ ನಡುವೆ ಮಾತು ಬೆಳೆದಿದೆ..ಕುರುಡು ಹಮ್ಮುಬೇಟೆಯಾಡಿ ಪ್ರೀತಿ ನರಳಿದೆ’ ಅಂತ ಅಶ್ವತ್ಥ ಹಗಲೂ ರಾತ್ರಿ ಹಾಡಿದ್ದೇ ಹಾಡಿದ್ದು.
ತಪ್ಪು ಇಲ್ಲಿ ಯಾರದ್ದೂ ಅಲ್ಲ. ನಡೆದದ್ದು ಇಷ್ಟೇ..ಒಂದಿನವೂ ಸರಿಯಾದ ಸಮಯಕ್ಕೆ ಬಾರದೇ ಇದ್ದ ಹಿರೇಕೆರೂರ ಬಸ್ಸು ಅಂದು ಅದ್ಯಾವ ಹೊಸಕಂಡಕ್ಟರ್,ಡ್ರೈವರ್ ಇದ್ದರೋ ಗೊತ್ತಿಲ್ಲ 8 ಗಂಟೆಗೆ, ಸರಿಯಾದ ಸಮಯಕ್ಕೇ ಬಂದು ಎರಡು ನಿಮಿಷ ಬಸ್ ಸ್ಟ್ಯಾಂಡಿನಾಗ ನಿಂತು ಇಳಿವವರು, ಹತ್ತುವವರು ಯಾರೂ ಇಲ್ಲದೇ ಬುರ್ ಅಂತ ಹೊರಟು ಹೋಗಿದೆ. ಪಾಪ! ಗುಬ್ಬವ್ವಗಾದರೂ ಹೆಂಗ ತಿಳದೀತು ಅದು! ದಿನಾ ತಡಾಮಾಡೂ ಆಹಿರೇಕೆರೂರ ಬಸ್ಸು ಒಂದಿನಾ ಸರಿಯಾದ ಸಮಯಕ್ಕೆ ಬಂದು ಮೂರೂ ಜನರ ಜೀವನದಾಗ ಏನೇನೋ ಆವಾಂತರ ಮಾಡಿ ಹೋತು ಅನ್ರಿ.
ಈಗ ಗುಬ್ಬವ್ವನ ಗೂಡಂಗಡಿ ಜಾಗದಲ್ಲಿ ಸಿಮೆಂಟಿನ ಕಟ್ಟಡ ಎದ್ದಿದೆ. ‘ಕಾಮಧೇನು ಹಾಲಿನ ಡೈರಿ’ಯಲ್ಲಿ ಗುಬ್ಬವ್ವನ ಅಳಿಯಂದಿರು ಹಾಲು-ಮೊಸರು, ಬ್ರೆಡ್ಡು-ಬನ್ನು, ಜಾಮ್-ಸಾಸ್ ಗಳ ಭರ್ಜರಿ ಮಾರಾಟ ನಡೆಸಿದ್ದಾರೆ. ಪಾತಜ್ಜಿಯ ಮೊಮ್ಮಗ ಸುನೀಲ ಈಗ ಚಿಗುರು ಮೀಸೆಯ ಯುವಕ. ಧಾರವಾಡದಕೃಷಿವಿಶ್ವವಿದ್ಯಾಲಯದಲ್ಲಿ Bsc Agri ಮಾಡಿದ ಅವನು ತನ್ನ ಅಪ್ಪನ ನೆರವಿನಿಂದ ಗೌಡ ಈಶಪ್ಪನಿಂದ ಅಜ್ಜಿಯ ಮನೆ-ಎಲೆಯ ಪುಟ್ಟ ತೋಟಬಿಡಿಸಿಕೊಂಡದ್ದಲ್ಲದೇ ಅದನ್ನು ಎಕರೆಗಟ್ಟಲೆ ಬೆಳೆಸುವ ಹವಣಿಕೆಯಲ್ಲಿದ್ದಾನೆ. ಮರುವರುಷ ಬ್ಯಾಂಕ್ ಪರೀಕ್ಷೆ ಬರೆದು ಪಾಸಾದ ಮುತ್ತಪ್ಪ ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರಿನ ಬನಶಂಕರಿ ಶಾಖೆಯಲ್ಲಿ ಆಫೀಸರ್ ಆಗಿದ್ದಾನೆ. ಪುಟ್ಟ ಪ್ರಣವ್ ಈಗ ಸ್ನಾತಕೋತ್ತರ ಪದವೀಧರ. ಕಾಲೇಜುಓದುವ ಅಕ್ಕರೆಯ ಅವಳಿ-ಜವಳಿ ತಂಗ್ಯಂದಿರಿದ್ದಾರೆ. ಅವರ ಮನೆಯಲ್ಲೀಗ CD ಪ್ಲೇಯರ್ ‘ಒಲವೇ ಜೀವನ ಸಾಕ್ಷಾತ್ಕಾರ’ ಹಾಡುತ್ತಿದೆ.
ಹೀಗೆ ಎಲ್ಲ ಬದಲಾಗಿದೆ ಈಗ. ಆದರೆ ಈಗಲೂ ಬದಲಾಗದೇ ಇದ್ದದ್ದು ಒಂದೇ ಒಂದು—ಸಮಯಕ್ಕೆ ಸರಿಯಾಗಿ ಬರದ ಆ ಬಸ್ಸು;ಅದೇ ಹಿರೇಕೆರೂರಬಸ್ಸು.