ಕತೆಯಾಯಿತು  ಮರ

  • ಯೋಗೀಂದ್ರ ಮರವಂತೆ

ನೂರ್ಕಾಲ ಬದುಕಿದರೆ ಮಾನವರಿಗೊಂದು ವಿಶೇಷ ಸಾಧನೆ. ಕೇವಲ ಆಯಸ್ಸು ವಿಶೇಷತೆಯ ಮಾನದಂಡವಾಗದು. ಸ್ಥಳದ ನಾವಿನ್ಯತೆ, ಜನಪ್ರಿಯತೆ ಅಲ್ಲಿನ ವೈಶಿಷ್ಟ್ಯವನ್ನು ಅವಲಂಬಿಸಿರುತ್ತದೆ. ಇಂಗ್ಲೆಂಡ್, ಸ್ಕಾಟ್ಲೆಂಡಿನ ಗಡಿಯುದ್ದಕ್ಕೂ ರೋಮನ್ನರು ಕಟ್ಟಿದ ಹೆಡ್ರಿಯನ್ ಗೋಡೆ (ಪಾಗಾರ) ಐತಿಹಾಸಿಕ ಕುರುಹು. ಆ ಪಾಗಾರ ಮುರಿದು ಬಿದ್ದ, ಎರಡು ಗುಡ್ಡಗಳ ನಡುವೇ ಬಳುಕುವ ಸೊಂಟದಂದದ ಜಾಗೆಯಲ್ಲಿ ಸುಮಾರು ನೂರೈವತ್ತು ವರ್ಷಗಳಿಂದ ಸ್ವತಂತ್ರವಾಗಿ ಹರಡಿ ಸೊಂಪಾಗಿ ಬೆಳೆದಿದ್ದ ಚೆಲುವೆ ಸಿಕಮೋರ್ ಗ್ಯಾಪ್ ಮರ. ಸಿಕಮೋರ್ ಮರಗಳು ಸರಿ ಸುಮಾರು ೩ ೦ ೦ -೪ ೦ ೦ ವರ್ಷಗಳ ಕಾಲ ಬಾಳ ಬಲ್ಲವು. ಮರಗಳ ಜಗತ್ತಿನಲ್ಲಿ ೩ ಶತಮಾನಗಳ ಬಾಳ್ವೆ ಏನೇನೂ ಅಲ್ಲ. ಸಹಸ್ರಾರು ವರ್ಷಗಳ ಕಾಲ ಬದುಕಿ ಮನುಕುಲದ ಉನ್ನತಿ ಅವನತಿಯ ಹಾದಿಯನ್ನೆಲ್ಲ ಅವಲೋಕಿಸುವ ಮರಗಳು ಜಗತ್ತಿನ ತುಂಬೆಲ್ಲ ಕಾಣ ಸಿಗುತ್ತವೆ. ಇಂದಿನ ಲೇಖನ ನೀವು ಊಹಿಸಿದಂತೆ ನಾರ್ಥಂಬಲ್ಯಾನ್ಡ್ ನ ಪ್ರಸಿದ್ಧ ಸಿಕಮೋರ್ ಗ್ಯಾಪ್ ಮರದ ಕಥೆ. ಯೋಗೀಂದ್ರ ಅವರ ಬರಹದಲ್ಲಿ ಹಿಂದೆ ನಾವು ಕಂಡಂತೆ ಅಮೂರ್ತವನ್ನು ಮೂರ್ತವಾಗಿಸುವ, ನಿರ್ಜಿವವನ್ನು ಸಜೀವಗೊಳಿಸುವ ವೈಶಿಷ್ಟ್ಯತೆ ಇದೆ. ಅದೇ ಹೊಳಹಿನಲ್ಲಿ ಮರವನ್ನು ಅವರು ಮಾನವ ರೂಪದಲ್ಲಿ ನಮ್ಮ ಮುಂದೆ ಪ್ರಸ್ತುತಿಸಿದ್ದಾರೆ. ಈ ಲೇಖನವನ್ನು ಓದುವಾಗ ಕರುಣೆ, ಜಿಗುಪ್ಸೆ, ಕ್ರೌರ್ಯ, ಮತ್ಸರ, ಕುಹಕತೆ, ಇನ್ನಿತರ ಭಾವಗಳು ನಿಮ್ಮಲ್ಲಿ ಹೊಮ್ಮುವುದು ಖಚಿತ. ಕೊನೆಯಲ್ಲಿ ಮಾನವನ ಕ್ರೌರ್ಯಕ್ಕೆ ಸರಿ ಸಮನಾಗಿ ಪ್ರಕೃತಿ ಹಾಗೂ ಮಾನವನ ಧನ್ವಂತರಿ ಸ್ಪರ್ಶದ ಪರಿಣಾಮವನ್ನೂ ಕಾಣಬಹುದು.

-ಸಂಪಾದಕ

ಸಿಕಾಮೋರ್ ಗ್ಯಾಪ್ ಮರ ತನ್ನ ಉಚ್ಛ್ಛ್ರಾವಸ್ಥೆಯಲ್ಲಿ (ಚಿತ್ರ ಕೃಪೆ : ಅಂತರ್ಜಾಲ)

ಈಗಷ್ಟೇ ಕಳೆದ,  ಮೇ ತಿಂಗಳ ಒಂಬತ್ತನೆಯ ತಾರೀಕಿನಂದು  ಜಗತ್ತಿನ ಯಾವ ಯಾವ ನ್ಯಾಯಾಲಯದಲ್ಲಿ ಎಷ್ಟೆಷ್ಟು  ವಾದ ಪ್ರತಿವಾದ ನಡೆಯಿತೋ  ಗೊತ್ತಿಲ್ಲ, ಯಾರು ಕೊಲೆಗಾರ ಅಲ್ಲದಿದ್ದರೆ  ವಂಚಕ ಎಂದು ಸಾಬೀತಾಯಿತೋ ತಿಳಿದಿಲ್ಲ . ಎಷ್ಟು ಆಪಾದಿತರಿಗೆ ಶಿಕ್ಷೆಯ  ಘೋಷಣೆ , ಇನ್ನೆಷ್ಟು ನಿರಪರಾಧಿಗಳ ಖುಲಾಸೆ ಎಂದು ಹೇಳುವುದು ಅಸಾಧ್ಯ.
ಆದರೆ ಇಂಗ್ಲೆಂಡ್ ನ ಉತ್ತರ ಗಡಿಯ ನ್ಯೂ ಕಾಸಲ್ ಕ್ರೌನ್  ಕೋರ್ಟಿನ  ನ್ಯಾಯಾಧೀಶರು ಆ ದಿನದ  ಅತ್ಯಂತ ವಿಶಿಷ್ಟ ತೀರ್ಪೊಂದನ್ನು ನೀಡಿದ್ದರು. ಆ ತೀರ್ಪು , ಆ ದಿನದ ಮಾತ್ರವಲ್ಲ ,  ಇಡೀ ವರ್ಷದ, ದಶಕದ, ಶತಮಾನದ,  ಅಲ್ಲದಿದ್ದರೆ ಯಾವ ನ್ಯಾಯ ವ್ಯವಸ್ಥೆಯೂ ಎಂದೂ ಉಚ್ಛರಿಸಿರಲಾರದ  ಅಪೂರ್ವ ತೀರ್ಪೂ  ಆಗಿದ್ದಿರಬೇಕು. ಅಂದು ಕಟಕಟೆಯಲ್ಲಿ ನಿಂತಿದ್ದ ಇಂಗ್ಲೆಂಡ್ ನ ಉತ್ತರ-ಪಶ್ಚಿಮ (ವಾಯುವ್ಯ) ಪ್ರಾಂತ್ಯದ ಇಬ್ಬರು ಸಾಮಾನ್ಯ ವ್ಯಕ್ತಿಗಳ ಕಿಡಿಗೇಡಿತನ ಸಾಬೀತಾಗಿತ್ತು.  ಅವರೇ  ಅಪರಾಧಿಗಳು ಎಂದು ತೀರ್ಪು ಹೊರಬಿದ್ದಿತ್ತು ,  ಅಪರಾಧಕ್ಕೆ ತಕ್ಕುದಾದ ಶಿಕ್ಷೆ ಮುಂದಿನ ತಿಂಗಳು ಜುಲೈಯಲ್ಲಿ ನಿರ್ಧಾರವಾಗಲಿದೆ  ಎಂದೂ ತಿಳಿಸಲಾಗಿತ್ತು.

ಆರೋಪಿಗಳಿಗೆ ಶಿಕ್ಷೆ ಆಗುವುದೇನೂ ಹೊಸತಲ್ಲ ಬಿಡಿ.  ಅಂದು ಆರೋಪಿಯಿಂದ ಅಪರಾಧಿಗಳಾಗಿ ಬದಲಾದವರು ವಾಯುವ್ಯ ಇಂಗ್ಲೆಂಡ್ ನ ಕಂಬ್ರಿಯ  ಅಥವಾ ಅದೇ ಪ್ರಾಂತ್ಯದ ವಿಶ್ವವಿಖ್ಯಾತ ಹೆಸರಾದ  ಲೇಕ್ ಡಿಸ್ಟ್ರಿಕ್ಟ್ ಪ್ರದೇಶದ  ವಾಸಿಗಳು . ಅವರೊಂದು   ಕುಚೋದ್ಯವನ್ನು ಮಾಡಿದ್ದರು. ಸುಮಾರು ಎರಡು ವರ್ಷಗಳ ಹಿಂದಿನ ನಡುರಾತ್ರಿಗೆ, ತುಸು ದೂರ  ಕಾರು ಓಡಿಸಿಕೊಂಡು ಹೋಗಿ  ಆಮೇಲೆ ಇಪ್ಪತ್ತು ನಿಮಿಷ ನಡೆದು  ಗರಗಸ ಹಿಡಿದು ನಾರ್ಥಂಬರಲ್ಯಾಂಡ್ ಎನ್ನುವ ಪ್ರದೇಶಕ್ಕೆ ಬಂದಿದ್ದರು. ಜೋರು ಗಾಳಿ ಬೀಸುವ ತಣ್ಣಗಿನ ಹವೆಯ ಆ ರಾತ್ರಿ  ಅಲ್ಲಿದ್ದ ಒಂದು ಪುರಾತನ ವೃಕ್ಷವನ್ನು ವಿನಾಕಾರಣ ಕಡಿದಿದ್ದರು. ಸಕಾರಣವಾಗಿಯಾದರೂ ಒಂದು ಮರವನ್ನು ಕಡಿಯಬಹುದೇ ಎನ್ನುವುದೇ ಒಂದು ದೊಡ್ಡ ಜಿಜ್ಞಾಸೆ. ಮರಗಳಿಗೆ ವಿವೇಚನೆ ಇದ್ದರೆ , ಅದಕ್ಕೆ ತಕ್ಕುದಾಗಿ ಮಾತೂ  ಬಂದಿದ್ದರೆ ಅವುಗಳ ಅಭಿಪ್ರಾಯ  ಏನಿರುತ್ತಿತ್ತೋ? ಒಬ್ಬ ವ್ಯಕ್ತಿಯನ್ನು ಕೊಲ್ಲಬಹುದೇ  ಎನ್ನುವ ಪ್ರಶ್ನೆಗೆ ಮನುಷ್ಯರು ನೀಡಬಹುದಾದ  ಉತ್ತರಕ್ಕಿಂತ ಮರಗಳು  ನೀಡುವ ಉತ್ತರ ಬಹಳ ಭಿನ್ನ ಇರಲಿಕ್ಕಿಲ್ಲ. ಹಾಗಂತ  ಭೂಮಿ ಆಕಾಶಗಳ ಪ್ರತಿ ಅಂಗುಲಕ್ಕೂ  ಅನಭಿಷಕ್ತ ದೊರೆಯಂತೆ ವರ್ತಿಸುವ ಮನುಷ್ಯರಿಗೆ ಮರಗಳನ್ನು ಕಡಿಯಬಹುದೇ ಎನ್ನುವ ಪ್ರಶ್ನೆಯೇ  ಅಪ್ರಸ್ತುತ ವಿಲಕ್ಷಣ ವಿನೋದವಾಗಿ ಕಂಡೀತು.

ಇರಲಿ, ಅಂತೂ ಆ ಇಬ್ಬರು ಜೊತೆಯಾಗಿ ಎಲ್ಲ ಅರ್ಥ ಜಿಜ್ಞಾಸೆಗಳನ್ನು ಮೀರಿ ಮರವೊಂದನ್ನು ಕಡಿದಿದ್ದರು. ಹಾಗೆ ತಾವು ಕಡಿದು ಒರಗಿಸಿದ ಮರದ ದಿಮ್ಮಿ ,ತೊಗಟೆ, ಎಲೆ, ಟೊಂಗೆ, ಟಿಸಿಲು, ಬೇರು ನಾರು ಯಾವುದೂ ಆ ಮರಕಟುಕರಿಗೆ ಬೇಕಿರಲಿಲ್ಲ. ಕಟ್ಟಿಗೆಗಾಗಿ ಮಾರಿ ಹಣ ಮಾಡುವ ಉದ್ದೇಶವೂ  ಅವರದಾಗಿರಲಿಲ್ಲ. ಯಾರೋ ನೆಟ್ಟ, ಯಾರದೋ ಇಚ್ಛೆಯಿಂದಾಗಿ ಆ ಸ್ಥಳದಲ್ಲಿ ಬೆಳೆದ, ನಿತ್ಯ ಜೀವನ್ಮುಖಿ  ಪ್ರಕೃತಿಗೆ ಆ ಪ್ರದೇಶದಲ್ಲೊಂದು ಹೊಸ ಆಯಾಮ ನೀಡಿದ, ಭೂಮಿ ಬಾನು ,ನಾಡು ಕಾಡು, ಹುಲ್ಲು ಹಸಿರು, ಕಲ್ಲು ಮಣ್ಣುಗಳು ಒಂದಾಗಿ ನಲಿಯುವ, ಬೆಟ್ಟ ಕಣಿವೆಗಳು ಒಂದಾಗಿ ಕುಣಿಯುವ  ಜಾಗದಲ್ಲಿ  ಬಲಿತ, ಯಾರಿಗೆ ಯಾವ ತೊಂದರೆಯನ್ನೂ ಕೊಡದ, ಸಾಧ್ಯ ಆದರೆ ತಂಪು ನೆರಳು ಶುದ್ಧ ಗಾಳಿ ಮತ್ತೆ ನಯನ ಮನೋಹರ ದೃಶ್ಯವನ್ನು ಸಹಜವಾಗಿ ಬಿಡಿಸುತ್ತ  ಅಸಂಖ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತ ಪ್ರಸಿದ್ಧವಾಗಿದ್ದ ಮರವೊಂದು  ಅಚಾನಕ್ ಇಲ್ಲದಿದ್ದರೆ ಜಗತ್ತು ಹೇಗೆ ಪ್ರತಿಕ್ರಿಯಿಸಬಹುದು  ಎಂದು ಆ ಇಬ್ಬರಿಗೆ ನೋಡಬೇಕಿತ್ತು. ಅಷ್ಟೇ. ಬರೇ ಅಷ್ಟೇ. ಒಂದು ಮರವನ್ನು ಕಡಿಯಲು ಅವರಿಗಿದ್ದದ್ದು ಅದೊಂದೇ  ಕ್ಷುಲ್ಲಕ ಕಾರಣ-ಪ್ರೇರಣೆ. ಕಾಲ, ಭೂಮಿ, ಜೀವಿ, ಜೀವನ  ಸಂದರ್ಭ ಎಲ್ಲವನ್ನು  ಒಂದು ಕ್ಷಣಕ್ಕಾದರೂ ಅಪಹಾಸ್ಯ ಮಾಡಲು ಅವರು ಕಂಡುಕೊಂಡ ದಾರಿ, ಪುರಾತನ ಚಾರಿತ್ರಿಕ ಸಿಕಮೋರ್ ಮರವನ್ನು ಕಡಿಯುವುದು. ಮತ್ತೆ  ಆ ಮರದ ಬಗ್ಗೆ ಕೇಳಿದವರ, ನೋಡಿದವರ, ಫೋಟೋ ತೆಗೆದವರ, ನೆರಳಲ್ಲಿ ಒಂದು ಘಳಿಗೆ ಕುಳಿತವರ, ತಮ್ಮ ಮೃತ ಆಪ್ತರ ಬೂದಿಯನ್ನು ಮರದ ಆಸುಪಾಸಲ್ಲಿ ಚೆಲ್ಲಿ ಆರ್ದ್ರರಾದವರ ಅಸಹಾಯಕತನ ಸಂಕಟವನನ್ನು ನೆನೆದು ಖುಷಿ ಪಡುವುದಿತ್ತು.  ಒಟ್ಟಾರೆ ಆ  ಮರಕಟುಕರಿಂದ ,
ಸುಮಾರು ೧೫೦ ವರ್ಷಗಳ ಹಿಂದೆ ನೆಡಲ್ಪಟ್ಟ ಸಸಿ ಮರ ಹೆಮ್ಮರವಾಗಿ ಬೆಳೆದು ಜಗತ್ತಿನ ಮೂಲೆಮೂಲೆಯ  ಪ್ರವಾಸಿಗಳಿಗೆ ಪರಿಸರ ಪ್ರೇಮಿಗಳಿಗೆ, ಸಿನೆಮಾ ನಿರ್ದೇಶಕರಿಗೆ, ಇವರ್ಯಾರೂ ಅಲ್ಲದ ಜನಸಾಮಾನ್ಯರಿಗೆ,  ಅಷ್ಟೇ ಏಕೆ ಇಡೀ ಈಶಾನ್ಯ ಇಂಗ್ಲೆಂಡಿಗೆ
ಹೆಗ್ಗುರುತೇ  ಆಗಿದ್ದ “ಸಿಕಮೋರ ಗ್ಯಾಪ್ ಮರ ” ಅಂದು ಕಡಿಯಲ್ಪಟ್ಟು ನೆಲದ ಮೇಲೆ ಧೊಫ್ ಎಂದು ಬಿದ್ದಿತ್ತು. ಕಡಿಯಲ್ಪಟ್ಟ ನಡುರಾತ್ರಿಯಿಂದ ಬೆಳಗಿನ ತನಕವೂ ಆ ಮರವನ್ನು ತಿಳಿದವರು ಎಲ್ಲೆಲ್ಲಿ ಹೇಗೇಗೆ ಇದ್ದರೂ ಅವರಿಗೆಲ್ಲ ತಮ್ಮ ಜಗತ್ತು ಏನೂ ಬದಲಾಗದೆ ನಿನ್ನೆಯಂತೆಯೇ ಇದೆ ಎನ್ನುವ ಭ್ರಮೆಯೇ  ಮುಂದುವರಿದಿತ್ತು.  ಹಾಗಂತ ಬೆಳಗಾಗುತ್ತಲೇ, ಒಂದು ಕೆಟ್ಟ ಹಾಸ್ಯಕ್ಕಾಗಿ ಮಾಡಿದ ಕೃತ್ಯ ನೂರೈವತ್ತು  ವರ್ಷಗಳ ಇತಿಹಾಸದ ಹಾದಿ ಬದಲಿಸಿತ್ತು. ೨೦೨೩ರ ಸೆಪ್ಟೆಂಬರ್ ೨೮ ರ ಬೆಳಿಗ್ಗೆ ಆ ಮರವನ್ನು ನೋಡಿ, ಕೇಳಿ, ತಿಳಿದಿದ್ದ ಎಲ್ಲರಿಗೂ ಆಘಾತ, ದುಗುಡ, ಹತಾಶೆ ಕಾದಿತ್ತು.

ನಿತ್ಯವೂ ಜಗತ್ತಿನ ಮೂಲೆಮೂಲೆಗಳಲ್ಲಿ  ಮರಗಳು ಉರುಳುವುದು, ಗಿಡಗಳನ್ನು ಸವರುವುದು, ಕಟ್ಟಡವನ್ನು ಎಬ್ಬಿಸುವುದು, ರಸ್ತೆಯನ್ನು ಹಾಸುವುದು ಅಭಿವೃದ್ಧಿಯ ಸಂಕೇತವಾಗಿರುವಾಗ ಈಶಾನ್ಯ ಇಂಗ್ಲೆಂಡಿನ ಸಣ್ಣ ಊರಿನ ಹಳೆಯ ಮರವನ್ನು ಉರುಳಿಸಿದವರು ಯಾಕೆ
ಬಂಧನಕ್ಕೊಳಗಾದರು?  ಬಂಧಿಸಲ್ಪಟ್ಟವರನ್ನು ನ್ಯಾಯಾಲಯ ಏಕೆ  ಅಪರಾಧಿ ಎಂದು ತೀರ್ಮಾನಿಸಿತು? ಮನುಷ್ಯರಿಗೆ ಹೀಗೊಂದು ಪ್ರಶ್ನೆ ಬರುವ ಸಾಧ್ಯತೆ ಇದೆಯೋ ಇಲ್ಲವೋ ಗೊತ್ತಿಲ್ಲ ನಿತ್ಯವೂ ಕಡಿಯಲ್ಪಡುವ ಅಷ್ಟೇನೂ ಪ್ರಸಿದ್ಧವಲ್ಲದ ಅತಿ ಸಾಮಾನ್ಯ ಮರಗಳ
ಸಂತತಿಗಾದರೂ ಹೀಗೊಂದು ಸಂದೇಹ ಕಾಡೀತು.

ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ , ಇಂತಹದ್ದೆಂದು ದಾಖಲಾಗದ ದಿನದಂದು ವಕೀಲ, ಅನ್ವೇಷಕ ಮತ್ತೆ ಸದ್ರಿ ಸ್ಥಳದ ಅಂದಿನ ಮಾಲೀಕ ಜಾನ್ ಕ್ಲೇಟನ್ ಅಲ್ಲಿನ ಸುಂದರ ಪರಿಸರಕ್ಕೆ ಪೂರಕವಾಗಲಿ ಎಂದು  ಈ ಆ ಸಿಕಮೊರ್ ಸಸಿಯನ್ನು  ನೆಟ್ಟಿದ್ದ, ಇತಿಹಾಸ
ಪ್ರಸಿದ್ಧ ಹ್ಯಾಡ್ರಿಯನ್ ಗೋಡೆಯ ಪಕ್ಕದಲ್ಲಿ.   ರೋಮನ್ನರು ಇಂಗ್ಲೆಂಡಗೆ ಕಾಲಿಟ್ಟ ಆರಂಭಿಕ ಕಾಲವಾದ  ಒಂದನೆಯ ಶತಮಾನದಷ್ಟು ಹಿಂದೆಯೇ ೧೩೫ ಕಿಲೋಮೀಟರು ಉದ್ದದ ಆ ಗೋಡೆ  ಕಟ್ಟಲ್ಪಟ್ಟಿತ್ತು. ಆಧುನಿಕ ಕಾಲದಲ್ಲಿ  ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡಗಳ
ಗಡಿಯಂತೆಯೂ ಕಾಣುವ ಹ್ಯಾಡ್ರಿಯನ್ ಗೋಡೆಯ ಉತ್ಖತನದಲ್ಲಿ  ಜಾನ್ ಕ್ಲೇಟನ್ ಐವತ್ತು ವರ್ಷ ತೊಡಗಿಸಿಕೊಂಡವನು. ಅನಾದಿ ಕಾಲದ ಗೋಡೆಯ ಸುದೀರ್ಘ ಭವಿಷ್ಯದ ಬಗ್ಗೆ ಕಾಳಜಿ ಇದ್ದವನು. ಆ ಗೋಡೆಯ ಕಲ್ಲುಗಳನ್ನು ಅವರಿವರು ಒಂದೊಂದೇ ಜಾರಿಸಿ ಕೊಂಡುಹೋಗಿ
ಮುಂದೊಂದೊಂದು ದಿನ ಗೋಡೆಯೇ ನಶಿಸಿ ಹೋಗುವ ಬಗ್ಗೆ ಅವನಿಗೆ ಆತಂಕ ಇತ್ತು. ಶ್ರೀಮಂತ ಹಿನ್ನೆಲೆಯ ಆತ  ಕೆಲವು ಕೋಟೆಗಳ ಜೊತೆಗೆ ಹ್ಯಾಡ್ರಿಯನ್  ಗೋಡೆಯ ಇಪ್ಪತ್ತು ಮೈಲಿ ಉದ್ದದ ಭಾಗದ ವಾರೀಸುದಾರನೂ ಆಗಿದ್ದ. ಸಹಜವಾಗಿ ಗುಡ್ಡ ಕಣಿವೆಗಳು ಹತ್ತಿಳಿಯುವ ಆ  ಗೋಡೆಯ ಒಂದು ನೈಸರ್ಗಿಕ ತಗ್ಗಿನಲ್ಲಿ ಸಿಕಮೊರ್  ಸಸಿಯನ್ನು ನೆಟ್ಟಿದ್ದ.  ಸಸಿ ಬೆಳೆದದ್ದು, ಬಲವಾದದ್ದು, ಜಗತ್ತಿನ ದಿಕ್ಕುದೆಸೆಯ ಪ್ರವಾಸಿಗಳಿಗೆ ಆಗಂತುಕರಿಗೆ, ಅಭ್ಯಾಗತರಿಗೆ ನಿರ್ಮಲ ಘಳಿಗೆಯನ್ನು ಹಂಚಿದ್ದು,  ಮತ್ತೆ ಎರಡು ವರ್ಷಗಳ ಹಿಂದೆ ಇಬ್ಬರ ಗರಗಸಕ್ಕೆ ಬಲಿಯಾಗಿ ಹ್ಯಾಡ್ರಿಯನ್ ಗೋಡೆಯ ಮೇಲೆಯೇ  ಉರುಳಿ ಬಿದ್ದದ್ದು  ಎಲ್ಲವೂ ಮರವೊಂದರ ದೀರ್ಘ ಇತಿಹಾಸದ ಅನಿರೀಕ್ಷಿತ ಇತ್ತೀಚಿನ ಮುಂದುವರಿಕೆ.

ಉರುಳಿ ಬಿದ್ದ ಮರದ ಭವಿಷ್ಯವನ್ನು ಸಜ್ಜುಗೊಳಿಸುವ ಕಾರ್ಯ

೨೦೨೩ರ ೨೮ ಸೆಪ್ಟೆಂಬರ್ ಬೆಳಿಗ್ಗೆ, ಬಿದ್ದಿದ್ದ ಮರವನ್ನು ನೋಡಿದ ಸ್ಥಳೀಯರು ಆರಕ್ಷಕರಿಗೆ  ದೂರು ಕೊಟ್ಟಿದ್ದರು. ಸಣ್ಣ ಸಣ್ಣ ಇತಿಹಾಸ ಕತೆ ದಂತಕಥೆಗಳನ್ನೂ ಗೌರವಯುತವಾಗಿ ಸ್ಮರಿಸುವ, ಆರೈಕೆ ಮಾಡಿ ಕಾಯ್ದಿಟ್ಟು ಮತ್ತೆ ಪ್ರವಾಸಿಗರಿಗೂ ಆಸ್ಥೆಯಿಂದ ತೋರಿಸಿ ಹೆಮ್ಮೆ ಪಡುವ  ಸಂಸ್ಕೃತಿಯ ಇಂಗ್ಲೆಂಡನಲ್ಲಿ ಜಗತ್ಪ್ರಸಿದ್ಧ ಮರ ಉರುಳಿದ್ದು “ಹೈ ಪ್ರೊಫೈಲ್ ಕೇಸ್” ಆಗಿತ್ತು; ಮತ್ತೆ ಅಪರೂಪದ್ದೂ.  ತನಿಖೆಯಲ್ಲಿ
ಭಾಗವಹಿಸಿದ ವಿಧಿವಿಜ್ಞಾನ ತಂಡದ ಅಧಿಕಾರಿ ಹೇಳುವಂತೆ “ನನ್ನ ಮೂವತ್ತೊಂದು ವರ್ಷದ ಸೇವೆಯಲ್ಲಿ ಅಪರಾಧದ ಕುರುಹಿಗಾಗಿ ಮರವೊಂದರ ಪರೀಕ್ಷೆಯನ್ನು ಹಿಂದೆಂದೂ ಮಾಡಿದ್ದಿಲ್ಲ”. ತನಿಖೆ ಮುಂದುವರಿದು , ಸುಳಿವು ಸಿಕ್ಕಿ ೨೦೨೪ರ ಏಪ್ರಿಲ್ ಅಲ್ಲಿ
ಡೇನಿಯಲ್ ಮತ್ತು ಆಡಮ್ ಎನ್ನುವ ಕಂಬ್ರಿಯದ  ವಾಸಿಗಳನ್ನು   ಐತಿಹಾಸಿಕ ಮರವನ್ನು ಕಡಿದ, ಮರವನ್ನು ಬೀಳಿಸಿ ಚಾರಿತ್ರಿಕ  ಹ್ಯಾಡ್ರಿಯನ್  ಕಲ್ಲುಗೋಡೆಗೆ ಹಾನಿ ಮಾಡಿದ ಕ್ರಿಮಿನಲ್ ಆರೋಪದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಕೋರ್ಟಿನಲ್ಲಿ  ವಾದ-ಪ್ರತಿವಾದಗಳು ಜರುಗಿ ಅವರ ಅಪರಾಧ ಸಾಬೀತಾದದ್ದು ಮೊನ್ನೆಮೊನ್ನೆಯ ಅಂದರೆ ಇದೇ ವರ್ಷದ ಮೇ ತಿಂಗಳಿನಲ್ಲಿ. ವಿಚಾರಣೆಯ ಉದ್ದಕ್ಕೂ ಅಪರಾಧವನ್ನು ಅಲ್ಲಗಳೆಯುತ್ತಿದ್ದ, ಒಬ್ಬರು ಇನ್ನೊಬ್ಬರನ್ನು ದೂಷಿಸುತ್ತಿದ್ದ , ೩೯ ಹಾಗು ೩೨ ವರ್ಷದ ಅಪರಾಧಿ ಜೋಡಿ, ಮರ ಬೀಳುವ  ಸಂದರ್ಭವನ್ನು ತಮ್ಮ ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಬಿದ್ದ
ಮರದ ಗೆಲ್ಲೊಂದನ್ನು ಪದಕದಂತೆ ತಮ್ಮೊಡನೆ ಒಯ್ದಿದ್ದರು. ೧೯೯೧ರಲ್ಲಿ ನಿರ್ಮಾಣಗೊಂಡ ರಾಬಿನ್ ಹುಡ್ ಸಿನೆಮಾದ ಒಂದು ಮುಖ್ಯ ಸನ್ನಿವೇಶದಲ್ಲಿ ಹಿನ್ನೆಲೆಯಲ್ಲಿದ್ದ ಮರ, ೨೦೨೩ರ ಸೆಪ್ಟೆಂಬರ್ ೨೭ರ ಜೋರು ಗಾಳಿಯ ನಡುಇರುಳಿನಲ್ಲಿ ಕಿಡಿಗೇಡಿಗಳ ಬ್ಯಾಟರಿ ಚಾಲಿತ ಗರಗಸಕ್ಕೆ ತುತ್ತಾಗಿ ಮುನ್ನಲೆಯಲ್ಲಿ ಅಂತಿಮ ಉಸಿರಳೆದದ್ದು ಎಂತಹ ವಿಪರ್ಯಾಸ! ನಿಮಿಷಗಳಲ್ಲಿ ಆರಂಭವಾಗಿ ಮುಗಿಯುವ ಮರ ಕಡಿಯುವ ಸಂದರ್ಭವನ್ನು ನೋಡಿದವರಲ್ಲಿ ವಿಭಿನ್ನ  ಭಾವನೆಗಳು ಹುಟ್ಟಬಹುದಾದರೂ, ಇನ್ನೇನು ಬೀಳಲಿರುವ ಮರಕ್ಕೆ, ಒಂದು ಕ್ಷಣಕ್ಕೆ ತನ್ನನು ಬದುಕಿಸಲು ಆ ರಾಬಿನ್ ಹುಡ್ ಆದರೂ ಬರಬಾರದಿತ್ತೇ ಎಂದೂ ಅನಿಸಿರಬಹುದು, ತನ್ನನ್ನು ನೆಟ್ಟು ಬೆಳೆಸಿದ  ಜಾನ್ ಕ್ಲೇಟನ್ ಕಣ್ಣೆದುರು ಬಂದಿರಬಹುದು. ತನ್ನ ನೆರಳಲ್ಲಿ ತಂಗಿ ಮುಂದುವರಿದ ಕಾಲ್ನಡಿಗೆಯವರು, ತನ್ನ ಆಸುಪಾಸಿನ ಕ್ಷಣಭಂಗುರದಲ್ಲಿ ಲೀನರಾಗಿ ಮೈಮರೆತ ಲಕ್ಷ ಲಕ್ಷ ಅನಾಮಿಕ ಅಜ್ಞಾತ ಪ್ರವಾಸಿಗರು ಸ್ಮರಣೆಗೆ ಬಂದಿರಬಹುದು. ಬಿಡಿ,  ಫೋನು ತಪಾಸಣೆಯಲ್ಲಿ  ದೊರೆತ ಆ ವಿಡಿಯೋ ತುಣುಕು, ಜನರಲ್ಲಿ
ಎಬ್ಬಿಸುವ ಭಾವಲಹರಿ ಏನೇ ಇದ್ದರೂ ಕಾನೂನು ತನಿಖೆಯ ಮಟ್ಟಿಗೆ ಅತಿ ಅಗತ್ಯವಾದ ಪುರಾವೆಯನ್ನು  ಒದಗಿಸಿತ್ತು. ಮತ್ತೆ ನ್ಯೂ ಕಾಸಲ್ ಕ್ರೌನ್  ಕೋರ್ಟ್ ಆ ಇಬ್ಬರನ್ನು ಅಪರಾಧಿ ಎಂದು ಘೋಷಿಸಲು ಪ್ರಮುಖ ಆಧಾರವಾಗಿ ಒದಗಿತ್ತು.

ಪ್ರಸಿದ್ಧ ಮರದ ಅಕಾಲಿಕ ಸಾವಿನ  ಸುದ್ದಿ ಇಂಗ್ಲೆಂಡಿನ ಒಳಗಿನಿಂದ, ಹೊರಗಿನಿಂದ ತೀವ್ರ ಪ್ರತಿಕ್ರಿಯೆ ಪಡೆದಿತ್ತು. ಸಿಟ್ಟು, ಆಘಾತ, ಆಶ್ಚರ್ಯಗಳು ಸಾಮಾಜಿಕ ಜಾಲತಾಣವನ್ನು ತುಂಬಿದವು. ಸುದ್ದಿ ಪತ್ರಿಕೆಯ ಮುಖಪುಟದಲ್ಲಿ, ವೆಬ್ ಪೇಜ್ ಗಳಲ್ಲಿ ವಸಂತ ವೈಶಾಖದ ಹಸಿರಿನಲ್ಲಿ,  ಶರತ್ ಶಿಶಿರಗಳ  ಹಿಮಹೊದಿಕೆಯಲ್ಲಿ ವಿಭಿನ್ನ ರೂಪದ ಮರದ  ಚಿತ್ರಗಳು ಕಾಣಿಸಿಕೊಂಡವು. ಕೆಲವರು ಭಾವುಕರಾಗಿ ಕವಿತೆಗಳನ್ನು ಕಟ್ಟಿ ಹಾಡಿದ್ದರು. ಕವಿತೆಯ ಸಾಲುಗಳನ್ನು  ಕೇಳಿದ ಕೆಲವರು ಕಣ್ಣೀರು ಹಾಕಿದರು. ಪ್ರಕೃತಿ ಸೃಜಿತ ಗಾಳಿಯ ನಿನಾದ, ಮನುಷ್ಯ ನಿರ್ಮಿತ  ಗರಗಸದ ಕರ್ಕಶ ಸದ್ದುಗಳು ಜೊತೆಯಾದ ಹಿನ್ನೆಲೆ ಸಂಗೀತದಲ್ಲಿ ಶವವಾಗುವ ಮರದ ಚಿತ್ರತುಣುಕು , ಸಾಮಾಜಿಕ ಮಾಧ್ಯಮದಲ್ಲಿ ಅನಾಥ ಅಸಹಾಯಕ ಸಾಕ್ಷಿಗಳಂತೆ ಓಡಾಡಿದವು.

೨೦೨೩ರ ಅಕ್ಟೋಬರನಲ್ಲಿ , ಕಡಿದುಬಿದ್ದ ಮರವನ್ನು ಖಂಡ ತುಂಡು ಮಾಡಿ ಕ್ರೇನ್ ಮೂಲಕ ಸಾಗಿಸಲಾಯಿತು. ಅಕಾಲಿಕ ಸಾವಿನ ಪುರಾತನ ಮರದ ಕತೆಯ ಮುಂದುವರಿದ ಪುಟವಾಗಿ, ಇಲ್ಲಿನ ಹಲವು ನೈಸರ್ಗಿಕ ತಾಣಗಳ ಉಸ್ತುವಾರಿ ವಹಿಸಿಕೊಂಡಿರುವ ನ್ಯಾಷನಲ್ ಟ್ರಸ್ಟ್ ಸಂಸ್ಥೆ ಆ
ಮರದಿಂದ ನಲವತ್ತೊಂಬತ್ತು ಸಸಿಗಳನ್ನು ಬೆಳೆಸಿ ದೇಶದ ಬೇರೆ ಬೇರೆ ಚ್ಯಾರಿಟಿ ಮತ್ತಿತರ ಸಂಸ್ಥೆಗಳಿಗೆ ನೀಡಿತು. ತನ್ನ ಕೊನೆಯ ಕಾಲದಲ್ಲಿ ನಲವತ್ತೊಂಬತ್ತು ಅಡಿ ಉದ್ದ ಇದ್ದ ಮರದ ನೆನಪಿಗಾಗಿ ಬೆಳೆಸಿದ  ೪೯ ಸಸಿಗಳನ್ನು ಚ್ಯಾರಿಟಿ   ಸಂಸ್ಥೆಗಳಿಂದ ಪಡೆಯಲು ಜನರಿಂದ  ಅರ್ಜಿಗಳನ್ನು ಆಹ್ವಾನಿಸಲಾಯಿತು. ೪೯ ಗಿಡಗಳನ್ನು ಪಡೆಯಲು ಯುನೈಟೆಡ್ ಕಿಂಗ್ಡಮ್ ನ ಬೇರೆಬೇರೆ ಭಾಗಗಳಿಂದ  ೫೦೦ ಅರ್ಜಿಗಳು ಬಂದಿದ್ದವು. ಪ್ರತಿಯೋರ್ವ ಅರ್ಜಿದಾರರೂ ತಮಗ್ಯಾಕೆ ಒಂದು ಸಸಿ ಬೇಕು ಎಂದು ಬರೆದಿದ್ದರು. ಸಸಿ ಹಂಚುವ ಅಭಿಯಾನವನ್ನು “ನಾಳಿನ ಭರವಸೆಗಾಗಿ ಮರಗಳು” ಎಂದೂ ಕರೆಯಲಾಗಿತ್ತು. ನಲವತ್ತೊಂಬತ್ತರಲ್ಲಿ ಒಂದು ಸಸಿ, ಹ್ಯಾಡ್ರಿಯನ್ ಗೋಡೆಯಿಂದ ಬಹಳವೇನೂ ದೂರದಲ್ಲಿರದ ಹೆಕ್ಸ್ಹಮ್ ಪ್ರಾಂತ್ಯದಲ್ಲಿ ಮುಂದಿನ ಚಳಿಗಾಲಕ್ಕೆ ನೆಲ ನೆಲೆ ಕಾಣಲಿದೆ.  ಹೋಲಿ ನ್ಯೂಟನ್ ಎನ್ನುವಾಕೆಯ ಸಮಾಧಿಯ ಬಳಿ. ಹದಿನೈದು ವರ್ಷದವಳಿದ್ದಾಗ ಸಂಬಂಧ ಕೊನೆಗೊಂಡದ್ದನ್ನು ಒಪ್ಪಲಾಗದ ಮಾಜಿ ಪ್ರಿಯಕರ ಆಕೆಯನ್ನು ಕೊಲೆ ಮಾಡಿದ್ದ. ಕೊಲೆಯಾದ
ಮಗಳ ನೆನಪಿನಲ್ಲಿ ಬದುಕುತ್ತಿರುವ ಆಕೆಯ ಹೆತ್ತವರು ತಾವು ಪಡೆಯಲಿರುವ ಸಿಕಮೋರ್ ಸಸಿ ಅಳಿದ  ಮಗಳನ್ನು ಸ್ಮರಿಸುವ ಹೊಸ ದಾರಿಯಾಗಿದೆ ಎಂದು ಖುಷಿ ಪಡುತ್ತಿದ್ದಾರೆ. ಇನ್ನುಳಿದ ನಲವತ್ತೆಂಟು ಸಸಿಗಳೂ ಯು.ಕೆಯ ಬೇರೆ ಬೇರೆ ಭಾಗಗಳನ್ನು ಸೇರಿ ಅಲ್ಲೆಲ್ಲ,
ನಾಶವಾದ ಮರದ ಕತೆಯನ್ನು ಹೇಳಲಿವೆ  ನೆನಪನ್ನು ಹಸಿರಾಗಿಡಲಿವೆ .

ಒಂದು ಸಣ್ಣ ಸಹಜ ಸುಂದರ ಖುಷಿಯನ್ನು  ನಿರಂತರವಾಗಿ  ನೂರೈವತ್ತು ವರ್ಷಗಳ ಕಾಲ ಹಂಚಿದ,  ಪ್ರಾಕೃತಿಕ ದ್ರಶ್ಯಕಾವ್ಯದಲ್ಲಿ ಭೂಮಿ ಆಕಾಶದಷ್ಟೇ ಚಿರಂತನ ಎನಿಸಿದ ಮರ, ಕ್ಷುಲ್ಲಕ ಕಿಡಿಗೇಡಿತನದ ಪರಿಣಾಮವಾಗಿ  ಇಲ್ಲದಾದಾಗ, ನಿತ್ಯವೂ ನಮ್ಮನ್ನು ಕಾಯುವ
ಬದುಕಿನ ಭರವಸೆಯೇ ಕರಗಿ ಹೋಗುವ ಸಾಧ್ಯತೆ ಇದೆ. ಆದರೆ ಅಂತಹ ವಿಷಣ್ಣ ಸಾಧ್ಯತೆಯನ್ನು ಎದುರಿಸುವ ,ಮತ್ತೆ ಚೇತೋಹಾರಿ ಉತ್ಸಾಹವನ್ನು ನಮ್ಮ ಒಳಹೊರಗೆ ತುಂಬಿಸುವ  ಹೋರಾಟವನ್ನು ನಲವತ್ತೊಂಬತ್ತು ಸಸಿಗಳು ಆಗಲೇ ಆರಂಭಿಸಿವೆ. ಇನ್ನು ಈಶಾನ್ಯ ಇಂಗ್ಲೆಂಡಿನ ಹ್ಯಾಡ್ರಿಯನ್ ಗೋಡೆಯ ಪಕ್ಕದ  ಕಡಿದ ಬುಡದಲ್ಲೂ  ಚಿಗುರೆಲೆಗಳು  ಮೊಳೆತು “ಹೊಸತು ಜನ್ಮ”ದ  ಸೂಚನೆ ಕಾಣುತ್ತಿದೆ. ಒಂದು ವೇಳೆ ಆ ಮೊಳಕೆಗಳು ಚಿಗುರೆಲೆಗಳು ಬೆಳೆಯುತ್ತಲೇ ಹೋದರೆ ಮುಂದಿನ ಇನ್ನೂರು ವರ್ಷಗಳಲ್ಲಿ, ಎರಡು ವರ್ಷದ ಹಿಂದೆ ಬೀಳುವ ಮೊದಲಿನ  ಮರದಷ್ಟೇ ದೊಡ್ಡ ಮರವೊಂದು ಆಕಾರ ತಳೆಯಬಹುದು ಎಂದು ವೃಕ್ಷ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬರಡು ಬುಡವನ್ನೋ ಎಳೆಯ ಚಿಗುರನ್ನೋ ಅಥವಾ ಮುಂದೆಂದೋ ಅಲ್ಲೊಂದು ಮರ ಎದ್ದು ನಿಲ್ಲುವುದನ್ನೋ ಕನವರಿಸುತ್ತ  ಬರುತ್ತಿರುವವರಿಗೆ  “ಗೌರವದಿಂದ ನಡೆದುಕೊಳ್ಳಿ”ಎನ್ನುವ ಎಚ್ಚರಿಕೆಯ ಫಲಕ ಅಲ್ಲೇ  ತೂಗುಹಾಕಲ್ಪಟ್ಟಿದೆ. ಬಂದು ಮರಳುವವರಿಗೂ ,ಮರಳಿ ಬರುವವರಿಗೂ ,  ನಾಳಿನ  ಭರವಸೆ ಜೀವಂತವಾಗಿದೆ.

—————————

ಯೋಗೀಂದ್ರ ಮರವಂತೆ

ಬೆಂಗಳೂರು ನಾಗರತ್ನಮ್ಮ – ರಾಮಮೂರ್ತಿ

ನಮಸ್ಕಾರ ಅನಿವಾಸಿಯ ಬಂಧುಗಳಿಗೆ.  ಶರಣ-ದಾಸ-ಸಂತರ ಸಾಹಿತ್ಯ ಸಂಗೀತದೊಂದಿಗೆ ಆರಂಭವಾಗಿ, ಇತ್ತೀಚೆಗೆ ನಮ್ಮನ್ನಗಲಿದ ಕವಿ ಎಚ್ಚೆಸ್ವಿ ಅವರಿಗೆ ಅರ್ಪಿಸಿದ ನುಡಿನಮನದ ಪುಷ್ಪಗಳ ಪಕ್ಕದಲ್ಲಿ ಹಾಯ್ದು ಬಂದ ನಮ್ಮನ್ನು ಸಂಗೀತದ ಒಬ್ಬ ಕಲಾವಿದೆಯ ಪರಿಚಯಕ್ಕೆ ಕರೆದೊಯ್ಯುತ್ತಿದ್ದಾರೆ, ನಮ್ಮ ಅನಿವಾಸಿ ಬಳಗದ ಇತಿಹಾಸಕಾರ (resident historian) ಶ್ರೀ ರಾಮಮೂರ್ತಿಯವರು. ಅವರಿದ್ದ ಕಾಲಮಾನದಲ್ಲಿ ಬದಲಾವಣೆ ತರಲು, ಒಬ್ಬ ಸಂಗೀತಗಾರ್ತಿಯಾಗಿ ಹೋರಾಡಿ, ಹಲವಾರು ವಿಷಯಗಳಲ್ಲಿ ಮೊದಲಿಗರಾದ ಬೆಂಗಳೂರು ನಾಗರತ್ನಮ್ಮನವರ ಬಗ್ಗೆ ನೋಡೋಣ ಬನ್ನಿ. ಎಂದಿನಂತೆ ಓದಿ ನಿಮ್ಮ ಅಭಿಪ್ರಾಯ ತಿಳಿಸುವುದು. ಧನ್ಯವಾದಗಳೊಂದಿಗೆ - ಲಕ್ಷ್ಮೀನಾರಾಯಣ ಗುಡೂರ್ (ಸಂ.) 
******************************
******************************
ಬೆಂಗಳೂರು ನಾಗರತ್ನಮ್ಮನ ಹೆಸರು ನಿಮಗೆ ಪರಿಚಯ ಇಲ್ಲದಿರಬಹುದು. ಆದರೆ  ಹತ್ತೊಂಬತ್ತನೇ ಶತಮಾನದಲ್ಲಿ ಒಬ್ಬ ದೇವದಾಸಿಯ ಮಗಳಾಗಿ ಬೆಳದು  ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡಿ, ತಿರುವಾಯೂರಿನಲ್ಲಿ ನಡೆಯುವ ಪ್ರಸಿದ್ಧ ತ್ಯಾಗರಾಜ ಆರಾಧನೆಯಲ್ಲಿ ಮಹಿಳಾ ಸಂಗೀತಗಾರರು ಮೊಟ್ಟಮೊದಲಿಗೆ ಭಾಗವಹಿಸುವಂತೆ ಹೋರಾಡಿದವಳು ಈ ಕನ್ನಡತಿ. ಕಾವೇರಿ ನದಿ ದಡದಲ್ಲಿ ತ್ಯಾಗರಾಜರ ಸಮಾಧಿಯ ಮಂಟಪವನ್ನು ಸ್ವಂತ ಖರ್ಚಿನಲ್ಲಿ ಕಟ್ಟಿಸಿದ್ದೇ  ಈಕೆ.  ಗ್ರಾಮೋಫೋನ್  ಆಗ ತಾನೇ , ಅಂದರೆ ೧೯೦೦ ರಲ್ಲಿ , ಬಂದಾಗ ತನ್ನ  ಧ್ವನಿಯನ್ನು ರೆಕಾರ್ಡ್ ಮಾಡಿದ ಆರಂಭಿಕರಲ್ಲಿ ಒಬ್ಬಳು.  

೧೮೭೮ ರ ನವಂಬರ್ ೩ ರಂದು ನಂಜನಗೂಡಿನಲ್ಲಿ ಜನನ; ತಾಯಿ ಪುಟ್ಟ ಲಕ್ಷ್ಮಿ. ಪ್ರಾರಂಭದಲ್ಲಿ ಇವರ ಪೋಷಕ ವಕೀಲ್ ಸುಬ್ಬರಾಯರು. ಆದರೆ, ಬೆಳಸಿದ್ದು ತಾಯಿ ಪುಟ್ಟ ಲಕ್ಷ್ಮಿ. ನಂತರ ಮೈಸೂರಿನಲ್ಲಿ ನೆಲಸಿ ಮೈಸೂರು ಅರಮನೆಯ ಒಬ್ಬ ವಿದ್ವಾಂಸರಿಂದ ಕನ್ನಡ ಮತ್ತು ಸಂಸ್ಕೃತ ಅಧ್ಯಯನ ಕೆಲವು ವರ್ಷ ನಡೆಯಿತು. ಆದರೆ, ಈತ ದೇವದಾಸಿಯ ಮಗಳನ್ನು ಶಿಷ್ಯೆ ಆಗಿ ಮುಂದುವರಿಸಲು ಹಿಂಜರಿದರು, ಬಹುಶಃ ಸಮಾಜದ ಒತ್ತಡದಿಂದಿರಬಹುದು. ನಂತರ ನಾಗರತ್ನಮ್ಮನ ವಿದ್ಯಾಭ್ಯಾಸ ಅವಳ ಸೋದರ ಮಾವ "ಪಿಟೀಲು" ವೆಂಕಟಸ್ವಾಮಿ ಅವರಿಂದ ಮುಂದುವರೆಯಿತು. ನಂತರ, ತ್ಯಾಗರಾಜರ ಶಿಷ್ಯ ಪರಂಪರೆಯ (ಮೂರನೆಯ ಪೀಳಿಗೆ ) ಮುನಿಸ್ವಾಮಿ ಅವರಿಂದ ಸಂಗೀತ ಮತ್ತು ನೃತ್ಯ ಕಲಿಯಲು ಪ್ರಾರಂಭವಾಯಿತು.
ಹೆಸರಾಂತ ಮೈಸೂರು ಆಸ್ಥಾನ ವಿದ್ವಾನ್ ಬಿಡಾರಂ ಕೃಷ್ಣಪ್ಪನವರು ಇವಳ ಪ್ರತಿಭೆಗೆ ಮೆಚ್ಚಿ ನಾಗರತಮ್ಮನನ್ನು ತಮ್ಮ ಶಿಷ್ಯ ವರ್ಗಕ್ಕೆ ಸೇರಿಸಿಕೊಂಡರು. ಇವಳ ಹದಿನೈದನೇ ವಯಸ್ಸಿನಲ್ಲಿ ಮೊದಲ ಕಚೇರಿ (Public Performance ) ಕೊಟ್ಟಾಗ ಮೈಸೂರು ಪ್ರಜೆಗಳಲ್ಲದೆ, ಅಂದಿನ ಮಹಾರಾಜರು ಚಾಮರಾಜ ಒಡೆಯರಿಂದಲೂ ಸಹ ಮೆಚ್ಚುಗೆ ಪಡೆದಳು. ಕೆಲವು ವರ್ಷಗಳ ನಂತರ ಆಸ್ತಾನ ವಿದುಷಿ ಅನ್ನುವ ಮನ್ನಣೆ ಸಹ ಬಂತು. ಈ ಗೌರವ ಪಡೆಯುವುದಕ್ಕೆ ಈಕೆಯೇ ಮೊದಲನೆಯ ಮಹಿಳೆ.
ನಂತರ, ಮೈಸೂರಿನಲ್ಲಿ ಆಗ ಸಾಕಷ್ಟು ಅವಕಾಶಗಳು ಇಲ್ಲದಿರುವ ಕಾರಣದಿಂದ ನಾಗರತ್ನಮ್ಮ ಬೆಂಗಳೂರಿನಲ್ಲಿ ಮನೆ ಮಾಡಿದಳು. ಇಲ್ಲಿ ಅವಳ ಪ್ರತಿಭೆ ಬೇಗ ಹರಡಿ ಅನೇಕ ಗಣ್ಯ ವ್ಯಕ್ತಿಗಳ ಪರಿಚಯವಾಯಿತು. ಮುಖ್ಯವಾಗಿ, ಡಿ ವಿ ಗುಂಡಪ್ಪ , ಜಸ್ಟಿಸ್ ಚಂದ್ರಶೇಖರ್ ಐಯ್ಯರ್ ಮುಂತಾದವರು. ಡಿ ವಿ ಜಿ ಅವರ "ಜ್ಞಾಪಕ ಚಿತ್ರಶಾಲೆ"ಯಲ್ಲಿ ಇವಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ೧೯೦೮/೯ ರಲ್ಲಿ ಇವರು ಚಿಕ್ಕಪೇಟೆಯಲ್ಲಿ ಸಹೂಜಿ ಅನ್ನುವರ ಮನೆಯಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಗೆ ಹೋಗುತ್ತಿದ್ದರಂತೆ. ಇವರಿಬ್ಬರ ಸ್ನೇಹ ಬಹಳ ವರ್ಷ ಮುಂದುವರೆಯಿತು. ಇನ್ನೊಂದು ಸ್ವಾರಸ್ಯವಾದ ಸಂಗತಿ ಇಲ್ಲಿ ಹೇಳಬೇಕು. ನಾಗರತ್ನಮ್ಮನ ಅಭಿಮಾನಿಗಳಲ್ಲಿ ಹೈಕೋರ್ಟಿನ ಜಸ್ಟಿಸ್ ನರಹರಿ ರಾಯರೂ ಒಬ್ಬರಾಗಿದ್ದರು. ಆಗಾಗ್ಯೆ ಕೋರ್ಟ್ ಮುಗಿದ ಮೇಲೆ ತಮ್ಮ ಅಧಿಕೃತ ಗಾಡಿಯಲ್ಲಿ (Official Vehicle) ಚಿಕ್ಕಪೇಟೆಗೆ ಬಂದು ನಾಗರತ್ನಮ್ಮ ನ ಸಂಗೀತ ವನ್ನು ಕೇಳುತ್ತಿದ್ದರು. ನಂತರ ಸ್ನೇಹವೂ ಹೆಚ್ಚಾಯಿತು. ಈ ಸ್ನೇಹ ಮುಂದುವರೆದಾಗ ನರಹರಿ ರಾಯರು ತಮ್ಮ ಪತ್ನಿಯ ಮುಂದೆ ಇದರ ವಿಚಾರ ಹೇಳಿ ಅವರ ಅನುಮತಿ ಕೇಳಿದರಂತೆ. ಏನಾದರೂ ಆಕ್ಷೇಪಣೆ ಇದ್ದರೆ ನಾಗರತ್ನಮ್ಮನ ಸ್ನೇಹವನ್ನು ಮುಂದೆ ಬೆಳುಸುವುದಿಲ್ಲ ಅಂದರಂತೆ. ಪತ್ನಿಯಿಂದ ಅನುಮತಿ ಪಡೆದ ಮೇಲೆ ಇವರ ಸ್ನೇಹ ಇನ್ನೂ ಮುಂದೆವರಿಯಿತು. ಈ ಸಂಭಾಷಣೆಯ ವಿವರವನ್ನು ಡಿ.ವಿ.ಜಿ.ಬರೆದಿದ್ದಾರೆ.

ನಿಮಗೆ ಬೆಂಗಳೂರಿನ ಬಸವನಗುಡಿಯ ನರಹರಿ ಗುಡ್ಡ ಮತ್ತು Mount Joy ಹೆಸರು ಪರಿಚಿತ ಇದ್ದರೆ ಅದರ ಹಿನ್ನೆಲೆ ಇಲ್ಲಿದೆ. ನರಹರಿ ರಾಯರ ಗಾಡಿ ಆಗಾಗ್ಯೆ ಚಿಕ್ಕ ಪೇಟೆಯಲ್ಲಿ ಬಂದು ನಿಲ್ಲುತ್ತಿದ್ದುದು ಜನರಿಗೆ ಸಂಶಯ ಬಂದು ಅನೇಕ ವದಂತಿಗಳು ಶುರುವಾದವು. ಈ ವಿಚಾರ ಅಂದಿನ ದಿವಾನ್ ಶೇಷಾದ್ರಿ ಐಯ್ಯರ್ ಅವರ ಕಿವಿಗೆ ಬಿದ್ದಾಗ, ರಾಜ್ಯದ ಉನ್ನತ ಪದವಿಯಲ್ಲಿರುವ ಒಬ್ಬ ಹೈ ಕೋರ್ಟ್ ನ್ಯಾಯಾಧೀಶನಿಗೆ ಕೆಟ್ಟ ಹೆಸರು ಬರಬಾರದು ಅನ್ನುವ ಉದ್ದೇಶದಿಂದ ದಿವಾನರು, ಗುಟ್ಟಾಗಿ ನರಹರಿ ರಾಯರನ್ನು ಭೇಟಿಮಾಡಿ ಈ ವದಂತಿಗಳ ಬಗ್ಗೆ ಪ್ರಸ್ತಾಪಿಸಿದರಂತೆ. ನಂತರ ನರಹರಿರಾಯರು, ನಾಗರತ್ನಮ್ಮನ ಸಂಗೀತವನ್ನು ಖಾಸಗಿಯಾಗಿ (in private ) ಕೇಳುವುದಕ್ಕೆ ಒಂದು ಮನೆಯನ್ನು ಗುಡ್ಡದ ಮೇಲೆ ಕಟ್ಟಿ ಅದನ್ನು Mount Joy ಅಂತ ಹೆಸರಿಟ್ಟರು. ಈಗ ನರಹರಿ ಗುಡ್ಡ ಮತ್ತು ಇಲ್ಲಿಗೆ ಹೋಗುವ ರಸ್ತೆ, ಹಣಮಂತನಗರದಲ್ಲಿ, Mount Joy ರಸ್ತೆ.
ಶಾಸ್ತ್ರೀಯ ಸಂಗೀತಕ್ಕೆ ಬಹಳ ವರ್ಷಗಳಿಂದ ಈಗಿನ ಚೆನ್ನೈ (Madras) ನಲ್ಲಿ ಪ್ರಾಮುಖ್ಯತೆ ಇದೆ. ಈ ಕಾರಣದಿಂದ ನಾಗರತ್ನಮ್ಮ, ನರಹರಿರಾಯರ ಸಲಹೆಯ ಮೇಲೆ ಮದ್ರಾಸಿನಲ್ಲಿ ನೆಲಸುವುದಕ್ಕೆ ನಿರ್ಧಾರ ಮಾಡಿದಳು. ಅಲ್ಲಿ ಮೊದಲಿಯಾರ್ ಪಂಗಡದವರಿಂದ ಆಶ್ರಯ ಪಡೆದು ಬಹಳ ಬೇಗ ಒಬ್ಬ ಹೆಸರಾಂತ ಸಂಗೀತಗಾರಳಾದಳು. ೧೯೦೫ ರಿಂದ ಅಲ್ಲಿರುವ ಸಂಗೀತ ಸಭೆಗಳಲ್ಲಿ ಭಾಗವಹಿಸಿ ಯಶಸ್ಸನ್ನು ಕಂಡಳು. ಆ ಕಾಲದಲ್ಲೇ ವರಮಾನ ತೆರಿಗೆ (Income tax) ಕೊಡುವಷ್ಟು ಹಣ ಸಂಪಾದನೆ ಇತ್ತು. ಆಗಿನ ಕಾಲದಲ್ಲಿ , ದೇವದಾಸಿ ಪಂಗಡದಲ್ಲಿ ಇರಲಿ, ಯಾವುದೇ ಮಹಿಳೆಯರಲ್ಲಿ ಈ ತೆರಿಗೆ ಕೊಡುತ್ತಿದ್ದವರು ಬಹಳ ವಿರಳ. ನಾಗರತ್ನಮ್ಮ ಒಂದು ಭವ್ಯವಾದ ಮನೆಯನ್ನು ಕಟ್ಟಿ ಅದರ ಗೃಹ ಪ್ರವೇಶಕ್ಕೆ ಮೈಸೂರು ಬಿಡಾರಂ ಕೃಷ್ಣಪ್ಪನವರವನ್ನು ಆಹ್ವಾನಿಸಿದ್ದಳು. ಪುರಂದರ ದಾಸರ ದೇವರನಾಮಗಳನ್ನು ಮದ್ರಾಸಿನಲ್ಲಿ ಮೊದಲಿಗೆ ಕೇಳಿದ್ದು ಇವರಿಂದ ಎಂದು ಅನೇಕರು ಪ್ರಶಂಸಿದರು.

ತ್ಯಾಗರಾಜರ ಕೃತಿಗಳನ್ನು ಹಾಡುವುದು ಇವಳ ವಿಶೇಷತೆ ಆಗಿತ್ತು. ತ್ಯಾಗರಾಜರ ಸಮಾಧಿ ತಿರುವಾಯೂರಿನಲ್ಲಿ ನಿರ್ಲಕ್ಷ ಸ್ಥಿತಿಯಲ್ಲಿ ಇರುವ ವಿಷಯ ಅವಳ ಗುರು ಬಿಡಾರಂ ಕೃಷ್ಣಪ್ಪ ನವರಿಂದ ತಿಳಿಯುತು. ಅಲ್ಲಿಯವರೆಗೆ ಈ ಸಮಾದ್ಜಿ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಈಗ ಈ ಸಮಾಧಿಯನ್ನು ನವೀಕರಿಸುವುದನ್ನು ತನ್ನ ಜೀವನ ಧ್ಯೇಯವನ್ನಾಗಿಸಿಕೊಂಡಳು. ತಿರುವಾಯೂರಿಗೆ ಬಂದು ಸಮಾಧಿಯನ್ನು ಗುರುತಿಸಿ ಅಲ್ಲಿ ಒಂದು ಮಂದಿರವನ್ನು ಕಟ್ಟುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದಳು. ಮದ್ರಾಸಿನಲ್ಲಿದ್ದ ಮನೆ ಮತ್ತು ಬಳಿ ಇದ್ದ ಒಡವೆಗಳನ್ನು ಮಾರಿ ಬಂದ ಹಣದಿಂದ ಈ ಕಟ್ಟಡದ ನಿರ್ಮಾಣ ೨೭/೧೦/೧೯೨೧ ರಲ್ಲಿ ಪ್ರಾರಂಭವಾಗಿ ೭/೦೧/೧೯೨೫ ರಲ್ಲಿ ಪೂರ್ಣಗೊಂಡಿತು. ನಂತರ, ಅನೇಕರ ಸಹಾಯದಿಂದ, ತಿರುವಾಯೂರಿನಲ್ಲಿ ಮೈಸೂರು ಛತ್ರವನ್ನೂ ಕಟ್ಟಿದಳು.

೧೮೪೭ರಲ್ಲಿ ತ್ಯಾಗರಾಜರು ತೀರಿಹೋದ ಹಲವಾರು ವರ್ಷಗಳ ನಂತರ ಕೆಲವು ಸಂಗೀತಗಾರರು ಅಲ್ಲಿ ತ್ಯಾಗರಾಜರ ಕೀರ್ತನೆಗಳನ್ನು ಹಾಡುತ್ತಿದ್ದರು. ಆದರೆ ಮಹಿಳೆಯರಿಗೆ ಪ್ರವೇಶ ಇರಲಿಲ್ಲ. ಸ್ವಂತ ಖರ್ಚಿನಲ್ಲಿ ಮಂದಿರ ನಿರ್ಮಾಣ ಮಾಡಿದ ಮೇಲೂ ಸಹ ನಾಗರತ್ನಮ್ಮನಿಗೆ ಇವರ ಜೊತೆಯಲ್ಲಿ ಹಾಡುವುದಕ್ಕೆ ಅವಕಾಶ ಸಿಗಲಿಲ್ಲ. ನಂತರ ೧೯೨೭ ಜನವರಿ ತಿಂಗಳಲ್ಲಿ ಮಹಿಳೆಯರದ್ದೇ ಒಂದು ಗುಂಪು ಮಾಡಿಕೊಂಡು, ಇದರಲ್ಲಿ ಅನೇಕರು ದೇವದಾಸಿಯರು, ಮಂದಿರದ ಆವರಣದಲ್ಲಿ ತ್ಯಾಗರಾಜರ ಪಂಚರತ್ನ ಕೀರ್ತನೆಗಳನ್ನು ಹಾಡಲು ಪ್ರಾರಂಭಿಸಿದರು. ನಂತರ ಎರಡೂ ಪಂಗಡಗಳು ಸೇರಿ ಒಪ್ಪಂದಕ್ಕೆ ಬಂದು ಈ ಆರಾಧನೆ ಒಂದಾಗಿ, ಇಂದು ಈ ಆರಾಧನೆ ಉನ್ನತ ಮಟ್ಟಕ್ಕೆ ಏರಿದೆ. ನೂರಾರು ಪ್ರಸಿದ್ಧ ಗಾಯಕರು ಅಲ್ಲಿ ಸೇರಿ ಸಾವಿರಾರು ಪ್ರೇಕ್ಷಕರ ಮುಂದೆ ಪಂಚರತ್ನ ಕೀರ್ತನೆಗಳನ್ನು ಹಾಡುವುದನ್ನ ನೋಡುವುದು ಒಂದು ಅದ್ಭುತ ದೃಶ್ಯ. ತ್ಯಾಗರಾಜರ ಆರಾಧನೆ ಪ್ರತಿ ವರ್ಷ ಜನವರಿ ತಿಂಗಳಲ್ಲಿ ನಡೆಯುತ್ತದೆ.

ಹದಿನೆಂಟನೇ ಶತಮಾನದ ಒಬ್ಬ ದೇವದಾಸಿ ಪಂಗಡದ ತೆಲಗು ಕವಿ ಮುದ್ದುಪಲನಿ ( ೧೭೩೦-೧೭೯೦) ರಚಿಸಿದ "ರಾಧಿಕಾ ಸಂತ್ವನಂ" ನಾಗರತ್ನಮ್ಮನ ಗಮನಕ್ಕೆ ಬಂತು. ಇದರಲ್ಲಿ ರಾಧೆಯ ದೈಹಿಕ ಬಯಕೆಯ ಪ್ರಸ್ತಾವನೆ ಇತ್ತು. ಆದರೆ ೧೮೮೭ ರಲ್ಲಿ ಪ್ರಕಟಿಸಿದ ಭಾಷಾಂತರದಲ್ಲಿ "ರಸವತ್ತವಾದ" ವರ್ಣನೆಗಳನ್ನು ತೆಗೆದುಹಾಕಿದ್ದಲ್ಲದೇ, ಮುದ್ದುಪಲನಿ ಪ್ರತಾಪಸಿಂಹನ ಆಸ್ಥಾನದಲ್ಲಿ ಕವಿಯಾಗಿದ್ದಳು ಅನ್ನುವ ವಿಚಾರವನ್ನು ಸಹ ಬರೆದಿರಿಲಿಲ್ಲ. ಕಾರಣ ಬ್ರಿಟಿಷರ "Victorian Values" ಮತ್ತು "ಕೀಳು ದರ್ಜೆಯ" ದೇವದಾಸಿ ಬರೆದ ರಸವತ್ತಾದ ಕವಿತೆಗಳನ್ನು ಪ್ರಕಟಿಸುವುದು ಸಮಾಜದ ದೃಷ್ಟಿಯಲ್ಲಿ ಸರಿಯಲ್ಲ ಅನ್ನುವ ಊಹೆ ಕೆಲವರಿಗಿತ್ತು. ಉದಾಹರಣೆಗೆ ಇಂಗ್ಲೆಂಡ್ನಲ್ಲಿ ೧೯೨೮ರಲ್ಲಿ DH Lawrence ಬರೆದ Lady Chatterley's Lover ಪುಸ್ತಕ ನಿಷೇಧಿತವಾಗಿತ್ತು. ಎರಡು ಆವೃತ್ತಿಗಳನ್ನೂ ಓದಿ ನಾಗರತ್ನಮ್ಮನಿಗೆ ಅಸಮಾಧಾನವಾಗಿ ಮುದ್ದುಪಲನಿಯ ಮೂಲ ರಾಧಿಕಾ ಸಂತ್ವನಂ ಅನ್ನು ೧೯೧೦ ರಲ್ಲಿ Ramaswamy & Sons ಎಂಬ ಪ್ರಕಾಶಕರಿಂದ ಪ್ರಕಟಣೆ ಮಾಡಿಸಿದಳು. ಆದರೆ ಅನೇಕ ಸಂಪ್ರದಾಯವಾದಿ ವಿದ್ವಾಂಸರು ಇದನ್ನು ಪ್ರತಿಭಟಿಸಿ, ಮುದ್ದುಪಲನಿ ಒಬ್ಬ ವೈಶ್ಯೆ, ಅಂತಹ ಕೀಳು ದರ್ಜೆಯ ಮಹಿಳೆ ಬರೆದಿರುವುದನ್ನು ಜನರು ಓದಬಾರದು ಎಂದು ಹೇಳಿ ಸರ್ಕಾರ ಇದನ್ನು ಬಹಿಷ್ಕಾರ ಮಾಡಬೇಕು ಅನ್ನುವ ಒತ್ತಡ ತಂದರು. ನಾಗರತ್ನಮ್ಮ ಮತ್ತು ದೇವದಾಸಿ ಪಂಗಡದವರು ಒಬ್ಬ ದೇವದಾಸಿ ಮಹಿಳೆ ಇದನ್ನು ಬರೆದ್ದರಿಂದ ಪ್ರತಿಭಟನೆ ಮಾಡುತ್ತೀರ ಎಂದು ವಾದಿಸಿದರು. ಆದರೆ ಸರ್ಕಾರ ಇದನ್ನು ಒಪ್ಪಲಿಲ್ಲ. ೧೯೧೧ ರಲ್ಲಿ ಪೊಲೀಸ್ ಅಧಿಕಾರಿಗಳು, ಐಪಿಸಿ ೨೯೨ ಕಾನೂನಿನ ಪ್ರಕಾರ ಈ ಪುಸ್ತಕದ ವ್ಯಾಪಾರ ನಿಲ್ಲಿಸುವುದಕ್ಕೆ ಆಜ್ಞೆ ಮಾಡಿ ಮಾರಾಟಕ್ಕಿದ್ದ ಪುಸ್ತಕಗಳನ್ನು ವಶ ಮಾಡಿಕೊಂಡರು. ೧೯೪೭ರ ನಂತರ ಈ ಪುಸ್ತಕ ನಿಷೇಧವನ್ನು ರದ್ದು ಮಾಡಲಾಯಿತು.

ಇಪ್ಪತ್ತನೇ ಶತಮಾನದ ಮೊದಲಿನಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ಮತ್ತು ಕೆಲವು ಹಿಂದು ಪಂಗಡದವರಿಂದ ದೇವದಾಸಿಯರು ವೇಶ್ಯೆಯರು, ಇವರಿಂದ ಸಮಾಜಕ್ಕೆ ಹಾನಿ ಎಂದು ಇವರ ಪದ್ದತಿಗಳನ್ನು ನಿಲ್ಲಿಸಬೇಕೆಂದು ಪ್ರಯತ್ನ ಪಟ್ಟರು. ನಾಗರತ್ನಮ್ಮ ಇದನ್ನು ಪ್ರತಿಭಟಿಸಿ ತಮ್ಮದೇ ಸಂಘವನ್ನು (Union )ಕಟ್ಟಿ ಅದರ ಅಧ್ಯಕ್ಸಳಾಗಿ ಅವರ ಹಕ್ಕುಗಳಿಗಾಗಿ ಹೋರಾಡಿದಳು.
೧೯೨೭ರಲ್ಲಿ ತಮ್ಮ ಹಕ್ಕುಗಳನ್ನು ಕಾಪಾಡುವುದಕ್ಕೆ ಇಂಗ್ಲಿಷ್ ನಲ್ಲಿ ಬರೆದ "A Humble Memorandum of Devadasis" ಅನ್ನುವ ಪತ್ರವನ್ನು ಸರ್ಕಾರಕ್ಕೆ ಕೊಟ್ಟು ತನ್ನ ಪಂಗಡದವರ ಮಾನವ ಹಕ್ಕುಗಳನ್ನು ( Human Rights ) ಕಾಪಾಡಿ ಎಂದು ಮನವಿ ಮಾಡಿಕೊಂಡಳು.
ಅವಳ ಕೊನೆಕಾಲದಲ್ಲಿ ಡಿ.ವಿ.ಜಿ. ಇವಳನ್ನು ಭೇಟಿಮಾಡಿ ಆರೋಗ್ಯವನ್ನು ವಿಚಾರಿಸಿದರು. ಈ ಸಂಭಾಷಣೆಯನ್ನು ಡಿ.ವಿ.ಜಿ. ಹೀಗೆ ಬರೆದಿದ್ದಾರೆ:
"ನಾನು ಹುಟ್ಟಿದಾಗ ನಾಗರತ್ನ, ನಂತರ ಭೋಗರತ್ನ ಆದರೆ ಈಗ ರೋಗರತ್ನ" ಅಂತ ನಾಗರತ್ನಮ್ಮ ಹೇಳಿದ್ದಕ್ಕೆ, ಡಿ.ವಿ.ಜಿ. ಹೇಳಿದರಂತೆ - "ನೀನು ಇನ್ನೆರಡು ರತ್ನಗಳನ್ನು ಮರೆತೆ; ಒಂದು ರಾಗರತ್ನ ಮತ್ತು ತ್ಯಾಗರತ್ನ"
ಇದನ್ನು ಯಾರಿಗೂ ಹೇಳಬೇಡಿ ಅಂದಳಂತೆ ನಾಗರತ್ನಮ್ಮ!
ಈಕೆ ಒಬ್ಬ ಮಹಿಳೆಯರ ಹಕ್ಕುಗಳಿಗೆ ಹೋರಾಡಿದ ಮತ್ತು ಸಮಾಜದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ ಎಂದನ್ನು ಪ್ರತಿಪಾದಿಸಿದ ಕನ್ನಡತಿ ಮತ್ತು ಕ್ರಾಂತಿಕಾರಿಣಿ.
ನಾಗರತ್ನಮ್ಮ ೧೯/೫/೧೯೫೨ ರಂದು ತನ್ನ ೭೩ರನೇ ವಯಸ್ಸಿನಲ್ಲಿ ತಿರುವಾಯೂರಿನಲ್ಲಿ ನಿಧನಳಾದಳು. ತ್ಯಾಗರಾಜರ ಸಮಾಧಿ ಪಕ್ಕದಲ್ಲೇ ಇವಳ ಸ್ಮಾರಕವನ್ನು ನಿರ್ಮಿಸಲಾಗಿದೆ.

ಈಕೆಯ ಜೀವನ ಚರಿತ್ರೆ ಬಗ್ಗೆ ಬೆಂಗಳೂರಿನ ರಂಗಶಂಕರದಲ್ಲಿ ನಾಗಾಭರಣರ ನಿರ್ದೇಶದಲ್ಲಿ ಒಂದು ನಾಟಕ ಪ್ರದರ್ಶನ ನಡೆಯಿಲಿದೆ.
ರಾಮಮೂರ್ತಿ
ಕಾಂಗಲ್ಟನ್ , ಚೆಶೈರ್
******************************
******************************