ಮೂರನೆಯ ಚಾರ್ಲ್ಸ್ – King Charles III

ನನಗನ್ನಿಸುವಂತೆ ಅನಿವಾಸಿಯ ಬಳಗದ ಸದಸ್ಯರೆಲ್ಲರ (ಹೆಚ್ಚು-ಕಮ್ಮಿ ಎಲ್ಲರ ಅನ್ನೋಣವೇ?) ಜೀವನ ಕಾಲದಲ್ಲಿ ಇದು ಮೊದಲನೆಯ ಸಿಂಹಾಸನಾರೋಹಣ, ಈ ಶನಿವಾರ ಅಂದರೆ ನಾಳೆ 2023 ರ ಮೇ 6 ರಂದು ಜರುಗಲಿದೆ.  ಕಳೆದ 70 ವರ್ಷಗಳಿಂದ ರಾಜಕುಮಾರನಾಗಿಯೇ ಉಳಿದಿದ್ದ ಚಾರ್ಲ್ಸ್, 7 ತಿಂಗಳ ಹಿಂದೆ ರಾಣಿ ಎಲಿಜಬೆತ್ ರ ಮರಣಾನಂತರ ರಾಜನಾದರೂ, ಈ ವಾರದ ಕೊನೆಯಲ್ಲಿ ಅಧಿಕೃತ ಸಮಾರಂಭದಲ್ಲಿ ಪತ್ನಿ ಕಮಿಲಾರೊಂದಿಗೆ ಸಿಂಹಾಸನವನ್ನು ಏರಲಿದ್ದಾರೆ.  53 ಕ್ಕೂ ಹೆಚ್ಚು ಅವಧಿಯ ತಮ್ಮ ಅಪ್ರೆಂಟಿಸ್ ಅನುಭವವನ್ನು ವೃತ್ತಿಯಲ್ಲಿ ಯಶಸ್ವಿಯಾಗಿ ಬಳಸುವ ಅವಕಾಶ ಪಡೆಯಲಿದ್ದಾರೆ.  ಈ ಸಂದರ್ಭದಲ್ಲಿ ನಮ್ಮ ಅನಿವಾಸಿ ಬಳಗದ “ಡೇವಿಡ್ ಬೇಯ್ಲಿ” ಹವ್ಯಾಸಿ ಛಾಯಾಗ್ರಾಹಕರೊಬ್ಬರು, ಸುಮಾರು ಅರ್ಧ ಶತಮಾನದ ಹಿಂದೆ ತಾವು ಕಿಂಗ್ ಚಾರ್ಲ್ಸ್ ಅವರ ಜೀವನದ ಒಂದು ಭಾಗದಲ್ಲಿ ಹೇಗೆ ಹಾಯ್ದು ಬಂದರೆಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಓದುಗರಲ್ಲೂ ಹಲವರು ಈರೀತಿಯ ಅನುಭವಗಳ ಪಟ್ಟಿಮಾಡುವವರಿರಬಹುದು – ದಯವಿಟ್ಟು ಪ್ರತಿಕ್ರಿಯೆ ಬರೆದು ನಮ್ಮೊಂದಿಗೆ ಹಂಚಿಕೊಳ್ಳಿ.

ಮೊದಲಿಗೆ ರಾಜ ಚಾರ್ಲ್ಸ್ ರ ಜೀವನಕಾಲದ ಒಂದು ಝಲಕನ್ನು ನೋಡೋಣ.  ಹಲವಾರು ಅಂತರ್ಜಾಲ ತಾಣಗಳು ಈ ಚಿಕ್ಕ ಬರಹದ ಸಾಮಗ್ರಿ ಒದಗಿಸಿದ ಮೂಲಗಳು – royal.uk, britroyals.com, theguardian.com, smithsonianassociates.org ಇತ್ಯಾದಿ. – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ)

ಮೂರನೆಯ ಚಾರ್ಲ್ಸ್ - ಕಿಂಗ್ ಚಾರ್ಲ್ಸ್ ದ ಥರ್ಡ್

ಜನಪ್ರಿಯ ರಾಣಿ ಎರಡನೆಯ ಎಲಿಜಬೆತ್ ಹಾಗೂ ರಾಜಕುಮಾರ ಫಿಲಿಪ್ (ಡ್ಯೂಕ್ ಆಫ಼ ಎಡಿನ್ಬರಾ) ಇವರ ಮೊದಲ ಮಗ.
ಸ್ಕಾಟ್ಲಂಡಿನಲ್ಲಿ ಮತ್ತು ಕೇಂಬ್ರಿಜ್ ನ ಟ್ರಿನಿಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸ. 
ಜುಲೈ 1, 1969 ರಂದು ಪ್ರಿನ್ಸ್ ಆಫ್ ವೇಲ್ಸ್ ಪದವಿ.  ಅಲ್ಲಿಂದ ಕೇಂಬ್ರಿಜ್ ಹಾಗೂ ರಾಯಲ್ ವಿಮಾನ ದಳದಲ್ಲಿ ಕಲಿಕೆ. 1971 ರಲ್ಲಿ ಅವರ ತಂದೆ ಹಾಗೂ ತಾತನ ಹೆಜ್ಜೆಗಳನ್ನನುಸರಿಸಿ, ನೌಕಾದಳಕ್ಕೆ ಸೇರಿಕೆ.

1981 ರ ಜುಲೈ 29ರಂದು ಡಯಾನಾ ಅವರೊಂದಿಗೆ ಮದುವೆ.  ಅವರ ವೈವಾಹಿಕ ಜೀವನ ಹಲವು ಏರುಪೇರುಗಳಿಂದ ಕೂಡಿದ್ದು, 1993ರಲ್ಲಿ ಅವರಿಬ್ಬರ ಬೇರ್ಪಡುವಿಕೆಯಲ್ಲಿ ಕೊನೆಗೊಂಡಿತು.  2005 ರಲ್ಲಿ ಚಾರ್ಲ್ಸ್ ಮತ್ತೆ ಕಮಿಲಾ ಅವರನ್ನು ಮದುವೆಯಾದರು. 

ರಾಜನಾಗುವ ಮೊದಲಿನಿಂದಲೂ ಚಾರ್ಲ್ಸ್ ಸೈನ್ಯದ, ಸೈನಿಕರ ಜೊತೆಯ ತಮ್ಮ ಬಾಂಧವ್ಯವನ್ನು ಗಟ್ಟಿಯಾಗಿ ಇಟ್ಟುಕೊಂಡಿದ್ದಾರೆ.  ಹಲವಾರು ಚಾರಿಟಬಲ್ ಸಂಸ್ಥೆಗಳ ಪೋಷಕನಾಗಿ, ಅವುಗಳ ಕೆಲಸವನ್ನು ಪ್ರೋತ್ಸಾಹಿಸಿಕೊಂಡು ಬಂದಿದ್ದಾರೆ.  ವೇಲ್ಸ್ ಹಾಗೂ ಸ್ಕಾಟ್ಲಂಡ್ ಗಳ ಮೇಲಿನ ಅವರ ಪ್ರೀತಿ ಸುಲಭವಾಗಿ ಕಂಡುಬರುವಂಥದ್ದು. ಇವೆಲ್ಲದರೊಂದಿಗೆ ಚಾರ್ಲ್ಸ್ ರ ನಿಸರ್ಗ ಪ್ರೇಮ, ಅವರನ್ನು ಹಲವಾರು ಜಾಗತಿಕ ಹಾಗೂ ಸ್ಥಳೀಯ ಸವಾಲುಗಳೊಂದಿಗೆ ಸೆಣಸುವ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿಸಿದೆ.  ಸುಸ್ಥಿರ ಭವಿಷ್ಯ (sustainable future), ಅಭಿವೃದ್ಧಿಗಾಗಿ ಅವರ ಹೋರಾಟ ಮುಂದುವರೆದಿದೆ.

ಮೂರನೆಯ ಚಾರ್ಲ್ಸ್, ಯುನೈಟೆಡ್ ಕಿಂಗ್ಡಮ್ ನ 22ನೆಯ ಸಿಂಹಾಸನಾಧೀಶ / ರಾಜ.  ಮುತ್ತಾತ ಐದನೆಯ ಜಾರ್ಜ್ ರಿಂದ ಸ್ಥಾಪಿತವಾದ ವಿಂಡ್ಸರ್ ಮನೆತನದ 6ನೇ ರಾಜ.  ಆಸ್ಟ್ರೇಲಿಯಾ, ನ್ಯೂಜಿಲಂಡ್, ಕೆನಡಾ ಸೇರಿದಂತೆ 16 ದೇಶಗಳ ರಾಜಪಟ್ಟ (ನೇರ ಆಡಳಿತವಿಲ್ಲದ ಸ್ವತಂತ್ರ ದೇಶಗಳು). 54 ಸ್ವತಂತ್ರ ದೇಶಗಳ ಸದಸ್ಯತ್ವದ ಕಾಮನ್ ವೆಲ್ತ್ ಕೂಟದ ಮುಖ್ಯಸ್ಥ.  
ಅತ್ಯಂತ ಜನಪ್ರಿಯ ರಾಣಿಯಾಗಿ 70 ವರ್ಷಕ್ಕೂ ಹೆಚ್ಚು ಕಾಲ ಇಲ್ಲ-ಸಲ್ಲದ ಕಾಂಟ್ರೋವರ್ಸಿಗಳಿಲ್ಲದೇ ’ರಾಜ್ಯಭಾರ’ ಮಾಡಿದ ಎರಡನೆಯ ಎಲಿಜಬೆತ್ ರಾಣಿಯ ಉತ್ತರಾಧಿಕಾರಿಯಾಗಿ ಸಿಂಹಾಸನವನ್ನೇರುವುದು ಸುಲಭದ ಮಾತಲ್ಲ.  ಹಾಗೆಯೇ ಸುರಳೀತವಾಗಿ ಹೊಸ ರಾಜನ ರಾಜ್ಯಾಡಳಿತವೂ ನಡೆಯಲೆಂದು ಹಾರೈಸೋಣ. 

-ಲಕ್ಷ್ಮೀನಾರಾಯಣ ಗುಡೂರ.

*********************************************************

ನಾನು ರಾಯಲ್ ಫೋಟೋಗ್ರಾಫರ್ (ಅನಧಿಕೃತ) ಆದ ದಿನ! - ಡಾ. ಶ್ರೀವತ್ಸ ದೇಸಾಯಿ
ಇದೇ ವಾರ ಲಂಡನ್ನಿನಲ್ಲಿ ಮೂರನೆಯ ಕಿಂಗ್ ಚಾರ್ಲ್ಸ್ ನ ಪಟ್ಟಾಭಿಷೇಕ ನಡೆಯಲಿದೆ. ರಾಣಿ ಎಲಿಝಬೆತ್ ಪಟ್ಟಕ್ಕೇರಿದ ವರ್ಷ
1952. ಆಗ ನಾಲ್ಕು ವರ್ಷದವನಾಗಿದ್ದ ಆತ ಈ ದಿನಕ್ಕಾಗಿ ಎಪ್ಪತ್ತು ವರ್ಷಗಳೇ ಕಾಯ್ದಿರ ಬಹುದು. ಆತನ ’ಹೆಡ್ ಅಂಡ್
ಶೋಲ್ಡರ್’ ಫೋಟೋ ತೆಗೆದು ನನ್ನನ್ನೊಬ್ಬ ಅನಧಿಕೃತ ಫೋಟೋಗ್ರಾಫರ್ ಅಂತ ನಾನೇ ಅಂದುಕೊಳ್ಳುತ್ತ ನಾನು 45
ವರ್ಷಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದೇನೆ ಅಂದರೆ ಬರೀ ಉಡಾಫೆ ಅಂದುಕೊಳ್ಳದೆ ಆ ಕಥೆಯನ್ನು ಕೇಳಿ ಆಮೇಲೆ ಹೇಳಿರಿ!

ರೆಡ್ ಲೆಟ್ಟರ್ ಡೇ, ಜೂಲೈ, 1978.
ಹದಿನೈದನೆಯ ಶತಮಾನದಿಂದಲೂ ಹಬ್ಬದ ದಿನಗಳ ಪ್ರಥಮಾಕ್ಷರವನ್ನು ಕೆಲೆಂಡರಿನಲ್ಲಿ ಕೆಂಪು ಅಕ್ಷರಗಳಿಂದ ಮುದ್ರಿಸುವ ಈ ರೀತಿಯ ಪರಿಪಾಠ ಪ್ರಿಂಟರ್ ವಿಲಿಯಮ್ ಕ್ಯಾಕ್ಸ್ಟನ್ ಶುರುಮಾಡಿದ ಕಾಲದಿಂದ ಬಂದಿದೆ ಅಂತ ಪ್ರತೀತಿ.
ನನ್ನ ಪಾಲಿಗೆ ಆ ದಿನ ಅಂಥದೊಂದು ದಿನ. ಒಂದು ಕೆಂಪು ಹೆಲಿಕಾಪ್ಟರನ್ನು ತಾನೇ ಪೈಲಟ್ ಆಗಿ ನಡೆಸಿಕೊಂಡು ಯು ಕೆ ನ ವೇಲ್ಸ್ ಪ್ರಾಂತದ ಮರ್ಥರ್ ತಿಡ್ಫಿಲ್ ಎನ್ನುವ ಊರಿನ ’ಪ್ರಿನ್ಸ್ ಚಾರ್ಲ್ಸ್ ಆಸ್ಪತ್ರೆ’ಯ ಖಾಲಿ ಕಾರ್ ಪಾರ್ಕಿನಲ್ಲಿ ಬಂದಿಳಿದಾಗ ರೆಡ್ ಲೆಟ್ಟರ್ ಡೇ ಆಯಿತು.  ಅಷ್ಟೇ ಏಕೆ, ಆತನ ಹೆಸರಿನಲ್ಲಿ ನಾಮಕರಣವಾಗಿ ಅದನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿಸಿದ ಆಸ್ಪತ್ರೆಯ ಸಿಬ್ಬಂದಿ ಮತ್ತು ಅಲ್ಲಿ ನೆರೆದ ನೂರಾರು ಜನರಿಗೂ ಅದು ಮರೆಯಲಾರದ ದಿನ. ಆಗ ಮೋಬೈಲ್ ಕ್ಯಾಮರಾಗಳು ಹುಟ್ಟಿರಲಿಲ್ಲ. ಅದೇ ಆಸ್ಪತ್ರೆಯಲ್ಲಿ ಎರಡು ವರ್ಷಗಳಿಂದ ಜೂನಿಯರ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ನಾನು ಒಂದು ಹಳೆಯ ಮಾದರಿಯ ಅಶಾಯಿ ಪೆಂಟಾಕ್ಸ್ Asahi Pentax ಕ್ಯಾಮರಾ ಹಿಡಿದು ಆತನ ಒಂದು ಚಿತ್ರವನ್ನಾದರೂ ಸೆರೆ ಹಿಡಿಯಲು ಕಾತುರನಾಗಿದ್ದೆ. ರಾಜ ಕುಮಾರ ಅಂದ ಮೇಲೆ ಸಾಕಷ್ಟು ಸೆಕ್ಯೂರಿಟಿ ಇತ್ತಾದರೂ ಈಗಿನಷ್ಟು ಇರಲಿಲ್ಲ. ಆದರೂ ನಿಯಮಾವಳಿಗಳ (protocol) ಪ್ರಕಾರ ಫ್ಲಾಷ್ ಫೋಟೋಗೆ ಕಡ್ಡಾಯವಾಗಿ ನಿಷೇಧ. ಅದು ನನಗೆ ಸ್ವಲ್ಪ ನಿರಾಶೆಯನ್ನುಂಟು ಮಾಡಿದರೂ ನನ್ನ ಅದೃಷ್ಟವನ್ನು ಪರೀಕ್ಷಿಸಲು
ಸಿದ್ಧನಾದೆ.

ನನಗೂ ಫೋಟೋಗ್ರಾಫಿಗೂ ಅಂಟಿದ ನಂಟು ...
ಎಲಿಝಬೆತ್ ರಾಣಿ ಪಟ್ಟಕ್ಕೆ ಬಂದಾಗ ನಾವು ಊಟಿಯಲ್ಲಿ ವಾಸಿಸುತ್ತಿದ್ದೆವು. ಆಗ ನನಗೆ ಆರುವರ್ಷ, ನನ್ನ ಅಣ್ಣನಿಗೆ ಎಂಟು
ವರ್ಷ ವಯಸ್ಸಿರಬಹುದು. ನಮಗೆ ಮೊದಲಿನಿಂದಲೂ ಫೋಟೋ ತೆಗೆಯ ಬೇಕೆಂದು ತವಕ. ನನ್ನಣ್ಣ ಮತ್ತು ನಾನು ತಂದೆಯವರಿಗೆ
ಕಾಡಿ, ಬೇಡಿ ಒಂದು ಫುಲ್ ವ್ಯೂ ಕ್ಯಾಮರವನ್ನು ಅದೇ ಸಮಯಕ್ಕೆ ಗಿಟ್ಟಿಸಿದ್ದೆವು. ಆಗ ಬ್ಲಾಕ್ ಅಂಡ ವೈಟ್ ಫೋಟೊ ತೆಗೆದು,
ಊರಲ್ಲಿದ್ದ ಒಂದೇ ಸ್ಟೂಡಿಯೋಗೆ ಕೊಟ್ಟು, ’ತೊಳೆಸಿ’ ಪ್ರಿಂಟ್ ಮಾಡಿಸಿದ ನೆನಪು ಇನ್ನೂ ಹಸಿರಾಗಿದೆ. ಆಮೇಲೆ ಕಾಲೇಜಿಗೆ
ಬಂದಾಗ ನನ್ನ ಮಿತ್ರನೊಡನೆ ಸೇರಿ ನಾವೇ ಪ್ರಿಂಟ್ ಮಾಡಿದ್ದೂ ಇದೆ. ನಂತರ ಈಗ ಡಿಜಿಟಲ್ ಯುಗ ಬಂದಾಗಿನಿಂದ ಎಲ್ಲರಂತೆ
ನಾನೂ ಒಬ್ಬ ಡೇವಿಡ್ ಬೇಯ್ಲಿ, ಅಥವಾ ಕ್ರಿಸ್ ಜಾಕ್ಸನ್ ಅನ್ನುವ ಭ್ರಮೆಯಲ್ಲಿದ್ದೇನೆ!

ಲೈಬ್ರರಿಯಲ್ಲಿ ರಾಜನ ಭೇಟಿ
ಇಂಗ್ಲಿಷ್ ನಿಘಂಟು ಬರೆದು ಪ್ರಸಿದ್ಧರಾದ ಡಾ ಸಾಮ್ಯುಎಲ್ ಜಾನ್ಸನ್ ಅವರನ್ನು ಮೂರನೆಯ ಜಾರ್ಜ್ ಅವರು ತಮ್ಮ
ಇಚ್ಛೆಯಂತೆ ರಾಣಿಯ ಲೈಬ್ರರಿಯಲ್ಲಿ 1767 ರಲ್ಲಿ ಭೆಟ್ಟಿಯಾಗಿದ್ದರು ಅಂತ ಓದಿದ ನೆನಪು. ಅದನ್ನೇ ನೆನಪಿಸುವ ಅಂದಿನ
ಘಟನೆ. ಆಗ ನಾನು ಅದೇ ಆಸ್ಪತ್ರೆಯಲ್ಲಿ ಕನ್ಸಲ್ಟಂಟ್ ಆಗಿ ಕೆಲಸ ಮಾಡುತ್ತಿದ್ದ ಡಾ ಲಾಲಾ ಎನ್ನುವ ಕಣ್ಣಿನ ತಜ್ಞರ ಕೆಳಗೆ ಕೆಲಸ
ಮಾಡುತ್ತಿದ್ದೆ. ಅವರು ಆ ದಿನ ಆಗ ಪ್ರಿನ್ಸ್ ಎಂದೇ ಕರೆಯಲಾಗುತ್ತಿದ್ದ ಚಾರ್ಲ್ಸ್ ಅವರನ್ನು ಭೇಟಿ ಮಾಡಲು ಇಚ್ಛಿಸಿದ್ದರು.
ಅದಕ್ಕೆ ಆಸ್ಪತ್ರೆಯ ಅಧಿಕಾರಿಗಳೂ ಒಪ್ಪಿದ್ದರು. ಅವರ ಜೊತೆಗೆ ನಾನೂ ಸೇರಿಕೊಳ್ಳಲೇ ಎಂದು ಹೊಂಚು ಹಾಕಿದ್ದು ಫಲಿಸಲಿಲ್ಲ.
ಪ್ರೋಟೋಕಾಲ್ ಅಂತ ಅಧಿಕಾರಿಗಳು ಅದೇ ಕೋಣೆಯಲ್ಲಿರಲು ಸಮ್ಮತಿಸಲಿಲ್ಲ.

ಅಂತೂ ಸಿಕ್ಕಿತು ಅವಕಾಶ
ನಂತರ ಹಿಸ್ ರಾಯಲ್ ಹೈನೆಸ್ ಪ್ರಿನ್ಸ್ ಚಾರ್ಲ್ಸ್ ’ತಮ್ಮ’ ಹೆಸರಿನ ಆಸ್ಪತ್ರೆಯ ವಿವಿಧ ಭಾಗಗಳಿಗೆ ಭೇಟಿಕೊಡಲು ಸುತ್ತಿತ್ತುರುವಾಗ ಅವರ ಹಿಂದೆ ’ಆಂಟೂರಾಜ್’ ಜೊತೆಗೆ ಸೇರಿಕೊಂಡು ಒಂದು ಕೋಣೆಯಲ್ಲಿ ಕೆಲವು ಡಾಕ್ಟರರು ಮತ್ತು ನರ್ಸ್ಗಳು ಸಾಲಾಗಿ ನಿಂತಿದ್ದನ್ನು ನೋಡಿ, ಅವರ ಹಿಂದಿನ ಸಾಲಿನಲ್ಲಿ ಆಯಕಟ್ಟಿನ ಸ್ಥಳದಲ್ಲಿ ನಿಂತುಕೊಂಡೆ. ನಮ್ಮ ಎದುರಿಗೆ ಮೂರೇ ಅಡಿ ದೂರದಲ್ಲಿ ಒಬ್ಬೊಬ್ಬರನ್ನಾಗಿ ವಿಚಾರಿಸುತ್ತ ಮಾತಾಡಿಸುತ್ತ ಬಂದ ಚಾರ್ಲ್ಸ್ ಅವರನ್ನು ಫೋಕಸ್ ಮಾಡಿ ತಲೆ ಮತ್ತು ಭುಜಗಳು (head and shoulder) ಇಷ್ಟೇ ಕಾಣಿಸುವಂಥ ನಾಲ್ಕೈದು ’ಪೋರ್ಟ್ರೇಟ್’ ಫೋಟೋಗಳನ್ನು ಕ್ಲಿಕ್ಕಿಸಿದೆ. ಆಗ ಡಿಜಿಟಲ್ ಕ್ಯಾಮರಾಗಳ ಆವಿಷ್ಕಾರ ಆಗಿದ್ದಿಲ್ಲ. ನೆಗೆಟಿವ್ ಗಾಗಿ ಫಿಲ್ಮ್ ಗಳನ್ನು ಕಂಪನಿಗೆ ಕಳಿಸಿ ಪೋಸ್ಟಿನಲ್ಲಿ ಪ್ರಿಂಟ್ ಬರುವ ವರೆಗೆ ಪ್ರಸೂತಿ ವೇದನೆ! ಎರಡು ವಾರಗಳ ನಂತರ ಪೋಸ್ಟ್ಮನ್ ಬಂದಾಗ ’ಹೆಣ್ಣೋ ಗಂಡೋ’ ಅಂತ ಕುತೂಹಲದಿಂದ ಮತ್ತು ಅವಸರದಿಂದ ಕವರನ್ನು ಬಿಚ್ಚಿ ನೋಡಿದೆ. ಫ್ಲಾಷ್ ಇಲ್ಲ ಅಂತ  1/15 ಸೆಕೆಂಡುಗಳ ಎಕ್ಸ್ ಪೋಶರ್ ಕೊಟ್ಟಿದ್ದೆ.  ಒಂದೇ ಒಂದು ಫೋಟೋ ಮಾತ್ರ ಅವರದೇ ಅನ್ನುವಷ್ಟಾದರೂ ಸ್ಪಷ್ಟವಾಗಿ ಕಾಣಿಸುವಂತಿತ್ತು. ನನಗೆ ಸ್ವರ್ಗ ಮೂರೇ ಗೇಣು! ಒಂದು ಕಾಲದಲ್ಲಿ ಆತ ಕಿಂಗ್ ಆಗುವ ದಿನವನ್ನೇ ಕಾಯುತ್ತಿದ್ದೇನೆ ಇಂದಿನ ವರೆಗೆ! ಇನ್ನುಳಿದ snaps ಕುದುರೆ ರೇಸಿನಲ್ಲಿ ಹೇಳುವಂತೆ 'also ran' ಅನ್ನುವ ಲೆಕ್ಕಕ್ಕಿಲ್ಲದವು! ಹೋಗಲಿ ಬಿಡಿ. ಆ ‘ಐತಿಹಾಸಿಕ' ಫೋಟೋ ಬಲಗಡೆ ಕೊಟ್ಟಿದೆ, ನಿಮಗಾಗಿ!(Credit: Monochrome editing by Nigel Burkinshaw)
ರೈಟ್ ರಾಯಲ್ ಖುಶಿ!
 ಆ ಫೋಟೋವನ್ನು ಎನ್ಲಾರ್ಜ್ ಮಾಡಿಸಿ, ಪೋಸ್ಟರ್ ಮಾಡಿಸಿ ನನ್ನ ಡಿಪಾರ್ಟ್ಮೆಂಟಿನಲ್ಲಿ ಇಟ್ಟಿದ್ದೆ. 1978 ರಲ್ಲಿ ಆ ಊರು ಬಿಟ್ಟು ಬಂದೆ. ಈಗ ಆ ದೊಡ್ಡ ಫೋಟೋದ ಗತಿ ಏನಾಯಿತು ಗೊತ್ತಿಲ್ಲ. ಆ ನೆಗಟಿವ್ ಮಾತ್ರ ಇನ್ನೂ ನನ್ನ ಹತ್ತಿರ ಇದೆ. ರಾಯಲ್ ಗ್ರಾಂಟ್ ಅಂತ ಒಂದು ’ಪದವಿ’ ಸಿಗುವದು ಅಷ್ಟು ಸುಲಭವಲ್ಲ. ಆ ಫೋಟೋದ ಒಂದು ಪ್ರತಿಯನ್ನು ’ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್’ ಲಂಡನ್ ಅಂತ ಹೆಮ್ಮೆಯಿಂದ ಕಳಿಸಿದ್ದು ಏನಾಯಿತೋ ಗೊತ್ತಿಲ್ಲ. ಆದರೆ ಈ ವರ್ಷದ ವರೆಗೆ ಕಾಯ್ದಿದ್ದ ನನಗೆ ಆ ಫೋಟೋ ಕ್ಲಿಕ್ಕಿಸಿದ ದಿನವನ್ನು ನೆನೆದು ಮೈ ಪುಳಕಿತವಾಗುತ್ತಿದೆ!  ನನ್ನ ಅತ್ಯಂತ ಅದೃಷ್ಟದ ಫೋಟೋ ಅದು ಅಂತ ನೀವೂ ಒಪ್ಪ ಬಹುದೆಂದು ಊಹಿಸುತ್ತೇನೆ! ಅದಕ್ಕೆ ನನ್ನ ಕಾಪಿರೈಟಿದೆ, ಎಚ್ಚರಿಕೆ!

ಶ್ರೀವತ್ಸ ದೇಸಾಯಿ
ಡೋಂಕಾಸ್ಟರ್, ಯಾರ್ಕ್ ಶೈರ್, ಯು ಕೆ.
  (ಫೋಟೋಗಳೆಲ್ಲ ಲೇಖಕರು ಕ್ಲಿಕ್ಕಿಸಿದ್ದು. Copyright reserved.)
  (ಇದೇ ವಾರದ ಕನ್ನಡ ಪ್ರಭ ಎನ್ ಆರ್ ಐ ಆವೃತ್ತಿಯಲ್ಲಿ ಪ್ರಕಟವಾದ ನನ್ನ ಲೇಖನದ  ಪರಿಷ್ಕೃತ ರೂಪ) 

**********************************************************

ನಿದ್ದೆಯೇ ಜೀವನದ ಹೆಗ್ಗುರಿ!

ಪ್ರಿಯ ಓದುಗರೆ
ಅನಿವಾಸಿಯ ಕಟ್ಟೆಯಲ್ಲಿ ಮತ್ತೊಮ್ಮೆ ಹರಟೆಯನ್ನು ಹೊಡೆಯುವ ಪ್ರಯತ್ನವನ್ನು ಮಾಡಿರುವೆ . ಕಟ್ಟೆ ಹಳೆಯದಾದರೇನು
ಹರಟೆಯ ವಿಷಯ ಮಾತ್ರ ಹೊಸದು . ರುಚಿಯಾದ ಊಟ , ಮಲಗಲು ಒಂದು ಹಾಸಿಗೆ , ಸವಿಯಾದ ನಿದ್ದೆ ಇದ್ದರೆ ಸ್ವರ್ಗಕ್ಕೆ
ಕಿಚ್ಚು ಹಚ್ಚೆಂದ - ಎಂದು ಸರ್ವಜ್ಞನು ಹೇಳಿರಬಹುದಾಗಿತ್ತೇನೋ ? ಇವು ಮೂರು ಯಾರಿಗೆ ಇಷ್ಟವಿಲ್ಲ? ಅದರಲ್ಲೂ
ಸವಿಯಾದ ನಿದ್ದೆಯಲ್ಲಿ ಸವಿಗನಸು ಕಾಣುವ ಮಜಾನೆ ಬೇರೆ . ನಿದ್ದೆಯ ಕುರಿತು ನನ್ನ ಪ್ರಾಥಮಿಕ ಶಾಲೆಯಿಂದ ಇಲ್ಲಿಯವರೆಗಿನ
ಅನುಭವಗಳು ವಿಶಿಷ್ಟವಾಗಿದ್ದು , ಆ ಘಟನೆಗಳ ನೆನಪುಗಳನ್ನು ಆಗಾಗ್ಗೆ ಮೆಲಕಿಸಿಕೊಂಡು , ನನ್ನಷ್ಟಕ್ಕೆ ನಾನೇ ಎಷ್ಟೋ ಸಲ
ನಕ್ಕಿದ್ದುಂಟು . ಆ ಮೆಲಕುಗಳನ್ನು ಹರಟೆಯ ರೂಪದಲ್ಲಿ ನಿಮ್ಮ ಮುಂದೆ ಇಡಲು ಪ್ರಯತ್ನಿಸಿರುವೆ .ಬನ್ನಿ ಸಾಧ್ಯವಾದರೆ ಓದಿ ,
ಹಾಗೆಯೇ ನಿಮ್ಮ ಅನಿಸಿಕೆಯನ್ನು ಗೀಚಲು ಮರೆಯದಿರಿ . ---- ಇಂತಿ ನಿಮ್ಮ ಸಂಪಾದಕ

“ಹೊಟ್ಟೆ ತುಂಬ ಊಟ ಮಾಡು , ಕಣ್ಣು ತುಂಬಾ ನಿದ್ದೆ ಮಾಡು ಆಯುಷ್ಯ ಘಟ್ಟಿಯಾಗುತ್ತೆ “ಎಂದು ವೈದ್ಯರು ಮತ್ತು ಹಿರಿಯರು
ಉಪದೇಶ ಮಾಡುವದು ಹೊಸದೇನು ಅಲ್ಲ . ಸರಿಯಾದ ಊಟ ಮತ್ತು ನಿದ್ದೆ ಉತ್ತಮ ಆರೋಗ್ಯಕ್ಕೆ ಮೂಲ ಮಂತ್ರ .ಆದರೆ
ಅವರವರ ಭಾವಕ್ಕೆ — ಅವರವರ ಮನಸಿಗೆ ತಕ್ಕಂತೆ , ಇದಕ್ಕೆ ತಮ್ಮದೇ ಆದ ಅರ್ಥವನ್ನು ಹುಡಿಕಿಕೊಂಡವರಿಗೆ ಏನೂ
ಕೊರತೆಯಿಲ್ಲ . ಕೆಲವರು ಬದುಕುವದಕ್ಕಾಗಿ ತಿನ್ನುವವರಿದ್ದರೆ ಇನ್ನು ಕೆಲವರು ತಿನ್ನುವದಕ್ಕಾಗಿಯೇ ಬದುಕುವದುಂಟು .
ಪರ್ಯಾಯವಾಗಿ ಕೆಲವರು ಬದಕುವದಕ್ಕಾಗಿ ನಿದ್ದೆ ಮಾಡಿದರೆ ಇನ್ನೂ ಕೆಲವರು ನಿದ್ದೆ ಮಾಡುವದಕ್ಕೆಂದೇ ಬದುಕುವದುಂಟು .
ಊಟ ಮಾಡುವ ಪರಿಯಲ್ಲಿ ಎಷ್ಟೊಂದು ವೈವಿಧ್ಯತೆ ಇದೆಯೋ ಹಾಗೆಯೇ ನಿದ್ದೆ ಮಾಡುವ ರೀತಿಯಲ್ಲೂ ವಿಭಿನ್ನ ವಿವಿಧತೆ ಉಂಟು .
ಮಲಗಿ ನಿದ್ದೆ ಮಾಡುವದು ಸಹಜವಾದರೂ , ಕೆಲವರು ಕುಳಿತಲ್ಲಿಯೇ ನಿದ್ದೆ ಮಾಡಿ ಖುಷಿ ಪಡುವದುಂಟು . ಇಷ್ಟೇ ಸಾಲದೆಂದು
ಇನ್ನು ಕೆಲವರು ನಿಂತು ನಿದ್ದೆ ಮಾಡಿದರೆ , ಕೆಲವರಂತೂ ಅಡ್ಡಾಡಿಕೊಂಡೇ ನಿದ್ದೆ ಮಾಡಿ ತಾವು ಎಲ್ಲರಿಗಿಂತಲೂ ವಿಭಿನ್ನವೆಂದು ತೋರಿಸುವದುಂಟು . ಒಟ್ಟಿನಲ್ಲಿ ನಾದಮಯಾ — ಅಲ್ಲಲ್ಲ ಕ್ಷಮಿಸಿ , ನಿದ್ದೆಮಯಾ —– ಈ ಲೋಕವೆಲ್ಲಾ .
ಅಚ್ಚು ಕಟ್ಟಾದ ಹಾಸಿಗೆಯ ಮೇಲೆ ತಮಗೆ ಅನುಕೂಲವಾದ ಭಂಗಿಯಲ್ಲಿ ಎಂದರೆ – ಅಡ್ಡಬಿದ್ದು , ಡಬ್ಬು ಬಿದ್ದು , ಚಿತ್ತ ಬಿದ್ದು
ಮಲಗುವವರು ಸಹಜವಾಗಿ ಸಿಗುತ್ತಾರೆ . ‘ಅಚ್ಚು ಕಟ್ಟಾದ ಹಾಸಿಗೆ’ ಯ ಪದವನ್ನು ಅವರವರ ಭಾವನೆಯಂತೆ
ಅರ್ಥೈಯ್ಯಿಸಬಹುದು . ಬಡವರಿಗೆ ನೆಲದ ಮೇಲಿನ ಚಾಪೆಯೇ ಅಚ್ಚು ಕಟ್ಟಾದರೆ , ಬಲ್ಲಿದರಿಗೆ ಅಲಂಕೃತ ಮಂಚ ಅಚ್ಚು
ಕಟ್ಟಾಗಬಹುದು . ದುರದೃಷ್ಟವಶಾತ್ ಕೆಲವು ಬಲ್ಲಿದರಿಗೆ ಮಂಚ ಇದ್ದರೂ ಬೊಜ್ಜಿನ ಬಾಧೆಯಿಂದಲೋ , ಸೊಂಟದ
ನೋವಿನಿಂದಲೋ ಚಾಪೆಯೇ ಗತಿಯಾಗುವದು ಬೇರೆ ವಿಷಯ ಬಿಡಿ . “ಹಲ್ಲಿದ್ದರೆ ಕಡಲೆ ಇಲ್ಲ , ಕಡಲೆಯಿದ್ದರೆ ಹಲ್ಲಿಲ್ಲ”
ಎಂಬುವದು ನಿಜ ತಾನೇ ?
ಕೆಲವರು ನಿಶ್ಚಿಂತೆಯಿಂದ ಶಾಂತವಾಗಿ ಮಲಗಿದರೆ ಇನ್ನೂ ಕೆಲವರು ಘೋರವಾದ ಗೊರಕೆಯನ್ನು ಹೊಡೆದು ಅಕ್ಕ ಪಕ್ಕದವರ ,
ಅಷ್ಟೇ ಏಕೆ ಮನೆ ಮಂದಿಯ ನಿದ್ದೆಯನ್ನೆಲ್ಲಾ ಹಾಳು ಮಾಡಿ ಸುಖ ಪಡುವದೂ ಉಂಟು . ಪತಿರಾಯನ ಗೊರಕೆಯ ಕಾಟವನ್ನು
ತಾಳದೆ , ಗೊರಕೆಯನ್ನು ತಡೆಯುವ ಎಲ್ಲ ಉಪಾಯಗಳು ವಿಫಲವಾದಾಗ , ‘ ಸಾಕಪ್ಪಾ ಈ ಮಹಾರಾಯಣ ಸಹವಾಸವೆಂದು
‘ವಿವಾಹ ವಿಚ್ಛೇದನೆಗೆ ಮೊರೆ ಹೋದ ಹೆಂಗಳೆಯರಿಗೇನೂ ಕಡಿಮೆಯಿಲ್ಲ .

ಮಲಗಿ ನಿದ್ದೆ ಮಾಡುವವರದು ಈ ಕಥೆಯಾದರೆ ಇನ್ನು ಕುಳಿತು ನಿದ್ದೆ ಮಾಡುವವರ ವಿಷಯವೇ ಬೇರೆ ಬಿಡಿ . ನಾನು ನಮ್ಮ ಹಳ್ಳಿಯ ಪ್ರಾಥಮಿಕ ಶಾಲೆಯ ಮೂರನೆಯ ಕ್ಲಾಸಿನಲ್ಲಿ ಓದುವಾಗ ‘ಮೂಲಿಮನಿ ‘ ಮಾಸ್ತರರು ಅಂತ ಇದ್ದರು (ಈಗಲೂ ಇದ್ದಾರೆ ). ಅಂಕಿ ಮಗ್ಗಿಯನ್ನೇನೋ ಚನ್ನಾಗಿ ಹೇಳಿಕೊಡುತ್ತಿದ್ದರು ಎನ್ನಿ ! ಆದರೆ , ಅಷ್ಟೇ ಚನ್ನಾಗಿ ತರಗತಿಯಲ್ಲಿ ನಿದ್ದೆಯನ್ನೂ ಹೊಡೆಯುತ್ತಿದ್ದರು ಎಂಬುವದು ವಿಶೇಷ ವಿಷಯ . ಅರ್ಧ ಘಂಟೆಯವರೆಗೂಒಂದರಿಂದ ಇಪ್ಪತ್ತರವರೆಗಿನ ಮಗ್ಗಿಗಳನ್ನು ನಮ್ಮೆಲ್ಲರ ಬಾಯಿಯಿಂದ ಸರತಿಯ ಮೇಲೆ ಒದರಿಸಿ , ಕೊನೆಯ ಹುಡುಗ ಇಪ್ಪತ್ತಇಪ್ಪತ್ತಲೇ ನಾಕನೂರೋ —- ಅಂತ ಮುಗಿಸುವದರೊಳಗೆನೇ ನಿದ್ದೆ ಹೋಗಿ ಬಿಡುತ್ತಿದ್ದರು . ಹಳ್ಳಿಯ ಶಾಲೆಗಳಲ್ಲಿ ಮಕ್ಕಳು ಮಗ್ಗಿಯನ್ನು ಹೇಳುವ ಪರಿ ರಾಗ ಹಚ್ಚಿ ಹಾಡು ಹೇಳಿದಂತೆ ಇರುತಿತ್ತು ( ಈಗ ಹೇಗಿದೆ ಎಂದು ಗೊತ್ತಿಲ್ಲ) . ಅದರ ಇಂಪಿಗೆನೇ ಇವರಿಗೆ ನಿದ್ದೆ ಬರುತಿತ್ತೇನೋ ? ಎಂಬುದು ನನ್ನ ಈಗಿನ ಒಂದು ಅನುಮಾನಿತ ಶಂಕೆ . ಮೂಲಿಮನಿ ಮಾಸ್ತರರು ಕುರ್ಚಿಯ ಮೇಲೆ ಕಾಲು ಮುದುರಿಸಿಕೊಂಡು ಕುಳಿತು ನಿದ್ದೆ ಹೊಡೆಯಲು ಪ್ರಾರಂಭಿಸಿದರೆ ಲಂಗು ಲಗಾಮು ಇಲ್ಲದ ನಮಗೆಲ್ಲಾ ಖುಷಿಯೋ ಖುಷಿ . ನಮ್ಮೆಲ್ಲರ ಗುದ್ದಾಟ , ಕಿರುಚಾಟ , ಪರಚಾಟ , ಜಗಳಾಟ ಮತ್ತು ಅಳಲಾಟ ಕುರುಕ್ಷೇತ್ರದ ಯುದ್ಧಕ್ಕಿಂತಲೂ ಭಯಂಕರವಾಗಿರುತಿತ್ತು . ಆದರೂ ಇದರ ಕಿಂಚಿತ್ತೂ ಪರಿವೆ ಇಲ್ಲದೆ ಮಾಸ್ತರರ ನಿದ್ದೆ ಮುಂದುವರೆಯುತ್ತಿತ್ತು .ಕುಂಭಕರ್ಣನನ್ನು ಎಬ್ಬಿಸಲು ಅವನ ಪ್ರಜೆಗಳೆಷ್ಟು ಹರಸಾಹಸ ಮಾಡುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯವೇ , ಆದರೆ ನಾವೆಲ್ಲಾ ಅವರೆಲ್ಲರಿಗಿಂತ ಬಹಳೇ ಮೇಲು ಇದ್ದಿದ್ದೀವಿ ಎನ್ನಿ . ನಮ್ಮ ನಿರಂತರ ಗಲಾಟೆಯಿಂದ ಒಂದರ್ಧ ಘಂಟೆಯಲ್ಲಿ ಮಾಸ್ತರರನ್ನು ಎಬ್ಬಿಸುವಲ್ಲಿ ಸಫಲವಾಗುತಿದ್ದೆವು ಎಂಬುದು ಹೆಮ್ಮೆಯ ವಿಷಯ . ನಿದ್ದೆಯಿಂದ ಎದ್ದ ಮಾಸ್ತರರು ಟೇಬಲ್ ಮೇಲೆ ಇರುತ್ತಿದ್ದ ಬಡಿಗೆಯನ್ನೊಮ್ಮೆ ಕುಟ್ಟಿ ಮತ್ತೆ ಮಗ್ಗಿಯ ಸರದಿಗೆ ಹೋಗುತ್ತಿದ್ದರು. ಕಳೆದ ಸಲ ನಮ್ಮೂರಿಗೆ ಹೋದಾಗ ಮಾಸ್ತರರನ್ನು ಮಾತಾಡಿಸಿಕೊಂಡು ಬರೋಣವೆಂದು ಅವರ ಮನೆಗೆ ಹೋಗಿದ್ದೆ . ಕುಶಲೋಪಹಾರಿ ಮಾತುಗಳೆಲ್ಲ ಮುಗಿದ ಮೇಲೆ ಅವರೆಂದರು. ” ಯಾಕೋ ಶಂಕ್ರಪ್ಪ , ನಿದ್ದೀನ ಬರವಲ್ಲದು ಯಾವುದಾದ್ರೂ ಗುಳಿಗಿಯಿದ್ದರ ಬರದಕೊಡ್ ” ಎಂದು .
ಅದಕ್ಕೆ ತಕ್ಷಣವೇ ನಾನಂದೆ ” ಗುರುಗೋಳ್ ಸಾಲ್ಯಾಗ ಇದ್ದಾಗ್ನ ನಿಮ್ಮ ಜನ್ಮ ಪೂರ್ತಿಯ ನಿದ್ದಿ ಮಾಡಿ ಮುಗಿಸಿ ಬಿಟ್ಟಿರಿ ಈಗ ಹ್ಯಾಂಗ್ ನಿದ್ದಿ ಬರಬೇಕು ?” ಎಂದು . ‘ ನಿನ್ನ ಕುಚೇಷ್ಟೆಯನ್ನು ಇನ್ನೂ ಬಿಟ್ಟಿಲ್ಲವೆಂದು’ ಬೈದುಕೊಂಡು ಹೋಗಿಬಿಟ್ಟರು .

ಇನ್ನು ಪ್ರಾಥಮಿಕ ಸಾಲಿ ಮುಗಿಸಿ ಮಾಧ್ಯಮಿಕ ಸಾಲಿಗೆ ಅಂತ ಬೈಲಹೊಂಗಲಕ್ಕೆ ಬಂದಾಗ ‘ಉಳ್ಳಾಗಡ್ಡಿ ‘ಅಂತ ಇಂಗ್ಲಿಷ್
ಮಾಸ್ತರರು ಸಿಕ್ಕಿದ್ದರು . ಅವರು ಕ್ಲಾಸಿನಲ್ಲಿ ನಿದ್ದೆ ಮಾಡುತ್ತಿರಲಿಲ್ಲ ಬದಲು ಸ್ಟಾಫ್ ರೂಮಿನಲ್ಲಿ ಕುಳಿತು ಗಡದ್ದಾಗಿ ನಿದ್ದೆ
ಹೊಡೆಯುತ್ತಿದ್ದರು . ಸುಮಾರು ಸಲ ಅವರಿಗೆ ಕ್ಲಾಸ್ ಇದ್ದದ್ದೇ ಗೊತ್ತಿರುತ್ತಿರಲಿಲ್ಲ . ನಾವೇ ಹೋಗಿ ಸೂಕ್ಷ್ಮ ಪ್ರಯತ್ನ ಮಾಡಿ
ಎಬ್ಬಿಸಿಕೊಂಡು ಬರುತ್ತಿದ್ದೆವು . ಕಣ್ಣು ತಿಕ್ಕುತ್ತಾ ಬಂದರೂ , ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡಿ ಮಸ್ತ ಕ್ಲಾಸ್
ತೆಗೆದುಕೊಳ್ಳುತ್ತಿದ್ದರು . ಪಾಠ ಮುಗಿದ ಮೇಲೆ ನಮ್ಮನ್ನು ಕುರಿತು “ನಿಮಗೆಲ್ಲಾ ವಿದ್ಯೆಯೇ ಜೀವನದ ಹೆಗ್ಗುರಿಯಾಗಬೇಕು ” ಎಂದು
ಜೋರಾಗಿ ಹೇಳುತ್ತಿದ್ದರೆ , ಕಡೆಯ ಬೆಂಚಿನಲ್ಲಿ ಕುಳಿತ ಕಿಡಗೇಡಿಗಳು. ” ಸಾರ್ , ನಿದ್ದೆಯೇ ಜೀವನದ ಹೆಗ್ಗುರಿಯಾಗಬೇಕೆಂದು ” ಇನ್ನಷ್ಟು ಜೋರಾಗಿ ಕೂಗುತ್ತಿದ್ದರು .
ಇದೇನು ಬರೀ ಗುರುಗಳ ಬಗ್ಗೆ ಇಷ್ಟೊಂದು ಬರೆಯುತ್ತಿದ್ದೀನಿ ಅಂತ ಬೇಜಾರು ಮಾಡಿಕೊಳ್ಳಬೇಡಿ . ಶಿಷ್ಯರೂ ಯಾವುದರಲ್ಲು
ಕಡಿಮೆ ಇಲ್ಲ . ‘ ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ‘ ಅಂತ ದಾಸರು ಹೇಳಿಲ್ಲವೆ ? , ‘ಶಿಷ್ಯನು ಗುರುವನ್ನು
ಮೀರಿಸಬೇಕೆಂದು’ ಎಷ್ಟೋ ಕಥೆಗಳಲ್ಲಿ ಸಾರಿಲ್ಲವೆ ? ಇದನ್ನು ಕಾಯಾ , ವಾಚಾ , ಮನಸಾ ಅಂತ ಪೂರೈಸುವ ಶಿಷ್ಯರ
ಗುಂಪೂ ಬಹಳ ದೊಡ್ಡದುಂಟು .ಎಲ್ಲ ಕಾಲೇಜುಗಳ ಕೊಠಡಿಯ ಕೊನೆಯ ಬೆಂಚಿನಲ್ಲಿ ಈ ಗುಂಪು ಸಹಜವಾಗಿ ಸಿಗುವದುಂಟು .
ನಾನೂ ಒಬ್ಬ ಆ ಗುಂಪಿನ ಸದಸ್ಯನೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ( ನಿಜವಾಗಿಯೂ ?). ಕರ್ನಾಟಕ ಕಾಲೇಜಿನಲ್ಲಿ ಪಿ
ಯು ಸಿ ಓದುತ್ತಿರುವಾಗಿನ ಸಂದರ್ಭ . ಲಿಬರಲ್ ಹಾಸ್ಟೆಲಿನಲ್ಲಿದ್ದ ನಾವು ಎಂಟು ಜನ ಹುಡುಗರು ಬೆಳಿಗ್ಗೆ ಒಂಭತ್ತೂವರೆಗೆ ,
ಮೆಸ್ಸಿನಲ್ಲಿ ಹೊಟ್ಟೆತುಂಬ ತಿಂದು ಹತ್ತು ಘಂಟೆಗೆ ಕಾಲೇಜಿಗೆ ಹೋಗುತ್ತಿದ್ದೆವು . ಮೊದಲನೆಯದು ಇಂಗ್ಲಿಷ್ ಕ್ಲಾಸು . ಪ್ರೊಫೆಸರ್
ಮುಳಗುಂದ ಅವರು ‘ಚಾರ್ಲ್ಸ್ ಡಿಕ್ಷನ್ನ ‘ನ ‘ Great expectations’ ಕಾದಂಬರಿಯನ್ನು ಭಾವಪೂರ್ವಕವಾಗಿ ಚಿತ್ರಿಸುತ್ತಿದ್ದರೆ ,ಕೊನೆಯ ಬೆಂಚಿನಲ್ಲಿ ಕುಳಿತ ನಾವು ನಿದ್ರಾಲೋಕದಲ್ಲಿ ಮುಳುಗಿ ನಮ್ಮದೇ ಆದ ಹಗಲು ಕನಸು ಕಾಣುತ್ತಿದ್ದೆವು . ಕೊನೆಗೊಂದು
ದಿನ ಪ್ರೊಫೆಸ್ಸರ್ ನಮ್ಮನ್ನೆಲ್ಲ ತಮ್ಮ ಕಚೇರಿಗೆ ಕರೆದು ” ನೀವು ನಿದ್ದೆ ಮಾಡದೆ ನನ್ನ ಪಾಠವನ್ನು ಕೇಳುತ್ತೀರಿ ಎಂಬುದೇ ನನ್ನ
great expectations ಎಂದು ಛಿ ಮಾರಿ ಹಾಕಿ ಕಳುಹಿಸಿದ್ದರು .
‘ ತಿಂದ ತಕ್ಷಣವೇ ನಿದ್ದೆ ‘ ಎಂದಾಗ ನನ್ನ ಸ್ನಾತಕೋತರ ಪದವಿಯ ಗೆಳೆಯನೊಬ್ಬನದು ನೆನಪಾಯಿತು ನೋಡಿ . ನಾವು
ತರಬೇತಿಯಲ್ಲಿ ಇದ್ದಾಗ ಮಧ್ಯಾಹ್ನದಲ್ಲಿ ಊಟಕ್ಕೆಂದು ಅಬ್ಬಬ್ಬಾ ಎಂದರೆ ಅರ್ಧ ಘಂಟೆ ಸಮಯವಿರುತ್ತಿತ್ತು , ಸುಮಾರು ಐದು
ನಿಮಿಷಿನಲ್ಲಿ ಗಬಗಬನೆ ತಿಂದು , ಮಿಕ್ಕಿದ ಇಪ್ಪತ್ತು ನಿಮಿಷ ಅವನು ಎಲ್ಲೋ ಮಾಯವಾಗಿ ಬಿಡುತ್ತಿದ್ದ . ಕುತೂಹಲಕ್ಕೆಂದು
ಅವನನ್ನು ಹಿಂಬಾಲಿಸಿದಾಗ ಗೊತ್ತಾಗಿತ್ತು – ಅವನು ಪಕ್ಕದ ಕೋಣೆಯೊಂದರಲ್ಲಿ ಕುಳಿತು ಸಣ್ಣ ನಿದ್ದೆ ಮಾಡಿ ಬರುತ್ತಿದ್ದ .
ಇವರೇನೂ ಅಪರೂಪವಲ್ಲ ಬಿಡಿ , ಎಲ್ಲೆಲ್ಲೋ ಕಾಣಿಸುವವರೆ . ಇದನ್ನೇ ಇಂಗ್ಲೀಷಿನಲ್ಲಿ ಸ್ಟೈಲಿಶ್ ಆಗಿ ‘ ನ್ಯಾಪ್ ‘ ಅಂತ ಕರೆಯುವದುಂಟು ತಾನೆ ? ಪಾಪ ! ಹೊಟ್ಟೆಯ ತಪ್ಪೋ ಅಥವಾ ನಿದ್ಧೆಯ ತಪ್ಪೋ ಒಂದೂ ಗೊತ್ತಿಲ್ಲ .

ಇನ್ನು , ನಿಂತು ನಿದ್ದೆ ಮಾಡುವವರನ್ನು ನೀವು ಕಂಡಿರದೆ ಇರಬಹುದು . ಇಂಥವರು ಭರ್ಜರಿಯಾಗಿ ತುಂಬಿದ ಬಸ್ಸುಗಳಲ್ಲಿ
ಸಹಜವಾಗಿ ಸಿಗುವದುಂಟು . ನಮ್ಮೂರಿನಿಂದ ಪಟ್ಟಣಕ್ಕೆ ಸಂತೆಯ ದಿನದಂದು ಹೋಗುವ ಬಸ್ಸು ಯಾವಾಗಲೂ ಕಿಕ್ಕಿರಿದು ತುಂಬಿರುತ್ತಿತ್ತು . ನಮ್ಮ ಕಟುಕರ ಕಮಾಲಸಾಬನು ಖಾಯಮ್ ಪ್ರಯಾಣಿಕನಾಗಿದ್ದರೂ , ಧಡೂತಿ ಶರೀರವಿರುವದರಿಂದ ಬೇಗನೆ ಬಸ್ಸಿನಲ್ಲಿ ನುಗ್ಗಲಾರದೆ ಯಾವಾಗಲೂ ಕುಳಿತುಕೊಳ್ಳಲು ಸೀಟು ಸಿಗಲಾರದೆ ಒದ್ದಾಡುತ್ತಿದ್ದನು . ಪಾಪ !! ರಾತ್ರಿಯಲ್ಲ ಏನು
ಮಾಡಿರುತ್ತಿದ್ದನೋ ಕಾಣೆ , ಆದರೆ ಬಸ್ಸಿನಲ್ಲಿ ಏರಿದ ಮೇಲೆ ಮಾತ್ರ ನಿಂತುಕೊಂಡೆ ನಿದ್ದೆ ಹೊಡೆಯಲು ಪ್ರಾರಂಭಿಸುತ್ತಿದ್ದನು.
ತೂಗಾಡಿಕೆಯಲ್ಲಿ ಅವನ ಶರೀರದ ಮುಕ್ಕಾಲು ಭಾರ ಸೀಟಿನಲ್ಲಿ ಕುಳಿತವರ ಮೇಲೆ ಬೀಳುತ್ತಿತ್ತು . ಇವನ ಕಾಟವನ್ನು
ತಾಳಲಾರದೆ , ಬೈಯ್ಯಲೂ ಮನಸಿರಲಾರದೆ , ಕುಳಿತವರೆ ಎದ್ದು ಇವನಿಗೆ ತಮ್ಮ ಸೀಟು ಕೊಟ್ಟು ಕೃತಾರ್ಥರಾಗುತ್ತಿದ್ದರು .
ಅಂತು ಇಂತು ಕೊನೆಗೂ ಸೀಟು ಗಿಟ್ಟಿಸುತ್ತಿದ್ದ ಎನ್ನಿ .

ಇವರದೆಲ್ಲಾ ಒಂದು ಪಂಗಡವಾದರೆ ಇನ್ನೊಂದನ್ನು ವಿಭಿನ್ನ ಪಂಗಡವೆಂದೇ ಪರಿಗಣಿಸಬಹುದು , ಅದುವೇ ನಡೆದಾಡಿಕೊಂಡು
ನಿದ್ದೆ ಮಾಡುವವರ ಅಥವಾ ನಿದ್ದೆಯಲ್ಲಿ ನಡೆದಾಡುವವರ ಪಂಗಡ . ಈ ಪಂಗಡದ ಸದಸ್ಯರನ್ನು ಸ್ವತಃ ನೋಡಿರುವವರಕ್ಕಿಂತಲೂ ಅವರ ಬಗ್ಗೆ ಓದಿದವರೆ ಹೆಚ್ಚು ಇರಬಹುದು ಎಂಬುವದು ನನ್ನ ಅನಿಸಿಕೆ .
ನಾನು ಕೆಎಂಸಿ ಯಲ್ಲಿ ಕಲಿಯುತ್ತಿದ್ದಾಗ , ನನ್ನ ಖಾಸಾ ದೋಸ್ತ ‘ಮಂಜು’ ಹುಬ್ಬಳ್ಳಿಯ ಬಿ ವ್ಹಿ ಬಿ ಕಾಲೇಜಿನಲ್ಲಿ ಇಂಜಿನಿಯರಿಂಗ್
ಓದುತ್ತಿದ್ದ . ಅವನು ನಿದ್ದೆಯಲ್ಲಿ ಅಡ್ಡಾಡುತ್ತಿದ್ದಾನೆ ಎಂದು ಹೆದರಿಕೊಂಡು ಅವನ ರೂಮ್ಮೇಟ್ ಕೊಠಡಿಯನ್ನು ಬದಲಿಸಿದ್ದು ತಿಳಿದು ನನಗೆ ಬೇಜಾರವು ಹಾಗೆಯೇ ಕುತೂಹಲವೂ ಆಗಿತ್ತು . ಅದೊಂದು ದಿನ ನೋಡಿಯೇ ಬಿಡೋಣವೆಂದು ನಿರ್ಧರಿಸಿ ,
ಧೈರ್ಯತುಂಬಿಕೊಂಡು ಅವನ ಕೊಠಡಿಯಲ್ಲಿ ಮಲಗಲು ಹೋಗಿದ್ದೆ . ವಿಷಯ ನನ್ನ ಬೇರೆ ದೋಸ್ತಗಳಿಗೆ ಗೊತ್ತಾಗಿ ” ಲೇ ಸುಮ್ಮ್ನ
ವಾಪಸ್ ಹೋಗಿ ಬಿಡು , ಇಲ್ಲಂದ್ರ ನಡು ರಾತ್ರ್ಯಾಗ ಓಡಿ ಹೋಗತಿ ನೋಡ್ ಮಗನ ” ಅಂತ ಬೆದರಿಕೆಯ ಮಾತುಗಳನ್ನು
ಆಡಿದ್ದರು . ಆದರೂ ಅವರ ಮಾತುಗಳಿಗೆ ಬೆಲೆ ಕೊಡದೆ ಅವನ ಕೊಠಡಿಯಲ್ಲಿ ಮಲಗುವ ಸಾಹಸವನ್ನು ಮಾಡಿ ಬಿಟ್ಟಿದ್ದೆ . ಗಾಢ ನಿದ್ದೆಯಲ್ಲಿದ್ದ ಮಂಜು , ನಡು ರಾತ್ರಿಯಲ್ಲಿ ಕೋಣೆಯ ಬಾಗಿಲು ತೆಗೆದು ಹೊರಗೆ ಹೊರಟೇ ಬಿಟ್ಟಿದ್ದ . ಭಯವಾದರೂ ಕುತೂಹಲದಿಂದ ಅವನನ್ನೆ ಹಿಂಬಾಲಿಸಿದ್ದೆ . ನಿದ್ದೆಯಲ್ಲಿ ನಡೆಯುತ್ತ ನಡೆಯುತ್ತಾ ಅವನು ಎದುರುಗಡೆಯಿದ್ದ ಸ್ಮಶಾನದ ಜಾಗವನ್ನು ಪ್ರವೇಶಿಸಿದಾಗ ನನಗೆ ಧೈರ್ಯಸಾಲದೆ ವಾಪಸು ಓಡಿ ಬಂದಿದ್ದೆ . ಮನುಷ್ಯನ ಮೆದಳು ನಿದ್ದೆಯಲ್ಲಿಯೂ
ಇಷ್ಟೊಂದು ಅಚ್ಚು ಕಟ್ಟಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದು ನನಗೆ ಇನ್ನೂ ಒಗಟಾಗಿರುವ ವಿಷಯ . ಮಂಜುನಾಥನ
ಆಶೀರ್ವಾದದಿಂದ ಮಂಜು ಈಗ ನಿದ್ದೆಯಲ್ಲಿ ನಡೆಯುವದನ್ನು ಬಿಟ್ಟಿದ್ದಾನೆಂದು ಅವನ ಶ್ರೀಮತಿಯವರಿಂದ ತಿಳಿದು
ಸಂತೋಸವಾಯಿತು ಎನ್ನಿ .

ಈ ನಿದ್ದೆಯ ಪುರಾಣ ಇಷ್ಟಕ್ಕೆ ಮುಗಿಯುವದಿಲ್ಲ ಬಿಡಿ . ‘ ಅತಿ ‘ ಎಂಬುವದಕ್ಕೆ ‘ ಮಿತಿ ‘ ಅಂತ ವಿರುದ್ಧ ಪದವಿರುವದು ನಿಜ .
ಹಾಗೆಯೆ ಅತಿಯಾಗಿ ನಿದ್ದೆಮಾಡುವವರು ಒಂದೆಡೆ ಇದ್ದರೆ , ಇನ್ನು ನಿದ್ದೆ ಬರದೆ ಒದ್ದಾಡುವವರು ಇನ್ನೊಂದೆಡೆ ಇರಲೇಬೇಕಲ್ಲವೆ ? ನಿದ್ದೆ ಬಾರದೆ ಪರಿತಪಿಸುವ ಬಹು ಜನರು ಮನಬಂದಂತೆ ಪರಿಶೋಧನೆ ನಡೆಸಿ , ತಮಗೆ ತಕ್ಕ ಹವ್ಯಾಸಗಳನ್ನು
ಬೆಳೆಸಿಕೊಳ್ಳುವದು ಸಹಜ . ಹವ್ಯಾಸ ಒಳ್ಳೆಯದೊ ಕೆಟ್ಟದ್ದೊ ಬೇರೆ ವಿಷಯ ಬಿಡಿ .
ಅಂತೂ ‘ ಮನಸಿದ್ದರೆ ಮಾರ್ಗ ‘ಎಂದು ಅಂಬುವದರಲ್ಲಿ ಅವರಿಗೆ ನಂಬಿಕೆ ಇರುವದು ಶ್ಲಾಘನೀಯ . ನಿದ್ದೆ ಬರಲೆಂದು
ಸೋಮಾರಿಗಳು ಕೂಡ ತಾಸು ಗಂಟಲೇ ‘ ವಾಕಿಂಗ್ ‘ ಮಾಡುವದಕ್ಕೆ ಮತ್ತು ಪುಸ್ತಕಗಳ ಮುಖವನ್ನೇ ನೋಡದವರು
ಮೂಟೆಗಂಟಲೇ ಪುಸ್ತಕಗಳನ್ನು ಖರೀದಿಸಿ ಓದಲು ಪ್ರಾರಂಭಿಸುವದಕ್ಕೆ ಈ ನಿದ್ದೆರಾಯನೇ ಕಾರಣ ಎಂಬುದೊಂದು ನೆಮ್ಮದಿಯ
ಸಂಗತಿ . ಅದಕ್ಕಾದರೂ ಅವನಿಗೊಂದು ಧನ್ಯವಾದವನ್ನು ಹೇಳಲೇ ಬೇಕಲ್ಲವೆ ?
ಒಟ್ಟಿನಲ್ಲಿ ನನ್ನ ಮಾಧ್ಯಮಿಕ ಶಾಲೆಯ ಕಿಡಿಗೇಡಿ ಗೆಳೆಯರು ಹೇಳಿದಂತೆ , ಒಂದಿಲ್ಲ ಒಂದು ರೀತಿಯಲ್ಲಿ ಬಹು ಜನರಿಗೆ ‘ನಿದ್ದೆಯೇ ಜೀವನದ ಹೆಗ್ಗುರಿ ‘ ಯಾಗಿರುವದು ಮಾತ್ರ ನಿಜ ಸಂಗತಿ . ನೀವೇನು ಅನ್ನುತ್ತೀರಿ ?
ಹರಟೆಯ ನೆಪದಲ್ಲಿ ನನ್ನಿಂದ ಇಷ್ಟೊಂದು ಕೊರೆಯಿಸಿಕೊಂಡ ಮೇಲೆ , ತಾಳ್ಮೆಯಿಂದ ಓದಿದವರಿಗೆಲ್ಲ ಕಣ್ಣು ತುಂಬಾ ನಿದ್ದೆ ಬರುತ್ತದೆ ಎಂದು ಬಲವಾಗಿ ನಂಬಿರುವೆ.

—– ಶಿವಶಂಕರ ಮೇಟಿ