‘ಕವನಗಳು ‘ ಹೊಸ ಪರಿಚಯ-ಡಾ. ಗುರುಪ್ರಸಾದ್ ಪಟ್ವಾಲ್

ಪರಿಚಯ: ಡಾ.ಗುರುಪ್ರಸಾದ್ ಅವರು ತಮ್ಮ ಪರಿಚಯವನ್ನು ನಮ್ಮೊಂದಿಗೆ ಮಾಡಿಕೊಂಡಿದ್ದಾರೆ. 

ನಾನು, ಡಾ. ಗುರುಪ್ರಸಾದ್ ಪಟ್ವಾಲ್, ಮೂಲತಃ  ಕರಾವಳಿಯ ಬೈಂದೂರಿನವನು. ಕಡಲ ತೀರದ ತಂಗಾಳಿ, ಮನೆಯ ತಂಪಿನ ಅಂಗಳಕೆ ಸೂರ್ಯಾಸ್ತದ  ಕೆಂಪು ರಂಗೋಲಿ,  ಅಡುಗೆ ಮನೆಯಿಂದ ದಿನಾಲು ಮೀನೂಟದ ಸವಿ ಗಾಳಿ. ಅದನ್ನೆಲ್ಲ ಬಿಟ್ಟು, ಈ ಇಂಗ್ಲೆಂಡ್ ಎಂಬ ಶೀತ  ದ್ವೀಪಕ್ಕೆ ಏಕೆ ಬಂದ ಎಂದು ನಿಮಗೆ ಈಗ ಬಂದ ಆಲೋಚನೆ  ನನಗೆ ದಿನಾಲು ಸುಪ್ರಭಾತ. ಬಂದು ಹದಿನೈದು ವರ್ಷ ಕಳೆದು, ವೈದ್ಯ ವೃತ್ತಿಯಲ್ಲಿ ತೊಡಗಿಸಿ ಕೊಂಡರೂ, ಕನ್ನಡ ಮಾಧ್ಯಮದ ಶಾಲೆಯಲ್ಲಿ ಓದಿದ ಕಾಲದಲ್ಲಿ ಮೈಗೂಡಿದ  ಓದುವ ಹಾಗೂ ಬರೆಯುವ ಅಭ್ಯಾಸ, ಹವ್ಯಾಸಕ್ಕಾಗಿ ವೇಷ ಕಟ್ಟಿ ಯಕ್ಷಗಾನದಲ್ಲಿ ಕುಣಿಯುತ್ತಿದ್ದ ಆ ಬಣ್ಣದ ಗೀಳು, ಇಲ್ಲಿ ಸಿಕ್ಕ ಸ್ನೇಹಿತರ ಪ್ರೋತ್ಸಾಹದಿಂದ ಪುನಃ ಚೇತರಿಸಿ ಕೊಂಡಿದೆ. ನಿಮ್ಮ ರಚನಾತ್ಮಕ ಹಿನ್ನುಣಿಕೆಗೆ ನಾನು ಚಿರ ಋಣಿ.

 

 

Mother 2018.08.29 (2)

1)ಅಮ್ಮ

ನಿರಾಕಾರ ದೇವರ ಆಕಾರ ನೀನು

ನಿರಾಧಾರ ಮನಸಿನ ಆಧಾರ ನೀನು

ನಿಸ್ವಾರ್ಥ ಜೀವನ ಮಾತೆಲ್ಲಾ ಜೇನು

ನೀನೇ ನನ್ನಮ್ಮ ನೀ ನನ್ನ ಹಾಲು ಜೇನು

ಮಗುವ ಮೊಗದ ಮುಗುಳು ನಗೆಯ

ಮುಗಿಲ ಮೊದಲ ಮಳೆಯ ಹನಿಯ

ಮುದವ ಕೊಡುವ ಮನದಿ ನೆಲೆವ

ಸಿಹಿಯ ಸವಿಯ ಕೊಡುವ ಮಕರಂದ

ಅಮ್ಮಾ ಅನ್ನೋ ಪದದ ಅಂದ

ಅಮ್ಮಾ ನಿನ್ನ ನಗೆಯ ಚಂದ

 

gudur3

2)ನೀನೇನಾ

ನೀನೇನಾ ಕದ್ದು ನನ್ನ ನೋಡಿ ನಕ್ಕವಳು

ನೀನೇನಾ ಬಳುಕುತ ಬಲೆಯ ಬೀಸಿದವಳು

ನೀನೇನಾ ಅಧರದ ಮಧುರವ ಕೊಟ್ಟವಳು

ನೀನೇನಾ ಅಳಿಸದ ಚಿತ್ತಾರ ಹೃದಯದಿ ಬರೆದವಳು

ನೀನೇನಾ… ಅಂದು ಮರೆತು ತಿರುಗದೆ ನಡೆದವಳು..

3)ಏನು ಹೇಳಲಿ

ನಾ ಬರೆದೆ ನಿನ್ನ ಹೆಸರಲಿ

ನನ್ನ ಹೃದಯದ ಮಿಡಿತವ

ನಾ ಏನು ಹೇಳಲಿ ಈ ಬಡಿತಕೆ

ನೀ ಬರದಿರೂ ನಿನ್ನ ಹೆಸರಲಿ

ಮಿಡಿಯುವ ಹುಚ್ಚು ಹೃದಯಕೆ

 

 

4) ಕಳ್ಳಿ

ನಾ ಹತ್ತಿರ ಬಂದರೆ ನಾಚುತ ಓಡಿದೆ

ರಟ್ಟೆಯ ಹಿಡಿದರೆ ಹುಸಿನಗು ಬೀರಿದೆ

ಮುತ್ತನು ಕೊಡದಿದ್ದರೂ ಕೆಂದುಟಿ ಕಂಪಿದೆ

ಮುಸ್ಸಂಜೆಯ ಮುಗುಳ್ನಗೆ ಮುನ್ನೂರು ನುಡಿದಿದೆ

5) ನಿನ್ನ ಕೈಸೆರೆ

ಬಯಸದೆ ಸನಿಹದಿ ಸುಳಿದಿಹ  ನೈದಿಲೆ

ಕನಸಲಿ ಸೊಗಸಲಿ ನುಡಿದಿಹ  ಕೋಗಿಲೆ

ಅರಿಯದ ಮನದಲಿ ಅರಳಿದ ತಾವರೆ

ತಿಳಿಯದೆ ಮುದದಲಿ ಆದೆನಾ ಕೈಸೆರೆ

                                                          -ಡಾ. ಗುರುಪ್ರಸಾದ್ ಪಟ್ವಾಲ್

 

(ಚಿತ್ರಕೃಪೆ : ಲಕ್ಷ್ಮಿನಾರಾಯಣ್ ಗುಡೂರ್)

 

‘ತೋಟಗಾರಿಕೆ ಮತ್ತು ಟ್ಯೂಲಿಪ್ ಚರಿತ್ರೆ’ – ರಾಮಮೂರ್ತಿ(ಬೆಸಿಂಗ್ ಸ್ಟೋಕ್) ಅವರ ಬರಹ

ಪೀಠಿಕೆ: ಮನೆಗೊಂದು ಕೈತೋಟವಿದ್ದು ಬಗೆ ಬಗೆಯ ಸುಂದರ ಹೂಗಳನ್ನು ಬೆಳೆಸಿ ಪ್ರತಿ ಮುಂಜಾನೆ, ಸಂಜೆಯಲ್ಲಿ ಅವುಗಳ ಅಂದವನ್ನು ಕಣ್ ತುಂಬಿಕೊಂಡು, ಮನಸಿಗೆ ಮುದ ನೀಡುವ ಸುಮಗಳನ್ನು ಮನೆಗೆ ಬಂದ ಅತಿಥಿಗಳಿಗೆ ತೋರಿಸಿ ಹೆಮ್ಮೆ ಪಡುವ ಒಂದು ಅನುಭವ ವಿಶೇಷವಾದದ್ದು. ಬರಿ ಪುಷ್ಪಗಳಲ್ಲದೆ ಕೆಲವು ಕಾಯಿಪಲ್ಲೆ (ತರಕಾರಿ)ಗಳನ್ನೂ ಬೆಳೆದು ಅದರಲ್ಲೇ ಅಡುಗೆ ಮಾಡಿ ಸವಿಯುವ ರುಚಿ ಹೊರಗೆ ಅಂಗಡಿಗಳಿಂದ ತಂದು ಮಾಡಿದ ಅಡುಗೆಯಲ್ಲಿ ಸಿಗುವುದಿಲ್ಲ. ಇನ್ನೂ ಕೆಲವರು ಮಕ್ಕಳನ್ನು ಬೆಳೆಸಿದ ಹಾಗೆ ಹೂಗಳನ್ನು ಬಹಳ ಮುತುವರ್ಜಿಯಿಂದ ಬೆಳೆಸುವುದನ್ನು ನೋಡಿದ್ದೇವೆ.ಅದು ಪ್ರಕೃತಿ-ಮನುಷ್ಯರೊಡನೆ ಇರುವ ಅವಿನಾಭಾವ ಸಂಬಂಧದ ಸಂಕೇತ.
ಬೆಸಿಂಗ್ ಸ್ಟೋಕ್ ನಿವಾಸಿಯಾದ ರಾಮಮೂರ್ತಿ ಮತ್ತು ಅವರ ಪತ್ನಿ ಸೀತಾ ಅವರ ತೋಟಗಾರಿಕೆಯ ಅನುಭವವನ್ನು ಒಂದು ಬರಹದಿಂದ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ ಟುಲಿಪ್ ಪುಷ್ಪದ ಚರಿತ್ರೆಯನ್ನು ತಿಳಿಸಿದ್ದಾರೆ. ನೀವೂ ಓದಿ, ನಿಮಗೂ ಕೈತೋಟ ಮಾಡುವ ಆಸೆ ಇದ್ದರೆ ಇಂದೇ ಆಗಲಿ.

 

ramamurthy7

ನಮ್ಮ ಸ್ನೇಹಿತರಿಗೆ ತಿಳಿದಹಾಗೆ ನನ್ನ ಪತ್ನಿ ಸೀತೆ ಯ ಅತ್ಯಂತ ಪ್ರೀತಿಯ ಹವ್ಯಾಸ ತೊಟಗಾರಿಕೆ. ಇಲ್ಲಿ ಅನೇಕ ತರಕಾರಿ ಮತ್ತು ಹೂವುಗಳ ವ್ಯವಸಾಯದಲ್ಲಿ ದಿನಕ್ಕೆ ಹಲವಾರು ಗಂಟೆ ನಮ್ಮ ತೋಟದಲ್ಲಿ ಕಾಲ ಕಳೆಯುವುದು ಅವಳ ವಾಡಿಕೆ. ಆಗಾಗ್ಗೆ green house ನಲ್ಲಿ ಗಿಡಗಳನ್ನು “ಮಾತನಾಡಿಸಿವುದನ್ನ” ನಾನು ಕಂಡಿದ್ದೇನೆ ಅಲ್ಲದೆ ನಾವು ಎರಡು ಮೂರು ದಿನ ಮನೆಯಲ್ಲಿ ಇಲ್ಲದೆ ಇದ್ದಾಗ ” ಅಯ್ಯೋ ಪಾಪ ಗಿಡಗಳಿಗೆ ನೀರು ಇಲ್ಲ” ಅಂತ ಸಂಕಟ ಪಡುವಳು . ಗಾರ್ಡನ್ ಸೆಂಟರ್ ಗೆ ಹೋದಾಗ ಮಕ್ಕಳು ಆಟದ ಸಾಮಾನುಗಳ ಅಂಗಡಿಗೆ ಹೋದಹಾಗೆ ಇರುವ ಎಲ್ಲಾ ಗಿಡಗಳನ್ನು ಖರೀದಿ ಮಾಡುವ ಅಸೆ. ಬೇಸಿಗೆಯಲ್ಲಿ ನಾವು ಬೆಳಯುವ ತರಕಾರಿಗಳು , ಕೊತ್ತಂಬರಿ ಸೊಪ್ಪು, ನವಿಲು ಕೋಸು, ಬದನೆಕಾಯಿ ಕುಂಬಳಕಾಯಿ ಇತ್ಯಾದಿ ಇಂದ ನಾವು self sufficient ಅಂತ ಹೇಳಬಹುದು.
ನನ್ನ ಕೆಲಸ ಏನು ಅಂತ ಕೇಳಿದಿರಾ ? ಮಾಲಿ ಅನ್ನುವ ಪದ ಕೇಳಿದ್ದೀರಾ ? ನೀವು ನಗರದಲ್ಲಿ ಬೆಳದಿದ್ದರೆ ನಿಮಗೆ ಈ ಪದ ಗೊತ್ತಿರುವುದಿಲ್ಲ. ಮಾಲಿ ಕೆಲಸ ಅಗೆಯುವುದು, ನೀರು ಹಾಕುವುದು lawn cut ಮಾಡುವುದು ಇತ್ಯಾದಿ labour intensive ಕೆಲಸಗಳು. ಇದು ನನ್ನ ಕೆಲಸ, Management ಕೆಲಸ ಅಲ್ಲ. ಕೆಲವರು ಹೇಳಿದರು ಇಷ್ಟೆಲ್ಲಾ ದುಡ್ಡು ಖರ್ಚು ಮಾಡಿ ತರಕಾರಿ ಬೆಳೆಯುವುದಕ್ಕಿಂತ ಕೊಂಡು ಬರುವುದು ಚೀಪರ್, ಆದರೆ ಅವರಿಗೇನು ಗೊತ್ತು ಇದರ ಮಜಾ.

ramamurthy1
ಸೀತಾ ರಮಮೂರ್ತಿಯವರ ತೋಟಗಾರಿಕೆಯ ’ಫಲ’ ಈ ತರಕಾರಿ ಮತ್ತು ಹೂವುಗಳು

ramamurthy5

 

 

ramamurthy8

ನಮಗೆ ಬಹಳ ವರ್ಷದಿಂದ ಹಾಲೆಂಡ್ ನಲ್ಲಿ ನಡೆಯುವ ಟ್ಯೂಲಿಪ್ ಹಬ್ಬಕೆ ಹೋಗುವ ಅಸೆ ಇತ್ತು ಅದು ಈ ವರ್ಷ ಸಾಧ್ಯವಾಯಿತು. ಕುಕಿಂಹಾಫ್ (Keukenhof ) ಆಮ್ ಸ್ಟರ್ ಡ್ಯಾಮ್ ನಿಂದ ೫೦ ಕಿಮ್ ದೂರದಲ್ಲಿ ಇರುವ ಊರು ಲಿಸ್ಸ್ (Lisse ). ಈ ತೋಟದ ಅರ್ಥ Kitchen ಗಾರ್ಡನ್. ಕಾರಣ ಇದರ ಹತ್ತಿರುವ ದೊಡ್ಡ ಕೋಟೆಮನೆ (castle) ಗೆ ಬೇಕಾದ್ದ ಮೂಲಿಕೆಗಳು (herbs ) ಈ ತೋಟದಿಂದ ಬರುತಿತ್ತು . ೧೯೪೯ ರಲ್ಲಿ ಆ ಊರಿನ ಪುರಸಭಾಧ್ಯಕ್ಷ (ಮೇಯರ್) ತೋಟವನ್ನು ಶುರುಮಾಡಿ ಹೂವಿನ ಮಾರಾಟ ಆರಂಭ ವಾಯಿತು ನಂತರ ಬೇರೆ ದೇಶಗಳಿಗೆ ರಫ್ತು ಮಾಡಿ ಈ ದೇಶ ಪ್ರಪಂಚದಲ್ಲಿ ಆಗ್ರ ಸ್ಥಾನವನ್ನು ಪಡೆಯಿತು.
ಆದರೆ ಈ ಟ್ಯೂಲಿಪ್ ( Tulipa, botanical name ) ಹೂವು ಹಾಲೆಂಡ್ ದೇಶಕ್ಕೆ ಸೇರಿದ್ದಲ್ಲ. ಇದರ ಮೂಲ ಈಗಿನ ಟರ್ಕಿ, ಹಿಂದಿನ ಆಟೋಮನ್ ರಾಷ್ಟ್ರ ಟ್ಯೂಲಿಪ್ ಹೆಸರು ಪರ್ಷಿಯನ್ ಭಾಷೆಯ ಪೇಟ (ರುಮಾಲು ) ದಿಂದ ಬಂದಿದೆ ಅಂತ ಕೆಲವರ ಅಭಿಪ್ರಾಯ. ಹದಿನಾರನೇ ಶತಮಾನದಲ್ಲಿ ಇದರ ಗಡ್ಡೆಯನ್ನು ತಂದು ಹಾಲಂಡ್ ನಲ್ಲಿ ಬೆಳಸಿದರು ನಂತರ ೧೫೯೨ ರಲ್ಲಿ ಇದರ ಬಗ್ಗೆ ಒಂದು ಪುಸ್ತಕ ಪ್ರಕಟವಾದಾಗ ಈ ಹೂವು ಪ್ರಚಾರಕ್ಕೆ ಬಂತು. ಹದಿನೇಳನೆ ಶತಮಾನದಲ್ಲಿ ಟ್ಯೂಲಿಪ್ ಉನ್ಮಾದ ( Tulip mania) ಶುರುವಾಗಿ ಇದು ಚಲಾವಣೆಯ ನಾಣ್ಯವೂ ಆಗಿ ಈ ದೇಶದಲ್ಲಿ ಹಣಕಾಸಿನ ಪರಿಸ್ಥಿತಿ ಕೆಟ್ಟು ಒಂದು ಕ್ರಾಂತಿಯೇ ಆರಂಭವಾಯಿತು. ಇದಕ್ಕೆ ಕಾರಣ ಈ ಗಡ್ಡೆ ಗಳನ್ನು ಕೊಳ್ಳುವರು ಜಾಸ್ತಿ ಆಗಿ ಇದರ ಬೆಲೆಯೂ ಹೆಚ್ಚಾಯಿತು ೧೬೨೪ನಲ್ಲಿ ಕೆಂಪು ಮತ್ತು ಬಿಳಿ ಹೂವಿನ ಕೆಲವು ಗಡ್ಡೆಗಳ ಬೆಲೆ ೧೨೦೦ ಫ್ಲ್ಯಾರಿನ್ , ಇದು ಒಂದು ಗಡ್ಡೆಯ ಬೆಲೆ !! ಆಗ ವರ್ಷದ ವರಮಾನ ಒಬ್ಬನಿಗೆ ೧೫೦ ಫ್ಲ್ಯಾರಿನ್ ಮಾತ್ರ. ೧೬೩೭ ನಲ್ಲಿ ಸಿಕ್ಕಿದ ದಾಖಲೆ ಪ್ರಕಾರ ಒಂದು ಗಡ್ಡೆ ಮೌಲ್ಯಕ್ಕೆ ಒಂದು ಮನೆಯನ್ನೆ ಖರೀದಿ ಮಾಡಬಹುದಾಗಿತ್ತು ಈ ಪರಿಸ್ಥಿತಿಯಿಂದ ಕೊನೆಗೆ ಆರ್ಥಿಕ ಕುಸಿತವೂ ಆಯಿತು (Market crash ).
ಮೊಘಲ್ ಸಾಮ್ರಾಜ್ಯ ವನ್ನು ಸ್ಥಾಪಿಸಿದ ಬಾಬರ್ ಈ ಹೂವನ್ನು ಭಾರತಕ್ಕೆ ತಂದ ಅಂತ ದಾಖಲೆ ಇದೆ.

 ಕುಕಿಂಹಾಫ್ ತೋಟದಲ್ಲಿ ಸುಮಾರು ೭ ಮಿಲಿಯಾನ್ ಗಡ್ಡೆ ಗಳನ್ನ ಆಕ್ಟೋಬರ್/ನವಂಬರ್ ತಿಂಗಳಲ್ಲಿ ನೆಲದಲ್ಲಿ ಹೂಳಿದರೆ  ಮಾರ್ಚ್ ತಿಂಗಳಿಗೆ ಹೂವು ಬಿಡುವುದಕ್ಕೆ ಶುರುವಾಗಿ ಮೇ ನಲ್ಲಿ ಚೆನ್ನಾಗಿ ಅರಳುತ್ತೆ, ಈ ತೋಟವನ್ನು ನೋಡುವ  ಸಮಯ ಏಪ್ರಿಲ್ ಕೊನೆ ಅಥವಾ ಮೇ ತಿಂಗಳ ಮೊದಲನೇ ವಾರ.  ಟ್ಯೂಲಿಪ್ ತೋಟ ಸುಮಾರು ೮೦ ಎಕ್ಕರೆ ವಿಸ್ತರಣ.  ಮಾರ್ಚ್ ನಿಂದ ಮೇ ತಿಂಗಳು ಇಲ್ಲಿ ಅರಳಿರುವ  ಟ್ಯೂಲಿಪ್ ನೋಡುವುದಕ್ಕೆ ಕೋಟ್ಯಂತರ ಜನಗಳು ಬರುತ್ತಾರೆ. ಈ ತೋಟದಲ್ಲಿ ಸುಮಾರು ೭೫ ವಿವಿಧ ಟ್ಯೂಲಿಪ್ ಗಳನ್ನು ಬೆಳಸುತ್ತಾರೆ

ನಿಮಗೆ ತೋಟಗಾರಿಕೆಯಲ್ಲಿ ಆಸಕ್ತಿ ಇದ್ದರೆ ಈ ವರ್ಷ ಅಕ್ಟೊಬರ್ ಅಥವಾ ನವೆಂಬರ್ ತಿಂಗಳಲ್ಲಿ ಗಡ್ಡೆಗಳನ್ನು  ತಂದು ನೆಡಿ ಮುಂದಿನ ವರ್ಷ ಮಾರ್ಚ್ ನಲ್ಲಿ ಸೊಗಸಾದ ಹೂವುಗಳನ್ನು ನೋಡಿ ಆನಂದ ಪಡಬಹುದು.

 

ಲೇಖನ:  ಬೇಸಿಂಗ್ ಸ್ಟೋಕ್  ರಾಮಮೂರ್ತಿ 

 

    ಚಿತ್ರಕೃಪೆ: ರಾಮಮೂರ್ತಿ(attributed) , ಗೂಗಲ್