ಸಂಬೋಧನೆ
ಹೇಗೆ ಕ್ಷಮಿಸಲಿ ತಂಗಿ
ನನ್ನನ್ನು ಅಂಕಲ್ ಎಂದು ಕರೆದರೆ?
ನೆನ್ನೆ ನಮ್ಮೂರ ‘ಮಾರ್ಕೆಟ್ ಹಾಲ್’ನಲ್ಲಿ
ತರ ತರದ ಸ್ಟಾಲ್ ಗಳು
ಕರಿ-ಬಿಳಿ-ಕಂದು ಬಣ್ಣದ ಮಾರಾಟಗಾರರು
ಗ್ರಾಹಕರೂ ಅಷ್ಟೇ ವರ್ಣರಂಜಿತರು!
ನನ್ನನ್ನು ಕೂಗಿ ಕರೆದು ಮಾಡಿದ ವ್ಯಾಪಾರದಲ್ಲೂ
ಕಂಡಿತ್ತು ಅವರವರ ವೈಶಿಷ್ಟ್ಯಯ
‘Come on love’ ಎಂದಳು ಬಿಳಿಯಳು
‘Two for a quid, darling!’ ಎಂದಳು ಕರಿಯಳು
‘Bananas, a pound uncle!’ ಎಂದಳು ನಮ್ಮವಳು
ಚುರುಕಾದ ಏಷ್ಯನ್ ಹುಡುಗಿ
ಎದೆಯಲ್ಲಿ’ಚುರುಕ್’ ಎಂದಿತು ಅವಳ ಸಂಬೋಧನೆ
ಮನೆಗೆ ಬಂದು ಕನ್ನಡಿ ಮುಂದೆ ನೋಡಿಕೊಂಡೆ
ಹಣೆಯಿಂದ ನೆತ್ತಿಯವರೆಗೆ ಬಟಾ ಬೈಲು
ಅದರೂ ಮಿಂಚುತ್ತಿತ್ತು
ಕಿರಿದರೆ ಬಾಯಲ್ಲಿ ಅಷ್ಟೂ ಹಲ್ಲು!
ಮೊಗದಲ್ಲಿ ಒಂದೂ ಸುಕ್ಕಿಲ್ಲ
ಅಂದಮೇಲೆ, ಪ್ರೀತಿಯೇ ತೋರಿಸಬೇಕಾದರೆ ಅವಳು
ಕೊನೆಗೆ ‘ಅಣ್ಣ’ ಅಂದಿದ್ದರೂ ಸಾಕಿತ್ತು
ಆದರೆ, ಹೇಗೆ ಕ್ಷಮಿಸಲಿ ತಂಗಿ
ಅಂಕಲ್ ಎಂದು ಕರೆದರೆ?
