ನಮ್ಮ ಚೀನದ ಪ್ರವಾಸದ ಝಲಕ್ ಗಳು -ಶ್ರೀವತ್ಸ ದೇಸಾಯಿ ಬರೆದ ಪ್ರವಾಸ ಕಥನ

ಒಂದು ಪ್ರವಾಸದ ಬರವಣಿಗೆಯನ್ನು ಗಮನಿಸಿದಾಗ ಅಲ್ಲಿ ಎರಡು ಅಂಶಗಳು ಎದ್ದು ತೋರುತ್ತದೆ
೧. ಪ್ರವಾಸಿ
೨. ಪ್ರವಾಸಕ್ಕೆ ಯೋಗ್ಯವಾದ ಸ್ಥಳ

ಪ್ರವಾಸ ಕೈಗೊಳ್ಳುವ ಪ್ರವಾಸಿಗೆ ಇತರ ದೇಶಗಳನ್ನು ವೀಕ್ಷಿಸಿ ಅಲ್ಲಿನ ನೋಟ, ಸಂಸ್ಕೃತಿ, ಭಾಷೆ ಇವುಗಳನ್ನು ಅರಿಯುವ ಹಂಬಲವಿರಬೇಕು. ಪ್ರವಾಸಕ್ಕೆ ಬೇಕಾದ ಹಣ ಖರ್ಚು ಮಾಡುವ ಇಚ್ಛೆ ಇರಬೇಕು. ಹಾಗೆಯೇ ಪ್ರವಾಸ ತರುವ ಪ್ರಯಾಸ ಮತ್ತು ಅನಾನುಕೂಲಕ್ಕೇ ತಯಾರಾಗಿರಬೇಕು.
ಇನ್ನು ಪ್ರವಾಸ ಸ್ಥಳದ ಆಯ್ಕೆ ಒಬ್ಬ ವ್ಯಕ್ತಿಯ ಆಸಕ್ತಿ, ಆ ಸ್ಥಳದ ಇತಿಹಾಸ, ಸಂಸ್ಕೃತಿ, ನೈಸರ್ಗಿಕ ತಾಣಗಳು, ಅಲ್ಲಿ ಇರಬಹುದಾದ ಸೌಲಭ್ಯಗಳು, ಅಂತರ್ಜಾಲದಲ್ಲಿರುವ ಜಾಹಿರಾತು, ಹೋಗಿ ಬಂದವರಿಂದ ದೊರಕಿದ ಅಭಿಪ್ರಾಯ ಹೀಗೆ ಅನೇಕ ಅಂಕಿ ಅಂಶಗಳಿಂದ ನಿರ್ಧಾರಗೊಳ್ಳುತ್ತದೆ.

ಪ್ರವಾಸದಿಂದ ಒದಗಿ ಬಂದ ಅನುಭವವನ್ನು ಇತರರೊಡನೆ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಬಹುದು. ಇನ್ನು ಕೆಲವರು ಪತ್ರಿಕೆಗಳಲ್ಲಿ ಒಂದು ಪ್ರವಾಸಕಥನ ಬರೆಯಬಹುದು. ಇನ್ನು ಕೆಲವರು ತಮ್ಮ ಅನುಭವಗಳನ್ನು ಒಂದು ಪುಸ್ತಕ ರೂಪದಲ್ಲಿ ಪ್ರಕಟಿಸಬಹುದು. ಪ್ರವಾಸ ಕೈಗೊಂಡ ವ್ಯಕ್ತಿ ತನ್ನ ಪ್ರವಾಸದ ಅನುಭವವನ್ನು ಇತರರೊಡನೆ ಹಂಚಿಕೊಳ್ಳುವುದರ ಮೂಲಕ ಪ್ರವಾಸದ ಸವಿ ನೆನಪುಗಳನ್ನು ಮತ್ತೊಮ್ಮೆ ಅನುಭವಿಸುವ ಅವಕಾಶ ಒದಗಿಬರುತ್ತದೆ. ಈ ವಿಚಾರ ಪ್ರವಾಸ ಕಥೆ ಬರೆಯುದಕ್ಕೆ ಪ್ರೇರಣೆ ನೀಡಬಹುದು .

ಶ್ರೀವತ್ಸ ಅವರು ಕಳೆದ ಕೆಲವು ವಾರಗಳ ಹಿಂದೆ ತಮ್ಮ ಮಿತ್ರರೊಡನೆ ಚೈನಾ ಪ್ರವಾಸ ಕೈಗೊಂಡಿದ್ದು ಅದನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಮೇಲೆ ಪ್ರಸ್ತಾಪಿಸಿದ ವಿಚಾರಗಳನ್ನು ಈ ಪ್ರವಾಸ ಕಥನದಲ್ಲಿ ಕಾಣಬಹುದು. ತಮ್ಮ ಅನುಭವವನ್ನು ಸ್ವಾರಸ್ಯಕರವಾಗಿ ಹೇಳುವುದರ ಜತೆ ಅದಕ್ಕೆ ತಿಳಿಹಾಸ್ಯವನ್ನು ಲೇಪಿಸುವುದು ಅವರ ವಿಶೇಷ ಶೈಲಿ.

ಬಹಳ ಪುರಾತನ ಸಂಸ್ಕೃತಿಯನ್ನು ಒಳಗೊಂಡು ಹಿರಿದಾದ ಮತ್ತು ವೈವಿಧ್ಯಮಯವಾದ ಚೈನಾ ಪ್ರವಾಸವನ್ನು ಒಂದೇ ಬರಹದಲ್ಲಿ ಹೇಳಿ ಮುಗಿಸಲು ಸಾಧ್ಯವಿಲ್ಲ. ಈಗ ಪ್ರಕಟಪಡಿಸಿರುವುದು ಭಾಗ ಒಂದು, ಎರಡನೇ ಭಾಗವನ್ನು ಮುಂದಿನ ವಾರ ನಿರೀಕ್ಷಿಸಿ.

ಶಿವಪ್ರಸಾದ್ (ಸಂ )

***

 

ನಮ್ಮ ಚೀನದ ಪ್ರವಾಸ

ಇದೇ ವರ್ಷ ಮೇ ತಿಂಗಳಿನಲ್ಲಿ ಏಳು ಕನ್ನಡಿಗರು – ನಾನು ಮತ್ತು ನನ್ನ ಆರು ಮಿತ್ರರೂ ಸೇರಿ – ಚೀನ ದೇಶದಲ್ಲಿ 18 ದಿನಗಳ ಕಾಲ ಮಾಡಿದ ಪ್ರವಾಸದ ಕೆಲ ಅನಿಸಿಕೆ-ಅನುಭವಗಳನ್ನು ಹಂಚಿಕೊಳ್ಳುವೆ. ಇದು ಇಡೀ ಪ್ರವಾಸದ ವರ್ಣನೆಯಲ್ಲ ಅಂದ ಮೇಲೆ ನೀವು ಬಿಟ್ಟುಸಿರು ಬಿಡಬಹುದು.

ಯಾಕೆ ಚೀನ?

ಗ್ವಿಲ್ಲಿನ್ ಪಗೋಡಾ

ನಮ್ಮ ದೇಶದಂತೆ, ಚೀನ ದೇಶದ ನಾಗರೀಕತೆಯೂ ಹಳೆಯದಲ್ಲವೆ? ಪ್ರಾಚೀನ ನಾಗರಿಕತೆಯ ಆ ಜನತೆಯ ಸಂಸ್ಕೃತಿಯಲ್ಲೊಂದು ಕಸುವು ಇರಲೇ ಬೇಕಲ್ಲವೆ? ನಮ್ಮ ಆಯುರ್ವೇದದಂತೆ ಅವರ ಸಾಂಪ್ರದಾಯಕ ವೈದ್ಯಕೀಯಕ್ಕೂ ದೀರ್ಘ ಕಾಲದ ಇತಿಹಾಸವುಂಟು, ಇವೆಲ್ಲದರ ಹಿನ್ನೆಲೆಯಲ್ಲಿ ಆ ದೇಶವನ್ನು ನೋಡುವ ತವಕ. ಬಂದ ಅವಕಾಶವನ್ನು ಕೈಬಿಡಬಾರದೆಂದು ಅಂದುಕೊಂಡೆ. ಅದಲ್ಲದೆ ಇತ್ತೀಚಿನ ವರ್ಷಗಳಲ್ಲಿ ಎಲ್ಲ ರಂಗಗಳಲ್ಲಿ ಅವರ ಮುನ್ನಡೆ ಒಂದು ಆಕರ್ಷಣೆಯಾಗಿತ್ತು. ಜಗತ್ತಿನ ಆರ್ಥಿಕ ಸ್ಥಾನದಲ್ಲಿ ಅಮೇರಿಕೆಯನ್ನು ಬಿಟ್ಟರೆ ಅವರದು ಎರಡನೆಯಸ್ಥಾನವೆಂದು ಊಹೆ. ಆದರೆ 1962ರಲ್ಲಿ ನಾನು ಕಾಲೇಜಿನಲ್ಲಿದ್ದಾಗಲೇ ದಲಾಯಿ ಲಾಮಾ ಅವರ ಪಲಾಯನದ ನಂತರ ಚೀನ ಭಾರತದ ಮೇಲೆ ಆಕ್ರಮಣ ಮಾಡಿದ್ದು, ಲದಾಖ್ ಪ್ರದೇಶದಲ್ಲಿ ಸಾವಿರಾರು ಚದುರಮೈಲುಗಳನ್ನು ಅದು ಕಬಳಿಸಿದ್ದು -ಅದೂ ನೆಹರು-ಚೌ ಎನ್ ಲಾಯಿ ಯವರ ಮಾತುಕತೆ, ’ಹಿಂದಿ- ಚೀನಿ ಭಾಯಿ, ಭಾಯಿ’ ಕೂಗಿನ ಮಧ್ಯೆದಲ್ಲೇ!– ಇವೆಲ್ಲ ನನ್ನ ಸ್ಮೃತಿಪಟಲದಲ್ಲಿ ಇನ್ನೂ ಹಚ್ಚ ಹಸಿರಾಗಿಯೇ ಇದೆ. ಆ ಕಾರಣಕ್ಕಾಗಿ ಅಲ್ಲಿ ಹೋಗಲು ಸ್ವಲ್ಪ ಹಿಂದೇಟು, ಗಿಲ್ಟಿ ಮನೋಭಾವ. ಕೊನೆಗೂ ಮಿತ್ರರ ಒತ್ತಾಯ, ಸ್ನೇಹ, ಬೆಂಬಲ ಗೆದ್ದಿತು. ಹೋಗುವ ತಯಾರಿ ಆರೆಂಟು ತಿಂಗಳ ಮೊದರೇ ಶುರು.

ಚೀನದ ವೀಸಾ!

ಚೀನದ ದೊಡ್ಡ ಗೋಡೆ ನೋಡುವ ಮೊದಲೇ ಬೇರೆ ಗೋಡೆಗಳು ಇದುರಿಗೆ ಬಂದು ನಿಲ್ಲುತ್ತವೆ. ಅದರಲ್ಲಿ ವೀಸಾ ಒಂದು. ಆಹಾರದ ಸಮಸ್ಯೆ ಎರಡನೆಯದು.

ಚೀನದ ವೀಸಾ ಆಫೀಸಿನಲ್ಲಿಲೇಖಕ!

ಇತ್ತೀಚೆಗೆ ಹೋಗಿ ಬಂದವರೆಲ್ಲ ಬಹು ಸುಲಭದಲ್ಲಿ ವೀಸಾ ದೊರಕುತ್ತದೆ ಎಂಬ ಭರವಸೆಯಿತ್ತಿದ್ದರು. ನಮ್ಮ ದುರದೃಷ್ಟಕ್ಕೆ ನಿಯಮಗಳು ಅಕ್ಟೋಬರಿನಲ್ಲಿ ಬದಲಾಗಿ, ಅದು ದೊರಕಲು ನಮ್ಮ ಕೆಲ ಎಳೆಯ (ಅಂದರೆ 70ಕ್ಕಿಂತ ಕಡಿಮೆ ವಯಸ್ಸಿನ) ಪ್ರವಾಸಿ ಮಿತ್ರರಿಗೆ ಹೆಬ್ಬೆರಳಿನ ಗುರುತುಗಳೂ ಕೊಡಬೇಕಾಯಿತು! ನೀವು 14ಕ್ಕಿಂತ ಕಿರಿಯರು ಅಥವಾ 70 ದಾಟಿದ ಯುವಕರಾಗಿದ್ದರೆ ಅದು ಬೇಡವಂತೆ. ಹಿರಿಯರ ಬೆರಳುಗಳ ಗೆರೆಗಳು -ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ತೊಳೆದು- ಸವೆದು ಹೋಗಿರಬೇಕೇನೋ! ಕಂಪ್ಯೂಟರಿನಲ್ಲಿ ಇಡೀ ಪ್ರವಾಸದ ಮಾಹಿತಿ ತುಂಬಿಸ ಬೇಕು,ನಿಮ್ಮ ಫೋಟೋ ಅಪ್ ಲೋಡ್ ಮಾಡಬೇಕು. ಅದು ಸುಲಭದಲ್ಲಿ ಸ್ವೀಕರಿಸಲ್ಪಡುವದಿಲ್ಲ. ಕಣ್ಣುಗಳ ಮಧ್ಯೆ ಇಷ್ಟು ಜಾಗ, ತಲೆಯ ಮೇಲೆ ಇನ್ನಷ್ಟು, ಕೂದಲು ಹಣೆಯನ್ನು ಮುಚ್ಚಿದ್ದರೆ ಹೇರ್ಕಟ್ (ನನಗಲ್ಲ!), ಬಿಳಿ ಹಿನ್ನೆಲೆ; ಇತ್ಯಾದಿ, ಒಂದೇ ಎರಡೇ. ನನ್ನ ಸಲಹೆಯೆಂದರೆ ಪ್ರೊಫೆಷನಲ್ ಕಡೆಗೆ ಹೋಗಿ ಮಶಿನ್ ಫೋಟೋ ತೆಗೆಸುವದು ವಾಸಿ. ಚೈನೀಸ್ ಎಂಬಸಿಗೆ ಇಂಟರ್ವ್ಯೂಗೆ ಹೋಗಿ ಕೊನೆಗೂ ವೀಸಾ ಗಿಟ್ಟಿಸಿದೆವು. ಮೆಡಿಕಲ್ ಡಿಗ್ರಿ ಪರೀಕ್ಷೆ ಪಾಸಾದಷ್ಟು ಸಂತೋಷ! ಮಿತ್ರರೇ, ಈ ವಿವರಗಳನ್ನು ಲಕ್ಷ್ಯದಲ್ಲಿಡಿ. ಆ ದೇಶವೇನೋ ನೋಡುವಂಥದೇ, ಆದರೆ ಪ್ರವೇಶಕ್ಕೆ ಮೊದಲೇ ಈ ಕಿರಿ ಕಿರಿ. ಇನ್ನೊಂದು ತೊಂದರೆಯೆಂದರೆ ಆ ಸರಕಾರ ಗೂಗಲ್, ವಾಟ್ಸಪ್ ನಿಷೇಧಿಸಿರುವುದರಿಂದ ಅಲ್ಲಿ ಹೋದ ಮೇಲೆ ಇಂಟರ್ನೆಟ್ ಮಾಹಿತಿ ಹುಡುಕುವದು, ಊರಿಗೆ ಫೋಟೋ ಕಳಿಸುವದು ಬಲು ಕಷ್ಟಸಾಧ್ಯವಾದುದು. ಆ ದೇಶದವರ WeChat App ಡೌನ್ ಲೋಡ್ ಮಾಡಿಕೊಳ್ಳುವದು ಉತ್ತಮ. ಊರಲ್ಲುಳಿದ ನಿಮ್ಮ ಮಿತ್ರ ಸಂಬಂಧಿಕರೊಂದಿಗೆ ಅದರ ಮೂಲಕ ಸಂಪರ್ಕಿಸ ಬಹುದು.

ಆಹಾರ-ವಿಹಾರ

ವಿಹಾರಕ್ಕೆ ಮೊದಲು ಆಹಾರ. ನನ್ನ ಮಿತ್ರರು ಮತ್ತು ನನ್ನಂಥ ಪೂರ್ತಿ ಶಾಕಾಹಾರಿಗಳಿಗೆ ಚೀನಾದಲ್ಲಿ ಊಟದ ತೊಂದರೆಯಾಗುತ್ತದೆ ಎಂದು ಕೇಳಿದ್ದರಿಂದ ನಾವು ಭಾರತದ ಮೂಲದ ಒಂದು ಟ್ರಾವಲ್ ಏಜಂಟಿನ ಮುಖಾಂತರ ನಮ್ಮ ಟೂರ್ ಏರ್ಪಾಡಾಯಿತು. ಯಾಕಂದರೆ ಟೂರ್ ಮುಗಿಯುವವರೆಗೆ ಭಾರತೀಯ ಅಡಿಗೆಯವನು ನಮ್ಮೊಡನಿರುತ್ತಾನೆ, ಬೇಕಾದಾಗ ವೆಜಿಟೇರಿಯನ್ ಊಟ ಲಭ್ಯ.ನಮ್ಮ ಟೂರ್ ಮ್ಯಾನೇಜರನಿಗೆ ಇಂಗ್ಲಿಷ್ ಚೆನ್ನಾಗಿಯೇ ಬರುತ್ತಿತ್ತು. ಆದರೆ ಚೀನದ ಸರಕಾರದ ಕರಾರಿನ ಪ್ರಕಾರ ನಾವು ಅಲ್ಲಿಯ ಗೈಡನ್ನೇ ಉಪಯೋಗಿಸಬೇಕಂತೆ. ಈತ ಬಾಯಿ ಮುಚ್ಚಿಕೊಂಡಿರಬೇಕಂತೆ, ಏನೂ ಟೂರಿಸ್ಟ್ ಸಂಬಂಧಿ ವಿವರಣೆ ಕೊಡದೆ. ಅವರಿಗೆ ಇಂಗ್ಲಿಷ್ ಅಷ್ಟು ಚೆನ್ನಾಗಿ ಬರುತ್ತಿರಲಿಲ್ಲ. ಹಾಗೆ ನೋಡಿದರೆ ಆ ದೇಶದಲ್ಲಿ ಅನುವಾದಕರ ಸಹಾಯವಿಲ್ಲದಿದ್ದರೆ ಪ್ರವಾಸ ಕಷ್ಟವೇ. ನಾವು ಮೊದಲು ಕಾಲೂರಿದ ಊರು ಚೀನಾದ ಈಗಿನ ರಾಜಧಾನಿ ಬೇಜಿಂಗ್.

ಚೀನದ ಮಹಾ ಗೋಡೆ -Great Wall of China 

ಚೀನಕ್ಕೆ ಭೆಟ್ಟಿ ಕೊಟ್ಟವರೆಲ್ಲ Great Wall of China ನೋಡಲೇ ಬೇಕಲ್ಲವೆ? ನೋಡದಿದ್ದರೆ ಎಲ್ಲರೂ ಕೇಳುವದು: ”ನೀನು ನಿಜವಾದ ಗಂಡಸೇ? ಹೇಗಿತ್ತು ಆ

Great wall of China

ಗೋಡೆ?”, ಅಂತ. ಚೀನಾದ ಚೇರ್ಮನ್ ಮಾವೋ ಝಿಡಾಂಗ್ ಹೇಳಿದ್ದ; “He who has not climbed the Great Wall is not a true man.” ಇದು ನಮ್ಮ ಪೌರುಷತ್ವಕ್ಕೇ ಆದ ಚೆಲೆಂಜ್! ನಮ್ಮ 17 ಜನರ ಗುಂಪಿನಲ್ಲಿ ಎಂಟು ಹೆಂಗಸರು ಇದ್ದ ಮಾತು ಬೇರೆ! ಯುನೆಸ್ಕೋ ಅವರ Heritage List ನಲ್ಲಿ ಅಗ್ರಸ್ಥಾನದಲ್ಲಿರುವ ಇದನ್ನು ನೋಡಿ ಬೆರಗಾಗುವಂಥದೇ ಈ ಭಿತ್ತಿ. 2,000 ವರ್ಷಗಳ ಹಿಂದೆಯೇ ಅಂದರೆ ಕ್ರಿ. ಪೂ. ಮೂರನೆಯ ಶತಮಾನದಲ್ಲಿ, ಚಿನ್ (Qin) ವಂಶಜರ ಕಾಲದಲ್ಲಿ ಇದನ್ನು ಕಟ್ಟಲಾರಂಭಿಸಿದರು. ಚೀನದ 15 ಪ್ರಾಂತಗಳಲ್ಲಿ ಚಾಚಿದ 21.000ಕಿ.ಮೀ (Wikipedia Retrieved 19-7-2019) ಗೋಡೆಯನ್ನು ನೋಡಿದರೆ ಅಗಾಧವೆನಿಸುತ್ತದೆ ಅಂತ ಪ್ರತಿವರ್ಷ ಬರುವ ಒಂದು ಕೋಟಿ ಪ್ರವಾಸಿಗರೆಲ್ಲ ಒಪ್ಪಿಕೊಂಡರೆ ಉತ್ಪ್ರೇಕ್ಷೆಯಲ್ಲ. ಚಳಿಗಾಲದಲ್ಲಿ ಈ ಪ್ರದೇಶದ ಉಷ್ಣತಾಮಾನ -20 ಸೆ ಕ್ಕೆಇಳಿದಿರುತ್ತದೆ. ಗಿರಿ ಶಿಖರ, ಕಣಿವೆಗಳನ್ನು ದಾಟಿ ಹಾವಿನಂತೆ ಚೀನದ ಪಶ್ಚಿಮದ ಸಿಲ್ಕ್ ರೋಡ್ ನಿಂದ ಪೂರ್ವಾಭಿಮುಖವಾಗಿ ಕಡಲಿನವರೆಗೆ ಬಳುಕುವ ಈ ಗೋಡೆಗಳ ಮಧ್ಯೆ ಮಧ್ಯೆ ಬುರುಜುಗಳು, ಕಾವಲು ಗೋಪುರಗಳು, ಒಂದು ಕಡೆ ಕಂದಕಗಳೂ ಇದ್ದವು. ಬೇಜಿಂಗಿನ ಸಮೀಪದ ನಾವು ಹತ್ತಿದ ಭಾಗದಲ್ಲಿ ಗೋಡೆಯ ಅಗಲ 15ರಿಂದ 20 ಫೂಟು ಇತ್ತು. ಒಂದು ಕಾಲದಲ್ಲಿ ಆರು ಜನ ಅಶ್ವಾರೂಢ ಕಾವಲುಗಾರರು ಒಟ್ಟಿಗೆ ಹೋಗುವಷ್ಟು ಅಗಲ. ಈಗಲೋ ಟೂರಿಸ್ಟ ಗಳ ಸತತ ಆರೋಹಣ-ಅವರೋಹಣ, ಒಂದೊಂದು ಕಡೆ ಗೋಡೆಗುಂಟ ನೂಕು ನುಗ್ಗಲು! ಮೇಲಿನಿಂದ ನೋಡಿದರೆ ಅದನ್ನು ಆಗಿನ ಕಾಲದಲ್ಲಿ ಅವರು ಕಟ್ಟಿಲು ಪಟ್ಟ ಪರಿಶ್ರಮದ ಕಲ್ಪನೆ ಬರುತ್ತದೆ. ನಮಗೆ ಹತ್ತುವಾಗ ಇದ್ದ ಉತ್ಸಾಹದಲ್ಲಿ ದಣಿವಾಗಲಿಲ್ಲ. ಇಳಿಯುವಾಗಲೇ ಮೆಟ್ಟಲುಗಳ ಎತ್ತರ ಹೆಚ್ಚು ಕಡಿಮೆಯಿರುವದರ ಅರಿವಾದದ್ದು. ಮೊಣಕಾಲುಗಳು ಚೀನೀ ಭಾಷೆಯಲ್ಲಿ ಕುಞ್ ಕುಞ್ ಮಾಡಲಾರಂಭಿಸಿದ್ದವು. ಗೋಡೆಯನ್ನು ಕಟ್ಟುವಾಗ ನಾಲ್ಕು ಲಕ್ಷ ಜನ ತೀರಿಕೊಂಡದ್ದು ನಿಜವಿರಬಹುದು. ಅವರಲ್ಲಿ ಅದೆಷ್ಟೋ ಜನರನ್ನು ಗೋಡೆಯಲ್ಲೇ ಹೂತಿಟ್ಟು ಮುಂದೆ ಹೋದರೆಂಬ ಮಾತಿನಲ್ಲಿ ಸತ್ಯವಿಲ್ಲ! ಇನ್ನೊಂದು ಮಿಥ್ಯವೆಂದರೆ ಚಂದ್ರನಿಂದ ಕಾಣಿಸುವ ಮಾನವ ನಿರ್ಮಿತ ಏಕಮೇವ ವಸ್ತು ಈ ಚೀನೀ ಗೋಡೆ ಎಂಬ ವದಂತಿ. 1930 ರ ದಶಕದಲ್ಲಿ ಹುಟ್ಟಿದ ಈ ಕಟ್ಟುಕಥೆಯನ್ನು ಚಂದ್ರಯಾನದ 50ನೆಯ ವಾರ್ಷಿಕವನ್ನು ಆಚರಿಸುತ್ತಿರುವ ಈ ದಿನಗಳಲ್ಲಾದರೂ ಇದುಫೇಕ್ ನ್ಯೂಸ್ ಅಂತ ಸಾಬೀತು ಮಾಡೋಣವೇ? ಇಂಗ್ಲಂಡಿನ ಉತ್ತರ ಭಾಗದಲ್ಲಿ ರೋಮನ್ನರು ಸ್ಕಾಟ್ಲಂಡಿನ ಪಿಕ್ಟ್ (Picts) ಜನರ ಆಕ್ರಮಣದಿಂದ ಸಂರಕ್ಷಣೆಗಾಗಿ ಹೇಡ್ರಿಯನ್ ವಾಲ್ ಕಟ್ಟಿದಂತೆ ಉತ್ತರದ ಮಂಚು ಜನರನ್ನು ಆಚೆಗಿಡಲು ಕಟ್ಟಿದ ಈ ದೀರ್ಘ ಗೋಡೆ (ಚೀನೀ ಭಾಷೆಯಲ್ಲಿವಾನ್ ಲೀ ಚಾನ್ ಚಿಂಗ್ ಅಂದರೆ 10,000 ಮೈಲಿನ ಗೋಡೆ) ಅಭೇದ್ಯವೇನೂ ಆಗಿರಲಿಲ್ಲ. ಮಂಚು ಜನ ಮತ್ತು ಚೆಂಗೀಜ್ ಖಾನ್ ಇದನ್ನು ದಾಟಿ ಬಂದಿದ್ದರಂತೆ. ಬೆಳಿಗ್ಗೆ ಹೊರಟು, ಬೇಜಿಂಗಿನ ಟ್ರಾಫಿಕ್ ಜಾಂನಲ್ಲಿ ಕೆಲ ತಾಸು ಕಳೆದು ನಾವು ಏಳು ಜನ ”ಸಾತ್ ಹಿಂದುಸ್ತಾನಿ” ಹತ್ತಿ ಜಯಭೇರಿ ಹೊಡೆದು ಕೆಳಗಿಳಿದು ಬಂದು ಸಾಯಂಕಾಲ ವಿಶ್ರಾಂತಿ ಪಡೆದೆವು.

”ಟ್ಯಾಂಕ್ ಮ್ಯಾನ್”ನನ್ನು ಮರೆತ ಟೂರ್ ಗೈಡ್!

ಟಿಯಾನ್ಮೆನನ್ ಚೌಕದಲ್ಲಿ ಜೂನ್ 1989ರ ಪ್ರತಿಭಟನೆ (Image from internet)

ಸರಿಯಾಗಿ 30 ವರ್ಷದ ಕೆಳಗೆ, ಅಂದರೆ,1989ರ ಜೂನ್ ತಿಂಗಳಲ್ಲಿ ಬೇಜಿಂಗಿನ ಟಿಯಾನನ್ಮೆನ್ ಚೌಕದಲ್ಲಿ ಜನರ ಪ್ರತಿಭಟನೆ ಉತ್ಕಟಾವಸ್ಥೆಗೇರಿತ್ತು. ಅದನ್ನು

‘Tank Man’ (Image from internet)

ಹತ್ತಿಕ್ಕಲು ಸರಕಾರ ಟ್ಯಾಂಕುಗಳನ್ನು ಉಪಯೋಗಿಸಿದರು. ಜೂನ್ 5 ನೆಯತಾರೀಕು ಚೌಕದ ಅನತಿ ದೂರದಲ್ಲಿ ಒಂದು ಅದ್ಭುತ ಘಟನೆ ನಡೆಯಿತು. ಅದನ್ನು ಜಗತ್ತಿನ ಎಲ್ಲ ಮೂಲೆಯ ಜನರೂ ನನ್ನಂತೆಯೇ ತಮ್ಮ ಟೆಲಿವಿಷನ್ನಿನಲ್ಲಿ ಕಂಡಿದ್ದರು. ಒಬ್ಬ ಒಂಟಿ ಯುವಕ ಎರಡು ಕೈಯಲ್ಲಿ ಚೀಲಗಳನ್ನು ಹಿಡಿದು ಟ್ಯಾಂಕುಗಳ ಸಾಲಿನ ಮುಂದೆ ನಿಂತ. ಟ್ಯಾಂಕು ಅವನನ್ನು ಬಳಸಿ ಮುಂದೆ ಹೋಗಲು ಪ್ರತ್ನಿಸಿದಾಗ ಆತನೂ ಸರಿದು ತಡೆಯುತ್ತಿದ್ದ. ಇಂಥ ಘಟನೆ ಚಿನಾದಲ್ಲಿ ಗಿದ್ದೇ ಅಪರೂಪ. ಆತನ ಈ ವೀರ ಕೃತ್ಯಕ್ಕೆ ಅವನಿಗೆ ಟ್ಯಾಂಕ್ ಮ್ಯಾನ್ (Tank man) ಎಂಬ ಬಿರುದು ಬಂತು. ಟಿಯಾನ್ಮನೆನ್ ನಲ್ಲಿ ಆ ಜಾಗವನ್ನು ನೋಡಲು ಬಹಳ ದಿನಗಳಿಂದ ಕಾಯುತ್ತಿದ್ದೆ. ಅಲ್ಲಿನಿಂತು ಫೋಟೊ ತೆಗೆದದ್ದಾಯಿತು.ಆ ಘಟನೆಯ ಬಗ್ಗೆ ಇನ್ನಷ್ಟು ವಿವರಣೆ ತಿಳಿಯಲು ಬಹಳೆ ಉತ್ಸುಕರಾಗಿದ್ದೆವು. ಆದರೆ ನಮ್ಮ ಗೈಡು ಅದರ ಬಗ್ಗೆ ಒಂದು ಶಬ್ದವೂ ಮಾತಾಡಲಿಲ್ಲ. ಅವರಿಗೆ ಅನುಮತಿಯಿರಲಿಲ್ಲವೆಂದು ನಂತರ ಗೊತ್ತಾಯಿತು. ಸರಕಾರದ ಕಪಿಮುಷ್ಟಿ ಇಲ್ಲಿಯವರೆಗೆ ಅಂತ ನನಗೆ ಕಲ್ಪನೆಯಿರಲಿಲ್ಲ. ಸರಕಾರ ತನ್ನ ಬಗ್ಗೆ ಅಪಪ್ರಚಾರವಾಗದಂತೆ ಅತ್ಯಂತ ಕಾಳಜಿ ವಹಿಸುತ್ತದೆ, ಅಲ್ಲದೆ ಬಲಪ್ರಯೋಗ ಮಾಡಲೂ ಹೇಸುವದಿಲ್ಲವೆಂದು ತಿಳಿದು, ನಮಗೆ ಆಶ್ಚರ್ಯ ಮತ್ತು ಹೆದರಿಕೆ ಸಹ ಆಯಿತು. ಮುಂದೆಯೂ ಇದರ ಅನುಭವವಾಯಿತು. ಆನಂತರ ಆ ಯುವಕನ ಗತಿ ಏನಾಯಿತು ಎಂದು ಇಂದಿನವರೆಗೆ ಪತ್ತೆ ಇಲ್ಲ ಎಂದು ಓದಿದ ನೆನಪು.

ಅಂತೂ ನಮ್ಮ ಪ್ರವಾಸ ಆಶ್ಚರ್ಯ, ವಿಸ್ಮಯ, ಸಂತೋಷ ಎಲ್ಲದರ ಮಿಶ್ರಣವಾಗಿತ್ತು.

(Pictures, where uncredited: author’s)

ಶ್ರೀವತ್ಸ ದೇಸಾಯಿ

ಶೆರ್ಲಾಕ್ ಹೋಮ್ಸ್ ಮತ್ತು ”ಚಾಂಡಾಳ ಚೌಕಡಿ” -ಶ್ರೀವತ್ಸ ದೇಸಾಯಿ ಬರೆದ ನಾಟಕ ವಿಮರ್ಶೆ

SPDesai for KSSVV anivaasi
ಲೇಖಕರು: ಶ್ರೀವತ್ಸ ದೇಸಾಯಿ
ಸಿನೆಮಾ ಬಂದ ಮೇಲೆ ಕನ್ನಡಿಗರಲ್ಲಿ ನಾಟಕ ಆಡುವ ಮತ್ತು ನೋಡುವ ಚಟ ತುಂಬ ಕಡಿಮೆಯಾದುದರಲ್ಲಿ ಯಾವ ಸಂಶಯವೂ ಇಲ್ಲ. ಸಿನೆಮಾದ ಝಂಝಾವಾತಕ್ಕೆ ತತ್ತರಿಸಿ ನಾಟಕ ಕಂಪನಿಗಳೆಲ್ಲ ಮುಚ್ಚಿ ಹೋದ ಮೇಲೆ, `ನೀನಾಸಂ` ತರಹದ ಹವ್ಯಾಸಿ ಕಂಪನಿಗಳು ಪಶ್ಚಿಮದ ಆಧುನಿಕ ನಾಟಕದ ಶೈಲಿಯತ್ತ ಹೊರಳಿದವು. ಸಿನೆಮಾದ ಹಾವಳಿಯಿಂದ ಪಶ್ಚಿಮ ದೇಶಗಳಲ್ಲಿ ನಾಟಕಗಳು ಕಡಿಮೆಯಾಗಿವೆ ಆದರೂ, ನಾಟಕಗಳಿಗೆ ಇನ್ನೂ ಬೇಡಿಕೆ ಇದೆ, ವ್ಯಾವಹಾರಿಕವಾಗಿ ಕೂಡ ಲಾಭ ಮಾಡುತ್ತವೆ. ಶ್ರೀವತ್ಸ ದೇಸಾಯಿಯವರು ತಾವು ಇತ್ತೀಚೆ ನೋಡಿದ ಶರಲೇಖ ಹೋಮ ಮತ್ತು ವಾತ್ಸಾಯನನ `ಚಂಡಾಳ ಚೌಕಡಿ` ನಾಟಕದ ಬಗ್ಗೆ ಆಪ್ತವಾದ ಲೇಖನ ಬರೆದಿದ್ದಾರೆ. – ಸಂ
Sherlock Holmes on tour 2018-19 (with kind permission from Blackeyed Theatre)

ಕಳೆದ ತಿಂಗಳು ಯಾರ್ಕ್ ಶೈರ್ ದ ಡೋಂಕಾಸ್ಟರ್ ದಲ್ಲಿ ಸರ್ ಆರ್ಥರ್ ಕೋನನ್ ಡಾಯ್ಲ ಬರೆದ ” ಎ ಸೈನ್ ಆಫ್ ಫೋರ್” (ಆ ನಾಲ್ವರನ್ನೇ ನಾನು ಕುಪ್ರಸಿದ್ಧ ಚಾಂಡಾಳ್ ಚೌಕಡಿ ಎಂದು ಕರೆದದ್ದು – ವಿವರ ಕೊನೆಯಲ್ಲಿ) ಕಥೆಯ ರಂಗಪ್ರದರ್ಶನವನ್ನು ನೋಡಿದೆ. ಅದು ಬ್ಲ್ಯಾಕ್ ಐಡ್ ಥಿಯೇಟರ್ (Blackeyed Theatre) ಅವರ ಪ್ರಸ್ತುತಿಯಾಗಿತ್ತು. ಅದು ನನ್ನ ಅಭಿಪ್ರಾಯದಲ್ಲಿ  ಮನಸ್ಸಿನಲ್ಲಿ ಉಳಿಯುವ ಒಂದು ಒಳ್ಳೆಯ ನಾಟಕ ಪ್ರಯೋಗವಾಗಿತ್ತು.

ನಾನು ಕಾಲೇಜಿನಲ್ಲಿದ್ದಾಗಿನಿಂದಲೂ ಜಗತ್ತಿನ ಏಕಮೇವಾದ್ವಿತೀಯನಾದ ಡಿಟೆಕ್ಟಿವ್ ಶೆರ್ಲಾಕ್ಸ್ ಹೋಮ್ಸ್ ನನ್ನ ಅಚ್ಚುಮಚ್ಚಿನ ಪತ್ತೇದಾರನಾಗಿದ್ದ. ಆತನ ಪತ್ತೇದಾರಿ ಸಾಹಸಗಳನ್ನು ವರ್ಣಿಸುವ ಕೋನನ್ ಡಾಯ್ಲ್ ಬರೆದ ನಾಲ್ಕು ಕಿರುಕಾದಂಬರಿಗಳು ಮತ್ತು ಛಪ್ಪನ್ನೈವತ್ತಾರು ಕಥೆಗಳಲ್ಲಿ ಆತನ ಸಾಹಸವನ್ನೆಲ್ಲ ಓದಿದ್ದೆನಾದ್ದರಿಂದ ನನ್ನ ಊರಲ್ಲೇ ಈ ನಾಟಕ ಬಂದಾಗ ಅವಕಾಶ ತಪ್ಪಿಸಿಕೊಳ್ಳಲಿಲ್ಲ. ನೋಡಿದ್ದಕ್ಕೆ ನಿರಾಶೆಯಂತೂ ಆಗಲಿಲ್ಲ. ತದ್ವಿರುದ್ಧವಾಗಿ ಇನ್ನೊಮ್ಮೆ ಅದನ್ನು ನೋಡುವ ಇಚ್ಚೆಯಾಗುವಷ್ಟು ಹಿಡಿಸಿತು.

”ಎ ಸೈನ್ ಆಫ್ ದ ಫೋರ್” (ಐದು ಶಬ್ದಗಳು, ಆನಂತರ ’ದ’ ಲೋಪವಾಯಿತು) ಎಂಬ ಶೀರ್ಷಿಕೆಯೊಂದಿಗೆ 1890 ರಲ್ಲಿ ಮೊದಲ ಬಾರಿ ಲಿಪ್ಪಿನ್ಕಾಟ್ ಮಾಸಿಕದಲ್ಲಿ ಪ್ರಕಟವಾದ ಕೋನನ್ ಡಾಯ್ಲನ ಎರಡನೆಯ ಶೆರ್ಲಾಕ್ (ಹೋಮ್ಸ್) ಕಥೆಯನ್ನು ನಾನು ಮೊದಲು ಓದಿದ್ದು, 1963ರಲ್ಲಿ. ಮೊದಲನೆಯದು ’ಎ ಸ್ಟಡಿ ಇನ್ ಸ್ಕಾರ್ಲೆಟ್’. ಕಥೆಯ ಹಿನ್ನೆಲೆಯಲ್ಲಿ 1857ರ ಭಾರತದ ಮೊದಲ ಸ್ವಾತಂತ್ರ್ಯ ಚಳುವಳಿ (ಬ್ರಿಟಿಶರು ಸಿಪಾಹಿ ದಂಗೆ ಎಂದು ಕರೆದರು!) ಚಿತ್ರಿತವಾಗಿದೆ. ಯುದ್ಧ, ಕಳವು, ಕೊಲೆ, ವಂಚನೆ. ಸೇಡು, ರೋಮಾನ್ಸ್, ಕೊನೆಯ ಹಂತದಲ್ಲಿ ’ಚೇಸ” ಇವೆಲ್ಲ ಕೂಡಿದ ನವರಸ ಭರಿತ ಕಥೆ ಅದು. ನೀವೆಲ್ಲ ಓದಿದ್ದರೂ ಆ ಕಥೆಯನ್ನು ನೆನಪಿಸಲು ಅದರ ಸಾರಾಂಶವನ್ನು ಮೊದಲು ಕೊಡುತ್ತೇನೆ:

ಮೇರಿ ಮೋರ್ಸ್ಟನ್ ವೃತ್ತಾಂತ

ಕಥೆಯ ಪ್ರಾರಂಭದ ಇಸವಿ 1878. ಬಿಡಿಸಲು ಕ್ರೈಮ್ ಕೇಸುಗಳಿಲ್ಲದೆ ಬೇಜಾರು ಕಳೆಯಲು ಕೋಕೇನ್ ಸೂಜಿಮದ್ದು ಏರಿಸುವ, ಮೂಡು ಬಂದಾಗ ವಯೋಲಿನ್ ನುಡಿಸುವ, ಆದರೆ ಸ್ವಲ್ಪ ವಿಕ್ಷಿಪ್ತ ಸ್ವಭಾವದ ಡಿಟೆಕ್ಟಿವ್ ಶೆರ್ಲಾಕನ 221 B ಬೇಕರ್ಸ್ ಸ್ಟ್ರೀಟ್ ಕೋಣೆಗೆ ಬರುತ್ತಾಳೆ ಮಕ್ಕಳ ಗವರ್ನೆಸ್ ಆಗಿ ಕೆಲಸ ಮಾಡುತ್ತಿರುವ ಮೇರಿ. ಆಕೆಯ ತಂದೆ ಕ್ಯಾಪ್ಟನ್ ಮಾರ್ಸ್ಟನ್ ಭಾರತದಿಂದ ಸರ್ವಿಸ್ ಮುಗಿಸಿ ಮರಳಿ ಲಂಡನ್ನಿಗೆ ಬಂದ ಕೂಡಲೆ ನಾಪತ್ತೆಯಾಗಿದ್ದಾನೆ. ಇನ್ನೂ ಆತನ ಸುಳುವೇ ಸಿಕ್ಕಿಲ್ಲ. ಯಾರೋ ಒಬ್ಬ ಹಿತೈಷಿ ವರ್ಷಕ್ಕೊಂದರಂತೆ ಆರು ಅಮೂಲ್ಯ ಮುತ್ತುಗಳನ್ನು ಅವಳಿಗೆ ಅಂಚೆಯಲ್ಲಿ ತಲುಪಿಸುತ್ತಿದ್ದಾರೆ. ಆತನನ್ನು ಭೇಟಿಯಾಗಿ ತನ್ನ ತಂದೆಯ ಅನ್ವೇಷಣೆ ಮಾಡಲು ಹೋಂಸ್ ಮತ್ತು ಆತನ ಸಂಗಾತಿ ಡಾ ವಾಟ್ಸನ್ನರ ಸಹಾಯ ಕೋರಿ ಬಂದಿದ್ದಾಳೆ. ಅವಳ ಬಳಿ ನಾಲ್ವರ ನಿಗೂಢ ಸಹಿಯಿರುವ ಒಂದು ಕಾಗದ (Sign of the Four) ಇದೆ. ಅವರಲ್ಲೊಬ್ಬ ಒಂದು ಮರಗಾಲಿನ ಜೋನಾಥನ್ ಸ್ಮಾಲ್ ಎನ್ನುವ ಬ್ರಿಟಿಷ್ ಕಂಪನಿ ಸೈನ್ಯದಿಂದ ಹೊರಬಿದ್ದ ಸಿಪಾಹಿ. ಆತನೋ ಅತ್ಯಂತ ಬೆಲೆಬಾಳುವ ”ಆಗ್ರಾ ನಿಧಿ”ಯ ಶೋಧದಲ್ಲಿದ್ದಾನೆಂದು ಗೊತ್ತಾಗುತ್ತದೆ. ಆ ಲೂಟಿಯ ಪಾಲುಗಾರರಾದ ನಾಲ್ವರಲ್ಲಿ ಒಬ್ಬನಾದ ಸ್ಮಾಲ್ ನನ್ನು ವಂಚಿಸಿ ಅದನ್ನು ’ಪಾಂಡಿಚೇರಿ ಲಾಡ್ಜ್ ’ ನಲ್ಲಿ ಗುಪ್ತವಾಗಿ ಅಡಗಿಸಿಟ್ಟಿದ್ದ ಮೇಜರ್ ಶೋಲ್ಟೋನ ಅವಳಿ-ಜವಳಿ ಮಕ್ಕಳಲ್ಲೊಬ್ಬನೇ ಮೇಲೆ ಹೇಳಿದ ಆ ಹಿತೈಷಿ ಥೇಡ್ಡಿಯಸ್ ಶೋಲ್ಟೋ. ಕ್ರೈಮ್ ಥ್ರಿಲ್ಲರ್ ಅಂದ ಮೇಲೆ ಹೆಣಗಳು ಬೀಳಲೇ ಬೇಕಲ್ಲವೆ? ಥೇಡ್ಡಿಯಸ್ ಶೋಲ್ಟೋನ ಸಹೋದರನ ಕೊಲೆಯನ್ನಷ್ಟೇ ನಾವು ರಂಗದ ಮೇಲೆ ನೋಡುವದು. ಈಗಾಗಲೆ ಇನ್ನು ಮೂವರ ಹತ್ಯೆಗಳಾಗಿವೆ, ಅಥವಾ ಆಗಲಿವೆ. ಒಂದು ಕಾಲಕ್ಕೆ ಒಬ್ಬ ಮಹಾರಾಜನ ವಶದಲ್ಲಿದ್ದ ಬೆಲೆಕಟ್ಟಲಾರದ ’’ಆಗ್ರಾ ನಿಧಿ” ಇಷ್ಟರಲ್ಲಿ ಮಾಯವಾಗಿದೆ. ಅದನ್ನು ಟೇಮ್ಸ ನದಿಯಲ್ಲಿಯ ಒಂದು ಹಡಗದಲ್ಲಿ ಪತ್ತೆ ಹಚ್ಚುವದರಲ್ಲಿ ಶೆರ್ಲಾಕ್ ಹೋಂಸ್ ಸಫಲನಾದರೂ ಈ ಮೊದಲು ಅದನ್ನು ಕದ್ದು ತೊಗೊಂಡೋಡಿದ್ದವರು ಸ್ಮಾಲ್ ಮತ್ತವನ ಸಹಾಯಕ -ಅಂದಮಾನ್ ಮೂಲದ ಟೋಂಗಾ ಎನ್ನುವ ”ಕುಳ್ಳ, ಕರಿಯ, ಕಾಡುಮನುಷ್ಯನಂಥ ಅಸಹ್ಯಪ್ರಾಣಿ.” ಅವರು ಹೋಂಸ್ ಮತ್ತು ಸ್ಕಾಟ್ಲಂಡ ಯಾರ್ಡ ಪತ್ತೇದಾರರ ಕಣ್ಣಿಗೆ ಸಿಕ್ಕರೂ ನಿಧಿ ಅವರ ಕೈಗೆ ಸಿಗುತ್ತದೆಯೇ? ಅದರ ಹಕ್ಕಿನ ವಾರಸುದಾರಳಾದ ಮೇರಿ ಶ್ರೀಮಂತಳಾಗುತ್ತಾಳೆಯೇ? ಆಕೆಯನ್ನು ಪ್ರೀತಿಸುವ ’ಬಡ’ ಡಾಕ್ಟರ್ ವಾಟ್ಸನ್ನನ್ನು ವರಿಸುವಳೇ? ಇವನ್ನು ರಹಸ್ಯವಾಗಿಯೇ ಇಡುತ್ತೇನೆ. ಹೋಂಸನ ಪೈಪೋಟಿ ಯಾರು ಅಂದರೆ ಸ್ಕಾಟ್ಲಂಡ್ ಯಾರ್ಡಿನ ಅಧಿಕೃತ ಡಿಟೆಕ್ಟಿವ್ ಅಥೆಲ್ನಿ ಜೋನ್ಸ್. ಆತ ತಪ್ಪು ಮಾಡಿದರೂ (ಥೇಡ್ಡಿಯಸ್ ನೇ ಸ್ವತಃ ದಾಯಾದಿಯ ಕೊಲೆಗಾರ ಎಂದು ತಪ್ಪಾಗಿ ಕೈದುಮಾಡಿದ್ದು) ಕೇಸ್ ಬಿಡಿಸಿದ್ದಕ್ಕೆ ಕೊನೆಗೆ ಅವನಿಗೇ ಶ್ರೇಯಸ್ಸು ಬರುತ್ತದೆ!

Victoria Spearing’s original design concept (With permission from Blackeyed Theatre)

ಕಥಾವಸ್ತು ತೊಡಕಿನದು. ಭಾರತದಲ್ಲಿ 1857ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ದಂಗೆದ್ದ ಸಿಪಾಹಿಗಳಿಂದಾದ ಅಶಾಂತಿ, ಆಗ್ರಾ ನಿಧಿಯ ಅಪಹರಣ, ಭೀಕರ ಕೊಲೆ, ಅದರ ಶಿಕ್ಷೆಗೆ ಗುರಿಯಾಗಿ ಅಂದಮಾನ್ ಕಾರಾಗೃಹ ಸೇರಿದ ಒಂದು ಮರಗಾಲಿನ ಸ್ಮಾಲ್, ಅವನನ್ನು ವಂಚಿಸಿ ನಿಧಿಯನ್ನು ತಾನೊಬ್ಬನೇ ಲಪಟಾಯಿಸಿದ ಮೇಜರ್ ಶೊಲ್ಟೋ, ಮೇರಿಯ ತಂದೆಯ ನಿಗೂಢ ನಿರ್ಗಮನ, ಇವೆಲ್ಲವುಗಳನ್ನು ಸಂಭಾಷಣೆಯಲ್ಲೇ ತೋರಿಸಬೇಕು. ಪುಸ್ತಕದಿಂದ ರಂಗ ಭೂಮಿಗೆ ಅಳವಡಿಸಿದ ನಿಕ್ ಲೇನ್ ಅವರ ಬರಹ ಮತ್ತು ಡೈರೆಕ್ಷನ್ ಎಲ್ಲಿಯೂ ಎಡವುವದಿಲ್ಲ. ಇದನ್ನು ಪರಣಾಮಕಾರಿಯಾಗಿ ತೆರೆಯಿಲ್ಲದ ರಂಗ ಮಂಚದ ಮೇಲೆ ತಂದ ಯಶಸ್ಸು ಸ್ಟೇಜ್ ಡಿಸೈನರ್ ವಿಕ್ಟೋರಿಯಾ ಸ್ಪಿಯರಿಂಗ್ ಅವರ ಕುಶಲ ರಂಗ ಸಜ್ಜಿಕೆಯ ಮತ್ತು ಸ್ಟೇಜ್ ಪ್ರಾಪ್ಸ್ (props) ದಲ್ಲಿ ಕಾಣುತ್ತದೆ. ಇಡೀ ನಾಟಕದಲ್ಲಿ ಆರೇ ಜನ ಪ್ರತಿಭಾಶಾಲಿ ನಟರು (ensemble cast). ಅವರೇ ಹದಿನೇಳು ಪಾತ್ರಗಳನ್ನು ಆಡುವದಲ್ಲದೆ ಪ್ರತಿಯೊಬ್ಬರೂ ಒಂದೊಂದು ವಾದ್ಯವನ್ನು ಸಹ ನುಡಿಸುತ್ತಾರೆ! ಅಂದರೆ ಹಿನ್ನೆಲೆ ಸಂಗೀತ, ಮುದ್ರಿತ ಧ್ವನಿಪ್ರಸಾರ ಇಲ್ಲವೆಂತಲ್ಲ. ಅದು ಅತಿ ಕಡಿಮೆಯೇ. ನಾಟಕದ ಅಂಕದ ದೃಶ್ಯಗಳು ಬದಲಾಗುವಾಗ props ಜೋಡಣೆ ಸಹ ನಟರೇ ಮಾಡುವದು. ಬಲಾವಣೆಗೆ ಒಂದೂವರೆ ನಿಮಿಷ ಸಹ ಹಿಡಿಯುವದಿಲ್ಲ. ಹೋಂಸ್-ವಾಟ್ಸನ್ ಕುಳಿತ ಕುರ್ಚಿ ಮತ್ತಿತರ ಸಲಕರಣೆಗಳನ್ನು ಒಂದರ ಮೇಲೆ ಒಂದಾಗಿ ಜೋಡಿಸಿ ಅದರ ಮೇಲೆ ಮೂವರು ಕುಳಿತು ಕುದುರೆಯ ಖುರಪುಟದದೊಡನೆ ಹೊರಟಂತೆ ಮೈಯಲಾಡಿಸಿದರೆ ಲಂಡನ್ನಿನ ಕಾಬ್ಬಲ್ ಸ್ಟೋನ್ ಹಾಸುಗಲ್ಲುಗಳ ಮೇಲೆ ಓಡುತ್ತಿದ್ದ ವಿಕ್ಟೋರಿಯನ್ ಕ್ಯಾಬ್ ಕಣ್ಣ ಮುಂದೆ ಬರುತ್ತದೆ! ಅದು ಸಹ ವಿಕ್ಟೋರಿಯಾ ಸ್ಪಿಯರಿಂಗ್ ಅವರೇ ಯೋಜಿಸಿದ್ದು. ಆಳವಾಗಿ ಭಾರತೀಯ ಇತಿಹಾಸ ಮತ್ತು ವಾಸ್ತುಶಿಲ್ಪವನ್ನು ಅಭ್ಯಾಸ ಮಾಡಿ ಅಲ್ಲಿಯ ಗೋಪುರಗಳ ಆಕಾರವನ್ನು ಲಂಡನ್ನಿನ ಬಂದರಿನ ಸುತ್ತಲಿನ ಕಟ್ಟಡಗಳಿಗೆ ಅದನ್ನು ಜೋಡಿಸಿ ಮೊದಲ ಮಾದರಿಯನ್ನು ತಯಾರಿಸಿದಳಂತೆ. (ಚಿತ್ರ ನೋಡಿರಿ). ಸಿಪಾಹಿಗಳು ದಂಗೆ ಏಳುವ ದೃಶ್ಯದಲ್ಲಿ ಮೀನಾರುಗಳು, ಗೋಪುರಗಳ ತುದಿಗಳು ಕ್ಷಣಾರ್ಧದಲ್ಲಿ ಕೊನೆಯ ದೃಶ್ಯದಲ್ಲಿ ಲಂಡನ್ನಿನ ಟೇಮ್ಸ್ ನದಿಯಲ್ಲಿ ಹಾಯ್ದು ಹೋಗುವ ಮೊನಚಾದ ಮೂಗಿನ ಹಡಗವಾಗಿ ಪರಿವರ್ತನಗೊಂಡದ್ದನ್ನು ಪ್ರೇಕ್ಷಕರು ಕರತಾಡನದೊಂದಿಗೆ ಸ್ವಾಗತಿಸ್ಸಿದ್ದು ಆಶ್ಚರ್ಯವಲ್ಲ! ಈ ಹಿಂದೆ 14 ಕ್ಕೂ ಹೆಚ್ಚು ಸಲ ಕೋನನ್ ಡಾಯ್ಲ ನ ಈ ಕಥೆ ನಾಟಕ, ಸಿನಿಮಾ ಅಥವಾ ಟೆಲಿವಿಷನ್ ಮಾಧ್ಯಮದಲ್ಲಿ ಪ್ರದರ್ಶಿತವಾಗಿದ್ದರೂ ಇದು ನವೀನ ಮತ್ತು ಭಿನ್ನ ರೂಪದ್ದು ಎನಿಸಿತು. ಇದು ಪ್ರವಾಸೀ ರಂಗಭೂಮಿಯ ಟೂರಿಂಗ್ ಗೆ ಹೇಳಿಮಾಡಿಸಿದಂತಿದೆ ಎಂದು ನನ್ನ ಎಣಿಕೆ. ಈ ಕಂಪನಿಯವರು (www.blackeyedtheatre.co.uk). ಇದನ್ನು ಹಾಲೆಂಡ ಸೇರಿ ಮುಂದಿನ ಹದಿನೆಂಟು ತಿಂಗಳಲ್ಲಿ ಈ ದೇಶದ 55 ಜಾಗಗಳಲ್ಲಿ ಪ್ರದರ್ಶಿಸಲಿದ್ದಾರೆಂದ ಮೇಲೆ ಇದರ ಅವಶ್ಯಕತೆ ಮನದಟ್ಟವಾಗುತ್ತದೆ.

Holmes 1930

ಇನ್ನು ಅಭಿನಯದ ಬಗ್ಗೆ ಹೇಳಬೇಕೆಂದರೆ ಆರೂ ನಟರು ತಮ್ಮ ಪಾತ್ರಗಳಲ್ಲಿ ಜೀವ ತುಂಬಿದ್ದಾರೆ. ನಾಟಕ ನೋಡುವ ಮೊದಲು ನನ್ನ ಕಣ್ಣ ಮುಂದೆ ನಿಂತದ್ದು ಮಧ್ಯ ವಯಸ್ಸಿನ ಡಿಯರ್ ಸ್ಟಾಕರ್ (Deer stalker)) ಹ್ಯಾಟ್ ಧರಿಸಿ, ತನ್ನ ಬಾಯಲ್ಲಿ ಜೋತುಬಿದ್ದ ಬಾಗಿದ ಪೈಪನ್ನು ಕಚ್ಚುವ ಶೆರ್ಲಾಕ್ ಹೋಮ್ಸ್ ಮತ್ತು ಸ್ಥೂಲ ಕಾಯದ ಮತ್ತು ಸ್ವಲ್ಪ ಪೆದ್ದನಂತೆ ನಟಿಸುವ ಡಾಕ್ಟರ್ ವಾಟ್ಸನ್. ಆದರೆ ಈ ನಾಟಕದಲ್ಲಿಯೂ ನಾವು ನೋಡುವದು ಎಳೆವಯಸ್ಸಿನ ಹೋಂಸ್-ವಾಟ್ಸನ್ ಪಾರ್ಟ್ನರ್ ಶಿಪ್ಪನ್ನೇ. ಇತ್ತೀಚಿನ ವರ್ಷಗಳಲ್ಲಿ ಟೆಲಿವಿಷನ್ ಮಾಧ್ಯಮದಲ್ಲಿ ಜಯಭೇರಿ ಹೊಡೆದ ಬಿಬಿಸಿಯ ’ಶೆರ್ಲಾಕ್ ’ಸರಣಿಯಲ್ಲಿ ಕಂಡ ಕಂಬರ್ಬ್ಯಾಚ್- ಮಾರ್ಟಿನ್ ಫ್ರೀಮನ್ ಜೋಡಿಯ ಕೆಮಿಸ್ಟ್ರಿಯನ್ನು ಇದು ನೆನಪಿಸುತ್ತದೆ. ಅದು ಸರಿಯೇ, ಏಕೆಂದರೆ ಸೈನ್ ಆಫ್ ಫೋರ್ ಈ ಪತ್ತೇದಾರನ  ಬರೀ ಎರಡನೆಯ ಸಾಹಸವೆ ಅಲ್ಲವೆ? ಲೂಕ್ ಬಾರ್ಟನ್ನನ ಹೋಮ್ಸ್ ಮತ್ತು ವಾಟ್ಸನ್ನನ ಪಾತ್ರದಲ್ಲಿರುವ ಜೋಸೆಫ್ ಡೆರ್ರಿಂಗ್ಟನ್ ಮಾತ್ರ ಒಂದೊಂದೇ ಪಾತ್ರದಲ್ಲಿದ್ದಾರೆ. ನಾಟಕದ ಡಾ. ಜಾನ್ ವಾಟ್ಸನ್ ನೈಜ ಜೀವನದಲ್ಲಿ ವೈದ್ಯನಾಗಿರುವದು ಆಕಸ್ಮಿಕವಲ್ಲವೇನೋ. ಅವರಿಬ್ಬರ ಅಭಿನಯ ಮನಸ್ಸಿನಲ್ಲಿ ಉಳಿಯುತ್ತದೆ. ಕೊನೆಯ ದೃಶ್ಯದಲ್ಲಿ ಗಿಟಾರ್ ಪಟು ಝಾಕ್ ಲೀ (ಜೊನಾಥನ್ ಸ್ಮಾಲ್) ತನ್ನ ಸುದೀರ್ಘ ಸ್ವಗತದಲ್ಲಿ ಕಥೆಯ ತೊಡಕು ಬಿಡಿಸುವಾಗ ಮಾತ್ರ ಸ್ವಲ್ಪ ಎಳೆದಂತೆ ಕಂಡರೂ ಕಥೆ ಅರ್ಥವಾಗುತ್ತದೆ. ಸೀರಿಯಸ್ ಡಿಟೆಕ್ಟಿವ್ ಶೆರ್ಲಾಕ್ ಹೋಂಸ್ ಪಾತ್ರದಲ್ಲಿ ಲೂಕ ಬಾರ್ಟನ್ ಮತ್ತು ಶೋಲ್ಟೋ ಅವಳಿಗಳ ಪಾತ್ರದಲ್ಲಿರುವ ರೂ ಹ್ಯಾಮಿಲ್ಟನ್ ಇವರ ಮಾತುಗಳಲ್ಲಿ ಅಲ್ಲಲ್ಲಿ ಹಾಸ್ಯ ತುಂಬಿದ್ದು ದಿಗ್ದರ್ಶಕರ ಸಾಮರ್ಥ್ಯಕ್ಕೆ ಸಾಕ್ಷಿ.

My copy of complete Sherlock Holmes

ಚಾಂಡಾಳ ಚೌಕಡಿ: ಈ ನುಡಿಗಟ್ಟು – ನಾಲ್ಕು ಅಥವಾ ಹೆಚ್ಚು- ದುರುಳರ ಗುಂಪಿಗೆ ಚೆನ್ನಾಗಿ ಅನ್ವಯಿಸುತ್ತದೆ ಎಂದೇ ಅ ಅರ್ಥದಲ್ಲಿ ಇಲ್ಲಿ ಉಪಯೋಗಿಸಿದ್ದೇನೆ. ಇದರ ಮೂಲ ಮಹಾಭಾರತದ ದುಷ್ಟ ಚತುಷ್ಟಯ (ದುರ್ಯೋಧನ, ದುಶ್ಶಾಸನ, ಶಕುನಿ, ಕರ್ಣ) ಇರಬಹುದು. ಈ ಹೆಸರಿನಲ್ಲಿ ಮರಾಠಿ, ಭೋಜಪುರಿ ಭಾಷೆಗಳಲ್ಲಿ ಸಿನಿಮಾಗಳು ಸಹ ಆಗಿವೆಯಂತೆ. ಕೋನನ್ ಡಾಯ್ಲನ ಕಥೆಯಲ್ಲಿ ಕಾಗದದ ಮೇಲೆ ಸಹಿ (sign) ಮಾಡಿದ ನಾಲ್ವರು ಅಪರಾಧಿಗಳೆಂದರೆ ಜೊನಾಥನ್ ಸ್ಮಾಲ್, ದೋಸ್ತ್ ಅಕ್ಬರ್, ಮೆಹಮತ್ ಸಿಂಗ್ ಮತ್ತು ಅಬ್ದುಲ್ಲಾ ಖಾನ್.

ಟೋಂಗಾ ಎನ್ನುವ ಅಂದಮಾನಿನ ಕುಳ್ಳ ಮನುಷ್ಯನ ವರ್ಣನೆಯಷ್ಟೇ ನಾಟಕದಲ್ಲಿ ಕೇಳುತ್ತೇವೆ- ಆ ಜನರು ”ಸಣ್ಣ ಕಣ್ಣು, ಸದ್ದಾ ಮುದ್ದಾ ಆಕಾರದ ದೊಡ್ಡ ತಲೆ, ವಿಕಾರವಾದ ಮುಖವುಳ್ಳ ನರಭಕ್ಷಕರು ಇತ್ಯಾದಿ”. ಆ ಪಾತ್ರ ರಂಗಮಂಚಕ್ಕೆ ಬರುವದಿಲ್ಲ. ಆತನ ಉಲ್ಲೇಖ ಬಂದಾಗೆಲ್ಲ ಓದುಗರಿಗೆ ಮತ್ತು ಪ್ರೇಕ್ಷಕರಿಗೆ ಹೇಸಿಕೆ ಹುಟ್ಟುವ ಭಾಷೆಯನ್ನು ಉಪಯೋಗಿಸಲಾಗಿದೆ. ಮೊದಲ ನೋಟಕ್ಕೆ ಕೋನನ್ ಡಾಯ್ಲ ರೇಸಿಸ್ಟ್ ಎನಿಸಿದರೂ ಕಥೆಯನ್ನು ಬರೆದದ್ದು ವಿಕ್ಟೋರಿಯಾ ಮಹಾರಾಣಿ ಬ್ರಿಟಿಷ್ ಸಾಮ್ರಾಜ್ಞಿಯಾಗಿದ್ದ ಕಾಲ. ಆಗಿನ ಸಮಯದಲ್ಲಿ ಭಾರತದ ಬಗ್ಗೆ ಕೆಲ ತಪ್ಪು ತಿಳುವಳಿಕೆಗಳು ಇದ್ದವು; ಸಾಮಾನ್ಯ ಜನರಲ್ಲಿ ಪರಕೀಯರ ಬಗ್ಗೆ ಕುತೂಹಲವಿದ್ದಂತೆ ಕೆಲವರಿಗೆ ಅಸಹಿಷ್ಣುತೆಯೂ ಇತ್ತು. ಕೆಲವು ಅಸತ್ಯಗಳ ಪ್ರಚಾರವಿತ್ತೆಂದೂ ಅದನ್ನೇ ಕೋನನ್ ಡಾಯ್ಲ -ಆತ ಎಂದೂ ಭಾರತಕ್ಕೆ ಬಂದಿರಲಿಲ್ಲ- ಚಿತ್ರಿಸಿದ್ದಾನೆ ಎಂದು ಹೇಳಿ ಅವನು ಅನ್ಯದ್ವೇಶಿಯಾಗಿರಲಿಲ್ಲ (xenophobist or racist) ಎಂದು ನಿರ್ಣಯಕ್ಕೆ ಬಂದವರೇ ಹೆಚ್ಚು. (See McBratney below **) ಅದೇನೆ ಇರಲಿ, ಟೋಂಗಾ ವಿಷಲೇಪಿತ ಬಾಣಗಳನ್ನು ಊದುವ ಅಂದಮಾನಿನ ಬುಡಕಟ್ಟಿನ ಜನಾಂಗದವನೆಂದು ಇದರಲ್ಲಿ ರೂಪಿಸಲಾಗಿದೆ. ಅವನದು ಇದರಲ್ಲಿ ಮುಖ್ಯ ಪಾತ್ರ.

ಸೈನ್ ಆಫ್ ಫೋರ್ ನಾಟಕ ಈ ದೇಶದ ಬೇರೆ ಬೇರೆ ಊರುಗಳಲ್ಲಿ ಪ್ರದರ್ಶಿತವಾಗುತ್ತಿದೆ*, ಆಸ್ಥೆಯಿದ್ದವರು ಹೋಗಿ ನೋಡಬಹುದು. ಟಿಕೀಟು ದರ ಸ್ವಲ್ಪ ದುಬಾರಿಯೆನ್ನ ಬಹುದು; ಸೀನಿಯರ್ ಸಿಟಿಸನ್ ರಿಯಾಯಿತಿಯಿಲ್ಲ ಎಂದು ನನ್ನ ಗೊಣಗು! ಹೋಮ್ಸ್ ಭಕ್ತರು ಮಿಸ್ ಮಾಡಿಕೊಳ್ಳಬೇಡಿ. ನಾನೂ ಆತ ಪದೇ ಪದೇ ಹೇಳುವದನ್ನೇ ತಿರುಚಿ ಹೇಳುವೆ: “Come on, Watson. The game is afoot. Get into your clothes, and go and see!”

(I gratefully acknowledge the permission granted by Adrian McDougall, Artistic Director of Blackeyed Theatre for their consent to reproduce  Victoria Spearing’s sketch and the poster of the play- Author)

*Link: www.blackeyedtheatre.co.uk

**McBratney, J. (2005). RACIAL AND CRIMINAL TYPES: INDIAN ETHNOGRAPHY AND SIR ARTHUR CONAN DOYLE’S THE SIGN OF FOUR. Victorian Literature and Culture, 33(1), 149-167. doi:10.1017/S106015030500077X