ಹಣತೆ ಮತ್ತು ಬೆಳಕು  

ಡಾ ಜಿ ಎಸ್ ಶಿವಪ್ರಸಾದ್

ಈ ವಾರದ ಸಂಚಿಕೆಯಲ್ಲಿ ಹಣತೆ ಮತ್ತು ಬೆಳಕು ಎಂಬ ಬರಹವನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಹಣತೆ ಮತ್ತು ಬೆಳಕು ಪ್ರಪಂಚದ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಪ್ರತಿಮೆ, ಉಪಮೆ ಮತ್ತು ರೂಪಕವಾಗಿ ವಿಜೃಂಭಿಸಿದೆ. ಕನ್ನಡ ಸಾಹಿತ್ಯದಲ್ಲಿ ಶತಮಾನಗಳಿಂದಲೂ ಈ ಬೆಳಕು, ಹಣತೆ ಎಂಬ ಪ್ರತಿಮೆಯನ್ನು (ದೀಪ, ದೀವಿಗೆ, ಪ್ರಣತಿ ಜ್ಯೋತಿ ಇತ್ಯಾದಿ ಹೆಸರಿನಲ್ಲೂ) ಬಳಸಲಾಗಿದೆ. ಈ ಒಂದು ಹಿನ್ನೆಲೆಯಲ್ಲಿ ಈ ಬರಹ ಮೂಡಿಬಂದಿದೆ. ಈಗ ತಾನೇ ದೀಪಾವಳಿ ಮುಗಿದಿದೆ, ನೀವು ನಿಮ್ಮ ಹಣತೆಯನ್ನು ಉಜ್ಜಿ ತೊಳೆದು ಎತ್ತಿಡುತ್ತಿರುವ ಸಂದರ್ಭದಲ್ಲಿ ಈ ಬರಹವನ್ನು ನಿಮ್ಮ ಮುಂದಿಡುತ್ತಿದ್ದೇನೆ. ನೀವು ಎಲ್- ಈ- ಡಿ ಲೈಟುಗಳನ್ನು ಬಳಸಿದ್ದರೂ ಚಿಂತೆಯಲ್ಲ. ಈ ಹಣತೆಗಾಗಿ ಸ್ವಲ್ಪ ಸಮಯ ಮಾಡಿಕೊಳ್ಳಿ. ಈ ಹಣತೆಯಲ್ಲಿ ನೀವು ಬೆಳಕನ್ನು ಕಂಡಿದ್ದರೆ ಹಣತೆ ಹಚ್ಚಿದ ನಾನು ತೃಪ್ತ. ನಿಮ್ಮ ಬೆಳಕನ್ನೂ ಹಂಚಿಕೊಳ್ಳಿ. 

-ಸಂ

ಕನ್ನಡ ಸಾಹಿತ್ಯದಲ್ಲಿ ಹಣತೆ, ಬೆಳಕು ಎಂಬ ವಿಷಯವಸ್ತುವನ್ನು, ಕಲ್ಪನೆಯನ್ನು ನೂರಾರು ವರ್ಷಗಳಿಂದ ಕವಿ ಮತ್ತು ಕಥೆಗಾರರು ಬಳಸುತ್ತ ಬಂದಿದ್ದಾರೆ. ಅನಾದಿಕಾಲದಿಂದಲೂ ಬೆಂಕಿ ಮತ್ತು ಅದು ಹೊರ ಹೊಮ್ಮುವ ಬೆಳಕು ನಮ್ಮ ಆಸಕ್ತಿಯನ್ನು ಕೆರಳಿಸಿದೆ. ಅಲ್ಲಿ ಒಂದು ಆಕರ್ಷಣೆಯಿದೆ, ಸೆಳೆತವಿದೆ. ಅದರ ಬಗ್ಗೆ ಭಯ ಗೌರವಗಳಿವೆ. ಇವು ಮನುಷ್ಯವರ್ಗವಲ್ಲದೆ ಇತರ ಜೀವಿಗಳಲ್ಲೂ ಇದೆ. ‘ಬೆಳಕು’ ಎಂಬ ಶಬ್ದ ಹಲವಾರು ಭಾವನೆಗಳನ್ನು ಉಂಟುಮಾಡುತ್ತದೆ. ಕತ್ತಲು ಮತ್ತು ಬೆಳಕಿನ ನಡುವೆ ಒಂದು ವೈರುಧ್ಯವಿದೆ.  'ಬೆಂಕಿಯಲ್ಲಿ ಅರಳಿದ ಹೂ' ಎನ್ನುವ ಅಭಿವ್ಯಕ್ತಿಯಲ್ಲೇ ಅದೆಷ್ಟೋ ಭಾವನೆಗಳನ್ನು, ವೈರುಧ್ಯವನ್ನು ಕಾಣಬಹುದು. ನಮ್ಮ ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಇವುಗಳ ನಮ್ಮ ಕಾವ್ಯ ಕಲ್ಪನೆಗಳಲ್ಲಿ ವಿಜೃಂಭಿಸಿವೆ. ಪ್ರಪಂಚದ ನಾನಾ ಭಾಷೆಗಳ ಸಾಹಿತ್ಯದಲ್ಲಿ ಹಣತೆ ಅಥವಾ ದೀಪವನ್ನು ಒಂದು ಪ್ರತಿಮೆ, ಉಪಮೆ ಮತ್ತು ರೂಪಕವಾಗಿ ಬಳಸಿಕೊಂಡು ಬೆಳಕಿನ ಬೆಲೆಯನ್ನು ಅದರ ಹಿರಿಮೆಯನ್ನು ಕುರಿತು ಕವಿ ಕಥೆಗಾರರು ಬರೆದಿದ್ದಾರೆ. 

ಹಣತೆ ಬೆಳಕಿನ ಸಂಕೇತ ಅಷ್ಟೇ ಅಲ್ಲ ಅದು ಅರಿವಿನ ಪ್ರತಿಮೆಯಾಗಿಯೇ ಹೆಚ್ಚುನಿಲ್ಲುವುದು. ಆ ಬೆಳಕಿನಲ್ಲಿ ಒಂದು ಶಕ್ತಿ ಇದೆ, ಆದುದರಿಂದಲೇ ಅದನ್ನು ನಾವು ದೇವ, ದೇವತೆಗಳಿಗೆ, ಅಳಿದವರಿಗೆ ನೆನಪಿನ ಗೌರವದ ಸೂಚಕವಾಗಿ ಬೆಳಗುತ್ತೇವೆ. ದೀಪವನ್ನು ಹಚ್ಚುವುದರ ಮೂಲಕ ಕಾರ್ಯಕ್ರಮವನ್ನು ಶುರುಮಾಡುತ್ತೇವೆ. ಆ ಜ್ಯೋತಿಯಲ್ಲಿ ಪವಿತ್ರತೆಯನ್ನು ಕಂಡು ಮಂಗಳಾರತಿಯಾಗಿ ಸ್ವೀಕರಿಸುತ್ತೇವೆ. ಚರ್ಚುಗಳಲ್ಲಿ ಮೇಣದ ಬತ್ತಿಯನ್ನು ಹಚ್ಚುತ್ತೇವೆ. ಕಡ್ಡಿ ಗೀಚಿದ ಕೂಡಲೇ ಶೂನ್ಯದಿಂದ ಹಠಾತ್ತನೆ ಮೂಡುವ ಬೆಂಕಿ, ಜ್ಯೋತಿ, ಬೆಳಕು ನಿಗೂಢವಾದದ್ದು ಮತ್ತು ಅತ್ಯಂತ ವಿಸ್ಮಯಕಾರಿ. ಒಂದು ಹಣತೆಯಿಂದ ಇನ್ನೊಂದು ಹಣತೆಗೆ ಹಬ್ಬುತ್ತಾ ಹೆಚ್ಚಾಗುವ ಬೆಳಕಿನ ಗುಣ ಮೆಚ್ಚುವಂತಹುದು. ಈ ಹಣತೆಯಲ್ಲಿ ನಮ್ಮ ನಿಮ್ಮ ಬದುಕಿನಂತೆ ಕೊಂಡಿಗಳಿರುತ್ತವೆ. ಒಂದು ಇನ್ನೊಂದನ್ನು ಅವಲಂಬಿಸಿರುತ್ತದೆ. ಹಣತೆಯಲ್ಲಿ ತೈಲವಿರಬೇಕು, ಆ ತೈಲದಲ್ಲಿ ಬತ್ತಿ ಕುಳಿತಿರಬೇಕು, ತೈಲವಿರುವವರೆಗೂ ಆ ಬತ್ತಿ ಉರಿಯುವುದು. ವಚನ ಸಾಹಿತ್ಯದಲ್ಲಿ ಅಲ್ಲಮ ಪ್ರಭುಗಳು ತಮ್ಮ ವಚನಗಳಲ್ಲಿ ಅನೇಕ ಉತ್ಕೃಷ್ಟ ಉಪಮೆಗಳನ್ನು ಬಳಸಿದ್ದಾರೆ. ಅವರು ಹಣತೆಯನ್ನು ಪ್ರಣತಿ ಎಂದು ಕರೆದಿದ್ದು, ತೈಲ ಎಣ್ಣೆ ಬತ್ತಿಯ ಸಂಬಂಧವನ್ನು ತಮ್ಮ ಒಂದು ವಚನದಲ್ಲಿ ಬಳಸಿದ್ದಾರೆ, ಅದು ಹೀಗಿದೆ;

ಪ್ರಣತೆಯೂ ಇದೆ ಬತ್ತಿಯೂ ಇದೆ;
ಜ್ಯೋತಿಯು ಬೆಳಗುವೆಡೆ,
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ?

ಎಣ್ಣೆ, ಬತ್ತಿ, ಮತ್ತು ಹಣತೆಯ ಬಗ್ಗೆ ಸಿನಿಮಾ ಸಾಹಿತ್ಯದಲ್ಲಿ ಮೂಡಿಬಂದ ಒಂದೆರಡು ಸಾಲು ಸೊಗಸಾಗಿದೆ. 'ಕನ್ನಡ ಕುಲದೇವಿ ಕಾಪಾಡು ತಾಯಿ' ಎಂದು ಶುರುವಾಗುವ ಸ್ಕೂಲ್ ಮಾಸ್ಟರ್ ಗೀತೆಯಲ್ಲಿ ವಿಜಯ ಭಾಸ್ಕರ್ ಬರೆದ ಸಾಲುಗಳು ಹೀಗೆದೆ;

"ಯಾವ ಎಣ್ಣೆಯಾದರೂ ಬೆಳಗುವುದು ಗುರಿಯೆಂಬ
ತತ್ವವನು ನೀನೆತ್ತಿ ತೋರು ಬಾ ತಾಯೆ"
ನಮ್ಮ ಅನಿವಾಸಿ ಬಳಗದ ಲೇಖಕ ಕವಿ ಡಾ ಕೇಶವ್ ಕುಲಕರ್ಣಿಯವರು ದೀಪಾವಳಿಯಂದು ಹಂಚಿಕೊಂಡ ಕವಿತೆಯೊಂದು ಹೀಗಿದೆ;
ಜಗಮಗಿಸುವ 
ಕಣ್ಣುಕುಕ್ಕುವ
ನೂರಾರು ಬಣ್ಣ ಬದಲಿಸುವ
ಈ ಸಾಲು ಸಾಲು
ಎಲ್-ಈ-ಡಿ ಲೈಟುಗಳ ನಡುವೆ
ನನ್ನ ಹಣತೆ ಯಾರಿಗೂ ಕಾಣುವುದಿಲ್ಲ
ಎಂದು ನನಗೆ ಚೆನ್ನಾಗಿ ಗೊತ್ತು

ಆದರೂ

ತವರಿನಿಂದ ತಂದ ಬತ್ತಿಗೆ
ಊರಿಂದ ತಂದ ತುಪ್ಪ ಹಾಕಿ
ಅಜ್ಜಿಯಿಂದ ಬಳುವಳಿಯಾದ ಹಣತೆಗೆ
ಮಗನಿಂದ ದೀಪ ಹಚ್ಚಿಸಿ
ದೀಪಾವಳಿ ಆಚರಿಸುತ್ತೇನೆ

ಇಲ್ಲಿ ಆಧುನಿಕ ಎಲ್-ಈ-ಡಿ ದೀಪಗಳನ್ನು ಮತ್ತು ಹಳೆಯ ಹಣತೆಯನ್ನು ಜೊತೆಗಿಟ್ಟು ಹಳತು ಮತ್ತು ಹೊಸತರ ನಡುವಿನ ಸಂಬಂಧವನ್ನು ಕವಿ ಕೇಶವ್ ಅನ್ವೇಷಿಸಿದ್ದಾರೆ. ಎಲ್ -ಈ -ಡಿ ಲೈಟುಗಳಿಗೆ ಬಣ್ಣ ಬದಲಿಸುವ ಗುಣವಿದೆ, ಅಲ್ಲಿ ತೋರ್ಪಡಿಕೆ ಇದೆ. ಅಲ್ಲಿ ಬಹಿರಂಗ ಪ್ರದರ್ಶನಕ್ಕೆ ಹೆಚ್ಚು ಅವಕಾಶವಿದೆ. ಇವುಗಳನ್ನು ಹತ್ತಿರ ಹೋಗಿ ಸ್ಪರ್ಶಸಿದಾಗ ಮಾತ್ರ ಇವು ತಣ್ಣಗೆ ಉರಿಯುವ ಲೈಟುಗಳೇ ಹೊರತು ಇಲ್ಲಿ ಬೆಚ್ಚನೆಯ ಅನುಭವವಿಲ್ಲ ಎಂಬುದು ತಿಳಿಯುತ್ತದೆ.  ಎಣ್ಣೆ ಬತ್ತಿ ಇರುವ ಹಳೆ ಹಣತೆಗೆ ಘನತೆ, ಬಾಂಧವ್ಯ, ಪರಂಪರೆ, ಒಂದಿಷ್ಟು ಇತಿಹಾಸ, ಅನುಭವ, ಮತ್ತು ಬಣ್ಣ ಬದಲಿಸಿದಂತೆ ಒಂದೇ ರೀತಿಯ ಬೆಳಕನ್ನು ನೀಡುವ ಸಾಮರ್ಥ್ಯವಿದೆ. ಎಣ್ಣೆ ಇರುವವರೆಗೂ ಶ್ರದ್ಧೆಯಿಂದ ಉರಿಯುವ ಮತ್ತು ಸುಡುವ ಶಕ್ತಿ ಇದೆ. ಅದರ ಹಿಂದೆ ಅನೇಕ ಕಥೆ, ಕವನಗಳಿವೆ. ಈ ಬಣ್ಣ ಬದಲಿಸುವ, ಬೂಟಾಟಿಕೆ ಪ್ರಪಂಚದಲ್ಲಿ ಅಬ್ಬರಗಳ ನಡುವೆ ಹಣತೆ ಕಾಣದಾಗಿದೆ ಎಂಬುದು ವಿಷಾದದ ಸಂಗತಿ. ಈ ಕವನ ನಮ್ಮ ವಾಸ್ತವ ಬದುಕಿಗೆ ಕನ್ನಡಿ ಹಿಡಿದಿದೆ.
ಬಿ ಎಂ ಶ್ರೀ ಅವರು 'ಕರುಣಾಳು ಬಾ ಬೆಳಕೇ' ಎಂಬ ಅನುವಾದಿತ ಕವಿತೆಯಲ್ಲಿ ಮುಸಿಕಿದ ಮಬ್ಬಿನಲ್ಲಿ ಕೈ ಹಿಡಿದು ನಡೆಸುವಂತೆ ಬೆಳಕನ್ನು ಬೇಡಿಕೊಳ್ಳುವ ಪ್ರಾರ್ಥನೆಯಿದೆ. ಈ ಮೂಲ ಕವಿತೆಯನ್ನು ಹತ್ತೊಂಬತ್ತನೇ ಶತಮಾನದ ಆದಿಯಲ್ಲಿ ಇಂಗ್ಲಿಷ್ ಪಾದ್ರಿ ಮತ್ತು ಕವಿ ಜಾನ್ ಹೆನ್ರಿ ನ್ಯೂಮನ್ Lead, Kindly Light ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾನೆ. ಈ ಕವಿತೆಯನ್ನು ಬರೆದ ಹಿನ್ನೆಲೆ ಎಂದರೆ 1833 ಯಲ್ಲಿ ನ್ಯೂ ಮ್ಯಾನ್ ಇಟಲಿಯ ಪಲೆರ್ಮೊ ಎಂಬ ನಗರದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದು ಆತ ಇಂಗ್ಲೆಂಡಿಗೆ ತುರ್ತಾಗಿ ಮರಳಬೇಕಾಗಿರುತ್ತದೆ. ಅವನು ಹಿಂದಿರುಗುವಾಗ ಸಮುದ್ರಮಾರ್ಗದಲ್ಲಿ ಮಬ್ಬು ಕವಿದು ಗಾಳಿ ಸ್ಥಬ್ದವಾಗಿ ಹಡಗು ಚಲಿಸಲಾರದೆ ನಿಂತುಕೊಂಡು ಬಿಡುತ್ತದೆ. ಆ ಒಂದು ಅನಿಶ್ಚಿತ ಸನ್ನಿವೇಶದಲ್ಲಿ ನ್ಯೂಮನ್ ಈ ಕವಿತೆಯನ್ನು ರಚಿಸಿದ್ದಾನೆ. ಅದರ ಅನುವಾದ ಹೀಗಿದೆ; 
ಕರುಣಾಳು ಬಾ ಬೆಳಕೆ ಮುಸುಕಿದಿ ಮಬ್ಬಿನಲಿ 
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯಾ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು

ಹೇಳಿ ನನ್ನಡಿ ಇಡಿಸು ಬಲು ದೂರ ನೋಟವನು
ಕೇಳಿದೊಡನೆಯೆ ಸಾಕು ನನಗೊಂದು ಹೆಜ್ಜೆ
ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು

ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು
ಮುಂದೆಯೂ ಕೈ ಹಿಡಿದು ನಡೆಸದಿಹೆಯಾ?
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯ?
ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡ ದಿವ್ಯ ಮುಖ ನಗುತ
ಈ ಕವಿತೆಯನ್ನು ಮುಂದಕ್ಕೆ ವಿಸ್ತರಿಸಿನೋಡುವುದಾದರೆ, ಈ ಕವಿತೆಯಲ್ಲಿ ನ್ಯೂಮನ್ ತನ್ನ ನಂಬಿಕೆಗಳನ್ನು ಮತ್ತೆ ಅವಲೋಕಿಸುತ್ತಾನೆ. ಕರುಣಾಳು ಬೆಳಕು ಇಲ್ಲಿ ಅದ್ವಿತೀಯವಾದ, ಅಗೋಚರವಾದ  ಶಕ್ತಿ ಅಥವಾ ದೈವತ್ವದ  ಕಲ್ಪನೆ.

ಇದು ಒಂದು ಅಂತರಂಗದ ಅನ್ವೇಷಣೆಯೂ ಆಗಿದೆ. ನನ್ನಲ್ಲಿ ದೂರದೃಷ್ಟಿಯನ್ನಿಡಿಸು ಆದರೆ ನನಗೆ ಈಗ ಬೇಕಾಗಿರುವುದು ಸಣ್ಣ ಹೆಜ್ಜೆ, ನನಗೆ ಅದೇ ಸಾಕು ಎನ್ನುವ ಸಾಲುಗಳು ನಮ್ಮ ಮನುಷ್ಯ ಪ್ರಯತ್ನದ ಇತಿಮಿತಿಗಳನ್ನು ಇಲ್ಲಿ ನೆನಪಿಸುತ್ತದೆ. ದೂರದ ತಾರೆಗಳನ್ನು ಹಿಡಿಯುವುದಕ್ಕೆ ಮುನ್ನ ಕೈಯಲ್ಲಿರುವ ಹಣತೆಗೆ ಬತ್ತಿ, ಎಣ್ಣೆಯನ್ನು ಹುಡುಕುವುದು ಸರಿಯಾದ ವಿಚಾರವೆಂದು ಇನ್ನೊಬ್ಬ ಕವಿ ಹೇಳುತ್ತಾರೆ. ಹಿಂದೆ ನಾನು ನಿನ್ನನ್ನು ಬೇಡದೆ ಹೋದೆ, ಇದುವರೆವಿಗೂ ನನ್ನ ದಾರಿಯನ್ನು ನಾನೇ ಕಂಡುಕೊಳ್ಳಲು ಪ್ರಯತ್ನಿಸಿದೆ ಎನ್ನುವ ಸಾಲುಗಳು ಸ್ವಪ್ರಯತ್ನದ ಅನಿವಾರ್ಯತೆ ಮತ್ತು ಅವಶ್ಯಕತೆಯನ್ನು ಎತ್ತಿಹಿಡಿಯುತ್ತದೆ. ಎಲ್ಲ ಸಮಸ್ಯೆಗಳಿಗೆ ನಂಬಿಕೆ ಅಷ್ಟೇ ಸಾಲದು, ನಮ್ಮ ಬದುಕನ್ನು ನಾವೇ ನಡೆಸಬೇಕು ಎಂಬುದು ನಿಜ. ನಮ್ಮಲ್ಲಿರುವ ಗರ್ವ ಅಹಂಕಾರ ಮೂರ್ಖತನ ನಮ್ಮ ಆತ್ಮವಿಶ್ವಾಸಗಳನ್ನು ಹಿಡಿದಿಟ್ಟಿರುತ್ತವೆ ಆದರೆ ಯಾವುದೋ ಒಂದು ಆತಂಕದ ಘಳಿಗೆಯಲ್ಲಿ ಅದು ಸಾಲದೇ ಹೋಗಬಹುದು. ಇಂತಹ ಒಂದು ಸನ್ನಿವೇಶದಲ್ಲಿ ಆ ಕರುಣಾಳು ಆ ಬೆಳಕು ನಮ್ಮನ್ನು ಕಷ್ಟಗಳೆಂಬ ಅಡವಿ, ಬೆಟ್ಟ ಮತ್ತು ಹೊಳೆಗಳನ್ನು ದಾಟಿಸಿ ಕೈ ಹಿಡಿದು ನಡೆಸಬೇಕಾಗುತ್ತದೆ. ಇರುಳು ಕಳೆದು ಆ ದೈವತ್ವದ ಚಹರೆಗಳು ಕೊನೆಗೂ ಕಾಣಿಸಿಕೊಂಡವು ಎಂಬ ಹಾರೈಕೆಯಲ್ಲಿ ಈ ಕವನ ಮುಕ್ತಾಯಗೊಳ್ಳುತ್ತದೆ. ಈ ಕವಿತೆ ಆಂಗ್ಲ ಭಾಷೆಯ ಸ್ತುತಿ ಗೀತೆಯಾಗಿ ಜನಪ್ರೀಯವಾಗಿದೆ. ಈ ಕವಿತೆಯನ್ನು ಇಂಗ್ಲೆಂಡಿನಲ್ಲಿ ಕಲ್ಲಿದ್ದಲು ಗಣಿ ಕುಸಿದಾಗ ಒಳಗೆ ಸಿಕ್ಕಿ ಹಾಕಿಕೊಂಡಿದ್ದ ಗಣಿ ಕೆಲಸಗಾರರು ಈ ಗೀತೆಯನ್ನು ಹಾಡಿದ್ದರು. ಟೈಟಾನಿಕ್ ಎಂಬ ಹಡಗು ಅಟ್ಲಾಂಟಿಕ್ ಸಮುದ್ರದ ನಡುವೆ ಮುಳುಗಡೆಯಾಗುವ ಸಮಯದಲ್ಲಿ ಇನ್ನೊಂದು ದೊಡ್ಡ ರೆಸ್ಕ್ಯೂ ಹಡಗಿನ ನಿರೀಕ್ಷೆಯಲ್ಲಿ ಚಿಕ್ಕ ರೆಸ್ಕ್ಯೂ ದೋಣಿಯಲ್ಲಿ ನಡುರಾತ್ರಿ ಕಳೆದ ಪಯಣಿಗರು ಈ ಸ್ತುತಿ ಗೀತೆಯನ್ನು ಹಾಡುತ್ತ ಇರುಳನ್ನು ನೂಕಿದರು. ನಮ್ಮ ಭಾರತದ ಹಲವಾರು ಶಾಲಾ ಕಾಲೇಜುಗಳಲ್ಲಿ ಈ ಸ್ತುತಿಗೀತೆಯನ್ನು ದೈನಂದಿಕ ಪ್ರಾರ್ಥನೆಯಾಗಿ ಅಳವಡಿಸಿಕೊಳ್ಳಲಾಗಿದೆ. ಇದು ಕನ್ನಡ ಭಾವಗೀತೆಯಾಗಿಯೂ ಜನಪ್ರೀಯವಾಗಿದೆ.

ಬೆಳಕು ಆರಿದಾಗ ಆವರಿಸುವ ಅಂಧಕಾರ ತಲ್ಲಣವನ್ನು ಉಂಟುಮಾಡುವಂತಹುದು. ಬೆಳಕು ಆರುವುದನ್ನು ಸಾವಿನೊಂದಿಗೆ ರೂಪಕವಾಗಿ ಸಾಹಿತ್ಯದಲ್ಲಿ ಮತ್ತು ಚಿತ್ರರಂಗದಲ್ಲಿ ಬಳಸಲಾಗುತ್ತಿದೆ. ಅದು ಮತ್ತೆ ಆವರಿಸುವ ಅಜ್ಞಾನದ ಸಂಕೇತವೂ ಆಗಿರಬಹುದು. ಖ್ಯಾತ ಕವಿ ಕೆ ಎಸ್ ನರಸಿಂಹಸ್ವಾಮಿ ಅವರ ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು ಎಂಬ ಪ್ರಖ್ಯಾತ ಕವಿತೆಯ ಈ ಹಿನ್ನೆಲೆಯಲ್ಲಿ ಈ ಕೆಳಗಿನ ಸಾಲುಗಳನ್ನು ಇಲ್ಲಿ ಗಮನಿಸುವುದು ಸೂಕ್ತ:

ದೀಪವು ನಿನ್ನದೇ ಗಾಳಿಯು ನಿನ್ನದೆ ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ ಮುಳುಗದಿರಲಿ ಬದುಕು

ಕೆ ಎಸ್ ಎನ್ ಅವರ ಕವಿತೆಗಳ ತುಂಬಾ ಜೀವನೋತ್ಸಾಹ, ಜೀವನ ಪ್ರೀತಿ ತುಂಬಿ ತುಳುಕುತ್ತಿರುವುದನ್ನು ಕಾಣಬಹುದು. ಆ ಹಿನ್ನೆಲೆಯಲ್ಲೂ ಈ ಸಾಲುಗಳನ್ನು ನಾವು ಅರ್ಥೈಸಿಕೊಳ್ಳ ಬಹುದು. ಈ ಕವಿತೆ ಹಲವಾರು ಆಶಯಗಳಿಂದ ತುಂಬಿದೆ.

ಪುರುಷ ಪ್ರಧಾನವಾದ ಸಮಾಜದಲ್ಲಿ, ಶೋಷಣೆಗೆ ಒಳಗಾಗಿ, ಎಲ್ಲರಿಂದ ತಿರಸ್ಕೃತಳಾಗಿ ಪ್ರೀತಿಯನ್ನು ಕಳೆದುಕೊಂಡು ತನ್ನಲ್ಲಿನ ಆತ್ಮವಿಶ್ವಾಸವೆಂಬ ಎದೆಯ ಹಣತೆ ಸಂಪೂರ್ಣವಾಗಿ ಬತ್ತಿಹೋಗಿ ಬದುಕಿನಲ್ಲಿ ಕವಿಯುವ ಅಂಧಕಾರವನ್ನು ನಿಭಾಯಿಸಲಾಗದ ದಾರುಣ ಕಥೆಯಲ್ಲಿ ಲೇಖಕಿ ಬಾನು ಮುಷ್ತಾಕ್ ಹಣತೆ, ಎದೆಯ ಹಣತೆ ಎಂಬ ರೂಪಕವನ್ನು ಬಳಸಿದ್ದಾರೆ. ಅದು ಕಥೆಯ ಶೀರ್ಷಿಕೆಯೂ ಆಗಿದೆ. ಬದಲಾಗುವ ಸನ್ನಿವೇಶದಲ್ಲಿ ಛಲವನ್ನು ಮತ್ತೆ ರೂಢಿಸಿಕೊಂಡು ಎದ್ದುನಿಲ್ಲುವ ನಾಯಕಿಯೊಳಗಿನ ಎದೆಯ ಹಣತೆ ಮತ್ತೆ ಹತ್ತಿ ಉರಿಯಿತೇ ಎನ್ನುವುದನ್ನು ಓದುಗರಿಗೆ ಬಾನು ಬಿಟ್ಟಿರುತ್ತಾರೆ. ಇದೇ ಕೃತಿಯನ್ನು ದೀಪಾ ಬಾಷ್ಟಿ ಅವರು ಇಂಗ್ಲಿಷಿಗೆ ಅನುವಾದಿಸಿ 'ಹಾರ್ಟ್ ಲ್ಯಾಂಪ್' ಎಂಬ ಕೃತಿಗೆ ಬುಕ್ಕರ್ ಪ್ರಶಸ್ತಿ ದೊರಕಿದೆ.

ಕನ್ನಡ ಕವಿ ಸೇಡಿಯಾಪು ಕೃಷ್ಣಭಟ್ಟರು ಒಂದು ಹೊರಗಿನ ಸಾಂಸ್ಕೃತಿಕ ಧಾಳಿಯ ಬಗ್ಗೆ ತಮ್ಮವರನ್ನು ಎಚ್ಚರಿಸಲು ದೀಪವನ್ನು ರೂಪಕವಾಗಿಟ್ಟುಕೊಂಡು ಎಣ್ಣೆ ಹುಯ್ಯುವ ದೀಪಕ್ಕೆ ಎನ್ನುತ್ತಾರೆ. ಭಾರತ ಸ್ವಾತಂತ್ರ್ಯ ಸಂಗ್ರಾಮದ ಸನ್ನಿವೇಶದಲ್ಲಿ ಹಲವಾರು ಕಡೆ ಪಂಜಿನ ಮೆರವಣಿಗೆ ನಡೆದಿರುವುದನ್ನು ನೆನೆಯಬಹುದು. ಅದು ಒಗ್ಗಟಿನ ಸಂಕೇತವಾಗಿಯೂ ನಿಲ್ಲುತ್ತದೆ. ಕೃಷ್ಣ ಭಟ್ಟರ ಕವನದಲ್ಲಿ 'ಎಣ್ಣೆ ಹೊಯ್ಯುವ ದೀಪಕ್ಕೆ' ಎನ್ನುವುದು ಜಾಗೃತಿಯನ್ನು ಮೂಡಿಸುವ ಕರೆಯಾಗಿ ಕೇಳಿ ಬರುತ್ತದೆ. ಹೊರಗಿನ ಸಾಂಸ್ಕೃತಿಕ ಆಕ್ರಮಣವು ಬಿರುಗಾಳಿಯಾಗಿ ಗಿಡ ಮರ ಕೊಂಬೆಗಳನ್ನು ಬಡಿದಾಡಿಸುತ್ತಾ ಬಂದು ಆ ಬಿರುಗಾಳಿಯಲ್ಲಿ ಕಾರ್ಮೋಡಗಳು ಗಿರಿಯ ಅಂಚಿಗೆ ಮೆಟ್ಟಿ ಮಿಂಚಿನಂತೆ ಗಹಗಹಿಸುತ್ತದೆ. ನಮ್ಮಲ್ಲೇ ಇರುವ ಪ್ರೌಢ ಸಾಹಿತ್ಯವನ್ನು (ಹಿರಿಯರ ಸಂಧ್ಯಾವಂದನೆಯ ಸಾಹಿತ್ಯವನ್ನು) ಮುಂದಿನ ಪೀಳಿಗೆ ಕಡೆಗಣಿಸಿ ಮುಗ್ಗುರಿಸುತ್ತಿದೆ ಎನ್ನುವ ಬಗ್ಗೆ ಕವಿಗೆ ವಿಷಾದವಿದೆ. ಈ ಎಲ್ಲಾ ತಲ್ಲಣಗಳ ಹಿನ್ನೆಲೆಯಲ್ಲಿ ನಂದುತ್ತಿರುವ ದೀಪಕ್ಕೆ ಎಣ್ಣೆ ಹುಯ್ಯುವ ಎಂಬ ಆಶಯ ಮನೋಜ್ಞವಾಗಿ ಮೂಡಿಬಂದಿದೆ, ಆ ಕವಿತೆಯ ಸಾಲುಗಳು ಹೀಗಿವೆ;
ಹೊರಗಲ್ಲಿ ಗಿಡಮರಗಳ ಕೊಂಬೆರಂಬೆಗಳ್ 
ಬಡಿದಾಡಿಕೊಂಡು ಭೋರಿಡುತಲಿವೆ
ಪಡುಬಾನ ಕಾರ್ಮುಗಿಲು ಅರಿಲೊಂದೊಂದನೇ ಮೆಟ್ಟಿ
ಕಾಡುಮಿಂಚಿನಲಿ ಗಹ ಗಹಗಹಿಸುತಿದೆ
ಎಣ್ಣೆ ಹುಯ್ಯುವ ದೀಪಕ್ಕೆ!

ಹಸಿದ ಮಕ್ಕಳು ಬಟ್ಟಲೆನ್ನದು
ತನ್ನದೆಂದೆಳದಾಡಿಕೊಂಡು ಗುದ್ದಾಡುತ್ತಿವೆ
ಹಿರಿಯರ ಸಂಧ್ಯಾವಂದನೆಯ ಸಾಹಿತ್ಯವ
ಕಡಗಾಲೊಳೆಡವಿ ಚೆಲ್ಲಾಡುತ್ತಿವೆ
ಎಣ್ಣೆ ಹುಯ್ಯುವ ದೀಪಕ್ಕೆ!
ಜಿ ಎಸ್ ಎಸ್ ಅವರ ‘ನನ್ನ ಹಣತೆ’ ಕನ್ನಡ ಕಾವ್ಯಲೋಕದಲ್ಲಿನ ಗಮನಾರ್ಹವಾದ ಕವಿತೆ. ಅದನ್ನು ಪ್ರಾಜ್ಞರು ಅನೇಕ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಜಿ ಎಸ್ ಎಸ್ ಅವರ ಬಹುಪಾಲು ಕವಿತೆಗಳು ಸರಳವಾಗಿದ್ದು ಸಂಗೀತಕ್ಕೂ ಒದಗಿಕೊಂಡು ಜನಪ್ರೀಯ ಭಾವಗೀತೆಗಳಾಗಿವೆ. ಆದರೆ ‘ನನ್ನ ಹಣತೆ’ ಎಂಬುದು ಪ್ರಸಿದ್ಧ ಕವಿತೆಯಾಗಿಯೇ ಉಳಿದು ಸಾಹಿತ್ಯಾಸಕ್ತರ ಮೆಚ್ಚುಗೆಯನ್ನು ಪಡೆದುಕೊಂಡು ದೀಪಾವಳಿಯ ಆಸುಪಾಸಿನಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಂಕೀರ್ಣವಾಗಿರುವ ಕವಿತೆಯ ಹಲವಾರು ಸಾಲುಗಳಲ್ಲಿ ದೀಪಾವಳಿಯ, ಪಟಾಕಿಯ ಉಲ್ಲೇಖವಿದ್ದರೂ ಅದು ದೀಪಾವಳಿಯನ್ನು ಕುರಿತಾದ ಕವನವಲ್ಲ! ದೀಪಾವಳಿ ಹಬ್ಬವನ್ನು ಮತ್ತು ಅಲ್ಲಿಯ ಸಂಭ್ರಮಗಳನ್ನು ಕುರಿತಾದ ಬೇರೆ ಕವಿತೆಗಳನ್ನು ಜಿ ಎಸ್ ಎಸ್ ರಚಿಸಿದ್ದಾರೆ.  ಆದುದರಿಂದ ಈ ಕವನವನ್ನು ಮೊದಲು ಗಮನಿಸಿ ನಂತರ ಅದರ ಬಗ್ಗೆ ಚರ್ಚೆ ಮಾಡೋಣ. 
ನನ್ನ ಹಣತೆ 

ಹಣತೆ ಹಚ್ಚುತ್ತೇನೆ ನಾನೂ
ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ

ಹಣತೆ ಹಚ್ಚುತ್ತೇನೆ ನಾನೂ;
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲಿಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
ಶತಮಾನದಿಂದಲೂ.
ನಡು ನಡುವೆ ಒಂದಿಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮುಡಿಸಿದ್ದೇವೆ,
ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ
ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ
ಸುಟ್ಟಿದ್ದೇವೆ.
"ತಮಸೋ ಮಾ ಜ್ಯೋತಿರ್ಗಮಯ" ಎನ್ನುತ್ತಾ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.

ನನಗೂ ಗೊತ್ತು ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ
ಎಷ್ಟೊಂದು ಬೆಳಕನ್ನು ಇದು ಉಟ್ಟರೂ ತೊಟ್ಟರೂ
ತಿಂದರೂ, ಕುಡಿದರೂ, ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.

ಆದರೂ ಹಣತೆ ಹಚ್ಚುತ್ತೇನೆ ನಾನೂ;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ ಮತ್ತೆ
ನಾನು ಯಾರೋ.
ಈ ಕವಿತೆಯಲ್ಲಿ ಎರಡು ಮೂರು ವಿಚಾರಗಳು ಅಡಗಿವೆ. ಇಲ್ಲಿ ಕತ್ತಲೆ, ಅಜ್ಞಾನದ ಸಂಕೇತ. ಹಣತೆ ಮತ್ತು ಬೆಳಕು, ಜ್ಞಾನದ ಸಂಕೇತ. ಇಲ್ಲಿ ವಾಸ್ತವ ಪ್ರಜ್ಞೆ, ಜೀವನ ಪ್ರೀತಿ ಮತ್ತು ವ್ಯವಹಾರಿಕವಾದ ಚಿಂತನೆಗಳಿವೆ. ಒಟ್ಟಾರೆ ಮನುಷ್ಯ ಅನಾದಿಕಾಲದಿಂದಲೂ ಅಜ್ಞಾನದ ಜೊತೆ ಹೋರಾಡಿಕೊಂಡು, ಹಣತೆಯನ್ನು ಹಚ್ಚುತ್ತಾ ಬಂದಿದ್ದಾನೆ. ಈ ಹೋರಾಟವನ್ನು ಜಯಿಸಲು ಸಾಧ್ಯವೇ ಎನ್ನುವುದು ಮುಖ್ಯವಾದ ವಿಚಾರ. ಕವಿ ತಾನೂ ಹಣತೆ ಹಚ್ಚುವ, ಅಜ್ಞಾನವನ್ನು ತೊಲಗಿಸುವ ಪ್ರಯತ್ನವನ್ನು ಮಾಡುತ್ತಾರೆ. "ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ" ಎನ್ನುವ ಮೂಲಕ ಮನುಷ್ಯ ಪ್ರಯತ್ನಕ್ಕೆ ಮಿತಿ ಇದೆ ಅನ್ನುವುದನ್ನು ಕವಿ ಇಲ್ಲಿ ಒಪ್ಪಿಕೊಳ್ಳುತ್ತಾರೆ. ಹಿಂದೆ ಈ ಪ್ರಯತ್ನವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದ್ದು (ದೀಪಾವಳಿಯ ಹಡಗುಗಳು ಮುಳುಗಿದ್ದು) ಅದೂ ಕೂಡ ವಿಫಲವಾಗಿದೆ ಎನ್ನುವುದನ್ನು ನೆನಪಿಸುತ್ತಾರೆ.  ಮುಂದಿನ ಪಂಕ್ತಿಯಲ್ಲಿ ಕವಿ, ಮನುಷ್ಯ ಈ ಅಜ್ಞಾನವನ್ನು ತೊಲಗಿಸಲು ಇಲ್ಲಿಯವರೆಗೆ ಏನೆಲ್ಲ ಪ್ರಯತ್ನಗಳನ್ನು ಕೈಗೊಂಡಿದ್ದಾನೆ ಎಂಬ ಪ್ರಶ್ನೆಯನ್ನು ಓದುಗರ ಮುಂದೆ ನಿಲ್ಲಿಸಿ, ನಾವು ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನ ಇವುಗಳನ್ನೆಲ್ಲಾ ಕೆದಕಿದ್ದೇವೆ, ಉತ್ತರವಂತೂ ಸಿಕ್ಕಿಲ್ಲ ಬದಲಾಗಿ 'ಬರೀ ಬೂದಿಯನ್ನೇ ಕಂಡಿದ್ದೇವೆ' ಎನ್ನುತ್ತಾರೆ. ಇಲ್ಲಿ ಕವಿ ಬದುಕಿನ ಒಳಾರ್ಥ, ಜೀವನದ ಮಹದೋದ್ದೇಶ ಇವುಗಳನ್ನು ಕುರಿತು ಚಿಂತಿಸುತ್ತಿರಬಹುದು. 'ಕತ್ತಲಿಗೆ ಕೊನೆಯಿಲ್ಲದ ಬಾಯಾರಿಕೆ' ಎಂದು ಹೇಳುವುದರ ಮೂಲಕ ನಮ್ಮ ಕಲ್ಪನೆಗೂ ಮೀರಿದ ಕತ್ತಲೊಂದಿದೆ ಅದು ಸರ್ವವ್ಯಾಪಿ 'ತಿಂದರೂ ಕುಡಿದರೂ, ಉಟ್ಟರೂ, ತೊಟ್ಟರು ಇದಕ್ಕೆ ಇನ್ನೂ ಬೇಕು, ಇನ್ನು ಬೇಕು ಎನ್ನುವ ಬಯಕೆ' ಎಂದು ಕವಿ ಹೇಳುತ್ತಿದ್ದಾರೆ. ಇಲ್ಲಿ, ವೈಜ್ಞಾನಿಕ ಪರಿಭಾಷೆಯಲ್ಲಿ ನೋಡುವುದಾದರೆ ಕಾಸ್ಮಿಕ್ ಬ್ಲಾಕ್ ಹೋಲ್ ಇಮೇಜ್ ನಮ್ಮ ಮುಂದೆ ಬಂದು ನಿಲ್ಲುತ್ತದೆ.  ಹೀಗಿದ್ದರೂ ಕವಿ ಹಣತೆ ಏಕೆ ಹಚ್ಚಬೇಕು? ಕವಿ ಹೇಳುತ್ತಾರೆ; "ಆದರೂ ಹಣತೆ ಹಚ್ಚುತ್ತೇನೆ ನಾನು; ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ"ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ" ಕವಿ ಇಲ್ಲಿ ವಾಸ್ತವ ಪ್ರಜ್ಞೆಯ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ನಮ್ಮ ಬದುಕಿನಲಿ ಇರುವಷ್ಟು ಹೊತ್ತು ನಾನು-ನೀನು (ನಾವು-ನೀವು) ಮುಖ ಕೆಡಸಿಕೊಳ್ಳದೆ, ಒಬ್ಬರು ಇನ್ನೊಬ್ಬರನ್ನು ಮುಖ ಮುಖಿಯಾಗಿ ನೋಡುವಷ್ಟು ಪ್ರೀತಿ ವಿಶ್ವಾಸಗಳನ್ನು, ಸ್ನೇಹ ಸಂಬಂಧಗಳನ್ನು ಉಳಿಸಿಕೊಳ್ಳೋಣ. ಏಕೆಂದರೆ ಅಳಿದ ಮೇಲೆ (ಹಣತೆ ಆರಿದ ಮೇಲೆ) ನೀನು ಯಾರೂ ಮತ್ತು ನಾನು ಯಾರೋ! ಮುಂದಕ್ಕೆ ಇನ್ನು ಯಾರೋ ಬಂದು ಅವರೂ ಹಣತೆ ಹಚ್ಚುತ್ತಾರೆ. ಹೀಗೆ ಮನುಷ್ಯ ಪ್ರಯತ್ನ ನಿರಂತರವಾಗಿ ಸಾಗುತ್ತದೆ.  

ಇದು 'ನನ್ನ ಹಣತೆಯ'ಯನ್ನು ಕುರಿತಾದ ನನ್ನ ಒಂದು ವಿಶ್ಲೇಷಣೆ. ಜಿ ಎಸ್ ಎಸ್ ಅವರ ಕವಿತೆಯ ವಿಶೇಷವೆಂದರೆ ಅದು ಹಲವಾರು ದೃಷ್ಟಿ ಕೋನಗಳನ್ನು ತೆರೆದಿಡುತ್ತದೆ. ಆದುದರಿಂದ ಓದುಗರು ತಮ್ಮ ಕಲ್ಪನೆಗೆ ಒದಗುವ ವಿಶ್ಲೇಷಣೆಯನ್ನೂ ಕಟ್ಟಿಕೊಳ್ಳಬಹುದು.

ಕೊನೆಯದಾಗಿ 'ದೀಪಾವಳಿಯ ಹಣತೆ' ಎಂಬ ನನ್ನ ಕವನದೊಂದಿಗೆ ಈ ಬರಹವನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಅದೆಷ್ಟೋ ವೈಜ್ಞಾನಿಕ ಸತ್ಯಗಳು ಸಾಧು ಸಂತರು ಮಹಾಪುರುಷರು ಬಿಟ್ಟುಹೋದ ಬೆಳಕಿನ ರೂಪಕವಾಗಿ ನಿಂತಿರುವುದು ಅಚ್ಚರಿಯನ್ನು ಮೂಡಿಸುತ್ತದೆ. ಅದೆಷ್ಟೋ ವಿಚಾರಗಳು ಮೇಲ್ನೋಟಕ್ಕೆ ಭ್ರಮೆಯಾದರೂ ಅದು ನಿಖರವಾದ ಸತ್ಯ. ಎಲ್ಲರೊಳಗೊಂದು ದೀಪ ಉರಿಯುತ್ತಲೇ ಇರುತ್ತದೆ. ಆದರೆ ಆ ಅಂತರಂಗದ ಬೆಳಕನ್ನು ಕಾಣಲು ವಿಶೇಷ ಒಳನೋಟಗಳು ಬೇಕು. ಆ ಬೆಳಕನ್ನು ಇತರರೊಡನೆ ಹಂಚಿಕೊಳ್ಳಬೇಕು ಎನ್ನುವುದು ಈ ಕವಿತೆಯ ಮತ್ತು ಈ ಬರಹದ ಒಟ್ಟಾರೆ ಆಶಯ.
ದೀಪಾವಳಿಯ ಹಣತೆ  

ಕಾರ್ತಿಕದ ಕಗ್ಗತ್ತಲಲ್ಲಿ
ಮುಗಿಲ ತುಂಬೆಲ್ಲಾ
ಮಿಣಕುವ ಬೆಳ್ಳಿ ನಕ್ಷತ್ರಗಳು
ಅಲ್ಲೊಂದು ಕಣ್ತಣಿಸುವ
ನೀರವ ದೀಪಾವಳಿ

ವಿಜ್ಞಾನಿಗಳು ಹೇಳುತ್ತಾರೆ;
“ಆ ನಕ್ಷತ್ರಗಳು ಉರಿದು ಬೂದಿಯಾಗಿವೆ
ನೀವೀಗ ಕಾಣುತ್ತಿರುವುದು
ಅದು ಹೊಮ್ಮಿಸಿದ ಬೆಳಕನ್ನಷ್ಟೆ"
ದೀಪ ಉರಿದಿದ್ದು ಅಂದು
ಬೆಳಕು ಕಾಣುತ್ತಿರುವುದು ಇಂದು!
ಇದು ಭ್ರಮೆಯಲ್ಲ, ನಿಖರ ಸತ್ಯ

ಕವಿಗಳು, ವಿಜ್ಞಾನಿಗಳು, ಸಂತರು
ಹಣತೆಯನ್ನು ಹಚ್ಚಿದ್ದಾರೆ
ಆ ಹಣತೆ ಆರಿಹೋಗಿದ್ದರೂ
ಅದರ ಬೆಳಕು ಇಂದಿಗೂ ಕಾಣುತ್ತಿದೆ,
ನಕ್ಷತ್ರದ ಬೆಳಕಿನಂತೆ.
ಇದು ಭ್ರಮೆಯಲ್ಲ, ನಿಖರ ಸತ್ಯ

ಜಡಗಟ್ಟಿದ ಚಿತ್ತದಲ್ಲಿ
ಅಂಧಕಾರದ ಆಳದಲ್ಲಿ
ನಾವು ಹಚ್ಚಿಕೊಂಡ ಒಳಗಿನ ದೀಪ
ನಮಗೇ ಕಾಣಿಸಲು ಸಮಯಬೇಕು

ನಾವು ಹಚ್ಚುವ ದೀಪ ನಮಗಷ್ಟೇ ಅಲ್ಲ,
ಮುಂದೊಮ್ಮೆ ಇತರರಿಗೂ
ಕಾಣಿಸಬಹುದೆಂಬ ಭರವಸೆಯಿಂದ
ಬನ್ನಿ ಹಚ್ಚೋಣ ದೀಪಾವಳಿಯ ಹಣತೆ


ಜಿ ಎಸ್ ಎಸ್ ಅವರ 'ನನ್ನ ಹಣತೆಯ'ಕೆಲವು ಆಯ್ದ ಸಾಲುಗಳ ಭಾವಾನುವಾದವನ್ನು ಕವಿ ಡಾ ಶ್ರೀವತ್ಸ ದೇಸಾಯಿ ಅವರು ಕೈಗೊಂಡಿದ್ದು ಅದು ಹೀಗಿದೆ;
I know, this darkness has such endless thirst
That no one can quench!
No matter what amount of light it is draped in or is fed or it devoured
Still wants more and more!
But yet, I light a clay lamp, Me too,
Not that I will transcend the darkness,
As long as we are together
I can see your face
And so can you mine, that is the sole desire
After the lamp breathes its last
We remain as just strangers
Unknown to each other!
ಫೋಟೋ ಕೃಪೆ:  ಡಾ ಶ್ರೀವತ್ಸ  ದೇಸಾಯಿ 

ನೀಲಿಆರ್ಕಿಡ್ (ಸಣ್ಣಕಥೆ): ಡಾ ಜಿ ಎಸ್ ಪ್ರಸಾದ್

ಆತ್ಮೀಯ ಓದುಗರೇ 
ಈ ವಾರದ ಅನಿವಾಸಿ ಸಂಚಿಕೆಯಲ್ಲಿ ನನ್ನ ಚೊಚ್ಚಲ ಸಣ್ಣ ಕಥೆ 'ನೀಲಿ ಆರ್ಕಿಡ' ನಿಮ್ಮ ಮುಂದಿಡುತ್ತಿದ್ದೇನೆ. ಇಲ್ಲಿಯವರೆಗೆ ಕವನ, ಬಿಡಿಬರಹ, ಪ್ರವಾಸ ಕಥನಗಳನ್ನು ಬರೆಯುತ್ತಿದ್ದ ನನಗೆ ಎಲ್ಲಿಂದಲೋ ಸಣ್ಣ ಕಥೆಯನ್ನು ಬರೆಯಲು ಪ್ರೇರಣೆ ದೊರೆಯಿತು. ಹಾಗೆ ನೋಡಿದರೆ ಕಥೆ ಬರೆಯುವುದು ನನಗೆ ಹೊಸತೇನಲ್ಲ. 'ಪಯಣ' ಎಂಬ ಕಿರು ಕಾದಂಬರಿಯನ್ನು ಬರೆದು ಕೈತೊಳೆದು ಕೂತ್ತಿದ್ದ ನನಗೆ ಇದ್ದಕ್ಕಿಂದಂತೆ ಸಣ್ಣ ಕಥೆ ಬರೆಯುವ ಸ್ಫೂರ್ತಿ ಮೂಡಿತು. ಮೊನ್ನೆ ಊಟಕ್ಕೆ ಬಂದ ಅತಿಥಿಯೊಬ್ಬರು ಒಂದು ನೀಲಿ ಆರ್ಕಿಡ್ ಗಿಡವನ್ನು ವಿಶ್ವಾಸದಲ್ಲಿ ಕೊಟ್ಟು ಹೋದರು. ಈ ಸುಂದರವಾದ ಹೂಗಳು ನನ್ನ ಮೇಲೆ ಕಥೆ ಬರಿ ಎಂದು ಹಠ ಹಿಡಿದಿದ್ದವು. ಅವುಗಳ ಆಸೆಯನ್ನು ಪೂರೈಸಿದೆ. ನನ್ನ ಕಥೆ ಬರೆಯುವ ಆಸಕ್ತಿ ಇಲ್ಲಿಗೆ ಮುಗಿಯುವುದೋ ಅಥವಾ ಮುಂದಕ್ಕೆ ಒಂದು ಸಣ್ಣ ಕಥೆಗಳ ಸಂಕಲನ ಮೂಡಿ ಬರುವುದೋ ನನಗೆ ಗೊತ್ತಿಲ್ಲ. ನಿಮ್ಮ ಉತ್ತೇಜನ ಮತ್ತು ಸಮಯ ಇದನ್ನು ನಿರ್ಧರಿಸಬಹುದು. ಸಣ್ಣ ಕಥೆ ಎಷ್ಟು ಉದ್ದವಿರಬೇಕು ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. ಕಥೆ ಹೇಳುವಷ್ಟೂ ಉದ್ದ ಇದ್ದರೆ ಸಾಕು ಎನ್ನ ಬಹುದು. ಕಾದಂಬರಿಗೆ ಹೋಲಿಸಿದರೆ ಸಣ್ಣ ಕಥೆಯಲ್ಲಿ ಸನ್ನಿವೇಶಕ್ಕೆ ಹೆಚ್ಚು ಪ್ರಾಮುಖ್ಯತೆ, ಅಲ್ಲಿ ಪಾತ್ರ ಪೋಷಣೆಗೆ ಅಷ್ಟು ಅವಕಾಶವಿಲ್ಲ ಎಂಬುದು ನನ್ನ ಅನಿಸಿಕೆ. ಕಥೆ ಎಂಬುದು ಓದಿನ ಅನುಭವದ ಜೊತೆ ಹಲವಾರು ಚಿಂತನೆಗೆ ಅನುವುಮಾಡಿಕೊಟ್ಟಲ್ಲಿ ಮತ್ತು ಸಾಮಾಜಿಕ ಅರಿವನ್ನು ಉಂಟುಮಾಡಿದ್ದಲ್ಲಿ ಅದು ಸಾರ್ಥಕ. ಈ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕಥೆಯನ್ನು ಹೆಣೆದಿದ್ದೇನೆ. ನಾನು ವೃತ್ತಿಯಲ್ಲಿ ವೈದ್ಯನಾಗಿರುವುದರಿಂದ ನನ್ನ ಕಥೆ ವೈದ್ಯಕೀಯ ವೃತ್ತಿಯ ಆಸುಪಾಸಿನಲ್ಲಿ ಸುಳಿದಿದೆ. ಮುಂದಕ್ಕೆ ನನ್ನ ಈ ವೃತ್ತಿಯ ಕವಚವನ್ನು ಹೊರತೆಗೆದಿಟ್ಟು ಪ್ರಜ್ಞಾಪೂರ್ವಕವಾಗಿ ಇತರ ಸಾಮಾಜಿಕ ಕಥಾವಸ್ತುಗಳನ್ನು ಪರಿಗಣಿಸಬೇಕೆಂಬ ಹಂಬಲವಿದೆ. ದಯವಿಟ್ಟು ಈ ಕಥೆಯನ್ನು ಓದಿ, ಕಥೆಯ ಹಂದರವನ್ನು ಬಿಟ್ಟುಕೊಡದೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

ಸಂ
ರೆಸಿಡೆನ್ಸಿ ರಸ್ತೆಯ ಮಾನ್ವಿತಾ ಕಾಂಪ್ಲೆಕ್ಸ್ ಒಳಗಿನ ಖಾಸಗಿ ಮೆಂಟಲ್ ಹೆಲ್ತ್ ಕ್ಲಿನಿಕ್ ನಲ್ಲಿ ತನ್ನ ಮೊಬೈಲ್ ಫೋನನ್ನು ತೀಡುತ್ತಾ ಚಿಂತಾಕ್ರಾಂತನಾಗಿ ಕುಳಿತ್ತಿದ್ದ ಸಚ್ಚಿನ್ ಗೆ 'ಮಿಸ್ಟರ್ ಸಚ್ಚಿನ್, ಡಾ ಮೋಹನ್ ಅವರು ನಿಮ್ಮನ್ನು ನೋಡಲು ರೆಡಿಯಿದ್ದಾರೆ, ನೀವು ಅವರ ಕೋಣೆಯೊಳಗೆ ಹೋಗಬಹುದು’ ಎಂದಳು ರೆಸೆಪ್ಷನಿಸ್ಟ್ ಜಯ. 

ಸಚಿನ್ ತನ್ನ ಮೊಬೈಲ್ ಫೋನನ್ನು ಆಫ್ ಮಾಡಿ, ಆತುರದಿಂದ ಮೋಹನ್ ಅವರ ಕೋಣೆಯೊಳಗೆ ಧಾವಿಸಿ 'ಹಲೋ ಡಾಕ್ಟರ್ ನಾನು ಸಚ್ಚಿನ್, ನೀವು ಹೆಗ್ಗಿದ್ದೀರಾ ಎಂದ.

' ನಾನು ಚೆನ್ನಾಗಿದ್ದೇನೆ ಸಚ್ಚಿನ್, ನೀವು ಹೇಗಿದ್ದೀರಾ ಹೇಳಿ’ ಎಂದರು ಮೋಹನ್.

‘ನಾಟ್ ವೆರಿ ವೆಲ್ ಡಾಕ್ಟರ್, ಕಳೆದ ಕೆಲವು ವಾರಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ, ನಿದ್ದೆ ಬರುತ್ತಿಲ್ಲ, ಮಧ್ಯ ಕೆಟ್ಟ ಕನಸುಗಳು ಬೇರೆ. ಈ ನಡುವೆ ಅಪಿಟೈಟ್ ಕಡಿಮೆ, ಒಂದು ರೀತಿ ನಿರುತ್ಸಾಹ ಅದನ್ನು ಜಿಗುಪ್ಸೆ ಎಂತಲೂ ಕರೆಯಬಹುದು. ಇತ್ತೀಚಿಗೆ ವಿನಾಕಾರಣ ಬಹಳ ಬೇಗ ಮೂಡ್ ಬದಲಾಗುತ್ತಿದೆ, ಎಮೋಷನಲ್ ಆಗುತ್ತಿದ್ದೇನೆ’.

ಹೀಗೆ ಶುರುವಾದ ಧೀರ್ಘ ಸಂವಾದದಲ್ಲಿ ಡಾಕ್ಟರ್ ಮೋಹನ್, ಸಚ್ಚಿನ್ನಿನ ವೈಯುಕ್ತಿಕ ಹಿನ್ನೆಲೆಗಳನ್ನು, ಪರಿವಾರದ ಸಂಬಂಧಗಳನ್ನು, ವೃತ್ತಿ ಜೀವನವನ್ನು ಕೆದಕಿ ಬಹಳಷ್ಟು ಹಿನ್ನೆಲೆ ಮಾಹಿತಿಗಳನ್ನು ಸಂಗ್ರಹಿಸಿದರು. ಸಚ್ಚಿನ್ ತಾನು ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಎಂದು, ಅವನು ಬೆಂಗಳೂರಿನ ಡಿಲಾಯ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ. ಹೆಂಡತಿಯೊಡನೆ ಸಚ್ಚಿನ್ ವಿಚ್ಛೇದನವಾಗಿ ಎರಡು ವರ್ಷಗಳು ಕಳೆದಿದ್ದವು. ಕೋರ್ಟು ಅವರಿಗಿದ್ದ ಹತ್ತು ವರ್ಷದ ಒಬ್ಬಳೇ ಮಗಳನ್ನು ತಾಯಿಯ ಆರೈಕೆಯಲ್ಲಿ ಇಡುವುದು ಸೂಕ್ತವೆಂದು ನಿರ್ಧರಿಸಿತ್ತು. ಸಚ್ಚಿನ್ ತಾಯಿಗೆ ಕ್ಯಾನ್ಸರ್ ಆಗಿ ತೀರಿಕೊಂಡಿದ್ದು ಸಚ್ಚಿನ್ ತಂದೆ ರಾಮಚಂದ್ರ ಶಾನಭಾಗ್ ಅವರು ವಿಲ್ಸನ್ ಗಾರ್ಡನ್ ಅಪಾರ್ಟ್ಮೆಂಟ್ ಒಂದರಲ್ಲಿ ಒಬ್ಬರೇ ವಾಸವಾಗಿದ್ದರು, ಅವರಿಗೆ ಹಲವಾರು ಅರೋಗ್ಯ ಸಮಸ್ಯೆಗಳಿದ್ದವು. ಡಾಕ್ಟರ್ ಮೋಹನ್ ಸಾಕಷ್ಟು ವಿಚಾರಗಳನ್ನು ಕೆದಕಿದ ಮೇಲೆ ನೋಡಿ ಸಚ್ಚಿನ್ ‘ನನ್ನ ಒಂದು ಅಭಿಪ್ರಾಯದಲ್ಲಿ ನಿಮಗೆ ಡಿಪ್ರೆಶನ್ ಎಂದು ಗುರುತಿಸಬಹುದಾದ ಮಾನಸಿಕ ಅಸ್ವಸ್ಥತೆ ಇರುವ ಸಾಧ್ಯತೆ ಹೆಚ್ಚು. ಇದನ್ನು ಕೆಲವು ಮೆಡಿಸಿನ್ ಮತ್ತು ಕೌನ್ಸಿಲಿಂಗ್ ಮೂಲಕ ಹತೋಟಿಯಲ್ಲಿ ಇಡಬಹುದು. ಇದು ಹಲವಾರು ವರ್ಷಗಳಿಂದ ಸುಪ್ತವಾಗಿದ್ದು ಪರಿಸರದ ಒತ್ತಡದಿಂದ ಬಹಿರಂಗಗೊಂಡಿರಬಹುದು. ನೀವು ನಮ್ಮಲ್ಲಿ ಶೀಲಾ ಎಂಬ ಕೌನ್ಸಿಲರ್ ಇದ್ದಾರೆ, ಅವರನ್ನು ಮುಂದಕ್ಕೆ ಕಾಣಬಹುದು. ಸಧ್ಯಕ್ಕೆ ಮೆಡಿಸಿನ್ಗಳನ್ನು ಉಪಯೋಗಿಸಿ ಎರಡುವಾರದ ನಂತರ ಮತ್ತೆ ಭೇಟಿಯಾಗೋಣ. ನನ್ನ ಕನ್ಸಲ್ಟೇಶನ್ ಸಮ್ಮರಿ ದಾಖಲೆಯನ್ನು ನಿಮಗೆ ಈ ಮೇಲ್ ಮಾಡಲೇ' ಎಂದಾಗ 'ಬೇಡ ಡಾಕ್ಟರ್ ನನ್ನ ವಿಳಾಸಕ್ಕೆ ಪೋಸ್ಟ್ ಮಾಡಿ'. ಮತ್ತೆ ಇನ್ನೊಂದು ವಿಚಾರ ಡಾಕ್ಟರ್ ‘ನನ್ನ ಈ ಅಸ್ವಸ್ಥತೆ ನನ್ನ ಭಾವಿ ಹೆಂಡತಿಗೆ, ಕೋರ್ಟಿಗೆ, ಅಥವಾ ಅವಳ ಕುಟುಂಬಕ್ಕೆ ತಿಳಿಯಬಾರದು’ ಎಂದ. ‘ಅಫ್ ಕೋರ್ಸ್ ನನ್ನ ರೋಗಿಗಳ ಆರೋಗ್ಯದ ಬಗ್ಗೆ ನಾನು ಗಾಸಿಪ್ ಮಾಡುವುದಿಲ್ಲ. ಅದರ ಬಗ್ಗೆ ಆಶ್ವಾಸನೆ ಇರಲಿ’ ಎಂದರು ಮೋಹನ್. ಸಚ್ಚಿನ್ ಡಾಕ್ಟರಿಗೆ ಧನ್ಯವಾದಗಳನ್ನು ತಿಳಿಸಿ ನಿರ್ಗಮಿಸಿದ.

ಡಾ ಮೋಹನ್ ಅವರು ಖ್ಯಾತ ಮನೋ ವೈದ್ಯರು. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಹಲವಾರು ವರುಷ ತಜ್ಞರಾಗಿ, ಪ್ರಾಧ್ಯಾಪಕರಾಗಿ ಐವತ್ತರ ಅಂಚಿನಲ್ಲಿ ಸ್ವಯಿಚ್ಛೆಯಿಂದ ನಿವೃತ್ತಿಯನ್ನು ಪಡೆದು ಖಾಸಗಿ ಪ್ರಾಕ್ಟೀಸಿನಲ್ಲಿ ತೊಡಗಿಕೊಂಡಿದ್ದರು. ಅವರ ಪತ್ನಿ ಡಾ ಶೀಲಾರವರು ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿದ್ದು ಮೋಹನ್ ಅವರ ಕ್ಲಿನಿಕ್ಕಿನಲ್ಲಿ ಮನೋರೋಗಿಗಳಿಗೆ ಕೌನ್ಸೆಲಿಂಗ್ ಥೆರಪಿ ನೀಡುತ್ತಿದ್ದರು. ಮೋಹನ್ ಮತ್ತು ಶೀಲಾ ದಂಪತಿಗಳಿಗೆ ಇದ್ದ ಒಬ್ಬನೇ ಪುತ್ರ ಡಾ ಶ್ರೇಯಸ್. ಅವನು ಬೆಂಗಳೂರಿನ ಕೆಂಪೇಗೌಡ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಅವನ ಕೆಲವು ಹತ್ತಿರದ ಗೆಳೆಯರು ಇಂಗ್ಲೆಂಡಿನ ರಾಷ್ಟ್ರೀಯ ಅರೋಗ್ಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಶ್ರೇಯಸ್ಸಿಗೆ ಇಂಗ್ಲೆಂಡಿಗೆ ಬರುವಂತೆ ಒತ್ತಾಯಿಸಿ ಅವನಿಗೆ ಎಲ್ಲ ರೀತಿಯ ನೆರವು ಮಾರ್ಗದರ್ಶನ ನೀಡುವ ಆಶ್ವಾಸನೆಯನ್ನು ಕೊಟ್ಟಿದ್ದರು. ಶ್ರೇಯಸ್, ಅಪ್ಪ ಅಮ್ಮನೊಂದಿಗೆ ಸಮಾಲೋಚಿಸಿ ಇಂಗ್ಲೆಂಡಿನ "ಪ್ಲ್ಯಾಬ್" ಪ್ರವೇಶ ಪರೀಕ್ಷೆಯನ್ನು ಲಂಡನ್ನಿನಲ್ಲಿ ತೆಗೆದುಕೊಳ್ಳಲು ನಿರ್ಧರಿಸಿದ. ಶ್ರೇಯಸ್, ಇಂಗ್ಲೆಂಡಿನಲ್ಲಿ ವೈದ್ಯಕೀಯ ಉನ್ನತ ಶಿಕ್ಷಣವನ್ನು ಮುಗಿಸಿ ತಾನು ನ್ಯೂರೋ ಸರ್ಜನ್ ಆಗಬೇಕೆಂಬ ಕನಸನ್ನು ಕಾಣುತ್ತಿದ್ದ. ಪರೀಕ್ಷೆ ತಯಾರಿಗೆ ಬೇಕಾದ ಪರಿಶ್ರಮವನ್ನು ಕೈಗೊಂಡ. ಕೊನೆಗೂ ಪ್ಲ್ಯಾಬ್ ಬರೆಯುವ ಅವಕಾಶ ಒದಗಿ ಬಂದಿತು. ಶ್ರೇಯಸ್ ಇಂಗ್ಲೆಂಡಿನ ವೀಸಾ ಪಡೆದುಕೊಂಡ. ಅವನು ಹೊರಡಲು ಇನ್ನು ಕೆಲವೇ ದಿನಗಳು ಉಳಿದಿದ್ದವು ಅಷ್ಟರೊಳಗೆ ಮೋಹನ್ ಅವರ ಹುಟ್ಟು ಹಬ್ಬ ಬಂದಿತ್ತು.

‘ಶ್ರೇಯಸ್ ನೀನು ಇಂಗ್ಲೆಂಡಿಗೆ ಹೋಗಿ ಬರಲು ಎಷ್ಟೊಂದು ದಿನಗಳಾಗುತ್ತದೆ, ಹೇಗೂ ನಿಮ್ಮ ಅಪ್ಪನ ಬರ್ತ್ ಡೇ ಬಂದಿದೆ ವೈ ಡೋಂಟ್ ವೀ ಪಾರ್ಟಿ’ ಎಂದರು ಶೀಲಾ. ‘ಒಳ್ಳೆ ಅವಕಾಶ ಅಮ್ಮ ಸೆಲೆಬ್ರೆಟ್ ಮಾಡೋಣ, ಅಪ್ಪನ ಹತ್ತಿರದ ಸ್ನೇಹಿತರನ್ನೂ ಕರೆಯೋಣ’ ಎಂದ. ಮನೆಯಲ್ಲೇ ಮೋಹನ್ ಅವರ ಬರ್ತ್ ಡೇ ಪಾರ್ಟಿ ಅದ್ದೂರಿಯಿಂದ ನಡೆಯಿತು. ಬಂದವರೆಲ್ಲ ಶ್ರೇಯಸ್ ಇಂಗ್ಲೆಂಡಿಗೆ ಹೊರಡುತ್ತಿರುವ ಬಗ್ಗೆ ವಿಚಾರಿಸಿ ತಮ್ಮ ಶುಭ ಕಾಮನೆಗಳನ್ನು ತಿಳಿಸಿದರು. ಶ್ರೇಯಸ್ ಅಂದು ಬೊಟೀಕ್ ಶಾಪಿನಿಂದ ಸುಂದರವಾದ ಹೂಗಳನ್ನು ಬಿಟ್ಟಿದ್ದ ನೀಲಿ ಆರ್ಕಿಡ್ ಗಿಡವನ್ನು ಪ್ಲಾಸ್ಟಿಕ್ ಮತ್ತು ಬಣ್ಣದ ರಿಬ್ಬನ್ ಸುತ್ತಿ ಅಲಂಕರಿಸಿದ್ದು ಅದನ್ನು ಮೋಹನ್ ಅವರ ಕೈಗಿತ್ತು ‘ಹ್ಯಾಪಿ ಬರ್ತ್ ಡೇ ಅಪ್ಪ, ಈ ಆರ್ಕಿಡ್ಡನ್ನು ನಾನು ಇಂಗ್ಲೆಂಡಿನಿಂದ ಬರುವವರೆಗೂ ಸರಿಯಾಗಿ ಆರೈಕೆ ಮಾಡಿ ನೋಡಿಕೊ’ ಎಂದನು. ಇದನ್ನು ಗಮನಿಸಿದ ಶೀಲಾ ‘ಮೋಹನ್ ನೋಡಿ, ಶ್ರೇಯಸ್ ನಿಮಗೆ ನೀಲಿ ಬಣ್ಣದ ಆರ್ಕಿಡ್ ಹುಡುಕಿ ತಂದಿದ್ದಾನೆ. ಸೈಕಿಯಾಟ್ರಿಸ್ಟ್ ಗಳಿಗೆ ನೀಲಿ ಬಣ್ಣದ ಆರ್ಕಿಡ್ ಇಸ್ ಎ ಪರ್ಫೆಕ್ಟ್ ಗಿಫ್ಟ್’ ಎಂದು ಅದನ್ನು ಮುಂದಕ್ಕೆ ವಿಸ್ತರಿಸಿ ‘ಸೈಕಾಲಜಿಯಲ್ಲಿ ನೀಲಿ ಮಹತ್ವದ್ದು, ಅದು ಪ್ರಶಾಂತತೆ, ನೀರವತೆ, ಸಮಾಧಾನ ಚಿತ್ತ ಮತ್ತು ಅನಂತತೆಯನ್ನು ಪ್ರತಿನಿಧಿಸುವ ಬಣ್ಣ, ಅದಕ್ಕೆ ಮನೋರೋಗಿಗಳಿಗೆ ಸಾಂತ್ವನ ನೀಡುವ ಶಕ್ತಿಯಿದೆ’ ಎಂದರು. ಶ್ರೇಯಸ್ ಕೂಡಲೇ ‘ಅಮ್ಮ ನೀನು ಸೈಕಾಲಜಿ ಲೆಕ್ಚರ್ ಕೊಡಬೇಡ, ನೀಲಿ ಬಣ್ಣ ಹುಡುಗರಿಗೆ, ಪಿಂಕ್ ಬಣ್ಣ ಹುಡುಗಿಯರಿಗೆ, ಸಿಂಪಲ್’ ಎಂದು ನಕ್ಕ. ಶ್ರೇಯಸ್ ಹೊರಡುವ ಸಮಯ ಹತ್ತಿರವಾಗುತ್ತಿತ್ತು. ಶ್ರೇಯಸ್ಸಿನ ಜೊತೆ ಮುಕ್ತವಾಗಿ ಕಾಲ ಕಳೆಯುವ ಉದ್ದೇಶದಿಂದ ಡಾ ಮೋಹನ್ ಒಂದೆರಡು ದಿನಗಳ ಮಟ್ಟಿಗೆ ತಮ್ಮ ಕ್ಲಿನಿಕ್ ಅಪಾಯಿಂಟ್ಮೆಂಟುಗಳನ್ನು ರದ್ದು ಮಾಡಲು ರಿಸೆಪ್ಷನಿಸ್ಟ್ ಜಯಾಳಿಗೆ ಆದೇಶ ನೀಡಿದರು. ಮೋಹನ್ ಅವರು ಶ್ರೇಯಸ್ಸಿನ ಜೊತೆ ಸೆಂಟ್ರಲ್ ಮಾಲಿನಲ್ಲಿದ್ದಾಗ, ಜಯಾ, ಮೋಹನ್ ಅವರಿಗೆ ಫೋನ್ ಮಾಡಿ ‘ಸರ್ ನಿಮ್ಮ ಪೇಶಂಟ್ ಸಚ್ಚಿನ್ ಅವರು ನಿಮ್ಮನ್ನು ತುರ್ತಾಗಿ ಕಾಣಬೇಕಂತೆ ಮೆಡಿಸಿನ್ ಕೆಲಸ ಮಾಡುತ್ತಿಲ್ಲವಂತೆ ಎಂದಳು. ನೋಡು ಜಯ ನಾನು ಈಗ ನನ್ನ ಮಗನ ಜೊತೆ ಕಾಲ ಕಳೆಯುವುದು ಮುಖ್ಯ, ಸಚ್ಚಿನ್ನಿಗೆ ಡಾಕ್ಟರ್ ಮೈಸೂರಿಗೆ ಹೋಗಿದ್ದಾರೆ, ಸೋಮವಾರ ಬೆಳಗ್ಗೆಯೇ ಸಿಗುವುದು ಎಂದು ಹೇಳಿಬಿಡು ಎಂದರು.

ಶ್ರೇಯಸ್ ಹೊರಡುವ ದಿನ ಬಂದೇಬಿಟ್ಟಿತು. ಶ್ರೇಯಸ್ಸನ್ನು ಮೋಹನ್ ಮತ್ತು ಶೀಲಾ ಬೆಂಗಳೂರಿನ ಏರ್ಪೋರ್ಟಿಗೆ
ತಲುಪಿಸಿ ಬಿಳ್ಕೊಟ್ಟರು. ಶ್ರೇಯಸ್ ಹೊಸದಾಗಿ ಕಂಡು ಕೊಂಡಿದ್ದ ಸ್ವಾತಂತ್ರದ ರುಚಿ ಅನುಭವಿಸಲು ಶುರುಮಾಡಿದ. ಏರ್ಪೋರ್ಟ್ ಡ್ಯೂಟಿ ಫ್ರೀ ಶಾಪಿನಲ್ಲಿ ತಿರುಗಿ ಅಲ್ಲಿ ಕೊಡುವ ಫ್ರೀ ಪೆರ್ಫ್ಯೂಮ್ ಗಳನ್ನು ಪರೀಕ್ಷಿಸಿ, ಕೆಲವು ಸ್ಯಾಂಪಲ್ ಗಿಟ್ಟಿದ್ದ ಬಾಟಲ್ಗಳಿಂದ ಧಾರಾಳವಾಗಿ ಮೈಗೆ ಸ್ಪ್ರೇ ಮಾಡಿಕೊಂಡ. ಕೆಲವು ರೆಬಾನ್ ಕಪ್ಪು ಕನ್ನಡಕವನ್ನು ಪ್ರಯತ್ನಿಸಿ ಕನ್ನಡಿಯಲ್ಲಿ ತನ್ನನ್ನು ತಾನೇ ಮೆಚ್ಚಿಕೊಂಡ. ಕಿರಿಯ ಸೇಲ್ಸ್ ಹುಡುಗಿಯರತ್ತ ನೋಡಿ ಕಿರು ನಗೆ ಬೀರಿದ. ಕೊನೆಗೆ ತನ್ನ ಗಡಿಯಾರ ನೋಡಿಕೊಂಡು ಲಂಡನ್ ಗೆ ಹೊರಟಿದ್ದ ಏರ ಇಂಡಿಯಾದ ವಿಮಾನದ ಗೇಟ್ ನಂಬರ್ 10 ರ ಕಡೆಗೆ ಬಿರಿಸುನ ಹೆಜ್ಜೆಯನ್ನು ಹಾಕಿ, ಚೆಕಿನ್ ಮುಗಿಸಿ ವಿಮಾನದ ಒಳಗೆ ಆಸೀನನಾದ. ತನ್ನ ಅಪ್ಪನಿಗೆ ಮೆಸೇಜ್ ಮಾಡಿ ಸರಾಗವಾಗಿ ಚೆಕಿನ್ ಆಗಿದೆಯೆಂದು ಅಮ್ಮನಿಗೂ ತಿಳಿಸುವಂತೆ ಹೇಳಿದ. ವಿಮಾನದಲ್ಲಿನ ಒಂದು ಹೆಣ್ಣು ಮಧುರ ಧ್ವನಿ ಲಂಡನ್ನಿಗೆ ಹೊರಟಿರುವ ಏರ ಇಂಡಿಯಾ 133 ವಿಮಾನಕ್ಕೆ ಎಲ್ಲರನ್ನು ಸ್ವಾಗತಿಸಿದ ನಂತರ ರಕ್ಷಣಾ ನಿಯಮಗಳನ್ನು ಬಿತ್ತರಿಸಲಾಯಿತು. ಸ್ವಲ್ಪ ದೂರ ಚಲಿಸಿದ ವಿಮಾನ ರನ್ವೇ ಬಳಿ ಆದೇಶಕ್ಕೆ ಕಾಯುತ್ತಿತ್ತು. ಒಂದು ಗಡುಸಾದ ಧ್ವನಿ ‘ಕ್ಯಾಬಿನ್ ಕ್ರೂ ರೆಡಿ ಫಾರ್ ಟೇಕ್ ಆಫ್’ ಎಂದಿತು. ಕಗ್ಗತ್ತಲಿನಲ್ಲಿ, ಗುಡುಗಿನ ಶಬ್ದದಲ್ಲಿ, ಶರವೇಗದಲ್ಲಿ ವಿಮಾನ ಕವಿದಿದ್ದ ಮೋಡಗಳನ್ನು ಭೇಧಿಸಿಕೊಂಡು ಮೇಲಕ್ಕೇರಿತು!

ಅಂದು ವಾರಾಂತ್ಯವಾದುದರಿಂದ ಮೋಹನ್ ಇನ್ನು ಹಾಸಿಗೆಯಲ್ಲೇ ಹೊರಳಾಡುತ್ತಾ ನಿಧಾನದಲ್ಲಿ ಎದ್ದರಾಯಿತು ಎನ್ನುವ ಅನಿಸಿಕೆಯಲ್ಲಿ ನಿದ್ದೆ ಎಚ್ಚರಗಳ ನಡುವಿನಲ್ಲಿದ್ದರು. ಅವರಿಗೆ ಒಂದು ಕರೆ ಬಂತು. ಏರ ಇಂಡಿಯಾ ಫ್ಲೈಟ್ 133 ವಿಮಾನವು ಬೆಂಗಳೂರನ್ನು ಬಿಟ್ಟ ಅರ್ಧಗಂಟೆಯೊಳಗೆ ತನ್ನ ಸಾಮರ್ಥ್ಯವನ್ನು ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿ ಬೆಂಕಿ ಹತ್ತಿಕೊಂಡಿರುವ ವಿಷಯವನ್ನು ತಿಳಿಸಿ, ಶ್ರೇಯಸ್ಸಿನ ಎಮರ್ಜೆನ್ಸಿ ಕಾಂಟ್ಯಾಕ್ಟ್ ವಿವರದಲ್ಲಿ ಡಾ ಮೋಹನ್ ಅವರ ಸಂಪರ್ಕದ ಮಾಹಿತಿ ಇದ್ದು ಅದನ್ನು ಬಳಿಸಿಕೊಂಡು ಫೋನ್ ಮಾಡಿರುವುದಾಗಿ ತಿಳಿಸಲಾಯಿತು. ಇನ್ನು ಹೆಚ್ಚಿನ ಮಾಹಿತಿ ಮತ್ತು ವಿವರಗಳೊಂದಿಗೆ ಮತ್ತೆ ಫೋನ್ ಮಾಡುವುದಾಗಿ ತಿಳಿಸಲಾಯಿತು. ಶ್ರೇಯಸ್ ಬದುಕ್ಕಿದ್ದಾನೋ ಇಲ್ಲವೋ ಎಂಬ ಸ್ಪಷ್ಟವಾದ ಉತ್ತರದ ನಿರೀಕ್ಷೆಯಲ್ಲಿ ನಿಮಿಷಗಳು ಗಂಟೆಗಳಾದವು. ಕೊನೆಗೂ ಅವರು ನಿರೀಕ್ಷಿಸಿದಂತೆ ಈ ಅನಾಹುತದಲ್ಲಿ ಪೈಲೆಟ್ಟನ್ನು ಒಳಗೊಂಡು ಎಲ್ಲರೂ ಮೃತರಾಗಿರುವರೆಂದು ತಿಳಿದು ಬಂತು. ಮೋಹನ್ ಮತ್ತು ಶೀಲಾ ದಂಪತಿಗಳಿಗೆ ತೀವ್ರ ಮಾನಸಿಕ ಆಘಾತ ಉಂಟಾಯಿತು. ಮನಶಾಸ್ತ್ರವನ್ನು ಆಳವಾಗಿ ಅರಿತುಕೊಂಡಿದ್ದ ದಂಪತಿಗಳು ತಮ್ಮ ಮನಸ್ಥಿತಿಯನ್ನು ಹತೋಟಿಯಲ್ಲಿಡಲು ಹೆಣಗಿ ಕಂಗಾಲಾದರು. ಮಳೆ ಸುರಿಸಿದ ಕಾರ್ಮೋಡಗಳು ಕರಗಬಹುದಾದರೂ ಮೋಹನ್ ದಂಪತಿಗಳ ಮನಸ್ಸಿನಲ್ಲಿ ಕವಿದಿದ್ದ ಕಾರ್ಮೋಡಗಳು ಅದೆಷ್ಟು ಕಣ್ಣೀರು ಸುರಿಸಿದರೂ ಕರಗಲಿಲ್ಲ. ಮತ್ತೆ ಮತ್ತೆ ಆವರಿಸುವ ಖಿನ್ನತೆಯನ್ನು ನಿಭಾಯಿಸುವುದು ಕಷ್ಟಕರವಾಯಿತು. ಬೇರೆಯವರಿಗೆ ಸರಾಗವಾಗಿ ಕೌನ್ಸಿಲ್ ಮಾಡುತ್ತಿದ್ದ ಅವರಿಗೆ ತಮ್ಮನ್ನು ತಾವೇ ಸಂತೈಸಿಕೊಳ್ಳುವುದು ಅಸಾಧ್ಯವೆನಿಸಿತು. ಮೋಹನ್ ಅವರ ಸ್ಟಡಿ ಕೋಣೆಯಲ್ಲಿದ್ದ ನೀಲಿ ಆರ್ಕಿಡ್ ತನ್ನ ದಳಗಳನ್ನು ಉದುರಿಸುತ್ತಾ ಮುರುಟಿಕೊಂಡಿತ್ತು. ಕಾವೇರಿಯ ಸಿಹಿ ನೀರಿನ ಜೊತೆ ತಮ್ಮ ಕಣ್ಣೀರನ್ನೂ ಕೂಡಿಸಿ ಎಷ್ಟು ಧಾರೆ ಎರೆದರೂ ಆರ್ಕಿಡ್ ಮತ್ತೆ ಚಿಗುರಲಿಲ್ಲ!

ಏರ ಇಂಡಿಯಾ ವಿಮಾನ ಅನಾಹುತದ ಬಗ್ಗೆ ಸಿವಿಲ್ ಏವಿಯೇಷನ್ ವಿಭಾಗದಿಂದ ಅಧಿಕೃತ ವರದಿ ಹೊರಗೆ ಬಂದು ಎಲ್ಲ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿತು. ಈ ವಿಚಾರವನ್ನು ಅರಿತ ಡಾ ಮೋಹನ್ ದಂಪತಿಗಳ ಪರಿವಾರದವರು, ಗೆಳೆಯರು ಮನೆಗೆ ಬಂದು ಅವರನ್ನು ಸಂತೈಸಲು ಪ್ರಯತ್ನಿಸಿದರು. ಹೀಗೆ ಶೋಕದಲ್ಲಿ ದಿನಗಳು ಕಳೆದವು. ಸಿವಿಲ್ ಏವಿಯೇಷನ್ ವಿಭಾಗದಿಂದ ಮೊದಲ ಹಂತದ ತನಿಖಾ ರಿಪೋರ್ಟ್ ಪ್ರಕಟಗೊಂಡಿತು. ಏರ್ ಇಂಡಿಯಾ 133 ವಿಮಾನದ ಎರಡು ಎಂಜಿನ್ಗಳ ವೈಫಲ್ಯದಿಂದ ಈ ಅಪಘಾತ ಉಂಟಾಯಿತು, ಆದರೆ ಈ ವೈಫಲ್ಯದ ಮೂಲ ಕಾರಣವನ್ನು ಬ್ಲ್ಯಾಕ್ ಬಾಕ್ಸ್ ರೆಕಾರ್ಡರ್ ಪರೀಕ್ಷೆಯ ನಂತರೆವೇ ಬಹಿರಂಗಪಡಿಸಲಾಗುವುದು ಎಂದು ನಿರ್ಧರಿಸಲಾಯಿತು. ಈ ವರದಿಯು ಸೋಷಿಯಲ್ ಮೀಡಿಯಾಗಳನ್ನು ತಲುಪಿ ಜನರು ತಮಗೆ ತಿಳಿದಂತೆ ಕಾರಣಗಳನ್ನು ವ್ಯಾಖ್ಯಾನಿಸ ತೊಡಗಿದರು. ಮೋಹನ್ ಅವರನ್ನು ಕಾಣಲು ಬಂದಿದ್ದ ವೆಂಕಟೇಶ್ ‘ಮೋಹನ್ ಈ ಅನಾಹುತಕ್ಕೆ ಮುಸ್ಲಿಂಮರೆ ಕಾರಣ. ಪಹಲ್ಗಾಮ್ ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಸರಿಯಾಗಿ ಪೆಟ್ಟು ತಿಂದ ಪಾಕಿಸ್ತಾನಿಗಳು ಮತ್ತು ಇಂಡಿಯಾದಲ್ಲಿರುವ ಅವರ ಕುಲ ಬಾಂಧವರು ಏನೋ ಒಳಸಂಚು ನಡೆಸಿ ವಿಮಾನದಲ್ಲಿ ಕುತಂತ್ರ ನಡೆಸಿದ್ದಾರೆ. ಎರಡು ಇಂಜನ್ ಫೇಲ್ ಆಗುವುದು ಅಂದರೇನು, ಇದು ಲಂಡನ್ನಿಗೆ ಹೋರಾಟ ಅಂತರಾಷ್ಟ್ರಿಯ ಡ್ರೀಮ್ ಲೈನರ್, ಇಲ್ಲಿ ಅದೆಷ್ಟೋ ತಾಂತ್ರಿಕ ಚೆಕಿಂಗ್ ಮತ್ತು ಕ್ಲಿಯರೆನ್ಸ್ ಇರುತ್ತೆ. ಇಲ್ಲಿ ಖಂಡಿತ ಸಾಬರ ಕೈವಾಡವಿದೆ. ಇದು ಸಾಬೀತಾಗಿದ್ದಲ್ಲಿ ಈ ಬಡ್ಡಿಮಕ್ಕಳಿಗೆ ಹಿಂದೂಗಳು ಸರಿಯಾದ ಬುದ್ಧಿ ಕಲಿಸಬೇಕು’ ಎಂದು ಬಹಳ ಆವೇಶದಿಂದ ವೆಂಕಟೇಶ್ ನುಡಿದರು. ಅದಕ್ಕೆ ಮೋಹನ್ ‘ಅಲ್ಲಾ ವೆಂಕಿ ನೀ ಸ್ವಲ್ಪ ಸುಮ್ಮನಿರು, ಈ ಅನಾಹುತಕ್ಕೆ ಕಾರಣ ಇನ್ನು ಸ್ಪಷ್ಟವಾಗಿಲ್ಲ, ಇಂತಹ ಸನ್ನಿವೇಶದಲ್ಲಿ ನೀನು ನಿನ್ನ ಊಹೆಗಳ ಮೇಲೆ ಅವರಿವರನ್ನು ಅನುಮಾನಿಸುವುದು ತಪ್ಪು. ಫೈನಲ್ ರಿಪೋರ್ಟ್ ಬರುವವರೆಗೂ ಇದರ ಬಗ್ಗೆ ಚರ್ಚೆ ಮಾಡುವುದು ತಪ್ಪು, ಇದು ನನ್ನ ಪರ್ಸನಲ್ ಟ್ರ್ಯಾಜಿಡಿ, ದಯವಿಟ್ಟು ಇದನ್ನು ಹಿಂದೂ ಮುಸ್ಲಿಂ ಸಮಸ್ಯೆಯಾಗಿ ಮಾಡಿ ರಾಜಕೀಯ ತರಬೇಡ. ಸ್ವಲ್ಪ ಸಂಯಮದಿಂದ ವರ್ತಿಸುವುದು ಒಳ್ಳೇದು’ ಎಂದರು.

ಅನಾಹುತದನಂತರ ಹಲವಾರು ವಾರಗಳೇ ಕಳೆದವು. ಶೋಕ ತಪ್ತರಾಗಿದ್ದ ಮೋಹನ್ ದಂಪತಿಗಳು ಸಾವಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು. ಮೋಹನ್ ತಮ್ಮ ಕೆಲಸಕ್ಕೆ ಮರಳಿದ್ದರು. ಒಂದು ದಿನ ಮೋಹನ್ ಕೆಲಸದಲ್ಲಿ ನಿರತರಾದಾಗ ಒಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂತು. ಮೋಹನ್ ಕಾಲ್ ಸ್ವೀಕರಿಸಿದರು.

‘ಗುಡ್ ಮಾರ್ನಿಂಗ್ ಡಾಕ್ಟರ್ ಮೋಹನ್, ನಾನು ಅಜಯ್ ತಿವಾರಿ ಏರ್ ಕ್ರ್ಯಾಷ್ ತನಿಖೆ ವಿಭಾಗದಿಂದ ಮಾತನಾಡುತ್ತಿದ್ದೇನೆ, ನಿಮ್ಮ ಜೊತೆ ಕಾನ್ಫಿಡೆಂಶಿಯಲ್ ವಿಚಾರ ಚರ್ಚೆ ಮಾಡಬೇಕು’ ಎಂದರು

‘ಪ್ಲೀಸ್ ಗೋ ಅಹೆಡ್’ ಎಂದರು ಮೋಹನ್

'ಮೊದಲಿಗೆ ನಿಮಗೂ ಮತ್ತು ನಿಮ್ಮ ಪತ್ನಿ ಶೀಲಾ ಅವರಿಗೂ ನನ್ನ ಸಂತಾಪವನ್ನು ಸೂಚಿಸಲು ಇಚ್ಛಿಸುತ್ತೇನೆ, ಸಾರೀ ಟು ಹಿಯರ್ ಎಬೌಟ್ ಯುವರ್ ಸನ್ ಶ್ರೇಯಸ್’

ಧೀರ್ಘ ನಿಟ್ಟುಸಿರು ಬಿಟ್ಟ ಮೋಹನ್ ‘ಧನ್ಯವಾದಗಳು, ಹೇಳಿ ಅಜಯ್’ ಎಂದರು

‘ಡಾಕ್ಟರ್, ಲಂಡನ್ನಿಗೆ ಹೊರಟಿದ್ದ ಏರ ಇಂಡಿಯಾ 133 ವಿಮಾನದ ಆಕ್ಸಿಡೆಂಟ್ ಬಗ್ಗೆ ಇದುವರೆಗಿನ ತನಿಖೆಯ ಪ್ರಕಾರ ವಿಮಾನದ ಎರಡು ಎಂಜಿನ್ಗಳ ವೈಫಲ್ಯ ಕಾರಣವಾಗಿದೆ. ಎರಡು ಎಂಜಿನ್ಗಳಿಗೆ ಇಂಧನ ಸರಬರಾಜಾಗಲು ಕಾಕ್ ಪಿಟ್ಟಿನ ಪ್ಯಾನೆಲ್ ಒಳಗಿನ ಇಂಧನ ನಿಯಂತ್ರಣದ ಸ್ವಿಚ್ ಆನ್ ಆಗಿರಬೇಕು. ಆದರೆ ಈ ಸನ್ನಿವೇಶದಲ್ಲಿ ಅದು ಆಫ್ ಆಗಿತ್ತು. ಅದು ಏಕೆ ಇದ್ದಕ್ಕಿದಂತೆ ಅಂತರಿಕ್ಷದಲ್ಲಿ ಆಫ್ ಆಯಿತು ಎನ್ನುವುದಕ್ಕೆ ವಿವರಣೆ ಇರಲಿಲ್ಲ. ಇತ್ತೀಚಿಗೆ ಕಾಕ್ ಪಿಟ್ ಬ್ಲಾಕ್ ಬಾಕ್ಸ್ ಪರೀಕ್ಷಿಸಿದಾಗ ಇಬ್ಬರ ಪೈಲೆಟ್ಗಳ ನಡುವಿನ ಸಂಭಾಷಣೆಯನ್ನು ಆಧರಿಸಿ ಆ ಇಂಧನ ಸ್ವಿಚ್ಚನ್ನು ಒಬ್ಬ ಪೈಲೆಟ್ ಉದ್ದೇಶ ಪೂರ್ವಕವಾಗಿ ಸ್ವಿಚ್ ಆಫ್ ಮಾಡಿರುವುದಾಗಿ ತಿಳಿದುಬಂದಿದೆ. ಇದಕ್ಕೆ ತಾಂತ್ರಿಕ ತೊಂದರೆಗಳು ಕಾರಣವಲ್ಲ ಎಂಬುದು ತಜ್ಞರ ಅಭಿಪ್ರಾಯ. ಒಬ್ಬ ನುರಿತ ಪೈಲೆಟ್ ಹೀಗೇಕೆ ತನ್ನ ವಿಮಾನವನ್ನು ತಾನೇ ನೆಲಕ್ಕೆ ಉರುಳಿಸಿದ, ಇದು ಆತ್ಮ ಹತ್ಯೆಯೇ, ಅವನಿಗೆ ಮಾನಸಿಕ ತೊಂದರೆಗಳಿತ್ತೆ ಎಂಬ ಸಹಜ ಪ್ರಶ್ನೆಗಳು ಉದ್ಭವಿಸಿವೆ. ಈ ಸೀನಿಯರ್ ಅನುಭವಿ ಕ್ಯಾಪ್ಟನ್ ಹೆಸರು ಸಚ್ಚಿನ್, ಸಚ್ಚಿನ್ ಶಾನಭಾಗ್. ಕ್ಯಾಪ್ಟನ್ ಸಚ್ಚಿನ್ನಿಗೆ ಮಾನಸಿಕ ಅಸ್ವಸ್ಥತೆ ಇತ್ತು ಎಂಬ ವಿಚಾರ ಹಿಂದೆ ಗೌಪ್ಯವಾಗಿದ್ದು ಈಗ ಅದರ ಬಗ್ಗೆ ಅನುಮಾನವಿದೆ. ನಮ್ಮ ಮೆಡಿಕಲ್ ರೆಕಾರ್ಡಿನಲ್ಲಿ ಅವನಿಗೆ ಮಾನಸಿಕ ತೊಂದರೆ ಇತ್ತು ಎಂಬುದು ದಾಖಲಾಗಿಲ್ಲ. ಹಿಂದಿನ ವೈದ್ಯಕೀಯ ಪರೀಕ್ಷೆಯಲ್ಲಿ ನಮ್ಮ ವೈದ್ಯರು ಅವನಿಗೆ ಮೆಂಟಲ್ ಹೆಲ್ತ್ ಕ್ಲಿಯರೆನ್ಸ್ ಕೊಟ್ಟಿದ್ದಾರೆ’

‘ಹೌ ಡಿಡ್ ಹೀ ಸ್ಲಿಪ್ ಥ್ರೂ ದಿ ನೆಟ್!’ ಎಂದು ಅಚ್ಚರಿಗೊಂಡರು ಮೋಹನ್

‘ಡಾಕ್ಟರ್, ಅನಾಹುತವಾದ ಮೇಲೆ ನಾವು ಸಚ್ಚಿನ್ ಮನೆಗೆ ತೆರಳಿ ಅವನ ಲ್ಯಾಪ್ ಟಾಪ್ ಮತ್ತು ಇತರ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡು ನೋಡಿದಾಗ ನಿಮ್ಮ ಮೆಡಿಕಲ್ ಸಮ್ಮರಿ ಮತ್ತು ಪ್ರಿಸ್ಕ್ರಿಪ್ಷನ್ ಗಳು ದೊರಕಿದವು. ಅವನ ವೃದ್ಧ ತಂದೆಯವರು ಬಹಳಷ್ಟು ಸಹಕರಿಸಿದರು. ನೀವು ಸಚ್ಚಿನ್ನಿನ ಖಾಸಗಿ ಸೈಕ್ಯಾಟರಿಸ್ಟ್ ಎಂದು ತಿಳಿದು ಬಂತು. ದಯವಿಟ್ಟು ನೀವು ಹೇಳಿಕೆ ಕೊಟ್ಟು ಖಾತ್ರಿಪಡಿಸಬೇಕು’

‘ಖಂಡಿತ ಅಜಯ್, ಇದು ನನಗೆ ಆಶ್ಚರ್ಯದ ಸಂಗತಿ. ಸಚಿನ್ ನನ್ನ ಪೇಶಂಟ್ ಎಂಬುದು ಸರಿ, ಆದರೆ ಅವನು ನನ್ನ ಬಳಿ ತಾನು ಸಾಫ್ಟ್ ವೆರ್ ಎಂಜಿನಿಯರ್ ಎಂದು ಸುಳ್ಳು ಹೇಳಿದ್ದಾನೆ, ನನಗೆ ಅವನು ಪೈಲೆಟ್ ಎಂಬ ವಿಚಾರ ಒಂದು ವೇಳೆ ಗೊತ್ತಾಗಿದ್ದರೂ ನಾನು ಅದನ್ನು ಪೇಶಂಟ್ ಕಾನ್ಫಿಡೆಂಶಿಯಾಲಿಟಿ ಬದ್ಧತೆಯಲ್ಲಿ ಬಹಿರಂಗ ಪಡಿಸುವುದು ಕಷ್ಟಕರವಾಗುತ್ತಿತ್ತು’

‘ಹೌದು ಡಾಕ್ಟರ್ ನಮ್ಮ ಎಷ್ಟೋ ಪೈಲೆಟ್ಗಳು ತಮಗೆ ಮಾನಸಿಕ ತೊಂದರೆ ಇದೆ ಎನ್ನುವುದನ್ನು ಬಹಿರಂಗ ಪಡಿಸುವುದಿಲ್ಲ. ನಮ್ಮ ಪೈಲೆಟ್ಗಳಲ್ಲಿ ಅದು ಇನ್ನೂ ಬಾಹಿರವಾದ ಸಂಗತಿ. ಆರ್ಥಿಕವಾಗಿ ಕಷ್ಟದಲ್ಲಿರುವ ಪೈಲೆಟ್ಗಳಿಗೆ ತಮ್ಮ ಕೆಲಸ ಕಳೆದುಕೊಳ್ಳುವ ಭಯ’

‘ಅದು ಹಾಗಿರಬೇಕಿಲ್ಲ ಇಟ್ ಇಸ್ ಸ್ಯಾಡ್’ ಎಂದರು ಮೋಹನ್

‘ಒಹ್ ಇನ್ನೊಂದು ವಿಚಾರ ಈಗ ಥಟ್ ಅಂತ ಹೊಳೆಯಿತು ಅಜಯ್. ಶ್ರೇಯಸ್ ಹೊರಡವು ಒಂದೆರಡು ದಿನಗಳ ಮುಂಚೆ ಕ್ಲಿನಿಕ್ಕಿಗೆ ಸಚ್ಚಿನ್ ಫೋನ್ ಮಾಡಿ ನನ್ನನ್ನು ಅರ್ಜೆಂಟ್ ಆಗಿ ನೋಡಬೇಕು, ಆಂಟಿ ಡೆಪ್ರೆಸ್ಸೆಂಟ್ ಮೆಡಿಸಿನ್ ಕೆಲಸ ಮಾಡುತ್ತಿಲ್ಲ ಎಂದು ಮೆಸೇಜ್ ಬಿಟ್ಟಿದ್ದ. ನಾನು ಆಗ ಶ್ರೇಯಸ್ ಜೊತೆ ಸಮಯ ಕಳೆಯಲು ರಜೆಯಲ್ಲಿದ್ದೆ. ಆ ಹಂತದಲ್ಲಿ ಬಹುಶ ಸಚ್ಚಿನ್ ಕ್ರೈಸಿಸ್ ಪಾಯಿಂಟ್ ತಲುಪಿ ಅವನಿಗೆ ಸೂಯಿಸೈಡ್ ಆಲೋಚನೆಗಳು ಉಂಟಾಗಿರಬಹುದು. ಓಹ್ ಮೈ ಗಾಡ್!! ನೋಡಿ ಅಜಯ್ ನಾನು ಎಂಥ ತಪ್ಪು ಕೆಲಸ ಮಾಡಿದೆ. ನಾನು ಅಂದು ಸಚ್ಚಿನನ್ನು ತುರ್ತಾಗಿ ನೋಡಿದ್ದರೆ, ಅವನಿಗೆ ಕೌನ್ಸಿಲ್ ಮಾಡಬಹುದಿತ್ತು, ಮೆಡಿಸಿನ್ ಬದಲಾಯಿಸಬಹುದಿತ್ತು ಬಹುಶಃ ಈ ಏರ್ ಆಕ್ಸಿಡೆಂಟನ್ನು ತಪ್ಪಿಸಬಹುದಾಗಿತ್ತು. ಇಟ್ ವಾಸ್ ಎ ಮಿಸ್ಡ್ ಆಪರ್ಚುನಿಟಿ, ಶ್ರೇಯಸ್ ಅಷ್ಟೇ ಅಲ್ಲ ನೂರಾರು ಪ್ರಯಾಣಿಕರು ಸಾಯಬೇಕಿರಲಿಲ್ಲ’ ಎಂದು ಮೋಹನ್ ಗದ್ಗದಿಸುವ ದನಿಯಲ್ಲಿ ಹೇಳುವಾಗ ಅವರ ಕಣ್ಣುಗಳು ಒದ್ದೆಯಾದವು.

ಅಜಯ್ ಕೂಡಲೇ ‘ಡಾಕ್ಟರ್ ನಿಮ್ಮನ್ನು ನೀವು ಬ್ಲೆಮ್ ಮಾಡಿಕೊಳ್ಳಬೇಡಿ. ಇದು ವ್ಯವಸ್ಥೆಯ ವೈಫಲ್ಯ. ಇದರ ಬಗ್ಗೆ ಧೀರ್ಘವಾಗಿ ಆಲೋಚಿಸ ಬೇಕಾಗಿದೆ. ಈ ವಿಚಾರವನ್ನು ದಯವಿಟ್ಟು ಬಹಿರಂಗಪಡಿಸಬೇಡಿ. ತನಿಖೆಯ ರಿಪೋರ್ಟ್ ಇನ್ನು ಕೆಲವೇ ದಿನಗಳಲ್ಲಿ ಪ್ರಕಟವಾಗುತ್ತಿದೆ. ನಾನು ಹೊರಡಬೇಕು, ಮತ್ತೆ ಕರೆ ಮಾಡುತ್ತೇನೆ, ಥ್ಯಾಂಕ್ಯೂ ಎನ್ನುತ್ತಾ ಕರೆಯನ್ನು ಮುಗಿಸಿದರು.


ಕೆಲವು ವರುಷಗಳ ತರುವಾಯ;
ಭಾರತ ಸರ್ಕಾರದ ಸಿವಿಲ್ ಏವಿಯೇಷನ್ ವಿಭಾಗದ ವೈದ್ಯಕೀಯ ಬೋರ್ಡಿನಲ್ಲಿ ಮೋಹನ್ ಅವರನ್ನು ತಜ್ಞರಾಗಿ ಆಯ್ಕೆಮಾಡಲಾಯಿತು. ಅವರ ಮಾರ್ಗದರ್ಶನದಲ್ಲಿ ಪೈಲೇಟ್ಗಳ ದೈಹಿಕ ಮತ್ತು ಮಾನಸಿಕ ಅರೋಗ್ಯ ತಪಾಸಣೆ, ಏನು, ಹೇಗೆ ಎಂಬ ವಿಷಯಗಳನ್ನು ಕುರಿತು ಹಲವಾರು ಸಲಹೆ ಸೂಚನೆಗಳನ್ನು ಒಳಗೊಂಡ ನೂತನ ದಾಖಲೆಯನ್ನು ಹೊರತರಲಾಯಿತು. ಪೈಲೆಟ್ಗಳು ತಮಗೆ ಮಾನಸಿಕ ಅಸ್ವಸ್ಥತೆ ಇದ್ದಲ್ಲಿ ಅದನ್ನು ಯಾವುದೇ ಮಾನಭಂಗ ಅಥವಾ ಒತ್ತಡಗಳಿಲ್ಲದೆ ಬಹಿರಂಗಗೊಳಿಸಲು ಉತ್ತೇಜನ ನೀಡಲಾಯಿತು, ಹಾಗೆ ಸಹಾನುಭೂತಿಯಿಂದ ಎಲ್ಲ ರೀತಿಯ ಸಹಕಾರ, ಕೌನ್ಸಿಲಿಂಗ್ ಮತ್ತು ನೆರವು ನೀಡುವುದರ ಬಗ್ಗೆ ಆಶ್ವಾಸನೆ ನೀಡಲಾಯಿತು. ಇದರ ಜೊತೆ ಜೊತೆಗೆ ವೈದ್ಯರಿಗೂ ಕೆಲವು ವಿಶೇಷ ಸನ್ನಿವೇಶಗಳಲ್ಲಿ ಕಾನ್ಫಿಡೆಂಶಿಯಾಲಿಟಿ ಬದ್ಧತೆಯನ್ನು ಏಕೆ, ಯಾವಾಗ ಮುರಿಯಬಹುದು ಎಂಬ ವಿಚಾರದಲ್ಲಿ ಮಾರ್ಗದರ್ಶನ ನೀಡಲಾಯಿತು. ಇಂಡಿಯನ್ ಪೈಲೆಟ್ ಅಸೋಸಿಯೇಷನ್ ಡಾ ಮೋಹನ್ ಅವರ ವರದಿಯನ್ನು ಸಂತೋಷದಿಂದ ಸ್ವಾಗತಿಸಿತು. ಮೋಹನ್ ದಂಪತಿಗಳು ಭಾರತೀಯ ಪೈಲೆಟ್ಗಳ ಮಾನಸಿಕ ತೊಂದರೆಗಳಿಗೆ ನೆರವು ನೀಡುವ ಸಲುವಾಗಿ 'ಬ್ಲೂ ಆರ್ಕಿಡ್' ಎಂಬ ಹೆಸರಲ್ಲಿ ಚಾರಿಟಿ ಸಂಸ್ಥೆಯನ್ನು ಹುಟ್ಟುಹಾಕಿದರು.
***

ಈ ಕಥೆಯ ಬಹುಭಾಗಗಳು ಲೇಖಕರ ಕಲ್ಪನೆಯಾಗಿದ್ದು ಇದರಲ್ಲಿನ ಕೆಲವು ಸನ್ನಿವೇಶಗಳು ನೈಜ ಘಟನೆಯನ್ನು ಆಧರಿಸಿವೆ