ಗೋಕುಲಾಷ್ಟಮಿ ನನ್ನ ನೆನಪುಗಳು , ಅನುಭವಗಳು

 

ಕೃಷ್ಣ ಭಾರತೀಯರಿಗೆ ಅಪ್ಯಾಯಮಾನವಾದ ಭಗವಂತ. ಆತನ ತುಂಟತನ, ಶೌರ್ಯ, ಅಸಹಾಯಕರ ಸಹಾಯಕ್ಕೆ ಮುನ್ನುಗ್ಗುವ ಛಾತಿ, ಸಂಗೀತೋಪಾಸನೆ, ಭ್ರಾತೃ- ಮಿತ್ರ ಪ್ರೇಮ, ಹೆಂಗಳೆಯರ ಮನ ಸೆಳೆಯುವ – ಮನದಲ್ಲಿಳಿಯುವ ಚಾಕಚಕ್ಯತೆ, ಒಲಿದು ಬಂದವರಿಗೆ ತೋರುವ ಅಮಿತ ಪ್ರೇಮ, ಸಾಮ -ದಾನ-ದಂಡ-ಭೇದಗಳನ್ನು ಸಮಯಕ್ಕೊಪ್ಪುವಂತೆ ಉಪಯೋಗಿಸಬಲ್ಲ ಚಾಣಾಕ್ಷತೆ ಚುಂಬಕದಂತೆ ನಮ್ಮನ್ನು ಆಕರ್ಷಿಸುತ್ತವೆ. ಕೃಷ್ಣ ಕಥೆಗಳನ್ನು ಓದಿ ಬೆಳೆದ ನಮಗೆ ಇಂದಿಗೂ ಅವು ಮನದಲ್ಲಿ ಅಚ್ಚೊತ್ತಿವೆಯಲ್ಲದೇ ಅವನ ಎಷ್ಟೋ ಗುಣಗಳು ಅರಿವಿಲ್ಲದೇ ಸಂಕಷ್ಟದಲ್ಲಿ ನಮಗೆ ದಾರಿದೀಪವೂ ಆಗಿವೆ. ಈ ಸೋಮವಾರ ಈ ಭೂಮಿಯ ಮೇಲೆ ಸಾವಿರಾರು ವರ್ಷಗಳ ಹಿಂದೆ ನಡೆದಿದ್ದ ಶ್ರೀ ಕೃಷ್ಣನ ಜನ್ಮದಿನವಾಗಿತ್ತು (ಕೃಷ್ಣನ ಅಸ್ತಿತ್ವದ ಬಗ್ಗೆ ಪುರಾತತ್ವ ಇಲಾಖೆ ಪುರಾವೆಗಳನ್ನೊದಗಿಸಿದೆ, ಅದರ ಸತ್ಯಾಸತ್ಯತೆ ಈ ಲೇಖನದ ವ್ಯಾಪ್ತಿಗೆ ಮೀರಿದ್ದು). ಕೃಷ್ಣನ ಅರವತ್ನಾಲ್ಕು ಗುಣಗಳನ್ನು ಪ್ರತಿಫಲಿಸುವಂತೆ ಅವನ ಜನ್ಮದಿನವನ್ನು ಹಲವು ಬಗೆಗಳಲ್ಲಿ ಭಾರತದಲ್ಲಿ ಆಚರಿಸಲಾಗುತ್ತದೆ. ಹಳೆಯ ನೆನಪುಗಳನ್ನು ಮೆಲಕು ಹಾಕುತ್ತ ನಾನು ಅನುಭವಿಸಿದ ಈ ವಿಶಿಷ್ಟ ದಿನದ ಆಚರಣೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. 

ನಮ್ಮ ಮನೆಯಲ್ಲಿ ಗೋಕುಲಾಷ್ಟಮಿ ಹಿಂದಿನಿಂದಲೂ ಬಲು ಸಂಭ್ರಮದಿಂದ ಆಚರಿಸುತ್ತಿದ್ದೆವು. ನನ್ನ ತಂದೆ-ತಾಯಿಯರಿಬ್ಬರೂ ಶಿಕ್ಷಗರಾಗಿ, ಅಂಕೋಲೆಯಲ್ಲಿದ್ದರು. ನಮ್ಮಪ್ಪನಿಗೆ ತುಂಬ ಗೆಳೆಯರು. ಅವರಲ್ಲಿ ಅತಿ ಹತ್ತಿರದವದೆಂದರೆ ಹೊನ್ನೆಗುಂಡಿ ಮಾಷ್ಟ್ರು. ಹಾಡುವುದರಲ್ಲಿ, ನೃತ್ಯದಲ್ಲಿ, ಕೊಳಲು-ತಬಲಾ ನುಡಿಸುವುದರಲ್ಲಿ ನಿಪುಣರು. ಅವರು ನನಗೆ ಸಂಜೆ ಕೊಳಲು ನುಡಿಸಲು ಕಲಿಸಿದರೆ, ಶಾಲೆಯಲ್ಲಿ ಹಿಂದಿ ಕಲಿಸುತ್ತಿದ್ದರು. ನಮಗಾಗ ಗೋಕುಲಾಷ್ಟಮಿಗೆ ರಜೆ ಇರುತ್ತಿರಲಿಲ್ಲ. ಹಾಗಾಗಿ ನಮ್ಮ ಮನೆಯಲ್ಲಿ ಅನುಕೂಲ ಸಿಂಧುವಾಗಿ ಕೃಷ್ಣನ ಜನ್ಮ ೮-೯ ಘಂಟೆಗೇ ಆಗುತ್ತಿತ್ತು. ಮಾಷ್ಟ್ರಿಲ್ಲದೇ ನಮ್ಮ ಮನೆಯಲ್ಲಿ ಕೃಷ್ಣನ ಪೂಜೆ ಆಗುತ್ತಿರಲಿಲ್ಲ. ಅವರು ದಾಸರ ಪದಗಳನ್ನು ಹಾಡಿ, ನನ್ನ ಕೈಯ್ಯಲ್ಲೂ ಒಂದೆರಡು ಹಾಡುಗಳನ್ನ ಹಾಡಿಸಿ, ಕೊಳಲಿನಲ್ಲಿ ನುಡಿಸುತ್ತಿದ್ದರು. ಈ ಸಂಗೀತ ಸಮಾರಾಧನೆಯಿಲ್ಲದೆ ದೇವಕಿಯ ಪ್ರಸವ ವೇದನೆಯೇ ಆರಂಭವಾಗುತ್ತಿರಲಿಲ್ಲ.  ನಮ್ಮಮ್ಮ, ಶಾಲೆಯಲ್ಲಿ ಗೇಯ್ದು ಬಂದ ಮೇಲೆ ತರಹೇವಾರಿ ತಿಂಡಿಗಳನ್ನು (ಇಡ್ಲಿ, ಪಾಯಸ, ಚಕ್ಕುಲಿ, ಯರಿಯಪ್ಪ, ಉಂಡೆ, ಅವಲಕ್ಕಿ, ಇತರೆ) ಪೂಜೆಗೆ ಸರಿಯಾದ ಸಮಯಕ್ಕೆ ತಯ್ಯಾರಿ ಮಾಡಿಡುತ್ತಿದ್ದರು. ಆಗೆಲ್ಲ, ಹಿಂದೆ ದ್ರೌಪದಿಯನ್ನು ಪರಮಾತ್ಮ ಕಾಪಾಡಿದಂತೆ, ಅಮ್ಮನ ಹಿಂದೆ ನಿಂತು ಆತ ಎಲ್ಲವನ್ನೂ ಸುಸೂತ್ರವಾಗಿ ಮಾಡಿಸಿಕೊಟ್ಟನೇ ಎಂದೆನಿಸಿದ್ದೂ ಉಂಟು. ನನ್ನಕ್ಕನೂ ಸಾಕಷ್ಟು ಸಹಾಯ ಮಾಡುತ್ತಿದ್ದಳು. ಕೆಲವೊಮ್ಮೆ ಕೆಲಸದ ಒತ್ತಡದಲ್ಲಿ ಚಕ್ಕುಲಿ ಸುತ್ತು ಬರದೇ ಒದ್ದಾಡಿಸಿದಾಗ ಅಮ್ಮ ಸಹನೆ ಕಳೆದುಕೊಂಡದ್ದೂ ಇದೆ. ನನಗನಿಸುತ್ತೆ ಆ ದಿನ ಕೃಷ್ಣ ಇನ್ನ್ಯಾವುದೋ ಮನೆಯಲ್ಲಿ ಬ್ಯುಸಿ ಆಗಿದ್ದಿರಬಹುದು. ನಾವು ನಂತರ ದಾಂಡೇಲಿಗೆ ವರ್ಗವಾಗಿ ಹೋದಾಗ, ಸುದೈವದಿಂದ ಮಾಷ್ಟ್ರನ್ನೂ ಅಲ್ಲಿಗೆ ವರ್ಗ ಮಾಡಿದ್ದರು. ದಾಂಡೇಲಿಯಲ್ಲಿ ಮಾಷ್ಟ್ರು ತಮ್ಮೊಂದಿಗಿದ್ದ ಬಾಡಿಗೆ ಕೋಣೆಗಳ ಸಂಕೀರ್ಣದ ಗೆಳೆಯರನ್ನು ಸೇರಿಸಿ ಒಂದು ಸಂಗೀತ ಗುಂಪನ್ನು (ಇಲ್ಲಿಯ ಬ್ಯಾಂಡ್ ನಂತೆ) ಕಟ್ಟಿದರು. ಮಾಷ್ಟ್ರು ಪ್ರಮುಖ ಹಾಡುಗಾರ ಹಾಗೂ ಸವ್ಯಸಾಚಿ , ಚೇತನ್ ಮಾಮ್ ತಬಲಾ ವಾದಕ, ದತ್ ಮಾಮ್ ಹಾರ್ಮೋನಿಯಂ ಹಾಗೂ ನನ್ನದು ಕೊಳಲು. ಚೇತನ್ ಮಾಮ್ ಹಾಗೂ ದತ್ ಮಾಮ್ ಕೂಡ ಮಧುರವಾಗಿ ಹಾಡುತ್ತಿದ್ದರು. ನಮ್ಮ ಗೋಕುಲಾಷ್ಟಮಿಗೆ ಈಗ ಹೊಸ ಕಳೆ ಬಂದಿತ್ತು. ಒಮ್ಮೆ ಅವರ ಬಿಲ್ಡಿಂಗನಲ್ಲೇ ಇದ್ದ ಉತ್ತರ ಕರ್ನಾಟಕದವರೊಬ್ಬರು (ಅವರ ಹೆಸರು ಈಗ ಮರೆತು ಹೋಗಿದೆ) ಪೂಜೆಗೆ ಬಂದಿದ್ದರು. ಅವರು ಕಟ್ಟರ್ ಕೃಷ್ಣನ ಭಕ್ತ. ಅವರು ಶುರು ಮಾಡಿದ  ಭಜನೆ ಅಂದು ಮುಗಿಯಲೇ ಇಲ್ಲ. ಮಾರನೇ ದಿನ ಕೆಲಸಕ್ಕೆ ಹೋಗಬೇಕಾದವರೆಲ್ಲ ಕಂಗಾಲಾಗಿ ಹೋದರು. ಎಲ್ಲರ ಹೊಟ್ಟೆ ಚುರುಗುಟ್ಟುತ್ತಿತ್ತು. ಅಂದು ನಮ್ಮ ಗಮನವೆಲ್ಲ ಗಡಿಯಾರದತ್ತ ಇತ್ತೇ ಹೊರತು ಅವರ ನಾನ್-ಸ್ಟಾಪ್ ಭಜನೆಗಳತ್ತಲ್ಲ! ಅಂದು ಮಾತ್ರ ಕೃಷ್ಣ ನಮ್ಮ ಮನೆಯಲ್ಲಿ ಮಧ್ಯ ರಾತ್ರಿಗೆ ಹುಟ್ಟಿದ್ದ. ಎಂದಿಗೂ ಲಘು ಪ್ರಸವದಿಂದ ಹೊರಬರುತ್ತಿದ್ದ ದೇವಕಿ, ಅಂದು ತುಂಬಾ ನೋವು ಉಂಡಿರಬೇಕು. ಕೃಷ್ಣ ಪರಮಾತ್ಮನೂ ತಣ್ಣಗಿನ ಅನ್ನ ಉಣ್ಣ ಬೇಕಾಯ್ತು. ಗೋಕುಲಾಷ್ಟಮಿ ಎಂದರೆ ನನ್ನ ಕಣ್ಣ ಮುಂದೆ ಬರುವುದು ಈ ಚಿತ್ರಗಳು. 

ದಹಿ ಹಂಡಿ ಒಡೆಯಲು ಸಾಗುತ್ತಿರುವ ಗೋವಿಂದಗಳು

ಮುಂದೆ ನನ್ನ ಕರ್ಮ ಭೂಮಿ ಮುಂಬಯಿಗೆ ವರ್ಗಾಂತರವಾಯಿತು. ಇದೊಂದು ಬಹು ಸಂಸ್ಕೃತಿಗಳು ಒಂದಾಗುವ ಸಂಗಮ ಭೂಮಿ. ಇಲ್ಲಿಯ ದಹಿ ಹಂಡಿ (ಮೊಸರು ಕುಡಿಕೆ) ಸಂಪ್ರದಾಯ ಚಿರಪರಿಚಿತ. ಸ್ವತಃ ನೋಡದವರಿಗೂ ಇದರ ದರ್ಶನ ಹಿಂದಿ ಸಿನೆಮಾಗಳ ಮೂಲಕ ಆಗಿರುತ್ತದೆ. ಜಯಂತ್ ಕಾಯ್ಕಿಣಿಯವರು ತಮ್ಮ ಕಥೆಯಲ್ಲೂ ದಹಿ ಹಂಡಿ ಸಂಪ್ರದಾಯದ ಪ್ರಸ್ತಾವ ಮಾಡಿದ್ದಾರೆ. ದಹಿ ಹಂಡಿಯನ್ನು ಭಾರತದ ಇತರೆಡೆಗೂ ಆಚರಿಸುತ್ತಾರೆ, ಆದರೆ ಅವನ್ನು ನಾನು ನೋಡಿಲ್ಲ. ಹಾಗೆ ನೋಡಿದರೆ, ನನ್ನ ಈ ಸಲದ ಮುಂಬೈ ಪ್ರವಾಸದವರೆಗೂ ನಾನು ದಹಿ ಹಂಡಿ ನೋಡಿರಲಿಲ್ಲ. ತೀವ್ರ ಕೆಲಸದ ಒತ್ತಡದ ನಡುವೆ ಹೆಚ್ಚಿನ ಯಾವುದೇ ಹಬ್ಬ ಹರಿದಿನಗಳ ಆಚರಣೆಯಲ್ಲಿ ನಾವು ಪಾಲ್ಗೊಳ್ಳುತ್ತಿರಲಿಲ್ಲ; ಇದೊಂದು ನೆವವಾಗಿರಬಹುದು. ದಹಿ ಹಂಡಿ ಗೋಕುಲಾಷ್ಟಮಿಯ ಮಾರನೇ ದಿನ ಆಚರಿಸಲ್ಪಡುತ್ತದೆ. ಎತ್ತರದಲ್ಲಿ ಕಟ್ಟಿದ ಮೊಸರು ಕುಡಿಕೆಯನ್ನು ಮಾನವ ಶಿಖರವನ್ನು ಕಟ್ಟಿ ಗಡಿಗೆ ಒಡೆದವರಿಗೆ ಅದರೊಳಗಿನ ಇನಾಮು. ಈ ಸಾಹಸವನ್ನು ಮಾಡುವವರನ್ನು ಗೋವಿಂದ ಎಂದು ಕರೆಯುತ್ತಾರೆ. ನಗರದ ಮೂಲೆಮೂಲೆಗಳಿಂದ ಈ ಗೋವಿಂದ ಗುಂಪುಗಳು ತಾಲೀಮು ಮಾಡಿ ಸಿದ್ಧವಾಗಿ ಟ್ರಕ್ಕುಗಳಲ್ಲಿ, ಬೈಕುಗಳಲ್ಲಿ ತಂಡದ ಸಮವಸ್ತ್ರ ಧರಿಸಿ, ವಿವಿಧೆಡೆ ಕಟ್ಟಿದ ಮೊಸರು ಕುಡಿಕೆಗಳನ್ನು ಒಡೆಯುವ ಸವಾಲನ್ನು ಸ್ವೀಕರಿಸುತ್ತವೆ. ಕಟ್ಟುಮಸ್ತಾದ ಗಂಡಸರು ಶಿಖರದ ಅಡಿಪಾಯವಾಗಿದ್ದು, ಚುರುಕಾದ ತೆಳ್ಳಗಿನವನು ಶಿಖರದ ತುದಿ ಹತ್ತುವುದು ವಾಡಿಕೆ. ಈ ಕಾರ್ಯಕ್ರಮದ ವಾತಾವರಣಕ್ಕೆ ಬಣ್ಣ ಕಟ್ಟುವುದು ತಂಡದ ತಮಟೆ ಬಡಿತ (ಈಗ ಹೆಚ್ಚಾಗಿ ಸ್ನೇರ್ ಡ್ರಮ್), ಧ್ವನಿ ವರ್ಧಕದಲ್ಲಿ ಹರಿದು ಬರುವ ಸಂದರ್ಭೋಚಿತ ಹಾಡುಗಳು, ಕಿಕ್ಕಿರಿದು ನೆರೆಯುವ ಜನ ಸಮೂಹದ ಪ್ರೋತ್ಸಾಹದಾಯಕ ಉದ್ಗಾರಗಳು, ಶಿಳ್ಳೆಗಳು. ಮೊದಲು ಮುಂಬೈನ ಚಾಳುಗಳಲ್ಲಿ ನಡೆಯುತ್ತಿದ್ದ ಸ್ಪರ್ಧೆಗೆ ಈಗ ಹೊಸ ಆಯಾಮ ದೊರಕಿದೆ. ರಾಜಕಾರಣಿಗಳು ತಮ್ಮ ವಿಭಾಗದಲ್ಲಿ ಭಾರಿ ಮೊತ್ತದ ಬಹುಮಾನವನ್ನು ಕೊಡುತ್ತಾರೆ. ಮಡಿಕೆ ಮುಟ್ಟಲಾಗದಿದ್ದವರಿಗೂ ಬಹುಮಾನವಿದೆ. ಅಂಥವರು ಎಷ್ಟು ಮಜಲುಗಳನ್ನು ನಿರ್ಮಿಸಿದ್ದರು ಎಂಬುವುದರ ಮೇಲೆ ಬಹುಮಾನದ ಮೊತ್ತ ನಿರ್ಧರಿತವಾಗಿರುತ್ತದಂತೆ. ಸಿನೆಮಾಗಳಲ್ಲಿ ಚಾಳ್ ನಲ್ಲಿ ಎದುರು ಬದುರಿನ ಕಟ್ಟಡಗಳಿಗೆ ಮಡಿಕೆ ಕಟ್ಟಿದ್ದನ್ನು ಕಂಡು ಗೊತ್ತಿದ್ದ ನನಗೆ, ಈ ಸಲ ಕ್ರೇನಿಗೆ ಕಟ್ಟಿದ್ದ ಮಡಕೆ ನೋಡಿ ಆಶ್ಚರ್ಯವಾಯಿತು. ಇದು ದಹಿ ಹಂಡಿಗೆ ಆಗಿರುವ ಆಧುನಿಕತೆಯ ಒಂದು ಲೇಪ.  ಸುಮಾರು  ೩ ತಾಸುಗಳ ನಂತರವೂ ಯಾವ ತಂಡವೂ ಮಡಕೆ ಮುಟ್ಟಿದ್ದನ್ನು ಕಾಣದೆ ನಿರಾಸೆಯೂ ಆಯಿತು. ಮೋಜು, ಮಸ್ತಿ, ಆರೋಗ್ಯಕರ ಸ್ಪರ್ಧೆಯನ್ನು ಪ್ರೋತ್ಸಾಹಿಸುತ್ತಿದ್ದ ದಹಿ ಹಂಡಿ ನವ್ಯತೆಯ ಮೆರುಗಿನಲ್ಲಿ ತನ್ನ ವಿಶಿಷ್ಟತೆಯನ್ನು ಕಳೆದುಕೊಳ್ಳುತ್ತಿದೆಯೇ ಎಂದು ಖೇದವೆನಿಸಿತು. ೧೫-೨೦ ಮಜಲುಗಳನ್ನು ಕಟ್ಟುವ ಭರದಲ್ಲಿ, ಗೋವಿಂದರು ಬಿದ್ದು ಗುರುತರ ಗಾಯಕ್ಕೀಡಾಗುವುದು ಇಂದು ಅಪರೂಪವಲ್ಲ. ಕಳೆದ ವರ್ಷ ಸುಮಾರು ೨೦೦ ಜನ ದಹಿ ಹಂಡಿ ಕಾರ್ಯಕ್ರಮದಲ್ಲಿ ಅಪಘಾತಕ್ಕೀಡಾಗಿದ್ದರಂತೆ. ತುದಿಯೇರಲು ಚಿಕ್ಕವರಿಗೆ ಜಾಸ್ತಿ ಬೇಡಿಕೆ ಇರುವುದರಿಂದ ಮಕ್ಕಳೂ  ಅಪಘಾತಕ್ಕೆ ತುತ್ತಾಗುತ್ತಿದ್ದರು. ಅದರಿಂದಲೇ ಈಗ ಹೈಕೋರ್ಟ್ ೧೮ಕ್ಕ್ಕಿಂತ ಚಿಕ್ಕವರು ದಹಿ ಹಂಡಿಯಲ್ಲಿ ಪಾಲ್ಗೊಳ್ಳಬಾರದು ಎಂದು ನಿರ್ಬಂಧಿಸಿದೆ. 

ಕ್ರೇನಿಗೆ ಕಟ್ಟಿರುವ ಮೊಸರು ಕುಡಿಕೆ

ನಾನು ನನ್ನ ಮಾವನ ಮನೆಯಲ್ಲಿ ವಾಸ್ತವ್ಯ ಹೂಡಿದ್ದೆ. ಅವರ ಸೊಸೈಟಿಯಲ್ಲಿ ಸಾಕಷ್ಟು ಜನ ಗುಜರಾತಿಗಳು ನೆಲೆಸಿದ್ದಾರೆ. ಅವರಿಗೆ ಗೋಕುಲಾಷ್ಟಮಿ ದೊಡ್ಡ ಹಬ್ಬ. ಅವರ ಸಾಮೂಹಿಕ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುವ ವಿಶೇಷ ಅನುಭವ ನನಗಾಯಿತು. ಸುಮಾರು ೧೦:೩೦ಕ್ಕೆ ಕಾರ್ಯಕ್ರಮ ಆರಂಭವಾಗುತ್ತದೆ ಎಂದು ನನ್ನ ನಾದಿನಿ, ಅವಳ ಮಗಳೊಡನೆ ಕೆಳಗಿಳಿದೆ. ಕೆಲವು ಮಕ್ಕಳು ಕೃಷ್ಣ, ರಾಧೆಯ ದಿರಿಸಿನಲ್ಲಿ ಆಟವಾಡುತ್ತಿದ್ದು, ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ಮಹಿಳೆಯರು ಮ್ಯೂಸಿಕ್ ಪ್ಲೇಯರ್ನಲ್ಲಿ ಹರಿಯುತ್ತಿದ್ದ ಭಕ್ತಿಗೀತೆಗಳಿಗೆ ವರ್ತುಲಾಕಾರವಾಗಿ ತಿರುಗುತ್ತ ಗರಭಾ ನೃತ್ಯ ಮಾಡಿದರು. ಪಕ್ಕದಲ್ಲೇ ಮಕ್ಕಳಿಗಾಗಿ ದಹಿ ಹಂಡಿಯನ್ನೂ ಕಟ್ಟಿದ್ದರು. ಹನ್ನೆರಡಾಗುತ್ತಿದ್ದಂತೆ, ಮೇಲಿನ ಮನೆಯಿಂದ ಕೃಷ್ಣನಂತೆ ಅಲಂಕರಿಸಿದ ಮುದ್ದಾದ ಮಗುವನ್ನು ಬುಟ್ಟಿಯಲ್ಲಿ ಮಲಗಿಸಿ ತಲೆಯ ಮೇಲೆ ‘ಅಂದು’ ವಸುದೇವ ಹೊತ್ತುಕೊಂಡು ಬಂದಂತೆ ತಂದರು. ಹೊರಗಡೆ ಮಳೆ ಸುರಿಯುತ್ತಿತ್ತು. ಒಂದರ್ಥದಲ್ಲಿ ಕೃಷ್ಣನ ಜನ್ಮವನ್ನು  ಹೂಬೇಹೂಬು ನಿರ್ಮಿಸಿದಂತಿತ್ತು. ಆದರೆ ಇಲ್ಲಿ ದೇವಕಿಯೇ ಮಗನನ್ನು ಹೊತ್ತಿದ್ದಳು. ಕೃಷ್ಣನನ್ನು ತೊಟ್ಟಿಲಿಗೆ ಹಾಕಿ ತೂಗಿ, ಪೂಜೆ ಮಾಡಿದಮೇಲೆ ದಹಿ ಹಂಡಿ ಕಾರ್ಯಕ್ರಮ ಶುರುವಾಯಿತು. ಒಂದಾಳು ಎತ್ತರದಲ್ಲಿದ್ದ ಮಡಕೆಯನ್ನು ಹೆಚ್ಚು ಶ್ರಮ ಪಡದೇ ಮಕ್ಕಳು ಒಡೆದರು. ಅವರ ಉತ್ಸಾಹ, ಒಡೆದಾಗ ಪಟ್ಟ ಸಂಭ್ರಮ ಯಾವುದೇ ಆಧುನಿಕ ದಹಿಹಂಡಿಗಿಂತ ಅರ್ಥಪೂರ್ಣವೂ, ಮನೋಹರವೂ ಆಗಿತ್ತೆನ್ನುವುದರಲ್ಲಿ ಸಂದೇಹವಿಲ್ಲ. ಮಡಕೆಯಲ್ಲಿದ್ದ ಚಾಕಲೇಟುಗಳನ್ನು ನಾದಿನಿ ಮಗಳು ಹೆಕ್ಕಿ ತಂದಿದ್ದಳು. ಅವನ್ನು ಮೆಲ್ಲುತ್ತ ಮೇಲೆ ಫ್ಲ್ಯಾಟಿಗೆ ಬಂದಾಗ ಗಂಟೆ ಒಂದಾಗಿತ್ತು. ಸಾಕಷ್ಟು ವರ್ಷಗಳ ಮೇಲೆ ಗೋಕುಲಾಷ್ಟಮಿಯನ್ನು ಭಾರತದಲ್ಲಿ ಆಚರಿಸಿ ಆನಂದಿಸಿದ ತೃಪ್ತಿ ಮನದಲ್ಲಿತ್ತು. ಇದು ಎರಡನೇ ಬಾರಿ ಮಧ್ಯರಾತ್ರಿಯಲ್ಲಿ ಜನ್ಮಾಷ್ಟಮಿಯನ್ನು ಆಚರಿಸಿದ್ದು ಎನ್ನುವುದೂ ನೆನಪಾಯಿತು. 

-ರಾಂ 

 

ಸಾಗರ ತಡಿಯಿಂದ ನೀರ್ಗಲ್ಲ ನದಿಗೆ

ಬೇಸಿಗೆಯಲ್ಲಿ ಶಾಲೆ-ಕಾಲೇಜುಗಳಿಗೆ ರಜೆ . ಪರೀಕ್ಷೆ ಮುಗಿಸಿದ ಮಕ್ಕಳಿಗೆ ಮುಂದಿನ ಶೈಕ್ಷಣಿಕ ವರ್ಷ ಶುರುವಾಗುವ ಮೊದಲು ತಮ್ಮ ಬ್ಯಾಟರಿಗಳನ್ನು ರೀಚಾರ್ಜ್ ಮಾಡುವ ಕಾಲ. ಗೆಳೆಯರೊಂದಿಗೆ ಸಮಯದ ಮಿತಿಯೆಲ್ಲದೇ ಕಲೆತು ಮೈಮರೆಯುವ ಸಂದರ್ಭ. ವರ್ಷವಿಡೀ ಕೆಲಸ , ಟ್ಯಾಕ್ಸಿ ಡ್ರೈವಿಂಗ್ (ಮಕ್ಕಳ) ಹೀಗೆ ನೂರೆಂಟು ಜವಾಬ್ದಾರಿಗಳನ್ನು ಹೊತ್ತ ತಂದೆ – ತಾಯಿಯರಿಗೂ ವಿರಮಿಸಿ ಮತ್ತೆ ಚೇತೋಹಾರಿಯಾಗುವ ಸಮಯ. ಎಲ್ಲ ರಜೆ – ಪ್ರವಾಸಗಳು ಈ ಗುರಿಯನ್ನು ಸಾಧಿಸಲು ಅವಕಾಶ ಮಾಡಿಕೊಡುವ ಖಾತರಿ ಇರುವುದಿಲ್ಲ . ಕಳೆದ ತಿಂಗಳು ನಾವು ಕೈಗೊಂಡ ನಾರ್ವೆ ದೇಶದ ಫ್ಯೋರ್ಡ್ ಗಳ ನೌಕಾ ಯಾನ ನಮಗೆ ವಿಭಿನ್ನ ಅನುಭವ ಕೊಟ್ಟಿದ್ದಲ್ಲದೇ, ಇವೆಲ್ಲ ಗುರಿಗಳನ್ನು ಸಾಧಿಸುವ ಅಪೂರ್ವ ಅವಕಾಶ ಮಾಡಿಕೊಟ್ಟಿತು . ಈ ಪ್ರವಾಸದ ಹೈಲೈಟ್ ಗಳಲ್ಲಿ ಒಂದು ಅನುಭವವನ್ನು ನಿಮ್ಮೊಂದಿಗೆ ಇಲ್ಲಿ ಚಿತ್ರಗಳೊಂದಿಗೆ ಹಂಚಿಕೊಂಡಿದ್ದೇನೆ .

ಪ್ರೇಮಿಕೆಯಾದ ಭೂಮಿಯನ್ನು ಮುಟ್ಟುವ ತವಕದಲ್ಲಿ ಪರ್ವತಗಳ ಸಾಲನ್ನು ಸರಿಸುತ್ತ ಅಲ್ಲಲ್ಲಿ ದ್ವೀಪಗಳನ್ನು ನಿರ್ಮಿಸಿ, ಒಳನುಗ್ಗುವ ಸಾಗರ, ಪ್ರಿಯಕರನಾದ ಸಾಗರವನ್ನು ಭೂಮಿ ತನ್ನ ಅಗಾಧ ಬಾಹುಗಳಿಂದ ಅಪ್ಪಿ ವಿರಮಿಸುವ ಜಾಗವೇ ನಾರ್ವೆ ದೇಶದ ಫ್ಯೋರ್ಡ್ (fjord) ಗಳು. ಇಲ್ಲಿ ಸಾಗರಕ್ಕೆ ರೋಷವಿಲ್ಲ, ಸಾಗರದೊಂದಿಗೆ ಗುದ್ದಾಡಲು ದಡದಲ್ಲಿ ಬಂಡೆಗಳಿಲ್ಲ. ಅಲೆಗಳ ಅಬ್ಬರವಿಲ್ಲದೆ, ಸಾಗರ ಭೂಮಿಗಳೆರಡೂ ಸಂತೃಪ್ತರಾಗಿ ಒಂದರ ತೋಳಲ್ಲೊಂದು ಒರಗಿ ವಿಶ್ರಮಿಸುತ್ತಿವೆಯೋ ಎಂಬ ಭಾವನೆ ಬರುವುದು ಸಹಜ. ಜೋಗುಳ ಹಾಡುವ ಗಾಳಿ, ಹೊದಿಕೆ ಹೊದಿಸಲು ಶ್ರಮಿಸುತ್ತಿರುವ ಮೋಡಗಳು ತಾವೂ ಈ ಸಮಾಗಮದ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಕಣ್ಣು , ಕಿವಿಗಳಿಗೆ ವಿಶಿಷ್ಟ ಅನುಭವ (ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ). ಇಂತಹ ಸುಂದರ, ಶುಭ್ರ ನಸುಕಿನಲ್ಲಿ, ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಹದಾರನೆ ಎರಡೂ ಕಡೆ ಮಲಗಿದ್ದ ಪರ್ವತ ಸಾಲುಗಳ ನಡುವೆ ಬೆರಳಿನಂತೆ ಚಾಚಿದ್ದ ಸಾಗರದಲ್ಲಿ ೧೯ ಅಂತಸ್ತುಗಳಿದ್ದರೂ ಅಲ್ಲಾಡದೇ ಹಂಸದಂತೆ ಗಂಭೀರವಾಗಿ ಭೂಮಿ – ಸಾಗರಗಳ ವಿರಾಮಕ್ಕೆ ಚ್ಯುತಿಯಾದೀತೇನೋ ಎಂಬಂತೆ ಮೆಲ್ಲನೆ ಮುಂದಡಿಯಿಡುತ್ತಿತ್ತು P&O ಸಂಸ್ಥೆಯ ಅಯೋನ ಎಂಬ ಹಡಗು. ಬೆಳಗ್ಗೆ ಎದ್ದಾಗ ನಿಮ್ಮ ಕಣ್ಮುಂದೆ ಈ ದೃಶ್ಯ ಅನಾವರಣಗೊಂಡಾಗ ಉಕ್ಕುವ ಭಾವನೆಗಳನ್ನು ವರ್ಣಿಸಲು ಸಾಧ್ಯವೇ !

ಪರ್ವತಗಳ ತೆಕ್ಕೆಯಲ್ಲಿ ವಿರಮಿಸುತ್ತಿರುವ ನೊರ್ಡ್ ಫ್ಯೋರ್ಡ್

ನಮ್ಮ ನಾರ್ವೆ ಫ್ಯೋರ್ಡ್ ಯಾನದ ಒಂದು ವಿಶ್ರಾಮ ಸ್ಥಳ ಓಲ್ಡೆನ್ ಎಂಬ ಗ್ರಾಮ. ಓಲ್ಡೀಲ್ವ ನದಿ ಹಾಗೂ ನೋರ್ಡ್ ಫ್ಯೋರ್ಡ್ ಗಳ ಸಂಗಮ ಸ್ಥಳ ಇದು. ಕೆಲವೇ ನೂರು ಜನರಿರುವ ಈ ಗ್ರಾಮಕ್ಕೆ ಸುಮಾರು ೩ ಲಕ್ಷ ಜನ ಬೇಸಿಗೆಯಲ್ಲಿ ಅಡಿ ಇಡುತ್ತಾರೆ. ಇಲ್ಲಿನ ಮುಖ್ಯ ಆಕರ್ಷಣೆ ಹತ್ತಿರದ ಬರ್ಕ್ಸ್ಡಾಲ್ಸ್ ಬ್ರೀನ್ (Briksdalsbreen) ಎಂಬ ಹಿಮನದಿ. ಓಲ್ಡೆನ್ ಗ್ರಾಮದಿಂದ ಈ ಹಿಮನದಿಯ ತಪ್ಪಲು ಕೇವಲ ೨೫ ಕಿ.ಮೀ ದೂರದಲ್ಲಿದೆ. ಹಿಮನದಿಗೆ ಹೋಗಲು ಓಲ್ಡೆನ್ ಬಂದರಿನಿಂದ ಖಾಸಗಿ ಬಸ್ಸುಗಳ ವ್ಯವಸ್ಥೆಯಿದೆ. ಪರ್ವತಗಳ ನಡುವೆ ಹಾಸಿದ ಹಚ್ಚ ಹಸಿರಿನ ಶಾಲಿನ ನಡುವೆ ಹಾದಿ ಸುತ್ತು ಬಳಸುತ್ತ ಸಾಗುತ್ತದೆ. ಎಡಕ್ಕೊಮ್ಮೆ, ಬಲಕ್ಕೊಮ್ಮೆ ಕಾಡಿನ ಮಧ್ಯೆ ರಭಸದಿಂದ ಹರಿಯುವ ನೊರೆ ನೊರೆಯಾದ ಓಲ್ಡೀಲ್ವ ನದಿ ಕಣ್ಣ ಮುಚ್ಚಾಲೆ ಆಡುತ್ತ ಜೊತೆ ನೀಡುತ್ತದೆ. ಸಾಹಸ ಪ್ರಿಯರಿಗೆ ಈ ನದಿಯಲ್ಲಿ ರಾಫ್ಟಿಂಗ್ ಮಾಡಬಹುದು. ನಡು ದಾರಿಯಲ್ಲಿ ನೀಲ ಹಸಿರು (turquoise) ಬಣ್ಣದ ಕಣ್ಣಿಗೆ ಕಟ್ಟುವ ಓಲ್ಡೆವಾಟ್ನೆಟ್ ಎಂಬ ಸರೋವರ ಸಿಗುತ್ತದೆ. ಇದರ ಸೌಂದರ್ಯವನ್ನು ಕಟ್ಟಿಹಾಕಲು ನನ್ನ ಬತ್ತಳಿಕೆಯಲ್ಲಿ ಸೂಕ್ತ ಶಬ್ದಗಳಿಲ್ಲ, ಕ್ಯಾಮರಾ ಕೂಡ ಇದರ ಸೌಂದರ್ಯಕ್ಕೆ ನ್ಯಾಯ ದೊರಕಿಸಿಲ್ಲ. ಈ ಸರೋವರವನ್ನು ಬಳಸಿ ಬಸ್ಸು ಬರ್ಕ್ಸ್ಡಾಲ್ಸ್ ಬ್ರೀನ್ ತಪ್ಪಲಿಗೆ ಬಂದಿಳಿದಾಗ ಎದುರು ಧುತ್ತನೆ ಎದುರಾಗುವುದು ನೂರಾರು ಮೀಟರ್ ಎತ್ತರದ ಅನಾಮಧೇಯ ಜಲಪಾತ. ನಾರ್ವೆಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಜಲಪಾತಗಳು. ಪರ್ವತಗಳ ತುದಿಯಲ್ಲಿ ಮಡುಗಟ್ಟಿರುವ ಹಿಮಕ್ಕೆ ಮೇಲಿನಿಂದ ಹಾರುವುದನ್ನು ಬಿಟ್ಟರೆ ಬೇರೆ ಹಾದಿಯೇ ಇಲ್ಲವೇನೋ! ಮೊದಲೇ ಜನಸಂಖ್ಯೆ ವಿರಳ, ಕಾಣುವ ಜಲಪಾತಗಳಿಗೆಲ್ಲ ಹೆಸರಿಡುವಷ್ಟು ವ್ಯವಧಾನ ಯಾರಿಗಿದ್ದೀತು? ಈ ದೇಶದಲ್ಲಿ ಜನರಿಗಿಂತಲೂ ಜಲಪಾತಗಳ ಸಂಖ್ಯೆಯೇ ಜಾಸ್ತಿ ಇದೆಯೇನೋ ಎಂಬ ಅನುಮಾನ ನನಗಿದೆ.   

ಓಲ್ಡೆವಾಟ್ನೆಟ್ ಸರೋವರ

ತಪ್ಪಲಿನ ತಂಗುದಾಣದಿಂದ ಹಿಮನದಿಯ ಬುಡಕ್ಕೆ ಸುಮಾರು ೨೦೦ ಮೀಟರ್ ಏರನ್ನು ಏರಲು ೨.೫-೩ ಕಿ.ಮೀ ದೂರದ ದಾರಿ ಮಾಡಿದ್ದಾರೆ. ಹತ್ತಲು ತೊಂದರೆಯಿದ್ದವರಿಗೆ ವಿದ್ಯುಚ್ಚಾಲಿತ ಗಾಡಿಗಳ ವ್ಯವಸ್ಥೆಯಿದೆ. ದಾರಿಯುದ್ದಕ್ಕೂ ಬರ್ಚ್ ನಂತಹ ಮರಗಳ ಲಘು ಕಾಡು, ಬಣ್ಣಬಣ್ಣದ ಹೂವುಗಳನ್ನು ತೊಟ್ಟ ಗಿಡಗಳು ಮನಸ್ಸನ್ನು ಮುದಗೊಳಿಸುತ್ತ ಹಾದಿಯ ದೂರವನ್ನು ಕುಗ್ಗಿಸುತ್ತವೆ. ಸುಮಾರು ಅರ್ಧ ಕಿ.ಮೀ ದೂರ ಕ್ರಮಿಸಿದಾಗ ಎದುರಾಗುವುದು ಹಿಮನದಿಯಿಂದ ಕರಗಿ ಬರುವ ನದಿ ನಿರ್ಮಿಸಿದ ಕ್ಲೇಯ್ವಫಾಸ್ಸೇನ್ (Kleivafossen) ಎಂಬ ಭರ್ಜರಿ ಜಲಪಾತ. ಮೈತುಂಬಿ ಭೋರ್ಗರೆಯುತ್ತ ಧುಮುಕುವ ಜಲಪಾತ ಸೃಷ್ಟಿಸುವ ಆಹ್ಲಾದಕರ ತುಂತುರು ವೃಷ್ಟಿ ಬಿರು ಬಿಸಿಲಿದ್ದ ದಿನ ಮೈ-ಮನಗಳನ್ನು ತಂಪಾಗಿಸುತ್ತದೆ. ಅಲ್ಲಿ ಮೂಡಿ ಮರೆಯಾಗುವ ಕಾಮನಬಿಲ್ಲನ್ನು ನೋಡುತ್ತಾ ಇಡೀ ದಿನ ಕುಳಿತಿರಬಹುದು. 

ಕ್ಲೇಯ್ವಫಾಸ್ಸೇನ್ ಜಲಪಾತ (ಹಿನ್ನಲೆಯಲ್ಲಿ ಬರ್ಕ್ಸ್ಡಾಲ್ಸ್ ಬ್ರೀನ್)

ಗಡಿಬಿಡಿಯಲ್ಲಿ ಕೆಳಮುಖವಾಗಿ ಓಡುವ ನದಿಯ ಪಕ್ಕ ಊರ್ಧ್ವಮುಖವಾಗಿ ಸಾಗುವ ಕಾಲುಹಾದಿಯುದ್ದ ಅಲ್ಲಲ್ಲಿ ಹಿಮನದಿ ಹಾಗೂ ಅಲ್ಲಿನ ಭೂಭಾಗದ ಬಗ್ಗೆ ಉಪಯುಕ್ತ ಮಾಹಿತಿ ಕೊಡುವ ಫಲಕಗಳನ್ನು ನಿಲ್ಲಿಸಿದ್ದಾರೆ. ಬರ್ಕ್ಸ್ಡಾಲ್ಸ್ ಬ್ರೀನ್, ಯೂರೋಪಿನಲ್ಲೆ ಅತಿ ದೊಡ್ಡದಾದ ಜೋಸ್ಟೆಡಾಲ್ಸ್ ಬ್ರೀನ್ ಎಂಬ ಅಗಾಧ ಹಿಮನದಿಯ ೫೦ ಬಾಹುಗಳಲ್ಲೊಂದು. ಇತರ ಹಿಮನದಿಗಳಿಗಿಂತ ಅತಿ ಸುಲಭವಾಗಿ ಬರ್ಕ್ಸ್ಡಾಲ್ಸ್ ಬ್ರೀನ್ ನ್ನು ತಲುಪಬಹುದು ಎಂಬುದೇ ಇದರ ಮುಖ್ಯ ಆಕರ್ಷಣೆ. ಭೂಮಿಯ ಒಡಲಿನಿಂದ ಉಕ್ಕಿ, ಪದರ ಪದರವಾಗಿ ಹೆಪ್ಪುಗಟ್ಟಿರುವ ಪಾರದರ್ಶಕ ಬಿಳಿ-ನೀಲ ಬಣ್ಣದ ನೀರ್ಗಲ್ಲು, ಹನಿ-ಹನಿಯಾಗಿ ತೊಟ್ಟಿಕ್ಕುತ್ತ ಶಿಲೆಗಳನ್ನು ಕೊರೆದು ಹರಿದುಬರುವಾಗ ಖನಿಜಗಳ ಮಿಲನದಿಂದ ವಿಚಿತ್ರ ನೀಲಿ ಬಣ್ಣದ ಮಡುವಾಗಿ ಬುಡದಲ್ಲಿ ವಿಶ್ರಮಿಸಿದೆ. ಇದೇ ಕಾರಣಕ್ಕಾಗಿ ಈ ನೀರು ಕುಡಿಯಲು ಯೋಗ್ಯವಲ್ಲ!  ಕಳೆದ ಎರಡು ದಶಕಗಳಲ್ಲಿ ಬರ್ಕ್ಸ್ಡಾಲ್ಸ್ ಬ್ರೀನ್ ಸುಮಾರು ಅರ್ಧ ಕಿ.ಮೀ ನಷ್ಟು ಹಿಮ್ಮೆಟ್ಟಿದೆಯಂತೆ. ಚಳಿಗಾಲದ ಹಿಮಪಾತ ಇದರ ಗಾತ್ರವನ್ನು ನಿರ್ಧರಿಸಿದರೂ, ಹಿನ್ನಲೆಯಲ್ಲಿ ೨೦-೨೧ನೇ ಶತಮಾನದಲ್ಲಿ ಏರಿರುವ ಉಷ್ಣತೆ ಮುಖ್ಯ ಕಾರಣವೆಂಬುದುದು ಕಟು ಸತ್ಯ. ಇಂಗ್ಲೆಂಡಿನಿಂದ ಸಾವಿರಾರು ಕಿ.ಮೀ ದೂರವನ್ನು ಡೀಸೆಲ್ ಎಣ್ಣೆಯಿಂದ ಚಲಿಸುವ ಬ್ರಹತ್ ಹಡಗಿನಲ್ಲಿ ವಾಯು ಮಾಲಿನ್ಯ ಮಾಡುತ್ತ, ಜಗತ್ತಿನ ಉಷ್ಣತೆಯನ್ನು ಹೆಚ್ಚಿಸುತ್ತ ಅದರ ಪ್ರಭಾವವನ್ನು ನೋಡುತ್ತಾ ನಿಂತಿದ್ದೇನಲ್ಲ, ಇದೆಂತಹ ವಿಪರ್ಯಾಸ! ಅದರೊಟ್ಟಿಗೆ ಪ್ರಕೃತಿಯ ಅಗಾಧತೆ, ಅಲ್ಲಿ ಅಡಗಿರುವ ಅದಮ್ಯ ಚೈತನ್ಯ, ಬೆಡಗು ಇವನ್ನೆಲ್ಲ ಅನುಭವಿಸುತ್ತ ಉಕ್ಕಿದ ಭಾವನೆಗಳೂ ಬಣ್ಣಿಸಲಸದಳ. ಶತಮಾನಗಳಿಂದ ಉದುರಿದ ಹಿಮವನ್ನು ಒಡಲಲ್ಲಿ ಒತ್ತಿಟ್ಟುಕೊಂಡು, ಹನಿಹನಿಯಾಗಿ ತೊಟ್ಟಿಕ್ಕಿಸಿ ಬೆಳೆಸಿದ ಮಡುವಿನಿಂದ ಹೊಮ್ಮುವ ನದಿ, ಇನ್ನಿಲ್ಲದ ಗಡಿಬಿಡಿಯಿಂದ ಗುಡ್ಡವನ್ನು ಜಾರಿ ಅನತಿ ದೂರದಲ್ಲಿರುವ ಸಾಗರವನ್ನು ಸೇರುವ ಪ್ರಯಾಣಕ್ಕೆ ನನ್ನನ್ನು ಸಾಕ್ಷಿಯಾಗಿಸಿದ ಈ ಯಾನ ಮರೆಯಲಾಗದ್ದು.

ಬರ್ಕ್ಸ್ಡಾಲ್ಸ್ ಬ್ರೀನ್ ಹಿಮ ನದಿ ಹಾಗೂ ಜಲಾಶಯ
  • ರಾಂ