`ಜನಪದ ಜಗುಲಿ` (ಈ-ಜಗುಲಿ ೩) ಕಾರ್ಯಕ್ರಮದ ವರದಿ – ರಮ್ಯ ಭಾದ್ರಿ

ಈ-ಜಗುಲಿಯನ್ನು ತುಂಬಿದ ಜನಪದದ ನಿನಾದ ..  

‘ಸದಾ ಅನಿರೀಕ್ಷಿತಗಳ ನಿರೀಕ್ಷೆಯಲ್ಲಿರುವುದೇ ಪ್ರಬುದ್ಧ ಬದುಕು’ ಎನ್ನುವ ನುಡಿಮುತ್ತಿನಂತೆ ನಮ್ಮೆಲ್ಲರ ಬದುಕಿನಲ್ಲಿ ಬಂದೆರಗಿದ ದೊಡ್ಡ ಅನಿರೀಕ್ಷಿತ ಮಹಾಮಾರಿ ಕರೋನ. ಈ ಕಾಣದ  ಕಂಟಕ ನಮ್ಮ ನಡುವೆಯಿದ್ದರೂ ಅದರೊಂದಿಗೆ ಬದುಕಲು ಕಲಿತಿದ್ದೇವೆ. ಹೊಸ ಸಹಜ (new normal) ಬದುಕಿಗೆ ಹೊಂದಿಕೊಳ್ಳಲು ಸಮಾಜಕ್ಕೂ, ಪರಿಸರಕ್ಕೂ ಸಹಕಾರಿಯಾಗುವಂತಹ, ನಮ್ಮ ಮುಂದಿನ ಬದುಕಿನ ಅವಿಭಾಜ್ಯ ಅಂಗಗಳಾಗಬಹುದಾದ ಅನೇಕ ಬದಲಾವಣೆಗಳನ್ನು ಸಹ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಈ ಹೊಂದಾಣಿಕೆ ಸಾಧ್ಯವಾಗಲು, ಬೀಗಮುದ್ರೆ ತಂದೊಡ್ಡಿದ ಸವಾಲುಗಳನ್ನು ಎದುರಿಸಲು ಬಹುತೇಕ ಜೊತೆಯಾಗಿದ್ದುದು ಅಂತರ್ಜಾಲ ವೆಂದರೆ ಎಲ್ಲರೂ ಒಪ್ಪುವಂತಹ ಮಾತು. ನಮ್ಮ ‘ಅನಿವಾಸಿ’ ಬಳಗಕ್ಕೂ ಇದರೊಂದಿಗಿನ ನಂಟು ಬಹಳ ದಿನಗಳದ್ದು. ಇತ್ತೀಚಿಗಂತೂ ಬಳಗದವರ ಒಡನಾಟದಿಂದ ಹಿಡಿದು, ಈಗಾಗಲೇ ಯಶಸ್ವಿಯಾಗಿ ನಡೆದ ‘ಥಟ್ ಅಂತ ಹೇಳಿ’, ‘ಈ ಹೊತ್ತಿಗೆ’, ಈ-ಜಗುಲಿ  ಕಾರ್ಯಕ್ರಮಗಳ ಫುಲ್ ಆನ್ ಎಂಟರ್ಟೈನ್ಮೆಂಟು! ಕವಿ ನಿಸಾರರ ಸ್ಮರಣೆಯಿಂದ ಪ್ರಾರಂಭವಾದ ನಮ್ಮ ‘ಈ-ಜಗುಲಿ’ಯ ಪಯಣ,  ಜಯಂತ್ ಕಾಯ್ಕಿಣಿಯವರೊಂದಿಗೆ ಸಂವಾದಿಸುತ್ತಾ ಬೆಳೆಯಿತು ಅನ್ನಬಹುದು. ಇದೀಗ ಈ-ಜಗುಲಿ 3 ರಲ್ಲಿ ಜನಪದ ಸಂಗೀತದ ಸಂಭ್ರಮವಿದ್ದುದರಿಂದ ಜನಪದ ಜಗುಲಿ ಎಂದು ನಾಮಕರಣವಾಯಿತು. 

ಜನಪದ ಜಗುಲಿ / ಈ-ಜಗುಲಿ 3 ಕಾರ್ಯಕ್ರಮದ ಪ್ರಚಾರಪತ್ರ

ಈ ಬಾರಿಯ ಈ-ಜಗುಲಿಗೆ ಹಲವು ವಿಶೇಷತೆಗಳಿವೆ. ಕಳೆದ ಎರಡು ಬಾರಿಯೂ ಅನಿವಾಸಿ ಬಳಗಕ್ಕೆ ಮಾತ್ರ ಸೀಮಿತವಾಗಿದ್ದ ಈ ಕಾರ್ಯಕ್ರಮ, ಈ ಬಾರಿ ”ವಿವಿಡ್ಲಿಪಿ’ಯ ಸತ್ಯಪ್ರಮೋದ್ ಲಕ್ಕುಂಡಿ  ಹಾಗು ’ಹೆಚ್ ಎನ್ ಬಿ ಸಿ’ಯ (HNBC) ಹರೀಶ್ ರಾಮಯ್ಯ ಅವರ ಸಹಕಾರದಿಂದ ಪ್ರಪಂಚದ ಮೂಲೆ ಮೂಲೆಗೂ ನೇರಪ್ರಸಾರದಲ್ಲಿ ತಲುಪುವಂತಾಗಿದ್ದು ವಿಶೇಷ. ಜೊತೆಗೆ ಕಲಾವಿದರು ಹಾಡಿದ ತುಣುಕುಗಳ ಟೀಸರ್ ವೀಡಿಯೊ ತಯಾರಿಸಿ ಎಲ್ಲರಿಗೂ ಕಾರ್ಯಕ್ರಮದ ವಿವರಗಳನ್ನು ತಲುಪುವಂತೆ ಮಾಡಿದ್ದರಿಂದ ಕಾರ್ಯಕ್ರಮಕ್ಕೆ ಉತ್ತಮ ಪ್ರಚಾರ ದೊರೆತದ್ದು; ಪ್ರಮೋದ್ ಹಾಗು ಹರೀಶ್ ಅವರ  ಪ್ರಯತ್ನ ಸಫಲವಾಗಿ ವೀಕ್ಷಕರು ತಮ್ಮ ಮನೆಯ ಜಗುಲಿಯಿಂದ ಜನಪದ ಜಗುಲಿಯನ್ನು ನೋಡುವಂತಾಗಿ ಜನರ ಮೆಚ್ಚುಗೆಯನ್ನು ಪಡೆದದ್ದು ಇನ್ನುಳಿದ ವಿಶೇಷಗಳು. 

ತೆರೆಯ ಹಿಂದೆ 

ಮೊದಲೇ ಹೇಳಿದಂತೆ, ಈ ಕಾರ್ಯಕ್ರಮ ಗೂಗಲ್ ಮಾತೆ, ಫೇಸ್ಬುಕ್ ಅಕ್ಕ, ಯೂ ಟ್ಯೂಬ್ ಅಣ್ಣ, ಜೂಮ್ ರಾಯ, ವಾಟ್ಸ್ ಆಪ್ ದೇವಿ ಇವರೆಲ್ಲರ ಕೃಪಾಕಟಾಕ್ಷದಿಂದ ಈ ಕಾರ್ಯಕ್ರಮ ನಿರ್ವಿಘ್ನವಾಗಿ ನೆರವೇರಿತು ಎಂದರೆ ತಪ್ಪಾಗಲಾರದು! ಈ-ಜಗುಲಿ 1 ಹಾಗು 2 ರ ನಂತರ 3ನೇಯದು ಸಂಗೀತಮಯವಾಗಿದ್ದರೆ ಚಂದ ಎನ್ನುವುದು ‘ಅನಿವಾಸಿ’ಯ ಸದಸ್ಯರ ಒಮ್ಮತದ ಅಭಿಪ್ರಾಯವಾಗಿತ್ತು. ಸಂಗೀತ ಎಂದ ತಕ್ಷಣ ಎಲ್ಲರಿಗೂ ಥಟ್ಟನೆ ಹೊಳೆದ ಹೆಸರು ಅಮಿತಾ ರವಿಕಿರಣ್. ಅಮಿತಾ ತಮ್ಮ ಸುಮಧುರ ಕಂಠ, ಭಾವ ತುಂಬಿ ಹಾಡುವ ಪರಿ, ಸಂಯೋಜನೆ, ಸಾಹಿತ್ಯ, ಕವನಗಳು, ಲೇಖನಗಳು, ಫೋಟೋಗ್ರಫಿ, ಅಡುಗೆಯ ವೈಖರಿ ಹೀಗೆ ಇನ್ನು ಹಲವಾರು ಪ್ರತಿಭೆಗಳ ಮೂಲಕ ಬಳಗದವರಿಗೆ ಅಚ್ಚುಮೆಚ್ಚು . ಹೆಸರು ಸೂಚಿಸಿದೊಡನೆ ಸಂತೋಷದಿಂದ ಒಪ್ಪಿ ಜವಾಬ್ದಾರಿಯನ್ನು ಹೊತ್ತು ಈ ಬಾರಿಯ ಜಗುಲಿಯನ್ನು ಜನಪದಮಯವನ್ನಾಗಿ ಮಾಡಿದರೆ ಹೇಗೆ ಎಂಬ ಹಂಬಲವನ್ನು ವ್ಯಕ್ತಪಡಿಸಿದರು. ಎಲ್ಲರೂ ಜನಪದಕ್ಕೆ ಸೈ ಎಂದ ಕೂಡಲೇ ವಾಟ್ಸ್ ಆಪ್ ದೇವಿಯ ದೆಸೆಯಿಂದ ಗುಂಪುಗಳನ್ನು ಮಾಡಿದ್ದಾಯಿತು. ’ಅನಿವಾಸಿ ಬಳಗ’ದ ದಿಗ್ಗಜರ (ಶ್ರೀವತ್ಸ ದೇಸಾಯಿ , ಕೇಶವ ಕುಲಕರ್ಣಿ, ರಾಂಶರಣ್, ಮುರಳಿ ಹತ್ವಾರ್) ಮಾರ್ಗದರ್ಶನದಲ್ಲಿ ಎಲ್ಲ ಅಭಿಪ್ರಾಯಗಳನ್ನು ಗ್ರಹಿಸಿ ಅಮಿತಾರವರು ಕಾರ್ಯಕ್ರಮದ ರೂಪು-ರೇಷೆಗಳನ್ನು ತಯಾರಿಸಿಯೇಬಿಟ್ಟರು. ಜನಪದ ಜಗುಲಿ ಅಮಿತಾರ ಕನಸಿನ ಕೂಸು – ಅವರೇ ಹೇಳಿದ ಹಾಗೆ ಇದು ಅವರ ಕನಸುಗಳನ್ನು ಆಳಿದ ಕಾರ್ಯಕ್ರಮ. ಅವರ ಕ್ರಿಯಾಶೀಲತೆ, ತನ್ಮಯತೆ, ಪರಿಶ್ರಮ ಮತ್ತು ಇದಕ್ಕೆಲ್ಲ ಅವರಿಗೆ ಜೊತೆಯಾದ ಗೌರಿ ಪ್ರಸನ್ನ ಅವರ ನೆರವು ಜಗುಲಿಯ ಯಶಸ್ಸಿನ ಗುಟ್ಟು ಎಂದರೆ ಅತಿಶಯೋಕ್ತಿಯಲ್ಲ.  ಇದೆಲ್ಲದರ ಹಿಂದೆ ಕಾಲ ಕಾಲಕ್ಕೆ  ಸಲಹೆ-ಸೂಚನೆಗಳನ್ನು ನೀಡುತ್ತಾ ಬೆನ್ನೆಲುಬಾಗಿ ನಿಂತವರು ನಮ್ಮ ದೇಸಾಯಿಯವರು. ಅವರ ಬಗ್ಗೆ ಎಷ್ಟು ಹೇಳಿದರು ಕಮ್ಮಿಯೇ; ಒಟ್ಟಿನಲ್ಲಿ ಅವರ ಎರಡು ಕೈಗಳು ನಮ್ಮ ಮೇಲೆ ಇದ್ದುದರಿಂದ ಈ-ಜಗುಲಿ 3 ಸುಸೂತ್ರವಾಗಿ ನೆರವೇರಿತು ಅನ್ನೋದಂತೂ ಸತ್ಯ. 

ತೆರೆಯ ಮೇಲೆ 

ಜನಪದ ಜಗುಲಿಯ ಮುಖ್ಯ ಉದ್ದೇಶ ಜನಪದ ಗೀತೆಗಳ ಮೂಲಕ ಜೀವನಚಕ್ರದ ದರ್ಶನ. ಕರ್ನಾಟಕದ ನಾಲ್ಕು ದಿಕ್ಕುಗಳಿಂದ ಆಯ್ದು ತಂದ ಪ್ರೀತಿ, ಪ್ರೇಮ, ಮದುವೆ, ಬಸಿರು, ಬಾಣಂತನ, ಜೋಗುಳದ ಹಾಡುಗಳ ಔತಣ ಬಡಿಸಿ, ನಮ್ಮ ಊರು ಕೇರಿಯ ಅಜ್ಜಿ-ಅಜ್ಜಂದಿರು ಹಾಡುತಿದ್ದ ಹಾಡುಗಳನ್ನು ನೆನಪಿಸುವ ಪ್ರಯತ್ನವಾಗಿತ್ತು .  ಈ  ಪ್ರಯತ್ನವು ಸಾರ್ಥಕವಾಯಿತು ಎನ್ನುವುದಕ್ಕೆ ಕಾಮೆಂಟುಗಳ ಮೂಲಕ ಹರಿದು ಬಂದ ವೀಕ್ಷಕರ ಪ್ರಶಂಸೆ, ಪ್ರೋತ್ಸಾಹವೇ ಸಾಕ್ಷಿ . ಅಮಿತಾ ಹಾಗು ಗೌರಿಯವರ ಸೊಗಸಾದ ನಿರೂಪಣೆ ನೋಡುಗರ ಕುತೂಹಲವನ್ನು ಹೆಚ್ಚಿಸಿತು. ಇಬ್ಬರೂ ಒಂದಿಷ್ಟೂ ಸಮಯವನ್ನು ವ್ಯರ್ಥ ಮಾಡದೆ ಸರಾಗವಾಗಿ ಕಾರ್ಯಕ್ರಮವನ್ನು ಬಹಳ ಚೆನ್ನಾಗಿ  ನಡೆಸಿಕೊಟ್ಟರು. ಇಷ್ಟೆಲ್ಲಾ ಮೆಚ್ಚುಗೆ ಪಡೆದ ಈ ಜನಪದ ಜಗುಲಿಯ ಜೀವಾಳ ಭಾಗವಹಿಸಿದ ಎಲ್ಲ ಕಲಾವಿದರ ಸುಶ್ರಾವ್ಯ ಗಾಯನ. ಅದರ ವಿವರಗಳನ್ನು ಈ ಕೆಳಗೆ ಕೊಡಲಾಗಿದೆ. 

ಜನಪದ ಜಗುಲಿಯಲ್ಲಿ ಪಾಲ್ಗೊಂಡ ಆಹ್ವಾನಿತ ಮತ್ತು ಅನಿವಾಸಿ ಬಳಗದ ಕಲಾವಿದರು

ಕನ್ನಡನಾಡಿನ ಪ್ರತಿಭಾವಂತ ಕಲಾವಿದ ಗಾಯಕ, ವಾದಕ, ನಟ, ಸಂಯೋಜಕ ದೇವಾನಂದ ವರಪ್ರಸಾದ್ ಅವರು ‘ಜನಪದ ಪ್ರೇಮಗೀತೆಗಳು’ ಎಂಬ ವಿಷಯವನ್ನು ಎತ್ತಿಕೊಂಡು ಮೂವತ್ತು ನಿಮಿಷಗಳ ಕಾಲ ಸೊಗಸಾದ ಹಾಡುಗಳು ಮತ್ತು ಅವಕ್ಕೊಪ್ಪುವ ವಿವರಣೆಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಿದರು.  ‘ನಿಂಬೆಯ ಹಣ್ಣಂಗೆ ತುಂಬಿದ ಮೈಯ್ಯೋಳೇ ….’ ಎಂದು ಗೆಳೆಯ ತನ್ನ ಗೆಳತಿಯನ್ನು ವರ್ಣಿಸುವ ಗೀತೆಯ ಮತ್ತದರ ಹಿನ್ನೆಲೆಯ ವಿವರಣೆ;  ಕೋಲಾಟದ ಪದಗಳಲ್ಲಿ ಬರುವ ಪ್ರೇಮ, ಕೊಲಾಟದ ಕುಣಿತದ ಪ್ರಕಾರಗಳ ವಿವರಗಳು; ಹಲಗೆಯನ್ನು ಬಾರಿಸುತ್ತಾ ಅವರು ಹಾಡಿದ ‘ನೀರಿಗೋಗೋ ಹೆಣ್ಣೇ  ನೀ … ಕೋಲು ಕೋಲನ್ನ ಕೋಲು’, ‘ಮಾತಾಡ್ ಮಾತಾಡ್ ಮಲ್ಲಿಗೆ …’, ‘ಎಲ್ಲೋ ಜೋಗಪ್ಪ ನಿನ್ನರಮನೆ …’ ಇತ್ಯಾದಿ ಪ್ರೇಮಗೀತೆಗಳನ್ನು ಕೇಳುತ್ತಾ ಕೇಳುತ್ತಾ ಸಮಯ ಸರಿದದ್ದೇ ತಿಳಿಯಲಿಲ್ಲ 

ಪ್ರಣಯದ  ನಂತರ ಮುಂದಿನದು ಮದುವೆ. ಜನಪದ ಕಲಾವಿದೆ ಕವಯಿತ್ರಿ ಶೋಭಾ ಸಾಗರ್, ಕಾಡುಗೊಲ್ಲರ  ಸಮುದಾಯದ ದುಗ್ಗಾಲಮ್ಮನ ಪದ ಮತ್ತು ಧಾರೆ ಹಾಡುಗಳನ್ನ ಹಾಡಿದರು. ಅದಕ್ಕೆ ಪೂರಕವಾಗಿ ಸುಮನಾ ಧ್ರುವ ಅವರು ಜರಿಯುವ ಹಾಡು ಹಾಡಿದರೆ, ವಧುವರರ ಆರತಿಗೆ ಹೇಳುವ ಶೋಭಾನೆಪದವನ್ನ ಸ್ನೇಹ ತಾಯೂರ್ ಹಾಡಿದರು.  ಸುಪ್ರಸಿದ್ಧ ಗಾಯಕಿ ದೀಪಶ್ರೀ ಪ್ರಣವ್ ಹಾಡಿದ ಗಂಡ-ಹೆಂಡಿರ ಮಧ್ಯೆ ನಡೆಯುವ ಒಂದು ಸಂವಾದ ಗೀತೆ ಭಾವಪೂರ್ಣವಾಗಿತ್ತು.

ಮದುವೆಯ ನಂತರ ಮನೆ, ಸಂಸಾರ, ಮಕ್ಕಳು ಅಲ್ಲವೇ? ಅಮಿತಾ ರವಿಕಿರಣ್ ಬಸುರಿಯ ಬಯಕೆ ಹಾಡನ್ನು ಪ್ರಸ್ತುತಪಡಿಸಿದರೆ, ಶಾಲಿನಿ ಸತೀಶ್ ಬಾಣಂತಿ ಹಾಡನ್ನೂ, ರಮ್ಯ ಭಾದ್ರಿ ಜೋಗುಳವನ್ನೂ ಸುಮಧುರವಾಗಿ ಹಾಡಿದರು.

ಉತ್ತರ ಕರ್ನಾಟಕದ ಭಾಷೆಯ ಸ್ಪಷ್ಟ ನುಡಿಗಟ್ಟು, ಶಿಶು ಪ್ರಾಸಗಳನ್ನು ವಾಚಿಸುತ್ತ ಗೌರಿ ಪ್ರಸನ್ನ  ಎಲ್ಲರನ್ನೂ ಬಾಲ್ಯದ ನೆನಪಿನಂಗಳಕ್ಕೆ ಕರೆದೊಯ್ದರು.

ಜನಪದ ಸಂಗೀತ ಅಂದಮೇಲೆ ಗೀಗೀ ಪದವಿದ್ದರೇ ಚಂದ!  ಲಕ್ಷ್ಮೀನಾರಾಯಣ ಗುಡೂರ ಗೀಗೀ ಪದದೊಂದಿಗೆ ಕಾರ್ಯಕ್ರಮದ ಕೊನೆಯ ಗೀತೆಯನ್ನು ಪ್ರಸ್ತುತಪಡಿಸಿದ್ದು ಸೊಗಸಾಗಿತ್ತು.   ಅಮಿತಾ ಭಾಗವಹಿಸಿದ ಕಲಾವಿದರು ಮತ್ತೂ ಈ ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಸಹಾಯ ಮಾಡಿದವರಿಗೆಲ್ಲ ಧನ್ಯವಾದಗಳನ್ನು ಅರ್ಪಿಸುವುದರ ಮೂಲಕ ‘ಜನಪದ ಜಗುಲಿ’ಗೆ ಇತಿಶ್ರೀ  ಹಾಡಿದರು.

ನನ್ನ ಅನುಭವ 

ಸಾಮಾನ್ಯ, ಸಾಮೂಹಿಕ, ಸರಳ, ಸ್ಪಷ್ಟ ನೇರ ಮಾತಿನ ಅಭಿವ್ಯಕ್ತಿ ಜನಪದ. ಪುರಾತನ ಪರಂಪರೆಯನ್ನು ಎತ್ತಿ ಹಿಡಿಯುವ ಕಂಠಸ್ಥ ಸಂಪ್ರದಾಯ.  ನನಗಂತೂ ಇಂತಹ ಜನಪದ ಜಗುಲಿಯಲ್ಲಿ ಭಾಗವಹಿಸಿದ್ದು ಹೆಮ್ಮೆಯ ವಿಚಾರ.  ಕಾರ್ಯಕ್ರಮದ ತಯಾರಿಗಾಗಿ ನಡೆಸಿದ ಅಭ್ಯಾಸ, ಜೂಮ್ /ವಾಟ್ಸಪ್ಪ್ ಕರೆಗಳು, ಸಂದೇಶಗಳು, ವಾಯ್ಸ್ ನೋಟ್ ಗಳು, ಕಾರ್ಯಕ್ರಮ ತಂದ ಆ ಸಡಗರ, ಉತ್ಸಾಹ, ಭಯ ಎಲ್ಲವೂ ಒಂದು ಸುಂದರ ಅನುಭವ.  ಅಮಿತಾರವರು ನನಗೆ ಕಲಿಸಿಕೊಟ್ಟ ಹಾಡೇನೊ ಬಹಳ ಚೆನ್ನಾಗಿತ್ತು, ಆದರೆ ಎಲ್ಲರ ಮುಂದೆ ಹಾಡುವುದು ಹೇಗೆ ಎಂಬ ಭಯದಲ್ಲಿದ್ದ ನನಗೆ ಅಮಿತಾ ಹಾಗು ದೇಸಾಯಿಯವರು ‘you can do this’ ಎಂದು ಹುರಿದುಂಬಿಸಿದ ಮೇಲೆ, ಧೈರ್ಯ ಮಾಡಿ ಹಾಡಿದ್ದು ಮನಸ್ಸಿಗೆ  ಮುದನೀಡಿತು. ಒಟ್ಟಿನಲ್ಲಿ ಅದೊಂದು ಅದ್ಬುತ ತಂಡದ ಪರಿಶ್ರಮ   ಹೀಗೆ ಬೆನ್ನು ತಟ್ಟಿ ಒಬ್ಬರನ್ನೊಬ್ಬರು  ಪ್ರೋತ್ಸಾಹಿಸುವ ತಂಡ  ಜೊತೆಯಲ್ಲಿದ್ದರೆ ಗೆಲುವು ಕಟ್ಟಿಟ್ಟಬುತ್ತಿ. ಈ ಚಂದದ ಅವಕಾಶವನ್ನು ಕಲ್ಪಿಸಿಕೊಟ್ಟ ಅನಿವಾಸಿ ಬಳಗಕ್ಕೆ ನಾನು ಆಭಾರಿ. 

ಜನಪದ ಜಗುಲಿ ಕಾರ್ಯಕ್ರಮದ ಯೂ ಟ್ಯೂಬ್ ಆವೃತ್ತಿ ಇಲ್ಲಿದೆ.

********************************************************************************************************

ಬಾಲ್ಯದ ನೆನಪುಗಳು – ಉಮಾ ವೆಂಕಟೇಶ್ ಹಾಗೂ ಸವಿತಾ ಸುರೇಶ್

ನಮಸ್ಕಾರ. ಎರಡು ವಾರಗಳ ಹಿಂದೆ `ಬಾಲ್ಯದ ನೆನಪುಗಳು` ಸರಣಿಯ ಲೇಖನಗಳು ಪ್ರಕಟವಾದಾಗ ಇವು ಈ ಸರಣಿಯ ಕೊನೆಯ ಲೇಖನಗಳು ಅಂತ ನಾನು ಬರೆದಿದ್ದು ನಿಮಗೆ ನೆನಪಿರಬಹುದು. ಆಗ ಅದಕ್ಕೆ ಕಾರಣವೂ ಇತ್ತು – ಅದಕ್ಕಾಗಿ ಬಂದಿದ್ದ ಲೇಖನಗಳ ಕಂತೆ ಖಾಲಿಯಾಗಿತ್ತು! ಆದರೆ ಆ ಸರಣಿಯಲ್ಲಿ ಬಂದ ರಸಪೂರ್ಣ ಬರಹಗಳು ಇನ್ನಷ್ಟು ಆಸಕ್ತರಲ್ಲಿ ಬರೆಯುವ ಉತ್ಸಾಹವನ್ನು ಮೂಡಿಸಿ, ಸರಣಿಯನ್ನು ಫೀನಿಕ್ಸ್ ಹಕ್ಕಿಯಂತೆ ಮತ್ತೆ ಎದ್ದು ಬರುವಂತೆ ಮಾಡಿವೆ. ಸಂಪಾದಕನಾಗಿ ನನಗೇನೋ ಸಂತೋಷವೇ, ಇನ್ನಷ್ಟು ಪ್ರಕಟಣಾ ಸಾಮಗ್ರಿ ದೊರೆಯಿತೆಂದು! ಇದೋ, ಇಲ್ಲಿವೆ ಇನ್ನೆರಡು ಬರಹಗಳು. ಉಮಾ ವೆಂಕಟೇಶ್ ನಮ್ಮನ್ನು ಮೈಸೂರಿನ ತಮ್ಮ ಶಾಲೆಗೆ ಕರೆದೊಯ್ದು ತಮ್ಮೊಬ್ಬ ತುಂಟ ಸಹಪಾಠಿಯ ಪರಿಚಯ ಮಾಡಿಸಿದರೆ, ಸವಿತಾ ಸುರೇಶ್ ಅವರು ತಮ್ಮ ಬಾಲ್ಯದ ಹವ್ಯಾಸವನ್ನು ನೆನೆಯುತ್ತಾರೆ. ಎಂದಿನಂತೆ ಓದಿರಿ, ಆನಂದಿಸಿರಿ, ಕಮೆಂಟಿಸಿರಿ ಮತ್ತೂ ನೀವೂ ಬರೆದು ನನಗೆ ಕಳುಹಿಸಿರಿ – ಎಲ್ಲೆನ್ ಗುಡೂರ್ (ಸಂ.)

ಮೈಸೂರಿನ ವಾಣಿ ವಿದ್ಯಾಮಂದಿರಉಮಾ ವೆಂಕಟೇಶ್

ನೂರೊಂದು ನೆನಪು ಎದೆಯಾಳದಿಂದ, ಲೇಖನವಾಗಿ ಬಂತು ಆನಂದದಿಂದ: ಮೈಸೂರನ್ನು ನೆನೆದೊಡನೆ ಮುದಗೊಳ್ಳುವ ನನ್ನ ಮನದಲ್ಲಿ, ಬಾಲ್ಯದ ದಿನಗಳೊಂದಿಗೆ ಬೆಸದಿರುವ ನೆನಪುಗಳು ಸಾವಿರಾರು ತರಂಗಗಳಂತೆ ಹೊರಹೊಮ್ಮುತ್ತವೆ. ಈ ನೆನಪಿನ ತರಂಗಗಳಲ್ಲಿ ಮೈಸೂರಿನ ವಾಣಿ ವಿದ್ಯಾಮಂದಿರದ ಶಾಲೆಯಲ್ಲಿ ನಾನು ಕಳೆದ ೩ ವರ್ಷಗಳೂ ಸೇರಿವೆ. ನನ್ನ ತಂದೆ ಬಳ್ಳಾರಿಯಲ್ಲಿ ಭೂಗರ್ಭಶಾಸ್ತ್ರಜ್ಞರಾಗಿದ್ದರು. ಅಲ್ಲಿನ ಕೆಲಸ ಬಿಟ್ಟು ೧೯೬೯ರಲ್ಲಿ ನಮ್ಮ ತವರೂರಾದ ಮೈಸೂರಿಗೆ ಹಿಂತಿರುಗಿ ಬಂದಾಗ ನಾನಿನ್ನೂ ೫ನೆಯ ತರಗತಿಯಲ್ಲಿದ್ದೆ. ಅಕ್ಟೋಬರ್  ತಿಂಗಳಿನಲ್ಲಿ ವಾಪಸ್ ಬಂದಿದ್ದರಿಂದ ಅದು ಮಿಡ್ ಟರ್ಮ್ ಅವಧಿ. ಯಾವ ಶಾಲೆಗಳಲ್ಲೂ ಅಷ್ಟೊಂದು ಸುಲಭವಾಗಿ ಪ್ರವೇಶ ಸಿಗುತ್ತಿರಲಿಲ್ಲ. ನನ್ನ ಅಜ್ಜನಿಗೆ ವಾಣಿ ವಿದ್ಯಾಮಂದಿರದ ನಿರ್ವಾಹಕರಾಗಿದ್ದ ದಿ. ರಂಗಸ್ವಾಮಿ ಅಯ್ಯಂಗಾರ್ ಮತ್ತು ಅವರ ಸಹೋದರಿ ಪಂಕಜಮ್ಮ ಅವರ ಪರಿಚಯವಿತ್ತು. ರಂಗಸ್ವಾಮಿ ಅಯ್ಯಂಗಾರ್ ಅವರಿಗೆ ಕಾಲೇಜಿನಲ್ಲಿ ಸಹಪಾಠಿ ಆಗಿದ್ದರೆಂದು ಹೇಳುತ್ತಿದ್ದ ನೆನಪು. ಸರಿ, ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಮ್ಮ ಮನೆ ಇತ್ತು. ಈ ಶಾಲೆಯೂ ಅಲ್ಲೇ ಹತ್ತಿರದಲ್ಲಿ ಇದ್ದರಿಂದ ನಾವು ಮೂರು ಜನ ಮಕ್ಕಳಿಗೂ ಅದೇ ಶಾಲೆಯಲ್ಲಿ ಪ್ರವೇಶ ಸಿಕ್ಕಿತ್ತು. ಶಿಸ್ತು ಮತ್ತು ಉತ್ತಮ ಶಿಕ್ಷಕಿಯರಿದ್ದ ಆ ಶಾಲೆಯಲ್ಲಿ ವಿದ್ಯಾಭ್ಯಾಸದ ಮಟ್ಟ ಚೆನ್ನಾಗಿತ್ತೆಂದು ಎಲ್ಲರೂ ಹೇಳುತ್ತಿದ್ದ ಮಾತು ನಿಜವಾಗಿತ್ತು. ನನ್ನ ತರಗತಿಯಲ್ಲಿ ಸುಮಾರು ೪೦ ಜನ ಮಕ್ಕಳಿದ್ದ ನೆನಪು. ನನಗೆ ಎಲ್ಲರ ಹೆಸರೂ ನೆನಪಿಲ್ಲ. ಆದರೆ ತರಗತಿಯಲ್ಲಿ ತನ್ನ ತುಂಟತನ, ಪುಂಡಾಟಕ್ಕೆ ಹೆಸರಾಗಿದ್ದ ಚಂದ್ರಶೇಖರನ ಹೆಸರು ಮತ್ತು ಅವನು ನಡೆಸುತ್ತಿದ್ದ ಉಡಾಳತನ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಚಂದ್ರಶೇಖರ ಎಂದೂ ತರಗತಿಯಲ್ಲಿ ಪಾಠದ ಕಡೆಗೆ ಗಮನ ಕೊಟ್ಟವನಲ್ಲ. ಹೋಮ್ ವರ್ಕ್ ಮಾಡುವ ಜಾಯಮಾನವಂತೂ ಅವನದಾಗಿರಲಿಲ್ಲ. ಸದಾ ಜೊತೆಯಲ್ಲಿದ್ದ ಹುಡುಗ-ಹುಡುಗಿಯರನ್ನು ಕೀಟಲೆ ಮಾಡುತ್ತಾ, ಅವರ ಹೋಮ್ ವರ್ಕ್ ಮತ್ತು ಪಠ್ಯಪುಸ್ತಕಗಳ ಮೇಲೆ ಇಂಕ್ ಚೆಲ್ಲಿಯೋ, ಅವರನ್ನು ಚಿವುಟುತ್ತಲೋ ಗೋಳು ಹುಯ್ದುಕೊಳ್ಳುವ ಅವನ ನಡತೆ ಹಲವೊಮ್ಮೆ ನಮಗೆಲ್ಲಾ ಪ್ರಾಣಸಂಕಟವಾಗಿತ್ತು. ಆದರೆ ತರಗತಿಯಲ್ಲಿ ಟೀಚರ್ ಕೇಳುವ ಪ್ರಶ್ನೆಗಳಿಗೆ ಅವನು ನೀಡುತ್ತಿದ್ದ ಉತ್ತರದ ವೈಖರಿ ಹಲವು ಬಾರಿ ಇಡೀ ಕ್ಲಾಸಿನಲ್ಲಿ ನಗೆಯ ಬುಗ್ಗೆಯನ್ನೆಬ್ಬಿಸುತ್ತಿತ್ತು. ಒಮ್ಮೆ ನಮ್ಮ ಕನ್ನಡ ಟೀಚರ್ ಸುಬ್ಬುಲಕ್ಷ್ಮಿ, “ಲೋ ಚಂದ್ರಶೇಖರ, ಸಂಧಿ ಎಂದರೇನೋ?” ಎಂದು ಪ್ರಶ್ನಿಸಿದ್ದಾಗ, ಅವನು ಸಲೀಸಾಗಿ “ಟೀಚರ್, ನಮ್ಮ ಮನೆ ಮತ್ತು ಪಕ್ಕದ ಮನೆಯ ಕಾಂಪೋಂಡ್ ಮಧ್ಯೆ ಇರುವ ತೂತಿಗೆ ಸಂಧಿ ಎನ್ನುತ್ತಾರೆ” ಎಂದು ತನ್ನ ವಿದ್ವತ್ತನ್ನು ಮೆರೆದಿದ್ದ! ಯಾವ ವಿಷಯದ ಟೆಸ್ಟಿನಲ್ಲೂ ಅವನಿಗೆ ಒಂದಂಕಿಯಲ್ಲದೇ ಹೆಚ್ಚಿನ ಮಾರ್ಕ್ ದೊರಕುತ್ತಿರಲಿಲ್ಲ. ಇಷ್ಟಾದರೂ ಅವನೇನೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸದಾ ಹಸನ್ಮುಖಿಯಾಗೇ ತನ್ನ ದಿನನಿತ್ಯದ ತುಂಟಾಟಗಳನ್ನು ಮುಂದುವರೆಸುತ್ತಿದ್ದ ಅವನನ್ನು ಕಂಡು ಅನೇಕ ಬಾರಿ ಬೆರಗಾಗುತ್ತಿದ್ದೆವು. ನಮ್ಮ ಶಾಲೆಯ ಮುಖ್ಯೋಪಾಧ್ಯಾಯಿನಿ ಪಂಕಜಮ್ಮ ನಮ್ಮ ಇಂಗ್ಲೀಷ್ ಟೀಚರ್. ಬಹಳ ದರ್ಪ ಮತ್ತು ಶಿಸ್ತಿನ ಮಹಿಳೆ. ೬೦-೭೦ರ ದಶಕದಲ್ಲಿ, ಶಾಲೆಯ ಪುಸ್ತಕಗಳನ್ನು ಇಟ್ಟುಕೊಳ್ಳಲು ಹೊಸದಾಗಿ ಆಲುಮಿನಿಯಮ್ ಪೆಟ್ಟಿಗೆಗಳು ಮಾರುಕಟ್ಟೆಗೆ ಬಂದಿದ್ದವು. ಸರಿ ಮಧ್ಯಮ ವರ್ಗದ ಮನೆಯ ಮಕ್ಕಳ ಕೈಯಲ್ಲಿ ಈ ಆಲುಮಿನಿಯಮ್ ಪೆಟ್ಟಿಗೆಗಳು ರಾರಾಜಿಸಲಾರಂಭಿಸಿತ್ತು. ನಮ್ಮ ತಂದೆ ನಮ್ಮ ಮನೆಯಲ್ಲಿ ಮೂವರಿಗೂ, ನಮ್ಮ ಹೆಸರನ್ನು ಕೆತ್ತಿಸಿ ಮೂರು ಪೆಟ್ಟಿಗೆ ಖರೀದಿಸಿ ಕೊಟ್ಟಿದ್ದರು. ಅದನ್ನು ಶಾಲೆಗೆ ಒಯ್ಯುವುದೇ ನಮಗೆ ಒಂದು ಹೆಮ್ಮೆಯ ಕೆಲಸ. ಸರಿ ಹುಡುಗಿಯರು ಶಿಸ್ತಾಗಿ ಈ ಪೆಟ್ಟಿಗೆ ಹಿಡಿದು ಬರುತ್ತಿದ್ದದ್ದನ್ನು ಕಂಡ ಚಂದ್ರಶೇಖರನ ಕಣ್ಣುಗಳಿಗೆ ಇದು ಸಹನವಾಗಲಿಲ್ಲ. ನನ್ನ ಸಹಪಾಠಿ ಜಯಶ್ರೀಯ ಪೆಟ್ಟಿಗೆ ಅವನ ದಾಳಿಗೆ ತುತ್ತಾಯಿತು. ಅವಳ ಕೈಯಿಂದ ಪೆಟ್ಟಿಗೆ ಕಿತ್ತುಕೊಡದ್ದಲ್ಲದೇ, ಇದೇನು ಈ ಹಜಾಮನ ಪೆಟ್ಟಿಗೆ ತಂದಿದ್ದೀಯಾ ಎಂದು ಅಣಕಿಸಿದಾಗ, ಅವಳ ಕಣ್ಣಿನಲ್ಲಿ ಗಂಗಾ-ಕಾವೇರಿಯ ಧಾರೆಯೇ ಹರಿಯಿತು. ಸರಿ, ಪಂಕಜಮ್ಮ ಅವರಿಗೆ ದೂರು ತಲುಪಿತು. ಸಿಟ್ಟಿನಿಂದ ಕೆಂಡಾಮಂಡಲವಾದ ಆಕೆ, ಕೈಯ್ಯಲ್ಲಿ ದೊಡ್ಡ ರೂಲರ್ ಝಳಪಿಸುತ್ತಾ, ತಮ್ಮ ದೊಡ್ಡ ದರ್ಪದ ಧ್ವನಿಯಲ್ಲಿ, “ಭಡವಾ, ಸರಸ್ವತಿ ಇಟ್ಟು ತರುವ ಪೆಟ್ಟಿಗೆಯನ್ನು, ಹಜಾಮನ ಪೆಟ್ಟಿಗೆಗೆ ಹೋಲಿಸುತ್ತೀಯಾ” ಎಂದು ಘರ್ಜಿಸುತ್ತಾ, ಚಂದ್ರಶೇಖರನ್ನು ಬೆಂಚಿನ ಮೇಲೆ ನಿಲ್ಲಿಸಿದರು. ಅಲ್ಲೇ ಅಳುತ್ತಾ ನಿಂತಿದ್ದ ಜಯಶ್ರೀಯನ್ನು ಕರೆದು, ಅವನ ಎರಡೂ ಕೆನ್ನೆಗೆ ಹೊಡೆಯಲು ಆಣತಿ ಇತ್ತರು. ಮೊದಲು ಸ್ವಲ್ಪ ಹಿಮ್ಮೆಟ್ಟಿದ ಜಯಶ್ರೀ, ತನ್ನ ಪೆಟ್ಟಿಗೆಗಾದ ಅವಮಾನ ನೆನಪಾಗಿ ಧೈರ್ಯಮಾಡಿ ಅವನ ಕೆನ್ನೆಗೆ ಹೊಡೆದಾಗ ಅದನ್ನು ಸ್ವಲ್ಪ ಭಯದಿಂದಲೇ ನೋಡುತ್ತಿದ್ದ ನಮಗೆ, ಸರಿ ಇನ್ನು ಚಂದ್ರಶೇಖರನ ಪುಂಡಾಟ ಅವತ್ತಿಗೆ ಮುಗಿಯಿತು ಎಂದು ನಿಟ್ಟುಸಿರಿಟ್ಟೆವು.

ವ್ಯಂಗ್ಯಚಿತ್ರ: ಲಕ್ಷ್ಮೀನಾರಾಯಣ ಗುಡೂರ್

ಆದರೆ, ಅಂದು ಶಾಲೆ ಮುಗಿಸುವವರೆಗೂ ಸ್ವಲ್ಪ ಮಂಕಾಗಿದ್ದ ಚಂದ್ರಶೇಖರ ಮನೆಗೆ ಹೊರಟಾಗ ಎಂದಿನಂತೆ ತನ್ನ ನಿತ್ಯಶೈಲಿಯಲ್ಲಿ ಇತರ ಹುಡುಗರನ್ನು ರಸ್ತೆಯಲ್ಲಿ ಗೋಳುಹುಯ್ದುಕೊಳ್ಳುತ್ತಿದ್ದ. ನಾನು, ನನ್ನ ಅಕ್ಕ ಅದನ್ನು ನೋಡಿದಾಗ, ಇದೇನು ಇವನಿಗೆ ಮನೆಯಲ್ಲಿ ತಂದೆ-ತಾಯಿ ಯಾವ ಕ್ರಮವನ್ನೂ ಕೈಗೊಳ್ಳದೆ ಒಳ್ಳೆ ಬೀದಿ ಬಸವನಂತೆ ಬಿಟ್ಟಿದ್ದಾರಲ್ಲ ಎಂದು ತಲೆಕೆಡಿಸಿಕೊಂಡಿದ್ದೆವು. ಹೀಗೆ ೩ ವರ್ಷ ಕಳೆದು ನಾವೆಲ್ಲಾ ೭ನೆಯ ತರಗತಿಗೆ ಕಾಲಿಟ್ಟೆವು. ಅದೇ ಕೊನೆಯ ವರ್ಷ. ಆಗೆಲ್ಲ ೭ನೆಯ ತರಗತಿಯ ಕೊನೆಯಲ್ಲಿ ಪಬ್ಲಿಕ್ ಪರೀಕ್ಷೆ ಇತ್ತು. ಅದು ನಮ್ಮ ಜೀವನದ ಮೊದಲ ದೊಡ್ಡ ಪರೀಕ್ಷೆ. ಹಾಗಾಗಿ ಮೊದಲಿನಿಂದಲೇ ಸ್ಪೆಶಲ್ ಕ್ಲಾಸಿನ ಕಾಟ. ಇದ್ದಕ್ಕಿದ್ದ ಹಾಗೆ ಚಂದ್ರಶೇಖರನ ನಡವಳಿಕೆಯಲ್ಲಿ ಬದಲಾವಣೆ ಕಾಣಿಸಲಾರಂಭಿಸಿತ್ತು. ಬಹುಶಃ ಪಂಕಜಮ್ಮ ಅವನ ತಂದೆ-ತಾಯಿಯರನ್ನು ಕರೆಸಿ, ಅವರಿಗೆ ultimate warning ಕೊಟ್ಟಿದ್ದರೇನೋ ಅನ್ನಿಸುತ್ತೆ. ಕ್ಲಾಸಿನಲ್ಲಿ ಗಂಭೀರವಾಗಿ ಕುಳಿತು ಪಾಠದ ಕಡೆಗೆ ಗಮನವೀಯುತ್ತಿದ್ದ ಚಂದ್ರಶೇಖರನಿಗೆ ಟೆಸ್ಟುಗಳಲ್ಲಿ ಸ್ವಲ್ಪ ಡೀಸೆಂಟ್ ಆಗಿ ಮಾರ್ಕುಗಳೂ ಬರಲಾರಂಭಿಸಿತ್ತು. ಅವನ ತುಂಟಾಟಗಳೂ ಹೆಚ್ಚುಕಡಿಮೆ ನಿಂತಿದ್ದವು. ಆದರೂ ಹಲವೊಮ್ಮೆ ಹುಡುಗಿಯರ ಜಡೆ ಎಳೆಯುವ ಚಟುವಟಿಕೆ ಮುಂದುವರೆದಿತ್ತು. ಶಾಲೆಯ ಕಡೆಯ ಟರ್ಮ್ ಶುರುವಾದಾಗ, ಸ್ಪೆಶಲ್ ಕ್ಲಾಸಿನ ಹಾವಳಿ ಹೆಚ್ಚಿ, ಅವನೂ ತಣ್ಣಗಾದ. ಪಬ್ಲಿಕ್ ಪರೀಕ್ಷೆಯಲ್ಲಿ ಅವನು ೪೦% ಮಾರ್ಕ್ ಬಂದು ಪಾಸಾಗಿದ್ದ ಎಂದು ತಿಳಿದಾಗ, ನಮಗೆಲ್ಲಾ ಸ್ವಲ್ಪ ಆಶ್ಚರ್ಯವಾಗಿತ್ತು. ಚಂದ್ರಶೇಖರನ ಯಶಸ್ಸಿಗೆ ನಮ್ಮ ಹಲವಾರು ನಮ್ಮ ಟೀಚರುಗಳ ಮುತುವರ್ಜಿ ಬಹುಶಃ ಕಾರಣವಾಗಿತ್ತು. ಶಾಲೆಯ ಕಡೆಯ ಸಮಾರಂಭ ಬೀಳ್ಕೊಡುಗೆಯ ದಿನ, ಅವನೂ ತನ್ನ ಆಟೋಗ್ರಾಫ್ ಎಲ್ಲರ ಮುಂದಿಟ್ಟಾಗ, ನಾವು ಅವನ ಹಿಂದಿನ ತುಂಟಾಟ ಪುಂಡಾಟವನ್ನು ಮರೆತು ಅದರಲ್ಲಿ Best Wishes ಬರೆದದ್ದು ಇಂದಿಗೂ ನನ್ನ ನೆನಪಿನಲ್ಲಿ ಹಸಿರಾಗಿದೆ. ವಾಣಿ ವಿದ್ಯಾ ಮಂದಿರ ಬಿಟ್ಟ ನಂತರ ನನ್ನ ಹೈಸ್ಕೂಲಿನ ದಿನಗಳಲ್ಲಿ ನಾನೆಂದೂ ಚಂದ್ರಶೇಖರನನ್ನು ನೋಡಲೇ ಇಲ್ಲಾ. ಅವನು ಎಲ್ಲಿ ತನ್ನ ಹೈಸ್ಕೂಲ್ ವಿದ್ಯಾಭ್ಯಾಸ ಮುಂದುವರೆಸಿದ ಎನ್ನುವ ಮಾಹಿತಿಯೂ ನನಗೆ ಸಿಗಲಿಲ್ಲ. ನನ್ನ ಶಾಲೆಯ ದಿನಗಳ ನೆನಪಾದಾಗಲೆಲ್ಲ, ಚಂದ್ರಶೇಖರ ಸುಳಿಯುತ್ತಿರುತ್ತಾನೆ. ಇತ್ತೀಚೆಗೆ ನನ್ನ ಅಕ್ಕನ ಕೈಯಲ್ಲಿ ಮಾತಾನಾಡುವಾಗ, ವಾಣಿ ವಿದ್ಯಾ ಮಂದಿರದ ಬಗ್ಗೆ ಮಾತನಾಡಿದ್ದೆವು. ಆಗಲೂ ಚಂದ್ರಶೇಖರ ನಮ್ಮ ಸಂಭಾಷಣೆಯಲ್ಲಿ ಸುಳಿದು ನಾವಿಬ್ಬರೂ ಅವನ ತುಂಟಾಟವನ್ನು ನೆನೆಸಿಕೊಂಡು ನಕ್ಕಿದ್ದೆವು. ಬಾಲ್ಯದ ಆಟ, ಆ ಹುಡುಗಾಟ ಇನ್ನೂ ನಮ್ಮ ನೆನಪಿನಿಂದ ಮಾಸಿಲ್ಲ. ಇಂದು ಚಂದ್ರಶೇಖರ ನಮ್ಮಂತೆಯೇ ಸಂಸಾರಿಯಾಗಿ ಮಕ್ಕಳು-ಮೊಮ್ಮಕ್ಕಳೊಂದಿಗೆ ಜೀವನ ನಡೆಸುತ್ತಿರಬೇಕು.

– ಉಮಾ ವೆಂಕಟೇಶ್

***************************************************************

ನೆನಪಿನ ನೀರೆ – ಸವಿತ ಸುರೇಶ್

ಅಮ್ಮಮ್ಮ, ದೊಡ್ಡಮ್ಮ ಹಾಗು ಅಮ್ಮ ಹಾಕುತ್ತಿದ್ದ ಕಸೂತಿ ಕೆಲಸವನ್ನು ನೋಡುತ್ತಿದ್ದ ನನಗೆ ಕಸೂತಿ ಎಂದರೆ ಆಸಕ್ತಿ ಇತ್ತು. ಆದರೆ ಹಾಕಲು ಬಿಡುತ್ತಿರಲಿಲ್ಲ. ಏಕೆಂದರೆ ಸೂಜಿ ಕೈಗೆ ಬಹಳಷ್ಟು ಬಾರಿ ಚುಚ್ಚಿಕೊಂಡಿದ್ದೆ.

ಹಾಗಾಗಿ ೭ನೇ ತರಗತಿ ಯಲ್ಲಿ ಓದುತಿದ್ದಾಗ ನಮ್ಮ ಶಾಲೆಯಲ್ಲಿ ಕಸೂತಿ ಕಕ್ಷವಿತ್ತು. ಹೇಗಾದರೂ ಮಾಡಿ ಕಸೂತಿ ಹಾಕಲೇಬೇಕೆಂದು ನಿರ್ಧರಿಸಿ, ಅಮ್ಮನಿಗೆ ಗೊತ್ತಾಗದಂತೆ ಶಾಲೆಯಲ್ಲೇ ಕುಳಿತು ಹಾಕಿದಂತ ಕಸೂತಿ.ಬಹಳಷ್ಟು ಬಾಲ್ಯದ ಮುಗ್ಧ ನೆನಪಾಗುತ್ತದೆ.

ಕಸೂತಿ ಕಲಿಸುತ್ತಿದ್ದ ನಮ್ಮ Work Experience ಶಿಕ್ಷಕಿಯಾದ ಜಯಲಕ್ಷ್ಮಿ ಮಿಸ್. ನಾವು ಮಕ್ಕಳೆಲ್ಲ ಸೇರಿ ಆಡುತ್ತಿದ್ದ ಕೊಟ್ಟಡಿ; ನಾನು ‘ಕನ್ನಡ ಪ್ರಭ ‘ ದಿನಪತ್ರಿಕೆಯಿಂದ ಮುಖ್ಯಾಂಶಗಳನ್ನು ಆಯ್ದು  ಬರೆಯುತ್ತಿದ್ದ ಬೋರ್ಡ್; ಮಧ್ಯಾಹ್ನ ಊಟದ ಸಮಯದಲ್ಲಿ ನಾವು ಸ್ನೇಹಿತರೆಲ್ಲರೂ ಪರಸ್ಪರ ಡಬ್ಬಿಯ ಊಟವನ್ನು ಹಂಚಿಕೊಂಡು ಹರಟೆ ಹೊಡೆಯುತ್ತಿದ್ದ ಜಗುಲಿ; ಬೆಲ್ ಹೊಡೆದರೆ attender ಚಿಕ್ಕಣ್ಣ ನಮ್ಮನ್ನೆಲ್ಲಾ ಕೊಟ್ಟಡಿಗೆ ಓಡಿಸುತ್ತಿದ್ದ ಸನ್ನಿವೇಶ….. ಇನ್ನೂ ಅದೆಷ್ಟೋ!!!!!!.

ಒಂದು painting ತೆಗೆದುಕೊಂಡು ಹಾಕಿದ್ದ ಕಸೂತಿ ಇದು. ಜಯಲಕ್ಷ್ಮಿ ಮಿಸ್ ಯಿಂದ ‘ V Good’ ಎಂದು ಕೆಂಪು ಶಾಹಿಯಲ್ಲಿ ಬಿದ್ದ ಸಹಿ ಮನಸ್ಸಿಗೆ ಏನೋ ಸಾಧಿಸಿದ ಹಾಗೆ ಪರಮಾನಂದ.

ನಂತರ ಮನೆಗೆ ಬಂದು ಅಮ್ಮನಿಗೆ ತೋರಿಸಿ ಶಭಾಷ್ ಎಂದು ಪ್ರಶಂಸೆ ಪಡೆದ್ದದ್ದು. ಈ ಕಸೂತಿ ಹಾಕಿ  ೩೨ ವರ್ಷಗಳಾದರೂ, ಹಾಕಿದ ಸಂದರ್ಭ, ಛಲ, ಶ್ರದ್ಧೆ, ಬಾಲ್ಯದ ನೆನಪುಗಳು ಹಾಗೆ ಅಚ್ಚಹಸಿರಾಗಿಯೇ ಉಳಿದಿದೆ ಏಕೆಂದರೆ ಇದನ್ನು ನಾನು frame ಹಾಕಿ ನನ್ನ ಕೋಣೆಯಲ್ಲೇ ಇಟ್ಟಿದ್ದೇನೆ!!!!!!!!!!

✍ಸವಿತ ಸುರೇಶ್

******************************************************************