ಅಡುಗೆ – ಅಡುಗೆಮನೆ ಸರಣಿ: ದಾಕ್ಷಾಯಿಣಿ ಗೌಡ ಮತ್ತು ರಾಧಿಕಾ ಜೋಶಿ

ನಮಸ್ಕಾರ! ಬರ್ರಿ.. ಬರ್ರಿ… ಇಲ್ಲೆ ಒಳಗ ಬರ್ರಿ, ಅಡಿಗಿಮನ್ಯಾಗೇ ಬಂದ್ ಬಿಡ್ರಿ! ಇವತ್ತ ನಮ್ ಹೊಸ ಸಿರೀಸು, ‘ಅಡುಗೆ - ಅಡುಗೆಮನೆ' ಅನ್ನೋ ಹೆಸರಿಂದು, ಶುರು ಮಾಡೋಣ ಅಂತ …. ಏನಂತೀರಿ? ಅಡಿಗ್ಯಾಗ ಎಷ್ಟು ಥರ, ಎಷ್ಟು ರುಚಿ ಇರತಾವೋ ಅಷ್ಟೇ ವೆರೈಟೀವು ಅದಕ್ಕ ಸಂಬಂಧಪಟ್ಟಂಥ ಇನ್ಸಿಡೆಂಟ್ಸೂ ಇರತಾವ ಜೀವನದಾಗ, ಅಲ್ಲಾ? ಅವನ್ನೆಲ್ಲ ಬರದು ಕಳಸ್ರೀ ಅಂತ ಕೇಳಿದ್ದಕ್ಕ ಬಂದಿರೋ ಮೊದಲಿನ ಎರಡು ಲೇಖನಗಳು ಕೆಳಗವ. ದಾಕ್ಷಾಯಣಿ ಗೌಡ ಅವರು ತಮ್ಮ ಒಬ್ಬಟ್ಟಿನ ಒದ್ದಾಟದ ಬಗ್ಗೆ ಬರದರ, ರಾಧಿಕಾ ಜೋಶಿಯವರು ಒಂದ್ ಅವಾಂತರಗಳ ಲಿಸ್ಟೇ ಮಾಡ್ಯಾರ. ಓದಿ, ನಕ್ಕು ಮಜಾ ತೊಗೊಂಡು (ಅವರ ಖರ್ಚಿನಾಗ, ಐ ಮೀನ್ ಅಟ್ ದೇರ್ ಎಕ್ಸ್ಪೆನ್ಸ್) ನಿಮಗ ಏನನ್ನಿಸಿತು ಅದನ್ನ ಈ ಬ್ಲಾಗಿನ ಕೆಳಗ ಬರೀರಿ; ನಿಮ್ಮ ಅನಿಸಿಕೆಗಳ ಕೆಳಗ ನಿಮ್ಮ ಹೆಸರ ಹಾಕೋದು ಮಾತ್ರ ಮರೀಬ್ಯಾಡ್ರಿ ಮತ್ತ.. ಅಷ್ಟೇ ಅಲ್ಲ, ನಿಮ್ಮಲ್ಲೂ ಅಂಥ ಘಟನೆಗಳಿದ್ರ – ಹಾಸ್ಯನೇ ಇರ್ಲಿ, ಸೀರಿಯಸ್ಸೇ ಇರ್ಲಿ – ಬರದು ಸಂಪಾದಕರಿಗೆ ಕಳಸ್ರಿ. ಹಾಸ್ಯದ್ದೇ ಇದ್ರ, ನೀವೊಬ್ರೇ ನೆನೆಸಿಕೊಂಡು ನಗೋದಕ್ಕಿಂತ ಎಲ್ಲರನ್ನೂ ನಗಸ್ರಿ; ವಿಚಾರಮಂಥನಕ್ಕ ತಳ್ಳೋ ಅಂಥ ವಿಷಯ ಇದ್ದರ ಅದೂ ಒಳ್ಳೇದೇ. ಮತ್ತ್ಯಾಕ ಕಾಯೋದು, ಪೆನ್ನಿನ ಸೌಟೆತ್ತಿ ಶಬ್ದಗಳನ್ನ ಹದಕ್ಕ ಕಲಿಸಿ, ಕಾಗದದ ತವಾಕ್ಕ ಹುಯ್ದು, ಕಾಯ್ಕೊಂಡು ಕೂತಿರವ್ರಿಗೆ ಬಿಸಿ-ಬಿಸಿ ಲೇಖನ ಹಂಚರಿ! – ಎಲ್ಲೆನ್ ಗುಡೂರ್ (ಸಂ.)

ಒಬ್ಬಟ್ಟು- ಬಿಕ್ಕಟ್ಟು ಮತ್ತು ನಂಟುದಾಕ್ಷಾಯಣಿ ಗೌಡ

ಒಬ್ಬಟ್ಟು, ಹೋಳಿಗೆ ಇಂದಿಗೂ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಬಹು ಜನಪ್ರಿಯ ಸಿಹಿ ಅಡಿಗೆ.  “ಹೋಳಿಗೆ ಊಟ” ಕ್ಕೆ ಇಂದಿಗೂ  ಸಸ್ಯಾಹಾರಿಗಳ ಮನೆಗಳಲ್ಲಿ ವಿಶಿಷ್ಟ ಸ್ಥಾನವಿದೆ. ಕೆಲ ಧಾರ್ಮಿಕ ಹಬ್ಬಗಳಲ್ಲಿ (ಯುಗಾದಿ ಮತ್ತು ಗೌರಿಹಬ್ಬ)  ಈ ಸಿಹಿಯ ನೈವೇದ್ಯ ದೇವರಿಗೆ ಆಗಲೇಬೇಕು. ಸಿಹಿಗಳಲ್ಲಿ ಇದಕ್ಕೆ ರಾಜಯೋಗ್ಯವಾದ ಸ್ಥಾನವಿದೆಯೆನ್ನಬಹುದು. ಪೂರಣ ಪೋಳಿ ಯೆಂದು ಸಹ ಇದನ್ನು ಕರೆಯಲಾಗುತ್ತದೆ. ಈಗಿನ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹೋಳಿಗೆಗಳು ಬಂದಿದ್ದರೂ, ಬೇಳೆ-ಬೆಲ್ಲದ ಹೋಳಿಗೆಯ ತಯಾರಿ ಸಂಪ್ರದಾಯ ಮತ್ತು ಜನಪ್ರಿಯ ಸಹ. ತುಪ್ಪ, ಮಾವಿನ ಹಣ್ಣಿನ ಸೀಕರಣೆ, ಹಸಿ ತೆಂಗಿನಕಾಯಿಯ ಹಾಲು, ಬಾಳೆಹಣ್ಣಿನ ಜೊತೆಗೆ ಈ ಸಿಹಿಯನ್ನು ತಿನ್ನುವುದನ್ನು ನಾನು ನೋಡಿದ್ದೇನೆ.  ಈ ಒಬ್ಬಟ್ಟು ಎನ್ನುವ ಸಿಹಿಅಡಿಗೆ ನನ್ನ ಜೀವನದ ವಿವಿಧ ಹಂತಗಳಲ್ಲಿ ಭಾಗವಹಿಸಿ ತನ್ನದೇ ಆದ ಸಂಬಂಧವನ್ನು ಕಲ್ಪಿಸಿಕೊಂಡಿದೆ.

ಬಾಲ್ಯದಲ್ಲಿ ಸಿಹಿ ಅಡಿಗೆ ಎಂದರೆ ಸಾಕು, ನನ್ನ ಮುಖ ಕಹಿಯಾಗುತ್ತಿತ್ತು. ನಾನು, ನನ್ನ ಅಕ್ಕ ಇಬ್ಬರೂ ಯಾವುದೇ ರೀತಿಯ ಸಿಹಿಯನ್ನು ಬಾಯಿಯಲ್ಲಿಡಲು ಸಹ ನಿರಾಕರಿಸುತ್ತಿದ್ದವು. ನನ್ನ ತಾಯಿ ನಮಗಿಷ್ಟವಾದ  ಖಾರದ ತಿಂಡಿಗಳನ್ನು ಏನೇ ಸಿಹಿ ಅಡಿಗೆ ಮಾಡಲಿ, ತಪ್ಪದೇ ತಯಾರಿಸುತ್ತಿದ್ದರು. ನಮ್ಮ ಮನೆಯಲ್ಲಿ ಇದು ಅಸಹಜ ವಿಷಯವಾಗಿರಲಿಲ್ಲ.

ನನ್ನ ಕಹಿಸಿಹಿಯ ಪ್ರೇಮದ ಬಗ್ಗೆ ಮದುವೆಗೆ ಮುಂಚೆಯ ನನ್ನ ಪತಿಗೆ ತಿಳಿದಿದ್ದು, ಸಿಹಿ ಎಂದರೆ ಬಾಯಿಬಿಡುವ ಆತನಿಗೆ ಇದೊಂದು ರೀತಿಯ ಪ್ರಯೋಜನಕಾರಿ ಗುಣವಾಗಿತ್ತು. ಮದುವೆಯ ನಂತರ ಮೊದಲ ಹಬ್ಬಕ್ಕೆ ಅತ್ತೆ ಮನೆಗೆ ಹೋದಾಗ ಹೊಸ ಸೊಸೆ ಬಂದಳೆಂದು “ಹೋಳಿಗೆ ಊಟ” ತಯಾರಾಗಿತ್ತು. ಮೇಜಿನ ಸುತ್ತ ಊಟಕ್ಕೆ ಕುಳಿತಾಗ ಎರಡು ಬಿಸಿ ಒಬ್ಬಟ್ಟು, ತುಪ್ಪ ತಟ್ಟೆಯಲ್ಲಿಟ್ಟು ನನ್ನ ಅತ್ತೆ ನನ್ನ ಮುಂದಿಟ್ಟಾಗ ನಾನು ಹೌಹಾರಿಬಿಟ್ಟೆ. ನನ್ನ ತಟ್ಟೆಯಲ್ಲಿದ್ದುದನ್ನು ತೆಗೆದು ಪತಿಯ ತಟ್ಟೆಗೆ ವರ್ಗಾಯಿಸೋಣವೆಂದರೆ ಎಲ್ಲರ ಕಣ್ಣೂ ನನ್ನ ಮೇಲೆಯೆ ಮತ್ತು ಆತ ನನ್ನ ಪಕ್ಕದಲ್ಲೇ ಬೇರೆ ಕೂತಿಲ್ಲ. ಬರೀ ಪಲ್ಯ, ಕೋಸಂಬರಿಗಳನ್ನು ತಿನ್ನೋಣವೆಂದರೆ ಅವು ಬೇರೆ, ಸಿಹಿಯನ್ನು ಸ್ಪರ್ಷಿಸಿ ಬಿಟ್ಟಿದ್ದವು. ಮೆಲ್ಲಗೆ “ಅತ್ತೆ ಈ ತಟ್ಟೆ ಬೇರೆಯರಿಗೆ ಕೊಡಿ, ಊಟದ ನಂತರ ಅರ್ಧ ಒಬ್ಬಟ್ಟು ತಿನ್ನುತ್ತೇನೆ” ಎಂದೆ.  ಮೇಜಿನ ಸುತ್ತ ಸಿಹಿಯೆಂದರೆ ಬಾಯಿಬಿಡುವ, ಅತ್ತೆಯ ಸಂಬಂಧಿಕರೆಲ್ಲ ನನ್ನನ್ನು ಒಂದು ವಿಚಿತ್ರ ಪ್ರಾಣಿಯ ತರಹ ನೋಡತೊಡಗಿದರು. ವ್ಯಂಗ್ಯದ ಮಾತಿನಲ್ಲಿ ಪರಿಣಿತಿ ಹೊಂದಿದ್ದ ನನ್ನ ಪತಿಯ ಅಜ್ಜಿ “ಹೋಳಿಗೆ ತಿನ್ನುವುದಿಲ್ಲವೆ? ಇಂಥಾ ವಿಚಿತ್ರ ಯಾವತ್ತೂ ನೋಡಿರಲಿಲ್ಲ ಬಿಡವ್ವಾ” ಎನ್ನುವುದೆ?

“ನನ್ನ ಸೊಸೆಯನ್ನು ನೀನು ಏನೂ ಅನ್ನಕೊಡದು” ಎಂದು ನನ್ನ ಅತ್ತೆ ಅವರ ತಾಯಿಯನ್ನು ತರಾಟೆಗೆ ತೆಗೆದುಕೊಂಡರು.  ಒಂದು ರೀತಿಯ ಜಗಳದ ವಾತಾವರಣ ಕ್ಷಣದಲ್ಲಿ ಸೃಷ್ಟಿಯಾಗಿ ಹೋಯಿತು. ಎಲ್ಲಾ ಈ ಒಬ್ಬಟ್ಟಿನ ತಪ್ಪು ತಾನೆ?

ನಾನು “ಹೋಳಿಗೆಯ ಸಾರು ಸಹ ನನಗೆ ಸೇರುವುದಿಲ್ಲ” ಎಂದು ಹೇಳುವುದು ಹೇಗೆ ಎನ್ನುವ ಬಿಕ್ಕಟ್ಟಿನ ಕಗ್ಗಟ್ಟಿನಲ್ಲಿ ಕಳೆದು ಹೋದೆ. ನನ್ನ ಮುಂದೆ ಬೇರೆ ತಟ್ಟೆ ಬಂತು. ಸಿಹಿ ತಿನ್ನುವ ಶಿಕ್ಷೆಯಿಂದ ನಾನು ಅಂದು ಪಾರಾದರೂ, ತಪ್ಪಿತಸ್ಥ ಮನೋಭಾವನೆ ಇಡೀ ದಿನ ನನ್ನನ್ನು ಕಾಡಿತು.

ವರ್ಷಗಳು ಕಳೆದಂತೆ ನನ್ನ ಪತಿಯ ಕುಟುಂಬದವರಷ್ಟೇ ಅಲ್ಲ, ನನ್ನ ಸ್ನೇಹಿತರೂ ಸಹ ನನಗೆ ಸಿಹಿ ತಿನ್ನಲು ಬಲವಂತ ಮಾಡುವುದಿಲ್ಲ. ಡಯಾಬಿಟೀಸ್ ನ ಭಯದಿಂದ ನನ್ನ ತಟ್ಟೆಯಿಂದ ಸಿಹಿತಿಂಡಿಯನ್ನು ವರ್ಗಾಯಿಸುವುದನ್ನು ನನ್ನ ಪತಿಯೂ ಒಪ್ಪುವುದಿಲ್ಲ. ಈಗೆಲ್ಲ ಅಂದರೆ ವಯಸ್ಸಾದಂತೆ “ಸಿಹಿ ಬೇಡ” ಎಂದರೆ  “ಸಕ್ಕರೆ ಕಾಯಿಲೆಯೆ?” ಎನ್ನುವ ಸಂತಾಪ ತುಂಬಿದ ಪ್ರಶ್ನೆ ತಕ್ಷಣ ಎದುರಾಗುತ್ತದೆ.  ಉತ್ತರವಾಗಿ ಇಲ್ಲವೆಂದು ತಲೆಯಾಡಿಸಿದರೂ ಬಾಯಲ್ಲಿ “ಇನ್ನೂ ಬಂದಿಲ್ಲ” ಅನ್ನುವ ತುಂಟ ಉತ್ತರ ಕೆಲವೊಮ್ಮೆ ಯಾಂತ್ರಿಕವಾಗಿ ಬಾಯಿಂದ ಬಂದುಬಿಡುತ್ತದೆ. ಇದರಿಂದಾದ ಒಂದು ಅನುಕೂಲತೆ ಅಥವಾ ಅನಾನುಕೂಲತೆ ಅಂದರೆ, ನನಗೆ ಪ್ರಿಯವಾದ ಕರಿದ ಖಾರದ ತಿಂಡಿಗಳು ಎಲ್ಲಾ ಕಡೆ ಹೆಚ್ಚುಪ್ರಮಾಣದಲ್ಲಿ ದೊರೆಯುತ್ತದೆ.

ಒಬ್ಬಟ್ಟಿನ ಜೊತೆ ನಂಟು ಬಲಿತಿದ್ದು ನಾನು ತಾಯಿಯಾದ ಮೇಲೆ. ಚಾಕೋಲೇಟ್ ಸೇರಿದ ಎಲ್ಲಾ ಪಾಶ್ಚಿಮಾತ್ಯ ಸಿಹಿಗಳನ್ನೆಲ್ಲ ಆನಂದದಿಂದ ಆಸ್ವಾದಿಸುವ ನನ್ನ ಮಗಳು ತಿನ್ನುವ ನಮ್ಮ ನಾಡಿನ ಒಂದೇ ಸಿಹಿಯೆಂದರೆ ಒಬ್ಬಟ್ಟು. ಎರಡು ವರ್ಷದ ನನ್ನ ಮಗಳು, ಒಂದೇ ಬಾರಿಗೆ ಎರಡು ಒಬ್ಬಟ್ಟುಗಳನ್ನು ಕಬಳಿಸಿದಾಗ `ಇವಳು ನಿಜವಾಗಿಯೂ ನನ್ನ ಮಗಳೇ` ಎನ್ನುವ ಅನುಮಾನ ನನಗೆ ಬಾರದಿರಲಿಲ್ಲ. ನಾನು ಮೊದಲ ಬಾರಿಗೆ ಇಂಗ್ಲೆಂಡಿನಿಂದ ನನ್ನ ಮಗಳ ಜೊತೆ ಬೆಂಗಳೂರಿಗೆ ಕಾಲಿಟ್ಟಾಗ, ಮೊಮ್ಮಗಳು ತಿನ್ನುತ್ತಾಳೆಂದು  ನನ್ನ ಅಮ್ಮ ಒಬ್ಬಟ್ಟು ಮಾಡಿ ಡಬ್ಬಿಯಲ್ಲಿ ವಿಮಾನ ನಿಲ್ದಾಣಕ್ಕೆ  ತಂದದ್ದು ಸಿಹಿ, ಸಿಹಿ, ಸವಿನೆನಪು.

ನಂತರದ ವರ್ಷಗಳಲ್ಲಿ ನನ್ನ ಕುಟುಂಬದವರಿಗೆ ಅತಿಪ್ರಿಯವೆಂದು ಒಬ್ಬಟ್ಟು ಮಾಡುವುದನ್ನು ಚೆನ್ನಾಗಿ ಕಲಿತಿದ್ದೇನೆ, ಇದು ನನ್ನ ಸ್ಪೆಷಾಲಿಟಿ  ಸಿಹಿ ಅಡಿಗೆ ಎಂದರೆ ನಿಮಗೆ ಮಾತ್ರವಲ್ಲ ನನಗೂ ಆಶ್ಚರ್ಯವಾಗುತ್ತದೆ. ವಯಸ್ಸಾದಂತೆ ಅರ್ಧ ಹೋಳಿಗೆ ತಿನ್ನುವುದನ್ನು ಸಹ ಕಲಿತು ಬಿಟ್ಟಿದ್ದೇನೆ. ಸಮಯಕ್ಕೆ, ಸ್ಥಳಕ್ಕೆ ತಕ್ಕದಾಗಿ ನಮ್ಮ ಅಡಿಗೆಯೂ, ರುಚಿಯೂ ಬದಲಾಗುವುದು ಒಂದು ರೀತಿಯ ಸೋಜಿಗವೆ ತಾನೆ? ಪ್ರಿಯ ಸ್ನೇಹಿತರೆ, ಸಿಹಿಯನ್ನು ಆಸ್ವಾದಿಸುವುದು ಪ್ರಪಂಚದ ಸಹಜ ನಡವಳಿಕೆ, ನನ್ನ ಅಸಹಜ ನಡೆಯಿಂದ ನಿಮ್ಮಲ್ಲಿ ನನ್ನ ಬಗ್ಗೆ ಅಸಮಧಾನ ಮೂಡದಿರಲಿ, ಸ್ವಭಾವದಿಂದ ನಾನು ಈ ಅಂಗ್ಲರು ಹೇಳುವಂತೆ sweet enough.

(ಹಾಸ್ಯವೆಂದು ಮನ್ನಣೆಯಿರಲಿ)

– ದಾಕ್ಷಾಯಿಣಿ

****************************************************************************

ಅನನುಭವಿಯ ಅಡಿಗೆ ಪ್ರಯೋಗಗಳು – ರಾಧಿಕಾ ಜೋಶಿ

ಅಡಿಗಿ, ಅಡಿಗಿಮನ್ಯಾಗ ಏನಾದರೂ ಪ್ರಯೋಗ, ಪ್ರಯತ್ನಗಳು ಸದಾ ನಡೀತಾನೇ ಇರ್ತಾವ. ಅಮ್ಮನ ಅಪ್ಪನ ನೋಡಿ ಕಲಿತು ಅಡಿಗೆ ಮಾಡೋದು ಶುರು ಮಾಡ್ತೀವಿ.  ಸಂಪೂರ್ಣವಾಗಿ ನಮ್ಮ್ಯಾಲ್ ಜವಾಬ್ದಾರಿ ಬಿದ್ದಾಗ ನಾವು ಕೆಲವೊಮ್ಮೆ overconfidence ನಿಂದ ಅಡಿಗಿ ಮಾಡ್ಲಿಕ್ಕೆ ಹೋಗಿ ಮುಖಭಂಗ ಆಗಿದ್ದಿದೆ.  ಈ ದೇಶಕ್ಕೆ ಬಂದ ಮೇಲೆ ಆದ ನನ್ನ ಒಂದೆರಡು ಅನುಭವಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ.

ಛಾ!
ಎಲ್ಲಿಂದ ಬಂದ್ರೂ ಪ್ರಥಮ ನಮಗ ಛಾ ಬೇಕ್ ನೋಡ್ರಿ.  ಏರ್ಪೋರ್ಟಿಂದ ಮನಿಗೆ ಬಂದು ಛಾ ಮಾಡೋಣ ಅಂತ ಹೋದ್ರ… electric hot plate ವಲಿ.  ಎಲ್ಲೋ ನೋಡಿದ್ದೆ, ಆದ್ರ ಎಂದೂ ಅಡಿಗಿ ಮಾಡಿದ್ದಿಲ್ಲ.  ಆತ್… ಇನ್ ಅದ ಪಜೀತಿ ಅಂತ ಒಂದರ ಮ್ಯಾಲೆ ನೀರಿಟ್ಟೆ ಮತ್ತೊಂದರ ಮ್ಯಾಲೆ ಹಾಲು.  ಈಗ ಮರಳ್ತದ … ಆಗ್ ಮರಳ್ತದ … ಸಕ್ಕರಿ ಛಾಪುಡಿ ಹಾಕೋಣಂತ ನಾನು ಕಾದೆ.  ನೀರು ಕಾದು ಕಡೀಕೂ ಛಾ ಆತ!  ಈಕಡೆ ಹಾಲು ಇನ್ನೂ ಕುದಿಬೇಕಿತ್ತು.  ನನಗೇನ್ ಗೊತ್ತ, ಉಕ್ಕಿ ಬಂದ್ಕೂಡ್ಲೇ ವಲಿ ಆರ್ಸಿದೆ (ಗ್ಯಾಸ್ ವಲಿಗೆ ಮಾಡೊಹಂಗ). ಆದರೂ ಏನದು ಪ್ರವಾಹಧಾಂಗ ಉಕ್ಕಿ ಹರಿದು ಪೂರ್ತಿ ವಲಿಯೆಲ್ಲ ಕ್ಷೀರ ಸಾಗರ.  ಅಷ್ಟೇ ಅಲ್ಲ, ಆ ಶಾಖಕ್ಕ ಪಟ್ಟನೆ ಹಾಲೆಲ್ಲ ಹೊತ್ತ್ಹೋತು.   ಆ ಕಡೆಯಿಂದ ‘ಅಯ್ಯೋ ಇದರ ಮ್ಯಾಲೆ ಅಡಗಿ ಸ್ವಲ್ಪು ನೋಡ್ಕೊಂಡು ಮಾಡ್ಬೇಕs’ ಅಂತ ಆಕಾಶವಾಣಿ ಬಂತು. ಕಡಿಕೆ ಡಿಕಾಕ್ಷನ್ಗೆ ಹಸಿ ಹಾಲ್ ಹಾಕಿ ಛಾ ಕತಿ ಮುಗಿಸಿದ್ದಾಯ್ತು.  ನಮಗ ಕುದ್ದಿದ್ ಹಾಲಿನ ಛಾನೇ  ರುಚಿ.  ಇಲ್ಲೇ  ಮಂದಿ ಹಾಲು ಕಾಯಿಸುದಿಲ್ಲ ಅಂತ ಆಮ್ಯಾಲೆ ತಿಳೀತು! ಮನಿಗೆ ಬಂದೋರೆಲ್ಲಾರ ಮುಂದ ಇಂತ ಪ್ರಸಂಗ ಸದಾ ಆಗ್ತಿತ್ತು, ಅದಕ್ಕ ಅವರೆಲ್ಲ ನೀವ್ ಹಾಲ್ ಯಾಕ್ ಕಾಯ್ಸ್ತೀರಿ ಹಸಿದೇ ಹಾಕ್ರಿ ಅನ್ನೋರು, ಆದ್ರ ನಂಗ್ಯಾಕೋ ಛೊಲೊ ಅನ್ಸೋದಿಲ್ಲ.  ೨ ವರ್ಷ ಹಾಟ್ ಪ್ಲೇಟ್ ವಲಿ ಮ್ಯಾಲೆ ಅಡಿಗೆ ಮಾಡಿದ್ರೂ, ಹಾಲ್ ಇಟ್ಟಾಗ ಮೈಯಲ್ಲ ಕಣ್ಣಾಗಿ ಇಕ್ಕಳ ಕೈಯಾಗ ಹಿಡಿದು ಉಕ್ಕಿ ಬಂದ್ ಕೂಡ್ಲೇ ಪಟ್ಟ್ನ ಭಾಂಡಿ ಬಾಜೂಕ ಇಡೋದು ರೂಡಿ ಮಾಡ್ಕೊಂಡೆ.


ಒಗ್ಗರಣೆ
ಮ್ಯಾಲೆ ಹಾಲಿನ ಕಥಿ ಕೇಳಿದ್ಮ್ಯಾಲೆ ಒಗ್ಗರಣಿ ಕಥಿಯು ನೀವೆಲ್ಲ ಊಹಿಸಿರಬಹುದು!!  ಒಗ್ಗರಣಿ?!!  ಅದರಾಗೇನದ? ಒನ್ ಚಮಚ ಎಣ್ಣಿ, ಸ್ವಲ್ಪ ಸಾಸಿವಿ, ಜೀರಗಿ, ಕರಿಬೇವು, ಚೂರ್ ಇಂಗ್ … ಮುಗಿತು, ಅಷ್ಟೇ!?
ನಾನು ಹಂಗ ಅನ್ಕೊಂಡಿದ್ದೆ, ಲಂಡನ್ನನಿಗೆ ಬರೋ ತನಕ.  ಇಲ್ಲೂ ನಮ್ಮೂರ್ನಂಗ ಗ್ಯಾಸ್ ಮ್ಯಾಲೆ ಅಡಗಿ ಮಾಡಿಧಾಂಗ ಸಸಾರ ಅಂದುಕೊಂಡು ಶುರು ಮಾಡಿದೆ. ಸಾರಿಗೆ, ಪಲ್ಯಾಕ್ಕ ಒಂಚೂರು ಒಗ್ಗರಣಿ ಹೊತ್ತಿದ್ರ ನಡೀತದ ನೋಡ್ರಿ ಹೆಂಗೋ adjust ಮಾಡ್ಕೋಬಹುದು; ಆದ್ರ ಈ ಹಚ್ಚಿದ ಅವಲಕ್ಕಿಗೇನರ ಒಗ್ಗರಣಿ ಹೊತ್ತೋ ಮುಗಿತು.  ಅಷ್ಟೇ ಅಲ್ಲ, ಆ ಅವಲಕ್ಕಿಯೊಳಗಿನ ಶೇಂಗಾ ನೋಡ್ರಿ ಬಂಗಾರ ಇದ್ಧಾಂಗ, ಹೊಳಿತಿರಬೇಕು ಆದ್ರ ಹೊತ್ತಬಾರ್ದು.  ಈ ಒಗ್ಗರಣಿ ಕಾಲಾಗ ಸಾಕಾಗಿತ್ತು. ವಲಿ ಲಗೂ ಆರಿಸಿದ್ರ ಕಾಳು ಇನ್ನೂ ಹಸೀನೇ ಉಳಿತಾವ; ಸ್ವಲ್ಪ ಬಿಟ್ಟನೋ ಹೊತ್ತ್, ಖರ್ರಗಾಗಿ ಕಡೀಕೆ ಪೂರ್ತಿ ಅವಲಕ್ಕಿ ಮಜಾನೇ ಹೋಗಿಬಿಡ್ತದ.  ಪ್ರತಿ ಮುಕ್ಕಿಗೂ ‘ಹೊತ್ಸಿದಿ… ಹೊತ್ಸಿದಿ…’ ಅಂತ ಅನ್ನಿಸ್ಕೊಬೇಕು ಮತ್ತ.  ಪೂರ್ತಿ ಅವಲಕ್ಕಿ ಕೆಡಸೋದ್ಕಿಂತ ಶೇಂಗಾನೇ ತಿಪ್ಪಿಗೆ ಚೆಲ್ಲಿದ್ರಾತು ಅಂತ ಎಷ್ಟ್ ಸಲೆ ದಂಡ ಮಾಡೀನಿ!  ಒಗ್ಗರಣಿ ಮಾಡೋದು ಒಂದ್ ಕಲಾ ಅಂತ ತಿಳ್ಕೊಂಡೆ ನೋಡ್ರಿ.

ಅಕ್ಕಿಯ ವಿವಿಧತೆ
ನನ್ನ ಅಪ್ಪನ ಜೊತೆ ಅಕ್ಕಿ ಅಂಗಡಿಗೆ ಹೋಗಿ ಅಕ್ಕಿ ತಂದದ್ದು ಸುಮಾರು ಬಾರಿ, ಆದರೆ ಒಮ್ಮೆಯೂ ಸೂಕ್ಷ್ಮವಾಗಿ ಅವುಗಳ ಜಾತಿ, ಆಕಾರ, ಬಣ್ಣ ನೋಡಿ ಗುರುತಿಸಿಲ್ಲ.  ನನಗೆ ಗೊತ್ತಿದುದ್ದು ಸೋನಾ ಮಸೂರಿ ಮತ್ತು ಬಾಸ್ಮತಿ ಅಷ್ಟೇ.  ರೇಷನ್ ಅಕ್ಕಿ ಅಂತ ಬರ್ತಿತ್ತು, ಅದನ್ನು ದೋಸೆ ಇಡ್ಲಿಗೆ ಉಪಯೋಗಿಸುತ್ತಿದ್ದರು.  ಈಗ ಲಂಡನ್ನಿಗೆ ಬಂದ ಮೇಲೆ ಮನೆಯ ಹತ್ತಿರ ಇಂಡಿಯನ್ ಗ್ರೋಸರಿ ಸ್ಟೋರ್ಸ್ ಇರಲಿಲ್ಲ.  ಹಾಗಾಗಿ Asdaದಲ್ಲಿ ಯಾವ್ ಅಕ್ಕಿ ಸಿಕ್ತೋ ಅದನ್ನೇ ತಂದು ದೋಸೆಗೆ ನೆನೆ ಹಾಕಿದೆ. ನನ್ನ ಪರಮಾಶ್ಚರ್ಯಕ್ಕೆ ಡಿಸೆಂಬರ್ ಚಳಿಯೊಳಗೂ ಹಿಟ್ಟು ಉಕ್ಕಿ ಉಕ್ಕಿ ಮರುದಿನಕ್ಕೆ ತಯಾರು ಆಯಿತು.  ನಾನು ತುಂಬಾ ಜಂಬದಿಂದ ನನ್ನ ಪತಿಗೆ, ‘ನಿಮ್ಮ ಸ್ನೇಹಿತರನ್ನ ಸಂಜಿಗೆ ಛಾಕ್ಕ ಕರೀರಿ; ಮಸಾಲಾ ದೋಸೆ ಮಾಡ್ತೀನಿ’ ಅಂತ.  ಪಲ್ಯ, ಚಟ್ನಿ ಎಲ್ಲ ತಯ್ಯಾರಿ ಆಯಿತು.  ಮಂದಿನೂ ಬಂದ್ರು.  ಒಂದು ಸೌಟು ತೊಗೊಂಡು ಕಾದ ಹಂಚಿನ ಮೇಲೆ ಹಾಕಕ್ಕೆ ಹೋಗ್ತಿನಿ, ಹಿಟ್ಟು ಹಂಚಿಗೆ ಅಂಟ್ ತಾನೇ ಇಲ್ಲ!!  ತುಂಬಾ ಮೃದುವಾಗಿ ಮುದ್ದೆ ಮುದ್ದೆಯಾಗಿ ಒಂದು ದೊಡ್ಡ ಹಿಟ್ಟಿನ ಚಂಡಿನಂತೆ ಸೌಟಿಗೆ ಅಂಟಿಕೊಂಡು ಬಂತು.  ಅಯ್ಯೋ ಇದೇನು ಗ್ರಹಚಾರ!  ಹಂಚು ಬದಲಿಸಿದೆ, ಎಣ್ಣೆ ಜಾಸ್ತಿ ಹಾಕಿದೆ – ಏನಾದ್ರೂ ದೋಸೆ ಹಂಚಿಗೆ ಅಂಟಿ ತಿರುವಲಿಕ್ಕ್ ಬರ್ಲೆ ಇಲ್ಲ.  ಏನೋ, ಮೊದಲ ಸಲಾನೂ ಇಷ್ಟು ಕೆಟ್ಟದಾಗಿ ಬಂದಿರ್ಲಿಲ್ಲ ಅಂತ ಅಳುಬರೋದೊಂದೇ ಬಾಕಿ!  ಪಾಪ, ಬಂದ ಮಂದಿ ಇರ್ಲಿ ಬಿಡಿ ಅಂದು, ಒಬ್ಬ ಸ್ನೇಹಿತೆ ಏನೋ ಅಕ್ಕಿ ಹಿಟ್ಟು ಮೈದಾ ಹಿಟ್ಟು ಸೇರಿಸಿ ಕೊನೆಗೆ ದೋಸೆ ಆಕಾರಕ್ಕೆ ತಂದರು.  ಅವತ್ತಿನ ಮಸಾಲೆ ದೋಸೆ ಒಂದು ಕಥೆಯೇ  ಆಯಿತು.  ಈಗಲೂ ಆ ಸ್ನೇಹಿತೆ ನೆನಪಿಸಿ ನಗುತ್ತಾಳೆ.  ಅದು ಯಾವ ಅಕ್ಕಿ ಆಗಿರಬಹುದೆಂದು ಊಹಿಸುತ್ತಿದೀರ?  ಅದೇ … ಲಾಂಗ್ ಗ್ರೇನ್ boiled ಬ್ರೌನ್ ರೈಸ್… ಮತ್ತೆ ಅದರ ತಂಟೆಗೆ ಹೋಗಲಿಲ್ಲ.
ಆಮೇಲೆ ಅಕ್ಕಿಯ ವೆರೈಟಿ ಮೇಲೆ ಒಂದು ಅಧ್ಯಯನ ಮಾಡಿ ಎಚ್ಚರಿಕೆ ಇಂದ ಅಕ್ಕಿ ಖರೀದಿ ಮಾಡೋದಾಯ್ತು.  ಮಂದಿಯನ್ನು ಕರಿಯುವ ಮುನ್ನ ಹಿಟ್ಟನ್ನ ಒಂದ್ ಸಲ ಚೆಕ್ ಮಾಡಿ, ದೋಸೆ ಆಗ್ತದೋ ಇಲ್ಲೋ ಅಂತ ನೋಡಿ ಕರೀತೀನಿ.

– ರಾಧಿಕಾ ಜೋಶಿ

*****************************************************************

ಚಂದಿರ…… ಚಂದಿರ…… – ಎರಡು ಕವನಗಳು; ಮುರಳಿ ಹತ್ವಾರ್ ಹಾಗೂ ಪ್ರೇಮಾ ಸಾಗರ್

ವಿಜ್ಞಾನಿಗೆ ಸುಮಾರು ನಾಲ್ಕೂವರೆ ಬಿಲಿಯನ್ ವರ್ಷಗಳಿಂದ ಭೂಮಿಯ ಸುತ್ತ ಸುತ್ತುವ ಕಲ್ಲಾದರೂ, ಚಂದ್ರ ಪ್ರತಿಯೊಬ್ಬ ದೇಶದ, ಭಾಷೆಯ, ಸಂಸ್ಕೃತಿಯ ಕವಿಯ ಪ್ರೀತಿಯ ವಿಷಯ. ಚಂದ್ರ ನಮ್ಮಲ್ಲಿ ಮಕ್ಕಳಿಗೆ ಆಟವಾಡಿಸುವ ಚಂದಾಮಾಮನಾದರೆ, ಪಾಶ್ಚಾತ್ಯ ದೇಶಗಳಲ್ಲಿ ಚೀಸಿನಿಂದ ಮಾಡಲ್ಪಟ್ಟವನಾಗುತ್ತಾನೆ. ಮುಖ್ಯವಾಗಿ, ಪ್ರೇಮಿಗಳಿಗೆ ಅದರಲ್ಲೂ ವಿರಹಿಗಳಿಗೆ, ಚಂದ್ರನ ಬಗ್ಗೆ ಮಾತಾಡದಿದ್ದರೆ ಆಗುವುದೇ ಇಲ್ಲ; ಪ್ರೇಮಿಗಳಿಗೆ ತಂಪಾಗಿ ಬೆಳಗುವ ಚಂದ್ರ, ವಿರಹಿಗಳನ್ನು ಬಿಸಿಯಾಗಿ ಸುಡುತ್ತಾನಂತೆ! ಸಧ್ಯಕ್ಕೆ, ಮತ್ತೆ `ರೇಸ್ ಟು ಮೂನ್` ಶುರುವಾಗುವ ಲಕ್ಷಣಗಳೂ ಇವೆ. ಅಂತಹ ಚಂದ್ರನ ಬಗ್ಗೆ ನಮ್ಮ ಅನಿವಾಸಿಯ ಮುರಳಿ ಹತ್ವಾರ್ ಹಾಗೂ ಹೊಸದಾಗಿ ಪರಿಚಯಿಸುತ್ತಿರುವ ಕವಯಿತ್ರಿ ಪ್ರೇಮಾ ಸಾಗರ್ ಅವರ ಅನಿಸಿಕೆಗಳೇನು, ಓದೋಣವೆ? ಓದಿ ನಾವೂ ಬರೆಯುವ, ಬರೆದದ್ದನ್ನು `ಅನಿವಾಸಿ.ಕಾಂ`ಗೆ ಕಳಿಸುವ… – ಎಲ್ಲೆನ್ ಗುಡೂರ್ (ಸಂ.)

ಚಂದಿರನಲ್ಲಿ ನೀರಿದೆಯಂತೆ – ಮುರಳಿ ಹತ್ವಾರ್

ವ್ಯಂಗ್ಯಚಿತ್ರ: ಲಕ್ಷ್ಮೀನಾರಾಯಣ ಗುಡೂರ್
 ಬನ್ನಿ ಹೋಗೋಣ
 ಚಂದಿರನಲ್ಲಿ ನೀರಿದೆಯಂತೆ
  
 ಚಂಬು-ಬಿಂದಿಗೆ, ಹಾರೆ-ಗುದ್ದಲಿ
 ದಿಂಬು-ಹಾಸಿಗೆ ಹಿಡಿದು ಬನ್ನಿ ಸಾಲಲಿ
 ಪ್ರೋಕ್ಷಣೆ ಆಪೋಶನಗಳ ಮಡಿಯಲಿ
 ಗುಂಡಿ ತೋಡಬೇಕಿದೆ ಶಶಿಯ ಬಯಲಲಿ
  
 ಅಗೆದಷ್ಟೂ ಬಗೆಬಗೆಯ ನಿಧಿಯಂತೆ,
 ಕಣಕಣವೂ ಅಪರಿಮಿತ ಬೆಲೆಯಂತೆ,
 ತುಂಡುಗಳ ಭುವಿಗೆ ಕಳಿಸೋಣವಂತೆ
 'ಮೇಡ್ ಇನ್ ಮೂನ್' ಗೆ ಕಾದಿದೆ ಸಂತೆ
  
 ಏನು ಬೇಕಾದರೂ ಕಟ್ಟಬಹುದು
 ಕಲ್ಲು ಕಲ್ಲಿಗೂ ನಿಮ್ಮ ಹೆಸರೇ ಇಟ್ಟು
 ದೇವರೆಂದು ಜನ ಪೂಜಿಸಲೂ ಬಹುದು
 ನಿಮಗೇ ಹರಕೆಯ ಹಾರ ಕೊಟ್ಟು!
  
 ಹೇಳಿ, ಯಾರು ಬರುತ್ತೀರಿ?
 ನೀವಾ! ಹೆಸರೇನೆಂದಿರಿ?
 ಬೆಂಗಳೂರಿನಲ್ಲಿ ಒಂದೆರಡು ಸೈಟು?
 ಹೋಗಲಿ, ಬ್ಯಾಂಕಿನಲ್ಲಿ ದೊಡ್ಡ ಡೆಪಾಸಿಟ್ಟು?
 ಅಧಿಕಾರ ಮಾಡುವ ಧಿಮಾಕಿನ ಸೀಟು?
 ಯಾವುದು ಇಲ್ಲವೇ?
 ಬೆವರಿನ ಅಂಗಡಿಯಾದರೂ ಇಟ್ಟಿದ್ದೀರಾ?
 ಇಲ್ಲಾ, ಮಾರಿಕೊಳ್ಳುವ ಮಾದಕತೆಯ ಮಾರ್ಕೆಟ್ಟು?
  
 ಯಾವುದೂ ಇಲ್ಲ ಎಂದರೆ, ಪಕ್ಕಕ್ಕೆ ಬನ್ನಿ.
 ಬಲವಿಲ್ಲದ, ಎಡವೆನ್ನದ ನಡುವೊಂದು
 ನೀರಿಲ್ಲದ ಮರುಭೂಮಿಯ ಮಡು
 ಮರೀಚಿಕೆಯ ಮಾಯೆಯಲ್ಲಿ ಮಜಾ ಮಾಡಿ. 
  
 ಉಳಿದವರು ಬನ್ನಿ, ಬನ್ನಿ,
 ಈಗಲೇ ಹಾರಬೇಕಿದೆ ಮೇಲೆ
 ಹೆಜ್ಜೆ ಮೊದಲಿಟ್ಟವರೇ ರಾಜರಂತೆ
 ಕಾಲಿಟ್ಟಮೇಲೆ ಉಳಿದೆಲ್ಲ ಚಿಂತೆ
  
 ನೀರು ಖಾಲಿಯಾದರೆ ಏನು ಎಂದಿರಾ
 ಆದಾಗ ನೋಡೋಣ ಬಿಡಿ
 ಹೇಗೂ ಚೆನ್ನಾಗಿ ಕಲಿತಿದ್ದೇವಲ್ಲ
 ಚಿಮ್ಮಿಸಿದರಾಯಿತು ಚಂದ್ರನ
 ಮೂಲೆ ಮೂಲೆಯಲ್ಲೂ
 ಬಿಸಿ ಬಿಸಿಯ ನೆತ್ತರಿನ ಬುಗ್ಗೆ! 

*************************************************

ಹೀಗೊಂದು ಗೆಳೆತನದ ಬಯಕೆ! – ಪ್ರೇಮಾ ಸಾಗರ್

ಪರಿಚಯ: ನಾನು ಒಬ್ಬ ಹವ್ಯಾಸಿ ಲೇಖಕಿ. ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಈಳಿ ಎಂಬ ಸಣ್ಣ ಊರಿನವಳು. ಬೆಂಗಳೂರಲ್ಲಿ ಶಿಕ್ಷಣ ಪಡೆದು Engineering degree ಪಡೆದುಕೊಂಡಿದ್ದೇನೆ. IT ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ, ಗಂಡ ಹಾಗು ಮಕ್ಕಳೊಡನೆ Milton Keynes ನಲ್ಲಿ ವಾಸವಾಗಿದ್ದೇನೆ.

ಚಿಕ್ಕಂದಿನಿಂದಲೂ ಹಲವಾರು ಭಾಷೆಗಳಲ್ಲಿ ಹಾಗು ಅನ್ಯಸಂಸ್ಕೃತಿಗಳಲ್ಲಿ ಆಸಕ್ತಿ. ಇಂತಹ ಆಸಕ್ತಿಯನ್ನು ವಿಕಾಸಗೊಳಿಸುವ, ವ್ಯಕ್ತಪಡಿಸುವ ಒಂದು ಮಾಧ್ಯಮವನ್ನು ಬರವಣಿಗೆಯಲ್ಲಿ ಕಂಡೆ. ನನ್ನ ತಾಯಿಯವರಾದ ಶ್ರೀಮತಿ ಕಮಲಾ ಅನಂತ, ಆಗಾಗ ಹವ್ಯಾಸಕ್ಕಾಗಿ ಬರೆಯುತ್ತಿದ್ದ ಚುಟುಕು ಕವನಗಳು ನನ್ನನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದವು. ನನಗೇ ಗೊತ್ತಿಲ್ಲದಂತೆ ಈ ಚಿಕ್ಕ ಹವ್ಯಾಸ ನನ್ನಲ್ಲಿ ಬಂದು ಸೇರಿಕೊಂಡಿತು.

ನಾನು ಬರೆವ ಪದ್ಯಗಳು ಹಾಗು ಲೇಖನಗಳು ನನ್ನ ಭಾವನೆಗಳಿಗೆ, ಆಸೆಗಳಿಗೆ, ಅಂದಾಜುಗಳಿಗೆ ರೆಕ್ಕೆ ಕೊಟ್ಟು, ಸೆರೆಯಿಲ್ಲದಂತೆ ಎತ್ತರಕ್ಕೆ ಹಾರಿಸುವ ಧ್ಯೇಯ ನನ್ನದಾಗಿದೆ; ಈಗಿನವರೆಗೂ ನನ್ನ ಕಣ್ಣುಗಳಿಗಷ್ಟೇ ಸೀಮಿತವಾಗಿದ್ದು, ನನ್ನ ಮನಸ್ಸನ್ನು ಹಗುರವಾಗಿಸುವ ಕಾರ್ಯ ಮಾಡುತ್ತಾ ಬಂದಿವೆ. ಇದು ನನ್ನ ಮೊದಲ ಪ್ರಕಟಣೆ.

ಇಂತಹದೊಂದು ಹವ್ಯಾಸ ಕಲ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ನನ್ನ ಅಮ್ಮನಿಗೂ, ಶಿಕ್ಷಕರಿಗೂ, ನನ್ನನ್ನು ಪ್ರೋತ್ಸಾಹಿಸುವ ನನ್ನೆಲ್ಲ ಬಂಧು ಬಾಂಧವರಿಗೂ ನಾನು ಸದಾ ಚಿರಋಣಿ.

***

 ಬಾನಿನ ಅಂಗಳದಿ ಬೆಳ್ಳಿಯ ಆಟ..
 ಮುಚ್ಚಿಡಲೆಂದು ಮೋಡದ ಓಟ! 
  
 ಚಂದಿರನೆಡೆಗೆ ನನ್ನಯ ಒಲವೇ.. 
 ಮಿಣುಕಲೂ ಆಗಸ ಅದೆಂತಹ ಚಲುವೇ!
  
 ಇದ್ದರೆ ಸಾಕೇ ತಂಗಾಳಿಯ ಒಡನಾಟ?
 ಕಾತುರದಿ ಕಾದಿಹೆನು ನಿನ್ನಯ ನೋಟ!
  
 ಮೈ ಜುಂ ಎನುತಿದೆ ಕಿರಣದ ಮತ್ತು..
 ಕಾಡಲು ತರವೇ ಸಂಜೆಯ ಹೊತ್ತು? 
  
 ನೀ ಅಲ್ಲಿ ನಾನಿಲ್ಲಿ ನಿಲುಕದಾ ಮಾತು..
 ಸಾಧ್ಯವೆ ಹರಟೆ ಜೊತೆಯಲ್ಲಿ ಕೂತು?
  
 ನೀಲಾಂಬರವನೆ ನೀ ಹೊದೆದಾ ಮೇಲೆ.. 
 ತಲುಪುವುದೆ ನಿನಗೆ ನಾ ಕರೆಯುವಾ ಓಲೆ? 
  
 ಬಂದುಬಿಡು ಸಾಕು ಈ ಕಣ್ಣಮುಚ್ಚಾಲೆ..
 ಮುನಿಸಿಕೊಂಡರೆ ನೋಡೆನು ನಾನ್ ಇನ್ನೆಂದೂ ಮೇಲೆ !
  
 - ಪ್ರೇಅಸಾ
********************************************