ನೀಲುಗಳು – ಕೇಶವ ಕುಲಕರ್ಣಿ

ಜಪಾನಿನಲ್ಲಿ ಹೈಕುಗಳಿದ್ದಂತೆ ಬೇರೆ ಭಾಷೆಗಳಲ್ಲಿ ಏನಿದೆಯೋ ಗೊತ್ತಿಲ್ಲ. ಕನ್ನಡದಲ್ಲಿ ಚುಟುಕುಗಳಿವೆ, ಹನಿಗವನಗಳಿವೆ. ಆದರೆ, ಚುಟುಕುಗಳು ಎಂದ ತಕ್ಷಣ ನಗೆ ಉಕ್ಕಿಸುವಂಥ ಚಾಟಿಗಳು ಎಂದೇ ಅಂದುಕೊಳ್ಳುತ್ತೇವೆ, ಹನಿಗವನಗಳು ಎಂದ ತಕ್ಷಣ ಮಯೂರ, ತುಷಾರ ಪತ್ರಿಕೆಗಳ ಸವಕಲು ಫಿಲ್ಲರ್ಸ್ ಅಂದುಕೊಳ್ಲುತ್ಟೇವೆ. ಆದ್ದರಿಂದ ಚುಟುಕುಗಳು ಅತಥವಾ ಹನಿಗವನಗಳು ಹೈಕುಗಳಲ್ಲ. ಹೈಕುಗಳಂತೆ ಕೆಲವೇ ಕೆಲವು ಸಾಲುಗಳಲ್ಲಿ ಸಾಗರ ಹಿಡಿದಿಡುವುದಿಲ್ಲ. ಹೈಕುಗಳ ಮಾದರಿಯಲ್ಲೇ ಕೆಲವೇ ಕೆಲವು ಸಾಲುಗಳಲ್ಲಿ ಕಾವ್ಯ ಬರೆದದ್ದು ಲಂಕೇಶ್, `ನೀಲು` ಎನ್ನುವ ಹೆಸರಿನಲ್ಲಿ `ಲಂಕೇಶ್ ಪತ್ರಿಕೆ`ಯಲ್ಲಿ ವಾರಕ್ಕೆ ನಾಕಾರು ಬರೆಯುತ್ತಿದ್ದರು. `ನೀಲು` ಕೆಲವೇ ಕೆಲವು ಸಾಲುಗಳಲ್ಲಿ ಏನೆಲ್ಲವನ್ನು ಹೇಳುತ್ತಿದ್ದಳು! ಪ್ರೀತಿ, ಪ್ರೇಮ, ಕಾಮ, ಮೋಹ, ದಾಹ, ದ್ವೇಷ, ರಾಜಕೀಯ, ಧರ್ಮ, ಝೆನ್…

ಕನ್ನಡದಲ್ಲಿ ಅಂಥ ಒಂದು ಕಾವ್ಯ ಪ್ರಕಾರಕ್ಕೆ ‘ನೀಲುಗಳು’ ಎಂದು ನಾಮಕರಣ ಮಾಡಬಹುದೇ? ನಾನಂತೂ ಮಾಡಿದ್ದೇನೆ. ಆಗಾಗ ನಾನು `ನೀಲು`ವಿನ ಹೆಸರಿನಲ್ಲಿ ಬರೆದ ಒಂದಿಪ್ಪತ್ತು ನೀಲುಗಳು ಇಲ್ಲಿವೆ.


ಲಂಡನ್ನಿನ ರಸ್ತೆಗಳಲ್ಲಿ
ನಡೆಯುವಾಗ
ಮಳೆ ಬಂದರೆ
ಮಣ್ಣಿನ ವಾಸನೆ
ಬರುವುದೇ ಇಲ್ಲ


ತಲೆ ಕೂದಲಿಗೆ ಬಣ್ಣ ಹಾಕಿಕೊಳ್ಳುವಾಗ
ಕನ್ನಡಿಯಲ್ಲಿ
ಎದೆಯ ಮೇಲಿನ ಬಿಳಿಕೂದಲು ಕಂಡು
ಗಾಬರಿಯಾದ ನನ್ನ ಗಂಡ


ಅದನ್ನು
ಶಬ್ದಗಳಲ್ಲಿ ಹೇಳಲು
ಬರುವುದಿಲ್ಲ
ಆದರೆ ಶಬ್ದಗಳಲ್ಲಿ ಹೇಳದೇ
ವಿಧಿಯಿಲ್ಲ
ಎನ್ನುವವಳು ಕವಿತೆ
ಬರೆಯಲು ಅಡ್ಡಿಯಿಲ್ಲ


ಭರಪೂರ ಬಿಸಿಲು
ಕೆರೆಯಲ್ಲಿ ಈಸುವ
ಎಮ್ಮೆಯ ಕಣ್ಣುಗಳು


ಮನೆ ಕೆಲಸದವಳು
ತಡವಾಗಿ ಬಂದಾಗ ಅಥವಾ ಬರದಿದ್ದಾಗ
ಮಗುವಿನ ಅನಾರೋಗ್ಯದ ಕಾರಣ ಕೊಡುತ್ತಿದುದು
ಶುದ್ಧ ಸುಳ್ಳು ಎಂದುಕೊಂಡಿದ್ದೆ
ನನಗೆ ಮಗುವಾಗುವವರೆಗೂ


ಹರೆಯದಲ್ಲಿ
ಕದ್ದು ಮುಚ್ಚಿ ಮಾಡಿಯೂ ಮಾಡದ ಪ್ರೇಮಪ್ರಕರಣಗಳು
ಮುಪ್ಪಿನಲ್ಲಿ
ಆತ್ಮಕತೆ ಬರೆಯುವಾಗ
ರೆಕ್ಕೆ ಪುಕ್ಕ ಬಂದು
’ಛೇ! ಹಾಗೆ ಮಾಡಿದ್ದರೆ ಎಷ್ಟು ಚೆನ್ನಾಗಿತ್ತಲ್ಲವೇ ಚಿನಾಲಿ!’
ಎಂದು ಬಯ್ದವು


`ಧ್ಯಾನದಿಂದ ಏನು ಸಿಗುತ್ತದೆ,`
ಎಂದು ಕೇಳಿದ
ಝೆನ್ ಗುರು ಹೇಳಿದ,
`ನಥಿಂಗ್ ಸಿಗುತ್ತದೆ`


ನೀನು
ಗಡ್ಡದಲ್ಲಿ ಕೈಯಾಡಿಸುವ
ರೀತಿಯಲ್ಲೇ
ಒಂದು ತರಹದ
ಕವಿತೆ ಇದೆ


ಒಳ್ಳೆಯ ಕೆಲಸಗಳು
ಕೆಟ್ಟ ಕೆಲಸಗಳು ಕೊಡುವ
ಸುಖ ಮತ್ತು ಖುಷಿ
ಕೊಡುವಂತಿದ್ದರೆ
ಬದುಕು ಎಷ್ಟು
ಚೆನ್ನಾಗಿರುತ್ತಿತ್ತಲ್ಲವೇ, ಗೆಳತಿ?

೧೦
ಅಹಂಕಾರವಿಲ್ಲದ ಪ್ರತಿಭಾವಂತೆ
ಸಿಕ್ಕರೂ ಸಿಗಬಹುದು
ಅಹಂಕಾರವಿಲ್ಲದ ಸುಂದರಿ
ಇನ್ನೂ ಸಿಕ್ಕಿಲ್ಲ

೧೧
ನನ್ನ ಮಗ ಮುಂದೊಂದು ದಿನ
ಇನ್ನೊಂದು ಹೆಣ್ಣಿನ ಬಾಳು ಸೇರಿದರೂ
ನನ್ನ ಮಗನಾಗಿಯೇ ಉಳಿಯಬೇಕು,
ನನ್ನ ಗಂಡ ತನ್ನ ತಾಯಿಯ ಮಾತು ಕೇಳದ
ಬರೀ ನನ್ನವನಾಗಿರಬೇಕು
ಎನ್ನುವ ಇಬ್ಬಂದಿತನದಲ್ಲೇ
ಹೆಣ್ತನವಿದೆಯೇ?

೧೨
ತನಗಿಂತ
ತನ್ನ ಶಿಲ್ಪ
ಹೆಚ್ಚು ಸುಂದರಿ ಎಂದು
ಶಿಲ್ಪವನ್ನು ಧ್ವಂಸ ಮಾಡಿ
ಶಿಲ್ಪಿಯನ್ನೇ ಕೊಲ್ಲಿಸಿದ
ರಾಣಿಯ ಕತೆ
ಹೇಳಲೇ?

೧೩
ಕಂದಾಯವಿಲ್ಲದೇ
ಸುಲಿಗೆಯಿಲ್ಲದೇ
ಗುಲಾಮರಿಲ್ಲದೇ
ಎಷ್ಟುಕೊಟ್ಟರಷ್ಟಕ್ಕೆ ದುಡಿವ
ಬಡವರಿಲ್ಲದೇ
ತಾಜಮಹಲುಗಳಿರುತ್ತಿದ್ದವೇ?
ಪಿರಮಿಡ್ಡುಗಳಿರುತ್ತಿದ್ದವೇ?

೧೪
ಆ ಹುಡುಗಿಗೆ
ಹಾರಲು ಬರುತ್ತಿತ್ತು
ಅವಳಮ್ಮ
ನಿನಗೆ ರೆಕ್ಕೆಗಳಿಲ್ಲ
ಎಂದು ಹೇಳುವವರೆಗೂ!

೧೫
ಮೊದಲ ಸಲಕ್ಕೇ ಸಿಕ್ಕಿಬಿಟ್ಟರೆ
ಕವಿತೆ ಕತೆ ಸಿನೆಮಾ
ಮತ್ತು ಪ್ರೇಮ
ಹುಚ್ಚು ಹಿಡಿಸುವುದಿಲ್ಲ

೧೬
ಅರ್ಥಕ್ಕೆ ಅರ್ಥವಿಲ್ಲವೆಂದು
ಎಲ್ಲ ಅರ್ಥಕ್ಕೂ
ಕೃಷ್ಣಾರ್ಪಣ ಎಂದು ತರ್ಪಣ ಬಿಟ್ಟು
ಅಗರ್ಭ ಶ್ರೀಮಂತನೊಬ್ಬ
ಜೋಳಿಗೆ ತಂಬೂರಿ ಹಿಡಿದು
ಪುರಂದರದಾಸನಾಗಿ
ಅರ್ಥಕಂಡುಕೊಂಡ

೧೭
ಏಕಾಂತಕ್ಕೂ
ಒಂಟಿತನಕ್ಕೂ
ಇರುವ ಅಂತರ
ಸ್ವರ್ಗ ಮತ್ತು ನರಕ

೧೮
ಇರದ ಕೊನೆ ಮೆಟ್ಟಿಲನ್ನು
ಇಳಿಯಹೋಗಿ
ಕಾಲು ಉಳುಕಿಸಿಕೊಂಡು
ಕತ್ತಲಿಗೆ ಬಯ್ದವರಲ್ಲಿ
ನೀವೂ ಒಬ್ಬರಲ್ಲವೇ?

೧೯
ದೇವರೇ,
ಅವರವರು ಹೇಗಿದ್ದಾರೋ
ಹಾಗೆಯೇ ಒಪ್ಪಿಕೊಳುವ
ದೊಡ್ಡತನವಾನ್ನಾದರೂ ಕೊಡು
ಇಲ್ಲಾ ಅವರು ಹೇಗಿದ್ದಾರೆ ಎನ್ನುವುದು
ಅರ್ಥವಾಗದಿರುವ
ದಡ್ಡತನವನ್ನಾದರೂ ಕೊಡು

೨೦
ಬದುಕು
ಸಹ್ಯವಾಗಿರಬೇಕಾದರೆ
ಸುಳ್ಳುಗಳನ್ನು ಹೇಳುತ್ತಲೇ
ಇರಬೇಕು
ಬೇರೆಯವರಿಗೂ
ನಮಗೂ

ಮಾತುಗಳು – ಕೇಶವ ಕುಲಕರ್ಣಿ ಬರೆದ ಕವನ

ಮಾತುಗಳು – ಕೇಶವ ಕುಲಕರ್ಣಿ ಬರೆದ ಕವನ

images

(ಕೇಶವ್ ಕುಲಕರ್ಣಿ ಅವರು ಬರೆದ ‘ಮಾತುಗಳು’ ಎಂಬ ಈ ಕವನ ಬಹಳ ನಿಗೂಢ ಹಾಗೂ ಅರ್ಥಗರ್ಭಿತವಾಗಿದೆ. ಇದನ್ನು ಒಂದು ಸುತ್ತು ಓದಿದ ಕೂಡಲೇ ಗ್ರಹಿಸುವುದು ಸುಲಭವಲ್ಲ. ಪದ್ಯದಲ್ಲಿ ಅಡಗಿರುವ Metaphor ಕೂಡ ಒಮ್ಮೆಗೆ ಮೇಲೆದ್ದು ತೋರುವುದಿಲ್ಲ. ಈ ಕವನವನ್ನು ಗ್ರಹಿಸುವುದಕ್ಕೆ ಒಂದೆರಡು ಬಾರಿಯಾದರೂ ಓದಬೇಕು.

ಕೇಶವ್ ತಿಳಿಸಿದ ಹಾಗೆ ಈ ಕವನದಲ್ಲಿ ಅವರು ವಿಶೇಷ ಶೈಲಿಯನ್ನು ಬಳಸಿಕೊಂಡಿದ್ದಾರೆ. ಇದು ಒಂದು ಉತ್ತಮ ಪ್ರಯೋಗ. ಇದನ್ನು ‘ಪದ ಸರಣಿ’ (Chain Verse) ಎಂದು ಗುರುತಿಸಬಹುದು. ಈ ಒಂದು ಬರವಣಿಗೆಯ ಶೈಲಿಯಲ್ಲಿ  ಕವನದಲ್ಲಿನ ಒಂದು ಚರಣದ (Paragraph)  ಕೊನೆಯ ಸಾಲಿನಲ್ಲಿ ಕಾಣುವ ಪದ ಮುಂದಿನ  ಚರಣದ  ಮೊದಲನೆ ಪದವಾಗಿ ಮೂಡುತ್ತದೆ. ಉದಾಹರಣೆಗೆ ಮೊದಲ ಚರಣದ  ಕೊನೆ ಸಾಲಿನ  ‘ಮಡಕೆ’ ಮುಂದಿನ ಚರಣದ ಮೊದಲನೇ ಸಾಲಿನಲ್ಲಿ ‘ಮಡಕೆಗಳು’ ಎಂದು ಮೂಡುತ್ತದೆ. ಹಾಗೆ ಎರಡನೆ ಚರಣದ ಕೊನೆ ಸಾಲಿನಲ್ಲಿ ಕಾಣುವ ‘ಧೂಳು’ ಮೂರನೇ ಚರಣದ ಮೊದಲನೆ ಸಾಲಿನಲ್ಲಿ ‘ಧೂಳುಗಳು’ ಎಂದು ರೂಪುಗೊಂಡಿದೆ.  ಮೂರು, ನಾಲ್ಕು ಸಾಲಿನ ಈ ಒಂದು  ವಿಶೇಷ ಕಾವ್ಯ ಶೈಲಿ ಬಹಳ ಪುರಾತನವಾದದ್ದು! ಈ ಶೈಲಿಯಲ್ಲಿ ಬರೆದ ಕವನಗಳು  ಬಹಳ ವಿರಳ. ಫ್ರೆಂಚ್, ಜರ್ಮನ್ ಹಾಗೂ ಇಂಗ್ಲೀಷ್ ಸಾಹಿತ್ಯದಲ್ಲಿ  ಈ ಶೈಲಿಯನ್ನು ಕೆಲವು ಬರಹಗಾರರು ಅಳವಡಿಸಿಕೊಂಡಿದ್ದಾರೆ. ಕನ್ನಡ ಸಿನಿಮಾ ಸಾಹಿತಿ ಚಿ. ಉದಯ ಶಂಕರ್ ಅವರು ತಮ್ಮ  ಕೆಲವು ರಚನೆಯಲ್ಲಿ ಈ ಶೈಲಿಯನ್ನು ಬಳಸಿಕೊಂಡಿರುವ  ವಿಚಾರ ಕೆಲವರಿಗೆ ಮಾತ್ರ ತಿಳಿದಿರಬಹುದು.

‘ಮಾತು ಮನೆ ಕೆಡುಸ್ತು (ಮಡಕೆ) ತೂತು ಒಲೆ ಕೆಡುಸ್ತು’ ಎಂಬ ಗಾದೆ ಈ ಕವನಕ್ಕೆ ಸ್ಫೂರ್ತಿ ಒದಗಿಸಿರಬಹುದು !

ಈ ನಿಗೂಢ ಕವನವನ್ನು ಓದುಗರು ತಮ್ಮದೇ ಆದ ದೃಷ್ಟಿ ಕೋನಗಳ ಮೂಲಕ ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿ ಕೊಳ್ಳಬಹುದು. ನಿಮ್ಮೆಲ್ಲರ ಪ್ರತಿಕ್ರಿಯೆಗಳ ಬಳಿಕ ಕೇಶವ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಲ್ಲಿ……. “ಮಾತುಗಳು” ಕವನವನ್ನು  ಓದಿ ಮತ್ತೆ ಓದಿ…. ಚರ್ಚೆ ಮಾಡೋಣ – ಸಂ)

 

ಮಾತುಗಳು
ಬಿದ್ದಿವೆ ಮೂಲೆಯಲ್ಲಿ
ಮಡಕೆಗಳ ಒಳಗೆ

ಮಡಕೆಗಳು
ನಾರಿವೆ ಗವ್ವೆನುವ
ಧೂಳು ಕುಡಿದು

ಧೂಳುಗಳು
ಹಾರಿವೆ ಗಾಳಿ ಬೀಸಿ
ಮನೆ ತುಂಬ

ಮನೆ
ಸೋತಿದೆ ಸೋರಿ
ಕಂಬ ಒದ್ದೆಯಾಗಿ

ಕಂಬಗಳು
ಟೊಳ್ಳಾಗಿವೆ ಒಳಗೆ
ಹೊರಗೆಲ್ಲ ಗಾಯಗಳು

ಗಾಯಗಳು
ಬಿರಿದಿವೆ ರಕ್ತಮಾಂಸ
ಗೆದ್ದಲು ಮುಗಿಬಿದ್ದಿವೆ

ಗೆದ್ದಲುಗಳು
ತಿನ್ನುತ್ತವೆ (ಒಂದು ದಿನ) ಮಡಕೆಯಲ್ಲಿ
ಬಿದ್ದ ಮಾತುಗಳ