ಚುಟುಕಗಳು

 

ಸಾಂಗತ್ಯ

ಸೂಜಿ ಮೊನೆಯ ಚೂಪಿನಂತೆ

ನಿನ್ನ ಹೊಳಪು, ಝಳುಪು

ಅದಕ್ಕೆಂದೇ ದಾರವಾಗಿ ಅಂಟಿದ್ದೇನೆ

ಇನ್ನೊಂದು ತುದಿಯಲ್ಲಿ,

ನಯವಾಗಿ ಸಾಗಿದೆ, ಬದುಕು!!!

 

ಮೇಕಪ್ಪು ?!

ಗಂಡಸಿಗೇಕೆ ಬೇಕು ಮೇಕಪ್ಪು

ತಪ್ಪಿ ನುಡಿದಾಗಲೆಲ್ಲ

ಮಾಡುವ ತಪ್ಪುಗಳನ್ನೆಲ್ಲ

ಹೆಂಡತಿ ಸರಿತೂಗಿಸಿ ಮಾಡುವಾಗ make-up ಉ?

 

ತಂತ್ರ

ಗಮನಿಸುವ ಸೂಕ್ಷ್ಮವಿಲ್ಲವೆಂಬ ದೂರು

ತಾನು ತೊಡುವ ಉಡುಗೆ-ತೊಡುಗೆ

ಗಮನಿಸಿದರೆ ಅತಿಯಾಯ್ತು ಎನ್ನುವ ಕೋಪ-ತಾಪ

ಹದಿನಾರು ಸಾವಿರ ಹುಡುಗಿಯರ

ಹೇಗೆ ಗೆದ್ದೆಯೋ, ಹೇಳಿಕೊಡು ಗೋಪ!!?

 

ದೂರು

ಬೇಗ ವಯಸ್ಸಾಗುವುದಿಲ್ಲ ಗಂಡಸರಿಗೆ

ಎನ್ನುತ್ತ ಕೊರಗುವರು ಹೆಂಗಸರು

ಹೆಂಗಸಿನ ತಗಾದೆಗಿಲ್ಲ ಮೊನೆ

ತನ್ನ ಹೆಂಡತಿ ಅವಳಂತಿಲ್ಲ,ಹದಿನಾರಲ್ಲ

ಎನ್ನುತ್ತ ಚಂಚಲರು ಗಂಡಸರು

ಗಂಡಸಿನ ಚಪಲಕ್ಕಿಲ್ಲ ಕೊನೆ!!!

 

ಕಡಿವಾಣ

ನಿಧಾನ ಗತಿ ಗಂಡಸಲ್ಲಿ ವಯಸ್ಸು

ಗೊತ್ತು ಗುರಿಯಿಲ್ಲದ ಹುಮ್ಮಸ್ಸು

ಚಂಚಲ ಚಪಲಚಿತ್ತ ಮನಸ್ಸು

ಕಡಿವಾಣಕ್ಕೆ ಬೇಕೊಬ್ಬ ಹೆಂಗಸು!!!

ಎನ್ನರಸ – ಪ್ರೇಮಲತ ಬರೆದ ಕವಿತೆ

ಕಣ್ಣ ಮೀಟಿ, ಕರವ ಚಾಚಿ

ಕರೆದೆ ನೀನನ್ನೆಲ್ಲಿಗೆ?

ಕಾಮನಂತೆ ಬಾಣ ಬಿಟ್ಟು

ಕೊಂದಿಹೆ ನನ್ನೊಂದೇಟಿಗೆ!

ಮಧುವನೀರಿ, ಭ್ರುಂಗವೇರಿ

ಸೌಗಂಧದ ಸಿರಿ ನಾಡಿಗೆ

ಬೆಚ್ಚಗಿನ ಎದೆಯ ತೆರೆದು

ಭಾವನೆಗಳ ಹೂ ಮೆತ್ತೆಗೆ!

ಬೊಗಸೆ ತುಂಬ ಮೊಗೆವ ಸಿಹಿ

ಮೃದು ಮಂದಹಾಸ ಸವಿನುಡಿ

ಪದಗಳೊಡನೆ ಲಾಸ್ಯವಾಡಿ

ತೋರಿ ಶೃಂಗಾರದ ಕನ್ನಡಿ!

ಕಣ್ಣ ಮುಚ್ಚಿ, ಕನಸ ತೆರೆಸಿ

ಕಾರ್ಯಮುಖಿ ಬದುಕ ಕೆಡೆಸಿ

ಮನಸ ತುಂಬ  ಬಣ್ಣಕೇಳಿ

ಗರಿಕೆದರಿದ ಹಕ್ಕಿ ರಂಗವಲ್ಲಿ!

ಅಂಗ ಸಂಗ  ಮಧುರ ಬಂಧ

ಕಣ್ರೆಪ್ಪೆಯ ಮಿಟುಕಿಗೆ

ಕರಗದಿರು ,ಹೋಗದಿರು

ಎನ್ನರಸ ನೀನಲ್ಲವೆ.. ‘ಕಲ್ಪನೆ’!!!