ನಾಟಿಂಗ್‌ಹ್ಯಾಮಿನ ನೆಲದಿಂದ — ಕನ್ನಡ ಕಾವ್ಯದ ಮೂರು ದನಿಗಳು

ಕನ್ನಡ ಭಾಷೆ ಕೇವಲ ಕರ್ನಾಟಕದ ಮಣ್ಣಿಗೆ ಸೀಮಿತವಾಗಿಲ್ಲ — ಅದು ಕನ್ನಡಿಗರ ಉಸಿರಿನಲ್ಲಿ ಎಲ್ಲೆಲ್ಲೂ ಹರಿಯುತ್ತದೆ ಎಂಬುದಕ್ಕೆ ಟಿ. ಆರ್. ನಾರಾಯಣ್ ಅವರ ಕವಿತೆಗಳು ಜೀವಂತ ನಿದರ್ಶನ. ಇಂಗ್ಲೆಂಡಿನ ನಾಟಿಂಗ್‌ಹ್ಯಾಮ್‌ನಿಂದ ರಚಿತವಾದ ಈ ಮೂರು ಕವಿತೆಗಳು ಭಿನ್ನ ಭಿನ್ನ ಭಾವಪ್ರಪಂಚಗಳ ಬಾಗಿಲು ತೆರೆಯುತ್ತವೆ.

“ಹಿರಿ ಹಕ್ಕಿಯುಲಿತ ಅನನ್ಯಾನುಭವ ಹಿತವಚನ” — ಬಣ್ಣಬಣ್ಣದ ಹಕ್ಕಿಗಳ ಕಲಾಕೃತಿಯಿಂದ ಸ್ಫೂರ್ತಿ ಪಡೆದ ಈ ಕವಿತೆ ಹತ್ತು ಪದ್ಯಗಳ ಮಾಲೆ. ಸಂಬಂಧಗಳ ಸ್ವರೂಪ, ಸತ್ಯಸಂಧತೆ, ಜೀವನದ ಗುರಿ, ದಯಾಶೀಲತೆ — ಇವುಗಳ ಕುರಿತು ಹಿರಿ ಅನುಭವಿ ನೀಡುವ ಹಿತವಚನಗಳಂತೆ ಪ್ರತಿ ಪದ್ಯವೂ ಮನಮುಟ್ಟುತ್ತದೆ.

“ವಸಂತಾಗಮನ” — ಶಿಶಿರದ ತಣ್ಣನೆಯ ಕೊರೆತದ ನಂತರ ಬರುವ ವಸಂತ ಋತುವನ್ನು ಕವಿ ಇಲ್ಲಿ ಕೇವಲ ಪ್ರಕೃತಿ ಬದಲಾವಣೆಯಾಗಿ ಕಾಣದೆ ಮನುಷ್ಯನ ಆಂತರಿಕ ನವಚೇತನದ ಸಂಕೇತವಾಗಿ ಕಾಣುತ್ತಾರೆ. ನಾಟಿಂಗ್‌ಹ್ಯಾಮಿನ ಮುದಯಾನ ಬಿಳಿ ಮೋಡ, ರವಿಕಿರಣ, ಬಿಸಿಲ ಕೋಲುಗಳ ಚಿತ್ರಣ ಕನ್ನಡ ಛಂದಸ್ಸಿನ ಲಯದಲ್ಲಿ ಸುಂದರವಾಗಿ ಮೂಡಿ ಬಂದಿದೆ.

“ವಿಲಯವಾದವರ ಹುಡುಕಾಟದಲ್ಲಿ” — ಈ ಕವಿತೆ ಮೂರರಲ್ಲಿ ಅತ್ಯಂತ ಆಳವಾದ ತಾತ್ವಿಕ ಕೃತಿ. ತೀರಿಕೊಂಡ ಪ್ರಿಯರನ್ನು ಹುಡುಕುವ ಮನಸ್ಸಿನ ವ್ಯಾಕುಲ, ಅವರ ಅಸ್ತಿತ್ವ ಮತ್ತು ಅನಸ್ತಿತ್ವದ ನಡುವಿನ ತೊಳಲಾಟ, ಮಂಕುತಿಮ್ಮನ ಕಗ್ಗದ ದರ್ಶನದ ಉಲ್ಲೇಖದೊಂದಿಗೆ ಜೀವನ-ಮರಣದ ಸತ್ಯವನ್ನು ಸ್ವೀಕರಿಸುವ ಹಾದಿ — ಇವೆಲ್ಲ ಓದುಗರ ಅಂತರಂಗವನ್ನು ತಟ್ಟದೇ ಇರಲಾರವು.

ತಮ್ಮ ಪ್ರತಿ ಕವಿತೆಯ ಜೊತೆ ಶಬ್ದ ವಿಭಾಗ, ಅರ್ಥ ಮತ್ತು ವ್ಯಾಕರಣ ಟಿಪ್ಪಣಿಗಳನ್ನು ನೀಡುವ ಅವರ ಕ್ರಮ ಕನ್ನಡ ಭಾಷೆಯ ಮೇಲಿನ ಆಳವಾದ ಪ್ರೀತಿ ಮತ್ತು ಪಾಂಡಿತ್ಯವನ್ನು ತೋರಿಸುತ್ತದೆ. KBUK ಕುಟುಂಬದ ಪ್ರೀತಿಯ ಕವಿ ಟಿ. ಆರ್. ನಾರಾಯಣ್ ಅವರ ಈ ಮೂರು ಕವಿತೆಗಳನ್ನು ಓದುಗರ ಮುಂದೆ ತರಲು ನಮಗೆ ಸಂತೋಷವಾಗುತ್ತಿದೆ.

ಕವಿ ಪರಿಚಯ

ಟಿ. ಆರ್. ನಾರಾಯಣ್ ಅವರು ಕರ್ನಾಟಕ ವಿದ್ಯುತ್ ಮಂಡಳಿಯಲ್ಲಿ (KEB) ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಅಭಿಯಂತರರು. ತಾಂತ್ರಿಕ ವೃತ್ತಿಜೀವನದ ಹೊರತಾಗಿಯೂ ಕನ್ನಡ ಕಾವ್ಯದ ಮೇಲಿನ ಪ್ರೀತಿ ಅವರನ್ನು ಯಾವತ್ತೂ ಬಿಟ್ಟಿಲ್ಲ. ನಿವೃತ್ತಿಯ ನಂತರ ಅವರು ವರ್ಷದ ಅರ್ಧಭಾಗವನ್ನು ಇಂಗ್ಲೆಂಡಿನ ನಾಟಿಂಗ್‌ಹ್ಯಾಮ್‌ನಲ್ಲಿ ಕಳೆಯುತ್ತಾರೆ — ತಮ್ಮ ಮಗಳು, KBUK ಉಪಾಧ್ಯಕ್ಷರೂ, ಪ್ರಸಿದ್ಧ ಭರತನಾಟ್ಯ ಕಲಾವಿದರೂ ಮತ್ತು ತಜ್ಞ ವೈದ್ಯರೂ ಆದ ಡಾ. ಸುಮನಾ ನಾರಾಯಣ್ ಅವರ ಜೊತೆ. ಅರ್ಧ ಅನಿವಾಸಿ ಕನ್ನಡಿಗರಾದ ಟಿ. ಆರ್. ನಾರಾಯಣ್ ಅವರು ವಿದೇಶದ ನೆಲದಲ್ಲಿ ಕುಳಿತು ತಾಯ್ನಾಡಿನ ಭಾಷೆಯಲ್ಲಿ ಕಾವ್ಯ ರಚಿಸುವ ಮೂಲಕ ಕನ್ನಡ ಸಾಹಿತ್ಯದ ಜ್ಯೋತಿಯನ್ನು ಪರದೇಶದಲ್ಲೂ ಬೆಳಗಿಸುತ್ತಿದ್ದಾರೆ. ಅವರ ಕವಿತೆಗಳಲ್ಲಿ ಶಾಸ್ತ್ರೀಯ ಕನ್ನಡದ ಸಂಧಿ-ಸಮಾಸಗಳ ಬಳಕೆ, ತಾತ್ವಿಕ ಚಿಂತನೆ ಮತ್ತು ಜೀವನಾನುಭವದ ಸಾರ ಒಟ್ಟಾಗಿ ಮಿಳಿತವಾಗಿವೆ.

-ಸಂ

3 thoughts on “ನಾಟಿಂಗ್‌ಹ್ಯಾಮಿನ ನೆಲದಿಂದ — ಕನ್ನಡ ಕಾವ್ಯದ ಮೂರು ದನಿಗಳು

  1. ಎಲ್ಲ ಕವಿತೆಗಳು ‘ನವೋದಯ’ ಶೈಲಿಯಲ್ಲಿವೆ ಮತ್ತು ಮುದ ನೀಡುತ್ತವೆ. ಮೊದಲ ಕವಿತೆಯಲ್ಲಿ, ಕವಿ ತನ್ನ ಮಗಳು ಮತ್ತು ಅಳಿಯ ಮತ್ತು ಇಬ್ಬರು ಮೊಮ್ಮಕ್ಕಳ ಮಧ್ಯ ಆರಾಮಕುರ್ಚಿಯಲ್ಲಿ ಕುಳಿತಿರುವುದನ್ನು ನಾನು ಊಹಿಸಬಲ್ಲೆ. ಸಲಹೆಗಳು ಹೃದಯವನ್ನು ಮುಟ್ಟುತ್ತವೆ ಮತ್ತು ಅಷ್ಟೇ ಕಾವ್ಯಾತ್ಮಕವಾಗಿವೆ. ಎರಡನೇ ಕವಿತೆಯು ಸಾವಿನ ಬಗ್ಗೆ ಆಳವಾದ ಚಿಂತನಶೀಲ ಪ್ರಶ್ನೆಗಳೊಂದಿಗೆ ತಾತ್ವಿಕವಾಗಿದೆ. ಮೂರನೆಯ ಕವಿತೆ ಪ್ರತಿಯೊಬ್ಬ ಕವಿಯ ನೆಚ್ಚಿನ ಋತು, ವಸಂತಕಾಲದ ಬಗ್ಗೆ. ಬಹುತೇಕ ಮರೆತುಹೋದ ಹಲವು ಪದಗಳು ಇಲ್ಲಿ ಒಡಮೂಡಿವೆ. – ಕೇಶವ

    Like

  2. ಟಿ ಆರ್ ನಾರಾಯಣ್ ಅವರ ಈ ವಾರದ ಮೂರು ಕವನಗಳು ಒಬ್ಬ ಅನುಭವಿ ನುರಿತ ಬರಹಗಾರರ ಕೊಡುಗೆ ಅಂತ ಮೊದಲ ನೋಟಕ್ಕೇ ಗೊತ್ತಾಗುತ್ತದೆ. ಸಂಪಾದಕಿಯ ಪರಿಚಯದ ಕೊನೆಯ ವಾಕ್ಯ ಕವಿಯ ಜೀವನ ದೃಷ್ಟಿಯನ್ನು ಸ್ವಲ್ಪದರಲ್ಲಿ ಹಿಡಿದಿಟ್ಟಿದೆ. ಈ ಕವಿತೆಗಳ ಶೈಲಿ conventional, ಡಿವಿಜಿಯವರ ಕಗ್ಗವನ್ನು ನೆನಪಿಸುತ್ತದೆಯಷ್ಟೇ ಅಲ್ಲದೆ ಎರಡನ್ನು ಉದ್ಧರಿಸುತ್ತಾರೆ ಸಹ.
    ಮೊದಲ ಕವನ ಒಂದು ಕಲಾಕೃತಿಯಿಂದ ಸ್ಫೂರ್ತಿ ಪಡೆದದ್ದು ಅಂತ ಸ್ಪಷ್ಟಪಡಿಸಿದ್ದಾರೆ. ಅದನ್ನು ಪ್ರಕಟಿಸಿ ನೋಡುವ ಅವಕಾಶವನ್ನು ಸಹ ಕೊಟ್ಟಿದ್ದಾರೆ. ಅದೊಂದು Ekphrastic poem. ಆ ಐದು ಹಕ್ಕಿಗಳ ಗುಂಪು ಒಂದು ವಿಶಿಷ್ಟ ಕುಟುಂಬಕ್ಕೆ ರೂಪಕವಾಗಿದೆ. ಈ ಕವನದಲ್ಲಿ ಹಿರಿಯ ಹಕ್ಕಿಯ ಜೀವನಾನುಭವ ಮತ್ತು ಉಪದೇಶವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ನಾಲ್ಕನೆಯ ಸಾಲಿನಲ್ಲಿ ಬರುವ ಯಮಕ ಅವಳಿ ಮೊಮ್ಮಕ್ಕಳನ್ನು ಸೂಚಿಸುವಂತಿದೆ! ಆರನೆಯ ಚರಣದಲ್ಲಿ ‘ಸಂಬಂಧಗಳ ನಡುವಿನ ವಿಷದ ಗೋಡೆ’ ಸಾಲನ್ನು ಓದುವಾಗ ಜಿಎಸ್ಸೆಸ್ ಅವರ ಗೋಡೆ ಕವನದ ನೆನಪಾಯಿತು. ಬದುಕಿನ ತಿರುಳಿನ ಆತ್ಮಾನುಭೂತಿಯ ರಹಸ್ಯವನ್ನು ಉಪದೇಶಿಸುತ್ತದೆ.
    ಎರಡನೆಯ ಕವಿತೆ!ವಿಲಯವಾದ ಹತ್ತಿರದವರ ಅಗಳಿಕೆಯ ಗಾಯದ ನೋವು ಇನ್ನೂ ಉತ್ಕಟವಾಗಿರುವಾಗಲೇ ಬರೆದಂತಿದೆ. ಇನ್ನೂ ಅವರನ್ನು ಇನ್ನೂ ಹುಡುಕಾಡುತ್ತಿದ್ದಾರೆ ಕವಿ. ಪೂರ್ವ ಪಶ್ಚಿಮಗಳ ಆದ್ಯಾತ್ಮದ ಅರಿವು ಇದೆ.( ಕರ್ಮ-ಶಿಲುಬೆ). ಸತ್ಯದ ಹುಡುಕಾಟ ನಿರಂತರವಾಗಿದೆ. ದಾರಿಕಂಡೀತು ಇಷ್ಟರಲ್ಲಿ ಎಂದು ಹಾರೈಸುವಾ.
    ನಾಟಿಂಗಮ್ಮಿನ ಚೈತ್ರದಾಗಮನದ ಉಲ್ಲಾಸ ಮೂರನೆಯ ಕವಿತೆಯಲ್ಲಿ ಮನೋಹರ ಚೈತನ್ಯವನ್ನುಂಟು ಮಾಡಿದೆ. ಸತ್ಯದರ್ಶನ ಮಾಡಿಸಿದೆ. ಅದನ್ನು ಪ್ರಾಸ ಲಯ ಭರಿತ ಪದ್ಯದಲ್ಲಿ ಹಂಚಿಕೊಂಡಿದ್ದಾರೆ.
    ಇಷ್ಟರಲ್ಲಿ ಅವರ ಕಾವ್ಯಗುಚ್ಛ ಪ್ರಕಟವಾದರೆ ಆಶ್ಚರ್ಯವಿಲ್ಲ ಅಂತ ಆಶಿಸುವೆ.
    ಶ್ರೀವತ್ಸ ದೇಸಾಯಿ

    Like

  3. ನಾರಾಯಣ್ ಅವರ ಮೂರು ಕವಿತೆಗಳು ಪ್ರೌಢವಾಗಿದೆ.
    ಒಂದು ಭಿತ್ತಿಯಿಂದ ಸ್ಫೂರ್ತಿ ಪಡೆದು ಚಿತ್ರಕವನವಾಗಲು ಹೊರಟ ಕವಿತೆ ಭಿತ್ತಿಯಲ್ಲಿರುವ ರೂಪಕವನ್ನು ಮೀರಿ ಆಳವಾದ ಚಿಂತನೆಗಳಲ್ಲಿ ಮಗ್ನಗೊಂಡಿದೆ. ಮನುಷ್ಯ ಸಂಬಂಧಗಳು, ಆತ್ಮಾವಲೋಕನೆ, ಬದುಕಿನ ಅರ್ಥ, ಹೇಗೆ ಬದುಕಬೇಕೆಂಬ ಆದರ್ಶ, ಕೊನೆಗೆ ಅಂತರಂಗದ ಅರಿವೇ ಸಾಕ್ಷಾತ್ಕಾರ ಎಂಬ ಸತ್ಯವನ್ನು ಕವನ ಸಾರಿದೆ.
    ಇಲ್ಲಿ ಪರಿಪಕ್ವವಾದ ಹಿರಿಯ ಕವಿಯ ಬದುಕಿನ ಅನುಭವ ‘ಹಿರಿ ಹಕ್ಕಿಯ ಉಲಿ’ಯಾಗಿ ದಾರಿ ದೀಪವಾಗಿದೆ. ಚತುಷ್ಪದಿ ಸ್ವರೂಪವನ್ನು ಉಳಿಸಿಕೊಂಡು ಸಾಗುವ ಕವಿತೆಗೆ ಹಳೆಗನ್ನಡದ ಲೇಪ ಇದ್ದು ಒಂದು ಕ್ಲಾಸ್ಸಿಕ್ ಗುಣಮಟ್ಟವನ್ನು ಪಡೆದಿದೆ. ನನಗೆ ತಟ್ಟನೆ ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ನೆನಪಾಯಿತು. ನಾರಾಯಣ್ ಅವರ ಕವಿತೆಗಳು ನವೋದಯ ಕಾವ್ಯ ಪರಂಪರೆಯ ಶುರುವಿನಲ್ಲಿ ಬರೆದ ಕವಿತೆಗಳನ್ನು ಹೋಲುತ್ತದೆ.

    ವಿಲಯವಾದವರ ಹುಡುಕಾಟದಲ್ಲಿ ಎಂಬ ಕವಿತೆ ಅಳಿದವರಿಗೆ ಶ್ರದ್ಧಾಂಜಲಿ. “ಎಲ್ಲ ನಂಬಿಕೆಗಳ ನಡುವೆ ಸತ್ಯ ತಿಳಿಯುವುದು ಅಸಾಧ್ಯ” ಎಂಬುದು ಅರ್ಥಪೂರ್ಣವಾಗಿದೆ.

    ವಸಂತಾಗಮನ ಕವನದಲ್ಲಿನ ಚೈತನ್ಯ, ಬೆಡಗು ವಿಶೇಷವಾಗಿದೆ. ಮುಸುಕು ಕವಿದು, ಮೋಡಗಳು ಚದುರಿ ನಿರ್ಮಲವಾಗುವ ಮತ್ತು ವನಗಳಲ್ಲಿ ಹೂ ಬಳ್ಳಿಗಳು ಅರಳುವ ವಸಂತದ ಎಲ್ಲಾ ನೋಟಗಳನ್ನು ತೆರೆದಿಡುವ ಕವಿತೆ ಪ್ರಾಸಬದ್ಧವಾಗಿದೆ. ‘ಚಿದಾನಂದ ಸ್ವರೂಪನ ಹುಡುಕಾಟದಲಿ’ ಎನ್ನುವ ಸಾಲು ಸೌಂದರ್ಯಾರಾಧನೆಯು ಎಷ್ಟು ಲೌಕಿಕವೂ, ರಸದೌತಣವೋ ಅಷ್ಟೇ ಅಧ್ಯಾತ್ಮಿಕವೂ ಹೌದು ಎಂಬ ವಿಚಾರವನ್ನು ನೆನಪಿಸಿದೆ. ಈ ಕವಿತೆಯಲ್ಲಿ ಭಾವಗೀತೆಯ ಲಕ್ಷಣಗಳೂ ಇವೆ. ಪಂಕ್ತಿ 5-6 ನನಗೆ ಹೆಚ್ಚು ಇಷ್ಟವಾಯಿತು.

    Overall choice of words compliment the poetic structure and I find there is lot of Sanskritization, which has given a good antique effect. Given the theme of the poems here, I think it blends well. ರಾಧಿಕ ಮೂರೂ ಕವಿತೆಗಳನ್ನು ಪರಿಚಯಿಸಿ ಉತ್ತಮ ಸಂಪಾದಕೀಯವನ್ನು ಒದಗಿಸಿದ್ದಾರೆ.

    Like

Leave a Reply

Your email address will not be published. Required fields are marked *