ರುಕ್ಮಾದಿಂದ ಆರಂಭವಾದ ವಿಚಾರಗಳು

ಕೆಲವು ದಿನಗಳ ಹಿಂದೆ ವೆಬ್ ಸೀರೀಸ್ “ಫ್ಯಾಮಿಲಿ ಮ್ಯಾನ್ – ೩” ನೋಡುತ್ತಿದ್ದೆ, ಅದರಲ್ಲಿ ಬರುವ ಒಂದು ಪಾತ್ರ “ರುಕ್ಮಾ”… ಅದರ ಕೊನೆಯ ಸಂಚಿಕೆ ಬಂದಾಗ ರುಕ್ಮಾ ಪೂರ್ತಿ ಹೆಸರು ರುಕುಮಾಂಗದ ಎಂದು ತಿಳಿಯಿತು. ಅವನ ಪೂರ್ಣ ಹೆಸರು ಕೇಳಿದ ಮೇಲೆ ತಲೆಯಲ್ಲಿ ಇದು ಎಲ್ಲೋ ಕೇಳಿದ ಹಾಗಿದೆ ಅನಿಸ್ತಾ ಇತ್ತು. ಕೂತಲ್ಲಿ, ನಿಂತಲ್ಲಿ ಅದೇ ವಿಚಾರ…

ನಿತ್ಯ ಜೀವನದಲ್ಲಿ ನಾವು ಹತ್ತು ಹಲವು ವಿಷಯಗಳನ್ನು ನೋಡುತ್ತೇವೆ, ಕೇಳುತ್ತೇವೆ… ನಮ್ಮ ಮೆದಳು ಅದನ್ನು ತನ್ನ ಸಂಗ್ರಹದಲ್ಲಿ ಇಟ್ಟಿಕೊಳ್ಳುತ್ತದೆ ಮತ್ತು ನಮಗೆ ಅವಶ್ಯಕತೆ ಇದ್ದಾಗ ಅದನ್ನು ಒದಗಿಸುತ್ತದೆ, ಇದು ಸಾಮಾನ್ಯ ಕ್ರಿಯೆ. ನಮ್ಮ ಮೆದಳು ಪ್ರಜ್ಞೆ ಮತ್ತು ಸುಪ್ತಾವಸ್ಥೆ ಈ ಎರಡು ಸ್ಥಿತಿಯಲ್ಲೂ ವಿಷಯ ಸಂಗ್ರಹಣೆ ಮಾಡುತ್ತದೆ, ಅದನ್ನು ಸೋಸಿ, ಹೊಂದಿಸಿ ಇಡುತ್ತದೆ.

Memories, pressed between the pages of my mind
Memories, sweetened through the ages just like wine
(ಎಲ್ವಿಸ್ ಪ್ರೆಸ್ಲೇಯ್)

ನಮ್ಮ ಸಿಹಿ ನೆನಪುಗಳು ಮೇಲಿನ ಸಾಲುಗಳಂತೆ ಆಚೊತ್ತಿ ಕೂತಿರುತ್ತವೆ, ಯಾಕೆಂದರೆ ಅದನ್ನು ಮತ್ತೆ ಮತ್ತೆ ತೆಗೆದು ನೋಡುತ್ತಿರುತ್ತೇವೆ. ಮತ್ತೆ ಕೆಲವು ವಿಷಯಗಳು ಮನಸ್ಸಿನಲ್ಲಿ ಸೇರಿಕೊಂಡು, ಬೇಕಾದಾಗ ನೆನಪಾಗುವದಿಲ್ಲ… ಬೇರೆ ಏನೂ ವಿಚಾರ ಮಾಡುವಾಗ ಚಕ್ಕಂತ ಮನದ ಪರದೆಯ ಮೇಲೆ ಮೂಡುತ್ತವೆ. ನಾನು ಹೆಚ್ಚಿನ ವ್ಯಾಸಂಗ ಓದಿದ್ದು ಬೆಲ್ಫಾಸ್ಟ್ ನಲ್ಲಿ, ಒಂದು ದಿನ ನಮ್ಮ ಉಪನ್ಯಾಸಕರು ನಾವು ಯೂನಿವರ್ಸಿಟಿಗೆ ಬರುವ ರಸ್ತೆಯಲ್ಲಿನ ಅಂಗಡಿಗಳ ಹೆಸರು ಹೇಳಿರೆಂದು ಕೇಳಿದರು. ಪ್ರತಿದಿನ ಅದೇ ರಸ್ತೆಯಲ್ಲಿ ಓಡಾಡಿದ್ದರೂ, ಅಂಗಡಿಗಳನ್ನು ನೋಡಿದ್ದರೂ ನಮಗೆ ಎಲ್ಲಾ ಅಂಗಡಿಗಳ ವಿವರ ಆ ಸಮಯಕ್ಕೆ ನೆನಪು ಬರಲಿಲ್ಲ. ನಮ್ಮ ಸಂಕೀರ್ಣ ವ್ಯವಸ್ಥೆ ನಮಗೆ ಯಾವುದು ಅವಶ್ಯ, ಯಾವುದು ಅಲ್ಲ ಎಂದು ನಿರ್ಧರಿಸಿ ಉಳಿದಿದ್ದನ್ನು ಪಕ್ಕಕ್ಕಿರಿಸುತ್ತದೆ. ರುಕುಮಾಂಗದ ಹೆಸರು ಕೂಡ ಸ್ವಲ್ಪ ಕ್ಷಣ ನನ್ನ ನೆನಪಿನಲ್ಲಿ ಇದ್ದರೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ.

ಒಂದು ಕ್ಷಣ, ಈ ಹೆಸರು ಕೇಳಿದ್ದರೂ ನೆನಪಾಗುತ್ತಿಲ್ಲ ಎಂದು ಸಂಧ್ಯಾ ಜೊತೆ (ಏನಾದರೂ ಸಿಗದಿದ್ದರೆ ಅಥವಾ ಹೊಳೆಯದಿದ್ದರೆ ವಿಚಾರಿಸುವದು ಪತ್ನಿಯೊಂದಿಗೆ) ಮಾತನಾಡುತ್ತಿದಾಗ ಯುರೇಕಾ ಕ್ಷಣ ಅಥವಾ ಆಹಾ!! ಕ್ಷಣ ಬಂತು….

ಕರುಣಿಸೋ ರಂಗ ಕರುಣಿಸೋ ಕೃಷ್ಣ
ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ
ಕರುಣಿಸೋ ರಂಗ ಕರುಣಿಸೋ ಕೃಷ್ಣ ಕರುಣಿಸೋ….

ರುಕುಮಾಂಗದನಂತೆ ವ್ರತವ ನಾನರಿಯೆ
ಶುಕಮುನಿಯಂತೆ ಸ್ತುತಿಸಲು ಅರಿಯೆ
ಬಕವೈರಿಯಂತೆ ಧ್ಯಾನವ ಮಾಡಲರಿಯೇ
ದೇವಕಿಯಂತೆ ಮುದ್ದಿಸಲೂ ಅರಿಯೆನೋ ಕೃಷ್ಣ

ರುಕುಮಾಂಗದನಂತೆ ವ್ರತವ ನಾನರಿಯೆ … ಈ ಒಂದು ಸಾಲು ನೆನಪಿನ ಆಳದಿಂದ ಹೊರಬಂದು, ಮನಸ್ಸನ್ನು ನಿರಾಳಗೊಳಿಸಿತು.

ರುಕುಮಾಂಗದ ಯಾರು? ನಾರದ ಪುರಾಣದ ಒಂದು ಉಲ್ಲೇಖದಲ್ಲಿ ಬರುವ ರಾಜ ರುಕುಮಾಂಗದ ಸೂರ್ಯವಂಶಿಯ ರಾಜ, ಏಕಾದಶಿಯ ದಿನದ ಉಪವಾಸ ವ್ರತವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದವನು. ಅವನ ವ್ರತ ಭಂಗ ಮಾಡಿಸಲು ಅಪ್ಸರೆ ಮೋಹಿನಿ ಬಂದು ಪ್ರಯತ್ನಿಸಿ ಸೋತಾಗ, ಕೊನೆಗೆ ಅವನ ವ್ರತ ನಿಷ್ಠೆಗೆ ವಿಷ್ಣು ಪ್ರತ್ಯಕ್ಷನಾಗಿ ವೈಕುಂಠಕ್ಕೆ ಕರೆದುಕೊಂಡು ಹೋಗುತ್ತಾನೆ.

ವ್ರತ ಅಥವಾ ಉಪವಾಸ ಮಾಡುವುದು ಎಲ್ಲ ಸಂಸ್ಕೃತಿಯಲ್ಲೂ ಒಂದಲ್ಲ ಒಂದು ರೀತಿ ಸಾಮಾನ್ಯವಾಗಿ ನಡೆದುಕೊಂಡ ಬಂದ ರೂಢಿ. ಒಬ್ಬ ವ್ಯಕ್ತಿ ೧೬-೧೮ ಗಂಟೆ ಉಪವಾಸವಿದ್ದಾಗ ಅವನ ದೇಹದ ಕೋಶಗಳು ತಮ್ಮೊಳಗಿನ ಹಳೆಯದು, ಹಾನಿಗೊಂಡ ಭಾಗಗಳನ್ನು ತಾವೇ ಜೀರ್ಣಿಸಿಕೊಂಡು ಪುನರ್‌ಬಳಕೆ ಮಾಡಿಕೊಳ್ಳುತ್ತವೆ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಆಟೋಫ್ಯಾಜಿ (Autophagy) ಎನ್ನುತ್ತಾರೆ. ಅಂದರೆ ಕಟ್ಟುನಿಟ್ಟಾಗಿ ವ್ರತ (ಉಪವಾಸ) ಮಾಡುವದರಿಂದ ನಮ್ಮ ದೇಹದ ಕೋಶ ಶುದ್ಧೀಕರಣಕ್ಕೆ ದಾರಿ ಮಾಡಿದಂತಾಗುತ್ತದೆ, ಒಳ್ಳೆಯ ಆರೋಗ್ಯದ ಬುನಾದಿ ಆಗುತ್ತದೆ. ನಾರದ ಪುರಾಣದ ಉಲ್ಲೇಖವನ್ನು ಸದ್ಯದ ಪರಿಸ್ಥಿತಿಯಲ್ಲಿ ನೋಡಿದಾಗ, ನಮ್ಮ ಜೀವನದಲ್ಲಿ ವ್ರತ (ಉಪವಾಸ) ಕಟ್ಟುನಿಟ್ಟಾಗಿ ಪಾಲಿಸಲು ಪ್ರಯತ್ನಿಸಿದಾಗ ಬರುವ ಅದೇ ತಡೆಗಳನ್ನು ಅಪ್ಸರೆ “ಮೋಹಿನಿ” ಅಂದುಕೊಂಡು, ಅದನ್ನು ಲೆಕ್ಕಿಸದೆ (ಅಥವಾ ಮಾರು ಹೋಗದೆ) ವ್ರತ ಮಾಡಿದಾಗ ಒಳ್ಳೆಯ ಆರೋಗ್ಯದಿಂದ ಜೀವಿಸಿ, ಕೊನೆಗೆ ಸುಖಕರ ಸಾವನ್ನು (ಅನಾರೋಗ್ಯ ಇರದ) ಪಡೆದುಕೊಳ್ಳುವದೇ ವೈಕುಂಠ ಸೇರಿಕೊಂಡ ಹಾಗೆ ಇರಬೇಕು.

ಆಟೋಫ್ಯಾಜಿಯ ಕಾರ್ಯವಿಧಾನಗಳ ಆವಿಷ್ಕಾರಗಳಿಗಾಗಿ ಜಪಾನಿನ ಜೀವಕೋಶ ಜೀವಶಾಸ್ತ್ರಜ್ಞ ಯೋಶಿನೋರಿ ಒಹ್ಸುಮಿ ಅವರಿಗೆ 2016 ರ ಶರೀರಶಾಸ್ತ್ರ ಅಥವಾ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಏಕಾದಶಿ ಅಥವಾ ಈ ತರಹದ ಉಪವಾಸದ ರೂಢಿ ಬಹಳ ಹಳೆಯ ಆಚರಣೆ, ಅದನ್ನು ಕಡೆಗಣಿಸಿದ ನಾವು ಮತ್ತೆ ಅದನ್ನೇ ಅವಿಷ್ಕಾರವೆಂದು ಪರಿಗಣಿಸಿ ಆಚರಣೆಗೆ ತರಲು ಪ್ರಯತ್ನಿಸುತ್ತಿದ್ದೇವೆ… ಇದನ್ನೇ “ರಿಇನ್ವೆಂಟಿಂಗ್ ದಿ ವೀಲ್” ಅನ್ನುವದು.

ನಮ್ಮ ಅತೀ ಜಾಣತನದಿಂದ ಎಷ್ಟೋ ಈ ತರಹದ ಹಳೆಯ (ಹಿರಿಯರ) ಆಚರಣೆಗಳನ್ನು ಕಡೆಗಣಿಸಿ, ಮತ್ತಾರೂ ಅದನ್ನು ಸರಿ ಎಂದಾಗ ಅನುಸರಿಸಲು ಆರಂಭಿಸುತ್ತೇವೆ. ನನ್ನ ಮನಸಿನ್ನಲ್ಲಿ ಓಡಿದ ಕೆಲವು ಇದೆ ತರಹದ ವಿಷಗಳನ್ನು ಹಂಚಿಕೊಳ್ಳಣ ಅನಿಸಿತು. ಇತ್ತೀಚಿಗೆ ಬಂದ ಕರ್ನಾಟಕ ಸರ್ಕಾರದ ಒಂದು ಕಾರ್ಯ ನೀತಿ… ಪ್ರತಿ ತಿಂಗಳು ಒಂದು ದಿನ ಮುಟ್ಟಿನ ರಜೆ ಘೋಷಿಸಿದ್ದು, ಹಿಂದಿನ ಜನರು ಇದೇ ರಜೆ ಮನೆಯ ಹೆಣ್ಣು ಮಕ್ಕಳಿಗೆ ಕೊಡಲು ಮಡಿಯಲ್ಲಿ ಕೂಡಿಸಿದಾಗ ಅದನ್ನು ಪ್ರಶ್ನೆ ಮಾಡಿದವರೇನು ಕಡಿಮೆಯಿಲ್ಲ. ಅರೋಗ್ಯ ಈಗಿನ ಜನರ ಆದ್ಯತೆ ಆಗಿದೆ, ಇಡ್ಲಿ ಅಂತಹ ತಿಂಡಿ ಮಹತ್ವ ಜನರಿಗೆ ಈಗ ಆಗಿ ಪ್ರೋಬೈಯೋಟಿಕ್ ಎಂದು ಸೇವಿಸುವ ಅಭಿಮಾನಿಗಳು ಬೆಳೆಯುತ್ತಿದ್ದಾರೆ.

ಎಲ್ಲ ಆಚರಣೆ ಕಣ್ಣು ಮುಚ್ಚಿ ಪಾಲಿಸಬೇಕಿಲ್ಲ, ಅಂತಹ ಒಂದು ಸಣ್ಣ ಕಥೆ ನೋಡೋಣ. ಒಂದು ಆಶ್ರಮ, ಹಿರಿಯ ಸನ್ಯಾಸಿ ತೀರಿದ ನಂತರ ಯುವ ಸನ್ಯಾಸಿಗೆ ದೀಕ್ಷೆ ಕೊಟ್ಟರು. ಹಿರಿಯ ಸನ್ಯಾಸಿ ಪ್ರತಿದಿನ ಪ್ರವಚನದಲ್ಲಿ ಇಲಿಗಳನ್ನು ಹೆದರಿಸಲು ಬೆಕ್ಕು ತರುತ್ತಿದ್ದರು, ಕೆಲವು ಕಾಲದ ನಂತರ ಬೆಕ್ಕು ತಾನಾಗಿ ಬರಲು ಆರಂಭಿಸಿತು. ಹಿರಿಯ ಸನ್ಯಾಸಿ ತೀರಿದ ನಂತರ ಬೆಕ್ಕು ಪ್ರವಚನಕ್ಕೆ ಬರಲಿಲ್ಲ. ಯುವ ಸನ್ಯಾಸಿಯ ಬೆಕ್ಕು ಬಾರದ ಕಾರಣ ಪ್ರವಚನ ಆರಂಭಿಸಲು ತಯಾರಾಗಲಿಲ್ಲ, ಬೆಕ್ಕು ಬರುವುದು ಒಂದು ಆಚರಣೆಯ ಭಾಗ ಎಂದು ಕುಳಿತರು. ಆಚರಣೆ ವಿವೇಚಿಸಿ, ಅರಿತುಕೊಂಡು, ಪರಸ್ಥಿತಿಗೆ ಅನುಗುಣವಾಗಿ ಮಾಡಬೇಕು… ಅದು ಅಂಧಶ್ರದ್ಧೆ ಆಗಬಾರದು.

ನನ್ನ ಈ ವಿಚಾರಧಾರೆ ಒಂದು ಹೆಸರಿನೊಂದಿಗೆ ಆರಂಭವಾಯಿತು, ಅದರ ಹರಿವಿಗೆ ಸಿಕ್ಕ ಎಲ್ಲ ವಿಷಯಗಳನ್ನು ಬರೆಯುತ್ತ ಹೋದೆ… ಅದನ್ನೇ ಇಲ್ಲಿ ಲೇಖನ ಮಾದರಿಯಲ್ಲಿ ಬರೆಯಲು ಪ್ರಯತ್ನಿಸಿದೆ, ಇಷ್ಟ ಆಗಬಹುದು ಎಂದು ಭಾವಿಸುವೆ.

One thought on “ರುಕ್ಮಾದಿಂದ ಆರಂಭವಾದ ವಿಚಾರಗಳು

  1. ಎತ್ತಣ ರುಕ್ಮಾಂಗದ ವಿಷ್ಣು ಎತ್ತಣ ಫ್ಯಾಮಿಲಿ ಮ್ಯಾನ್ ರುಕ್ಮಾ ಎಂದು ಅನಿಸಿದರೂ ಪ್ರಮೋದ ಅವರ ಬರವಣಿಗೆ “ಚಿಂತನ ಪ್ರವಾಹ“(stream of consciousness ) ರೀತಿಯ ಬರಹವನ್ನು ನೆನಪಿಸುತ್ತದೆ. ಅವರ ಹಿಂದಿನ ಕೆಲವು ಬರಹಗಳಲ್ಲೂ ಇದರ ಛಾಯೆಯನ್ನು ನೋಡಬಹುದು. ಆ ತರದ style ಗೆ ಅವರು ಸಿದ್ಧಹಸ್ತರು ಕಾಣುತ್ತದೆ. ಆಧ್ಯಾತ್ಮ, ನೋಬೆಲ್ ಪಾರಿತೋಷಕ, ಆಟೋ ಫೇಜಿ ಯಿಂದ ಫಾಮಿಲಿ ವಿಷಯವನ್ನು ಜೋಡಿಸಿ ಅವರ ಚಿಂತನ- ಮನದೊಳಕ್ಕೆ ಹೋಗುತ್ತೇವೆ. ಇನ್ನೊಂದು ಕಾಕತಾಳೀಯವೆಂದರೆ ರುಕ್ಮಾಂಗದನ ಹೆಂಡತಿಯ ಹೆಸರೂ ಸಂಧ್ಯಾವಳಿಯಂತೆ! ಇಷ್ಟೆಲ್ಲಸ್ ಒದ್ದಾಡುವ ಮೊದಲೇ ಹೆಂಡತಿಯನ್ನು ಕೇಳಿದ್ದರೆ ಬಗೆಹರಿದುಬಿಡುತ್ತಿತ್ತು ಅವರ ತೊಂದರೆಯೆಲ್ಲ. ನಾನಿದ್ದೇನೆಲ್ಲ ಅಂತ ಅವರ ಮಂತ್ರ ತಯಾರಿರುತ್ತದೆ ಯಾವಾಗಲೂ! ನಾನರಿತಂತೆ ಎಲ್ವಿಸ್ ನ ಹೆಸರನ್ನು ಪ್ರೆಸ್ಲಿ ಎಂದೇ ಉಚ್ಚಾರ ಮಾಡುತ್ತಾ ಬಂದಿದ್ದೇನೆ Barnsley ತರ. ನಿಮ್ಮದು ಹೊಸ ರೀತಿ. ನಿಮ್ಮ ಬರೆಹ ಕ್ರಿಸ್ಮಸ್ ರೀಡಿಂಗ್ ಅಂತ ಈ ವಾರದ ಓದಿಗೆ ಮುದ ಕೊಟ್ಟಿತು ಪ್ರಮೋದ ಅವರೇ! ಆದರೆ ಗಕ್ಕನೆ ನಿಂತಂತೆ ಅನಿಸಿತು ಆ Stream!

    Like

Leave a Reply

Your email address will not be published. Required fields are marked *