ವಿಜಯ್ ಖುರ್ಸಾಪೂರ ಬರೆದ ಕವಿತೆಗಳು

ವೃತ್ತಿಯಿಂದ ಏರೋಸ್ಪೇಸ್ ಇಂಜಿನಿಯರ್ ಆಗಿರುವ ವಿಜಯ್ ಖುರ್ಸಾಪೂರ, ಹುಟ್ಟಿದ ಊರು ಶಿಗ್ಗಾವಿ (ಜಿಲ್ಲೆ ಹಾವೇರಿ ), ಓದಿದ್ದು ಧಾರವಾಡ, ಗದಗ. ಬೆಂಗಳೂರು. ಹೈದರಾಬಾದ ಮತ್ತು ಕೆನಡಾದಲ್ಲಿ ನೆಲೆಸಿ, ೪ -೫ ಏರೋಸ್ಪೇಸ್ ಕಂಪನಿಗಳಲ್ಲಿ ಕೆಲಸ ಮಾಡಿ, ಅವರು ಕಳೆದ ೧೦ ವರ್ಷಗಳಿಂದ ಇಂಗ್ಲೆಂಡ್ ನಲ್ಲಿ ನೆಲೆಸಿದ್ದಾರೆ. ಅವರ ಕೆಲವು ಕವನಗಳು ಇಲ್ಲಿವೆ, ನಿಮ್ಮ ಓದಿಗೆ. ನಿಮ್ಮ ಪ್ರೋತ್ಸಾಹ ಮತ್ತು ವಿಮರ್ಶೆ ಅವರಿಗೆ ಇನ್ನಷ್ಟು ಬರೆಯಲು ಮತ್ತು ತಿದ್ದಿಕೊಳ್ಳಲು ಅನುವುಮಾಡಿಕೊಡುತ್ತದೆ. – ಸಂ 

ಹಣತೆ

ಬೆಳಗಿದಾಗಲೆಲ್ಲ ಬೆಳಕು
ತನ್ನ ತಾ ಸುಟ್ಟರೂ ಜಗಕೆಲ್ಲ
ತೋರುತಿಹುದು ದಾರಿ,
ನಿರಂತರವಾಗಿ ಹೊಡೆದಾಡುತ
ಕತ್ತಲನು ಕಳೆಯಲು ಹೆಣಗಾಡುತಿದೆ..

ಸುತ್ತಲೂ ಕತ್ತಲು ಕವಿದ
ಬಡ ಹೃದಯಗಳಿಗೆ
ಬೆಳಕಿನ ಕಣ್ಣಂತೆ
ನಾಳೆಯ ಮುಟ್ಟುವ
ಭರವಸೆಯ ಆಸರೆಯಂತೆ
ಬೆಳಗುತಿದೆ ತನ್ನ ತಾ ಸುಡುತ

ದಾರಿ ತಪ್ಪಿಸುವುದಿಲ್ಲ
ನಂಬಿ ಹಿಂಬಾಲಿಸಿ ನೆಡೆದರೆ
ತುಂಬಿದ ಆಸೆಯ
ಕಣ್ಣುಗಳಿಗೆ ಶಾಂತಿಯ ಸಿರಿ
ತೋರುತ ಬೆಳಗಿದೆ
ತನ್ನ ತಾ ಸುಡುತ

ಮೇಲು ಕೀಳು ವರ್ಣ
ಸಂಪತ್ತಿಗೆ ಬದಲಾಗದ
ಬೆಳಕನು ಚಲ್ಲುತ ಸಾಗಿದೆ
ಕತ್ತಲೆಯ ಹಿಮ್ಮೆಟ್ಟಲು
ದುಡಿಯುತಿದೆ
ತನ್ನ ತಾ ಸುಡುತ.

ನೆಮ್ಮದಿಯ ಉಸಿರು

ಬೆಳಕ ನಾಚಿಸುವ
ನಗುವೊಂದು ಹರೆದಿದಿತ್ತು
ಕಲ್ಲೆದೆಯ ನಾಟಿ
ಹೃದಯಾನ ಮೀಟಿ
ನಡುಕಾನ ಹುಟ್ಟಿಸಿತ್ತು

ಕಾಣಲಾರದ ಚಂದಕೆ,
ಬೆರಗಾಗಿ ಕಣ್ಣು ಅರಳಿತ್ತು
ಹೊಸ ರಾಗದ ಮದ್ದಳೆ
ಮನಸಲ್ಲಿ ಮೂಡಿ ಎದೆ
ಗೂಡು ಕನಸೊಂದ ಕಟ್ಟಿತ್ತು

ಕತ್ತಲೆಯ ಮನಕೆ
ಕಿಟಕಿಯ ಮೂಲೆಯಲಿ
ನಂಬಿಕೆಯ ಆಸರೆ ಹನಿ
ಹನಿಯಾಗಿ ಸೊರಿತ್ತು
ಬೆಚ್ಚಗಿನ ಸೂರಲ್ಲಿ
ಹೊದಿಕೆಯ ಅಡಿಯಲ್ಲಿ
ನೆಮ್ಮದಿಯ ಉಸಿರು ಬಿಟ್ಟಿತ್ತು

ಆಸೆಯ ಗುರಿ

ಹಚ್ಚ ಹಸುರಿನ ತೋಟದಲ್ಲಿ, ಅತ್ತಿತ್ತ
ಹರಿದಾಡಿದ್ದ ಚಿಟ್ಟೆಯನು,
ಅರಳಿದ್ದ ಸೊಗಸೊಂದು ಒಲವಿನ
ನಗೆಯ ಬೀರಿ ಕರೆಯುತಿರಲು
ಆಗದಿರಲಿ ಕನಸಿನ ಸುಲಿಗೆ; ತೆರೆ
ಬಿಳದಿರಲಿ, ಇನ್ನೇನು ಉಲ್ಲಾಸದಿ ತೇಲುವ ಆಸೆಯ ಗುರಿಗೆ

ಸಾಧನೆಯ ಫಲಗಳೆಲ್ಲ ಕಣ್ಮುಂದೆ ಕಂಡು,
ಸಂತಸದಲಿ ಮನ, ಗರಿ ಬಿಚ್ಚಿ
ಕುಣಿಯಲು ಅಣಿಯಾಗುತಿರಲು
ಆಗದಿರಲಿ ಕನಸಿನ ಸುಲಿಗೆ; ತೆರೆ
ಬಿಳದಿರಲಿ, ಇನ್ನೇನು ಉಲ್ಲಾಸದಿ ತೇಲುವ ಆಸೆಯ ಗುರಿಗೆ

ನಿದ್ದೆ

ಗೊತ್ತು ಗುರಿ ಇಲ್ಲದೆ
ನಾ ಸುಮ್ಮನೆ ಗುಮ್ಮನಂತೆ
ಸಾಗುತ್ತಿರಲು ನಿನ್ನ
ದರುಶನದ ಭಯಕೆಯೇ
ನನಗೆ ಸ್ಫೂರ್ತಿ .

ಹೊತ್ತು ಹೋದಂತೆ
ದೇಹ ಸೋತು,
ನಿನಗಾಗಿ ಅರಸಿ ನಾ
ಸೊರಗಿರುವೆ ಪೂರ್ತಿ

ತಡವಾದರೂ ಚಿಂತೆಯಿಲ್ಲ
ಮಲಗುವ ವೇಳೆ ಮೀರಿದರೆ
ಹಿತವಲ್ಲ,
ಮರೆಯದೆ ಬಂದು
ಆವರಿಸಿ ಬೆಳಗು ಕೀರ್ತಿ

ಭಾವನೆಗೆ ಬೆಲೆ

ಸಂತಸವ ಅರಸಿ ಬಾಳನ್ನು ಸವೆಸಿ
ನೆಡೆಯುತ್ತ ಹೋದ ದಾರಿಯಲಿ
ಕಲ್ಲು ಮುಳ್ಳು ಗಳೇ ಹೆಚ್ಚು ಇಲ್ಲಿ
ದಾಹ ಮರೆತು ಹೆಜ್ಜೆ ಮುಂದಿಡುತ್ತ
ನೆಡೆದರೂ ಹನಿ ನೀರ ಎರಚುವರ
ಸಂಖ್ಯೆ ಅತೀ ಕಡಿಮೆ ಇಲ್ಲಿ
ಬಿದ್ದಾಗ ಚುಚ್ಚುತ್ತ ಗೆದ್ದಾಗ
ಕಿಚ್ಚಿನಲ್ಲಿ ಹೊರಳಾಡುವರರ
ಸಂಖ್ಯೆಗೇನು ಕಮ್ಮಿ ಇಲ್ಲಿ?
ಭಾವನೆಗೆ ಬೆಲೆ ಕೊಡುವವರು ಯಾರಿಲ್ಲಿ

ಕ್ಷಣಿಕ ಸುಖಕ್ಕೆ ಬೆಲೆ ಕೊಟ್ಟು
ನಂಬಿದವರ ಕೈ ಬಿಟ್ಟು
ಮತ್ತೆ೦ಬ ಮದವ ಕುಡಿದು
ಕಾಣದ ಆಸೆಗೆ ತುಡಿದು
ಮೋಸ ಮಾಡುವವರೇ ಹೆಚ್ಚು ಇಲ್ಲಿ
ಭಾವನೆಗೆ ಬೆಲೆ ಕೊಡುವವರು ಯಾರಿಲ್ಲಿ

ಅಳುತಿರಲು ಹೃದಯ ಮೌನದಲಿ
ಭಾವನೆಗೆ ಬೆಲೆ ಕೊಡುವವರು ಯಾರಿಲ್ಲಿ?

One thought on “ವಿಜಯ್ ಖುರ್ಸಾಪೂರ ಬರೆದ ಕವಿತೆಗಳು

  1. ವಿಜಯ ಖುರ್ಸಾಪುರ ಅವರ ಈ ಕವಿತೆಗಳ ಗುಚ್ಛದಲ್ಲಿ ವಿವಿಧ ಥೀಮ್ ಗಳಿವೆ, ಆದರೆ ಮೊದಲನೆಯದು ಮತ್ತೊಂದು ಹಣತೆಯ ಬಗ್ಗೆ.. ಆತ್ಮಾಹುತಿ ಮಾಡಿ ನಂಬಿದವರಿಗೆ ಅನ್ಯರಿಗೆ ದಾರಿ ತೋರಿಸುವ ಚಲಿಸುತ್ತಿರುವ ಹಣತೆ ಇದು. ಕತ್ತಲೆಯ ‘ಹಿಮ್ಮೆಟ್ಟಲು
    ದುಡಿಯುತಿದೆ
    ತನ್ನ ತಾ ಸುಡುತ’ ಅಂದರೆ ತನ್ನ ಹಿಂದೆ ಸರಿಸುತ್ತ ಮುಂದೆ ಸಾಗಿದೆ. ನೆಮ್ಮದಿಯ ಉಸಿರಲ್ಲಿ ರೂಪಕಗಳ ‘ಮಿಸಳವೇ ಇದೆ(ಯಾರೋ ಚೌ ಚೌ ಅಂದರು ಒಂದು ಕಡೆ!). ಪ್ರಾಮಾಣಿಕತೆ,, ನಂಬಿಕೆ ಇನ್ನುಳಿದ ಕವನಗಳಲ್ಲಿ ಹಿಂದೆ ಸರಿದು ವಂಚನೆ ಮತ್ತು ಕಪಟಗಳಿಗೆ ಎಡೆಮಾಡಿಕೊಟ್ಟು ಕನಸುಗಳ ಸುಲಿಗೆಯಾಗುತ್ತಿದೆ; ಭಾವನೆಗಳಿಗೆ ಬೆಲೆಯಿಲ್ಲದೆ ಹೋಗುತ್ತದೆ. ‘ನಿದ್ದೆ’ಯಲ್ಲಿ ಯಾರನ್ನು ಅರಸುತ್ತ ‘ನೆಡೆವ’ ಗುಮ್ಮ ಯಾರ ದರುಶನಕ್ಕೆ ಹಾತೊರೆದರೂ ನಿದ್ರೆ ತೊರೆದು ಅರಸುವ ಬದಲು ಆ ಸಮಕ್ಕೂ ಮೊದಲು ‘ಭಯಕೆ’ ಪಡುವದು ಬೆಳಕು ಆವರ್ಸಿ ಕೀರ್ತಿ ಬೇಡುವುದು ಸ್ವಲ್ಪ. ವಿಚಿತ್ರವೇ! ಎರಡು ಮೂರು ಟೈಪೋಗಳು ಕಂಡವು ಅನಿಸಿತು. ಅಲ್ಪ- ಮಹಾ ಪ್ರಾಣಗಳ ಗೊಂದಲವನ್ನು ಮೊದಲೇ ಬಗೆಹರಿಸಬಹುದಾಗಿತ್ತು.

    Like

Leave a Reply to shrivatsadesai Cancel reply

Your email address will not be published. Required fields are marked *