ಆಹಾರದ ಜೊತೆಗೊಂದು ವಿಹಾರ

ಪ್ರಿಯ ಓದುಗರಿಗೆ,

ಈ ವಾರದ ಅನಿವಾಸಿಯಲ್ಲಿ ಡಾ. ದೀಪಾ ಸಣ್ಣಕ್ಕಿಯವರ ಆಹಾರವನ್ನು ಕುರಿತು, ಅವರದೇ ಆದ ವಿಶಿಷ್ಟ ಶೈಲಿಯ ಒಂದು ಸುಂದರ ಬರಹವನ್ನು ಮುಂದಿಟ್ಟಿರುತ್ತೇನೆ. ವಿಹಾರದೊಂದಿಗೆ ಆಹಾರದ ಬಗ್ಗೆ ಓದಿ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ

—- ಇಂತಿ ಸಂಪಾದಕ

——————————————————————————————————————–

ಕೆಲವು ವಾರಗಳ ಹಿಂದೆ ಯೋರ್ವಿಕ್ ವೈಕಿಂಗ್ ಸೆಂಟರ್ ನಲ್ಲಿ(Jorvik viking center, York) ಸಾವಿರದ ಇನ್ನೂರು ವರ್ಷಗಳಷ್ಟು ಹಳೆಯ ಒಂದು ಪಳಿಯುಳಿಕೆಯೊಂದನ್ನು ಕಂಡು ಅಚ್ಚರಿಗೊಂಡಿದ್ದೆ. ಅಪರೂಪವಾದ ಈ ವಸ್ತುವಿನ ಹೆಸರು, “Lloyds bank Coprolite” ಎಂದು. Coprolite ಎಂದರೆ ಶಿಲಾಜಾತಗೊಂಡ (fossilised) ಮನುಷ್ಯನ ಮಲ ಅಥವಾ ಕಕ್ಕಸು ಎಂದು ಹೇಳಬಹುದು. 1972ರಲ್ಲಿ ಯೋರ್ಕ ನಲ್ಲಿ Lloyds bank ಆವರಣದಲ್ಲಿ ನಡೆದ ಉತ್ಖನನದಲ್ಲಿ ದೊರೆತ ಈ ವಸ್ತು, ವೈಕಿಂಗ್ ಜನಾಂಗದ ಜನಜೀವನದ ಆಹಾರ ಪದ್ಧತಿ,ಅವರು ಊಟದಲ್ಲಿದ್ದ ಪೋಷಕಾಂಶಗಳು,ಅವರಿಗೆ ಹೊಟ್ಟೆಬಾಧೆ ನೀಡಿರಬಹುದಾದದ ಜಂತುಹುಳು ಇತರ ರೋಗರುಜಿನಗಳು ಹೀಗೆ ಹಲವಾರು ಮಹತ್ವಪೂರ್ಣ ಅಂಶಗಳ ಮೇಲೆ ಬೆಳಕು ಚೆಲ್ಲಿದೆಯಂತೆ! ಆ ಪುಣ್ಯಾತ್ಮನಿಗೆ ರಾತ್ರಿಯ ಊಟ ಮಾಡುವಾಗ ತಾನೊಂದು ದಿನ “ಮುಂಬರುವ ಪೀಳಿಗೆಗೆ ಇಷ್ಟೊಂದು ದೊಡ್ಡ ಐತಿಹಾಸಿಕ ಕೊಡುಗೆ ನೀಡಲಿದ್ದೇನೆ” ಎಂಬುದರ ಪರಿವೆಯೇ ಇರಲಿಕ್ಕಿಲ್ಲ ಎಂದು ಮನಸ್ಸಿನಲ್ಲೇ ಲಘುಲಹರಿಯೊಂದು ಅಂದು ಮಿಂಚಿ ಹೋಗಿತ್ತು.

ಆದರೆ ಈ ಲಹರಿಯೇ ಪದೇಪದೇ ಕುಟುಕಿ, ಮಾನವ ಮತ್ತವನ ಆಹಾರದ ಅನುರೂಪವಾದ ಸಂಬಂಧದ ಬಗ್ಗೆ ಯೋಚಿಸಲು ಪ್ರೇರೇಪಿಸಿ ಇಂದಿನ ಬರಹಕ್ಕೂ ಕಾರಣವಾಗಿದೆ. ಮನುಷ್ಯನ ವಿಕಸನದ ಜೊತೆಜೊತೆಗೆ ಅವನು ಸೇವಿಸುವ ಆಹಾರದಲ್ಲಿಯೂ ತಕ್ಕ ಬದಲಾವಣೆಯಾಗಿದ್ದು ಅಚ್ಚರಿಯ ವಿಷಯವೇನಲ್ಲ. ಆದಿಮಾನವನ ಸಮಯದಲ್ಲಿ ಆಹಾರ ಸಂಪಾದನೆ ಮತ್ತು ಶೇಖರಣೆಯೇ ನೆಮ್ಮದಿ ಬದುಕಿನ ಏಕೈಕ ಧ್ಯೇಯವಾಗಿದ್ದಿರಬಹುದು. ಸಂತಾನದ ಪಾಲನೆಪೋಷಣೆಗೆ ಮತ್ತು ಪ್ರಾಣಿ ಬೇಟೆಗೆ ಅತ್ಯಾವಶ್ಯಕವಾದ ಸಂಘಜೀವನವನ್ನು ಪ್ರೇರೆಪಿಸಿರಬಹುದು. ವಿಕಾಸ ವಾದದಲ್ಲಿ ಮಾನವನು ಆಹಾರಸರಣಿಯ ಪ್ರಭುತ್ವ ಗಳಿಸಲು ನೆರವಾದ ಶೀಘ್ರಗತಿಯ ಮೆದುಳಿನ ಬೆಳವಣಿಗೆಗೆ, ಮಾಂಸಾಹಾರದ ಪೌಷ್ಟಿಕಾಂಶಗಳೇ ಕಾರಣವಿರಬಹುದು ಎಂದು ತಜ್ಞರ ಅನಿಸಿಕೆಯಾಗಿದೆ. ಕಾಲಕ್ರಮೇಣ ಬೇಟೆಗಿಂತ ಸುಲಭವಾದ ಕೃಷಿಗಾರಿಕೆಯ ಉಪಾಯವನ್ನು ಕಂಡುಕೊಂಡ ಮನುಷ್ಯನ ಜೀವನದ ಓಘವೇ ಬದಲಾಯಿಸಿರಬಹುದು.‌ ಕೃಷಿಯಿಂದ ಆಹಾರಸಂಪಾದನೆ ಸುಲಭವಾದ ಮೇಲೆ, ಆತನ ಲಕ್ಷ್ಯ ಸಾಕುಪ್ರಾಣಿಗಳನ್ನು ಪಳಗಿಸುವದರಲ್ಲೋ ಅಥವಾ ಸಾಧನೆ ಸಲಕರಣೆಗಳನ್ನು ತಯಾರಿಸುವ ನೈಪುಣ್ಯತೆಯಲ್ಲಿಯೋ ತೊಡಗಿರಬೇಕು. ಒಟ್ಟಿನಲ್ಲಿ ಆದಿಮಾನವನ ಉದಯೋನ್ಮುಖ ಪ್ರಗತಿಯಲ್ಲಿ ಆಹಾರದ ಪಾತ್ರ ಬಹುದೊಡ್ಡದು.

ಸುಮಾರು ನೂರು ವರ್ಷಗಳಷ್ಟು ಹಿಂದಿನವರೆಗೂ, ಧಾನ್ಯಸಂಪತ್ತಿನ ಕೊರತೆ ಇರುವವರೆಗೂ ಜನಮಾನಸದಲ್ಲಿ ಅನ್ನಕ್ಕೆ ಬಹುಮುಖ್ಯ ಪ್ರಾಧಾನ್ಯತೆ ಇತ್ತು. ಅವರ ಆಡುಮಾತುಗಳಲ್ಲಿ ಅನ್ನದ ಮಹತ್ವ ತುಂಬಿ ತುಳುಕುತ್ತಿತ್ತು ಮತ್ತು ಹಾಸುಹೊಕ್ಕಾಗಿತ್ತು. ಇದಕ್ಕೆ ನಮ್ಮ ಕನ್ನಡದ ಗಾದೆಮತುಗಳೇ ಸಾಕ್ಷಿ! ಅನ್ನ ಇಕ್ಕಿದ ಮನೆಗೆ ಕನ್ನ ಕೊರೆದ, ಕೈ ಕೆಸರಾದರೆ ಬಾಯಿ ಮೊಸರು, ಹಾಗಲಕಾಯಿಗೆ ಬೇವು ಸಾಕ್ಷಿ, ಹೊಟ್ಟಿಗೆ ಹಿಟ್ಟು ಇಲ್ಲದೆ ಬರೀ ಜುಟ್ಟಿಗೆ ಮಲ್ಲಿಗೆ ಇರುವುದು, ಹೊಳೆಯಲ್ಲಿ ಹುಣಸೆಹಣ್ಣು ತೊಳೆಯುವುದು, ಉಪ್ಪು ಉಂಡ ಮನೆಗೆ ಬಗೆಯುವ ದ್ರೋಹ, ಮನೆಮನೆಗಳಲ್ಲಿ ತೂತಾದ ದೋಸೆಗಳು, ಮುಪ್ಪಾದರೂ ಹುಳಿಯನ್ನು ತ್ಯಜಿಸದ ಹುಣಸೆ ಇತ್ಯಾದಿ ಇತ್ಯಾದಿ ಇತ್ಯಾದಿ.

ಮೌಲ್ಯಭರಿತವಾದ ನಮ್ಮ ಅಂದಿನ ಸಮುದಾಯದಲ್ಲಿ ಒಂದೊಪ್ಪತ್ತಿನ ಊಟವನ್ನಷ್ಟೇ ಮಾಡಿದರೂ ಘನತೂಕದ ಆಡುಮಾತುಗಳಿತ್ತಿದ್ದವು. ನೀತಿ ಮೌಲ್ಯಗಳೇ ನಶಿಸುತ್ತಿರುವ ಈಗಿನ ಕಾಲದಲ್ಲಿ ಪಿಜ್ಜಾ, ಬರ್ಗರ್, ಪ್ರೋಟಿನ್ ಷೇಕ್ ಗಳ ಮೇಲೆ ಏನೂಂತ ಗಾದೆಗಳು ಹುಟ್ಟಬಹುದು ಹೇಳಿ? ನಮ್ಮ ಮನೆಯ ಹಿರಿಯಜ್ಜಿಯೊಬ್ಬಳ ಕಥೆಯ ಪ್ರಕಾರ ಮನುಷ್ಯನಿಗೆ ಹಣೆಬರಹ ಬರೆದ ದೇವರು ಪ್ರತಿ ಧಾನ್ಯಕ್ಕೂ ಸ್ವರ್ಗ ನರಕ ವಿಧಿಸಿರುತ್ತಾನಂತೆ.‌ ಕಾಳು ಮೂಡಿ ಪೈರಿನಿಂದ ಬೇರ್ಪಟ್ಟು ನಾನಾ ತರಹದ ಸಂಸ್ಕರಣೆಗೊಳಗಾಗಿ ಒಲೆಯ ಬೇಗೆಯಲ್ಲಿ ಬೆಂದು, ಉಂಡವನ ಹೊಟ್ಟೆ ಸೇರಿದಾಗ ಮಾತ್ರ ಅದಕ್ಕೆ ಸ್ವರ್ಗಸುಖವಂತೆ, ಮೋಕ್ಷವಂತೆ! ಚಿಕ್ಕಂದಿನಲ್ಲಿ ಮುಗುಳ್ನಗೆ ತರಿಸುತ್ತಿದ್ದ ಈ ಕಥೆ ಇಂದು ಗೃಹಿಣಿಯಾದ ನನಗೆ ನೈತಿಕ ಭಾರವೊಂದನ್ನು ನೆನಪಿಸುತ್ತದೆ. ಅಳಿದುಳಿದ ಅಡಿಗೆಯನ್ನು “ಬಿನ್ ಇಟ್” ಎಂದು ತಾತ್ಸಾರವಾಗಿ ಹೇಳುವ ಮುನ್ನ ಯೋಚಿಸುವಂತೆ ಮಾಡುತ್ತದೆ. ಅಜ್ಞಾತರಾಗಿದ್ದೇ, ನಮಗರಿಯದೆಯೇ ನಮ್ಮ ಬದುಕನ್ನು ಮಜಬೂತಾಗಿ ಕಟ್ಟಿದ ಆ ಹಿರಿಜೀವಗಳಗೆ ಒಂದು ನಮನ.

ಇನ್ನು ಕುಟುಂಬದ ಆಗುಹೋಗುಗಳಲ್ಲಿ ದಿನನಿತ್ಯದ ಅಡುಗೆಯ ಹಿನ್ನಲೆಯನ್ನು ಬರೆಯಲೇ ಬೇಕಾಗಿದೆ. ನಾವೆಲ್ಲರೂ ಅಮ್ಮನ ಕೈ ರುಚಿಯ ಸೌಭಾಗ್ಯವನ್ನು ಪಡೆದವರೇ ಆಗಿದ್ದೇವೆ ಎಂದುಕೊಳ್ಳುತ್ತೇನೆ. ಅವಳು ಮಾಡಿ ಬಡಿಸಿದ ತುತ್ತು ಕೇವಲ ಹಲವು ಅಡುಗೆಯ ಪದಾರ್ಥಗಳ ಸಮ್ಮಿಶ್ರಣವಷ್ಟೇ ಆಗಿರದೇ ಅದರಲ್ಲಿ ಅವಳ ಮಮತೆ, ವಾತ್ಸಲ್ಯ, ವಾಂಛಲ್ಯ, ಅಪ್ಯಾಯಮಾನತೆ, ಮಾತೃ ಸಹಜ ಕಾಳಜಿ, ಅನುಕಂಪ ಇವೆಲ್ಲವೂ ಸೇರಿ ಅಮೃತಸೇವನೆಯ ಅನುಭವವನ್ನು ನೀಡುತ್ತದೆ.ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮನೆಯ ಒಳಗೂ ಹೊರಗೂ ಗಾಣದ ಎತ್ತಿನಂತೆ ಒಂದೇ ಸಮನೆ ತಿರುಗುತ್ತಿರುವ ತಾಯಂದಿರು, ಮಗುವಿಗೆ ಪುರಸೊತ್ತಿಂದ ಒಂದು ಕೈತುತ್ತು ನೀಡುವುದು ಅಪರೂಪದ ದೃಶ್ಯವಾಗಿದೆ. ಆರ್ಥಿಕ ಸಬಲತೆಯೆಂಬ ಹೆಸರಿನಲ್ಲಿ ನಾವೇ ತಂದುಕೊಂಡ ಈ ಮೂರಾಬಟ್ಟೆಯ ಪರಿಸ್ಥಿತಿಗೆ ಕೊರಗಿದರೂ ಕಂದಮ್ಮಗಳನ್ನು “ಅಮ್ಮನ ಕೈರುಚಿ”ಎಂಬ ಸುವರ್ಣಾವಕಾಶದಿಂದ ವಂಚಿಸಿ ನ್ಯಾಯಸಲ್ಲಿಸದೇ ಉಳಿದ ವ್ಯಥೆಯು ಪ್ರಶ್ನಾರ್ಹವಾಗಿದೆ. ಆದರೆ ಅದೇ “ಅಮ್ಮನ ಕೈರುಚಿ” ಅತಿಯಾಗಿ ಅಸಂಬದ್ಧ ಪರಿಸ್ಥಿತಿಯಲ್ಲಿ ಒಕ್ಕರಿಸಿದರೆ ಸಂಬಂಧಗಳಿಗೆ ಧಕ್ಕೆ ತರಲು ಸಾಧ್ಯವಿದೆ.

ಹೆಡ್ಡನಾದ ಗಂಡ, ಹೊಸಹೆಂಡತಿ ಮಾಡಿದ ಬಿಸಿಬಿಸಿ ಸಾಂಬಾರನ್ನು ಪ್ರಶಂಸಿಸುವ ಬದಲು “ನಮ್ಮಮ್ಮನ ಸಾಂಬಾರ್ ಬೊಂಬಾಟ್” ಎಂದುಬಿಟ್ಟರೆ ಅವಳ ಉತ್ಸಾಹಕ್ಕೆ ಶಾಶ್ವತವಾಗಿ ತಣ್ಣೀರು ಎರಚಿದಂತೆ ಅಲ್ಲವೇ? ಹಾಗೆಯೇ ಚಹಾ ಉಕ್ಕಿಸಿದ ಯಜಮಾನ್ರ ಮೇಲೆ ಕೊಂಕು ನುಡಿಯುವ ಪತ್ನಿಯು, ಸೊಪ್ಪಿನ ಪಲ್ಯ ನೋಡಿ ಮೂಗುಮುರಿಯುವ ಮಕ್ಕಳು, ಕಾರಣವೇ ಇಲ್ಲದೆಯೇ ಸೋಗು ಹಾಕುವ ಅತ್ತೆ ಮಾವಂದಿರು ಮತ್ತು ಇನ್ನೀತರರು ಅದ್ಯಾಕೋ ಈ ಸೂಕ್ಷ್ಮವಾದ ಸಂವೇದನೆಯನ್ನು ಗುರುತಿಸದೇ ಸಂಬಂಧಗಳಲ್ಲ ಸೋತುಹೋಗುತ್ತಾರೆ. ತನ್ನವರಿಗೆ ಅಡುಗೆ ಮಾಡಿ ಬಡಿಸುವುದು ಕೇವಲ ಒಂದು ಜವಾಬ್ದಾರಿಯಾಗಿರದೇ ಕುಟುಂಬಗಳನ್ನು ಭದ್ರವಾಗಿ ಬೆಸೆಯುವ ಒಂದು ಅಭಿವ್ಯಕ್ತಿಯ ಸಾಧನವಾಗಿದೆ ಎಂಬುವುದು ನನ್ನ ಪ್ರಾಮಾಣಿಕ ಅನಿಸಿಕೆ. ಇತ್ತೀಚೆಗೆ ಗಮನಸೆಳೆದ ಡೊಕ್ಯುಮಂಟರಿ ಒಂದನ್ನು ನೋಡಿ, ಮಾನವನು ತನ್ನ ಸ್ವಂತ ಆಹಾರ ಪೂರೈಕೆಗಾಗಿ ಎಷ್ಟು ಸ್ವಾರ್ಥಿಯಾಗಬಲ್ಲನು ಎಂಬುದನ್ನು ನೋಡಿ ದಂಗಾಗಿದ್ದೇನು! ಅದು ಅನೇಕ ಕೋಳಿ ಫಾರಂ, ಡೈರಿ ಫಾರಂ ಗಳನ್ನು ಚಿತ್ರೀಕರಿಸಿ ಅಲ್ಲಿ ನಡೆಯುತ್ತಿರುವ ಅಮಾನವೀಯತೆಯ ಮೇಲೆ ಬೆಳಕು ಚೆಲ್ಲಿತ್ತು. ಮಜಬೂತಾದ ಚಿಕನ್ breast ಉತ್ಪಾದಿಸಲು ಅದೇ ಜೆನೆಟಿಕ್ ಕೊಡ್ ಇರುವ ಕೋಳಿಗಳನ್ನು ಮಾತ್ರ ಹುಟ್ಟಿಸಿ ಬೆಳೆಸಲಾಗುತ್ತಿತ್ತು. ಅವುಗಳು ಪೂರ್ಣವಾಗಿ ಬೆಳೆದಾಗ ತಮ್ಮ ವಿಪರೀತವಾದ ಮೈಭಾರವನ್ನು ಅಶಕ್ತ ಕಾಲುಗಳ ಮೇಲೆ ಹೊರಲಾರದೇ ಓಲಾಡುತ್ತ ಉರುಳುರುಳಿ ಬೀಳುತ್ತಿದ್ದವು. ಅಷ್ಟೇ ಅಲ್ಲದೇ, ಕಡಿಮೆ ವಿಸ್ತೀರ್ಣದ ಫಾರ್ಮನಲ್ಲಿ ನಿಗದಿತ ಸಂಖ್ಯೆಗೂ ಜಾಸ್ತಿ ಕೋಳಿಗಳನ್ನು ಸಾಕುತ್ತಿದ್ದರಿಂದ ಪ್ರತಿ ಪಕ್ಷಿಗೆ ಕೇವಲ ಯಕಶ್ಚಿತ್ A4 sheet ನಷ್ಟೇ ಜಾಗ ದೊರಕುತ್ತಿತ್ತು! ಹಾಗೆಯೇ ಡೈರಿ ಫಾರಂನಲ್ಲಿ ಬಂಧಿಯಾಗಿದ್ದ ಸಾವಿರಾರು ಹಸುಗಳು ಹುಲ್ಲು ಮೇಯಲೋಸುಗ ನಿಗದಿತ ಸಮಯದ ಕರೆಘಂಟೆಗೆ ಎದುರು ನೋಡುವ ಪರಿ ಕರುಣಾಜನಕವಾಗಿತ್ತು.

ನೈಸರ್ಗಿಕವಾಗಿ ನಡೆಯುವ ಸಂತಾನೋತ್ಪತ್ತಿಗೆ ಸಂಪೂರ್ಣವಾಗಿ ಕೊಡಲಿಯೇಟು ಕೊಟ್ಟು ಆ ಪ್ರಾಣಿಪಕ್ಷಿಗಳ ಮೂಲಭೂತ ಸ್ವಾತಂತ್ರ್ಯವನ್ನೇ ಕಿತ್ತುಕೊಂಡ ಹಾಗಿತ್ತು. ಇದೇ ತರಹದ ಘಟನಾವಳಿಗಳನ್ನು ಭೈರಪ್ಪನವರು “ಭಿತ್ತಿ”ಯಲ್ಲಿ ಬಿತ್ತರಿಸಿದ್ದಾರೆ. ಹೊಟ್ಟೆ ಹಸಿವಿನ ದಾಹ ತಣಿಸಿಕೊಳ್ಳಲು ಹಲವಾರು ಸುಲಭೋಪಾಯಗಳನ್ನು ಕಂಡುಕೊಂಡ ಮಾನವ ದುಡ್ಡಿನ ದಾಹ ತೀರಿಸಿಕೊಳ್ಳುವ ಪರಿಹಾರಕ್ಕೆ ಸಂಪೂರ್ಣ ನಿರ್ಲಕ್ಷ್ಯ ತೋರಿಸಿದ್ದಾನೆ ಎಂಬುವುದು ಬ‌ಹುದುಃಖಕರವಾದ ಸಂಗತಿ. ಕೊನೆಯದಾಗಿ ಒಂದು ಹೃತ್ಪೂರ್ವಕ ವಿನಂತಿಯೊಂದಿಗೆ, ತಾನುಂಡು ಅರಗಿಸಿದ ಊಟ ಶಿಲಾಜಾತಗೊಂಡು, ಮುಂದೊಂದು ದಿನ ಅದು ಜನಾಂಗವನ್ನೇ ಪ್ರತಿನಿಧಿಸುವ ಅತ್ಯಮೂಲ್ಯ ವಸ್ತು ಆಗಬಹುದೆಂಬುರ ಪರಿವೆಯೇ ಇಲ್ಲದ ವೈಕಿಂಗ್ ವೀರನಾಗದೇ; ನಾವೆಲ್ಲ ನಮ್ಮ ತಟ್ಟೆಯವರೆಗೆ ಅನ್ನವನ್ನು ತಲುಪಿಸಿದ ಮಾತೆಮಹನೀಯರನ್ನೂ, ಬೆವರಿಳಿಸಿದ ಕೃಷಿಕಮಹೋದಯನನ್ನೂ, ಬಲಿಯಾದ ಪ್ರಾಣಪಕ್ಷಿಗಳನ್ನೂ ಮತ್ತು ಕ್ಷಮಯಾಧರಿತ್ರಿಯನ್ನು ಮನದುಂಬಿ ನಮಿಸೋಣ.

Leave a Reply

Your email address will not be published. Required fields are marked *