ಇತ್ತೀಚಿಗೆ ದೂರದರ್ಶನ ನೋಡುತ್ತಿರುವಾಗ, ನಡು ನಡುವೆ ಬರುವ ಜಾಹಿರಾತುಗಳನ್ನು ನೋಡುತ್ತಿದ್ದೆ. ಡೋಮಿನೋಸ್ ಜಾಹಿರಾತಿನಲ್ಲಿ ಸ್ನಾನ ಮಾಡುತ್ತಿರುವ ಟಬ್ನಲ್ಲಿ ಡೆಲಿವೆರಿಯವನು ಪ್ರತ್ಯಕ್ಷನಾಗಿ ಡೆಲಿವರಿ ಕೊಡುತ್ತಾನೆ, ಇನ್ನೊಂದು ಜಾಹಿರಾತಿನಲ್ಲಿ ನಮ್ಮ ಬಾಲಿವುಡ್ ನಟ ಬಚ್ಚಲು ತಿಕ್ಕಲು ಹಾರ್ಪಿಕ್ ಎಷ್ಟು ಉತ್ತಮ ಎಂದು ತೋರಿಸುತ್ತಾನೆ… ಹೀಗೇ ನೋಡುತ್ತಿದ್ದರೆ ನೀವು ಇನ್ನೂ ವಿಚಿತ್ರವಾದ ಇಂತಹ ಜಾಹಿರಾತು ನೋಡಬಹುದು.ಜಾಹೀರಾತು ಕೆಲವು ವಿಚಿತ್ರವಾದರೆ, ಇನ್ನೂ ಕೆಲವು ಮರೆಯದ ಸುಂದರ ಕಥೆ ತರಹ ಇರುತ್ತವೆ.
ಅಲಿಕ್ ಪದಂಸೀ, ಆರ್ ಬಾಲ್ಕಿ. ಪ್ರಹ್ಲಾದ್ ಕಕ್ಕರ್, ಗೌರಿ ಶಿಂಧೆ, ರಾಮ್ ಮಾಧ್ವಾನಿ ಇವರು ಜಾಹಿರಾತು ಜಗತ್ತಿನ ಕೆಲವು ಪ್ರಮುಖರು. ಸೃಜನಾತ್ಮಕ ಜಾಹಿರಾತು ಸೃಷ್ಟಿಸಿ ಮುಂದೆ ಒಳ್ಳೆಯ ಚಲನಚಿತ್ರಗಳನ್ನೂ ಕೂಡ ಮಾಡಿದ್ದಾರೆ. “ಜಾಹಿರಾತು” ಮತ್ತು “ಸಾಹಿತ್ಯ” ಇದರ ಒಂದು ಸಂಬಂಧ ಹೇಗೆ ಇರಬಹುದು.. ಇಂದಿನ ಲೇಖನ ಇದೆ ವಿಷಯದ ಬಗ್ಗೆ ಬರೆಯೋಣ ಅಂತ ವಿಚಾರ ಬಂತು…ಬರೆದಿದ್ದೇನೆ.
ಎಲ್ಲೆಲ್ಲೂ ಸಂಗೀತವೇ, ಎಲ್ಲೆಲ್ಲೂ ಸೌಂದರ್ಯವೇ
ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು
ಎಲ್ಲೆಲ್ಲೂ ಸಂಗೀತವೇ…
ಮಲಯ ಮಾರುತದ ಚಿತ್ರದ ಹಾಡು, ಇದೆ ಹಾಡಿನ ಸಾಲುಗಳನ್ನು ಸ್ವಲ್ಪ ಬದಲಿಸಿದರೆ
ಎಲ್ಲೆಲ್ಲೂ ಸಾಹಿತ್ಯವೇ, ಎಲ್ಲೆಲ್ಲೂ ಮಾಹಿತಿಯೇ,
ಓದುವ ಕಣ್ಣಿರಲು, ಅರಿಯುವ ಮನವಿರಲು,
ಎಲ್ಲೆಲ್ಲೂ ಸಾಹಿತ್ಯವೇ…
ಜೀವನದಲ್ಲಿ ಪ್ರತಿ ಶಬ್ದ ಸಂಗೀತವಾದರೆ, ಪ್ರತಿ ಸಾಲು ಸಾಹಿತ್ಯ ಆಗಬಹುದು… ಅದು ಕೇಳುಗನ, ಓದುಗನ ಆಸಕ್ತಿ, ಅಭಿರುಚಿಯ ಅನುಗುಣವಾಗಿ ಅವಲಂಬಿತವಾಗಿದೆ.
ನಾವು ಚಿಕ್ಕವರಿದ್ದಾಗ ಚಲನಚಿತ್ರದ ನೋಡಲು ಚಿತ್ರಮಂದಿರಕ್ಕೆ ಹೋದಾಗ, ನಾವು ನೋಡಿದ
ಜಾಹಿರಾತಿನ ಸಾಲುಗಳಿಂದ ಈ ವಿಚಾರ ಆರಂಭಿಸೋಣ.
“ವಜ್ರದಂತಿ, ವಜ್ರದಂತಿ, ವಿಕೋ ವಜ್ರದಂತಿ,
ವಿಕೋ ಪೌಡರ್, ವಿಕೋ ಪೇಸ್ಟ್,
ಆಯುರ್ವೇದಿಕ್ ಜಡಿಬೂಟಿಯೊಂ ಸೆ ಬನಾ ಸಂಪೂರ್ಣ್ ಸ್ವದೇಶೀ,
ವಿಕೋ ಪೌಡರ್, ವಿಕೋ ಪೇಸ್ಟ್, ವಿಕೋ ವಜ್ರದಂತಿ!!!”
“ವಾಷಿಂಗ್ ಪೌಡರ್ ನಿರ್ಮಾ, ದೂಧ್ ಸಿ ಸಫೆದಿ
ನಿರ್ಮಾ ಸೆ ಆಯಿ, ರಂಗೀನ್ ಕಪಡಾ ಭೀ ಖಿಳ್ ಖಿಳ್ ಜಾಯೆ,
ಹೇಮಾ, ರೇಖಾ, ಜಯಾ ಔರ್ ಸುಷ್ಮಾ
ಸಬ್ಕಿ ಪಸಂದ್ ನಿರ್ಮಾ, ವಾಷಿಂಗ್ ಪೌಡರ್ ನಿರ್ಮಾ”
ಈ ಸಾಲುಗಳಲ್ಲಿ ಸಾಹಿತ್ಯ ಕಾಣಬಹುದೇ?
ಈ ಪ್ರಶ್ನೆಗೆ ಉತ್ತರಿಸಲು ಸಾಹಿತ್ಯ ಅಂದರೆ ಸರಳವಾದ ಉತ್ತರ ಏನು ಎಂದು ನೋಡೋಣ.
“Literature is a body of work that transmits culture “
ಅಥವಾ “Literature is the collective term for written works valued for their artistic or intellectual merit.”
ವಿಕೋ ವಜ್ರದಂತಿ ಸಾಲುಗಳನ್ನು ನೋಡಿದಾಗ “ಸಂಸ್ಕೃತಿ” ಪದದ ಬದಲಾಗಿ “ನಡೆದು ಕೊಂಡ ಬಂದ ಪದ್ಧತಿ” ಎಂದು ಓದಿದಾಗ ನಮಗೆ ಕಾಣಿಸುವುದು ಆ ಸಮಯದ ಆಯುರ್ವೇದ, ಗಿಡ ಮೂಲಿಕೆ ಉಪಯೋಗ. ನನಗೆ ಇನ್ನೂ ನೆನಪಿರುವುದು ಬೇವಿನ ಕಡ್ಡಿ ಉಪಯೋಗಿಸಿ ಹಲ್ಲುಜ್ಜುತ್ತಿದಿದ್ದು, ಅದರ ಖುಷಿಯೇ ಬೇರೆ. ಇನ್ನು “ಸ್ವದೇಶೀ” ಪದ ನೋಡಿದಾಗ ಅಂದಿನ ಸ್ಥಳೀಯ ಉತ್ಪನ್ನ ಉಳಿಸುವ, ಬೆಳೆಸುವ ಉದ್ದೇಶ. ನಮ್ಮ ದೇಶದ ಪರಂಪರೆಯಾದ ಆಯುರ್ವೇದ ವಿಜ್ಞಾನವನ್ನು ಶ್ರೀ ಜಿ ಕೆ ಪೆಂಡಾರ್ಕರ್ (ವಿಕೋ ಸಂಸ್ಥೆಯ ಸಂಸ್ಥಾಪಕ) ಅವರು ಉತ್ಸಾಹದಿಂದ ಸ್ವದೇಶೀ ಪ್ರಚಾರ ಇದರಲ್ಲಿ ಮಾಡಿದ್ದಾರೆ. ೧೯೬೦ ರ ಸುಮಾರು, ಭಾರತೀಯ ಕಂಪನಿಗಳು ವಿದೇಶಿ ತಂತ್ರಜ್ಞಾನಕ್ಕೆ ಮಾರುಹೋಗುತ್ತಿದ್ದಾಗ, ಶ್ರೀ ಪೆಂಡಾರ್ಕರ್ ಅವರು ಆಯುರ್ವೇದವನ್ನು ನಿರಂತರವಾಗಿ ಪ್ರಚಾರ ಮಾಡಿದರು.
ಇನ್ನು ನಿರ್ಮಾ, ಸಂಸ್ಥೆಯ ಸಂಸ್ಥಾಪಕನ ಮಗಳ ಕಥೆ ಎಂದು ಕೆಲವರಿಗೆ ಗೊತ್ತಿರಬಹುದು. ಕರ್ಸನ್ ಭಾಯ್ ಮಗಳು ನಿರುಪಮಾ, ಅವಳ ನೆನಪು ವರುಷ ವರುಷಗಳ ತನಕ ಇರಲೆಂದು ತಂದೆ ಮಗಳ ಪ್ರೀತಿಯ ಹೆಸರಾದ ನಿರ್ಮಾ ಸಂಸ್ಥೆ ಆರಂಭಿಸಿ, ಅದನ್ನು ಮನೆ ಮನೆಗೆ ತಲುಪಿಸಿದರು. ಇಲ್ಲಿ “ಹೇಮಾ, ರೇಖಾ, ಜಯಾ ಔರ್ ಸುಷ್ಮಾ” ಅಂದರೆ ಪ್ರತಿ ಹೆಣ್ಣು ಮೆಚ್ಚುವ, ಅವರ ಮನೆಯಲ್ಲಿ ಲಭ್ಯವಿರುವದು ನಿರ್ಮಾ ಎಂದು. ಇಲ್ಲಿಯೂ ಕೂಡ ಸುಂದರ ಮತ್ತು ಸರಳ ಪದಗಳ ಪದ್ಯ, “ನಿರ್ಮಾ” ಎಲ್ಲರ ಚಿರಪರಿಚಿತ ಹೆಸರಾಯಿತು.
ಇನ್ನು ಸರಳವಾಗಿ ಜಾಹೀರಾತು ವಿವರಿಸಿದರೆ “ಇದೊಂದು ಸಾಮಾನ್ಯವಾಗಿ ವಿಷಯ ತಿಳಿಯಪಡಿಸುವ ಒಂದು ಕ್ರಿಯೆ. ಇದು ಸಾರ್ವಜನಿಕರ ಗಮನಕ್ಕೆ ಮಾಡುವ ಒಂದು ಕರೆ, ಸಾಮೂಹಿಕ ಮನವಿ”. ಹಾಗಾದರೆ ಜಾಹಿರಾತು ಒಂದು ವಸ್ತು ಅಥವಾ ಉತ್ಪನ್ನ ಮಾರುವ ಒಂದು ಪ್ರಕ್ರಿಯೆ ಅಲ್ಲವೇ?
ಜಾಹೀರಾತುಗಳು, ಉತ್ಪನ್ನವನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಸೀಮಿತ ಅಲ್ಲ. ಅದರ ಮುಖ್ಯ ಉದ್ದೇಶ ಭಾವನೆಗಳನ್ನು ಹುಟ್ಟು ಹಾಕುವದು, ಮನವನ್ನು ಸಂತೋಷದಿಂದ ತುಂಬಿ,ನೆನಪುಗಳ ಆಗರದೆಡೆಗೆ ನಮ್ಮನ್ನು ಕರೆದುಕೊಂಡು ಹೋಗುವುದು…ಭಾವನಾತ್ಮಕ (emmotional) ಸೆಳೆತದಿಂದ ಉತ್ಪನ್ನ ಮತ್ತು ಅಪೇಕ್ಷಿತ (desire) ಭಾವನೆಯ ನಡುವೆ ಉಪಪ್ರಜ್ಞೆಯ (Subconscious) ಸಂಪರ್ಕವನ್ನು ಸೃಷ್ಟಿಸುವದು, ಅದನ್ನು ಹೆಚ್ಚು ಸ್ಮರಣೀಯ ಮತ್ತು ಅಪೇಕ್ಷಣೀಯವಾಗಿಸುವದು. ಅದು ಭಾವನೆಗಳು, ಸಾಮಾಜಿಕ ಸೂಚನೆಗಳು ಮತ್ತು ಅರಿವಿನ ಪೂರ್ವಾಗ್ರಹಗಳ ಮೇಲೆ ಕೇಂದ್ರೀಕರಿಸುತ್ತದೆ.
ಏ ಝಮೀನ್ ಏ ಆಸ್ಮಾನ್
ಹಮಾರಾ ಕಲ್ ಹಮಾರಾ ಆಜ್
ಬುಲಂದ್ ಭಾರತ್ ಕಿ ಬುಲಂದ್ ತಸ್ವೀರ್
ಹಮಾರಾ ಬಜಾಜ್
ಅಲಿಕ್ ಪದಂಸೀ ಅವರ ಬಜಾಜ್ ಜಾಹಿರಾತು ಮನೆ ಮನೆಯ ಹಾಡಾಯಿತು. ದ್ವಿಚಕ್ರ ವಾಹನ ಮಾರುಕಟ್ಟೆ ಅಂತರರಾಷ್ಟ್ರೀಯ ಮಾರಾಟಗಾರರಿಗೆ ತೆರೆದುಕೊಳ್ಳುತ್ತಿದ್ದಾಗ ಈ ಒಂದು ಜಾಹಿರಾತು ಬಜಾಜ್ ಸ್ಕೂಟರ್ ಹೊರತಂದಿತು. ಭಾರತದ ಈ ವಾಹನ ಸಾಮಾನ್ಯ ಜನರನ್ನು ಸಶಕ್ತರಾಗಿ ಮಾಡುತ್ತದೆ ಎಂದು ತೋರಿಸಲು ಅವರು ಇಲ್ಲಿ ಸಾಮಾನ್ಯ ಜನರನ್ನೇ ತೋರಿಸಿದರು…
ಫೆವಿಕಾಲ್, ಲಿಮ್ಕಾ, ಹ್ಯಾಪಿಡೆಂಟ್, ಕ್ಯಾಡ್ಬರಿ ಮುಂತಾದ ಇಂತಹ ಸುಂದರ ಜಾಹಿರಾತು ನೀವು ನೋಡಿರಬಹುದು. ಎಲ್ಲವನ್ನು ಒಂದೇ ಲೇಖನದಲ್ಲಿ ಬರೆಯಲಾಗುವುದಿಲ್ಲ… ಆದರೂ ನೋಡಿದ ಸುಂದರ, ಸಣ್ಣ ಕಥೆಯಂಥ ಒಂದೆರಡು ಹಂಚಿಕೊಳ್ಳುತ್ತಿದ್ದೇನೆ.
ನೀರು – ಅದರ ಮೂಲ ಅವಶ್ಯಕತೆ, ವಿವಿಧ ಜನರು ಅದನ್ನು ಉಪಯೋಗಿಸುವ ಪರಿ ತೋರಿಸಿದ ಒಂದು ಸುಂದರ ಚಿತ್ರ ಈ ಕೆಳಗಿನ ಜಾಹಿರಾತು
ಶಿಕ್ಷಕಿ ಮತ್ತು ವಿದ್ಯಾರ್ಥಿಗಳ ಸುಂದರ ಸಂಬಂಧ ಬಗ್ಗೆ ಪಾರ್ಲೆ ಜಿ ಅವರು ಸುಂದರ ಕಥೆ ಹೆಣೆದಿದ್ದಾರೆ.
ಎಲ್ಲರೂ ಒಂದೇ ಎಂದು ತೋರಿಸುವ ಈ ಕಿರುಚಿತ್ರ ಕಣ್ಣಂಚಲಿ ನೀರು ತಂದರೆ ಆಶ್ಚರ್ಯವಿಲ್ಲ
ಕೊನೆಯದಾಗಿ ನಾನು ಇಷ್ಟ ಪಟ್ಟ ಇನ್ನೊಂದು ಜಾಹಿರಾತು
ತಡವಾಗಿ ಪ್ರತಿಕ್ರಿಯೆ ಮಾಡುತ್ತಿದ್ದೇನೆ. ಪ್ರಮೋದ ಅವರ ಲೇಖನ ಮತ್ತು ವಿಡಿಯೊ ಅನೇಕ ವಿಚಾರಗಳನ್ನು ಪ್ರಚೋದಿಸಿತು. ಸಾಹಿತ್ಯ – ಸಂಗೀತ- ಸಂಸ್ಕೃತಿ ಮತ್ತು ಜಾಹಿರಾತು ಹೀಗೆ ನಾಲ್ಕು ದಿಕ್ಕಿನಲ್ಲಿ ಯೋಚಿಸುತ್ತಿದ್ದೆ. ಸಾಹಿತ್ಯ ಅಂದರೆ ಬರೆಹವೇ ಆಗಬೇಕಿಲ್ಲ ಅನ್ನುವದನ್ನು ನಾನೂ ಒಪ್ಪುತ್ತೇನೆ. ಉಳಿದ ಮೂರು ವಿಷಯಗಳು ಅದರೊಡನೆ ಬೆರೆತುಕೊಳ್ಳುತ್ತವೆ. ಹೊಸತನ್ನು ನಿರ್ಮಾಣ ಮಾಡಿದ್ದೆಲ್ಲವನ್ನೂ ಸ್ವೀಕರಿಸಿ ಒರೆ ಹಚ್ಚಿ ನೋಡ ಬೇಕೇ ಅನ್ನೋದಂತೂ ನಾನು ಒಪ್ಪುತ್ತೇನೆ. ಅದನ್ನು ಈ ಲೇಖನದ ಮೊದಲ ಶಬ್ದದಂತೆ uncategorized ಆಗಿಯೇ ಇರಲಿ. ಸ್ವೀಕರಿಸಿ ನಂತರ ವಿಮರ್ಶೆ ಮಾಡುವಾ. ಈ ಲೇಖನದಲ್ಲಿ ಉಲ್ಲೇಖ್ ಮಾಡಿದ ಎಲ್ಲ ಜಾಹೀರಾತುಗಳೂ ನನಗೆ ಅಪರಿಚಿತವೇ. ಕೊನೆಯಲ್ಲಿ ವಿಡಿಯೋಗಳು ನಮ್ಮಲ್ಲಿಯ ತಾಂತ್ರಿಕತೆ, ಛಾಯಾಗ್ರಹಣ ಎಷ್ಟು ಮುಂದುವರೆದಿದೆ ಅನ್ನೋದಕ್ಕೆ ಸಾಕ್ಷಿ. ಆದರೆ ಯಾವದೂ ಪರ್ಫೆಕ್ಟ್ ಅನಿಸಲಿಲ್ಲ. ಕಥಾವಸ್ತುಗಳು ಏನೋ ಚೆನ್ನಾಗಿವೆ. ಇನ್ನು ಮುಂದೆ ಇನ್ನೂ ಉತ್ಕೃಷ್ಟ ಕ್ರಿಯಾಶೀಲತೆಯನ್ನು ಕಾಣಲಿದ್ದೇವೆ ಅನಿಸಿತು. ಆದರೆ ಈ ವಿಷಯವನ್ನು ಚರ್ಚೆಗೆ ತಂದ ಪ್ರಮೋದ್ ಅವರ ಪ್ರಯತ್ನವನ್ನು ಅಭಿನಂದಿಸಲೇ ಬೇಕು. ಬರೀ ೪೫ ಸೆಕೆಂಡುಗಳ ವಿಡಿಯೋದಲ್ಲಿ ಅದೆಷ್ಟನ್ನು ಹೇಳಬಹುದು ಎನ್ನುವದಕ್ಕೆ ೧೯೮೭ ರಿಂದ ೧೯೯೩ ರ ಮಧ್ಯೆ Nescafe ಅವರ Gold Blend commercials ನೋಡಬಹುದು. * https://youtu.be/tkrtViIylzw?si=iJqfyud7BR-iUsFU
‘ಆ ನೋ ಭದ್ರಾ ಕ್ರತವೋ ಯಂತು ವಿಶ್ಚತಃ’ ಎನ್ನುವಂತೆ ಒಳ್ಳೆಯ, ಸೃಜನಾತ್ಮಕ ಅಂಶಗಳಿಗೆ ಯಾವಾಗಲೂ ಸ್ವಾಗತ — ‘ಅನಿವಾಸಿ’ಯಲ್ಲೂ, ಅನ್ನೋಣವೇ?
LikeLike