ವಚನ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರ  ಮತ್ತು ಮಹಾದೇವಿ -ಡಾ /  ದಾಕ್ಷಾಯಿನಿ  ಗೌಡ ಅವರ ಲೇಖನ


ಈ ವರ್ಷ ಮೇ ತಿಂಗಳಿನ ಅನಿವಾಸಿಯ ಉಗಾದಿ ಕಾರ್ಯಕ್ರಮದಲ್ಲಿ ಶರಣರ, ದಾಸರ, ಸಂತರ ಸಾಹಿತ್ಯದ ಬಗ್ಗೆ ಚರ್ಚಾಗೋಷ್ಟಿಯಲ್ಲಿ ನಾನು, ಶರಣ ಸಾಹಿತ್ಯದಲ್ಲಿ  ಮಹಿಳೆಯರ ಪಾತ್ರ  ಮತ್ತು ಅಕ್ಕಮಹಾದೇವಿಯಯ ಬಗ್ಗೆ ನನ್ನ ಕೆಲ ಮಾತುಗಳನ್ನು ಹಂಚಿಕೊಂಡೆ. ಅದನ್ನು ಮತ್ತೊಮ್ಮೆ ಬರವಣಿಗೆಯ  ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ.

ವಚನ ಸಾಹಿತ್ಯದ ಮೂಲಕ ಕರ್ನಾಟಕದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಮಹಿಳೆಯರು ಸಾಹಿತ್ಯ ಲೋಕವನ್ನು ಪ್ರವೇಶಿಸಿದರು. ಇದಕ್ಕೆ ಮುಂಚೆ ದಿಗಂಬರ ಜೈನ ಧರ್ಮವು ಜನಪ್ರಿಯವಾಗಿದ್ದು , ಈ ಧರ್ಮದಲ್ಲಿ ಸ್ತ್ರೀಯರಿಗೆ ಯಾವ ರೀತಿಯ ಸ್ಥಾನಮಾನಗಳಿರಲಿಲ್ಲ. ಜೈನಧರ್ಮವು, ಯಾವ ಹೆಣ್ಣಿಗೂ ಮೋಕ್ಷ ದೊರೆಯುವುದು ಸಾಧ್ಯವಿಲ್ಲವೆಂದು ನಂಬಿದ್ದಿತು.

೧೧ನೇ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿದ ವಚನ ಸಾಹಿತ್ಯವು, ಹೊಸ ಚಳುವಳಿಯನ್ನು ಆರಂಭಿಸಿ, ಸಂಪ್ರದಾಯ ಸಮಾಜದ ವಿರುದ್ಧ ಬಂಡೆದ್ದು, ಹೆಣ್ಣು ಗಂಡಿನಂತೆಯೇ ಮೋಕ್ಷ ಗಳಿಸಬಲ್ಲಳೆಂದು ಸಾರಿದರು. ಈ ಮನೋಭಾವದಿಂದಾಗಿ ವಚನಯುಗದಲ್ಲಿ ಹಿಂದೆಂದೂ ಇಲ್ಲದಷ್ಟುಸಂಖ್ಯೆಯಲ್ಲಿ ಸ್ತ್ರೀಯರು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡರು.

ಬದಲಾವಣೆಯ ಹೊಸ ರೂಪವನ್ನು ಜನ ಸಾಮಾನ್ಯರಿಗೆ ಪರಿಚಯಿಸಿತು. ಈ ಪ್ರಭಾವಶಾಲಿ ಮಾಧ್ಯಮ ಮುಂದಿನ ಸಾಹಿತ್ಯ ಪರಂಪರೆಗಳ ಮೇಲೂ ಬಹಳಷ್ಟು ಪ್ರಭಾವನ್ನು ಬೀರಿದೆಯೆನ್ನುವುದಲ್ಲಿ ಸಂದೇಹವಿಲ್ಲ. ವಚನಕಾರರು ಧರ್ಮ ಮತ್ತು ನೀತಿ ಸಮಾಜದಲ್ಲಿ ಆಳವಾಗಿ ಬೇರೂರ ಬೇಕೆಂದರೆ, ಸಾಹಿತ್ಯ ಪಂಡಿತರ ಭಾಷೆಯಾಗಿರದೆ, ಜನಸಾಮಾನ್ಯರು ಬಳಸುವ ಭಾಷೆಯಲ್ಲಿರಬೇಕೆನ್ನುವುದನ್ನು ಅರಿತಿದ್ದರು .

ಬರಿಯ ಧರ್ಮವನ್ನಲ್ಲದೆ ವಚನಗಳು ಸಾಮಾಜಿಕ ಜವಾಬ್ದಾರಿ, ಕೌಟುಂಬಿಕ ಮೌಲ್ಯ , ಜಾತಿವರ್ಗಗಳ ಸಮಾನತೆ, ದಾಸೋಹ, ಕಾಯಕ ಮತ್ತು  ಸ್ತ್ರೀ ಸ್ವಾತಂತ್ರ್ಯನ್ನು ಬೋಧಿಸಿದವು.

೨೦೦ಕ್ಕೊ ವಚನಕಾರರಿದ್ದಾರೆಂದು ಹೇಳುತ್ತಾರೆ, ಅದರಲ್ಲಿ ೩೦ ಕ್ಕೊ ಹೆಚ್ಚಿನವರು ಮಹಿಳೆಯರಾಗಿದ್ದರೆನ್ನುವುದು ಈ ಸಾಹಿತ್ಯದ ವೈಶಿಷ್ಟ್ಯ ಮತ್ತು ಮಹತ್ವ. ಎಲ್ಲಾ ಜಾತಿಯ ಮತ್ತು ವರ್ಗದ ಮಹಿಳೆಯರು ವಚನಗಳನ್ನು ರಚಿಸಿರುವುದು ಹೊಸ ಬೆಳವಣಿಗೆಯ, ಹೊಸಚಳುವಳಿಯ ಸಂಕೇತವೆಂದು ಹೇಳಬಹುದು.

ಕೆಲ ಪರಿಚಿತ ಹೆಸರುಗಳೆಂದರೆ ನೀಲಮ್ಮ, ನಾಗಾಂಬಿಕೆ, ಗಂಗಾಬಿಕೆ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕ, ಬೊಂತಾದೇವಿ ಮತ್ತು ಮಹಾದೇವಿ ಮುಂತಾದವರು.

ಮಹಾದೇವಿ ಕನ್ನಡದ ಪ್ರಪ್ರಥಮ ಕವಯಿತ್ರೀ. ೪೦೦ ಕ್ಕೊ ಹೆಚ್ಚಿನವಚನಗಳನ್ನು ಈಕೆ ರಚಿಸಿದ್ದಾಳೆ. ’ಯೋಗಾಂಗ ತ್ರಿವಿಧಿ’ ಮಹಾದೇವಿಯ ಪ್ರಮುಖ ಕೃತಿ.

ಮಹಾದೇವಿಯದು ಆ ಕಾಲಕ್ಕೆ  ಅಸಾಧಾರಣ ವ್ಯಕ್ತಿತ್ವ. ಯಾರ ಕೈ ಕೆಳಗೂ ಇರಬಯಸದೆ, ಧೈರ್ಯದಿಂದ, ತನಗೆ ಸರಿಯೆನ್ನಿಸಿದ ಜೀವನಮಾರ್ಗವನ್ನು ಅನುಸರಿಸಿದ ಆಕೆಯದು ಅಸಾಮಾನ್ಯ ಸಾಹಸವೆಂದು ಹೇಳಬಹುದು.

ಶರಣ ಪಥವನ್ನು ತುಳಿಯುವ ಮುನ್ನ ಆಕೆ ವೈವಾಹಿಕ ಜೀವನ, ಕುಟುಂಬ, ವೈಭವ, ಸಂಪತ್ತುಗಳನ್ನ ತ್ಯಜಿಸಿ ಹೊರ ನಡೆದ ಘಟನೆಗಳು ಬಹುಶಃ ಬಹಳ ಜನರಿಗೆ ತಿಳಿದ ವಿಷಯ.

ಸಾಮಾನ್ಯರಲ್ಲಿ, ಸಾಮಾನ್ಯರಂತೆ ಬದುಕಿದ ಆಕೆಯದು ಅಲೆಮಾರಿ ( ಜಿಪ್ಸಿ) ಜೀವನವೆಂದು ಹೇಳಬಹುದು. ಈ ವಚನದಲ್ಲಿ ಇದನ್ನು ಕಾಣಬಹುದು.

"ಹಸಿವಾದೊಡೆ  ಭಿಕ್ಷಾನ್ನಗಳoಟು,  ತೃಷೆಯಾದೊಡೆ ಕೆರೆ ಭಾವಿಗಳು೦ಟು,

ಶಯನಕೆ ಪಾಳು ದೇಗುಲಗಳು೦ಟು, ಚೆನ್ನಮಲ್ಲಿಕಾರ್ಜುನ ದೇವಾ, ದೇವಾ

ಆತ್ಮಸಂಗಾತಕೆ ನೀನೆನಗುಂಟು "

೧೨ನೇ ಶತಮಾನದಲ್ಲಿ, ಒಂಟಿ ಸ್ತ್ರೀ ಯಾಗಿ, ಸಂಸಾರ ತ್ಯಜಿಸಿ , ಸ್ವಯಂಮಾರ್ಗವನ್ನು ಅರಸಿ ಹೋರಾಟ ಮಹಾದೇವಿ ಯಾವ ರೀತಿಯ, ಟೀಕೆಗಳನ್ನು, ನಿಂದನೆಗಳನ್ನು ಎದುರಿಸಿರ ಬಹುದೆನ್ನುವುದು ನಮ್ಮ ಊಹೆಗೂ ನಿಲುಕದ್ದು.  ನನ್ನನ್ನೇಕೆ ಕಾಡುವಿರಿ ಎಂದು ಈ ವಚನದಲ್ಲಿ ಆಕೆ ಸಮಾಜವನ್ನು ಪ್ರಶ್ನಿಸುವುದರ ಜೊತೆಗೆ ತನ್ನ ದೈಹಿಕ ಮಾನಸಿಕ ಸ್ಥಿತಿಯನ್ನು ನಮಗೆ ತಿಳಿಸುತ್ತಾಳೆ.

" ಮುಡಿಬಿಟ್ಟು ಮೊಗಬಾಡಿ ಕೃಶ ಕರಗಿದವಳ,

ಎನ್ನನೇಕೆ ನುಡಿಸುವಿರಿ ಎಲೆ ಅಣ್ಣಗಳಿರಾ

ಎನ್ನನೇಕೆ  ಕಾಡುವಿರಿ ಎಲೆ ತಂದೆಗಳಿರಾ

ಬಲುಹಳಿದು, ಭವಗೆಟ್ಟು , ಛಲಬಿಟ್ಟು , ಚೆನ್ನಮಲ್ಲಿಕಾರ್ಜುನನ ಕೂಡಿಕುಲವಳಿದವಳ."

ಕಾಡು ನಾಡನ್ನು, ದಾಟಿ ಕಲ್ಯಾಣ ನಗರದಲ್ಲಿನ "ಅನುಭವ ಮಂಟಪ"ಕ್ಕೆ ಆಕೆ ಬಂದಾಗ, ಪುರುಷ ಪ್ರಧಾನ ಮತ್ತು ಮೇಧಾವಿಗಳ ಈ ಸಭೆಯಲ್ಲಿ ಆಕೆ ಪ್ರತಿಯೊಂದು ಪ್ರಶ್ನೆಗೂ , ಟೀಕೆಗಳಿಗೂ ಸಮಂಜಸವಾದ ಉತ್ತರವನ್ನು ಕೊಟ್ಟು ಅಧ್ಯಕ್ಷ ಅಲ್ಲಮ ಪ್ರಭು, ಸದಸ್ಯರಾದ ಕಿನ್ನರಿ ಬೊಮ್ಮಯ್ಯ, ದಾಸಿಮಯ್ಯ, ಬಸವಣ್ಣ ಮತ್ತಿತರ ಪ್ರಶಂಸೆಯನ್ನ ಗಳಿಸುತ್ತಾಳೆ. ಈ ಕಠಿಣ ಸಂದರ್ಶನದ ಬಗ್ಗೆ ಸಾಹಿತ್ಯದಲ್ಲಿ ಸಾಕಷ್ಟು ಮಾಹಿತಿಯುಂಟು. ಅಕ್ಕ ಮಾಹಾದೇವಿ ಧೈರ್ಯಶಾಲಿ, ಮೇಧಾವಿ ಮತ್ತು ಪ್ರತಿಭಾವಂತೆಯೆನ್ನುವದನ್ನು ಮತ್ತೆ ಮತ್ತೆ ಜಗತ್ತಿಗೆ ಸಾರಿ ತಿಳಿಸುತ್ತಾಳೆ.

ಅಕ್ಕ ಮಾಹಾದೇವಿಯನ್ನು ಕುರಿತು ಬರೆದ H. ತಿಪ್ಪೇಸ್ವಾಮಿಯವರ " ಕದಳಿಯ ಕರ್ಪೂರ " ಮತ್ತು ಹರಿಹರನ "ಮಹಾದೇವಿಯಕ್ಕನರಗಳೆ”ಯಲ್ಲಿ ಹೆಚ್ಚಿನ ಮಾಹಿತಿಯನ್ನು ಗಳಿಸಬಹುದು.

ಈ ಕೆಳಗಿನ ವಚನವನ್ನು ಕವಿತೆಯೆಂದೂ ಹೇಳಬಹುದು. ಕನ್ನಡದ ಪ್ರಪ್ರಥಮ ಕವಿಯತ್ರಿ ಬರೆದ ಈ ಬಹು ಸುಂದರವಾದ, ಅರ್ಥಗರ್ಭಿತ ಕವಿತೆಯನ್ನೋದಿ:

"ಈಳೆ - ನಿಂಬೆ -ಮಾದಲಕ್ಕೆ ಹುಳಿ ನೀರೆರೆದವರಾರಯ್ಯ

ಕಬ್ಬು -ಬಾಳೆ -ನಾರಿವಾಳಕ್ಕೆ ಸಿಹಿ ನೀರೆರೆದವರಾರಯ್ಯ

ಮಾರ್ಗ-ಮಲ್ಲಿಗೆ - ಪಚ್ಚೆ -ಮುಡಿವಾಳಕ್ಕೆ ಪರಿಮಳದುದಕವನೆರೆದವರಾರಯ್ಯ

ಈ ಜಲ ಒಂದೆ , ನೆಲ ಒಂದೆ ,ಆಕಾಶ ಒಂದೆ,

ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿ ಬೇರಾದಂಗೆ

ಎನ್ನದೇವ ಚೆನ್ನಮಲ್ಲಿಕಾರ್ಜುನ ಹಲವು ಜಗಂಗಳಲ್ಲಿ ಕೂಡಿದ್ದರೇನು - ತನ್ನ ಪರಿ ಬೇರೆ "

ನಾನು ಆಯ್ದು ಬರೆದ ಈ ಕೆಲ ವಚನಗಳ ಮೂಲಕ ವಚನಕಾರರು ತಮ್ಮ ವಚನಗಳ , ಧರ್ಮವನ್ನು ಮಾತ್ರವಲ್ಲ  ತಮ್ಮ ಬದುಕಿನ ಪರಿಯನ್ನು ನಮಗೆ ತಿಳಿಸಿದರು,  ಸಮಾಜದ ಕಟ್ಟಳೆಗಳನ್ನು ಪ್ರಶ್ನಿಸಿದರು, ಅನಾಚರಗಳನ್ನು ಪ್ರತಿಭಟಿಸಿದರು ಮತ್ತು ಬದಲಾವಣೆಗಾಗಿ ಶ್ರಮಿಸಿದರು. ವಚನಗಳಿಗೆ ಜಾತಿಯಿಲ್ಲ, ವರ್ಗವಿಲ್ಲ. ವಚನ ಸಾಹಿತ್ಯ  ಶತಮಾನಗಳಿಗೆ ಸೀಮಿತವಲ್ಲ, ಅಂದಿನಂತೆ  ಮತ್ತು ಇಂದಿನ ಸಮಾಜಕ್ಕೂ ಬಹು ಪ್ರಸ್ತುತ .

ವಂದನೆಗಳು.

ಡಾ /  ದಾಕ್ಷಾಯಿನಿ  ಗೌಡ

3 thoughts on “ವಚನ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರ  ಮತ್ತು ಮಹಾದೇವಿ -ಡಾ /  ದಾಕ್ಷಾಯಿನಿ  ಗೌಡ ಅವರ ಲೇಖನ

  1. ಲೇಖನ ಚಿಕ್ಕದಾದರೂ ಮುಖ್ಯಾವಾದ ಸಂಗತಿಗಳೆಲ್ಲವನ್ನೂ ಇದರಲ್ಲಿ ದಾಕ್ಷಾಯನಿಯವರು ಬರೆದು ಅಂದು ಬರಲಾರದವರಿಗೂ ತಲುಪಿಸಿದ್ದಾರೆ. ಅಕ್ಕ ಮಹಾದೇವಿಯವರು ಅನೇಕ ವಿಷಯಗಳಲ್ಲಿ ಮೊದಲಿಗರು. ಪ್ರತಿಸಲ ಕೇಳಿದಾಗಲೂ ಅವರ ಜೀವನ ಮತ್ತು ಸಾಧನೆ ನವಿರೇಳಿಸುತ್ತದೆ. ೨೦೦ ವಚನಕಾರರಲ್ಲಿ ಇನ್ನೊಬ್ಬ ಮಹಾದೇವಿಯೂ ಇದ್ದರೆಂದು ಕೇಳಿದೆ. ದಕ್ಷ ಅವರು ಅಕ್ಕ ಅನ್ನುವ ಅವರ ಗೌರವಾನ್ವಿತ ಪೂರ್ವ ಪ್ರತ್ಯಯವನ್ನು ಎಲ್ಲೂ ಉಪಯೋಗಿಸದರ ಔಚಿತ್ಯ ಗೊತ್ತಾಗಲಿಲ್ಲ.- ಶ್ರೀವತ್ಸ ದೇಸಾಯಿ

    Like

Leave a Reply to Anonymous Cancel reply

Your email address will not be published. Required fields are marked *