ಈ ವಾರದ ಅನಿವಾಸಿಯಲ್ಲಿ ಹೊಸ ಬರಹಗಾರರು, ವಿಜಯ್ ಖುರ್ಸಾಪೂರರ ಕವಂಗಳಿವೆ, ಓದಿ ಹರಸಿ. ಉಮೇಶ ನಾಗಲೋಟಿಮಠ ಈ ಮೊದಲು ಒಂದು ಸಲ ಅನಿವಾಸಿಗೆ ಬರೆದಿದ್ದಾರೆ, ಅವರಿಗೆ ಮತ್ತೊಮ್ಮೆ ಸ್ವಾಗತ. ಇಬ್ಬಾರೂ ಇನ್ನಷ್ಟು ಕನ್ನಡದಲ್ಲಿ ಬರೆಯಲಿ ಎಂದು ಆಶಿಸುತ್ತೇನೆ. – ಸಂ.
ಕಿವಿನೋವು: ಡಾ ಉಮೇಶ ನಾಗಲೋಟಿಮಠ ಬರೆದ ಲೇಖನ
ಲೇಖಕರ ಪರಿಚಯ: ಕಿವಿ ಮೂಗು ಗಂಟಲು ವೈದ್ಯರು, ಹುಬ್ಬಳ್ಳಿಯಲ್ಲಿ ಜನನ, ಬೆಳಗಾವಿಯಲ್ಲಿ ವಿದ್ಯಾಭ್ಯಾಸ . ಭಾರತದಲ್ಲಿ ಸುಮಾರು ೧೭ ವರ್ಷ ಸೇವೆ, ಕಳೆದ ಸುಮಾರು ೯ ವರ್ಷಗಳಿಂದ ಇಂಗ್ಲೆಂಡಿನ ವಿವಿಧ ಆಸ್ಪತ್ರೆಗಳಲ್ಲಿ ಸೇವೆ. MBBS ಮಾಡುವಾಗಿನಿಂದ ಕನ್ನಡ ಬರೆಯುವ ಚಟ. ಹಲವಾರು ಲೇಖನಗಳು/ಪದ್ಯಗಳು ಪತ್ರಿಕೆಯಲ್ಲಿ, ಪುಸ್ತಕಗಳಲ್ಲಿ ಪ್ರಕಟವಾಗಿವೆ , ಆಕಾಶವಾಣಿಯಲ್ಲಿ ಹಲವು ಭಾಷಣ /ಸಂದರ್ಶನ. ವೃತ್ತಿಯಲ್ಲಿ ಇಂಗ್ಲೆಂಡಿನ ರೊವಿನಾ ರೇಯನ್ ಪ್ರಶಸ್ತಿ
ನಾನು ಇಂಗ್ಲೆಂಡಿನ ಚೆಸ್ಟರ್ ಎಂಬ ಊರಿನಲ್ಲಿ ಕಿವಿ, ಮೂಗು ಮತ್ತು ಗಂಟಲು ತಜ್ಞನಾಗಿ ಒಂದು ರವಿವಾರ ಕರ್ತವ್ಯದ ಮೇಲಿದ್ದೆ. ಸಂಜೆ ಸುಮಾರು ೧೦ ವರ್ಷದ ಹುಡುಗ ಕಿವಿನೋವು ಮತ್ತು ಜ್ವರದಿಂದ ದಾಖಲಾಗಿದ್ದ. ಆತನಿಗೆ ಬೇಕಾದ ರೋಗನಿರೋಧಕ ಔಷಧಿ (ಆಂಟಿಬಯೋಟಿಕ್) ಕೊಡುತ್ತಿದ್ದೆವು. ಸಿ.ಟಿ ಸ್ಕ್ಯಾನ್ ಮಾಡಿಸಿದಾಗ ಕಿವಿಯಲ್ಲಿ ಕೀವು ತುಂಬಿಕೊಂಡದ್ದು ಗೊತ್ತಾಗಿ ಆತನಿಗೆ ಶಸ್ತ್ರಕ್ರಿಯೆ (ಆಪೆರೇಷನ್) ಮಾಡುವುದೋ ಅಥವಾ ಇನ್ನೊಂದಿಷ್ಟು ಔಷಧಿ ಕೊಟ್ಟು ಸ್ವಲ್ಪ ಕಾಯ್ದು ನೋಡೋವುದೋ ಎಂಬ ವಿಚಾರದಲ್ಲಿದ್ದೆವು . ರಾತ್ರಿ ಆದರೂ ಆ ಹುಡುಗನ ಕಿವಿನೋವು ಹೆಚ್ಚಾಯಿತೇ ವಿನಹ ಕಡಿಮೆಯಾಗಲಿಲ್ಲ . ಆಗ ನನ್ನ ಬಾಸ್ ನನಗೆ ಆಪೆರೇಷನ್ ಮಾಡಲು ಹೇಳಿದರು. ನಾನು ರಾತ್ರಿ ಸುಮಾರು ೩ ಗಂಟೆಗೆ ಆಪೆರೇಷನ್ ಕೊಠಡಿಗೆ ಹೋಗಿ ಬಾಲಕನಿಗೆ ಅರಿವಳಿಕೆ (anesthesia) ನೀಡಿ ಕಿವಿಯ ಪರದೆಯಲ್ಲಿ ಸಣ್ಣ ಛೇದವನ್ನು ಮಾಡಿದಾಗ ಬಹಳ ಕೀವು ಹೊರಗಡೆ ಬಂದಿತು. ಅಲ್ಲಿಯವರೆಗೆ ಹಾಸಿಗೆ ಹಿಡಿದು ಮಲಗಿದ ಆ ಬಾಲಕ ಮರುದಿನ ಮುಂಜಾನೆ ವಾರ್ಡಿನಲ್ಲಿ ಓಡಾಡತೊಡಗಿದ್ದ. ಆತನ ತಂದೆ ತಾಯಿ ನನಗೆ “ಒಹೋ, ಏನು ಮ್ಯಾಜಿಕ್ ಮಾಡಿದಿರಿ ಡಾಕ್ಟ್ರೇ ?” ಎಂದು ತುಂಬಾ ಖುಷಿಯಿಂದ ಕೇಳಿದರು.
ನಾನು ಮಾಡಿದ ಆ ಚಿಕ್ಕ ಶಸ್ತ್ರಕ್ರಿಯೆಗೆ ಮೈರಿಂಗೋಟೋಮಿ (Myringotomy) ಎನ್ನುತ್ತಾರೆ. ಕಿವಿಯಲ್ಲಿ ಕೀವು ತುಂಬಿ ಒತ್ತಡಲ್ಲಿದ್ದಾಗ ರೋಗಿ ಅತೀವ ಕಿವಿನೋವಿನಿಂದ ಬಳಲುತ್ತಾನೆ. ಔಷಧಿಗಳಿಂದ ಆ ಕೀವು ಕಡಿಮೆಯಾಗದಿದ್ದರೆ ಈ ಆಪೆರೇಷನ್ ಮಾಡಬೇಕಾಗುತ್ತದೆ. ಇಲ್ಲಿ ಸೂಕ್ಷ್ಮದರ್ಶಕ ಯಂತ್ರದಲ್ಲಿ ನೋಡುತ್ತ ಕಿವಿಯ ಪರದೆಯಲ್ಲಿ ಒಂದು ಸಣ್ಣ ಛೇದವನ್ನು ಮಾಡುತ್ತಾರೆ, ಇದರಿಂದ ಆ ಕೀವು ಹೊರಗಡೆ ಬಂದು ನೋವು, ಜ್ವರ ಕಡಿಮೆಯಾಗುತ್ತದೆ. ಈ ಆಪೆರೇಷನ್ ಮಾಡದಿದ್ದರೆ ಹಲವು ಬಾರಿ ಕಿವಿ ಪರದೆ ಕೊಳೆತು ಅದರಲ್ಲಿ ದೊಡ್ಡ ತೂತಾಗುತ್ತದೆ. ನಂತರದಲ್ಲಿ ಈ ತೂತಿನಿಂದ ಕಿವುಡುತನ, ಮೇಲಿಂದ ಮೇಲೆ ಕಿವಿಯ ಸೋಂಕು ಇತ್ಯಾದಿ ತೊಂದರೆಗಳು ಬರುತ್ತವೆ. ಇದರ ಒಟ್ಟು ಸಾರಾಂಶ ಎಂದರೆ ಕಿವಿಯಲ್ಲಿ ಸೋಂಕಾಗಿ ಕೀವು ತುಂಬಿ ಅದು ಔಷಧಿಗೆ ಕಡಿಮೆಯಾಗದಿದ್ದರೆ ಕಿವಿಪರದೆಯಲ್ಲಿ ಛೇದ ಮಾಡಿ ಆ ಕೀವನ್ನು ಹೊರತೆಗೆಯಬೇಕು. ಇದನ್ನು ಯಾಕೆ ಹೇಳುತ್ತಿರುವೆ ಎಂದು ನಿಮಗೆ ಮುಂದೆ ಗೊತ್ತಾಗುತ್ತದೆ.
ನಾನು ಈಗ ಹಲವು ವರ್ಷಗಳ ಹಿಂದೆ ಹೋಗುವೆ. ನಾನು ಬೆಳಗಾವಿಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಇದ್ದಾಗಿನಿಂದ ಹಿಡಿದು ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕನಾಗಿರುವವರೆಗೆ ನಾನು ನೋಡಿದ್ದೇನೆಂದರೆ ಹಲವಾರು ರೋಗಿಗಳು ಕಿವಿ ನೋವಾದಾಗ ಕಿವಿಯಲ್ಲಿ ಬಿಸಿ ಎಣ್ಣೆ, ಬಿಸಿ ಎಣ್ಣೆಯಲ್ಲಿ ಬಳ್ಳೊಳ್ಳಿ, ಇಲ್ಲವೇ ಬಳ್ಳೊಳ್ಳಿ ಜಜ್ಜಿ ಅದರ ರಸ ಕಿವಿಯಲ್ಲಿ ಹಾಕುವುದು, ಎಣ್ಣೆಗೆ ಜೊತೆಗೆ ಸ್ವಲ್ಪ ಅರಿಶಿಣ – ಹೀಗೆ ಹಲವು ಮನೆ ಮದ್ದು ಮಾಡುತ್ತಿದ್ದರು. ನಮಗೋ ಇದು ಬಲು ವಿಚಿತ್ರವಾಗಿತ್ತು. ಯಾಕೆಂದು ಅವರಿಗೆ ಕೇಳಿದಾಗ ಅವರು ನಮ್ಮ ಅಜ್ಜ, ಅಜ್ಜಿ, ತಾಯಿ ಹೀಗೆ ಮಾಡಿರೆಂದು ಹೇಳಿದಕ್ಕೆ ನಾವು ಮಾಡಿದೆವು ಎನ್ನುತ್ತಿದ್ದರು. ಅವರಾರಿಗೂ ಯಾಕೆ ಎಂದು ಗೊತ್ತಿರಲಿಲ್ಲ, ಆದರೆ ಹಿರಿಯರು ಹೇಳಿದಂತೆ ಮಾಡುತ್ತಿದ್ದರು. ಆ ಹಿರಿಯರನ್ನು ಕೇಳಿದಾಗ ಅವರಿಗೂ ಇದು ಯಾಕೆ ಎಂದು ಗೊತ್ತಿರಲಿಲ್ಲ ಆದರೆ ಇದನ್ನು ಮುಂದುವರೆಸುತ್ತಿದ್ದರು.
ಇದರ ಬಗ್ಗೆ ನಾವು ಸ್ವಲ್ಪ ಅಧ್ಯಯನ/ ಹುಡುಕಾಟ ನಡೆಸಿದೆವು. ನಮಗೆ ಸಿಕ್ಕ ಮಾಹಿತಿ ಬಹಳಷ್ಟು ಕುತೂಹಲಕಾರಿಯಾಗಿತ್ತು. ಆಯುರ್ವೇದದಲ್ಲಿ ಕಿವಿ ನೋವಿನ ಮೂಲವನ್ನು ಹೇಗೆ ಕಂಡು ಹಿಡಿಯುವುದು ಎಂಬ ಬಗ್ಗೆ ಸವಿಸ್ತಾರವಾದ ವಿವರಣೆ ಇದೆ. ಕಿವಿ ನೋವು ಹಲವಾರು ಕಾರಣಗಳಿಂದ ಬರಬಹುದು. ಕೆಲವು ರೋಗಗಳಲ್ಲಿ ಜ್ವರ ಇದ್ದರೆ, ಇನ್ನು ಕೆಲವು ಕಡೆ ನಾಡಿಮಿಡಿತ ಹೆಚ್ಚಾಗಿರುತ್ತದೆ. ಇನ್ನು ಹಲವೆಡೆ ಕಿವಿ ಸ್ವಲ್ಪ ಮಂದವಾಗಿರುತ್ತದೆ. ಇನ್ನು ಹಲವು ಕಡೆ ಕಿವಿ ಹೊರಗೆ ಬಾವು ಕಾಣಿಸುತ್ತದೆ. ಇವುಗಳ ಮೇಲೆ ನಾವು ರೋಗಿಗೆ ಏನಾಗಿದೆ ಎಂದು ಸುಮಾರು ೯೦% ವರೆಗೂ ಸರಿಯಾಗಿ ನಿದಾನಿಸಬಹುದು (ಈ ಕೋವಿಡ್ ಮಹಾಮಾರಿ ನಂತರ ಇಡೀ ಜಗತ್ತಿನಲ್ಲೆಲ್ಲ ವೈದ್ಯರು ಫೋನ್ ಅಥವಾ ಇಂಟರನೆಟ್ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಈ ತರಹದ ವ್ಯವಸ್ಥೆಯಲ್ಲಿ ಅವರು ಬಹಳಷ್ಟು ಬಾರಿ ಪ್ರಶ್ನೋತ್ತರಗಳ ಮೇಲೆಯೇ ರೋಗವನ್ನು ಗುರುತಿಸುತ್ತಾರೆ.)
ಬೆಳ್ಳೊಳ್ಳಿ ರಸ ಒಂದು ಕೆರೆಟೊಲೈಟಿಕ್ (kerolytic), ಅಂದರೆ ಅದು ಚರ್ಮದ ಹೊರಪದರನ್ನು ಕರಗಿಸುವ ಶಕ್ತಿ ಹೊಂದಿದೆ. ಅರಿಶಿಣ ಒಂದು ಆಂಟಿಸೆಪ್ಟಿಕ್ (antiseptic ), ಅಂದರೆ ರೋಗಾಣುಗಳನ್ನು ನಾಶ ಮಾಡುವ ಶಕ್ತಿ ಹೊಂದಿದೆ. ಈಗ ಆಯುರ್ವೇದದಲ್ಲಿ ಈ ರೀತಿಯ ಕಿವಿಯ ಸೋಂಕಿಗೆ (acute otitis media , not responding to antibiotics ) ಯಾವ ಚಿಕಿತ್ಸೆ ಹೇಳಿದ್ದಾರೆ ಎಂದು ನೋಡೋಣ. ಒಂದು ಪಾತ್ರೆಯಲ್ಲಿ ಎಣ್ಣೆ , ಬಳ್ಳೊಳ್ಳಿ ರಸ/ಬಳ್ಳೊಳ್ಳಿ ,ಅರಿಶಿನ ಹಾಕಿ ಕಾಯಿಸಿ ಆ ಕಾಯ್ದ ಒಂದು ಹನಿ ಎಣ್ಣೆಯನ್ನು ಕಿವಿಯ ಪರದೆಯ ಮೇಲೆ ಹಾಕಬೇಕು. ಇಲ್ಲಿ ರೋಗಿ ಹೇಗೆ ಮಲಗಬೇಕು, ಕಿವಿಯಲ್ಲಿ ಎಣ್ಣೆ ಯಾವ ರೀತಿ ಹಾಕಬೇಕು , ಯಾವ ಸಲಕರಣೆ ಹೇಗೆ ಉಪಯೋಗಿಸಬೇಕೆಂದು ಎಂದು ಸವಿಸ್ತಾರವಾಗಿ ತಿಳಿಸಿದ್ದಾರೆ. ಆ ಕಾಯ್ದ ಎಣ್ಣೆ ಹನಿ ಕಿವಿ ಪರದೆಯ ಮೇಲೆ ಬಿದ್ದ ತಕ್ಷಣ ಹೊರಗಿನ ಪದರು (ಕಿವಿ ಪರದೆಗೆ ೩ ಪದರುಗಳು ಇರುತ್ತವೆ ) ಬೆಳ್ಳೊಳ್ಳಿ ರಸದಿಂದ ಕರಗಿ ಹೋಗಿ ಉಳಿದ ಪದರುಗಳು ಬಿಸಿ ಎಣ್ಣೆಯಿಂದ ಕರಗಿ ಕಿವಿ ಪರದೆಯಲ್ಲಿ ಅತಿ ಸಣ್ಣ ಛೇದವಾಗಿ ಕಿವಿಯ ಒಳಗಿನ ಕೀವು ಹೊರಗೆ ಬರುತ್ತದೆ ಹಾಗು ರೋಗಿಗೆ ನೋವು ತಕ್ಷಣ ಶಮನವಾಗುತ್ತದೆ. ಅದರಲ್ಲಿನ ಅರಿಶಿನ ಕಿವಿಯಲ್ಲಿ ಸೋಂಕು ಮಾಡಿದ ರೋಗಾಣುಗಳ ವಿರುದ್ಧ ಹೋರಾಡುತ್ತದೆ ಹಾಗು ಈ ಎಲ್ಲ ಚಟುವಟಿಕೆ ಹೊರಗಿನ ಸೋಂಕುರಹಿತವಾಗಿ (in sterile condition) ನಡೆಯಲು ಸಹಾಯ ಮಾಡುತ್ತದೆ. ಈಗ ಇದನ್ನು ಮೈರಿಂಗೋಟೋಮಿ (myringotomy ) ಶಸ್ತ್ರ ಕ್ರಿಯೆಗೆ ಹೋಲಿಸಿದಾಗ ಎಲ್ಲವು ಒಂದೇ ಆಗಿದೆ ಅನ್ನಿಸುವುದು. ನಾವು ಇಂದು ಮೈಕ್ರೋಸ್ಕೋಪ್, ಅನಾಸ್ಥೆಸಿಯಾ , ಸ್ಟೆರಿಲೈಸಷನ್ , ಆಂಟಿಸೆಪ್ಟಿಕ್ ಇತ್ಯಾದಿ ಪಾಶ್ಚಿಮಾತ್ಯ ಪದಗಳನ್ನು ಮತ್ತು ವಿಧಾನಗಳನ್ನು ಬಳಸಿ ಆಪೆರೇಶನ್ ಮಾಡುತ್ತೇವೆ. ಆದರೆ ಎರೆಡೂ ಚಿಕಿತ್ಸಾ ಪದ್ಧತಿಗಳಲ್ಲಿ ಇದನ್ನು ಮಾಡುವ ವಿಧಾನ ಬೇರೆ ಇದ್ದರೂ ಚಿಕಿತ್ಸಾ ತತ್ವ ಒಂದೇ ಇದೆ.
ಈ ಚಿಕಿತ್ಸಾ ಪದ್ಧತಿ ಅಪಭ್ರಮಶವಾಗಿ ಜನರು ತಮಗೆ ತೋಚಿದ್ದನ್ನು ಮಾಡುತ್ತಾ ಆಯುರ್ವೇದವನ್ನು ಮೂರಾಬಟ್ಟೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆಯುರ್ವೇದ ಆಧುನಿಕ ಚಿಕಿತ್ಸಾ ಪದ್ದತಿಯ ಅಂಶಗಳನ್ನು ತನ್ನೊಳಗೆ ಕೂಡಿಸಿಕೊಳ್ಳದೆ ಹಳೆಯ ಮುದುಕನಂತೆ ಆಗಿದೆ. ಇನ್ನು ಭಾರತದಲ್ಲಿ ಅಲೋಪಥಿ ಮತ್ತು ಆಯುರ್ವೇದ ವೈದ್ಯರು ಹೊಡೆದಾಡುತ್ತ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಆಯುರ್ವೇದಕ್ಕೆ ಸರಕಾರದ ಪ್ರೋತ್ಸಾಹ, ಸಂಶೋಧನೆಗೆ ಧನ ಸಹಾಯ, ಜನರ ಪ್ರೋತ್ಸಾಹ ಇದಾವುದೂ ಸಿಗದೇ ಅದು ಮುರುಕುಲು ಮನೆಯಲ್ಲಿನ, ಹರಕಲು ಉಟ್ಟ ಮುದಿ ಜಾಣನಂತೆ ಆಗಿದೆ.
ನಾನು ಅಂದು ನನ್ನ ಬಾಸ್ ಅವರಿಗೆ ಈ ಸುಮಾರು ೩-೪ ಸಾವಿರ ವರ್ಷ ಹಳೆಯದಾದ ಆಯುರ್ವೇದ ಚಿಕಿತ್ಸಾ ಪದ್ಧತಿ ಬಗ್ಗೆ ಹೇಳಿ ಕಿವಿಯ ಸೋಂಕಿಗೆ ಯಾವ ರೀತಿ ಚಿಕಿತ್ಸಾ ಪದ್ಧತಿ ಹೇಳಿದ್ದಾರೆ ಎಂದು ವಿವರಿಸಿದೆ. ಆಗ ಅವರು ನನ್ನನ್ನು ಕುರಿತು , “ಹೌದಾ? ‘ಎಂದು ಸಂಶಯದಲ್ಲಿ ಹೇಳಿದರು. ಆಗ ನನಗೆ ಯಾವ ದುಃಖವಾಗಲಿಲ್ಲ. ಏಕೆಂದರೆ ಇದನ್ನು ಮೊದಲು ಅನೇಕ ಭಾರತೀಯರೇ ನಂಬುತ್ತಿಲ್ಲ, ಇನ್ನು ಬಹಳಷ್ಟು ವಿದೇಶಿಜನರ ಬಗ್ಗೆ ಏನು ಹೇಳಬೇಕು? ಇದು ಅವರ ತಪ್ಪು ಅಲ್ಲ. ಏಕೆಂದರೆ ಇದರ ಬಗ್ಗೆ ಬಹಳ ಜನ ತಿಳಿದುಕೊಂಡಿಲ್ಲ. ಭಾರತದಲ್ಲಿ ನಕಲಿ ಆಯುರ್ವೇದ ಪಂಡಿತರು ಬಹಳವಾಗಿದ್ದು ಜನರಿಗೆ ಬಾರಿ ಮೋಸ ಮಾಡುತ್ತಾರೆ. ಇದರಿಂದ ಜನ ಆಯುರ್ವೇದದಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ. ಇದನ್ನು ಸುಧಾರಿಸುವುದೆಂದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಕೆಲಸ.
ಇನ್ನು ಅನೇಕರಿಗೆ ಪ್ಲಾಸ್ಟಿಕ್ ಸರ್ಜರಿ ಜಗತ್ತಿಗೆ ಯಾವ ದೇಶದಿಂದ ಬಂತು ಎಂದು ಕೇಳಿದರೆ ಗೊತ್ತಿಲ್ಲ ಎಂಬ ಉತ್ತರವೇ ಬರುತ್ತದೆ. ಇನ್ನು ಹಲವು ಭೂಪರು ಇಂಗ್ಲೆಂಡ್, ಅಮೇರಿಕಾ, ಯುರೋಪ್ ದೇಶಗಳು ಎಂದೆಲ್ಲ ಹೇಳಬಹುದು. ಇದು ಭಾರತದಿಂದ ಜಗತ್ತಿಗೆ ಕಲಿಸಲ್ಪಟ್ಟಿತು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮೂಗಿನ ಪ್ಲಾಸ್ಟಿಕ್ ಸರ್ಜರಿ (rhinoplasty ) ಭಾರತದ ಕರ್ನಾಟಕದಿಂದ (ಮೊದಲಿನ ಮೈಸೂರು) ಇಂಗ್ಲೆಂಡಿಗೆ ಹೋಯಿತು. ಈ ಶಸ್ತ್ರಕ್ರಿಯೆಯನ್ನು ಭಾರತದ ಅನೇಕ ಪ್ರದೇಶಗಳಲ್ಲಿ ಮಾಡುತ್ತಿದ್ದರು. ಇದಲ್ಲದೆ ಇನ್ನು ಅನೇಕ ಶಸ್ತ್ರಕ್ರಿಯೆ ನಡೆಯುತ್ತಿದ್ದವು. ೧೭೯೪ರಲ್ಲಿ ಲಂಡನ್ನಿನ ಜಂಟಲ್ಮನಾಸ್ ಮ್ಯಾಗಜಿನ್ ದಲ್ಲಿ ಪ್ರಕಾಶನವಾದ ಒಂದು ಲೇಖನದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಒಬ್ಬ ನೌಕರನ ಕತ್ತರಿಸಲ್ಪಟ್ಟ ಮೂಗನ್ನು ಕರ್ನಾಟಕದಲ್ಲಿ ಈ ಪ್ಲಾಸ್ಟಿಕ್ ಸರ್ಜರಿ ಮೂಲಕ ಪೂರ್ತಿ ಸರಿ ಮಾಡಲಾದ ಬಗ್ಗೆ ವಿವರಿಸಿದ್ದಾರೆ . ಈ ಶಸ್ತ್ರ ಚಿಕಿತ್ಸೆ ನೋಡಿದ ಬ್ರಿಟಿಷ್ ಸ್ವಾಸ್ಥ್ಯ ಅಧಿಕಾರಿಗಳು ತಮ್ಮ ಸರಕಾರಕ್ಕೆ ಇದನ್ನು ತಿಳಿಸಿದಾಗ ಆಗಿನ ಬ್ರಿಟಿಷ್ ಸರಕಾರ ಒಂದು ವೈದ್ಯರ ತಂಡವನ್ನು ಭಾರತಕ್ಕೆ ಕಳುಹಿಸಿ ಈ ಶಸ್ತ್ರಕ್ರಿಯೆ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿ ಬರಲು ಹೇಳಿದರು. ತದನಂತರ ಪ್ಲಾಸ್ಟಿಕ್ ಸರ್ಜರಿ ಯೂರೋಪಿನಲ್ಲಿ ಬೆಳೆಯಿತು ಹಾಗು ದುರದೃಷ್ಟದಿಂದ ಭಾರತದಲ್ಲಿ ಅಳಿಯಿತು. ಇದರ ಬಗ್ಗೆ ನಾನು ಕೇಳಿದ್ದೆ, ಅದರ ಬಗ್ಗೆ ನೋಡುವ ಭಾಗ್ಯ ನನಗೆ ಲಂಡನ್ನಿನ ವೆಲ್ ಕಮ್ ವಸ್ತುಸಂಗ್ರಹಾಲಯದಲ್ಲಿ ಲಭಿಸಿತು. ನಾನು ಆ ಮ್ಯೂಸಿಯಂಗೆ ಭೆಟ್ಟಿ ಕೊಟ್ಟಾಗ ಅಲ್ಲಿ ಆಯುರ್ವೇದದ ಬಗ್ಗೆ ಪ್ರದರ್ಶನವೊಂದು ನಡೆಯುತ್ತಿದ್ದದ್ದು ಕಾಕತಾಳೀಯ. ಅಲ್ಲಿ ಈ ಪ್ಲಾಸ್ಟಿಕ್ ಸರ್ಜರಿ ಹೇಗೆ ಇಂಗ್ಲೆಂಡಿಗೆ ಬಂದಿತು ಎಂದು ವಿವರಿಸಿದ್ದಾರೆ. ಅಲ್ಲಿ ಹಾಕಿರುವ ಭಾರತೀಯ ಆಯುರ್ವೇದ ಬಗ್ಗೆ ಮಾಹಿತಿ ಮತ್ತು ಫೋಟೋಗಳನ್ನೂ ನೋಡಿದಾಗ ನನ್ನ ಮನಸ್ಸು ಹೊಯ್ದಾಡಿತು. ಒಂದಡೆ ಖುಷಿ, ಒಂದೆಡೆ ದುಃಖ ಆಗುತ್ತಿತ್ತು. ಜಗತ್ತಿಗೆ ಜ್ಞಾನ ದೀಪ ಹಚ್ಚಿ ತನ್ನ ಮನೆಯನ್ನೇ ಕತ್ತಲಾಗಿಸಿಕೊಂಡಿತು ನನ್ನ ಭಾರತ. ಅದಕ್ಕೆ ಅನೇಕ ಕಾರಣಗಳಿವೆ, ಅವುಗಳನ್ನು ಇಲ್ಲಿ ಚರ್ಚಿಸುವುದು ಈ ಲೇಖನದ ಚೌಕಟ್ಟನ್ನು ದಾಟುತ್ತದೆ.
ವಿಜಯ್ ಖುರ್ಸಾಪೂರ ಬರೆದ ಕೆಲವು ಕವಿತೆಗಳು
ಕವಿಯ ಪರಿಚಯ: ವೃತ್ತಿಯಿಂದ ಏರೋಸ್ಪೇಸ್ ಇಂಜಿನಿಯರ್, ಕಳೆದ ೧೦ ವರ್ಷಗಳಿಂದ ಇಂಗ್ಲೆಂಡ್ ನೆಲೆ, ಹುಟ್ಟಿದ ಊರು ಶಿಗ್ಗಾವಿ (ಹಾವೇರಿ ಜಿಲ್ಲೆ), ಓದಿದ್ದು ಧಾರವಾಡ, ಗದಗ, ಇಲ್ಲಿವವರೆಗೆ ಬೆಂಗಳೂರು, ಹೈದರಾಬಾದ ಮತ್ತು ಕೆನಡಾದಲ್ಲಿ ನೆಲೆಸಿ, ೪ -೫ ಏರೋಸ್ಪೇಸ್ ಕಂಪನಿಗಳಲ್ಲಿ ಕೆಲಸ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯನ್ನ ಓದುವದರಲ್ಲಿ ಆಸಕ್ತಿ ಮತ್ತು ಕೆಲವು ಚಿಕ್ಕ ಕವನಗಳನ್ನ ಬೆರೆಯುವ ಪ್ರಯತ್ನ.
ಹೊಸ ಗಾಳಿ
ಬಿಸಿಗಾಳಿಯ ಉಸಿರ ಈ ಜೀವಕೆ
ತಂಗಾಳಿಯಾಗಿ ನೀ ಬಾ
ಹೊಸ ಬಯಕೆಯ ಹೊಸ ಕನಸನ ನೀ ಹೊತ್ತು ತಾ
ಕಾಮೋ೯ಡ ಕವಿದ ಈ ಮನಕೆ
ಬೆಳಕಾಗಿ ನೀ ಬಾ
ಹೊಸ ಗುರಿಯ ಹೊಸ ಹುರುಪನ ನೀ ಹೊತ್ತು ತಾ
ಭಾರವಾದ ಹೃದಯದ ಈ ಗೂಡಿಗೆ
ಹರುಷವಾಗಿ ನೀ ಬಾ
ಹೊಸ ದಾರಿಯ ಹೊಸ ತಿರುವನ ನೀ ಹೊತ್ತು ತಾ
ಜಡವಾದ ಈ ದೇಹಕೆ
ಚೆೃತನ್ಯ ವಾಗಿ ನೀ ಬಾ
ಹೊಸ ಶೋಧನೆಯ ಹೊಸ ವಿವೇಚನೆಯನ ನೀ ಹೊತ್ತು ತಾ
ಸದಾ ಅರಸುತಿದೆ ಈ ಮನ ಹೊಸ ತನಕ್ಕಾಗಿ ಹೊಸ ಗಾಳಿಗಾಗಿ
ಹೊದಿಕೆ
ಆಳುವವನಿಗೊಂದು ಹೊದಿಕೆ
ಅಳುವವನಿಗೊಂದು ಹೊದಿಕೆ
ಬದುಕಿಗೆ ಏನೆಲ್ಲ ಹೊದಿಕೆ
ಕಾಯುವನಿಗೊಂದು ಹೊದಿಕೆ
ಕದೀಮನಿಗೊಂದು ಹೊದಿಕೆ
ಈ ಬದುಕಿಗೆ ಏನೆಲ್ಲ ಹೊದಿಕೆ
ಮನಸ್ಸಿಗೊಂದು ಹೊದಿಕೆ
ಮಾನಕೊಂದು ಹೊದಿಕೆ
ಬದುಕಿಗೆ ಏನೆಲ್ಲ ಹೊದಿಕೆ
ಧನಿಕನಿಗೊಂದು ಹೊದಿಕೆ
ದಾನಿಗೊಂದು ಹೊದಿಕೆ
ಈ ಬದುಕಿಗೆ ಏನೆನಿಲ್ಲ ಹೊದಿಕೆ
ಹೊದಿಕೆ ಇಂದ ಹೊರಬಂದಾಗ
ಸಿಗುವುದೇ ಆ ಹೊದಿಕೆಗಿದ್ದ
ಆಲಿಕೆ?
ಹೊದಿಕೆಯ ಮೇಲೆದ್ದ ಹೊದಿಕೆಗಳ
ಬಿಚ್ಚಲೊಲ್ಲೆಯಾ ನಿಜವಾಗಿ ನಿನ್ನ
ತಿಳಿಯೋದಕೆ
ಮಜಾ
ಮೊದಲ ಮಳೆ ಸುರಿಯುವಾಗ
ಬೆಚ್ಚಗೆ ಮನೆಯಲ್ಲಿ ಕೂರುವದಕ್ಕಿಂತ
ಹೊರಗಡೆ ಮಳೆಯಲಿ ನೆನೆಯುವುದೇ ಮಜಾ
ಆ ಮಣ್ಣಿನ ಸುವಾಸನೆಯಲಿ ಮನವು
ವಿಲೀನವಾಗುವಾಗ
ಬೆಳಿಗ್ಗೆ ಮೊಬೈಲ್ನಲ್ಲಿ ಅಲರಾಮು ಆಗುವಾಗ
ತಟ್ಟನೇ ಎದ್ದೇಳುವುದಕ್ಕಿಂತ
ಸ್ನೂಜ್ ಮಾಡಿ ಮತ್ತೆ ಮತ್ತೆ ನಿದ್ದೆಗೆ ಜಾರುವುದೇ ಮಜಾ
ಕನಸಿನಲ್ಲಿ ಹೊಸ ಕನಸೊಂದು ಶುರುವಾಗುವಾಗ
ಸಿನೆಮಾ ನೋಡೋಕೆ ಹೋದಾಗ
ಸಬ್ಯರ ಜೊತೆ ಬಾಲ್ಕನಿಯಲ್ಲಿ ಕೂರೋದಕ್ಕಿಂತ
ಗಾಂಧಿ ಕ್ಲಾಸ್ ನಲ್ಲಿ ಕೂರೋದೇ ಮಜಾ
ಹರುಷದ ಶಿಳ್ಳೆಗಳಲ್ಲಿ ಮನಸ್ಸು ಯವ್ವನಕ್ಕೆ ಜಾರುವಾಗ
ಭರವಸೆ
ಬಿಸಿಲಿಗೆ ಬಸವಳಿದ ತಾವರೆ
ಮುದುಡುತಿದೆ, ಜಲವನರಿಸಿ,
ಕೈ ಚಲ್ಲಿದೆ ಮೆಲ್ಲಗೆ
ಸುರಿಯಬಾರದೇ, ಮಲ್ಲಿಗೆಯ ಮಳೆ
ಅರಳಬಾರದೇ ಮೆಲ್ಲಗೆ, ಭರವಸೆಯ ಕಳೆ
ಬೆಳಕಿನೆಡೆಗೆ
ಮರುಕಳಿಸಿದ ಬೆಳಕಿನ ಬಾನ,
ಹರಡಿದೆ ಕಲರವಗಳ ಗಾನ.
ಮೌನದಲಿ ಅರಿಯುವ ಧ್ಯಾನ,
ಸವಿದಂತೆ ಹಾಲು ಜೇನ.
ಹರಿಯುವ ತಿಳಿನೀರಿನ ಸ್ನಾನ,
ಈ ಜಗದ ಮಧುರ ದಾನ.
ಇತಿ ಮಿತಿಯ ಬದುಕುವ ತನ
ಇರಿಸುವದೇ ಕೇಳಲು? ಇನ್ನೇನ


ಕಾಂಗಲ್ಟನ್ ರಾಮಮೂರ್ತಿಯವರು ಬರೆಯುತ್ತಾರೆ:
ಇವತ್ತಿನ ನಂಚಿಕೆಯಲ್ಲಿ ಡಾ ಉಮೇಶ ಬರೆದುರುವ ಲೇಖನ ಬಹಳ ಉತ್ತಮ ವಾಗಿದೆ ಅಲ್ಲದೇ thought provoking.
ಹಿತ್ತಲಿನ ಗಿಡ ಮದ್ದಲ್ಲ ಅನ್ನುವ ಗಾದೆ ಅನ್ನುವುದನ್ನು ಉಮೇಶ ಸ್ಪಷ್ಟ ಪಡಿಸಿದ್ದಾರೆ. ಶತಮಾನಗಳ ಹಿಂದೆ ಭಾರತಲ್ಲಿ ಅನೇಕ ಸಂಶೋದನೆಗಳು ನಡದಿದ್ದರೂ ಅವುಗಳಿಗೆ ಗುರುತಿಸುವಿಕೆ (recognition ) ಯಾವತ್ತೂ ಸಿಕ್ಕಿಲ್ಲ. ಕಾರಣ lack of PR. ಇಂದಿಗೂ ಇದೇ ಕಾರಣ . ಭಾರದ ಕೇಂದ್ರ ಸರ್ಕಾರಕ್ಕೆ ಇದರ ಮೇಲೆ ಅಷ್ಟು ಆಸಕ್ತಿ ಇದ್ದಹಾಗಿಲ್ಲ
ಉದಾಹರಣೆಗೆ , ಖಗೋಳ ಶಾಸ್ತ್ರ ದಲ್ಲಿ ನಮ್ಮ ಪೂರ್ವಿಕರಿಗೆ ಬಹಳ ಪಾಂಡಿತ್ಯ ಇತ್ತು. ಪಂಚಾಂಗದಲ್ಲಿ ಯಾವ ಗ್ರಹಣ ಯಾವತ್ತು ಎನ್ನುವುದನ್ನ ಬರೆಯುತ್ತಿದ್ದರು. ನಮಗೆ ೯ ಗ್ರಹಗಳು ಇರುವ ಅರಿವು ಸಾವಿರಾರು ವರ್ಷಳಹಿಂದೆ ಗೊತ್ತಿತ್ತು , ಆದರೆ credit ಮಾತ್ರ ಚೈನೀಸ್ , ಗ್ರೀಕ್ ವಿಜ್ಞಾನಿಗಳಿಗೆ ಮಾತ್ರ
ಇನ್ನುಂದು ಉದಾಹರಣೆ , SN Bose , ಉನ್ನತ ಮಟ್ಟದ ಭಾರತದ Theoretical Phycisist , ಆದರೆ ಅವರು ಬರೆದ Bose Einstein Statistics ಲೇಖನವನ್ನು ಯಾರೂ ಪ್ರಕಟಿಸಿಲಿಲ್ಲ . ಆದರೆ ಇದನ್ನು Eistein ಸ್ವತಃ ಜರ್ಮನ್ ಭಾಷೆಗೆ ಭಾಷಾಂತರ ಮಾಡಿದಮೇಲೆ Bose ವಿಚಾರ ಗೊತ್ತಾಯಿತು ,
ರಾಮಮೂರ್ತಿ
ಕಾಂಗಲ್ ಟನ್
ಚೆಶೈರ್
LikeLike
‘ಕಿವಿ ನೋವು ಮತ್ತು ಕೆಲವು ಕವನಗಳು’ ಬರಹಗಳನ್ನು ಓದಿದೆ.
ಉಮೇಶ್ ನಾಗಲೋತಿ ಮಠ ಅವರು ನನ್ನ ಗೌರವಾನ್ವಿತ ಗುರುಗಳಾದ ಪ್ರೊಫೆಸ್ಸರ್ ಡಾ ಎಸ್ ಜೆ ನಾಗಲೋತಿ ಮಠ ಅವರ ಸುಪುತ್ರಆದುದರಿಂದ ಅವರ ಬಗ್ಗೆ ನನಗೆ ಪ್ರೀತಿ ವಿಶ್ವಾಸಗಳಿವೆ. ಅವರ ಬರವಣಿಗೆಯ ಶೈಲಿ ಭಾಷೆಯ ಮೇಲಿನ ಹತೋಟಿ ನನಗೆ ಮೆಚ್ಚುಗೆಯಾಗಿದೆ. ಅಲೋಪಥಿ ವೈದ್ಯರಿಗೆ ಆಯುರ್ವೇದ ವಿಜ್ಞಾನದ ಬಗ್ಗೆ ಕೆಲವು ಪೂರ್ವಗ್ರಹ ಪೀಡಿತ ಆಲೋಚನೆ (Prejudice) ಅನ್ನುವುದಕ್ಕಿಂತ ಒಂದುರೀತಿ ಸಂದೇಹ scepticism ಇದೆ, ಅದಕ್ಕೆ ಕೆಲವು ಕಾರಣಗಳಿವೆ. ಆಧುನಿಕ ಅಲೋಪಥಿಕ್ ವಿಜ್ಞಾನದಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿವೈದ್ಯಕೀಯ ವಿಷಯವನ್ನು ತೀವ್ರ ಸಂಶೋಧನೆಗೆ ಗುರಿಪಡಿಸುವುದಲ್ಲದೆ ಆ ಸಂಶೋಧನೆಯ ಬಲವನ್ನು ತೀವ್ರ ಪರೀಕ್ಷೆಗೆ (Scientific Rigor)
ಒಳಪಡಿಸುತ್ತಾರೆ, ಇದನ್ನೇ Research Hierarchy ಎನ್ನಬಹುದು. ತದನಂತರವೇ ಅದನ್ನು ವೈದ್ಯಕೀಯ Conference ಗಳಲ್ಲಿ ಚರ್ಚೆ ಮಾಡಿ ವೈದ್ಯಕೀಯ Journal ಗಳಲ್ಲಿ ಮಂಡಿಸಿ ಒಂದು ಚಿಕಿತ್ಸೆಯ ಕ್ರಮವನ್ನು ಒಪ್ಪಿ ಅನಿಷ್ಠಾನ ಮಾಡಲಾಗುತ್ತದೆ. ಅದಾವುದಕ್ಕೂಒಳಪಡದ ಆಯುರ್ವೇದಿಕ್ ಚಿಕಿತ್ಸಾ ಕ್ರಮವನ್ನು ರೋಗಿಯ
ಮೇಲೆ ಉಪಯೋಗಿಸುವುದು ಅಪಾಯಕಾರಿ. ಕಿವಿ ನೋವಿಗೆ ಕಾದ ಎಣ್ಣೆ ಮತ್ತು ಬೆಳ್ಳುಳ್ಳಿ ವಿಧಾನವನ್ನೇ ತೆಗೆದುಕೊಂಡರೆ; ತೂತಾಗಿರುವ (Perforated Eardrum) ಕಿವಿಯಲ್ಲಿ ಎಣ್ಣೆ ಹಾಕಿದರೆ ಅಲ್ಲಿ Granuloma ಉಂಟಾಗಿ ತೊಂದರೆ ಇನ್ನು ಉಲ್ಪಣ ಗೊಳ್ಳುತ್ತದೆ! ಸುರಕ್ಷಿತವಾದMyringotomy ಬದಲು ಕಾದ ಎಣ್ಣೆ ಹುಯ್ಯುವುದು ಎಷ್ಟು ವೈಜ್ಞಾನಿಕ. ಎರಡು ತತ್ವ ಒಂದೇ ಇರಬಹುದಾದರೂ ಯಾವುದು ಚಿಕಿತ್ಸೆಗೆ ಅರ್ಹಎನ್ನುವ ವಿಚಾರ ಮುಖ್ಯ. ನಮ್ಮ ಅಲೋಪಥಿಕ್ ಮೆಡಿಸ್ಸಿನಿನಲ್ಲಿ ಒಂದು ಮಂತ್ರ ಇದೆ; ಗುಣಪಡಿಸಲು ಸಾಧ್ಯವಿಲ್ಲದಿದ್ದರೂ ರೋಗಿಗೆ ಹಾನಿತರಬೇಡ (Do No harm)
ಈ ದೃಷ್ಟಿಯಲ್ಲಿ ನೋಡಿದಾಗ ನಾವು ಯೋಗಭ್ಯಾಸವನ್ನು ಅಲೋಪಥಿಯಲ್ಲಿ ಅಳವಡಿಸಿಕೊಂಡಿದ್ದೇವೆ. ಅದರಿಂದ ದೇಹಕ್ಕೆ ನೇರವಾಗಿ ಹಾನಿತಲುಪಿಸಲು ಸಾಧ್ಯವಿಲ್ಲ. It is, in a way, non-invasive procedure. ಹೀಗಾಗಿ ಅದು ಜನರ ಮತ್ತು ವಿಜ್ಞಾನದ ಮನ್ನಣೆ ಪಡೆದಿದೆ. ಭಾರತದಲ್ಲಿ ಅನೇಕ ಅನಕ್ಷರಸ್ತ ಸಾಮಾನ್ಯ ಮುಗ್ಧ ಜನರಿದ್ದಾರೆ, ಹಾಗೆಯೇ ಅವರನ್ನು ಶೋಷಣೆ ಮಾಡಲು ಸಿದ್ಧರಿರುವ ಅಡ್ಡ ಕಸುಬಿಗಳು, ಖೋಟಾ ವೈದ್ಯರು ಇದ್ದಾರೆ. ಇತ್ತೀಚಿಗೆ ಕಾವಿ ಬಟ್ಟೆ ಬಾಬಾಗಳು ತಮ್ಮ ಗಿಡ ಮೂಲಿಕೆಗಳ ಔಷಧಿಯನ್ನು ಆಡಳಿತದ ಕೃಪಾಕಟಾಕ್ಷದೊಂದಿಗೆ(ಒಂದಿಷ್ಟು ಸ್ವದೇಶ ಪ್ರೇಮ, ದೇಶ ಭಕ್ತಿ ನೆಪದಲ್ಲಿ) ನಿಯಂತ್ರಣವಿಲ್ಲದ ಮಾರುಕಟ್ಟೆಗೆ ತಂದು ವ್ಯಾಪಾರದಲ್ಲಿ ತೊಡಗಿದ್ದಾರೆ. ಇಂತಹಸನ್ನಿವೇಶದಲ್ಲಿ ಪಾಶ್ಚಿಮಾತ್ಯ ದೇಶದಲ್ಲಿ ಶಿಕ್ಷಣ ಪಡೆದ ನಮ್ಮಂತಹ ವೈದ್ಯರು ಮುಗ್ಧರನ್ನು ಎಚ್ಚರಿಸಬೇಕಾದುದು ನಮ್ಮ ಕರ್ತವ್ಯ. ಆಯುರ್ವೇದ ಭಾರತೀಯ ಮೂಲದ ಕ್ರಮ ಅನ್ನುವ ಹೆಮ್ಮೆ ಇರಲಿ, ಆದರೆ ಅದರ ಬಗೆಗೆ ಭಾವುಕತೆ, ಕುರುಡು ಪ್ರೀತಿ ಅನಗತ್ಯ.
ಆಯುರ್ವೇದದ ಬಗ್ಗೆ ಕಾಳಜಿ ಇರುವವರು ಅದನ್ನು ವೈಜ್ಞಾನಿಕ ಪ್ರಯೋಗಗಳಿಗೆ ಒಳಪಡಿಸಿ ಸಂಶೋಧನೆ ನಡೆಸಬೇಕಾಗಿದೆ. ಅಲ್ಲಿಯವರೆಗೆಅದನ್ನು ಇತಿಹಾಸ ಪುಟಗಳಲ್ಲಿ ಸೇರಿಸಿ ಅಥವಾ ಲಂಡನ್ ಮ್ಯೂಸಿಯುಮ್ ನಲ್ಲಿಟ್ಟು ಇಂತಹ ವಿಧಾನವೂ ಇತ್ತು ಎಂದು ದಾಖಲಿಸಬಹುದು. ಅಂದಹಾಗೆ ನಮಗೆ ತಿಳಿದಿರುವ ಪರಿಣಾಮಕಾರಿಯಾದ ಮಹತ್ವದ ಔಷಧಿಗಳಾದ ಕ್ವಿನಿನ್, ಡಿಜಿಟಾಲಿಸ್ ಗಳನ್ನು ಗಿಡಮೂಲಿಕೆಗಳಿಂದಲೇಕಂಡುಹಿಡಿದದ್ದು ಎನ್ನುವ ವಿಚಾರ ಇಲ್ಲಿ ಪ್ರಸ್ತಾಪ ಮಾಡುವುದು ಸೂಕ್ತ. ನಮಗೆ ಗೊತ್ತಿರದ ನೈಸರ್ಗಿಕ ಸಂಪನ್ಮೂಲಗಳು ಎಷ್ಟೊಂದು ಇವೆ. ಅದನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕಾಗಿದೆ.
ವಿಜಯ ಅವರ ಕವನ ಗುಚ್ಛ ಸರಳವಾಗಿ ಸುಂದರವಾಗಿದೆ. ಮಲ್ಲಿಗೆ ಮಳೆ ಸುರಿಯಲಿ ಎಂಬ ಆಶಯ, ಗಾಂಧಿಕ್ಲಾಸಿನಲ್ಲಿ ಕೂತು ಸಿನಿಮಾನೋಡುವ ಪುಳಕ, ಮತ್ತು ಬದುಕಿನಲ್ಲಿ ಹೊಸತನವನ್ನು ಬಯಸುವ ಆಶಯ ಕವಿಯ ಜೀವನ ಪ್ರೀತಿಗೆ ಸಾಕ್ಷಿಯಾಗಿದೆ. ಇದರ ಮಧ್ಯೆನಮ್ಮನ್ನು ನಾವು ಅರಿಯಲು ಹೊದಿಕೆಗಳಿಂದ ಹೊರಬರಬೇಕಾಗಿದೆ ಎಂಬ ಕಟುಸತ್ಯವನ್ನು ಅವರು ನೆನಪಿಸಿದ್ದಾರೆ.
LikeLike
Very nice
LikeLike
ನಾಗಲೋಟಿಮಠ ಅವರ ಲೇಖನ ಸ್ವಾರಸ್ಯಕರವಾಗಿದೆ. ನ ಲಶೂನಾತ್ ಪರಂ ಔಷಧಮ್ ಅಂತಆಯುರ್ವೇದ ಶಾಸ್ತ್ರ ಹೇಳುತ್ತದೆ ಅಂತ ಓದಿದ ನೆನಪು. ಶುಶ್ರುತ ಸಂಹಿತೆಯಲ್ಲಿ ಮೂಗಿನ plastic reconstruction ಚೆನ್ನಾಗಿ ವರ್ಣಿತವಾಗಿದೆಯೆಂದೇ ಭಾರತದ ಬೇರೆ ಬೇರೆ ಕಡೆಯಲ್ಲಿ ಅದನ್ನುಅರಿತಿದ್ದರು. ನೀವು ಹೇಳಿದಂತೆ ಮೈಸೂರಲ್ಲಿ ಆ ಶಸ್ತ್ರ ಚಿಕಿತ್ಸೆ ಆದದ್ದು ಟಿಪೂ ಸುಲ್ತಾನನಕಾರಣದಿಂದ. ಬ್ರಿಟಿಷ್ ಸೈನ್ಯಕ್ಕೆ ಸೇವೆ ಮಾಡುತ್ತಿದ್ದ ೪ ರಿಕ್ಷಾ ಚಾಲಕರಿಗೆ ಮೂಗು ಕತ್ತರಿಸಿದನಂತೆ. ಅವರಲ್ಲಿ ಕೊವಾಸ್ಜಿ ಅಂತ ಒಬ್ಬ ರಾಯಲ್ ಕಾಲೇಜ್ ಪತ್ರಿಕೆಯಲ್ಲೂ ಬರೆದಾರೆಂದು ಓದಿದ ನೆನಪು.
ಬಹಳ ದಿನಗ ನಂತರ ‘ಹೊದೆಕೆಯನ್ನು’ ತೆಗೆದು ಹೊಸ ಬರಹಗಾರ ಖುರ್ಸಾಪುರ ಅವರ ಚಂದದ ‘ಹೊಸ ಕಿರುಗವನಗಳನ್ನು ಕವಿತೆಗಳನ್ನು ಪ್ರಕಟಿಸಿದ್ದು ಶ್ಲಾಘನೀಯ, ಏಕೆಂದರೆ ಬಹಳ ದಿನಗಳಿಂದ“ಸದಾ ಅರಸುತಿದೆ ನನ್ನ ಈ ಮನ ಹೊಸ ತನಕ್ಕಾಗಿ ಹೊಸ ಗಾಳಿಗಾಗಿ” -ಅವರದೇ ಸಾಲುಗಳನ್ನು ನೆನೆದು.
ಅಲ್ಲಲ್ಲಿ ಈ ವಾರದ ಕೊಡುಗೆಯಲ್ಲಿ ಟೈಪೊಗಳು ನುಸುಳಿದ್ದು ದುರ್ದೈವ!
ಇಬ್ಬರಿಂದಲೂ ಇನ್ನೂ ಹೊಸ ಬರಹಗಳನ್ನು ನಿರೀಕ್ಷಿಸುವಾ!
ಶ್ರೀವತ್ಸ
LikeLike