ಎರಡು ಕವನಗಳು

ಪ್ರಸಾದ್ ನಂಜನಗೂಡು, ಮೂಲತಃ ಮೈಸೂರಿನವರಾದರೂ ಬೆಂಗಳೂರಿಗ. ಬೆಂಗಳೂರಿನ ಹೆಸರಾಂತ ಶಿಕ್ಷಣ ಸಂಸ್ಥೆಗಳಾದ ಬಸವನಗುಡಿಯ ನ್ಯಾಷನಲ್ ಕಾಲೇಜು ಹಾಗೂ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಓದಿ ಮುಗಿಸಿದ ಮೇಲೆ ಪ್ರತಿಷ್ಠಿತ ಸಂಸ್ಥೆಯಾದ ಮದರಾಸಿನ ಐಐಟಿ ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತದನಂತರ ಎಚ್ ಏ ಎಲ್, ಟಿಸಿಎಸ್ ಗಳಲ್ಲಿ ಕೆಲಸ ಮಾಡಿ, ಅಮೇರಿಕೆಯ ಹಾದಿಯಾಗಿ ಬ್ರಿಸ್ಟಲ್ ನಗರದಲ್ಲಿ ನೆಲೆಸಿದ್ದಾರೆ. ಅವರ ಪರಿಣತಿ ವಿಮಾನಗಳ ಕ್ಷೇತ್ರದಲ್ಲಿ. ಈಗ ರಕ್ಷಣಾ ಮಂತ್ರಾಲಯದ ಉದ್ಯೋಗಿ. ತಮ್ಮ ಅಭಿಯಂತ ವೃತ್ತಿಯಲ್ಲಿ ನಿರತರಾದರೂ ಸಾಹಿತ್ಯದ ಹಾಗೂ ಸಂಗೀತದ ಆಸಕ್ತಿಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಲಘುಬರಹ, ಕವನ, ವಿಮರ್ಶೆ ಇವರಿಗೆ ಇಷ್ಟವಾಗುವ ಪ್ರಕಾರಗಳು.

ಈ ವಾರ ಪ್ರಸಾದ್ ತಮ್ಮ ಎರಡು ಕವನಗಳನ್ನು ಅನಿವಾಸಿ ಓದುಗರೊಂದಿಗೆ ಹಂಚಿಕೊಡಿದ್ದಾರೆ. ಇವೆರಡೂ ವಿಭಿನ್ನ ವಿಷಯಗಳನ್ನು ಅವಲೋಕಿಸುತ್ತವೆ. ಇವುಗಳಲ್ಲಿ ಪ್ರಸಾದ್ ಅವರ ಆಲೋಚನೆಯ ಹರಿವನ್ನು ಕಾಣಬಹುದು . ಮೊದಲ ಕವನದಲ್ಲಿ ಪ್ರಸಾದ್ ಪ್ರೇಮವನ್ನು ದಿನಚರಿಯಾಗಿಸಿದ್ದಾರೆ. ಪ್ರೇಯಸಿಯ ಮೇಲಿನ ಪ್ರೀತಿಯನ್ನು ಮನದಾಳದಿಂದ ಬಿಚ್ಚಿಟ್ಟಿದ್ದಾರೆ. ಎರಡನೇ ಕವಿತೆಯಲ್ಲಿ ಇಂದಿಗೂ-ಎಂದಿಗೂ ಪ್ರಸ್ತುತವಾಗುವ ಮೊಂಡು ಬುದ್ಧಿಯ ವಿಶ್ಲೇಷಣೆಯನ್ನು ಕಾಣಬಹುದು. ಪ್ರಾಪಂಚಿಕ ವಿಷಯದಿಂದ ಈ ಮನೋಭಾವನೆಯನ್ನು ಆಧ್ಯಾತ್ಮಕ್ಕೆ ಕೊಂಡೊಯ್ಯುವ ಪ್ರಯತವನ್ನು ಮಾಡಿದ್ದಾರೆ. ಇದು ಪ್ರಸಾದ್ ಅವರಿಂದ ಅನಿವಾಸಿಗೆ ಚೊಚ್ಚಲ ಕೊಡುಗೆ. ನಿಯಮಿತವಾಗಿ ಅವರ ಕವನ, ಬರಹಗಳನ್ನು ಓದುವ ಅವಕಾಶ ನಮ್ಮದಾಗಲಿ ಎಂಬುದು ಹಾರೈಕೆ.

  • ಸಂಪಾದಕ

ದಿನಚರಿ

ನನ್ನೀ ದಿನಚರಿ ನಿನ್ನ ಒಲವ ಪರಿ

ಸಾಗುವೆ ಅದು ಕರೆದೊಯ್ದಲಿ

ಹಗಲೇ ಇರಲಿ ಇರುಳೇ ಬರಲಿ

ಇರುವೆನು ನಾ ಸನಿಹದಲಿ

ಬರೆಯುತ ಹೋದರೂ ಮುಗಿಯದು ಎಂದೂ

ದಣಿಯದು ಎಷ್ಟೇ ಬಣ್ಣಿಸಿಯೂ

ಆಡುವ ಮಾತೆಲ್ಲ ಕೇಳಿದರೂ

ತೀರದು ಆಡದ ಮಾತುಗಳು

ನೋಟವೇ ಸಾಕು ಮನ ತಿಳಿಯಲು

ನೋಡುತಲಿದ್ದರೂ ಮನ ತಣಿಯದು

ಅರಿಯುತಲಿದ್ದರೂ ಅನುದಿನವೂ

ಅರಿಯದೆ ಇರುವದು ಇನ್ನೆಷ್ಟೋ

ಜೀವದೊಡೆಯೇ ಜೀವವಾಗಿ

ಜೀವನವ ನಾವ್ ನಡೆಸಿಹೆವೂ

ಜಗಕೆ ನೀನೊಂದು ಜೀವವಾದರೂ

ಜಗವೇ ನೀನಾಗಿಹೆ ಈ ಜೀವಕೆ

ಮೂಗಿನ ನೇರಕೆ

ಮೂಗಿನ ನೇರಕೆ ಎಲ್ಲ ಮೂಗಿನ ನೇರಕೆ

ಮೂಗಿನ ನೇರಕೆ ನಮ್ಮ ಮೂಗಿನ ನೇರಕೆ

ವೃಥಾ ಚಿಂತೆ ಯಾತಕೆ ಮಂಥನ ವೇತಕೆ

ಮೂಗಿನ ನೇರಕೆ ಎಲ್ಲ ಮೂಗಿನ ನೇರಕೆ

ಯಾವುದು ಒಳಿತು ಯಾರಿಗೆ ಒಳಿತು

ಯಾರಲಿ ಯಾರು ಹೇಳ್ವವರು ಕುಳಿತು

ಸಾದರವಾವುದು ಹಾದರವಾವುದು

ಮೂಗಿನ ನೇರಕೆ ನಮ್ಮ ಮೂಗಿನ ನೇರಕೆ

ಸ್ವಾರ್ಥ ಯಾವುದು ತ್ಯಾಗ ಯಾವುದು

ಪುರಾಣವಾವುದು ಪುರಾತತ್ವವಾವುದು

ಆತ್ಮನದಾವುದು ಪರಮಾತ್ಮನದಾವುದು

ಮೂಗಿನ ನೇರಕೆ ಎಲ್ಲ ಮೂಗಿನ ನೇರಕೆ!

-ಪ್ರಸಾದ್ ನಂಜನಗೂಡು

One thought on “ಎರಡು ಕವನಗಳು

  1. ಮೊದಲನೆಯದಾಗಿ,
    ಪ್ರಸಾದ್ ನಂಜನಗೂಡ್ ಅವರಿಗೆ ಅನಿವಾಸಿಗೆ ಸ್ವಾಗತ. ಅವರ ಚೊಚ್ಚಲ ಕವನಗಳಿಂದ ಪದಾರ್ಪಣ ಮಾಡಿದ್ದಕ್ಕೆ, ಸುಸ್ವಾಗತ. ಹಂದರ ಪೂಜೆಯಾಗಿದೆ; ನಿಮ್ಮನ್ನು ಈ ಜಾಲಜಗುಲಿಗೆ ಮುಕ್ತ ಹಸ್ತದಿಂದ ಬರ ಮಾಡಿ ಕೊಂಡಿದ್ದೇವೆ. ಇದನ್ನು ಅಲಂಕರಿಸುವದು ನಿಮಗೆ ಬಿಟ್ಟಿದ್ದು!
    ಅತಿ ಸರಳ ಎನಿಸಿದರೂ ಎರಡೂ ಕವನಗಳಲ್ಲಿ ಕೀಳಿ ಬರುವ ಆಳದ ದ್ವನಿ ಶ್ರಾವಣೀಯ! ‘ಜಗಕೆ ನೀನೊಂದು ಜೀವವಾದರೂ/ ಜಗವೇ ನೀನಾಗಿಹೆ ಈ ಜೀವಕೆ’ ಎನ್ನುವಲ್ಲಿಯ ಸಮರ್ಪಣಾ ಭಾವ ಇಡೀ ಕವಿತೆಯ ಗುಟ್ಟಾಗಿದೆ. ಅದೇ ತರಹ ಇಂದಿನ cell centred, Instagram/ selfie preoccupied ಜಗತ್ತನ್ನು ತಿವಿಯುವ ವ್ಯಂಗೋಕ್ತಿಯೂ ಅಷ್ಟೇ ಪರಿಣಾಮಕಾರಿಯಾಗಿದೆ. ಪುನರಾವರ್ತನವಾಗುವ ಮೂಗಿನ ನೇರಕೆ ‘pit roasting reprise’ ಆಗಿದೆ!

    ಅವರನ್ನು ಪರಿಚಯಿಸಿದ ರಾಂ ಅವರಿಗೆ ಧನ್ಯವಾದಗಳು!

    ಶ್ರೀವತ್ಸ

    Liked by 1 person

Leave a Reply to shrivatsadesai Cancel reply

Your email address will not be published. Required fields are marked *