“ಅವನ ನಿಯಮ ಮೀರಿ ಇಲ್ಲೀ ಏನು ಸಾಗದು… ನಾವು ನೆನೆಸಿದ೦ತೆ ಬಾಳಲೇನು ನಡೆಯದು….”

“ಬಾನಿಗೊ೦ದು ಎಲ್ಲೆ ಎಲ್ಲಿದೇ? ನಿನ್ನಾಸೆಗೆಲ್ಲಿ ಕೊನೆಯಿದೇ?
ಏಕೆ ಕನಸು ಕಾಣುವೇ? ನಿಧಾನಿಸು.. ನಿಧಾನಿಸು..”

ಪ್ರೇಮದ ಕಾಣಿಕೆ ಚಿತ್ರದ ಹಾಡು ಎಲ್ಲರಿಗೂ ನೆನಪಿರಬಹುದು, ಚಿ. ಉದಯಶಂಕರ್ ಅವರ ಅದ್ಭುತ ರಚನೆಗೆ ಡಾ. ರಾಜಕುಮಾರ್ ಅವರು ಸುಂದರವಾಗಿ ಹಾಡಿದ್ದಾರೆ. ಪ್ರಸ್ತುತದಲ್ಲಿಯೂ ಈ ಹಾಡು ನಿಜಕ್ಕೂ ಅರ್ಥಪೂರ್ಣವಾಗಿದೆ, ಇಂದಿನ ಮನುಷ್ಯನ ಆಸೆ, ಆವಿಷ್ಕಾರಗಳಿಗೆ ಕೊನೆ ಎಲ್ಲಿದೆ ಎಂದು ಕೇಳುವ ಪರಿಸ್ಥಿತಿ ಬಂದಿದೆ. ಹೊಸ ಆವಿಷ್ಕಾರಗಳು ತಪ್ಪಲ್ಲ, ವೈಜ್ಞಾನಿಕ ಆವಿಷ್ಕಾರಗಳು ಜೀವನ ಮತ್ತು ಪ್ರಗತಿಯನ್ನು ನಡೆಸುತ್ತವೆ. ಆದಾಗಿಯೂ, ಅದರಲ್ಲಿ ಕೆಲವು ದುಷ್ಪರಿಣಾಮಗಳು ಇವೆ.

ವೈಜ್ಞಾನಿಕ ಆವಿಷ್ಕಾರಗಳ ಮತ್ತು ದುಷ್ಪರಿಣಾಮಗಳ ಬಗ್ಗೆ ವಿಚಾರ ಬಂದಾಗ, ಐನ್ಸ್ಟೀನ್ ಅವರ ದ್ರವ್ಯ – ಶಕ್ತಿ ಸಮೀಕರಣ (E =mc2) ಉದಾಹರಣೆ ನೋಡಣ. ಐನ್ಸ್ಟೀನ್ ಅವರು ಈ ಸಮೀಕರಣ ಜಗತ್ತಿಗೆ ತಂದಾಗ ಅವರು ಪರಮಾಣು ಶಕ್ತಿ ಮತ್ತು ಔಷಧ ಕ್ಷೇತ್ರದಲ್ಲಿ ತರಬಹುದಾದ ಪ್ರಗತಿಗಳ ಬಗ್ಗೆ ಒತ್ತು ಕೊಟ್ಟರು. ಇದರ ದುಷ್ಪರಿಣಾಮ ಜಗತ್ತು ಜಪಾನಿನ ಹಿರೋಷಿಮಾ ಮತ್ತು ನಾಗಾಸಾಕಿಯಲ್ಲಿ ಕಂಡಿತು. ಇನ್ನೊಂದು ಉದಾಹರಣೆ ಈಗ ನಮ್ಮ ಮುಂದಿದೆ, ಸಾಮಾಜಿಕ ಮಾಧ್ಯಮ (ಸೋಶಿಯಲ್ ಮೀಡಿಯಾ) ಪ್ರಭಲತೆ ಜಗತ್ತಿಗೆ ಬಹು ಉಪಯುಕ್ತ ವ್ಯವಸ್ಥೆ ಕಲ್ಪಿಸಿತು. ದೇಶ ವಿದೇಶದ ವಿಷಯಗಳು ನಿಮ್ಮ ಬೆರಳು ತುದಿಯಲ್ಲಿ ಲಭ್ಯ. ಹತ್ತಿರದ ಆಸ್ಪತ್ರೆ, ಶಾಲೆ, ಮತ್ತಿತರ ಸೇವೆಗಳು ಮತ್ತು ಜನರ ಅಭಿಪ್ರಾಯ ಸರಳವಾಗಿ ಲಭ್ಯವಾಯಿತು. ಆದರೆ ಇದೆ ಸಾಮಾಜಿಕ ಮಾಧ್ಯಮ ಇರದ, ಕಂಡಿರದ ಮಾನಸಿಕ ರೋಗಗಳನ್ನು ಪರಿಚಯಿಸಿತು. ಪ್ರತಿ ಕ್ಷಣಕ್ಕೂ ಕಣ್ಣ ಮುಂದೆ ಬರುವ ಸುದ್ದಿ ಸತ್ಯವೋ, ಅಸತ್ಯವೋ ತಿಳಿಯದೆ ಜನರು ಅತಂತ್ರ ಪರಿಸ್ಥಿತಿ ಮುಟ್ಟುತ್ತಾರೆ, ರಾಷ್ಟ್ರದ ರಾಜಕೀಯ ಸಾಮಾಜಿಕ ತಾಣದಿಂದ ನಡೆಯುತ್ತೆ. ನೆಟ್ಫ್ಲಿಸ್ (Netflix) ನಲ್ಲಿ ಸಾಕ್ಷ್ಯಚಿತ್ರ “The Social Dilemma” ಸಾಮಾಜಿಕ ಮಾಧ್ಯಮದಿಂದ ಆಗುವ ದುಷ್ಪರಿಣಾಮಗಳು ಮನಮುಟ್ಟುವಂತೆ ಚಿತ್ರೀಕರಿಣಿಸಿದ್ದಾರೆ.

ಡಿಸೆಂಬರ್ ಮುಗಿದು ಹೊಸ ವರ್ಷ ಬಂತೆಂದರೆ ಎಲ್ಲರೊ ಒಂದೆಡೆ ಕಲೆತು ಸಂತೋಷ ಪಡುತ್ತಾರೆ, ಹೊಸವರ್ಷದ ನಿರ್ಣಯ (Resolution) ಮಾಡುತ್ತಾರೆ. ನಮ್ಮ ಸಂಶೋಧಕರೂ ಹೊಸ ವರ್ಷದ ಜೊತೆ, ತಮ್ಮ ಸಂಶೋಧನಾ ವಿವರಗಳನ್ನು ಸಿದ್ದ ಪಡಿಸಿಕೊಳ್ಳತ್ತಿರಬಹುದು, ಇತ್ತೀಚಿನ ಪ್ರತಿ ದಶಕ, ವರ್ಷ ಹೊಸ ಹೊಸ ಸಂಶೋಧನೆಗಳ ಅಗರ ಆಗಿದೆ. ಇಂತಹುದೇ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳುವ ಉದ್ದೇಶದಿಂದ ಈ ಲೇಖನ ಬರೆಯುವ ವಿಚಾರ ಮಾಡಿದೆ. ಇದನ್ನು ನಾವು ಕೇಳಿದ ಪೌರಾಣಿಕ ಸಾಹಿತ್ಯದೊಂದಿಗೆ ಹೊಂದಿಸಿ ಹಂಚಿಕೊಳ್ಳುವ ಒಂದು ಪ್ರಯತ್ನ ಮಾಡುತ್ತಿದ್ದೇನೆ. ಈ ಒಂದು ಪ್ರಯತ್ನಕ್ಕೆ ಸ್ಫೂರ್ತಿ ಸದ್ಯೋಜಾತ ಭಟ್ಟ ಅವರು ಬರೆದ “ಕಾಲಯಾನ” ಪುಸ್ತಕ.

೧: ಸತ್ಯವ್ರತ ರಾಜ ಸಶರೀರದಿಂದ ದೇವಲೋಕ ಅಂದರೆ ಸ್ವರ್ಗಕ್ಕೆ ಹೋಗುವ ತನ್ನ ಇಚ್ಛೆ ವಸಿಷ್ಠ ಋಷಿಗಳೊಂದಿಗೆ ಹಂಚಿಕೊಳ್ಳುತ್ತಾನೆ. ಅವರು ಅದು ಸಾಧ್ಯವಾಗದ ವಿಚಾರ ಎಂದು ಸಹಾಯ ಮಾಡಲು ನಿರಾಕರಿಸುತ್ತಾರೆ. ಆಗ ಸತ್ಯವ್ರತ (ಶಾಪದಿಂದ ಚಾಂಡಾಲನಾಗಿ), ಮಹಾಋಷಿ ವಿಶ್ವಾಮಿತ್ರರಲ್ಲಿ ಈ ವಿಚಾರ ತಿಳಿಸಿ ಸಹಾಯ ಯಾಚಿಸುತ್ತಾನೆ. ವಿಶ್ವಾಮಿತ್ರರು ತಮ್ಮ ತಪೋಬಲದಿಂದ ಅವನನ್ನು ಸ್ವರ್ಗಕ್ಕೆ ಕಳುಹಿಸುತ್ತಾರೆ, ಆದರೆ ಇಂದ್ರ ಅವನನ್ನು ಒಳಗೆ ಸೇರಿಸದೆ ಕೆಳಕ್ಕೆ ನೂಕುತ್ತಾನೆ. ಕೆಳಗೆ ಬೀಳುವ ಸತ್ಯವ್ರತನನ್ನು ತಡೆದು ನಿಲ್ಲಿಸಿ ಅಲ್ಲಿ ಪ್ರತಿಸ್ವರ್ಗ ನಿರ್ಮಿಸುತ್ತಾರೆ. ಇದನ್ನೇ ತ್ರಿಶಂಕು ಸ್ವರ್ಗ ಎನ್ನುತ್ತಾರೆ.

ವೈಜ್ಞಾನಿಕ ಪ್ರಯೋಗಗಳಿಂದ ಈಗಾಗಲೇ ವಿಶ್ವಾಮಿತ್ರರು ನಿರ್ಮಿಸಿದಂತಹ ತಂಗುದಾಣ ಬಾಹ್ಯಾಕಾಶದಲ್ಲಿ ಬಂದಿವೆ. ೨೦೨೪ ಡಿಸೆಂಬರ್ ೩೦ಕ್ಕೆ ಭಾರತದ ಬಾಹ್ಯಾಕಾಶ ಸಂಸ್ಥೆ (ISRO) ಸ್ಪೇಸ್ ಡಾಕಿಂಗ್ (ಬಾಹ್ಯಾಕಾಶ ಬಂದರು ಅನ್ನಬಹುದೇ?) ಸಲುವಾಗಿ ಪ್ರಯೋಗ ಮಾಡಿದರು. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ – ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ (ISS) ಪ್ರಸ್ತುತ ಅಂತರಿಕ್ಷದಲ್ಲಿ ಕಾರ್ಯ ನಿರತವಾಗಿದೆ. ಇದರಿಂದ ಬಾಹ್ಯಾಕಾಶ ಪ್ರಯೋಗಗಳಿಗೆ ಅಲ್ಲದೆ ಔಷಧಿ ತಯಾರಿಕೆ, ಸೂರ್ಯನ ಕಿರಣದ ಸಹಾಯದಿಂದ ಸುಸ್ಥಿರತೆ (ಸಸ್ಟೇನ್ಬಿಲಿಟಿ) ಪ್ರಯೋಗ ಮುಂತಾದವುಗಳು ಸಾಧ್ಯವಾಗಿವೆ. ಇದು ಇನ್ನೂ ಆರಂಭಿಕ ಹಂತದಲ್ಲಿರುವ ಕಾರಣ ಇದರ ಉಪಯೋಗ, ದುಷ್ಪರಿಣಾಮ ಪೂರ್ಣ ಪ್ರಮಾಣದಲ್ಲಿ ಕಾಣುತ್ತಿಲ್ಲ. ಸದ್ಯದ ದುಷ್ಪರಿಣಾಮ ವಿಕಿರಣ, ಬಾಹ್ಯಾಕಾಶ ಕಸ, ಮಾನಸಿಕ ರೋಗಗಳು ಇತ್ಯಾದಿ.

೨: ಕಕುದ್ಮಿಗೆ ಮಹರಾಜನಿಗೆ ರೇವತಿ ಎಂಬ ಸುಂದರ ಮಗಳಿದ್ದಳು. ಅವಳಿಗೆ ಸರಿಯಾದ ವರನನ್ನು ಹುಡುಕಲು ಸ್ವಯಂವರ ಏರ್ಪಡಿಸಿದ, ಯಾವ ವರನು ಸರಿಯಾದ ಜೋಡಿ ಎನಿಸಲಿಲ್ಲ. ಕೊನೆಗೆ ಕಕುದ್ಮಿ ಮಗಳೊಂದಿಗೆ ಬ್ರಹ್ಮನನ್ನು ಕಾಣಲು ಬ್ರಹ್ಮಲೋಕಕ್ಕೆ ಪಯಣಿಸಿದನು. ಅಲ್ಲಿ ಬ್ರಹ್ಮ ದೇವರ ಸಭೆಯಲ್ಲಿ ಸಂಗೀತ ಕಾರ್ಯಕ್ರಮ ನಡೆದಿತ್ತು. ಸ್ವಲ್ಪ ಹೊತ್ತಿನನಂತರ ಬ್ರಹ್ಮ ದೇವರು ಕಕುದ್ಮಿ ಬಂದ ಕಾರಣ ಕೇಳಿದರು. ಆಗ ಕಕುದ್ಮಿ ತನ್ನ ಕಷ್ಟ ತಿಳಿಸಿ, ಮಗಳಿಗೆ ಸರಿಯಾದ ವರನನ್ನು ಆಯ್ಕೆ ಮಾಡಿಕೊಡಲು ಸಹಾಯ ಕೇಳುತ್ತಾನೆ. ಆಗ ಬ್ರಹ್ಮ ನಗುತ್ತ ಹೇಳುತ್ತಾನೆ, “ನೀನು ಇಲ್ಲಿಗೆ ಬಂದು ಕಳೆದ ಕ್ಷಣಗಳಲ್ಲಿ ಭೂಲೋಕದಲ್ಲಿ ೨-೩ ಯುಗಗಳು ಮುಗಿದು ಹೋಗಿವೆ, ಈಗ ನಿನ್ನ ಸಮಯದ ಯಾವ ರಾಜಕುಮಾರ ಬದುಕಿಲ್ಲ, ಅವರ ನಂತರದ ಸಂತತಿ ಅಲ್ಲಿ ಇರುವುದು…ಅವರ ಮರಿ ಮಕ್ಕಳು ಹುಟ್ಟಿದ್ದಾರೆ.”

ಸಮಯ ವಿಸ್ತರಣೆ, ಇದು ಐನ್ಸ್ಟೀನ್ ಅವರ ಸಾಪೇಕ್ಷತಾ ಸಿದ್ಧಾಂತ ಇಂದ ಬಂದ ಪರಿಣಾಮ.
ಸಮಯ ವಿಸ್ತರಣೆ ಬಗ್ಗೆ ನಾನು ಕೆಲವು ಲೇಖನಗಳನ್ನು ಓದುತ್ತಿದ್ದೆ, ಆಗ ದೊರಕಿದ ಒಂದು ಲೇಖನ “ಡುಂಡಿರಾಮ್ಸ್ ಲಿಮರಿಕ್ಸ್” (ಕವಿಗಳಾದ ಡುಂಡಿರಾಜ್ ಮತ್ತು ಅಣಕವಾಡುಗಳ ಸರದಾರ ಎನ್. ರಾಮನಾಥ್ ಜಂಟಿಯಾಗಿ ರಚಿಸಿದ ಚುಟುಕುಗಳ ಸಂಕಲನ) ಪುಸ್ತಕ ಪರಿಚಯ, ಡಾ. ಬಿ ಜನಾರ್ಧನ್ ಭಟ್ ಅವರಿಂದ. ಈ ಲೇಖನದ ಒಂದು ಭಾಗ ನನ್ನ ಲೇಖನಕ್ಕೆ ಉಪಯುಕ್ತ, ಆದುದರಿಂದ ಅದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
(vishvadhwani.com/2021/10/03/dumi-rams-limericks/)

“ಸಾಪೇಕ್ಷತಾ ಸಿದ್ಧಾಂತದ ಒಂದು ಪ್ರಮೇಯ, ಬೆಳಕಿನ ವೇಗಕ್ಕಿಂತ ವೇಗವಾಗಿ ಹೋದರೆ ಕಾಲವೂ ಸಾಪೇಕ್ಷವಾಗಿರುತ್ತದೆ ಎನ್ನುವುದು. ಉದಾಹರಣೆಗೆ ಯಾರಾದರೂ ಬೆಳಕಿನ ವೇಗಕ್ಕಿಂತ ವೇಗವಾಗಿ ಹೋಗುವ ರಾಕೆಟಿನಲ್ಲಿ ಬಾಹ್ಯಾಕಾಶಕ್ಕೆ ಹೋಗಿ ಹಲವು ವರ್ಷಗಳ ನಂತರ ಭೂಮಿಗೆ ಹಿಂದಿರುಗಿದರೆ ಅವರ ವಯಸ್ಸು ಹೆಚ್ಚೇನೂ ಬದಲಾಗಿರುವುದಿಲ್ಲ; ಆದರೆ ಇಲ್ಲಿನ ಅವರ ಓರಗೆಯವರು ಮುದುಕರಾಗಿರುತ್ತಾರೆ! ಇಂತಹ ಸಿದ್ಧಾಂತ ಬಂದಾಗ ಹುಟ್ಟಿಕೊಂಡ ಲಿಮರಿಕ್ ಒಂದು ಇನ್ನೂ ಜಗತ್ತಿನಾದ್ಯಂತ ಪ್ರಸಿದ್ಧವಾಗಿ ಚಲಾವಣೆಯಲ್ಲಿದೆ!

1923 ರಲ್ಲಿ ಲಂಡನಿನ ಪ್ರಸಿದ್ಧ ಹಾಸ್ಯ ಪತ್ರಿಕೆ – ವ್ಯಂಗ್ಯ ಚಿತ್ರಗಳಿಗೂ ಅದು ಪ್ರಸಿದ್ಧ – ‘ಪಂಚ್’ನಲ್ಲಿ ಅದು ಮೊದಲು ಅನಾಮಧೇಯ ಕವಿಯ ಹೆಸರಿನಲ್ಲಿ ಪ್ರಕಟವಾಯಿತು. ಅದು ಹೀಗಿದೆ:

There was a young lady named Bright
Whose speed was much faster than light.
She set out one day
In a relative way
And returned (on) the previous night.

ಸುಮಾರಾಗಿ ಇದರ ಭಾವಾರ್ಥ ಹೀಗೆ (ಅನುವಾದ ಡಾ. ಬಿ ಜನಾರ್ಧನ್ ಭಟ್ ):

ಬ್ರೈಟ್ ಎಂಬ ಹೆಸರಿನವಳು ಇದ್ದಳೊಬ್ಬಳು
ಬೆಳಕಿಗಿಂತ ವೇಗವಾಗಿ ಚಲಿಸುವವಳು
ಒಂದುದಿನ ಹಗಲು ಸಾ-
ಪೇಕ್ಷ ರೀತಿಯಲ್ಲಿ ಹೊರಟು
ಹಿಂದಿನ ದಿನ ರಾತ್ರಿಯೇ ಹಿಂದಿರುಗಿದಳು.

ಸಮಯ ವಿಸ್ತರಣೆ ಸಿದ್ದಾಂತದ ಆಧಾರದ ಮೇಲೆ ಅಮರತ್ವ ಅಥವಾ ಸಾವನ್ನು ಮುಂದೂಡುವ ಪ್ರಯತ್ನ ನಡೆಯುತ್ತಿದೆ. ಇದರ ಬಗ್ಗೆ ವಿಚಾರ ಮಾಡುವ ಮುನ್ನ ನಚಿಕೇತನ ಬಗ್ಗೆ ತಿಳಿಯೋಣ.

೩. ಉದ್ಧಾಲಕ ಗೌತಮ ಗೋತ್ರದ ಋಷಿ, ಅವನು ಲೋಕದ ಕಲ್ಯಾಣಕ್ಕೆ “ವಿಶ್ವಜಿತ್” ಎನ್ನುವ ಯಾಗ ಮಾಡುತ್ತಾನೆ. ಈ ಯಾಗಕ್ಕೆ ದಾನ ಪ್ರಧಾನ ಆದುದರಿಂದ ಅವನು ತನ್ನೆಲ್ಲ ಸಂಪತ್ತನ್ನು ದಾನ ಮಾಡುತ್ತಾನೆ. ಅವನ ಮಗ ನಚಿಕೇತ, ಸಣ್ಣ ಹುಡುಗ ಅವನು. ಉದ್ಧಾಲಕ ದಾನ ಮಾಡುತ್ತ ಕೊನೆಗೆ ತನ್ನಲ್ಲಿ ಇರುವ ಗೋವುಗಳನ್ನು ದಾನ ಮಾಡುತ್ತಾನೆ. ಗೋವುಗಳು ಬಡಕಲು ಇದ್ದು ದಾನಕ್ಕೆ ಯೋಗ್ಯ ಅಲ್ಲ ಎಂದು ಅವನ ಮಗ ನಚಿಕೇತ ಅಪ್ಪನಿಗೆ ತಿಳಿಸುತ್ತಾನೆ. ಆಗ ಅಪ್ಪ ಹೇಳುತ್ತಾನೆ, “ನನ್ನಲ್ಲಿ ಇರುವದು ಇದೆ ಗೋವುಗಳು, ಇದನ್ನು ಬಿಟ್ಟರೆ ನೀನು ಉಳಿದಿದ್ದೀಯ”… ಆಗ ನಚಿಕೇತ ತನ್ನನ್ನು ದಾನ ಮಾಡಲು ಕೇಳುತ್ತಾನೆ, ಅದನ್ನು ಕೇಳಿ ಅಪ್ಪ ಕೋಪದಲ್ಲಿ ನಿನ್ನನ್ನು ಯಮನಿಗೆ ದಾನ ಮಾಡುತ್ತೇನೆ ಎನ್ನುತ್ತಾನೆ.
ನಚಿಕೇತನಿಗೆ ಒಂದು ಅಶರೀರವಾಣಿ ಕೇಳಿಸುತ್ತದೆ, ಅದು ಅವನಿಗೆ ಯಮ ಲೋಕಕ್ಕೆ ಹೋಗಲು ತಿಳಿಸುತ್ತದೆ. ನಚಿಕೇತ ಅಲ್ಲಿಗೆ ಹೋದಾಗ ಯಮನು ಇರುವದಿಲ್ಲ, ಆದುದರಿಂದ ಅವನು ಅಲ್ಲಿಯೇ ಯಮನಿಗಾಗಿ ಕಾಯುತ್ತ ಕುಳಿತುಕೊಳ್ಳುತ್ತಾನೆ. ಮೂರು ದಿನದ ನಂತರ ಯಮ ಬಂದು ಅಲ್ಲಿ ಕಾಯುತ್ತ ಕುಳಿತ ಬಾಲಕನನ್ನು ನೋಡಿ ಅವನಿಗೆ ಮೂರು ವರಗಳನ್ನು ಕೊಡುತ್ತಾನೆ. ನಚಿಕೇತ ತನ್ನ ಮೂರನೇ ವರದಲ್ಲಿ “ಮನುಷ್ಯ ಮೃತ್ಯುವನ್ನು ಜಯಿಸುವ ಉಪಾಯ ತಿಳಿಸಿಕೊಡು” ಎನುತ್ತಾನೆ. ಎರಡು ವರಗಳಿಗೆ ಅಸ್ತು ಅಂದಿದ್ದ ಯಮ, ಮೂರನೇ ವರ ನೀನು ಕೇಳಿದಂತೆ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಿಸುತ್ತಾನೆ.

ಯಮನು ನಿರಾಕರಿಸಿದ ವರ “ಸಾವನ್ನು ಗೆಲ್ಲುವುದು” ಈಗ ಮನುಷ್ಯನ ಮಹತ್ತರ ಗುರಿ ಆಗಿದೆ. ವೈಜ್ಞಾನಿಕವಾಗಿ ದೀರ್ಘಾಯುಷ್ಯ ಪಡೆಯುವುದು, ಚಿರಂಜೀವಿ ಆಗುವ ಕನಸನ್ನು ಕಾಣುತ್ತಿದ್ದಾನೆ.

ಖ್ಯಾತ ಗಾಯಕ, ನೃತ್ಯಪಟು ಮೈಕಲ್ ಜ್ಯಾಕ್ಸನ್ ಹೇಳಿದ್ದು, “”I don’t want to die. I want to live forever”, ಅದಕ್ಕಾಗಿ ಅವನು ಬಹಳ ಪ್ರಯತ್ನಪಟ್ಟನು.

“ಹುಟ್ಟು ಸಾವು ಬದುಕಿನಲ್ಲಿ ಎರಡು ಕೊನೆಗಳು… ಬಯಸಿದಾಗ ಕಾಣದಿರುವ ಎರಡು ಮುಖಗಳು…”
ಹುಟ್ಟಿದ್ದು ಸಾಯಬೇಕು, there is nothing forever ಎಂಬುದು ಜಗದ ನಿಯಮ, ಇದನ್ನು ಅಳಿಸಲು ನೋಡಿದರೆ ನಿಸರ್ಗದ ತತ್ವ ಬದಲಿಸಿದಂತೆ. ಬಂದ ಕೆಲಸ ಮುಗಿದ ಮೇಲೆ ಸಂತೋಷದಿಂದ ಹೋಗಬೇಕು, ರಾಮ… ಕೃಷ್ಣರೇ ಇದಕ್ಕೆ ಹೊರತಲ್ಲ, ಭೀಷ್ಮ ಪೀತಾಮಹ ಇಚ್ಚಾ ಮರಣ ಇದಾಗ್ಯೂ ಅವರು ಸಿಕ್ಕ ವರದಿಂದ ಚಿರಂಜೀವಿ ಆಗಲು ಬಯಸದೆ ಸಂತೋಷದಿಂದ ಈ ಬದುಕಿನಿಂದ ನಿರ್ಗಮಿಸಿದರು. ಅಶ್ವಥಾಮ ಶಾಪದಿಂದ ಚಿರಂಜೀವಿ ಆಗಿರಬಹುದು ಆದರೆ ಪರಿಣಾಮ ಅತಿ ಭೀಕರ.

ಚೀನಾ ದಲ್ಲಿ ೨೧% ಕ್ಕೋ ಹೆಚ್ಚಿನ ಜನ ೬೦ ವರುಷ ಮೇಲ್ಪಟ್ಟವರು. ಇನ್ನು ಜಪಾನ್ ದೇಶದ ೩೦% ಕ್ಕೋ ಹೆಚ್ಚು ಜನ ವಯಸ್ಸಾದವರು. ಸಾವು ಗೆಲ್ಲುವ ಔಷದಿ ಸಿಕ್ಕರೆ (ಅಮೃತ) ಎಲ್ಲೆಲ್ಲಿಯೂ ಜನರೇ… ಅವರ ಅರೋಗ್ಯ, ಜೀವನ ಮುಂತಾದ ನೆರವು ಸರಕಾರದ ಜವಾಬ್ದಾರಿ… ಈ ಪರಿಸ್ಥಿತಿ ಬಂದರೆ ಸರಕಾರ ಇರಬಹುದೇ? ಅವರಿಗೆ ಜೀವಿಸಲು ನೈಸರ್ಗಿಕ ಸಂಪನ್ಮೂಲಗಳು ಉಳಿಯುವದೇ? ಭೂಮಿ ಬಿಟ್ಟು, ಮಂಗಳ… ನಂತರ ಚಂದ್ರ… ನಂತರ ಇನ್ನೊಂದು ಗ್ರಹ ಹುಡುಕುತ್ತ ಮನೆ ಖರೀದಿಸುವ ಪ್ರಮೇಯ ಬರಬಹುದು. ಈಗ ಸಾಮಾನ್ಯವಾಗಿ ಕೇಳಿಬರುವದು “ಸತ್ತ ಮೇಲೆ ಹಣ ತೆಗೆದುಕೊಂಡು ಹೋಗುತ್ತಾರೇನು?”… ಇನ್ನು ಅಮರತ್ವ ಸಿಕ್ಕರೆ ನಮಗೆ ಕೇಳಿ ಬರಬಹುದಾದ ವಾಕ್ಯ “ಹಣ ಇದ್ದರೆ ಸಾಕು, ಸಾವನ್ನು ದಾಟಿಕೊಂಡು ಹೋಗುತ್ತಾರೆ”.

“Don’t Die: The Man Who Wants to Live Forever” ಇತ್ತೀಚಿಗೆ ನೆಟ್ಫ್ಲಿಸ್ ನಲ್ಲಿ ಬಂದ ಸಾಕ್ಷ್ಯಚಿತ್ರ. ಕಟ್ಟುನಿಟ್ಟಾದ ಆಹಾರ, ಜೀವನಶೈಲಿ ಮತ್ತು ವೈದ್ಯಕೀಯ ಪ್ರಯೋಗಗಳ ಸಹಾಯದಿಂದ ಬ್ರಯಾನ್ ಜಾನ್ಸನ್ ತನ್ನ ವಯಸ್ಸನ್ನು ಕಡಿಮೆ ಮಾಡಿಕೊಂಡು, ಹೆಚ್ಚು ವರ್ಷ… ಅಥವಾ ಸಾವಿಲ್ಲದ ಸರದಾರ ಆಗುವ ಪ್ರಯತ್ನದಲ್ಲಿ ಇದ್ದಾನೆ.

“ನಮ್ಮ ಸಂಸಾರ, ಆನಂದ ಸಾಗರ… ಪ್ರೀತಿ ಎಂಬ ದೈವವೇ ನಮಗಾಧಾರ” ಎನ್ನುವ ಹಾಡು, “ನಮ್ಮ ಸಂಸಾರ, ಬೃಹತ್ ಸಾಗರ… ಸಾವಿಲ್ಲದ ಔಷಧಿಯೇ ನಮಗಾಧಾರ” ಎಂದು ಬದಲಾಗುತ್ತದೆ.

“ಜಗವೇ ಒಂದು ರಣರಂಗ, ಧೈರ್ಯ ಇರಲಿ ನಿನ್ನ ಸಂಗ” ಹಾಡು, “”ಜಗವೇ ಒಂದು ರಣರಂಗ, ಸಾವೇ ಇರಲಿ ನಿನ್ನ ಸಂಗ” ಎನ್ನಬೇಕಾಗಬಹುದು…ಸಾವಿಲ್ಲದೆ ಜನ ಸಣ್ಣ ಸಣ್ಣ ಅವಶ್ಯಕತೆಗೂ ಹೋರಾಡಿ, ನೋವಿಗಿಂತ ಸಾವೇ ಖುಷಿ ಎನ್ನುವ ಪರಿಸ್ಥಿತಿ ತಲುಪುತ್ತಾರೆ.

ಆವಿಷ್ಕಾರದ ಅವಶ್ಯಕತೆ ಇದೆ, ಆದರೆ ಫಲಿತಾಂಶ/ ಪರಿಣಾಮ ವಿಚಾರ ಇರದೇ ಮಾಡಿದ ಆವಿಷ್ಕಾರ ತಿರುಗುಬಾಣ ಆಗಬಹುದು.

3 thoughts on ““ಅವನ ನಿಯಮ ಮೀರಿ ಇಲ್ಲೀ ಏನು ಸಾಗದು… ನಾವು ನೆನೆಸಿದ೦ತೆ ಬಾಳಲೇನು ನಡೆಯದು….”

  1. ವೈಜ್ಞಾನಿಕ ವಿಷಯಗಳನ್ನು ಚರ್ಚಿಸುತ್ತ ಪ್ರಮೋದ್ ಪುರಾತನ ಕಾಲದಿಂದಲೂ ಮನುಕುಲ ಹಾತೊರೆಯುತ್ತಿರುವ ಅಮರತ್ವವನ್ನು ಪಡೆಯಲು ನಡೆಸುತ್ತಿರುವ ಪ್ರಯೋಗಗಳನ್ನು ಅವಲೋಕಿಸಿದ್ದಾರೆ. ಈ ದಿಸೆಯಲ್ಲಾಗುತ್ತಿರುವ ಸಂಶೋಧನೆಗಳಿಗೆ ಮಾನವನ ಜೀವನದ ಗುಣತ್ವವನ್ನು ವರ್ಧಿಸುವ ಸಾಮರ್ಥ್ಯವಿರಬಹುದು. ಆದರೆ, ವಿಶ್ವವನ್ನು ಧ್ವಂಸಗೊಳಿಸುವ ಸಾಮರ್ಥ್ಯ ಆಟಮ್ ಬಾಂಬಿನಂತೆ ಹೊಂದಿದೆ ಎಂಬುದು ಈ ಶತಮಾನದ ವಿದ್ಯಮಾನಗಳಿಂದ ವಿದಿತ. ಕೇವಲ ಆಯುಷ್ಯ ವೃದ್ಧಿಯೇ ಗುರಿಯಾಗಿರಬೇಕೇ ಎಂಬ ಪ್ರಶ್ನೆಯನ್ನೂ ಪ್ರಮೋದ್ ಕೇಳುತ್ತಾರೆ.

    ಲೇಖನದೊಂದಿಗೆ ಅವರು ಉಲ್ಲೇಖಿಸಿರುವ ಜಾಲತಾಣ, ಪುಸ್ತಕಗಳು ಓದುಗರನ್ನು ಇನ್ನಷ್ಟು ಓದಿನೆಡೆಗೆ ದಾರಿ ತೋರಿದೆ.

    -ರಾಂ

    Like

  2. ಪ್ರಮೋದ್ ಅವರ ಈ ವಾರದ ಲೇಖನ ವಿಚಾರಕ್ಕೆ ಪ್ರಚೋದಿಸಿತು. ಇದು ವಿಜ್ಞಾನ ಯುಗ. ಪ್ರತಿಯೊಂದು ವಿಷಯಕ್ಕೂ scientific evidence ಹುಡುಕುವ ಕಾಲ; ವಾಟ್ಸಪ್ಪಿನಲ್ಲಂತೂ pseudoscientific fake news ತುಂಬಿದ ಕಾಲ. ನೀವು ಐನ್ಸ್ಟಿನ್ ಉಲ್ಲೇಖ ಮಾಡಿದಿರಿ. ವಿಜ್ಞಾನ ಅಂದ ಮೇಲೆ ಆತ ಬರಲೇ ಬೇಕು. ಪರಮಾಣು ಬಾಂಬು ಪ್ರಯೋಗ ಶೈತಾನಿ ಕೃತ್ಯ ಆದರೆ ಅದಕ್ಕೆ ಅವನನ್ನು ದೂಷಣೆ ಮಾಡಲಾಗುವದಿಲ್ಲ. ಅವನು ಹೀಗೆ ಹೇಳಿದನೆಂದು ಉಲ್ಲೇಖಿಸುತ್ತಲೇ ಬಂದಿದ್ದೇವೆ: ರಿಲಿಜನ್ ( ಇಲ್ಲಿ ಧರ್ಮ ಸರಿಯಾಗೋದಿಲ್ಲ) ಇಲ್ಲದ ವಿಜ್ಞಾನ ಹೆಳವು; ಅದರಲ್ಲಿ( ರಿಲಿಜನ್) ವಿಜ್ಞಾನ ಇಲ್ಲದಿದ್ದರೆ ಅದು ಕುರುಡು, ಅಂತ. ಆತ ವೈಯಕ್ತಿಕ ದೇವರನ್ನು (ಪೆರ್ಸನಲ್
    ಗಾಡ್)ಒಪ್ಪಲಿಲ್ಲ. ಜಗತ್ತಿನ ನಿಯಮಗಳ ಹಿಂದೆ ಯಾವುದೋ ಅಗೋಚರ ಶಕ್ತಿಯನ್ನು ಒಪ್ಪಿಕೊಂಡರೂ ತಾನು ನಾಸ್ತಿಕನಲ್ಲ ಆದರೆ agnostic, ಅಂದನು. ಚಾರ್ಲ್ ಸ್ ಡಾರ್ವಿನ್ ಸಹ ತನ್ನನ್ನು ಹಾಗೇ ಕರೆದುಕೊಂಡ. ಉಪನಿಷತ್ಕಾಲದಿಂದ ಮಾನವ ಅಮರತ್ವದ ಕಡೆಗೆ ಒಯ್ಯಿರೆಂದು ಬೇಡುತ್ತಿರುವ. ಆದರೆ ಆವಾಗ ವಿಜ್ಞಾನವನ್ನು ಗುರುತಿಸಲಿರಲಿಲ್ಲ. ನ್ಯೂಟನ್ ತನ್ನ ಪುಸ್ತಕವನ್ನು ಸಹ “The Mathematical Principles of Natural Philosophy” ಎಂದು ಕರೆದ. ಹೀಗಾಗಿ ವಿಜ್ಞಾನದ ಬುನಾದಿಯಮೇಲೆಯೇ ಜಗತ್ತು ನಿಂತಿದೆ. ಅದಕ್ಕೆ ಯೌವನ ಹುಡುಕುವ ತವಕ. ನನಗೆ ನಾನು ಅಮರನಾಗಿ ಬದುಕುವ ಹಂಬಲವಿಲ್ಲ.
    ಒಳ್ಳೆಯವನಾಗಿ . ‘ಅನಾಯಾಸೇನ ಮರಣಂ’ ಸಾಕು!
    ನೀವು ಉದ್ಧರಿಸಿದ ಯಾವುದೂ ನೆಟ್ ಫ್ಲಿಕ್ಸ್ ಕಾರ್ಯಕ್ರಮ ನಾನು ನೋಡಿಲ್ಲ. ಆದರೆ ಈ ಚರ್ಚೆ ಎಬ್ಬಿಸಿದ್ದಕ್ಕೆ ಅಭಿನಂದನೆಗಳು. ಒಳ್ಳೆಯ ಗೀತಗಳನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು. ಮತ್ತು ಡುಂಡಿ-ರಾಮ್ಸ್ ಲಿಂಕ್ ಕೊಟ್ಟಿದ್ದಕ್ಕೂ. ಜನಾರ್ಧನ ಅವರ ಮುನ್ನುಡಿ ಚೆನ್ನಾಗಿದೆ. ಲಿಮರಿಕ್ಸ್ ಓದಿ ನಕ್ಕು ಸಂತೋಷಪಟ್ಟೆ. ‘He who laughs lasts’ ಅಂದಮೇಲೆ ಮರ್ತ್ಯವನ್ನು ಸ್ವಲ್ಪವಾದರೂ ಮುಂದೂಡಿದಹಂಗಾಯಿತು, ಕ್ಯೂದಲ್ಲಿ (last) ಪಂಚಪದಿಯಲ್ಲಿದ್ದಂತೆ ‘ಪಂಚಪಾಳಿ’ಯವನಾಗದಿದ್ದರೂ! (ಕೊನೆಯವನಾಗದಿದ್ದರೂ!).
    ಲಿಮರಿಕ್ಸೇ ನಯ ಸುಪಥಾರಾಯೇ!
    ಶ್ರೀವತ್ಸ ದೇಸಾಯಿ.

    Like

  3. ಪ್ರಮೋದ್ ಅವರ ಈ ವಾರದ ಲೇಖನ ಹುಟ್ಟು ಬದುಕು ಸಾವು ಎಂಬ ಸೂಕ್ಷ್ಮ ವಿಚಾರಗಳನ್ನು ಒಂದು ಚಿತ್ರಗೀತೆಯ ಸರಳ ಉಲ್ಲೇಖದಿಂದ ಹಿಡಿದು ಮನುಷ್ಯನ ಆಸೆ ಎಂಬ ಕುದುರೆ ಅವನನ್ನು ಯಾವ ಯಾವ ಮೂಲೆಗೆ ಕರೆದೊಯ್ದಿದೆ ಎಂಬ ವಿಚಾರಗಳನ್ನು ಹಳೆ ಪುರಾಣ ಕಥೆಗಳೊಂದಿಗೆ ಹೋಲಿಸಿ ವಿಶ್ಲೇಷಿಸಿದ್ದಾರೆ. ಸಾವಿರಾರು ವರ್ಷಗಳಾದರೂ ಮನುಷ್ಯ ಸ್ವಭಾವ, ನಿರೀಕ್ಷೆ, ಅಮರತ್ವಕ್ಕೆ ಹಾತೊರೆಯುವ ಹಂಬಲ ಹಾಗೆ ಉಳಿದಿದೆ. ಅಂದಿಗೂ ಇಂದಿಗೂ ವ್ಯತಾಸವೆಂದರೆ ಮನುಷ್ಯ ಕೈಗೊಂಡ ಆವಿಷ್ಕಾರಗಳು ಮತ್ತು ಅನ್ವೇಷಣೆಗಳು. ಅದರ ಒಳ್ಳೆ ಮತ್ತು ಕೆಟ್ಟ ಪರಿಣಾಮಗಳನ್ನು ಸೂಕ್ತ ಉದಾಹರಣೆಯೊಂದಿಗೆ ಪ್ರಮೋದ್ ಚರ್ಚಿಸಿದ್ದಾರೆ. ಹಣ ತರುವ ಅನುಕೂಲಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಕೋವಿಡ್ ಪಿಡುಗುನಲ್ಲಿ ಹಣ ಬಲವೂ ವ್ಯರ್ಥವಾದ ಸಂಗತಿಗಳಿದೆಯಲ್ಲವೇ. ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ ಇವೆರಡರ ಮುಖಗಳು ಬಯಸದೆ ಒದಗಿ ಬರುವಂತಹುದು. ಆದರೆ ಒದಗಿ ಬಂದಿರುವ ಈ ಬದುಕನ್ನು ಸರಿಯಾಗಿ ಜೀವಿಸದೆ “ಅಲ್ಲಿ ಇದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ” ಎನ್ನುವ ಭ್ರಮೆಯಲ್ಲಿ, ಪರಲೋಕದ ನಿರೀಕ್ಷೆಯಲ್ಲಿ ಬದುಕನ್ನು ನಿರ್ಲಕ್ಷಿಸುವುದು ಅರ್ಥಹೀನ. ಅಂದಹಾಗೆ ಅಲ್ಲಮ ಪ್ರಭುಗಳು ಹೇಳಿದ ಹಾಗೆ “ಕೊಟ್ಟ ಕುದುರೆಯನ್ನು ಏರಲಾರದವನು ಧೀರನೂ ಅಲ್ಲ ಶೂರನು ಅಲ್ಲ”. ಇಲ್ಲಿ ಇರುವ ಅವಕಾಶವನ್ನು, ಬದುಕನ್ನು ನಿಗದಿತವಾಗಿರುವ ಸಮಯದಲ್ಲಿ ಸಮತೆ, ಸೌಹಾರ್ದತೆಯಿಂದ ಜೀವಿಸಿ, ಬದುಕಿನ ಪ್ರೀತಿಯನ್ನು ಅನುಭವಿಸಿ ಜೊತೆಗೆ ಹಂಚಿಕೊಂಡು ಸುಖ ಶಾಂತಿಯಲ್ಲಿ ಸಮಾಜಕ್ಕೆ ಅಲ್ಪ ಸ್ವಲ್ಪ ಒಳ್ಳೆಯದನ್ನು ಬಿಟ್ಟು ಹೋಗುವುದು ಎಲ್ಲರ ಗುರಿಯಾಗಬೇಕು. ಮನುಷ್ಯ ತರುವ ಆವಿಷ್ಕಾರಕ್ಕೆ ನೈತಿಕ ಹೊಣೆಗಾರಿಕೆ ಎಂಬ ಕಡಿವಾಣವಿರಬೇಕು. ಇಲ್ಲದಿದ್ದಲ್ಲಿ ಬದುಕೆಂಬುದು ಕಾಡುಕುದುರೆಯಾಗಬಹುದು.
    ಉತ್ತಮ ವೈಚಾರಿಕ ಲೇಖನ, ಅಭಿನಂದನೆಗಳು ಪ್ರಮೋದ್.

    Like

Leave a Reply to prasad092014 Cancel reply

Your email address will not be published. Required fields are marked *