
ಮುಹಮ್ಮದ್ ಹನೀಫ್ ಮೂಲತಹ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರಿನವರು. ದಕ್ಷಿಣ ಕನ್ನಡ ಹಿರಿಯ ಪ್ರಾರ್ಥಮಿಕ ಶಾಲೆ ಸುಜೀರು ಇಲ್ಲಿ ಪ್ರಾರ್ಥಮಿಕ ವಿದ್ಯಾಭ್ಯಾಸ ಮುಗಿಸಿ, ನೆರೆಯ ಊರಾದ ತುಂಬೆಯಲ್ಲಿ ಮೊಯಿದ್ದೀನ್ ಎಜುಕೇಷನಲ್ ಟ್ರಸ್ಟ್ ಇಲ್ಲಿನ ತುಂಬೆ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿ ಅಲ್ಲಿಯೇ ಪದವಿ ಪೂರ್ವ ತರಗತಿಗಳನ್ನು ಪೂರ್ತಿ ಗೊಳಿಸಿದ್ದು, ಉನ್ನತ ವ್ಯಾಸಂಗ ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಪುತ್ತೂರು, ಮಂಗಳೂರಲ್ಲಿ ಇಂಜಿನಿಯರಿಂಗ್ ಪದವಿ ಪಡೆದುಕೊಂಡು, ನಂತರ ಬೆಂಗಳೂರಿನ ಪ್ರತಿಷ್ಠಿತ ವೈಮಾನಿಕ ಹಾಗೂ ರೈಲ್ವೇ ಕಂಪೆನಿಗಳಲ್ಲಿ ಸಾಫ್ಟ್ವೇರ್, ಸಿಸ್ಟಮ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿ, ಇದೀಗ ಇಂಗ್ಲೆಡಿನಲ್ಲಿ ವಿಮಾನದ ಸಿಸ್ಟಮ್ ವಿಭಾಗದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಕವಿತೆ ಬರೆಯುವುದು ಅವರ ಹವ್ಯಾಸ. ಈ ವಾರದ ಅನಿವಾಸಿಯಲ್ಲಿ ಅವರ ಎರಡು ಕವನಗಳಿವೆ. ದಯವಿಟ್ಟು ಓದಿ ತಮ್ಮ ಅಭಿಪ್ರಾಯವನ್ನು ತಿಳಿಸಿ.
——- ಇಂತಿ ಸಂಪಾದಕ
1) ಕಣ್ಣ ಮುಚ್ಚಾಲೆ
ಹಲವನ್ನು ಹಾಗೇ ನಂಬುವಂತೆ ಇಲ್ಲ
ಕೆಲವನ್ನೋ ಸುಮ್ನೆ ಬಿಡುವಂತೆಯೂ ಇಲ್ಲ
ಕಣ್ಣಿಗೆ ಕಂಡಂತಹದ್ದು ಸರಿಯೋ ಎಲ್ಲ
ಅಥವಾ ಮನ ಗ್ರಹಿಸಿದ್ದೋ ದೇವನೇ ಬಲ್ಲ
ಮಿಥ್ಯವು ಎಲ್ಲೆಲ್ಲೂ ಕುಣಿದು ನಲಿಯುತ್ತಿದೆ
ಸತ್ಯವೋ ಬರೀ ಇಣುಕಿ ನೋಡುತ್ತಿದೆ
ಸತ್ಯಾಸತ್ಯತೆ ಹೊರ ಬಂದೇ ಬರುತ್ತದೆ
ಈನಡುವೆ ನಡೆಯಬಾರದ್ದೆಲ್ಲ ನಡೆದಿರುತ್ತದೆ
ನ್ಯಾಯವು ಜೋರಾಗಿ ಕಿರುಚಾಡುವುದು
ಆದರೆ ಅನ್ಯಾಯದ ಮೌನವೇ ಕೇಳಿಸುವುದು
ನ್ಯಾಯವು ಎಂದೂ ತರ್ಕಿಸಿ ಸೋಲದು
ನ್ಯಾಯೀಕರಿಸಲೋ ದಾಖಲೆಗಳೇ ಸಾಲದು
ಅದೊಂದು ದಿನಕ್ಕೆ ಜನ ಕಾಯಬೇಕಿದೆ
ಅಂದು ಜಗದೊಡೆಯನಿಗೆ ಜಗ ಶರಣಾಗಲಿದೆ
ಕಣ್ಣ ಮುಚ್ಚಾಲೆ ಆಟವೆಲ್ಲವೂ ಮುಗಿಯಲಿದೆ
ಅಡಗಿರುವ ಸತ್ಯವೆಲ್ಲವೂ ಬಯಲಾಗಲಿದೆ
——————————————————————————————————————–
2 ಕತೆ ಮುಗಿದಾಗ
ದಯಾಳುವವನು
ದಯೆಯ ತೋರಿದನು
ನಾವಂತು ಹಗೆತನವ
ಅಗೆಯ ತೊಡೆಗಿದೆವುಮಣ್ಣ ಮೇಲಿರುವಾಗ
ನಮ್ಮ ಸರದಿಗೆ ಕಾದಿದ್ದೆವು
ಮಣ್ಣು ನಮ್ಮ ಮೇಲಾದಾಗ
ಸಮಯವೇ ಮುಗಿದಿತ್ತು
ಜಗದೊಡೆಯನವನು
ಕೇಳದೆಯೇ ಕೊಟ್ಟನು
ನಮ್ಮಲ್ಲಿ ಕೇಳಬಂದವನು
ಕೇಳಿ ಕೇಳಿ ಕೆಟ್ಟನು
ಮಣ್ಣ ಮೇಲಿರುವಾಗ
ನಮಗೆ ಅದಷ್ಟೂ ಬೇಕೆಂದೆವು
ಮಣ್ಣು ನಮ್ಮ ಮೇಲಾದಾಗ
ಎಲ್ಲವೂ ಮುಗಿದಿತ್ತು
ಸೃಷ್ಟಿಕರ್ತನವನು
ದ್ರಷ್ಟಾಂತವ ತೋರಿದನು
ಸಾಷ್ಟಾಂಗವೆರಗಲು
ನೆಪವ ಹೂಡಿದೆವು
ಮಣ್ಣ ಮೇಲಿರುವಾಗ
ನಮ್ಮದೇ ಕತೆ ಕಟ್ಟಿದೆವುಣ್ಣು ನಮ್ಮ ಮೇಲಾದಾಗ
ಕತೆಯೇ ಮುಗಿದಿತ್ತು
— ಹನೀಫ್
ಹನೀಫ್ ಅವರ ಎರಡೂ ಕವನಗಳು ಮತ್ತೆ ಮತ್ತೆ ಓದಲು ಹಚ್ಚಿಸುತ್ತವೆ. ಓದಿದಂತೆ ಅರ್ಥಗಳನ್ನು ಬಿಚ್ಚುತ್ತಾ ಹೋಗುತ್ತವೆ. ಎರಡರಲ್ಲೂ ‘ಆತ’ ಬರುತ್ತಾನೆ; ಸೃಷ್ಟಿಕರ್ತನೇ ಅನ್ನಿರಿ, ದಯಾಳು ಅನ್ನಿರಿ ದೇವರು ಅನ್ನಿರಿ, ಜಗದೊಡೆಯ ಅನ್ನಿರಿ. ನಾವು ಕಣ್ಣುಮುಚ್ಚಾಲೆ ಆಡುತ್ತಿರುತ್ತೇವೆ, ‘ಆ ದಿನ ‘ಬರುವವರೆಗೆ. ‘ಅಲ್ಲಿಯವರೆಗೆ ‘ನ್ಯಾಯ ಎಷ್ಟು ಕಿರಚಿದರೂ ಅನ್ಯಾಯದ ಮೌನವೇ ಕೇಳಿಸುತ್ತದೆ’! ಮೊದಲನೆಯದಲ್ಲಿ ಇಡೀ ಜಗದ ಅಂತ್ಯವಿದೆ. ಅಂದು ಸತ್ಯದ ಅನಾವರಣವಂತೆ.. ಅದನ್ನೇ ಬೇರೆ ಬೇರೆ ಧರ್ಮಗಳು Armageddon, day of reckoning ಅಥವಾ Apocalypse ಅಂತ ಕರೆದಿವೆ. ಕೊನೆಗೆ ‘ಸತ್ಯಮೇವ ಜಯತೆ’ ಅನ್ನುವ ಆಶಾಭಾವ.
ಎರಡನೆಯ ಕವಿತೆಯಲ್ಲಿಯೂ ಅಂತ್ಯವಿದೆ . ಅದು ಮಾನವನ ಅಂತ್ಯ ಮತ್ತು ಅಲ್ಲಿಯ ವರೆಗೆ ನಾವು ದಯೆಯನ್ನು ಗುರುತಿಸದ ಕುರುಡರು. ಆಮಿಷ, ಆಕಾಂಕ್ಷೆಯ ಬೆನ್ನು ಹತ್ತಿ ಹೊರಟು ನಾಲ್ಕು ದಿನಗಳ ಜೀವನದಲ್ಲಿ ಮೌಲ್ಯಗಳಿಗೆ ಬೆನ್ನು ತೋರಿಸಿ ಆಯುಷ್ಯ ಕಳೆಯುತ್ತಿದ್ದೇವೆ ಅಂತ ಎಚ್ಚರಿಕೆ ಕೊಡುತ್ತಿದ್ದಾರೆ. ಅವರು ಸರಳ ಭಾಷೆಯಲ್ಲಿ ಗಹನ ವಿಚಾರಗಳನ್ನು ಅಭಿವ್ಯಕ್ತಗೊಳಿಸುವ ಶಕ್ತಿಯಿದೆ. ಅನಿವಾಸಿಗೆ ಬರೆಯುತ್ತಿರಲಿ ಎಂದು ಆಶಿಸುವೆ. — ಶ್ರೀವತ್ಸ
LikeLike