ನವೆಂಬರ್ ೨೪, ೨೦೨೪ 'ಅನಿವಾಸಿ'ಯ ಇತಿಹಾಸದಲ್ಲೊಂದು ಅವಸ್ಮರಣೀಯ ದಿನ. ಈಗ ಹತ್ತು ವರುಷಗಳ ಹಿಂದೆ, ನಾಲ್ಕೈದು ಆಸಕ್ತ ಮನಗಳು ಒಂದು ಕಡೆ ಸೇರಿ, ಕಾಫಿ ಹೀರುತ್ತಾ, ಹೊರ ದೇಶದಲ್ಲಿ ಕನ್ನಡ ಸಾಹಿತ್ಯಾಸಕ್ತಿಯನ್ನು ಬೆಳೆಸುವ ಮತ್ತು ಅನಿರಂತವಾಗಿ ಮುಂದುವರೆಸುವ ಚಿಂತನೆಯನ್ನು ಮಾಡಿ, ಬರೆಯುವವರಿಗೊಂದು ಫಲವತ್ತಾದ ಜಾಲುತಾಣವನ್ನು ಮಂಡಿಸಿದ್ದರು. ಅದರ ಫಲವಾಗಿ ಹುಟ್ಟಿದ್ದೇ ಅನಿವಾಸಿ - ಯು ಕೆ ಕನ್ನಡಿಗರ ತಂಗುದಾಣ. ಈ ಹತ್ತು ವರುಷಗಳಲ್ಲಿ, ಸಾಕಷ್ಟು ಆಸಕ್ತರು ತಮ್ಮ ಬರವಣಿಗೆಗಳನ್ನು ಈ ಬ್ಲಾಗ್ ನಲ್ಲಿ ಬರೆದು ಜಾಲು ತಾಣವನ್ನು ಸಿರಿವಂತವಾಗಿ ಇರಿಸಿದ್ದಾರೆ ಹಾಗೆಯೆ ತಮ್ಮ ಬರವಣಿಗೆಯನ್ನೂ ಸಹ ಸುಧಾರಿಸಿಕೊಂಡಿದ್ದಾರೆ. ಅನಿವಾಸಿಯ ದಶಮಾನೋತ್ಸವವನ್ನು ಆಚರಿಸಲು ಉತ್ಸುಕರಾದ ಸದಸ್ಯರು ಕಳೆದ ರವಿವಾರ, ಅಷ್ಟೇ ಉತ್ಸುಕರಾದ ಸದಸ್ಯರೊಬ್ಬರ ಮನೆಯಲ್ಲಿ ಸೇರಿ, ಸಂಭ್ರಮಗಳೊಂದಿಗೆ ಆಚರಣೆಯನ್ನು ವಿಜೃಂಭಿಸಿದರು. ಕೆಲವರಿಗೆ ವಯಕ್ತಿಕ ಕಾರಣಗಳಿಂದ ಈ ಸಂತೋಸದಲ್ಲಿ ಭಾಗಿಯಾಗಲು ಆಗಲಿಲ್ಲ. ಡಾ. ಶ್ರೀವತ್ಸ ದೇಸಾಯಿಯವರು ಈ ಕಾರ್ಯಕ್ರಮದಲ್ಲಿ ನಡೆದ ವಿಚಾರಗಳನ್ನು ತಮ್ಮ ಲೇಖನದ ಮೂಲಕ ಪ್ರಸ್ತುತ ಪಡಿಸಿದ್ದಾರೆ. ಹಾಗೆಯೇ ಡಾ. ಗುಡೂರ್ ಅವರು ಲೇಖನಕೆ ತಕ್ಕಂತ ಚಿತ್ರವನ್ನು ಅರ್ಪಿಸಿದ್ದಾರೆ. ಕೊನೆಯಲ್ಲಿ ಕವಿಗೋಷ್ಠಿಯಲ್ಲಿ ಓದಿದ ಕವನಗಳೆಲ್ಲವನ್ನೂ ಕೊಟ್ಟಿದೆ. ದಯವಿಟ್ಟು ಓದಿ, ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ
----- ಇಂತಿ ಸಂಪಾದಕ
ಅದೊಂದು ಮಹತ್ವದ ಮೈಲಿಗಲ್ಲು. ಆ ನವೆಂಬರ್ ೨೪, ೨೦೨೪ರ ವಾರಾಂತ್ಯದಲ್ಲಿ ಹವಾಮಾನ ಬಿಗಡಾಯಿಸುವ ಚಂಡಮಾರುತ ಬರುವ ಎಚ್ಚರಿಕೆಯಿತ್ತು! ಅದಕ್ಕೆ ಬರ್ಟ ಎನ್ನುವ ಅಂದದ ನಾಮಧೇಯವನ್ನೂ ಕೊಟ್ಟಿದ್ದರು. ಶೆಫಿಲ್ಡ್ ದಿಂದ, ದೂರದ ‘ಟಿ ಸೈಡ್ ‘ದಿಂದ, ಲಂಡನ್ ಮತ್ತು ಲಿಂಕನ್ ನಗರಗಳ ಆಸುಪಾಸಿನಿಂದ ಹೊರಟ ಜಿಗುಟಿನ ಸಾಹಿತ್ಯಾಸಕ್ತರು ಮಳೆ ಬಿರುಗಾಳಿಯನ್ನು ಲೆಕ್ಕಿಸದೆ, ಮೋಟರ್ವೆದಲ್ಲಿ ಉರುಳಿ ಬಿದ್ದು ಎರಡೆರಡು ರಸ್ತೆಗಳನ್ನು ಬಂದು ಮಾಡಿದ್ದರೂ ಧೃತಿಗೆಡದೆ ತಡಮಾಡದೆ ಯುಕೆದ ಮಧ್ಯವರ್ತಿ ನಗರವಾದ ಲೆಸ್ಟರಿಗೆ ಬಂದದ್ದೂ ಒಂದು ಸಾಹಸದ ಕಥೆಯೇ ಆಗಿತ್ತು. ಆಗಲೇ ಅಲ್ಲಿ ನೆರೆದಿದ್ದ ಮತ್ತಿತರ ಕನ್ನಡಿಗರಲ್ಲಿ ಎಲ್ಲಿಲ್ಲದ ಉತ್ಸಾಹ! ಅವರೆಲ್ಲ ಕೂಡಿ ಹತ್ತು ವರ್ಷ ಸತತವಾಗಿ ವಾರಂಪ್ರತಿ ಕನ್ನಡದಲ್ಲಿ ಒಂದು ಬ್ಲಾಗ್ ಅಂಕಣ ಪ್ರಕಟಿಸುತ್ತ ಬಂದಿದ್ದಾರೆ. ಈಗ ಅಂಕಣಗಳ ಸಂಖ್ಯೆ ೬೦೦ ನ್ನೂ ಮೀರಿದೆ! ಯುಕೆ ಕನ್ನಡ ಬಳಗದ ಯುಗಾದಿಯು ಮತ್ತು ದೀಪಾವಳಿ ಸಮಾರಂಭಗಳಲ್ಲಿ ಸಿಕ್ಕ ಸ್ವಲ್ಪೇ ಸಮಯದಲ್ಲೂ ಗಂಭೀರ ಸಾಹಿತ್ತ್ಯದ ಚರ್ಚೆ, ಕವಿ ಗೋಷ್ಠಿ, ನಾಟಕ ಇತ್ಯಾದಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದವರು. ಆ ದಿನ ಹಿರಿಯ ಕಿರಿಯ ಸದಸ್ಯರು ನಂತರ ಬಂದವರನ್ನು ಆತ್ಮೀಯತೆಯಿಂದ ಸ್ವಾಗತಿಸಿದರು.
ಆ ದಿನ ಅವರು ರಾಜಶ್ರೀ ಮತ್ತು ವೀರೇಶ್ ಅವರ ಮನೆಯಲ್ಲಿ ಸೇರಿ ಬೆಳಿಗ್ಗೆ ೧೧ರಿಂದ ಸಂಜೆ ನಾಲ್ಕು ಗಂಟೆಯವರೆಗಿನ ಕಾರ್ಯಕ್ರಮವನ್ನು ಎದುರು ನೋಡುತ್ತಿದ್ದರು. ಸ್ವಾಗತ ಮತ್ತು ಉಭಯ ಕುಶಲೋಪರಿ ಆಗುತ್ತಿದ್ದಂತೆಯೇ ಅಪರೂಪದ ಬಿಸಿ ಬಿಸಿ ಮದ್ದೂರು ವಡೆ, ರುಚಿಯಾದ ಚಟ್ನಿ ಮತ್ತು ಕಾಫಿ ಅವರಿಗಾಗಿ ಕಾಯುತ್ತಿದ್ದವು. ಹಲವಾರು ಹಿರಿಯರು ಯುಕೆಗೆ ಬಂದು ನಾಲ್ಕು ಅಥವಾ ಐದು ದಶಕಗಳೇ ಸಂದಿದ್ದವು. ಕೆಲವರು ಇನ್ನೂ ಎರಡು ದಶಕ ಕಳೆಯದ ಹಸುಳೆಗಳು. ಎಲ್ಲರೂ ಒಂದಿಲ್ಲೊಂದು ರೀತಿಯ ಬರಹಗಾರರು. ಕೆಲವರು ಐದೈದು ಪುಸ್ತಕಗಳನ್ನು ಪ್ರಕಟಿಸಿದ ಸರಸ್ವತಿ ಪುತ್ರರು. ಒಂದಿಬ್ಬರು ಹತ್ತಾರು ಪುಟಗಳ ಲೇಖಕರು, ಆದರೆ ಒಳ್ಳೆಯ ಓದುವ ಆಸ್ಥೆ ಉಳ್ಳವರು. ಎಲ್ಲರೂ ಕುವೆಂಪು ಹೇಳಿದ ‘ಎಲ್ಲಾದರೂ ಇರು, ಎಂತಾದರೂ ಇರು, ಆದರೆ ಕನ್ನಡವಾಗಿರು’ ಎನ್ನುವದನ್ನು ಇವರನ್ನುದ್ದೇಶಿಸಿಯೇ ಹಾಡಿದರೋ ಏನೋ ಅನ್ನುವಂತೆ ಜೀವಿಸುವವರು. ಹೊಟ್ಟೆ ಪಾಡಿಗೆ ವೈದ್ಯರೇ ಆಗಿರಲಿ, ಐಟಿ ಪಟುವೆ ಆಗಿರಲಿ ಕನ್ನಡವೇ ಉಸಿರು, ಕನ್ನಡವೇ ಜೀವನ ಅನ್ನುವಂತೆ ಬದುಕುವವರು. ತಮ್ಮನ್ನು ಸಲುಹಿದ ಕನ್ನಡ ನುಡಿಯನ್ನು ಮರೆಯದಂತೆ, ಮುಂದಿನ ಪೀಳಿಗೆಗೂ ಸ್ವಲ್ಪವಾದರೂ ಪರಿಚಯಿಸುತ್ತ ಜೀವಂತವಾಗಿಡುತ್ತ ತಮ್ಮ ಅಳಿಲು ಸೇವೆಯನ್ನು ಮಾಡುತ್ತಿರುವವರು. ಕೆಲವರು ಅನೇಕ ಸಲ ಭೇಟಿಯಾದವರು ಒಂದಿಬ್ಬರು ಎಲ್ಲರನ್ನೂ ಭೇಟಿ ಮಾಡುವದು ಇದೆ ಮೊದಲ ಸಲ. ಅಂದರೆ ಒಂದು ರೀತಿಯಿಂದ ‘ಅನಿವಾಸಿ ಈ-ಪೇಪರಿನ’ ಪ್ರಸ್ತುತಿಗಳಂತೆ ಕಲಸುಮೇಲೋಗರ!
ಪ್ರಾರಂಭದಲ್ಲಿ ಎಲ್ಲರನ್ನೂ “ನನ್ನ ಊರಿಗೆ, ನನ್ನ ಸೂರಿಗೆ” ಸ್ವಾಗತಿಸುತ್ತಾ ರಾಜಶ್ರೀ ಪಾಟೀಲ್ ಅವರು ಕುವೆಂಪು ಅವರ ‘ಕನ್ನಡಕ್ಕಾಗಿ ಹೋರಾಡು ಕಂದ’ ಎನ್ನುವ ಜೋಗುಳದ ಹರಕೆಯನ್ನು ನೆನಪಿಸಿ ನಾವಿಲ್ಲಿ ಮಾಡುತ್ತಿರುವುದೂ ಅದನ್ನೇ ಎನ್ನುವುದನ್ನು ಒತ್ತಿ ಹೇಳಿದರು. ಈ ದಶಮಾನೋತ್ಸವ ಶತಮಾನೋತ್ಸವದತ್ತ ಧಾಪು ಕಾಲಿಂದ ನಡೆಯಲಿ ಅಂತ ಶುಭ ಹಾರೈಕೆಗಳನ್ನು ಹೇಳಿ ಮುಂದಿನ ಕಾರ್ಯಕಲಾಪಗಳಿಗೆ ಚಾಲನೆ ಕೊಟ್ಟರು.
ಬೆಳಗಿನ ಸಿಂಹಾವಲೋಕನದಲ್ಲಿ ‘ಅನಿವಾಸಿ ನಡೆದು ಬಂದ ದಾರಿ’ಯನ್ನು ಮೂವರು ಪರಿಚಯಿಸಿದರು. ಜಿ ಎಸ ಪ್ರಸಾದ್ ಅವರು ಯುಕೆ ಕನ್ನಡ ಬಳಗದೊಡನೆಯ ಸಂಬಂಧವನ್ನು ತಿಳಿಹೇಳಿ ಮುಂದಿನ ಚರ್ಚೆಗೂ ಪೀಠಿಕೆ ಕೊಟ್ಟದ್ದು ವಿಶೇಷ. (* ಹಿಂದಿನ ಮೈಲಿಗಲ್ಲಿನ ಲೇಖನಗಳಿಗೆ ಇದರ ಕೊನೆಯಲ್ಲಿ ಕೊಟ್ಟ ಕೊಂಡಿ ನೋಡಿರಿ )
ನಂತರ ಫೋಟೋ: ನೆನಪಿಗಾದರೂ ಇರಲೇಬೇಕಲ್ಲವೇ, ಅನಿವಾರ್ಯ ಆದರೂ ಆವಶ್ಯಕವೆನ್ನುವ ‘ದಶಕದ ಕೇಕ್” ತರಲಾಯಿತು. ಇದರ ವಿಶೇಷತೆಯೆಂದರೆ ಅದನ್ನು ‘ಬೇಕ್’ ಮಾಡಿದವಳು ಆತಿಥೇಯ ದಂಪತಿ ರಾಜಶ್ರೀ ಮತ್ತು ವೀರೇಶರ ಹದಿನಾಲ್ಕು ವರ್ಷದ ಮಗಳು ಖುಷಿ. ಅದರ ಮೇಲೆ ಬರೆದ ಸುಂದರ ಕನ್ನಡ ಅಕ್ಷರಗಳು ಇಲ್ಲಿಯ ಕೇಕುಗಳಲ್ಲಿ ಅಪರೂಪ. ಇದು ‘ಹೇಳಿ ಮಾಡಿಸಿದ’ commissioned cake! ದೀಪ ಬೆಳಗಿ ಉದ್ಘಾಟನೆ ಮಾಡಿ ಕೇಕ್ ಹಂಚಿದ್ದಾಯಿತು. ಕೇಕ್ ರುಚಿಯಾಗಿದೆ ಅಂದರು ಎಲ್ಲರೂ!
ಉಪನ್ಯಾಸಗಳು
ನಂತರದ ಮುಖ್ಯ ಉಪನ್ಯಾಸವನ್ನು ಕೊಟ್ಟವರು ಯೋಗಿಂದ್ರ ಮರವಂತೆ. ಅವರು ಒಬ್ಬ ಗಣನೀಯ ಪ್ರಬಂಧಕಾರರು. ಪ್ರಬಂಧದ ಇತಿಹಾಸವನ್ನು ಫ್ರಾನ್ಸ್ ದೇಶದ ತತ್ವಜ್ಞಾನಿ ಮೈಕೆಲ್ ಮೊಂಟೇನ್ ನಿಂದ ಶುರುಮಾಡಿ ಇಂಗ್ಲೆಂಡಿನ ಜಾರ್ಜ್ ಆರ್ವೆಲ್ ನಂತರ ಕನ್ನಡದ ಪ್ರಬಂಧಬ್ರಹ್ಮ ಎ ಎನ್ ಮೂರ್ತಿರಾಯರ ಬರವಣಿಗೆಯ ಪರಿಚಯ ಮಾಡಿಕೊಟ್ಟು ನಾನು ಏಕೆ ಮತ್ತು ಹೇಗೆ ಬರೆಯುತ್ತೇನೆ ಅಂತ ವರ್ಣಿಸಿದರು. ಸುಪ್ರಸಿದ್ಧ ಲೇಖಕ ಎಸ್ ದಿವಾಕರ್ ಅವರ ಪ್ರಬಂಧ ಬರಹಗಳನ್ನೂ ಉಲ್ಲೇಖಿಸಿದರು.
ನೆರೆದವರಲ್ಲಿ ಐದೈದು ಪುಸ್ತಕಗಳನ್ನು ಪ್ರಕಟಿಸಿದ ಮೂವರು ಲೇಖಕರು ತಂತಮ್ಮ ಕೃತಿಗಳನ್ನು ತಂದು ಪ್ರದರ್ಶಿಸಿದ್ದಲ್ಲದೆ, ಈಗ ವಿದೇಶದಲ್ಲಿ ವಾಸಿಸುತ್ತಿರುವ ಇಬ್ಬವು ಮಹಿಳಾ ಲೇಖಕರು ಈ ವೇದಿಕೆಯ ಭಾಗವಾಗಿರುವದರಿಂದ ಅವರ ಮೂರರಲ್ಲಿ ಎರಡು ಕೃತಿಗಳೂ ಲಭ್ಯವಿದ್ದವು ಮಧ್ಯಂತರದಲ್ಲಿ.
ಮಧ್ಯಾಹ್ನದ ಭೋಜನ ನಂತರ ಕವಿತೆಗಳ ಬಗೆಗಿನ ಭಾಷಣ ಮತ್ತು ಸ್ಥಳೀಯ ಬರಹಗಾರರ ಎರಡು ಹೊಸ ಕವನ ಸಂಕಲನಗಳ ವಿಮರ್ಶೆ ಕೇಶವ ಅವರು ನಡೆಸಿ ಕೊಟ್ಟರು. ಸ್ವತಃ ಹೊಸತಲೆಮಾರಿನ ಕವಿಯಾಗಿ ವಿವಿಧ ಪ್ರಕಾರದ ಕವಿತೆಗಳ ಛಂದಸ್ಸು ಮತ್ತು ಅಲಂಕಾರಗಳನ್ನು ಚರ್ಚಿಸಿದರು.
ಕವಿಗೋಷ್ಠಿ
ಅದರ ನಂತರ ಚಿಕ್ಕ ಕವಿಗೋಷ್ಠಿಯಲ್ಲಿ. ನೆರೆದ ‘ಅನಿವಾಸಿ’ಯ ೮ ಕವಿಗಳು ತಮ್ಮ (ತಾವು ಬರೆದ) ವಿವಿಧ ಅಭಿರುಚಿಯ ಕವಿತೆಗಳನ್ನೋದಿದರು. ಕೆಲವು ಚುಟುಕಪಟಾಕಿಗಳಾಗಿದ್ದರೆ ಇನ್ನು ಕೆಲವು ‘ಮನ್ ಕಿ ಬಾತ್’ ಹೇಳುವ ಅನಿವಾಸಿ ದೇವಿಗರ್ಪಿಸಿದ ಹೃದಯಾಳದ ಸ್ಪಂದನಗಳ ಪದ್ಯಮಾಲೆಗಳು! ನೆರೆದವರಲ್ಲಿ ಯಾರೂ ಅರಸಿಕರಾಗಿರಲಿಲ್ಲವಾದ್ದರಿಂದ ಈ ಕವಿತ್ವ ನಿವೇದನಕ್ಕೆ ಯಾರೂ ‘ಮಾ ಲಿಖ x3 ಸಲ’ ಅನ್ನಲಿಲ್ಲ! (ಅರಸಿಕೇಷು ಕಾವ್ಯ ನಿವೇದನಂ ಶಿರಸಿ ಮಾ ಲಿಖ, ಮಾ ಲಿಖ, ಮಾ ಲಿಖ ಎನ್ನುವ ಸಂಸ್ಕೃತ ಬೇಡಿಕೆ!)
ಕೊನೆಗೆ ಈ ವೇದಿಕೆಯ ಭವಿಷ್ಯತ್ತಿನ ಬಗ್ಗೆ ಮುಕ್ತ ಚರ್ಚೆಯಾಗಿ ಉಪಯುಕ್ತ ನಿರ್ಣಯಗಳ ಅನುಮೋದನೆಯೊಂದಿಗೆ ದಶಮಾನೋತ್ಸಮದ ಸಂಭ್ರಮ ಅಪ್ರತಿಮ ಆತಿಥೇಯ ರಾಜಶ್ರೀ ಮತ್ತು ವೀರೇಶ, ಮತ್ತಿತರಿಗೆ ವಂದನಾರ್ಪಣೆಯೊಂದಿಗೆ ಮುಕ್ತಾಯವಾಗಿ ಎಲ್ಲರೂ ಗೂಡಿಗೆ ಮರಳಿದರು! ಈಗ ಪ್ರಕೃತಿಯ ಅಬ್ಬರ ಕಡಿಮೆಯಾಗಿತ್ತು. ಮನಸ್ಸಿನಲ್ಲೊಂದು ಉಲ್ಲಾಸವಿತ್ತು.
ಲೇಖನ: ಶ್ರೀವತ್ಸ ದೇಸಾಯಿ ಛಾಯಾಚಿತ್ರ ಕೃಪೆ : ಅನೇಕ ಸದಸ್ಯರಿಂದ; ರೇಖಾಚಿತ್ರ: ಲಕ್ಷ್ಮಿನಾರಾಯಣ ಗುಡೂರ

ಕವಿಗೋಷ್ಠಿಯಲ್ಲಿ ಓದಿದ ಕವನಗಳು
1 ರಾಧಿಕಾ ಜೋಶಿ
ಅಕ್ಷರಗಳನ್ನು ವಾರಾಂತ್ಯವಾರ ಪೋಣಿಸಿ
ಎಂದೆಂದೂ ಬಾಡದ ಒಂದು ಸುಂದರ
ಮುತ್ತಿನ ಮಾಲೆಯನ್ನಾಗಿಸಿ
ಗದ್ಯ ಪದ್ಯ ಕಾಲ್ಪನಿಕ ನೈಜ
ಎಲ್ಲವಾಯಿತು ಇಲ್ಲಿ ನಿಜ
ಪರೀಕ್ಷೆ ನಿರೀಕ್ಷೆಗಳ ಲೆಕ್ಕಿಸದ ಹುಲಿ
ಅವಕಾಶಗಳ ಪ್ರೋತ್ಸಾಹದ ಜಗುಲಿ
ಹೇಳಹೊರಟ ಹೊಸ ಹಳೆಯ ಸಂಗತಿ
ಸದಾ ಮೀಟುತ್ತಿರುವ ಅನಿವಾಸಿ ಎಂಬ ೪ ತಂತಿ
ಬರೆಯುವ ಕೌತುಕತೆ ಓದುವ ಆತುರತೆ
ಹೊರತರಲು ಪ್ರತಿಯೊಬ್ಬರಲ್ಲಿವು ಉತ್ತಮತೆ
ಹತ್ತು ಅಧ್ಯಾಯಗಳನ್ನು ಪ್ರತಿಬಿಂಬಿಸುವ
ಈ ದಿನ ಮುಂಬರುವ ಹತ್ತು
ಅಧ್ಯಾಯಗಳಿಗೆ ನಾಂದಿಯಾಗಲಿ
-Radhika Joshi
2 ಲಕ್ಷ್ಮೀನಾರಾಯಣ ಗುಡೂರ್
(1)
ಭಾವಗಳ ಹೂರಣವ ಪದಗಳಲಿ ಸುತ್ತಿಟ್ಟು
ಹದನಾದ ಛಂದಗಳ ಬಿಸಿಹಂಚಲಿಟ್ಟು
ಬೇಯಿಸುತ ಹೋಳಿಗೆಯ, ಹಾಕಿ ರಾಗದ ತುಪ್ಪ
ಸಂಗೀತದೊಡೆ ಬಡಿಸೆ ಅದುವೇ ಬಲು ಒಪ್ಪ!
(2)
ಹಾಡು ನವ ರಾಗವನು ಕೇಳುವೆನು ನಿಂದು
ಬರೆಯೆ ಕವನವನೊಂದ ಓದುವೆನು ಬಂದು
ಹೇಳು ಹೊಸ ಕಥೆಯನ್ನು ಆಲಿಸುವೆನಿಂದು
ಸಾಹಿತ್ಯಸಿಹಿಯೆರೆಯೆ ಚಪ್ಪರಿಸುವೆನು ತಿಂದು
- Lakshminarayana Gudur
* * * *
3. C ನವೀನ್
ಹಿಂದಿನ ಸಾಲಿನ ಹುಡುಗರು...
ಹಿಂದಿನ ಸಾಲಿನ ಹುಡುಗರಲ್ಲಿ ನಾನೂ ಒಬ್ಬನಾಗಿದ್ದೆ;
ಮರೆಯಾಗಿ ಕುಂತು ಚೆಸ್ ಆಡಿದ್ದೆ!
ಪುಸ್ತಕದ ಹಾಳೆಗಳೆಲ್ಲ ವಿಮಾನಕ್ಕೆ ಮೀಸಲು;
ಅದೆಷ್ಟು ಮೋಜು ಎಸೆದು ಅವಿತುಕೊಳಲು!
ಥಿಯಟರ್ ನಂಥ ಕ್ಲಾಸ್ ರೂಮು;
ಭಯವಿರಲಿಲ್ಲ ನಮಗೆ ಪ್ರೊಫೆಸರ್ ಹಾಕುವ ಲಗಾಮು!
ಕಾಣುತಿರಲಿಲ್ಲ ಅವರಿಗೆ ನಾವು ಮಾಡುವ ಚೇಷ್ಟೆ;
ಅವರ ದೃಷ್ಟಿಗೆ ಮುಂದಿನ ಸಾಲಿನ ಹುಡುಗಿಯರಷ್ಟೆ!!
-C Navin
4. ಶ್ರೀವತ್ಸ ದೇಸಾಯಿ
ವ್ಯತ್ಯಾಸ
ಒಂದು ದಿನ ಕೇಳಿದಳು ನೀಲು
ನಿನ್ನ ಉತ್ತರ ಕರ್ನಾಟಕದ ಭಾಷೆ ಬಲು ಕಷ್ಟ
ಈ ಮುಸಿರಿ ಎಂಜಲು
ವ್ಯತ್ಯಾಸ ಏನು ಹೇಳು?
ಆತ ಹೇಳಿದ --
ಜಳಕ ಮಾಡು ಮೊದಲು
ತೊಳೆದು ಹೋಗುತ್ತೆ ಎಲ್ಲ
ಮೊದಲು ಇಟ್ಟು ಬಿಡು ಒಂದು ಮುತ್ತು
ಅದು ಮುಸಿರೆಯೂ ಅಲ್ಲ
ಎಂಜಲು ಅಂತೂ ಮೊದಲೇ ಅಲ್ಲ!
-Shrivatsa Desai
5) ರಾಜಶ್ರೀ ಪಾಟೀಲ್
ಮುಗಿದರೆನಂತೆ ದಶಕೋತ್ಸವ …
ಮುಂಜಾನೆ ರವಿಗಿರೋ ತಾಳ್ಮೆ
ಸಂಜೆ ರವಿಗುಂಟೆ ?
ಇರು ಎಂದರೂ ಇಳಿದೋಡುವ
ಮರೆಯಾಗದಿರೆಂದರೂ ಮತ್ತೆ ಮುಗಿಲೇರಬೇಕೆಂದು
ಮುಚ್ಚಿಟ್ಟುಕೊಳ್ಳುವ
ಮುಗಿಯದಿರೆಂದರೂ ಮುಗಿದೋಹಿತು, ಅರಿವಾಗೋ ಮುನ್ನ ಅನಿವಾಸಿ ಸಂಭ್ರಮ
ಮುಗಿದರೇನಂತೆ ದಶಕೋತ್ಸವ ಬರಲೇಬೇಕಲ್ಲವೇ ರಜತೋತ್ಸವ,
ಅದಕಾಗಿ ಕಾಯದೆ ನಡು ನಡುವೆ ಮಾಡುತ್ತಿರೋಣ ಸಿಕ್ಕಾಗಲೆಲ್ಲ ಸಭಾಮಹೋತ್ಸವ
- Rajashree Patil
6) ವೀರೇಶ್ ಪಾಟೀಲ್
ನಿನ್ನ ಕಣ್ಣಂಚಿನಿಂದ ಬಂದ ಮಿಂಚಿನ ಬಾಣ
ನಿನ್ನ ಕಣ್ಣಂಚಿನಿಂದ ಬಂದ ಮಿಂಚಿನ ಬಾಣ
ಬರಿ ನನ್ನ ಕಣ್ಣಂಚನೇನು ಹೃದಯದ ಇಂಚು ಇಂಚನ್ನು ಹೊಕ್ಕಿತು.
ಹೃದಯಕ್ಕೇ ನಾಟಿದಮೇಲೆ ಮನಸ್ಸಿನದಿನ್ನೇನು
ಅದುವೋ ಏನೂ ಹೇಳದೆ, ಏನೂ ಕೇಳದೆ
ನಿನ್ನ ಒಪ್ಪಿತು.
-Veeresh Patil
7. ಗೋಪಾಲಕೃಷ್ಣ ಹೆಗ್ಡೆ
Dove Cottage -ಅಂಗಳದಿಂದ
( ಹಿನ್ನೆಲೆ)
ಕವಿ ವಿಲಿಯಂ ವರ್ಡ್ಸ್ ವರ್ತ್ ನ ಮನೆ, ಅಲ್ಲಿಯ ಅಂಗಳ, ಕಂಡ ಗುಲಾಬಿ, ಅಕ್ಕಪಕ್ಕದಲ್ಲಿಯ ಸುಂದರ ಸರೋವರಗಳು, ಸುತ್ತ ಪರ್ವತ ಉತ್ತುಂಗಗಳು ಎರಡು ಬಾರಿ ಪ್ರವಾಸಿಗನಾಗಿ ಹೋಗಿದ್ದ ನನಗೆ ಅಚ್ಚಾಗಿ ಕಂಡ ದೃಶ್ಯಗಳು . ಇದರ ಮೇಲೆಲ್ಲಾ ತೊಯ್ದಿದ್ದ ಸೂರ್ಯ ಕಿರಣಗಳು ಸರೋವರಗಳ ಮೇಲೆಯೇ ಕವನ ಬರೆದಿವೆಯೇ, ಕವನ ಪುಸ್ತಕದ ಪುಟಗಳಂತೆ ಈ ಸರೋವರಗಳು, ಈ ಸುಂದರ ವಾತಾವರಣ ಅಲ್ಲಿ ಪ್ರತಿಬಿಂಬಿಸಿವೆಯೇ ಎಂಬ ಕಲ್ಪನೆ ತಟಕ್ಕನೆ ನನಗೆ ಬಂದಿದ್ದು ಸಾಹಿತಿ ದಂಪತಿಗಳು (ಎಸ್ ದಿವಾಕರ ಮತ್ತು ಜಯಶ್ರೀ ಕಾಸರವಳ್ಳಿ) ಅಲ್ಲಿಗೆ ಮೊನ್ನೆ-ಮೊನ್ನೆ ಕಳೆದ ಬೇಸಿಗೆಯಲ್ಲಿ ಭೆಟ್ಟಿಕೊಟ್ಟಾಗಿನ ಮತ್ತು ಇನ್ನೂ ಒಂದೆರಡು ಅಲ್ಲಿಯ ಬೇರೆ ಫೋಟೋ ಗೆಳೆಯರಿಂದ ನೋಡಿದಾಗ.
ಆಕಾಶದ ಸೂರ್ಯ -ದಿವಾಕರ,ನಮ್ಮ ಸಾಹಿತಿ-ದಿವಾಕರ , ಈ ದಿವ್ಯ ಪ್ರದೇಶ ಎಲ್ಲ ನನ್ನಲ್ಲಿ ಮೂಡಿಸಿದ ಈ ಒಂದು ಆಕಸ್ಮಿಕ ಸುಂದರ ಕಲ್ಪನೆಯನ್ನು ನಿಮ್ಮ ಮುಂದೆ ವಿವರಿಸಲು ನಾ ಮಾಡಿದ ಒಂದು ಅಪೂರ್ಣ ಪ್ರಯತ್ನವಿದು; ಬಂದ ಸ್ಪೂರ್ತಿಗೆ ನನ್ನ ನಮನ .
ಓದಿ ಪ್ರೋತ್ಸಾಹಿಸುತ್ತೀರಿ, ತಿದ್ದಿ ಬೆಳೆಸುತ್ತೀರಿ ಎಂದು ನಂಬಿದ,
ಇತಿ ನಿಮ್ಮ ಗೋಪಾಲಕೃಷ್ಣ ಹೆಗ್ಡೆ
Dove Cottage -ಅಂಗಳದಿಂದ
————————————
ಸರೋವರಗಳ ಸುಂದರ,
ಪಕ್ಕ ದಡದಲ್ಲಿ ಕವಿಮಂದಿರ
ಈ ಅಂಗಳದೆತ್ತರದಿಂದ
ಇಣುಕಿದಳೋ ಎಂಬಂತೆ
ನೀಲಿಯನ್ನೇ ಸೀರೆಯುಟ್ಟ ಆಕೆಯ
ಎತ್ತಿದ ಕೈಬಳೆಗಳಿಂದ ಚೈತನ್ಯದ ಝಲ್
-ನೀಲಾಂಬರ ತುಂಬಿದ ಧ್ವನಿ,
ಅಂಬರಕ್ಕೆ ತಂದ ಸಂಭ್ರಮ -ಸಡಗರ.
ಅಲ್ಲಿಂದ ಇಳಿದಿತ್ತು, ಮತ್ತೆ ಬರೆದಿತ್ತು,
ಭಾವ-ಭಾರ, ಅಕ್ಷರ ಕರಗಿತ್ತು,
ಆನಂದ ಕಾವ್ಯವಾಗಿತ್ತು.
ಕಾವ್ಯ-ಕವನ
ಹರಡಿತ್ತು ಎಲ್ಲಾ ಈ ಸರಮಾಲೆಗಳು
ಸರೋವರಗಳ ಮುಖಗಳ ಮೇಲೆ
-ಮೂಡಿವೆಯೇ ಈ ಚೈತ್ರಪುಲುಕಿಸಿದ ಚಿತ್ರಗಳಿಂದ?
ದಿವ್ಯ ಕವನಸಂಕಲನ ಕೂಡಿಬಂದಿದೆಯೇ
ಈ ಸರೋವರಿ -ಸಹೋದರಿಯರು
ತೆರೆದಿಟ್ಟ ತಮ್ಮ ಪುಟ-ಮುಖಪುಟಗಳ ಮೇಲೆ?
ಜೊತೆಜೊತೆಗೆ ಚುಂಬಿಸಿತ್ತು
ಮೇಲಿಂದ ಚೆಲ್ಲಿ ಸುರಿದಿದ್ದ ಸೂರ್ಯಕಿರಣಗಳ,
ರಾಶಿ ರಾಶಿ ದೃಷ್ಟಿಯಲ್ಲಿ ಕವಿ ಸೃಷ್ಟಿ,
ಅಲ್ಲಿಯ ಸರ್ವ ಸರೋವರಗುಂಚಗಳಲ್ಲಿ.
ಕಾವ್ಯಾನಂದದ ಸರ್ವ-ಸಾಕ್ಷಿಯೆ ಎಂಬಂತೆ
ಸುತ್ತಲೂ ತಪಿಸಿ ಮೈಮರೆತ
ಸಾಲು ಸಾಲು ಮಂತ್ರಮುಗ್ಧ ಮೇರುಪರ್ವತಗಳು
ಮಂದಸ್ಮಿತ ಆನಂದದ ಪ್ರತಿಮೆ-ಪ್ರತಿಬಿಂಬಗಳನ್ನೆಲ್ಲ
ಕರೆದೆಳೆದು ಸೆರೆಹಿಡಿದಿತ್ತು, ಅಪ್ಸರೆಯರ ಅಪ್ಪಿಕೊಂಡಿತ್ತು
ಈ ಮಾನಸಸರೋವರ ತನ್ನುದರದಲಿ.
ಮತ್ತೆ ಮೂಡಿಸಿತ್ತು ಆಹಾ ಎಂಬ
ಮನೋಭಾವ, ಮಹಾಭಾವ,
ಎಲ್ಲಾ ಕೂಡಿ ಮೂಡಿ ಮೂಡಿ ಬರುತ್ತಿತ್ತು,
ಸರೋವರಕನ್ಯೆ ಕುಣಿದಿತ್ತು,
ಮುಂಜಾವು ಸಂಜೆ ನೋಡುತ್ತ ನೆಗೆದಿತ್ತು.
ಅಷ್ಟಕ್ಕೆ ದಿಗಂತ ದಿವಾಕರನ ಕಣ್ಣಿನ
ಕಣ್ಮಣಿಯೇ ಆಗಿಬಿಟ್ಟಿತ್ತು,
ಸಂಧ್ಯಾವಂದನೆ ನಡೆದಿತ್ತು.
ಮತ್ತೆ ಮತ್ತೆ ತೆರೆತೆರೆಯಲಿ ಸಿಕ್ಕಿಕೊಂಡ
ನನ್ನ ಇಂತದ್ದೆಲ್ಲಾ ಕರೆ ಮೊರೆ
ಬರಿ ಅರೆಮರೆಯ ಬಿಂಬವೆಂದೆನ್ನಿಸಿದರೂ
ಬೆಂಬಿಡೆನು ನಿನ್ನ ಎಂಬಂತೆ ಭರವಸೆಯ
ಭಾವ-ಸರೋವರವೆಂದಿತ್ತು.
ಅಲ್ಲಿಗೆ ಮಂದಿರ ಮಂದಸ್ಮಿತೆಯಾಗಿತ್ತು,
ಅಲ್ಲಿಯ ಅಂಗಳದ ಗುಲಾಬಿ
ಎಲ್ಲಾ ನೋಡಿ ನಗು ನಕ್ಕಿತ್ತು,
ಮುದ್ದು ಮಲುಗುತ್ತಿತ್ತು.
-ಗೋಪಾಲಕೃಷ್ಣ ಹೆಗ್ಡೆ
8. ಕೇಶವ ಕುಲಕರ್ಣಿಯವರು ತಾವು ಭಾವಾನುವಾದ ಮಾಡಿ, ಹಿಂದೆ ಪ್ರಕಟಿಸಿದ ಕವನ 'ನೋಡೂಣಂತ' ವನ್ನು ಓದಿದರು.
https://anivaasi.com/2024/05/17/2poems1article/








* KSSVV-Anivaasi ನಡೆದು ಬಂದ ದಾರಿ (ಎರಡು ಭಾಗಗಳು) ಓದಲು ಕೆಳಗಿನ ಎರಡು ಲಿಂಕ್ (Copy & Paste)
https://anivaasi.com/2019/10/25/
https://anivaasi.com/2019/11/01/
ಸವಿ ನೆನಪುಗಳು ಬೇಕು, ಸವಿಯಲಿ ಬದುಕು”
ಕಳೆದ ವಾರ ನಾವೆಲ್ಲರೂ ಜೊತೆಗೂಡಿ ಕಳೆದ ಸವಿ ನೆನಪಿನಲ್ಲಿ ಮತ್ತೆ ಜೀವಿಸುವುದು ಉಲ್ಲಾಸವಲ್ಲವೇ. ಫೋಟೋಗಳು ಒಂದು ಬಗೆಯ ಚಪ್ಪಟ್ಟೆ ಆಯಾಮವನ್ನು ಕೊಟ್ಟರೆ ದೇಸಾಯಿ ಅವರ ಸ್ವಾರಸ್ಯಕರವಾದ ವರದಿ ಇನ್ನೊಂದು ಆಯಾಮವನ್ನು ಒದಗಿಸಿ, virtual ಅನುಭವವನ್ನು ಕೊಟ್ಟಿದೆ. ಸಮಗ್ರವಾದ ವರದಿ, ಹಿನ್ನೆಲೆ ಮತ್ತು ಪರಿಚಯ. ಗುಡೂರ್ ಅವರು ಬರೆದಿರುವ ರೇಖಾ ಚಿತ್ರದಲ್ಲಿ, ಬರಹಗಾರರಿಗೆ ಮತ್ತು ಸದಸ್ಯರಿಗೆ ಹೋಲಿಸಿದರೆ ಅನಿವಾಸಿ ಸಂಘಟನೆಯ ಗಾತ್ರ ಹಿರಿತನ ಗೊತ್ತಾಗುತ್ತದೆ. Put the organizational interest first, members come second ಎನ್ನುವಂತಿದೆ. ಬರಹಕ್ಕೆ ಪೂರಕವಾಗಿದೆ. ಪ್ರಸ್ತುತ ಪಡಿಸಿದ ಎಲ್ಲ ಚುಟುಕ, ದೀರ್ಘ ಕವನಗಳು ಲವಲವಿಕೆಯಿಂದ ಕೂಡಿವೆ.
ಮೇಟಿ ಅವರ ಪೀಠಿಕೆ ಸೂಕ್ತವಾಗಿದೆ.
LikeLike
ಧನ್ಯವಾದಗಳು, ಪ್ರಸಾದ್ ಅವರೇ.
LikeLike
Shri Ramamurthy writes:
ವೈಯಕ್ತಿಕ ಕಾರಣದಿಂದ ನನಗೆ ನಿಮ್ಮಗಳ ಜೊತೆ ಸೇರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಅಲ್ಲಿ ಸೇರಿದವರ ಕೆಲವರ ಪರಿಚಯ ಇಲ್ಲ ಆದರೆ ಅವರ ಲೇಖನಗಳನ್ನು ಓದಿ ಮೆಚ್ಚಿದ್ದೇನೆ ಹತ್ತು ವರ್ಷದ ಹಿಂದೆ ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಿದೆ. ಅನಿವಾಸಿಯ ಕೆಲವು ಸ್ನೇಹಿತರ ಉತ್ತೇಜನ ದಿಂದ ಅನೇಕ ವಿಷಯಗಳ ಬಗ್ಗೆ ಬರೆಯುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ.
ಕನ್ನಡ ಬಳಗದ ಈ ಸಂಸ್ಥೆ ಹೀಗೆ ಮುಂದುವರೆಯಲಿ ಎಂಬ ನನ್ನ ಹಾರೈಕೆ
I wrote this and try to post but it disappeared!!
LikeLike
ರಾಮಮೂರ್ತಿಯವರೇ, ನಿಮ್ಮನ್ನು ಮಿಸ್ ಮಾಡಿಕೊಂಡೆವು. ನಿಮ್ಮನ್ನು ಕಾಣಲು ಉಳಿದವರೂ ಕಾತುರರಾಗಿರಬೇಕು.
ಕನ್ನಡ ಬಳಗದ ಆಶ್ರಯದಲ್ಲಿ ಉಗಮವಾದ ಅನಿವಾಸಿ ಈಗ ತನ್ನ ಕಾಲಮೇಲೆ ಬೇರೂರಿ ನಿಂತಿದೆ. ಆದರೆ ಎಂದಿನಂತೆ ಪೋಷಿಸಲು ನಾವೆಲ್ಲಾ ಕೂಡಿ ಕೆಲಾ ಮಾಡ ಬೇಕಾಗಿದೆ. ಮುಂದಿನ ಸಲ ಬೇಟಿಯಾಗುವಾ!
LikeLike
ಅನಿವಾಸಿ ಕನ್ನಡಿಗರು ಸೇರಿ ನಡೆಸಿದ ಈ ದಶಮಾನೋತ್ಸವ ದ ವರದಿ- ಆಹಾ ಎಂಬ ಭಾವನೆ ಮೂಡಿಸಿತು ಮನದಲ್ಲಿ ! ಎಂತಹ ಸುಂದರವಾದ ಕೇಕ್ ! ನಮ್ಮನ್ನು ಸಲುಹಿದ ಕನ್ನಡ ನುಡಿಯನ್ನು ಮರೆಯದವರು ಆಚರಿಸಿದ ಈ. ಉತ್ಸಾಹ ಮತ್ತು ಸಂಭ್ರಮ ಭರಿತ ಕಾರ್ಯಕ್ರಮ ದ ವಿವರಣೆ ಓದಿ ತಂಬಾ ಹೆಮ್ಮೆ ಮತ್ತು ಸಂತೋಷ ವಾಯಿತು ! – ಶಾಂತಾರಾವ್
LikeLike
‘ಅನಿವಾಸಿ’ಯ ಪ್ರೀತಿಯ ಓದುಗರಾದ ಶಾಂತಾ ರಾವ್ ಅವರ ಭಾವ ಭರಿತ ಪ್ರತಿಕ್ರಿಯೆಗೆ ಧನ್ಯವಾದಗಳು.
-ಶ್ರೀವತ್ಸ ದೇಸಾಯಿ
LikeLike