ಮಹಾಧಿಕನಿಗೆ ಬಂದ ಫೋನ್ ಕಾಲ್ 

ಈ ವಾರ ನಿಮ್ಮೆದುರಿಗೆ ನನ್ನ ಇನ್ನೊಂದು ಕಥೆ. ಕಳೆದ ಸಲ ನೀವೆಲ್ಲ ಕೊಟ್ಟ ಪ್ರತಿಕ್ರಿಯೆಗಳ ಪರಿಣಾಮ ಆಗಿರಬಹುದು ನನ್ನ ಬರಹದ ಮೇಲೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ . ಸದಾ ಅಂಗೈಯಲ್ಲೇ ಇರುವ ಫೋನ್ ಹಲವು ಬಗೆಗಳಲ್ಲಿ ನಮ್ಮ ಜೀವನದ ದಿಕ್ಕನ್ನು ಬದಲಾಯಿಸಬಹುದು . ಈ ಕಥೆಯ ನಾಯಕ ಮಹಧಿಕನಿಗೆ ಏನಾಗಿರಬಹುದು ಈ ಕಥೆಯಲ್ಲಿ ?

ಗಂಭೀರ್ ಮಹಾಧಿಕ್ ಬುದ್ಧಿವಂತೇನೇನೋ ಸೈ. ಅದು ಅವನಿಗೂ ಗೊತ್ತು. ಚಿಕ್ಕಂದಿನಲ್ಲಿ ಅಧಿಕ ಪ್ರಸಂಗಿ ಎಂದು ಶಾಲೆಯಲ್ಲಿ ಕುಪ್ರಸಿದ್ಧನಾಗಿದ್ದ. ಈಗ ಇಂಗ್ಲೆಂಡಿನ ಪ್ರತಿಷ್ಠಿತ ಯುನಿವರ್ಸಿಟಿಯಲ್ಲಿ ಚಿಕ್ಕ ವಯಸ್ಸಿನಲ್ಲೇ ಪ್ರೊಫೆಸರ್ ಹುದ್ದೆಗೇರಿದ್ದ. ಇಲ್ಲಿನ ವರ್ಣಭೇದದ ಗಾಜಿನ ಛತ್ತನ್ನು ಒಡೆದ ಹೆಮ್ಮೆ ಅವನದ್ದು. ಬಿಳಿಯರ ನಾಡಿನಲ್ಲೇ, ಅವರ ಚಾಲಾಕಿತನವನ್ನು ಮೀರಿಸಿ, ವಿಭಾಗ ಪ್ರಮುಖನಾದ ತಾನು ಯಾರಿಂದಲೂ ಮೋಸ ಹೋಗೆನು ಎಂಬ ಧೃಡ ನಂಬಿಕೆ ಅವನದ್ದು. ಪಾಶ್ಚ್ಯಾತ್ಯರಂತೆ ಎಲ್ಲ ನಿಯಮಗಳಿಗೆ ಬದ್ಧನಾಗಿ ನಡೆಯುತ್ತೇನೆ, ಎಲ್ಲ ವಿಷಯಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿ ನಿರ್ಣಯ ತೆಗೆದುಕೊಳ್ಳುವ ವೈಜ್ಞಾನಿಕ ಮನೋಭಾವ ವಿಶೇಷವಾಗಿ ತನ್ನದು ಎಂದೆಲ್ಲ ಅಂದುಕೊಳ್ಳುತ್ತಿದ್ದ. ಕೆಲಸಕ್ಕೆ ಹೋಗುವಾಗ ಅಚ್ಚುಕಟ್ಟಾಗಿ ತಲೆ ಬಾಚಿ, ಸೂಟು ತೊಟ್ಟು, ಮಿರುಗುವ ಬೂಟು ಧರಿಸಿಯೇ ಹೋಗುತ್ತಿದ್ದ. ಇಂಥವನ ನಡೆವಳಿಕೆಯಲ್ಲಿ ಅಹಂಕಾರ ಹೊರಹೊಮ್ಮುತ್ತಿದ್ದುದು ಸಹಜವೇ. ಅವನ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಅವನ ಬೆನ್ನ ಹಿಂದೆ ಮಹಾಧಿಕನನ್ನು ಮಹಾ ಡಿಕ್ ಎಂದೇ ಕರೆಯುತ್ತಿದ್ದರೆ ಆಶ್ಚರ್ಯವಿರಲಿಲ್ಲ.

ಸುಮಾ ಮಹಾಧಿಕನ ಅರ್ಧಾಂಗಿ. ಇವನ ಯಿಂಗ್ ಗೆ ಅವಳು ಯಾಂಗ್. ಮಹಾಧಿಕನ ಮೊಂಡುತನ, ಅಹಂಕಾರವನ್ನು ತಿದ್ದುವ ಪ್ರಯತ್ನಕ್ಕೆ ಯಾವಾಗಲೋ ಎಳ್ಳು ನೀರು ಬಿಟ್ಟಿದ್ದಳು. ಅವನ ಗುಣಗಳು ಮಕ್ಕಳಲ್ಲಿ ಒಸರದಿರಲೆಂಬ ದಿಶೆಯಲ್ಲಿ ತನ್ನ ಶಕ್ತಿಯನ್ನು ಕ್ರೋಢೀಕರಿಸಿದ್ದಳು. ಕಾನ್ಫರೆನ್ಸ್, ಮೀಟಿಂಗ್ ಎಂದು ಸದಾ ತಿರುಗುತ್ತಿದ್ದ ಮಹಾಧಿಕನ ಮನೆಯ ಎಲ್ಲ ವಹಿವಾಟು ನಡೆಸುತ್ತಿದ್ದುದು ಸುಮಾ. ಮಕ್ಕಳನ್ನು ಶಾಲೆಗೆ ಬಿಡುವುದು, ಅಡುಗೆ ಮಾಡುವುದು, ವಾರದ ಶಾಪಿಂಗ್, ಕೌನ್ಸಿಲ್ ಟ್ಯಾಕ್ಸ್ ಇತರೆ ಬಿಲ್ಲುಗಳನ್ನು ಕಟ್ಟುವುದು ಅವಳ ಜವಾಬ್ದಾರಿ. ಉತ್ತಮ ಶಿಕ್ಷಣ ಪಡೆದಿದ್ದ ಸುಮಾ ತನ್ನ ಇಚ್ಛೆಗೆ ಅನುಗುಣವಾಗಿ ಅರೆ ಕಾಲಿಕ ಶಾಲಾ ಶಿಕ್ಷಕಿಯಾಗಿದ್ದಳು. ಸ್ನೇಹಮಯಿಯಾದ ಆಕೆ ಎಲ್ಲರಿಗೂ ಬೇಕಾದವಳು. ಮಹಾಧಿಕನಿಗೆ ಅವಳು ಗೆಳತಿಯರೊಂದಿಗೆ ಫೋನಿನಲ್ಲಿ ಮಾತಾಡುವುದು, ಜನರನ್ನು ಹಚ್ಚಿಕೊಂಡು ಸಹಾಯ ಮಾಡುವುದು ಸರಿ ಹೋಗುತ್ತಿರಲಿಲ್ಲ. “ ಒಳ್ಳೆ ಪುಸ್ತಕ ಓದಿ ಬುದ್ಧಿ ಬೆಳೆಸೋದೋ, ಎಕ್ಸರ್ಸೈಸ್ ಮಾಡಿ ತೂಕ ಕಡಿಮೆ ಮಾಡೋದೋ ಬಿಟ್ಟು ಈ ರೀತಿ ಟೈಮ್ ವೇಸ್ಟ್ ಮಾಡ್ತಾ ಇದ್ದೀಯ. ನಿನ್ನ ದೇಹ ಮಾತ್ರ ಬೆಳೀತಾ ಇದೆ” ಎಂದು ಮೂದಲಿಸುತ್ತಿದ್ದ. ‘ಇಂಥ ಬ್ಲಡಿ ಯೂಸ್ ಲೆಸ್ಸನ್ನು ಯಾಕಾದ್ರೂ ಕಟ್ಟಿದ್ದಾರೋ, ಅಪ್ಪ, ಅಮ್ಮ; ಮಕ್ಕಳು ಗುಡ್ ಫ಼ಾರ್ ನಥಿಂಗ್ ಆಗಿಬಿಟ್ಟಾರು’ ಎಂದೆಲ್ಲ ಗೊಣಗಿಕೊಳ್ಳುತ್ತಿರುತ್ತಿದ್ದ.

ರಾತ್ರೆ ಮಲಗುವ ಕೋಣೆಯಲ್ಲಿ ವಿರಮಿಸುವಾಗ ಕೆ-ಡ್ರಾಮಾ ನೋಡುವುದು ಸುಮಾಗೆ ಅಚ್ಚುಮೆಚ್ಚು. ರಾತ್ರಿ ಹತ್ತು ಘಂಟೆಯ ಬಿಬಿಸಿ ನ್ಯೂಸ್ ನೋಡಿದ ಮೇಲೆ ತನ್ನ ಪರ್ಸನಲ್ ಈ-ಮೇಲ್ ನೋಡುವುದು ಮಹಾಧಿಕನ ಅಭ್ಯಾಸ. ಆಗಲೂ ಸುಮಾಳತ್ತ ತಾತ್ಸಾರದ ನೋಟ ಬೀರುತ್ತಿದ್ದ. ಅಂದೂ ಮಹಾಧಿಕ ತನ್ನ ಈ-ಮೇಲ್ ಗಳ ಮೇಲೆ ಕಣ್ಣು ಹಾಯಿಸುತ್ತಿದ್ದಾಗ, ಒಂದು ಅಧಿಕೃತ ಮೇಲ್ ಅವನ ಕಣ್ಣು ಸೆಳೆಯಿತು. ಟಿ.ವಿ ಲೈಸೆನ್ಸ್ ಆಫೀಸ್ ಈ ವರ್ಷ ಅವರು ಲೈಸೆನ್ಸ್ ಹಣ ಕಟ್ಟಿಲ್ಲವೆಂಬ ಎಚ್ಚರಿಕೆ ಕಳಿಸಿತ್ತು. ಮಹಾಧಿಕನ ಮೈಯೆಲ್ಲ ಉರಿದು ಹೋಯಿತು. ವಾರದಲ್ಲಿ ನಾಲ್ಕು ದಿವಸ ಮನೆಯಲ್ಲಿ ಎಮ್ಮೆಯಂತೆ ಮೆಂದು ಬಿದ್ದಿರುತ್ತಾಳೆ, ಸಮಯಕ್ಕೆ ಸರಿಯಾಗಿ ಬಿಲ್ ಕಟ್ಟುವುದಿಲ್ಲ, ಮಾಡಬೇಕಾದ ಕೆಲಸ ಮಾಡುವುದಿಲ್ಲ ಎಂದೆಲ್ಲ ಎಗರಾಡಿದ. ತಾನೂ ತಿರುಗಿ ಬಿದ್ದರೆ, ಗಲಾಟೆಯಾಗಿ, ಮಕ್ಕಳು ಎದ್ದು ರಂಪವಾಗುತ್ತೆ ಎಂದು, ಬಂದ ಸಿಟ್ಟನ್ನೆಲ್ಲ ಅದುಮಿಕೊಂಡು, “ತಪ್ಪಾಯ್ತು ಮಹಾರಾಯ, ಮುಂದಿನ ಸಲ ಮರೆಯದೇ ಕಟ್ಟುತ್ತೇನೆ. ಹೇಗಿದ್ದರೂ ಕಂಪ್ಯೂಟರ್ ಮುಂದೆ ಕೂತಿದ್ದೀಯ, ಆನ್ಲೈನ್ ಪೇ ಮಾಡಿಬಿಡು” ಎಂದು, ಟಿವಿ ಆರಿಸಿ, ಮುಸುಕು ಹಾಕಿ ಮಲಗಿಬಿಟ್ಟಳು ಸುಮಾ. ಎಲ್ಲದಕ್ಕೂ ನಾನೇ ಬೇಕು ಎಂದೆಲ್ಲ ಗೊಣಗುತ್ತ, ಆನ್ಲೈನ್ ನಲ್ಲೇ ಹಣ ಕಟ್ಟಿ ಮಹಾಧಿಕ್ ಉರುಳಿಕೊಂಡ.

ಮುಂದಿನ ಎರಡು ದಿನ ಅಂತಾರಾಷ್ಟ್ರೀಯ ಕಾನ್ಫರೆನ್ಸಿನಲ್ಲಿ ಮಂಡಿಸಲಿರುವ ಪ್ರಬಂಧದ ತಯಾರಿಯಲ್ಲೇ ಮಹಾಧಿಕ ಮುಳುಗಿದ್ದ. ಅಲ್ಲಿಗೆ ಹೋದಾಗ ಖರ್ಚಿಗೆ ಬೇಕಾಗುವ ಹಣವನ್ನು ಫಾರಿನ್ ಕರೆನ್ಸಿ ಕಾರ್ಡಿಗೆ ಚಾರ್ಜ್ ಮಾಡಲು ಫೋನಿನಲ್ಲಿ ಬ್ಯಾಂಕಿನ ap ತೆಗೆದವನಿಗೆ ಮೊದಲಿನ ನಾಲ್ಕು ಟ್ರಾನ್ಸಾಕ್ಷನ್ ಅಪರಿಚಿತ ಎನಿಸಿತು. ಪಕ್ಕದ ಊರಿನಲ್ಲಿ ಆಪಲ್ ಪೇ ನಲ್ಲಿ ಹಣ ಉಪಯೋಗಿಸಿರುವ ಮಾಹಿತಿ ಇತ್ತು. ಏನೋ ಮೋಸ ಇದೆ ಎಂದು ಅರಿವಾದೊಡನೆ ಬ್ಯಾಂಕಿಗೆ ಕರೆ ಮಾಡಿದ. ಎಲ್ಲ ವಿವರಗಳನ್ನು ಪಡೆದ ಬ್ಯಾಂಕಿನವರು, ನಿನ್ನ ಈಗಿನ ಕಾರ್ಡನ್ನು ರದ್ದು ಮಾಡಿ, ಹೊಸದನ್ನು ಕಳಿಸುತ್ತೇವೆಂದು ತಿಳಿಸಿದರು. ಇದು ಮೊದಲನೇ ಬಾರಿ ನೀನು ಮೋಸಹೋಗುತ್ತಿದ್ದಿಯ, ಸ್ವಲ್ಪವೇ ಹಣ ಕದ್ದಿದ್ದಾರೆ ಹಾಗಾಗಿ ಆದ ನಷ್ಟವನ್ನು ನಾವೇ ಭರಿಸುತ್ತೇವೆ ಎಂದು ಸಾಂತ್ವನಿಸಿದ್ದಲ್ಲದೇ ಇನ್ನು ಮುಂದೆ ಜಾಗ್ರತೆಯಲ್ಲಿರು ಎಂದೂ ಎಚ್ಚರಿಸಿದರು. ನೀನು ಉಪಯೋಗಿಸಿದ ಟಿವಿ ಲೈಸೆನ್ಸ್ ಸೈಟ್ ಮೋಸದ ಜಾಲ, ಈ ಪ್ರಸಂಗವನ್ನು ಫ್ರಾಡ್ ವಿಭಾಗಕ್ಕೆ ತಿಳಿಸಬೇಕಾಗುತ್ತದೆ, ಅವರೇ ಹೆಚ್ಚಿನ ವಿವರಗಳಿಗಾಗಿ ನಿನಗೆ ಫೋನ್ ಕೂಡ ಮಾಡಬಹುದೆಂದು ಹೇಳಿದರು. ಸಧ್ಯ, ಸಣ್ಣದರಲ್ಲೇ ಪಾರಾಗಿಬಿಟ್ಟೆ, ಇದಕ್ಕೆಲ್ಲ ಸುಮಾನೇ ಕಾರಣ ಎಂದು ಸಮಾಧಾನಪಟ್ಟುಕೊಳ್ಳುತ್ತಲೇ ಉರಿದುಕೊಂಡ. ಮನೆಗೆ ಬಂದವನೇ, ಬಟ್ಟೆ ಬದಲಾಯಿಸದೇ ಸುಮಾನ ಮೇಲೆ ಹರಿಹಾಯ್ದ. ಸುಮಾ ಉತ್ತರಿಸುವ ಮೊದಲೇ ಮಹಾಧಿಕನ ಫೋನ್ ರಿಂಗಣಿಸಿತು.


ಮಹಾಧಿಕ ಫೋನಿನಲ್ಲಿ ಬಂದ ನಂಬರ್ ಬ್ಯಾಂಕಿನದು ಎಂದು ತೋರುತ್ತಿದ್ದಂತೇ ಹಾರಿ ಬಿದ್ದು ಸ್ಟಡಿಗೆ ಓಡಿದ. ಅವನ ಊಹೆಯಂತೇ ಅದು ಬ್ಯಾಂಕಿನ ಫ್ರಾಡ್ ವಿಭಾಗದ್ದೆಂದು ಫೋನ್ ಮಾಡಿದಾತ ಖಚಿತ ಪಡಿಸಿ ತನ್ನ ಹೆಸರು ಟಿಮ್ ಎಂದು ಪರಿಚಯಿಸಿಕೊಂಡ. ಮೊದಲಿನಿಂದ ಕೊನೆಯವರೆಗೆ ವಿಶದವಾಗಿ ಮಹಾಧಿಕ ಹೇಳಿದ ವಿವರಗಳನ್ನೆಲ್ಲ ತೆಗೆದುಕೊಂಡ ಟಿಮ್, “ಇದು ಸಾಮಾನ್ಯದ ಸ್ಕ್ಯಾಮ್ ಅಲ್ಲ. ನಮಗೆ ಈ ಕೆಲವು ವಾರಗಳಲ್ಲಿ ಅನೇಕ ಗ್ರಾಹಕರು ಈ ಸ್ಕ್ಯಾಮ್ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾರ್ಡ್ ಬದಲಾಯಿಸಿದರೂ, ಖಾತೆಯ ಮಾಹಿತಿ ಪಡೆದ ಪುಂಡರು ಖಾತೆಯಿಂದ ಹಣ ಹೊಡೆಯುತ್ತಿದ್ದಾರೆ. ನೀನು ಬೇಗನೆ ಅಕ್ರಮ ಟ್ರಾನ್ಸಾಕ್ಷನ್ ಗಳನ್ನು ಪತ್ತೆ ಹಚ್ಚಿ ನಮಗೆ ತಿಳಿಸಿದ್ದು ಒಳ್ಳೆಯದಾಯಿತು. ಕೇವಲ ಕಾರ್ಡ್ ಬದಲಾಯಿಸಿದರೆ ಸಾಲದು, ನಿನ್ನ ಖಾತೆಯನ್ನೇ ಬದಲಾಯಿಸಬೇಕು ” ಎಂದು ವಿವರಿಸಿದಾಗ ಬೆವರುತ್ತಿದ್ದ ಮಹಾಧಿಕನಿಗೆ ಫ್ಯಾನಿನ ತಂಗಾಳಿ ಬಡಿದಂತಾಯ್ತು. ತಾನು ತೆಗೆದುಕೊಂಡ ಕ್ರಮ ಸರಿಯಾದದ್ದು ಎಂಬ ಶಿಫಾರಸ್ಸು ಸಿಕ್ಕಿದ್ದಕ್ಕೆ ಪುಳಕಿತಗೊಂಡ. ತಡ ಮಾಡದೇ ಟಿಮ್ ಹೇಳಿದಂತೆ ಫೋನಿನ apನಲ್ಲಿ ಆತ ಕೊಟ್ಟ ಖಾತೆಗೆ ತನ್ನ ಖಾತೆಯಲ್ಲಿದ್ದ ಹಣವನ್ನೆಲ್ಲ ap ಕೊಟ್ಟ ಎಚ್ಚರಿಕೆಗಳನ್ನೆಲ್ಲ ಧಿಕ್ಕರಿಸಿ ವರ್ಗಾಯಿಸಿದ. “ಹಣವೆಲ್ಲ ವರ್ಗಾವಣೆ ಆಯಿತಲ್ಲ, ಈಗ ಹೊಸ ಖಾತೆಯನ್ನು ತೆಗೆಯೋಣ” ಎಂದು ಟಿಮ್ ಹೇಳುತ್ತಿದ್ದಂತೇ ಫೋನ್ ಕಟ್ಟಾಯಿತು. ಅದೇ ನಂಬರಿಗೆ ಮತ್ತೆ ಮತ್ತೆ ಫೋನಾಯಿಸಿದರೂ ಎಂಗೇಜ್ ಟೋನ್ ಬಂತೇ ಹೊರತು ಟಿಮ್ ನ ದನಿ ಕೇಳ ಬರಲಿಲ್ಲ. ತಾನು ಖೆಡ್ಡಾಕ್ಕೆ ಬಿದ್ದೆ ಎಂದು ಮಹಾಧಿಕನಿಗೆ ಅರಿವಾಗತೊಡಗಿತು. ಬ್ಯಾಂಕ್ ap ಖಾತೆ ಬ್ಯಾಲೆನ್ಸ್ ಶೂನ್ಯ ಎಂದು ತೋರಿಸುತ್ತಿತ್ತು. ಹತಾಶೆ, ದುಃಖ, ಕೋಪಗಳೆಲ್ಲ ಮೇಳೈಸಿ ಮಹಾಧಿಕ ಕೂಗುತ್ತ, ಬೂಟು, ಟೈ, ಬಟ್ಟೆಗಳನ್ನು ಕಿತ್ತೆಸೆಯುತ್ತಿದ್ದ. ಅವನ ಕೂಗನ್ನು ಕೇಳಿ ಓಡಿ ಬಂದ ಸುಮಾ ಬಾಗಿಲ ಬಳಿ ಬೆಕ್ಕಸ ಬೆರಗಾಗಿ ನಿಂತಿದ್ದಳು.

-ರಾಂ

5 thoughts on “ಮಹಾಧಿಕನಿಗೆ ಬಂದ ಫೋನ್ ಕಾಲ್ 

  1. A short but, quick-paced story on an ever-increasing menace of modern times. A good warning to remind this can happen to anyone in a weak moment.

    Laxminarayan

    Like

  2. ಸಣ್ಣ ಕಥೆಗಳ – ಅದರಲ್ಲೂ ಇಂಥ ರಾಮ್ ಅವರ ಮಿನಿ ಕಥೆಗಳ – ಜೀವಾಳ,ಪ್ಲಾಟ್ ನಂತರ, ಪಾತ್ರಗಳು ಮತ್ತು ಅವುಗಳ ಹೆಸರುಗಳು, ಅವುಗಳ ಆಯ್ಕೆ ಮುಖ್ಯ. ಇಲ್ಲಿ ಮಿಸ್ಟರ್ ಪರ್ಫೆಕ್ಟ್ ಎನ್ನುವ ಪೀಠವನ್ನಲಂಕರಿಸಲು ಹೂರಟ ನಾಯಕ ಮಹಾಧಿಕನ ಅವನತಿಯೇ ಅದರ ವಸ್ತು. ಆನೆಗೂ ಕಾಲು ಒಮ್ಮೊಮ್ಮೆ ಜಾರುತ್ತದೆ! ಮಹಾಡೀಕ್ ಮಹಾರಾಷ್ಟ್ರದಲ್ಲಿ ಕೇಳಿಬರುವ ಹೆಸರು. ಅದನ್ನು ಮಹಾ+ಅಧಿಕ ಅಂತ ಸವರ್ಣದೀರ್ಘ ಸಂಧಿ ಮಾಡಿದ್ದರ ವ್ಯಂಗಾರ್ಥ ಅನುಚಿತವಲ್ಲ. ಬರವಣಿಗೆಯಲ್ಲೇ ಕಥೆಯ ಯಶಸ್ಸಿದೆ ಅನ್ನ ಬಹುದು! 👏👏 ಶ್ರೀವತ್ಸ ದೇಸಾಯಿ

    Like

  3. Financial fraud ಬಗ್ಗೆ ಇರುವ ಈ ಸಣ್ಣ ಕಥೆ ಚೆನ್ನಾಗಿದೆ

    ಮಹಾಧಿಕ ಹೆಸರನ್ನು ಮಧ್ಯೆದಲ್ಲಿ ಒಡೆದಿರುವುದು ಸ್ವಾರಸ್ಯಕರವಾಗಿದೆ

    Like

  4. Well written Ram about very relevant current topic. Anybody can fall pray to these scams. The message is very clear from the story. Keep writing.

    Like

  5. ರಾಮಶರಣ ಬರೆದ ಕಥೆಯ ಮೊದಲ ಪ್ಯಾರಾ ಓದಿ ಕಥೆ ಯುನಿವರ್ಸಿಟಿಯ ರಾಜಕೀಯದ ಬಗ್ಗೆ ಇರಬಹುದು ಎಂದುಕೊಂಡೆ, ಆದರೆ ಕಥೆ ಮಹಾಧಿಕನ ಗರ್ವಭಂಗದ ಕತೆಯಾಗಿ, ಅಂತ್ಯವಂತೂ ಇನ್ನೂ ಚುರುಕು ಕೊಟ್ಟಿತು. ಆನ್-ಲೈನ್ ಫ್ರಾಡ್ ಬಗ್ಗೆ ಎಚ್ಚರಿಸುವ ಕತೆ. ಕತೆಗಳ ಬರವಣಿಗೆ ಹೀಗೇ ಮುಂದುವರಿಯಲಿ. – ಕೇಶವ

    Like

Leave a Reply to Keshav Kulkarni Cancel reply

Your email address will not be published. Required fields are marked *