ಕವಿ ಯಾವ ವಿಚಾರಗಳ ಬಗ್ಗೆ ಕವಿತೆ ಬರೆಯ ಬೇಕು ಮತ್ತು ಹಾಗೆ ಬರೆದ ಕವಿತೆ ಓದುಗರಲ್ಲಿ ಯಾವ ರೀತಿ ಪರಿಣಾಮವನ್ನು ಉಂಟುಮಾಡುತ್ತದೆ ಎಂಬ ತುಮುಲ ಅಥವಾ ಗೊಂದಲ ಕವಿಗಳನ್ನು ಕಾಡುವ ವಿಷಯ. ಅದೆಷ್ಟೋ ಕವಿತೆಗಳು ಓದುಗರ ನಿರೀಕ್ಷೆಗೆ ಮುಟ್ಟುತ್ತದೆ ಮತ್ತೆ ಕೆಲವು ಸ್ವೀಕೃತಗೊಳ್ಳುವುದಿಲ್ಲ. ಹೀಗೆ ಹಲವಾರು ಕವಿತೆಗಳು ಹುಟ್ಟುತ್ತವೆ, ಕೆಲವು ಜೀವಂತವಾಗಿರುತ್ತದೆ, ಕೆಲವು ಸತ್ತು ಹೋಗುತ್ತವೆ. ಈ ಒಂದು ಹಿನ್ನೆಲೆಯಲ್ಲಿ ನನ್ನ ಕವಿತೆ ತುಮುಲ ಮೂಡಿ ಬಂದಿದೆ.
ನನ್ನ ಇನ್ನೊಂದು ಕವಿತೆ ಪರಿಸರದ ಬಗ್ಗೆ ಕಾಳಜಿಯನ್ನು ಕುರಿತಾಗಿದೆ. ಮರ ಮಾತನಾಡಲು ಸಾಧ್ಯವಿದ್ದಲ್ಲಿ ಮರ ಕಡಿಯಲು ಬಂದ ವ್ಯಕ್ತಿಗೆ ಮರ ಏನು ಹೇಳುತ್ತಿತ್ತು ಎಂಬ ಕಲ್ಪನೆಯಲ್ಲಿ ಕವಿತೆ ರಚಿಸಲಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ನನ್ನ ಹೊಸ ಕವನ ಸಂಕಲನ ಬಿಡುಗಡೆಯಾಗಲಿದೆ. ಆ ಸಂಕಲನದಿಂದ ಒಂದೆರಡು ಕವಿತೆಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಇದು ಬಿಡುಗಡೆಯ ಮುಂಚಿನ ಪ್ರಮೋ ಎಂದು ಕರೆದರೆ ತಪ್ಪಾಗಲಾರದು.
ತುಮುಲ
ಬೇಡುತ್ತೀರಿ ರಸಿಕರೇ ನೀವು
ದಿನಕ್ಕೊಂದು ಕವಿತೆಯ
ತೋಚದೆ ಗೀಚಿದ ಹಾಳೆಗಳು
ಸೇರಿವೆ ಕಸದ ಬುಟ್ಟಿಯ
ಹೀಗೆ ಬರೆದರೆ ಬಲಪಂಥ
ಹಾಗೆ ಬರೆದರ ಎಡಪಂಥ
ಕೆಲವರ ನಿಲುವು ತಟಸ್ಥ;
ಎಲ್ಲಿಯೂ ಸಲ್ಲದ ನಡುಪಂಥ
ಹೀಗೆ ಬರೆದರೆ
ಭಟ್ಟಂಗಿಗಳ ಬೆದರಿಕೆ
ಹಾಗೆ ಬರೆದರೆ
ವಿಮರ್ಶಕರ ಹೆದರಿಕೆ
ಹೀಗೆ ಬರೆದರೆ
ಚುಟುಕ, ಕಿರುಕವಿತೆ
ಹಾಗೆ ಬರೆದರೆ
ಹಳೆ ಶೈಲಿ ನೀಳ್ಗವನ
ಹೀಗೆ ಬರೆದರೆ ಅದು
ವಿವಾದಾಸ್ಪದ ರಾಜಕೀಯ
ಹಾಗೆ ಬರೆದರೆ ಅವ ಅನಿವಾಸಿ ಕವಿ
ಭಾವನೆಗಳು ಪರಕೀಯ
ಬರೆಯ ಬಹುದು ಕವಿ
ಅವರಿವರ ಮೇಲೊಂದು ಕವಿತೆ
ಬರೆಯಲೇ ಬೇಕು ತನ್ನ
ಶ್ರೀಮತಿಯ ಮೇಲೊಂದು ಕವಿತೆ
ಕವಿತೆ ಬರೆಯುವನು ಕವಿ
ಎಷ್ಟಿದ್ದರೂ ಆಪತ್ತು
ಸೋಷಿಯಲ್ ಮೀಡಿಯಾಗಳ ನಡುವೆ
ನಿಮಗಿದೆಯೇ ಓದಲು ಪುರುಸೊತ್ತು?
ಮರದ ಮಾತು
ಕಡಿಯದಿರು ಮನುಜ
ನೀ ನನ್ನ ಬುಡವನ್ನು
ಮರೆಯಬೇಡ ನಿನ್ನ ಸ್ವಾರ್ಥ
ಸುಡುವುದೆಲ್ಲರನು
ಈ ಭೂಮಿ, ಈ ಹಸಿರು
ಈ ಗಾಳಿ, ಈ ನೀರು
ಮಿತವಾಗಿ ಬಳಸಿದರೆ
ಗೆಲ್ಲುವೆವು ನಾನು-ನೀನು
ಕಾಣದೆದೆಗಳ ಉಸಿರಾಟ
ನೂರಾರು ಇಲ್ಲಿ
ಬಿರು-ಬಿಸಿಲಿನ ತಾಪಕ್ಕೆ
ನೆರಳೂ ಇಲ್ಲಿ
ಪರಿಸರದ ಪ್ರೀತಿಯನು
ಉಳಿಸಿಕೋ ನಿನ್ನಲ್ಲಿ
ಹತ್ತಾರು ಸಸಿಗಳನ್ನು ನೆಟ್ಟು
ನೀರುಣಿಸಿ ನೀನ್ನಿಲ್ಲಿ
ನಿಸರ್ಗದಲ್ಲಿ ಒಂದಕ್ಕೊಂದು
ಕಾಣದ ಬೆಸುಗೆ
ಸೃಷ್ಟಿಯ ಸಂಕೀರ್ಣತೆಯು
ಅರ್ಥವಾಗದು ನಿನಗೆ
ನೀನು ಕೊಡಲಿ ಹಿಡಿಯುವ
ಮುನ್ನ ಇನ್ನೊಮ್ಮೆ ಯೋಚಿಸು
ಪರಿಣಾಮಗಳ ಬಗ್ಗೆ
ಆಳವಾಗಿ ಚಿಂತಿಸು
*
“ತುಮುಲ” ಕವಿಗೆ ಸೀಮಿತವಲ್ಲ. ಎಲ್ಲ ಬರಹಗಾರರಿಗೂ ಅನ್ವಯವಾಗುವ ದ್ವಂದ್ವಗಳನ್ನು ಕವನದಲ್ಲಿ ಸುಂದರವಾಗಿ ಸೆರೆ ಹಿಡಿದಿದ್ದೀರಿ, ಭಾವನೆಗಳನ್ನು ಬಿಡುಗಡೆ ಮಾಡಿದ್ದೀರಿ.
ಪಂಥಕ್ಕೆ ಬಾಧಸ್ಥರಾಗದೇ, ಕಾಲಂ ಇಂಚುಗಳ ಬಂಧನಕ್ಕೊಳಗಾಗದೆೇ ಸ್ವಚ್ಛಂದವಾಗಿ ಬರೆಯುವುದೇ ಬರಹಗಾರನ ಬದುಕೆಂಬುದು ನಾನು ಕಾಣುವ ಅರ್ಥ. ಸರಳವಾಗಿ ಓದುಗರು ತಲೆದೂಗುವಂತಹ ಕವನ
-ರಾಂ
LikeLike
ತುಮುಲ ಇಲ್ಲದವ ಕವಿಯಷ್ಚೇ ಅಲ್ಲ, ಯಾವ ಬರಹಗಾರನೂ ಇರಲಾರನು.
ತಮ್ಮ ಇತ್ತೀಚಿನಪುಸ್ತಕದ ಬಗ್ಗೆ ( ರೇಷ್ಮೆ ಬಟ್ಟೆ) ಬುಕ್ ಬ್ರಹ್ಮದಲ್ಲಿ ಕೊಟ್ಟ ಸಂದರ್ಶನದಲ್ಲಿ ವಸುಧೇಂದ್ರ ಅವರುಅದನ್ನೇ ಹೇಳಿಕೊಂಡಿದ್ದಾರೆ.
ಬರವಣಿಗೆಯಲ್ಲಿ ಪಾತ್ರಗಳಲ್ಲಿ ಬೇಕಾದಷ್ಟು ತುಮುಲಗಳು ಇದ್ದೆಇರುತ್ತವೆ. ಆದರೆ ಓದುಗರ ಬಗ್ಗೆಯೇ ಚಿಂತೆ, ತುಮುಲ. ಅಂದರೆ You are in great company!
ಎರಡನೆಯ ಕವನದಲ್ಲಿ ಮರವನ್ನು ಕಡಿಯಲು ಬಂದ ಕಟುಕರನ್ನು ಅಷ್ಟೊಂದು ಬೇಡಿ ಕೊಂಡರೂ ತಡೆದು ನಿಲ್ಲದೆ ತನ್ನ ದುಷ್ಕೃತ್ಯವನ್ನು ಮುಂದುವರಿಸಿದ ದುರುಳನ ಕೊಡಲಿಯ ಅಲಗಿಗೆ ಸುಗಂಧ ಲೇಪಿಸುವದು ತನ್ನ ಧರ್ಮ ಅಂತ ಸಜ್ಜನರ ಕೆಲಸದಂತೆ ಮಾಡದೆ ಇರುವದಿಲ್ಲ ಅನ್ನುವ ಸುಂದರ ಸಂಸ್ಕೃತ ಸುಭಾಷಿತವಿದೆ: ಛೇದೇಪಿ ಚಂದನತರುಃ ಸುರಭಯತಿ ಮುಖಂ ಕುಠಾರಸ್ಯ!
ಪ್ರಮೋ(ಷನ್)ದಲ್ಲೇ ತುಂಬಿರುವಿರಿ
ಇಷ್ಟೊಂದು ಇಮೋ(ಷನ್)!
ಎಷ್ಟೊಂದು ಇದ್ದೀತು
ಪುಸ್ತಕದ ತುಂಬ?
Can’t wait!
ಶ್ರೀವತ್ಸ ದೇಸಾಯಿ
LikeLike
ಕವಿತೆ ಯರ್ಯಾರಿಗೆ ಹೇಗೇಗೆ ಕವಿಯುತ್ತೋ ಯಾರಿಗೆ ಗೊತ್ತು? ನೀ ಹಿಂಗ ನೋಡಬ್ಯಾಡ ನನ್ನ… ಎಂದು ದುಃಖದ ಬೇಂದ್ರೆಯ ಕವಿತೆ ನನ್ನ ಗೆಳೆಯನ ಬಾಯಲ್ಲಿ ಪ್ರೇಮಗೀತೆಯಾಗಿತ್ತು! ಅಪಾರ್ಥಗಳು ಆಗಲಿ ಬಿಡಿ.
ಗೀಚಿದ್ದೆಲ್ಲ ಕವಿತೆಯಾಗುವುದಿಲ್ಲ, ಆದರೆ ಕೆಲವೊಮ್ಮೆ ಕಸದ ಬುಟ್ಟಿಗೆಸೆದ ಸಾಲುಗಳಲ್ಲಿ ಕವಿತೆಯ ಹೊಳಪಿರುತ್ತವೆ, ತೆಗೆದು ನೋಡಿ.
ಡಗಾಲು ಕೆಲವೊಮ್ಮೆ ಬಲಕ್ಕೆ ಹೊರಳಿದರೂ ಪರವಾಗಿಲ್ಲ, ಎಡಬಲದ ಚಿಂತೆಯನ್ನು ಓದುಗನಿಗೇ ಬಿಟ್ಟುಬಿಡಿ.
ಹೊಗಳಿ ಹೊನ್ನಶೂಲಕ್ಕೆ ಹಾಕುವವರಿಗಿಂತ ತೆಗಳಿ ಮತ್ತೆ ಬಗ್ಗಿಸುವ ವಿಮರ್ಶಕರೇ ಇರಲಿ ಬಿಡಿ.
ಚುಟುಕ, ಕವಿತೆ, ಕವನ, ಕಾವ್ಯ, ಯಾವ ಪ್ರಕಾರವಾದರೇನು, ಕಲಿಯುವುದನ್ನು ಬಿಡಬೇಡಿ.
ರಾಜಕೀಯ, ಪರಕೀಯದ ಚಿಂತೆ ಏಕೆ, ಅಂದುಕೊಳ್ಳೂವ ಜನರು ಅಂದುಕೊಳ್ಳಲಿ, ಬಿಡಿ.
ಪ್ರೇಯಸಿಯ ಮೇಲೆ ಯಾರು ಬೇಕಾದರೂ ಕವಿತೆ ಬರೆಯಬಹುದು, ಶ್ರೀಮತಿಯ ಮೇಲೆ ಕವಿತೆ ಬರೆಯಲು ಕೆ.ಎಸ್.ಎನ್ ಹತ್ತಿರ ಕೇಳಿಬಿಡಿ.
ಸೋಶಿಯಲ್ ಮೀಡಿಯಾ ಬಂದ ಮೇಲೆ ಕವಿಗಳ ಸಂಖ್ಯೆಯಲ್ಲಿ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ, ನಿಮ್ಮದೂ ಒಂದು ಸೇರಿಸಿಬಿಡಿ
ಎಲ್ಲ ಓದಲಿ ಎಂದು ನಾನು ಕವಿತೆ ಬರೆಯುವುದಿಲ್ಲ, ಕವಿತೆ ಬರೆಯುವುದು ಅನಿವಾರ್ಯ ಕರ್ಮ ನನಗೆ, ಎಂದು ಬರೆಯುತ್ತಲಿದ್ದುಬಿಡಿ
LikeLike
1.ತುಮುಲದ ಹಿಂದಿನ ಭಾವನೆಗಳು ಎಲ್ಲ ಕವಿಗಳಿಗೆ ಸಮಾನ್ಯವಾಗಿ ಇರುತ್ತವೆ.
ತಾನು ಬರೆದ ಕವಿತೆ ಜನರಿಗೆ ಮುಟ್ಡುತ್ತದೊ ಇಲ್ಲವೊ ಎನ್ನುವ ಜಿಜ್ಞಾಸೆ ಖಂಡಿತ ಇರುತ್ತದೆ,
ಸಮಾನ್ಯ ಓದುಗರಿಗೆ ಒಮದು ಸ್ತರದಲ್ಲಿ ಅರ್ಥವಾದರೆ ವಿಮರ್ಶಕರಿಗೆ ಮತ್ತೊಂದು ಸ್ತರದಲ್ಲಿ ಕವಿತೆಯ ನಾಡಿಯನ್ನು ಪರೀಕ್ಷಿಸುತ್ತಾರೆ,
ಒಬ್ಬ ಹಾಡುಗಾರನಿಗೆ ಕವಿತೆಯ್ಲಿನ ನಾದ, ಭಾವ, ಸ್ವರಲಾಲಿತ್ಯ , ಏರಿಳಿತಗಳಿಗೆ ಅವಕಾಶವಿದೆಯೆಂದು ಮನಗಂಡರೆ ಅದು ಹಾಡುಗ/ಹಾಡುಗಾರ್ತಿಯ ಸಿರಿಕಂಠದಿಂದ ಬಹುಬೇಗ ಜನಪ್ರಿಯವಾಗುತ್ತವೆ.
ಎಲ್ಲದರ ಹೊರತಾಗಿ ಕವಿಸಮಯದಲ್ಲಿ ಕವಿಗೆ ಹೊಳೆದ ಸ್ಫುರಣವು ಸಮರ್ಪಕವಾಗಿ ಅಭಿವ್ಯಕ್ತಿಯಾಗಿದೆಯೇ ಎನ್ನುವುದರ ಕಡೆ ಲಕ್ಷ್ಯ ಕೊಡಬೇಕು, ಇದಕ್ಕೆ ಬಹಳಷ್ಟು ಕೃಷಿ ಮಾಡಬೇಕು ಕೆಲವರಿಗೆ ಸ್ವಭಾವತಃ ಒಲಿಯುತ್ತದೆ ಕೆಲವರಿಗೆ ನಿರಂತರ ಸಾಧನೆಯ ಅವಶ್ಯಕತೆ ಇರುತ್ತದೆ.
2. ಮರದ ಮಾತು – ಕವಿತೆಯಲ್ಲಿ ಪರಿಸರ ಕಾಳಜಿ ಸಹಜವಾಗಿ ಹೊರಬಂದಿದೆ,
ವಾಸ್ತವದಲ್ಲಿ ಕಾಳಜಿಯಿರುವವರ ಸಂಖ್ಯೆ ಕಡಿಮೆಎನ್ನುವುದು ವಿಷಾದನೀಯ,
ಇನ್ನೂ ಕೆಲವರಿ ಕಾಳಜಿಯಿರುವವರಂತೆ ಪುಂಖಾನುಪುಂಖವಾಗಿ ಮಾತಾಡುತ್ತಾರೆ , ಕೊಡುಗೆ ಏನೂ ಇರುವುದಿಲ್ಲ, ಕೆಲವರು ಬಹಳಷ್ಟು ಕೊಡುಗೆ ಕೊಟ್ಟರೂ ಸಾಮಾನ್ಯರಂತೆ ಇರುತ್ತಾರೆ
(ಉದಾಹರಣೆ: ಗ್ರೆಟಾ ಥರ್ನ್ಬರ್ಗ್ vs ಸಾಲು ಮರದ ತಿಮ್ಮಕ್ಕ)
ಈ ವಾರದ ನಿಮ್ಮ ಕವನಗಳನ್ನು ನಮಗೆ ಓದಲು ಕೊಟ್ಟಿದಕ್ಕೆ ಧನ್ಯವಾದಗಳು
📝 ವಿಜಯನರಸಿಂಹ
LikeLike