ಪ್ರಿಯ ಓದುಗರಿಗೆ ನಮಸ್ಕಾರ,
ಸವಿ ನೆನಪುಗಳು ಬೇಕು ಸವಿಯಲಿ ಬದುಕು ಎಂಬುವುದು ಎಷ್ಟೊಂದು ನಿಜವಲ್ಲವೇ? ನಾವೆಲ್ಲಾ ನೆನಪಿನ ಡೋಣಿಯಲ್ಲಿ ಸಾಗುವ ಪಯಣಿಗರು. ಬಾಲ್ಯದಲ್ಲಿ ಕಳೆದ ದಿನಗಳ ಮತ್ತು ಘಟಿಸಿದ ಘಟನೆಗಳ ನೆನಪಂತೂ ಚಿರ ಮಧುರ. ಎಲ್ಲರ ಬದುಕಿನಲ್ಲೂ ಇಂತಹ ನೆನಪುಗಳು ಚಿರವಾಗಿರುವುದು ಸಹಜ. ನನ್ನೂರಿಗೆ ಹೋದಾಗ ಆಗಾಗ್ಗೆ ಮರುಕಳಿಸುವ ನನ್ನ ಬಾಲ್ಯದ ನೆನಪಿನ ಸಿಹಿಯನ್ನುಈ ಬರಹದ ಮೂಲಕ ನಿಮ್ಮ ಮುಂದೆ ಇಟ್ಟಿರುವೆ. ಸಾಧ್ಯವಾದರೆ ಓದಿ ಪ್ರತಿಕ್ರಿಯಿಸಿ. ನಿಮ್ಮ ಸಿಹಿಯನ್ನೂ ಹಂಚಿಕೊಳ್ಳಿ
– – ಇಂತಿ ಸಂಪಾದಕ
ಕಳೆದ ವರುಷ ಮೂರು ದಿನ ನಡೆದ ನಮ್ಮ ವೈದ್ಯ ಕಾಲೇಜಿನ ಸ್ನೇಹ ಕೂಟಕ್ಕೆಂದು ಹುಬ್ಬಳ್ಳಿಗೆ ಹೋಗಿದ್ದೆ. ಆ ಮೂರು ದಿನಗಳಲ್ಲಿ, ಯಾವ ದಿನ ಏನು ತೊಡಬೇಕು ಎಂದು ಮೂರು ತಿಂಗಳಿನಿಂದ ವಾಟ್ಸ್ ಆಪ್ ನಲ್ಲಿ ಭರ್ಜರಿ ಚರ್ಚೆ ನಡೆದಿತ್ತು. ಒಬ್ಬಬ್ಬರೂ ಒಂದೊಂದು ರೀತಿಯ ಸಲಹೆಯನ್ನು ಕೊಟ್ಟರೂ ಕೊನೆಗೆ, ಎಂದಿನಂತೆಯೇ ಹುಡುಗಿಯರದೇ ಮೇಲುಗೈ ಆಗಿ, ಎಲ್ಲರೂ ಫೋಟೋ ಸೆಶನ್ ಗೆ ಕಾಲೇಜಿನ ಹೆಸರಿದ್ದ ʼಹೂಡಿʼ ತೊಡಬೇಕೆಂದು ನಿರ್ಧಾರವಾಯಿತು. ಕಾಲೇಜಿನ ದಿನಗಳಲ್ಲಿ ʼಕಡ್ಡಿ ಪೈಲ್ವಾನ್ʼ ಎಂದು ಕರೆಸಿಕೊಳ್ಳುತ್ತಿದ್ದವರು ಈಗ ಎಕ್ಸ್ಟ್ರಾ ಲಾರ್ಜ್ ಹೂಡಿಯನ್ನು ಆರ್ಡರ್ ಮಾಡುತ್ತಿದ್ದನ್ನು ನೋಡಿ, ‘ದೊಡ್ಡ ಹೊಟ್ಟೆಯು ಸಿರಿವಂತಿಕೆಯ ಇನ್ನೊಂದು ಹೆಸರು’ (Obesity is the sign of prosperity) ಬಿಡು ಎಂತೆಂದುಕೊಂಡು, ಯುಕೆಯಲ್ಲಿಯ ಸಂಬಳದ ತಕ್ಕಂತೆ ನನ್ನ ಸೈಜು ಇನ್ನೂ ಮೀಡಿಯಂ ಇರುವದಕ್ಕೆ ಸ್ವಲ್ಪ ಬೇಜಾರು ಮತ್ತು ಖುಷಿಯಾದರೂ ಹೇಗೋ ಸಮಾಧಾನಪಟ್ಟುಕೊಂಡು ಸುಮ್ಮನಾದೆ.
ಹುಬ್ಬಳ್ಳಿಗೆ ಹೋಗುವ ಕೆಲವೇ ದಿನಗಳ ಮುಂಚೆ, ಪ್ರತಿಸಲದಂತೆ ನನ್ನ ಚಡ್ಡಿ ದೋಸ್ತನಿಂದ ಫೋನು ಬಂದಿತ್ತು. “ಹಾಂಗ ಏರ್ಪೋರ್ಟನ್ಯಾಗ ಒಂದೆರಡು ಸ್ಕಾಚ್ ಬಾಟಲಿ ಹಾಕೊಂಡು ಬರಾಕ ಮರಿಬ್ಯಾಡಲೇ” ಎಂದು ಹೇಳಿ, ಗ್ರೂಪಿನಲ್ಲಿ ಅಷ್ಟೊಂದು ಚರ್ಚೆಯಾಗಿದ್ದ ಹೂಡಿಯ ಬಗ್ಗೆ ಸ್ವಲ್ಪ ತಮಾಷೆ ತೆಗೆದುಕೊಳ್ಳುವ ರೀತಿಯಲ್ಲಿ ಕೇಳಿದ,
“ಲೇ ಹೂಡಿ ಅಂದರ ನಿನಗ ಏನಂತ ಗೊತ್ತೇನ್?”
ನಾನೂ ತಮಾಷೆಯಾಗಿ,
“ಏನೂ ಗೊತ್ತಿಲ್ಲ, ನಿನ್ನನ್ನ ಕೇಳಬೇಕಂತ ಮಾಡಿದ್ನಿ ನೋಡ”
ಅಂತೆಂದೆ (ಕಾಲೇಜಿನಲ್ಲಿದ್ದಾಗ ದೇವರಾಣೆಗೂ ನನಗ ಗೊತ್ತಿರಲಿಲ್ಲ).
ನಮ್ಮಿಬ್ಬರ ನಡುವೆ ಇದ್ದ ಅತೀ ಸಲಿಗೆಯಿಂದ ನನ್ನ ಕಾಲೆಳೆಯುತ್ತ,
“ಯಾವ ಹಳ್ಳಿಯಿಂದ ಬರ್ತಿರಲೇ, ಏನೂ ಗೊತ್ತಿಲ್ಲ. ಮೊದಲ, ನಮ್ಮ ಹಳ್ಳಿ ಜನಾ, ಮಳಿ ಚಳಿಯೊಳಗ ತಮ್ಮದ ರೀತಿಯಲ್ಲಿ ಗೋಣಿ ಚೀಲಾನ ಮಡಚಿಕೊಂಡು, ಮೈಮ್ಯಾಲ ಹಾಕೊತ್ತಿದ್ದರಲ್ಲ, ಈಗ ಹಾಂಗ ಸ್ಟೈಲ್ ಆಗಿ ಸ್ಟಿಚ್ ಮಾಡಿ, ಮ್ಯಾಲ ಏನೋ ಬರದ, ಹೂಡಿ ಅಂತ ಮಾರ್ತಾರ್ ನೋಡು” ಎಂದು ತಮಾಷೆ ಮಾಡಿದ.
ಅವನ ತಮಾಷೆಯು ನಿಜವೆನಿಸಿ, ಬಾಲ್ಯ ಜೀವನದಲ್ಲಿ ನನಗೂ ಮತ್ತು ಗೋಣಿ ಚೀಲಗಳಿಗೂ ಇದ್ದ ಸಂಬಂಧ ಮನಸಿನಲ್ಲಿ ಮಿಂಚಿ, ನನ್ನ ನೆನಪಿನಂಗಳದಲ್ಲಿ ಮತ್ತೊಮ್ಮೆ ಆ ಚೀಲಗಳು ನಯವಾಗಿ ತೇಲಿ ಬಂದಿದ್ದವು.
ನಮ್ನ ಹಳ್ಳಿಯಲ್ಲಿ, ಗೋಣಿ ಚೀಲಗಳು ಜನರ ನಿತ್ಯ ಜೀವನದ ಅವಿಭಾಜ್ಯ ಅಂಗಗಳಾಗಿದ್ದವು. ಹೊತ್ತುಕೊಳ್ಳಲು, ನೆಲದ ಮೇಲೆ ಹಾಸಿ ಕುಳಿತುಕೊಳ್ಳಲು, ಮಲಗಿಕೊಳ್ಳಲು, ದವಸ ಧಾನ್ಯಗಳನ್ನು ತುಂಬಿಡಲು, ಅಷ್ಟೇ ಏಕೆ? ಉಪಯೋಗವಿರುವ /ಇಲ್ಲದಿರುವ ವಸ್ತುಗಳನ್ನು ಕೂಡಿ ಹಾಕಲು, ಗೋಣಿ ಚೀಲಗಳು ಮುಂದಾಗುತ್ತಿದ್ದವು. ಇದಕ್ಕೆ ನಮ್ಮ ಮನೆಯೇನೂ ಹೊರತಾಗಿರಲಿಲ್ಲ. ಹಾಗೆಯೇ ನನ್ನ ಮತ್ತು ಗೆಳೆಯರ ಪಾಟಿಚೀಲದಲ್ಲೊಂದು ಸಣ್ಣ ಗೋಣಿ ಚೀಲವು ಯಾವಾಗಲೂ ವಕ್ಕರಿಸಿರುತ್ತಿತ್ತು. ಊರಲ್ಲಿ ಆಗಬೇಕಾಗಿದ್ದ ಕನಸಿನ ಶಾಲೆಯ ಕಟ್ಟಡ ಇನ್ನೂ ಸರಕಾರದ ಅನುಮತಿಗಾಗಿ ಕಾಯುತ್ತಲಿತ್ತು. ಹೀಗಾಗಿ, ಊರ ಪಂಚಾಯತಿಯಲ್ಲಿ ಇದ್ದಿದ್ದ ನಮ್ಮ ಶಾಲೆಯಲ್ಲಿ, ಮಾಸ್ತರರಿಗೆ ಕೂಡ್ರಲು ಒಂದು ಕುರ್ಚಿ ಬಿಟ್ಟರೆ, ಈಗಿನಂತೆ ನಮಗೆ ಯಾವ ಬೆಂಚುಗಳು ಇರಲಿಲ್ಲ. ಪಾಟಿಚೀಲದಲ್ಲಿ ಇರುತ್ತಿದ್ದ ಗೋಣಿ ಚೀಲವೇ ನಮ್ಮೆಲ್ಲರ ಕುಂಡಿಗೆ ಹಾಸಿಗೆಯಾಗುತ್ತಿತ್ತು. ಮನೆಗೆ ಮರಳುವಾಗ ಮಳೆ ಏನಾದರೂ ಬಂದರೆ, ಅದೇ ರೈನ್ ಕೋಟ್ ಕೂಡಾ ಆಗಿ ಮೈಯನ್ನು ರಕ್ಷಿಸುತ್ತಿತ್ತು. ಹೀಗಾಗಿ, ನನಗೆ ಅದರ ಮೇಲೆ ಎಷ್ಟೊಂದು ಪ್ರೀತಿ ಇತ್ತೆಂದರೆ, ಕೆಲವು ಸಲ ಪಾಟಿಚೀಲದಲ್ಲಿ ಪುಸ್ತಕ ಹಾಕಿಕೊಳ್ಳುವದನ್ನು ಮರೆತರೂ ಗೋಣಿ ಚೀಲವನ್ನು ಮಡಗಿಕೊಳ್ಳುವದನ್ನು ಮಾತ್ರ ಮರೆಯುತ್ತಿರಲಿಲ್ಲ. ಇದು ನನ್ನ ಸ್ವಂತ ಗೋಣಿ ಚೀಲದ ವಿಷಯವಾದರೆ, ಮನೆಯಲ್ಲಿದ್ದ ಚೀಲಗಳ ಕತೆಯೇ ಬೇರೆಯಾಗಿತ್ತು.
ನಮ್ಮ ಮನೆಯಲ್ಲಿ ಐದಾರು ಗೋಣಿ ಚೀಲಗಳು, ಮನೆಯವರ ಹೊಟ್ಟೆಯ ಹಸಿವಿಗೆ ಆಹಾರವಾಗಲು ಕಾಯುತ್ತಿರುವ ಕಾಳು ಕಡಿಗಳನ್ನು ತುಂಬಿಕೊಂಡು, ತುಂಬು ಬಸುರಿಯ ಹೊಟ್ಟೆಯಂತೆ ಉಬ್ಬಿಕೊಂಡು, ಮನೆಯ ಮೂಲೆಯಲ್ಲಿ ಯಾವಾಗಲೂ ಮಲಗಿರುತ್ತಿದ್ದವು. ದಿನಗಳು ಉರುಳಿದಂತೆ ಅವುಗಳೆಲ್ಲ ಖಾಲಿಯಾಗಿ, ಪ್ರಸವ ಆದಮೇಲೆ ಚಪ್ಪಟೆಯಾಗುವ ಹೆಂಗಳೆಯರ ಹೊಟ್ಟೆಯಂತೆ ಕಂಡು, ಮರು ಗರ್ಭಕ್ಕೆ ಕಾಯುವ ಗರ್ಭಕೋಶದಂತೆ ಮತ್ತೆ ಕಾಳು ಕಡಿಗಳಿಂದ ಉಬ್ಬಿಕೊಳ್ಳಲು ಕಾಯುತ್ತಲಿದ್ದವು. ಬುದ್ಧಿ ತಿಳಿದಾಗಿನಿಂದಲೂ ಇದನ್ನು ನೋಡುತ್ತಿದ್ದ ನನ್ನ ಮನಸಿಗೆ, ಅವುಗಳ ಬಗ್ಗೇನೂ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೆ, ಮನೆಯ ಸಣ್ಣ ಮಾಡಿಗೆಯ ಮೇಲೆ, ಕಳೆದ ಎರಡು ವರ್ಷಗಳಿಂದ ಖಾಲಿಯಾಗದೆ ಉಬ್ಬಿ ಮಲಗಿದ್ದ ಎರಡು ಗೋಣಿ ಚೀಲಗಳ ಬಗ್ಗೆ ಬಹಳೇ ಕುತೂಹಲವಿತ್ತು. ಅವುಗಳ ಗರ್ಭದಲ್ಲಿ ಏನಿರಬಹುದೆಂದು ಹಗಳಿರಲು ಯೋಚಿಸಿ, ಅವ್ವ, ಅಕ್ಕ ಮತ್ತು ಅಣ್ಣಂದಿರನ್ನು ಕೇಳಿದರೂ, ಯಾವುದೇ ನಿರ್ಧಿಷ್ಟ ಉತ್ತರ ದೊರಕದೆ ನಿರಾಶ್ರಿತನಾಗಿ, ನನ್ನ ಕಿಡಿಗೇಡಿತನಕ್ಕೆ ಯಾವಾಗಲೂ ಉಗಿಯುತ್ತಿದ್ದ ಅಪ್ಪನನ್ನು ಕೇಳಲೋ ಬೇಡವೋ ಎಂದು ಮನಸ್ಸಿನಲ್ಲಿಯೇ ಸರ್ಕಸ್ ಮಾಡಿ, ಕೊನೆಗೊಂದು ದಿನ ಧೈರ್ಯದೊಂದಿಗೆ ಕೇಳಿಯೇ ಬಿಟ್ಟಿದ್ದೆ.
“ನೀ ಏನಾದ್ರು ಕಿತಾಪತಿ ಮಾಡು, ಆದ್ರ ಆ ಚೀಲಗಳನ್ನ ಮಾತ್ರ ಮುಟ್ಟಬ್ಯಾಡ” ಎಂದು ಕಡಕ ಉತ್ತರಕೊಟ್ಟ ಅಪ್ಪನ ಮಾತುಗಳು, ನನ್ನ ಪ್ರಶ್ನೆಗೆ ಉತ್ತರ ಕೊಡದಿದ್ದರೂ, ಚೀಲಗಳ ಬಗ್ಗೆ ಇದ್ದ ನನ್ನ ಕುತೂಹಲವನ್ನು ಇನ್ನಷ್ಟು ಹೆಚ್ಚಿಗೆ ಮಾಡಿಸಿದ್ದವು. ಬೇಡವೆಂದರೆ ಹಠಮಾರಿತನದಿಂದ ಇನ್ನಷ್ಟು ಹೆಚ್ಚಿಗೆ ಮಾಡಬೇಕು ಎನ್ನುವ ತುಂಟು ವಯಸು ಅದಾಗಿತ್ತು. ಅವುಗಳನ್ನು ಹೇಗಾದರೂ ಮಾಡಿ ಮುಟ್ಟಿ, ಬಿಚ್ಚಿ, ಅವುಗಳ ಉದರದಲ್ಲಿ ಏನಿದೆ ಎಂದು ತಿಳಿದುಕೊಳ್ಳಲೇ ಬೇಕು ಎಂದು ಅಪ್ಪನ ಆಜ್ಞೆಗೆ ವಿರುದ್ಧವಾಗಿ, ಆಗಲೇ ನನ್ನ ಮನಸು ನಿರ್ಧಾರ ಮಾಡಿದ್ದಾಗಿತ್ತು. ಅವಕಾಶಕ್ಕಾಗಿ ಕಾಯುತ್ತಲಿದ್ದೆ.
ಅದೊಂದು ದಿನ ಅಪ್ಪಾ ಊರಲ್ಲಿ ಇಲ್ಲದಾಗ, ಹರ ಸಹಾಸ ಮಾಡಿ, ಅಕ್ಕನ ಬೈಗುಳಗಳಿಗೆ ಕಿಂಚಿತ್ತು ಕಿವಿ ಕೊಡದೆ, ಅಪ್ಪನಿಂದ ಬರಲಿರುವ ಭಾರೀ ಶಿಕ್ಷೆಗೆ ತಯ್ಯಾರಾಗಿ, ಮಡಿಗೆಯನ್ನು ಏರಿ, ಆ ಗೋಣಿ ಚೀಲಗಳ, ಗಟ್ಟಿಯಾಗಿ ಮುಚ್ಚಿದ ಬಾಯಿಯನ್ನು ಬಿಚ್ಚುವಲ್ಲಿ ಕೊನೆಗೊ ಸಫಲವಾಗಿದ್ದೆ. ಅವುಗಳ ಉದರದಲ್ಲಿ ಅಡಗಿದ್ದ ಪುಸ್ತಕಗಳ ರಾಶಿಯನ್ನು ನೋಡಿ ಬೆರಗಾಗಿದ್ದೆ. ಜೋಗದ ಜಲಪಾತವನ್ನು ಕಂಡು ʼಎಷ್ಟೊಂದು ಶಕ್ತಿ ಹಾಳಾಗುತ್ತಿದೆಯಲ್ಲʼ ಎಂತೆಂದಿದ್ದ ವಿಶ್ವೇಶ್ವರಯ್ಯನವರಂತೆ, ʼಈ ಗೋಣಿ ಚೀಲಗಳಲ್ಲಿ ಎಷ್ಟೊಂದು ಜ್ಞಾನ ಬಂಢಾರ ಕೊಳೆಯುತ್ತಿದೆಯಲ್ಲʼ ಎಂದು ನಾನೂ ಕೂಡಾ ಉದ್ಘಾರವೆತ್ತಿರಬಹುದೇನೋ ಎಂಬುದರ ಅರಿವಿಲ್ಲ. ಮನೆಯಲ್ಲಿ ದಂಡು ಕಟ್ಟಿಕೊಂಡು ಸೈನಿಕರಂತೆ ಓಡಾಡುತ್ತಿದ್ದ ಇಲಿಗಳ ಧಾಳಿಯಿಂದ ತಪ್ಪಿಸಿಕೊಳ್ಳಲು ಆ ಪುಸ್ತಕಗಳು ಯಶಶ್ವಿಯಾಗಿದ್ದರೂ, ಜೊಂಡಿಗೆಗಳ ನುಸುಳಿಕೆಯನ್ನು ತಡೆಯುವದರಲ್ಲಿ ವಿಫಲವಾಗಿ, ಕೆಲವು ಪುಸ್ತಕಗಳ ಪುಟಗಳು ಅವುಗಳ ಹಸಿದ ಹೊಟ್ಟೆಗೆ ಆಹಾರವಾಗಿದ್ದು ದುರದೃಷ್ಟಕರ ಸಂಗತಿಯಾಗಿತ್ತು.
ಆಗ, ಹುಬ್ಬಳ್ಳಿಯಲ್ಲಿ ಹುಟ್ಟಿ, ಉತ್ತರ ಕರ್ನಾಟಕದ ಮೂಲೆ ಮೂಲೆಗಳನ್ನು ತಲಪುತ್ತಿದ್ದ, ಕೆಲವು ಸಲ, ಕೆ ಎಸ್ ಆರ್ ಟಿ ಸಿ ಯ ಕೆಂಪು ಬಸ್ಸಿನ ಎಡವಟ್ಟಿನಿಂದಾಗಿ ಎರಡು ದಿನಕ್ಕೊಮ್ಮೆ ಊರಿಗೆ ಬರುತ್ತಿದ್ದ ʼಸಂಯುಕ್ತ ಕರ್ನಾಟಕʼ ದಿನ ಪತ್ರಿಕೆಯೇ ನನಗೆ ಚಂದಮಾಮ, ಸುಧಾ, ತರಂಗ … ಎಲ್ಲವೂ ಆಗಿತ್ತು. ಪತ್ರಿಕೆಯ ಮೊದಲು ಸಾಲಿನಿಂದ ಹಿಡಿದು ಕೊನೆಯದರವರೆಗೆ ಅರ್ಥವಾದರೂ, ಆಗದಿದ್ದರೂ ಸರಿ ಎಲ್ಲವನ್ನೂ ಓದಿ ತೃಪ್ತಿ ಪಡುತ್ತಿದ್ದ ನನಗೆ, ಈ ಪುಸ್ತಕಗಳ ರಾಶಿಯನ್ನು ಕಂಡು ಸ್ವರ್ಗವೇ ಸಿಕ್ಕಂತಾಗಿತ್ತು. ಹಾಗೆಯೆ, ಹಾಳಾಗುತ್ತಲಿದ್ದ ಪುಟಗಳನ್ನು ನೋಡಿ ಬೇಜಾರಾಗಿತ್ತು. ಚೀಲದಲ್ಲಿ ಅವು ಸೆರೆಯಾಗಿ ಕುಳಿತ್ತಿದ್ದಕ್ಕೆ ಸಾಕ್ಷಿ ಎಂಬಂತೆ ಕೆಲವು ಪುಸ್ತಕಗಳ ಬಿಳಿಯ ಪುಟಗಳು ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತಲಿದ್ದವು. ಮನಸಿಗೆ ಬೇಕೆನಿಸಿದ ಪುಸ್ತಕಗಳನ್ನು ಗೋಣಿ ಚೀಲಗಳ ಸೆರೆಯಿಂದ ಬಿಡಿಸಿ, ಅಪ್ಪನ ಆಜ್ಞೆಯನ್ನು ಸಂಪೂರ್ಣವಾಗಿ ಕಡೆಗೆಣಿಸಿ, ಅವುಗಳ ಅಧಿಕೃತ ಅಧಿಪತಿ ನಾನೇ ಎಂದು ಭಾವಿಸಿ, ಮನೆಯಲ್ಲಿದ್ದ ಜಾಲಿಯ ಅಂಟು ಮತ್ತು ದಿನ ಪತ್ರಿಕೆಯ ಪೇಪರಿನಿಂದ ಅವುಗಳ ಜೀರ್ಣೋದ್ಧಾರದ ಕಾರ್ಯಕ್ಕೆ ತೊಡಗಿಯೇ ಬಿಟ್ಟಿದ್ದೆ.
ಮನೆಗೆ ಮರಳಿದ್ದ ಅಪ್ಪನಿಗೆ ವಿಷಯ ಗೊತ್ತಾಗಿ ಕೆಂಡಾ ಮಂಡಲವಾಗಿದ್ದರೂ, ಓರಣವಾಗಿ ಗೋಡೆಯ ಗೂಡಿನಲ್ಲಿ ಕುಳಿತ್ತಿದ್ದ ಪುಸ್ತಕಗಳನ್ನು ಕಂಡು ಸಮಾಧಾನವಾಗಿ, ನನಗೆ ಆ ಪುಸ್ತಕಗಳ ಮತ್ತು ಗೋಣಿ ಚೀಲಗಳ ಹಿಂದೆ ಅಡಗಿದ್ದ ರಹಷ್ಯವನ್ನು ಬಿಚ್ಚಿ ಹೇಳಿದ್ದರು. ನಮ್ಮ ಹಳೆಯ ಊರಿನ ಶಾಲೆಯಲ್ಲಿ ಸಣ್ಣ ಗ್ರಂಥಾಲಯ ಇತ್ತಂತೆ. ಮುಖ್ಯ ಮಾಸ್ತರರಾಗಿದ್ದ ಅಪ್ಪ ಅದರ ಪಾಲಕರಾಗಿದ್ದರಂತೆ. ಮಲಪ್ರಭಾ ನದಿಗೆ ಕಟ್ಟಿದ್ದ ನವಿಲು ತೀರ್ಥ ಆಣೆಕಟ್ಟಿಗೆ ನಮ್ಮ ಹಳೆಯ ಊರು ಆಹುತಿಯಾಗಿ, ಈ ಹೊಸ ಊರಿನ ಜನ್ಮವಾಗಿತ್ತಂತೆ. ಓದಲು ಪುಸ್ತಕಗಳನ್ನು ಎರವಲು ತೆಗೆದುಕೊಂಡ ಎಷ್ಟೋ ಜನರು ಮರಳಿ ಕೊಡುವ ಉದಾರ ಮನಸು ಮಾಡದೇ ಇದ್ದಿದ್ದರಿಂದ, ಅಪ್ಪ ಹೊಸ ಮನೆ ಕಟ್ಟುವ ಗಡಿಬಿಡಿಯಲ್ಲಿ ಬಿದ್ದು, ಅವುಗಳ ಬಗ್ಗೆ ಉದಾಸೀನರಾಗಿದ್ದರಿಂದ, ಪುಸ್ತಕಗಳ ಸಂಖ್ಯೆ ಎರಡು ಗೋಣಿ ಚೀಲಗಳಿಗೆ ಮಾತ್ರ ಸೀಮಿತವಾಗಿತ್ತಂತೆ. ಹೊಸ ಶಾಲಾ ಕಟ್ಟಡವಾದ ಮೇಲೆ ಅವುಗಳನ್ನು ಮರುಕಳಿಸುವ ವಿಚಾರದಲ್ಲಿದ್ದ ಅಪ್ಪ, ಅಷ್ಟೊಂದು ಭದ್ರವಾಗಿ ಅವುಗಳನ್ನು ಅಟ್ಟದ ಮೇಲೆ ಬಚ್ಚಿ ಇಟ್ಟಿದ್ದರಂತೆ. ಅದೇನೇ ಇರಲಿನನಗಂತೂ ಓದಲು ಸಾಕಷ್ಟು ಸಾಮಗ್ರಿ ಸಿಕ್ಕಿದ್ದು ಮಾತ್ರ ಸತ್ಯವಾಗಿತ್ತು. ಹಾಗೆಯೇ ಅಪ್ಪನಿಂದ, ಅವುಗಳನ್ನು ಮನೆಯಿಂದ ಹೊರಗೆ ಒಯ್ಯಬಾರದೆಂಬ ಕಟ್ಟಪ್ಪಣೆಯೂ ಆಗಿತ್ತು.
ಅಳಿದ ಮೇಲೆ, ಹೆಂಡತಿ, ಜನಿವಾರ ಮತ್ತು ಶಿವದಾರ, ಚೆಂದವಳ್ಳಿಯ ತೋಟ, ಚಂದನದ ಗೊಂಬೆ, ಎಡಕಲ್ಲು ಗುಡ್ಡದ ಮೇಲೆ, ಶರಪಂಜರ, ಬಯಲು ದಾರಿ, ಚಾಲುಕ್ಯ ವಿಕ್ರಮ, ಶುಭ ಮಂಗಳ …. ಒಂದೇ ಎರಡೇ ಸುಮಾರು ಇಪ್ಪತ್ತೈದು ಕಾದಂಬರಿಗಳನ್ನು ಆ ಗೋಣಿಚೀಲಗಳಿಂದ ಹೆಕ್ಕಿ ತೆಗೆದು, ಹಿತ್ತಲಲ್ಲಿದ್ದ ಹುಣಸೆ ಮರದ ನೆರಳಿನ ಕೆಳಗೆ ನಮ್ಮಜ್ಜಿಯ ಹೊರಸನ್ನು ಹಾಕಿಕೊಂಡು, ಉರಿಬಿಸಿಲಿನಲ್ಲಿ ಆಗಾಗ್ಗೆ ಸುಳಿಯುತ್ತಿದ್ದ ಬಿಸಿ ಗಾಳಿಯ ಸವಿಯನ್ನು (?) ಸವಿಯುತ್ತ, ಬೇಸಿಗೆಯ ರಜೆಯಲ್ಲಿ ಎಲ್ಲವುಗಳನ್ನೂ ಓದಿ ಮುಗಿಸಿದ್ದೆ. ಹಾಗೆಯೇ ಹೆಂಡತಿ ಕಾದಂಬರಿಯಲ್ಲಿ ನನ್ನನ್ನೇ ನಾನು ತೊಡಗಿಸಿಕೊಂಡು, ಭಾವುಕನಾಗಿ ಕಣ್ಣೀರನ್ನೂ ಹಾಕಿದ್ದೆ.
ಶಿವರಾಂ ಕಾರಂತ, ಭಾರತಿ ಸುತ, ಬಸವರಾಜ ಕಟ್ಟಿಮನಿ, ತ್ರಿವೇಣಿ, ತರಾಸು, ವಾಣಿ, ಕೊರಟಿ ಶ್ರೀನಿವಾಸ ರಾವ್ … ಎಲ್ಲರೂ ಆ ಗೋಣಿ ಚೀಲಗಳಲ್ಲಿ ನನಗೆ ತಮ್ಮ ಮುಖವನ್ನು ತೋರಿಸಿದ್ದರು. ಕನ್ನಡ ಸಾಹಿತ್ಯದ ಬಗ್ಗೆ ಸ್ವಲ್ಪ ಅರಿವಿದೆ ಎಂದು ಅಂದುಕೊಂಡಿರುವ ನನಗೆ, ಆ ಎರಡು ಗೋಣಿ ಚೀಲಗಳೇ ಇದಕ್ಕೆ ಕಾರಣ ಎಂದು, ಈಗಲೂ ಎದೆ ತಟ್ಟಿ ಹೇಳಿಕೊಳ್ಳಲು ಅಭಿಮಾನವೆನಿಸುತ್ತದೆ ಮತ್ತು ಅವುಗಳಿಗೆ ನಾನು ಎಂದೆಂದೂ ಚಿರ ಋಣಿ.
ಈಗ ನಮ್ನ ಹಳ್ಳಿಯಲ್ಲಿ ಅಂತಹ ದೊಡ್ಡ ಗೋಣಿ ಚೀಲಗಳು ಸಿಗುವುದು ಅಪರೂಪ. ಆದರೆ ಗೋಣಿ ಚೀಲಗಳು ಇಲ್ಲವೇ ಇಲ್ಲ ಎಂದರ್ಥವಲ್ಲ. ಅವುಗಳೆಲ್ಲ ಈಗ ಹೊಸ ರೂಪ ತಾಳಿ, ಹೊಸ ಹೆಸರನ್ನು ಪಡೆದುಕೊಂಡು, ಸ್ಟೈಲಿಶ್ ಬ್ಯಾಗಗಳಾಗಿ, ಅಷ್ಟೇ ಸ್ಟೈಲಿಶ್ ಆಗಿರುವ ಹುಡುಗಿಯರ ಕೈಗಳನ್ನು ಸೇರಿಕೊಂಡು, ಪಟ್ಟಣಗಳ ಪೇಟೆಗಳಲ್ಲಿ ಓಡಾಡುತ್ತಿರುವುದು ಮಾತ್ರ ಸತ್ಯ. ನಾನೂ ಸಹ ಮೊನ್ನೆ ಯಾವುದೋ ಕಾನ್ಫರೆನ್ಸ್ ಗೆ ಹೋದಾಗ, ಡ್ರಗ್ಸ್ ಕಂಪನಿಯವರು ಕೊಟ್ಟಿರುವ ಅಂತಹುದೇ ಒಂದು ಸ್ಟೈಲಿಶ್ ಗೋಣಿ ಚೀಲವನ್ನು ಪ್ರೀತಿಯಿಂದ ಎತ್ತುಕೊಂಡು ಬಂದು, ಮನೆಯಲ್ಲಿ ಇಟ್ಟುಕೊಂಡು ಸಂತೋಷಪಡುತ್ತಿರುವೆ. ಆ ಗೋಣಿ ಚೀಲಗಳು ಎಂದೆಂದೂ ನೆನಪಿರಲಿ ಎಂದು
ಪರಿವರ್ತನೆ ಪ್ರಕೃತಿಯ ನಿಯಮ. ಕಾಲಾಯ ತಷ್ಮೆ ನಮಃ
– ಶಿವಶಂಕರ್ ಮೇಟಿ
ಗೋಣಿ ಚೀಲದ ಬಗ್ಗೆ ಇಷ್ಟು ಸುಂದರವಾಗಿ ಬರೆಯಬಹುದು ಎಂದು ತೋರಿಸಿಕೊಟ್ಟು ಮೇಟಿ ತಮ್ಮ ಬರಹದ ಸಾಮರ್ಥ್ಯವನ್ನು ಚೀಲದಿಂದ ಹೊರ ತೆಗೆದು ತೋರಿಸಿದ್ದಾರೆ ಅಥವಾ ಗೋಣಿ ಚೀಲದ ಪರದೆಯನ್ನು ಸರಿಸಿ ಪ್ರದರ್ಶಿಸಿದ್ದಾರೆ.
ನಮ್ಮಲ್ಲೂ ಗೋಣಿ ಚೀಲ ಜನ ಜೀವನದಲ್ಲಿ ಹಾಸುಹೊಕ್ಕಾಗಿತ್ತು. ಬಾಗಿಲಬಳಿ ಕಾಲು ಒರೆಸುವ ಬಟ್ಟೆಯಿಂದ ಮಳೆಗಾಲದಲ್ಲಿ ಶಿರವೇರಿ ರಕ್ಷಾಕವಚದ ತನಕ ಅದರ ಹರವು. ಅವನ್ನೆಲ್ಲ ನೆನಪಿಸಿತು.
ಗೋಣಿ ಚೀಲ ತನ್ನಲ್ಲಡಗಿದ ಸಂಪತ್ತನ್ನು ಜೀವನದುದ್ದಕ್ಕೂ ಬಳಸುವ ಬುತ್ತಿಯಾದ ಕಥೆ ನಿಮ್ಮ ಹುಡುಕಾಟದ ಛಲ , ಓದಬೇಕೆಂಬ ತೆವಲಿಗೆ ಕನ್ನಡಿ ಹಿಡಿದಿದೆ.
ರಾಂ
LikeLike
ನಿಮ್ಮ ಬಾಲ್ಯದ ನೆನೆಪಿನ ಗೋಣಿಚೀಲದ ಪ್ರಬಂಧ ತುಂಬ ಆಪ್ತಬರಹ.
ಗೋಣಿಚೀಲದ ಹಲವಾರು ಉಪಯೋಗಗಳನ್ನು ನೆನೆಪಿಸಿಕೊಳ್ಳುತ್ತ, ಪಾಟಿಚೀಲದಲ್ಲಿ ಇಟ್ಟುಕೊಳ್ಳುವ ಗೋಣಿಚೀಲದ ತುಣುಕಿನ ಪ್ರಸಂಗಗಳು ಮುದನೀಡುತ್ತವೆ.
ನನಗೆ ಅದರ ಮೇಲೆ ಎಷ್ಟೊಂದು ಪ್ರೀತಿ ಇತ್ತೆಂದರೆ, ಕೆಲವು ಸಲ ಪಾಟಿಚೀಲದಲ್ಲಿ ಪುಸ್ತಕ ಹಾಕಿಕೊಳ್ಳುವದನ್ನು ಮರೆತರೂ ಗೋಣಿ ಚೀಲವನ್ನು ಮಡಗಿಕೊಳ್ಳುವದನ್ನು ಮಾತ್ರ ಮರೆಯುತ್ತಿರಲಿಲ್ಲ,ಎನ್ನುವ ವಾಕ್ಯ ವ್ಹಾ ವ್ಹಾ!ನಮ್ಮ ಮನೆಯಲ್ಲಿ ಐದಾರು ಗೋಣಿ ಚೀಲಗಳು, ಮನೆಯವರ ಹೊಟ್ಟೆಯ ಹಸಿವಿಗೆ ಆಹಾರವಾಗಲು ಕಾಯುತ್ತಿರುವ ಕಾಳು ಕಡಿಗಳನ್ನು ತುಂಬಿಕೊಂಡು, ತುಂಬು ಬಸುರಿಯ ಹೊಟ್ಟೆಯಂತೆ ಉಬ್ಬಿಕೊಂಡು, ಮನೆಯ ಮೂಲೆಯಲ್ಲಿ ಯಾವಾಗಲೂ ಮಲಗಿರುತ್ತಿದ್ದವು. ದಿನಗಳು ಉರುಳಿದಂತೆ ಅವುಗಳೆಲ್ಲ ಖಾಲಿಯಾಗಿ, ಪ್ರಸವ ಆದಮೇಲೆ ಚಪ್ಪಟೆಯಾಗುವ ಹೆಂಗಳೆಯರ ಹೊಟ್ಟೆಯಂತೆ ಕಂಡು, ಮರು ಗರ್ಭಕ್ಕೆ ಕಾಯುವ ಗರ್ಭಕೋಶದಂತೆ ಮತ್ತೆ ಕಾಳು ಕಡಿಗಳಿಂದ ಉಬ್ಬಿಕೊಳ್ಳಲು ಕಾಯುತ್ತಲಿದ್ದವು.ಎನ್ನುವ ಸಾಲುಗಳಲ್ಲಿ ಬರುವ ಉಪಮೆ ಉತೃಕ್ಷ್ಟ! ಇನ್ನು ಮುಟ್ಟಬಾರದ ಗೋಣಿಚೀಲಗಳಲ್ಲಿ ನಿಮಗೆ ಸಿಕ್ಕದ್ದು ಬೆಲೆಕಟ್ಟಲಾಗದ ಗಣಿ. ಆ ಗೋಣಿಚೀಲದಲ್ಲಿದ್ದ ಅನರ್ಘ್ಯ ರತ್ನಗಳು ನಿಮಗೆ ದೊರಕಿದ್ದು ನಮ್ಮ ಪುಣ್ಯ, ಇಂಥ ಚಂದದ ಪ್ರಬಂಧ ಅನಿವಾಸಿಗೆ ಸಿಕ್ಕಿತು. – ಕೇಶವLikeLike
ಇದೊಂದು ಆಪ್ತ ಬರಹ ಮೇಟಿಯವರ ನೆನಪಿನ ಸುರುಳಿಯಿಂದ! ಕಾಲೇಜ ರಿಯೂನಿಯನ್ ‘ಹೂಡಿ’ಕೆಯಿಂದ ಬೀಜಾಂಕುರವಾದ ಸಸಿಯನ್ನು ಸುಂದರವಾಗಿ ಪೋಷಿಸಿಬರೆದ ಲೇಖನ. ಬೆಳೆಯ ಸಿರಿ ಮೊಳಕೆಯಲ್ಲಿ ಅನ್ನುವಂತೆ ಅವರ ಎರಡು ‘ಕರಿಯರು’ಗಳ (ವೃತ್ತಿ-ಪ್ರವೃತ್ತಿ) ಉಗಮ ಹಳ್ಳಿಯ ತುಂಬು ಗೋಣಿ. ಆ ಹೂಡಿದ ಗರ್ಭವನ್ನು ಬಗೆದು (ಸೀಜೇರಿಯನ್ ಮಾಡಿ) ಹೊರ ತೆಗೆದ ಸಾರಸ್ವತ ಮರಿಗಳೇ ಮುಂದೆ ಕತೆಗಾರರಾದದ್ದರ ಸೂಚನೆ ಕೊಟ್ಟಂತಿದೆ. ಎರಡನೆಯದಾಗಿ ಆ ‘ಬಗೆ’ಯೇ ಮುಂದೆ ಅವರು ಪ್ರಸೂತಿಶಾಸ್ತ್ರದ ವೃತ್ತಿಗೂ ನಾಂದಿ ಹಾಡಿತೇನೋ! ಕಾಲೇಜು ಮಿಲನದ ಐಡಿಯಾ (conception) ಒಂದು ಕಡೆ ಉದಯವಾಗಿ ಚಲಿಸಿ ಈ ವಾರದ ಅಂಕಣವಾಗಿ ಬೆಳೆದು ನಮಗೆ ಸೊಗಸಿನ ಓದಾಗಿದೆ! ಯಶಸ್ವಿ ‘ಡೆಲಿವರಿಗೆ’ ಅಭಿನಂದನೆಗಳು, ಮೇಟಿಯವರೇ!
ಶ್ರೀವತ್ಸ
LikeLike