ಬ್ಲೂ ಲಗೂನ್ — ಐಸ್ಲ್ಯಾಂಡಿನ ವಿಸ್ಮಯಗಳಲ್ಲೊಂದು! ಶ್ರೀವತ್ಸ ದೇಸಾಯಿ ಲೇಖನ

’ಬರ್ಫ್ ಮತ್ತು ಬೆಂಕಿಯ ದೇಶ’ (Land of Ice and Fire) ಎಂದು ಕರೆಸಿಕೊಳ್ಳುವ ಐಸ್ ಲ್ಯಾಂಡ್ ದೇಶ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಆರ್ಕ್ಟಿಕ್ ವೃತ್ತದ ಸಮೀಪವಿರುವ ಒಂದು ಪುಟ್ಟ ನಡುಗಡ್ಡೆ. ಇತ್ತೀಚಿನ ಜನಗಣತಿಯ ಪ್ರಕಾರ ಬರೀ ನಾಲ್ಕು ಲಕ್ಷದ ಜನವಸತಿಯ ನಾಡು ಅದು. ಒಂದು ತುದಿಯಿಂದ ಇನ್ನೊಂದು ತುದಿಯ ವರೆಗೆ 500 ಕಿ ಮೀ ಮತ್ತು ಉತ್ತರ-ದಕ್ಷಿಣ 300 ಕಿ ಮೀ ಇರುವ ಸಣ್ಣ ವಿಸ್ತಾರದ ದ್ವೀಪ ಇದು. ವೈವಿಧ್ಯಮಯ ಮತ್ತು ಅದ್ಭುತ ನೈಸರ್ಗಿಕ ಸೌಂದರ್ಯಗಳಿಂದ ತುಂಬಿದ ಈ ದ್ವೀಪ ದುಬಾರಿಯಾದರೂ ತನ್ನ ಹೊಟ್ಟೆಯಲ್ಲಿ ಬಚ್ಚಿಟ್ಟ ಭೌಗೋಲಿಕ ರಹಸ್ಯಗಳಿಂದ ಪ್ರವಾಸಿಗರಿಗೆ ಏಕಕಾಲಕ್ಕೆ ಬೆರಗು, ಸಂತೋಷ, ತೃಪ್ತಿ ಮತ್ತು ಆಹ್ಲಾದಕರ ಭಾವನೆಯನ್ನು ಬೊಗಸೆ ತುಂಬ ಪ್ರಕೃತಿ ಮಾತೆ ಮೊಗೆದುಕೊಡುವ ದೇಶವಿದು, ಎಂದರೆ ಅತಿಶಯೋಕ್ತಿಯಲ್ಲ! ಈ ದೇಶದಲ್ಲಿ ೧೦,೦೦೦ ಕ್ಕೂ ಹೆಚ್ಚು ಜಲಪಾತಗಳು ಮತ್ತು ೧೩೦ಕ್ಕೂ ಹೆಚ್ಚು ಜ್ವಾಲಾಮುಖಿಗಳಿವೆಯಂತೆ! ಐದಾರು ಬಿಸಿನೀರಿನ ಬುಗ್ಗೆಗಳು (ಸ್ಪಾ) ಸಹ. ಈ ಲೇಖನದಲ್ಲಿರುವುದು ಅಂಥವುಗಳಲ್ಲಿ ಒಂದನ್ನು ನಾನು ಕಂಡಂತೆ! (-ಸಂ)

ಈ ದೇಶ ಜ್ವಾಲಾಮುಖಿಗಳ ನಾಡು ಎಂದೇ ಪ್ರಸಿದ್ಧವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ದೇಶಕ್ಕೆ ಬರುವ ಪ್ರವಾಸಿಕರ ಸಂಖ್ಯೆ ದಿನೇ ದಿನೇ ಬೆಳೆಯುತ್ತಿದೆ. ಕಳೆದ ವರ್ಷ ಇಲ್ಲಿಗೆ ೨೦ ಲಕ್ಷ ಜನರು ಭೇಟಿಕೊಟ್ಟಿದ್ದರು. ಅವರು ವಿಮಾನ ಮಾರ್ಗವಾಗಿ ಬಂದಿಳಿಯುವ ಜಾಗವೇ ಅದರ ರಾಜಧಾನಿ ರೇಕ್ಯಾವಿಕ್ ನಗರ. ವಿಮಾನದಿಂದ ಇಳಿಯುವ ಮೊದಲೇ ’ಬಿಳಿ ಹೊಗೆ’ಯಿಂದ ಆವರಿಸಿರುತ್ತದೆ ಈ ಪ್ರದೇಶ. ಅದು ಹೊಗೆಯಲ್ಲ, ಬಿಸಿನೀರಿನ ಊಟಿಗಳಿಂದ ಹೊರಬರುವ ಆವಿ. ’ರೇಕ್ಯಾವಿಕ್’ ಅಂದರೆ ಐಸ್ಲ್ಯಾಂಡ್ ಭಾಷೆಯಲ್ಲಿ ಧೂಮಾವೃತ ಕೊಲ್ಲಿ ಅಂತ. ವಾತಾವರಣದಲ್ಲಿ ಮೋಡ ಕವಿದಿರದಿದ್ದರೆ ಒಮ್ಮೊಮ್ಮೆ ಜ್ವಾಲಾಮುಖಿಯಿಂದ ಹೊರಸೂಸುವ ಬೆಂಕಿಯನ್ನುಸಹ ನೋಡ ಬಹುದು.

೨೦೨೪ ರ ಅಗಸ್ಟ್ ತಿಂಗಳಿನ ಕೊನೆಯಲ್ಲಿ ನಮ್ಮ ಪ್ರವಾಸ ನಿರ್ಧಾರವಾಗಿತ್ತು. ಅಗಲೇ ಒಂದೆರಡು ವಾರದಿಂದ ಜ್ವಾಲಾಮುಖಿಯಿಯ ಕೊರಕಲಿನಿಂದ ಉಕ್ಕಿ ಬರುವ ಲಾವಾರಸದ ಪ್ರವಾಹ ಆರಂಭವಾಗಿ ನಮ್ಮ ಪ್ರವಾಸ ರದ್ದುಗೊಳ್ಳುವ ಹೆದರಿಕೆಯಿತ್ತು. ಆದರೆ ಲಾವಾ ನದಿ ತನ್ನ ದಿಕ್ಕು ಬದಲಿಸಿ ಏರ್ಪೋರ್ಟ್ ಹತ್ತಿರದ ಗ್ರೆಂಡಾವಿಕ್ ಪ್ರದೇಶಕ್ಕೆ ಧಕ್ಕೆಯಿಲ್ಲದ್ದರಿಂದ ನಾವು ಉತ್ಸುಕರಾಗಿದ್ದೆವು. ವಿಮಾನದ ಕಿಡಕಿಯ ಪಕ್ಕದ ಆಸನವನ್ನಾಕ್ರಮಿಸಿದ ಪ್ರಯಾಣಿಕರೆಲ್ಲ ಜ್ವಾಲಾಮುಖಿಯ ಪ್ರಥಮ ’ದರ್ಶನ’ ಪಡೆದುಕೊಂಡರು! ವಾಟ್ಸಪ್ಪಿನಲ್ಲಿ ಹಂಚಿಕೊಂಡು ತಮ್ಮ ಮಿತ್ರರಿಗೆ ಮತ್ತು ಆತ್ಮೀಯರಿಗೆ ಕಳಿಸಿ ಅಸೂಯೆ ಹುಟ್ಟಿಸಿದರು! ಆ ಜ್ವಾಲಾಮುಖಿ ನಾವು ವಿಸಿಟ್ ಗಾಗಿ ಬುಕ್ ಮಾಡಿದ್ದ ಬ್ಲೂ ಲಗೂನಿನಿಂದ ಹೇಗೆ ಕಾಣುತ್ತದೆಯೋ ಅಂತ ಕಾತುರರಾಗಿದ್ದೆವು.

ಆರೋಗ್ಯದ ಚಿಲುಮೆಯ ಸ್ಥಳಕ್ಕೆ ಸ್ಪಾ ಎಂದು ಕರೆಯುವದುಂಟು. ಆ ಹೆಸರು ಬಂದುದು ಬೆಲ್ಜಿಯಮ್ ದೇಶದ ಆ ಹೆಸರಿನ ಒಂದು ಊರಿನಿಂದ .ಆ ನೀರು ಸಹ ಆರೋಗ್ಯಕರವಂತೆ. ಈಗ ಜಗತ್ತಿನ ಅನೇಕ ದೇಶಗಳಲ್ಲಿ ಅಂತಹ ನೀರಿರುವ ’ಸ್ಪಾ’ಗಳುಂಟು. ರೆಕ್ಯಾವಿಕ್ಕಿನ ಕೆಫ್ಲಾವಿಕ್ ವಿಮಾನ ನಿಲ್ದಾಣದದ ಪಕ್ಕದಲ್ಲೇ ಇದೆ ಬ್ಲೂ ಲಗೂನ್ ಸ್ಪಾ. ಇದು ಐಸ್ಲ್ಯಾಂಡಿನ ಪ್ರಮುಖ ಆಕರ್ಷಣೆ. ಭಾರತಕ್ಕೆ ಬರುವ ವಿದೇಶಿ ಪ್ರವಾಸಿಕರಿಗೆ ತಾಜ್ ಮಹಾಲ್ ಇದ್ದಂತೆ. ಇಲ್ಲಿಯ ಆರೊಗ್ಯದ ಚಿಲುಮೆಯಲ್ಲಿ ಮಿಂದು ಬರದಿದ್ದರೆ ಐಸ್ಲ್ಯಾಂಡಿನ ಪ್ರವಾಸ ಅಪೂರ್ಣ ಆದಂತೆಯೇ ಅನ್ನುವಷ್ಟು ಪ್ರಸಿದ್ಧಿ ಪಡೆದಿದೆ ಈ ಜಾಗ. ಒಂದು ವರ್ಷದಲ್ಲಿ ಸುಮಾರು ಏಳು ಲಕ್ಷ ಜನರು ಇಲ್ಲಿಗೆ ಭೇಟಿಕೊಡುತ್ತಾರೆ. ತಿಳಿನೀಲಿ ಬಣ್ಣದ ಬಿಸಿನೀರಿನ ಸಾಮೂಹಿಕ ಕೊಳದಲ್ಲಿ ಕುಟುಂಬ ಮತ್ತು ಮಿತ್ರರೊಂದಿಗೆ (ಇಲ್ಲಿ ಮಕ್ಕಳಿಗೂ ಪ್ರವೇಶವಿದೆ) ಸಾಮಾನ್ಯವಾಗಿ ಎರಡರಿಂದ ಮೂರು ತಾಸುಗಳನ್ನು ಕಳೆಯುತ್ತಾರೆ. ಇದು ವಿಮಾನ ನಿಲ್ದಾಣದಿಂದ ಬರೀ ಇಪ್ಪತ್ತು ನಿಮಿಷಗಳ ದೂರವಷ್ಟೇ. ಅಂತೆಯೇ ಕೆಲವರು ಏರ್ಪೋರ್ಟಿನಿಂದ ಇಳಿದ ತಕ್ಷಣವೇ ಇಲ್ಲಿಗೆ ಭೇಟಿ ಕೊಡುತ್ತರೆ; ಇನ್ನು ಕೆಲವರು ವಾಪಸ್ ಹೋಗುವ ದಿನ ವಿಮಾನ ಹತ್ತುವ ಮೊದಲು ಇಲ್ಲಿ ಮಿಂದು ಪುನಶ್ಚೇತನಗೊಂಡು ಮರಳುತ್ತಾರೆ. ಇಲ್ಲಿ ಊಟ, ಪಾನೀಯಕ್ಕಾಗಿ ರೆಸ್ಟಾರಂಟುಗಳು ಸಹ ಇರುವದರಿಂದ ಇಡೀ ದಿನ ಇದ್ದು ಹೋಗುವವರು, ಇನ್ನು ಕೆಲವು ಶ್ರೀಮಂತರು ಇಲ್ಲಿಯ ಲಾವಾ ಹೋಟೆಲ್ಲಿನಲ್ಲಿ ತಂಗುವದೂ ಉಂಟು. ಈ ದ್ವೀಪದಲ್ಲಿ ಇನ್ನೂ ಕೆಲವು ಅಗ್ಗ ದರದ, ಅಥವಾ ಪುಕ್ಕಟೆ ಸಹ ಸ್ಪಾಗಳಿದ್ದರೂ ಇಷ್ಟು ಜನಪ್ರಿಯವಾಗಲು ಅದರ ಆಕರ್ಷಣೆ ಐಸ್ಲ್ಯಾಂಡಿನ ಪ್ರಕೃತಿ ಸೌಂದರ್ಯವಷ್ಟೇ ಅಲ್ಲ, ಅದನ್ನು ನಡೆಸುವ ಕಂಪನಿಯ ವ್ಯಾಪಾರೀ ಚಾಕಚಕ್ಯತೆ ಸಹ ಅನ್ನಬಹುದು!

ಲಗೂನ್ ದಾರಿಗುಂಟ ಲಾವಾ ಢೇರೆಗಳು!

ನಾವು ಐವರು ಕನ್ನಡಿಗ ಮಿತ್ರರು ಹೋದ ದಿನ ಮೋಡ ಕವಿದಿತ್ತು. ತುಂತುರು ಮಳೆ ಸಹ ಶುರುವಾಗಿತ್ತು. ಶಟಲ್ ಬಸ್ ಸ್ಟಾಪಿನಿಂದಿಳಿದು ಸ್ಪಾ’ಗೆ ಹೋಗುವ ದಾರಿಯ ಇಕ್ಕೆಲಗಳಲ್ಲೂ ಆರಿ ಕಪ್ಪಾದ ಇತ್ತೀಚಿನ ಲಾವೋಚ್ಛಿಷ್ಟದ ಭೂತಾಕಾರದ ಢೇರೆಗಳು! ಲಾವಾಲ್ಯಾಂಡಿನಲ್ಲಿದ್ದೇವೆ ಅಂತ ಎಚ್ಚರಿಸಿ ಆ ಚಳಿಯಲ್ಲೂ ನಾವು ’ಉರಗಪತಾಕನಂತೆ ಬೆವರ್ದೆಂ’! ಹೋಗುವ ದಾರಿಯಲ್ಲಿ ಕೆಲವು ಕಡೆಗಳಲ್ಲಿ ರಸ್ತೆಗಳಿಗೆ ಅಡ್ಡವಾಗಿ ಬಿದ್ದ ಲಾವಾ ರಾಶಿ. ಅನತಿ ದೂರದಲ್ಲಿ ಆ ತಡೆಯನ್ನು ಲೆಕ್ಕಿಸದೆ ತಮ್ಮ ಬಾಡಿಗೆ ಕಾರಿನಲ್ಲಿ ಹೊರಟು ಅಗ್ನಿ ಕಾರುವ ’ಕೊರಕಲಿಗೆ’ ಸಾಧ್ಯವಾದಷ್ಟು ಹತ್ತಿರ ಹೋಗಿ ಸಂಜೆಯ ಕತ್ತಲಲ್ಲಿ ವೀಕ್ಷಿಸುವ ಟೂರಿಸ್ಟುಗಳು! ದಂತ ಕಥೆಗಳ ಟ್ರೋಲ್ ಗಳಿಗೆ ಪ್ರಸಿದ್ಧವಾದ ಈ ಭೂಮಿಯಲ್ಲಿ ದೂರದಲ್ಲೆಲ್ಲೋ ದೈತ್ಯರು ಬೃಹದಾಕಾರದ ಒಲೆಯನ್ನು ಹೊತ್ತಿಸಿದ್ದಾರೇನೋ ಅಂತ ಕಾಣುವಂತ ದೃಶ್ಯ ಅದು.ಅದನ್ನು ಕ್ಯಾಮರಾಗಳಲ್ಲಿ ಸೆರೆ ಹಿಡಿದದ್ದೇ ಹಿಡಿದದ್ದು!
ಇಲ್ಲಿ ಭೂಗರ್ಭದಿಂದ ಉಕ್ಕಿ ಬಂದು ಪುಟಿಯುವ ಲಾವಾರಸದೊಂದಿಗೆ ಉಗಿ ಮಿಶ್ರಿತ ಹೊಗೆ ಮತ್ತು ಬೂದಿಯನ್ನು ಹೊರಚೆಲ್ಲುವ ಆ ಸುದೀರ್ಘ ಕೊರಕಲನ್ನು crack ಅಥವಾ fissure ಎಂದೇ ಕರೆಯುತ್ತಾರೆ. ನಮ್ಮ ಸಾಮಾನ್ಯ ಕಲ್ಪನೆಯ ಪ್ರಕಾರ ಭೂಗರ್ಭದಲ್ಲಿ ಕುದಿದ ಮ್ಯಾಗ್ಮಾ ಪರ್ವತದ ತುದಿಯಲ್ಲಿಯ ಕುಂಡದಿಂದ ಭುಗಿಲ್ಲೆಂದು ಎದ್ದೇಳುವ ದೃಶ್ಯವೇ ಜ್ವಾಲಾಮುಖಿ.
ಆದರೆ ಐಸ್ಲಂಡ್ ದ್ವೀಪವನ್ನು ಭೌಗೋಲಿಕವಾಗಿ ಎರಡು ಹೋಳುಗಳಾಗಿ ಪ್ರತ್ಯೇಕಿಸುವದು (ಅಥವಾ ಜೋಡಿಸುವದು) ಮಿಡ್ ಅಟ್ಲಾಂಟಿಕ್ ರಿಡ್ಜ್ ಅಥವಾ ಶ್ರೇಣಿ. ಭೂವಿಜ್ಞಾನಿಗಳ ಪ್ರಕಾರ ನಾರ್ತ್ ಅಮೆರಿಕನ್ ಪ್ಲೇಟ್ ಮತ್ತು ಯೂರೇಷಿಯನ್ ಪ್ಲೇಟ್ ಎನ್ನುವ ಟೆಕ್ಟಾನಿಚ್ ಪ್ಲೇಟ್ ಗಳು ಕೂಡುತ್ತ ತಿಕ್ಕಾಡುವದರಿಂದಾದ ಬಿರುಕಿನ ಪಟ್ಟಿ (fissure) ಐಸ್ಲ್ಯಾಂಡಿನ ನೈಋತ್ಯ ಕರಾವಳಿಯಿಂದ ಸಾಗಿ ಆ ದ್ವೀಪದ ಈಶಾನ್ಯ ಕರಾವಳಿಯನ್ನು ಛೇದಿಸುತ್ತದೆ. ಅದರ ಗುಂಟ ಐಸ್ಲ್ಯಾಂಡಿನ ೧೩೬ ಜ್ವಾಲಾಮುಖಿಗಳಲ್ಲಿ ಭೀಕರವಾದವು ಹೆಕ್ಲಾ, ಕಟ್ಲಾ ಮತ್ತು ಕಫ್ಲಾ ಮುಂತಾದವು ಸಹ. ಬ್ಲೂ ಲಗೂನ್ ಸಹ ಅದರ ಸನಿಹದಲ್ಲೇ ಇರುವದರಿಂದ ಪ್ರೇಕ್ಷಕರ ರಕ್ಷಣೆಗಾಗಿ ೨೦೨೩ರಿಂದ ಒಂಬತ್ತು ಸಲ ಅದನ್ನು ಮುಚ್ಚಬೇಕಾಗಿತ್ತು.

ಬ್ಲೂ ಲಗೂನಿನ ಜನಪ್ರಿಯತೆಯ ಗುಟ್ಟು
ನೀಲಿ ನೀರಿಗೆ ತಿಳಿಹಾಲನ್ನು ಸೇರಿಸಿದಂತೆ ಕಾಣುವ ಈ ನೀರಿಗೆ ಅರೋಗ್ಯವರ್ಧಕ ಗುಣವಿದೆಯೆಂಬ ಖ್ಯಾತಿ ಬಂದುದು ೧೯೭೦ರ ದಶಕದಲ್ಲಿ. ಈ ದೇಶದಲ್ಲಿ ಥರ್ಮಲ್ ಪ್ಲಾಂಟುಗಳು ಎಲ್ಲ ಮನೆಗಳನ್ನು ಭೂಶಾಖದ (ಜಿಯೋ ಥರ್ಮಲ್) ನೀರಿನಿಂದಲೇ ಬೆಚ್ಚಗಿಡುತ್ತವೆ. ಅಂಥದೊಂದು ವ್ಯವಸ್ಥೆ ಸ್ವರ್ತ್ಸೆಂಗಿ ಪಾವರ್ ಪ್ಲಾಂಟ್ ಕೆಫ್ಲಾವಿಕ್ ಗ್ರಾಮದ ಹತ್ತಿರದಲ್ಲಿದೆ. ಅದರಿಂದ ಹೊರಬಿದ್ದ ಬಿಸಿನೀರಿನ ಸ್ರೋತ ಲಾವಾ ಭೂಮಿಯಲ್ಲಿ ಇಂಗದೆ ಅದರ ಪಕ್ಕದಲ್ಲಿ ಒಂದು ಬಿಸಿನೀರಿನ ನೀಲಿ ಕೊಳ ಕಾಣಿಸಿಕೊಂಡಿತು. ಅಕ್ಕ ಪಕ್ಕದ ಗ್ರಾಮವಾಸಿಗಳು ಅಂಥ ’ಗೀಸರು’ಗಳಲ್ಲಿ ಸ್ನಾನಕ್ಕೆ ಇಳಿಯುವದು ವಾಡಿಕೆ. ತಮ್ಮ ಮೈಚರ್ಮ ಸುಧಾರಿಸಿದ್ದಷ್ಟೇ ಅಲ್ಲ ಕೆಲವರು ತಮ್ಮ ಮೈಮೇಲಿನ ಸೊರೈಯಾಸಿಸ್ (Psoriasis) ವ್ರಣಗಳು ಗುಣವಾದದ್ದನ್ನು ಗಮನಿಸಿದರು. ಅವರಲ್ಲೊಬ್ಬ ಮಾರ್ಜೀರ್ಸನ್ ಎನ್ನುವ ಯುವಕ. ಆತನ ಚರ್ಮರೋಗ ತೊಂದರೆ ಕೊಡುತ್ತಿತ್ತೆಂದು ತನ್ನ ಡಾಕ್ಟರರ ಅನುಮತಿ ಪಡೆದು ಕಂಪನಿಯ ಅಧಿಕಾರಿಯ ಸಮ್ಮತಿಯೊಂದಿಗೆ ೧೯೮೧ ಸೆಪ್ಟೆಂಬರ್ ತಿಂಗಳಿನ ಒಂದು ದಿನ ಆ ನೀರಲ್ಲಿ ಧುಮುಕಿ ಸಮಯ ಕಳೆದ. ಕೆಲವು ಸಲ ಹಾಗೆ ಮಾಡಿದ ನಂತರ ಆತನ ಚರ್ಮ ರೋಗ ’ಗುಣವಾದ ’ಸುದ್ದಿ ಹಬ್ಬಿ ಈ ನೀರಿನ ’ಔಷಧೀಯ ಗುಣ’ ಮನೆಮಾತಾಯಿತು. ಆ ಐತಿಹಾಸಿಕ ಘಟನೆಯೇ ಮುಂದೆ ಈ ಲಗೂನ್ ಗೆ ಕೀರ್ತಿ ತಂದಿತು. ಅದರ ರಿಸರ್ಚ್ ತಂಡದ ಪ್ರಕಾರ ಆ ನೀರಲ್ಲಿ ಮೂರು ಮುಖ್ಯ ಅಂಶಗಳಿವೆಯಂತೆ. ೧) ಸಿಲಿಕಾ: ಅದೇ ನೀರಿಗೆ ಹೊಳೆಯುವ ಬಿಳಿ ಸ್ಫಟಕದ ಕಾಂತಿ ಕೊಡುವುದು. ಸಿಲಿಕಾನ್ ಡೈಯಾಕ್ಸೈಡ್ ಮತ್ತು ನೀರು ಆಕ್ಸಿಡೈಸ್ ಆಗಿ ಸ್ಫಟಿಕೀಕರಣವಾದಾಗ ಉಂಟಾದುದು. ೨) ಮೈಕ್ರೋ ಅಲ್ಗಿ (algae -ಅಣು ಪಾಚಿ): ಅದು ಹಸಿರು ಬಣ್ಣದ್ದು ಮತ್ತು ೩) ಇನ್ನಿತರ ಅನೇಕ ಲವಣಗಳು. ಈಗ ಅವುಗಳ ಪ್ರತ್ಯೇಕ ಲೇಪಗಳನ್ನು-ಬಿಳಿ, ಹಸಿರಿ ಮತ್ತು ತಿಳಿ- ತಯಾರಿಸಿ ದುಬಾರಿ ಬೆಲೆಯಲ್ಲು ಮಾರಾಟ ಮಾಡುತ್ತಿದ್ದಾರೆ.
ಆದರೆ ಆ ಬಿಸಿನೀರಿನ ಸೌಲಭ್ಯ ಪಡೆಯಲು ನಿಮಗೆ ಅದಾವುದರ ಅವಶ್ಯಕತೆಯಿಲ್ಲ. ಹಣ ತೆತ್ತು ತಿಕೀಟು ಕೊಂಡು ನೀರಿಗಿಳಿದು ಬಾರಿನಿಂದ ನಿಮ್ಮ ಐಚ್ಛಿಕ ಪೇಯದೊಂದಿಗೆ ಮಿತ್ರರೊಂದಿಗೆ ಹರಟುತ್ತ ಮುಖದ ಮೇಲೆ ಬಿಳಿ ಮಾಸ್ಕ್ ಲೇಪಿಸಿಕೊಂದು ಕರಗುವವರೆಗೆ ಮಾತಾಡಿಕೊಂಡು ಸಮಯ ಕಳೆದರಾಯಿತು. ಇದು ಎಷ್ಟು ಪ್ರಸಿದ್ಧ ಜಾಗತಿಕ ಟೂರಿಸ್ಟ್ ಜಾಗ ಎಂದರೆ ನಾನು ಅರ್ಧ ಗಂಟೆಯಲ್ಲಿ ದೇಶಾಂತರಗಳಿಂದ ಬಂದ ಜನರನ್ನು ಭೇಟಿ ಮಾಡಿದೆ. ಚೈನಾ, ಬೆಲ್ಜಿಯಮ್, ಕೆನಡಾ, ಅಮೆರಿಕಾ ಮತ್ತು ನಾನು ದಶಕಗಳ ಹಿಂದೆ ಊಟಿಯಲ್ಲಿ ಓದಿದ ಶಾಲೆಯ ಹಳೆಯ ವಿದ್ಯಾರ್ಥಿನಿಯನ್ನು ಸಹ ಭೇಟಿ ಮಾಡಿ ಫೋಟೊ ತೆಗೆಸಿಕೊಂಡೆ! ಆ ನೀರಲ್ಲಿ ಸಹ ಏನೊ ಒಂದು ಅಪರೂಪದ ಗುಣವಿರಬೇಕು. ಒಂದು ವಾರದ ವರೆಗೆ ನನ್ನ ಮೈ ಚರ್ಮವೂ ಪುನರ್ಜೀವನ ಪಡೆದಿತ್ತು!


 

ನಾವು ಕಳೆದ ಒಂದು ವಾರದಲ್ಲಿ ಕಂಡ ಇನ್ನೊ ಅನೇಕ ಅದ್ಭುತ ಜಲಪಾತಗಳು, ಬ್ಲಾಕ್ ಬೀಚ್, ಲಗೂನ್ ಲೇಕ್, ’ದಿಲ್ವಾಲೆ’ ಹಿಂದಿ ಸಿನಿಮಾದ ’ಗಿರುವಾ’ ಹಾಡಿನ ಅನೇಕ ದೃಶ್ಯಗಳು ಚಿತ್ರೀಕರಣವಾದ ಸ್ಥಳಗಳು ಅವುಗಳ ವರ್ಣನೆಗೆ ಇನ್ನೊಂದು ಲೇಖನವೇ ಬೇಕಾದೀತು!

ಲೇಖನ ಮತ್ತು ಫೋಟೋಗಳು: ಶ್ರೀವತ್ಸ ದೇಸಾಯಿ
ಡೋಂಕಾಸ್ಟರ್

 

7 thoughts on “ಬ್ಲೂ ಲಗೂನ್ — ಐಸ್ಲ್ಯಾಂಡಿನ ವಿಸ್ಮಯಗಳಲ್ಲೊಂದು! ಶ್ರೀವತ್ಸ ದೇಸಾಯಿ ಲೇಖನ

  1. ಅಗ್ನಿ ಮತ್ತು ಹಿಮಗಳ (ಕಾರ್ನಾಡರ ಅಗ್ನಿ ಮತ್ತು ಮಳೆ ನೆನಪಾಯಿತು) ನಾಡಿನ ಪರಿಚಯ ಚೊಕ್ಕದಾಗಿದೆ. ಭೌಗೋಳಿಕ ವೈಶಿಷ್ಟ್ಯತೆ ಐಸ್ಲ್ಯಾಂಡಿಗೆ ಅಪರೂಪದ ಸೊಬಗನ್ನು , ಮಹತ್ವವನ್ನು ನೀಡಿದ್ದನ್ನು ದೇಸಾಯಿಯವರು ಸುಂದರವಾಗಿ ವಿವರಿಸಿದ್ದಾರೆ. ಬ್ಲ್ಯೂ ಲಗೂನ್ ತಳದಲ್ಲಿ ನೀಲ ವರ್ಣವನ್ನು ಲೇಪಿಸಿದ್ದರಿಂದ ನೀರು ನೀಲಿಯಾಗಿ ಕಂಡುಬರುತ್ತದೆಂದು ಓದಿದ ನೆನಪು. ಜೀವನದಲ್ಲೊಮ್ಮೆ ಭೇಟಿ ನೀಡಲೇ ಬೇಕಾದ ಪ್ರದೇಶ

    -ರಾಂ

    Like

    • ರಾಂ ಅವರಿಗೆ ಧನ್ಯವಾದಗಳು.

      ತಿಳಿ ಹಾಲಿನ ಬಿಳಿ ಬಣ್ಣ ಸಿಲಿಕಾದಿಂದ, ನೀಲಿಬಣ್ಣ ಹಸಿರು ಮೈಕ್ರೋ ಪಾಚಿ ( micro algae) ಯಿಂದ, ಅಂತ ಅವರ ವೆಬ್ ಸೈಟು ಹೇಳುತ್ತದೆ. ಆದರೆ ಕಣ್ಣಿಲೇ ನೋಡಿದ ಅನುಭವವೇ ಬೇರೆ! DSLRಧಾರಿಗಳಿಗೆ ಸ್ವರ್ಗ! ಎಸ್ಡಿ ಕಾರ್ಡ್ ಸಂಗ್ರಹ ಶುರುವಾಗಲಿ!

      ಶ್ರೀವತ್ಸ

      Like

  2. ಧನ್ಯವಾದಗಳು, ಕೇಶವ ಅವರಿಗೆ, ನಿಮ್ಮ ಕಾಮೆಂಟಿಗೆ. ಎಲ್ಲರ ಬಕೆಟ್ ಲಿಸ್ಟಿನಲ್ಲಿದೆ ಐಸ್ಲ್ಯಾಂಡ್! ಬರೀ ಬೊಗಸೆಯಲ್ಲಲ್ಲ ಬಕೆಟ್ ಗಟ್ಟಲೆ ಪ್ರಕೃತಿ ಸೌದರ್ಯವನ್ನು ಸುರಿದು ಅನುಭವಿಸುವಿರಂತೆ. ಮಣಗಟ್ಟಲೆ ಕಾಂಚಾಣವನ್ನು ಹರಿಬಿಡಲು ತಯಾರಿರಬೇಕು ಸಹ. ರೂಪಾ ಹೇಳಿದಂತೆ ಗುಲ್ಫಾಸ್ (= golden falls) ದಂಥವು ಬಂಗಾರವನ್ನೇ ಇಂದ್ರಧನುಷ್ಯದ ತುದಿಯಲ್ಲಿ ಹೂತಿಟ್ಟಿರುವಾಗ ಚಿಂತೆಯೇಕೆ? Good luck!

    Like


  3. ಭೂಗೋಳಶಾಸ್ತ್ರ, ಇತಿಹಾಸ, ಮತ್ತು ವೈಯಕ್ತಿಕ ಕಥೆಯ ಮಿಶ್ರಣದ ಈ ಲೇಖನ ದೇಸಾಯಿಯವರ ಅಸ್ಮಿತೆ. ಅವರು ಬ್ಲೂ ಲಾಗೂನ್‌ನ ಅನುಭವವನ್ನು  ನಾವೇ ಅಲ್ಲಿಗೆ ಹೋದಂತೆ, ಐಸ್‌ಲ್ಯಾಂಡ್‌ನ ಅದ್ಭುತತೆಯನ್ನು ಆನಂದಿಸುತ್ತಿರುವಂತೆ ಭಾಸವಾಗುತ್ತದೆ. ನಾನು ಇನ್ನೂ ಐಸ್‌ಲ್ಯಾಂಡ್‌ಗೆ ಭೇಟಿ ನೀಡಿಲ್ಲವಾದರೂ, ಅದು ನನ್ನ ಬಕೆಟ್ ಲಿಸ್ಟ್‌ನಲ್ಲಿ ಇದೆ, ಮತ್ತು ಈ ಲೇಖನ ನನ್ನ ಆಕಾಂಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಜೊತೆಗೆ ಇರಿಸಿರುವ ಚಿತ್ರಗಳೂ ಸುಂದರವಾಗಿವೆ. – ಕೇಶವ

    Like

  4. ಭೂಗೋಳಶಾಸ್ತ್ರ, ಇತಿಹಾಸ, ಮತ್ತು ವೈಯಕ್ತಿಕ ಕಥೆಯ ಮಿಶ್ರಣದ ಈ ಲೇಖನ ದೇಸಾಯಿಯವರ ಅಸ್ಮಿತೆ. ಅವರು ಬ್ಲೂ ಲಾಗೂನ್‌ನ ಅನುಭವವನ್ನು  ನಾವೇ ಅಲ್ಲಿಗೆ ಹೋದಂತೆ, ಐಸ್‌ಲ್ಯಾಂಡ್‌ನ ಅದ್ಭುತತೆಯನ್ನು ಆನಂದಿಸುತ್ತಿರುವಂತೆ ಭಾಸವಾಗುತ್ತದೆ. ನಾನು ಇನ್ನೂ ಐಸ್‌ಲ್ಯಾಂಡ್‌ಗೆ ಭೇಟಿ ನೀಡಿಲ್ಲವಾದರೂ, ಅದು ನನ್ನ ಬಕೆಟ್ ಲಿಸ್ಟ್‌ನಲ್ಲಿ ಇದೆ, ಮತ್ತು ಈ ಲೇಖನ ನನ್ನ ಆಕಾಂಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಜೊತೆಗೆ ಇರಿಸಿರುವ ಚಿತ್ರಗಳೂ ಸುಂದರವಾಗಿವೆ. – ಕೇಶವ

    Like

Leave a Reply to shrivatsadesai Cancel reply

Your email address will not be published. Required fields are marked *