ಈ ವಾರದ ಸಂಚಿಕೆ ಬರುವ ಸಮಯಕ್ಕೆ ಸರಿಯಾಗಿ ಭಾರತ ತನ್ನ ೭೮ನೆಯ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದೆ. ಈ ಒಂದು ಸಂದರ್ಭದಲ್ಲಿ ವಾರದ ಸಂಚಿಕೆ ವಿಷಯ “ಸ್ವಾತಂತ್ರ್ಯ” ಮತ್ತು “ಸಾಹಿತ್ಯ” ಯಾಕೆ ಪ್ರಯತ್ನಿಸಬಾರದು ಎಂದು ಒಂದು ವಿಚಾರ ಬಂದಿತು, ಈ ವಿಚಾರದೊಂದಿಗೆ ಸಂಪಾದಿಸಿದ ಈ ಸಂಚಿಕೆ ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ.
ಈ ವಾರ ಅನಿವಾಸಿ ಬ್ಲಾಗ್ನಲ್ಲಿ ಮೂರು ಹೊಸ ಲೇಖಕರನ್ನು ಪರಿಚಯಿಸುತ್ತಿದ್ದೇನೆ, ಅವರು ಸಾಹಿತ್ಯಕ್ಕೆ ಹಳಬರು ಅನಿವಾಸಿಗೆ ಹೊಸಬರು. ಅನಿವಾಸಿ ಬಳಗಕ್ಕೆ ಲೇಖನ ಬರೆದುಕೊಟ್ಟ ಮೂರು ಸಾಹಿತಿಗಳು ಶ್ರೀ. ಹರ್ಷ ಡಂಬಳ, ಶ್ರೀ. ಅಣಕು ರಾಮನಾಥ್ ಮತ್ತು ಡಾIIಎ.ಭಾನು .
ಅವರ ಕಿರು ಪರಿಚಯ
ಹರ್ಷ ಡಂಬಳ ಅವರು ರಾಜ್ಯಶಾಸ್ತ್ರ, ಮಾನಸಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿಮರ್ಶೆ, ಅನುವಾದ, ನಾಟಕ ನಿರ್ದೆಶನ, ಸಂಘಟನೆ, ನಟನೆ, ನೇಪಥ್ಯ, ಪುಸ್ತಕ ಪ್ರಕಾಶನ ಇವರ ಆಸಕ್ತಿಗಳು. ಕರ್ನಾಟಕ ಕಲೋದ್ಧಾರಕ-ಸಂಘದ ಹಿರಿಯ ಸದಸ್ಯ. ಅಂದಿನ ಧಾರವಾಡ ಕುರಿತು ಶ್ರೀಮಂತ ನೆನಪುಗಳನ್ನು ಹೊಂದಿದ್ದಾರೆ. ಎನ್. ರಾಮನಾಥ್ ಅವರು ಅಣಕು ರಾಮನಾಥ್ ಎಂಬ ಅಂಕಿತನಾಮದಿಂದ ಎಲ್ಲರಿಗೂ ಪರಿಚಯ, ಅವರು ಕನ್ನಡದ ಬರಹಗಾರ, ಪ್ರಕಾಶಕ, ಅಂಕಣಕಾರ ಮತ್ತು ಪ್ರಮುಖವಾಗಿ ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಖ್ಯಾತಿಯ ಹಾಸ್ಯಗಾರರು. ಡಾIIಎ.ಭಾನು ಅವರು ವೃತ್ತಿಯಲ್ಲಿ ತಂತ್ರಜ್ಞರಾಗಿದ್ದರೂ ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕವಿ, ಲೇಖಕ, ಭಾಷಣಕಾರರು. ಮೂರು ವರ್ಷಗಳಿಂದ (ಆನ್ಲೈನ್) ಅಂತರ್ಜಾಲದ ಮೂಲಕ ಇವರು ನಡೆಸಿಕೊಡುತ್ತಿರುವ “ಮಂಕುತಿಮ್ಮನ ಕಗ್ಗ ಮತ್ತು ಮರುಳ ಮುನಿಯನ ಕಗ್ಗ – ಸಂವಾದ” ಕಾರ್ಯಕ್ರಮ ಕರ್ನಾಟಕದಲ್ಲಷ್ಟೇ ಅಲ್ಲದೆ ಅಮೇರಿಕಾ, ಆಸ್ಟ್ರೇಲಿಯ, ಯೂರೋಪ್ ಗಳಲ್ಲೂ ಜನಪ್ರಿಯವಾಗಿವೆ.
ಈ ಸಂಚಿಕೆಯ ಮೊದಲ ಲೇಖನದಲ್ಲಿ ಶ್ರೀ. ಹರ್ಷ ಡಂಬಳ ಅವರು “ನರಬಲಿ” ಕವನ ಮತ್ತು ಆ ಕವನದಿಂದ ಬೇಂದ್ರೆ ಅವರ ಮೇಲೆ ಅದ ಘೋರವಾದ ಪರಿಣಾಮ ಕುರಿತು ಬರೆದಿದ್ದಾರೆ. ನಂತರದ ಲೇಖನ ಶ್ರೀ. ಅಣಕು ರಾಮನಾಥ್ ಅವರ ಲಘು ಸಂಭಾಷಣೆ, ಇದರಲ್ಲಿ ಸೀನು ಎಲ್ಲ ಕವನಗಳೂ ಸ್ವಾತಂತ್ರ್ಯವನ್ನು ಬಿಂಬಿಸುತ್ತವೆ ಎಂದು ಸಾಧಿಸುವ ಪರಿ ಹಾಸ್ಯದಿಂದ ಕೂಡಿದೆ. ಈ ಸಂಚಿಕೆಯ ಕೊನೆಗೆ ಡಾIIಎ.ಭಾನು ಅವರ ಒಂದು ಕವನ ತಮ್ಮೊಡನೆ ಹಂಚಿಕೊಂಡಿದ್ದೇನೆ.
ʼನರಬಲಿʼ ಒಂದು ನೆನಪು
ಲೇಖಕರು: ಶ್ರೀ. ಹರ್ಷ ಡಂಬಳ
“The man who suffers and the mind which creates” – T S Elliot
ಬೇಂದ್ರೆಯವರು ಸಾಮಾಜಿಕ ಸ್ಥಿತಿ ಗತಿಗಳಿಗೆ ತೀವ್ರ ಸ್ಪಂದಿಸಿದ ಪರಿಣಾಮವಾಗಿ ರಚಿತವಾದ ಕವನಗಳಲ್ಲಿ ನರಬಲಿ(ಗರಿ) ಮೂವತ್ತಮೂರು ಕೋಟಿ (ಗರಿ) ಯಜ್ಞ (ನಾದಲೀಲೆ) ಇವುಗಳನ್ನು ಎಲ್ಲ ಕಾಲದಲ್ಲಿಯೂ ಪ್ರಸ್ತುತವಾಗಿ ಕಾಣಬಹುದು. ಮಾನವರಿಂದಲೇ ನಡೆಯುವ ಮಾನವ ಹತ್ಯೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲವೆಂದು ಮನನೊಂದು ತೀವ್ರ ಆಕ್ರೋಶದ ಧನಿಯಲ್ಲಿ ಅಭಿವ್ಯಕ್ತಿಗೊಂಡ ಕವನ ನರಬಲಿ.
ಬೇಂದ್ರಯವರ ಸ್ವಾತಂತ್ರ್ಯ ಪೂರ್ವದ ದೇಶ ಗೀತೆಗಳಲ್ಲಿ ಮಹತ್ವದ ಒಂದು ಕವನ. ಕವಿತೆಯ ಭಾವ ರೌದ್ರ, ರಸವೆನ್ನಿ ಇಲ್ಲವೇ ಜ್ವಾಲಾಮುಖಿಯನ್ನಿ. ಒಟ್ಟಂದದಲ್ಲಿ ರೌದ್ರ ರಸವೇ ಮೈದಾಳಿದ ಪ್ರತಿಮೆಗಳಿಂದ ತುಂಬಿದ ಪ್ರಖರ ಅಭಿವ್ಯಕ್ತಿಯ ಕವನ. ಅದರ ಪರಿಣಾಮವು ಅಷ್ಟೇ ಪ್ರಖರವಾಗಿತ್ತು ಮತ್ತು ದೀರ್ಘಕಾಲಿಕ ಆತಂತಕ್ಕೂ ಕಾರಣವಾಗಿತ್ತು ಬೇಂದ್ರೆಯವರ ಜೀವನದಲ್ಲಿ.
ಡಾ. ಜಿ. ಎಸ್. ಆಮೂರರು ಭುವನದ ಭಾಗ್ಯ ಪುಟ 169ರಲ್ಲಿ ಈ ಕವನದ ಅರ್ಥವ್ಯಾಪ್ತಿಯನ್ನು ವಿವರಿಸಿದ್ದಾರೆ. ಪ್ರಾಯಶಃ ಈ ವಿವರಣೆ ಇಲ್ಲದೇ ಹೋಗಿದ್ದರೇ, ಮುಂದಿನ ಜನಾಂಗ ಕವನದ ಅರ್ಥವನ್ನು ಗ್ರಹಿಸುವಲ್ಲಿ ವಿಫಲವಾಗಬಹುದಿತ್ತೇನೋ.
ಈ ಕವನದ ಅಧಿದೇವತೆ ʼರುದ್ರಕಾಳಿʼ, ಕವನ ಪರಿಪೂರ್ಣವಾಗಿ ನರಬಲಿಯ ಪ್ರತಿಮೆಗಳಿಂದ ತುಂಬಿದೆ.
“ಕಕ್ಕಡ ಹೊತ್ತಿಸಿ ಕಣ್ಣುಗಳಲ್ಲಿ
ಮಾಡಿಸೆ ಕೆನ್ನೀರ ಜಳಕವನು
ಏರಿಸೆ ರುಂಡದ ಹೂವುಗಳ
ಹಾಕಲು ಮದ್ದಿನ ಧೂಪವನು
ಬಾರಿಸೆ ಗುಂಡಿನ ಘಂಟೆಗಳ
ಬಂದಿತು, ಬಂದಿತು ನೈವೇದ್ಯ”
ಇಲ್ಲಿ ನಾವು ನರಮೇಧದ ವಿಕೃತಿಯ ದರ್ಶನವನ್ನು ಕಾಣುತ್ತೇವೆ.
“ಬಲಗಾಲ್ ಬುಡದಿಂ ಬಿಡುಗಡೆ ಬಿಡಿಸಲು
ನರಬಲಿಯೇ ಬೇಕು
ಇದುವೇ ಕಾಳಿಯ ಪೂಜೆಯ ಶುದ್ಧ!
ಇದಕ್ಕೆ ಹುಂಬರು ಎಂಬರು ಯುದ್ಧ”
ಘನಘೋರ ಪಾರತಂತ್ರ್ಯದ ಅಡಿಯಲ್ಲಿ ಸಿಕ್ಕು ಒದ್ದಾಡಿದ ಭಾರತೀಯ ಜನ ಅದೇ ಬಲಗಾಲ ಬುಡದಲಿ ಬಿಡುಗಡೆ ಬಿಡಿಸಲು ನರಬಲಿಯೇ ಬೇಕು.
“ಕೋಳಿಯ ಕೊಯ್ದರೆ ಕೆರಳುವರುಂಟು
ಕುರಿಯನು ಕೊಂದರೆ ಕೇಳುವರುಂಟು
ಕೋಣನ ಕಡಿದರು ಕಾಯುವರುಂಟು
ಗುಬ್ಬಿಮಾನವನ
ಕೊಯ್ದರು, ಕೊಂದರು, ಕಡಿದರು ಏನು?
ನರಬಲಿ ನರಮೇಧವು ಕೇಳು
ಅಶ್ವಮೇಧಕೂ ಸರಿಮೇಲು
ಇದುವೆ ಪೂಜೆಯು ಶುದ್ಧ!
ಇದಕೇ ಹುಂಬರು ಎಂಬರು ಯುದ್ಧ!”
ನೂರಾ ಮೂರು ಸಾಲಿನ ಈ ಕವನ ಆರು ವಿಭಾಗಗಳಲ್ಲಿ ಹರಡಿದೆ. ಪ್ರಾರಂಭದಿಂದ ಹಂತಹಂತವಾಗಿ ಏರುಮುಖವಾಗು ರೌದ್ರಾವತಾರ ಅಂತಿಮ ಘಟ್ಟದಲ್ಲಿ ಕೇಳುವುದು ನರಬಲಿಯನ್ನೇ. “ ಡಾ. ಜಿ. ಎಸ್. ಆಮೂರರು ಗುರುತಿಸಿದಂತೆ ಕಾವ್ಯದ ಮಾತುಗಳಲ್ಲಿ ತೋರುವ ʼವಕ್ರ ಪರಿಹಾಸ್ಯʼ ಇಲ್ಲಿ ಯುದ್ಧದ ಸಮತ್ಥನೆ ಇದೆ ಎಂಬ ತಪ್ಪು ಗ್ರಹಿಕೆ”. ಇಲ್ಲಿರುವುದು ಸಾಮಾಜ್ಯಶಾಹಿಯ ದಿನಗಳ ಬ್ರಿಟೀಷ ಕರಾಳ ವ್ಯವಸ್ಥೆಯ ವಾಸ್ತವ ಚಿತ್ರಣ. ಅಂತೆಯೇ ಕವಿ ಕಟ್ಟಿಕೊಟ್ಟಿರುವ ಪ್ರತಿಮೆಗಳು ಅರ್ಥಪೂರ್ಣವಾಗಿ ಮೂಡಿ ಬರುತ್ತವೆ.
ಗರಿ ಕವನ ಸಂಕಲನದಲ್ಲಿ ಇರುವ ನರಬಲಿ ಎಂಬ ಕವನ ಪ್ರಪ್ರಥಮವಾಗಿ ಜಯ ಕರ್ನಾಟಕ ಮಾಸಪತ್ರಿಕೆಯಲ್ಲಿ ಪ್ರಕಟವಾಯಿತು. ಧಾರವಾಡದ ಜಿಲ್ಲಾಧಿಕಾರಿ, ಆಗಿನ ಕಾಲದ ಡಿಸ್ಟ್ರಿಕ್ ಕಲೆಕ್ಟರ್ ನ ವಕ್ರ ದೃಷ್ಟಿಗೆ ಬಿದ್ದಿತು. ಅವನೇನು ಕನ್ನಡ ಬಲ್ಲವನಲ್ಲ. ಆ ಪರಿ ಕಾವ್ಯದ ಕಾವ್ಯಾರ್ಥ ಗೂಢಾರ್ಥವನ್ನು ಅರ್ಥೈಸಬಲ್ಲವನಲ್ಲ, ಯಾರು ಅವನ ತಲೆಯಲ್ಲಿ ಇದು ದೇಶದ್ರೋಹದ ಕವನ, ಬ್ರಿಟೀಷ ವಿರುದ್ಧ ಜನಸಾಮಾನ್ಯರನ್ನು ಬಡಿದೆಬ್ಬಿಸುವ ಪ್ರಚೋದನಕಾರಿ ಕವನವೆಂದು ತುಂಬಿದರೋ ಅದು ಇಂದಿಗೂ ನಿಗೂಢ. ಆದರೆ ಆಗಬಾರದ ಪರಿಣಾಮವಂತೂ ಆಯಿತು.
ಬೇಂದ್ರೆಯವರೆ ತಮ್ಮ ಆತ್ಮಕಥನದ ಪ್ರಥಮ ಪ್ರಕರಣದ ʼ ಹೊತ್ತು ಮೂಡುವ ಮುಂಚೆʼ (ಶ್ರಾವಣದ ಪ್ರತಿಭೆ ಪುಟ: 445ರಲ್ಲಿ) ವಿವರಿಸಿದಂತೆ “ನಾನು ಆ ಕವನದಲ್ಲಿ ಸ್ವಾತಂತ್ರ್ಯ ಯುದ್ಧವೂ ನರಬಲಿಯನ್ನು ಬೇಡುತ್ತದೆ. ಎಂದು ಪ್ರತಿಪಾದಿಸುತ್ತಿದ್ದೇನೆ ಎಂಬ ಭ್ರಮೆ ಅವನಿಗೆ ಹಿಡಿಯಿತು. ಅಧಿಕಾರಿಗಳಿಗೆ ನಾನು ಹಿಂಸಾತ್ಮಕ ಚಳುವಳಿಗೆ ಪ್ರಚೋದನೆ ಕೊಡತಕ್ಕವನೆಂಬ ಸಂಶಯ ಹುಟ್ಟಿಕೊಂಡಿತು. ಸಾಹಿತ್ಯ ಸಂಸ್ಕೃತಿ ಚಳುವಳಿ ಮಾಡುವ ಒಬ್ಬ ಬಡಶಾಲಾ ಮಾಸ್ತರನು ನಿಜವಾಗಿ ಇಷ್ಟು ಉಗ್ರವಾಗಲು ಧೈರ್ಯ ಪಡಲಾರ ಎಂಬ ಭಾವ ಅವನಿಗೆ ಇದ್ದರೂ ಕಾವ್ಯದಿಂದ ಇವನು ಕುಚೋದ್ಯ ಮಾಡುತ್ತಿರಬೇಕು ಎಂಬ ಗ್ರಹಿಕೆಯಿಂದ ಅವರು ನನ್ನ ಶೀಕ್ಷೆಗೆ ಗುರಿಮಾಡಿ, ಬೇರೆ ಸಾಹಿತಗಳಿಗೆ ಪಾಠ ಕಲಿಸಬೇಕೆಂದು ಛಲ ತೊಟ್ಟಂತೆ ತೋರಿತು.”
1932 ರೊಳಗೆ ಆಗಬಾರದ ಬೇಂದ್ರೆಯವರ ಬಂಧವಾಯಿತು. ಅವರನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಕಳಿಸಿದರು. ಅಲ್ಲಿ ಅವರು ರಾಜಕೀಯ ಖೈದಿಯಾಗಿ 3 ತಿಂಗಳು ಇದ್ದರು. ಅಲ್ಲಿಂದ ಅವರನ್ನು ಧಾರವಾಡದ ಹತ್ತಿರದ ʼಮುಗದʼ ಗ್ರಾಮಕ್ಕೆ ಕರಕೊಂಡ ಬಂದು ನಜರ್ ಬಂದಿಯಲ್ಲಿ ಇಡಲಾಯಿತು. ಈ ಕಾಲದಲ್ಲಿ ಗೆಳೆಯರ ಗುಂಪಿನ ಗೆಳೆಯರು ಎಲ್ಲ ರೀತಿಯಿಂದ ಅವರಿಗೆ ಬೆನ್ನಲುಬಾಗಿ ನಿಂತು ಧೈರ್ಯ ತುಂಬಿದ್ದಲ್ಲದೇ ದೈನಂದಿನ ಬೇಕು ಬೇಡಿಕೆಗಳನ್ನು ಪೂರೈಸಿದರು. ಈ ವಿಷಯದಲ್ಲಿ ಗೋ. ವೆ. ಚುಳಕಿ ಅವರ ಬರಹ ಓದಿದಾಗ ಕರುಳು ಹಿಂಡಿ ಬರುತ್ತದೆ. ಈ ಘಟನೆಯನ್ನು ಬೇಂದ್ರೆಯವರ ಶಬ್ದದೊಳಗೆ ಹೇಳಬೇಕೆಂದರೆ, “ ಇದರಿಂದ ರಾಜಕೀಯ ಪರಿಣಾಮ ಏನಾಯಿತೋ ಏನೋ ನಾ ಹೇಳಲಾರೆ, ಆದರೆ ನನ್ನ ಮಟ್ಟಿಗೆ ನಾನು 1932 ರಿಂದ 1941 ರ ವರೆಗೆ ವನವಾಸ ಭೋಗಿಸಿದಂತೆ ತೊಳಲಾಡ ಬೇಕಾಯಿತು. ಈ ತಾಪವನ್ನು ನಾನು ಸಾಕಷ್ಟು ಸಹನೆಯಿಂದೆ ಸ್ವೀಕರಿಸಿದ್ದರಿಂದ ನನ್ನ ಸತ್ವ ವೃದ್ಧಿಯಾಯಿತು. ಜನರು ತಮ್ಮ ಕವಿಗೆ ಸತ್ವವಿದೆ ಎಂದು ಮೆಚ್ಚಿದರು. ಮಾಸ್ತಿ, ಗೋಕಾಕ ಇಂಥವರ ಮೈತ್ರಿ ಇನ್ನಷ್ಟು ಬೇರೂರಿತು, ಎತ್ತರಕ್ಕೆ ಚಿಗುರಿತು. ಈ ಸ್ನೇಹ ಸಾಕ್ಷಾತ್ಕಾರ ನನ್ನ ಜೀವನದ ವಿವಿಧ ಸಂದರ್ಭಗಳಲ್ಲಿ ಧೈರ್ಯ ಸ್ಥೈರ್ಯ ತಂದುಕೊಟ್ಟಿತು.” ಅವರ ನಜರ್ ಬಂದಿ ಶಿಕ್ಷೆ ಮುಗಿದರು ಅವರು ನೌಕರಿಗೆ ವರ್ಷ ಅನರ್ಹರಾಗಿದ್ದರು. ತತ್ಪರಿಣಾಮ ಅವರ ಜೀವನದ ಮೇಲೆ ಆಗದೇ ಇರಲಿಲ್ಲ. ಬಡತನ ಎಲ್ಲ ದಿಕ್ಕುಗಳಿಂದಲೂ ಗಾಢವಾಗಿ ಆವರಿಸಿತು. ಈ ಕಾಲಘಟ್ಟದಲ್ಲಿ ಗೆಳೆಯರ ಗುಂಪಿನ ಜಿ.ಬಿ ಜೋಶಿ (ಜಡಭರತ), ಗೋವಿಂದ ಚುಳಕಿ ಮಾಡಿದ ಸಹಾಯ ಅನನ್ಯ, ಅವಿಸ್ಮರಣೀಯ, ಮುಂದಿನ ಪೀಳಿಗೆಗೆ ಗೆಳತನ ಎಂದರೇನು ತೋರಿಸಿಕೊಟ್ಟಿತು. ನಜರ್ ಬಂದಿಯೊಳಗಿದ್ದಾಗ ದಿನನಿತ್ಯ ಜಿ. ಬಿ. ಜೋಶಿ ಧಾರವಾಡದಿಂದ ಸೈಕಲ್ ಮೇಲೆ 6-7 ಮೈಲು ಹೋಗಿ ಮಧ್ಯಾನ್ಹದ ಕೊಟ್ಟ ಬರತಿದ್ರಂತ- ಧನ್ಯರು ಆ ಜನ ಆ ಗೆಳತನ.
ಇಂಥ ದುರ್ಧವಾದ ದಿನಗಳಲ್ಲಿ ಒಂದು ದಿನ ನಜರ್ ಬಂದಿಯಲ್ಲಿದ್ದ (ಸ್ಥಾನ ಬದ್ಧತೆ) ಬೇಂದ್ರೆಯವರನ್ನು, ಫರ್ಗೂಸನ್ ರಜಾ ಇದ್ದಾಗ ಮೇ ತಿಂಗಳಲ್ಲಿ ವಿನಾಯಕ್ ಕೃಷ್ಣ ಗೋಕಾಕರು ಇನ್ನಿಬ್ಬರು ಗೆಳೆಯರೊಂದಿಗೆ ಬೇಂದ್ರೆಯವರನ್ನು ಕಾಣಲಿ ಹೋದರು. ಗೋಕಾಕರ ಶಬ್ದಗಳಲ್ಲಿ ʼದೀಪಾ ಹಚ್ಚೋ ಹೊತ್ತಿಗೆ ನಾವು ಮೂರು ಜನ ಬೇಂದ್ರೆಯವರು ಇದ್ದ ಹಳ್ಳಿ ಮನಿ ಮುಟ್ಟಿದ್ವಿ. ಹೊಳ ಹೊರಗಿನ ಮಾತು ಕತೆಗಳಾದವು. ಒಯ್ದ ಫಲಾಹಾರ ಎಲ್ಲಾರೂ ಕೂಡಿ ತಿಂದ್ವಿ. ಅಡಿಗಿ ಮಾಡ್ಲಿಕ್ಕೆ ಬೇಂದ್ರೆಯವರ ಶ್ರೀಮತಿ ಒಳಗ ನಡೆದರು. ಮಲೆನಾಡು ಬಯಲ ಸೀಮೆಯ ನಡುವೆ ಮುಗದದಲ್ಲಿ ಮಲೆನಾಡಿನ ಗಿಣಿಯೊಂದು ಹಿಂಡನಗಲಿ ಕುಳಿತಂತೆ ಬೇಂದ್ರೆಯವರು ಕುಳಿತಿದ್ದರು. ಅವರನ್ ನೋಡಿ ನಮ್ಮ ಎದೆ ಕರಗಿತು. ಆದ್ರ ಬೇಂದ್ರೆಯವರು ಧೀರ ಗಂಭೀರರಾಗಿದ್ದರು. ʼ ಮಲೆನಾಡಿನ ಗಿಣಿ ʼ ಎಂಬ ಕವಿತೆ ಗೆಳೆಯರ ಗುಂಪಿನ ಮಧುರ ಹಾಗೂ ಸ್ವಪ್ನಮಯತೆಯ ಕಾಲವನ್ನು ಮೊದಲಿಗೆ ಸೂಚಿಸಿ ಮುಂದೆ ಬಟ್ಟಬಯಲಿನ ಹಗಲಿನಲ್ಲಿ ಅವರು ನೋವಿಗೀಡಾದ ರೀತಿಯನ್ನು ಆರದ್ರವಾಗಿ ಬಣ್ಣಿಸುತ್ತದೆ , ಆ ಮಧುರ ಕಾಲಾವಧಿ ಮುಗಿಯಿತೆಂದೆ ಈ ಕವನದಲ್ಲಿ ಗ್ರಹಿಸಲಾಗಿದೆ”.
“ಮಲ್ಲಾಡದ ಗಿಣಿಯೇ ನೀನಿ
ಲ್ಲಲ್ಲಾಡದ ಕುಳಿತೀ ಯಾಕ?
ಏ ಗಿಣಿಯೇ| ಗಿಣಿಯೇ|
ತೋಟದಲ್ಲಿ ಊಟ| ನಿನ ಚೆ
ಲ್ಲಾಟ ಗಾಳಿಗೋಪುರದಾಗ| ಏ…….”
ನರಬಲಿ ಕವನದಿಂದ ಬೇಂದ್ರೆಯವರ ಪಟ್ಟ ಪಾಡು ಅಷ್ಟಿಷ್ಟಲ್ಲ. ಅವರು ತಮ್ಮ ಸಖಿಗೀತದಲ್ಲಿ ಹೇಳಿದಂತೆ.
“ನರಬಲಿ ಕವನವು ಬಲಿ ಮಾಡಿತೆನ್ನನು
ಹೆಳವನಿದ್ದಲ್ಲಿಗೆ ಹೊಳೆಬಂದಿತು
ಮನೆಯನು ಮುರಿದಿತು ಹಾರು ವಿಹಂಗಮಾ |
ಜಂಗಮ ದೀಕ್ಷೆಯು ನಿನಗೆಂದಿತು.”
ಕಾಲ ಚಕ್ರ ತಿರುಗಿತು ಅವರು ಬಲಿಯಾಗಲಿಲ್ಲ ಅವರು ಬಲವಂತರಾದರು. ಬದುಕಿಗೆ ಹೊಸ ಹಾದಿ ದೊರಕಿತು. ಬೇಂದ್ರೆಯವರಿಂದ ನಾವು ಸಾಹಿತ್ಯದ ವಿರಾಟ್ ಸ್ವರೂಪವನ್ನು ಕಂಡೆವು. –ಅದ್ಭುತವಲ್ಲವೇ ನರಬಲಿ !
ಎನ್ನ ಪಾಡೆನಗಿರಲಿ, ಅದರ ಹಾಡನಷ್ಟೇ
ನೀಡುವೆನು ರಸಿಕ ನಿನಗೆ.
ಇಂದು ಸ್ವಾತಂತ್ರ್ಯ ದಿನ ನರಬಲಿಯ ನೆನಪು.
ಸೀನುವಿನ ಗೀತ-ಸ್ವಾತಂತ್ರ್ಯ
ಲೇಖಕರು: ಶ್ರೀ. ಅಣಕು ರಾಮನಾಥ್
“ಎಲ್ಲ ಕವಿಗಳು ಬರೆದ ಎಲ್ಲ ಕವನಗಳೂ ಸ್ವಾತಂತ್ರ್ಯವನ್ನು ಬಿಂಬಿಸುತ್ತವೆ” ಎಂದ ಸೀನು.
“ಇಷ್ಟು ಸಣ್ಣ ವಯಸ್ಸಿಗೆ ಇಂತಹ ಘೋರವಾದ ಮತಿಭ್ರಮಣೆ ಆಗಬಾರದಿತ್ತು” ಎಂದು ನಾಲ್ಕು ಹಲ್ಲಿಗಳ ಲೊಚಲೊಚವನ್ನು ಒಂದೇ ಬಾರಿಗೆ ಗುಟ್ಟಿದೆ.
“ಹಾಡನ್ನು ಗುನುಗು, ಸಮಝಾಯಿಷಿ ನೀಡುತ್ತೇನೆ’ ಎಂದನವನು.
ಸವಾಲನ್ನು ಸ್ವೀಕರಿಸಿದವನ ಜೀವನವನ್ನು ದುರ್ಭರವಾಗಿಸಲು ತೀರ್ಮಾನಿಸಿ “ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್ನ ಅನ್ನೋದು ಹೇಗೆ ಸ್ವಾತಂತ್ರ್ಯವನ್ನು ಬಿಂಬಿಸುತ್ತದೆ?” ಎಂದೆ.
“ಗಾಂಧೀಜಿ ಇರುವವರೆಗೆ ಇನ್ನೊಬ್ಬರ ಮೇಲೆ ಕೈಯಿರಲಿ, ಕೊರಳೆತ್ತಲೂ ಬಿಡುತ್ತಿರಲಿಲ್ಲ. ಅಹಿಂಸಾ ಪರಮೋ ಧರ್ಮಃ ಎಂದು ಇವರೂ, ಆಹ್! ಹಿಂಸಾ ಪರ mow ಧರ್ಮಃ ಎಂದು ಅನ್ಯರೂ ತಿಳಿದು ಆಚರಿಸುತ್ತಿದ್ದ ಕಾಲವದು. ಅನ್ಯರ ‘ಪರ mow’ ಅರ್ಥಾತ್ ಪರರನ್ನು ಕೊಯ್ಯುವ ಕ್ರಿಯೆಗೆ ಗಾಂಧೀಜಿಯ ‘ಕರುಳಿನ ಕರೆ’ಯೇ ಪ್ರತಿಸ್ಪಂದನವಾಗಿದ್ದ ಕಾಲದಲ್ಲಿ ಹೊಡಿ ಮಗ ಎಂದು ಹೇಳಲು ಅವಕಾಶ ಇರಲಿಲ್ಲ. ಈಗ ಅದಕ್ಕೊಂದು ಟ್ಯೂನ್ ಹಾಕಿ ಹಾಡಿ ಎಲ್ಲೆಡೆ ಪ್ರಸರಿಸಬಹುದು. ತತ್ಕಾರಣಂ ಇದಂ ಸ್ವಾತಂತ್ರ್ಯ ಪ್ರತೀಕಂ” ಎಂದನವ.
“ಘಲ್ಲು ಘಲ್ಲೆನುತಾ ಗೆಜ್ಜೆ ಘಲ್ಲು ತಾಧಿಮಿತಾ…” ಮತ್ತೊಂದು ಗಾನಸವಾಲೆಸೆದೆ.
“ಮುಂದಿನ ಸಾಲಿನಲ್ಲೇ ಸ್ವಾತಂತ್ರ್ಯದ ರಂಗು ಇರುವುದು. ‘ಬಲ್ಲಿದ ರಂಗನ್ ವಲ್ಲಿಯ ಮೇಲೆ ಚೆಲ್ಲಿದರೋಕುಳಿಯ’ ಎನ್ನುವುದು ‘ಬಲ್ ಇದ, ಎಂದರೆ ರೈಟಿಸ್ಟ್ ವಿಂಗಿನ, ರಂಗನ್ನು ಸಿಕ್ಕಸಿಕ್ಕವರ ಮೇಲೆ ಎರಚಿದರು ಎಂದರ್ಥ. ಲೆಫ್ಟಿಸ್ಟ್ ರಾಜ್ಯಗಳಲ್ಲಿ ರೈಟಿಸ್ಟ್ ಪಕ್ಷಗಳು ತಮ್ಮ ರಂಗನ್ನು ಹರಡುತ್ತಿವೆ, ಇದಕ್ಕೆ ಇಂದು ಸ್ವಾತಂತ್ರ್ಯವಿದೆ ಎಂದೇ ಈ ಸಾಲುಗಳ ಅರ್ಥ” ಎನ್ನುತ್ತಾ ಬೀಗಿದ ಸೀನು.
“ದೇವನು ರುಜು ಮಾಡಿದನು…” ಕುವೆಂಪು ವಿರಚಿತ ಕವನದ ಸಾಲನ್ನು ಅವನ ಮುಂದಿರಿಸಿದೆ.
“ಇದಂತೂ ಸಾಕ್ಷರತೆಯ ಪ್ರತೀಕವೇ. ದೇವ, ತಿಂಮ, ಶೀನ್ಯಾ, ಇವೆಲ್ಲವೂ ಗ್ರಾಮೀಣ ಜನರ ಹೆಸರುಗಳ ಹ್ರಸ್ವರೂಪ. ‘ದೇವನು ರುಜು ಮಾಡಿದನು’ ಎಂದರೆ ಹಳ್ಳಿಯ ಕಟ್ಟಕಡೆಯ ವ್ಯಕ್ತಿಯೂ ಸಹಿ ಹಾಕಲು ಕಲಿತನು, ಅಕ್ಷರಸ್ಥನಾದನು ಎಂದರ್ಥ. ಜೀತದ ಅನಕ್ಷರತೆಯಿಂದ ಸ್ವಾತಂತ್ರ್ಯದ ಅಕ್ಷರತೆಯೆಡೆಗೆ ಬಂದಿರುವುದರ ಸಂಕೇತವಿದು!”
“ಕೋಡಗನ ಕೋಳಿ ನುಂಗಿತ್ತಾ…” ಶರೀಫರ ಕವನವನ್ನು ಪರೀಕ್ಷೆಗೊಡ್ಡಿದೆ.
“ಮೇಲುಕೀಳುಗಳೆಂಬ ಭಾವವನ್ನು ತೊಡೆದುಹಾಕಿದೆವು; ಕೆಳವರ್ಗವು ಮೇಲ್ವರ್ಗವನ್ನು ಜೀರ್ಣಿಸಿಕೊಂಡು ಬದುಕಲು ಕಲಿಯಿತು; ಮೇಲು-ಕೀಳುಗಳು ಒಂದಾದುದರಿಂದ ಸ್ವಾತಂತ್ರ್ಯದ ಉದ್ದೇಶವು ನೆರವೇರಿತು ಎಂದೇ ಇದರ ಅರ್ಥ!”
“ಅದು ಹೇಗೆ?”
“ಕೋಡಗ ಎಂದರೆ ಕೋತಿ. ಮೇಲೆ ಇರುವಂತಹದ್ದು. ತತ್ಕಾರಣ ಮೇಲ್ವರ್ಗ. ಕೋಳಿ ಕೊಳಚೆಯ ಸುತ್ತಮುತ್ತ ಕೆಳಮಟ್ಟದಲ್ಲೇ ಸಂಚರಿಸುವುದು; ಆದ್ದರಿಂದ ಕೆಳವರ್ಗ. ಕೆಳವರ್ಗವು ಮೇಲ್ವರ್ಗವನ್ನು ನುಂಗುವುದು – ಎಂದರೆ ಜೀರ್ಣವಾಗುವ ರೀತಿಯಲ್ಲಿ – ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ – ತನ್ನನ್ನು ತಾನು ತೊಡಗಿಸಿಕೊಳ್ಳುವುದರ ದ್ಯೋತಕವೇ ಈ ಹಾಡು!”
“ಶಿವಾಂತ ಹೋಗುತ್ತಿದ್ದೆ ರೋಡಿನಲಿ; ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ; ಅರ್ಧ ಟ್ಯಾಂಕು ಪೆಟ್ರೋಲಿತ್ತು ಬೈಕಿನಲಿ; ನೀ ಕಂಡೆ ಸೈಡಿನಲಿ.” ಇಡೀ ಪಲ್ಲವಿಯನ್ನೇ ಮುಂದಿರಿಸಿದೆ.
“ನಿಮಗೆ ಬೇಕಾದ ದೇವರ ಹೆಸರನ್ನು ಜೋರಾಗಿ ಉದ್ಗರಿಸುತ್ತಾ ಬೀದಿಯಲ್ಲಿ ಅಡ್ಡಾಡಲು ನಿಮಗೆ ಸ್ವಾತಂತ್ರ್ಯವಿದೆ ಎಂದು ಮೊದಲ ಸಾಲು ಹೇಳುತ್ತದೆ. ಐಟಿಬಿಟಿಗಳು ಬೆಳೆದಮೇಲಂತೂ ಬ್ಯಾಂಕುಗಳೇ ಕ್ಯೂ ನಿಂತು ಸಾಲ ಕೊಡುವುದರಿಂದ ಸಿಕ್ಕಸಿಕ್ಕಲ್ಲಿ ಸಾಲ ಮಾಡಿ, ಹಳೆಯ ಕಾಲದ ಗೊಡ್ಡುಗಳಾದರೆ ಸಾಲ ತೀರಿಸಲೂ, ಆಧುನಿಕಮತಿಗಳಾದರೆ ಹೊರದೇಶಕ್ಕೆ ಹೋಗಿ ಅಲ್ಲೇ ನೆಲೆಸಲೂ ಸ್ವಾತಂತ್ರ್ಯವಿದೆ ಎಂದು ‘ಲೈಫಿನಲ್ಲಿ ಸಿಕ್ಕಾಪಟ್ಟೆ ಸಾಲ’ವು ಸೂಚಿಸುತ್ತದೆ. ಟ್ಯಾಂಕಿನಲ್ಲಿ ಅರ್ಧದಷ್ಟೇ ಪೆಟ್ರೋಲ್ ಇರುವುದು ಇನ್ನರ್ಧ ಟ್ಯಾಂಕಿಗೆ ತನಗೆ ಬೇಕಾದಂತಿರಲು ನೀಡಿದ ಸ್ವಾತಂತ್ರ್ಯ. ‘ಪೂರ್ತಿ ಟ್ಯಾಂಕ್ ಪೆಟ್ರೋಲಿಗೆ ಬಂಧನದ ಸಂಕೇತ. ಅರ್ಧ ಟ್ಯಾಂಕ್ ಅದಕ್ಕೆ ತುಳುಕಾಡಲು ನೀಡಿರುವ ಸ್ವಾತಂತ್ರ್ಯ. ಅಲ್ಲದೆ ಈ ಪೂರ್ತಿ, ಅರ್ಧಗಳು ನಮ್ಮ ದೇಶದ ಪ್ರಜೆಗಳ ಮನೋಗತವನ್ನು ಪ್ರತಿನಿಧಿಸುತ್ತವೆ. ಆಕಡೆ ಹತ್ತು ಪಕ್ಷಗಳು, ಈ ಕಡೆ ಇಪ್ಪತ್ತು ಪಕ್ಷಗಳಿದ್ದರೆ ಮಾತ್ರ ಒಂದು ಸಂಪೂರ್ಣ ಪಕ್ಷ. ಯಾರಾದರೂ ಕೈಯೆತ್ತಿದರೆ ಅರ್ಧಪಕ್ಷ. ಅರ್ಧ ಟ್ಯಾಂಕ್ ಅರ್ಧಪಕ್ಷವನ್ನು ಬಿಂಬಿಸುತ್ತದೆ. ಅರ್ಧಪಕ್ಷವಿದ್ದರೆ ಇಂದಲ್ಲ ನಾಳೆ ಬೈಕ್ ಬಂದ್ – ಅರ್ಥಾತ್ ಪಕ್ಷದ ಬಯಕೆಯ ಬಂದ್” ಎಂದ ಸೀನು.
“ನೀ ಕಂಡೆ ಸೈಡಿನಲಿ ಎನ್ನುವುದನ್ನು ಬಿಟ್ಟೆಯಲ್ಲ!”
“ಅದು ಬೈಕ್ ಸ್ವಾತಂತ್ರ್ಯ. ರೈಡ್ ಮಾಡುವಾಗ ಕೇವಲ ಬೀದಿಯತ್ತಲೇ ನೋಡದೆ ಎಲ್ಲೆಲ್ಲೋ ನೋಡಿಕೊಂಡು ವಾಹನ ಓಡಿಸಲು ನಮಗೆ ಸ್ವಾತಂತ್ರ್ಯವಿದೆ ಎನ್ನುವುದರ ಸೂಚಕವದು” ವಿವರಿಸಿದ ಸೀನು.
“ಬಂಧನ… ಶರಪಂಜರದಲಿ ಬಂಧನ…” ಶರಪಂಜರ ಚಿತ್ರದ ಹಾಡನ್ನು ಮುಂದಿರಿಸಿದೆ. ಇದಂತೂ ಸ್ವಾತಂತ್ರ್ಯಸೂಚಕವಾಗಲು ಸಾಧ್ಯವೇ ಇಲ್ಲವಲ್ಲ!
“ವಾಹ್! ಇದಂತೂ ಇಂಡಿಪೆಂಡೆನ್ಸ್ ಎಟ್ ದ ಹೈಯೆಸ್ಟ್ ಲೆವೆಲ್ಸ್. ಶರ ಎಂದರೆ ಬಿಳಿಯ ಹುಲ್ಲು ಎಂದು ಅರ್ಥವಿದೆ. ಸೀನಿಯರ್ ಸಿಟಿಝನ್ಗಳ ತಲೆಗೂದಲು ಬಿಳಿಯ ಹುಲ್ಲಿನಂತೆ ಇರುತ್ತದೆ. ‘ಶರಪಂಜರ’ ಎಂದರೆ ಬಿಳಿಯ ಹುಲ್ಲಿನಂತೆ ಕಾಣುವ ನೈಜ ಕೂದಲು ಅಥವಾ ಅಂತಹ ವಿಗ್ಗು. ‘ಸೀನಿಯರ್ ಸಿಟಿಝನ್ಗಳು ತಮ್ಮ ಕೇಶಾಲಂಕರಣದಿಂದ ಕಂಗೊಳಿಸುವಷ್ಟರ ಮಟ್ಟಿಗೆ ನಮ್ಮಲ್ಲಿ ಸ್ವಾತಂತ್ರ್ಯವಿದೆ ಎಂದು ಇದರ ಅರ್ಥ. ಹಿರಿಯ ನಾಗರಿಕರಿಗೆ ಗೃಹದಲ್ಲಿ, ಶರೀರದಲ್ಲಿ ತೊಂದರೆಗಳಿದ್ದರೆ ತಮ್ಮ ಅಂದದ ಬಗ್ಗೆ ಗಮನವಿರುವುದಿಲ್ಲ. ಹೀಗೆ ಒಪ್ಪವಾದ ಕೇಶರಾಶಿಯೊಂದಿಗೆ (ಅಸಲಿಯಾದರೂ ಸರಿ, ನಕಲಿಯಾದರೂ ಸರಿ) ಅವರು ಕಾಣಿಸಿಕೊಳ್ಳುತ್ತಿರುವರೆಂದರೆ ಅವರ ಮಾನಸಿಕ, ದೈಹಿಕ, ವಿತ್ತೀಯ ಸ್ವಾತಂತ್ರ್ಯ ಸ್ವಸ್ಥವಾಗಿದೆ ಎಂದೇ ಅರ್ಥವಲ್ಲವೆ!”
“ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು ಬಲು ಮೋಸಗಾರನು ಸರಿಯೇನು?”
“ಸರಿಯೆಂದು ಒಪ್ಪಿಕೊಂಡು ಮಂತ್ರಿಗಳನ್ನಾಗಿಸಿರುವಾಗ ಚೋರಸ್ವಾತಂತ್ರ್ಯಕ್ಕೆ ಜೈ ಎನ್ನುವುದೇ ಇಂದಿಗೆ ಸರಿಯಾದ ಮಾರ್ಗವಯ್ಯಾ!”
ಕನ್ನಡದ ಹಾಡುಗಳಲ್ಲಿ ಇವನನ್ನು ಸಿಲುಕಿಸಲು ಸಾದ್ಯವಿಲ್ಲವೆಂದರಿತು ಹಿಂದಿ ಗೀತೆಗಳ ಮೊರೆಹೊಕ್ಕೆ.
“ತೂ ಸೋಲ ಬರಸ್ ಕಾ; ಮೇ ಸತರ ಬರಸ್ ಕೀ” ಸಾಲನ್ನು ಕೊಟ್ಟೆ.
“50 ಸಿಸಿಗಿಂತ ಕಡಿಮೆಯಿರುವ ವಾಹನಗಳನ್ನು ಓಡಿಸಲು ಇವರಿಬ್ಬರೂ ಸ್ವಾತಂತ್ರ್ಯವಿರುವುದನ್ನು ಹಾಡಿನ ಮೂಲಕ ನುಡಿಯುತ್ತಿದ್ದಾರೆ. ಇಬ್ಬರೂ ಎಲೆಕ್ಟ್ರಿಕ್ ವೆಹಿಕಲೊಂದನ್ನು ಖರೀದಿಸಿ ‘ಪಂಛಿ ಬಿನೂ ಉಡ್ತೆ ಫಿರೂ ಮಸ್ತ ಗಗನ್ ಮೇ’ ಎನ್ನುತ್ತಾ ಓಡಾಡಲು ಬ್ರಿಟಿಷ್ ಕಾಲದಲ್ಲಿ ಸಾಧ್ಯವಿರಲಿಲ್ಲ. ಈಗ ಆ ಸ್ವಾತಂತ್ರ್ಯ ನಮಗಿದೆ.”
“ಗೋರಿ ತೇರಾ ಗಾವ್ ಬಡಾ ಪ್ಯಾರಾ ಮೈ ತೋ ಗಯಾ ಮಾರಾ ಆಕೇ ಯಹಾ ರೇ” ಎಂಬ ಚಿತ್ಚೋರ್ನ ಹಾಡಿನಲ್ಲಿ ಸ್ವಾತಂತ್ರ್ಯದ ಛಾಯೆಯನ್ನು ತೋರಿಸೆಂದೆ.
“ಬಡಾ ಪ್ಯಾರಾ ಎಂದರೆ big paragraph. ನಿನ್ನ ಹಳ್ಳಿಯು ನನ್ನ ಜೀವನದಲ್ಲೊಂದು ದೊಡ್ಡ ಅಧ್ಯಾಯ ಎನ್ನುವುದನ್ನು ಕವಿಯು ಪ್ಯಾರಾಗ್ರಾಫ್ ಎಂದಿದ್ದಾನೆ. ನಿನ್ನ ಹಳ್ಳಿಗೆ ಬಂದಮೇಲೆ ನಾನು ಮಾರನೇ ಆಗಿಬಿಟ್ಟೆ. ಎಂದರೆ ಕಾಮನ ಅಪರಾವತಾರವೇ ಆಗಿಬಿಟ್ಟೆ. ನಿನ್ನ ಹಳ್ಳಿಯ ಮೇಲೆ ಅತೀವ ಬಯಕೆಯುಳ್ಳವನಾಗಿ ಅದನ್ನು ಹಾಲಿಡೇ ವಿಲೇಜ್ ಮಾಡಬೇಕೆಂದಿದ್ದೇನೆ ಎನ್ನುವುದೇ ಅದರ ಇಂದಿನ ಅರ್ಥ. ‘ಭೂಕಬಳಿಕೆಗೂ, ಅನಿಯಂತ್ರಿತವಾದ ಅಭಿವೃದ್ಧಿಗೂ ಇಲ್ಲಿ ಸ್ವಾತಂತ್ರ್ಯ ಇದೆ’ ಎನ್ನುವುದೇ ಈ ಗೀತೆಯ ಸಂದೇಶ” ವಿಕಟವಾಗಿ ನಗುತ್ತಾ ನುಡಿದ ಸೀನು.
“ಸಜನ್ ರೇ ಝೂಟ್ ಮತ್ ಬೋಲೋ. ಖುದಾ ಕೇ ಪಾಸ್ ಜಾನಾ ಹೈ; ನ ಹಾಥೀ ಹೈ ನ ಘೋಡಾ ಹೈ; ವಹಾ ಪೈದಲ್ ಹೀ ಜಾನಾ ಹೈ” ಎಂಬ ಪಲ್ಲವಿಯನ್ನು ಮುಂದಿಟ್ಟೆ.
“ಇದು ಪ್ರಜಾಪ್ರಭುತ್ವದ ಒಂದು ಅಂಶವನ್ನು ಬಿಂಬಿಸುತ್ತದೆ. ಚುನಾವಣೆಯ ಸಮಯದಲ್ಲಿ ‘ಸುಳ್ಹೇಳ್ಬೇಡ್ರೀ… ಎವಿಡೆನ್ಸ್ ನನ್ನ ಪೆನ್ ಡ್ರೈವ್ನಾಗೈತೆ” ಎನ್ನುವುದೇ ಸಜನ್ ರೇ ಝೂಟ್ ಮತ್ ಬೋಲೋ; ಚುನಾವಣೆಯ ಸಮಯದಲ್ಲಿ ಟೆಂಪಲ್ ರನ್ ಅನಿವಾರ್ಯ; ಅದೇ ‘ಖುದಾ ಕೇ ಪಾಸ್ ಜಾನಾ ಹೈ’; ಚುನಾವಣೆಗೆ ಮುನ್ನ ವೈಟ್ ಎಲಿಫೆಂಟುಗಳೂ ಎಲಿಫೆಂಟುಗಳಂತೆ ಆಡದೆ ಮೊಲದ ಮುಖವಾಡ ಹಾಕಿಕೊಳ್ಳುತ್ತವೆ. ಘೋಡಾಗಳೂ ರಿಸಲ್ಟ್ ಬಂದಮೇಲೆಯೇ horse tradingಗೆ ಒಳಗಾಗಲು ಮುಂದಾಗುತ್ತವೆ. ಆದ್ದರಿಂದ ಚುನಾವಣೆಯ ಸಮಯದಲ್ಲಿ ಹಾಥಿ, ಘೋಡಾಗಳು ಇರುವುದಿಲ್ಲ. ಮತ ಕೇಳಲು ಮನೆಮನೆಗೆ ಹೋಗುವುದರಿಂದ ‘ವಹಾ ಪೈದಲ್ ಹೀ ಜಾನಾ ಹೈ’. ಇದು ರಾಜಕಾರಣಿಗಳಿಗೆ ಚುನಾವಣಾ ಸಮಯದಲ್ಲಿರುವ ಸ್ವಾತಂತ್ರ್ಯವನ್ನು ಎತ್ತಿತೋರಿಸುವ ಹಾಡು” ಎಂದ ಸೀನು.
“ಜಾನೇವಾಲೇ ಹೋ ಸಕೇ ತೋ ಲೌಟ್ಕೆ ಆನಾ’ ಎಂಬ ಮುಕೇಶನ ಹಾಡನ್ನು ಗುನುಗಿದೆ.
“ಇದು ಕಟೌಟ್ ಸ್ವಾತಂತ್ರ್ಯ. ಸತ್ತವರ ಫೋಟೋದ ಸುತ್ತಲೂ ಬೆಲ್ಲಕ್ಕೆ ಸುತ್ತಿದ ಗೊದ್ದಗಳಂತೆ ಕಾಣುವ ಫೋಟೋಗಳನ್ನು ಲಗತ್ತಿಸಿ ‘ಮತ್ತೆ ಹುಟ್ಟಿಬಾ’ ಎಂದು ಶುದ್ಧ ಅಯೋಗ್ಯರನ್ನೇ ಹೆಚ್ಚಾಗಿ ಸ್ಮರಿಸುವ ಪಡೆಗಳಿಗಿರುವ ಅಮೋಘ ಸ್ವಾತಂತ್ರ್ಯದ ಹಾಡಿದು” ಎಂದ ಸೀನು.
ಸೆಲ್ಫೋನ್ ಅದುರುವಾಯುಪೀಡಿತನಂತೆ ನಡುಗಿತು. “Flag hoisting in half an hour. Please be on time” ಎಂದಿತು ಸಂದೇಶ. ಸದ್ಯಕ್ಕೆ ಸೀನುವಿನ ಭಯಂಕರ ತರ್ಕದಿಂದ ಸ್ವತಂತ್ರನಾಗಿ ಸ್ವಾತಂತ್ರ್ಯೋತ್ಸವದ ಆಚರಣೆಯ ಸ್ಥಳದತ್ತ ದಾಪುಗಾಲು ಹಾಕಿದೆ.
ನಮ್ಮ ಕೋಶ ಭಾರತ
ರಚನೆ : ಡಾIIಎ.ಭಾನು
ನಮ್ಮ ನಾಡು ಭಾರತ ನಮ್ಮ ನಾಡಿ ಭಾರತ
ನಮ್ಮ ನುಡಿಯು ಭಾರತ ನಮ್ಮ ನಡೆಯು ಭಾರತ
ನಮ್ಮ ನೋಟ ಭಾರತ ನಮ್ಮ ಕೂಟ ಭಾರತ
ನಮ್ಮ ಉಸಿರು ಭಾರತ ನಮ್ಮ ಹೆಸರು ಭಾರತ I1I
ನಮ್ಮ ಭಾವ ಭಾರತ ನಮ್ಮ ಜೀವ ಭಾರತ
ನಮ್ಮ ತುಡಿತ ಭಾರತ ನಮ್ಮ ಮಿಡಿತ ಭಾರತ
ನಮ್ಮ ರೀತಿ ಭಾರತ ನಮ್ಮ ನೀತಿ ಭಾರತ
ನಮ್ಮ ಪ್ರೀತಿ ಭಾರತ ನಮ್ಮ ಛಾತಿ ಭಾರತ I2I
ನಮ್ಮ ಮನವು ಭಾರತ ನಮ್ಮ ಮತಿಯು ಭಾರತ
ನಮ್ಮ ಒಲವು ಭಾರತ ನಮ್ಮ ನಲವು ಭಾರತ
ನಮ್ಮ ಕನಸು ಭಾರತ ನಮ್ಮ ನನಸು ಭಾರತ
ನಮ್ಮ ಗುರಿಯು ಭಾರತ ನಮ್ಮ ಸಿರಿಯು ಭಾರತ I3I
ನಮ್ಮ ಶೌರ್ಯ ಭಾರತ ನಮ್ಮ ಧೈರ್ಯ ಭಾರತ
ನಮ್ಮ ಕ್ರಾಂತಿ ಭಾರತ ನಮ್ಮ ಶಾಂತಿ ಭಾರತ
ನಮ್ಮ ಶಕ್ತಿ ಭಾರತ ನಮ್ಮ ಯುಕ್ತಿ ಭಾರತ
ನಮ್ಮ ಭಕ್ತಿ ಭಾರತ ನಮ್ಮ ಮುಕ್ತಿ ಭಾರತ I4I
ನಮ್ಮ ರಕ್ಷೆ ಭಾರತ ನಮ್ಮ ದೀಕ್ಷೆ ಭಾರತ
ನಮ್ಮ ಧ್ಯೇಯ ಭಾರತ ನಮ್ಮ ಗೇಯ ಭಾರತ
ನಮ್ಮ ಶ್ರದ್ಧೆ ಭಾರತ ನಮ್ಮ ಶಿಸ್ತು ಭಾರತ
ನಮ್ಮ ದೃಢತೆ ಭಾರತ ನಮ್ಮ ಘನತೆ ಭಾರತ I5I
ನಮ್ಮ ದೇಶ ಭಾರತ ನಮ್ಮ ಕೋಶ ಭಾರತ
ನಮ್ಮ ವೇಷ ಭಾರತ ನಮ್ಮ ಘೋಷ ಭಾರತ
ನಮ್ಮ ಹೆಮ್ಮೆ ಭಾರತ ನಮ್ಮಹಮ್ಮು ಭಾರತ
ನಮ್ಮ ಧರ್ಮ ಭಾರತ ನಮ್ಮ ಮರ್ಮ ಭಾರತ I6I
ನಮ್ಮ ಮಾತೆ ಭಾರತ ನಮ್ಮ ಕಾವ ಸಂಹಿತ
ನಮ್ಮ ದೈವ ಭಾರತ ಸದಾ ಗೌರವಾನ್ವಿತ
ಸದಾ ಕರದಿ ಪೂಜಿತ ಸದಾ ಮನದಿ ವಂದಿತ
ಭಾರತ ಭಾರತ ಭಾರತ ಭಾರತ I7I
ಪ್ರಮೋದ್ ಕಳೆದ ವಾರಾಂತ್ಯ ಪ್ರವಾಸದಲ್ಲಿದ್ದು ಬ್ಯುಸಿಯಾಗಿಬಿಟ್ಟೆ. ತಡವಾಗಿ ಪ್ರತಿಕ್ರಯಿಸುತ್ತಿದ್ದೇನೆ. ಅದರ ಬಗ್ಗೆ ಸ್ವಲ್ಪ ಮುಜುಗರ ಮತ್ತು ಅಸಮಾಧಾನವೂ ಬೆರೆತಿದೆ.
ಈ ಗುಚ್ಛದಲ್ಲಿ ನೀವು ಕರ್ನಾಟಕದ ನಿವಾಸಿ ಬರಹಗಾರರಿಂದ ಎರವಲು ಪಡೆದ ಬರಹಗಳು ನಮ್ಮ ಈ ವೇದಿಕೆಗೆ ಹೊಸ ಆಲೋಚನೆಗಳನ್ನು ಪರಿಚಯಿಸಿದೆ, ತಾಜಾತನವನ್ನು ನೀಡಿದೆ ಮತ್ತು ಸಮಯೋಚಿತವಾಗಿದೆ.
ಬೇಂದ್ರೆಯವರ ನರಬಲಿ ಕವನ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೊರ ಹೊಮ್ಮಿದ ಆಕ್ರೋಶವನ್ನು ಆಳವಾಗಿ ಬಿಂಬಿಸಿದೆ. ಈ ಕನ್ನಡ ಕವನ ಕನ್ನಡಿಗರಲ್ಲೇ ಉಳಿಯದೆ ಇಂಗ್ಲಿಷ್ ಪ್ರಭುತ್ವವನ್ನು ತಲುಪಿ ಬೇಂದ್ರೆ ಅವರ ಜೈಲು ಶಿಕ್ಷೆಗೆ ಕಾರಣವಾದದ್ದು ಆ ಕಾಲಘಟ್ಟದಲ್ಲಿ ನಮ್ಮ ನಮ್ಮಲ್ಲೇ ಇದ್ದ ಒಡಕುಗಳನ್ನು ಹುಳುಕುಗಳನ್ನು ಎತ್ತಿ ತೋರಿಸಿದೆ. ನಮ್ಮನ್ನು ಒಂದುಗೂಡಿಸಲು ಒಬ್ಬ ಗಾಂಧಿ ಹುಟ್ಟಿ ಬರಬೇಕಾಯಿತು. ಸ್ವಾತಂತ್ರ್ಯ ಪಡೆದ ನಂತರವೂ ಎಮರ್ಜೆನ್ಸಿ ಸಮಯದಲ್ಲಿ ಮತ್ತು ಇನ್ನು ಕೆಲವು ಸಂದರ್ಭದಲ್ಲಿ ಕವಿಗಳು ಲೇಖಕರು ತಮ್ಮ ಬಂಡಾಯ ಧ್ವನಿಗಳನ್ನು ಎತ್ತುವಂತಿಲ್ಲ. ಪ್ರಭುತ್ವದ ವಿರುದ್ಧ ಟೀಕೆ ಮಾಡಿದವರನ್ನು ದೇಶದ್ರೋಹಿಗಳೆಂದು ಪರಿಗಣಿಸುವ ವಾತಾವರಣ ಸೃಷ್ಟಿಯಾಗಿರುವುದು ಶೋಚನೀಯ ಸಂಗತಿ.
ಅಣಕು ರಮಾನಾಥ ಅವರು ಹಲವಾರು ಕವಿತೆ, ತತ್ವಪದ, ಚಿತ್ರಗೀತೆಗಳನ್ನು ಕೆದಕಿ ಇಣುಕು ನೋಟದಲ್ಲಿ ಸ್ವಾತಂತ್ರ್ಯ ಬಂದಮೇಲೂ ಸ್ವಾತಂತ್ರ್ಯವನ್ನು ನಿಜವಾದ ಅರ್ಥದಲ್ಲಿ ಪಡೆದದವರು ಯಾರು ಎಂಬ ಸೂಕ್ಷ್ಮ ವಿಚಾರವನ್ನು ತಿಳಿ ಹಾಸ್ಯದಲ್ಲಿ ನವುರಾಗಿ ತಂದಿದ್ದಾರೆ. ಅವರು ಬಂಡಾಯ ಕವಿ ಸಿದ್ದಲಿಂಗಯ್ಯ ಅವರ “ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ” ಎಂಬ ಪದ್ಯವನ್ನು ಈ ಬರಹದಲ್ಲಿ ಉಲ್ಲೇಖಿಸಿದ್ದಲ್ಲಿ ಇನ್ನು ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು. ಅಣುಕು ರಮಾನಾಥ್ ಅವರನ್ನು ನಾನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಕಸ್ಮಿಕವಾಗಿ ಒಂದು ಉಪಹಾರ ಗೃಹದಲ್ಲಿ ಭೇಟಿಯಾದುದನ್ನು ಇಲ್ಲಿ ನೆನಪಿಸಿಕೊಳ್ಳಲು ಇಚ್ಛಿಸುತ್ತೇನೆ. ಅವರನ್ನು ಕಂಡಾಗಲೆಲ್ಲಾ ನನಗೆ ಡುಂಡಿರಾಜ್ ನೆನಪಾಗುತ್ತಾರೆ.
ಡಾ ಭಾನು ಅವರ ಕವನ, ದೇಶಭಕ್ತಿ ಮಂತ್ರದಂತಿದೆ. ಸಂದರ್ಭಕ್ಕೆ ಉಚಿತವಾಗಿದೆ.
LikeLike
ಸ್ವಾತಂತ್ರ್ಯದ ದಿನದ ತ್ರಿವರ್ಣ ಪ್ರಸ್ತುತಿ: ೧) ಧಾರವಾಡದಲ್ಲಿ ವರಕವಿಯನ್ನು ಹತ್ತಿರದಿಂದ ನೋಡಿದ ಹರ್ಷ ಡಂಬಳ್ ಅವರ ’ನರಬಲಿ’ಯ ಸ್ಮರಣೆಗೆ ಹೆಚ್ಚು ಮಹತ್ ಇಂದು, ಎಷ್ಟೆಲ್ಲ ಈಗಾಗಲೆ ಪುಂಖಾನುಪುಂಖವಾಗಿ ಯಾರ್ಯಾರೋ ಬರೆದಾದಿದ್ದರೂ! ರಕ್ತಸಿಂಚಿತ ಲೇಖನಿಯಿಂದ ಬಂದ ಪದಗಳು.
೨) ಸೀನುವಿನ ಪ್ರಥಮ ವಾಕ್ಯದಲ್ಲಿ ಒಂದು ಥೇರಮ್. ಅದನ್ನು ವಿವಿಧ ಕೋನಗ್ಗಳಿಂದ ಬೇರೆ ಬೇರೆ ಭಾಷೆಯ ಪ್ರಸಿದ್ಧ ಸಾಲುಗಳನ್ನು ವಿಶ್ಲೇಷಿಸುವ ಪರಿ ಅನನ್ಯ! ತಿಳಿ ಹಾಸ್ಯಭರಿತ ಅಂತ ಹೊರನೋಟಕ್ಕೆ ಅನಿಸಿದರೂ ಅವುಗಳ ಹಿಂದಿನ ವಿಚಾರ ಧಾರೆ ವಿಸ್ಮಯಕಾರಿ.
೩) ಕೋಶದಲ್ಲಿಯ ಎಲ್ಲ ಪ್ರಾಸಗಳನ್ನೂ ಭಾರತದೊಡನೆ ಒಟ್ಟುಗೂಡಿಸಿ ಕಲಸಿ ಬರೆದು ಉಣಿಸಿದಂತೆ ತಿರಂಗಾದ ಮಧ್ಯದ ಬಿಳಿ ಪಟ್ಟಿಯಂತೆ ಶಾಂತಿ ರಸವನ್ನುಣಿಸುವ ಭಾನು ಅವರ ಕವನ. ಮೂರೂ ಪ್ರಮೋದರನ್ನು ಮಧ್ಯವರ್ತಿಯಾಗಿಟ್ಟುಕೊಂಡು ಹಾರುವ ಧ್ವಜವಿದು! ಅಗಸ್ಟ್ ಪಂದ್ರಾದ ಒಂದು ಸೆಲ್ಯೂಟ್ ನನ್ನದೂ!
ಶ್ರೀವತ್ಸ
LikeLike