ಸ್ವರ್ಗದೊಳಗೀ ಮಾವು ದೊರೆವುದೇನು?
ಎಲ್ಲ ಪರಿ ಸವಿಸೊಬಗ ರಸದ ಜೇನು॥
ಇಲ್ಲದಿರೆ ಎನಗಿಲ್ಲೆ ನೂರು ಜನುಮಗಳಿರಲಿ
ಎಲ್ಲ ಪರಿಯ ಮಾವು ಸವಿಯ ಸಿಗಲಿ ॥
( ಮೂಲ ಕವಿಯ ಕ್ಷ ಮೆ ಯಾಚಿಸುತ್ತ)
ಜಗದೊಡೆಯನ ಅತ್ಯದ್ಭುತ ಸೃಷ್ಟಿ ಯಾವುದೆಂದು ಯಾರಾದರೂ ಕೇಳಿದರೆ ನಾನಿನಿತೂ ಹಿಂದೆ ಮುಂದೆ ನೋಡದೇ ಥಟ್ಟನೇ ಕಣ್ಮುಚ್ಚಿಕೊಂಡು ಕೊಡುವ ಉತ್ತರ ಎಂದರೆ. ‘ಮಾವು..ಮಾವು..ಮಾವು’.
ಎಂಥ ಸೊಗಸು ಘಮ್ಮನೇ ಹೂತ ಆ ಚೂತ ಮರ,ಚಿಗುರು,ತಳಿರು,ದೋರಗಾಯಿ,ಕಾಯಿ, ಹಣ್ಣುಗಳು!! ಮಾಮರದ ಹೂಗಳನ್ನೇ ಮಾರ ತನ್ನ ಬಿಲ್ಲಿನ ಹೂಬಾಣಕ್ಕೆ ಬಳಸುವುದಂತೆ. ಕೋಗಿಲೆಯ ಪಂಚಮನೂಂಚರದ ತವರೂ ಇದೇ ಮಾಮರ. ಕವಿಗಳಿಗೂ ಇದುವೇ ಸ್ಫೂರ್ತಿಯ ಸೆಲೆ. ವಸಂತನಾಗಮನದ ತುತ್ತೂರಿ ಈ ಮಾವೇ.
ಈ ಮಾವಿನಕಾಯಿ – ಹಣ್ಣುಗಳಿರದಿದ್ದರೆ ಜೀವನ ಅದೆಷ್ಟು ನೀರಸವಾಗಿರುತ್ತಿತ್ತು ಊಹಿಸಿ. ಮಾವು ಬಳಸಿದ ಅಡುಗೆಯ ಸ್ವಾದದ ಮಾತೇ ಬೇರೆ. ಚಟ್ನಿ, ಕೋಸಂಬರಿ, ಗೊಜ್ಜು, ತೊಕ್ಕು- ಉಪ್ಪಿನಕಾಯಿಗಳು, ಪಳುವು, ಮೊರಬ್ಬ-ಗುಳಂಬಗಳು, ಚಿತ್ರಾನ್ನ-ಕಲಸನ್ನಗಳು, ಸೀಕರಣೆ-ಆಮ್ರಖಂಡಗಳು, ಅಪ್ಪೆಹುಳಿ,ತೊವ್ವೆಗಳು..ಒಂದೇ ?! ಎರಡೇ?! ನನಗಂತೂ ಆ ವಿಧಾತ ಕನಿಷ್ಟ ಈ ಮಾವಿನ ಸೀಜನ್ ನಲ್ಲಾದರೂ ಎರಡು ಹೊಟ್ಟೆ ಕೊಡಬಾರದೇ ಎಂಬ ಚಡಪಡಿಕೆ.
ನನಗಂತೂ ಈ ಮಾವಿನ ಖಾದ್ಯಗಳು ಬರೀ ಬಾಯ್ ರುಚಿಯ,ಹೊಟ್ಟೆ ತುಂಬಿಸುವ ತಿನಿಸುಗಳಲ್ಲ. ಅವುಗಳಲ್ಲಿ ನನ್ನ ಬಾಲ್ಯದ ಕಂಪಿದೆ. ನೂರಾರು ಮಧುರನೆನಪುಗಳು ಭಾವಕೋಶದೊಂದಿಗೆ ಬೆಸೆದಿವೆ.
ತೊವ್ವೆ
ಬಚ್ಚಲಿನ ಹಂಡೆದೊಲೆಯ ಕಟ್ಟಿಗೆಯನ್ನು ಹೊರಗೆಳೆದು ಕಪ್ಪಾದ ದೊಡ್ಡ ಝಾಲಿಸೌಟಿನಿಂದ ಒಳಗಿನ ನಿಗಿನಿಗಿಕೆಂಡವನ್ನು ಒಂದು ಹಿತ್ತಾಳಿಝಾಕಣಿಯಲ್ಲಿ ತುಂಬಿಕೊಂಡು ಬಂದು ಅದನ್ನು ಅಡುಗೆಮನೆಯ ಶೇಗಡಿಗೆ (ಇದ್ದಲಿ ಒಲಿ) ಸುರುವಿ ಅದರ ಮೇಲೆ ದಪ್ಪನೆಯ ಹಿತ್ತಾಳೆಯಗುಂಡಿಯಲ್ಲಿ ಬ್ಯಾಳಿ ಬೇಯಲಿಕ್ಕಿಡೂದು ಅಮ್ಮನ ದಿನಬೆಳಗಿನ ಕಾಯಕ. ಮಾವಿನಕಾಯಿ ತೊವ್ವೆ ಮಾಡುವ ದಿನದಂದು ಎರಡು ಮುಷ್ಟಿಬ್ಯಾಳಿ ಹೆಚ್ಚಿಗೇ ಇಡುವುದಿತ್ತು. ಆ ಇದ್ದಿಲೊಲೆಯ ಹದವಾದ ಶಾಖದಲ್ಲಿ ನಿಧಾನವಾಗಿ ಮಿದುವಾಗಿ ಬೆಂದ ತೊಗರಿಬೇಳೆ ತೊವ್ವೆಗೆ ಸ್ವಲ್ಪಹೆಚ್ಚಿಗೇ ಇಂಗು, ಜೀರಗೆ, ಮೆಂತ್ಯ, ಕರಿಬೇವು, ಸಣ್ಣಗೆ ಹೆಚ್ಚಿದ ಹಸಿಮೆಣಸು ಹಾಗೂ ಮಾವಿನಕಾಯಿ ಹೋಳುಗಳನ್ನು ಒಗ್ಗರಣೆಯಲ್ಲಿಕೈಯಾಡಿಸಿ ಸುರಿದು,ಒಂದಿಷ್ಟು ಉಪ್ಪು,ಬೆಲ್ಲ ಹಾಕಿ ಮತ್ತೊಂದು ಕುದಿ ಕುದಿಸಿದರೆ 'ಮಾವಿನಕಾಯಿ ತವ್ವಿ' ಸವಿಯಲು ಸಿದ್ಧವಾಗುತ್ತಿತ್ತು. ಮೆಂತ್ಯ-ಇಂಗು-ಮಾವಿನ ಘಮ, ಖಾರ-ಹುಳಿ-ಉಪ್ಪು-ಸಿಹಿಗಳ ಹಿತವಾದ ಮಿಶ್ರಣ..ಬಿಸಿ ಬಿಸಿ ಅನ್ನ-ತುಪ್ಪದೊಡನೆಯೋ, ಭಕ್ರಿ-ಚಪಾತಿಯೊಡನೆಯೋ ಉಂಡರೆ..ಅದೂ ಎಡಗೈಯಲ್ಲಿ ಬೆವರೊರೆಸಿಕೊಳ್ಳುತ್ತ ( ಮಾವಿನಕಾಯಿ ಸೀಜನ್ನೇ ಭರ್ತಿ ಬೇಸಗೆಯಏಪ್ರಿಲ್-ಮೇ ದಿನಗಳಲ್ಲಿ.ಲೋಡ್ ಶೆಡ್ಡಿಂಗ್ ನಿಂದಾಗಿ ಒಂದಿನವೂ ಮಧ್ಯಾಹ್ನ ಕರೆಂಟ್ ಇರುತ್ತಿರಲಿಲ್ಲ ನಮ್ಮ ಹಳ್ಳಿಯಲ್ಲಿ.) ಮತ್ತಾವಸುಖವಿದ್ದೀತು ಅದರ ಮುಂದೆ ಎನಿಸುತ್ತಿತ್ತು.
ಈಗ ಪ್ರೆಸ್ಟೀಜ್ ಪ್ರೆಷರ್ ಕುಕ್ಕರ್ ನಲ್ಲಿ ಗ್ಯಾಸೊಲೆಯ ಮೇಲೆ ಬೆಂದ ನನ್ನೀ ತೊವ್ವೆಗೆ ಆ ಘನತೆ ಇರದಿದ್ದರೂ ಈಗಲೂ ಮಾವಿನಕಾಯಿತವ್ವಿ ಕೊಡೋ ಆ ಸುಖಕ್ಕೇನೂ ಮೋಸವಿಲ್ಲ.



ಚಟ್ನಿ
ಮಾವಿನಕಾಯಿ ಸೀಜನ್ ಬರುವ ಮುಂಚೆಯೇ ದೊಡ್ಡ ದೊಡ್ಡ ಬೆಲ್ಲದ ಪೆಂಟೆಗಳು ಮನೆಗೆ ಬರುತ್ತಿದ್ದವು. ಸಿಹಿ-ಖಾರದ ಯಾವುದೇಮಾವಿನ ಪದಾರ್ಥಕ್ಕೂ ಈ ಬೆಲ್ಲ ಬೇಕೇ ಬೇಕಾಗುತ್ತಿತ್ತು. ಹುಳಿಹುಳಿಯಾದ ಮಾವಿನ ಹೆರಕಲಿಗೆ ಸಮಪ್ರಮಾಣದಲ್ಲಿ ಬೆಲ್ಲ, ಖಾರಪುಡಿ, ಉಪ್ಪು ಬೆರೆಸಿ, ಘಮ್ಮೆನ್ನುವ ಹುರಿದ ಮೆಂತ್ಯ, ಗಟ್ಟಿ ಇಂಗು ಹಾಕಿ, ಒಣಖೊಬ್ರಿ ತುರಿಯೊಂದಿಗೆ ಅಮ್ಮ ಒಳಕಲ್ಲಿನಲ್ಲಿ ರುಬ್ಬುಗುಂಡಿನಿಂದರುಬ್ಬಲು ಶುರುಮಾಡಿದರೆ ನಮಗೆ ಬಾಯ್ತುಂಬ ನೀರು. ಎಷ್ಟೋ ಸಲ ನಾನು ರುಬ್ಬುತ್ತೇನೆಂದು ಹಟಮಾಡಿ ರುಬ್ಬಿಯಾದ ಮೇಲೆ ಕೈಗೆಮೆತ್ತಿಕೊಂಡ ಚಟ್ನಿಯನ್ನು ಗೀರದೇ ಕೈ ತೊಳೆಯಲೆಂದು ಹೋಗಿ ಬಚ್ಚಲಲ್ಲಿ ನಿಂತು ಬಟ್ಟು ನೆಕ್ಕುವ ಆ ಸುಖವೇ ಸುಖ! ದೊಡ್ಡ ಕಲಪರಟಿಯಆ ಚಟ್ನಿ ಕಣ್ಮುಚ್ಚಿ ತೆಗೆವುದರಲ್ಲೇ ಖಾಲಿಯಾಗುತ್ತಿತ್ತು.


ಇದು ಕಾಯಿಯದಾದರೆ ಹಣ್ಣಿನ ಸಂಭ್ರಮವೇ ಬೇರೆ. ‘ಸಕ್ರಿ ಮಾವು’, ‘ ಅಡಕಿ ಮಾವು’ ಹೆಸರಿನ ಮನೆಯ ಮಾವಿನಗಿಡಗಳ ಹಣ್ಣುಗಳು. ಒಳಕೋಣೆಯಲ್ಲಿ ಹುಲ್ಲಿನಡಿಯಲ್ಲಿ ಅಡಿಹಾಕಿದ ಕಾಯಿಗಳು..ಮನೆತುಂಬ ಹಣ್ಣಿನ ಸುವಾಸನೆ. ಏಲಕ್ಕಿ,ಜಾಜಿಕಾಯಿ ಪುಡಿ, ಚಿಟಿಕೆ ಉಪ್ಪು ಹಾಕಿ ಹಿಂಡಿಟ್ಟ ಕೊಳಗಗಟ್ಟಲೇ ಸೀಕರಣೆ. ಕೆಲವೊಮ್ಮ ಕೋವಳ್ಳಿಡೈರಿಯಿಂದ ತಂದ ಚಕ್ಕಾದಲ್ಲಿ ಮಾವಿನಹಣ್ಣಿನ ರಸ ಬೆರೆಸಿ ಮಾಡಿದ ಆಮ್ರಖಂಡದ ತಣ್ಣಗಿನ ನಳ್ಪು.ಸಿಹಿಯೊಡನೆ ಮತ್ತೆ ನೆಂಚಿಕೊಳ್ಳಲು ಮಾವಿನಕಾಯಿ ಕಾರೇಸಾ, ಚಿತ್ರಾನ್ನ, ಕೋಸಂಬ್ರಿಗಳು.. ಸಂಹನನಕುಪಚಯ..ಕರಣಕಾನಂದ .
~ ಗೌರಿಪ್ರಸನ್ನ
ಊಟದ ಗಂಟೆಗೆ ಜೊಲ್ಲು ಸುರಿಸುವ ಪಾವ್ಲೋವ್ ನಾಯಿಯಂತೆ ಜೊಲ್ಲು ಸುರಿಸುತ್ತ ಗೌರಿ ಪ್ರಸನ್ನ ಅವರ ಮಾವು ಲೇಖನ ಓದಿದೆ. ಮಾವು-ನಾವು ಶೀರ್ಷಿಕೆಗೆ ಆವು ಈವು ಜೋಡಿಸಿ ನಾಕು ತಂತಿ ನೆನಪಾಯಿತು. ಈ ಸೀಜನ್ ಬಂದರೆ ಕವಿ-ಬರಹಗಾರರೆಲ್ಲ ಬರಹ ’ಈಯುತ್ತಾರೆ’! ನಮ್ಮ ’ಅನಿವಾಸ”ಯ ಪ್ರಾರಂಭದ ಒಂದು ಸಂಚಿಕೆಯಲ್ಲಿ ’ಅಚ್ಚಾದ’ ಕೇಶವ ಕುಲಕರ್ಣಿಯವರ ಪ್ರಥಮ ಕವಿತೆಯ ನೆನಪು ಇನ್ನೂ ಅಚ್ಚಳಿಯದೆ ಉಳಿದಿದೆ. ಲಿಂಕ್: (https://wp.me/p4jn5J-1Z) ಅದರ ಕೊನೆಯಲ್ಲಿ ಅವರು ಕ್ಲಿಕ್ ಮಾಡಿ ಇಂಟರ್ನೆಟ್ಟಿನಲ್ಲಿ ಆಪೂಸ್ ತರಿಸಿದ್ದರು. ಇವತ್ತಿನ ಅಂಕಣದಲ್ಲಿ ಗೌರಿಯವರು ತೊವ್ವೆ, ಚಟ್ನಿ, ಅವುಗಳನ್ನು ಮಾಡುವ ವಿಧಾನ, ಪದಾರ್ಥ ಮತ್ತು ಮಾವಿನ ಹಣ್ಣಿನ ಫೋಟೋ ಹಾಕಿ ನಮ್ಮನ್ನು ಹಿಂಡಿಬಿಟ್ಟರು. ಬಹಳ ದಿನಗಳ ನಂತರ ಈ ವರ್ಷ ಮಾವಿನ ಹಣ್ಣು ತಿಂದಿ ಸ್ವಲ್ಪ ತೃಪ್ತಿಯಾಗಿತ್ತು. ಆದರೆ ಉಳಿದ ಪದಾರ್ಥಗಳು ಕೊನೆ ತನಕ ಎಟಕದೆಯೇ ಉಳಿಯಬಹುದು, ಪರೋಕ್ಷವಾಗಿಯೇ ಚಟ್ನಿ ರುಬ್ಬಿದ ಬೊಟ್ಟನ್ನು ಚಪ್ಪರಿಸಿ ಖುಷಿ ಪಟ್ಟೆ. ಸದ್ಯ ಒಂದೇ ಹೊಟ್ಟೆ ಇನ್ನೂ ಅಂತ ಬಚಾವಾದೆ! ಮಾವಿನ ಪದಾರ್ಥಗಳ ಕಣ್ಣಿಗೆ ಕಟ್ಟುವ, ನೀರೂರಿಸುವ ನಿಮ್ಮ ವರ್ಣನೆ, ರುಚಿಗೆ ನಿಮ್ಮ ಬರವಣಿಗೆಯ ಶೈಲಿಯೇ ಸಾಟಿ!
(ನೀವು ಗಮನಿಸಿರಬಹುದು: ತೊವ್ವೆ, ಚಟ್ನಿ ಪ್ಯಾರಾಗ್ರಾಫ್ ಗಳು ಈಗ ಬ್ಲಾಗಿನಲ್ಲಿ ಸರಿಯಾಗಿ format ಆಗಿ ಓದುವ ರುಚಿ ಹೆಚ್ಚಿಸಿದ್ದನ್ನು ಮೋಬೈಲ್ ಕಿಂತ ಲಾಪ್ ಟಾಪ್ ನಲ್ಲಿ ಓದಿ ಚೆನ್ನಾಗಿ ಸವಿಯಿರಿ.) ಶ್ರೀವತ್ಸ ದೇಸಾಯಿ.
LikeLike