ಎರಡು ಕವನಗಳು

ಆತ್ಮೀಯ ಓದುಗರಿಗೆ ನಮಸ್ಕಾರ
ಈ ವಾರದ ಸಂಚಿಕೆಯಲ್ಲಿ ಪ್ರೇಯಸಿಯನ್ನು ಕುರಿತು ಬರೆದಿರುವ ಎರಡು ಕವಿತೆಗಳಿವೆ. ಎಲ್ಲರ ಹದಿ ಹರೆಯದಲ್ಲಿ ಒಮ್ಮೆಯಾದರೂ ಪ್ರೇಮ, ಮೋಹ ಅರಳುವದು ಸಹಜ. ನನ್ನ ಭಗ್ನ ಪ್ರೇಮಿ ಗೆಳೆಯನೊಬ್ಬ ಹೇಳುತ್ತಿದ್ದ – ಯೌವನದಲ್ಲಿ ಇಂತಹ ಅನುಭವಗಳು ಆಗದಿದ್ದರೆ ಅದು ಯೌವನವೇ ಅಲ್ಲವೆಂದು. ನನಗೂ ನಿಜವೆನಿಸುತ್ತದೆ, ನಿಮಗೂ ಅನಿಸಬಹುದೆಂದು ನಂಬಿರುವೆ. ಕೆಲವು ಅದೃಷ್ಟ ಜೀವಿಗಳು(?) ಪ್ರೀತಿಸಿದವರನ್ನು ಗಿಟ್ಟಿಸಿ, ಜೀವನದ ಸಂಗಾತಿಯನ್ನಾಗಿ ಮಾಡಿಕೊಂಡು ತುಂಬು ಜೀವನ ನಡೆಸಿದರೆ ಇನ್ನು ಕೆಲ ನತದೃಷ್ಟರು, ಇಷ್ಟಪಟ್ಟವರು ಸಿಗದೆ ಭಗ್ನ ಪ್ರೇಮಿಗಳಾಗಿ ಬದುಕು ಕಳೆಯುವುದು ಉಂಟು. ನಮ್ಮ ಹಳೆಯ ಚಲನ ಚಿತ್ರಗಳ ಜೀವಾಳವೇ
ಇದಾಗಿತ್ತು. ರಾಜ ಕಪೂರ್ ಇದರಲ್ಲಿ ಎತ್ತಿದ ಕೈ
“ಮುಝೆ ತುಮ್ ಸೆ ಕುಚ್ ಭೀ ನ ಚಾಹಿಯೇ
ಮುಝೆ ಮೇರೆ ಹಾಲ ಪೆ ಛೋಡ್ ದೋ”
ಎಂದು ಗೋಗರಿಯುತ್ತ ಅಲೆದಿದ್ದುಂಟು.
ಕೇಶವ ಅವರ ಕವನದಲ್ಲಿಯ ಪ್ರೇಮಿ ‘ಇರಲಿ ಬಿಡು’ ಎಂದು ನೋವಿನಿಂದ ಅವಳನ್ನು ಬಿಟ್ಟುಕೊಟ್ಟರೆ, ನನ್ನ ಕವನದಲ್ಲಿಯ ಪಾಗಲ್ ಪ್ರೇಮಿ ಅವಳ ‘ಬಾರದ ಬರುವಿನ ನಿರೀಕ್ಷೆಯಲ್ಲಿ’ ಮುಳುಗಿದ್ದಾನೆ. ಓದಿ ಸಾಧ್ಯವಾದರೆ ಅಭಿಪ್ರಾಯ ತಿಳಿಸಿ

—– ಇಂತಿ ಸಂಪಾದಕ

——————————————————————————————————————–

ಇರಲಿ ಬಿಡು – ಕೇಶವ ಕುಲಕರ್ಣಿ

ನನ್ನ ಬಟ್ಟಲು ಮತ್ತೆ ಖಾಲಿಯಾಗುತ್ತಲಿದೆ, ತುಂಬಿಸಿ ಬಿಡು
ನೀ ತೊರೆವ ಗಾಯ ಬಹಳ ನೋಯುತ್ತಲಿದೆ , ಕುಡಿಯಲು ಬಿಡು

ಎಲ್ಲ ಮರೆತು ಮುಂದೆ ಸಾಗೆಂದು ಹೇಳಬಂದಿರುವೆ ನೀನು
ನಾವು ಬಂದ ದಾರಿಯಲಿ ಗುರುತುಗಳು ಕಾಯುತ್ತಲಿವೆ, ಹೆಕ್ಕಲು ಬಿಡು

ನೀ ನೀರುಣಿಸಿದ ಬಳ್ಳಿಯ ತುಳಿದು ಸಾಗಿಹೆ ನೀನು
ಅಲ್ಲೊಂದು ಅರಳಿದ ಹೂ ಅಳುತ್ತಲಿದೆ, ನನಗೆ ಬಿಡು

ನನ್ನ ಪ್ರೇಮ ನಿನಗಷ್ಟು ಬೇಗ ಸಾಕಾಯಿತೆ?
ಹಣೆಯಲಿ ಬರೆದಿದ್ದೇ ಇಷ್ಟು ಅನ್ನುತ್ತಲಿದೆ, ಇರಲಿ ಬಿಡು

ಪ್ರೇಮವಿರದ ಬದುಕು ಮದಿರೆಯಿರದ ಬಟ್ಟಲು
ಬದುಕಲು ನಿನ್ನ ನೆನಪನು ಕುಡಿಯುತ್ತಲಿದೆ, ಬಿಟ್ಟು ಬಿಡು

ಪ್ರೇಮದ ನಿರಂತರ ಹುಡುಕಾಟವಂತೆ ಬದುಕು
ಈ ಹುಡುಕಾಟ ಕವನವಾಗುತ್ತಲಿದೆ, ಬರೆಯಲು ಬಿಡು

——————————————————————————————————————–

2) ನಿರೀಕ್ಷೆ
ಏಳೇಳು ಜನುಮದಿ ನಿನಗೆ ತೆರೆದಿಹುದು
ನನ್ನಿ ಹೃದಯ
ಎನ್ನಾಸೆ ಅರಮನೆಯೊಳಗೆ ಇನ್ನಾದರು
ಬರುವೆಯಾ ಸನಿಹ
ನೀ ಬರುವ ಹಾದಿಯ ತುಂಬಾ ಕನಸುಗಳ
ನಾ ಹಾಸಿರುವೆ
ಒಂದೊಂದು ಹೆಜ್ಜೆಯ ನಡೆಗೂ ಚಿತ್ತಾರ
ಲೇಪಿಸಿರುವೆ
ಈ ಹೃದಯದ ಅಂಗಳದಲ್ಲಿ ರಂಗೋಲಿಯ
ಸಾಲುಗಳಿವೆ
ನಿನ್ನ ಹೆಸರಿನ ದೀಪವ ಹಚ್ಚಿ ಹಗಲಿರುಳು
ಕಾಯುತಿರುವೆ
ಹಾರಾಡುವ ಹಕ್ಕಿಯ ಗುಂಪು ಶುಭ ನುಡಿಯ
ಸೂಸುತಿಹವು
ತೂಗಾಡುವ ಹಸಿರೆಲೆಯಲ್ಲ ಚಾಮರವ
ಬೀಸುತಿಹವು
ಈ ಮನದ ಮಂಟಪದಲ್ಲಿ ಅಂಬಾರಿಯ
ಸಾಲುಗಳಿವೆ
ಭರವಸೆಯ ಹಾರವ ಹಿಡಿದು ಹಗಲಿರುಳು
ಕಾಯುತಿರುವೆ
ಏಳೇಳು ಜನುಮದಿ ನಿನಗೆ ತೆರೆದಿಹುದು
ನನ್ನೀ ಹೃದಯ

– ಶಿವಶಂಕರ ಮೇಟಿ

ಶಿವಶಂಕರ ಮೇಟಿಯವರೇ ಹಾಡಿದ ಮೇಲಿನ ಅವರ ಕವನವನ್ನು ಕೇಳಿರಿ

5 thoughts on “ಎರಡು ಕವನಗಳು

  1. ಮೇಟಿಯವರ ಭಾವಗೀತೆ, ಅದಕ್ಕೊಂದು ಸುಂದರ ರಾಗ ಸಂಯೋಜನೆ ಮತ್ತು ಅಷ್ಟೇ ಸುಂದರ ಹಾಡುಗಾರಿಕೆ. ನವೋದಯ ಮತ್ತು ೬೦ರ ಸಿನೆಮಾ ಹಾಡುಗಳ ಸಮ್ಮೇಲನ ಈ ಕವನ. ಬಹಳ ಸುಂದರ, ಸರಳ.

    Like

  2. ಕೇಶವರ ಗಝಲ್ ಪ್ರೇಮಿ ದೂರವಾದರೂ ಆಕೆಯ ನೆನಪನ್ನು ಹೆಕ್ಕುತ್ತ ಜತನವಾಗಿ ಮುಖಮಲ್ಲಿನ ಸಂದೂಕಿನಲ್ಲಿ ಕಾಪಾಡಿಕೊಂಡು ಹೋಗುವ ಮೃದು ಭಾವನೆಗಳ ಹಲವು ಮುಖಗಳನ್ನು/ ಮಜಲುಗಳನ್ನು ಅರ್ಥಪೂರ್ಣವಾಗಿ ಮೂರ್ತಗೊಳಿಸಿದೆ.

    -ರಾಂ

    Like

  3. ಸುಂದರ, ಸರಳ, ಸಲಿಲದಂತೆ ಸುಲಲಿತವಾಗಿ ಹಾಡಿಸಿಕೊಂಡು ಹೋಗುವ ಪ್ರೇಮ ಗೀತೆ ಮೇಟಿಯವರದ್ದು. ಪದಗಳಿಗೆ ಧಾಟಿ ಹಚ್ಚಿ ಹಟ ಹಿಡಿದಿದ್ದೀರಿ; ಹಿಡಿದಿಟ್ಟ ದನಿಯನ್ನಳವಡಿಸಿ ಪ್ರೇಮವನ್ನು ಬಿತ್ತರಿಸಿದ್ದೀರಿ.

    -ರಾಂ

    Like

  4. ಎರಡೂ ಸುಂದರ ಕವನಗಳು! ಪ್ರೇಮ ಕವನದ ಎರಡು (ಹಿಂದು ಮುಂದಾದ) ಆಯಾಮಗಳು  – ಒಂದು ಮೇಟಿಯವರದು  ಪ್ರೇಮದ ಭವ್ಯ ಮಹಲನ್ನು ಕಟ್ಟಿ ಸುಂದರವಾಗಿ ಅಲಂಕರಿಸಿದೆ, ವಿಲಿಯಮ್ ಯೇಟ್ಸನ (He wishes for cloths of heaven  ಕವಿತೆಯ Tread softly as you are treading on my dreams) ಸಾಲುಗಳನ್ನು ನೆನಪಿಸುವ ತನ್ನ ಕನಸುಗಳ ರತ್ನಗಂಬಳಿ, ರಂಗೋಲಿ, ಹೆಸರಿನ ದೀಪಗಳನ್ನು ಹಚ್ಚಿ ಏಳೇಳು ಜನ್ಮ ಕಾಯುತ್ತಿರುವ ಆಶಾವಾದಿ ಪ್ರೇಮಿಯ ಲಿರಿಕಲ್ ಬ್ಯಾಲಡ್; ಇನ್ನೊಂದು ಕೇಶವ ಕುಲಕರ್ಣಿಯವರ ಒಂದು ಗಜಲ್ಲಿನಿಂದ ಪ್ರೇರಿತವಾದ ಭಗ್ನ ಪ್ರೇಮಿ ದೈನಾಸಿ ಯಾಚಿಸುವ ಬೇಡಿಕೆ – ಪ್ರೇಮಿಯೇ ತಾನೇ ನೀರುಣಿಸಿದ ಬಳ್ಳಿಯ ತುಳಿದು ಸಾಗಿದರೂ ಆ ಭಗ್ನಾವಶೇಷಗಳಲ್ಲೂ ’ಅಲ್ಲೊಂದು ಅರಳಿದ ಹೂ ಅಳುತ್ತಲಿದೆ, ನನಗೆ ಬಿಡು’ ಎನ್ನುವ ಸಾಲು. ಬೂದಿಯಲ್ಲೂ ಪ್ರೇಮದ ಡಿಎನ್ ಏಗೆ ಹಂಬಲಿಸುವವ. ಬದುಕುವ ಉತ್ಕಟತೆಯ ಭಾವದ ಇಬ್ಬರ ಹಂಬಲವೂ  ’ಜೀವನ್ಮುಖಿ’- ಕೇಶವ ಅವರು ಬರೆದ ‘ಪ್ರೇಮದ ನಿರಂತರ ಹುಡುಕಾಟವೇ ಬದುಕು’ ಎಂದು ಸಾಧಿಸುವಂತೆ. ಪ್ರೇಮಲತಾ ಅವರು ಗುರುತಿಸಿದಂತೆ, ತಾವು ಮೊದಲೂ ನಮಗೆ ಹೇಳಿದಂತೆ ತಾವು ಲಿರಿಕಲ್ ಕವಿ ಅಂತ ತೋರಿಸಲೆನಂತಲೇ ಏನೋ ಅದನ್ನು ತಾವೇ ಹಾಡಿ ಸಹ ತೋರಿಸಿದ್ದನ್ನು ಈಗ”ಅನಿವಾಸಿ’ ಬ್ಲಾಗಿನಲ್ಲಿ ಎಲ್ಲರೂ ಆಲಿಸ ಬಹುದು. ಈ ಕಾರಣಗಳಿಂದ ಇದೊಂದು ಅಪರೂಪದ ಪ್ರಸ್ತುತಿ ಈ ವಾರ. ಇಬ್ಬರಿಗೂ ಅಭಿನಂದನೆಗಳು. ಶ್ರೀವತ್ಸ ದೇಸಾಯಿ.

    Like

  5. ಎರಡೂ ಸುಂದರ ಕವನಗಳು! ಪ್ರೇಮ ಕವನದ ಎರಡು (ಹಿಂದು ಮುಂದಾದ) ಆಯಾಮಗಳು  – ಒಂದು ಮೇಟಿಯವರದು  ಪ್ರೇಮದ ಭವ್ಯ ಮಹಲನ್ನು ಕಟ್ಟಿ ಸುಂದರವಾಗಿ ಅಲಂಕರಿಸಿದೆ, ವಿಲಿಯಮ್ ಯೇಟ್ಸನ (He wishes for cloths of heaven  ಕವಿತೆಯ Tread softly as you are treading on my dreams) ಸಾಲುಗಳನ್ನು ನೆನಪಿಸುವ ತನ್ನ ಕನಸುಗಳ ರತ್ನಗಂಬಳಿ, ರಂಗೋಲಿ, ಹೆಸರಿನ ದೀಪಗಳನ್ನು ಹಚ್ಚಿ ಏಳೇಳು ಜನ್ಮ ಕಾಯುತ್ತಿರುವ ಆಶಾವಾದಿ ಪ್ರೇಮಿಯ ಲಿರಿಕಲ್ ಬ್ಯಾಲಡ್; ಇನ್ನೊಂದು ಕೇಶವ ಕುಲಕರ್ಣಿಯವರ ಒಂದು ಗಜಲ್ಲಿನಿಂದ ಪ್ರೇರಿತವಾದ ಭಗ್ನ ಪ್ರೇಮಿ ದೈನಾಸಿ ಯಾಚಿಸುವ ಬೇಡಿಕೆ – ಪ್ರೇಮಿಯೇ ತಾನೇ ನೀರುಣಿಸಿದ ಬಳ್ಳಿಯ ತುಳಿದು ಸಾಗಿದರೂ ಆ ಭಗ್ನಾವಶೇಷಗಳಲ್ಲೂ ’ಅಲ್ಲೊಂದು ಅರಳಿದ ಹೂ ಅಳುತ್ತಲಿದೆ, ನನಗೆ ಬಿಡು’ ಎನ್ನುವ ಸಾಲು. ಬೂದಿಯಲ್ಲೂ ಪ್ರೇಮದ ಡಿಎನ್ ಏಗೆ ಹಂಬಲಿಸುವವ. ಬದುಕುವ ಉತ್ಕಟತೆಯ ಭಾವದ ಇಬ್ಬರ ಹಂಬಲವೂ  ’ಜೀವನ್ಮುಖಿ’- ಕೇಶವ ಅವರು ಬರೆದ ‘ಪ್ರೇಮದ ನಿರಂತರ ಹುಡುಕಾಟವೇ ಬದುಕು’ ಎಂದು ಸಾಧಿಸುವಂತೆ. ಪ್ರೇಮಲತಾ ಅವರು ಗುರುತಿಸಿದಂತೆ, ತಾವು ಮೊದಲೂ ನಮಗೆ ಹೇಳಿದಂತೆ ತಾವು ಲಿರಿಕಲ್ ಕವಿ ಅಂತ ತೋರಿಸಲೆನಂತಲೇ ಏನೋ ಅದನ್ನು ತಾವೇ ಹಾಡಿ ಸಹ ತೋರಿಸಿದ್ದನ್ನು ಈಗ”ಅನಿವಾಸಿ’ ಬ್ಲಾಗಿನಲ್ಲಿ ಎಲ್ಲರೂ ಆಲಿಸ ಬಹುದು. ಈ ಕಾರಣಗಳಿಂದ ಇದೊಂದು ಅಪರೂಪದ ಪ್ರಸ್ತುತಿ ಈ ವಾರ. ಇಬ್ಬರಿಗೂ ಅಭಿನಂದನೆಗಳು. ಶ್ರೀವತ್ಸ ದೇಸಾಯಿ..

    Like

Leave a Reply to lramasharan Cancel reply

Your email address will not be published. Required fields are marked *