ನೋಡೂಣಂತ

ಕೇಳೀನಿ ಮಂದಿ ಅಕಿನ್ನ ಕಣ್ಣ ಪಿಳಕಿಸದs ನೋಡ್ತಾರಂತ
ಹಂಗಾರ ಈ ಊರಾಗ ನಾಕಾರ ದಿನ ಇದ್ದು ನೋಡೂಣಂತ
ಕೇಳೀನಿ ಸೋತವ್ರು ನೊಂದವ್ರಂದ್ರ ಅಕಿ ಕರುಳ ಕರಗತದಂತ
ಹಂಗಾರ ಮನಿ ಮಠಾ ಕಳಕೊಂಡು ಹಾಳಾಗಿ ಹೋಗೂಣಂತ
ಕೇಳೀನಿ ಅಕಿ ನೋಟದಾಗ ಪ್ರೀತಿ ತುಂಬೇತಂತ
ಹಂಗಾರ ಅಕಿ ಮನಿ ಮುಂದ ಫಿರಕಿ ಹೊಡ್ಯೂಣಂತ
ಕೇಳೀನಿ ಅಕಿಗೆ ಹಾಡು ಕವನ ಭಾಳ ಸೇರ್ತಾವಂತ
ಹಂಗಾರ ಒಂದು ಕವನ ಬರದು ಹಾಡೇ ಬಿಡೂಣಂತ
ಕೇಳೀನಿ ಅಕಿ ಮಾತಾಡಿದ್ರ ಮಲ್ಲಿಗಿ ಉದರತಾವಂತ
ಹಂಗಾರ ತಡಾ ಯಾಕ ಮಾತಾಡಿಸಿಯೇ ತೀರೂಣಂತ
ಕೇಳೀನಿ ಅಕಿ ತುಟಿ ಕಂಡ್ರ ಗುಲಾಬಿಗೆ ಹೊಟ್ಟೆಕಿಚ್ಚಂತ
ಹಂಗಾರ ವಸಂತ ಮಾಸದ ಮ್ಯಾಲ ಕಟ್ಲೇ ಹಾಕೂಣಂತ
ಕೇಳೀನಿ ಅಕಿ ನೋಡಿದ್ರ ಸಾಕು ಮಂದಿಗೆ ಹುಚ್ಚ ಹಿಡಿತದಂತ
ಹಂಗಾರ ಹುಚ್ಚರೊಳಗ ದೊಡ್ಡ ಹುಚ್ಚಾಗಿ ಕುಣ್ಯೂಣಂತ
(ಅಹಮದ್ ಫರಾಜ್ ಬರೆದ `ಸುನಾ ಹೈ ಲೋಗ್ ಉಸೆ ಆಂಖ್ ಭರ್ ಕೆ ದೇಖತೇ ಹೈಂ` ಎನ್ನುವ ಹಾಡು ಓದುತ್ತ ಕೇಳುತ್ತ ನನಗೆ ತಿಳಿದಂತೆ ಕೆಲವು ಸಾಲುಗಳನ್ನು ಭಾವಾನುವಾದ ಮಾಡುವಾಗ ಮೂಡಿದ್ದು)
ಆ ಕತೆಯನ್ನು ತಿನ್ನಲು ಬಿಡಬಾರದಿತ್ತು

ನಾನು ಬರೆದ ಆ ಕತೆಯನ್ನು ತಿಂದಳು
ಆ ಕತೆ ತಿಂದಾದ ಮೇಲೆ ನಾ ಬರೆದ
ಎಲ್ಲ ಕವನಗಳನ್ನೂ ಟಿಪ್ಪಣೆಗಳನ್ನೂ
ನನ್ನ ಟೇಬಲ್ಲನ್ನೂ ಸ್ವಚ್ಛ ಮಾಡಿದಳು
ನಾನು ಅವಳನ್ನು ತಡೆಯಹೋದೆ
ನಕ್ಕು ಕಣ್ಣು ಮಿಟುಕಿಸದಳು
ಗೋಡೆಗೆ ಹಾಕಿದ್ದ ಪೋಸ್ಟರುಗಳನ್ನು ಹರಿದಳು
ಸ್ಟಿಕಿ ನೋಟ್ಸುಗಳನ್ನು ಬೀಸಾಕಿದಳು
ನನ್ನ ಬಳಿಯಿದ್ದ ಎಲ್ಲ ಪುಸ್ತಕಗಳನ್ನು
ಗೋಣೀಚೀಲದಲ್ಲಿ ತುಂಬಿ ಕಸದ ತೊಟ್ಟಿಗೆಸೆದಳು
ನಾನು ಅವಳನ್ನು ತಡೆಯಹೋದೆ
ಕೈ ಸವರಿ ಮಾತಿಗಿಳಿದಳು
ನನ್ನ ಎಲ್ಲ ಪಾಸ್ವರ್ಡ್ ಪಡೆದಳು
ನನ್ನ ಬರವಣಿಗೆಯ ಫೈಲುಗಳನ್ನು
ನನ್ನ ಸಾಹಿತ್ಯದ ಗೆಳೆಯರ ಕಾಂಟ್ಯಾಕ್ಟ್ ನಂಬರುಗಳನ್ನು
ಎಲ್ಲ ಸೋಷಿಯಲ್ ಮೀಡಿಯಾಗಳನ್ನು ಅಳಿಸಿದಳು
ನಾನು ಅವಳನ್ನು ತಡೆಯಹೋದೆ
ಕೆನ್ನೆಗೆ ಕೆನ್ನೆ ಕೊಟ್ಟು ಸೆಲ್ಫಿ ತೆಗೆದಳು
ನನ್ನ ಹಳೆಬಟ್ಟೆಗಳನ್ನು ಬೀಸಾಕಿ
ಹೊಸ ಬಟ್ಟೆಗಳ ತಂದಳು
ಗಡ್ಡ ತಲೆಗಳ ಟ್ರಿಮ್ ಮಾಡಿದಳು
ಹೊಸ ಶ್ಯಾಂಪೂ ಪರ್ಫ್ಯೂಮು ತಂದಳು
ನಾನು ಅವಳನ್ನು ತಡೆಯಹೋದೆ
ಗಟ್ಟಿಯಾಗಿ ತಬ್ಬಿ ಚುಂಬಿಸಿದಳು
ಕಿಟಕಿಗೆ ಹೊಸ ಕರ್ಟನ್ನುಗಳನ್ನು ಹಾಕಿ
ನನ್ನ ಕೋಣೆಯ ಬಾಗಿಲಿಗೆ ಅಗುಳಿ ಹಾಕಿದಳು
ಮಲಗುವ ಮಂಚವನ್ನು ಗಟ್ಟಿಗೊಳಿಸಿ
ಹೊಸ ಗಾದೆ ದಿಂಬು ಹಾಕಿದಳು
ನಾನು ಇನ್ನು ತಡೆಯದಾದೆ
ಅವಳ ದೇಹದಲ್ಲಿ ಲೀನವಾದೆ
ಅವಳನ್ನು ನನ್ನ ಕೋಣೆಗೆ ಬಿಟ್ಟುಕೊಡಬಾರದಿತ್ತು
ಬಂದಿದ್ದರೂ ಆ ಕತೆಯನ್ನು ತಿನ್ನಲು ಬಿಡಬಾರದಿತ್ತು
ಅವಳು ತಿಂದ ಆ ಕತೆಯ ಹೆಸರು,
`ನನಗೆಂಥ ಹುಡುಗಿ ಬೇಕು?`
ನಾನು ಕತೆ ಕವನ ಬರೆಯುವುದನ್ನು ಬಿಟ್ಟು
ಈಗ ಹದಿನೈದು ವರ್ಷಗಳಾದವು
ವೈದ್ಯಕೀಯದಲ್ಲಿ ಕೃತಕ ಬುದ್ಧಿಮತ್ತೆ: ಭರವಸೆ ಮತ್ತು ಅಪಾಯ

ಕಾಡುಗಳಲ್ಲಿ ಅಲೆಯುತ್ತಿದ್ದ ಮನುಷ್ಯ ವ್ಯವಸಾಯವನ್ನು ಆರಂಭಿಸಲು ಲಕ್ಷಾಂತರ ವರ್ಷಗಳು ಬೇಕಾದವು. ವ್ಯವಸಾಯದ ಕ್ರಾಂತಿಯಿಂದ ಕೈಗಾರಿಕಾ ಕ್ರಾಂತಿಯಾಗಲು ಸಾವಿರಾರು ವರ್ಷಗಳು ಬೇಕಾದವು. ಕೈಗಾರಿಕಾ ಕ್ರಾಂತಿಯಿಂದ ಕಂಪ್ಯೂಟರ್ ಕ್ರಾಂತಿಯಾಗಲು ಕೆಲವೇ ನೂರು ವರ್ಷಗಳು ಸಾಕಾದವು. ಕಂಪ್ಯೂಟರ್ ಕ್ರಾಂತಿಯಿಂದ ಸ್ಮಾರ್ಟ್ ಫೋನ್ ಕ್ರಾಂತಿಯಾಗಲು ಕೆಲವೇ ದಶಕಗಳು! ಸ್ಮಾರ್ಟ್-ಫೋನ್ ಕ್ರಾಂತಿಯಾಗಿ ಇನ್ನೂ ಎರಡು ದಶಕಗಳು ಪೂರ್ತಿ ಮುಗಿದಿಲ್ಲ, ಕೃತಕ ಬುದ್ಧಿಮತ್ತೆಯ ಕ್ರಾಂತಿ ಆರಂಭವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಬಿರುಗಾಳಿಯನ್ನು ಎಬ್ಬಿಸಿದೆ. ವೈದ್ಯಕೀಯ ಕ್ಷೇತ್ರವೂ ಇದಕ್ಕೆ ಹೊರತಲ್ಲ.
ಕೃತಕ ಬುದ್ಧಿಮತ್ತೆಯನ್ನು ಸಾಮಾನ್ಯ ಜನರಿಗೆ ಪರಿಚಯಿಸುವಲ್ಲಿ ಮುಖ್ಯ ಪಾತ್ರ ಚಾಟ್-ಜಿಪಿಟಿಯದು. ಅದಕ್ಕಿಂತೆ ಮೊದಲಿನಿಂದಲೇ ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಢಿಮತ್ತೆಯ ತಂತ್ರಜ್ಞಾನವನ್ನು ತರುವ ಪ್ರಯತ್ನಗಳು ಬಹಳಷ್ಟು ನಡೆದರೂ, ಚಾಟ್-ಜಿಪಿಟಿ ಬಂದ ಮೇಲೆ ವಿಜ್ಞಾನಿಗಳ, ವೈದ್ಯರ ಮತ್ತು ವೈದ್ಯಕ್ಷೇತ್ರಕ್ಕೆ ನೆರವಾಗುವ ಎಲ್ಲ ಉದ್ಯಮಗಳಲ್ಲಿ ಕೃತಕ ಬುದ್ಧಿಮತ್ತೆಯ ಮೇಲಿನ ಗಮನ ಹೆಚ್ಚಾಗಿದೆ. ಇನ್ನೂ ಅಂಬೆಗಾಲಿಡುತ್ತಿರುವ ಕೃತಕ ಬುದ್ಧಿಮತ್ತೆಯ ಬಹುಮುಖಿ ಸ್ವರೂಪಗಳು, ಅದರ ಭರವಸೆಗಳು, ಅಪಾಯಗಳು ಮತ್ತು ಸಂಭಾವ್ಯ ಮಾರ್ಗಗಳನ್ನು ವೈದ್ಯಕೀಯದ ನಿಟ್ಟಿನಲ್ಲಿ ಪರಿಶೀಲಿಸುವುದು ಈ ಲೇಖನದ ಉದ್ದೇಶ.
ಯಂತ್ರಕಲಿಕೆ ಮತ್ತು ಆಳಕಲಿಕೆಗಳು ಕೃತಕ ಬುದ್ಢಿಮತ್ತೆಯ ಕೇಂದ್ರಬಿಂದುಗಳು. ಸಾಮಾನ್ಯ ಮನುಷ್ಯನು ಮಾತನಾಡುವ ಭಾಷೆಯನ್ನು ಅರ್ಥ ಮಾಡಿಕೊಂಡು ಅದನ್ನು ತನ್ನ ಕಲಿಕೆಗೆ ಅಳವಡಿಕೊಳ್ಳುವುದು ಅದರ ಇನ್ನೊಂದು ರೀತಿ. ವೈದ್ಯರ ತಾಂತ್ರಿಕ ಭಾಷೆಯನ್ನು ಮತ್ತು ಸಂಕೀರ್ಣ ರೋಗನಿದಾನವನ್ನು ವೈದ್ಯರ ಟಿಪ್ಪಣೆಗಳನ್ನು ಓದಿ ಅರ್ಥ ಮಾಡಿಕೊಂಡು ತನ್ನ ಬುದ್ಧಿಮತ್ತೆಯನ್ನು ಹೆಚ್ಚಿಸುತ್ತ ಹೋಗುವುದು ಈ ಕೃತಕ ಬುದ್ಢಿಮತ್ತೆಯ ಕೆಲಸ. ಜೊತೆಗೆ ರೋಬೋಟಿಕ್ಸ್ ಯಂತ್ರಗಳಲ್ಲಿ ಆಗುತ್ತಿರುವ ಬೆಳವಣಿಗೆಗೆ ಕೃತಕ ಬುದ್ಢಿಮತ್ತೆಯ ಮೆದುಳನ್ನುಅಳವಡಿಸುವುದು ಮುಂದಿನ ಹಂತ.
ಕೃತಕ ಬುದ್ಢಿಮತ್ತೆಯ ಸಂಶೋಧಕರಾದ ಡಾ. ಫೀ-ಫೀ ಲಿ, “ಕೃತಕ ಬುದ್ಢಿಮತ್ತೆಯು ಮಾನವನ ಬುದ್ಧಿಮತ್ತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ನಮ್ಮ ಜಗತ್ತು ಎದುರಿಸುತ್ತಿರುವ ಕೆಲವು ಸವಾಲುಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ,” ಎಂದು ಹೇಳುತ್ತಾರೆ. ವೈದ್ಯಕೀಯ ಕ್ಷೇತ್ರದ ಸಕಲ ಅಂಕಿ-ಅಂಶಗಳನ್ನು (ಡೇಟಾ) ಜಾಲಾಡಿಸಿ, ಸೋಸಿ, ಅದರಿಂದ ಉಪಯೋಗವಾಗುವ ಸಂಶೋಧನೆಯನ್ನು ಮಾಡಲು ಈಗ ಕಂಪ್ಯೂಟರುಗಳು ಸಹಾಯ ಮಾಡುತ್ತಿದೆ. ಕೃತಕ ಬುದ್ಢಿಮತ್ತೆಯು ಅದರ ಜೊತೆ ಸೇರಿದಾಗ ವೈದ್ಯಕೀಯ ಸಂಶೋಧನೆಗಳು ಬೇಗ ಪೂರ್ಣವಾಗುತ್ತವೆ ಮತ್ತು ಹೆಚ್ಚು ನಿಖರವಾಗಿರುತ್ತವೆ. ದಿನದಿಂದ ದಿನಕ್ಕೆ ನಾವು ಉತ್ಪಾದಿಸುವ ಡೇಟಾಗಳು ಕೋಟಿ ಕೋಟಿ ಗಿಗಾಬೈಟುಗಳಲ್ಲಿ ಬೆಳೆಯುತ್ತಿವೆ. ಆ ಡೇಟಾವನ್ನು ಪ್ರಕ್ರಿಯೆಗೊಳಿಸಲು, ಒರೆಗೆ ಹಚ್ಚಲು, ಹೊಸ ಮಾದರಿಗಳನ್ನು ಗುರುತಿಸಲು, ಹೊಸ ಔಷಧಿಗಳನ್ನು, ಹೊಸ ಶಸ್ತ್ರಚಿಕಿತ್ಸೆಯ ಉಪಕರಣಗಳನ್ನು ತಯಾರಿಸಲು ಕೃತಕ ಬುದ್ಢಿಮತ್ತೆಯು ಸಹಾಯವನ್ನು ಮಾಡುತ್ತಿದೆ.
ಆರೋಗ್ಯ ರಕ್ಷಣೆಯ ಕ್ಷೇತ್ರದಲ್ಲಿ, ಕೃತಕ ಬುದ್ಢಿಮತ್ತೆಯು ರೋಗನಿರ್ಣಯ, ಚಿಕಿತ್ಸಾ ಯೋಜನೆ ಮತ್ತು ವೈಯಕ್ತೀಕರಿಸಿದ ಔಷಧವನ್ನು ಕ್ರಾಂತಿಕಾರಿಗೊಳಿಸುವ ಭರವಸೆಯನ್ನು ಹೊಂದಿದೆ. ಹೃದ್ರೋಗಶಾಸ್ತ್ರಜ್ಞರಾದ ಡಾ. ಎರಿಕ್ ಟೋಪೋಲ್, , “ಬುದ್ಢಿಮತ್ತೆ ಚಾಲಿತ ಅಲ್ಗಾರಿದಮ್‌ಗಳು ವೈದ್ಯಕೀಯ ಚಿತ್ರಗಳನ್ನು ಸರಿಸಾಟಿಯಿಲ್ಲದ ನಿಖರತೆಯೊಂದಿಗೆ ವಿಶ್ಲೇಷಿಸುವ ಸಾಮರ್ಥ್ಯವನ್ನು ಹೊಂದಿವೆ, ರೋಗವನ್ನು ಬಹಳ ಮೊದಲೇ ಪತ್ತೆ ಹಚ್ಚಲು ಮತ್ತು ಮತ್ತು ಹೆಚ್ಚು ರೋಗಿಗಳು ಬೇಗ ಗುಣಮುಖರಾಗಲು ಕಾರಣವಾಗುತ್ತದೆ.”
ವೈದ್ಯಕೀಯದಲ್ಲಿ ಕೃತಕ ಬುದ್ಢಿಮತ್ತೆಯು ರೋಗಪತ್ತೆ, ಚಿಕಿತ್ಸೆ ಮತ್ತು ಔಷಧ ಶೋಧನೆಯಲ್ಲಿ ಪ್ರಗತಿಯನ್ನು ಸಾಧಿಸಿದೆ. ರಕ್ತಪರೀಕ್ಷೆಯ ವಿಶ್ಲೇಷಣೆಯಿಂದ ಹಿಡಿದು ವರ್ಚುವಲ್ ಹೆಲ್ತ್ ಅಸಿಸ್ಟೆಂಟ್‌ಗಳವರೆಗೆ, ಕೃತಕ ಬುದ್ಢಿಮತ್ತೆ ಚಾಲಿತ ಆವಿಷ್ಕಾರಗಳು ರೋಗಿಯ ಅನುಭವಗಳನ್ನು ಮರುರೂಪಿಸುತ್ತಿವೆ ಮತ್ತು ಚಿಕಿತ್ಸೆಯನ್ನು ಹೆಚ್ಚು ನಿಖರವಾಗಿಸುತ್ತಿವೆ. ರೇಡಿಯಾಲಾಜಿ, ಜೀನೋಮಿಕ್ಸ್ ಮತ್ತು ಆರೋಗ್ಯ ದಾಖಲೆಗಳಲ್ಲಿ ಕೃತಕ ಬುದ್ಢಿಮತ್ತೆಯು ಈಗಾಗಲೇ ದೊಡ್ಡ ಸಂಚಲನವನ್ನು ಮಾಡಿದೆ.
ಕೃತಕ ಬುದ್ಢಿಮತ್ತೆಯು ಇಸಿಜಿಯನ್ನು ಓದುತ್ತದೆ. ಸ್ತನ ಕ್ಯಾನ್ಸರ್ ಕಂಡುಹಿಡಿಯುವ ಮೆಮೋಗ್ರಾಂನಲ್ಲಿ ಕೃತಕ ಬುದ್ಢಿಮತ್ತೆ ಸಹಾಯಮಾಡುತ್ತಿದೆ. ರಕ್ತಪರೀಕ್ಷೆಗಳನ್ನು ವಿಶ್ಲೇಷಿಸಿ, ವೈದ್ಯರಿಗೆ ರೋಗ ಪತ್ತೆ ಹಚ್ಚಲು ಸಹಾಯ ಮಾಡುತ್ತಿದೆ. ಕ್ಯಾನ್ಸರ್ ರೋಗಿಗಳಿಗೆ ಯಾವ ತರಹದ ಕೀಮೋಥಿರಪಿ ಇರಬೇಕು ಎನ್ನುವುದನ್ನು ನಿರ್ಧರಿಸಲು ಸಹಾಯ ಮಾಡುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಗೂಗಲ್ಲಿನ `ಡೀಪ್ ಮೈಂಡ್`ನ ಕೃತಕ ಬುದ್ಢಿಮತ್ತೆಯು ಕೆಲವು ವಿಷಯಗಳಲ್ಲಿ ನುರಿತವೈದ್ಯರಿಗೇ ಸವಾಲು ಹಾಕಿದೆ. ಬರೀ ಕಣ್ಣಿನ ರೆಟಿನಾದ ಚಿತ್ರವನ್ನು ನೋಡಿ, ವ್ಯಕ್ತಿಯ ವಯಸ್ಸು, ಮಧುಮೇಹ, ಬಿ.ಪಿಗಳ ಬಗ್ಗೆ ನಿಖರ ಮಾಹಿತಿಯನ್ನು ಕೊಡಬಲ್ಲಷ್ಟು ಸಶಕ್ತವಾಗಿದೆ. ಅಷ್ಟೇ ಅಲ್ಲ, ಕೃತಕ ಬುದ್ಢಿಮತ್ತೆಯು ದಿನದ ೨೪ ಗಂಟೆಯೂ ಲಭ್ಯವಿರುತ್ತದೆ, ಅದು ಬೇಸರ ಮಾಡಿಕೊಳ್ಳುವುದಿಲ್ಲ, ಸುಸ್ತಾಗುವುದಿಲ್ಲ.
ಕೈಗಾರಿಕಾ ಕ್ರಾಂತಿಯಾದಾಗ ಹೊಸಯಂತ್ರಗಳು ಹತ್ತು-ನೂರು ಜನರು ಮಾಡುವ ಕೆಲಸವನ್ನು ಒಂದು ಯಂತ್ರ ಮಾಡಲಾರಂಭಿಸಿತು. ಕಂಪ್ಯೂಟರ್ ಕ್ರಾಂತಿಯಾದಾಗ, ಹತ್ತು ಜನ ಗುಮಾಸ್ತರು ಮಾಡುವ ಕೆಲಸವನ್ನು ಒಂದು ಕಂಪ್ಯೂಟರ ಮಾಡಲಾರಂಭಿಸಿತು. ಸ್ಮಾರ್ಟ್-ಫೋನ್ ಯುಗದಲ್ಲಿ ಹತ್ತು ತರಹದ ಸಾಧನಗಳು ಒಂದೇ ಪುಟ್ಟಯಂತ್ರವಾಗಿ ನಮ್ಮ ಸಹಜೀವಿಯಾಗಿ ಹೋಗಿದೆ. ಕೃತಕ ಬುದ್ಢಿಮತ್ತೆಯು ವೈಟ್ ಕಾಲರ್ ಕೆಲಸಗಳನ್ನು, ಬುದ್ಧಿಮತ್ತೆಯ ಕೆಲಸವನ್ನು ಸ್ಥಳಾಂತರಿಸುತ್ತದೆ. ಈ ಭೀತಿಯು ಇನ್ನೂ ದೊಡ್ಡ ಪ್ರಮಾಣದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕಾಣಿಸಿಕೊಂಡಿರದಿದ್ದರೂ, ಇನ್ನೊಂದು ದಶಕದಲ್ಲಿ ವೈದ್ಯರ ಕೆಲಸಗಳಲ್ಲಿ ಸಾಕಷ್ಟು ಪಲ್ಲಟಗಳಾಗಲಿವೆ.
ಡೇಟಾ ಗೌಪ್ಯತೆ, ಅಲ್ಗಾರಿದಮಿಕ್ ಪಕ್ಷಪಾತ ಮತ್ತು ನೈತಿಕ ಪರಿಣಾಮಗಳ ಬಗ್ಗೆ ಆರೋಗ್ಯ ಕ್ಷೇತ್ರದಲ್ಲಿ ಕಳವಳಕಾರಿ ಸಂಗತಿಗಳಾಗಿವೆ. ಆರೋಗ್ಯದ ಉಪಚಾರದಲ್ಲಿ ಅಸಮಾನತೆಗಳು ಹೆಚ್ಚಾಗುತ್ತವೆ. ರೋಗಿಗಳಿಗೆ `ಮನುಷ್ಯ` ವೈದ್ಯರ ಮೇಲೆ ನಂಬಿಕೆ ಕಡಿಮೆಯಾಗುತ್ತದೆ. ವೈದ್ಯಕೀಯದಲ್ಲಿ ಕೃತಕ ಬುದ್ಢಿಮತ್ತೆಯ ನವೀನ ಸಂಶೋಧನೆಗಳನ್ನು ಬಳಸಿಕೊಳ್ಳುತ್ತಲೇ ನೈತಿಕ ಪರಿಗಣನೆಗಳನ್ನು ಸಮತೋಲನಗೊಳಿಸುವುದು ಅಗತ್ಯವಾಗಿದೆ.
ಕೃತಕ ಬುದ್ಢಿಮತ್ತೆಯ ನೀತಿಶಾಸ್ತ್ರಜ್ಞರಾದ ಟಿಮ್ನಿಟ್ ಗೆಬ್ರು, “ಕೃತಕ ಬುದ್ಢಿಮತ್ತೆಯ ಅಲ್ಗಾರಿದಮ್‌ಗಳಲ್ಲಿ ಪಕ್ಷಪಾತವನ್ನು ಪರಿಹರಿಸುವುದು ಕೇವಲ ತಾಂತ್ರಿಕ ಸವಾಲಲ್ಲ ಆದರೆ ನೈತಿಕ ಕಡ್ಡಾಯವಾಗಿದೆ,” ಎಂದು ಒತ್ತಿಹೇಳುತ್ತಾರೆ. ಕೃತಕ ಬುದ್ಢಿಮತ್ತೆ ನ್ಯೂಕ್ಲಿಯರ್ ತಂತ್ರಜ್ಞಾನದಷ್ಟೇ ದೈತ್ಯ ಶಕ್ತಿ. ಇಂಥ ದೈತ್ಯಶಕ್ತಿಯೊಂದಿಗೆ ದೊಡ್ಡ ಜವಾಬ್ದಾರಿಯೂ ಬರುತ್ತದೆ. ದೈತ್ಯನನ್ನು ದಾನವನನ್ನಾಗಿಸದಿರಲು ಕೆಲವೇ ಕಾರ್ಪೋರೇಟುಗಳ, ಕೆಲವೇ ದೇಶಗಳ ಬಿಗಿಮುಷ್ಟಿಯಿಂದ, ರಾಜಕೀಯ ಮತ್ತು ಧಾರ್ಮಿಕ ಷಡ್ಯಂತ್ರಗಳಿಂದ ಆದಷ್ಟೂ ದೂರವಿಡುವುದು ಬಹಳ ಮುಖ್ಯವಾಗುತ್ತದೆ. ಐಸಾಕ್ ಅಸಿಮೊವ್‌ನ “ಐ, ರೋಬೋಟ್” ಮತ್ತು ಫಿಲಿಪ್ ಕೆ. ಡಿಕ್‌ನ “ಡು ಆಂಡ್ರಾಯ್ಡಸ್ ಡ್ರೀಮ್ ಆಫ್ ಎಲೆಕ್ಟ್ರಿಕ್ ಶೀಪ್?” ನಂತಹ ಕಾದಂಬರಿಗಳು ಕೃತಕ ಬುದ್ಢಿಮತ್ತೆಯ ಭವಿಷ್ಯದ ಬಗ್ಗೆ ಬರೆದ ಕಾದಂಬರಿಗಳು ಭಯಹುಟ್ಟಿಸುವಂತಿವೆ.
ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ದೊಡ್ಡ ಭರವಸೆ. ಈ ಹೊಸ ಪ್ರಪಂಚದ ಸಂಕೀರ್ಣತೆಗಳನ್ನು ಉಪಯೋಗಿಸುವಾಗ ಮನುಕುಲದ ಮತ್ತು ಈ ಭೂಮಿಯ ಉಳಿವಿನ ಯೋಗಕ್ಷೇಮದ ಶಕ್ತಿಯಾಗಿ ಬಳಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ, ಅಷ್ಟೇ ಅಲ್ಲ, ಅದರ ಪ್ರಯೋಜನಗಳನ್ನು ಸಮಾನವಾಗಿ ವಿತರಿಸಬೇಕಾದ ಸವಾಲೂ ಇದೆ. ಮಾನವನ ವೈಜ್ಞಾನಿಕ ಸಾಧನೆಯ ಹಾದಿಯಲ್ಲಿ ಮನುಷ್ಯನ ಮನಸ್ಸಿನಷ್ಟೇ ಜಟಿಲವಾದ ಕೃತಕ ಬುದ್ಧಿಮತ್ತೆ ಮನುಷ್ಯನ ಬುದ್ಧಿಮತ್ತೆಗೇ ಸವಾಲಾಗುತ್ತಿದೆ. ಪ್ರೊಫೆಸರ್ ಸ್ಟೀಫನ್ ಹಾಕಿಂಗ್, “ಶಕ್ತಿಶಾಲಿ ಕೃತಕ ಬುದ್ಢಿಮತ್ತೆಯು ಉದಯವು ಮಾನವೀಯತೆಗೆ ಸಂಭವಿಸುವ ಅತ್ಯುತ್ತಮ ಅಥವಾ ಕೆಟ್ಟ ವಿಷಯವಾಗಲಿದೆ” ಎಂದು ಎಚ್ಚರಿಸಿದ್ದಾರೆ. ಕೃತಕ ಬುದ್ಢಿಮತ್ತೆಯು ಫ್ರಾಂಕಸ್ಟೀನ್ ಆಗದಂತೆ, ಭಸ್ಮಾಸುರನಾಗದಂತೆ ನೋಡಿಕೊಳ್ಳುವುದು ಈ ಹೊಸ ಜಗತ್ತಿನ ಪ್ರಮುಖ ಸವಾಲಾಗಲಿದೆ.
(ವೈದ್ಯಸಂಪದದಲ್ಲಿ ಮೊದಲು ಪ್ರಕಟಿತ)
ಈ ವಾರದ ಮೂರು ಪ್ರಸ್ತುತಿಗಳು ಕೇಶವ ಅವರಿಂದ.
2) ಎರಡನೆಯ ಕವಿತೆಯಲ್ಲೂ ಹೊಸತನ ವಸ್ತುವಿನಲ್ಲಿ ಮತ್ತು ಅದನ್ನು ನಿಭಾಯಿಸಿದ ತಂತ್ರದಲ್ಲೂ ಇದೆ. ಕವಿ ಹುಡುಕುತ್ತಿದ್ದಂಥ ಹುಡುಗಿಯೇ ಬಂದರೂ ಆತನ ಅರ್ಧ ಅಸ್ತಿತ್ವವನ್ನೂ ಬದಲಾಯಿಸಿ ‘ಪೂರ್ಣಾಹುತಿ’ಯಾಗುತ್ತಾರೆ. ಬರೆಯೋದೆಲ್ಲ ನಿಂತಿತ್ತು ಹದಿನೈದು ವರ್ಷ. ಇದು ಹೇಗೆ ಹುಟ್ಟಿತು? ಅಂತ ಚಿಂತಿಸಿಲಿಕ್ಕೆ ಹಚ್ಚಿ ನುಸುಳಿಕೊಳ್ಳುತ್ತಾರೆ.
3) AI ಮೇಲಿನ ಲೇಖನ ಇಲ್ಲಿಯ ವರೆಗಿನ ಪರಿಸ್ಥಿತಿಯ ಪರಿಚಯ . ಬಹು ಬೇಗನೆ ಇದು ಬದಲಾಗಿ ಎರಡನೆಯ ಕವನದ ನಾಯಕಿಯಂತೆ ಎಲ್ಲವನ್ನೂ ಕಬಳಿಸುವದರ ಮುನ್ಸೂಚನೆಯೇ?
LikeLike