ಕಥೆ ಕಥೆ ಕಬ್ಬಿಣ..

‘ಕನೆಕ್ಟ್ ಆದರೆ ಕಥೆ ..ಬಾಕಿ ಎಲ್ಲ ವ್ಯಥೆ’.

ನಮಸ್ಕಾರ ಅನಿವಾಸಿ ಬಂಧುಗಳೇ,ಇವತ್ತಿನ ಓದಿಗೆ ಸ್ವಾಗತ 

ಕಥೆ ತನ್ನ ಪಾಡಿಗೆ ತಾನೆಲ್ಲೋ ಇರುತ್ತದೆ. ಪ್ರಾಯಶ: ಯಾವ ಕಥೆಗಾರರಿಗೂ ಅವರವರ ಕಥೆಗಳ ಬಗ್ಗೆ ಕರಾರುವಕ್ಕಾದ ಅಭಿಪ್ರಾಯವಿರುವುದಿಲ್ಲವಾದ್ದರಿಂದ ಅವರೆಲ್ಲ ಒಂದಕ್ಕೆ ನಿಲ್ಲಿಸದೇ ಹಲವಾರು ಕಾದಂಬರಿಗಳನ್ನು ರಚಿಸುತ್ತಾರೋ ಏನೋ? ನಾವೂ ಹಾಗೇ. ಸಿನೆಮಾಗಳ ಮೇಲೆ ಸಿನೆಮಾ. ‘ ಇಂಥದ್ದೊಂದನ್ನು ನೋಡೇ ಇಲ್ಲ’ ಎಂದು ಬೊಂಬಡಿ ಬಜಾಯಿಸುತ್ತಾ ಮಾಡುತ್ತಲೇ ಹೋಗುತ್ತೇವೆ. ಕಥೆ ತನ್ನ ಪಾಡಿಗೆ ತಾನೆಲ್ಲೋ ಇರುತ್ತದೆ.
‐--ಯೋಗರಾಜ ಭಟ್.

ಹೌದಲ್ಲವೇ ಕಥೆ ಯಾರ ಹಂಗಿಗೂ ಒಳಗಾಗದೇ, ಯರೊಬ್ಬರನ್ನೂ ಲೆಕ್ಕಿಸದೇ ತನ್ನ ಪಾಡಿಗೆ ತಾನು ಹಾಯಾಗಿ ಎಲ್ಲೋ ಇರುತ್ತದೆ. ಅದನ್ನು ಹೆಕ್ಕುತ್ತ ನಾವು ಹೈರಾಣಾಗುತ್ತೇವೆ. ಬನ್ನಿ.. ಇವತ್ತು 'ಕಥೆಯ ಕಥೆ' ಕೇಳೋಣ..ಅಲ್ಲಲ್ಲ ಓದೋಣ.

~ಸಂಪಾದಕಿ

ಕಥೆಯ ಕಥೆ


‘ಹೀಂಗs ಒಂದ ಊರಾಗ ಒಬ್ಬ ರಾಜಾ ಇದ್ದನಂತ’.. ‘ ಹೀಂಗs ಒಂದ ಅಡವ್ಯಾಗ ಒಂದು ಹುಲಿ ಇತ್ತಂತ’.. ಹೀಗೆ ಈ ‘ಹೀಂಗ ಒಂದ’ ಅಂತ ಕಥಿ ಶುರುವಾದ್ರ ಸಾಕು ಕಣ್ಣ ಅಗಲಿಸಿ, ಮೈಯೆಲ್ಲ ಕಿವಿಯಾಗಿ, ಆ ಅಂತ ಬಾಯಿ ತಕ್ಕೊಂಡು ಅಜ್ಜಿಯ ಮುಂದೆ ಕಾಲದ ಪರಿವೆಯಿಲ್ಲದೇ ಕೂತು ಬಿಡುವುದಿತ್ತು. ನಾವೂ ಆ ಕಥೆಯೊಡನೆ ಆ ಹೀಂಗ ಒಂದ ಊರೋ, ಅಡವಿಯೋ ಏನಿತ್ತೋ ಅಲ್ಲಿಗೇ ಹೋಗಿ ಆ ಗೇಣುದ್ದ ಮನಷಾ ಚೋಟುದ್ದ ಗಡ್ಡದವನೊಡನೆಯೋ, ಬೆಂಡು ಬತ್ತಾಸಿನ ಮಳೆಯಲ್ಲಿ ಎದ್ದ ಹುಡುಗನೊಡನೆಯೋ ಅಡ್ಡಾಡಿ ಬಂದುಬಿಡುತ್ತಿದ್ದೆವು.ಚಿನ್ನದ ಕೂದಲಿನ ರಾಜಕುಮಾರಿ,ಆಸೆಬುರುಕ ನರಿಯಣ್ಣ,ಜಾಣ ಮೊಲದ ಮರಿ, ಮೂರ್ಖ ಕಾಗಕ್ಕ, ಸಪ್ತ ಸಮುದ್ರದಾಚೆಯ ಗಿಣಿಮರಿಯಲ್ಲಿ ಜೀವವಿಟ್ಟುಕೊಂಡಿದ್ಧ ರಾಕ್ಷಸ..ಇವರೆಲ್ಲ ನಮ್ಮ ಭಾವಕೋಶದ ಜೊತೆಗೇ ಬೆರೆತು ಉಸಿರಾಡುತ್ತಿದ್ದರು.ಕಾಗಕ್ಕ- ಗುಬ್ಬಕ್ಕನ ಕಥೆಯಂತೂ ನಮ್ಮ ಫೇವರಿಟ್.
ಅಜ್ಜಿಯ ಕಥೆ ಹೇಳುವ ಚೆಂದವೇ ಬೇರೆ.ಅವಳ ಕಥೆಗಳು ಬಹಳ ರೋಚಕವಾಗಿದ್ದಂಥವು.ಅಕಿ ತನ್ನ ಹಳ್ಳಿಯ ತನ್ನ ಸಣ್ಣಂದಿನ ಅನುಭವದ,ನೆನಪಿನ ಕಥೆಗಳನ್ನೂ ಹೇಳಾಕಿ. ‘ ನಮ್ಮೂರಿಗೆ ಉದ್ದನೆಯ ಬಿಳಿಗಡ್ಡದ ಬಾಬಾ ಬಂದಿದ್ದ..ಕೇಸರಿ ಶಾಟಿ ಉಟಗೊಂಡು. ಅವಾ ಹಿಮಾಲಯಕ್ಕ ಹೋಗಿದ್ನಂತ.’ ಆಕೆ ಹೇಳುತ್ತಿದ್ದರೆ ‘ಹಿಮಾಲಯ ಅಂದ್ರ?!’..ಹಿಂದೆಯೇ ನಮ್ಮ ಪ್ರಶ್ನೆ. ‘ ಅದು ದೂರ ದೇಶದಾಗ( ಇಲ್ಲಿ ದೇಶ ಅಂದ್ರ ಪ್ರದೇಶ.ಬೇರೆ ದೇಶವಲ್ಲ.) ಇರೋ ಬರ್ಫಿನ ಬೆಟ್ಟ’ ಅಲ್ಲೆ ಯಾರಾದರೂ ಹೋದ್ರ ಥಂಡಿಗೆ ಕೈಕಾಲು ಶಟದ ಹೋಗತಾವ.ಬರೇ ಸಾಧುಗಳು ಮತ್ತು ದೇವರು ಅಷ್ಟೇ ಅಲ್ಲಿರತಾರ ಅಂತ ಅಕಿ ಹೇಳತಿದ್ರ ಬಿಜಾಪೂರದ ಬಿಸಿಲ ಝಳದ ನೆಲದ ನನಗೆ ಆ ಶೆಟೆದು ಹೋಗುವ ಥಂಡಿಯ ಕಿಂಚಿತ್ತೂ ಕಲ್ಪನೆಯಾಗದಿದ್ದರೂ ಬರ್ಫಿನ ಬೆಟ್ಟವಷ್ಟೇ ತಲೆಯಲ್ಲುಳಿದು ‘ ಓಹ್! ಹಂಗಾದ್ರ ಆ ಲಾಲ್ ವಾಲಾ ( ಐಸ್ ಕ್ಯಾಂಡಿ ಮಾರುವವ) ನ್ನ ಅಲ್ಲೆ ಕರಕೊಂಡ ಹೋಗಿ ಆ ಸಿಹಿಸಿಹಿ ಕೆಂಪು ದ್ರವವನ್ನೆಲ್ಲ ಅದರ ಮೇಲೆ ಸುರುವಿದ್ರ ಅದೆಷ್ಟು ದೊಡ್ಡ ಐಸ್ಕ್ರೀಂ ಕುಲ್ಫೀ ಆದೀತು ಅಂತ ನಾನು ಮನದಲ್ಲೇ ಲಾಲಾರಸ ಸುರಿಸಾಕಿ. ‘ ಆ ಸಾಧೂಂದು ಹೀಂಗೇ ಒಂದ ಬಟ್ಟ ( ಬೆರಳು) ಹೆಪ್ಪುಗಟ್ಟಿ ಕಪ್ಪ ಆಗಿಹೋಗಿತ್ತ.ಅದರ ಮ್ಯಾಲೆ ಸುತಗಿ ತಗೊಂಡು ಹೊಡದ್ರೂ ಅವಂಗ ನೋವು ಆಗೂದಿಲ್ಲಂತ.’. ಅಕಿ ಕಥಿ ಮುಂದುವರೆಸಿದ್ರ ‘ ಓಹ್! ಒಮ್ಮೆ ಹಂಗಾರ ನಾನೂ ಹೋಗಿ ಪೂರಾ ಮೈನೇ ಹಂಗ ಮಾಡಕೊಂಡು ಬರಬೇಕು. ಅಂದ್ರ ಒಟ್ಟಾಪ್ಪೆ(ಕುಂಟಾಬಿಲ್ಲೆ ) ಆಡಬೇಕಾದ್ರ ಬಿದ್ರೂ ಮೊಣಕಾಲು – ಮೊಣಕೈ ತರಚಂಗಿಲ್ಲ’ ಅಂತೆಲ್ಲ ಹುಚ್ಚುಚ್ಚಾಗಿ ಯೋಚಿಸುತ್ತಿದ್ದುದು ಈಗಲೂ ನೆನಪಿನಲ್ಲಿದೆ.
ಇನ್ನು ಸ್ವಲ್ಪ ಬುದ್ಧಿ ಬಂದಮೇಲೆ ಅವಳು ಹಾಡಿನ ಮೂಲಕ ಹೇಳಿದ ಕಥೆಗಳಂತೂ ಇಡಿಯ ಪುರಾಣ ಪ್ರಪಂಚವನ್ನೇ ನಮ್ಮೆದಿರು ತೆರೆದಿಡುವಂಥವು.
‘ಚೈತ್ರ ಶುದ್ಧ ಹಗಲು ನವಮಿ ರಾಮ ಜನಿಸಿದ
ಬಿದ್ದ ಶಿಲೆಯ ಪಾದದಿಂದುದ್ಧಾರ ಮಾಡಿದ
ಜನಕರಾಯನಲ್ಲಿ ಚಾಪು ತುಣುಕು ಮಾಡಿದ
ಗುಣಕ ಶೀಲ ಸೀತಾದೇವಿ ಮನಕ ಮೆಚ್ಚಿದ’
ಇಡಿಯ ರಾಮಾಯಣದ ಕಥೆ 3-4 ನುಡಿಗಳಲ್ಲಿ ಮುಗಿದುಹೋಗುತ್ತಿತ್ತು.ಮತ್ತೊಂದು ಆಸಕ್ತಿದಾಯಕ ಹಾಡೆಂದರೆ ‘ಕಮಲಮುಖಿ ಸತ್ಯಭಾಮೆ’. ಶ್ರೀಕೃಷ್ಣ- ಸತ್ಯಭಾಮೆಯರ ಸಂವಾದದ ಹಾಡು. ಇಡಿಯ ದಶಾವತಾರದ ಕಥೆಗಳೆಲ್ಲ ರೋಚಕವಾಗಿ ಅದರಲ್ಲಿ ಬಂದುಬಿಡುತ್ತವೆ. ಅದೂ ಒಂಥರಾ ನಿಂದಾ ಸ್ತುತಿಯ ರೂಪದಲ್ಲಿ. ಸತ್ಯಭಾಮೆಯ ಮನೆಗೆ ಬಂದ ಕೃಷ್ಣ
‘ ಕಮಲಮುಖಿ ಸತ್ಯಭಾಮೆ ಬೇಗದಿಂದ ಬಾಗಿಲು ತಗಿ ಅಂತೀನಿ ರಮಣಿ’ ಎಂದರೆ ಅವಳು ,
‘ಯಾರೂ ಅರಿಯೆ ನಿಮ್ಮ ಖೂನು-ಗುರುತು ಇಲ್ಲ, ಹೆಂಗ ತೆಗಿಯಲಿ ರಾತ್ರೀಲಿ ರಮಣ’ ಎಂದು ಪ್ರಶ್ನಿಸುತ್ತಾಳೆ. ಅವನು ತನ್ನ ಪರಿಚಯ ಹೇಳುತ್ತ,
‘ ವೇದ ತುಡುಗು ಮಾಡಿ ಒಯ್ದು ನೀರೊಳು
ಶಂಖದೊಳಗ ಇದ್ದನು ವೈರಿ|
ಮತ್ಸ್ಯವತಾರ ತಾಳಿ ಶಂಖಾಸುರನ ಕೊಂದು ವೇದವ ತಂದೀನಿ ನಾರಿ|
ಕೂರ್ಮವತಾರ ತೊಟ್ಟು ಸಮುದ್ರ ಮಥನ ಮಾಡೀನೆ ಹೊತ್ತು ಗಿರಿ|
ರತ್ನ ತೆಗೆದು ಅಮೃತ ಹಂಚುವಾಗ ರಾಹು-ಕೇತುವಿನ ಮಾಡೀನಿ ಸೂರಿ|
ರಸಾತಳಕೆಳೀತಿದ್ದ ಭೂಮಿ ಕೇಳ್
ದೇವರಾದರೆಲ್ಲ ಗಾಬರಿ|
ಸತ್ಯವರಾಹನಾಗಿ ಭೂಮಿ ಹೊತ್ತು ಮ್ಯಾಲಕ ಎತ್ತೀನಿ ಕ್ವಾರಿ|
ಹಿರಣ್ಯಕಶಿಪು ಶಂಭುವಿನ ವರದಾ
ವಿಷ್ಣುಭಕ್ತ ಮಗ ಪ್ರಹ್ಲಾದ|
ತಂದೆ- ಮಗಗ ಬಿದ್ದೀತೋ ವಾದ
ಸಿಟ್ಟಿನಿಂದ ಕಶ್ಯಪ ಕಂಭಕೊದ್ದ
ನಾ ಬಂದೆನಾರ್ಭಾಟದಿಂದ
ಹೊಸ್ತಿಲದೊಳಗ ಹೊಟ್ಟಿ ಸೀಳಿದರ ಕೇಳ ಭಾಮಿನಿ ಆತನ ಮರಣ’
ಎಂದು ಪರಾಕ್ರಮ ಕೊಚ್ಚಿಕೊಂಡ ಅವನ ಕಾಲನ್ನೆಳೆವ ಭಾಮೆಯ ಕುಚೋದ್ಯದ ಉತ್ತರ ಕೇಳಿ..
‘ ಮತ್ಸ್ಯನೆಂದು ಬಲು ಬಡಾಯಿ ಹೇಳತಿ
ಹೆಂಗ ಬಂದ್ಯೋ ನೀ ಊರಾಗ|
ಕೂರ್ಮನಾದರ ಇಲ್ಲಿಗ್ಯಾಕ ಬಂದಿ
ಬೀಳಹೋಗೋ ನೀ ಭಾವ್ಯಾಗ|
ಸತ್ಯ ವರಾಹನೆಂದು ಸಾಕ್ಷಿ ಹೇಳತಿ ಭೂಮಿ ಹೊತ್ತ ಕಸರತ್ತ ಎನಗ ತಲೆ ಎತ್ತದೇ ತಿರುಗುತ ಹೋಗಿರಿ ಹಸಿಮಣ್ಣು ತಿಂದಡವ್ಯಾಗ|
ಭಾಳ ಭಾಳ ಹೇಳತಿದ್ದಿ ಕಸರತ್ತ
ನರಸಿಂಹನವತಾರದ ಮಾತ |♧
ಸಿಂಹನಾದರ ಗುಡ್ಡದಾಗ ಇರಹೋಗು ಇಲ್ಲಿಗ್ಯಾಕ ಬಂದಿರಿ ಕಾರಣ’
ಹೀಗೆಯೇ ಎಲ್ಲ ಅವತಾರಗಳ ಬಗ್ಗೆ ಅವನ ಬಡಾಯಿ, ಅವಳ ಹೀಯಾಳಿಸುವಿಕೆ ನಡೆದು ಕೊನೆಗೆ
‘ನಿನ್ನ ಪ್ರಾಣವಲ್ಲಭ ಮನದನ್ನ’ ಬಂದಿದ್ದೇನೆಂದ ಮೇಲೆಯೇ ಅವಳು ಬಾಗಿಲು ತೆಗಯುವುದು. ಹೇಳಿ ಕೇಳಿ ‘ಸರಸಕೆ ಕರೆದರೆ ವಿರಸವ ತೋರುವ’ ಸತ್ಯಭಾಮೆ ಅವಳು.ಸುಮ್ಮನೆ ಇಷ್ಟು ಸುಲಭಕ್ಕೆ ಬಿಟ್ಟಾಳೆಯೇ?
ನಮ್ಮ ಓಣ್ಯಾಯಿ(ಅಜ್ಜಿ) ರಾಗವಾಗಿ ಈ ಹಾಡು ಹಾಡುತ್ತಿದ್ದರೆ ದಶಾವತಾರದ ಎಲ್ಲ ಕಥೆಗಳೂ ಕಣ್ಣಮುಂದೆ ಸಿನೆಮಾ ರೀಲಿನಂತೆ ಉರುಳುತ್ತಿದ್ದವು.
ಸ್ವಲ್ಪ ದೊಡ್ಡವರಾದ ಮೇಲೆ ಅಂದರೆ ಸುಮಾರು 4-5 ನೇಯತ್ತೆ ಹೊತ್ತಿಗೆ ಓದುವ ಹುಚ್ಚು ಅಂಟಿಕೊಂಡಾದ ಮೇಲೆ ಆಹಾ! ಆ ಚಂದಮಾಮ, ಬೊಂಬೆಮನೆ, ಬಾಲಮಿತ್ರದ ಆ ರೋಚಕಕಥೆಗಳು..ಆರು ಬೆರಳಿನ ಉದ್ದ ಗಡ್ಡದ ಮಾಂತ್ರಿಕ, ಛಕ್ಕಂತ ವೇಷ ಬದಲಿಸಿ ಬರುವ ಮಾಟಗಾತಿ,ಕೂದಲೆಳೆ- ಉಗುರುಗಳಿಂದ ಮಾಟ ಮಾಡುವ ತಾಂತ್ರಿಕ , ವಿಕ್ರಮಾದಿತ್ಯನ ಹೆಗಲಿನಿಂದ ಹಾಹ್ಹಾಹಾ ಎಂದು ನಗುತ್ತ ಹಾರಿಹೋಗಿ ಗಿಡದ ಟೊಂಗೆಗೆ ನೇತಾಡುವ ಬೇತಾಳ..ನಮ್ಮಕಲ್ಪನೆಗೊಂದು ಎಲ್ಲೆಯೇ ಇಲ್ಲದಂತೆ ಮಾಡಿದವಷ್ಟೇ ಅಲ್ಲ ಜೊತೆಗೇ ಇಲ್ಲದ ಭಯವನ್ನೂ ಅಲ್ಪಸ್ವಲ್ಪ ಹುಟ್ಟು ಹಾಕಿದವೆನ್ನಿ. ನಾನಾಗ 4 ನೇಯತ್ತೆ ಹುಡುಗಿ. ಒಂದು ಕಥೆ ಓದಿದ್ದೆ. ಅದರಲ್ಲಿ ಸುಳ್ಳು ಮಾತಾಡಿದರೆ ತಲೆಯ ಮೇಲೆ ಕೊಂಬು ಮೂಡುತ್ತವೆ. ಪ್ರತಿಸಲ ಸುಳ್ಳು ಹೇಳಿದಾಗೆಲ್ಲ ಒಂದೊಂದು ಇಂಚು ಬೆಳೆಯುತ್ತ ಹೋಗಿ , ಹೀಗೆಯೇ ಬಹಳ ಸಲ ಸುಳ್ಳು ಹೇಳಿದ ಹುಡುಗನ ತಲೆಯ ಕೊಂಬುಗಳು ಬೆಳೆದು ಬೆಳೆದು ಮೇಲೆ ಜಂತಿಗೆ ಸಿಕ್ಕಿಹಾಕಿಕೊಂಡು ಬಿಡುತ್ತವೆ. ಆದನ್ನೋದಿದ ಮೇಲೆ ವರುಷಗಟ್ಟಲೆ ಸಣ್ಣ ಸುಳ್ಳು ಹೇಳಿದರೂ ಹತ್ತುಸಲ ತಲೆಮುಟ್ಟಿ ನೋಡಿಕೊಳ್ಳುತ್ತಿದ್ದೆ. ಒಮ್ಮೆ ಯಾಕೋ ಪಕ್ಕದ ಶಿವಮೊಗ್ಗಿ ಅವರ ಮನೆಗೆ ಹೋಗಿದ್ದೆ. ಊಟಕ್ಕೆ ಕುಳಿತಿದ್ದ ಅವರು, ‘ಬಾರs ಊಟ ಮಾಡು ಬಾ’ ಎಂದು ಕರೆದರು. ಹಾಗೆಲ್ಲ ಊಟ-ತಿನಿಸಿಗೆ ಯಾರಾದರೂ ಕರೆದರೆ ಹೂಂ ಅಂತ ಹೊರಟುಬಿಡಬಾರದು.ನಮ್ಮ ಊಟ ಆಗಿದೆ ಅಂತ ಹೇಳಬೇಕು ಎನ್ನುವುದು ಮನೆಯಲ್ಲಿ ಹಿರಿಯರು ವಿಧಿಸಿದ್ದ ನಿಯಮವಾಗಿದ್ದರಿಂರ ಹಾಗೇ ಹೇಳಿದೆ. ‘ಇರಲಿ ಬಾ. ಚೂರೇ ಪಾಯಸ ತಿನ್ನು’ ಎಂದರು. ‘ ನಮ್ಮನೆಯಲ್ಲೂ ಅದೇ’ ಎಂದೆ. ಹೀಗೇ ಅವರು ಒತ್ತಾಯಿಸಿ ಕರೆಯುವುದು, ನಾನು ಸುಳ್ಳು ಹೇಳುತ್ತ ಹೋಗಿ ನೋಡುತ್ತಿದ್ದಂತೇ 8-10 ಸುಳ್ಳುಗಳಾಗಿ ಇನ್ನೇನು ಕೊಂಬು ಬೆಳೆದು ನಾನಿಲ್ಲೇ ಇವರ ನಡುಮನೆಯಲ್ಲೇ ಸಿಕ್ಕಿಹಾಕಿಕೊಂಡು ಬಿಡುತ್ತೇನೆಂದು ತುಂಬ ಭಯವಾಗಿ ಅಳಲು ಶುರು ಮಾಡಿದ್ದೆ. ನನ್ನ ಅವಸ್ಥೆ ನೋಡಿ ಪಾಪ ಅವರಿಗೂ ಗಾಬರಿ .
ಇನ್ನೊಮ್ಮೆ ನಮ್ಮ ಸ್ನೇಹಿತರಂತೆ, ಮನೆಯವರಂತೆ ವೇಷ ಬದಲಿಸಿ ಬರುವ ದೆವ್ವದ ಕಥೆ ಓದಿದಾಗಲಂತೂ ನನ್ನ ಪಾಡು ನಾಯಿಪಾಡಾಗಿತ್ತು. ಜೊತೆಗಿದ್ದವರೆಲ್ಲ ಇವರು ನಿಜದವರೋ, ವೇಷಧಾರಿ ದೆವ್ವಗಳೋ ಎಂದು ಹೆದರಿಕೆಯಾಗಿಬಿಡುತ್ತಿತ್ತು. ಅದೂ ಬಿಜಾಪೂರದ ನಮ್ಮ ಮುದ್ದಣ್ಣ ಮಾಮಾನ ಆ ದೊಡ್ಡ ಮನೆಯಲ್ಲಿ ರಾತ್ರಿವೇಳೆ ಬಚ್ಚಲಿಗೆ ಹೋಗಬೇಕಾಗಿ ಬಂದರಂತೂ ಮುಗಿದೇಹೋಯ್ತು. ಪಡಸಾಲೆಯಲ್ಲಿ ಮಲಗಿದ ನಾವು ನಡುಮನೆ, ದೊಡ್ಡ ಅಡುಗೆಮನೆ ದಾಟಿ ಬಚ್ಚಲಿಗೆ ಅದೂ ಎಂಥಾ ಬಚ್ಚಲು ಅಂತೀರಿ 3-4 ಮೆಟ್ಟಿಲುಗಳ , 3-4 ಕಂಬಗಳುಳ್ಳ ದೆವ್ವನಂಥಾ ಬಚ್ಚಲು. ಅಲ್ಲಿ ಒಂದೆಡೆ ಕುಳ್ಳಿನ ಚೀಲ, ಎತ್ತರಕ್ಕೆ ಒಟ್ಟಿದ ಕಟ್ಪಿಗೆಗಳು, ಅವುಗಳ ಸಂದಿಯಲ್ಲೆಲ್ಲೋ ಕಣ್ಣಿಗೆ ಕಾಣದೇ ದಡಬಡ ಮಾಡುವ ಇಲಿಯ ಸಂಸಾರಗಳು, ಉದ್ದ ಮೀಸೆ ಝಳಪಿಸುವ ಜೊಂಡಿಂಗಗಳು..ಸಾಲದ್ದಕ್ಕೆ ಎದುರಿಗೊಂದು ಎರಡು ಸರಳುಗಳ ಸಣ್ಣ ಕಿಡಕಿ. ನಮ್ಮ ಪಪ್ಪೂಮಾಮ( ನನ್ನ ಸಣ್ಣ ಸೋದರ ಮಾವ) ‘ ರಾತ್ರಿ ಬಚ್ಚಲಿಗೆ ಹೋದ್ರ ಆ ಕಿಡಕಿ ಕಡೆ ನೋಡಬ್ಯಾಡ್ರಿ ಎರಡು ಕೆಂಪುಕಣ್ಣು ನಿಮ್ಮನ್ನೇ ನೋಡತಿರತಾವ. ನೀವೇನರ ಅಪ್ಪಿತಪ್ಪಿ ನೋಡಿದ್ರ ತನ್ನ ಉದ್ದನ್ನ ಕೆಂಪು ನಾಲಿಗೆ ಚಾಚಿ ಎಳಕೊಂಡು ಬಿಡತಾವ’ ಅಂತೆಲ್ಲ ಏನೇನೋ ಹೇಳಿ ನಮ್ಮನ್ನು ಕಾಡಿ ಹೆದರಿಸಿರುತ್ತಿದ್ದ. ಹೀಗಾಗಿ ಯಾವಾಗಲೂ ಅಜ್ಜಿಯನ್ನೆಬ್ಬಿಸಿ ಅವಳ ಬೆಂಗಾವಲಿನಲ್ಲೇ ರಾತ್ರಿ ಬಚ್ಚಲಿಗೆ ಹೋಗುವುದು. ಆದರೆ ಈ ವೇಷ ಬದಲಿಸುವ ದೆವ್ವದ ಕಥೆ ಓದಿದ ಮೇಲೆ ಹಿಂದೆ ಬರುತ್ತಿರುವುದು ಓಣ್ಯಾಯಿನೋ ಅಥವಾ ದೆವ್ವವಿರಬಹುದೋ ಎಂದು ಶುರುವಾದ ಸಂಶಯ ಕೆಲವೇ ಸೆಕೆಂಡುಗಳಲ್ಲಿ ಪೆಡಂಭೂತವಾಗಿ ಬೆಳೆದು ನನ್ನನ್ನು ನಡುಗಿಸಿಬಿಡುತ್ತಿತ್ತು. ಅಮ್ಮ ಹೇಳಿಕೊಟ್ಟ ‘ ನಿರ್ಭಯತ್ವಂ ಅರೋಗತಾಂ’ ದ ಹನುಮಪ್ಪನೋ, ಅಜ್ಜ ಕಲಿಸಿದ ‘ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ’ ದ ರಾಯರೋ ಹೇಗೋ ನನ್ನನ್ನು ಕಾಯುತ್ತಿದ್ದರೆನ್ನಿ.
ರಾಯರು(ರಾಘವೇಂದ್ರ ಸ್ವಾಮಿಗಳು) ಅಂದಕೂಡಲೇ ಮತ್ತೊಂದು ಘಟನೆ ನೆನಪಾಯ್ತು. ಒಮ್ಮೆ ರಜೆಗೆಂದು ನಿಪ್ಪಾಣಿಗೆ ನಮ್ಮ ಇನ್ನೊಬ್ಬ ಸೋದರಮಾವನ ಮನೆಗೆ ಹೋಗಿದ್ದೆ. ಬಹಳ ಹೊತ್ತು ರಾತ್ರಿ ಹರಟೆ, ಮಾತುಕತೆಯ ಜೊತೆಗೇ ನನ್ನ ಕಸಿನ್ಸ್ ತಮ್ಮ home-work ನ್ನೂ ಮುಗಿಸಿ, ಪಾಟಿ- ಪುಸ್ತಕ ಎಲ್ಲ ಎತ್ತಿಟ್ಟು ಇನ್ನೇನು ಮಲಗಲು ಅಣಿಯಾದೆವು.
ಪೆನ್ಸಿಲ್ ಬಾಕ್ಸ್ ಒಂದು ತಂಗಿ ಭೂದೇವಿಯ ತಲೆದಿಂಬಿನ ಪಕ್ಕಕ್ಕೆ ಉಳಿದುಹೋಗಿತ್ತು. ನಾನು ಮರೆತು ಉಳಿದಿದೆಯೇನೋ ಎಂದು ಎತ್ತಿಡಲು ಹೋದರೆ ‘ ಅವ್ವಾ, ಗೌರಕ್ಕಾ ಅದನ್ನ ತಗೀಬ್ಯಾಡವಾ. ಅದರಾಗ ರಾಯರು, ಹನುಮಪ್ಪ ಎಲ್ಲ ಇದ್ದಾರ. ಕೆಟ್ಟ ಕನಸು ಬೀಳಬಾರದು, ರಾತ್ರಿ ಅಂಜಿಕಿ ಬರಬಾರದು ಅಂತ ಇಟಗೊಂಡೀನಿ’ ಅಂದಳು. ನಾನು ಅರೇ! ತ್ರಿಜ್ಯ, ಕೋನಮಾಪಕ, ಸೀಸಕಡ್ಡಿಗಳ ಬದಲು ಇದರಲ್ಲಿ ದೇವರು ಹೆಂಗ ಬಂದ್ರು ಅಂತ ತೆಗೆದು ನೋಡಿದರೆ ಅದರಲ್ಲಿ ರಾಯರ-ಹನುಮಪ್ಪನ ಸಣ್ಣ ಸಣ್ಣ ಫೋಟೋಗಳು. ಆಮೇಲೆ ಗೊತ್ತಾಯಿತು ಇದು ಅನಂತನಾಗ್ ನ ‘ ನಾ ನಿನ್ನ ಬಿಡಲಾರೆ’ ಸಿನೆಮಾದ ಕಥೆ ಕೇಳಿದ್ದರ ಪ್ರಭಾವ ಅಂತ. (ಇನ್ನು ಸಿನೆಮಾ ನೋಡಿದ್ದರೆ ಏನಾಗುತ್ತಿತ್ತು ಆ ‘ ಕಾಮಿನಿ’ ಗೇ ಗೊತ್ತು ) ಅಂತೂ ಈಗಲೂ ಅವಳ ಭೇಟಿಯಾದಾಗ ಈ ಕಥೆ ನೆನೆಸಿಕೊಂಡು ನಗುತ್ತೇವೆನ್ನಿ.

ಈಗ ಅಜ್ಜಿಯ ಕಥೆಗಳನ್ನು ಚೆಂದ ಚೆಂದದ ಕಾರ್ಟೂನ್ ಗಳು ಹೇಳುತ್ತವೆ.ತನ್ನ ಚಿಕ್ಕಂದಿನಲ್ಲಿ ‘snow-white ‘ ನೋಡುತ್ತ ಕಣ್ಣೀರು ಸುರಿಸುತ್ತಿದ್ದ, Tom & Jerry ಯಲ್ಲಿ ಕನಸು ನೋಡುತ್ತಿರುವ Tom ನನ್ನು ನೋಡಿ ಸೋಫಾದ ಮೇಲೆ ಉರುಳಾಡಿ ನಗುತ್ತಿದ್ದ ನನ್ನ ಮಗನ ಚಿತ್ರ ಈಗಲೂ ನನ್ನ ಕಣ್ಣ ಮುಂದಿದೆ.ದೃಶ್ಯಮಾಧ್ಯಮ ಯಾವಾಗಲೂ ಹೆಚ್ಚು ರಮಣೀಯ ಹಾಗೂ ಆಕರ್ಷಕವಲ್ಲವೇ?
ಕಥೆಗಳೂ ದೇವರಂತೆ ಅನಾದಿ-ಅನಂತ- ವಿಶ್ವವ್ಯಾಪಿ.ಅವುಗಳ ರೀತಿ, ಮಾಧ್ಯಮಗಳು ಬದಲಾದರೇನಂತೆ? ಜಗವಿರುವತನಕ ಕಥೆಗಳಿರುತ್ತವೆ. ನಮ್ಮ ಕಥೆ, ನಿಮ್ಮ ಕಥೆ, ಅವರ ಕಥೆ, ಇವರ ಕಥೆ, ಕಂಸನ ಕ್ರೌರ್ಯ ದ ಕಥೆ, ಬುದ್ಧನ ಕರುಣೆಯ ಕಥೆ, ಶಕುನಿಯ ಕುತಂತ್ರದ ಕಥೆ,ವಿದುರನ ನೀತಿಕಥೆ, ರಾಮನ ಶೌರ್ಯ ದ ಕಥೆ, ಭೀಮನ ಬಲದ ಕಥೆ, ಸಿರಿವಂತರ ಸೊಕ್ಕಿನ ಕಥೆ, ಬಡವರ ಹಸಿವಿನ ಕಥೆ, ಸೋತ ಕಥೆ, ಗೆದ್ದ ಕಥೆ, ನಗುವ ಕಥೆ, ಅಳುವ ಕಥೆ, ಸನ್ಯಾಸದ ಕಥೆ, ಗಾರ್ಹಸ್ಥ್ಯದ ಕಥೆ, ಸಾಮಾನ್ಯರ ಸಾಮಾನ್ಯ ಕಥೆ , ಸಂತೆಯ ಸೌತೆ-ಬದನೆಗಳ ಕಥೆ, ಹೋರಾಟದ ಕಥೆ, ಯಶಸ್ಸಿನ ಕಥೆ,ಅಪ್ಪುವ ಕಥೆ, ದಬ್ಬುವ ಕಥೆ, ಮಿನಿ ಕಥೆ,ಹನಿಗಥೆ, ಸಣ್ಣ ಕಥೆ,ನೀಳ್ಗಥೆ, ಕಾವ್ಯ-ಕಾದಂಬರಿಗಳ ಕಥೆ...ಮುಗಿಯದ,ನಿಲ್ಲದ ಕಥೆ .

~ ಗೌರಿಪ್ರಸನ್ನ

One thought on “ಕಥೆ ಕಥೆ ಕಬ್ಬಿಣ..

  1. ಅಜ್ಜಿ ಹೇಳೋ ಕತಿ ಬಗ್ಗೆ ಎಷ್ಟ ಛಂದ ಬರದೀರಿ. ನಿಮ್ಮ ಅಜ್ಜಿ ಹೇಳುವ ಕತೆಗಳ ಬಗ್ಗೆ ಭಾಳ ಆತ್ಮೀಯವಾಗಿ ಬರದೀರಿ! ಅದನ್ನ ಓದಕೋತ ನನಗೂ ನನ್ನ ಅಜ್ಜಿಯ ಮತ್ತು ಅವಳು ಹೇಳುವ ಕತೆಗಳ ನೆನಪಾದವು. ಇಡೀ ರಾಮಾಯಣ ಮತ್ತು ಮಹಾಭಾರತ ನಾಕಾರು ಸಲ ಕೇಳುವ ಭಾಗ್ಯ ನನ್ನದು ಅಕೀ ಬಾಯಿಂದ. ನಡುನಡುವ ದಾಸರ ಹಾಡುಗಳು ಬ್ಯಾರೆ! ಆದರ ನಿಮಗ ಬಂದಂಥ ಅಪರೂಪದ ಪ್ರಶ್ನೆಗಳು ನನಗ ಬಂದಿಲ್ಲ ಬಿಡ್ರಿ! ಚಂದಮಾಮಾ ಮತ್ತು ಬಾಲಮಿತ್ರದ ನೆನಪು ಇನ್ನೂ ಹಸಿಯಾಗ್ಯದ ಇಷ್ಟ ದಶಕಗಳಾದ ಮೇಲೂ! ಕತಿಯ ಬರಹ ಎದುರಿಗೆ ಕೂತು ಹರಟಿ ಹೊಡದಂಗ, ಭಾಳ ಛಂದ! – ಕೇಶವ

    Like

Leave a Reply to keshavkulkarni Cancel reply

Your email address will not be published. Required fields are marked *