ಕಳೆದ ವಾರಗಳ ಚಿಂತನ ಲೇಖನಗಳ ಹಾದಿಯಲ್ಲೇ ಈ ವಾರವೂ ಶಿಕ್ಷಣ ಕ್ಷೇತ್ರದ ಬಗ್ಗೆಯೇ ಮುಂದುವರೆದಿದೆ. ಬೆಂಗಳೂರಿನಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿರುವ ಶ್ರೀಮತಿ ಸೀತಾ ಗುಡೂರ ಅವರ ಸ್ವಂತ ಅನುಭವದ ಲೇಖನ. ಪದವಿಯವರೆಗೆ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ಸೀತಾ ಗುಡೂರ್, ಮುಂದೆ ಕನ್ನಡದಲ್ಲಿ ಎಮ್ ಎ, ಎಂಫಿಲ್ ಮಾಡಿ ಕನ್ನಡದ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಳೆಗನ್ನಡ, ದಾಸಸಾಹಿತ್ಯ, ವಚನಸಾಹಿತ್ಯ ಇತ್ಯಾದಿ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಸೀತಾ ಗುಡೂರ್ ಒಬ್ಬ ಉತ್ಸಾಹಿ ಶಿಕ್ಷಕಿ. ನಗರದ ಒಳ ಮತ್ತು ಹೊರವಲಯದ ಸಂಸ್ಥೆಗಳಲ್ಲಿ ಕೆಲಸಮಾಡಿರುವ ಅವರ ಅನುಭವ ಹೀಗಿದೆ. ಎಂದಿನಂತೆ ಓದಿ ನಿಮ್ಮ ಅಭಿಪ್ರಾಯ ತಿಳಿಸಿ. – ಸಂಪಾದಕ.
*****
ನಾವು ಕೆಲಸ ಮಾಡುತ್ತಿರುವ ಕ್ಷೇತ್ರ ಯಾವುದೇ ಆಗಿರಲಿ, ಮೊತ್ತಮೊದಲಿಗೆ ಅದು ನಮ್ಮ ಆಸಕ್ತಿಯ ಕ್ಷೇತ್ರವಾಗಿರಬೇಕು. ಏಕೆಂದರೆ, ಮೂಲಭೂತವಾಗಿ ಆಸಕ್ತಿಯೇ ಎಲ್ಲವನ್ನು ಕಲಿತುಕೊಳ್ಳಲು, ಕಲಿಸಲು ಪ್ರೇರೇಪಿಸುತ್ತದೆ. ರಾಷ್ಟ್ರಕವಿ ಶ್ರೀ ಜಿಎಸ್ ಶಿವರುದ್ರಪ್ಪ ಅವರು ಹೇಳುವಂತೆ "ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ? ….. ಬರಿ ಪದಕ್ಕೆ ಪದ ಜೊತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೆ?" ಈ ಕವನದ ಉದ್ದಕ್ಕೂ ಕಾಣುವ ’ಪ್ರೀತಿ’ ಆಸಕ್ತಿಯ ರೂಪವೇ ಆಗಿದೆ. ಕಲಿಯುವ, ಕೆಲಸ ಮಾಡುವ, ಕಲಿಸುವ ಬಗ್ಗೆ ಪ್ರೀತಿಯೇ ಇಲ್ಲದ ಮೇಲೆ ಶಿಕ್ಷಣದ ಉದ್ದೇಶವು ಸಾಧಿತವಾಗುವುದಿಲ್ಲ ಅಲ್ಲವೇ?
ಶಿಕ್ಷಣ ರಂಗದ ಇಂದಿನ ಸಮಸ್ಯೆಗಳ ಕಡೆಗೆ ಗಮನಹರಿಸಿದಾಗ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಬ್ಬರಲ್ಲೂ ಸಮಸ್ಯೆ ಇರುವುದು ಎದ್ದು ಕಾಣುವಂಥದ್ದು. ಮೊದಲಿಗೆ ಶಿಕ್ಷಕರನ್ನೇ ನಾವು ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ. ಏಕೆಂದರೆ, ಅರಿಯದ ವಿದ್ಯಾರ್ಥಿಗಳಿಗೆ ಎಲ್ಲವನ್ನೂ ಹಂತ ಹಂತವಾಗಿ ಕಲಿಸುವ ದೊಡ್ಡ ಹೊಣೆಗಾರಿಕೆ ಶಿಕ್ಷಕರದೇ. ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣದ ಭದ್ರಬುನಾದಿ ಬೀಳಬೇಕಾದದ್ದು ಅತ್ಯಗತ್ಯ. ಇತ್ತೀಚಿನ ಕೆಲವು ವರ್ಷಗಳಲ್ಲಿ ಪ್ರಾಥಮಿಕ ಹಂತದಲ್ಲಿ ಭಾಷಾ ವಿಷಯಗಳನ್ನು ಕಲಿಸುವಲ್ಲಿ ದಿವ್ಯನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಎಳೆಯ ವಯೋಮಾನದ ಚಂಚಲ ಮನಸ್ಥಿತಿಯ ಮಕ್ಕಳಿಗೆ ಕನ್ನಡ (ಅಥವಾ ಯಾವುದೇ) ಭಾಷೆಯನ್ನು ಹೇಳಿಕೊಡುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಸ್ವತಃ ಶಿಕ್ಷಕರು ಪಾಠ ಮಾಡುವಾಗ ಶುದ್ಧ ಗ್ರಾಂಥಿಕ ಭಾಷೆಯ ಬಳಕೆ, ಸ್ಪಷ್ಟ ಉಚ್ಚಾರಣೆ, ಶುದ್ಧ ಹಾಗೂ ಸ್ಪಷ್ಟ ಬರವಣಿಗೆಗಳನ್ನು ಮೈಗೂಡಿಸಿಕೊಂಡಿರಬೇಕಾಗುತ್ತದೆ. ಆದರೆ ಜೀವನೋಪಾಯಕ್ಕಾಗಿ ಯಾವುದೋ ಒಂದು ನೌಕರಿಯನ್ನು ಮಾಡಬೇಕಾಗಿ ಬಂದ ಅನಿವಾರ್ಯತೆಯಲ್ಲಿ ಎಲ್ಲಿಯೂ ಸಲ್ಲದವರು ಶಿಕ್ಷಣ ಕ್ಷೇತ್ರಕ್ಕೆ ಸಂದಾಗ, ಅವರಲ್ಲಿ ಅಧ್ಯಯನ-ಅಧ್ಯಾಪನಗಳ ಕಡೆಗೆ ಬದ್ಧತೆ ಕಡಿಮೆಯಾಗುವ ಸಾಧ್ಯತೆಯೂ ಇಲ್ಲದಿಲ್ಲ. ಇದಕ್ಕೆ ಅಪವಾದ ಎನಿಸುವವರು ಸಾಕಷ್ಟು ಜನ ಅಧ್ಯಾಪಕರು ಇದ್ದಾರೆ ಎನ್ನುವುದೇ ಸಂತೋಷದ ಸಂಗತಿ.
ಇನ್ನು ಉಪನ್ಯಾಸಕರು ಕನ್ನಡ ಭಾಷಾ ಐಚ್ಛಿಕ ವಿಷಯವನ್ನು ಪಾಠ ಮಾಡಬೇಕೆಂದರೆ ಅವರ ಸಾಹಿತ್ಯದ ಅಧ್ಯಯನದ ವ್ಯಾಪ್ತಿ ದೊಡ್ಡದಿರಬೇಕಾಗುತ್ತದೆ. ಬರಿಯ ಕನ್ನಡವೊಂದೇ ಅಲ್ಲದೇ, ಅದರಲ್ಲಿ ಹಾಸುಹೊಕ್ಕಾಗಿರುವ ಇತರ ಭಾಷೆಗಳ ಕೊಡುಗೆಗಳ ಬಗ್ಗೆ ಸ್ವಲ್ಪವಾದರೂ ಅರಿವಿರಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸಂಸ್ಕೃತ ಭಾಷೆಯ ಸ್ವಲ್ಪಮಟ್ಟಿಗಿನ ಅರಿವು ಮತ್ತು ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕನ್ನಡ-ಸಂಸ್ಕೃತ ಭಾಷೆಗಳ ಅವಿನಾಭಾವ ಸಂಬಂಧದ ತಿಳಿವು ಇವು ಉಪನ್ಯಾಸಕರಲ್ಲಿ ಕಡಿಮೆಯಾಗುತ್ತಿರುವುದು ಖೇದಕರ. ಸಂಸ್ಕೃತವನ್ನು ದೂಷಿಸುವವರು ಕನ್ನಡದ ಆದಿಕವಿ ಪಂಪನಿಂದ ಹಿಡಿದು ಕುವೆಂಪು ಅವರ ತನಕ ಕಾವ್ಯವನ್ನು ಹೇಗೆ ತಾನೇ ಪಾಠ ಮಾಡಬಲ್ಲರು? ಕನ್ನಡ-ಸಂಸ್ಕೃತ ಭಾಷಾಸಮನ್ವಯದ ಕಾರಣದಿಂದ ಹುಟ್ಟಿ ಬಂದ ಈ ಅಮೂಲ್ಯ ಕೃತಿರತ್ನಗಳನ್ನು ನಿರಾಕರಿಸಲು ಸಾಧ್ಯವೇ? ಪಾಠ ಮಾಡುವ ನಾವು ಮೊದಲು ಸರಿಯಾಗಿ ಅಧ್ಯಯನ ಮಾಡಿದರೆ ಮಾತ್ರ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗದಂತೆ ಹೇಳಬಹುದು ಅನ್ನುವುದರಲ್ಲಿ ಎರಡು ಮಾತಿಲ್ಲ.
ಭಾಷೆಯನ್ನು ಕಲಿಯುವಾಗ ಮಕ್ಕಳು ಮಾಡುವ ತಪ್ಪುಗಳನ್ನು ಆರಂಭದಲ್ಲೇ ತಿದ್ದದೇ ಹೋದಾಗ ಅವರು ಪ್ರೌಢ ಶಿಕ್ಷಣ ಮುಗಿಯುವವರೆಗೂ ಹಾಗೆ ಉಳಿದುಬಿಡುತ್ತಾರೆ. ಪ್ರಥಮ ಪಿಯುಸಿಗೆ ಸೇರುವಾಗ ಬಹಳಷ್ಟು ವಿದ್ಯಾರ್ಥಿಗಳಿಗೆ ತಮ್ಮ ಹೆಸರನ್ನು ಬರೆಯಲೂ ಬರುವುದಿಲ್ಲ ಎಂದು ನಾನು ಹೇಳಿದರೆ ನೀವು ನಂಬಲಿಕ್ಕಿಲ್ಲ. ಹೆಚ್ಚುಪಾಲು ಮಕ್ಕಳು ಹ್ರಸ್ವ-ದೀರ್ಘ, ಸ್ವರ-ವ್ಯಂಜನ, ಅಲ್ಪಪ್ರಾಣ-ಮಹಾಪ್ರಾಣ, ಅ – ಹಕಾರಗಳ ಬಳಕೆ ಇತ್ಯಾದಿಗಳ ವ್ಯತ್ಯಾಸವೇ ತಿಳಿಯದೇ, ಉಚ್ಚಾರಣೆ ಮತ್ತು ಬರವಣಿಗೆ ಎರಡರಲ್ಲೂ ಬಹಳ ಹಿಂದುಳಿದವರು ಆಗಿರುತ್ತಾರೆ. ಈ ಹಂತದಲ್ಲಿ ನಾವು ಏನನ್ನು ಮಾಡಲು ಸಾಧ್ಯ? ಕಾಲೇಜು ತರಗತಿಗಳು ಆರಂಭವಾದ ಮೊದಲ ಎರಡು ವಾರಗಳಲ್ಲಿ ವರ್ಣಮಾಲೆಯನ್ನು ಬರೆಸುವ, ಧ್ವನ್ಯಂಗಗಳ ಬಗ್ಗೆ ವಿವರಿಸಿ, ಉಚ್ಚಾರಣೆಯ ಬಗ್ಗೆ ಪರಿಚಯ ಮಾಡಿಕೊಡುವ ಕೆಲಸವೇ ಆಗುತ್ತದೆ. ಆದಾಗಿಯೂ ಈ ಮಕ್ಕಳಿಗೆ ಆಸಕ್ತಿಯಿಂದ ಕೇಳುವಷ್ಟು ತಾಳ್ಮೆ ಇರುವುದೇ ಇಲ್ಲ. ಕಾಲೇಜು ಜೀವನದಲ್ಲಿ ಕಲಿಯುವುದಕ್ಕಿಂತ ಹೆಚ್ಚು ಎಂಜಾಯ್ ಮಾಡಬೇಕು ಎಂಬ ಮನಸ್ಥಿತಿಯವರೇ ಈನಡುವೆ ಬಹಳ. ತರಗತಿಯ 90 ವಿದ್ಯಾರ್ಥಿಗಳಲ್ಲಿ 15-20 ವಿದ್ಯಾರ್ಥಿಗಳು ಉತ್ತಮ ಗ್ರಹಿಕೆಯ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಉಳಿದವರಲ್ಲಿ ಸುಮಾರು 40 ವಿದ್ಯಾರ್ಥಿಗಳಿಗೆ ಪದೇಪದೇ ಹೇಳಿ ಬರೆಸಿದಾಗ ಸ್ವಲ್ಪ ಸುಧಾರಿಸುತ್ತಾರೆ. ಮಿಕ್ಕವರು ನಾವೆಷ್ಟೇ ಪ್ರಯತ್ನಪಟ್ಟರೂ ಯಾವುದೇ ಪ್ರತಿಕ್ರಿಯೆ ತೋರದೆಯೇ ಇರುತ್ತಾರೆ.
ವಿದ್ಯಾರ್ಥಿಗಳ ಈ ವರ್ತನೆಗೆ ಕೇವಲ ಅವರ ಉಡಾಫೆಯ ಮನೋಭಾವವನ್ನಷ್ಟೇ ದೂಷಿಸಲಾಗದು, ಅವರವರ ಮನೆಯ ಹಾಗೂ ಬೆಳೆದು ಬಂದ ಪರಿಸರವೂ ಮುಖ್ಯ ಕಾರಣವೆಂಬುದು ವೇದ್ಯ. ನಗರಗಳಲ್ಲಿ ತಾಯಿ-ತಂದೆಯರು ವಿದ್ಯಾವಂತರಾದರೂ, ಇಬ್ಬರೂ ಕೆಲಸ ಮಾಡುತ್ತಿರುವ ಕಾರಣಕ್ಕಾಗಿ ಸಮಯದ ಅಭಾವದಿಂದ ಅವರಿಗೆ ಮಕ್ಕಳ ಕಡೆಗೆ ಗಮನ ಹರಿಸಲಾಗಿರುವುದಿಲ್ಲ. ಇನ್ನು ಗ್ರಾಮಾಂತರ ಮಕ್ಕಳ ತಂದೆತಾಯಿಯರೋ ಅನಕ್ಷರಸ್ಥರು, ಕೂಲಿ-ನಾಲಿಗಳಿಗೆ ಹೋಗುವವರು ಇರುತ್ತಾರೆ; ಎಷ್ಟೋ ಕುಟುಂಬಗಳಲ್ಲಿ ಕುಡಿತದ ವ್ಯಸನ, ಕೌಟುಂಬಿಕ ಕಲಹ, ಅನಾಥ ಮಕ್ಕಳು ಯಾರದೋ ಆಶ್ರಯದಲ್ಲಿದ್ದು ಓದುತ್ತಿರುವವರು, ಕೆಲಸದ ಮಧ್ಯೆ ಓದಲು ಸಮಯವೇ ಸಿಗದಿರುವುದು ಮುಂತಾದ ಕಾರಣಗಳೆಲ್ಲ ಗಮನಕ್ಕೆ ಬರುತ್ತಿರುತ್ತವೆ. ಈ ಎಲ್ಲಾ ಗಂಭೀರ ಸಮಸ್ಯೆಗಳ ಮಧ್ಯೆಯೂ ಜೀವನದಲ್ಲಿ ಸಾಧಿಸುವ ಗುರಿಯಿಟ್ಟುಕೊಂಡು ಓದುವ ಮಕ್ಕಳೇ ನಮಗೆ ನಿರಂತರ ಸ್ಫೂರ್ತಿ. ನಿಜ ಹೇಳಬೇಕೆಂದರೆ, ಒಂದು ತರಗತಿಯಲ್ಲಿ ಇಂಥವರು ಒಂದಿಬ್ಬರು ಇದ್ದರೂ ಪಾಠ ಮಾಡಲು ಉತ್ಸಾಹವಿರುತ್ತದೆ.
ಪಠ್ಯಕ್ಕೆ ಸಂಬಂಧಿಸಿದಂತೆ ಕಲಿಯುವ ಕುತೂಹಲ ಆಸಕ್ತಿ ಪ್ರಯತ್ನದಲ್ಲಿ ಇದ್ದಾಗ ನಮಗೂ ಸ್ವತಹ ಕಲಿಯುವ, ಆ ಮೂಲಕ ಕಲಿಸುವ ಲವಲವಿಕೆ ಇರುತ್ತದೆ ಇತ್ತೀಚಿನ ಕೆಲವು ವರ್ಷಗಳಲ್ಲಿ ನಮ್ಮ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ, ಕನ್ನಡದ ಪ್ರಾಚೀನ ಕವಿಗಳು, ಅವರ ಕಾವ್ಯಗಳು ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ, ಉಪನ್ಯಾಸಕರಿಗೂ ಆಸಕ್ತಿ ತಿಳುವಳಿಕೆ ಇಲ್ಲದಿರುವುದು ನಿಜಕ್ಕೂ ಖೇದದ ಸಂಗತಿ. ಬಹುತೇಕ ವಿದ್ಯಾರ್ಥಿಗಳು ಮನೆಯಲ್ಲಿ ರಾಮಾಯಣ ಮಹಾಭಾರತ ಕಥೆಗಳನ್ನು ಕೇಳಿರುವುದಿಲ್ಲ; ಶಾಲೆಗೆ ಸೇರಿದಾಗ ಕಲಿತದ್ದಷ್ಟೋ ಅಷ್ಟೇ. ವಿಭಿನ್ನ ಯುಗದ ಪಾತ್ರಗಳನ್ನು ಘಟನೆಗಳನ್ನು ಸೇರಿಸಿ ಉತ್ತರ ಬರೆಯುವುದನ್ನು ನೋಡಿದಾಗ, ಆ ಕ್ಷಣಕ್ಕೆ ಅದು ನಗುತರಿಸಿದರೂ ಮನಸ್ಸಿಗೆ ದುಃಖವಾಗುತ್ತದೆ. ಪಾಠ ಮಾಡುವಾಗ ಕೇಳಿಸಿಕೊಳ್ಳದ, ಸ್ವಂತ ಅಧ್ಯಯನ ಮಾಡದ, ಉಚ್ಚಾರ-ಬರವಣಿಗೆಯ ತಪ್ಪನ್ನು ತಿದ್ದಿಕೊಳ್ಳದ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯವೇ?
ನನ್ನ ಇಷ್ಟು ವರ್ಷಗಳ ವೃತ್ತಿ ಜೀವನದ ಅನುಭವದ ಪ್ರಕಾರ ಪ್ರಾಥಮಿಕ ಶಿಕ್ಷಣವು ಬಹಳ ಮುಖ್ಯ. ಅಲ್ಲಿ ಹಾಕಿದ ಬುನಾದಿ ಸರಿಯಾದರೆ, ಮುಂದೆ ಪ್ರೌಢಶಾಲೆಯ ಹಾಗೂ ಪದವೀಪೂರ್ವ ಹಂತದಲ್ಲಿ ಅವರನ್ನು ಸಾಧನೆ ಹಾದಿಯಲ್ಲಿ ಕರೆದೊಯ್ಯುವುದು ಸುಲಭ. ಇಲ್ಲವಾದರೆ ಎರಡು ವರ್ಷಗಳ ಪದವಿಪೂರ್ವ ಹಂತದ ಕಲಿಕೆ ಅವರ ಕಾಗುಣಿತವನ್ನು ತಿದ್ದಿ, ಉಚ್ಚಾರಣೆಯನ್ನು ಸ್ಪಷ್ಟಗೊಳಿಸಿ, ಸರಿಯಾದ ವಾಕ್ಯರಚನೆ ಮಾಡುವ ಸಾಮರ್ಥ್ಯವನ್ನು ಬೆಳೆಸುವ ಕೆಲಸಕ್ಕೆ ಮಾತ್ರ ಸೀಮಿತವಾದರೆ, ನಾವು ನಮ್ಮ ಪಠ್ಯದೊಳಗಿನ ಕಾವ್ಯದ ಸೌಂದರ್ಯವನ್ನು, ಗದ್ಯಪಾಠಗಳ ಮಹತ್ವವನ್ನು ಮನಸ್ಸಿಗೆ ತೃಪ್ತಿಯಾಗುವಂತೆ ಬೋಧಿಸುವುದು ಹೇಗೆ?
ನಾವು ಉಪನ್ಯಾಸಕರಾಗಿ ಎಷ್ಟೇ ಪ್ರಯತ್ನಪಟ್ಟರೂ, ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ಉತ್ಸಾಹ ಆಸಕ್ತಿ ಬೆಳೆಸುವಲ್ಲಿ ಶ್ರಮವಹಿಸಿದರೂ, ಕೊನೆಗೆ ಸರಿಯಾಗಿ ಓದಬೇಕಾದ ಕರ್ತವ್ಯ ವಿದ್ಯಾರ್ಥಿಯದೇ ಆಗುತ್ತದೆ. ಕುದುರೆಯನ್ನು ನೀರಿನವರೆಗೆ ಕರೆದುಕೊಂಡು ಹೋಗಬಹುದು, ನೀರಿನ ಹತ್ತಿರ ಬಗ್ಗಿಸಬಹುದು, ಆದರೆ ನೀರು ಕುಡಿಯಬೇಕಾದದ್ದು ಕುದುರೆಯೇ ಅಲ್ಲವೇ?
ಒಟ್ಟಾರೆ ಹೇಳಬೇಕೆಂದರೆ, ಶಿಕ್ಷಣಕ್ಷೇತ್ರದ ಯಶಸ್ಸು ವಿದ್ಯಾರ್ಥಿ-ಶಿಕ್ಷಕ-ಪೋಷಕ ಈ ಮೂರು ಕಾಲುಗಳ ಮೇಲೆ ನಿಂತಿದೆ, ಮೂವರೂ ಮುಖ್ಯ. ಇವರೆಲ್ಲರ ಪ್ರಯತ್ನವು ಸೇರಿದಾಗಲೇ ಸಫಲತೆ ದಕ್ಕುವುದು.
- ಸೀತಾ ಗುಡೂರ್, ಬೆಂಗಳೂರು.
*********************************************
ಶ್ರೀಮತಿ ಗುಡೂರ್ ಅವರ ಅನುಭವದ ಮೂಸೆಯಿಂದ ಬಂದ ಲೇಖನ. ಅವರ ಅಪಾರ ಕನ್ನಡಪ್ರೇಮ, ವಿಜ್ಞಾನದಿಂದ ಕನ್ನಡ ಕಲಿಸಲಿಕ್ಕೆ ಆಯ್ದುಕೊಂಡದ್ದು ತೋರಿಸುತ್ತದೆ. ಆದರೆ ಉನ್ನತ ಶಿಕ್ಷಣವನ್ನು ಆರಿಸಿಕೊಂಡವರಲ್ಲಿ ೧/೩ ಅಂಶದವರ ಕನ್ನಡ ಜ್ಞಾನ ಎಷ್ಟು ಕೆಳಮಟ್ಟದ್ದು ಅಂತ ತಿಳಿದು ಆಶ್ಚರ್ಯವಾಗದಿದ್ದರೂ ನಿರಾಶೆಯಾಯಿತು. ಇನ್ನು ಮುಂದಿನ ಪೀಳಿಗೆಯವರ ಗತಿ ಏನೋ! ಕನ್ನಡದ ಸ್ಥಿತಿಯ ಬಗ್ಗೆ ಭವಿಷ್ಯದ ಬಗ್ಗೆ ಖೇದವಾಯಿತು. ಅವರ ಕಳಕಳಿ ಚೇತೋಹಾರಿ. ಒಂದು ವಾಕ್ಯ ಮನತಟ್ಟಿತು. ಇಡೀ ಕ್ಲಾಸಿನಲ್ಲಿ ಒಬ್ಬರೋ ಇಬ್ಬರೋ ಆಸ್ಥೆಯುಳ್ಳವರಿದ್ದರೆ ಸಾಕು ,ಕಲಿಸಲು ಹುರುಪು ಬರುತ್ತದೆ, ಉತ್ಸಾಹ ತರುತ್ತದೆ ಅನ್ನುವ ಮಾತು ಪೂರ್ತಿ ಸತ್ಯ. ನಾವು ಸಹ ಅದನ್ನು ಅನುಭಸಿದ್ದೆವಲ್ಲವೇ, ಕ್ಲಿನಿಕಲ್, ಬೆಡ್ ಸೆಡ್ ಟೀಚಿಂಗ್ ದಲ್ಲಿ? ಲೇಖಕಿಯನ್ನೂ ಅವರಿಗೆ ಬರೆಯಲು ಆಸ್ಪದ ಕೊಟ್ಟ ಎಲ್ಲೆನ್ ಅವರನ್ನೂ ಅಭಿನಂದಿಸ ಬೇಕು. ಶ್ರೀವತ್ಸ ದೇಸಾಯಿ
LikeLike