ಕುದುರೆಯ ತಂದಿವ್ನಿ ಜೀನಾವ ಬಿಗಿದಿವ್ನಿ

ನಮಸ್ಕಾರ ಅನಿವಾಸಿ ಬಂಧುಗಳೇ.
 ಋತುಚಕ್ರ ತಿರುಗಿ ಚೈತ್ರ-ವೈಶಾಖಗಳು ಕಳೆದು,ಇನ್ನೇನು ಆಷಾಢ ಕಾಲಿಡುತ್ತಿದೆ. ಈ ಆಷಾಢದ ಗಾಳಿ-ಗಂಧಗಳಿಗೂ, ಆಗೀಗ ತಟಪಟ ಸುರಿವ ಮಳೆಹನಿಗಳಿಗೂ ಮಾನವ ಭಾವಕೋಶಕ್ಕೂ ಅದೆಂಥದೋ ನಿಕಟ ಸಂಬಂಧವಿದೆಯೆಂದು ನನಗನ್ನಿಸುತ್ತದೆ.  ನಮ್ಮ ಮೇಘದೂತದ ಯಕ್ಷನಿಗೂ ‘ಆಷಾಢಸ್ಯ ಪ್ರಥಮ ದಿವಸೇ’ ತನ್ನ ಯಕ್ಷಿಣಿಯ ನೆನಪು ಇನ್ನಿಲ್ಲದಂತೆ ಕಾಡಿ ಮೇಘಸಂದೇಶ ಕಳಿಸಿದ್ದು. ಇನ್ನು ಹೆಣ್ಣುಮಕ್ಕಳಿಗಂತೂ ಆಷಾಢ ಬಂದರೆ ತೌರ ನೆನಪು ಕಾಡದೇ ಇರದು. ‘ಆಷಾಢ ಮಾಸ ಬಂದೈತವ್ವ, ಅಣ್ಣ ಬರಲಿಲ್ಲ ಕರಿಯಾಕ’ ಅಂತ ಹಲುಬುತ್ತದೆ ಹೆಣ್ಮನ. ಜಾನಪದದಲ್ಲಿ ಅಣ್ಣ ತಂಗಿಯನ್ನು ಕರೆಯಲು ಬರುವ ಹಲವಾರು ಹಾಡುಗಳಿವೆ. ಪ್ರತಿಸಲ ಕೇಳಿದಾಗಲೂ ಅಂತ:ಕರಣವನ್ನು ಕಲಕಿ ಕಣ್ಣಂಚನ್ನು ಒದ್ದೆ ಮಾಡುವಂಥವು. ‘ಕುದುರೆಯ ತಂದಿವ್ನಿ, ಜೀನಾವ ಬಿಗಿದಿವ್ನಿ’ ಅಂಥದೇ ಸಾಲಿಗೆ ಸೇರುವ ನನ್ನಿಷ್ಟದ ಹಾಡು. ಇಲ್ಲಿ ಅಣ್ಣನೊಬ್ಬ ತಂಗಿಯನ್ನು ಮದುವೆಗೆ ಕರೆದೊಯ್ಯಬಂದಿದ್ದಾನೆ. ಯಾರ ಮದುವೆ ಎನ್ನುವ ಸ್ಪಷ್ಟತೆಯಿಲ್ಲವಾದರೂ ಮಗಳದೋ, ಮಗನದೋ ಇದ್ದೀತು ಅಥವಾ ಅವನದೇ ಇದ್ದರೂ ಇರಬಹುದು.( ತಂಗಿಯ ಮದುವೆಯಾದ ಮೇಲೆಯೇ ಅಣ್ಣಂದಿರ ಮದುವೆಯಾಗುವುದು ಸರ್ವೇಸಾಮಾನ್ಯ ಸಂಗತಿ) ಆದರೆ ಹೆತ್ತವರಿಲ್ಲದ ತೌರಿಗೆ ಹೊರಡಲು ಅವಳಿಗೇನೋ ಅಳುಕು. ಹೋಗದಿರುವುದಕ್ಕೆಕುಂಟುನೆಪ ಹೇಳುತ್ತಿದ್ದಾಳೆ. ಆದರೆ ಇದನ್ನು ಕೇಳಿದಾಗೊಮ್ಮೆ ನನಗೆ ಆ ಅಣ್ಣನ ಬಗ್ಗೆ ‘ಪಾಪ’ ಎನಿಸುತ್ತದೆ. ಹಾಗೆ ನೆಪ ಹೇಳಿ ನಿರಾಕರಿಸಿ ತನ್ನನ್ನು ತೀರ ಪರಕೀಯನನ್ನಾಗಿಸಿದ್ದು ಅವನ ನೋವಲ್ಲವೇ? ಅವಳಂತೆಯೇ ಅವನಿಗೂ ಭಾವತುಮುಲಗಳಿರಲಾರವೇ? ಅವಳದಕ್ಕೆ, ಅವಳ ಹಾಡಿಗೆ  ಪರ್ಯಾಯವಾಗಿ ಹೀಗೂ ಇದ್ದಿರಬಹುದು ಎಂದು ಬಲವಾಗಿ ಅನ್ನಿಸುತ್ತದೆ. ಹೆಣ್ಣಾದರೇನು-ಗಂಡಾದರೇನು ತಾಯಿ- ತೌರು ಎಲ್ಲರಿಗೂ ಬೇಕು. ಮಗಳಂತೆಯೇ ಮಗನೂ ಅಮ್ಮನಿಗೆ ಆತುಕೊಂಡು ಅಪ್ಪನಿಗೆ ಜೋತುಬಿದ್ದವನೇ ಅಲ್ಲವೇ? ಅವನೂ ತಂಗಿಗೆ ಹೀಗೆ ಹಾಡಬಹುದಲ್ಲವೇ? 
ಕುದುರೆಯ ತಂದಿವ್ನಿ ಜೀನಾವ ಬಿಗಿದಿವ್ನಿ ಬರಬೇಕು ತಂಗಿ ಮದುವಿಗೆ ||
ಕುಂಟು ನೆವನ ಬ್ಯಾಡ ಸುಳ್ಳು ನೆಪಗಳು ಬ್ಯಾಡ ಒಲ್ಲೆಂದು ಹಟಮಾಡಿ ಜೀವಂತ ಕೊಲಬ್ಯಾಡ
ಬರಬೇಕು ತಂಗಿ ಮದುವಿಗೆ||
ತಾಯಿಲ್ಲದ ತೌರೆಂದು ಕಳ್ಳಬಳ್ಳಿ ಹರಿಬ್ಯಾಡ ಬೆನ್ನಿಗೆ ಬಿದ್ದವಳೇ ನನ್ನ ಬೆನ್ನು ಬಿಡಬ್ಯಾಡ ನೀನೇನೇ ನನಗೂನೂ ತೌರೀಗ
ಬರಬೇಕು ತಂಗಿ ಮದುವಿಗೆ||
ಉಣ್ಣೆಂಬ ತಾಯಿಲ್ಲ ಏಳೆಂಬ ತಂದಿಲ್ಲ  ಕಲಕಲ ಮಾತಿಲ್ಲ ಗಲಗಲ ನಗುವಿಲ್ಲ ಮಸಣದ ಮನೆಯಂತೆ ಮನಸವ್ವ
ಬರಬೇಕು ತಂಗಿ ಮದುವಿಗೆ||
ಮಲ್ಲಿಗಿ ಅರಳ್ಯಾವು ಕೋಗಿಲೆ ಕೂಗ್ಯಾವು ಹಿತ್ತಲ ಜೋಕಾಲಿ ಜೀಕ್ಯಾವು ಹೊಚ್ಚಲಿನ ರಂಗೋಲಿ ನಕ್ಕಾವು
ಬರಬೇಕು ತಂಗಿ ಮದುವಿಗೆ||
ಅವ್ವನ ಕೈರುಚಿ ಬಾನಕ್ಕ ಬಂದಾವು ಕಂಬದ ಗೊಂಬಿಗೆ  ಹೊಸಜೀವ ಬಂದಾವು ಕಲ್ಲಾದ ದೇವರು ನಕ್ಕಾವು
ಬರಬೇಕು ತಂಗಿ ಮದುವಿಗೆ||
ಬಾರವ್ವ ತಂಗ್ಯೆವ್ವ, ಬಾರವ್ವ ತಾಯವ್ವ ಹಬ್ಬದ ಸಂಭ್ರಮ ತಾರವ್ವ ಮನಿಮಗಳು ನೀನೀಗ ಮನೆಕಾಯ್ವ ತಾಯಾಗಿ ಹರಸವ್ವ 
ಬರಬೇಕು ತಂಗಿ ಮದುವಿಗೆ||

~~ ಗೌರಿಪ್ರಸನ್ನ

One thought on “ಕುದುರೆಯ ತಂದಿವ್ನಿ ಜೀನಾವ ಬಿಗಿದಿವ್ನಿ

  1. ‘ಶುಕ್ರವಾರದ ಬೆಳಕ್ ಹರಿದೈತಿ ಇನ್ನೂ ಯಾಕ ಬಂದಿಲ್ಲ’ ಅನ್ನುವಷ್ಟರಲ್ಲಿ ತಂಗಿ ಅಣ್ಣನ ನೆನಪುಗಳು ತವರಿಗೆ ಹಂಬಲಿಸಿ ಅಣ್ಣನ ಕಣ್ಣು ಹಸಿಮಾಡುವಂಥ ಜಾನಪದ ಶೈಲಿಯ ಹಾಡನ್ನು ಕಟ್ಟಿ ಕೊಟ್ಟಿದ್ದಾರೆ ಗೌರಿಯವರು. ಕಾಯಿಸಿದರೆ ತಾನೇ ರುಚಿ ಹೆಚ್ಚು? ನೇರ ಹೃದಯಕ್ಕೆ ತಾಗಿತು. ಅಭಿನಂದನೆಗಳು.

    Like

Leave a Reply

Your email address will not be published. Required fields are marked *