ವಿಜಯ್ ಅವರ 'ಆಮಿಷ' ಮತ್ತು ಡಾ ಗುಡೂರ್ ಅವರ 'ದರ್ಪಣ ಸುಂದರಿ' ಎಂಬ ಎರಡು ಕವಿತೆಗಳು ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಕಂಡುಬರುವ ಶೃಂಗಾರ ರಸದ ಪ್ರತಿನಿಧಿಗಳಾಗಿವೆ. ಒಂದುವರೆ ಸಾವಿರ ವರುಷಗಳ ಹಿಂದೆ ಕಾಳಿದಾಸನ ಕೃತಿಗಳಲ್ಲಿ ಮೂಡಿಬಂದಿರುವ ಶೃಂಗಾರ ರಸ ಇಂದಿಗೂ ಕಾವ್ಯವಸ್ತುವಾಗಿ ಎಲ್ಲರ ಆಸಕ್ತಿಯನ್ನು ಕೆರಳಿಸಿದೆ. ಡಿವಿಜಿ ಅವರ ಅಂತಃಪುರಗೀತೆಗಳಲ್ಲಿ ಶೃಂಗಾರ ರಸ ಚೆನ್ನಕೇಶವನನ್ನು ಒಲಿಸುವ ಭಕ್ತಿ ಭಾವವೂ ಆಗಿ ಪರಿಣಮಿಸಿದೆ. ಈ ಗೀತೆಗಳಲ್ಲಿ ತರುಣಿಯ ಹಾವ, ಭಾವ, ನಟನೆ, ನೃತ್ಯ, ಕೇಶ, ವೇಷ, ಲಾವಣ್ಯಗಳು ಸುಂದರವಾಗಿ ಅಭಿವ್ಯಕ್ತಗೊಂಡಿದೆ. ಬೇಲೂರಿನ ದೇವಸ್ಥಾನದಲ್ಲಿ ಶಿಲ್ಪಕಲೆಯ ರೂಪದಲ್ಲಿ ಇದೆ ಶೃಂಗಾರ ರಸ ಇನ್ನೊಂದು ಆಯಾಮವನ್ನು ಪಡೆದುಕೊಂಡಿವೆ. ಪ್ರೇಮ, ಕಾಮ, ಪ್ರಕೃತಿ-ಪುರುಷ ಸಮ್ಮಿಲನ ವಿಷಯಗಳನ್ನು ಕುರಿತು ಕನ್ನಡದ ಅನೇಕ ಖ್ಯಾತ ಕವಿಗಳು ಬರೆದಿದ್ದರೆ. ಕುವೆಂಪು ಅವರ "ಬಾ ಚಕೋರಿ ಚಂದ್ರ ಮಂಚಕೆ, ಜೊನ್ನ ಜೇನಿಗೆ ಬಾಯಾರಿದೆ ಚಕೋರ ಚುಂಬನ, ನಿಕುಂಜ ರತಿವನ ಮದನ ಯಾಗಕೆ, ಅನಂಗ ರಕ್ತಿಯ ಬಿಂಬ ಭೋಗಕೆ, ಕಾಂಕ್ಷಿಯಾಗಿದೆ ನಗ್ನ ಯಾಗಕೆ" ಎಂಬ ಸಾಲುಗಳಲ್ಲಿ ಅನುರಕ್ತಿಯ ಆಕಾಂಕ್ಷೆಗಳು ಅಡಗಿವೆ. "ನೀನನಗೆ ನಾನಿನಗೆ ಜೇನಾಗುವ, ರಸದೇವ ಗಂಗೆಯಲಿ ಮೀನಾಗುವ, ರತಿ ರೂಪ ಭಗವತಿಗೆ ಮುಡಿಪಾಗುವ" ಎಂಬ ಕವನ ದಾಂಪತ್ಯ ಜೀವನದ ಸಿಹಿ ಸಂಬಂಧದ ಪ್ರತೀಕವಾಗಿದೆ ಮತ್ತು ಆ ಸಂಬಂಧದಲ್ಲಿನ ಒಂದು ಪಾವಿತ್ರ್ಯತೆಯನ್ನು ತೆರೆದಿಟ್ಟಿದೆ. ಜಿ.ಎಸ್.ಎಸ್ ಅವರ “ನೀನು ಮುಗಿಲು ನಾನು ನೆಲ, ನಿನ್ನ ಒಲವೇ ನನ್ನ ಬಲ, ನಮ್ಮಿಬ್ಬರ ಮಿಲನದಿಂದ ಉಲ್ಲಾಸವೇ ಶ್ಯಾಮಲಾ. “ನಾನಚಲದ ತುಟಿಯೆತ್ತುವೆ ನೀ ಮಳೆಯೊಳು ಮುತ್ತನೀಡುವೆ, ಹಸಿರಾಯಿತು ಹೂವಾಯಿತು ಚೆಲುವಾಯಿತು ಈ ನೆಲ”! ಎನ್ನುತ್ತಾ ಗಂಡು ಹೆಣ್ಣುಗಳ ಮಿಲನವನ್ನು ನಿಸರ್ಗದ ಮಿಲನಕ್ಕೆ ಪ್ರತಿಮೆಗಳಾಗಿ ಬಳಸಿದ್ದಾರೆ. ಕವಿ ಬಿ.ಆರ್.ಲಕ್ಷ್ಮಣ ರಾವ್ ಅವರು 'ಲಿಬಿಡೊ ಬಿಡುವುದಿಲ್ಲ' ಎಂಬ ಬಿಡಿ ಬರಹಗಳಲ್ಲಿ ಪುರುಷ-ಸ್ತ್ರೀ ಸಂಬಂಧವನ್ನು ಕವಿ- ಕವಿತೆ ಸಂಬಂಧಕ್ಕೆ ಹೋಲಿಸಿದ್ದಾರೆ. ಅವರದೇ ಒಂದು ಕವಿತೆಯ ಸಾಲು ಹೀಗಿದೆ; "ಕವಿ ವಿಶ್ವಾಮಿತ್ರನಿಗೂ ಖಾತ್ರಿ ತಪೋಭಂಗ, ಕವಿತೆ ಸ್ತ್ರೀ ಲಿಂಗ". ಕೊನೆಯದಾಗಿ, ಪ್ರೇಮ ಕಾಮ ವಿಚಾರಗಳನ್ನು ಸಾಹಿತ್ಯದಲ್ಲಿ ತಂದಾಗ ಸಭ್ಯತೆಗೂ ಮತ್ತು ಅಶ್ಲೀಲಕ್ಕೂ ಇರುವ ಅಂತರ ಅತಿ ಸೂಕ್ಷ್ಮ. ಹೀಗಿರುವಾಗ ನಮ್ಮ ಕವಿಗಳಾದ ವಿಜಯ್ ಮತ್ತು ಡಾ. ಗುಡೂರ್ ಈ ವಿಷಯಗಳನ್ನು ಹದವಾಗಿ ನಿಭಾಯಿಸಿದ್ದಾರೆ. ಗುಡೂರ್ ಅವರು 'ಆಮಿಷ' ಎಂಬ ವಿಜಯ್ ಅವರ ಕವನಕ್ಕೆ ಒಪ್ಪುವ ರೇಖಾಚಿತ್ರವನ್ನು ಬರೆದು ಅಂದಗೊಳಿಸಿದ್ದಾರೆ. ಈ ಕವನ ಗುಚ್ಛ ವ್ಯಾಲಂಟೈನ್ ಡೇ ಸಂಚಿಕೆಗೆ ಸೂಕ್ತವಾಗಿದ್ದಿರಬಹುದು ಅಲ್ಲಿಯವರೆಗೆ ಕಾಯುವ ತಾಳ್ಮೆ ಕವಿಗೂ ಮತ್ತು ಕವಿತೆಗೂ ಇರಲಿಲ್ಲ! ಹೀಗಾಗಿ ಇಂಗ್ಲೆಂಡಿನ ಬೇಸಗೆಯಲ್ಲಿ ತಂಗಾಳಿಯಂತೆ ಇವು ಮೂಡಿಬಂದಿದೆ. -ಸಂಪಾದಕ

ರೇಖಾ ಚಿತ್ರ – ಡಾ. ಗುಡೂರ್ ಅವರಿಂದ
ಆಮಿಷ - ಕವನ
ಕವಿ - ವಿಜಯ್ ನರಸಿಂಹ
ನಿನ್ನ
ಹಣೆಗೊಂದು ಮುತ್ತನಿಟ್ಟೆ
ಕಂಗಳು ಮುನಿದವು
ಕಂಗಳಿಗೆ ಮುತ್ತನಿಟ್ಟೆ
ಕೆನ್ನೆಗಳು ಮುನಿದವು
ಕೆನ್ನೆಗೆ ಮುತ್ತನಿಟ್ಟೆ
ಗದ್ದ ಮುನಿಯಿತು
ಗದ್ದಕೆ ಮುತ್ತನಿಟ್ಟೆ
ತುಟಿಗಳು ಮುನಿದವು
ತುಟಿಗಳ ಜೇನ ಸವಿದೆ
ಕೊರಳು ಮುನಿಯಿತು
ಕೊರಳ ಕಂಬಕೆ ಮುತ್ತನಿಟ್ಟೆ
ಮುನಿ-ಮುತ್ತಿನ ಮತ್ತಿನಾಟದಲಿ
ಮುಂದೇನಾಯಿತೆಂದು ತಿಳಿವಷ್ಟರಲ್ಲಿ
ನಿನ್ನೊಳಗೆ ನಾನು
ನನ್ನೊಳಗೆ ನೀನು
********************************************************

ದರ್ಪಣ ಸುಂದರಿ - ಕವನ ಕವಿ - ಡಾ. ಲಕ್ಷ್ಮೀನಾರಾಯಣ ಗುಡೂರ್ ಮೊಗವ ತೋರು ಬಾರೆ ಸಖಿ, ಕನ್ನಡಿಯೊಳೆನ್ನ ಮೊಗವ ತೋರು ಬಾರೆ ಸಖಿ || ಪ್ರಿಯಕರನ ಆಗಮನದ ನಿರೀಕ್ಷೆಯಲಿ ಕೆಂಪಾದ || ನಾಚಿಕೆಯೋ ಉತ್ಸಾಹವೋ ಒಂದೂ ನಾನು ಅರಿಯೆ | ಇರಲಾರೆ ಒಂದೆಡೆಗೆ ಅದುರುತಿದೆ ಮೈ ಬರಿಯೆ || ಪ್ರಿಯನ ತುಟಿ ಮುಟ್ಟದೆಯೇ ಕೆನ್ನೆ ಏತಕೆ ಕೆಂಪು | ಬರುವ ಮುನ್ನವೆ ನಾಸಿಕದಿ ಏಕೆ ನಲ್ಲನ ಕಂಪು || ಇರು ನೀನು ಹತ್ತಿರದಿ ಸಖಿ, ಅವ ಬರುವ ವರೆಗೆ | ಹೆಜ್ಜೆ ಸದ್ದಾದೊಡನೆ, ಎಳೆ ಪರದೆ, ಹೋಗು ನೀ ಹೊರಗೆ ||
***********************************************************
ಪ್ರಸಾದ್ ಅವರ ಸಂಪಾದಕೀಯ ಕನ್ನಡದ ಆಧುನಿಕ ಕಾವ್ಯ ಪರಂಪರೆಯಲ್ಲಿ ಶೃಂಗಾರ ಕಾವ್ಯದ ಇತಿಹಾಸದ ಅವಲೋಕನವನ್ನು ಓದಿದರೆ, ಪ್ರಸಾದ್ ಅವರ ಓದಿನ ಆಳ ಮತ್ತು ವ್ಯಾಪ್ತಿಯ ಅಂದಾಜು ಸಿಗುತ್ತದೆ. ಡಿವಿಜಿಯವರಿಂದ ಹಿಡಿದು ಬಿ ಆರ್ ಅವರ ಅತೀ ಇತ್ತೀಚಿನ `ಲಿಬಿಡೋ`ವರೆಗೂ ಬರೆದು ಮುಂಬರುವ `ಅನಿವಾಸಿ`ಗಳ ಎರಡು ಕವನಗಳ ಓದಿಗೆ ದಾರಿ ತೋರಿಸುತ್ತಾರೆ.
ಗುಡೂರ್ ಅವರೆ ರೇಖಾಚಿತ್ರ ಅರ್ಥಗರ್ಭಿತವಾಗಿದೆ, ನಾನಾರ್ಥಗಳನ್ನು ಕೊಡುತ್ತದೆ.
ವಿಜಯ ನರಸಿಂಹ ಅವರ ಕವನ್ ಸರಳ, ಆದರೆ ಶೃಂಗಾರಭರಿತ. ಮುತ್ತು ಮತ್ತು ಮುನಿಗಳ ಆಟದಲ್ಲಿ ಮುನಿಗೂ ಮತ್ತೇರುವುದರಲ್ಲಿ ಯಾವ ಸಂದೇಹವೂ ಇಲ್ಲ.
ಗುಡೂರ್ ಅವರ ಹಾಡುಗವಿತೆ ಛಂದೋಬದ್ಢ! ಅಮಿತಾ ಅವರು ರಾಗ ಸಂಯೋಜನೆ ಮಾಡಿ ಹಾಡಲಿ. ಅದಕ್ಕೆ ಕನ್ನಡ ಬಳಗದಲ್ಲೊಂದು ಭರತನಾಟ್ಯವೂ ಆಗಲಿ!!
– ಕೇಶವ
LikeLike