ವಿಶ್ವಭಾರತಿಗೆ ಕನ್ನಡದಾರತಿ..ಚನ್ನವೀರ ಕಣವಿಯವರಿಗೆ ಅನಿವಾಸಿಯ ಭಾವಾಂಜಲಿ

ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ
‘ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯಸಂಸ್ಕಾರಿ’... ಎಲ್ಲಾ ಶಾಲಾ-ಕಾಲೇಜುಗಳ ಪ್ರತಿಯೊಂದು ಕಾರ್ಯಕ್ರಮದಲ್ಲೂ ಈ ಹಾಡು ಸ್ವಾಗತ ಗೀತೆಯಾಗಿಯೋ, ಪ್ರಾರ್ಥನಾ ಗೀತೆಯಾಗಿಯೋ ಅನುರಣಿಸಲೇಬೇಕಿತ್ತು ಆಗ. ಅಂತೆಯೇ ‘ನನ್ನ ದೇಶ ನನ್ನ ಜನ ನನ್ನ ಮಾನಪ್ರಾಣಧನ ತೀರಿಸುವನೇ ಅದರ ಋಣ ಈ ಒಂದೇ ಜನ್ಮದಿ’ ಎನ್ನುವ ಆಕಾಶವಾಣಿಯ ವಂದನಾದ ಕೊನೆಯ ದೇಶಭಕ್ತಿ ಗೀತೆಯೊಂದಿಗೇ ನಮ್ಮ ಹೆಚ್ಚಿನ ಬೆಳಗುಗಳು ಆರಂಭವಾಗುತ್ತಿದ್ದವು. ಕವಿಯ ಬಗ್ಗೆ ಏನೇನೂ ಗೊತ್ತಿಲ್ಲದಾಗಲೂ ಅವರ ಕವನಗಳು ಹೀಗೆ ಹಾಡಾಗಿ ಹರಿದು ಸಾಮಾನ್ಯರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿ ಬಿಡುವುದೇ ಆ ಕಾವ್ಯದ ಗೆಲುವು. 

ಸಾರ್ಥಕ ತುಂಬು ಜೀವನ ನಡೆಸಿದ  ಚೆಂಬೆಳಕಿನ ಕವಿಚೇತನ ಮಹಾಬೆಳಗಿನಲಿ ವಿಲೀನವಾಗಿದೆ. ಆದರೆ ಅರವತ್ತೆಂಟು  ವರುಷ ಜೊತೆಯಾಗಿ ದಾಂಪತ್ಯ ರಥವನ್ನೆಳೆದ ತಮ್ಮ ಪತ್ನೀವಿಯೋಗದ ಸಂದರ್ಭ ದಲ್ಲಿ ಅವರೇ ಹೇಳಿದ ಮಾತಿನಂತೆ ಹೇಳುವುದಾದರೆ –‘ಇಲ್ಲಿದ್ರು..ಇಲ್ಲೇ ಇದ್ರು..ಈಗ – ಎಲ್ಲಾ ಕಡೆ ಅದಾರ. ಇದ್ದಾಗ ಇರುವು ಇಲ್ಲಷ್ಟೇ ಇತ್ತು. ಈಗ ಸರ್ವವ್ಯಾಪಿ ಆದ್ರು. ಥೇಟ್ ಚೆಂಬೆಳಕಿನ್ಹಂಗ..’

ಸಮನ್ವಯ ಕವಿಯೆಂದೇ ಖ್ಯಾತರಾದ ಕಣವಿಯವರು ಕನ್ನಡದಲ್ಲಿ ಸಮೃದ್ಧವಾದ ಕಾವ್ಯಪರಂಪರೆಯನ್ನು ನಿರ್ಮಿಸಿದವರು.ಮೃದು ಮಾತಿನ ಆದರೆ ಖಚಿತ ನಿಲುವಿನ ಸಜ್ಜನಿಕೆಯ ಕವಿಯವರು. ಧಾರವಾಡದ ಅನೇಕ ಸಾಹಿತ್ಯಿಕ  ಕಾರ್ಯಕ್ರಮಗಳಲ್ಲಿ ವೇದಿಕೆಯ ಮೇಲಿನ ಅವರ ಉಪಸ್ಥಿತಿ ನನಗೆ ಶಾಂತವಾಗಿ,ಸದ್ದಿಲ್ಲದೇ ಬೆಳಗುವ ನಂದಾದೀಪದಂತೆ ಕಂಡದ್ದಿದೆ.
ಕಣವಿಯವರ ಕಾವ್ಯ ಮುಂಗಾರಿನ ಮಳೆಯ ಆರ್ಭಟದಂತೆಯೋ, ಶ್ರಾವಣದ ಮುಸಲಧಾರೆಯಂತೆಯೋ ಅಬ್ಬರದ್ದಲ್ಲ;ಇದ್ದೂ ಇಲ್ಲದಂತೆ ಶೃತಿ ಹಿಡಿದು ಸುರಿದು ನೆಲವ ಹದಗೊಳಿಸಿ, ಮನವ ಮುದಗೊಳಿಸುವ ಮುಂಜಾವಿನ ಸೋನೆಮಳೆ.. ‘ಬಾನ ಸಾಣಿಗೆ ಹಿಟ್ಟು ಸಣಿಸಿದಂತೆ’ ಜಿನುಗಿದ ಸೋನೆ. 

ಕವಿವರ್ಯರ ಪ್ರಸಿದ್ಧ ಗೀತೆ ‘ಹೂವು ಹೊರಳುವವು ಸೂರ್ಯನ ಕಡೆಗೆ’ ಇದರ ಬಗ್ಗೆ ಅರ್ಥಪೂರ್ಣ ಲೇಖನವನ್ನು ನಮ್ಮ ಆಹ್ವಾನದ ಮೇರೆಗೆ ಅತಿ ಕಡಿಮೆ ವೇಳೆಯಲ್ಲಿ ಸರೋಜಿನಿ ಪಡಸಲಗಿಯವರು ಬರೆದು ಕಳಿಸಿದ್ದು ಅವರ ಕವಿ-ಕಾವ್ಯ ಪ್ರೇಮವನ್ನೂ, ಅನಿವಾಸಿಯ ಬಗೆಗಿನ ಅಭಿಮಾನವನ್ನೂ ಎತ್ತಿ ತೋರಿಸುತ್ತದೆ.

ತಮ್ಮ ಶೃತಿಬದ್ಧವಾದ ಇನಿದನಿಯಲ್ಲಿ ‘ಒಂದು ಮುಂಜಾವಿನಲಿ’ ಹಾಡುವುದರ ಮೂಲಕ ಕವಿಗೆ ಗೀತನಮನ ಸಲ್ಲಿಸಿದ್ದಾರೆ ಸುಮನಾ ಧ್ರುವ್ ಅವರು.

ತಮ್ಮ ವಿದ್ಯಾರ್ಥಿದೆಸೆಯಲ್ಲಾದ ಕವಿವರ್ಯರ ಮುಖಾಮುಖಿ ಭೇಟಿಯ ಕುರಿತಾದ ಮಧುರ ನೆನಪುಗಳನ್ನು ಹೆಮ್ಮೆಯಿಂದ ಸ್ಮರಿಸಿಕೊಂಡಿದ್ದಾರೆ ಶಿವ್ ಮೇಟಿ ಹಾಗೂ ಅಮಿತಾ ರವಿಕಿರಣ್ ಅವರು.

ಕವಿಯ ಯಶೋಕಾಯಕ್ಕೆ  ಕಾಲದ-ಹಂಗಿಲ್ಲ.ಅನಂತದವರೆಗೂ ವಿಶ್ವಭಾರತಿಗೆ ಕನ್ನಡದಾರತಿ ಬೆಳಗುತ್ತಲೇ ಇರುತ್ತದೆ; ಮಂಗಳ ಜಯಭೇರಿ ಮೊಳಗುತ್ತಲೇ ಇರುತ್ತದೆ. ಮುಟ್ಟಿದರೆ ಮಾಸುತಿಹ ಮಂಜಹನಿ ಮುತ್ತಿನಲಿ ಸೃಷ್ಟಿ ಸಂಪೂರ್ಣತೆಯು ಬಿಂಬಿಸುತ್ತಲೇ ಇರುತ್ತದೆ. ಸೋನೆಮಳೆ ಸುರಿಸುರಿದು ನೆಲದೆದೆ ಹದಗೊಳ್ಳುತ್ತಲೇ ಇರುತ್ತದೆ.
ಬನ್ನಿ ಓದುಗರೇ, ಇವತ್ತಿನ ಸಂಚಿಕೆಯನ್ನೋದಿ ಕವಿಗೊಂದು ಭಾವನಮನ ಸಲ್ಲಿಸಿ.

~ ಸಂಪಾದಕಿ

ಪರಿಚಯ 

ಧಾರವಾಡದವಳಾದ ನಾನೀಗ ಸಧ್ಯ ಬೆಂಗಳೂರು ವಾಸಿ. ಸಾಮಾನ್ಯ ಗೃಹಿಣಿ. ಚಿಕ್ಕಂದಿನಿಂದಲೂ ಹಾಡಿನ ಹುಚ್ಚು; ಸಂಯೋಜಿಸುವ, ಹಾಡುವ ಗುಂಗು.ಇದೇ ಕವಿತೆಗಳನ್ನು ಬರೆಯುವತ್ತ ಕೊಂಡೊಯ್ತು. ಓದುವ ಹವ್ಯಾಸವೂ ಹಾಗೇ.

ಈಗ ಎರಡು ಕವನಸಂಕಲನ ಹೊರ ಬಂದಿವೆ. ವೈದ್ಯ ಪತ್ನಿಯ ಅನುಭವ ಕಥನ; ಸ್ವರಚಿತ ಸಂಪ್ರದಾಯದ ಹಾಡುಗಳು ತಾಯಿ-ಮಗು ಇವೆರಡೂ ಅಚ್ಚಿನಲ್ಲಿವೆ. ನಾನು ಅನಿವಾಸಿ ಅಲ್ಲದಿದ್ದರೂ ಅನಿವಾಸಿ ಮಗನ ತಾಯಿ ನಾನು. ಅದಕ್ಕೇ ಏನೋ ಈ ಅನಿವಾಸಿ ಬಳಗ ನನ್ನದೇ ಎಂಬ ಆತ್ಮೀಯ, ಆಪ್ತ ಭಾವ.

ಚೆಂಬೆಳಕಿನ ಕವಿ - ಚೆಂಬೆಳಕಿನ ಕವಿತೆ- ನಾಲ್ಕು ಮಾತು
     "ನಾಡೋಜ, ಚೆಂಬೆಳಕಿನ ಕವಿ  ಚೆನ್ನವೀರ ಕಣವಿಯವರು ಇನ್ನಿಲ್ಲ" . ಟಿವಿ ಯಲ್ಲಿ  ಬಿತ್ತರವಾಗುತ್ತಿದ್ದ  ಸುದ್ದಿ  ಕೇಳುತ್ತಿದ್ದಂತೆಯೇ ನನಗೇ ಗೊತ್ತಿಲ್ಲದಂತೆ  ಒಂದು ಗಳಿಗೆ  ಹಾಗೇ ಸ್ತಬ್ಧವಾಗಿ  ಬಿಟ್ಟೆ. ಈ ೯೩ ರ, ಜೀವನದ  ಸಂಧ್ಯಾ ಕಾಲದಲ್ಲಿ  ಕೋರೋನಾದ  ಕರಾಳ  ಬಂಧನದಲ್ಲಿ ಸಿಲುಕಿ ,  ನಲುಗುತ್ತಿರುವ  ಆ ಜೀವ  ಸೋತು ಹೋಗಿದ್ದರೂ , ಮತ್ತೆ ಚಿಗುರೀತೇನೋ ಮಾಗಿದ ಚೇತನ  ಎಂಬ  ಅರ್ಥವಿಲ್ಲದ  ಆಸೆ  ದೂರದಲ್ಲಿತ್ತು. ಈಗ ' ದೀಪ  ಹೊತ್ತಿಸಿದ  ದೀಪವೇ  ನಂದಿ  ಹೋಯ್ತಲ್ಲ' ಎಂಬ  ದಿಗ್ಭ್ರಮೆ !
ಈಗಿದ್ದು  ಮುಂದಿನ  ಗಳಿಗೆಗೇ ಇಲ್ಲದಂತಾಗುವುದು  ಜೀವವೊಂದೇ ಏನೋ ಎಂಬ ಹತಾಶೆ ಭರಿತ  ವಿಷಾದದಲೆ  ಸುಳಿದು ಹೋಗಿ , ಕಣ್ತುಂಬಿ ತುಳುಕಿ ಅದರಲ್ಲೇ  ಆ ಮಗುವಿನ ಮನದ, ಮುಗ್ಧ ನಗೆಯ ಮೃದು ವ್ಯಕ್ತಿತ್ವ ಅದೇ ಶುಭ್ರ ನಗೆಯೊಡನೆ ತೇಲಿದ ಭಾಸ.
ಒಣ ಕಠೋರತೆ, ಅಣುಕು ಮಾತುಗಳಿಂದ ಬಲು ದೂರ  ಇದ್ದ ಆ ಭಾವಜೀವಿಯ ಎದೆ ತುಂಬಿದ ಕನಸುಗಳು ಅರಳಿ ಕವಿತೆಯಾಗಿ  ಹರಿದ  ಆ ಕೋಮಲ ಧಾರೆಯಲಿ ಮುಳುಗಿ ಹೋದೆ ನಾ, ಅವರ  ಭೇಟಿಯಾದ ಗಳಿಗೆಯ ನೆನಪಿನೊಡನೆ!
        ಧಾರವಾಡದ  ಕಲ್ಯಾಣ ನಗರದ  ಅವರ ಮನೆಯ ಹೊಸ್ತಿಲನ್ನು  ಅಳುಕುತ್ತಲೇ ತುಳಿದಾಗ ಅವರ  ಆ ತುಟಿತುಂಬ  ಹರಡಿದ  ಮೃದು ಹಾಸ, ನೀಡಿದ  ಮನದುಂಬಿದ ಸ್ವಾಗತ ," ಬಾ ಯವ್ವಾ ಬಾ  ತಂಗಿ  ಬಾ  ಒಳಗ" ಅಂದ  ಆ ಮೆತ್ತಗಿನ  ಧ್ವನಿ  ಇನ್ನೂ ಕಿವಿಯಲ್ಲಿ  ಗುಂಜಿಸುತ್ತಿದೆ. ಆ ಒಂದು  ಗಂಟೆಯಲ್ಲಿ  ಎಷ್ಟೊಂದು ಮಾತಾಡಿದೆವು! ಆದರೆ  ಅದರಲ್ಲಿ ನನ್ನ ತಲೆಗೆ ಎಷ್ಟು ಹೋಯ್ತೋ ಗೊತ್ತಿಲ್ಲ. ಅವರ  ಕವಿತೆಯಂತೆ ಇರುವ  ಆ  ವ್ಯಕ್ತಿತ್ವದಲ್ಲಿ  ಕರಗಿ  ಹೋಗಿದ್ದೆ  ನಾ! ಅಂತಹ  ಧೀಮಂತ  ಚೇತನ  ಇನ್ನು ನಮ್ಮೊಡನಿಲ್ಲ. ಆದರೆ ಅವರ  ಒಂದೊಂದು ಕವಿತೆ ಒಂದೊಂದು ಮಾತು ಹೇಳುತ್ತ ಚಿರಸ್ಥಾಯಿಯಾಗಿ ಉಳಿಯುವಂಥವೇ. ಆ ಕಾವ್ಯ- ಕವನಗಳೊಂದಿಗೆ ಅವರೂ ನಮ್ಮೊಡನೆಯೇ  ಇದ್ದಾರೆ ಎಂಬ ಹುಚ್ಚು ಸಮಾಧಾನ." ಹೂವು ಹೊರಳುವವು ಸೂರ್ಯನ ಕಡೆಗೆ....." ಎಂದು  ಅವರು  ಹಾಡಿದಂತೆ ಆ ಸ್ವಚ್ಛ ಮನದ  ಕವಿ ಆ ಶುಭ್ರತೆಯಲ್ಲೇ, ಆ ಬೆಳಕಿನಲ್ಲೇ ಒಂದಾಗಿ  ಹೋಗಿದ್ದಾರೆ. ಅವರ ಈ  ಕವಿತೆ ನನಗೆ ಅತ್ಯಂತ ಪ್ರಿಯವಾದ  ಕವಿತೆ. ಅವರಿನ್ನಿಲ್ಲದ  ಸುದ್ದಿ  ಕೇಳಿದಾಗಿನಿಂದ  ಎಷ್ಟು ಸಲ  ಆ ಹಾಡು ರತ್ನಮಾಲಾ ಪ್ರಕಾಶ ಅವರ  ಧ್ವನಿಯಲ್ಲಿ ಕೇಳಿದೀನೋ  ನನಗೇ ಗೊತ್ತಿಲ್ಲ!  ಮತ್ತೊಮ್ಮೆ ಹುಟ್ಟಿ ಬಾ ಅನ್ನುವುದು ಅದೆಷ್ಟು ವಾಸ್ತವಿಕ ಗೊತ್ತಿಲ್ಲ. ಈಗ ನಮ್ಮ ಕೈಲಿರುವುದು ಅವರ ನೆನಪಲ್ಲಿ ನಾಲ್ಕು ಹನಿ ಕಣ್ಣೀರು ಸುರಿಸುವ ಅಸಹಾಯಕತೆ ಒಂದೇ.  ನಾನೀಗ ಅವರ ಈ ಕವಿತೆಯ ಕುರಿತು ನನಗೆ ತಿಳಿದ  ಹಾಗೆ ಬರೆದ ನಾಲ್ಕು ಮಾತುಗಳೇ   ಚೆಂಬೆಳಕಿನ ಕವಿಗೆ  ನನ್ನ ಶ್ರದ್ಧಾಂಜಲಿ !  

ಹೂವು ಹೊರಳುವವು ಸೂರ್ಯನ ಕಡೆಗೆ..

ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನ ವರೆಗೆ
ಇರುಳಿನ ಒಡಲಿಗೆ  ದೂರದ ಕಡಲಿಗೆ
ಮುಳುಗಿದಂತೆ, ದಿನ  ಬೆಳಗಿದಂತೆ
ಹೊರ ಬರುವನು  ಕೂಸಿನ ಹಾಗೆ

ಜಗದ  ಮೂಸೆಯಲಿ  ಕರಗಿಸಿ  ಬಿಡುವನು
ಎಲ್ಲ  ಬಗೆಯ  ಸರಕು
ಅದಕೆ  ಅದರ ಗುಣ ದೋಷಗಳಂಟಿಸಿ
ಬಿಡಿಸಿ  ಬಿಟ್ಟ ತೊಡಕು

ಗಿಡದಿಂದುರುವ  ಎಲೆಗಳಿಗೂ ಮುದ 
ಚಿಗುರುವಾಗಲೂ  ಒಂದೆ ಹದ
ನೆಲದ ಒಡಲಿನೊಳಗೇನು ನಡೆವುದೋ
ಎಲ್ಲಿ  ಕುಳಿತಿಹನೋ ಕಲಾವಿದ

ಬಿಸಿಲ ಧಗೆಯ  ಬಸಿರಿಂದಲೇ ಸುಳಿವುದು
ಮೆಲು ತಂಗಾಳಿಯು ಬಳಿಗೆ
ಸಹಿಸಿಕೊಂಡ  ಸಂಕಟವನು ಸೋಸಲು
ಬಂದೇ ಬರುವುದು ಗಳಿಗೆ

ಸಹಜ ನಡೆದರೂ  ಭೂಮಿಯ ಲಯದಲಿ
ಪದಗಳನಿರಿಸಿದ  ಹಾಗೆ
ವಿಶ್ವದ  ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ

ನಾಲ್ಕು ಮಾತುಗಳು ಕವಿತೆ ನನಗನಿಸಿದಂತೆ -

       ನಾಡೋಜ ಕವಿ ಚೆನ್ನವೀರ ಕಣವಿಯವರ ಈ ಕವಿತೆ " ಹೂವು ಹೊರಳುವವು ಸೂರ್ಯನ ಕಡೆಗೆ....."  ಹಾಗೇ ಓದಿ, ಆಲಿಸಿದ್ರೆ ಒಂದು ಸರಳ , ಸುಂದರ ಭಾವಗೀತೆ  ಅನ್ನಿಸಿದ್ರೂ ಬಗೆದಷ್ಟು  ಗೂಢಾರ್ಥ  ಅದರೊಡಲಲ್ಲಿ ಅಂತ ನನಗನ್ನಿಸ್ತು.
 ಹೂವು  ಇಲ್ಲಿ ಸುಂದರ, ಸರಳ, ಸ್ವಚ್ಛ ಮನದ ಪ್ರತೀಕ. ಅಂತೆಯೇ  ಸಹಜವಾಗಿಯೇ ಅವು  ಸೂರ್ಯನ  ಅಂದರೆ ತಮದ ಲವಲೇಶವೂ ಇಲ್ಲದ, ಶುಭ್ರ, ಸ್ವಚ್ಛ ಪ್ರಕಾಶದ, ಅರಿವಿನ ದ್ಯೋತಕ; ಅತ್ತ ಹೊರಳಬಲ್ಲವು , ಆ ಬೆಳಕು ಪ್ರಖರವಾಗಿದ್ದರೂ. ಆದರೆ ನಾವು ಮನುಷ್ಯರು ; ಮಾನವ ಸಹಜ  ದುರ್ಬಲತೆ  ನಮ್ಮಲ್ಲಿ. ಮಾಯಾ, ಮೋಹ, ಅಹಂ ದ ಗಾಢ ಕತ್ತಲು, ತುಮುಲದಲ್ಲಿ  ಮುಳುಗಿರುವ ನಾವು ಅದನ್ನು ಜೀರ್ಣಿಸಿಕೊಳ್ಳುವ ತಾಕತ್ತೂ ಇಲ್ಲದವರು. ನಮ್ಮ ದಾರಿ ಬರಿ ಚಂದ್ರನ ವರೆಗಷ್ಟೇ; ಸೂರ್ಯನ ಪ್ರತಿಫಲಿತ ಬೆಳಕಿನ ಚಂದ್ರನ ವರೆಗಷ್ಟೇ . ಆ ಜ್ವಾಜ್ವಲ್ಯಮಾನ  ಬೆಳಕಿನೆಡೆ  ಕಣ್ಣೆತ್ತಿ ನೋಡಲೂ ಆಗದಷ್ಟು ಆಳವಾಗಿ  ಹುದುಲಿನಲ್ಲಿ  ಸಿಲುಕಿದವರು. ಆ ಇರುಳಿನ ಒಡಲಿಂದ ಸಾಗಿ  ಬೆಳಕಿನೆಡೆ ಸಾಗಲು ಸೇತುವೆಯಂತಿರುವ  ಈ ಜೀವನದ  ಕಡಲಿನಲ್ಲೇ ಮುಳುಗಿ ಅಲ್ಲೇ ಎಲ್ಲಾ ದುರ್ಬಲತೆ, ಜಂಜಾಟಗಳನ್ನೆಲ್ಲ ಕಳಚಿ ಎದ್ದು ನಿಷ್ಕಲ್ಮಶ ಮನಸಿನ ಕೂಸಿನಂತೆ  ಹೊರಬಂದರೆ ಸೂರ್ಯನತ್ತ ಹೊರಳುವ ಯೋಗ್ಯತೆ ಬಂದೀತೋ ಏನೋ ಅಂತ. ಸೂರ್ಯನು ದಿನವೂ ಇರುಳಿನೊಡಲಲ್ಲಿ ಮುಳುಗಿ, ಕಡಲಿನಿಂದ  ಬೆಳಗುತ್ತ ಕೂಸಿನ ಹಾಗೆ ಶುಭ್ರವಾಗಿ ಹೊರಬಂದು ಇದನ್ನೇ ಹೇಳ್ತಾ ಇದಾನೆ ಅಂತ ಕವಿ ಸೂಚ್ಯವಾಗಿ ಹೇಳಿದ್ದಾರೆ ಇಲ್ಲಿ. ನಿಜಕ್ಕೂ ಇದೊಂದು ಅನುಪಮ ಪ್ರತಿಮೆ.ಮಾನವನೂ ಸೂರ್ಯ ದಿನ ಬೆಳಗಿದ ಹಾಗೆ ಬೆಳಗುತ್ತ ಅಂದರೆ ತುಸು ತುಸುವಾಗಿ ತಿಳಿವು ವಿಕಸಿಸಿ, ಸ್ವಚ್ಛ ಮನದ ಬೆಳಕಲಿ ಹೊಳೆಯುತ್ತ  ಕೂಸಿನ ಹಾಗೆ ಶುಭ್ರವಾಗಿ ಹೊರಬರಲಿ ಕಡಲ ಮಡಿಲಿಂದ  ಥೇಟ್  ಆ ನೇಸರ  ಬಂದ ಹಾಗೆ  ಎಂಬುದು ಕವಿಯ ಆಶಯ. 
         ಎರಡನೇ ಚರಣದಲ್ಲಿ  ಇದನ್ನೇ ಮುಂದುವರಿಸುತ್ತ  ಕವಿ ಹೇಳ್ತಾರೆ - ಯಾರು ಹೇಗೇ ಬಂದರೂ, ಅವರ ಯಾವ ಗುಣಾವ ಗುಣಗಳನ್ನು ಗಣನೆಗೆ ತಾರದೇ ಅವರವರ ಯೋಗ್ಯತೆಗೆ ತಕ್ಕಂತೆ ಈ ಜಗದ ದಿನ ನಿತ್ಯದ ಬದುಕಿನಲ್ಲಿ ಮುಳುಗಿಸಿ ಬಿಡ್ತಾನೆ ಆತ. ಹಾಗೇ ಆ ಒಂದೇ ಮೂಸೆಯಲ್ಲಿಯೇ ಅಕ್ಕಸಾಲಿಗನಂತೆ ಕರಗಿಸಿ ಮಸೆಸಿ ಬಿಟ್ಟು, ಒರೆಗ್ಹಚ್ಚಿ ಶುದ್ಧೀಕರಿಸುವದೊಂದೇ ಆತನ ಕೆಲಸ. ಆದರೆ ಒಂದೇ ಬಾರಿಗೆ ಆಗುವುದಲ್ಲ ಅದು. ಅವರವರ ಒಳಿತು ಕೆಡುಕುಗಳ ಕರ್ಮದ ಗಂಟು ಅವರ ಬೆನ್ನಿಗೇ. ಅಲ್ಲಿ ಯಾವ ಏಚು ಪೇಚಿಲ್ಲ; ತೊಡಕು ತೊಡರಿಲ್ಲ. ಬಲು ಸ್ಪಷ್ಟ ಆ ಲೆಕ್ಕ.
        ಇನ್ನು ಈ  ಕರಗಿಸಿ ಶುದ್ಧೀಕರಿಸಿದ್ದು ಎಷ್ಟರ ಮಟ್ಟಿಗೆ ಫಲ ಕೊಟ್ಟಿದೆ  ಎಂಬುದನ್ನು ಮೂರನೇ ಚರಣದಲ್ಲಿ ಹೇಳ್ತಾರೆ ಕವಿ. ಗಿಡದಿಂದ ಉದುರುವ ಎಲೆಗೂ ಒಂದು ಮುದ ಇದೆ ಅಂತ. ನಿಜ; ಮಾಗಿದ  ಮನದ  ಪ್ರತೀಕ ಅದು. ಮನ  ಮಾಗಿ ಪಕ್ವವಾಗಿ  ತೊಟ್ಟು ಕಳಚಿ ಗಿಡದಿಂದ ಉದುರುವ ಎಲೆಯಂತಾಗಿದ್ರೂ ಆ ಹಣ್ಣಾದ ಮನದಲ್ಲಿ  ಏನೋ ಒಂದು ನಿರಾಳ, ನಿವಾಂತ ಭಾವ. ಯಾವ
ಗೊಂದಲದ  ಗೋಜಿಲ್ಲದೇ, ತಿಳಿವು ಅರಿವಿನ  ಹುಡುಕಾಟದಿ ನಲುಗದ ಸ್ಥಿತಿ ಅದು; ಸ್ಥಿತಪ್ರಜ್ಞನ ಹಾಗೆ. ತಾ ಏನು, ತನ್ನ ದಾರಿ ಎತ್ತ ಎಂಬುದರ  ಕಲ್ಪನೆ  ನಿಚ್ಚಳವಾಗಿದೆ ಈಗ ಆ‌ ಜೀವಕೆ. ಅದಕ್ಕೇ ಹೊಸ ಚಿಗುರಿನ ಹದದಂತೆಯೇ ಆ ಮನವೀಗ. ಷೇಕ್ಸ್ ಪಿಯರ್ ನ  ಕವಿತೆಯ  ನೆನಪು ಬಾರದಿರದೀಗ; ಶಿಶುವಾಗಿ ಆಗಮಿಸಿ ಶಿಶುವಿನಂತೆ ನಿರ್ಗಮನ. ನಿರ್ಗಮನ ಆದ ಹಣ್ಣೆಲೆ ಭೂಮಿ ಒಡಲು ಸೇರಿ ಮತ್ತೆ ಚಿಗುರೊಡೆಯುವುದೂ ಅಲ್ಲಿಂದಲೇ. ಆ ಹಂತದಲ್ಲಿ ಅಲ್ಲಿ ಏನು ನಡೀತದೋ ಗೊತ್ತಿಲ್ಲ, ಆಗುವುದೂ ಇಲ್ಲ. ಇದು ಜನನ- ಮರಣ - ಜನನ ಈ ಚಕ್ರದ ಸೂಚಕ. ಆ ಕಲಾವಿದ ಮತ್ತೆ ಅವುಗಳ ಗುಣದೋಷಗಳನು  ಅಂಟಿಸಿ ಕಳಿಸಬೇಕಲ್ಲ ರೂಪಿಸಿ! ಒಂದು ಹದದ ಲೆಕ್ಕ, ಅಳತೆಗೋಲು ಇಟ್ಟುಕೊಂಡೇ ಇರ್ತಾನೆ ಆ ಕಲಾವಿದ- ಅದೇ ಸೃಷ್ಟಿಕರ್ತ, ಯಾರ ಅಳಿವಿಗೂ ನಿಲುಕದವನಾತ ಎಂದು ಹೇಳ್ತಿದ್ದಾರೆ ಕವಿ.
         ಈಗ  ನಾಲ್ಕನೇ ಚರಣದಲ್ಲಿ ಕವಿ ಸಂತೈಸ್ತಿದಾರೆ ಆ ಜೀವಗಳನ, ಗುಣದೋಷಗಳ ಮೂಟೆ ಹೊತ್ತು ತಿರುಗುವ ಜೀವಗಳನ. ಈ ಹೆಣಗಾಟದ ಮಧ್ಯೆಯೂ  ಒಂದು ಸುಂದರ ಗಳಿಗೆ ಬಂದೇ ಬರತದೆ.ಸಾಗಿ ಬಂದ ದಾರಿಯ ಹಿಂದಿರುಗಿ ನೋಡಿ , ತನ್ನನ್ನೇ ತಾ ಮಥಿಸಿ ಸೋಸಿ ನೋಡಿದಾಗ  ವಿಷಯ ನಿಚ್ಚಳವಾಗಿ ಗೋಚರಿಸಿ ಒಂದು ನಿರಾಳತೆ  ಮನದಲ್ಲಿ. ಇದೇ ಆ ಹೆಣಗಾಟದ  ಗರ್ಭದಲ್ಲಿಯೇ ಇರುವ ತಂಪೆರೆವ ಹಾಯಿಯ ನೆರಳಿನೆಳೆ. ಇದನ್ನು ಗುರುತಿಸುವ ಗಳಿಗೆ ಬಂದೇ ಬರುತ್ತದೆ ಎಂಬುದು ಕವಿಯ ಧೃಡ ನಂಬಿಕೆ. ಇಲ್ಲಿ ಬಿಸಿಲಿನ ಧಗೆ ಜೀವನ ಪರ್ಯಂತದ
 ಜಂಜಾಟ, ಗುದ್ದಾಟವೇ;  ಮಾಗುವಿಕೆ ಬರೋ ತನಕ. ನಂತರ ಬರುವುದು ಮೆಲು ತಂಗಾಳಿಯ ಅಲೆ. ನಿಧಾನವಾಗಿ ಬರೋದದು. ಆ ಹಣ್ಣೆಲೆಗೆ ಮುದ ನೀಡುವುದೂ ಇದೇ.
ಇದನ್ನೆಲ್ಲ  ನೋಡಿ  ಕವಿಗೆ  ಎಲ್ಲ  ಅಂಶಗಳ ನಡೆ, ಚಲನೆಯಲ್ಲೂ ಒಂದು ಲಯಬದ್ಧತೆ, ಕ್ರಮ ಬದ್ಧತೆ ಎದ್ದು ಕಾಣುತ್ತದೆ. ಸೃಷ್ಟಿಯ ಪ್ರತಿ ಅಣು , ಪ್ರತಿ ಕಣವನ್ನೂ ವ್ಯವಸ್ಥಿತವಾಗಿ, ಸರಿಯುತ್ತಿರುವ ಸಮಯದ ಚಲನೆಯಲ್ಲೂ, ಭೂಮಿಯು ಸಾಗುವ ಗತಿಯಲ್ಲೂ ಆಚೀಚೆ ಅಲುಗಾಡದಂತೆ , ಅದರದರದೇ ಸ್ಥಳದಲ್ಲೇ ಜೋಡಿಸಿರುವುದರಲ್ಲೂ ಒಂದು ಸೌಂದರ್ಯ ಕಾಣ್ತಿದೆ , ಕವಿತೆಯ  ಲಯಬದ್ಧ ಪದ ಜೋಡಣೆಯಲ್ಲಿರುವ ಹಾಗೆ. ಅದಕ್ಕೇ ಕವಿಗೆ  ಈ ಜೀವನವೇ ಒಂದು ಕವಿತೆ ಅನಿಸಿ ಬಿಟ್ಟು, ಅದು ಈ ಜಗದ ಮೊಳಹಿನಲ್ಲಿಯೇ ಅಂದರೆ ಜೀವನದ ಉಗಮದಲ್ಲಿಯೇ ರೂಪ ತಾಳಿ ಬಿಟ್ತು ಅಂತ ಹೇಳ್ತಾರೆ. ಹೀಗೆ ಜೀವನದ ಸಾರವನ್ನು ಪೂರ್ತಿಯಾಗಿ ಹೇಳಿ ಅದನ್ನು ಕವಿತೆ ಎನ್ನುವುದು ಅನುಪಮ  ಹೇಳಿಕೆ.ಜೀವನವೇ ಕವಿತೆ ಎನ್ನುವುದು ನಿಜಕ್ಕೂ ಅಪ್ರತಿಮ ಪ್ರತಿಮೆ.

ಒಟ್ಟಿನಲ್ಲಿ ಈ ಛಂದದ ಕವಿತೆ ಮನದ ತುಂಬಾ ಯೋಚನಾ ಭಾವ ತರಂಗಗಳನೆಬ್ಬಿಸುವದಂತೂ ನಿರಂತರ ಸತ್ಯ! ಈಗ ಅವರನ್ನು ಕಳೆದುಕೊಂಡು ಮಂಕು ಕವಿದು, ಮಬ್ಬುಗತ್ತಲೆ ಆವರಿಸಿದ್ದರೂ, ಇಂತಹ ಅಪರೂಪದ ಕವಿತೆಗಳಿಂದ ಚೆಂಬೆಳಕನ್ನು ಹರಡುತ್ತಾ, ಆ ಮಬ್ಬುಗತ್ತಲೆಯ ಮಂಕನ್ನು ಸರಿಸುತ್ತಾ  ನಮ್ಮ ಜೊತೆಯಲ್ಲೇ ಇರುತ್ತಾರೆಂಬುದೂ ಅಷ್ಟೇ ಸತ್ಯ!

~ ಸರೋಜಿನಿ ಪಡಸಲಗಿ
ಬೆಂಗಳೂರು

ಒಂದು ಮುಂಜಾವಿನಲಿ..ಸುಮನಾ ಧ್ರುವ್

ವಿಶ್ವ ವಿನೂತನ ವಿದ್ಯಾ ಚೇತನ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ	
ಈ ಹಾಡನ್ನು ಅದೆಷ್ಟು ಬಾರಿ ಆ ಮೊದಲು ಹಾಡಿದ್ದೆ ಆದರೆ , ಆ ದಿನ ಒಂಥರಾ ಭಯಮಿಶ್ರಿತ ಖುಷಿ ಯಾಕೆಂದರೆ ಕವಿಯ ಎದುರೆ ಅವರ ಹಾಡು ಹಾಡುವ ಸೌಭಾಗ್ಯ ಎಲ್ಲ ಗಾಯಕರಿಗೂ ಸಿಗುವಂತದ್ದಲ್ಲ, ಆ ಒಂದು ವಿಷಯದಲ್ಲಿ ನಾನು ನಿಜಕ್ಕೂ ನಶೀಬವಾನ,ಈ ಅವಕಾಶ ನನಗೆ ಹಲವುಬಾರಿ ಸಿಕ್ಕಿದೆ. 

ಕಣವಿ ಅವರನ್ನ ಅದೇ ಮೊದಲ ಬಾರಿ ನೋಡಿದ್ದು , ಧಾರವಾಡದ ವಿದ್ಯಾವರ್ಧಕ ಸಂಘದ ಯಾವುದೋ ಕಾರ್ಯಕ್ರಮಕ್ಕೆ ವಿಶ್ವ ವಿನೂತನ ಹಾಡಲಿಕ್ಕೆಂದು ನಾವು ಕೆಲವು ಸಂಗೀತ ವಿದ್ಯಾರ್ಥಿಗಳು ಹೋಗಿದ್ದೆವು. ವಿಶ್ವವಿನೂತನ ಹಾಡಿನ ಹೊಸದೊಂದು ಸಂಯೋಜನೆಯನ್ನು ನಮ್ಮ ಉಪನ್ಯಾಸಕರಾದ ಡಾ ನಂದಾ ಪಾಟೀಲ್ ಅವರು ನಮಗೆ ಕಲಿಸಿದ್ದರು. ಹಾಡಿನ ನಂತರ "ಚಲೋ ಹಾಡಿದ್ರು ಹುಡುಗೂರು". ಅಂದು ಮುಗುಳುನಕ್ಕರು ಅವರ ಕವಿತೆಗಳಂತೆ ಅವರ ನಗುವೂ ಚಂದ ಚಂದ, ಪುಟ್ಟ ಮಗುವಿನ ನಗುವಿನಂತೆ.

ಧಾರವಾಡದಲ್ಲಿ ಇದ್ದಷ್ಟು ದಿನ ಆಗೊಮ್ಮೆ ಈಗೊಮ್ಮೆ ಸಾಹಿತ್ಯ ಸಂಗೀತ ಕಾರ್ಯಕ್ರಮದಲ್ಲಿ ಅವರ ಭೇಟಿ ಆಗುತ್ತಲೇ ಇರುತ್ತಿತ್ತು. ಈಗಿನಂತೆ selfi ಕಾಲವಾಗಿದ್ದ್ರೆ ಅದೆಷ್ಟು ಫೋಟೋಗಳ ಸಂಗ್ರಹವಾಗುತ್ತಿತ್ತೋ. ಮನಸ್ಸಲ್ಲಿ ಅಚ್ಚಾದ ಆ ನೆನಪಿನ ಚಿತ್ರಗಳನ್ನು ಅಕ್ಷರದಲ್ಲಿ ಬಿಂಬಿಸಲು ಸೋಲುತ್ತಿದ್ದೇನೆ.

ಕನ್ನಡ ಭಾವಗೀತೆಗಳ ಗುಂಗಿಗೆ ಬಿದ್ದವರು, ತಮ್ಮ ಜೀವನದ ಎಲ್ಲ ಸಂದರ್ಭಕ್ಕೂ ಒಂದು ಹಾಡನ್ನು ತಮ್ಮ ಅರಿವಿಲ್ಲದಂತೆ ಗುನುಗಿಕೊಂಡು ಬಿಡುತ್ತೇವೆ. ಹಾಗೆ ಎಂದೋ ಕೇಳಿದ ಮುಂಜಾವಾದಲಿ ಹಸಿರುಹುಲ್ಲ ಮಖಮಲ್ಲಿನಲಿ ಪಾರಿಜಾತವೂ ಹೂವು ಸುರಿಸಿದಂತೆ ಹಾಡು ಪಾರಿಜಾತ ಸಿಗದ ನಾಡಿಗೆ ಬಂದರೂ ಇಬ್ಬನಿ ತುಂಬಿದ ಹಸಿರು ಹೊದ್ದ ನೆಲವನ್ನು ಕಂಡರೆ ಪಕ್ಕನೆ ಗುನುಗಿಬಿಡುತ್ತೇನೆ. ಏಳುತ್ತಲೇ ಮಳೆ ನಾದ ಕೇಳಿದರೆ ತುಂತುರಿನ ಸೋನೆಮಳೆ ಎಂದು ಮನಸು ಹಾಡತೊಡಗುತ್ತದೆ. ಎಲ್ಲಕ್ಕಿಂತ ಹೆಚ್ಚು ಆಪ್ಯಾಯಮಾನ ಹಾಡು ಎಂದರೆ ಹೂವು ಹೊರಳುವವು ಸೂರ್ಯನ ಕಡೆಗೆ ಎನ್ನುವ ಗೀತೆ, ಈಗಲೂ ಸೂರ್ಯನತ್ತ ಮುಖಮಾಡಿದ ಹೂಗಳನ್ನು ನೋಡಿದಾಗ, ಆ ಸಾಲು ನೆನಪಾಗುತ್ತದೆ. 

~ ಅಮಿತಾ ರವಿಕಿರಣ್
ಕಣವಿಯವರ ಜೊತೆಗೆ ನನ್ನದೊಂದು ಭೇಟಿ 
ನಾವಿದ್ದ ಸಮಯದಲ್ಲಿ ಕೆಎಂಸಿಯ ಕನ್ನಡ ಸಂಘ ತುಂಬಾ ಚುರುಕಾಗಿತ್ತು . ಪ್ರತಿ ವರ್ಷ ' ಬೇಂದ್ರೆಯವರ ' ದಿನಾಚರಣೆಯನ್ನು ಆಚರಿಸುವುದು ವಾಡಿಕೆಯಾಗಿತ್ತು . ಯಾರಾದರೂ ಸಾಹಿತಿಗಳನ್ನು ಮುಖ್ಯ ಅತಿಥಿಗಳನ್ನಾಗಿ ಕರೆತರುವದು ವರ್ಷಗಳಿಂದ ನಡೆದುಬಂದ ರೂಢಿಯಾಗಿತ್ತು .
ಅದು ೧೯೯೦ ರ ಬೇಂದ್ರೆ ದಿನಾಚರಣೆ  . ನಮ್ಮ ಸಂಘದ  ಮುಖ್ಯಸ್ಥರಾಗಿದ್ದ ಡಾ . ಪಾರ್ಶ್ವನಾಥ ಸಾರರ ಮೇರೆಗೆ ಆ  ಸಲ ನಾಡೋಜ ಕವಿ ಚೆನ್ನವೀರ ಕಣವಿಯವರನ್ನು ಮುಖ್ಯ ಅತಿಥಿಯಾಗಿ ಕರೆಯಬೇಕೆಂದು ನಿರ್ಧಾರವಾಗಿತ್ತು .
ನನ್ನ ಸೌಭಾಗ್ಯವೋ ಏನೊ ನನಗೆ ಆ ಜವಾಬ್ಧಾರಿಯನ್ನು ಒಪ್ಪಿಸಲಾಗಿತ್ತು . ನಾನು ಅವರನ್ನು ಪ್ರತ್ಯಕ್ಷವಾಗಿ ನೋಡಿರಲಿಲ್ಲ . ಅವರ ಪದ್ಯಗಳನ್ನು ಪಠ್ಯ ಪುಸ್ತಕದಲ್ಲಿ ಓದಿದ್ದೆ. ಧಾರವಾಡದಲ್ಲಿ  ಇದ್ದಾಗ ಬೇಂದ್ರೆಯವರ ಮನೆಗೆ ಹೋಗುವ ಅವಕಾಶ ಸಿಕ್ಕಿತ್ತಾದರೂ ಕಣವಿಯವರನ್ನು ಕಾಣುವ ಸಂದರ್ಭ ಒದಗಿ ಬಂದಿರಲಿಲ್ಲ.
ಒಂದು ಸಂಜೆ ನಾನು ಮತ್ತು ನನ್ನ ಗೆಳೆಯ ಸೇರಿ ಧಾರವಾಡಕ್ಕೆ ಪಯಣ ಬೆಳೆಸಿದೆವು. ಆಗಿನ ಸಮಯದಲ್ಲಿ ಈಗಿನಂತೆ ಮೊಬೈಲ್ ಫೋನಗಳು ಮತ್ತು ಅಂತರ್ಜಾಲದ ಅನುಕೂಲತೆಯೂ ಇರಲಿಲ್ಲ . ಅವರು ಧಾರವಾಡ ವಿಶ್ವ ವಿದ್ಯಾಲಯದ ನೌಕರರ ಕ್ವಾರ್ಟರ್ಸ್ ನಲ್ಲಿ ಇರುತ್ತಾರೆಂದು ಗೊತ್ತಿತ್ತು . ಮನೆಯ ನಂಬರನ್ನು ನಮ್ಮ ಸಾರರಿಂದ ಪಡೆದುಕೊಂಡಿದ್ದೆವು . ಸಂಜೆ ೭ ಘಂಟೆಯ ಸುಮಾರಿಗೆ ಸಿಟಿ ಬಸ್ಸ ಹಿಡಿದು ವಿಶ್ವವಿದ್ಯಾಲಯವನ್ನು ತಲುಪಿದ್ದೆವು . ಬಸ್ಸಿನಿಂದ ಕೆಳಗಿಳಿದ ಮೇಲೆ ಎಲ್ಲಿಹೋಗಬೇಕೆಂದು ಗೊತ್ತಾಗದೆ ಯಾರನ್ನಾದರೂ ಕೇಳಿದರಾಯಿತು ಎಂದು ಕಾಯುತ್ತಿದ್ದೆವು. ಅಷ್ಟರಲ್ಲಿಯೇ ನಮ್ಮ  ಹಿಂದೆಯೇ ಇನ್ನೊಬ್ಬರು ಬಸ್ಸಿನಿಂದ  ಇಳಿದರು  . ನೆಹರು ಶರ್ಟ್ ಮತ್ತು ಪಾಯಜಾಮ್ ಹಾಕಿದ್ದರು ತಲೆಯ ಮೇಲೆ ಒಂದು ಟೋಪಿ ಇತ್ತು ಮತ್ತು ಕೈಯಲ್ಲಿ  ಒಂದು ಕಾಯಿಪಲ್ಲೆ ತುಂಬಿದ ಚೀಲವಿತ್ತು . ನಾವು ಹೋಗಿ ಅವರನ್ನು ಕೇಳಿದೆವು - 'ಕಣವಿ ಸರ್ರರ್ ಮನೆಗೆ ಹೋಗಬೇಕು , ದಾರಿಯನ್ನು ಹುಡುಕುತ್ತಿದ್ದೇವೆ ನಿಮಗೇನಾದರೂ ಗೊತ್ತೇನು' ಎಂದು . ನಮ್ಮನ್ನೊಮ್ಮೆ ನೋಡಿ ಅವರೆಂದರು   ' ನಾನು ಅಲ್ಲಿಯೇ ಹೊರಟಿದ್ದೇನೆ ನೀವೂ ನನ್ನ ಜೊತೆಗೆ ಬರಬಹುದು ಎಂದು. ಅವರನ್ನೇ ಹಿಂಬಾಲಿಸಿದೆವು 
ಅವರ ಮನೆಯನ್ನು ಮುಟ್ಟಿದ್ದಾಗ ನಮಗೆ  ಗೊತ್ತಾಯಿತು ಅವರೇ ಕಣವಿಯವರೆಂದು . ನಾವೇನೋ ತಪ್ಪು ಮಾಡಿದೆವು ಎಂದು ಅನಿಸಿತ್ತು. 'ನಿಮ್ಮನ್ನು ಗೊತ್ತು ಹಿಡಿಯಲು  ಆಗಲಿಲ್ಲವೆಂದು ' ಕ್ಷಮೆಯಾಚಿಸಿದ್ದೆವು .ನಾವು ಬೆಪ್ಪಾಗಿರುವದನ್ನು ಕಂಡು ಅವರೇ ಮಾತನಾಡಿದರು . 'ಪರವಾಗಿಲ್ಲ ಬಿಡ್ರಪ್ಪಾ ! ಎಲ್ಲರೂ ಗೊತ್ತು ಹಿಡಿಯುವದಕ್ಕೆ ನಾನೇನು ಫಿಲ್ಮ್ ನಟನೇನೂ ' ಅಂತ ಎಂದಿದ್ದರು . ಬಂದ ವಿಷಯವನ್ನು ಹೇಳಿದೆವು . ಅವರು ತುಂಬು ಹೃದಯದಿಂದ ಒಪ್ಪಿಕೊಂಡಿದ್ದರು. ಅಷ್ಟರಲ್ಲಿಯೇ ಅವರ ಪತ್ನಿಯವರು ಗರಂ ಚಹಾ ತಂದು ಇಟ್ಟಿದ್ದರು. ಚಹಾ  ಕುಡಿದು ಮನೆಯನ್ನು ಬಿಟ್ಟಿದ್ದೆವು . ಅವರ ಸರಳ ಜೀವನದ ಶೈಲಿಯನ್ನು ಕಂಡು ನಾನು ದಂಗಾಗಿದ್ದೆ.
೧೫ ದಿನಗಳ ನಂತರ ಅವರನ್ನು ಕಾರ್ಯಕ್ರಮಕ್ಕೆ ಕರೆ ತರಲು ಕಾರು ತೆಗೆದುಕೊಂಡು ಹೋಗಿದ್ದೆವು. ಕಾರನ್ನು  ಕಂಡು ಅವರೆಂದಿದ್ದರು ' ಇದಕ್ಕ್ಯಾಕ ಇಷ್ಟು ಖರ್ಚು  ಮಾಡಿದ್ರಿ , ಅರ್ಧ ಘಂಟೆಗೊಂದ  ಸಿಟಿ ಬಸ್ಸ ಅದಾವ ಬಸ್ಸಿನಾಗ ಹೋಗಬಹುದಿತ್ತಲ್ಲ?' ಎಂದು . ಆ ಮಾತುಗಳು ಅವರ ಸರಳ ಜೀವನಕ್ಕೆ ಇನ್ನೊಂದು ಸಾಕ್ಷಿಯಾಗಿದ್ದವು . ಅರ್ಧ ಘಂಟೆಯ ಕಾರು ಪಯಣದಲ್ಲಿ ನಮ್ಮ ಜೊತೆಗೆ ಎಷ್ಟೊಂದು ಸಲೀಸಾಗಿ  ಮಾತನಾಡಿದ್ದರು . ಅವರಿಗೆ  ತಾವೊಬ್ಬ ದೊಡ್ಡ ಕವಿ ಎಂಬ ಅಹಂಕಾರ ಸ್ವಲ್ಪವೂ ಇರಲಿಲ್ಲ . 
ಕೆಎಂಸಿ ಯ ಕನ್ನಡ ಸಂಘದ ಬಗ್ಗೆ ಮತ್ತು ಬೇಂದ್ರೆಯವರ ದಿನಾಚರಣೆ ಬಗ್ಗೆ ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದರು. ಬೇಂದ್ರೆಯವರ ಬಗ್ಗೆ ಅವರಿಗೆ ತುಂಬಾ ಗೌರವವಿತ್ತು . ಅವರ  ಬಗ್ಗೆ  ಮನಸು ಬಿಚ್ಚಿ ಮಾತನಾಡಿದ್ದರು ಕಾರ್ಯಕ್ರಮದಲ್ಲಿ . 
ಅಂಥ ಸರಳ ಮತ್ತು ಶಿಸ್ತಿನ ಕವಿ ಜೀವಿಯ ಜೊತೆಗಿನ ನನ್ನ ಸಣ್ಣ ಭೇಟಿ ಮತ್ತು ಅರ್ಧಘಂಟೆಯ ಕಾರು ಪಯಣ ನನ್ನ ಜೀವನದಲ್ಲಿ ಮರೆಯಲಾಗದ ಘಟನೆಯೊಲ್ಲೊಂದು . ಇಲ್ಲಿ ಅದನ್ನು ನೆನಪಿಸಿಕೊಳ್ಳಲು ಹೆಮ್ಮೆ ಎನಿಸುತ್ತಿದೆ.

~ ಶಿವ ಮೇಟಿ

8 thoughts on “ವಿಶ್ವಭಾರತಿಗೆ ಕನ್ನಡದಾರತಿ..ಚನ್ನವೀರ ಕಣವಿಯವರಿಗೆ ಅನಿವಾಸಿಯ ಭಾವಾಂಜಲಿ

  1. ಗೌರಿಯವರು ಬರೆದ ಸಂಪಾದಕರ ಮುನ್ನುಡಿ, ಅವರ ಸಾಹಿತ್ಯಾಧ್ಯಯನದ ಆಳ್ಲದ ಪರಿಚಯವಾಗುತ್ತದೆ. ಕಣವಿಕಾವ್ಯಕಣವಿಯೊಳಗಿಳಿದು ಅಲ್ಲಿನ ಹೂಹಣ್ಣುಗಳ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಂಟುಮಾಡಿ

    ನಾನು ಈ ಮೊದಲು ’ಹೂವು ಹೊರಳುವವು…’ಕವನವನ್ನು ಓದಿರಲಿಲ್ಲ. ಸರೋಜಿನಿಯವರು ಈ ಕವನದ ಪಕಳೆ-ಪಕಳೆಗಳನ್ನು ಬಿಡಿಸಿ ವಿವರಿಸಿದ್ದಾರೆ.

    ’ಒಂದು ಮುಂಜಾವಿನಲಿ…’ ನನ್ನ ಅಚ್ಚುಮೆಚ್ಚಿನ ಭಾವಗೀತೆಗಳಲ್ಲಿ ಒಮ್ದು. ಸುಮನಾ ಅವರು ಎದೆತುಂಬಿ ಹಾಡಿದ್ದಾರೆ.

    ಧಾರವಾಡದ ಆಕಾಶವಾಣಿಯನ್ನು ಕೇಳಿದವರೆಲ್ಲರೂ ತಪ್ಪದೇ ಕೇಳಿರುವ ’ವಿಶ್ವವಿನೂತನ…’ಹಾಡನ್ನು ಅಮಿತಾ ಅವರು ನೆನೆಪಿಸಿಕೊಂಡಿದ್ದು ಸಾಂಧರ್ಭಿಕವಾಗಿದೆ.

    ಇಂಥ ಚಂದದ ಸಂಚಿಕೆಯನ್ನು ದಾಖಲೆಯ ಸಮಯದಲ್ಲಿ ತಂದು ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿ ’ಅನಿವಾಸಿ’ಯ ಹೂವು ಸಮನ್ವಯಕವಿಯೆಡೆಗೆ ಅರಳುವಂತೆ ಮಾಡಿದ ಗೌರಿಯವರಿಗೆ ಅಭಿನಂದನೆಗಳು.

    – ಕೇಶವ

    Like

  2. ಈ ವಾರದ ಸಂಚಿಕೆ ಎಲ್ಲಾ ವಿಧದಿಂದಲೂ ಕವಿವರ್ಯರಿಗೆ ಅರ್ಥಪೂರ್ಣ ಶ್ರದ್ಧಾಂಜಲಿ. ಗೌರಿಯವರ ಮುನ್ನುಡಿ ಬಹಳ ಆಪ್ತವೆನಿಸಿತು. ‘ವಿಶ್ವ ವಿನೂತನ ವಿದ್ಯಾ ಚೇತನ ‘ ಗೀತೆಯನ್ನು ಹಾಡದ ಕನ್ನಡ ಕಾರ್ಯಕ್ರಮಗಳಿಲ್ಲ. ನಾಡ ಪ್ರೇಮವನ್ನು ಉಕ್ಕಿಸುವ ಜನ ಸಾಮಾನ್ಯರ ಬಾಯಲ್ಲಿ ಸರಾಗವಾಗಿ ಹರಿದಾಡುವ ಗೀತೆ. ಕವಿಯ ಬಗೆಗಿನ ಅಭಿಮಾನವನ್ನು ಗೌರಿ ಯವರು ಹಂಚಿಕೊಂಡ ರೀತಿ ಅನನ್ಯ. ‘ ಸೋನೆ ಮಳೆ ಸುರಿದು ನೆಲದೆದೆ ಹದಗೊಳ್ಳುತ್ತಲೆ ಇರುತ್ತದೆ ‘ ಎಂಬ ಅವರ ಮುನ್ನುಡಿಯ ಕೊನೆಯ ಸಾಲು ಮನ ಮುಟ್ಟುವಂತದ್ದು.

    ಸುಮನಾ ಅವರ ಸುಮಧುರ ಗಾಯನ, ಸರೋಜಿನಿಯವರ ಸುಂದರ ವ್ಯಾಖ್ಯಾನ ಸೊಗಸಾಗಿದೆ. ಅಂದಿನ ಚಂದನ ವಾಹಿನಿಯಲ್ಲಿ ಬಿ. ಆರ್. ಛಾಯಾ ಅವರ ಕಂಠದಿಂದ ಹೊರಹುಮ್ಮುತ್ತಿದ್ದ ‘ ಒಂದು ಮುಂಜಾವಿನಲಿ ‘, ‘ ಹೂವು ಹೊರಳುವವು ‘ ಗೀತೆಗಳನ್ನು ಕೇಳುತ್ತಿದ್ದ ದಿನಗಳು ನೆನಪಾಯಿತು. ಅಮಿತಾ ಹಾಗೂ ಮೇಟಿಯವರು ಹಂಚಿಕೊಂಡ ಕಣವಿಯವರೊಂದಿಗಿನ ಅವರ ಅನುಭವದ ಕ್ಷಣಗಳು
    ಅಷ್ಟೇ ಚೆನ್ನಾಗಿದೆ.

    Like

  3. ಈ ವಾರದ ಅನಿವಾಸಿಯಲ್ಲಿ ನಮ್ಮ ಸದಸ್ಯರು ಕಳೆದ ವಾರ ನಿಧನರಾದ ಚೆಂಬೆಳಕಿನ ಕವಿ ನಾಡೋಜ ಚನ್ನವೀರ ಕಣವಿಯವರಿಗೆ ಅತ್ಯುತ್ತಮವಾದ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ವಿಶ್ವವಿನೂತನ ವಿದ್ಯಾಚೇತನದ ಕವಿವರ್ಯ, ಧಾರವಾಡದ ದಿಗ್ಗಜ ಸಾಹಿತಿಗಳಲ್ಲಿ ಒಬ್ಬರು. ಅವರ ಕವನಗಳನ್ನು ಶಾಲೆಯಲ್ಲಿ ಓದುತ್ತಲೇ ಬೆಳೆದ ನನಗೆ, ಧಾರವಾಡದಲ್ಲಿ ನಾನು ಪಿ.ಎಚ್.ಡಿ ಮಾಡುವಾಗ ನೋಡುವ ಅವಕಾಶ ಸಿಕ್ಕಿತ್ತು. ತಲೆಯ ಮೇಲಿನ ಟೊಪ್ಪಿಗೆ, ಸದಾ ನಗುಮುಖದ ಅವರನ್ನು ಮರೆಯಲು ಸಾಧ್ಯವೇ? ಅವರ ಕವನವನ್ನು ಸೊಗಸಾಗಿ ವಿಶ್ಲೇಷಿಸಿ ಬರೆದಿದ್ದಾರೆ ನಮ್ಮ ಅನಿವಾಸಿಯ ಅಭಿಮಾನಿ ಶ್ರೀಮತಿ. ಸರೋಜಿನಿ ಪಡಸಲಗಿ ಅವರು. ನಮ್ಮ ವೇದಿಕೆಯ ಬಗ್ಗೆ ಅವರು ನುಡಿದ ಮಾತುಗಳಲ್ಲಿ ಬಹಳ ಭಾವುಕತೆಯಿದೆ. ಮೇಟಿ ಅವರು ಕಣವಿ ಅವರನ್ನು ಭೇಟಿಯಾದ ಸನ್ನಿವೇಶವನ್ನು ಚೆನ್ನಾಗಿ ಬರೆದಿದ್ದಾರೆ. ಅಮಿತ ರವಿಕಿರಣ ಅವರ ಭಾವಾಂಜಲಿ ಕೂಡ ಸೊಗಸಾಗಿದೆ. ಸುಮನಾ ದೃವ್ ಹಾಡಿರುವ ಒಂದು ಮುಂಜಾವದಲಿ ಹಾಡು ಬಹಳ ಹಿತವಾಗಿದೆ.
    ಉಮಾ ವೆಂಕಟೇಶ್

    Like

  4. ವೀಕ್ಷಕರಾಗಿ, ಉಸ್ತುಕ ಓದುಗರಾಗಿ ನಮ್ಮನ್ನೆಲ್ಲ ಪ್ರೋತ್ಸಾಹಿಸಿದ ಸರೋಜಿನಿ ಪಡಸಲಗಿಯವರ ಮನಮುಟ್ಟುವ ಲೇಖನ ಕಣವಿಯವರ ಸಹೃದಯತೆಯನ್ನು ಮನದಟ್ಟು ಮಾಡಿದೆ. ನಿಮಗೆ ಸ್ವಾಗತ. ಸುಮನಾ ಧ್ರುವ ಅವರ ಸುಶ್ರಾವ್ಯ ಗಾಯನ ಕವಿಗೆ ಭಾವಪೂರ್ಣ ಶ್ರದ್ಧಾಂಜಲಿ. ಸಂಪಾದಕೀಯ ಹಾಗೂ ಅಮಿತ ಅವರ ಅನುಭವದಲ್ಲಿರುವ ವಿಶ್ವವಿನೂತನ ವಿದ್ಯಾಚೇತನ ಧಾರವಾಡ ಆಕಾಶವಾಣಿ ಕೇಳಿ ಬೆಳೆದವರಿಗೆಲ್ಲ ಚಿರಪರಚಿತ ಕವನ. ನಮಗೆಲ್ಲ ಬೆಳಗಾಗುತ್ತಿದ್ದುದೇ ಈ ಹಾಡಿನಿಂದ “ಹಗಲೆಲ್ಲ”. ಅಮಿತ ಅವರು ಹೊಸ ದಾಟಿ ಹಾಡನ್ನು ಕಳಿಸಿದರೆ, ನಾವೂ ಕೇಳಿ ಆನಂದಿಸಬಹುದು. ಮೇಟಿಯವರ ಅನುಭವ ಕವಿಯ ಸರಳತೆಗೆ ಹಿಡಿದ ಕನ್ನಡಿ. ಅನಿವಾಸಿಗಳ ಕಣವಿಯವರೊಡಗಿನ ವೈಯಕ್ತಿಕ ಅನುಭವಗಳು ಈ ವಾರದ ವೈಶಿಷ್ಠ್ಯವನ್ನು ಹೆಚ್ಚಿಸಿವೆ.

    Like

  5. ಮೊದಲು ಅನಿವಾಸಿ ಬಳಗಕ್ಕೆ ಹಾಗೂ ನನ್ನ ಬರಹ ಪ್ರಕಟಿಸಿದ ಸಂಪಾದಕಿ ಗೌರಿ ಅವರಿಗೆ ನನ್ನ ಅನಂತ ಧನ್ಯವಾದಗಳು.
    ನಿಜಕ್ಕೂ ಇಂದಿನ ಕಂತು ಆ ಮೃದು ವ್ಯಕ್ತಿತ್ವದ ನಾಡೋಜ ಕವಿ ಚೆನ್ನವೀರ ಕಣವಿಯವರಿಗೆ ಭಾವಾಂಜಲಿಯೇ ಸರಿ. ಆ ಮೇರು ಕವಿಯನ್ನು ಕುರಿತು, ಅವರ ಭೇಟಿಯ ಕುರಿತು ಬರೆದ ಅಮಿತಾ ಹಾಗೂ ಮೇಟಿಯವರ ಲೇಖನಗಳು ಅವರನ್ನೇ ಭೇಟಿಯಾದ ಅನುಭವ ನೀಡುತ್ತ ನಾ ಅವರನ್ನು ಭೇಟಿ ಮಾಡಿದ ಗಳಿಗೆಯತ್ತ ನನ್ನ ಕೊಂಡೊಯ್ದವು. ಅವರ ನಗುವಿನಲ್ಲೇ ಒಂದು ಚೆಂಬೆಳಕು ಸುಳಿದ ಅನುಭವ ನನಗೆ ನಾನು ಅವರನ್ನು ಭೇಟಿ ಆದಾಗ. ಸುಮನಾ ಅವರ ಗಾಯನ ಥೇಟ್ ಹಾಗೇ ಮೃದುವಾಗಿ ಸವರಿದಂತೆ, ಕಣವಿಯವರ ಚೆಂಬೆಳಕಿನ ನಗುವಿನ ಹಿತ ಸುರಿಸುವ ಹಾಗಿತ್ತು. ಇಷ್ಟೆಲ್ಲ ಸರಕನ್ನು ಅಲ್ಪ ಸಮಯದಲ್ಲಿ ಕಲೆಹಾಕಿ ಸುಂದರ ಕಂತನ್ನು ಹೊರ ತಂದ ಸಂಪಾದಕಿ ಗೌರಿ ಅವರಿಗೆ ಅಭಿನಂದನೆ ಹಾಗೂ ಕೃತಜ್ಞತೆಗಳು.
    ಇನ್ನೊಮ್ಮೆ ಅನಿವಾಸಿ ಬಳಗಕ್ಕೆ ಧನ್ಯವಾದಗಳು.
    ಸರೋಜಿನಿ ಪಡಸಲಗಿ.

    Like

  6. Vinathe Sharma comments (copied from Whatsapp )
    ಗೌರಿ,
    ಇವತ್ತಿನ ಅನಿವಾಸಿ ಪುಟವನ್ನು ನನ್ನ ಇನ್ಬಾಕ್ಸಿನಲ್ಲಿ ಈಗಷ್ಟೇ ಓದಿದೆ. ಮನವರಳಿಸುವ ನಿಮ್ಮ ಸಂಪಾದಕೀಯದಿಂದ ಆರಂಭವಾಗಿ ಕಣವಿಯರ ಕವನಗಳನ್ನು, ನೆನಪುಗಳನ್ನು, ಭೇಟಿಯಾದ ಪ್ರಸಂಗವನ್ನು ಓದಿ ಬಹಳ ಸಂತೋಷವಾಯಿತು. ಸರೋಜಿನಿ ಮತ್ತು ಅಮಿತಾ ಗೀತ-ಸಂಗೀತದಿಂದ ಕವಿಯ ಕೊಡುಗೆಯನ್ನು ಕೊಂಡಾಡಿದ್ದಾರೆ. ‘ವಿಶ್ವ ವಿನೂತನ…’ ಹಾಡಿನ ಸವಿನೆನಪಿನ ಧಾರೆಗಳು ನನ್ನ ಮನದಲ್ಲಿ!
    ಕವಿಯ ಸರಳತೆಯನ್ನು ನೆನಪಿಸಿಕೊಂಡ ಮೇಟಿಯವರ ಮುದ್ದು ಬರಹ. ಎಲ್ಲವೂ
    ಸೊಗಸಾಗಿದೆ!!

    Like

  7. ಎಂದಿನಂತೆ ಅದ್ಭುತ ಸಂಪಾದಕೀಯದೊಂದಿಗೆ ತೆರೆದುಕೊಂಡ ಇಂದಿನ”ಅನಿವಾಸಿ’ ಶ್ರದ್ಧಾಂಜಲಿ ಸಂಚಿಕೆ ಆಹ್ಲಾದಕರ ಸೋನೆ ಮಳೆಯಂತೆ ನಮ್ಮ ತನು, ಮನ, ಕಿವಿಗಳನ್ನು ತೋಯಿಸಿದೆ. ಅದರಲ್ಲಿ ಅಶ್ರುತರ್ಪಣವೂ ಸೇರಿದೆ. ಸುದ್ದಿ ಬಂದ 48 ಗಂಟೆಗಳಲ್ಲಿ ಇಷ್ಟೆಲ್ಲವನ್ನು ಕೂಡಿಸಿ ಸಂಪಾದಿಸುವದು ಸುಲಭದ ಕಾರ್ಯವಲ್ಲ. ಅದರ ಹಿಂದಿನ ಪರಿಶ್ರಮ ನನಗೆ ಗೊತ್ತು. ಕೀರ್ತಿ’-ಆಮೂರ್- ಸಲ್ಲಾಪದ ಸುನಾಥ್ ಅವರ ಬೇಂದ್ರೆ ಓದು ಆಗದೆ ಆ ಕವನಗಳ ಪೂರ್ಣ ಅನುಭವ ಆಗುತ್ತಿದ್ದಿಲ್ಲ ಅನ್ನುವಂತೆ ಸರೋಜಿನಿ ಪಡಸಲಗಿಯವರ ಕಣವಿಯವರ ಕವನದ ವಿಶ್ಲೇಷಣೆ (ಅವರು ತಪ್ಪದೆ ಅನಿವಾಸಿಯನ್ನು ಓದುವ ’ಅನಿವಾಸಿ ತಾಯಿ’ ಎಂದು ಅವರೇ ಹೆಮ್ಮೆ ಪಟ್ಟುಕೊಂಡಿದ್ದಾರೆ). ಒಂದೇ ದಿನದಲ್ಲಿ ಆಹ್ವಾನಿತ ಲೇಖಕಿ ’ಕಣವಿ”ಯ ಆಳಕ್ಕೂ ಇಳಿದು ಪ್ರತಿಯೊಂದು ಸಾಲನ್ನೂ ಬಿಡಿಸಿ ಒಳರ್ಥವನ್ನು ತೆರೆದಿಟ್ಟ ಪರಿ ಅನನ್ಯ. ಇದಲ್ಲದೆ ಇಬ್ಬರು ಅನಿವಾಸಿಯ ಬಳಗದವರು ’ಸಮನ್ವಯ ಕವಿ’ಯೊಡನೆಯ’ ತಮ್ಮ ಅನುಭವಗಳನ್ನು ಹಂಚಿಕೊಡಿದ್ದಾರೆ. ಇಬ್ಬರ ’ಛಾತಿ’ಯನ್ನೂ ಮೆಚ್ಚುವಂಥದು! ಒಬ್ಬರು (ಅಮಿತಾ) ಕವಿಯ ಇದುರುಗೇ ಅವರ ಕವನಗಳನ್ನು ಹಾಡಿ ಮೆಚ್ಚುಗೆ ಗಳಿಸಿದ್ದು; ಇನ್ನೊಬ್ಬರು (ಮೇಟಿ) ಹಾಡೇ ಹಗಲೇ ಅವರಿಗೇ ತಮ್ಮ ಮನೆಯ ದಾರಿಯನ್ನು ಕೇಳಿದ್ದು! Fortune favours the bold ಅನ್ನುವಂತೆ ಅವರ ಸುದೈವ ಮತ್ತು ಅತಿಥಿಯಾಗುವವವರ ಸರಳತೆ, ಸೌಜನ್ಯವನ್ನೂ ಕಂಡರು. ಇಂಥ ಚಿಕ್ಕ ಅನುಭವಗಳಲ್ಲೂ ದೊಡ್ಡವರ ಗುಣಗಳನ್ನು ಕಾಣುತ್ತೇವೆ. ಸುಮನಾ ಧ್ರುವ ಅವರ ನಿರಾಡಂಬರದ ಅತ್ಯಂತ ಭಾವಪೂರಿತವಾಗಿ ಹಾಡಿಗೆ ಚೆನ್ನವಿರ ಕಣವಿಯವರು ಆ ಪ್ರಸಿದ್ಧ ಕವಿತೆಯಲ್ಲಿ ಹೇಳುವಂತೆ ಶ್ರುತಿಪೆಟ್ಟಿಗೆ, ಹಿಮ್ಮೇಳವಿರದಿದ್ದರೂ ಅದರ ಸೊಬಗು ಎಳ್ಳಷ್ಟೂ ಕಡಿಮೆಯಾಗಿಲ್ಲ. ಅದನ್ನು ಕೇಳುತ್ತ ನನ್ನನ್ನೇ ನಾನು ಹುಟ್ಟಿದ ಧಾರವಾಡದಲ್ಲಿ ಕಳೆದುಕೊಂಡು ಕಲ್ಯಾಣನಗರದಿಂದ ಕೊಡೆ ಹಿಡಿದುಕೊಂಡು ಹೊರಟ ಕವಿ ”ಯಾವ ರಸ್ತೆ ಹಿಡಿದಿರಬೇಕು, ಈಗ ಎಲ್ಲಿ ಹೊರಳಿರಬೇಕು, ಇಲ್ಲೇ ’ಆ ಹುಲ್ಲೆಸಳು ಹೂ ಪಕಳೆ ಮುತ್ತಿನ ಮಿಂಚುಗಳನ್ನು’ ಕಂಡಿದ್ದರೋ, ಈಗ ಅತ್ತಿಕೊಳ್ಳದತ್ತ ಹೊರಳಿದರೋ” ಅಂತ ಕಲ್ಪನೆ ಮಾಡಿಕೊಳ್ಳುತ್ತಿದ್ದೆ! ಕವಿ ಕೇಳಿದ್ದರೆ ’ಚಲೋ ಹಾಡಿದಿ, ತಂಗಿ’ ಅಂತ ಶಭಾಸ್ ಹೇಳುತ್ತಿದಾರೇನೋ.ಅದೊಂದು ಅನುಭವವೇ ಸೈ! ಲೇಖನದ ಕೊನೆಯಲ್ಲಿ ಸರೋಜಿನಿಯವರು ಹೇಳುವಂತೆ ಕಣವಿಯವರು ’ಹೋದರೂ’ ಎಲ್ಲೂ ಹೊಗಿಲ್ಲ, ನಮ್ಮ ಜೊತೆಯಲ್ಲೇ ಇರುತ್ತಾರೆ.
    ಶ್ರೀವತ್ಸ ದೇಸಾಯಿ

    Like

  8. ಮೇಲೆ ಬರೆದಂತೆ, ಕಣವಿಯವರ ’ವಿಶ್ವ ವಿನೂತನ ವಿದ್ಯಾ ಚೇತನ ..’ದಂತಹ ಹಾಡುಗಳನ್ನು ಬೆಳಗಿನ ರೇಡಿಯೋದಲ್ಲಿ ಕೇಳುತ್ತ ಬೆಳೆದವರಲ್ಲಿ ನಾನೂ ಒಬ್ಬ. ಇಂದಿನ ಸಂಚಿಕೆಯಲ್ಲಿ ಅಗಲಿದ ಸರಳ, ಹಿರಿಯ ಜೀವಕ್ಕೆ ಅನಿವಾಸಿಗಳ ಹೃದಯದಿಂದ ಹೆಕ್ಕಿತೆಗೆದ ಆತ್ಮೀಯ ನೆನಪುಗಳು, ವಿದಾಯ ಮತ್ತು ಹಾಡಿನ ನಮನ ತುಂಬಾ ಚೆನ್ನಾಗಿ ಮೂಡಿಬಂದಿದೆ. ಗಂಧಕ್ಕೆ ಕೈ ಅಕಸ್ಮಾತ್ ತಾಕಿದರೂ, ಅದು ನಮ್ಮ ಕೈಗೆ ಸುವಾಸನೆಯನ್ನೇ ಹಂಚುತ್ತದೆ ಅನ್ನೊ ಮಾತಿಗೆ ಇಂಥವರೆ ಉದಾಹರಣೆ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.