ಸಹೃದಯ ಅನಿವಾಸಿ ಬಂಧುಗಳೇ,
ತಮಗೆಲ್ಲರಿಗೂ ಸಂಕ್ರಮಣದ ಹಾರ್ದಿಕ ಶುಭಾಶಯಗಳು. ‘ನಿಲವಿಲ್ಲಾ ಜಗದಿ ಕತ್ತಲೆಗೆಂದು ಗೆಲುವನು ಸಾರುವ ಭಾಸವ ತಾ. ಶಾಂತ ಸುಂದರ ಶಿವದ ಸವಿತಾ. ಬಾ ಸವಿತಾ..ಬಾ ಸವಿತಾ’ ಎಂಬ ಮಾಸ್ತಿಯವರ ಆಶಯದಂತೆ, ಸಂಕ್ರಾಂತಿಯ ಪರ್ವ ಕಾಲದಲ್ಲಿ ತನ್ನ ರಾಶಿಯನ್ನು ಬದಲಿಸಿಕೊಳ್ಳುತ್ತಿರುವ ಆ ಸೂರ್ಯದೇವ ನಮ್ಮಲ್ಲೂ ಸಮ್ಯಕ್ ಕ್ರಾಂತಿಯನ್ನುಂಟು ಮಾಡಲಿ. ಮುರಳಿಯವರು ಬರೆದಂತೆ “ಗಗನ ಕರುಣನ ಋಣದ ಕರುಣೆ ನಮ್ಮನ್ನು ಪೊರೆಯುತ್ತಿರಲಿ; ನಮ್ಮ ಧೀ:ಶಕ್ತಿಯನ್ನು ಪ್ರಚೋದಿಸಿ ಅರಿವಿನ ಬದುಕಿಗೆ ಚಾಲನೆ ನೀಡಲಿ.
ನಳನಳಿಸೋ ಕಡಲೆಗಿಡ, ರಸಭರಿತ ಕಬ್ಬು, ಮಧುರ ಪೇರಲ-ಬೋರೆಹಣ್ಣುಗಳು, ಎಳೆಯ ಬದನೆ-ಗಜ್ಜರಿಗಳು,ತೂಗಿ ತೊನೆಯೋ ತೆಂಗು – ವೀಳ್ಯಗಳು, ಧಾನ್ಯದ ಕಣಜಗಳು.. ಎಲ್ಲೆಲ್ಲೂ ಸುಗ್ಗಿಯ ಸಂಭ್ರಮ. ಆ ಸಂಭ್ರಮವನ್ನೇ ಇಂದಿಲ್ಲಿ ಹಾಡಿನ ಹೊನಲಾಗಿ ಹರಿಸಿದ್ದಾರೆ ಕುಮಾರಿ. ಅನನ್ಯ ಕದಡಿಯವರು.
ಮೊನ್ನೆಯಷ್ಟೇ ಇಲ್ಲಿ ಕ್ರಿಸಮಸ್ ಸಡಗರ ಹುರಿದ ‘ಬಾತು’ (roasted duck) ಭೋಜನದೊಂದಿಗೆ ಮುಗಿದಿದೆ. ಇಂದು ರಾಧಿಕಾ ಅವರು ಸಂಕ್ರಾಂತಿಗೆಂದು ಮತ್ತೆ ‘ಬಾತು’, ‘ಒಂಟೆ’, ‘ಗಂಡಭೇರುಂಡ’ಗಳ ಭೂರಿ ಭೋಜನವನ್ನೇ ಹೊತ್ತುತಂದಿದ್ದಾರೆ ತಮ್ಮ ಲೇಖನದಲ್ಲಿ. ಹುಬ್ಬೇರಿಸಬೇಡಿ. ಓದಿ ನೋಡಿ.. ನೀವೂ ಬಾಯಾಡಿಸಿ. ಅಡ್ಡಾಗೆದ್ದ ಮೇಲೆ (ವಿಶ್ರಾಂತಿಯ ನಂತರ) ನಿಮ್ಮ ಅನಿಸಿಕೆಗಳನ್ನು ಮರೆಯದೇ ಹಂಚಿಕೊಳ್ಳಿ. ‘ಎಳ್ಳುಬೆಲ್ಲ ತಗೊಂಡು ಒಳ್ಳೊಳ್ಳೆ ಮಾತಾಡೂಣು.’
***ಸಂಪಾದಕಿ
ಮತ್ತೆ ಮರಳಿದೆ ಮಕರ ಸಂಕ್ರಮಣ
ತೃಣ ಕಣದ ಮಣ ಗಗನಕರುಣನ ಋಣ ಅವನಿನ್ನು ನವ ತರುಣ ಹುರಿದೆಳ್ಳು ಮನ- ಮನದ ಹೂರಣ ಅದಕೆ ಬೆಲ್ಲದಂಟಿನ ಸವಿ ಸಂಕರಣ ತರುತ ಮರಳಿದೆ ಮಕರ ಸಂಕ್ರಮಣ, ಸರಿಸಿ ಸಕ್ರಮದ ಮತ್ತೊಂದು ಚರಣ ಸುರಿಸಿ ಸಂಭ್ರಮದ ಮುತ್ತಿನಾಭರಣ ಬಣ ಬಣದ ಗಣ ದೊಡಲೊಡಲ ರಣ ದೊಳೊಲವ ತೋರಣ ಹೊಳೆಸುವ ಆ ಬೆಳಕ ಕಿರಣ ತರುತ ಮರಳಿದೆ ಮಕರ ಸಂಕ್ರಮಣ. . . ಗುರುತನದ ಗುಣ ಬೆಳೆಬೆಳೆದು ಕ್ಷಣ ಧರೆಯುಸಿರ ಕಣ ಕುಣಿಸುವ ನೀಲಾಭರಣ ತರುತ ಮರಳಿದೆ ಮಕರ ಸಂಕ್ರಮಣ, ಸರಿಸಿ ಸಕ್ರಮದ ಮತ್ತೊಂದು ಚರಣ ಸುರಿಸಿ ಸಂಭ್ರಮದ ಮುತ್ತಿನಾಭರಣ ***ಮುರಳಿ ಹತ್ವಾರ್
******************************************************************************************************
ಸುಗ್ಗಿಯ ಹಾಡು

ಅನನ್ಯ ಕದಡಿ ನಮ್ಮ ಅನಿವಾಸಿಯ ಹೆಮ್ಮೆಯ ಸದಸ್ಯೆ ಸ್ಮಿತಾ ಕದಡಿಯವರ ಸುಪುತ್ರಿ. ತನ್ನ ಆರನೆಯ ವರ್ಷದಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸ ಆರಂಭಿಸಿ ಪ್ರಸ್ತುತ ಬೆಂಗಳೂರಿನ ಬೃಂದಾ ಎನ್. ರಾವ್ ಅವರಿಂದ ಆನ್ಲೈನ್ ಕಲಿಕೆ ಮುಂದುವರೆಸಿದ್ದಾಳೆ. ಈಗ A levels ನಲ್ಲಿ ಅಭ್ಯಸಿಸುತ್ತಿರುವ ಇವಳಿಗೆ ಮುಂದೆ ವೈದ್ಯೆಯಾಗುವ ಕನಸು.
ನಮ್ಮ ತಲೆಗೇ ಕನ್ನಡ ಮುಗಿದು ಹೋಗುತ್ತಾ ಎಂಬ ನಮ್ಮಂಥ ಅನಿವಾಸಿಗಳ ತಳಮಳವನ್ನು ಅನನ್ಯಾಳಂಥ ಮಕ್ಕಳು ತಕ್ಕ ಮಟ್ಟಿಗಾದರೂ ಕಡಿಮೆ ಮಾಡುತ್ತಾರೆ; ಹೊಸ ಭರವಸೆ ಮೂಡಿಸುತ್ತಾರೆ.
*********************************************************************************************************
ನಂದು ಬಾತುಕೋಳಿ .. ನಂದು ಕುದುರೆ ..ನಾನು ದೊಡ್ಡ ಗೋಪುರ ತಿಂದೆ ….
“ಇದೇನಪ್ಪ ಕುದುರೆ ಬಾತುಕೋಳಿ ಯಾರು ತಿಂತಾರೆ ?!” ಅನ್ಕೋತಿರ್ಬೇಕು ನೀವು.ಇದು ಸಂಕ್ರಾಂತಿಯ ಸಂಭ್ರಮ.. ಮಕ್ಕಳು ಬಿಳಿ ಮತ್ತು ಬಣ್ಣ ಬಣ್ಣದ ವಿವಿಧ ಆಕಾರಗಳ ಸಕ್ಕರೆ ಅಚ್ಚು ಸವಿಯುತ್ತಾ ಮಾತಾಡುವ ರೀತಿ..
ಉತ್ತರ ಕರ್ನಾಟಕದ ಸಂಕ್ರಮಣ ಹಾಗು ದಕ್ಷಿಣ ಕರ್ನಾಟಕದ ಸಂಕ್ರಾಂತಿಯ ಆಚರಣೆಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ.
ಪ್ರತೀ ವರ್ಷ ನಾವು ಸುಮಾರು ೧೦-೧೨ ವರ್ಷದವರಾಗುವ ತನಕ ಮನೆ ಮನೆಗೆ ಹೋಗಿ ಎಳ್ಳು ಸಕ್ಕರೆ ಅಚ್ಚಿನ ಪ್ಯಾಕೆಟ್, ಒಂದು ಕಬ್ಬು ಹಾಗು ಯಾವುದಾದರು ಹಣ್ಣು ಒಂದು ತಟ್ಟೆಯಲ್ಲಿ ಜೋಡಿಸಿಕೊಂಡು ಸುಮಾರು ೨೦-೨೫ ಮನೆಗಳಿಗೆ ಬೀರುವ ಪದ್ಧತಿ ನಾವೂ ಪಾಲಿಸುತ್ತಿದ್ವಿ. ”ಎಳ್ಳು ಬೆಲ್ಲ ತಿಂದು ಒಳ್ಳೆ ಒಳ್ಳೆ ಮಾತಾಡೋಣ” ಅನ್ನೋದು.
ನಮ್ಮದು ಮಹಡಿ ಮನೆ. ಕೆಳಗಿನ ಮನೆಯಲ್ಲಿ ಐಯಂಗಾರ್ ಪಾಟಿ.. ಅವರು ತಿಂಗಳ ಮುಂಚಿತವಾಗಿಯೇ ಕೊಬ್ಬರಿ ಹಾಗು ಬೆಲ್ಲದ ಅಚ್ಚನ್ನು ಅಡಕೋತ್ ನಿಂದ ಬಹಳ ನಾಜೂಕಾಗಿ ಪ್ರತಿಯೊಂದು ತುಂಡು ಸಮ ಆಕಾರ ಗಾತ್ರಕ್ಕೆ ಅಚ್ಚುಕಟ್ಟಾಗಿ ಕತ್ತರಿಸಿ, ಕೊಬ್ಬರಿಯನ್ನು ಬಿಸಿಲಿಗೆ ಒಣಗಿಸಲು ಅಂಗಳದಲ್ಲಿ ಬೆತ್ತದ ಮೊರಗಳಲ್ಲಿ ಇಟ್ಟಾಗ ಸಂಕ್ರಾಂತಿ ಬರುವ ಸೂಚನೆ ಸಿಗುತ್ತಿತ್ತು. ಆದರೆ ನಮ್ಮ ಮನೆಯಲ್ಲಿ ಆ ಪದ್ಧತಿ ಇಲ್ಲದ ಕಾರಣ ದೇವರ ನೈವೇದ್ಯಕಷ್ಟೇ ಅಮ್ಮ ಎಳ್ಳು ಬೆಲ್ಲ ಮಾಡುತ್ತಿದ್ದಳು. ನಮ್ಮ ತಂದೆಗೆ ಹಬ್ಬ ಅಂದ್ರೆ ಹುರುಪು. ೨-೩ ಅಂಗಡಿಗಳಲ್ಲಿ ತಿರುಗಾಡಿ ಶೇಂಗಾ,ಬೆಲ್ಲದ ತುಂಡುಗಳು,ಕುಸುರೆಳ್ಳು ಎಲ್ಲಾ ತಂದು ಅಂಗೈ ಅಗಲದ ಪ್ಲಾಸ್ಟಿಕ್ ಪೊಟ್ಟಣದಲ್ಲಿ ಇವೆಲ್ಲ ಸಾಮಾನಿನ ಮಿಶ್ರಣ ಮಾಡಿ ಅದನ್ನು ತುಂಬಿ ಸ್ಟೇಪ್ಲರ್ ಹೊಡೆದು ಹಿಂದಿನದಿನವೇ ತಯ್ಯಾರಿ ಮಾಡುತ್ತಿದ್ದರು.
ಸಕ್ಕರೆ ಅಚ್ಚಿನ ಕಥೆಯೇ ಬೇರೆ.. ಮೊದಮೊದಲು ನಾವೂ ಅಂಗಡಿಯಿಂದ ಅಚ್ಚನ್ನು ತಂದು ಬೀರುತ್ತಿದ್ವಿ. ನಂತರ ಅಮ್ಮ ಹಾಗು ಅವಳ ಫ್ರೆಂಡ್ಸ್ ಎಲ್ಲಾ ಸೇರಿ ಮನೆಯಲ್ಲೇ ಸಕ್ಕರೆ ಅಚ್ಚು ಮಾಡುವ ವಿಧಾನ ಕಲಿತು ಅದೊಂದು ಸಂಭ್ರಮವೇ ಆಯಿತು. ಮನೆಯಲ್ಲಿ ಮಾಡಿದ ಅಚ್ಚಿನ ರುಚಿನೇ ಬೇರೆ.. ಬಣ್ಣ ನೋಡೀನೇ ಹೇಳಬಹುದು.ಬಾಯಿಯಲ್ಲಿ ಇಟ್ಟ ತಕ್ಷಣ ಕರಗಿ..ಆಹಾ … ಮರೆಯಲಸಾಧ್ಯ ಆ ದಿನಗಳು .. ಕೆಲವೊಬ್ಬರು ಹಳೇ ಮೈಸೂರಿನವರು ಪ್ರತಿಯೊಬ್ಬರಿಗೂ ಸ್ಟೀಲಿನ ಪುಟ್ಟ ಡಬ್ಬಿ, ತಟ್ಟೆಯಲ್ಲಿ ಎಳ್ಳು ಬೀರುತ್ತಿದ್ದರು. ನಂತರ ಬಣ್ಣ ಬಣ್ಣದ ಪ್ಲಾಸ್ಟಿಕ್ ಡಬ್ಬಿಯ ಹಾವಳಿ.
ಹೀಗೆ ನಾವು ಬೀದಿಯ ಸಮ ವಯಸ್ಸಿನ ಹೆಣ್ಣು ಮಕ್ಕಳೆಲ್ಲಾ ಗುಂಪು ಮಾಡಿಕೊಂಡು ಮನೆಯಿಂದ ಮನೆಗೆ ಎಳ್ಳು ಕಬ್ಬು ಬೀರುತ್ತಿರುವಾಗ ಯಾರ ಮನೆಯ ಸಕ್ಕರೆ ಅಚ್ಚು ಅದ್ಭುತವಾಗಿರುತ್ತದೆ ಅಂತ ನಮಗೆ ಮೊದಲೇ ತಿಳಿದ ಕಾರಣ ಅವರ ಮನೆಯಿಂದ ಹೊರಬರುತ್ತಿವಾಗಲೇ ರಸ್ತೆಯಲ್ಲಿ ಸವಿಯುತ್ತಾ ನಾನು ಅದೆಷ್ಟೋ ಬಾತುಕೋಳಿ, ಕುದುರೆ, ಗಂಡಭೇರುಂಡ, ಆನೆ ಹಾಗು ಗೋಪುರಗನ್ನು ಗುಳುಂ ಎನಿಸಿದ್ದೇನೆ..
ಇವೆಲ್ಲಾ ಕಥೆ ಮನೆಗೆ ಬಂತಕ್ಷಣ ಹೇಳುತ್ತಿರುವಾಗ ಅಮ್ಮ ತಮ್ಮ ಬಾಲ್ಯದ ನೆನಪು ತೆಗೆಯುತ್ತಿದ್ದರು. ಈ ಉತ್ತರ ಕರ್ನಾಟಕದವರು ಒಂದೇ ದಿನ ಹಬ್ಬ ಮಾಡೋದಿಲ್ಲ! ಯಾಕೋ ಏನೋ ಎಲ್ಲಾ ದಿನಗಟ್ಟಲೆ!! ಸಂಕ್ರಮಣದ ಹಿಂದಿನ ದಿನ ಭೋಗಿ .. ಅದರ ಊಟಾ.. ಭಾರಿ ಜೋರ್ ! ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ, ಖಾರ್ ಹುಗ್ಗಿ ಸೀ ಗೊಜ್ಜು, ಶೇಂಗಾ ಹೋಳಗಿ.. ಅಮ್ಮನ ಕಾಲದಾಗ ಸಂಕ್ರಮಣದ ದಿನ ಗಾಜಿನ ಛಂದಾಛಂದ ಬಾಟಲಿ ಯೊಳಗ ಕುಸುರೆಳ್ಳು ತುಂಬಿಕೊಂಡು ಹಿರಿಯರ ಕೈಯಾಗ್ ಕೊಟ್ಟು ”ಎಳ್ಳು ಬೆಲ್ಲ ಕೊಟ್ಟ ಎಳ್ಳು ಬೆಲ್ಲದ್ಹಂಗ ಇರೋಣು” ಅಂದು ನಮಸ್ಕಾರ ಮಾಡೋದು.
ಮೈಸೂರ್ ನ್ಯಾಗ ಸೀ ಪೊಂಗಲ್ ಖಾರ ಪೊಂಗಲ್ ಅದ್ರ ಮುಗಿತು ಹಬ್ಬ, ಅನ್ನೋರು. ನಂಕಡೆ ಭಕ್ರಿ, ಹೋಳಗಿ ಎಷ್ಟು ಥರಾವರಿ ಅಡಗಿ. ಆದರೆ ನಮಗೆ ಮೈಸೂರೆಂದ್ರೆ ಎಲ್ಲಿಲ್ಲದ ಅಭಿಮಾನ.. ಆಗ ಏನು ಅoತಿರಲಿಲ್ಲ.. ಈಗ ನೋಡಿದರೆ ಯಾವ ಪ್ರದೇಶದಲ್ಲಿ ಏನು ಬೆಳೆಯುತ್ತಾರೋ ಅದನ್ನೇ ಅಲ್ಲವೇ ತಿನ್ನೋದು ಅಂತ ನಾನು ನನ್ನ ಅಕ್ಕ ಸಮರ್ಥಿಸಿಕೊಳ್ಳುತ್ತೇವೆ .. ಒಂದೇ ರಾಜ್ಯವಾದರೂ ಎಷ್ಟೆಲ್ಲಾ ವಿವಿಧತೆ. ನಲವತ್ತು ವರ್ಷಗಳ ಹಿಂದೆ ಜೋಳ ಸಜ್ಜೆ ಮೈಸೂರಿನಲ್ಲಿ ಜನಪ್ರಿಯವಿರಲಿಲ್ಲ. ಹಬ್ಬಕ್ಕೆ ಜೋಳದ ರೊಟ್ಟಿ ಅಂದ್ರೆ ಆಶ್ಚರ್ಯ ಪಡುತ್ತಿದ್ದರು. ಬಹುಷಃ ಇಂಗ್ಲೆಂಡಿನಲ್ಲಿ ಸಂಕ್ರಾಂತಿಯ ಪದ್ಧತಿ ಇದ್ದಿದ್ದ್ರೆ ಆಲೂಗಡ್ಡೆಯ ವಿಧವಿಧವಾಗಿ ಅಡಿಗೆ ಜಾಕೆಟ್ ಪೊಟಾಟೋ, ಮ್ಯಾಶ್ಡ್ ಪೊಟಾಟೋ, ಪೊಟಾಟೋ ಪೈ ಅಂತ ಮಾಡ್ತಿದ್ರೋ ಏನೋ? ನಾವು ಹೇಗೆ ಮನೆ ಮನೆಗೆ ಹೋಗಿ ಎಳ್ಳು ಕೊಟ್ಟಂತೆ ನಮ್ಮ ಮನೆಗೂ ಅಕ್ಕ ಪಕ್ಕದವರು ಎಳ್ಳು ಕೊಡುತ್ತಿದ್ದರು. ಮನೆಯಲ್ಲಿ ಎಲ್ಲಿ ನೋಡಿ ಎಳ್ಳಿನ ಪ್ಯಾಕೆಟ್. ಕಿಲೋಗಟ್ಟಲೆ ಈ ಎಳ್ಳಿನ ಮಿಶ್ರಣ.. ಸರಿ! ಈಗ ಏನ್ ಮಾಡಬೇಕು ಈ ಮಿಶ್ರಣ ಇಟ್ಕೊಂಡು? ಅಮ್ಮನ ಐಡಿಯಾ! ಅಪ್ಪನಿಗೆ ಆರ್ಡರ್ ಕೊಟ್ರು! ಈ ಮಿಶ್ರಣದಿಂದ ಕುಸುರೆಳ್ಳು, ಬೆಲ್ಲ ಬೇರೆ ಮಾಡಿ ಅಂತ. ಪಾಪ! ಅಪ್ಪ .. ಬೇಸರವಿಲ್ದೆ ಅದನ್ನು ಬೇರೆ ಮಾಡಿ ಕೊಟ್ರು .. ಅಮ್ಮ ಅದರಿಂದ ಚಟ್ನಿ ಪುಡಿ, ಆ ಪುಡಿ ಈ ಪುಡಿ ಮಾಡಿ.. ಸಂಕ್ರಮಣದ ಕಥೆ ಮುಗಿಸಿದರು. ಒಟ್ಟಿನಲ್ಲಿ ಹೀಗೆ ವರ್ಷಾರಂಭದಿಂದ ಕಡೆಯತನ ಬರುವ ಎಲ್ಲಾ ಹಬ್ಬಗಳನ್ನು ನಾನು ನನ್ನ ಅಕ್ಕ ನಾರ್ತ್ ಸೌತ್ ನ ಹೋಲಿಕೆ ಹುಡುಕಲಾಗದೆ ಅಲ್ಲೂ ಇಲ್ಲ ಇಲ್ಲೂ ಅಂತ ಹಬ್ಬದ ಎಲ್ಲಾ ಪದ್ಧತಿ ಅನುಸರಿಸಲು (ಅನುಕರಣೆ) ಪ್ರಯತ್ನಿಸುತ್ತಾ ಸುಸ್ತಾಗುತ್ತಿದ್ದೇವೆ. ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು. ***ರಾಧಿಕಾ ಜೋಶಿ.
******************************************************************************************************
ಮಕರ ಸಂಕ್ರಾಂತಿಗೆ ಸರಿಯಾಗಿ ’ಅನಿವಾಸಿ’ಯಲ್ಲೂ ಸಂಕ್ರಾಂತಿ. ಅಮಿತಾ-ಕಕ್ಷೆಯಿಂದ ಗೌರಿ-ಕಕ್ಷೆಗೆ. ಅಮಿತಾ ಅವರು ಸಂಪಾದಕೀಯವನ್ನು ಅಮಿತ ಸಡಗರದಿಂದ ಪೂರೈಸಿ ಗೌರಿಯವರಿಗೆ ಸಂಕ್ರಾಂತೀಕರಿಸಿದ್ದಾರೆ. ಗೌರಿಯವರ ಸಾರಥ್ಯದಲ್ಲಿ ಮೂಡಿಬಂದ ಮೊದಲ ’ಶುಕ್ರವಾರ’ ಸಂಕ್ರಾಂತಿಯ ಸಡಗರದಲ್ಲಿ ಮಿಂದೆದ್ದಿದೆ.
ಸಂಕ್ರಾಂತಿ ಬಂತೆಂದರೆ ಸಾಕು ಮನೆತುಂಬ ಹಸಿಗಡಲೆಗಳ ಮತ್ತು ಕಬ್ಬುಗಳ ರಾಶಿ. ಸಜ್ಜಿರೊಟ್ಟಿ, ಬೆಣ್ಣಿ, ಬದನೇಕಾಯಿ ಪಲ್ಯ, ಹುಗ್ಗಿ, ಭೋಗೀ ಊಟ, ಮರದ ಬಾಗಿಣ, ಎಳ್ಳು-ಬೆಲ್ಲ, ಕುಸರೆಳ್ಳು, ಸಕ್ಕರೆ ಅಚ್ಚು.
’ಸಂಕ್ರಮಣ’ ಪತ್ರಿಕೆಯನ್ನು ನಡೆಸಿದ ಚಂಪಾ ಬದುಕಿನ ಸಂಕ್ರಮಣದಿಂದ ಪಾರಾಗಿದ್ದಾರೆ. ಮತ್ತೆ ಬಂದಿದೆ ಸಂಕ್ರಮಣ.
ಮುರಳಿಯವರ ಅಂತ್ಯಪ್ರಾಸದ ’ಸಂಕ್ರಮ’ಣ”ವನ್ನು ಗಟ್ಟಿಯಾಗಿ ಓದಿದರೆ ಗಣಗಣ ಗಂಟೆಯನ್ನು ಲಯಬದ್ಧವಾಗಿ ಬಾರಿಸಿ ಸಂಕ್ರಾಂತಿಯನ್ನು ಬರಮಾಡಿಕೊಂಡಂತೆ ಅನಿಸುತ್ತದೆ. ಏನು ಲಯ, ಏನು ಪ್ರಾಸ, ಒಂದು ಪದವನ್ನೂ ಹಾಳುಮಾಡದ ಆದರೆ ಸಹಜವೆನಿಸುವ ಹಿಡಿತ. ಮೊದಲ ಏಳು ಸಾಲುಗಳಂತೂ ಸಕ್ಕರೆ ಅಚ್ಚಿನ ತರಹ ಸಾಂದ್ರ. ಬೇಂದ್ರೆಯವರನ್ನು ಅವಾಹಿಸಿಕೊಂಡಂತೆ, ’ಪಾತರಗಿತ್ತಿ ಪಕ್ಕ’ ಮತ್ತು ’ಗಂಗಾವತರಣ’ಗಳನ್ನು ನೆನಪಿಸುವಂತೆ.
ಅನನ್ಯಾ ಹಾಡಿದ ಸುಗ್ಗಿಯ ಹಾಡು ಅನನ್ಯ. ಅವರ ಧ್ವನಿಯ ಮಾಧುರ್ಯ, ಶ್ರುತಿ ಮತ್ತು ಉಚ್ಚಾರಣೆ ಎಳ್ಳು-ಬೆಲ್ಲದಂತೆ.
ರಾಧಿಕಾ ಜೋಶಿಯವರ ಲೇಖನ ಓದುತ್ತ ನಾನೂ ನನ್ನ ಬಾಲ್ಯಕ್ಕೆ ಹೋದೆ. ಜನೆವರಿ 1ನೇ ತಾರೀಕಿನಿಂದ ಸಂಕ್ರಾಂತಿ ತಯಾರಿ ಶುರು. ಸಜ್ಜಿರೊಟ್ಟಿ, ಕಟಕ ರೊಟ್ಟಿ, ಶೇಂಗಾದ ಹಿಂಡಿ, ಬದನೀಕಾಯಿ ಪಲ್ಯ, ಪುಂಡಿಪಲ್ಯ, ಹುಗ್ಗಿ, ಒಂದೇ ಎರಡೇ. ಕುಸರೆಳ್ಳು ಮಾಡುವ ಸಂಭ್ರಮ. ಬೆಲ್ಲ ಅಂತೂ ತಿಂದಿದ್ದೇ ತಿಂದಿದ್ದು. ಸಂಕ್ರಾಂತಿಯಾದ ಮೇಲೆ ಬರುವ ಹುಣ್ಣಿಮೆಗೆ ಅಟ್ತದ ಮೇಲೆ ಕೂತು ಬೆಳದಿಂಗಳ ಊಟಕ್ಕೆ ಸಂಕ್ರಾಂತಿ ಹಬ್ಬ ಮುಗೀತಿತ್ತು.
ಗೌರಿಯವರಿಗೆ ಅಭಿನಂದನೆಗಳು, ಇಂಥದೊಂದು ಚಂದದ ಎಳ್ಳು-ಬೆಲ್ಲ ಹಂಚಿದ್ದಕ್ಕೆ.
– ಕೇಶವ
LikeLike
ಸಂಕ್ರಾಂತಿಯಂದು ಅನಿವಾಸಿಯ ವಿಶೇಷ ಸಂಚಿಕೆ ಸ್ಪೆಷಲ್ ಆಗಿದೆ. ಗೌರಿಯವರ ಛಾಪು ಸಂಪಾದನೆ ಮತ್ತು ಸಂಪಾದಕೀಯದಲ್ಲಿಯೂ ಕಾಣುತ್ತದೆ. ಅಲ್ಲದೆ ಬೇಡಿ- ಬೇಡದೆ ಸಂಪಾದಿಸಿದ ಸರಕುಗಳಲ್ಲಿ ಸಹ! ಕುಸುರೆಳ್ಳಿನಂತೆ ಕುಸುರು ತುಂಬಿದ ಪುಟ್ಟ ಪುಟ್ಟ ಪದಗಳ ಸಣ್ಣ ಸಣ್ಣ ಸಾಲುಗಳ ಪ್ರಾಸ ಅರ್ಥ ತುಂಬಿದ ಮುರಳಿಯವರ ಕವಿತೆ, ಅನನ್ಯ ಕದಡಿಯ ಪ್ರತಿಭೆಯನ್ನು ಸಾರುವ ಆಕೆಯ ಹಾಡುಗಾರಿಕೆ ನನ್ನಲ್ಲಿ ಆಶ್ಚರ್ಯ ಮತ್ತು ಹೆಮ್ಮೆ ಎರಡೂ ಅಲೆಗಳನ್ನೆಬ್ಬಿಸಿತು. ಉಚ್ಚಾರದ ಸ್ಪಷ್ಟತೆ, ಸುಶ್ರಾವ್ಯ ಕಂಠದಿಂದ ಬಂದ ಮದುರ ಧನಿಯ ಹಾಡು, ತಮ್ಮೂರು ಮೈಸೂರಲ್ಲಿ ಕಾಣಬರುವ ಉತ್ತರ- ದಕ್ಷಿಣ ಪದ್ಧತಿಯ ಸಂಕ್ರಾಂತಿ ಆಚರಣೆಯ ವಿವರಗಳನ್ನು ರೋಚಕವಾಕಿ ಮನಮೋಹಕ ಶೈಲಿಯಿಯಲ್ಲಿ ರಾಧಿಕಾ ಅವರು ಬರೆದು ನಮ್ಮ ಹಳೆಯ ನೆನಪುಗಳನ್ನು ಕೆದರಿ ಮತ್ತೆ ಅನುಭವಿಸುವಂತೆ ಮಾಡಿದ್ದಾರೆ. ಶೆಜ್ಜಿ ಭಕ್ಕರಿಯ ಬಯಕೆ ಎಬ್ಬಿಸಿದ್ದನ್ನು ಕ್ಷಮಿಸಲಾರೆ! ಅದರ ಹಿಂದೆಯೇ ಪೊಂಗಲ್ ಗಳ ವರ್ಣನೆ ಸ್ವಾರಸ್ಯಕರ, ಅದರಲ್ಲೂ ಕಿಲೋಗಟ್ಟಲೆ ಕೂಡಿ ಬಿದ್ದಿದ್ದ ಎಳ್ಳು- ಬೆಲ್ಲವನ್ನು ಬೇರ್ಪಡಿಸುವ ಹೊಣೆ ಹೊತ್ತ ಬಡಪಾಯಿ ಅವರ ಅಪ್ಪನ ಬಗ್ಗೆ ಕನಿಕರ ಹುಟ್ಟಿಸಿ ಋಣ ತೀರಿಸಿದ್ದಾರೆ! ಅವರ ಉತ್ಸಾಹ ಮಾತ್ರ ಮೆಚ್ಚುವಂಥದು.
LikeLike