ಕವಿತೆಗಳು

ಪ್ರಿಯ ಓದುಗರೇ, 
ಈ ವಾರ 'ಅನಿವಾಸಿ'ಯಲ್ಲಿ ನಿಮ್ಮ ಓದಿಗೆ, ಡಾ ಪ್ರೇಮಲತಾ ಅವರು ಬರೆದ ಶರದೃತುವಿನ ಕುರಿತಾದ ಚಂದದ ಕವಿತೆ ''ಶರತ್ಕಾಲ'' ಮತ್ತು ನಮ್ಮ ಬಳಗದ ಹೊಸ ಸದಸ್ಯೆ ವಿಜಯಲಕ್ಷ್ಮಿಶೇಡಬಾಳ್ ಅವರು ಬರೆದಿರುವ  ''ಅಪ್ಪು ಅಣ್ಣನ ನೆನಪು'' ಎಂಬೆರೆಡು ಕವಿತೆಗಳಿವೆ. ಎಂದಿನಂತೆ ತಾವು ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿ. ಜೊತೆಗೆ ನಿಮ್ಮ ಬರಹಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ವಿನಂತಿಸುತ್ತ, ಈ ವಾರದ ಓದಿಗೆ ನಿಮಗಿದೋ ಸ್ವಾಗತ. 
- ಸಂಪಾದಕಿ 
ಚಿತ್ರ: ಅಮಿತಾ ರವಿಕಿರಣ್
ಶರತ್ಕಾಲ- ಡಾ ಪ್ರೇಮಲತಾ ಬಿ 

ಹಿತಚಳಿ  ಮೈ ನೇವರಿಸಿ
ನಿಂತೂ ನಿಲ್ಲದ ಮಳೆ ನೆನಪು
ಅದುರದುರಿ ಹಾರಾಡುವ ತರಗೆಲೆ
ಗಾಳಿ ಗುಡಿಸಲಾಗದ ಬಯಕೆ ಕಾವು

ಮಂದ್ರ ನದಿಯು ತೂಗಿ
ಅಲೆಗಳೆದ್ದ  ಪರಿಗೆ
ದಂಡೆಗೂ ಅರೆಕ್ಷಣದ ಉದ್ವೇಗ
ಗತಿ ಬದಲಿಸಿ ಸಾಗುವ ಮಂದ ಮಾರುತ

ಮುಗಿಲ ಕಣ್ಣಾಮುಚ್ಚಾಲೆಯಲಿ ತಿಮಿರ
ನುಂಗಿದ  ಸುವರ್ಣವದನ ಸೂರ್ಯ
ಬಾಣ ಹೂಡುತ ಬಾನ ಕತ್ತಲಲಿ
ತುಸು ಹೆಚ್ಚೇ ನಗುವ ಚಂದ್ರ

ಉದ್ದುದ್ದ ರಾತ್ರಿಯಲಿ ಹುಚ್ಚೆದ್ದು
ಕುಣಿವ ನೆರಳುಗಳು
ಬೆಳಕನೇ ಅಡವಿಟ್ಟು ಗೂಡು ಕಟ್ಟುತ
ಸಾಂದ್ರವಾಗುವ ಒಳ ಕೂಗು

ಎಲೆಗೆಲೆಯು ಓಕುಳಿಯಾಟ
ವನವೆಲ್ಲ ವರ್ಣರಂಜಿತ
ಮಂಜುಕಟ್ಟುವ ಬೆಳಗಿಗು
ಕಣಿವೆಯಲೇಳುವ ಮುಗಿಲಿಗು
ಮೈ ತುಂಬಿಕೊಂಡ ಸಂತಸ

ಹಗಲ ತಬ್ಬುತ ಇಳಿವ ಕತ್ತಲೆ
 ಕಡುಕಪ್ಪು ಅಗಾಧ ಈ ಕೌತುಕ
****************************
ಅಣ್ಣ ಅಪ್ಪುವಿನ ನೆನಪುಗಳು  -  ವಿಜಯಲಕ್ಷ್ಮಿ ಶೇಡಬಾಳ್

ಅಣ್ಣ ಆಪ್ಪು, ನೀ ಕೊಂಚ ಕಪ್ಪು।
ನಿನ್ನ ಹೃದಯ  ವಜ್ರಕ್ಕಿಂತಲೂ ಹೊಳಪು।।

ಅಪ್ಪು  ಅಣ್ಣ, ನಿನ್ನ ಅಪ್ಪ ಅಮ್ಮ ಬಿಟ್ಟು ಹೋದರೂ ಸದಾ ಅವರ ನೆನಪು ನಿನಗೆ।
ಈಗ ಹೇಳು ಆ ತರಹದ ನೆನಪುಗಳನ್ನು  ಪೂರ್ತಿ ಮಾಡದೆ ಅರ್ಧದಲ್ಲೆ  ಅವಸರದಲಿ ಏಕೆ  ಬಿಟ್ಟು ಹೋದೆ ನಿನ್ನ ಮಕ್ಕಳನು


ಅಪ್ಪು ಅಣ್ಣ, ಸಾವಿರಾರು ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಪರಿಹಾರ  ಕೊಟ್ಟೆ  
ಕರೋಡಪತಿಯಾದ ನೀನು ನಿನ್ನ ಮಗಳ ಉನ್ನತ ಶಿಕ್ಷಣ ಮಾಡಲು 
ಕಷ್ಟ ಪಟ್ಟು ವಿದ್ಯಾರ್ಥಿವೇತನ ಪಡೆಯುವ ಶೈಲಿಯ ಕಲಿಸಿಕೊಟ್ಟೆ

ಅಪ್ಪು ಅಣ್ಣ,  ಕೋವಿಡ್ ಸಮಯದಲಿ ದುಡ್ಡು ಇರುವವರ ಕೈ ಹಾಗೂ ಮನಸ್ಸು ಚಿಕ್ಕದಾಗಿಬಿಟ್ಟಿತ್ತು  
ಆದರೆ ಆ ಸಮಯದಲಿ ನೀನು ಮಾಡಿದ ಧಾನ ಎಷ್ಟು ದೊಡ್ದದು, ನಿನ್ನ ಕೈ ಹಾಗೂ ಮನಸ್ಸು ಎಷ್ಟು ವಿಷಾಲವಾದದು ಎಂದು ತೋರಿಸಿಬಿಟ್ಟಿತು।।

ಅಪ್ಪು  ಅಣ್ಣ, ನೀನು ನಗು ಬಾರದಿದ್ದವರಿಗೆ ನಿನ್ನ ನಟನೆಯ ಮೂಲಕ ನಗೆಸಿ ಬಿಟ್ಟೆ ।
ನೀನು ಯೋಗ್ಯವಾದ ಕಥೆ ಹಾಗೂ ಅಭಿನಯದ ಮೂಲಕ
 ನಮ್ಮೆಲ್ಲರ ಪರಿವಾರಗಳಲಿ ಪರಸ್ಪರ ಪ್ರೀತಿ ಹುಟ್ಟಿಸಿ ರಾಜಕುಮಾರ ನೀನಾದೆ।।

ಅಪ್ಪು ಅಣ್ಣ, ನೀನು ಮಾಡಿದ ಅತ್ಯಮೂಲ್ಯ ಪರಿಕಲ್ಪನೆಯ ಜಾಹಿರಾತುಗಳಾದ
 ಶಿಕ್ಷಣ, Kmf Nandini ಹಾಲು ಅಥವಾ Pothys Go Green Kannada ಯಾರೂ ಮಾಡಿಲ್ಲಾ ।
ನಿನ್ನನ್ನು POWER STAR ಎಂದು ಸುಮ್ಮನೆ ಕರೆಯಲು ಸಾಧ್ಯವಿಲ್ಲಾ   ।।

ಅಪ್ಪು ಅಣ್ಣ, ನೀನು ಆರಂಭಿಸಿದ ಆಶ್ರಮಗಳಿಗೆ ಮುಂದಾಲೋಚನೆ 
ಮಾಡಿ ಸದಾ ಸುರಕ್ಷಿತವಾಗಿರಲು ಹೆಚ್ಚು ಪರಿಹಾರವ ಕೊಟ್ಟು ಕ್ಷೇಮವಾಗಿಟ್ಟೆ ।
ಆದರೆ, ಈಗ ಹೇಳು ನೀ ಗೆದ್ದಿರುವ ಕೊಟ್ಯಾoತರ ಹೃದಯಗಳಿಗೆ ಹೇಗೆ ಸಮಾಧಾನ ಪಡಿಸುವೆ?

ಅಪ್ಪು ಅಣ್ಣ, ಹೋಗುತ್ತಾ ಅಂಧರಿಗೆ ನಿನ್ನ ಕಣ್ಣು ಕೊಟ್ಟೆ ।
ಇನ್ನು ನಮಗೆ ಬರೀ ನಿನ್ನ ನೆನಪುಗಳು ಮಾತ್ರವೇ?
**************************************

11 thoughts on “ಕವಿತೆಗಳು

  1. ಪ್ರಸಾದ ಮತ್ತು ಕೇಶವರ ವಿಶ್ಲೇಷಣೆಯ ನಂತರ ಬಹಳ ಕಮೆಂಟು ಉಳಿದಿಲ್ಲ. ಆದರೂ … ’ಶರತ್ಕಾಲ’ದ ಈ ಅದ್ಭುತ ಕವನದ ಬಗ್ಗೆ ಅವರಿಬ್ಬರು ಬಿಟ್ಟ,ನಮೂದಿಸದ ಕೆಲವು ಅಂಶಗಳು, ನಾನು ಅರ್ಥೈಸಿದಂತೆ: ಗಾಳಿ ಗುಡಿಸಲಾರದ ಎಲೆಗಳಲ್ಲಿ ಹುದುಗಿದ ನೀರು ಮಳೆಯದೆಂದ ಮೇಲೆ ಬಯಕೆಯ ಕಾವು ನೆನಪಿಸುವುದು ಸಹಜವೇ. ಮುಂದೆ ಸರಿದಂತೆ, ನದಿಯ ಮಂದ್ರ ಗತಿ, ಮತ್ತದರ ಮೇಲೆ ಸುಳಿವ ಗಾಳಿ ತಗ್ಗು ದಿನ್ನೆಯ ದೃಶ್ಯವನ್ನು ಕೊಡುತ್ತದೆ. ಅದಕ್ಕೇ ಅಲೆಗಳೆದ್ದಾಗ ಅಚಲ ದಂಡೆಗೂ ಒಂದು ತರದ ಉದ್ವೇಗ ಅರೆ ಕ್ಷಣ! ಗಾಳಿ ಆ ಕಣಿವೆಯಲ್ಲಿ ಗತಿ ಬದಲಿಸಿ ಅಲೆಗಳನ್ನೆಬ್ಬಿಸಿ ಸಾಗುವ ಚಿತ್ರಣವಿದೆ, ಆ ಬರೀ ನಾಲ್ಕು ಸಾಲುಗಳಲ್ಲಿ. ಮೂರನೆಯ ಚರಣದ ಕೊನೆಯ ಸಾಲುಗಳಲ್ಲಿ ಕತ್ತಲೆಯ ಆಗಸದ ಚಿತ್ರ. ಚಂದ್ರ ಆ ಧನು ನಕ್ಷತ್ರ ಪುಂಜದ ಬಿಲ್ಲುಗಾರನ ಬಾಣ (Sagittarius and Archer). ಮುಂದೆ ಎಲೆ-ಎಲೆಗಳ ಓಕುಳಿಯಾತ್ಟ, ಬರಿ ಎಲೆಗಳಲ್ಲ; ಒಂದು ಎಲೆ ಇನ್ನೊಂದರೊಡನೆ ಆಡುವ ಅರ್ಥ ಹುದುಗಿದೆ ಅಂತ. ಕೇಶವ ಅವರು ಅಂದಂತೆ ಅದ್ಭುತ ಕವಿತೆ! ನಮ್ಮ ಹೊಸ ಕವಯಿತ್ರಿ ವಿಜಯಲಕ್ಷ್ಮಿ ಶೇಡಬಾಲ ಅವರು ಪುನೀತ ರಾಜಕುಮಾರನ ಬಗ್ಗೆಯ ತಮ್ಮ ಭಾವನೆಗಳನ್ನು ಹೃದ್ಯಂಗಮವಾಗಿ ನಿರೂಪಿಸಿದ್ದಾರೆ. ಅವರ ಮೊದಲ ಕವಿತೆಗೆ ’ಅನಿವಾಸಿ”ಯ ಸ್ವಾಗತ. ಬರೆಯುತ್ತಿರಿ!

    Like

  2. ವಿಜಯಲಕ್ಷ್ಮಿ ಶೇಡಬಾಳ್ ಅವರು ಬರೆದ ಶ್ರದ್ದಾಂಜಲಿ ಕವಿತೆ ಪುನೀತನನ್ನು ಕಣ್ಣಮುಂದೆ ನಿಲ್ಲಿಸುತ್ತವೆ.

    – ಕೇಶವ

    Like

  3. ಪ್ರೇಮಲತಾ ಅವರ ಶರತ್ಕಾಲದ ಕವಿತೆ, ಕನ್ನಡದ ಇತ್ತೀಚಿನ ಅದ್ಭುತ ಕವಿತೆಗಳಲ್ಲಿ ಒಂದು ಎಂದು ನನ್ನ ಅಭಿಪ್ರಾಯ.

    ಹಿಮಚಳಿಯು ಮಳೆಯ ನೆನಪನ್ನು ತರುವ ಪ್ರತಿಮೆಯನ್ನೇ ನೋಡಿ. ಮಳೆಯ ನೀರು ಮೈಮೇಲೆ ಬಿದ್ದಾಗ ಒಂದು ಕ್ಷಣಕ್ಕಾದರೂ ಚಳಿಯಾಗುತ್ತದೆ. ಇಲ್ಲಿ ಶರತ್ಕಾಲದ ಚಳಿಗಾಳಿ ಮಳೆಯ ನೆನಪನ್ನು ತರುತ್ತದೆ.

    ಗಾಳಿಯಿಂದ ಗುಡಿಸಲಾಗದ ತರಗೆಲೆಗಳನ್ನು ತೆಗೆದುಕೊಂಡು ನೋಡಿ, ಅವು ಒಂದಕ್ಕೊಂದು ಅಂಟಿಕೊಂಡಿರುತ್ತವೆ, ಬಿಡಿಸಿದರೆ ಒಳಗೆ ಒದ್ದೆ, ಮಳೆಯ ನೆನಪನ್ನು ಒಳಗಿಟ್ಟುಕೊಂಡಂತೆ!

    ದಂಡೆಯ ಉದ್ವೇಗ ಮತ್ತು ಗತಿ ಬದಲಿಸುವ ಮಾರುತಗಳ ಪ್ರತಿಮೆಗಳು ನಾನಾರ್ಥಗಳನ್ನು ಆಯಾ ಸಂಧರ್ಭಕ್ಕೆ ತಕ್ಕಂತೆ ಕೊಡುವಷ್ಟು ಸಶಕ್ತವಾಗಿವೆ.

    ಬಾನಿನ ಕತ್ತಲೆಯಲ್ಲಿ ನಗುತ್ತ ಬಾಣ ಹೂಡುವ ಚಂದ್ರನ ಕಲ್ಪನೆ ಅನನ್ಯ.

    ಬೆಳಕನ್ನು ಅಡವಿಡುವ ಸಾಲುಗಳಂತೂ ಕನ್ನಡದ ಯಾವ ಕಾವ್ಯದಲ್ಲೂ ನಾನು ಓದಿಲ್ಲ.

    ‘ಎಲೆಗೆಲೆಯು ಓಕುಳಿಯಾಟ
    ವನವೆಲ್ಲ ವರ್ಣರಂಜಿ“
    ಎಂಬ ಎರಡೇ ಸಾಲಿನಲ್ಲಿ ಶರತ್ಕಾಲದ ಚಿತ್ರವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ.

    ‘ಮಾರುತ; ಮತ್ತು ‘ತಿಮಿರ‘ ಎನ್ನುವ ಹೆಚ್ಚಾಗಿ ಬಳಕೆಯಿಲ್ಲದ ಶಬ್ದಗಳನ್ನು ತಂದು ಕಾವ್ಯದ ಶಕ್ತಿಯನು ಹೆಚ್ಚಿಸಿದ್ದಾರೆ.

    ‘ಅನಿವಾಸಿ‘ ಕಂಡ ಅದ್ಭುತ ಕವಿತೆ ಇದು.

    – ಕೇಶವ

    Liked by 1 person

  4. ವಿಜಯಲಕ್ಷ್ಮಿ ನಿಮ್ಮ ಕವನ ಸಕಾಲಿಕ. ನಿಮ್ಮಂದ ಇನ್ನೂ ಹೆಚ್ಚಿನ ಕವಿತೆ/ ಬರಹಗಳು ಮೂಡಿಬರಲಿ.
    ಸ್ಕಾಟ್ಲೆಂಡ್ ನಲ್ಲಿ ನಾವು 6 ವರ್ಷ ಇದ್ದೆವು(Stirling – Falkirk ಗಳಲ್ಲಿ). ಸ್ನೊ ಇರುವ ನಿಮ್ಮ ಭಾವಚಿತ್ರ ಹೋದ ವರ್ಷ ದ್ದಿರಬೇಕು?

    Like

  5. ಪ್ರೇಮಲತಾ ನಿಮ್ಮ ‘ಶರತ್ಕಾಲ’ ಶರತ್ ಋತುವಿನ ಸುಂದರ ಚಿತ್ತಾರಗಳೊಂದಿಗೆ ಸಾಂದ್ರವಾಗಿರುವ ಕವನ!
    ನೆನಪಿನಲ್ಲಿ ಉಳಿಯುವ ಸಾಲುಗಳು ಹಲವಾರು
    ಕಡುಕಪ್ಪು ಕೌತುಕವಷ್ಟೇ ಅಲ್ಲ, ಅದು ಅಗಾಧ ಮತ್ತು ಅದಕ್ಕೆ ಎಲ್ಲವನ್ನು ನುಂಗುವ ಶಕ್ತಿಯಿದೆ
    ಆದರೂ ನಾಳೆ ತಿಮಿರವನ್ನು ನುಂಗಿ ಸುವರ್ಣವದನ ಸೂರ್ಯ ಮತ್ತೆ ಹುಟ್ಟಿ ಬರುವ ನಂಬಿಕೆ, ಭರವಸೆಗಳೇ ಬದುಕಿನ ಶಕ್ತಿ ಮತ್ತು ಉದ್ದೇಶ

    Liked by 1 person

    • ಧನ್ಯವಾದಗಳು ಪ್ರಸಾದ್ ಅವರೆ.
      ಅವೇ ಕೆಲವು ಪದಗಳನ್ನು ಬಳಸಿ ಎಷ್ಟೊಳ್ಳೇ ಸಂದೇಶ ಕೊಟ್ಟಿರಿ👏👏👏
      ಅದೂ ನಿಜವೆ. ಕವಿಗಳೇ ಹಾಗಲ್ಲದೆ? ಬದುಕನ್ನು, ಎಲ್ಲ ಬದಲಾವಣೆಗಳನ್ನು ಕವಿಗಳ ಕಣ್ಣುಗಳಲ್ಲಿ ಕಾಣುವುದೇ ಒಂದು ಆನಂದ.
      ಪ್ರೀತಿ, ಕೌತುಕ, ಆನಂದ,ಆಸೆ,ಹತಾಶೆ ಹಿತಾಶಯ, ಸ್ಪೂರ್ತಿ, ಚೈತನ್ಯ…
      ಕವಿಗಳಿಲ್ಲದ ಸಮಾಜ ಮತ್ತು ಸಮುದಾಯ ಬಹಳ ಸಪ್ಪೆ 🙏

      Like

  6. ವಿಜಯಲಕ್ಷ್ಮಿ ಅವರು ‘ ಅಪ್ಪು ಅವರ ಬಗ್ಗೆ ಬರೆದಿರುವ ಕವನ ಬಹಳ ಅರ್ಥ ಪೂರ್ಣವಾಗಿದೆ ಅಲ್ಲದೆ ಬಹಳ ಭಾವುಕ ವಾಗಿದೆ.
    ಅವರ ಮುಂದಿನ ಬರಹವನ್ನು ನಿರಿಕ್ಷ್ಹಿಸೋಣ

    Dr ಭಾನುಮತಿ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.