ಎಲ್ಲರಿಗೂ ಸವಿಯ ಪ್ರೀತಿಪೂರ್ವಕ ನಮಸ್ಕಾರಗಳು!
ಅನಿವಾಸಿ ತಂಗುದಾಣದ ಸಂಪಾದಕೀಯ ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಹಸ್ತಾ೦ತರಿಸಿದ ಡಾ.ದಾಕ್ಷಾಯಿಣಿ ಗೌಡರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಮುಂದೆ ಸಂಪಾದಕಿಯಾಗಿ ನಾನು ನಡೆಸಲಿದ್ದೇನೆ. ನಿಮ್ಮೆಲ್ಲರ ಬೆಂಬಲ, ಪ್ರೋತ್ಸಾಹ ಮತ್ತು ನಿಮ್ಮ ಲೇಖನಗಳ ಮುಖಾಂತರ ನನಗೂ ಸಹ ನೀಡಿ ಎಂದು ಸವಿಯ ಸವಿನಯ ಪ್ರಾರ್ಥನೆ.
‘ಸಿನೆಮಾ ನೋಡಿ‘ ಸರಣಿಯಲ್ಲಿ ಮುರಳಿ ಹತ್ವಾರ್(ಲಂಡನ್) ರವರು ಕಳೆದ ವರ್ಷ ೨೦೨೦ ರಲ್ಲಿ ಬಿಡುಗಡೆಯಾದ “ಒಂದು ಶಿಕಾರಿಯ ಕಥೆ” ಸಿನೆಮಾದ ಒಂದು ಕಿರು ವಿಮರ್ಶೆ,ಮನದಾಳದ ಮಾತುಗಳನ್ನು ತಮ್ಮ ಲೇಖನದಲ್ಲಿ ಮುಂದಿಟ್ಟಿದ್ದಾರೆ. ಓದಿ ಪ್ರತಿಕ್ರಿಯಿಸಿ. – ಸವಿ (ಸಂ)
ಸಿನೆಮಾ ಮಾತು: ಒಂದು ಶಿಕಾರಿಯ ಕಥೆ (೨೦೨೦)
೨೦೨೦ರಲ್ಲಿ ಓಟಿಟಿ ಗಳಲ್ಲಿ ಬಿಡುಗಡೆಯಾದ ‘ಒಂದು ಶಿಕಾರಿಯ ಕಥೆ’ ಒಂದು ರೀತಿಯಲ್ಲಿ ಕನ್ನಡ ಸಿನೆಮಾಗಳ ಹೊಸ ಅಲೆಯ ೭೦ರ ದಶಕಕ್ಕೆ ವೀಕ್ಷಕರನ್ನು ಕೊಂಡೊಯ್ಯುವ ಸಿನೆಮಾ. ಹಲವು ಹಂದರಗಳಲ್ಲಿ ಅಡಗಿದ, ದೃಶ್ಯ ಮತ್ತು ಮಾತುಗಳ ಪದರ-ಪದರಗಳಲ್ಲಿ ಹೊರ ಬರುವ ಹಲವು ಮನಸ್ಸುಗಳ ಬೆಳವಣಿಗೆಯ ಅರ್ಥ ಪೂರ್ಣ ಕಥೆಯನ್ನ ಈ ಶಿಕಾರಿಯ ಸಿನೆಮಾ ಹೇಳುತ್ತದೆ.
ಇಲ್ಲಿ ಶಿಕಾರಿ ಮಾಡುವವರಿದ್ದಾರೆ, ಶಿಕಾರಿಗೆ ಸಿಕ್ಕುವ ಪ್ರಾಣಗಳಿವೆ, ಮತ್ತೆ ಆಯಾ ಶಿಕಾರಕ್ಕೆ ತಕ್ಕಂತೆ ಹೊಂದುವ ಬಂದೂಕು ಮತ್ತೆ ಅದರಿಂದ ಹೊರಡುವ ಗುಂಡು. ನಿಜದ ಬಂದೂಕಿಗೆ ಹುಲಿಯೊಂದು ಸಾಯುತ್ತದೆ, ಹುಸಿಯೆಂದು ತಿಳಿದ ಗುಂಡೊಂದು ಮನುಷ್ಯನ ದೇಹ ಹೊಕ್ಕುತ್ತದೆ. ಅಲ್ಲಿಂದ ಕಥೆ ತಿರುಗುತ್ತ ಬಂದೂಕು, ಶಿಕಾರಿ, ಶಿಕಾರಿಗೆ ಸಿಕ್ಕ ಪ್ರಾಣಿ ಎಲ್ಲವೂ ಆಡಲು ಬದಲಾಗುತ್ತ ಹೊಸ-ಹೊಸ ಕೋನಗಳಲ್ಲಿ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ.
ಆದರೆ, ಕಥೆ ಮುಗಿದ ನಂತರ ತೆರೆದುಕೊಳ್ಳುವದು ಅದರ ಒಳ ಸೆಲೆ. ಮನುಷ್ಯನ ಮನದೊಳಗಿನ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಹೇಗೆ ಕೆಲವೊಮ್ಮೆ ಬೇರೆಯವರ ಶಿಕಾರಿ ಮಾಡಿಸಿ, ಮತ್ತೆ ಕೆಲವೊಮ್ಮೆ ಅವನನ್ನೇ ಬಂದೂಕಿನ ಗುಂಡಿಗೆ ಒಪ್ಪಿಸುತ್ತದೆ ಎನ್ನುವದು ಈ ಕಥೆಯ ಮಹಾ-ಹಂದರ. ಇವೆಲ್ಲವನ್ನೂ ತ್ಯಾಗ ಮಾಡುವದು ಒಂದು ಪರಿಹಾರ ಇರಬಹುದು ಎನ್ನುವ ತಾತ್ವಿಕ ಸಂದೇಶ ಇದರಲ್ಲಿದೆ; ಅದರಲ್ಲೂ ಜೈನ ಧರ್ಮದ ತತ್ವಗಳು ಪ್ರಬಲವಾಗಿ ಎದ್ದು ಕಾಣುತ್ತವೆ.
ಈ ಸಂದೇಶಗಳನ್ನ ಹೇಳಲು ಕಥೆ ಬಳಸಿಕೊಳ್ಳುವ ಪಾತ್ರಗಳಲ್ಲಿ ಯಾವುದಕ್ಕೂ ಹೇಸದ ಕಳ್ಳನಿದ್ದಾನೆ; ಹೆಂಡತಿಯನ್ನು ಅನುಮಾನದ ಬಂದೂಕಿನಿಂದ ಕೊಲ್ಲುವ ಗಂಡನಿದ್ದಾನೆ; ತನ್ನ ಮೋಹದ ಬಂಧನದ ಬಲೆಯೊಂದರಲ್ಲಿ ಸಿಕ್ಕು, ಭಯವೆಂಬ ಬಂದೂಕಿಗೆ ಶಿಕಾರಿಯಾಗುವ ಅಹಿಂಸಾ ಪ್ರಿಯನಿದ್ದಾನೆ. ಇವರೆಲ್ಲರ ಪಾಶಗಳಲ್ಲಿ ಸಿಕ್ಕು ಸೋಲುವ ಎರಡು ಪ್ರೀತಿಯ ಜೀವಗಳಿವೆ, ಅನಾಥವಾಗುವ ಅವರ ಪ್ರೀತಿಯಿದೆ.
ಈ ಕಥೆ ಸಾಗುವ ವೇಗ ಅಲ್ಲಲ್ಲಿ ವೀಕ್ಷಕರ ತಾಳ್ಮೆಗೆ ಪರೀಕ್ಷೆಯೊಡ್ಡುತ್ತದೆ. ಬಹುಷಃ, ಬೇಟೆಗೆ ಹೋಗಿ ಪ್ರಾಣಿಯೊಂದಕ್ಕೆ ಕಾಯುವದು ಹೀಗೆ ಇರಬಹುದೇನೋ. ತಾಳ್ಮೆಯಿಂದ ಕುಳಿತು ನೋಡುವವರಿಗೆ ಒಂದು ಒಳ್ಳೆಯ ಕಥೆಯ ಶಿಕಾರಿ ಸಿಕ್ಕಂತ ಅನುಭವವಂತೂ ಗ್ಯಾರಂಟಿ.
ಸಿನೆಮಾದ ಕ್ಯಾಮೆರಾ ಕ್ಲೋಸ್-ಅಪ್ ಆ್ಯಂಗಲ್‍ಗಳನ್ನು ಉತ್ತಮವಾಗಿ ಹಿಡಿದಿದೆ. ಆದರೆ, ಲಾಂಗ್‍ಶಾಟ್‍ಗಳಲ್ಲಿ ಪಶಿಮ ಘಟ್ಟದ ಹಸಿರನ್ನು ಇನ್ನೂ ಗಟ್ಟಿಯಾಗಿ, ಮನ ಮುಟ್ಟುವ ಹಾಗೆ ಹಿಡಿದಿಡಬಹುದಿತ್ತು ಅನಿಸುತ್ತದೆ. ನಟನೆಯೂ ಅಷ್ಟೇ: ಕೆಲವರದ್ದು ಅತ್ಯುತ್ತಮ, ಉಳಿದವರದ್ದು ಎದ್ದು ಕಾಣುವ ಅನನುಭವ.
ಇದೊಂದು ಕಲಾತ್ಮಕ ಚಿತ್ರ. ಮನರಂಜನೆಯ ಮೂಡಿನಲ್ಲಿದ್ದಾಗ ನೋಡಿದರೆ ಬೆರಳುಗಳು ತಂತಾನೇ ರಿಮೋಟಿನತ್ತ ಓಡುವಂತ ಸಿನೆಮಾ. ಇದಕ್ಕೆ ಒಂದು ಬಿಡುವಿನ ಸಂಜೆ ಬೇಕು, ಒಂದು ಕಥೆ ಕೇಳುವ ಮೂಡಿರಬೇಕು. ಆಗ ಇದೊಂದು ಒಳ್ಳೇ ಶಿಕಾರಿಯ ಕಥೆ!
ಕುಚೋದ್ಯ: ಸಾಧಾರಣವಾಗಿ ಸಿನೆಮಾದಲ್ಲಿ ಎಲ್ಲ ಮುಗಿಯುವ ಹೊತ್ತಿಗೆ ಪೊಲೀಸರು ಬರುತ್ತಾರೆ. ಈ ಸಿನೆಮಾದಲ್ಲಿ ಯಾರು ಸತ್ತರೂ, ಕಾಣೆಯಾದರೂ ಪೊಲೀಸರು ಬರುವದೇ ಇಲ್ಲ!
ಮುರಳಿ ಹತ್ವಾರ್, ಲಂಡನ್
‘ಇಲ್ಲಿ ಶಿಕಾರಿ ಮಾಡುವವರಿದ್ದಾರೆ, ಶಿಕಾರಿಗೆ ಸಿಕ್ಕುವ ಪ್ರಾಣಗಳಿವೆ, ಮತ್ತೆ ಆಯಾ ಶಿಕಾರಕ್ಕೆ ತಕ್ಕಂತೆ ಹೊಂದುವ ಬಂದೂಕು ಮತ್ತೆ ಅದರಿಂದ ಹೊರಡುವ ಗುಂಡು. ನಿಜದ ಬಂದೂಕಿಗೆ ಹುಲಿಯೊಂದು ಸಾಯುತ್ತದೆ, ಹುಸಿಯೆಂದು ತಿಳಿದ ಗುಂಡೊಂದು ಮನುಷ್ಯನ ದೇಹ ಹೊಕ್ಕುತ್ತದೆ,’ ಎನ್ನುವ ವಾಕ್ಯಗಳು ಮುರಳಿಯವರ ಪ್ರತಿಭೆಗೆ ಸಾಕ್ಷಿ.
‘ಈ ಕಥೆ ಸಾಗುವ ವೇಗ ಅಲ್ಲಲ್ಲಿ ವೀಕ್ಷಕರ ತಾಳ್ಮೆಗೆ ಪರೀಕ್ಷೆಯೊಡ್ಡುತ್ತದೆ. ಬಹುಷಃ, ಬೇಟೆಗೆ ಹೋಗಿ ಪ್ರಾಣಿಯೊಂದಕ್ಕೆ ಕಾಯುವದು ಹೀಗೆ ಇರಬಹುದೇನೋ.“ ಎನ್ನುವ ಮಾತು ಅಕ್ಷರಷಃ ಸತ್ಯ. ನಾನು ಈ ಸಿನೆಮಾವನ್ನು ನಾಲ್ಕು ಕಂತಿನಲ್ಲಿ ನೋಡಿದೆ. ಚಿತ್ರಕತೆಯನ್ನು ಇನ್ನಷ್ಟು ಸಲ ತಿದ್ದಿದ್ದರೆ, ಸಂಕಲನದ ವೇಳೆಯಲ್ಲಿ ಯಾರಾದರೂ ಈ ಸಿನೆಮಾವನ್ನು ಒಂದೂವರೆ ಗಂಟೆಗೆ ಇಳಿಸುವ ಸಾಹಸ ಮಾಡಿದ್ದರೆ, ಈ ಸಿನೆಮಾ ನಿಜಕ್ಕೂ ಸಿನೆಮಾದ ಹೆಸರಿನಷ್ಟೇ ರೋಚಕವಾಗಿರುತ್ತಿತ್ತೇನೋ!
‘ನಟನೆಯೂ ಅಷ್ಟೇ: ಕೆಲವರದ್ದು ಅತ್ಯುತ್ತಮ, ಉಳಿದವರದ್ದು ಎದ್ದು ಕಾಣುವ ಅನನುಭವ,;. ಕೆಲವು ಪಾತ್ರಗಳಂತೂ ಊರು ಹೊಡೆದ ಪುಸ್ತಕದ ವಾಕ್ಯಗಳಂತೆ ಮಾತಾಡುತ್ತಾರೆ. ಪಾತ್ರಗಳ ನಡುವೆ ಯಾವುದೇ ಕನೆಕ್ಷನ್ ಇಲ್ಲ. ಮೊದಲರ್ಧ ಗಂಟೆಯಂತೂ ಯಾರ್ಯಾರು ಏನೇನು ಎಂದು ಗೊತ್ತಾಗಲಾಗದಷ್ಟು ಗೊಂದಲ ನಿಧಾನವಾಗಿ ಅರ್ಥವಾಗುತ್ತದೆ.
ಕಾಗದದ ಮೇಲೆ ಇದು ಒಂದು ಸಂಕೀರ್ಣ ಕತೆ, ವಿವಿಧ ಪದರುಗಳಿವೆ. ತತ್ತ್ವಶಾಸ್ತ್ರವಿದೆ, ಮನುಷ್ಯದ ‘ಶಿಕಾರಿ‘ತನದ ಒಳತೋಟಿಗಳಿವೆ. ಆದರೆ ಸಾಧಾರಣ ನಟನೆ, ಕೃತಕ ಸಂಭಾಷಣಾ ಶೈಲಿ, inconsistent ದೃಶ್ಯಗಳು, inconsistent ನಟನೆ, ನಿಧಾನಗತಿಯ ಓಟ, ಸಂಕಲನ ಇತ್ಯಾದಿಗಳೆಲ್ಲ ಸೇರಿ ಒಂದು ಸಂಕೀರ್ಣ ಕತೆ ಪರದೆಯ ಮೇಲೆ ಏದುಸಿರು ಬಿಡುವಂತೆ ಕಾಣುತ್ತದೆ.
‘ಕುಚೋದ್ಯ: ಸಾಧಾರಣವಾಗಿ ಸಿನೆಮಾದಲ್ಲಿ ಎಲ್ಲ ಮುಗಿಯುವ ಹೊತ್ತಿಗೆ ಪೊಲೀಸರು ಬರುತ್ತಾರೆ. ಈ ಸಿನೆಮಾದಲ್ಲಿ ಯಾರು ಸತ್ತರೂ, ಕಾಣೆಯಾದರೂ ಪೊಲೀಸರು ಬರುವದೇ ಇಲ್ಲ“ ಎಂದು ಮುರಳಿಯವರ ಸರಿಯಾಗಿಯೇ ಗುರುತಿಸಿದ್ದಾರೆ. ಇನ್ನೂ ಕೆಲವು ಇಂಥದೇ ಅಸಂಗತ ವಿಷಯಗಳು ಈ ಸಿನೆಮಾದಲ್ಲಿವೆ. ಎರಡು ವರ್ಷ ಮನೆಯಲ್ಲಿ ಕೂಡಿದುವುದು (ಒಂದು ತಿಂಗಳು ಎಂದರೆ ಎಲ್ಲರೂ ಒಪ್ಪಿಕೊಳ್ಳುತ್ತಿದ್ದರೇನೋ), ಕನ್ನಡ ಕಾದಂಬರಿಯೊಂದಕ್ಕೆ ಲಕ್ಷಾಂತರ ರೋಪಾಯಿಯ ಸಂಭಾವನೆ ಬರುವುದು (ಅದು ನಿಜವೇ ಆಗಿದ್ದರೆ, ನಾನಂತೂ ಫುಲ್‍ಟೈಮ್ ರೈಟರ್ ಆಗಲು ರೆಡಿ!).
ಮುರಳಿಯವರು ಈ ಸಿನೆಮಾವನ್ನು ಚೆನ್ನಾಗಿ ಶಿಕಾರಿ ಮಾಡಿದ್ದಾರೆ.
– ಕೇಶವ
LikeLike
ಧನ್ಯವಾದಗಳು ಸವಿತಾ. ಸಂಪಾದಕೀಯಕ್ಕೆ ಸ್ವಾಗತ. ಪೂರ್ತಿ ವಿಮರ್ಶೆ ಓದಿದ ನಂತರವೂ ಈ ಸಿನಿಮಾ ಚೆನ್ನಾಗಿದೆಯೋ ಇಲ್ಲವೋ ತಿಳಿಯಲಿಲ್ಲ 😃.
ಬಹುಷಃ ನೋಡಿಯೇ ತಿಳಿಯಬೇಕು
ದಾಕ್ಷಯಿಣಿ
LikeLike
ಚೆನ್ನಾಗಿದೆ ಸಿನಿಮಾ ದಾಕ್ಷಯಿಣಿ!!!
LikeLike
ಹೊಸ ಸಂಪಾದಕಿ ಸವಿತಾ ಸುರೇಶ್ ಅವರಿಗೆ ಸ್ವಾಗತವನ್ನು ಕೋರುತ್ತೇನೆ, ಅನಿವಾಸಿಯ ಎಲ್ಲಾ ಓದುಗರ ಪರವಾಗಿ!
ನಿಮ್ಮ ಸಂಪಾಕದತ್ವದಲ್ಲಿ ನಿಮ್ಮ ವಿಶೇಷ ಆಸ್ಥೆಯ ಝಲಕನ್ನೂ ಕಾಣಬಹುದೇ?
ತಮ್ಮದೇ ವಿಶಿಷ್ಟ ಶೈಲಿಯ ಮುರಳಿಯವರ ವೀಮರ್ಶೆ – ವಿಶ್ಲೇಷಣೆ ಈ ಸಿನಿಮಾವನ್ನು ನೋಡುವ ಕುತೂಹಲ ಕೆರಳಿಸಿದೆ. ಎಲ್ಲಿ ನೋಡಲು ಸಿಗುವದೋ ಹುಡುಕಬೇಕು.
ಶ್ರೀವತ್ಸ ದೇಸಾಯಿ
LikeLike
ಧನ್ಯವಾದಗಳು ದೇಸಾಯಿ ಅವರೆ ನಿಮ್ಮ ಪ್ರೇರಣೆ, ಪ್ರೋತ್ಸಾಹ ಹಾಗೂ ಬೆಂಬಲಕ್ಕೆ !!!🙏🙏🙏🙏
LikeLike