ಬೇಂದ್ರೆ – ೧೨೫

ಚಿತ್ರಕಲೆ: ಲಕ್ಷ್ಮೀನಾರಾಯಣ ಗುಡೂರ್

ಸಾಧನಕೇರಿಯ ಸಾಧಕ, ವರಕವಿ, ಕನ್ನಡದ ಟಾಗೋರ್, ರಸಋಷಿ … ಷೇಕ್ಸ್ ಪಿಯರ್ ಹೇಳಿದಂತೆ “What’s in a name? That which we call a rose by any other name would smell as sweet” (Romeo and Juliet) – ಯಾವ ಹೆಸರಿನಿಂದ ಕರೆದರೂ ನಮ್ಮ ಕಣ್ಣ ಮುಂದೆ ಬರುವುದು, ೮೦ರ ಹರೆಯದ ಉತ್ಸಾಹಿ ಮುಖದ, ಬೇಂದ್ರೆ ಅಜ್ಜನ ಮುಖವೇ; ನೆನಪಾಗುವುದು ಅವರ ಧಾರವಾಡದ ಭಾಷೆಯ ಸೊಗಡಿನ ಕವನಗಳೇ! “ಬಾರೋ ಸಾಧನಕೇರಿಗೆ” ಅಂದು ಕರೆ ಕೊಟ್ಟವರ ಹಿಂದೆ ನಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತಿದ್ದಾರೆ – ಗೌರಿ ಪ್ರಸನ್ನ, ಕೇಶವ ಕುಲಕರ್ಣಿ ಮತ್ತು ಅಮಿತಾ ರವಿಕಿರಣ ಅವರು, ನಮಗೆಲ್ಲ ಒಂದು ಮಹಾಚೇತನದ ಮರುನೆನಪು ಮಾಡಿಕೊಡಲು. ಅದೂ, ಬೇಂದ್ರೆಯವರ ೧೨೫ನೆಯ ಜಯಂತಿಯ ದಿನ. ಒಂದು ಜೀವನ, ಒಂದು ಕವನ, ಒಂದು ಕವಿಹೃದಯ, ಮತ್ತೊಂದಷ್ಟು ಗಾಯನದ ಝಲಕುಗಳೊಂದಿಗೆ ದ. ರಾ. ಬೇಂದ್ರೆಯವರ ನೆನಪು ಮಾಡಿಕೊಳ್ಳೋಣ. ಅಕ್ಷರಗಳ ಮಣ್ಣು ಹೊತ್ತು, ಶಬ್ದಗಳ ಇಟ್ಟಿಗೆಗಳನೊಟ್ಟಿ, ಭಾವಗಳ ಗಾರೆಯೆರೆದು ಕನ್ನಡಮ್ಮನಿಗೆ ನವೋದಯದ ಮಹಾಲಯವನ್ನು ಕಟ್ಟಿದ ಮಹಾನುಭಾವರಲ್ಲಿ ಒಬ್ಬರಾದ ವರಕವಿಗೆ ನಮನ ಹೇಳೋಣ, ಬನ್ನಿ. – ಎಲ್ಲೆನ್ ಗುಡೂರ್ (ಸಂ.)

****************************************************

ನಂ ನಮಸ್ಕಾರ ನಿಮಗ … (ಬೇಂದ್ರೆ ನುಡಿನಮನ)ಗೌರಿ ಪ್ರಸನ್ನ

‘ಬೇಂದ್ರೆ ಒಂದು ಬೆಂಕಿ. ಅದು ಶಾಖ ಕೊಡುತ್ತದೆ; ಬೆಳಕು ಕೊಡುತ್ತದೆ; ಪಾಕ ಮಾಡುತ್ತದೆ; ಪರಿಶುದ್ಧ ಪಾವನಗೊಳಿಸುತ್ತದೆ; ಉರಿದೆದ್ದರೆ ಸುಟ್ಟು ಭಸ್ಮವೂ ಮಾಡುತ್ತದೆ.’—ಹಿಂದೊಮ್ಮೆ ಕವಿಗೋಷ್ಠಿಯೊಂದರಲ್ಲಿ ಅಧ್ಯಕ್ಷರಾದ ಬೇಂದ್ರೆಯವರ ಪರಿಚಯ ಮಾಡಿಕೊಡುತ್ತ ಕನ್ನಡದ ಮತ್ತೊಬ್ಬ ಹಿರಿಯ ಕವಿ ವೀ.ಸಿ. ಅವರು ಹೇಳಿದ ಮಾತಿದು. ನಿಜ.. ಬೇಂದ್ರೆ ಒಬ್ಬ ವ್ಯಕ್ತಿಯಲ್ಲ; ಅದೊಂದು ಮಹಾನ್ ಶಕ್ತಿ.

 ‘’ಮಕ್ಕಳೊಳಾಡಿದಿ, ಹಕ್ಕ್ಯಾಗಿ ಹಾಡಿದಿ
 ಚಿಕ್ಕ್ಯಾಗಿ ನೋಡಿದಿ ಗುರುದೇವ।
 ಹಾಡಿ ಹಣ್ಣಾದಿ ನೀ ಜಗದ ಕಣ್ಣಾದಿ ನೀ
 ನಿನ್ಹಂಗ ಆಡಾಕ ನಿನ್ಹಂಗ ಹಾಡಾಕ 
 ಪಡೆದು ಬಂದವ ಬೇಕ ಗುರುದೇವಾ’’ 

ಅಂಬಿಕಾತನಯದತ್ತರು ಗುರುದೇವ ರವೀಂದ್ರನಾಥ ಠಾಕೂರರ ಕುರಿತಾಗಿ ತೆಗೆದ ಉದ್ಗಾರವಿದು.  ಅದೇ ಉದ್ಗಾರವನ್ನು ನಾವಿಂದು ಬೇಂದ್ರೆಯವರ ಬಗೆಗೂ ಮಾಡಿದರೇನೂ ಅತಿಶಯೋಕ್ತಿಯಿಲ್ಲ.  ಅವರ  ಹಾಡುಗಳನ್ನು ಕೇಳಲೂ ಪಡೆದುಬಂದಿರಬೇಕೆಂಬುದೇ ನನ್ನ ಅನಿಸಿಕೆ.  ‘ನುಡಿದು ಬೇಸತ್ತಾಗ, ದುಡಿ ದುಡಿದು ಸತ್ತಾಗ ಜನಕ ಹಿಗ್ಗಿನ ಹಾಡು ನೀಡಾಂವ..’ ಅಕ್ಷರಶ: ಸತ್ಯ.

‘’ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ. ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ” ಎನ್ನುತ್ತಾರೆ ಅಂಬಿಕಾತನಯದತ್ತರು.  ಪ್ರಕೃತಿಯ ಹಾಗೂ ಬದುಕಿನ ಸೌಂದರ್ಯವನ್ನು ಇಂಚಿಂಚಾಗಿ ತಾವೂ ಆಸ್ವಾದಿಸಿ, ಸಹೃದಯರಿಗೂ ಉಣ್ಣಿಸಿದವರು.  ಅವರ ಹಾಡುಗಳನ್ನು ಕೇಳುತ್ತಿದ್ದರೆ ನಾದದ ನದಿಯೊಂದು ನಡೆದ್ಹಂಗ.. ಹಾದಿ ತಪ್ಪಿಸಿಕೊಂಡ ಗುಂಗೀಯ ಹುಳದ ‘ಗುಯ್’ಗಾನದ್ಹಂಗ..

ಜೀವದ ರಸ ಹಿಂಡಿ ತುಂತುರು ಮಳೆಯಾಗಿ ತಂತೀಯ ತುಂಬೆಲ್ಲ ಸಿಡಿದ್ಹಂಗ.. ಗಲ್ಲ ಗಲ್ಲಕ ಹಚ್ಚಿ ನಲ್ಲನಲ್ಲೆಯರಿರುಳು ಗುಜುಗುಜು ಗುಲುಗುಲು ನುಡಿದ್ಹಂಗ… ಮನಸ್ಸು ಸೂಜಿ ಹಿಂದ ದಾರದ್ಹಾಂಗ, ಕೊಳ್ಳದೊಳಗ ಜಾರಿದ್ಹಂಗ ಅವರ ಹಿಂದಽ ಹೊರಟುಬಿಡುತ್ತದೆ.. ಹಿಂದಽ ನೋಡದಽ..ಯಾರಿಗೂ ಹೇಳದೇ ಹಾರಗುದರಿ ಬೆನ್ನ ಏರಿ ಸ್ವಾರರಾಗಿ ಕೂತು ಹಂಗ ದೂರ ದೂರ ಹೊರಟುಬಿಡುತ್ತೇವೆ ಅವರೊಡನೆ.. ಅವರ ಕಾವ್ಯದೊಡನೆ.   

ಇದೇ ಜನೆವರಿ ೩೧ ಕ್ಕೆ ವರಕವಿಯ ೧೨೫ನೆಯ ಜನುಮದಿನೋತ್ಸವ.. ನಾಡಿನಾದ್ಯಂತ ‘ಕವಿದಿನ’ದ ಸಂಭ್ರಮ.  ಬೇಂದ್ರೆಯವರ ಪೂಣ೯ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ – ದ. ರಾ. ಬೇಂದ್ರೆ.  ೧೮೮೬ ರ ಜನೆವರಿ ೩೧ ರಂದು ಧಾರವಾಡದಲ್ಲಿ ಜನಿಸಿದ ಇವರು ೧೯೧೩ರಲ್ಲಿ ತಮ್ಮ ಮೆಟ್ರಿಕ್ಯುಲೇಷನ್ ಮುಗಿಸಿ ಪುಣೆಯ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಮಾಡಿದರು.  ಕೆಲಕಾಲ ಅಧ್ಯಾಪಕ ವೃತ್ತಿ ಮಾಡಿ ನಂತರ ಎಂ.ಎ.ಪದವಿಯನ್ನು ಪೂರೈಸಿ ಸೊಲ್ಲಾಪುರದ ಕಾಲೇಜೊಂದರಲ್ಲಿ ೧೦-೧೨ ವರುಷಗಳ ಕಾಲ ಪ್ರಾಧ್ಯಪಕರಾಗಿದ್ದರು.  ಸಾಹಿತ್ಯ ರಚನೆ ಅವರ ಮೊದಲ ಒಲವು.  ‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಸೂಯ೯ಪಾನ, ನಾದಲೀಲೆ, ನಾಕುತಂತಿ, ಕೃಷ್ಣಾಕುಮಾರಿ, ಸಖೀಗೀತ, ಗಂಗಾವತರಣ, ಹೃದಯಸಮುದ್ರ, ಅರಳು ಮರಳು, ಬಾ ಹತ್ತರ.. ಇತ್ಯಾದಿ ಹತ್ತು ಹಲವಾರು ಕವನಸಂಕಲನಗಳನ್ನು ರಚಿಸಿದ್ದು ಅವೀಗ ‘ಅಂಬಿಕಾತನಯದತ್ತರ ಸಮಗ್ರ ಕಾವ್ಯ’ ೬ ಸಂಪುಟಗಳಲ್ಲಿ ಲಭ್ಯವಿವೆ.  ಕಾಳಿದಾಸನ ಪ್ರಸಿದ್ಧ ಖಂಡಕಾವ್ಯ ‘ಮೇಘದೂತ’ವನ್ನೂ ಕನ್ನಡದ ಅವತರಣಿಕೆಗೆ ಒಳಪಡಿಸಿದ್ದು ಇವರ ಹೆಗ್ಗಳಿಕೆ. ‘ಅರಳು-ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಕಾಶೀವಿದ್ಯಾಪೀಠ ವಾರಣಾಸಿ, ಮೈಸೂರು ಹಾಗೂ ಕನಾ೯ಟಕ ವಿಶ್ವವಿದ್ಯಾಲಯಗಳ ಡಾಕ್ಟರೇಟ್; ‘ನಾಕು ತಂತಿ’ಗೆ ಸಾಹಿತ್ಯದ ಅತ್ಯೋನ್ನತ ಪ್ರಶಸ್ತಿ ‘ಜ್ಞಾನಪೀಠ’ ಇವರನ್ನರಸಿ ಬಂದ ಪ್ರಶಸ್ತಿಗಳು, ಗೌರವಾದರಗಳು.  ಅರವಿಂದರ ಅಧ್ಯಾತ್ಮ, ರವೀಂದ್ರರ ಸಾಹಿತ್ಯ, ಗಾಂಧೀಜಿಯವರ ಸತ್ಯ-ಅಹಿಂಸೆಗಳಂಥ ರಾಜಕೀಯ ತತ್ವಗಳಿಂದ ಬೇಂದ್ರೆ ಸಹಜವಾಗಿಯೇ ಪ್ರಭಾವಿತರಾಗಿದ್ದರು.  ಅವರು ಕಾವ್ಯವನ್ನೇ ಬದುಕಾಗಿಸಿಕೊಂಡರೋ ಅಥವಾ ಬದುಕನ್ನೇ ಕಾವ್ಯವಾಗಿಸಿದರೋ ಹೇಳುವುದು ಕಷ್ಟ.  ಬೇಂದ್ರೆ ಬದುಕು-ಬರಹಗಳಲ್ಲಿ ವ್ಯತ್ಯಾಸವಿರಲಿಲ್ಲ.  ‘ಬೆಂದ್ರ ಬೇಂದ್ರೆಯಾಗತಾನ’ ಅನ್ನುವ ಅವರ ಪ್ರಸಿದ್ಧ ಮಾತೊಂದಿದೆ.  ಆದರೆ ಖಂಡಿತ ಬೆಂದವರೆಲ್ಲ ಬೇಂದ್ರೆಯಾಗಲಾರರು.  ಆದರೆ ಬೇಂದ್ರೆ ಕಾವ್ಯ ನಮ್ಮನ್ನು ಬೇಯಿಸಿ ಹದ ಮಾಡುತ್ತದೆನ್ನುವುದರಲ್ಲಿ ಯಾವ ಸಂಶಯವಿಲ್ಲ.  ಈ ಕವಿಯ ಪದಗಳ ಗುಂಗು ಹತ್ತಿಬಿಟ್ಟರೆ ‘ತಾಳ್ಯಾಕ-ತಂತ್ಯಾಕ, ರಾಗದ ಹಂಗ್ಯಾಕ, ಕುಣಿಯೋಣು ಬಾರಾ ಕುಣಿಯೋಣು ಬಾ’ ಎಂದು ಮನ ಸಂತಸದಿಂದ ಹುಚ್ಚೆದ್ದು ಕುಣಿಯತೊಡಗುತ್ತದೆ.  ಇವರು ‘ಶಬ್ದ ಗಾರುಡಿಗ’ರು.  ಒಂದೇ ಶಬ್ದ ಹೊರಡಿಸಬಹುದಾದ ಹತ್ತು ಹಲವು ಅಥ೯ಗಳನ್ನು ಸಮಥ೯ವಾಗಿ, ನಾದಮಯವಾಗಿ ಬಳಸುವ ಇವರ ಚಮತ್ಕಾರ ಮೋಡಿ ಮಾಡುತ್ತದೆ.  ‘ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯವಾ’ ಹಾಡಿನ ಸಾಲುಗಳನ್ನು ನೋಡಿ..

“ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾವಾ.. ಖರೇ ಅಂತ ಕೈ ಮಾಡಿದರ ಹಿಡಿದ ಬಿಡವಾ”.. ಒಂದು ‘ಹಿಡಿ’ ಪದವನ್ನು ಎಷ್ಟೆಲ್ಲ ಅಥ೯ಗಳಲ್ಲಿ ಎಷ್ಟು ಸಹಜವಾಗಿ ಬಳಸಿಕೊಂಡಿದ್ದಾರೆಂದು ಅಚ್ಚರಿಯಾಗುತ್ತದೆ.

 ಇದು ಉಪ್ಪುನೀರ ಕಡಲಲ್ಲೋ ನಮ್ಮ ಒಡಲಲ್ಲೇ ಇದರ ನೆಲೆಯು।
 ಕಂಡವರಿಗಲ್ಲೋ ಕಂಡವರಿಗಷ್ಟೇ ತಿಳಿತಾದ ಇದರ ಬೆಲೆಯು।
 ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲಿ ಮಾತ್ರ ಒಡೆಯುವುದು ಇದರ ಸೆಲೆಯು! 
 ಕಣ್ ಅರಳಿದಾಗ,ಕಣ್ ಹೊರಳಿದಾಗ ಹೊಳೆಯುವುದು ಇದರ ಕೆಳೆಯು॥ 

ಕಡಲಿರುವುದು ಬರೀ ಹೊರಗಲ್ಲ;  ನಮ್ಮೊಳಗೂ ಅನಂತ ಕಡಲಿದೆ.. ಭಾವಗಳ ಕಡಲದು. ಭಕ್ತಿಯ-ಶಕ್ತಿಯ, ಪಾರಮಾಥಿ೯ಕ ಕಡಲದು.  ಅದು ಕಂಡಕಂಡವರಿಗೆಲ್ಲ ಬೇಕಾಬಿಟ್ಟಿ ದೊರೆತುಬಿಡುವಂಥದ್ದಲ್ಲ;  ಅದರ ಬೆಲೆ ಏನೆಂಬುದು ಅದನ್ನು ಕಂಡವರಿಗಷ್ಟೇ ಗೊತ್ತು.  ಹಾಗೆಯೇ ಬೇಕುಬೇಕಾದಲ್ಲಿ ಸಿಕ್ಕಸಿಕ್ಕಲ್ಲೆಲ್ಲಾ ಅದರ ಸೆಲೆ ಒಡೆಯದು.  ಅಂತ:ಕರಣ ಒದ್ದೆಯಾಗಿ ಹೊರಚಿಮ್ಮುವ ಸೆಲೆ ಅದು. ಬೇಂದ್ರೆ ಕಾವ್ಯವೂ ಅಂತೆಯೇ.

ಅಧ್ಯಯನ ಬೇಂದ್ರೆಯವರ ಅವಿಭಾಜ್ಯ ಅಂಗ.  ಸಂಸ್ಕೃತ,ಕನ್ನಡ,ಇಂಗ್ಲೀಷ್‌ ಹಾಗೂ ಮರಾಠಿ ಸಾಹಿತ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದವರು.  ಇವರ ಮಾತೃಭಾಷೆ-ಮನೆಮಾತು ಮರಾಠಿ ಆದರೂ ಕನ್ನಡ ಭಾಷೆಯನ್ನು ಅವರು ಬಳಸಿಕೊಂಡ, ದುಡಿಸಿಕೊಂಡ ರೀತಿ ವಿಸ್ಮಯಕಾರಿಯಾದುದು.  ಅಚ್ಚಗನ್ನಡ, ಸಂಸ್ಕೃತ ಭೂಯಿಷ್ಟ ಕನ್ನಡ, ಹಳ್ಳಿಯ ಆಡುನುಡಿ, ಮಿಶ್ರಕನ್ನಡ.. ಎಲ್ಲವನ್ನೂ ತಮ್ಮ ಕವನಗಳಲ್ಲಿ ಬಳಸಿದ್ದೊಂದು ಅವರ ವೈಶಿಷ್ಟ್ಯ.  ಅಂತೆಯೇ ಅವರು ಬಳಸುವ ಛಂದಸ್ಸುಗಳು-ಅಲಂಕಾರಗಳೂ ಸಹ ಅಷ್ಟೇ ವೈವಿಧ್ಯಮಯ.  ಕವನದ ಭಾವಕ್ಕೆ ತಕ್ಕಂತೆ ಭಾಷೆ-ಛಂದಸ್ಸು-ಅಲಂಕಾರಗಳನ್ನು ಎರಕ ಹೊಯ್ಯುವುದು ಅವರಿಗೆ ಕರತಲಾಮಲಕವಾಗಿತ್ತು.  ಅವರಿಗೆ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಅದಮ್ಯ ಆಸಕ್ತಿ.ಮನೆಯಂಗಳದ ಮೊಗ್ಗಿನಿಂದ ಹಿಡಿದು ಬಾನಂಗಳದ ಚುಕ್ಕಿಯವರೆಗೆ ಎಲ್ಲವನ್ನೂ ಸೋಜಿಗದಿಂದ ಕಂಡು ಅರಿತು ಸಂತಸ ಪಡುವುದು ಅವರ ರೀತಿ.  ಸಾಂಖ್ಯಶಾಸ್ತ್ರ ಅವರ ನೆಚ್ಚಿನ ವಿಷಯ.  ಬಾಳೆಯ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ಹಾಲ್ದೆನೆಗಳಲ್ಲಿ, ನಿಮ್ಮ ಕಿರುಬೆರಳ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ.. ಎಲ್ಲೆಲ್ಲೂ ಲೆಕ್ಕಾಚಾರವಿದೆಯೆಂಬುದು ಅವರ ಅಭಿಪ್ರಾಯ.  ಸಂಖ್ಯೆಗಳೊಡನೆ ಆಟವೂ ಅವರಿಗೆ ಬಲು ಇಷ್ಟವಾಗಿತ್ತು.  (‘ಹತ್ತಂದರ ಹತ್ತು.. ಏಳಂದರ ಏಳು’.. ‘ಬಾಹತ್ತರ’) ಇತ್ಯಾದಿಗಳನ್ನು ಕಾವ್ಯಾಸಕ್ತರು ಗಮನಿಸಬಹುದು.  ಬೇಂದ್ರೆಯವರು ಕವನಗಳನ್ನು ಕಟ್ಟುವುದಿಲ್ಲ; ಅವರ ಕವನಗಳು ಹುಟ್ಟುತ್ತವೆ.ಬೇರೆಯದೇ ಲೋಕವನ್ನು ನಮ್ಮೆದಿರು ಅನಾವರಣಗೊಳಿಸುತ್ತವೆ.  ಗೊತ್ತೇ ಇರದ್ದನ್ನು ಫಕ್ಕನೇ ಹೊಳೆಯಿಸಿಬಿಡುತ್ತವೆ.  ಧನ್ಯತೆಯಲ್ಲಿ ಮೀಯಿಸಿಬಿಡುತ್ತವೆ.  ಅವರೇ ಹೇಳುವಂತೆ ‘ಕವಿತೆ ಎಲ್ಲರ ಮನೆಯಲ್ಲೂ ಬೆಳೆಯುವ ಹೀರೆ ಹೂವಲ್ಲ.  ಕೆಲವು ಜನರ ಮನಸ್ಸಿನ ಉದ್ಯಾನದಲ್ಲಿ ಅರಳುವ ಮಂದಾರ ಕುಸುಮ’.  ಅವರ ಕಾವ್ಯ ಘಮಘಮ ಘಮ್ಮಾಡಿಸುವ ಮಲ್ಲಿಗೆಯ ಹೂವು..  ತಾಯಿ ಅಂಬಿಕೆಯ ಉದರದ ಹೂವು.. ಕುಲುಕುಲು ನಗುವ ಬಸಿರ ಹೂವು.

ಬೇಂದ್ರೆಯವರದು ಉದ್ಭವ ಕಾವ್ಯ; ಅನುಭಾವ ಕಾವ್ಯ.  ಒಲವು ಅವರ ಕಾವ್ಯದ ಜೀವಾಳ.  ಸರಸ ಜನನ-ವಿರಸ ಮರಣ -ಸಮರಸವೇ ಜೀವನವೆಂದು ಸಹಬಾಳ್ವೆಯನ್ನು ಸಾರಿದ ಕಾವ್ಯ.  ಒಲವೇ ನಮ್ಮ ಬದುಕು ಎಂದು ನಂಬಿ ಅದಕೂ ಇದಕೂ ಎದಕೂ ಅದನ್ನೇ ಬಳಸಿಕೊಂಡವರು ಈ ವರಕವಿ.  ಪತಿ-ಪತ್ನಿಯ ಸಂಬಂಧದಲ್ಲಿ ಮೇಲುಕೀಳಿನ ತಾರತಮ್ಯವಿರದೇ ಸ್ನೇಹದ ಸೆಲೆಯಲ್ಲಿ, ಗೆಳೆತನದ ಸಲಿಗೆಯಲಿ ಸಖೀ-ಸಖಭಾವ ಇರಬೇಕೆಂಬುದೇ ಇವರ ‘ಸಖೀಗೀತ’ದ ಆಶಯ; ಅವರು ಕಂಡ ದಾಂಪತ್ಯದಶ೯ನ.  ಇದನ್ನೇ ನಾನು-ನೀನು-ಆನು-ತಾನು..(ನಾನು-ನೀನುವಿನ ದಾಂಪತ್ಯ, ಅದರಫಲವಾದ ಆನು, ಅವೆಲ್ಲವನ್ನೂ ಒಳಗೊಂಡ ತಾನು) ಇದರ ತತ್ವವನ್ನು ‘ನಾಕುತಂತಿ’ಯಲ್ಲಿ ವಿವರಿಸುತ್ತಾರೆ.  ‘ನಾಕುತಂತಿ’ ಕನ್ನಡಮ್ಮನ ಕಿರೀಟಕ್ಕೆ ಜ್ಞಾನಪೀಠದ ಮರಕತ ಮಣಿ ಕೂರಿಸಿದ ಕೃತಿ.  ನಾಕುತಂತಿಯಂಥ ಕೃತಿಯನ್ನು ಅಥೈ೯ಸಿಕೊಳ್ಳಲು ಕೇವಲ ಭಾಷಾಜ್ಞಾನ, ಶ್ಲೇಷೆಗಳು ಗೊತ್ತಿದ್ದರೆ ಸಾಲದು.  ಅಧ್ಯಾತ್ಮದ, ಭಾರತೀಯ ತತ್ವಶಾಸ್ತ್ರದ ಅಲ್ಪಸ್ವಲ್ಪ ಪರಿಚಯವಾದರೂ ಓದುಗನಿಗಿರಬೇಕು ಎಂಬುದು ನನ್ನ ಅನಿಸಿಕೆ.  ಆದರೆ ಇಂಥ ಗಾಢ ಚಿಂತನೆಯ ಕವಿಯ ಎಷ್ಟೋ ಹಾಡುಗಳು ಪುಟ್ಟ ಮಕ್ಕಳ ಬಾಯಲ್ಲಿ ಬಣ್ಣಬಣ್ಣದ ಪಾತರಗಿತ್ತಿಗಳಾಗಿ ಪಕ್ಕ ಬಿಚ್ಚಿಕೊಂಡು ಹಾರಾಡಿ ನಲಿಯುತ್ತವೆ;  ಅಕ್ಷರ ಜ್ಞಾನವಿಲ್ಲದ ಎಮ್ಮೆಕಾಯುವ ಹುಡುಗನ ಬಾಯಲ್ಲಿ ‘ಛಾದ ಜೋಡಿ ಚೂಡಾ’ಆಗುತ್ತವೆ.  ಬಲು ಸೋಜಿಗವೆನಿಸುತ್ತದೆಯಲ್ಲವೇ?

ಬೇಂದ್ರೆ ಕಾವ್ಯಕ್ಕೆ ಯಾವ ಋತುಮಾನಕ್ಕೂ ಚಿಗುರುವ ಚೈತನ್ಯವಿದೆ.  ಅದಕ್ಕೆಂದೇ ಬೆಳಗಿನಲ್ಲಿ ‘ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ ಹಾಡು’ಹೊರಡುತ್ತದೆ.  ಸಂಜೆ ‘ತಂಬುಲದ ತುಟಿಯ ತೋರಿ, ಮಲ್ಲಿಗೆಯ  ಮುಡಿದುಕೊಂಡು ಮೆಲ್ಲಗಾಗಿ’ ಬರುತ್ತದೆ.  ರಾಗರತಿಯಲ್ಲಿ ‘ಬಿದಿಗಿ ಚಂದ್ರನ ಚೊಗಚಿ ನಗೀಹೂ’ ಮೆಲ್ಲಗೆ ಮೂಡುತ್ತದೆ.  ರಾತ್ರಿ ‘ಅಕ್ಷಿನಿಮೀಲನ ಮಾಡದ ನಕ್ಷತ್ರದ ಗಣ ಗಗನದೆ’ ಹಾರುತ್ತದೆ.  ಪ್ರತಿಸಾರಿ ‘ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ ಕೋಟಿ ಕೋಟಿ ಸಲ’ ಹೊಸಯಿಸುತ್ತದೆ.  ಒಲವಲ್ಲಿ ‘ನಾನು ಹಣ್ಣು..ನೀನು ಗಿಣಿಯು’ ಆಗಿ ಹುದುಕುತ್ತದೆ.  ಸಂತಸದಲ್ಲಿ  ‘ತಾಳ್ಯಾಕ ತಂತ್ಯಾಕ ರಾಗದ ಹಂಗ್ಯಾಕ’ ಅಂತ ಕುಣಿಯುತ್ತದೆ. ಅಂತರಂಗದ ಮೃದಂಗ ನುಡಿಸುತ್ತದೆ.  ದು:ಖದಲ್ಲಿ ರುದ್ರವೀಣೆ ಮಿಡಿಯುತ್ತದೆ; ಅತ್ತಾರ ಅತ್ತುಬಿಡು..ಹೊನಲು ಬರಲಿ. ನಕ್ಕ್ಯಾಕ ಮರಸತಿ ದು:ಖ’ ಅಂತ ಹಲುಬುತ್ತದೆ.  ‘ಕೊಳಲಾಗಬಹುದಿತ್ತು.. ಕಳಲೆಯನೇ ಕಡಿದ ಕಾಳ’ ಎಂದು ನಿಡುಸುಯ್ಯುತ್ತದೆ.  ‘ಬದುಕು ಮಾಯೆಯ ಮಾಟ’ ಎಂದು ಸಾಂತ್ವನ ಹೇಳುತ್ತದೆ.  ‘ಬಂಗಾರ ನೀರ ಕಡಲಾಚೆ’ಗಿರುವ ನಮ್ಮ ತೀರ ತೋರಿಸುತ್ತದೆ.  ಕರಡಿಯಾಗಿ ಕುಣಿಯುತ್ತದೆ.. ಕರಿಮರಿಯಾಗಿ ಕುಯ್ಗುಡತ್ತದೆ.. ಕುರುಡು ಕಾಂಚಾಣವಾಗಿ ತುಳಿಯುತ್ತದೆ.. ಬಲಿ ಕೇಳಿ ಗಾಬರಿಬೀಳಿಸುತ್ತದೆ…  ಕೊನೆಗೆ ‘ಮಮತೆ ಮಿಂದಂತೆ ಹರಕೆ ಸಂದಂತೆ ಕಂದನ್ನ ಹುಡುಕಿ’ ಪಾಪ ತೊಳೆವ ಗಂಗೆಯಾಗಿ ಹರಿದು ಬರುತ್ತದೆ.

‘ವಿನಾ ದೈನ್ಯೇನ ಜೀವನಂ – ಅನಾಯಾಸೇನ ಮರಣಂ’ ಇದು ಬೇಂದ್ರೆಯವರ ಆಶೆಯಾಗಿತ್ತಂತೆ.  ಅಂತೆಯೇ ಬಾಳಿ ಬದುಕಿ ತೆರಳಿದವರು ಅವರು.  ೨೬ ನೆಯ ನವ್ಹೆಂಬರ್ ೧೯೮೧ ರಲ್ಲಿ ದೀಪಾವಳಿಯ ನರಕಚತುದ೯ಶಿಯಂದು ಬೆಳಕಿನ ಲೋಕಕ್ಕೆ ತೆರಳಿತು ಕವಿಜೀವ.  ಆದರೆ ಅವರ ಯಶ:ಕಾಯಕ್ಕೆ ಸಾವಿಲ್ಲ;  ಅದು ಅಜರಾಮರ.  ಬೇಂದ್ರೆ ತಮ್ಮ ಕಾವ್ಯಶಕ್ತಿಯಿಂದ ವಿಶ್ವಚೈತನ್ಯವಾಗಿ ಎಲ್ಲೆಡೆ ಹಬ್ಬಿದ್ದಾರೆ.  ಆ ಚೈತನ್ಯಕ್ಕೆ ಸಾವಿರದ ಶರಣು.

–  ಗೌರಿ ಪ್ರಸನ್ನ.

********************************************************************

ಬೇಂದ್ರೆಯವರ ‘ನಾನು ಬಡವಿ’ ಕಿರುಗವಿತೆಯಲ್ಲಿ ಒಲವಿನ ಪಯಣ: ಕೇಶವ ಕುಲಕರ್ಣಿ

ಈ ಮೊದಲು ಈ ಕವಿತೆಯನ್ನು ಓದಿಲ್ಲದಿದ್ದರೆ ಅಥವಾ ಕೇಳಿರದಿದ್ದರೆ ಮೊದಲೊಮ್ಮೆ ನೀವೇ ಓದಿಕೊಳ್ಳಿ: 
  
 ನಾನು ಬಡವಿ ಆತ ಬಡವ 
 ಒಲವೆ ನಮ್ಮ ಬದುಕು 
 ಬಳಸಿಕೊಂಡೆವದನೆ ನಾವು 
 ಅದಕು ಇದಕು ಎದಕು 
  
 ಹತ್ತಿರಿರಲಿ ದೂರವಿರಲಿ 
 ಅವನೆ ರಂಗಸಾಲೆ 
 ಕಣ್ಣುಕಟ್ಟುವಂಥ ಮೂರ್ತಿ 
 ಕಿವಿಗೆ ಮೆಚ್ಚಿನೋಲೆ 
  
 ಚಳಿಗೆ ಬಿಸಿಲಿಗೊಂದೆ ಹದನ 
 ಅವನ ಮೈಯ ಮುಟ್ಟೆ 
 ಅದೇ ಗಳಿಗೆ ಮೈಯ ತುಂಬ 
 ನನಗೆ ನವಿರುಬಟ್ಟೆ 
  
 ಆತ ಕೊಟ್ಟ ವಸ್ತು ಒಡವೆ 
 ನನಗೆ ಅವಗೆ ಗೊತ್ತು 
 ತೋಳುಗಳಿಗೆ ತೋಳಬಂದಿ 
 ಕೆನ್ನೆ ತುಂಬ ಮುತ್ತು 
  
 ಕುಂದು ಕೊರತೆ ತೋರಲಿಲ್ಲ 
 ಬೇಕು ಹೆಚ್ಚಿಗೇನು? 
 ಹೊಟ್ಟೆಗಿತ್ತ ಜೀವ ಫಲವ 
 ತುಟಿಗೆ ಹಾಲು ಜೇನು  

ದ.ರಾ.ಬೇಂದ್ರೆ (ಅಂಬಿಕಾತನಯದತ್ತ) ಕನ್ನಡದ ಶಬ್ದ ಗಾರುಡಿ; ಉತ್ತರ ಕರ್ನಾಟಕದ ಆಡುಭಾಷೆಯನ್ನು ಕನ್ನಡದ ಕಾವ್ಯ ಪರಂಪರೆಯನ್ನು ಅರಗಿಸಿಕೊಂಡು ಕನ್ನಡ ಜನತೆಗೆ ಉಣಬಡಿಸಿದ ವರಕವಿ. 

‘ನಾನು ಬಡವಿ’ ಎಂಬ ಕವಿತೆ ಅವರ ಒಂದು ಸರಳ ಸುಂದರ ಕವಿತೆ. ಮೊದಲ ಓದಿಗೇ ಅರ್ಥವಾಗುವ ಕವನ, ಆದರೆ ಓದಿದಷ್ಟೂ ಅರ್ಥ ಬಿಚ್ಚಿಕೊಳ್ಳುವ ಕವನ. ಮೈಸೂರು ಅನಂತಸ್ವಾಮಿಯವರು ರಾಗ ಸಂಯೋಜಿಸಿ ಅಮರವಾಗಿಸಿದ ಕವಿತೆ ಇದು. 

ಬೇಂದ್ರೆಯವರ ನೆನಪಿನಲ್ಲಿ ನಾನು ಬೇಂದ್ರೆಯವರ ಈ ಕವಿತೆಯನ್ನು ಆರಿಸಿಕೊಂಡಿರುವುದು, ಸರಳ ಪದಗಳಲ್ಲಿ, ಸುಲಭ ಲಯದಲ್ಲಿ, ಅದ್ಭುತವಾಗಿ, ಎಲ್ಲರಿಗೂ ಅರ್ಥವಾಗುವಂಥಹ ಕವಿತೆಗಳನ್ನೂ ಬೇಂದ್ರೆಯವರು ಬರೆಯುತ್ತಿದ್ದರು ಎಂದು ಹೇಳುವುದು ಒಂದು. 

ಒಳ್ಳೆಯ ಕವನಗಳನ್ನು ಓದುವುದು ಮತ್ತು  ಮತ್ತೆ ಮತ್ತೆ ಓದುವುದು ಒಂದು ಅನುಭೂತಿ. ಕವನಗಳನ್ನು ಹೇಗೆ ಹೀಗೆಯೇ ಬರೆಯಬೇಕು ಎಂದು ಹೇಗೆ ನಿಯಮವಿಲ್ಲವೋ ಅದೇ ರೀತಿ ಕವನಗಳನ್ನು ಹೀಗೇ ಓದಿ ಹೀಗೇ ಅರ್ಥ ಮಾಡಿಕೊಳ್ಳಬೇಕು ಎಂದು ನಿಯಮಗಳೇನೂ ಇಲ್ಲ. ಆದರೂ ಈ ಲೇಖನದಲ್ಲಿ ನಾನು ಕವನಗಳನ್ನು ನನ್ನದಾಗಿಸಿಕೊಳ್ಳುವ ನನ್ನದೊಂದು ರೀತಿಯನ್ನು ಹೇಳುತ್ತೇನೆ.  ಓದುಗನಲ್ಲಿ ಕವಿತೆಗಳ ಬಗ್ಗೆ ಬೇಂದ್ರೆಯವರ ಕವಿತೆಗಳ ಬಗ್ಗೆ ಪ್ರೀತಿಯನ್ನು ಹೆಚ್ಚಿಸುವುದು ಎರಡನೇ ಉದ್ದೇಶ.  

ಕವಿತೆಯ ವಿನ್ಯಾಸ:

ನಾಕು ಸಾಲಿಗೊಂದು ನುಡಿಯಂತೆ ಒಟ್ಟು ಐದು ನುಡಿಗಳು. ಮೊದಲ ಮತ್ತು ಮೂರನೇ ಸಾಲುಗಳು 12 ಮಾತ್ರೆಗಳು, ಎರಡನೇ ಮತ್ತು ನಾಕನೇ ಸಾಲು 9 ಮಾತ್ರೆಗಳ ಛಂದಸ್ಸು. ಎರಡನೇ ಮತ್ತು ನಾಕನೇ ಸಾಲಿನ ಕೊನೆಯಲ್ಲಿ ಪ್ರಾಸಗಳು (ಬದುಕು-ಎದಕು, ರಂಗಸಾಲೆ-ಮೆಚ್ಚಿನೋಲೆ, ಮುಟ್ಟೆ-ಬಟ್ಟೆ, ಗೊತ್ತು-ಮುತ್ತು, ಹೆಚ್ಚಿಗೇನು-ಹಾಲುಜೇನು). 

ಇಡೀ ಕವಿತೆಯನ್ನು ಅರವತ್ತು-ಎಪ್ಪತ್ತರ  ದಶಕದ ಒಂದು ಹಳ್ಳಿಯಲ್ಲಿ ಅದೇ ತಾನೇ ಮೊದಲ ಮಗುವಾದ ಹರೆಯದ ಬಡ ಹೆಂಗಸು ತನ್ನನ್ನು ನೋಡಲು ಬಂದ ತನಗಿಂತ ಚಿಕ್ಕವಳಾದ ಆದರೆ ಬಡವಳಲ್ಲದ ಆತ್ಮೀಯ ಗೆಳತಿಗೆ ಹೇಳುತ್ತಿರುವಂತೆ ಕಲ್ಪಿಸಿಕೊಂಡರೆ (ಗಂಡ ಮನೆಯಲ್ಲಿ ಇಲ್ಲ) ಕವಿತೆಗೆ ಒಂದು ಸುಂದರ ವಾತಾವರಣ ನಿರ್ಮಾಣವಾಗುತ್ತದೆ. ಅಂಥದೊಂದು ಕಲ್ಪನೆಯಲ್ಲಿ ಕವಿತೆಯನ್ನು ಮತ್ತೊಮ್ಮೆ ಓದಿ ಈ ಕೆಳಗಿನ ಲೇಖನವನ್ನು ಓದೋಣ. 

ಮೊದಲನೇ ನುಡಿ:

ನಾನು ಬಡವಿ ಆತ ಬಡವ 
ಒಲವೆ ನಮ್ಮ ಬದುಕು 
ಬಳಸಿಕೊಂಡೆವದನೆ ನಾವು 
ಅದಕು ಇದಕು ಎದಕು 

ಕವಿತೆಯನ್ನು ಬರೆದವರು ಗಂಡಸು ಬೇಂದ್ರೆ. ಆದರೆ ಈ ಕವಿತೆಯನ್ನು ಓದಲು ಶುರುಮಾಡುತ್ತಿದ್ದಂತೆಯೆ, ಈ ಕವಿತೆಯನ್ನು ಹೇಳುತ್ತಿರುವುದು ಗಂಡಲ್ಲ ಹೆಣ್ಣು ಎಂದು ಕವನದ ಎರಡನೇ ಶಬ್ದದಲ್ಲೇ (ನಾನು ಬಡವಿ) ಗೊತ್ತಾಗಿಬಿಡುತ್ತದೆ. ಅಂದರೆ ಇಲ್ಲಿ ಬೇಂದ್ರೆ ಹೆಣ್ಣಾಗಿ ಪರಕಾಯ ಪ್ರವೇಶ ಮಾಡುತ್ತಾರೆ. ತಾವೇ ಹೆಣ್ಣಾಗಿಬಿಡುತ್ತಾರೆ. 

ಮೊದಲ ನಾಕು ಸಾಲುಗಳು ಇಡೀ ಕವನದ ಪೀಠಿಕೆಯಾಗಿದೆ. ಇಲ್ಲಿ ಹೆಣ್ಣು ತನ್ನ ಬಗ್ಗೆ ಹೇಳಿಕೊಂಡು (ನಾನು ಬಡವಿ)  ನಂತರ ‘ಅವನ‘ ಬಗ್ಗೆ ಹೇಳುತ್ತಾಳೆ (ಆತ ಬಡವ). ಒಂದು ಕ್ಷಣ ಯೋಚಿಸಿ, ಕವಿತೆಯನ್ನು ‘ಅವನು ಬಡವ ನಾನು ಬಡವಿ‘ ಎಂದು ಬರೆದಿದ್ದರೂ ಕವನದ ಛಂದಸ್ಸಿಗೆ ತೊಂದರೆಯಾಗುತ್ತಿರಲಿಲ್ಲ, ಆದರೆ ಕವನ ಅರ್ಥವೇ ಬೇರೆಯಾಗುತ್ತಿತ್ತು. 

ಬೇಂದ್ರೆ ಇಲ್ಲಿ ಕನ್ನಡವನ್ನು ದುಡಿಸಿಕೊಳ್ಳುವ ರೀತಿಯನ್ನು ನೋಡಿ. ‘ಬಡವ‘ ಪುಲ್ಲಿಂಗ ‘ಬಡವಿ‘ ಸ್ತ್ರೀಲಿಂಗ; ಇಂಥಹ ಶಬ್ದಗಳು ಕನ್ನಡ ಭಾಷೆಯ ವೈಶಿಷ್ಟ್ಯ. ಉದಾಹರಣೆಗೆ, ಇಂಗ್ಲೀಷಿನಲ್ಲಿ ಇದನ್ನು ಹೇಳಲು ಎರಡು ಪದಗಳು ಬೇಕು, ‘poor man, poor woman’.  ಹಾಗೆ ಹೇಳಿದ ತಕ್ಷಣ ಕವಿತೆ ಗದ್ಯವಾಗಿಬಿಡುತ್ತದೆ. ಬೇಂದ್ರೆ ಎಂಬ ಗಾರುಡಿಗನ ಕೈಯಲ್ಲಿ ಕನ್ನಡ ಭಾಷೆ ಪದಪದಗಳಲ್ಲಿ ಕವಿತೆಯಾಗುತ್ತಾಳೆ ಅನ್ನುವುದನ್ನು ಗಮನಿಸಿ. 

ಬಡವರಲ್ಲದವರಾದರೆ ಅವರಿಗೆ ಬದುಕೆಂದರೆ ಕೆಲಸ, ದುಡ್ಡು ಸಂಪಾದಿಸಿ ಕೂಡಿಡುವುದು, ಕೆಲಸದವರನ್ನು ನೋಡಿಕೊಳ್ಳುವುದು ಇತ್ಯಾದಿ ಏನೆಲ್ಲ ಇರುತ್ತದೆ; ಆದರೆ ಬಡವರಿಗೆ ಬದುಕೆಂದರೆ ಏನು? ದಿನಾ ಕೂಳಿಗಾಗಿ ಕಷ್ಟಪಡುವ ಕಾಯಕ, ಸರಿಯಾದ ಸೂರಿಲ್ಲದ ನರಕ. ಆದರೆ ನಮ್ಮ ನಾಯಕಿಗೆ ಮತ್ತು ನಾಯಕನಿಗೆ ಈ ಕಷ್ಟಗಳ ಪರಿವೆ ಇಲ್ಲ, ಏಕೆಂದರೆ ಅವರಿಗೆ ಒಲವೆಂದರೆ ಬದುಕು, ಬದುಕೆಂದರೆ ಒಲವು. ಒಲವಿಗೆ ಬಡತನ ಬೇಗೆಯನ್ನು ಮೀರಿಸುವ ಶಕ್ತಿ ಇದೆ; ಅದು ಹೇಗೆ ಎನ್ನುವುದನ್ನು ಮುಂದಿನ ನಾಕು ನುಡಿಗಳಲ್ಲಿ ಕವನವನ್ನು ಕಟ್ಟುತ್ತಾರೆ.   

‘ಪ್ರೀತಿ ನಮ್ಮ ಬದುಕು‘ ಅಥವಾ ‘ಪ್ರೇಮ ನಮ್ಮ ಬದುಕು‘ ಎಂದು ಬರೆಸಿದ್ದರೂ ಛಂದಸ್ಸಿಗೆ ತೊಂದರೆಯಾಗುತ್ತಿರಲಿಲ್ಲ ಎನ್ನುವುದನ್ನು ಗಮನಿಸಿ. ಆದರೆ ಬೇಂದ್ರೆ ಹೆಚ್ಚಾಗಿ ಉಪಯೋಗದಲ್ಲಿ ಇರದ ‘ಒಲವ‘ನ್ನು ಉಪಯೋಗಿಸುತ್ತಾರೆ (ಕನ್ನಡ ಸಿನೆಮಾ ಹಾಡು ‘ಒಲವೇ ಜೀವನ ಸಾಕ್ಷಾತ್ಕಾರ‘, ‘ಒಲವಿನ ಉಡುಗೊರೆ ಕೊಡಲೇನು?’ ಗಮನಿಸಿ). ಪ್ರೀತಿ, ಪ್ರೇಮ ಮತ್ತು ಒಲವು ಎಲ್ಲ ಸಮಾನಾರ್ಥಕ ಪದಗಳಾದರೂ, ಅವುಗಳ ಒಳಾರ್ಥದಲ್ಲಿ ಇರುವ ಸೂಕ್ಷ್ಮವ್ಯತ್ಯಾಸವನ್ನು ಗಮನಿಸಿ, ಬೇಂದ್ರೆ ‘ಒಲವ‘ನ್ನು ಆರಿಸಿಕೊಳ್ಳುತ್ತಾರೆ. ‘ಒಲವು‘ ಏಕೆ ಎನ್ನುವುದನ್ನು ಮುಂದೆ ನೋಡೋಣ.  

ನಾಯಕ ನಾಯಕಿಯರಿಬ್ಬರಿಗೂ ಒಲವನ್ನು ಬಿಟ್ಟರೆ ಬೇರೆ ಜೀವನವೇ ಇಲ್ಲ, ಮತ್ತೆ ಅವರಿಗೆ ಬೇರೆ ಆಯ್ಕೆಯೂ ಇಲ್ಲ, ಏಕೆಂದರೆ ಅವರ ಬಳಿ ಒಲವಿನ ಹೊರತಾಗಿ ಇನ್ನೇನೂ ಇಲ್ಲ. 

ಎರಡನೇ ಸಾಲಿನ ಕೊನೆಯ ‘ಬದುಕು‘ಗೆ ನಾಕನೇ ಸಾಲಿನ ಕೊನೆಗೆ ಪ್ರಾಸ ಬೇಕು. ದಿನ ರಾತ್ರಿ ಕೂತು ಕನ್ನಡದ ಎಲ್ಲ ಶಬ್ದಕೋಶಗಳನ್ನು ಜಾಲಾಡಿಸಿದರೂ,  ಬೇಂದ್ರೆ ‘ಬದುಕು‘ ಶಬ್ದಕ್ಕೆ ಬರೆಯುವ ಪ್ರಾಸವನ್ನು ಯಾರಿಂದಲಾದರೂ ಬರೆಯಲು ಸಾಧ್ಯವಾದೀತೆ? ‘ಬದುಕು’ ಗೆ ಅವರು ಹಾಕುವ ಪ್ರಾಸ ‘ಎದಕು’! ಉತ್ತರ ಕರ್ನಾಟಕದ ಆಡುಮಾತಿನ ‘ಎದಕು’ (ಎಲ್ಲದಕು), ಎಷ್ಟು ಸುಂದರವಾಗಿ ಸಹಜ ಪ್ರಾಸವಾಗುತ್ತದೆ ಎನ್ನುವುದನ್ನು ಗಮನಿಸಿದರೆ ಬೇಂದ್ರೆ ಏಕೆ ಕನ್ನಡ ಕಂಡ ಅದ್ವಿತೀಯ ಕವಿ ಎನ್ನುವುದು ಅರ್ಥವಾಗುತ್ತದೆ. 

ಬೇಂದ್ರೆ ಹೆಣೆಯುವ ಶಬ್ದಗಳ ಮಾಲೆಯನ್ನು ಅವಲೋಕಿಸಿ, ನಾಯಕ ಮತ್ತು ನಾಯಕಿ ‘ಒಲವನ್ನು‘ ಅವರು ಉಪಯೋಗಿಸಿಕೊಳ್ಳುವುದು ‘ಅದಕು-ಇದಕು-ಎದಕು’! ಅಂತರಿಕ ಪ್ರಾಸಗಳು! ಇಂಥ ಅಪ್ರತಿಮ ಸಾಲುಗಳನ್ನು ಬೇಂದ್ರೆಯಲ್ಲದೇ ಇನ್ನಾವ ಕವಿ ತಾನೆ ಬರೆಯಬಲ್ಲ? ಅವರು ಒಲವನ್ನು ಅದಕ್ಕೆ, ಇದಕ್ಕೆ ಮತ್ತು ಎಲ್ಲದಕೆ ಉಪಯೋಗಿಸಿಕೊಳ್ಳದಿದ್ದರೆ ಅವರಿಗೆ ಬದುಕು ದುರ್ಭರವಾಗುತ್ತಿತ್ತು. ಒಲವನ್ನು ಉಪಯೋಗಿಸಿಕೊಂಡು ಅವರು ಬದುಕನ್ನು ಕಂಡುಕೊಳ್ಳುತ್ತಿದ್ದಾರೆ. 

 ಎರಡನೇ ನುಡಿ:
 ಹತ್ತಿರಿರಲಿ ದೂರವಿರಲಿ 
 ಅವನೆ ರಂಗಸಾಲೆ 
 ಕಣ್ಣುಕಟ್ಟುವಂಥ ಮೂರ್ತಿ 
 ಕಿವಿಗೆ ಮೆಚ್ಚಿನೋಲೆ  

ಮೊದಲ ನಾಕು ಸಾಲಿನ ಪೀಠಿಕೆ ಆದ ಮೇಲೆ, ನಾಯಕಿ ತನ್ನ ಒಲವಿನ ಪಯಣವನ್ನು ಮೊದಲಿನಿಂದ ಹೇಳುತ್ತಿದ್ದಾಳೆ.  

ನಾಯಕಿಗೆ ನಾಯಕನ ಮೇಲೆ ಒಲವು ಶುರುವಾಗಿದೆ. ನಾಯಕಿಗೆ ಸದಾ ನಾಯಕನ ಚಿಂತೆ, ಆಸೆ, ಕನಸು;  ಆತ ನಾಯಕಿಯ ರಂಗಸಾಲೆ. ‘ರಂಗಸಾಲೆ‘, ಇತ್ತೀಚೆ ಅಷ್ಟಾಗಿ ಉಪಯೋಗದಲ್ಲಿ ಇರದ ಶಬ್ದ. ರಂಗಸಾಲೆ ಎಂದರೆ ಥೇಟರ್, ಇತ್ತೀಚೆ ರಂಗಮಂದಿರ ಹೆಚ್ಚಾಗಿ ಉಪಯೋಗದಲ್ಲಿರುವ ಶಬ್ದ. ನಾಯಕಿಗೆ ಅವನೊಂದು ರಂಗಸಾಲೆ ಇದ್ದಂತೆ ಎಂದು ಬೇಂದ್ರೆ ರೂಪಕ ಕೊಡುತ್ತಾರೆ. ನನಗೆ ತಿಳಿದಿರುವಂತೆ ಇದು ಕನ್ನಡದಲ್ಲಿ ಅಚ್ಚಹೊಸ ರೂಪಕ. ಗಂಡಸನ್ನು ಸೂರ್ಯನಿಗೆ (ತಾನು ಮರ), ಮರಕ್ಕೆ (ತಾನು ಬಳ್ಳಿ) ಹೋಲಿಸಿ ಬರೆಯುವುದು ಅನಾದಿ ಕಾಲದಿಂದ ನಡೆದೇ ಇದೆ. ಬೇಂದ್ರೆ ‘ರಂಗಸಾಲೆ‘ ಎನ್ನುವ ಹೊಸ ರೂಪಕವನ್ನು ತರುತ್ತಾರೆ. ರಂಗಸಾಲೆಯಲ್ಲಿ ತಾನೆ ನಾಟಕ ನಡೆಯುವುದು, ನಗು, ಅಳು, ಎಲ್ಲ ಭಾವೋದ್ವೇಗಳೂ ಜರಗುವುದು. ನಾಯಕಿಗೆ ಅದೆಲ್ಲ ನಾಯಕನಿಂದ ಸಿಗುತ್ತಿದೆ, ಅವನು ಹತ್ತಿರವಿರದಿದ್ದಾಗಲೂ (ಏಕೆಂದರೆ ಕುಂತ್ರೆ ನಿಂತ್ರೆ ಅವ್‍ನ್ದೇ ಧ್ಯಾನ)! ಗಂಡು ಹೆಣ್ಣಿನ ಪ್ರೀತಿ ಹುಟ್ಟುವ ಮತ್ತು ಬೆಳೆಯುವ ಘಟನೆಗಳು ಕೂಡ ನಾಟಕವೇ ಅಲ್ಲವೇ? ಅದಕ್ಕೇ ‘ಅವನೇ ರಂಗಸಾಲೆ‘. ಆಷ್ಟೇ ಅಲ್ಲ  ‘ರಂಗಸಾಲೆ‘ಯನ್ನು ‘ರಂಗ ಸಾಲೆ‘ ಎಂದು ಓದಿದರೂ ಅದಕ್ಕೊಂದು ಹೊಸ ಅರ್ಥ ಬರುತ್ತದೆ. ನಾಯಕ ರಂಗು ರಂಗಿನ ಶಾಲೆ ಇದ್ದಂತೆ, ಪ್ರೀತಿ ಪ್ರೇಮಗಳನ್ನು ಹೇಳಿಕೊಡುವ ಗುರು. ಅಥವಾ ‘ರಂಗ‘ ಎಂದರೆ ಕೃಷ್ಣ, ಕೃಷ್ಣ ಭಾರತದ ಕಾವ್ಯ ಪರಂಪರೆಯಲ್ಲಿ ರಸಿಕರ ರಾಜ. ಅದಕ್ಕೇ ‘ಅವನು ರಂಗ ಸಾಲೆ;. ಎಂದೂ ಅರ್ಥೈಸಬಹುದು.  

ನಾಯಕನ ರೂಪ ಕಣ್ಣುಕಟ್ಟುವಂಥ ‘ಮೂರ್ತಿ’. ‘ಮೂರ್ತಿ‘ ಎಂದರೆ ಬೆಲೆಬಾಳುವಂಥಹದು. ನಾಯಕ ಬಡವನಾದರೂ ಬೆಲೆಕಟ್ಟಲಾಗದಂಥವನು ಎನ್ನುವುದನ್ನು ‘ಮೂರ್ತಿ‘ ಎನ್ನುವ ರೂಪಕದಲ್ಲಿ ಬೇಂದ್ರೆ ರೂಪಿಸುತ್ತಾರೆ.  

ಅವರಿಬ್ಬರೂ ಬಡವರಿರಬಹುದು, ಆದರೆ ಬಡವನಾದ ನಾಯಕ ಬಡವಿಯಾದ ನಾಯಕಿಗೆ ಕೊಡುವ ಉಡುಗೊರೆ ಯಾವ ಶ್ರೀಮಂತನಿಗೆ ಕಡಿಮೆ? ಆತ ನಾಯಕಿಯ ಕಿವಿಯಲ್ಲಿ ಉಲಿಯುವುದು ಅವಳ ರೂಪವನ್ನು, ಅವಳ ಮೇಲಿನ ಪ್ರೀತಿಯನ್ನು; ನಾಯಕಿಗೆ ‘ಕಿವಿಯೋಲೆ’ ಸಿಕ್ಕಿದ್ದು ಹಾಗೆ! ಅದೂ ಅಂತಿಂಥ ಕಿವಿಯೋಲೆಯಲ್ಲ, ಮೆಚ್ಚುಗೆಯ ಕಿವಿಯೋಲೆ! ನಾಯಕಿಗೆ ಅದು ವಜ್ರದ ಓಲೆಗಿಂತೆ ಹೆಚ್ಚು ಬೆಲೆಬಾಳುವಂಥಹದು.  

ಮೇಲಿನ ಈ ನಾಕು ಸಾಲುಗಳು ಗಂಡು ಹೆಣ್ಣಿನ ಪ್ರೇಮಾಂಕುರದ ಘಟ್ಟವನ್ನು ಹೇಳುತ್ತವೆ: ಒಬ್ಬರಿಗೊಬ್ಬರು ನೋಡುತ್ತ ಕೂಡುವುದು, ಮೆಚ್ಚಿಸುತ್ತ ಮಾತಾಡುತ್ತಲೇ ಇರುವುದು.

ಮೂರನೇಯ ನುಡಿ:

 ಚಳಿಗೆ ಬಿಸಿಲಿಗೊಂದೆ ಹದನ 
 ಅವನ ಮೈಯ ಮುಟ್ಟೆ 
 ಅದೇ ಗಳಿಗೆ ಮೈಯ ತುಂಬ 
 ನನಗೆ ನವಿರುಬಟ್ಟೆ

ಎಲ್ಲಿದ್ದರೂ ಅವನದೇ ಧ್ಯಾನವಿರುವಾಗ, ಕಣ್ಣಲ್ಲಿ ಅವನೇ ತುಂಬಿಕೊಂಡಿರುವಾಗ, ಅವನೂ ಹೂಂ ಅಂದು ಕಿವಿಯ ಹತ್ತಿರವೇ ಮೆಚ್ಚುಗೆಯ ಮಾತುಗಳನ್ನು ಆಡುತ್ತಿರುವಾಗ, ಪ್ರೇಮ ಪ್ರಣಯದ ನಿಟ್ಟಿನಲ್ಲಿ ಸಾಗುವುದು ಸಹಜವೇ ಅಲ್ಲವೇ?  ಮೆಚ್ಚುಗೆಯ ‘ಓಲೆ’ ಧರಿಸಿದ ನಾಯಕಿ, ತನ್ನಿಷ್ಟದ ‘ಮೂರ್ತಿ’ಯನ್ನು ಈಗ ಮುಟ್ಟುತ್ತಾಳೆ. 

ಪ್ರೇಮ ಈಗ ಮಾತು-ನೋಟದಿಂದ ಮುಂದೆ ಸಾಕಿ ಕೈ ಕೈ ತಾಗಿಸುವ ತಬ್ಬಿಕೊಳ್ಳುವ ಹಂತಕ್ಕೆ ಬಂದಿದೆ. ನಾಯಕನ ಮೈಯನ್ನು ಚಳಿಯಲ್ಲಿ ಮುಟ್ಟಿದರೆ ನಾಯಕಿಯ ಮೈಯೆಲ್ಲ ಬಿಸಿಯಾಗುತ್ತದೆ, ಬಿಸಿಲಲ್ಲಿ ಆತನ ಮೈ ತಂಪು ಆಶ್ರಯವನ್ನು ಕೊಡುತ್ತದೆ. ಇಲ್ಲಿ ಬೇಂದ್ರೆ ಹೇಗೆ ವೈರುಧ್ಯಗಳನ್ನು ಎರಡೇ ಶಬ್ದಗಳಲ್ಲಿ ಹೇಳುತ್ತಾರೆ ಎಂದು ಅವರ ಕಾವ್ಯಪ್ರತಿಭೆಯ ಬಗ್ಗೆ ತಲೆತೂಗಬೇಕಾಗುತ್ತದೆ. 

ಇಲ್ಲಿ ಬೇಂದ್ರೆ ಬಳಸಿರುವ ಶಬ್ದ, ‘ಹದನ’. ಅಷ್ಟಾಗಿ ಉಪಯೋಗದಲ್ಲಿಲ್ಲದ ಶಬ್ದ. ಉತ್ತರ ಕರ್ನಾಟಕದಲ್ಲಿ ‘ಹದ’ವನ್ನು ನಾನಾರ್ಥಗಳಿಗೆ ಉಪಯೋಗಿಸುತ್ತಾರೆ. ಉದಾಹರಣೆಗೆ: ಗಾಯನ ಅಭ್ಯಾಸ ಮಾಡುವ ವಿದ್ಯಾರ್ಥಿಗೆ ಗುರು ಹೇಳುತ್ತಾನೆ, ‘ಈಗ ನಿನ್ನ ಧನಿ ಒಂದು ಹದಕ್ಕ ಬಂತಪಾ’. ಇನ್ನೊಂದು ಅರ್ಥ, ‘ಹದಕ್ಕ ಬಂದಾನ ಹುಡುಗ’ ಎಂದರೆ ಇನ್ನೊಂದು ಅರ್ಥ. ‘ಪುಂಡ ಹುಡುಗನಿಗೆ ಕ್ರೀಡಾ ಶಿಕ್ಷಕರು ಸರಿಯಾಗಿ ಹದ ಮಾಡಿದರು’ ಎಂದರೆ ಮುಗದೊಂದು ಅರ್ಥ. ಈ ಮೂರೂ ಅರ್ಥಗಳು ಇಲ್ಲಿ ಒಟ್ಟಿಗೆ ಕೆಲಸ ಮಾಡುತ್ತವೆ. ಆದರೆ ‘ಹದ‘ಕ್ಕೆ ‘ನ‘ ಸೇರಿಸಿ ‘ಹದನ‘ ಮಾಡುವ ಅವಶ್ಯಕತೆ ಏನಿತ್ತು? ಬರೀ ಛಂದಸ್ಸನ್ನು ಪೂರ್ತಿ ಮಾಡಲು ಬೇಂದ್ರೆ ಮಾಡಿದ ಹೊಸ ಶಬ್ದೋತ್ಪತ್ತಿಯೇ? ಆದರೆ ‘ಹದನ‘ ಶಬ್ದ ಅವರ ಉತ್ಪತ್ತಿಯಲ್ಲ. ಗದುಗಿನ ಕುಮಾರವ್ಯಾಸ ಭಾರತದಲ್ಲಿ ಬರುತ್ತದೆ. (ಹದನ ನೀನೇ ಬಲ್ಲೆ ಸಾಕಿ|ನ್ನಿದು ನಿಧಾನವು ಬಗೆಯಲೆಮ್ಮ|ಭ್ಯುದಯ ನಿಮ್ಮಾಧೀನವೆಂದನು ಧರ್ಮನಂದನನು (ಉದ್ಯೋಗ ಪರ್ವ, ೭ ಸಂಧಿ, ೩ ಪದ್ಯ) ಮತ್ತು ನೀವು ಬಿಜಯಂಗೈದು ಚಿತ್ತದೊ|ವ ಹದನಾ ಹದನನಾ ರಾ|ಜೀವನಾಭಾದಿಗಳಿಗರುಹುವುದೆಂದರಾ ಚರರು (ಉದ್ಯೋಗ ಪರ್ವ, ೬ ಸಂಧಿ, ೧೫ ಪದ್ಯ)). 

ನಾಯಕ ನಾಯಕಿಗೆ ಹೊಸ ಸೀರೆ ತರದಿದ್ದರೇನಂತೆ? ಆತನ ಮೈ ಮುಟ್ಟಿದರೆ ಸಾಕು, ಆ ರೋಮಾಂಚನದಲ್ಲೇ, ಮೈಯ ತುಂಬ ನಾಯಕಿಗೆ ‘ನವಿರು ಬಟ್ಟೆ’! ಪ್ರೀತಿಯ ಮುಂದಿನ ಘಟ್ಟವಿದು. ಮಾತು-ನೋಟಗಳ ನಂತರ – ಮುಟ್ಟುವುದು – ಮುಟ್ಟುವುದರಲ್ಲಿ ಆಗುವ ರೋಮಾಂಚನ- ಈ ನಾಕು ಸಾಲುಗಳಲ್ಲಿವೆ. 

ನಾಕನೇ ನುಡಿ:

 ಆತ ಕೊಟ್ಟ ವಸ್ತು ಒಡವೆ 
 ನನಗೆ ಅವಗೆ ಗೊತ್ತು 
 ತೋಳುಗಳಿಗೆ ತೋಳಬಂದಿ 
 ಕೆನ್ನೆ ತುಂಬ ಮುತ್ತು

ಪ್ರೇಮಾಂಕುರ ಅನುರಾಗವಾಗಿ ಪ್ರಣಯವಾಗಿ ಕಾಮನ ಕಾವೇರುತ್ತಿದೆ. ನೋಟ-ಮಾತು-ಮುಟ್ಟುವಿಕೆ ಮುಗಿದು, ಈಗ ಪ್ರೇಮಿಗಳಿಬ್ಬರಿಗೂ ಪ್ರಣಯೋನ್ಮಾದ. ನಾಯಕನ ಅಪ್ಪುಗೆ, ನಾಯಕಿಗೆ ‘ತೋಳಬಂದಿ’. ಆಕೆಯ ಹತ್ತಿರ ಕೊರಳಲ್ಲಿ ಮುತ್ತಿನ ಮಣಿಯಿಲ್ಲದಿದ್ದರೇನಂತೆ? ಆಕೆಯ ಕೆನ್ನೆ ತುಂಬ ಲೆಖ್ಖವಿರದಷ್ಟು ‘ಮುತ್ತು’ಗಳನ್ನು ನಾಯಕ ಕೊಟ್ಟಿದ್ದಾನೆ. ಅಷ್ಟೆ ಅಲ್ಲ, ನಾಯಕ ಇನ್ನೂ ಬಹಳಷ್ಟು ಒಡವೆಗಳನ್ನು ಕೊಟ್ಟಿದ್ದಾನೆ, ಅದು ಅವರಿಬ್ಬರಿಗೆ ಮಾತ್ರ ಗೊತ್ತು, ಅವು ಏನು ಎಂದು ಹೇಳಿದರೆ ಅದರ ಸ್ವಾರಸ್ಯ ಹೋಗುತ್ತದೆ, ಆದ್ದರಿಂದಲೇ ಕವಿ ಹೇಳುತ್ತಾರೆ ‘ನನಗೆ ಅವಗೆ ಗೊತ್ತು’. ಈ ನಾಕು ಸಾಲುಗಳು ಪ್ರೇಮಿಗಳ ಪ್ರಣಯವನ್ನು ಹೇಳುತ್ತವೆ. 

ಈ ನಾಕು ಸಾಲಿನಲ್ಲಿ ಬೇಂದ್ರೆ ಬರೆಯುವ ಶೃಂಗಾರ ರಸ ಅದೆಷ್ಟು ಹೊಸದು! ‘ತೋಳಬಂದಿ‘ ಮತ್ತು ‘ಮುತ್ತು‘ ಶಬ್ದಗಳಿಗೆ ಇರುವ ಎರಡು ಅರ್ಥಗಳನ್ನು ಇಲ್ಲಿ ಎಷ್ಟು ಸುಂದರವಾಗಿ ಕಟ್ಟಿಹಾಕಿದ್ದಾರೆ!  

ಐದನೇ ನುಡಿ:

 ಕುಂದು ಕೊರತೆ ತೋರಲಿಲ್ಲ 
 ಬೇಕು ಹೆಚ್ಚಿಗೇನು? 
 ಹೊಟ್ಟೆಗಿತ್ತ ಜೀವ ಫಲವ 
 ತುಟಿಗೆ ಹಾಲು ಜೇನು 

ಪ್ರಣಯದ ದಾರಿಯಲ್ಲಿ ಈಗ ನಾಯಕ ನಾಯಕಿಯರಿಬ್ಬರಿಗೂ ಮದುವೆಯಾಗಿದೆ. ನೋಟ-ಮಾತು-ಮುಟ್ಟು-ಪ್ರಣಯ-ಕಾಮನಾಟಗಳೆಲ್ಲ ಮಾಗಿವೆ. 

ನಾಯಕ ಬಡವನಾದರೇನು, ನಾಯಕಿಗೆ ಯಾವತ್ತೂ ಕುಂದುಕೊರತೆ ತೋರಿಲ್ಲ (ಆ ಕಾಲದಲ್ಲಿ ಗಂಡ ದುಡಿದು ತರಬೇಕಿತ್ತು). ಅಷ್ಟೇ ಅಲ್ಲ, ಆತ ಕೊಟ್ಟ ‘ಫಲ’, ಬಾಯಿಗಲ್ಲ; ಹೊಟ್ಟೆಗೆ ಮಗು. ಮಗುವಿನ ಫಲಕೊಟ್ಟ ಚಲುವ, ತಿನ್ನಲು ಉಣ್ಣಲು ಕಡಿಮೆ ಮಾಡಿಲ್ಲ ಮತ್ತು ಇನ್ನೂ ಪ್ರೀತಿ ಮೊದಲಿನ ಹಾಗೆಯೇ ಇದೆ ಎನ್ನುವುದನ್ನು  ‘ಹಾಲು-ಜೇನು’ ಎಂದು ಬರೆಯುತ್ತಾರೆ! ‘ಮಗು‘ವಿಗಿಂತ ದೊಡ್ಡ ಆಸ್ತಿ ಇನ್ನಾವುದಿದೆ ಎಂದು ನಾಯಕಿ ಸವಾಲು ಹಾಕುತ್ತಾಳೆ, ಕವಿ ಎಲ್ಲರಿಗೆ ಸವಾಲು ಹಾಕುತ್ತಾರೆ!

ಕೊನೆಯ ನಾಕು ಸಾಲುಗಳು ಮಗುವಾಗುವ, ಸಂಸಾರ ಸಾಗಿಸುವ ಪ್ರೀತಿಯನ್ನು ಹೇಳುತ್ತವೆ. 

ಕೊನೆಯ ಮಾತುಗಳು:

ಸರಳವಾಗಿ ಅರ್ಥವಾಗುವಂಥಹ ಕವನವಾದರೂ ಇದು ಪ್ರೀತಿಯ ಗಾಥೆ. ಪ್ರೇಮಾಂಕುರದಿಂದ ಮಗುವಾಗುವ ಪ್ರೀತಿಯ ಪಯಣದ ಕಥೆ. 

ಒಲವಿನ ಶ್ರೀಮಂತಿಕೆಯ ಮುಂದೆ ಲೌಕಿಕ ಶ್ರೀಮಂತಿಕೆ ಏನೂ ಅಲ್ಲ ಎಂಬುದನ್ನು ತೋರಲು ನಾಯಕಿಯನ್ನು ಬಡವಿ- ನಾಯಕನನ್ನು ಬಡವನನ್ನಾಗಿಸಿದ್ದಾರೆ ಕವಿ. ಒಲವು ಶ್ರೀಮಂತಿಗೆಗಿಂತ ಹೆಚ್ಚು ಶ್ರೀಮಂತ, ಮತ್ತದು ಯಾವಾಗಲೂ ಹೆಚ್ಚಾಗುತ್ತಲೇ ಇರುವ ಶ್ರೀಮಂತಿಕೆ ಎನ್ನುವುದನ್ನು ಕವಿತೆ ಸಾರುತ್ತದೆ. ನೋಟದಲ್ಲಿ ಆರಂಭವಾಗುವ ‘ಪ್ರೇಮ‘ವು ಮಾತಿನಲ್ಲಿ, ಪರಸ್ಪರರನ್ನು ಮೆಚ್ಚಿಸುವ ‘ಅನುರಾಗ‘ದಲ್ಲಿ ಮುಂದುವರಿದು, ಯೌವನದ ಬಿಸಿಯಲ್ಲಿ ದೇಹಗಳು ತಾಗಿ ‘ಪ್ರಣಯ‘ವಾಗುತ್ತದೆ, ಪ್ರಣಯ ‘ಕಾಮ‘ವಾಗುತ್ತದೆ; ಕಾಮದಿಂದ ‘ಮಮತೆ‘ಯ ಮಗು ಹುಟ್ಟುತ್ತದೆ. ಅವನ್ನೆಲ್ಲ ಸೇರಿಸಿದರೆ ‘ಒಲವು‘ ಆಗುವುದು. ‘ಒಲವು‘ ಬೆಳೆಯುವ ನೈಸರ್ಗಿಕ ರೀತಿಯಿದು. ಮೊದಲಿನ ನಾಕು ಸಾಲುಗಳ ಅರ್ಥವಾಗುವುದು, ಉಳಿದ ಹದಿನಾರು ಸಾಲು ಓದಿದ ಮೇಲೆ. ‘ಪ್ರೀತಿ ನಮ್ಮ ಬದುಕು’ ಎನ್ನದೇ ‘ಒಲವೆ ನಮ್ಮ ಬದುಕು’ ಎಂದು ಏಕೆ ಬರೆದಿದ್ದಾರೆ ಎನ್ನುವುದರ ಅರ್ಥವಾದುವುದು. 

ಕನ್ನಡಕ್ಕೆ ಇಂಥಹ ಕವಿ ದೊರಕಿದ್ದು ಕನ್ನಡಿಗರ ಪುಣ್ಯ. ಮೊಗೆದಷ್ಟೂ ಇನ್ನೂ ಅರ್ಥಗಳನ್ನು ಕೊಡುವ ಕವಿ, ಬೇಂದ್ರೆ, ಅಂಬಿಕಾತನಯದತ್ತ. 

– ಕೇಶವ ಕುಲಕರ್ಣಿ. 

***************************************************************

ಅರೇ, ಜನೆವರಿ ೩೧ ರೀ…?!” – ಅಮಿತಾ ರವಿಕಿರಣ್

ಯಾವ ವರ್ಷವೋ ನೆನಪಿಲ್ಲ, ಆದರೆ ಆ ಸಂಧರ್ಭ ಮಾತ್ರ ಸ್ಪಷ್ಟ್ವವಾಗಿ ನೆನೆಪಿದೆ.  ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ ನನಗೆ ಕನ್ನಡ ಪಠ್ಯದಲ್ಲಿ ಬೇಂದ್ರೆಯವರ ”ಮೂಡಲ ಮನೆಯ ಮುತ್ತಿನ ನೀರಿನ” ಎಂಬ ಪದ್ಯವಿತ್ತು.  ಅದರ ಎರಡು ನುಡಿಗಳನ್ನ ಬಾಯಿಪಾಠ ಮಾಡಬೇಕಿತ್ತು; ಅದೆಲ್ಲಕ್ಕಿಂತ ಹೆಚ್ಚು ಕವಿ ಕಾವ್ಯ ಪರಿಚಯ ಅದನ್ನು ಮರೆಯದೇ  ಕಲಿತುಕೊಳ್ಳಲೇಬೇಕು! 

ಕನ್ನಡ ಕಲಿಸುವ ನಮ್ಮ ಅಕ್ಕವರು, ಕವಿ ಪರಿಚಯ ಓದುತ್ತ  “ಬೇಂದ್ರೆ ಅವರು ಹುಟ್ಟಿದ್ದು ೧೮೯೬ ಜನೇವರಿ ೩೧ ರಂದು…”, ಹಾಗೆ ಹೇಳುತ್ತಲೇ ನಾನು “ಅಯ್ಯೋ ಜನೆವರಿ ಮೂವತ್ತೊಂದು ರೀ? ಅರ್ರೆ ೩೧!” ಹಾಗಂತ ಖುಷಿಯಲ್ಲಿ ಕೂಗಿದೆ.  ಅಕ್ಕವರಿಗಾಗಲಿ ಉಳಿದ ಮಕ್ಕಳಿಗಾಗಲಿ ನನಗೇನಾಯಿತು, ನಾನ್ಯಾಕೆ ಅಷ್ಟು ಉದ್ವೇಗ ಖುಷಿಯಲ್ಲಿ ಕೂಗುತ್ತಿದ್ದೇನೆ ಅಂತ ಗೊತ್ತಾಗಲಿಲ್ಲ.  ನಿಂಗೇನ್ ಆತs? ಅನ್ನುವ ಪ್ರಶ್ನಾರ್ಥಕ ದೃಷ್ಟಿಯಲ್ಲಿ ಅಕ್ಕವರು ತಮ್ಮ ಮೂಗಿನ ತುದಿಗೆ ಇಳಿದಿದ್ದ ಕನ್ನಡಕದಿಂದ ಮತ್ತೊಂದಿಷ್ಟು ಬಗ್ಗಿ ನೋಡಿದಾಗಲೇ ನನ್ನ ಉತ್ಸಾಹ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದ್ದು. ”ಏನಿಲ್ಲ ರೀ, ನಾನೂ ಬೇಂದ್ರೆಯವರು ಹುಟ್ಟಿದ ದಿನ ನ ಹುಟ್ಟೇನಿ ರೀ, ಇಸ್ವಿ ಮಾತ್ರ ಬ್ಯಾರೆ” ಲಜ್ಜೆ ಮಿಶ್ರಿತ ಖುಷಿಯಲ್ಲಿ ಹೇಳಿದೆ.  ಮುಖಭಾವ so what? ಅನ್ನೋ ಹಾಗೆ ಇತ್ತಾದರೂ ”ಒಹ್ ಹೌದೇನು ಛಲೋ ಆತಲ” ಅಂದು ಅವರು ಪಾಠ ಮುಂದುವರಿಸಿದರು.  ಆ ದಿನದಿಂದ ನನಗೆ ”ಅಂಬಿಕಾತನಯದತ್ತ”, ”ಬೇಂದ್ರೆ”, ”ವರಕವಿ” ಹೀಗೆ ಅದೆಲ್ಲಿ ಕೇಳಿದರು ಅದೊಂದು ರೀತಿಯ ಪ್ರೀತಿ ಆರಾಧನೆ ಖುಷಿ ಹೆಮ್ಮೆ ಮಿಳಿತವಾದ ಭಾವ ಹೊಮ್ಮುತ್ತಿತ್ತು. 

ಗಾಂಧೀ ಅಜ್ಜನ ನಂತರ ಅತಿ ಹೆಚ್ಚು ಅಜ್ಜ ಅಂತ ಪ್ರೀತಿಯಿಂದ ಕರೆಸಿಕೊಂಡಿದ್ದು ಈ ಬೇಂದ್ರೆ ಅಜ್ಜನೊಬ್ಬನೇ ಅನಿಸುತ್ತೆ.  ಅಂಥ ಮೇರು ವ್ಯಕ್ತಿತ್ವ ಹುಟ್ಟಿದ ದಿದ ನಾನು ಹುಟ್ಟಿದ್ದು ಎಂಬ ಆಲೋಚನೆ ಬರುತ್ತಲೇ ನಾನು ಅದ್ಯಾವುದೋ ಗುಂಗು, ಲಹರಿಯಲ್ಲಿ ವಿಹರಿಸುತ್ತಿದ್ದೆ. ಆಗ ನಮ್ಮ ಮನೆಯಲ್ಲಿ ಒಂದು ಪುಟ್ಟ ಟೇಪ್ ರೆಕಾರ್ಡರ್-ರೇಡಿಯೋ ಇತ್ತು  ಧಾರವಾಡ್ ಆಕಾಶವಾಣಿಯಿಂದ ದಿನಕ್ಕೆ ೩ ಬಾರಿ ಭಾವಗೀತೆಗಳು ಪ್ರಸಾರ ವಾಗುತ್ತಿದ್ದವು , ಯಶವಂತ ಹಳಬಂಡಿ ಮತ್ತು ಸಂಗೀತಾ ಕಟ್ಟಿಯವರ ಕಾರ್ಯಕ್ರಮ ಇದ್ದರೆ ಅವರು ಖಂಡಿತ ಒಂದಾದರು ಬೇಂದ್ರೆಯವರ ಹಾಡು ಹೇಳೇ ಹೇಳಿರುತ್ತಿದ್ದರು. 

 ಮಳಿ ಬರುವ ಕಾಲಕ್ಕ ಒಳಗ್ಯಾಕ ಕುಂತೇವು,
 ಇಳಿಯೊಡನೆ ಝಳಕ ಮಾಡೋಣು
 ನಾವುನೂ ಮೋಡಗಳ ಆಟ ನೋಡೋಣ 
  
 ಪಾತರಗಿತ್ತಿ ಪಕ್ಕ 
 ನೋಡಿದೆನಾ ಅಕ್ಕ, 
  
 ಯಾರಿಗೂ ಹೇಳೋಣು ಬ್ಯಾಡ 
 ಹಾರಗುದುರಿ ಬೆನ್ನ ಏರಿ 
 ಸ್ವಾರರಾಗಿ ಕೂತು ಹಂಗ 
 ದೂರ ದೂರ ಹೋಗುನಂತಾ  

ಹೀಗೆ ಅವಕಾಶ ಸಿಕ್ಕಾಗಲೆಲ್ಲ ಬೇಂದ್ರೆಯವರ ಕೆಲವು ಹಾಡುಗಳನ್ನ ನಾನು ಕಲಿತೆ.  ಆದರೆ ಹಾಡು ಕೇಳುತ್ತ  ಬರೆದುಕೊಂಡ ಸಾಹಿತ್ಯವಾದ್ದರಿಂದ ಅವುಗಳಲ್ಲಿ ತುಂಬಾ ತಪ್ಪುಗಳಿರುತ್ತಿದ್ದವು, ತಪ್ಪು ಎಂದು ತಿಳಿದಿದ್ದು ಮೊದಲ ಬಾರಿ ಆಕಾಶವಾಣಿಯಲ್ಲಿ ಹಾಡಲು ಹೋದಾಗ.  ಆಗ ಜಿ ಕೆ ರವೀಂದ್ರಕುಮಾರ ಅವ್ರು ಕಾರವಾರ ಆಕಾಶವಾಣಿಯ ನಿರ್ದೇಶಕರಾಗಿದ್ದರು.  ನಾನು ಹತ್ತನೇ ತರಗತಿಯಲ್ಲಿದ್ದೆ ”ಪುಟ್ಟಾ ಎಷ್ಟ್ ಚಂದ ಹಾಡ್ತೀಯಾ, ಆದರೆ ಸಾಹಿತ್ಯ ಸರಿ ಇಲ್ಲದಿದ್ದರೆ ಅದು ಕೇಳುಗರಿಗೆ ಕಿರಿಕಿರಿ.  ನೀನು ಇನ್ನು ಕವನ ಸಂಕಲನಗಳನ್ನ ಓದಿ ಅಲ್ಲಿಂದಲೇ ಸಾಹಿತ್ಯ ಬರೆದುಕೋ.  ಮತ್ತೆ ಹಾಡುವುದಕ್ಕಿಂತ ಮೊದಲು ಹತ್ತು ಸರ್ತಿ ಆದರೂ ಓದು” ಅಂದರು.  ಈ ಘಟನೆಯನಂತರ ನನಗೆ ನನ್ನ ಪಪ್ಪಾ ತಂದುಕೊಟ್ಟ ಮೊದಲ ಕವನ ಸಂಕಲನ ”ಸಖೀಗೀತ” ಜೊತೆಗೆ ಕನ್ನಡದ ಹಲವು ಪ್ರಸಿದ್ಧ ಕವಿಗಳ ಕವನ ಸಂಕಲನಗಳು ನನ್ನ ಮನೆಗೆ ಬಂದವು.  ನನ್ನ  ಹಳೆಮನೆಯ ರೆಡ್ಆಕ್ಸಾಯ್ಡ್ ನೆಲದಮೇಲೆ ಕುಳಿತು..

 ಬಾ ಭೃಂಗವೇ ಬಾ, ವಿರಾಗಿಯಂದದಿ 
 ಭ್ರಮಿಸುವಿ ನೀನೇಕೆ ?
 ಕಂಪಿನ ಕರೆಯಿದು  ಸರಾಗವಾಗಿರೆ ,
 ಬೇರೆಯ ಕರೆ ಬೇಕೇ ?
  
 ಬರಲಿಹ ಕಾಯಿಯ ಪಾಡಿನ ರುಚಿಯು 
 ಇದರೊಳು ಮಡಗಿಹುದು 
 ನಾಳಿನ ಹಣ್ಣಿನ ರಸವಿಲ್ಲಿಯ ಮಕ-
 ರಂದದೊಳಡಗಿಹುದು  

ಮನದಲ್ಲಿ ಓದುತ್ತಿದ್ದಾಗ ಸಂಜೆಗೆ ಹಚ್ಚಿದ ಊದುಬತ್ತಿಯ ಘಮ, ಅಬ್ಬಲಿಹೂವಿನ ಮಾಲೆ ಕಟ್ಟುತ್ತ ಕುಳಿತಿದ್ದ ನನ್ನ ಅಮ್ಮನ ಚಿತ್ರ ಮನಸಲ್ಲಿ, ಮಾಸದೆ ಉಳಿದಿದೆ.

ನೀವು ಹುಬ್ಬಳ್ಳಿ ಮೂಲಕ ಧಾರವಾಡಕ್ಕ ಹೋಗುತ್ತಿರುವಾಗ ಸತ್ತೂರ ಡೆಂಟಲ್ ಕಾಲೇಜ್ ದಾಟಿದ ತಕ್ಷಣ ಒಂದು ಮುಸುಕು ಮುಸುಕಾದ , ಕೆಂಪುಮಣ್ಣಿನ ಧೂಳಿಯಲ್ಲಿ ಮಿಂದೆದ್ದ ಒಂದು ದೊಡ್ಡ ಫಲಕ ಕಾಣುತ್ತಿತ್ತು.  ‘ಸ್ವಾಗತ ನಿಮಗೆ ಧಾರಾನಗರಿಗೆ’ ಎಂದು ಶುರುವಾಗುವ ಆ ಬೋರ್ಡಿನಲ್ಲಿ … ‘ಬೇಂದ್ರೆ ನಡೆದಾಡಿದ ಊರಿಗೆ’ ಅಂತೇನೋ ಸಾಲು ಬರುತ್ತದೆ.  ಮೊದಲ ಬಾರಿ ಧಾರವಾಡದ ಕೋರ್ಟ್ ಸ್ಟಾಪ್ನಲ್ಲಿ ಇಳಿದಾಗ ನನಗೆ ನಾನು ಬೇಂದ್ರೆಯವರ ಊರಿಗೆ ಬಂದೆನೆಂಬ ಖುಶಿಯ ಹೊರತಾಗಿ ಮತ್ತಾವ ಭಾವವೂ ಇರಲಿಲ್ಲ. 

೨೦೦೪ ಪದವಿಯ ಕೊನೆ ವರ್ಷ, ನನ್ನ ಬೇಂದ್ರೆ ಪ್ರೀತಿ ನೋಡಿ ನೋಡಿ ಅವರಿಗೂ ಸಾಕಾಗಿತ್ತೋ ಏನೋ ನನ್ನ ಆತ್ಮೀಯ ಸ್ನೇಹಿತರಾದ್ ಶಿಲ್ಪಾ, ತ್ರಿಲೋಚನ್ ಇಬ್ಬರೂ ಸೇರಿ ನನ್ನನ್ನು ಸಾಧನಕೇರಿಯಲ್ಲಿರುವ ಬೇಂದ್ರೆ ಅಜ್ಜ ನ ಮನೆಗೆ ಕರೆದೊಯ್ದರು. 

ಅಲ್ಲಿ ಹೋಗುವ ತನಕ ಸರಿಯಿದ್ದ ನನಗೆ ಅದ್ಯಾಕೋ ಕಣ್ಣು ತುಂಬಿಕೊಂಡು ಅಳು ಶುರು ಆಯ್ತು.  ಅಲ್ಲೇ ಅವರ ಮನೆಯ ಇರುವ ಮರದ ತಂಪಿಗೆ ಕುಳಿತುಕೊಂಡು ಮಾತು ಆಡದೆ ಕುಳಿತಿದ್ದೆ.  ಆಗ ತ್ರಿಲೋಚನ್ ಒಂದು ಹೂ ಗುಚ್ಛ ಕೊಟ್ಟು ಅದರೊಂದಿಗೆ ಖಾಕಿ ಬಣ್ಣದ ಕವರ್ ಒಂದನ್ನ ಕೊಟ್ಟು ನೋಡು ಅಂದ , ತೆರೆದು ನೋಡಿದರೆ ಅದು ತ್ರಿಲೋಚನ್ ಕಂಪ್ಲಿ ಅವರ ತಂದೆ, ಕನ್ನಡ ನಾಡಿನ ಹೆಸರಾಂತ ಚಿತ್ರಕಾರ – ಛಾಯಾಚಿತ್ರಗ್ರಾಹಕ ಕೆ ಜಿ ಸೋಮಶೇಖರ್ ಅವರು ಸೆರೆಹಿಡಿದ, ಅವರ ಸಹಿಯುಳ್ಳ ಬೇಂದ್ರೆಯವರ ಕಪ್ಪು ಬಿಳುಪಿನ ಚಿತ್ರ.  ನಗುಮುಖದ ನನ್ನ ಬೇಂದ್ರೆ ಅಜ್ಜ ನನ್ನ ಕೈಯ್ಯಲ್ಲಿ.  ಅದಕ್ಕಿಂತ ಒಳ್ಳೆಯ ಉಡುಗೊರೆ ಏನಿದ್ದಿತು?

 ಭಾಷೆಗೆ ನಿಲುಕದ ಮಾತುಂಟು 
 ಮಾತಿಗೆ ನಿಲುಕದ ಭಾವವುಂಟು 
 ಭಾವಕ್ಕೂ ನಿಲುಕದ ಇನ್ನೇನೋ ಈ ಜಗದಲ್ಲುಂಟು 

”ಇನ್ನೇನೋ ” ಅನ್ನುವ ಆ ಅನುಭೂತಿಯ ಅನುಭವ ನನಗೆ!  ವಿವರಿಸುವ ವ್ಯರ್ಥ ಪ್ರಯತ್ನ ಮಾಡಲಾರೆ.  ಬೇಂದ್ರೆ ಅಜ್ಜನ ಭಾವ ಚಿತ್ರ ಮತ್ತು ನನಗೆ ಮೊತ್ತ ಮೊದಲ ಬಾರಿಗೆ ಸಿಕ್ಕ ಆ ಹೂ ಗುಚ್ಛ, ಎರಡೂ ನನ್ನ ಹಾರ್ಮೋನಿಯಂ ಪೆಟ್ಟಿಗೆಯಲ್ಲಿ ಬೆಚ್ಚಗಿವೆ. 

– ಅಮಿತಾ ರವಿಕಿರಣ್

***************************************************************

ಬೇಂದ್ರೆ ಅಜ್ಜನಿಗೊಂದು ಗಾನ-ನಮನ – ಅಮಿತಾ ರವಿಕಿರಣ್ ಮತ್ತು ಸುಮನಾ ಧ್ರುವ

ಪ್ರಿಯ ಓದುಗರೇ, ಮೇಲಿನ ಮೂರೂ ಬರಹಗಳನ್ನು ಓದಿ ಕಣ್ಣು-ಮನಸಿಗಾದ ಆನಂದವನ್ನು ಸಂಪೂರ್ಣವಾಗಿಸಲು ಕಿವಿಗೊಂದಷ್ಟು ಬೇಂದ್ರೆ ಗಾನಾಮೃತ ಬೇಕೇ? “ಅದಿಲ್ಲಂದ್ರ ಹ್ಯಾಂಗರೀ?” ಅಂತೀರಾ? ಬರ್ರಿ, ಹಂಗಾದರ ನಮ್ಮ ಅನಿವಾಸಿ ಸಂಗೀತಗಾರ್ತಿಯರಾದ ಅಮಿತಾ ರವಿಕಿರಣ್ ಮತ್ತು ಸುಮನಾ ಧ್ರುವ ಅವರ ಮಧುರ ಧ್ವನಿಗಳಲ್ಲಿ “ಬೇಂದ್ರೆ ಸಂಗೀತ” ಲೋಕದ ಓಪನ್ ಟಾಪ್ ಬಸ್ ಟೂರ್ ಮಾಡೋಣ; ಬೇಂದ್ರೆಯವರ ಕವಿತಾ ಭಂಡಾರದ ಒಂದಷ್ಟು ಶಾಂಪಲ್ಲು ನೊಡೋಣ! – ಸಂಪಾದಕ.

ಬೇಂದ್ರೆ ನಮನ – ಗಾಯನ. ಸುಮನಾ ಧ್ರುವ ಮತ್ತು ಅಮಿತಾ ರವಿಕಿರಣ್ (https://youtu.be/9SB9qGGqrb4)

*********************************************************************************************************

13 thoughts on “ಬೇಂದ್ರೆ – ೧೨೫

 1. ಬೇಂದ್ರೆ ನಮನ ಲೇಖನಗಳೆಲ್ಲಾ ಭಾಳ ಛಂದ ಬಂದಾವು,
  ಗೌರಿಯವರ ಸಂಪೂರ್ಣ ವ್ಯಕ್ತಿ ಪರಿಚಯ​, ಕೇಶವ ಹಾಡನ್ನ ಬಿಚ್ಚಿಟ್ಟ ರೀತಿ, ಅಮಿತಾ ಹಂಚಗೋಂಡ ಬಾಲ್ಯದ ಬುತ್ತಿ ಮತ್ತ ಕಡೀಕ ಝೂ಼ಮ್ ಸಂಗೀತ ಭಾಳ ಛೋಲೋ ಅನ್ನಿಸ್ತು… ಇಂಥಾದ್ದೆ ಇನ್ನು ಪ್ರಯತ್ನಗೋಳು ಬರ್ತಿರ್ಲಿ….

  Liked by 1 person

 2. ಅನಿವಾಸಿ ಲೇಖಕರ ತಂಡ ಕನ್ನಡದ ವರ ಕವಿ ಬೇಂದ್ರೆ ಅವರ ೧೨೫ನೆಯ ಜನ್ಮ ದಿನದಂದು ಬಹಳ ಸೊಗಸಾದ ಲೇಖನಗಳು ಮತ್ತು ಅವರ ಕವನಗಳ ಮೆಡ್ಲಿಯನ್ನು ನಮ್ಮ ಮುಂದಿಟ್ಟಿದ್ದಾರೆ. ಗೌರಿ ಪ್ರಸನ್ನ ಅವರು ತಮ್ಮ ಪ್ರಬುದ್ಧ ಲೇಖನದಲ್ಲಿ ಬೇಂದ್ರೆ ಅವರ ಜೀವನಗಾಥೆಯನ್ನು ಓದುಗರ ಮುಂದಿಟ್ಟಿದ್ದಾರೆ, ಕೇಶವ್ ಅವರು ಬೇಂದ್ರೆ ಅವರ ಜನಪ್ರಿಯ ಕವನ ನಾನು ಬಡವಿಯನ್ನು ಬಹಳ ಚೆನ್ನಾಗಿ ವಿಶ್ಲೇಷಿಸಿದ್ದಾರೆ. ಕವನ ಸರಳವಾಗಿದ್ದರೂ, ಅದರ ಹಿಂದಿರುವ ಅರ್ಥವನ್ನು ತಮ್ಮದೇ ಆದ ಮಾತುಗಳಲ್ಲಿ ಪೋಣಿಸಿ ಅದನ್ನು ಸುಂದರವಾದ ಮಾಲೆಯಾಗಿ ಸೃಷ್ಟಿಸಿದ್ದಾರೆ. ಭಲೇ ಕೇಶವ ಅವರೇ. ನಾನು ಈ ಕವನವನ್ನು ನನ್ನ ಕಾಲೇಜಿನ ದಿನಗಳಲ್ಲಿ ಓದಿದ್ದೆನಾದರೂ, ಅದರ ಅರ್ಥವನ್ನು ಇಷ್ಟೊಂದು ಚೆನ್ನಾಗಿ ಯಾರು ನನಗೆ ವಿಶ್ಲೇಷಿಸಿ ಹೇಳಿರಲಿಲ್ಲ. ಧನ್ಯವಾದಗಳು. ಅನಿವಾಸಿಯ ಮಧುರ ಕಂಠದ ಗಾಯಕಿ ಅಮಿತ ಅವರು, ಸುಮನಾ ದ್ರುವ ಅವರೊಡನೆ ಬೇಂದ್ರೆ ಅವರ ಸುಂದರ ಕವನಗಳನ್ನು ತಮ್ಮ ಇಂಪಾದ ದನಿಯಲ್ಲಿ ಹಾಡಿ, ನನ್ನ ನೆನಪುಗಳನ್ನು ತಾಜಾಗೊಳಿಸಿದರು. ಬೇಂದ್ರೆ ಅವರ ಪ್ರತಿಯೊಂದು ಕವನದ ಸಾಲುಗಳಲ್ಲೂ ಇರುವ ಸೌಂಧರ್ಯ ಚಿರಕಾಲ ಉಳಿಯುವಂಥದ್ದು. ಗೌರಿ ಅವರು ಬರೆದಿರುವಂತೆ, ಬೇಂದ್ರೆ ಸಂಸ್ಕೃತ, ಹಳ್ಳಿಭಾಷೆ , ಅಚ್ಚಗನ್ನಡಗಳಲ್ಲಿ ಬರೆದ ಪದ್ಯಗಳು ಮೆಲಕುಹಾಕುವಂತಿದೆ. ನನ್ನ ಮನದಲ್ಲಿ ಸದಾ ಗುನುಗುವ ಕವನಗಳೆಂದರೆ, ಮೂಡಣ ಮನೆಯ ಮುತ್ತಿನ ನೀರಿನ, ಉತ್ತರ ದ್ರುವದಿಂ ದಕ್ಷಿಣ ದ್ರುವಕೂ, ಇಳಿದು ಬಾ ತಾಯೆ ಇಳಿದು ಬಾ, ಮಳೆ ಬರುವ ಕಾಲಕ್ಕ ಒಳಗ್ಯಾಕ ಕುಳಿತೇವೋ , ಶ್ರಾವಣ ಬಂತು, ಕುಣಿಯೋಣು ಬಾರ , ಕರಡಿ ಕುಣಿತ, ಪದ್ಯಗಳು. ಚಲನಚಿತ್ರಗಳಲ್ಲಿ ಮತ್ತು ಲಘು-ಸಂಗೀತ ಮಾಧ್ಯಮದಲ್ಲಿ ಮನೆಮನೆಗಳನ್ನು ತಲುಪಿರುವ ಈ ಕವನಗಳು, ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಯುತ್ತಲೇ ಇರುತ್ತವೆ. ಕನ್ನಡ ಸಾಹಿತ್ಯ ಮತ್ತೊಬ್ಬ ವರಕವಿಯನ್ನು ಸೃಷ್ಟಿಸುವ ಮಾತು ಬಹುಶಃ ಕಷ್ಟಸಾಧ್ಯ! ಗುಡೂರ್ ಅವರ ರೇಖಾಚಿತ್ರ, ಮತ್ತೊಮ್ಮೆ ಈ ಲೇಖನಮಾಲೆಗಳ ಕಳಸಕ್ಕೆ ಚಿನ್ನದ ಮೆರಗು ನೀಡಿದೆ.
  ಉಮಾ

  Liked by 2 people

 3. ಅನಿವಾಸಿ ಯ ಈ ವಿಶೇಷ ಸಂಚಿಕೆ ನಿಜಕ್ಕೂ ಮುಕುಟ ಪ್ರಾಯ ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುವ ಸಂಗ್ರಹ ಯೋಗ್ಯ ಸಂಚಿಕೆ. ಬೇಂದ್ರೆ ಅಜ್ಜನ ೧೨೫ನೇ ಜನ್ಮದಿನದ ಈ ಸಂಚಿಕೆ ರಸದ ಘಟ್ಟಿ! ಗುಡೂರ ಅವರ ರೇಖಾಚಿತ್ರ ದಿಂದ ಹಿಡಿದು ಗೌರಿ ಕೇಶವ ಕುಲಕರ್ಣಿಯವರ ವಿಶ್ಲೇಷಣಾತ್ಮಕ ಬರಹಗಳು-ಅಮಿತಾ ಅವರ ಭಾವನಾತ್ಮಕ ಬರಹ, ಅವರ ಮತ್ತು ಸುಮನಾ ಅವರ ಗಾನ ಲಹರಿ- ಒಂದಕ್ಕಿಂತ ಒಂದು ಸುಂದರ , ವಿಶಿಷ್ಟ ರೀತಿಯ ಭಾವಲಹರಿಯ ಝರಿ ಹರಿಸುವಂಥವು.
  ‘ ಬಾರೋ ಬಾರೋ ಸಾಧನಕೇರಿಗೆ’ ಅಂತ ಬರೆಯುವುದರಿಂದಲೇ ತಮ್ಮ ಶಬ್ದ ಮಾಂತ್ರಿಕತೆಯನ್ನು ಶುರು ಮಾಡಿದ ಹಾಗೆ. ಸಾಧನೆಯ ಕೇರಿ, ತಾವು ಅದು ಅಂತ ಹೇಳ್ತಿದಾರೇನೋ ಅನ್ನುವ ಹಾಗೆ.ಇದನ್ನು ತುಂಬ ಆಳವಾಗಿ ಅಭ್ಯಸಿಸಿ, ವಿಶ್ಲೇಷಿಸಿ,ಅವಲೋಕಿಸಿ ಬರೆದ ಗೌರಿಯವರ ಲೇಖನ ದ ಒಂದೊಂದು ಅಕ್ಷರವೂ ಮನದಲ್ಲಿ ಅಚ್ಚೊತ್ತಿ ಅವರ ಅಧ್ಯಯನದ ಆಳಿದ ಬಗ್ಗೆ ಅಚ್ಚರಿ ಮೂಡಿಸಿದೆ ನಂಗೆ. ನಿಜ ಉಪ್ಪು ನೀರ ಕಡಲಲ್ಲ, ನಮ್ಮೊಡಲೇ ಇದರ ನೆಲೆಯು ಅಂತ ಎಷ್ಟು ಸುಂದರ ಅರ್ಥಪೂರ್ಣ ವಾಗಿ ಬೇಂದ್ರೆಯವರು ಹೇಳಿ ನಮ್ಮೊಡಲು ಜ್ಞಾನಸಾಗರ , ಅದನ್ನು ಕಂಡುಕೋ ಅಂತ ಹೇಳಿದ್ದನ್ನು ಗೌರಿಯವರು ಎತ್ತಿ ಹೇಳಿ , ರೇಡಿಯೋ ಗಿರ್ಮಿಟ್ ನಲ್ಲಿ ಮೂಡಿ ಬಂದ ಅವರು ನಿರೂಪಿಸಿದ ಕಾರ್ಯಕ್ರಮವನ್ನು ನೆನೆವಂತೆ ಮಾಡಿತು.
  ‘ ನಾನು ಬಡವಿ ಆತ ಬಡವ’ ಕವನದ ವಿವರಣೆ ಕೇಶವ ಕುಲಕರ್ಣಿಯವರ ಲೇಖನಿಯಿಂದ ಮೂಡಿಬಂದ ವಿಶಿಷ್ಟ ಬರಹ.ಆ ಕವನವನ್ನು ಎಷ್ಟು ರೀತಿ ಅರ್ಥೈಸಬಹುದು ಅಂತ ಹೇಳುತ್ತ ಒಲವು ಪ್ರೀತಿ ಪ್ರೇಮದ ಮಧ್ಯದ ನವಿರು ಆದರೆ ಸುಂದರ ಅಂತರವನ್ನು ಹೇಳಿರುವುದು ತುಂಬಾ ವಿಶೇಷ ಅನಿಸ್ತು.ಒಲವಿನ ಪ್ರಭಾವ ತುಂಬ ಗಾಢ ಎಂಬುದನ್ನು ಮರೆಯುವಂತಿಲ್ಲ.
  ಅಮಿತಾ ಅವರು ಅಜ್ಜನ ಜನ್ಮದಿನ ದಂದೇ ಹುಟ್ಟಿರೋದ್ರಿಂದಲೇ ಬೇಂದ್ರೆ ಅಜ್ಜ ಅವರನ್ನು ಮನೆತುಂಬಿ ಹರಿಸಿದ್ದಾರೆ .ಕವನ ರಚನೆ ಗಾಯನ ಎರಡರಲ್ಲೂ ಪ್ರಾವಿಣ್ಯತೆ!ಅವರ ಬರಹ ಧಾರವಾಡ ಬಿಟ್ಟು ಬಂದ ನನ್ನ ಮನದಲ್ಲಿ ಭಾವನೆಗಳ ಪೂರವನ್ನೇ ಹರಿಸಿ ಕಣ್ಣಂಚು ಒದ್ದೆಯಾಗಿತ್ತು ಧಾರವಾಡಕ್ಕೆ ಹಾರಿ.
  ಅಮಿತಾ ಮತ್ತು ಸುಮನಾ ಅವರ ಗಾಯನ ಅದ್ಭುತ!
  ಇವಕ್ಕೆಲ್ಲ ಕಿರೀಟ ಗುಡೂರ ಅವರ ರೇಖಾಚಿತ್ರ ಅಂದರೆ ಎಳ್ಳಷ್ಟೂ ತಪ್ಪಿಲ್ಲ.ಜೊತೆಗೆ ಸುಂದರ ಹೆಣಿಗೆಯ ಕುಸುರಿ ಕೆಲಸದ ಅಪರೂಪದ ಸಂಚಿಕೆಯ ನೇಯ್ಗೆ!
  ಗುಡೂರ, ಗೌರಿ, ಕೇಶವ ಕುಲಕರ್ಣಿ, ಅಮಿತಾ,ಸುಮನಾ‌ ಎಲ್ಲರಿಗೂ ಅಭಿನಂದನೆಗಳು, ಧನ್ಯವಾದಗಳು.ಇಂಥ ಅಪರೂಪದ ಸಂಚಿಕೆಗಳ ರಸಗವಳ ಉಣಬಡಿಸುತ್ತಿರುವ ಅನಿವಾಸಿ ಬಳಗಕ್ಕೆ ಧನ್ಯವಾದಗಳು, ವಂದನೆಗಳು.
  ಸರೋಜಿನಿ ಪಡಸಲಗಿ

  Liked by 1 person

 4. ಇಂದಿನ ವಿಶೇಷ ಲೇಖನ, ಬೇಂದ್ರೆ ಅಜ್ಜನಿಗೆ ಸಲ್ಲಿಸಿರು ನುಡಿ ಗಾನ ನಮನವನ್ನೋದಿ ಧನ್ಯತಾ ಭಾವ ತುಂಬಿ ಬಂತು. ಕನ್ನಡ ಓದಲು ಬರೆಯಲು ಕಲಿತ್ತಂದಿ ನಿಂದಲೂ ಕವಿಯಂದೊಡನೆ ತಟ್ಟನೆ ಕಣ್ಣಮುಂದೆ ಬರುತ್ತಿದ್ದದು ಬೇಂದ್ರೆ ಅಜ್ಜನ ಭಾವಚಿತ್ರ ಹಾಗೂ ಅವರ ಕವನಗಳು. ಅದರಲ್ಲೂ ಮೂಡಲ ಮನೆಯ ಕವನ ನನ್ನ ಮೊದಲ ಹಾಗೂ ಅಚ್ಚು ಮೆಚ್ಚಿನ ಕವನ. ಎಂದೂ ಕಾಣದ ಅಜ್ಜನ, ಅವರ ಸಾಹಿತ್ಯದ ಆಳವನ್ನರಿಯದ ನನ್ನಂತಹವರಿಗೆ ಕೆಲವೇ ಕವನಗಳ ಮೂಲಕ ಅವರ ಬಗ್ಗೆ ತಿಳಿದಿದ್ದರೂ ಇಂದಿಗೂ ಬೇಂದ್ರೆ ಎಂದೊಡನೆ ಚಿಕ್ಕ ವಯಸ್ಸಿನಿಂದಲೂ ಅವರನ್ನು ಬಲ್ಲೇವೆಂಬ ಆತ್ಮೀಯ ಭಾವ. ಇನ್ನು ಅವರನ್ನು ಅರಾಧಿಸಿ ಅವರ ಎಲ್ಲ ಕವನ ಸಂಕಲನ ಗಳನೆಲ್ಲ ಓದಿ ಅರ್ಥ ಮಾಡಿಕೊಂಡವರು ಪಾಲಿಗೆ ಅವರು ದೈವವೇ ಆಗಿರುತ್ತಾರೆ ಅನ್ನುವುದಕ್ಕೆ ಇಂದಿನ ಲೇಖನವೇ ಸಾಕ್ಷಿ. ಇಂತಹ ಕವಿರತ್ನ ನ ಗಹನವಾದ ಸಾಹಿತ್ಯದ ಕಿರು ಪರಿಚಯ ಮಾಡಿಕೊಟ್ಟ ಎಲ್ಲಾ ಲೇಖಕರಿಗೂ, ಗಾಯಕ ರಿಗೂ, ಸಂಪಾದಕ ರಿಗೂ ತುಂಬು ಹೃದಯದ ಧನ್ಯವಾದಗಳು. ಈಗಾಗಲೇ ಹಲವು ಬಾರಿ ಓದಿದರು ಮತ್ತೆ ಮತ್ತೆ ಒದಬೇಕೇನಿಸುವ ಹಾಗೂ ಮತ್ತಷ್ಟು ತಿಳಿದುಕೊಳ್ಳಬೇಕು ಎನ್ನುವ ಹಂಬಲವನ್ನು ಹೆಚ್ಚಿಸುವ ಪ್ರಬುದ್ಧ ಬರಹ.

  Liked by 1 person

 5. ಬೇಂದ್ರೆ ಅಜ್ಜನಿಗೆ ವಿದ್ವತ್ಪೂರ್ಣ ನುಡಿ ಗಾನ ನಮನ. ಅವರ ಕವಿತೆಗಳನ್ನು ವ್ಯಾಖ್ಯಾನದ ಮೂಲಕ ಪರಿಚಯಿಸಿದ್ದು ಅನುಕೂಲವಾಗಿದೆ. ಕೆಲವೊಮ್ಮೆ ಮೇಲುನೋಟಕ್ಕೆ ಸರಳವೆನಿಸಿದರೂ ಕೆಲವು ಕವನಕ್ಕೆ ವಿಶ್ಲೇಷಣೆ ಅಗತ್ಯ. ಈ ದೆಸೆಯಲ್ಲಿ ಗೌರಿ ಮತ್ತು ಕೇಶವ್ ಅವರ ಪ್ರಯತ್ನ ಶ್ಲಾಘನೀಯ. ಗಾನ ನಮನ ಸುಮಾಧುರವಾಗಿದೆ ಕವನಗಳ ಆಯ್ಕೆ ಉತ್ತಮವಾಗಿದೆ.
  ಈ ವಿಶೇಷ ಆವೃತ್ತಿಯನ್ನು ಸಕಾಲದಲ್ಲಿ ಹೊರ ತಂದ ಸಂಪಾದಕರಿಗೆ ಧನ್ಯವಾದಗಳು.
  ಈ ಪ್ರಯತ್ನದಲ್ಲಿ ಒಂದು ಈ ಜುಗುಲಿಯನ್ನು ಮಾಡುವಷ್ಟು ಸರಕುಗಳಿದ್ದು ಅದನ್ನೂ ಮಾಡಬಹುದಿತ್ತು. ಅಡ್ಡಿಯಿಲ್ಲ ಮುಂದೊಮ್ಮೆ ಇದೆ ತಂಡ ಆ ಪ್ರಯತ್ನವನ್ನು ಮಾಡುವರೆಂದು ಆಶಿಸುತ್ತೇನೆ.

  Liked by 2 people

 6. ಗುಡೂರ್ ಅವರು ‘ಅನಿವಾಸಿ‘ಯನ್ನು ಇನ್ನೊಂದು ಮಟ್ಟಕ್ಕೆ ಏರಿಸಿದ್ದಾರೆ. ಇಲ್ಲಿಯವರೆಗೆ ‘ಅನಿವಾಸಿ‘ಯನ್ನು ನಡಿಸಿಕೊಂಡು ಬಂದವರಲ್ಲಿ ಒಂದರಿಂದ ಹತ್ತರವರೆಗಿನ ಸ್ಥಾನ ನಿಮಗೇ ಮೀಸಲು! ಜೊತೆಗೆ ನಿಮ್ಮ ರೇಖಾಚಿತ್ರ ಇಡೀ ಲೇಖನ ಮಾಲೆಗೆ ಮೆರುಗನ್ನು ತಂದಿದೆ.

  ನನ್ನಿಂದ ಲೇಖನವನ್ನು ಬರೆಸಿದ ನಿಮಗೆ ಧನ್ಯವಾದಗಳು. ಲೇಖನವನ್ನು ಬರೆಯುತ್ತ ನಾನು ‘ನಾನು ಬಡವಿ‘ ಕವನವನ್ನು ಇನ್ನಷ್ಟು ನನ್ನದಾಗಿಸಿಕೊಂಡೆ.

  ಗೌರಿಯವರ ಲೇಖನವಂತೂ ಬೇಂದ್ರೆಯವರ ಮೇಲೆ ಬರೆದ ವಿದ್ವತ್ಪೂರ್ಣ ಲೇಖನ. ಗೌರಿಯವರ ಓದಿನ ಆಳ ಅಗಲ ಮತ್ತು ಬೇಂದ್ರೆ ಕವನಗಳನ್ನು ಅವರು ಓದಿಕೊಂಡಿರುವ ಪರಿಭಾವ ಓದುಗನಿಗೆ ಬೇಂದ್ರಯವರ ಬಗ್ಗೆ ಪಕ್ಷಿನೋಟದ ಪರಿಚಯವನ್ನು ಮಾಡಿಕೊಡುತ್ತದೆ.

  ಅಮಿತಾ ಅವರು ಬೇಂದ್ರೆಯವರ ಜೊತೆ ಭಾವುಕವಾಗಿ ಆತ್ಮೀಯರು, ಜನ್ಮದಿನವನ್ನು ಶೇರ್ ಮಾಡುವುದಲ್ಲದೇ ಅಮಿತಾ ಕನ್ನಡದ ಈ ಪೀಳೀಗೆಯ ಉತ್ತಮ ಕವಿಗಳು, ಬೇಂದ್ರೆಯವರ ಕವನಗಳನ್ನು ಹಾಡುಗಳಾಗಿಸುವವರು. ಅಮಿತಾ ಅವರ ಸಾಧನಕೇರಿಯ ದರ್ಶನ ಓದುಗರನ್ನು ಭಾವುಕರನ್ನಾಗಿಸುತ್ತದೆ. ನ್ನು

  ಸುಮನಾ ಮತ್ತು ಅಮಿತಾ ಅವರ ಹಾಡು ಗುಡೂರ್ ಅವರ ಪರಿಕಲ್ಪನೆಗೆ ಮೆರುಗನ್ನು ಕೊಟ್ಟಿದೆ.

  – ಕೇಶವ

  Liked by 2 people

  • ಧನ್ಯವಾದ ಕೇಶವ್. ಅನಿವಾಸಿ ಬಳಗದ ಅಭಿಮಾನಪೂರ್ಣ ಸಹಾಯವಿಲ್ಲದೆ, ಬೆಂಬಲವಿಲ್ಲದೆ ಸಂಪಾದಕನ ಕೆಲಸ ಸಾಧ್ಯವಿಲ್ಲ. ನಿಮಗೆಲ್ಲ ಅಭಿವಾದನಗಳು.

   Liked by 1 person

 7. Simply superb. Critical appreciation of our ONLY NOBEL CANDIDATE varakavi Bendre.
  Lyrical bits rendered by the two gifted Kannaditis is equally splendid.
  The adage ‘ kannada iro tanaka Bendre kavitaa irtaave ” !

  Liked by 2 people

  • ಬೇಂದ್ರೆಯವರ ಜನ್ಮದಿನಕ್ಕೆ ಹೊರತಂದ ವಿಶೇಷ ಲೇಖನ – ಗಾಯನ ಮಾಲೆ ಅನಿವಾಸಿಗೆ ವಿನೂತನ. ಸಂಪಾದಕರಿಗೆ, ಲೇಖಕರಿಗೆ, ಗಾಯಕರಿಗೆ ಹಾಗೂ ತೆರೆಮರೆಯ ದೇಸಾಯಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ವಾರಾಂತ್ಯಕ್ಕೆ ಮನೋಲ್ಲಾಸಕಾರಿ ವಿಸ್ಮಯ ಇಂದಿನ ಸಂಚಿಕೆ.

   ಗೌರಿಯವರ ಪ್ರಬುದ್ಧ ಲೇಖನ ಬೇಂದ್ರೆಯವರ ಕಾವ್ಯದ ಆಳವನ್ನು ಅವಲೋಕಿಸಿ ಓದುಗರಿಗೆ ಅದರ ಹರವಿನ ಅರಿವು ಮೂಡಿಸಿದೆ. ಲೇಖಕರ ಸಾಹಿತ್ಯದ ಹರವೂ ಅವರ ಬರಹದಲ್ಲಿ ಎದ್ದು ಕಾಣುತ್ತಿದೆ.

   ಕೇಶವ ಅವರು, ಬೇಂದ್ರೆಯವರ ಕವನದ ಪ್ರತಿ ಶಬ್ದದ ಹಿಂದಿನ ಶಬ್ದವನ್ನು ವಿಶ್ಲೇಷಿಸುತ್ತ, ಕಾವ್ಯದ ಭಾವ, ತಾಂತ್ರಿಕತೆ ಹಾಗೂ ತಾಳವನ್ನು ಹೇಗೆ ಕವಿ ಪೋಣಿಸಿ ಸುಂದರ ಹಾರವನ್ನು ಕಟ್ಟಿದ್ದಾರೆಂದು ನಮ್ಮೆದುರು ತೆರೆದಿದ್ದಿದ್ದಾರೆ. ಇಲ್ಲಿ ಲೇಖಕರ ಕಾವ್ಯ ಪ್ರಜ್ಞೆ ನಮಗೆ ತೋರಿ ಬರುತ್ತದೆ.

   ಅಮಿತಾ ಅವರ ಲೇಖನ ಹೇಗೆ ಬೇಂದ್ರೆ ಚಿಕ್ಕ ಮಗುವಿನಿಂದ ಹಿರಿಯರರವರೆಗೆ ಕವಿಯಾಗಿ, ಸ್ಫೂರ್ತಿಯ ಸೆಲೆಯಾಗಿ, ಚೇತನವಾಗಿ ಮನ ಮುಟ್ಟುತ್ತಾರೆಂದು ತೋರಿಸುತ್ತಾರೆ.

   ಕೊನೆಯಲ್ಲಿ ಅಮಿತಾ, ಸುಮನಾ ಅವರ ಬೇಂದ್ರೆ ಕವನಗಳ ಮೆಡ್ಲಿ, ಕಳೆದ ಸಂಚಿಕೆಯಲ್ಲಿ ಮುರಳಿಯವರ ‘ಹೈಕು’ ನಲ್ಲಿನ
   ಕಾಫಿಯಂತೆ ಮನಸ್ಸನ್ನು ಆಹ್ಲಾದಗೊಳಿಸಿದೆ.

   – ರಾಂ

   Liked by 3 people

   • ವರಕವಿಗೆ ಸಂದ ಸೂಕ್ತ ನುಡಿ-ಚಿತ್ರ-ಗಾಯನ ನಮನ. ಇದು ‘ಅನಿವಾಸಿ’ಯಲ್ಲಿ ಫಸ್ಟ! ಸಂಪಾದಕರ ಆಯ್ಕೆ ಮತ್ತು ಪೋಣಿಸಿದ ಬೇಂದ್ರೆ ಅಜ್ಜನಿಗೆ ಹಾಕಿದ ಸುಂದರ ಹಾರ!
    ಗೌರಿಯವರ ಆಳಅಭ್ಯಾಸದ ಫಲ ಈ ವಿದ್ವತ್ಪೂರ್ಣ ಲೇಖನ. ಒಂದು ಸಣ್ಲ ಲೇಖನದಲ್ಲಿ ಎಷ್ಟೊಂದು ವಿಷಯಗಳು. ಅವರ ಮೂರು ಕಂತಿನ ಗಿರ್ಮಿಟ್ ರೇಡಿಯೋ ಪ್ರಸ್ತುತಿಯ ಸಾರ ಇಲ್ಲಿದೆ. ಅದನ್ನು ಬರೆಯುತ್ತಾ ‘ಬೇಂದ್ರೆಯಲ್ಲೇ ಮುಳುಗಿ ಹೋಗಿದ್ದೆ’ ಅನ್ನುತ್ತಾರೆ,
    ಅದನ್ನಿಲ್ಲಿ ಕಂಡೆ. ಇದು ಕಾಯ್ದಿಟ್ಟು ಮತ್ತೆ ಮತ್ತೆ ಓದುವಂತಹದು.
    ಮತ್ತೆ ಮತ್ತೆ ಓದಿದ, ಕೇಳಿದ ‘ನಾನು ಬಡವಿ’ ಕೇಶವ ಕುಲಕರ್ಣಿಯವರ ಹೊಸ ವಿಶ್ಲೇಶಣೆಯಿಂದ ಅದು ಇನ್ನಷ್ಟು ಶ್ರೀಮಂತವಾಗಿದೆ. ಅವರು ಅರ್ಥೈಸಿದ ರೀತಿ, ತಿಳಿಸಿಕೊಟ್ಟ ಬೇಂದ್ರೆ ಪದಗಳಲ್ಲಿಯ ಅರ್ಥ ನನ್ನಂತೆ ಕೆಲವರಿಗಾದರೂ ಹೊಸತು ಅನಿಸುವದರಲ್ಲಿ ಸಂದೇಹವಿಲ್ಲ. ಅವರೂ ಸಹ ಬೇಂದ್ರೆಯಲ್ಲಿ ಮುಳುಗಿದವರು.
    ಅಮಿತಾ ಅವರು ಸಹ ಅದೇ ಸಾಗರದಲ್ಲಿ ತೇಲುವವರು. ಅವರ ಜೊತೆಗೆ ಸುಮನಾ ಧ್ರವ. ಅಮಿತಾ ಅವರ ಭಾವನಾಪೂರ್ಣ ಲೇಖನ ಮತ್ತು ಗಾಯನ ವರಕವಿಯಿಂದ ವರ ಪಡೆದಂತಿದೆ. ಗುಡೂರ ಅವರ ರೇಖಾಚಿತ್ರ ಕವಿಯ ಪ್ರಸಿದ್ದ ‘ಫೋಟೋ’ವನ್ನನುಸರಿಸಿದ್ದಂತೆ ಕಂಡರೂ ತಮ್ಮದೇ ಒಂದು ಛಾಪು ಕೊಟ್ಟಿದ್ದಾರೆೆ- ಅನಿವಾಸಿ ಸಂಪಾದಕತ್ಕವಕ್ಕೆ ಕೊಟ್ಟಂತೆ. ಕವಿಯ ಕಣ್ಣುಗಳು ಏನೇನೆಲ್ಲ ಕಂಡಿಲ್ಲ? ಅವುಗಳನ್ನು ಮರೆಮಾಡಿ ಅಳೆಯಲಾಗದ ಅನುಭಾವಿ ಕವಿಗೆ ‘ಮಿಸ್ಟಿಕ್ ಟಚ್’ ಕೊಟ್ಟಿದ್ದಾರೆ.
    ಈ ವಾರಾಂತ್ಯದ ಸ್ಪೆಶಲ್ ಅನಿವಾಸಿ ಸಂಚಿಕೆಗೆ ಎಲ್ಲಿಂದಲೋ ಸಲಹೆ ಬಂದಿರಲಿ ‘ಬೇಂದ್ರೆ -೧೨೫’ ಕ್ಕೆ ಸಾಕಾರ ರೂಪ ಕೊಟ್ಟ ಐವರಿಗೂ ಅಭಿನಂದನೆಗಳು. ಶ್ರೀವತ್ಸದೇಸಾಯಿ

    Liked by 2 people

  • Raghavendra Bhatta sir, Your interest in reading the articles andlistening to the musical tributes d commenting is appreciated. It is hoped that you will continue to do so.
   SHRIVATSA Desai

   Like

 8. ಸಹೃದಯ ಸಂಪಾದಕರೇ, ಲೇಖಕಿ/ಕರೇ ಮತ್ತು ಗಾಯಕಿಯರೇ,

  ಇದೆಂತಹ ರಸದೌತಣ! ಇದೆಂತಹ ಮನೋಲ್ಲಾಸ!!

  ನುಡಿ ಗಾರುಡಿಗ, ನನ್ನ ಒಲುಮೆಯ ವರಕವಿ ಬೇಂದ್ರೆಯವರ ಈ ಜಯಂತಿಯನ್ನು ನೆನೆಯುವ ಮತ್ತು ಆಚರಿಸುವ ಈ ಪರಿಯ ಓದಿ, ಕೇಳಿ ಇಂದು ಮನ ತುಂಬಿ ಬಂದಿದೆ.

  ಬೇಂದ್ರೆಯವರದ್ದೇ ಆದ ಪದಗಳಲಿ ನನ್ನ ಭಾವನೆಗಳನ್ನು ಹಿಡಿದಿಡುವುದಾದರೆ ‘ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ ಕೋಟಿ ಕೋಟಿ ಸಲ’ ಅವರ ಕವನಗಳನ್ನು ಮತ್ತೆ ಮತ್ತೆ ಓದುವ ಪ್ರೇರಣೆ ನೀಡುತ್ತಾ ಜೇವನೋತ್ಸಾಹ ಪುಟಿದೇಳುವ ರೀತಿಯಲ್ಲಿ ‘ಹೊಸಯಿಸು’ತ್ತಿದೆ.

  ಅಂದಿಗೂ ಬೇಂದ್ರೆ, ಇಂದಿಗೂ ಬೇಂದ್ರೆ – ಅವರ ಕವನಗಳು, ಅವನ್ನು ಅವರು ಹಾಡಿದ ಉತ್ಕಟತೆ ಎಂದೆಂದಿಗೂ ಚಿರನೂತನ.
  ಇವತ್ತಿನ ಸಂಚಿಕೆಗಾಗಿ ಕೃತಜ್ಞತೆಗಳು.
  ವಿನತೆ ಶರ್ಮ

  Liked by 3 people

 9. ನಾನು ಬಡವಿ ಆತ ಬಡವ ಕವನದ ನಿರೂಪಣೆ ಮತ್ತು ಭಾವಾರ್ಥ ತುಂಬಾ ಚನ್ನಾಗಿ ವಿಶ್ಲೇಷಿಸಿದ್ದಾರೆ, ಕೇಶವ. ಅದಕ್ಕೆ ಹೇಳೋದು, ಬರೀ ಬೇಂದ್ರ ಬೇಂದ್ರೆ ಆಗಂಗಿಲ್ಲ, ಮತ್ತೇನೋ ಅದ. ಅವರ ಒಂದೊಂದು ಕಾವ್ಯ ಒಂದೊಂದು ಗಣಿ ಇದ್ದಂತೆ. ಅಗೆದಷ್ಟು ಚಿನ್ನ.

  Liked by 3 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.