ಚಂದಿರ…… ಚಂದಿರ…… – ಎರಡು ಕವನಗಳು; ಮುರಳಿ ಹತ್ವಾರ್ ಹಾಗೂ ಪ್ರೇಮಾ ಸಾಗರ್

ವಿಜ್ಞಾನಿಗೆ ಸುಮಾರು ನಾಲ್ಕೂವರೆ ಬಿಲಿಯನ್ ವರ್ಷಗಳಿಂದ ಭೂಮಿಯ ಸುತ್ತ ಸುತ್ತುವ ಕಲ್ಲಾದರೂ, ಚಂದ್ರ ಪ್ರತಿಯೊಬ್ಬ ದೇಶದ, ಭಾಷೆಯ, ಸಂಸ್ಕೃತಿಯ ಕವಿಯ ಪ್ರೀತಿಯ ವಿಷಯ. ಚಂದ್ರ ನಮ್ಮಲ್ಲಿ ಮಕ್ಕಳಿಗೆ ಆಟವಾಡಿಸುವ ಚಂದಾಮಾಮನಾದರೆ, ಪಾಶ್ಚಾತ್ಯ ದೇಶಗಳಲ್ಲಿ ಚೀಸಿನಿಂದ ಮಾಡಲ್ಪಟ್ಟವನಾಗುತ್ತಾನೆ. ಮುಖ್ಯವಾಗಿ, ಪ್ರೇಮಿಗಳಿಗೆ ಅದರಲ್ಲೂ ವಿರಹಿಗಳಿಗೆ, ಚಂದ್ರನ ಬಗ್ಗೆ ಮಾತಾಡದಿದ್ದರೆ ಆಗುವುದೇ ಇಲ್ಲ; ಪ್ರೇಮಿಗಳಿಗೆ ತಂಪಾಗಿ ಬೆಳಗುವ ಚಂದ್ರ, ವಿರಹಿಗಳನ್ನು ಬಿಸಿಯಾಗಿ ಸುಡುತ್ತಾನಂತೆ! ಸಧ್ಯಕ್ಕೆ, ಮತ್ತೆ `ರೇಸ್ ಟು ಮೂನ್` ಶುರುವಾಗುವ ಲಕ್ಷಣಗಳೂ ಇವೆ. ಅಂತಹ ಚಂದ್ರನ ಬಗ್ಗೆ ನಮ್ಮ ಅನಿವಾಸಿಯ ಮುರಳಿ ಹತ್ವಾರ್ ಹಾಗೂ ಹೊಸದಾಗಿ ಪರಿಚಯಿಸುತ್ತಿರುವ ಕವಯಿತ್ರಿ ಪ್ರೇಮಾ ಸಾಗರ್ ಅವರ ಅನಿಸಿಕೆಗಳೇನು, ಓದೋಣವೆ? ಓದಿ ನಾವೂ ಬರೆಯುವ, ಬರೆದದ್ದನ್ನು `ಅನಿವಾಸಿ.ಕಾಂ`ಗೆ ಕಳಿಸುವ… – ಎಲ್ಲೆನ್ ಗುಡೂರ್ (ಸಂ.)

ಚಂದಿರನಲ್ಲಿ ನೀರಿದೆಯಂತೆ – ಮುರಳಿ ಹತ್ವಾರ್

ವ್ಯಂಗ್ಯಚಿತ್ರ: ಲಕ್ಷ್ಮೀನಾರಾಯಣ ಗುಡೂರ್
 ಬನ್ನಿ ಹೋಗೋಣ
 ಚಂದಿರನಲ್ಲಿ ನೀರಿದೆಯಂತೆ
  
 ಚಂಬು-ಬಿಂದಿಗೆ, ಹಾರೆ-ಗುದ್ದಲಿ
 ದಿಂಬು-ಹಾಸಿಗೆ ಹಿಡಿದು ಬನ್ನಿ ಸಾಲಲಿ
 ಪ್ರೋಕ್ಷಣೆ ಆಪೋಶನಗಳ ಮಡಿಯಲಿ
 ಗುಂಡಿ ತೋಡಬೇಕಿದೆ ಶಶಿಯ ಬಯಲಲಿ
  
 ಅಗೆದಷ್ಟೂ ಬಗೆಬಗೆಯ ನಿಧಿಯಂತೆ,
 ಕಣಕಣವೂ ಅಪರಿಮಿತ ಬೆಲೆಯಂತೆ,
 ತುಂಡುಗಳ ಭುವಿಗೆ ಕಳಿಸೋಣವಂತೆ
 'ಮೇಡ್ ಇನ್ ಮೂನ್' ಗೆ ಕಾದಿದೆ ಸಂತೆ
  
 ಏನು ಬೇಕಾದರೂ ಕಟ್ಟಬಹುದು
 ಕಲ್ಲು ಕಲ್ಲಿಗೂ ನಿಮ್ಮ ಹೆಸರೇ ಇಟ್ಟು
 ದೇವರೆಂದು ಜನ ಪೂಜಿಸಲೂ ಬಹುದು
 ನಿಮಗೇ ಹರಕೆಯ ಹಾರ ಕೊಟ್ಟು!
  
 ಹೇಳಿ, ಯಾರು ಬರುತ್ತೀರಿ?
 ನೀವಾ! ಹೆಸರೇನೆಂದಿರಿ?
 ಬೆಂಗಳೂರಿನಲ್ಲಿ ಒಂದೆರಡು ಸೈಟು?
 ಹೋಗಲಿ, ಬ್ಯಾಂಕಿನಲ್ಲಿ ದೊಡ್ಡ ಡೆಪಾಸಿಟ್ಟು?
 ಅಧಿಕಾರ ಮಾಡುವ ಧಿಮಾಕಿನ ಸೀಟು?
 ಯಾವುದು ಇಲ್ಲವೇ?
 ಬೆವರಿನ ಅಂಗಡಿಯಾದರೂ ಇಟ್ಟಿದ್ದೀರಾ?
 ಇಲ್ಲಾ, ಮಾರಿಕೊಳ್ಳುವ ಮಾದಕತೆಯ ಮಾರ್ಕೆಟ್ಟು?
  
 ಯಾವುದೂ ಇಲ್ಲ ಎಂದರೆ, ಪಕ್ಕಕ್ಕೆ ಬನ್ನಿ.
 ಬಲವಿಲ್ಲದ, ಎಡವೆನ್ನದ ನಡುವೊಂದು
 ನೀರಿಲ್ಲದ ಮರುಭೂಮಿಯ ಮಡು
 ಮರೀಚಿಕೆಯ ಮಾಯೆಯಲ್ಲಿ ಮಜಾ ಮಾಡಿ. 
  
 ಉಳಿದವರು ಬನ್ನಿ, ಬನ್ನಿ,
 ಈಗಲೇ ಹಾರಬೇಕಿದೆ ಮೇಲೆ
 ಹೆಜ್ಜೆ ಮೊದಲಿಟ್ಟವರೇ ರಾಜರಂತೆ
 ಕಾಲಿಟ್ಟಮೇಲೆ ಉಳಿದೆಲ್ಲ ಚಿಂತೆ
  
 ನೀರು ಖಾಲಿಯಾದರೆ ಏನು ಎಂದಿರಾ
 ಆದಾಗ ನೋಡೋಣ ಬಿಡಿ
 ಹೇಗೂ ಚೆನ್ನಾಗಿ ಕಲಿತಿದ್ದೇವಲ್ಲ
 ಚಿಮ್ಮಿಸಿದರಾಯಿತು ಚಂದ್ರನ
 ಮೂಲೆ ಮೂಲೆಯಲ್ಲೂ
 ಬಿಸಿ ಬಿಸಿಯ ನೆತ್ತರಿನ ಬುಗ್ಗೆ! 

*************************************************

ಹೀಗೊಂದು ಗೆಳೆತನದ ಬಯಕೆ! – ಪ್ರೇಮಾ ಸಾಗರ್

ಪರಿಚಯ: ನಾನು ಒಬ್ಬ ಹವ್ಯಾಸಿ ಲೇಖಕಿ. ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಈಳಿ ಎಂಬ ಸಣ್ಣ ಊರಿನವಳು. ಬೆಂಗಳೂರಲ್ಲಿ ಶಿಕ್ಷಣ ಪಡೆದು Engineering degree ಪಡೆದುಕೊಂಡಿದ್ದೇನೆ. IT ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ, ಗಂಡ ಹಾಗು ಮಕ್ಕಳೊಡನೆ Milton Keynes ನಲ್ಲಿ ವಾಸವಾಗಿದ್ದೇನೆ.

ಚಿಕ್ಕಂದಿನಿಂದಲೂ ಹಲವಾರು ಭಾಷೆಗಳಲ್ಲಿ ಹಾಗು ಅನ್ಯಸಂಸ್ಕೃತಿಗಳಲ್ಲಿ ಆಸಕ್ತಿ. ಇಂತಹ ಆಸಕ್ತಿಯನ್ನು ವಿಕಾಸಗೊಳಿಸುವ, ವ್ಯಕ್ತಪಡಿಸುವ ಒಂದು ಮಾಧ್ಯಮವನ್ನು ಬರವಣಿಗೆಯಲ್ಲಿ ಕಂಡೆ. ನನ್ನ ತಾಯಿಯವರಾದ ಶ್ರೀಮತಿ ಕಮಲಾ ಅನಂತ, ಆಗಾಗ ಹವ್ಯಾಸಕ್ಕಾಗಿ ಬರೆಯುತ್ತಿದ್ದ ಚುಟುಕು ಕವನಗಳು ನನ್ನನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದವು. ನನಗೇ ಗೊತ್ತಿಲ್ಲದಂತೆ ಈ ಚಿಕ್ಕ ಹವ್ಯಾಸ ನನ್ನಲ್ಲಿ ಬಂದು ಸೇರಿಕೊಂಡಿತು.

ನಾನು ಬರೆವ ಪದ್ಯಗಳು ಹಾಗು ಲೇಖನಗಳು ನನ್ನ ಭಾವನೆಗಳಿಗೆ, ಆಸೆಗಳಿಗೆ, ಅಂದಾಜುಗಳಿಗೆ ರೆಕ್ಕೆ ಕೊಟ್ಟು, ಸೆರೆಯಿಲ್ಲದಂತೆ ಎತ್ತರಕ್ಕೆ ಹಾರಿಸುವ ಧ್ಯೇಯ ನನ್ನದಾಗಿದೆ; ಈಗಿನವರೆಗೂ ನನ್ನ ಕಣ್ಣುಗಳಿಗಷ್ಟೇ ಸೀಮಿತವಾಗಿದ್ದು, ನನ್ನ ಮನಸ್ಸನ್ನು ಹಗುರವಾಗಿಸುವ ಕಾರ್ಯ ಮಾಡುತ್ತಾ ಬಂದಿವೆ. ಇದು ನನ್ನ ಮೊದಲ ಪ್ರಕಟಣೆ.

ಇಂತಹದೊಂದು ಹವ್ಯಾಸ ಕಲ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ನನ್ನ ಅಮ್ಮನಿಗೂ, ಶಿಕ್ಷಕರಿಗೂ, ನನ್ನನ್ನು ಪ್ರೋತ್ಸಾಹಿಸುವ ನನ್ನೆಲ್ಲ ಬಂಧು ಬಾಂಧವರಿಗೂ ನಾನು ಸದಾ ಚಿರಋಣಿ.

***

 ಬಾನಿನ ಅಂಗಳದಿ ಬೆಳ್ಳಿಯ ಆಟ..
 ಮುಚ್ಚಿಡಲೆಂದು ಮೋಡದ ಓಟ! 
  
 ಚಂದಿರನೆಡೆಗೆ ನನ್ನಯ ಒಲವೇ.. 
 ಮಿಣುಕಲೂ ಆಗಸ ಅದೆಂತಹ ಚಲುವೇ!
  
 ಇದ್ದರೆ ಸಾಕೇ ತಂಗಾಳಿಯ ಒಡನಾಟ?
 ಕಾತುರದಿ ಕಾದಿಹೆನು ನಿನ್ನಯ ನೋಟ!
  
 ಮೈ ಜುಂ ಎನುತಿದೆ ಕಿರಣದ ಮತ್ತು..
 ಕಾಡಲು ತರವೇ ಸಂಜೆಯ ಹೊತ್ತು? 
  
 ನೀ ಅಲ್ಲಿ ನಾನಿಲ್ಲಿ ನಿಲುಕದಾ ಮಾತು..
 ಸಾಧ್ಯವೆ ಹರಟೆ ಜೊತೆಯಲ್ಲಿ ಕೂತು?
  
 ನೀಲಾಂಬರವನೆ ನೀ ಹೊದೆದಾ ಮೇಲೆ.. 
 ತಲುಪುವುದೆ ನಿನಗೆ ನಾ ಕರೆಯುವಾ ಓಲೆ? 
  
 ಬಂದುಬಿಡು ಸಾಕು ಈ ಕಣ್ಣಮುಚ್ಚಾಲೆ..
 ಮುನಿಸಿಕೊಂಡರೆ ನೋಡೆನು ನಾನ್ ಇನ್ನೆಂದೂ ಮೇಲೆ !
  
 - ಪ್ರೇಅಸಾ
******************************************** 

15 thoughts on “ಚಂದಿರ…… ಚಂದಿರ…… – ಎರಡು ಕವನಗಳು; ಮುರಳಿ ಹತ್ವಾರ್ ಹಾಗೂ ಪ್ರೇಮಾ ಸಾಗರ್

  1. ಮುರುಳಿ‌ ಮತ್ತು ಪ್ರೇಮಾ ಅವರ ಕವನಗಳು ಹುಣ್ಣಿಮೆ ಚಂದಿರನಂತೆ ಸುಂದರವಾಗಿವೆ 😊 SpaceXನ ವಿಮಾನದಲ್ಲಿ ಸೀಟು ಹಿಡಿದು ರಜೆಯಲ್ಲಿ ಅಜ್ಜನ ಮನೆಗೆ(ಚಂದ್ರಲೋಕಕ್ಕೆ!!) ಹೋಗುವ ದಿನಗಳು ಬಂದರೆ ಆಶ್ಚರ್ಯವೇನಿಲ್ಲ!!…
    ಗುಡೂರ ಅವರ ಸಚಿತ್ರ ಕಲೆ/ಪ್ರತಿಭೆ ಈ ಕವನಗಳಿಗೆ ಇನ್ನೂ ಹೆಚ್ಚಿನ ಬೆಡಗನ್ನು ತಂದಿದೆ 👌👌

    Liked by 1 person

  2. ಮುರಳಿ ಮತ್ತು ಪ್ರೇಮ ಸಾಗರ್ ಅವರ ಕವನಗಳು ಸೊಗಸಾಗಿವೆ. ಮುರಳಿ ಅವರೇ ಚಂದ್ರನ ಮೇಲೆ ಮಾನವ ಕಾಲೂರಿದ ಕ್ಷಣದಿಂದಲೇ ಶುರುವಾಯ್ತು ಚಂದ್ರನ ಮೇಲೆ ನೆಲಸುವ ಅಭಿಲಾಷೆ. “ಚಂದಿರನೇಕೆ ಓಡುವನಮ್ಮ ಮೋಡಕೆ ಹೆದರಿಹನೆ. ಬೆಳ್ಳಿಯ ಮೋಡದ ಅಲೆಗಳ ಕಂಡು ಚಂದಿರ ಬೆದರಿಹನೇ”ಎನ್ನುವ ನಮ್ಮ ಶಾಲೆಯ ಕವನದ ಸಾಲುಗಳನ್ನು ಓದುವಾಗ ಚಂದಿರನ ಕಲ್ಪನೆ ಅದೆಷ್ಟು ಸೊಗಸಾಗಿತ್ತಲ್ಲವೇ? ಈಗ ನೋಡಿ, ಚಂದ್ರನ ಮೇಲಿರುವ ಲೋಹ ನಿಕ್ಷೇಪಗಳ ಕುರಿತು ಅದನ್ನು ಸೂರೆಗೈಯ್ಯುವ ದುರಾಸೆ ಆಗಲೇ ಶುರುವಾಗಿದೆ. “ಮೇಡ್ ಇನ್ ಮೂನ್” ಸ್ಲೋಗನ್ ನೀವಾಗಲೇ ನಿಮ್ಮ ಕವನದಲ್ಲಿ ಬರೆದು, ಆ ದಿನಗಳಿನ್ನು ದೂರವಿಲ್ಲ ಎನ್ನುವುದನ್ನು ಎಚ್ಚರಿಸಿದ್ದೀರಿ.

    ಪ್ರೇಮ ಅವರ ಕವನದಲ್ಲಿ ಚಂದ್ರನ ಕಲ್ಪನೆ ಇನ್ನು ಸುಂದರವಾಗಿದೆ. ”ತಾರೆಗಳ ತೋಟದಿಂದ ಚಂದಿರ ಬಂದ, ನೈದಿಲೆಯ ಅಂದ ನೋಡಿ ಆಡಲು ಬಂದ” ಎನ್ನುವ ಸಾಲುಗಳು ನೆನಪಾದವು. ಅನಿವಾಸಿಗೆ ಸ್ವಾಗತ ಪ್ರೇಮ ಸಾಗರ್ ಅವರಿಗೆ.

    ಉಮಾ ವೆಂಕಟೇಶ್

    Like

  3. ೧) ಪ್ರೇಮಮಯಿ ಪ್ರೇಮಾ ಸಾಗರ್ ಅವರಿಗೆ ’ಅನಿವಾಸಿಗೆ, ಸುಸ್ವಾಗತ! ಮೊದಲ ಕವಿತೆಯೇ ಪ್ರೇಮ/ಮೈತ್ರಿಯ ಕವನ! ಸಂಪಾದಕರು ಬರೆದಂತೆ ಪ್ರೇಮಗೀತೆಗಳಲ್ಲಿ ಚಂದ್ರ ಪೇಮಿಯ ಉಪಮಾನವಾಗುವದೇ ಹೆಚ್ಚು, ಅಥವಾ ಕ್ಷಣಿಕ ಅಥವಾ ದೀರ್ಘ ವಿರಹದಲ್ಲಿ ಬೆಂಕಿಯಾಗಿ ಸುಡುವ ಭಾವವಿರುತ್ತದೆ. ಇಲ್ಲಿ ಕಣ್ಣುಮುಚ್ಚಾಲೆ ಅಥವಾ play hard to get ಆಡುವದು ಬೇಡ ಅಂತ ಬೇಡಿಕೊಳ್ಳುವ ಸೋಮ ಯಾವಾಗಲೂ ಮೋಡ ಕವಿದಿರುವ ಈ ಊರಿನವನೇ ಇರಬೇಕು. ಕೊನೆಯ ಸಾಲಿನಲ್ಲಿ ’ಅಲ್ಟಿಮೇಟಮ್’ ಕೊಟ್ಟುಬಿಟ್ಟಿದ್ದಾರೆ. ಪಿ ಬಿ ಶ್ರೀನಿವಾಸ್ ಹಾಡಿದ ಹಳೆಯ ತಮಿಳು ಸಿನಿಮಾ ಹಾಡು (ನನ್ನಮೇಲೇಕೆ ಕೋಪ, ಚಂದ್ರನೇ, ಬೆಂಕಿಯಾದೆ) ನೆನಪಾಯಿತು. ಅವರ ಗೆಳೆತನ ಬೆಳೆಯಲು ಶುಭಾಶಯಗಳು!
    ೨) ಮುರಳಿಯವರ ಕವನ ಒಂದು ರೀತಿಯಲ್ಲಿ ಹತ್ತೊಂಬತ್ತನೆಯ ಶತಮಾನದ ‘Gold Rush’ ಅನ್ನು ನೆನಪಿಸಿತು. ಇಷ್ಟೇ, ಇಲ್ಲಿ ಅದು ಲಿಕ್ವಿಡ್ ಗೋಲ್ಡ್ -ನೀರು! ವ್ಯಂಗದ ಕೊನೆಗೆ ಇತಿಹಾಸದಲ್ಲಿ ಕಂಡ ಮಾನವನ ಸ್ವಭಾವದ ಕರಾಳ ಸತ್ಯ ಆತನನ್ನು ಅಧೋಗತಿಗೀಡುಮಾಡಬದೆಂದು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
    ೩) ಗುಡೂರವರ ವ್ಯಂಗ ಚಿತ್ರದ ಬಗ್ಗೆ ಕಮೇಂಟ್ ಮಾಡದೆ (ಚಂದ್ರನಂತೆ) ಇದು ಅಪೂರ್ಣವೇ: ಇಂದು (ವೈಕುಂಠ ಏಕಾದಶಿಯಂದು) ಬೆಳಗುತ್ತಿರುವ ಮುಕ್ಕಾಲು ಚಂದ್ರನ ಮುಖದ ಮೇಲಿನ ’ಚೀಸೀ ಸ್ಮೈಲ್’ ನೋಡಿ. ಆತನ ಕಣ್ಣುಗಳಲ್ಲಿಯ ಭಾವ ಮುರಳಿಯವರ ಕವನದಲ್ಲಿಯ ’ದುರುಳ’ರನ್ನು ಕಂಡ ಭೀತಿಯೋ, ಪ್ರೇಅಸಾ ಅವರ ನಾಯಕಿಯ ಮೇಲಿನ ಓರೆ ನೋಟವೋ ಖಾತ್ರಿಯಾಗಲಿಲ್ಲ! ಅದು ಪನೀರೋ ಪಿಟ್ಜಾನೋ ಅದೂ ಗೊತ್ತಾಗಲಿಲ್ಲ. ಆದರೆ ’ರೇಸ್’ ಕಲ್ಪನೆ ಮಾತ್ರ ಅದ್ಭುತ. ಅಭಿನಂದನೆಗಳು.

    Liked by 1 person

    • ಕೃತಿಸುವವರ ಆಲೋಚನೆಗಳು ಸಹಜವಾಗಿ ಓದುಗರ ಆಲೋಚನೆಗಳಿಗೆ ಹೊಂದಾಣಿಕೆ ಆಗಬೇಕೆಂದೇನಿಲ್ಲ. ಆದರೆ ನೀವು ಚುಟುಕದ ಭಾವನೆಯನ್ನ ನಿಖರವಾಗಿ ಬಿಡಿಸಿಟ್ಟಿದ್ದೀರಿ. ನಿಮ್ಮಅವಲೋಕನ ಸಹ ಬಹಳ ರಸವತ್ತಾಗಿದೆ!
      ಧನ್ಯವಾದಗಳು ದೇಸಾಯಿ ಅವರೇ!
      -ಪ್ರೇಮಾ

      Like

  4. ಪ್ರೇಮಾ ಸಾಗರ್ ಅವರಿಗೆ ‘ಅನಿವಾಸಿ’ಗೆ ಸ್ವಾಗತ. ಚಂದ್ರ ಮೇಲೊಂದು ಕಾವ್ಯವ ಕಟ್ಟಲು ಮತ್ತೆ ಮನಸ್ಸು‌ ಚಕೋರವಾಗುವಂತಿದೆ.
    ಮುರಳಿಯವರು ಚಂದ್ರನ ಬಗ್ಗೆ ಬರೆದಿರುವ ವಿಡಂಬನಾತ್ಮಕ ಕವನ ಅವರ usual ಶೈಲಿಯಿಂದ ಹೊರಬಂದು ಹೊಸ ಕಾಣ್ಕೆಗಳನ್ನು ಕೊಟ್ಟಿದೆ.
    -ಕೇಶವ

    Liked by 1 person

  5. ಮುರಳಿ ಅವರ ಚಂದ್ರಮನತ್ತ ಪಯಣಕ್ಕೆ
    ಗುಡೂರರ ಚಿತ್ರಣ!!!!
    👏👏👏👏👏

    Like

  6. ಹೊಸ ಕವಯತ್ರಿ ಪ್ರೇಮಾ ಸಾಗರ್ ಅವರಿಗೆ ಸ್ವಾಗತ. ಸುಂದರ ಪ್ರೇಮ ಕವನ .
    ಮುರಳಿ, ತಲೆತಲಾಂತರಗಳಿಂದ ಭಾವುಕರ ನಲ್ಮೆಯ ಚಂದಮಾಮ ಹೇಗೆ ಮಾನವನ ದುರಾಸೆಗೆ ಬಲಿಯಾದಾನು ಎಂಬುದನ್ನು ಭಾವಪೂರ್ಣವಾಗಿ ಚಿತ್ರಿಸಿದ್ದಾರೆ.
    ಗುಡೂರ್ ಅವರ ಚಿತ್ರದಂತೆ ಗಗನಯಾನ ಪಕ್ಕದ ಊರಿಗೆ ಹೋಗುವ ಪ್ರವಾಸದಷ್ಟೇ ಸಾಮಾನ್ಯವಾದಲ್ಲಿ ಆಶ್ಚರ್ಯವಿಲ್ಲ
    – ರಾಂ

    Liked by 2 people

    • ಪ್ರೇಮ ಸಾಗರ್ ಅವರಿಗೆ ಅನಿವಾಸಿ ಅಂಗಳಕ್ಕೆ ಸ್ವಾಗತ!!!!
      ನಿಮ್ಮ ಚಂದ್ರಮನ ಕವನ ಸೊಗಸಾಗಿದೆ!!!
      -Saವಿ

      Like

Leave a reply to Prema Sagar Cancel reply

This site uses Akismet to reduce spam. Learn how your comment data is processed.