ಸುರಂಗ (ಕಥೆ) – ಕೇಶವ ಕುಲಕರ್ಣಿ

ಕೇಶವ ಕುಲಕರ್ಣಿಯವರು, ಅನಿವಾಸಿ ಒದುಗರಿಗೆಲ್ಲ ಪರಿಚಿತರು. ಅವರ ಕವನಗಳನ್ನು ನೀವೆಲ್ಲರೂ ಒದಿಯೇ ಇರುತ್ತೀರ. ಕೇಶವರವರಿಗೆ ಕತೆ ಹೇಳುವ ಕಲೆಯೂ ಕರಗತವಾಗಿದೆ. ಸುರ೦ಗ, ನಿಮ್ಮ ಕುತೂಹಲವನ್ನು ಕೊನೆವರಗೆ ಉಳಿಸಿಕೊ೦ಡು ಹೋಗುತ್ತದೆ. ಒ೦ದು ಟಾರ್ಚು ಹುಡುಕುವುದರೊ೦ದಿಗೆ ಲೇಖಕರು ಮನೆಯ ವಿನ್ಯಾಸ ಮತ್ತು ಮನೆಯವರ ರೀತಿ, ಹವ್ಯಾಸ, ಕೆಲಸ ಮತ್ತು ಸ್ವಭಾವಗಳನ್ನು ಪರಿಚಯ ಮಾಡಿಕೊಡುವ ರೀತಿ ಅವರ ಪ್ರತಿಭೆಯನ್ನು ತಿಳಿಸುತ್ತದೆ. ಈ ಕತೆಯನ್ನು ನೀವು ಮಾತ್ರವಲ್ಲ, ನಿಮ್ಮ ಮಕ್ಕಳಿಗೂ ಒದಿ ಹೇಳಿ ಅವರ ಕುತೂಹಲವನ್ನು ಪೋಷಿಸಲೆ೦ದು ನನ್ನ ಆಶಯ. ಕತೆಯ ಬಗ್ಗೆ ಹೆಚ್ಚಿನ ವಿಷಯ ಬರೆದು ಅದರ ರಹಸ್ಯವನ್ನು ಬಯಲು ಮಾಡಬಾರದೆ೦ದು, ಈ ಪರಿಚಯವನ್ನು ನಿಲ್ಲಿಸುತ್ತೇನೆ.

ಈ ಕತೆಗೆ ಬಹಳ ಸೂಕ್ತವಾದ ಚಿತ್ರಗಳನ್ನು ಡಾ ಲಕ್ಷ್ಮಿನಾರಾಯಣ ಗೂಡುರುರವರು ರಚಿಸಿದ್ದಾರೆ – ಸ೦

 

 

ಢಗ್ ಢಗ್ ಢಗ್ ಎಂದು ಲೋಹವನ್ನು ಹೊಡೆದಂತೆ ಸದ್ದಾಯಿತು. ಗುದ್ದಲಿಯನ್ನು ಪಕ್ಕಕ್ಕೆ ಇಟ್ಟು, ಸಲಿಕೆಯಿಂದ ಮಣ್ಣನ್ನು ಸರಿಸಿದ. ನಿಧನಿಧಾನವಾಗಿ ಮಾಸಿದ ಬಣ್ಣದ ಚೌಕಾಕಾರವೊಂದು ಕಾಣಿಸಿಕೊಂಡಿತು. ಮಣ್ಣನ್ನು ಸರಿಸಿದರೆ ಬಾಗಿಲಿನಂತಿತ್ತು. ಇನ್ನೂ ಮಣ್ಣನ್ನು ಸರಿಸಿದರೆ ಅದು ಬಾಗಿಲೇ ಆಗಿತ್ತು, ಅದೂ ದಪ್ಪ ಮಾಸಿದ ಕಬ್ಬಿಣದ ಬಾಗಿಲು. ಆ ಬಾಗಿಲಿಗೊಂದು ಕೊಂಡಿ ಬೇರೆ, ಕೊಂಡಿಗೊಂದು ಬೀಗವೂ. ಬೀಗಕ್ಕೆ ಪಕ್ಕದಲ್ಲೇ ಇದ್ದ ಕಲ್ಲಿನಿಂದ ಒಂದು ಹೊಡೆದ, ಬೀಗ ತೆರೆದುಕೊಳ್ಳಲಿಲ್ಲ. ಸಲಿಕೆಯಿಂದ ಸಲಿಡಿಸಿದ, ಗುದ್ದಲಿಯಿಂದ ಗುದ್ದಿದ, ಎಬ್ಬಿದ, ಏನೆಲ್ಲ ಮಾಡಿದ, ಬೀಗ ಬಿಟ್ಟುಕೊಳ್ಳಲಿಲ್ಲ. ಛಲ ಬಿಡದೇ ಅರ್ಧ ಗಂಟೆ ಹೊಡೆದ, ಹೊಡೆದ, ಬೆವರಿನಿಂದ ಒದ್ದೆ ಆಗುವವರೆಗೂ ಜಜ್ಜಿದ. ಕೊನೆಗೂ ಬೀಗ ಬಿಟ್ಟುಕೊಂಡಿತು. ಬಿರುಬಿಸಿಲಿನಲ್ಲಿ ಬೀಗಕ್ಕೆ ಹೊಡೆದೂ ಹೊಡೆದೂ ತುಂಬ ಸುಸ್ತಾಗಿದ್ದ, ಆದರೂ ಬೀಗ ಒಡೆದ ಹುಮ್ಮಸ್ಸು ಎಲ್ಲ ಆಯಾಸವನ್ನೂ ನೀಗಿಸಿತು.

ಬೀಗವನ್ನು ಬಿಚ್ಚಿ, ಬಾಗಿಲನ್ನು ತೆರೆದ. ಕರ ಕರ ಕರ ಎಂದು ಸದ್ದು ಮಾಡುತ್ತ ಬಾಗಿಲು ತೆರೆದುಕೊಂಡಿತು. ಒಳಗೆ ತಲೆ ಹಾಕಿದ. ಕತ್ತಲು, ಕಗ್ಗತ್ತಲು. ಗಬ್ಬು ವಾಸನೆ, ದುರ್ನಾತ. ಕಿವಿಗೊಟ್ಟ, ಏನೂ ಕೇಳಿಸಲಿಲ್ಲ. ಕೈಯಾಡಿಸಿದ, ಏನೂ ಸಿಗಲಿಲ್ಲ. ಮೊಬೈಲಿನ ಟಾರ್ಚನ್ನು ಆನ್ ಮಾಡಿದ.  ಸುರಂಗದಂತೆ ಏನೋ ಕಾಣಿಸಿದಂತಾಯಿತು, ಆದರೆ ಏನೂ ಕಾಣಲಿಲ್ಲ. ಬಾಗಿಲನ್ನು ಮುಚ್ಚಿ ದೊಡ್ಡ ಟಾರ್ಚುನ್ನು ತರಲು ದೊಡ್ಡ ಹಿತ್ತಲಿನಿಂದ ಮನೆಯ ಹಿಂಬಾಗಿಲಿಗೆ ಹೋದ.

ಹಿತ್ತಲ ಬಾಗಿಲ ಬಳಿಯೇ ನಿಂತು, “ಅಮ್ಮಾ, ಸ್ವಲ್ಪ ಟಾರ್ಚು ಕೊಡ್ತೀಯಾ?” ಎಂದು ಕೂಗಿದ.

“ನನಗೇನು ಗೊತ್ತೋ? ಟಾರ್ಚೇನು ಅಡಿಗೆ ಮನೆಯಲ್ಲಿ ಉಪಯೋಗಿಸುತ್ತೇವೆಯೇ? ನೀನುಂಟು ನಿಮ್ಮಪ್ಪ ಊಂಟು,” ಎಂದು ಅಡಿಗೆ ಮನೆಯಿಂದಲೇ ಅಮ್ಮ ಕೂಗಿದರು.

ಹಿತ್ತಲ-ಚಪ್ಪಲಿಯನ್ನು ಹಿತ್ತಲಲ್ಲೇ ಬಿಟ್ಟು ಮನೆಯ ಒಳಗೆ ಹೋದ. ಒಳಗೆ ಬಂದು ಮಮೂಲು ಜಾಗದಲ್ಲಿ ನೋಡಿದ, ಟಾರ್ಚು ಇರಲಿಲ್ಲ. ಹೆಂಡತಿಗೆ ಕೇಳೋಣವೆಂದರೆ ಅವಳು ಕೆಲಸಕ್ಕೆ ಹೋಗಿಯಾಗಿದೆ. ಮಗಳು ಶಾಲೆಗೆ ಹೋಗಿಯಾಗಿದೆ (ಅವಳು ಆಗಾಗ ಟಾರ್ಚಿನ ಜೊತೆ ಆಡತ್ತಾಳೆ). ತಂಗಿ ಪಡಸಾಲೆಯಲ್ಲಿ ಟಿವಿ ಹಾಕಿಕೊಂಡು, ಕಿವಿಗೆ ಹೆಡ್-ಫೋನ್ ಹಾಕಿಕೊಂಡು, ಸ್ಮಾರ್ಟ್‍ಫೋನಿನಲ್ಲಿ ಏನನ್ನೋ ಕೇಳಿಕೊಂಡು, ತನಗೂ ಈ ಮನೆಗೂ ಯಾವುದೇ ಸಂಬಂಧವೇ ಇಲ್ಲವೇನೋ ಎನ್ನುವಂತೆ ಏನನ್ನೋ ಸ್ಕ್ರೋಲ್ ಮಾಡುತ್ತಿದ್ದಾಳೆ, ಅವಳಿಗೆ ಕೇಳಿ ಯಾವ ಪ್ರಯೋಜನವೂ ಇಲ್ಲ. ಅಜ್ಜ ತನ್ನ ಕೋಣೆಯಲ್ಲಿ ಪುಸ್ತಕ ಓದುತ್ತ ತೂಕಡಿಸುತ್ತ ಕೂತಿರುತ್ತಾನೆ, ಅವನಿಗೇನು ಗೊತ್ತಿರುತ್ತದೆ ಟಾರ್ಚು ಎಲ್ಲಿದೆ ಎಂದು. ಕೇಳಿದರೆ ಅಪ್ಪನಿಗೇ ಕೇಳಬೇಕು. ರಾತ್ರಿ ವಾಕಿಂಗಿಗೆ ಅವರೇ ತಾನೆ ಟಾರ್ಚು ಹಿಡಿದುಕೊಂಡು ಹೋಗುವುದು?

ಅಪ್ಪ ಯಥಾಪ್ರಕಾರ ದೇವರ ಕೋಣೆಯಲ್ಲಿ ಕೂತು ದೇವರ ಪೂಜೆ ಮಾಡುತ್ತಿದ್ದರು. ಅವರ ಪೂಜೆ ಮುಗಿಯುವವರೆಗೂ ಅವರದು ಮೌನವೃತ ಇದ್ದಂತೆಯೇ. ಟಾರ್ಚು ಕೇಳುವಂತೆಯೇ ಇಲ್ಲ. ದೇವರ ಕೋಣೆಯ ಮುಂದೆ ಹಾಗೇ ನಿಂತ. ಪೂಜೆ ಮಾಡುತ್ತಿದ್ದರೂ ಓರೆಗಣ್ಣಿನಲ್ಲಿ ಮಗ ಬಂದಿದ್ದು ಗೊತ್ತಾಗಿ, ಎಂದೂ ತಾನು ದೇವರ ಪೂಜೆ ಮಾಡುವಾಗ ಬರದವ ಇವತ್ತು ಬಂದಿರುವುದನ್ನು ನೋಡಿ ಅಪ್ಪನಿಗೆ ಆಶ್ಚರ್ಯವಾಯಿತು. ದೇವರಿಗೆ ನಮಸ್ಕಾರ ಮಾಡು ಎಂದು ಕಣ್ಣಿಂದಲೇ ಸನ್ನೆ ಮಾಡಿದರು. ನಮಸ್ಕಾರ ಮಾಡಿದ.

 

ಅಪ್ಪನ ಪೂಜೆ ಮುಗಿಯುತ್ತಿರುವುದನ್ನು ಕಾಯುತ್ತಿರುವಾಗ ಹೆಂಡತಿಗೆ ಈ ವಿಚಿತ್ರ ಬಾಗಿಲು ಸಿಕ್ಕಿದ ಬಗ್ಗೆ ಮೆಸೇಜು ಕಳಿಸಿದ. ಕೂಡಲೇ ಹೆಂಡತಿಯ ಮೆಸೇಜು ಬಂತು. ಆ ಬಾಗಿಲನ ಬೀಗದ ಬಗ್ಗೆ, ಒಳಗಿರುವ ಕತ್ತಲಿನ ಬಗ್ಗೆ ಬರೆದು, ಟಾರ್ಚಿಗಾಗಿ ಕಾಯುತ್ತಿರುವುದಾಗಿ ಬರೆದ. ಹೆಂಡತಿ, “ಫೋನಿನಲ್ಲೇ ಟಾರ್ಚು ಇದೆಯಲ್ಲ?” ಎಂದು ಪೆದ್ದ ಮುಖದ ಇಮೋಜಿ ಬರೆದಳು. “ಆ ಟಾರ್ಚು ಯಾವುದಕ್ಕೂ ಸಾಲುವುದಿಲ್ಲ, ನಾನು ನೋಡಿಯಾಯಿತು” ಎಂದು ಬರೆದು ಗೆದ್ದ ಮುಖದ ಇಮೋಜಿಯನ್ನು ಸೇರಿಸಿದ.

“ನಾನು ಏನಾದರೂ ಕಾರಣ ಹೇಳಿ ಮನೆಗೆ ಬಂದು ಬಿಡುತ್ತೇನೆ, ಯಾವ ಕಾರಣಕ್ಕೂ ನಾನು ಬರುವವರೆಗೂ ಒಳಗೆ ಇಳಿಯಬೇಡ,” ಎಂದು ಬರೆದು ಅವಳೂ ಕೋಪದ ಚಿತ್ರದ ಇಮೋಜಿಯನ್ನು ಹಾಕಿದಳು.

ಅಷ್ಟರಲ್ಲಿ ಅಪ್ಪನ ಪೂಜೆ ಮುಗಿಯಿತು, “ಹುಂ, ಹೋಗಿ ನಿನ್ನ ಅಜ್ಜನನ್ನು ಕರೆ, ಪ್ರಾಸಾದ ಕೊಡಬೇಕು,” ಎಂದರು ಅಪ್ಪ.

ಅಜ್ಜನಿಗೆ ಕಿವಿ ಕೇಳುವುದಿಲ್ಲ. ದೇವರ ಕೋಣೆಯಿಂದ ಅಡುಗೆ ಮನೆಯನ್ನು ಹಾಯ್ದು, ಅಲ್ಲಿಂದ ಪಡಸಾಲೆಗೆ ಬಂದು, ಅಲ್ಲಿಂದ ದೊಡ್ಡೂಟದ ಕೋಣೆಯನ್ನು ಬಳಸಿ, ಉಗ್ರಾಣದ ಕೋಣೆ ದಾಟಿ ಅಜ್ಜನ ಕೋಣೆಗೆ ಹೋಗಬೇಕು, ಹೋದ

ಈ ಮನೆಯಲ್ಲಿ ನಡೆಯುವಾಗಲೆಲ್ಲ, ಇಂಥದೊಂದು ದೊಡ್ಡ ಮನೆ ತಮಗೆ ಬೇಕಾ? ಮನೆ ನೋಡಿದರೆ ಮಹಾನ್ ಶ್ರೀಮಂತರು ಅಂದುಕೊಳ್ಳುತ್ತಾರೆ, ಇಡೀ ಪಟ್ಟಣ ಹಾಗೇ ಅಂದುಕೊಂಡಿದೆ ಕೂಡ. ಇಲ್ಲಿ ನೋಡಿದರೆ ತಿಂಗಳು ತಿಂಗಳು ದುಡ್ಡು ಹೊಂದಿಸುವುದೇ ಕಷ್ಟವಾಗುತ್ತಿದೆ. ಹೆಂಡತಿಯೊಬ್ಬಳ ಸಂಪಾದನೆಯಲ್ಲಿ ಇಷ್ಟು ಜನರ ಹೊಟ್ಟೆ ತುಂಬಬೇಕು, ತನಗೂ ಕೆಲಸವಿಲ್ಲ, ಎಂದು ತನ್ನನ್ನೇ ಬಯ್ದುಕೊಂಡ.

ನಾಕಾರು ಕಾಯಿಲೆಗಳಿರುವ ಅಜ್ಜ, ಬಿಪಿ ಡಯಾಬಿಟೀಸಿನ ಜೊತೆ ರೆಟೈರಾದ ಅಪ್ಪ (ಪಿಂಚಣಿ ಇಲ್ಲ), ಕೆಲಸವಿಲ್ಲದೇ ಮನೆಯಲ್ಲೇ ಬಿದ್ದಿರುವ ತನಗಿಂತ ಹತ್ತು ವರ್ಷ ಚಿಕ್ಕ ವಯಸ್ಸಿನ ತಂಗಿ (ಆಕೆಯ ಪ್ರಿಯತಮ ಕೈಕೊಟ್ಟ ಮೇಲೆ, ಒಳ್ಳೆಯ ಕೆಲಸ ಇರುವ ಯಾವ ಗಂಡಾದರೂ ಮದುವೆಯಾಗುತ್ತೇನೆ ಎಂದು ಅಣ್ಣನ ಹತ್ತಿರ ಹೇಳಿದ್ದಾಳೆ, ಅವನ ಹೊರತಾಗಿ ಅವಳಿಗೆ ಪ್ರಿಯಕರನೊಬ್ಬನಿದ್ದ ಎಂದು ಯಾರಿಗೂ ಗೊತ್ತಿಲ್ಲ), ಹಗಲು ರಾತ್ರಿ ಅಡುಗೆ ಮನೆಯಲ್ಲೇ ಕಾಲ ಕಳೆವ ತಾಯಿ, ಬೆಳಿಗ್ಗೆ ಐದು ಗಂಟೆಗೆ ಎದ್ದು ತಾನಾಯಿತು ಇನ್ನೂ ಯಾರೂ ಏಳುವ ಮೊದಲೇ ಕೆಲಸಕ್ಕೆ ಹೋಗಿ (ಹೋಗುವ ಮೊದಲು ತನ್ನನ್ನು ಏಳಿಸಿ) ರಾತ್ರಿ ಎಂಟು ಗಂಟೆಗೆ ಮನೆಗೆ ಬಂದು, ಮಲಗುವವರೆಗೆ ಮಗಳ ಜೊತೆ ಕಾಲ ಕಳೆಯುವ ಹೆಂಡತಿ, ಮನೆಯಲ್ಲಿ ತನ್ನ ಮತ್ತು ತನ್ನ ಅಮ್ಮನ ಹೊರತಾಗಿ ಇನ್ನಾರ ಜೊತೆಯೂ ಮಾತಾಡದ ತನ್ನ ಎಂಟು ವರ್ಷದ ಮಗಳು (ಅವಳಿಗೆ ಕನ್ನಡದಲ್ಲಿ ಮಾತಾಡುವುದೆಂದರೆ ಮುಜುಗರವಂತೆ). ಇಷ್ಟು ಜನರಿಗೆ ಇಂಥ ದೊಡ್ಡ ಮನೆ. ಅಜ್ಜನ ಅಜ್ಜನ ಅಜ್ಜನೋ ಇನ್ನಾರೋ ಕಟ್ಟಿಸಿದ್ದಂತೆ, ಮಹಾಮನೆಯಂತೆ!

ದೇವರ ಮನೆಯಿಂದ ಅಜ್ಜನ ಕೋಣೆಗೆ ಹೋಗುವಷ್ಟರಲ್ಲಿ ಮನೆಯ ಮೇಲೆ, ಮನೆಯಲ್ಲಿ ಇರುವ ಎಲ್ಲರ ಮೇಲೆ ವಿಪರೀತ ಸಿಟ್ಟು ಬಂದು ಬಿಟ್ಟಿತ್ತು. ಅಜ್ಜನ ಕೋಣೆಗೆ ಹೋಗಿ ಅಜ್ಜನನ್ನು ಕರೆದ. ಅಜ್ಜನ ಜೊತೆ ತಾನೂ ದೇವರಕೋಣೆಗೆ ಬಂದ. ಅಪ್ಪ ಕೊಟ್ಟ ಪ್ರಸಾದ ತೆಗೆದುಕೊಂಡ.

“ಅಪ್ಪಾ, ಟಾರ್ಚು ಎಲ್ಲಿಟ್ಟೀದಿಯಾ?” ಎಂದ.

“ಅಲ್ಲೇ ಮಾಮೂಲಿ ಜಾಗದಲ್ಲಿ ಇಲ್ಲವಾ?” ಎಂದರು.

“ಇಲ್ಲ, ಇದ್ದಿದ್ದರೆ ಕೇಳುತ್ತಿದ್ದೆನಾ?,” ಎಂದ ಖಾರವಾಗಿ. “ಇಂಥಾ ಬೆಳಗಿನ ಬೆಳಕು ಇರುವಾಗ ಟಾರ್ಚು ಏಕೆ?” ಎಂದರು ಅಪ್ಪ ಇನ್ನೂ ಖಾರವಾಗಿ.

“ನಿಮಗದೆಲ್ಲಾ ಯಾಕೆ? ಎಲ್ಲಿಟ್ಟಿದ್ದೀರಾ ಹೇಳಿ, ಅಷ್ಟು ಸಾಕು,” ಎಂದ. ನಿಧಾನವಾಗಿ ಕೋಪ ಮೇಲೇರುತ್ತಿತ್ತು. ಅಪ್ಪನಿಗೆ ಇನ್ನೂ ರೇಗಿತು, “ನಿನಗೆ ಏಕೆ ಬೇಕು ಎಂದು ಹೇಳುವವರೆಗೂ ನಾನು ಕೊಡುವುದಿಲ್ಲ,” ಎಂದು ಧ್ವನಿ ಜೋರು ಮಾಡಿದರು.

ಇಷ್ಟೆಲ್ಲಾ ನಡೆಯುತ್ತಿದ್ದರೂ ಕಿವಿ ಸರಿಯಾಗಿ ಕೇಳಿಸದ ಅಜ್ಜ ತನಗೂ ಇವರಿಬ್ಬರ ಜಗಳಕ್ಕೂ ಏನೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ಆರಾಮವಾಗಿ ಪ್ರಸಾದ ತಿನ್ನುತ್ತಿದ್ದರು.

ಇವರಿಬ್ಬರ ಜೋರು ಜೋರು ಮಾತು ಕೇಳಿ, ಇದು ವಾರಕ್ಕೊಮ್ಮೆಯಾದರೂ ನಡೆಯುವ ಮಾಮೂಲು ಎಂದು ಗೊತ್ತಿದ್ದರೂ, ಅಭ್ಯಾಸಬಲದಂತೆ ಆಡುಗೆಮನೆಯಿಂದ ಅಮ್ಮ ದೇವರಕೋಣೆಗೆ ಕೈಯಲ್ಲಿ ಸೌಟು ಹಿಡಿದುಕೊಂಡೇ ಬಂದರು.

“ಪಡಸಾಲೆಯ ಜಗಳ ಈಗ ದೇವರ ಮನೆಗೂ ಬಂತಾ?” ಎಂದು ಇಬ್ಬರಿಗೂ ಬಯ್ದರು. “ಇಲ್ಲಮ್ಮ, ಟಾರ್ಚು ಕೇಳಿದರೆ ಅಪ್ಪ ನೂರೆಂಟು ಮಾತಾಡುತ್ತಾರೆ,” ಎಂದು ಅಪ್ಪನ ಬಗ್ಗೆ ಚಾಡಿ ಬಿಟ್ಟ. “ಟಾರ್ಚು ಏಕೆ ಬೇಕು ಎನ್ನುವ ಸಣ್ಣ ಪ್ರಶ್ನೆ ಕೇಳಲೂ ನನಗೆ ಹಕ್ಕಿಲ್ಲವೇ?” ಎಂದು ಅಪ್ಪ ಅವಲತ್ತುಕೊಂಡರು.

“ಆವಾಗಿನಿಂದ ಟಾರ್ಚು ಟಾರ್ಚು ಎನ್ನುತ್ತಿದ್ದೀಯ! ಯಾಕೆ ಬೇಕು ಎಂದು ಹೇಳಿದರೆ ನಿನ್ನ ಗಂಟೇನು ಹೋಗುವುದಿಲ್ಲವಲ್ಲ!” ಎಂದು ಅಮ್ಮ ಅಪ್ಪನ ಪಕ್ಷ ಸೇರಿದರು. ಇವರೆಲ್ಲರ ಮಾತು ಹೆಡ್-ಫೋನ್ ಹಾಕಿಕೊಂಡಿದ್ದರೂ ಅದರೊಳಗಿಂದ ತೂರಿ ತಂಗಿಗೂ ಕೇಳಿಸಿತು. ಅವಳೂ ದೇವರಕೋಣೆಗೆ ಬಂದಳು.

ವಿಧಿಯಿಲ್ಲದೇ ಹಿತ್ತಲಲ್ಲಿ ನೆಲಕ್ಕೆ ಅಂಟಿಕೊಂಡ ಬಾಗಿಲಿನ ಬಗ್ಗೆ ಹೇಳಿದ, ಅದಕ್ಕಿದ್ದ ಬೀಗದ ಬಗ್ಗೆ ಹೇಳಿದ. ಅದನು ತೆರೆದರೆ ಸುರಂಗದ ತರಹ ಇರುವುದಾಗಿ ಹೇಳಿದ. ಆದರೆ ಗವ್ವೆನ್ನುವ ಕತ್ತಲಿರುವುದರಿಂದ ಏನೂ ಕಾಣುತ್ತಿಲ್ಲವೆಂದೂ, ಅದಕ್ಕೇ ಟಾರ್ಚು ಬೇಕೆಂದೂ ಹೇಳಿದ. ಇದ್ದಕ್ಕಿದ್ದಂತೆ ಮನೆಯ ವಾತಾವರಣವೇ ಬದಲಾಯಿತು. ಎಲ್ಲರ ಮುಖದಲ್ಲೂ ಕುತೂಹಲ ಮತ್ತು ಆಶ್ಚರ್ಯ.

ಅಜ್ಜ ಪಿಳಿಪಿಳಿ ಕಣ್ಣು ಬಿಟ್ಟು, “ಏನಾಯಿತು, ಯಾಕೆ ಎಲ್ಲರೂ ಒಟ್ಟಿಗೆ ಸೇರಿದ್ದೀರಿ?” ಎಂದರು.

ಅಜ್ಜನ ಕಿವಿಯಲ್ಲಿ ಜೋರಾಗಿ ಸುರಂಗಮಾರ್ಗದ ಬಗ್ಗೆ ಹೇಳಿದ. ಅಜ್ಜ, “ಕೊನೆಗೂ ನಿನಗೆ ಸಿಕ್ಕಿಬಿಟ್ಟಿತಾ! ನನ್ನ ತಾತ ಹೇಳಿದಂತೆ ನನ್ನ ಮೊಮ್ಮಗನಿಗೆ ಇದು ಸಿಕ್ಕೇಬಿಟ್ಟಿತು” ಎಂದು ಬಾಂಬು ಸಿಡಿಸಿದರು. “ಅಂದರೆ, ಏನು ಹಾಗೆಂದರೆ?” ಎಂದು ಎಲ್ಲರೂ ಆಶ್ಚರ್ಯ ಚಕಿತರಾದರು.”ಅದು ಹಾಗೆ ಅಂದರೆ ಹಾಗೇ.”

“ಮತ್ತೆ ಒಂದೇ ಒಂದು ದಿನವೂ ಅದರ ಬಗ್ಗೆ ಹೇಳಿದ್ದನ್ನು ಕೇಳಿಲ್ಲ,” ಎಂದು ಅಪ್ಪ ಕೇಳಿದರು.”ಆಯ್ತಪ್ಪಾ, ಇವತ್ತು ಹೇಳ್ತೀನಿ ಕೇಳಿ. ಅದಕ್ಕಿಂತ ಮೊದಲು ಎಲ್ಲರೂ ಪಡಸಾಲೆಗೆ ಬನ್ನಿ. ಅಲ್ಲಿ ಕೂತು ಕಾಫಿ ಕುಡಿಯುತ್ತ ಆ ಸುರಂಗಮಾರ್ಗದ ಬಗ್ಗೆ ಹೇಳುತ್ತೇನೆ,” ಎಂದರು.

ಎಲ್ಲರೂ ಪಡಸಾಲೆಗೆ ಬಂದು ಕೂತರು. ಆದರೆ ಇವನಿಗೆ ಅಜ್ಜನ ಉಪದ್ಯಾಪಿ ಕತೆಗಳನ್ನು ಕೇಳುವ ತಾಳ್ಮೆ ಇರಲಿಲ್ಲ. ಅದಷ್ಟು ಬೇಗ ಆ ಸುರಂಗದಲ್ಲಿ ಏನಿದೆ ನೋಡಬೇಕು ಎನಿಸಿತ್ತು.

ಅಷ್ಟರಲ್ಲಿ ಯಾರೋ ಬಾಗಿಲು ಬಡಿದಂತಾಯಿತು. ಇವನೇ ಎದ್ದು ಹೋಗಿ ಬಾಗಿಲು ತೆರೆದ. ನೋಡಿದರೆ ಸರಿ ಸುಮಾರು ಇಪ್ಪತ್ತರ ಆಸುಪಾಸಿನ ಗಂಡಸು, ತನಗಿಂತ ಒಂದು ಹತ್ತು ವರ್ಷ ಚಿಕ್ಕವನಿರಬಹುದು.

“ಯಾರು ಬೇಕಾಗಿತ್ತು?” ಎಂದ. “ನೀವೇ ಬೇಕಾಗಿತ್ತು,” ಎಂದನವ.

“ತಾವು ಯಾರು ಗೊತ್ತಾಗಲಿಲ್ಲವಲ್ಲ?” ಎಂದ. “ನಾನು ನಿಮ್ಮ ಚಿಕ್ಕಪ್ಪನ ಮಗ!” ಎಂದನವ.

ಒಬ್ಬ ಚಿಕ್ಕಪ್ಪ ಇರುವುದೇ ಮರೆತು ಹೋಗಿತ್ತು. ಚಿಕ್ಕಪ್ಪ ಓದಿನಲ್ಲಿ ಅಷ್ಟಕ್ಕಷ್ಟೇ. ಯಾವಾಗಲೂ ಕತೆ, ಕಾದಂಬರಿ, ಸಿನೆಮಾ ಮತ್ತು ನಾಟಕ. ಹೆಸರಿಗೆ ಬಿಕಾಂ ಸೇರಿದ್ದರೂ ಸಮಯವೆಲ್ಲ ನಾಟಕ ಮಾಡುವುದರಲ್ಲೋ ಮಾಡಿಸುವುದರಲ್ಲೋ ಹೋಗುತ್ತಿತ್ತು. ಕೆಲವು ಸಲ ಕಂಪನಿ ನಾಟಕದವರ ಜೊತೆ ತಿಂಗಳುಗಟ್ಟಲೇ ಹೋಗಿ ಮತ್ತೆ ಯಾವಾಗಲೋ ಮನೆಗೆ ಬರುತ್ತಿದ್ದ. ಒಂದು ಸಲ ಬರುವಾಗ ಕಂಪನಿ ನಾಟಕದ ಹೆಣ್ಣನ್ನು ಮನೆಗೆ ಕರೆತಂದಿದ್ದ. ತನಗಿನ್ನೂ ಆಗ ಎಂಟೋ ಒಂಬತ್ತೋ ವಯಸ್ಸು. ಅವತ್ತು ಆ ಹೆಂಗಸಿನ ಮುಂದೆಯೇ ಅಪ್ಪ ಅಮ್ಮ ಸೇರಿ ಚಿಕ್ಕಪ್ಪನಿಗೆ ಎಗ್ಗಾಮುಗ್ಗಾ ಉಗಿದರು. ಅಜ್ಜ ಸಾಕಷ್ಟು ಹೆಣಗಾಡಿದ ಅಪ್ಪನನ್ನು ಸಮಾಧಾನ ಮಾಡಲು. ಅಪ್ಪನಿಗಿಂತ ಅಮ್ಮ ಕೆಂಡಾಮಂಡಲ ಸಿಟ್ಟಾಗಿದ್ದರು. ಚಿಕ್ಕಪ್ಪ ಆ ಹೆಂಗಸನ್ನು ಕರೆದುಕೊಂಡು ಹೊರಟೇಬಿಟ್ಟ. ಹೋಗುವಾಗ, “ಇನ್ನೆಂದೂ ಈ ಮನೆಗೆ ಕಾಲಿಡುವುದಿಲ್ಲ,” ಎಂದು ಶಪಥ ಹಾಕಿ ಹೋದ.

ಹತ್ತಿರದ ಊರಿನಲ್ಲೇ ಬಿಡಾರ ಬಿಟ್ಟಿದ್ದರಿಂದ ಆಗಾಗ ಚಿಕ್ಕಪ್ಪನ ಸುದ್ದಿ ಮನೆಯನ್ನು ತಲುಪುತ್ತಿತ್ತು. ಚಿಕ್ಕಪ್ಪ ನಾಟಕ ಕಂಪನಿಯ ಹೆಂಗಸನ್ನು ಮದುವೆಯಾಗಿದ್ದಾನೆ ಎಂದು ಕೆಲವರು, ಮದುವೆಯಾಗಿಲ್ಲದಿದ್ದರೂ ಮದುವೆಯಾದವರಂತೆ ಒಂದೇ ಮನೆಯಲ್ಲಿ ಇದ್ದಾರೆ ಎಂದು ಕೆಲವರೂ ಮಾತಾಡಿಕೊಳ್ಳುತ್ತಿದ್ದರು. ಅದಾಗಿ ಸ್ವಲ್ಪ ತಿಂಗಳುಗಳ ನಂತರ ಚಿಕ್ಕಪ್ಪ ಊರು ಬಿಟ್ಟು ಇನ್ನೆಲ್ಲೋ ಹೋದ ಮೇಲೆ ಚಿಕ್ಕಪ್ಪನ ಬಗ್ಗೆ ಮಾತು ಕಡಿಮೆಯಾಯಿತು.

ಅದಾದ ಮೇಲೆ ಚಿಕ್ಕಪ್ಪನನ್ನು ಮನೆಯಲ್ಲಿ ಹೆಚ್ಚು ಕಡೀಮೆ ಎಲ್ಲರೂ ಮರೆತೇ ಬಿಟ್ಟಂತಿತ್ತು. ಅಷ್ಟೆಲ್ಲ ವರ್ಷಗಳಾದ ಮೇಲೆ `ಚಿಕ್ಕಪ್ಪ` ಎನ್ನುವ ಹೆಸರು ಮತ್ತೆ ಮೂಡಿದ್ದು ಇವತ್ತೇ.  ಚಿಕ್ಕಪ್ಪನ ಮುಖವೇ ಮರೆತುಹೋಗಿತ್ತು, ಇನ್ನು ಚಿಕ್ಕಪ್ಪನ ಮಗನನ್ನ್ನು ಗುರುತಿಸುವುದಾದರೂ ಹೇಗೆ?

ಚಿಕ್ಕಪ್ಪನ ಮಗ ಇದ್ದರೂ ಇರಬಹುದು ಎಂದುಕೊಂಡು ಮನೆಯೊಳಗೆ ಕರೆದ. ಒಳ ಬಂದವನೇ ಎಲ್ಲರೂ ತನಗೆ ಚಿರಪರಿಚಿತರು ಎನ್ನುವಂತೆ ಅಜ್ಜನ ಕಾಲಿಗೆ ಬಿದ್ದ, ಅಪ್ಪ ಅಮ್ಮನ ಕಾಲಿಗೆ ನಮಸ್ಕರಿಸಿದ, ತಂಗಿಗೆ ತಲೆ ಸವರಿದ, ತನ್ನನ್ನು ಕರಡಿಯಂತೆ ತಬ್ಬಿಕೊಂಡ. ಅಪ್ಪ ಅಮ್ಮ ಗಂಟು ಮುಖ ಹಾಕಿ ಕೂತರು. ಅಜ್ಜನೇ ಚಿಕ್ಕಪ್ಪನ ಬಗ್ಗೆ ವಿಚಾರಿಸಿದ. ಚಿಕ್ಕಪ್ಪ ಊರು ಬಿಟ್ಟು ನಾಕಾರು ವರ್ಷ ಉತ್ತರ ಭಾರತ, ಬಿಹಾರ ಅ೦ತೆಲ್ಲ ಅಲೆದು ಕೊನೆಗೆ ಮುಂಬೈಗೆ ಬಂದನಂತೆ, ಅಲ್ಲಿ ಸಿನೆಮಾಗೆ, ಟಿವಿಗೆ, ಡೈಲಾಗ್ ಬರೆಯಲು, ಚಿತ್ರಕತೆಗೆ ಸಹಾಯ ಮಾಡುತ್ತ ಇದ್ದನಂತೆ, ತಾಯಿ ಮುಂಬೈಗೆ ಬಂದ ಒಂದೆರೆಡು ವರ್ಷದಲ್ಲಿ ಅಪ್ಪನನ್ನು ಬಿಟ್ಟು ಅಲ್ಲಿಯ ನಿರ್ಮಪಕನೊಬ್ಬನ ಹಿಂದೆ ಹೋದಳಂತೆ. ಇವನು ಅಪ್ಪನ ಜೊತೆ ಮುಂಬೈನಲ್ಲೇ ಬೆಳೆದನಂತೆ. ಮುಂದೆ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಮತ್ತು ಪುಣೆಯ ಫಿಲಂ ಕಾಲೇಜಿನಲ್ಲ ತರಬೇತಿ ಪಡದಿದ್ದಾನಂತೆ. ಚಿಕ್ಕಪ್ಪ ಹೆಂಡತಿ ಬಿಟ್ಟ ಮೇಲೆ ಒಬ್ಬ ಸಹನಿರ್ದೇಶಕಿಯೊಂದಿಗೆ ಲಿವ್-ಇನ್ ಮಾಡುತ್ತಿದ್ದನಂತೆ. ಸಿಕ್ಕಾಪಟ್ಟೆ ಸೇದುತ್ತಿದ್ದುದರಿಂದ ಶ್ವಾಸಕೋಶದ ಕ್ಯಾನ್ಸರಾಗಿ ಹೋದರೆಂದು ಹೇಳಿದ.

ಅಪ್ಪ ಗಂಭೀರವಾಗಿ, “ಈಗೇನು ಬಂದಿದ್ದು?” ಎನ್ನುವಂತೆ ಅವನನ್ನು ನೋಡುತ್ತಲೇ ಇದ್ದರು. ಇರುವ ಇಂಥ ದೊಡ್ಡ ಮನೆಯ ಆಸ್ತಿಯ ಮೇಲೆ ಕಣ್ಣಿಟ್ಟೇ ಬಂದಿದ್ದಾನೆ ಎನ್ನುವುದು ಅಪ್ಪನಿಗೆ ಖಾತ್ರಿಯಿತ್ತು.

ಅದನ್ನು ಅರಿತವನಂತೆ ಚಿಕ್ಕಪ್ಪನ ಮಗ, “ಇಷ್ಟು ವರುಷ ಬಿಟ್ಟು ಈಗ ಬಂದಿರುವ ಕಾರಣವೇನೆಂದರೆ, ಈ ಮನೆ, ಅರಮನೆಯಂಥ ದೊಡ್ಡದಾದ ಪುರಾತನ ಮನೆಯ ಬಗ್ಗೆ ಅಪ್ಪ ಆಗಾಗ ಹೇಳುತ್ತಿದ್ದರು. ಆವಾಗಿನಿಂದಲೂ ನನಗೆ ಈ ಮನೆಯದೇ ಕನಸು. ಈ ಮನೆಯನ್ನು ನೋಡಬೇಕು ಎನ್ನುವ ಏಕೈಕ ಉದ್ದೇಶದಿಂದ ಬಂದಿದ್ದೇನೆ,” ಎಂದು ಎದ್ದವನೇ, “ನನಗೆ ಮನೆಯನ್ನು ಪೂರ್ತಿ ನೋಡಬೇಕು,” ಎಂದ.

ತಂಗಿ ಎದ್ದು, “ನಾನು ತೋರಿಸುತ್ತೇನೆ,” ಎಂದು ಉತ್ಸಾಹದಿಂದ ಅವನನ್ನು ಕರೆದುಕೊಂಡು ಹೋದಳು.

ಅಪ್ಪ ಅವನು ಅತ್ತ ಹೋಗುತ್ತಿದ್ದಂತೇ, “ಇನ್ನು ಇದೊಂದು ಬಾಕಿ ಇತ್ತು. ‘ಈ ಮನೆಯನ್ನು ಮಾರಿ, ನನ್ನ ಅಪ್ಪನ ಪಾಲಿನ ದುಡ್ಡನ್ನು ನನಗೆ ಕೊಡಿ’ ಎಂದು ಕೇಳಲು ಬಂದಿದ್ದಾನೆ್ ಅನಿಸುತ್ತೆ” ಎಂದ. “ಅನಿಸುವುದೇನು, ಅದಕ್ಕೇ ಬಂದಿದ್ದಾನೆ,” ಎಂದು ಪೇಚಾಡಿದಳು ಅಮ್ಮ.

ಮನೆಯನ್ನೆಲ್ಲ ನೋಡಿಕೊಂಡು ಬಂದ ಮೇಲೆ, “ನಾನು ಒಂದು ಸಿನೆಮಾಕ್ಕೆ ಚಿತ್ರಕತೆಯನ್ನು ತಯಾರು ಮಾಡಿಯಾಗಿದೆ, ಫೈನನ್ಸಿಯರ್ ಕೂಡ ಒಪ್ಪಿದ್ದಾರೆ. ಆ ಸಿನೆಮಾಕ್ಕೆ ಒಂದು ಹಳೆಯ ಕಾಲದ ದೊಡ್ಡ ಮನೆಯೇ ಮುಖ್ಯಪಾತ್ರ. ನನ್ನ ಸಿನಮಾಕ್ಕೆ ಹೇಳಿ ಮಾಡಿಸಿದಂತಿದೆ ಈ ಮನೆ. ಎಲ್ಲ ಸೇರಿ ಎರಡು ಮೂರು ತಿಂಗಳ ಚಿತ್ರೀಕರಣ, ಸಾಕಷ್ಟು ದುಡ್ಡನ್ನು ನಿಮಗೆ ಬಾಡಿಗೆಯಾಗಿ ಕೊಡುತ್ತೇವೆ,” ಎಂದ.

ಅಪ್ಪನಿಗೆ ಸ್ವಲ್ಪ ಸಮಾಧಾನವಾಯಿತು, “ನೋಡೋಣ,” ಎಂದರು.ಅಮ್ಮನಿಗೂ ಸ್ವಲ್ಪ ನೆಮ್ಮದಿ ಅನಿಸಿ ಕಾಫಿಯನ್ನು ತಂದುಕೊಟ್ಟರು.

ಇಷ್ಟೆಲ್ಲ ಮಾತು ಮುಗಿದ ಮೇಲೆ ಅಜ್ಜ, “ಸರಿಯಾದ ಸಮಯಕ್ಕೇ ಬಂದಿದ್ದೀಯ. ಅದರಲ್ಲೂ ನೀನು ಸಿನೆಮಾ ನಾಟಕ ಎಲ್ಲ ಕಲಿತಿದ್ದೀಯ ಎಂದರೆ ನಿನಗೆ ಕತೆ ಕೇಳಲು ತುಂಬಾ ಆಸಕ್ತಿ ಇರಬೇಕಲ್ಲವೇ? ಅಷ್ಟೇ ಅಲ್ಲ, ನೀನೂ ಈ ಮನೆಯ ಮಗನೇ ಅಲ್ಲವೇ? ಯಾರಿಗೂ ಹೇಳದ ಕತೆಯನ್ನು ನಾನು ಹೇಳಲು ಶುರು ಮಾಡಿವವನಿದ್ದೆ, ಸರಿಯಾದ ಸಮಯಕ್ಕೆ ಆ ದೇವರೇ ಕಳಿಸಿಕೊಟ್ಟಂತೆ ಬಂದಿದ್ದೀಯ,” ಎಂದು ಕತೆಯನ್ನು ಆರ೦ಭಿಸಿದರು.

ಒಂದಾನೊಂದು ಕಾಲದಲ್ಲಿ ಒಂದು ಸುಭಿಕ್ಷವಾದ ರಾಜ್ಯವಿತ್ತು. ಅಂಥ ರಾಜ್ಯದಲ್ಲಿ ಒಂದು ಪಟ್ಟಣ, ಆ ಪಟ್ಟಣದಲ್ಲೊಂದು ದೊಡ್ಡ ಮನೆ. ಸುತ್ತಲಿನ ಹತ್ತು ಊರುಗಳಲ್ಲಿ ಅಂಥ ಭವ್ಯವಾದ ಮನೆ ಇರಲಿಲ್ಲ. ಆ ಮನೆಯ ಜನರು ಅಗರ್ಭ ಶ್ರೀಮಂತರು. ಬರೀ ಶ್ರೀಮಂತರಷ್ಟೇ ಆಗಿರಲಿಲ್ಲ, ಸದ್ಗುಣಿಗಳೂ ನ್ಯಾಯವಂತರೂ ದಾನವಂತರೂ ಮತ್ತು ಮಹಾರಾಜರಿಗೆ ಬೇಕಾದವರೂ ಆಗಿದ್ದರು. ಅವರ ಮನೆಯಲ್ಲಿ ಊಟ ಬೆಳ್ಳಿ ತಟ್ಟೆಯಲ್ಲಿ ಆಗಬೇಕು. ಚಿಕ್ಕ ಮಕ್ಕಳಿಗೆ ಕಾಲಿಗೆ ಬೆಳ್ಳಿಯ ಗೆಜ್ಜೆಯಲ್ಲ, ಬಂಗಾರದ ಗೆಜ್ಜೆ ಕಟ್ಟುತ್ತಿದ್ದರು.

ಅದೇ ಕಾಲಕ್ಕೆ ಈ  ರಾಜ್ಯದ ಮೇಲೆ ಪಕ್ಕದ ರಾಜ್ಯದಿಂದ ಮಹಾಸಂಗ್ರಾಮವಾಗಿ ಸದ್ಗುಣಿಯಾದ ಮಹಾರಾಜನು ತನ್ನ ಆಪ್ತರೊಡನೆ ಪಲಾಯನ ಮಾಡಿದನು. ಪಕ್ಕದ ರಾಜ್ಯದ ದುರ್ಗುಣಿಯಾದ ರಾಜನು ಈ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡನು. ಈ ದುರ್ಗುಣಿರಾಜನು ರಾಜ್ಯ ಬೊಕ್ಕಸವನ್ನು ಖಾಲಿ ಮಾಡಿ ತನ್ನ ರಾಜ್ಯಕ್ಕೆ ಕೊಂಡೊಯ್ದನು. ಜನರ ಮೇಲೆ ಅಸಾಧ್ಯ ತೆರಿಗೆಯನ್ನು ಹೇರಿದನು. ಸಾಲದ್ದಕ್ಕೆ ರಾಜ್ಯದ ಎಲ್ಲ ಶ್ರೀಮಂತರ ಮನೆ ಲೂಟಿ ಮಾಡಲು ತನ್ನ ಸೈನಿಕರಿಗೆ ಆದೇಶ ನೀಡಿದನು.

ದುರ್ಗುಣಿರಾಜನ ಕಡೆಯವರು ಮನೆಯನ್ನು ಶೋಧಿಸಲು ಬರುತ್ತಾರೆ, ಏನಾದರೂ ಕುಂಟು ಕಾರಣ ಹೇಳಿ, ಯಾವುದೋ ಕಾಗದ ಪತ್ರ ತೋರಿಸಿ, ಮನೆಯನ್ನು ದೋಚಿಕೊಂಡು ಹೋಗುತ್ತಾರೆ ಎನ್ನುವ ಸುದ್ದಿ ಈ ದೊಡ್ಡಮನೆಗೆ ತಲುಪಿತು.

ಮನೆಯ ಯಜಮಾನರು ಪುರೋಹಿತರನ್ನು ಕರೆಸಿದರು. ಪುರೋಹಿತರ ಆಣತಿಯಂತೆ ಅಮಾವಾಸ್ಯೆಯ ರಾತ್ರಿ,  ಮನೆಯವರ ಹೊರತಾಗಿ ಯಾರಿಗೂ ಗೊತ್ತಾಗದಂತೆ ಪುರೋಹಿತರು ತೋರಿಸಿದ ಜಾಗದಲ್ಲಿ (ಆಳುಗಳನ್ನೆಲ್ಲ ರಜೆ ಕೊಟ್ಟು ಕಳಿಸಿದ್ದರು) ಮನೆಯ ಹಿತ್ತಲಿನಲ್ಲಿ ಸುರಂಗವನ್ನು ತೋಡಲು ಶುರುಮಾಡಿದರು. ಹದಿನೈದು ದಿನಗಳಲ್ಲಿ ಸುರಂಗವೊಂದು ತಯಾರಾಯಿತು.  ಪುರೋಹಿತರು ಸ್ಮಶಾನದ ಭಸ್ಮವನ್ನು ತಂದು ಶಿವನ ಹೆಸರಿನಲ್ಲಿ ಹೋಮವನ್ನು ಮಾಡಿ ಕಾಳಿಂಗಸರ್ಪವನ್ನು ಆಹ್ವಾನ ಮಾಡಿದರು. ಪುರೋಹಿತರ ಆದೇಶದಂತೆ ಕಾಳಿಂಗಸರ್ಪವೊಂದು ಸುರಂಗದ ಕಾವಲಿಗೆ ಸುರಂಗದ ಒಳಗೆ ಸೇರಿತು. ಭದ್ರವಾಗಿ ಸುರಂಗದ ಆಳಗಳಲ್ಲಿ ಎಲ್ಲ  ಸಂಪತ್ತನ್ನು ಅಡಗಿಸಿಟ್ಟು ಸುರಂಗಕ್ಕೊಂದು ಬಾಗಿಲು ಮುಚ್ಚಿ, ಚಿಲಕವನ್ನು ಹಾಕಿ, ಅದಕ್ಕೊಂದು ದೊಡ್ಡ ಬೀಗ ಹಾಕಿ, ಕಲ್ಲು ಮಣ್ಣುಗಳಿಂದ ಮುಚ್ಚಿದರು. ಬೀಗದ ಕೈಯನ್ನು ಮನೆಯ ಯಜಮಾನನಿಗೆ ಕೊಟ್ಟರು (ಅದರ ಒಂದು ನಕಲು ಬೀಗದ ಕೈಯನ್ನು ಗುಪ್ತವಾಗಿ ತಮ್ಮಲ್ಲಿಯೇ ಇಟ್ಟುಕೊಂಡಿದ್ದರು, ಪುರೋಹಿತರು).

ಕಾಳಿಂಗನ ಅನುಮತಿ ಇಲ್ಲದೇ ಆ ಸುರಂಗ ಮಾರ್ಗದಲ್ಲಿ ಯಾರಿಗೂ ಪ್ರವೇಶವಿಲ್ಲ ಎಂದು ಪುರೋಹಿತರು ಸಾರಿದರು. ಕಾಳಿಂಗನ ಅನುಮತಿ ಬೇಕಿದ್ದರೆ ಮಧ್ಯರಾತ್ರಿಯ ಪ್ರಹರದಲ್ಲಿ ಕಾಳಿಂಗಾಷ್ಟಕ ಮಂತ್ರ ಹೇಳಿದ ನಂತರವೇ ಸುರಂಗದ ಬಾಗಿಲನ್ನು ತೆರೆಯಬೇಕು ಎಂದು ಪುರೋಹಿತರು ಎಲ್ಲರಿಗೂ ಎಚ್ಚರಿಕೆ ಕೊಟ್ಟರು. ಕಾಳಿಂಗಾಷ್ಟಕವನ್ನು ಮನೆಯ ಯಜಮಾನನಿಗಲ್ಲದೇ ಇನ್ನಾರಿಗೂ ಗೊತ್ತಿರಕೂಡದು (ತಾನು ಸಾಯುವ ಕಾಲದಲ್ಲಿ ಆ ಮಂತ್ರವನ್ನು ತನ್ನ ಮಗನಿಗೆ ಹೇಳಬೇಕು) ಎಂದು ಕಾಳಿಂಗಾಷ್ಟಕವನ್ನು ಬರೆದಿರುವ ತಾಳೆಗರಿಯನ್ನು ಮನೆಯ ಯಜಮಾನನಿಗೆ ಕೊಟ್ಟು, `ಈ ಕಾಳಿಂಗಾಷ್ಟಕದ ಒಂದೇ ಪ್ರತಿ. ಇದನ್ನು ಇನ್ನೊಂದು ಪ್ರತಿ ಬರೆದರೆ, ಈ ಮಂತ್ರವು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ, ಈ ಮಂತ್ರ ನಿಮ್ಮ ಹೊರತಾಗಿ ಯಾರಿಗೂ ಗೊತ್ತಿರಕೂಡದು, ನನಗೂ ಕೂಡ ಗೊತ್ತಿರಕೂಡದು` ಎಂದರು.

ರಾಜಭಟರು ರಾಜ್ಯದ ವಿವಿಧ ನಗರಗಳಲ್ಲಿ ಪಟ್ಟಣಗಳಲ್ಲಿ ಶ್ರೀಮಂತರ ಮನೆಗಳನ್ನು ದೋಚುತ್ತಿದ್ದರು.  ಈ ದೊಡ್ಡ ಮನೆಗೂ ನುಗ್ಗಿದರು. ಮನೆಯನ್ನು ಶೋಧಿಸಿದರು, ಜಾಲಾಡಿಸಿದರು. ಒಂದೇ ಒಂದು ಗುಂಜಿ ಬಂಗಾರ ಸಿಗಲಿಲ್ಲ. ಒಂದೇ ಒಂದು ಬೆಳ್ಳಿಯ ಬಟ್ಟಲು ಸಿಗಲಿಲ್ಲ. ನಿರಾಸೆಯಿಂದ ಹಿಂತಿರುಗಿದರು. ದುರ್ಗುಣಿರಾಜನಿಗೆ ಸುದ್ದಿ ಮುಟ್ಟಿಸಿದರು. ದುರ್ಗುಣಿರಾಜನಿಗೆ ಇನ್ನಿಲ್ಲದ ಕೋಪ ಬಂದಿತು. ರಾಜಪುರೋಹಿತರನ್ನು ಮಹಾಮಂತ್ರಿಯನ್ನು ಕರೆಸಿ ಈ ಮನೆಯ ಬಗ್ಗೆ ವಿಚಾರಿಸಿದನು. ಆ ಮನೆಯವರು ಮಾಹಾನ್ ದಾನಿಗಳೆಂದೂ, ಅಗರ್ಭ ಶ್ರೀಮಂತರೆಂದೂ ಅರುಹಿದರು.

ದುರ್ಗುಣಿರಾಜನು ಸುಮ್ಮನೇ ಕೂರಲಿಲ್ಲ. ಚಿಕ್ಕ ಸೈನ್ಯದ ಜೊತೆ ಮಹಾಸೇನಾಧಿಪತಿಯನ್ನೂ ಮಹಾಮಂತ್ರಿಯನ್ನೂ ಕರೆದುಕೊಂಡು ಹೊರಟು ನಿಂತನು. ಮನೆ ತಲುಪಿದಾಗ ಮನೆ ಖಾಲಿಯಾಗಿತ್ತು. ಮನೆಯ ಎಲ್ಲರೂ ಊರು ಬಿಟ್ಟು ಕುದುರೆ ಕಟ್ಟಿಕೊಂಡು ಹೊರಟು ಹೋಗಿದ್ದರು. ಸೈನಿಕರು ಮನೆಯ ಮೂಲೆ ಮೂಲೆ ಹುಡುಕಿದರು. ಊರಿನ ಮನೆ ಮನೆಗಳನ್ನು ಕೆದಕಿದರು. ಒಂದು ಚಿಕ್ಕಾಸೂ ಸಿಗಲಿಲ್ಲ.

ಇದೇ ಸಮಯವನ್ನು ಕಾದು ನಿಂತವರಂತೆ, ಪುರೋಹಿತರು ತಡ ಮಾಡಲಿಲ್ಲ. ದುರ್ಗುಣಿರಾಜ ಉಳಿದುಕೊಂಡ ಬಿಡಾರಕ್ಕೆ ಹೋಗಿ ನಮಸ್ಕರಿಸಿದರು.

“ಮಹಾರಾಜರಿಗೆ ಜಯವಾಗಲಿ. ಚಕ್ರವರ್ತಿಗಳು ನೂರ್ಕಾಲ ಬಾಳಿ, ನಿಮ್ಮ ಕೀರ್ತಿ ಸೂರ್ಯ ಚಂದ್ರರಿರುವವರೆಗೂ ಅಜರಾಮರವಾಗಿರಲಿ,” ಎಂದು ರಾಜನಿಗೆ ನಮಸ್ಕರಿಸಿ, `”ಮಹಾರಾಜರೇ, ನಿಮ್ಮ ಬಳಿ ಮಾತ್ರ ಹೇಳುವ ವಿಷಯವೊಂದಿದೆ. ಆ ವಿಷಯ ನಿಮಗೆ ಇಷ್ಟವಾದರೆ ನನ್ನನ್ನು ನಿಮ್ಮ ರಾಜಪುರೋಹಿತನನ್ನಾಗಿ ಮಾಡುತ್ತೀರಿ ಎಂದುಕೊಂಡಿದ್ದೇನೆ,” ಎಂದರು.

ಪುರೋಹಿತರು ರಾಜನಿಗೆ ಸುರಂಗದ ಬಗ್ಗೆ ಹೇಳಿದರು. ಅದರಲ್ಲಿ ಅಡಗಿಸಿಟ್ಟಿರುವ ಸಂಪತ್ತಿನ ಬಗ್ಗೆ ಹೇಳಿದರು. ತಾವೇ ಸ್ವತಃ ನಿಂತು ಸುರಂಗ ತೋಡಿಸಿದ್ದಾಗಿಯೂ, ಕಾಳಿಂಗನನ್ನು ಕಾವಲಿಗೆ ಇಟ್ಟಿರುವುದಾಗಿಯೂ ಹೇಳಿದರು. ಇದೆಲ್ಲ ಗುಪ್ತವಾಗಿ ನಡೆಯಬೇಕಾದ ಸಮಾಚಾರ, ನಿಮ್ಮ ಭಟರನ್ನು ಸೈನಿಕರನ್ನು ಮಂತ್ರಿಗಳನ್ನೂ ಸೇನಾಧಿಪತಿಗಳನ್ನೂ ಕಳಿಸಿಬಿಡಿ ಎಂದರು.

ಮಹಾರಾಜನರ ಆನಂದಕ್ಕೆ ಮೇರೆಯೇ ಇರಲಿಲ್ಲ. ಆದರೆ ಮಹಾರಾಜರು, `ಇಲ್ಲ ಪುರೋಹಿತರೇ, ಮಂತ್ರಿಗಳಿಲ್ಲದೇ ಸೇನಾಧಿಪತಿಗಳಿಲ್ಲದೇ ನಾನು ಇದುವರೆಗೂ ಯಾವುದೇ ಕಾರ್ಯವನ್ನೂ ಗುಪ್ತವಾಗಿ ಮಾಡಿದ್ದಿಲ್ಲ. ಮಂತ್ರಿಗಳು ನನ್ನ ಮಸ್ತಕದಂತೆ, ಸೇನಾಧಿಪತಿಗಳಿ ನನ್ನ ಬಾಹುಗಳಂತೆ,` ಎಂದರು.

ಪುರೋಹಿತರು, “ಆಯಿತು, ಮಹಾಪ್ರಭುಗಳೇ, ಆದರೆ ಸುದ್ದಿ ನೀವು ಮೂವರ ಹೊರತಾಗಿ ಇನ್ನಾರಿಗೂ ಸೇರದಿರಲಿ,” ಎಂದರು. ಪುರೋಹಿತರು ಸುರಂಗದ ಬಗ್ಗೆ ಮಂತ್ರಿಗಳಿಗೆ ಸೇನಾಧಿಪತಿಗಳಿಗೆ ಹೇಳಿದರು.

ಮಹಾಮಂತ್ರಿಗಳು, “ಮಹಾರಾಜರೇ, ಇದೇಕೋ ನನಗೆ ಸುಳ್ಳಿನ ಸರಮಾಲೆ ಅನಿಸುತ್ತದೆ,” ಎಂದರು.

ಸೇನಾಧಿಪತಿಗಳು, “ಮಹಾರಾಜರೇ, ಸುಳ್ಳಿದ್ದರೂ ಇರಲಿ, ಒಂದು ಸಲ ನೋಡಿಯೇ ಬಿಡೋಣವಂತೆ,” ಎಂದು ಮಂತ್ರಿಗಳ ಮಾತನ್ನು ತಳ್ಳಿ ಹಾಕಿದರು.

ಪುರೋಹಿತರು, ಮಹಾರಾಜರು, ಮಹಾಮಂತ್ರಿ ಮತ್ತು ಮಹಾಸೇನಾಧಿಪತಿಗಳು – ಈ ನಾಲ್ಕು ಜನರು ಮಧ್ಯರಾತ್ರಿಯ ಎರಡನೆಯ ಪ್ರಹರದಲ್ಲಿ ಮಹಾಮನೆಯ ಹಿತ್ತಲಿನಲ್ಲಿ ಸೇರಿದರು. ಪುಟ್ಟ ದೀಪದ ಬೆಳಕಿನಲ್ಲೇ ಕಲ್ಲು ಮಣ್ಣುಗಳಿಂದ ಮುಚ್ಚಿದ್ದ ಜಾಗವನ್ನು ಪುರೋಹಿತರು ತೋರಿಸಿದರು. ಸೇನಾಪತಿಗಳು ಮಂತ್ರಿಗಳ ಸಹಾಯದಿಂದ ಇಷ್ಟವಿಲ್ಲದಿದ್ದರೂ ಕಲ್ಲು ಮಣ್ಣುಗಳನ್ನು ಸರಿಸಿದರು. ಅಲ್ಲಿದ್ದ ಕಬ್ಬಿಣದ ಬಾಗಿಲು ಮತ್ತು ಬೀಗ ಕಾಣಿಸಿತು. ಪುರೋಹಿತರು ತಮ್ಮ ಪಂಚೆಯ ಗಂಟಿನಿಂದ ಬೀಗದ ಕೈಯನ್ನು ತೆಗೆದು ಸೇನಾಧಪತಿಗಳ ಕೈಗೆ ಕೊಟ್ಟರು. ಬಾಗಿಲನ್ನು ತೆರೆಯುತ್ತಿದ್ದಂತಯೇ ಬುಸ್ ಎಂದು ಸರ್ಪವೊಂದು ಹೆಡೆಯೆತ್ತಿತು. ಕಾಳಿಂಗಾಷ್ಟಕವನ್ನು ಬರೆದ ತಾಳೆಗರಿ ಈ ಮಹಾಮನೆಯ ಯಜಮಾನನಿಗೆ ಕೊಟ್ಟಾಗಿದ್ದರೂ, ಪುರೋಹಿತರಿಗೆ ಕಾಳಿಂಗಾಷ್ಟಕ ಬಾಯಿಪಾಠವಿತ್ತು. ಕಾಳಿಂಗಾಷ್ಟಕ ಮಂತ್ರವನ್ನು ಶಾಸ್ತ್ರೋಕ್ತವಾಗಿ ಹೇಳಿದರು. ಕಾಳಿಂಗ ಒಳಗೆ ಸರಿದು ದಾರಿ ಬಿಟ್ಟಿತು.

“ಕಾಳಿಂಗ ಈಗ ಯಾರಿಗೂ ಏನೂ ಮಾಡುವುದಿಲ್ಲ, ನೀವಿನ್ನು ಧೈರ್ಯವಾಗಿ ಒಳಗೆ ಇಳಿಯಬಹುದು,” ಎಂದರು.

“ಮಂತ್ರಿಗಳೇ, ಈಗಲಾದರೂ ನಂಬಿಕೆ ಬಂದಿತೇ?” ಎಂದು ಕುಹಕವಾಡಿದರು. ಮಹಾರಾಜರು ನಕ್ಕರು. ಮಂತ್ರಿಗಳಿಗೆ ಅಪಮಾನವಾಯಿತು. “ಇದು ನಂಬಿಕೆಯ ಪ್ರಶ್ನೆಯಲ್ಲ, ಮಹಾಮಂತ್ರಿಯಾದವನು ಪರಾಮರ್ಶೆ ಮಾಡದೇ ಯಾವುದನ್ನೂ ಒಪ್ಪಬಾರದು,” ಎಂದರು ಮಹಾಮಂತ್ರಿಗಳು.

“ಪುರೋಹಿತರೇ, ನೀವೇ ಅಲ್ಲವೇ ಈ ಎಲ್ಲ ವ್ಯವಸ್ಥೆ ಮಾಡಿದ್ದು. ನೀವು ಒಳಗೆ ಇಳಿದು ಮಂತ್ರಿಗಳಿಗೆ ಸೇನಾಧಿಪತಿಗಳಿಗೆ ತೋರಿಸಿರಿ. ಮೂವರೂ ಸೇರಿ ಅಲ್ಲಿರುವ ಸಂಪತ್ತನ್ನು ಮೇಲೆ ತನ್ನಿ. ನಾನು ಇಲ್ಲಿಯೇ ನಿಂತು ನಿಮಗಾಗಿ ಕಾಯುತ್ತೇನೆ,” ಎಂದರು, ರಾಜನಿಗೆ ಇನ್ನೂ ಪುರೋಹಿತನ ಮೇಲೆ ನಂಬಿಕೆ ಇರಲಿಲ್ಲ.

“ಆದರೆ ನಾಗಪೂಜೆ ಮಾಡಿದ ನಾನೇ ಒಳಗೆ ಹೋಗಕೂಡದು, ಅದು ನಿಮಯೋಲ್ಲಂಘನೆ ಮಾಡಿದಂತೆ,” ಎಂದರು ಪುರೋಹಿತರು.

“ಹಾಗಾದರೆ ಸೇನಾಧಿಪತಿಗಳು ಮತ್ತು ಮಂತ್ರಿಗಳು ಒಳಗೆ ಇಳಿಯಲಿ. ಒಬ್ಬರಿಗೊಬ್ಬರು ದೀಪ ಹಿಡಿದು ದಾರಿ ತೋರಿಸಬಹುದು,” ಎಂದರು ಮಹಾರಾಜರು. ಸೇನಾಧಿಪತಿಗಳು ಮತ್ತು ಮಂತ್ರಿಗಳು ಒಳಗೆ ಇಳಿದರು. ಮಹಾರಾಜರು ಮತ್ತು ಪುರೋಹಿತರು ದೊಡ್ಡಮನೆಯ ಹಿತ್ತಲಲ್ಲಿ ಸುರಂಗದ ಬಾಗಿಲ ಬಳಿ ನಿಂತರು.

ಸುರಂಗದ ಒಳಗೆ ಇಳಿದ ಸೇನಾಧಿಪತಿಗಳಿಗೆ ಮತ್ತು ಮಂತ್ರಿಗಳಿಗೆ ಅಲ್ಲಿರುವ ಸಂಪತ್ತನ್ನು ಹುಡುಕಲು ತುಂಬ ಸಮಯವೇನೂ ಬೇಕಾಗಲಿಲ್ಲ. ಆದರೆ ಮಹಾಮಂತ್ರಿಗಳೂ ಸೇನಾಧಿಪತಿಗಳೂ ಸೇರಿ ಮಹಾರಾಜನನ್ನು ಮುಗಿಸಲು ಬಹಳ ಕಾಲದಿಂದ ಹೊಂಚುಹಾಕುತ್ತಿದ್ದರು. ಸೇನಾಧಿಪತಿಗಳಿಗೆ ತಾವು ಮಹಾರಾಜರಾಗುವ ಆಸೆ. ಮಹಾಮಂತ್ರಿಗಳು ತಮ್ಮ ಮಗಳನ್ನು ಸೇನಾಧಿಪತಿಗಳ ಮಗನಿಗೆ ಕೊಟ್ಟು ಮದುವೆ ಮಾಡಿದ್ದರು. ಸೇನಾಧಿಪತಿಗಳು ಒಂದು ವೇಳೆ ಮಹಾರಾಜರಾದರೆ, ತನ್ನ ಮಗಳು ಮುಂದಿನ ರಾಣಿಯಾಗುತ್ತಾಳೆ, ತನ್ನ ಮೊಮ್ಮಗ ಮುಂದೊಂದು ದಿನ ಮಹಾರಾಜನಾಗುತ್ತಾನೆ ಎನ್ನುವ ಕನಸು ಮಹಾಮಂತ್ರಿಗಳದ್ದು. ಮಹಾರಾಜನನ್ನು ಮುಗಿಸಲು ಇದಕ್ಕಿಂತ ಸರಿಯಾದ ಸಮಯ ಸಿಗುವುದು ಸಾಧ್ಯವಿಲ್ಲವೆಂದು ತಮ್ಮಲ್ಲಿಯೇ ಮಾತಾಡಿಕೊಂಡರು. 

ಇತ್ತ ಮೇಲೆ, ಏಷ್ಟು ಸಮಯವಾದರೂ ಯಾರೊಬ್ಬರ ಸುಳಿವಿಲ್ಲ, ಯಾರೂ ಮೇಲೆ ಬರುತ್ತಿಲ್ಲ. ಮಹಾರಾಜರಿಗೆ ಆತಂಕ ಶುರುವಾಯಿತು. ಮಹಾರಾಜರ ತಾಳ್ಮೆ ಕಡಿಮೆಯಾಗುತ್ತಿತ್ತು.

ಅಷ್ಟರಲ್ಲಿ ಕೆಳಗಿನಿಂದ ಮಹಾಮಂತ್ರಿಗಳ ಧ್ವನಿ, “ಮಹಾರಾಜರೇ, ಇಲ್ಲಿ ಬರೀ ಚಿನ್ನವಲ್ಲ, ಚಿನ್ನದ ಗಣಿಯೇ ಇದೆ, ಇದು ಮುಗಿಯದ ಗಣಿಯ ತರಹ ಇದೆ. ಹೋದಷ್ಟೂ ಸುರಂಗ ಮುಗಿಯುತ್ತಲೇ ಇಲ್ಲ. ಸುರಂಗ ಮಾರ್ಗದ ಇಕ್ಕೆಲಗಳಲ್ಲೂ ಬಂಗಾರ, ವಜ್ರ, ವೈಢೂರ್ಯ. ಕಾಳಿಂಗ ಕೂಡ ಏನೂ ಮಾಡದೇ ಸುಮ್ಮನೇ ಕೂತಿದ್ದಾನೆ. ಆದರೆ ಇದನ್ನೆಲ್ಲ ಮೇಲೆ ತರಲು ಒಬ್ಬರ ಮೇಲೆ ಒಬ್ಬರು ಒಟ್ಟು ಮೂರು ಜನ ನಿಲ್ಲಬೇಕು. ಆದ್ದರಿಂದ ನೀವು ಕೂಡ ಕೆಳಗೆ ಬರಬೇಕು,” ಎಂದರು.

ಮಹಾರಾಜರು ಆನಂದ ಪರವಷರಾಗಿ ಪುರೋಹಿತರ ಬೆನ್ನು ತಟ್ಟಿ, ತಮ್ಮ ಮೇಲಿದ್ದ ಬಂಗಾರದ ಸರವನ್ನು ಪುರೋಹಿತರಿಗೆ ನೀಡಿದರು. ನಂತರ ಮೆಲ್ಲನೇ ಸುರಂಗದ ಒಳಕ್ಕೆ ಇಳಿದರು. ಮಹಾರಾಜರನ್ನು ಮುಗಿಸಲು ಕೆಳಗೆ ಇಬ್ಬರೂ ಕಾಯುತ್ತಿದ್ದರು.

ಮಹಾರಾಜರು ಕೆಳಗೆ ಇಳಿಯುತ್ತಿದ್ದಂತೇ, ಪುರೋಹಿತರು ಸುರಂಗದ ಬಾಗಿಲು ಫಟಾರೆಂದು ಮುಚ್ಚಿ ಬೀಗವನ್ನು ಹಾಕಿದರು. ಈ ವಿಷಯವನ್ನು ಹಳೆಯ ರಾಜನ ಗೂಢಚಾರಿಗೆ ಹೇಳಿದರು. ಅದಾಗಿ ಎರಡು ದಿನಕ್ಕೆ ಹಳೆಯ ರಾಜನು ಮರಳಿ ಬಂದು ಮತ್ತೆ ರಾಜ್ಯಭಾರವನ್ನು ಮಾಡಿದನು. ಪಲಾಯನ ಮಾಡಿದ ಈ ಮನೆಯವರೂ ಮತ್ತೆ ಮನೆಗೆ ಮರಳಿ ಬಂದರು. ಆದರೆ ಕಾಳಿಂಗನಿಂದ ಒದಗಬಹುದಾದ ಶಾಪಕ್ಕೆ ಹೆದರಿ ಸುರಂಗವನ್ನು ತೆಗೆಯುವ ಧೈರ್ಯ ಮಾತ್ರ ಯಾರಿಗೂ ಇರಲಿಲ್ಲ.

“ಹಾಗಾದರೆ ನಾವು ಆ ಮಹಾಮನೆಯ ವಂಶಸ್ಥರೇ?” ಎಂದು ಅಪ್ಪ ಕೇಳಿದ.

ಅಜ್ಜ ಹೌದು ಎಂದು ತಲೆಯಾಡಿಸಿದರು.

“ಹಾಗಾದರೆ ಸುರಂಗದ ಎಲ್ಲ ಸಂಪತ್ತಿಗೆ ನಾವು ವಾರಸುದಾರರೇ?” ಎಂದು ಅಮ್ಮ ಕೇಳಿದಳು.

ಅಜ್ಜ ಹೌದು ಎಂದು ಅದಕ್ಕೂ ತಲೆಯಾಡಿಸಿದರು.

ಚಿಕ್ಕಪ್ಪನ ಮಗ ಮುಖ ಅರಳಿಸಿ, “ಸೂಪರಾಗಿದೆ ಕತೆ, ಇದರ ಜಾಡನ್ನೇ ಹಿಡಿದು ಒಂದು ಸಿನೆಮಾ ಮಾಡುತ್ತೇನೆ,” ಎಂದ.

“ಖಂಡಿತ ಮಾಡು, ಸಿನೆಮಾ ಸೂಪರ್ ಫ್ಲಾಪ್ ಆಗುವುದು ಮಾತ್ರ ಗ್ಯಾರಂಟಿ,’ ಎಂದು ಬಚ್ಚಬಾಯಿಯನ್ನು ಪೂರ್ತಿ ತೆರೆದು ನಕ್ಕರು.

ಆಮೇಲೆ ನಿಧಾನವಾಗಿ ಅಜ್ಜ ಹೇಳಿದರು, “ಈ ಘಟನೆ ನಡೆದ ಮೇಲೆ ಎಲ್ಲರೂ ಅಲ್ಲಿ ಸುರಂಗವಿರುವುದನ್ನು ಮರೆತು ಬಿಡಲು ಹೇಳಿದರು. ಆ ಸುರಂಗದ ಒಳಗಿರುವ ಸಕಲ ಆಸ್ತಿ, ಚಿನ್ನ, ರನ್ನ, ವಜ್ರ, ವೈಢೂರ್ಯಗಳೂ ತಮ್ಮದಲ್ಲ ಎನ್ನುವಂತೆ ಬದುಕಿದರು. ಒಂದೆರೆಡು ತಲೆಮಾರು ಕಳೆಯುವಷ್ಟರಲ್ಲಿ ಅಲ್ಲಿ ಸುರಂಗವಿರುವುದು ಆ ಮನೆಯ ಬಹುತೇಕ ಜನರಿಗೆ ಗೊತ್ತೇ ಇರಲಿಲ್ಲ. ಆದರೆ ಅದು ಕತೆಯ ರೂಪದಲ್ಲಿ ಅದು ಹೇಗೋ ಗೌಪ್ಯವಾಗಿ ನನ್ನ ತಾತ ನನಗೆ ಹೇಳಿದ್ದರು. ಅವರಿಗೂ ನನಗೂ ಈ ಮನೆಯ ಇಷ್ಟು ದೊಡ್ಡ ಹಿತ್ತಲಿನಲ್ಲಿ ಆ ಸುರಂಗದ ಬಾಗಿಲು ಎಲ್ಲಿದೆ ಎಂದು ಗೊತ್ತಿರಲಿಲ್ಲ, ಗೊತ್ತು ಮಾಡಿಕೊಳ್ಳುವ ಇಚ್ಛೆಯೂ ಇರಲಿಲ್ಲ,” ಎಂದು, “ಹಾಗಾಗಿ ಇಂಥ ದೊಡ್ಡ ಮನೆಯಲ್ಲಿ ಎಲ್ಲರೂ ಬಡತನದ ಜೀವನ ಸಾಗಿಸಬೇಕಾಯಿತು”.

ಅಷ್ಟರಲ್ಲಿ ಹೆಂಡತಿ ಆಫೀಸಿಗೆ ಅರ್ಧದಿನದ ರಜೆ ಹಾಕಿ ಮನೆಗೆ ಬಂದಳು. ತಾನು ಹೇಳಿದಂತೆ ಗಂಡ ಹಿತ್ತಲಿಗೆ ಹೋಗದೇ ಮನೆಯಲ್ಲೇ ಇರಿವುದನ್ನು ನೋಡಿ ತನ್ನ ಬಗ್ಗೆ ತನಗೇ ಹೆಮ್ಮೆಯಾಯಿತು. ಹೆಂಡತಿ ಮನೆಗೆ ಬರುತ್ತಿದ್ದಂತೆಯೇ ಎಲ್ಲರೂ ಗಡಿಬಿಡಿಯಿಂದ ಕೂತಲ್ಲಿಂದ ಎದ್ದರು.  ಹೆಂಡತಿಗೆ ಚಿಕ್ಕಪ್ಪನ ಮಗನನ್ನು ಪರಿಚಯಿಸಿದ. ಇಬ್ಬರೂ ಉಭಯಕುಶಲೋಪರಿಯನ್ನು ಮಾಡಿದ ಮೇಲೆ, ಚಿಕ್ಕಪ್ಪನ ಮಗನಿಗೆ ದೊಡ್ಡದಾದ ಮನೆಯಲ್ಲಿ ಒಂದು ಕೋಣೆಯನ್ನು ತೋರಿಸಿ ಬಚ್ಚಲು ಮನೆ ಎಲ್ಲಿ ಇದೆ ಎಂದು ತೋರಿಸಿದ.

ಹೆಂಡತಿಯನ್ನು ತಮ್ಮ ಮಲಗುವ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡ. ಇಲ್ಲಿಯವರೆಗೆ ನಡೆದುದನ್ನು ಸಂಕ್ಷಿಪ್ತವಾಗಿ ವಿವರಿಸಿದ. ಆಷ್ಟರಲ್ಲಿ ಅವರು ಮಲಗುವ ಕೋಣೆಯ ಬಡಿಯುವ ಸದ್ದಾಯಿತು.

“ಯಾರು?” ಎಂದ. “ನಾನು ನಿನ್ನಮ್ಮ, ಎಲ್ಲರೂ ನಿನಗಾಗಿ ಟಾರ್ಚು ಹಿಡಿದುಕೊಂಡು ಕಾಯುತ್ತಿದ್ದಾರೆ,” ಎಂದರು ಅಮ್ಮ. ಅಪ್ಪ ಟಾರ್ಚು ತಂದುಕೊಟ್ಟ. ಎಲ್ಲರೂ ಹಿತ್ತಲಿನತ್ತ ಕುತೂಹಲದಿಂದ ಹೆಜ್ಜೆ ಹಾಕಿದರು. ಚಿಕ್ಕಪ್ಪನ ಮಗನೂ ಜೊತೆಗೆ ಬಂದ. ಮುಚ್ಚಿಟ್ಟಿದ್ದ ಬಾಗಿಲನ್ನು ಎಲ್ಲರಿಗೂ ತೋರಿಸಿದ. ಎಲ್ಲರ ಮುಖದಲ್ಲೂ ಆಶ್ಚರ್ಯ, ಕುತೂಹಲ ಮಿಶ್ರಿತ ಭಯ. ಎಲ್ಲರೂ ಅದರ ಸುತ್ತಲೂ ಸುತ್ತುವರೆದರು. ನಿಧಾನವಾಗಿ ಬಾಗಿಲನ್ನು ತೆರೆದ. ಕಪ್ಪನೆಯ ಕತ್ತಲು. ಬೆಳಕು ಒಳಗೆ ಹೋಗಲು ಕಷ್ಟ ಪಡುತ್ತಿತ್ತು. ಟಾರ್ಚು ಹಿಡಿದ. ಎಲ್ಲರೂ ಬಗ್ಗಿ ನೋಡಿದರು. ಕತ್ತಲನ್ನು ಬಿಟ್ಟು ಮತ್ತೇನೂ ಕಾಣಿಸಲಿಲ್ಲ.

“ಒಳಗೆ ಇಳಿಯುತ್ತೇನೆ,” ಎಂದ. ಅಪ್ಪ ಹುಂ ಅನ್ನಲಿಲ್ಲ ಉಹುಂ ಅನ್ನಲಿಲ್ಲ. ಸುಮ್ಮನೇ ನಿಂತಿದ್ದ.

ಅಮ್ಮ ಆತಂಕಗೊಂಡು, “ಬೇಡಪ್ಪ. ಒಳಗೆ ಏನೂ ಕಾಣುತ್ತಿಲ್ಲ. ನಿನಗೆ ಏನಾದರೂ ಆದರೆ?” ಎಂದು ಅಳುವ ಮುಖ ಮಾಡಿದಳು, “ಕಾಳಿಂಗಸರ್ಪ ನಿನ್ನನ್ನು ಕಚ್ಚಿದರೆ?”.

ಹೆಂಡತಿ. “ಸುಮ್ಮನಿರಿ ಅತ್ತೆ. ನೀವು ಜಾಗೃತೆಯಿಂದ ಹೋಗಿ. ನಾನು ಇಲ್ಲೇ ನಿಂತು ಕಾಯುತ್ತೇನೆ, ಇನ್ನೇನು ಮಗಳು ಶಾಲೆ ಮುಗಿಸಿ ಬರುವ ಸಮಯವಾಯಿತು,” ಎಂದಳು.

ಚಿಕ್ಕಪ್ಪನ ಮಗ, “ನಾನೂ ಬರಲೇನು?” ಎಂದು ಕೇಳಿದ. ಬೇಡ ಎಂದ.

ಅಜ್ಜ, “ನಮ್ಮ ಮನೆಯಲ್ಲಿ ಯಾರಿಗೂ ಕಾಳಿಂಗಾಷ್ಟಕ ಮಂತ್ರವನ್ನು ಹೇಳಿಕೊಡಲಿಲ್ಲ, ನನಗೆ ಕಾಳಿಂಗಾಷ್ಟಕ ಮಂತ್ರ ಗೊತ್ತಿಲ್ಲ. ಬೇಡ, ಹೋಗಬೇಡ,” ಎಂದರು. ಅದಕ್ಕೆ ತಂಗಿ, “ಸುಮ್ಮನಿರಿ ಅಜ್ಜ. ಸುಮ್ಮನೇ ಹೆದರಿಸಬೇಡಿ. ನೀವೋ ನಿಮ್ಮ ಕತೆಗಳೋ!” ಎಂದು ನಕ್ಕಳು.

ಟಾರ್ಚು ಹಿಡಿದು ಒಳಗೆ ಮೆಲ್ಲನೇ ಒಳಗೆ ಇಳಿದ. ಎಲ್ಲರೂ ಬಾಯಿ ಬಿಟ್ಟುಕೊಂಡು ಮೇಲೆ ನಿಂತು ನೋಡುತ್ತಿದ್ದರು. ಮೆಲ್ಲ ಒಳಗಿಳಿದ. ಟಾರ್ಚು ಹಿಡಿದಿದ್ದರಿಂದ ಅವನು ಕೆಳಗೆ ಹೋಗುತ್ತಿರುವುದು ಕಾಣುತ್ತಿತ್ತು.

ಕಾಲು ನೆಲವನ್ನು ತಾಕುತ್ತಿದ್ದಂತೇ ಕಾಲಿಗೆ ಕೊಚ್ಚೆ ತಾಕಿತು. ಹೆದರಿಕೆಯಾಯಿತು. ಮೊಣಕಾಲವರೆಗೆ ಕೊಚ್ಚೆ. ಸುತ್ತ ಕತ್ತಲು ಮತ್ತು ದುರ್ನಾತ. ಬೆಳಗಿನ ತಿಂಡಿಯೆಲ್ಲ ವಾಂತಿ ಬರುವಂತಾಯಿತು. ಟಾರ್ಚಿನ ಬೆಳಕು ಯಾವುದಕ್ಕೂ ಸಾಲುತ್ತಿರಲಿಲ್ಲ. ಟಾರ್ಚನ್ನು ಸುತ್ತ ತಿರುಗಿಸಿದ. ಅದು ಒಂದು ಕೊಚ್ಚೆ ಗುಂಡಿಯಂತೆ ಕಾಣಿಸಿತು. ಆಳವಿರಲಿಲ್ಲ, ಆದರೆ ಒಬ್ಬರು ಹೋಗುವಷ್ಟು ಸುರಂಗದಂತೆ ಇತ್ತು,  ಕೆಳಗೆಲ್ಲ ನೀರು. ಪಕ್ಕದಲ್ಲೆಲ್ಲೆ ಪಾಚಿ. ಮೇಲೆ ನೋಡಿದ. ಎಲ್ಲರೂ ಮೇಲಿನಿಂದ ಇವನನ್ನೇ ದಿಟ್ಟಿಸಿ ನೋಡುತ್ತಿದ್ದರು.

“ಹೊಲಸು ತಿಪ್ಪೆ ಗುಂಡಿಯಂತಿದೆ,” ಎಂದು ಕಿರುಚಿದ.

ಆ ಸುರಂಗದಲ್ಲಿ ಹೋಗಲು ಕೊಚ್ಚೆ ನೀರಿನಲ್ಲೇ ಅಡಿ ಮುಂದಿಟ್ಟ. ಕಾಲಿಗೆ ಏನೋ ಸರಿದಾಡಿದಂತೆ ಅನಿಸಿತು. ಗಾಬರಿಯಾದ.

ಅಷ್ಟರಲ್ಲಿ ಸರಭರನೇ ನಾಕಾರು ಹೆಗ್ಗಣಗಳು ತೆರೆದ ಬಾಗಿಲಿನಿಂದ ಹೊರಗೆ ಹಾರಿದವು. ಹೆಗ್ಗಣಗಳನ್ನು ನೋಡಿ ಅಮ್ಮ ಕಿಟರನೇ ಕಿರುಚಿಕೊಂಡಳು. ಅಮ್ಮ ಕಿರುಚಿಕೊಂಡಿರುವುದನ್ನು ನೋಡಿ ತಂಗಿ ಕೂಡ ಕಿಟಾರನೇ ಕಿರುಚಿದಳು.

ಗಾಬರಿಯಾಗಿ ಮೇಲೆ ಬಂದ. ಕಾಲಿಗೆಲ್ಲ ಕೊಚ್ಚೆ ತುಂಬಿಕೊಂಡಿತ್ತು, ಮೂಗಿಗೆಲ್ಲ ದುರ್ನಾತ ಬಡಿದುಕೊಂಡಿತ್ತು.

“ಥೂ, ವ್ಯಾಕ್, ಕೊಚ್ಚೆ, ಗಲೀಜು. ಅಲ್ಲಿ ಇಲಿ ಹೆಗ್ಗಣ ಬಿಟ್ಟರೆ ಏನೂ ಇಲ್ಲ. ಬಹುಷಃ ಮುನಿಸಿಪಾಲಟಿಯ ಗಟಾರಿರಬಹುದು,” ಎಂದು ಆ ಬಾಗಿಲನ್ನು ವಾಪಸ್ ಮುಚ್ಚಿದ.

“ಒಂದು ಬೀಗ ತೆಗೆದುಕೊಂಡು ಬಾರೆ,” ಎಂದು ತಂಗಿಗೆ ಹೇಳಿದ.

“ನೀನು ಸ್ನಾನ ಮಾಡು ಹೋಗೋ. ಚಿಕ್ಕಪ್ಪನ ಮಗನೋ ಅಪ್ಪನೋ ಬೀಗ ಹಾಕಿಕೊಂಡು ಬರುತ್ತಾರೆ,” ಎಂದು ಅಮ್ಮ ಅಂದರು. ನಿಂತೇ ಇದ್ದ, ಕೊಳಕು ನಾರುತ್ತ.

ತಂಗಿ ಒಂದು ಹಳೆಯ ದೊಡ್ಡ ಬೀಗವನ್ನು ಹುಡುಕಿಕೊಂಡು ತಂದು ಕೊಟ್ಟಳು. ಬಾಗಿಲಿಗೆ ಬೀಗ ಹಾಕಿ, ಅದರ ಮೇಲೆ ಮತ್ತೆ ಮಣ್ಣನ್ನು ಮುಚ್ಚಿ, “ದರಿದ್ರದ್ದು, ನನ್ನ ಇಡೀ ದಿನವನ್ನು ಹಾಳು ಮಾಡಿತು,” ಎಂದು ಜೋರಾಗಿ ಎಲ್ಲರಿಗೂ ಬಯ್ಯುವಂತೆ ತನಗೇ ತಾನೇ ಬಯ್ದುಕೊಂಡು, ಬೀಗದ ಕೈಯನ್ನು ಪೈಜಾಮದ ಜೀಬಿನಲ್ಲಿ ಜೋಪಾನವಾಗಿ ಇಟ್ಟುಕೊಂಡು, ಲಗುಬಗೆಯಿಂದ ಸ್ನಾನ ಮಾಡಲು ಬಚ್ಚಲು ಮನೆಗೆ ಹೊರಟ. ಹೋಗುವಾಗ ಹೆಂಡತಿಗೆ, “ಟಾವೆಲ್ ತೆಗೆದುಕೊಂಡು ಬಾರೆ,” ಎಂದ.

ಬಚ್ಚಲು ಮನೆಗೆ ಹೆಂಡತಿ ಟಾವೆಲನ್ನು ಕೊಡುತ್ತಿರುವಾಗ, “ಅದು ಅಜ್ಜ ಹೇಳಿರುವಂತೆ ಒಂದು ಸುರಂಗದಂತಿದೆ. ಅಲ್ಲೊಂದು ಬಾಗಿಲು ಇದ್ದಂತಿದೆ. ಅದರ ಒಳಗೆ ಅಜ್ಜ ಹೇಳುವಂತೆ ಏನೋ ಇದೆ ಅನಿಸುತ್ತೆ. ಯಾರಿಗೂ ಹೇಳಬೇಡ,” ಎಂದು ಬಚ್ಚಲುಮನೆಯ ಬಾಗಿಲು ಹಾಕಿಕೊಂಡ.

ಯಥಾಪ್ರಕಾರ ಬೆಳಿಗ್ಗೆ ಎಲ್ಲರಿಗಿಂತ ಮೊದಲು ಹೆಂಡತಿಯೇ ಎದ್ದಳು. ಪಕ್ಕದಲ್ಲಿ ಮಗಳು ಕನಸಿನ ಲೋಕದಲ್ಲಿ ಮುಗುಳ್ನಗುತ್ತಿದ್ದಳು. ತಾನು ಮೊದಲು ಸ್ನಾನ ಮಾಡಿ ಕೆಲಸಕ್ಕೆ ತಯಾರಾದ ಮೇಲೆ, ಇನ್ನೊಂದು ಕೋಣೆಯಲ್ಲಿ ಮಲಗುವ ಗಂಡನನ್ನು ಎಬ್ಬಿಸುವುದು ವಾಡಿಕೆ (ಮಗುವಾದ ಮೇಲಿಂದ ತಾನು ಮಗಳು ಒಟ್ಟಿಗೆ ಮಲಗುವುದು, ಅವನು ಬೇರೆ ಕೋಣೆಯಲ್ಲಿ ಮಲಗುವುದು ರೂಢಿಯಾಗಿದೆ). ಗಂಡ ಎದ್ದ ಕೂಡಲೇ ಇನ್ನೂ ಎಲ್ಲರೂ ಏಳುವ ಮೊದಲೇ ಕೆಲಸಕ್ಕೆ ಹೋಗುವುದು ಅವಳ ದಿನನಿತ್ಯದ ಕರ್ಮ. ಮಗಳನ್ನು ಏಳಿಸಿ, ತಯಾರು ಮಾಡಿ, ತಿಂಡಿ ಕೊಟ್ಟು, ತನ್ನ ತಾಯಿ ಮಾಡಿದ ಊಟದ ಡಬ್ಬಿ ಕಟ್ಟಿ ಮಗಳನ್ನು ಶಾಲೆಗೆ ಬಿಟ್ಟು ಮನೆಗೆ ಬಂದರೆ ನಿರುದ್ಯೋಗಿಯಾದ ಗಂಡನ ಕೆಲಸ ಮುಗಿಯಿತು. ಗಂಡ ಕೆಲಸ ಕಳೆದುಕೊಂಡ ಮೇಲೆ ಅವನಿಗೆ ಇನ್ನೊಂದು ಕೆಲಸ ಸಿಗುವ ಆಸೆಯನ್ನೇ ಬಿಟ್ಟಿದ್ದಾಳೆ. ಆದರೆ ದಿನ ಹೋದಂತೆ ಕಂದರ ಮಾತ್ರ ದೊಡ್ಡದಾಗುತ್ತಿದೆ ಎನಿಸುತ್ತದೆ.

ಅವತ್ತೂ ಕೂಡ ತಾನು ಎದ್ದು ತಯಾರದ ಮೇಲೆ ಗಂಡನನ್ನು ಏಳಿಸಲು ಗಂಡ ಮಲಗುವ ಕೋಣೆಗೆ ಹೋದಳು. ಅವನು ಅಲ್ಲಿರಲಿಲ್ಲ. ರಾತ್ರಿಯೆಲ್ಲ ಬಹುಷಃ ಚಿಕ್ಕಪ್ಪನ ಮಗನ ಜೊತೆ ಮಾತಾಡುತ್ತ ಚಿಕ್ಕಪ್ಪನ ಮಗನಿಗೆ ಉಳಿಯಲು ಕೊಟ್ಟ ಕೋಣೆಯಲ್ಲೇ ಮಲಗಿರಬಹುದು ಎಂದುಕೊಂಡು ಅಲ್ಲಿ ಹೋದಳು.  ಅಲ್ಲಿ ಗಂಡನೂ ಇರಲಿಲ್ಲ, ಚಿಕ್ಕಪ್ಪನ ಮಗನೂ ಇರಲಿಲ್ಲ. ಚಿಕ್ಕಪ್ಪನ ಮಗನ ಬ್ಯಾಗು ಮಾತ್ರ ಇತ್ತು. ಇಂಥಾ ದೊಡ್ಡ ಮನೆಯಲ್ಲಿ ಯಾರು ಎಲ್ಲಿ ಬೇಕಾದರೂ ಮಲಗಬಹುದು. ಈಗ ಅವಳಿಗೆ ಕೋಪ ಮೂಗಿಗೇ ಬರುತ್ತಿತ್ತು. ತನಗೆ ಕೆಲಸಕ್ಕೆ ಹೋಗಲು ತಡವಾಗುತ್ತಿದೆ, ಈಗ ಇವನನ್ನು ಇಂಥಾ ದೊಡ್ಡ ಮನೆಯಲ್ಲಿ ಹುಡುಕಬೇಕು ಬೇರೆ! ಗಂಡನ ಹೆಸರನ್ನು ಜೋರಾಗಿ ಕೂಗುತ್ತ ಹೋದಳು.

“ಏನಾಯಿತೇ? ಬೆಳ್‍ಬೆಳಿಗ್ಗೆ ಅದೇನು?” ಎಂದು ಅಮ್ಮ ಎದ್ದು ಹೊರಬಂದರು.

“ಇವನು ಇನ್ನೂ ಎದ್ದಿಲ್ಲ. ಎಲ್ಲಿ ಮಲಗಿದ್ದಾನೋ?” ಎಂದಳು.

“ಒಂದು ದಿನವಾದರೂ ಮಲಗಲಿ ಬಿಡೆ. ನಿನ್ನೆ ಅವನೂ ಚಿಕ್ಕಪ್ಪನ ಮಗನೂ ತುಂಬ ಹೊತ್ತು ಮಾತಾಡುತ್ತ ಕೂತಿದ್ದರು,” ಎಂದು ಅಮ್ಮ ಮಗನನ್ನು ವಹಿಸಿಕೊಂಡು ಮಾತಾಡಿದಳು, “ಒಂದು ದಿನ ನೀನೇ ಮಗಳನ್ನು ಏಳಿಸಿ ತಯಾರು ಮಾಡಿ ತಿಂಡಿ ಕೊಟ್ಟರೆ ಏನೂ ಆಗುವುದಿಲ್ಲ, ಅಷ್ಟರಲ್ಲಿ ಅವನೂ ಎದ್ದು ತಯಾರಾಗಿ ಮಗಳನ್ನು ಶಾಲೆಗೆ ಬಿಟ್ಟು ಬರುತ್ತಾನೆ. ಒಂದು ದಿನ ಕೆಲಸಕ್ಕೆ ಒಂಚೂರು ತಡವಾದರೆ ಪ್ರಳಯವೇನೂ ಆಗುವುದಿಲ್ಲ. ”

“ಆಯಿತು, ಅದೊಂದು ಬಾಕಿ ಇದೆ. ಇಡೀ ಮನೆಯಲ್ಲಿ ಕೆಲಸ ಅಂತ ಮಾಡುವುದು ನಾನೊಬ್ಬಳೇ. ನನ್ನ ಒಬ್ಬಳ ಸಂಪಾದನೆಯಿಂದ ನಿಮ್ಮೆಲ್ಲರ ಹೊಟ್ಟೆ ತುಂಬಬೇಕು. ಅದರ ಜೊತೆ ಇದೊಂದು ಕೇಡು,” ಎಂದಳು.  

ಅಮ್ಮನೂ ಮಗನನ್ನು ಕೂಗುತ್ತ ದೊಡ್ಡ ಮನೆಯಲ್ಲಿ ನಡೆದಳು.

ಇವರ ಗದ್ದಲ ಕೇಳಿ ಅಪ್ಪ ಮತ್ತು ತಂಗಿಯೂ ಬಂದರು. ಎಲ್ಲರೂ ಬೇರೆ ಬೇರೆ ದಿಕ್ಕಿನಲ್ಲಿ ಗಂಡನನ್ನು ಹುಡುಕತೊಡಗಿದರು.

ಅಪ್ಪ ಕೂಗಿದರು, “ಹಿತ್ತಲ ಬಾಗಿಲು ತೆರೆದಿದೆ!” ಎಂದು ಹಿತ್ತಲಿನತ್ತ ಓಡಿದರು.

ಎಲ್ಲರೂ ಹಿತ್ತಲಿಗೆ ಹೋದರು.

“ಬಹುಷಃ ಸುರಂಗದ ಒಳಗೆ ಹೋಗಿದ್ದಾನೆ ಅನಿಸುತ್ತೆ, ಹಾಳಾದವನು” ಎಂದು ಮಗನನ್ನು ಬಯ್ದರು. ಇವಳಿಗೆ ಈಗ ಸಂಶಯವೇ ಇರಲಿಲ್ಲ. ಓಡುತ್ತ ಸುರಂಗದ ಬಳಿಗೆ ಓಡಿದಳು. ಸುರಂಗದ ಬಾಗಿಲು ತೆರೆದಿತ್ತು. ಇಣುಕಿ ನೋಡಿದರೆ ಏನೂ ಕಾಣುತ್ತಿರಲಿಲ್ಲ. ಜೋರಾಗಿ ಹೆಸರು ಹಿಡಿದು ಕೂಗಿದಳು. ಯಾವ ಉತ್ತರವೂ ಬರಲಿಲ್ಲ. ಫೋನಿನಲ್ಲಿ ಟಾರ್ಚನ್ನು ಆನ್ ಮಾಡಿದಳು. ಆ ಪುಟ್ಟ ಬೆಳಕಿನಲ್ಲಿ ಸುರಂಗದ ಅಡಿಯಲ್ಲಿ ಗಲೀಜು ನೀರಿನಲ್ಲಿ ಇಬ್ಬರು ಕಾಣಿಸಿದರು.

ಗಂಡನ ಹೆಸರನ್ನು ಜೋರಾಗಿ ಕಿರುಚಿದಳು. ಯಾವ ಉತ್ತರವೂ ಬರಲಿಲ್ಲ. ಚಿಕ್ಕಪ್ಪನ ಮಗನ ಹೆಸರನ್ನೂ ಕೂಗಿದಳು. ಯಾವ ಉತ್ತರವೂ ಬರಲಿಲ್ಲ.

ಇನ್ನೂ ಜೋರಾಗಿ ಕಿರುಚಿದಳು, “ಏನು ಕಿವಿ ಕೇಳುವುದಿಲ್ಲವೇ? ನನಗೆ ಕಲಸಕ್ಕೆ ತಡವಾಗುತ್ತಿದೆ. ಈ ಸುರಂಗದ ಕೆಲಸ ಮಗಳನ್ನು ಶಾಲೆಗೆ ಬಿಟ್ಟು ಬಂದ ಮೇಲೆ ಮಾಡಿದರಾಗುವುದಿಲ್ಲವೇ?”

ಅವಳ ಕಿರುಚಾಟ ಕೇಳಿ ತಂಗಿ ಓಡಿ ಸುರಂಗದ ಹತ್ತಿರ ಬಂದಳು. ಸುರಂಗದ ಒಳಗೆ ಕೈ ಮಾಡಿ ಅವಳೂ ಫೋನಿನ ಟಾರ್ಚನ್ನು ಆನ್ ಮಾಡಿದಳು. ಎರಡು ಟಾರ್ಚುಗಳ ಬೆಳಕಿನಲ್ಲಿ ಸುರಂಗ ಚೆನ್ನಾಗಿ ಕಾಣುತ್ತಿತ್ತು. ಆ ಇಬ್ಬರೂ ಅಲ್ಲಾಡದೇ ಬಿದ್ದಿದ್ದರು. ಸುತ್ತಲಿನ ನೀರು ಕೆಂಪಾಗಿತ್ತು. ಸಲಿಕೆ, ಗುದ್ದಲಿ, ಹಾರೆಗಳು ರಕ್ತಸಿಕ್ತವಾಗಿದ್ದವು.

 

34 thoughts on “ಸುರಂಗ (ಕಥೆ) – ಕೇಶವ ಕುಲಕರ್ಣಿ

 1. Interesting story… starts with usual middle class family in a small village story… slowly becomes interesting when his Ajja speaks about a hidden treasure related to a kingdom, which they are related to. Ending is very abrupt and curious. This leaves us thinking what might have happened inside the ‘suranga’

  – Raviraj Uppoor (through Whatsapp)

  Like

 2. Great imagination and creativity!

  You’ve given details for individual character development well. You’ve filled in the situational details including the minor but interesting details of the sounds of the hammering and door opening. A nice story of the back ground of the tunnel there and the reflection of human aspirations, desires and greed resulting in the outcome that you have left the readers to decide. My inclination is that the two cousins kill each other in the tunnel due to greed to acquire the treasure supposedly there. I liked the start of the story with an action. That’s a great way to get the readers by the collar and drag them into the story.

  Overall, great imagination and a well written suspense story. Send these to newspapers or magazines in India for a wider audience. Talk to u soon. Keep writing!

  – Anil (through Whatsappp)

  Like

 3. Very nice and keeps suspense till the end. Really enjoyed Kannada story after long time of gap. I wish to know how they died at the end. Wish you will come out with second part? Amid Covid pandemic, work is bit busy. Was on call yesterday and got up in the middle of night to attend a caesarean. Started reading your story after CS and couldn’t sleep till I finish the story and it was 3 AM.
  Admire your interest and proud of your writing. Keep it up and don’t forget to forward me your stories.
  Regards,
  Prakash Bulagannawar.

  Like

 4. Excellent short story. Enjoyable reading and keep the reader interested till the end. You should send this to one of the Kannada weekly or Monthly magazines Keshav. Well done
  Vijay

  Like

 5. ರಮ್ಯ ಬದರಿ ಬರೆಯುತ್ತಾರೆ:
  ಸೊಗಸಾದ ಕುತೂಹಲಕಾರಿ ಕಥೆ. ಪಾತ್ರಗಳ ಆಯ್ಕೆ, ಸನ್ನಿವೇಷಗಳ ವರ್ಣನೆ ಓದುಗರ ಕಣ್ಣಿಗೆ ಕಟ್ಟಿದಂತಿದೆ. ಕಥೆಯೊಳಗೊಂದು ಕಥೆಯ ಪರಿಕಲ್ಪನೆ ಹಾಗು ಕಥೆಯನ್ನು ಹೆಣೆದಿರುವ ರೀತಿ ವರ್ತಮಾನದಿಂದ ಭೂತಕಾಲದ ಕಥೆ ಶುರುವಾಗುವ ಮುನ್ನ ಅನಿರೀಕ್ಷಿತ ಅತಿಥಿಯ ಟ್ವಿಸ್ಟ್ ಮತ್ತು ಆ ಅತಿತಿಥಿಯೂ ಸುರಂಗದ ನಿಧಿಗೆ ಪಾಲುದಾರ ಎಂಬ ಅಂಶ ಮೇಲಿಂದ ಮೇಲೆ ಕುತೂಹಲವನ್ನು ಹೆಚ್ಚಿಸುತ್ತಲೇ ಹೋಗುತ್ತದೆ . ಕೊನೆಯದಾಗಿ ಅತೀ ಆಸೆ ಗತಿ ಕೇಡು ಎಂಬಂತೆ ಅಂತ್ಯವು ದುರಂತವಾದರೂ ಹೇಗೆ ಎಂಬುವುದನ್ನು ಓದುಗರ ವಿಮರ್ಶೆಗೆ ಬಿಟ್ಟಿರುವುದು ಓದುಗರಲ್ಲಿ ಹಲವು ಕಲ್ಪನೆಗಳನ್ನು ಮೂಡಿಸುತ್ತದೆ . ಪೂರಕವಾದ ಸುಂದರ ಚಿತ್ರಗಳು ಓದುಗರಿಗೆ ಕಥೆಯ ಸಂಪೂರ್ಣ ಚಿತ್ರಣವನ್ನು ತೋರುತ್ತಾ ಒಂದು ಕಿರುಚಿತ್ರ ನೋಡಿದ ಅನುಭವ ನೀಡುತ್ತದೆ.

  ರಮ್ಯ ಬದರಿ through WhatsApp

  Like

 6. It was a wonderful read.
  It has come out very nicely.
  Write up takes the reader very smoothly, interplay of words picturising it aptly. Kept the suspense till the last sentence!
  Congratulations and wish you pen many more

  – Venkatesh Moger (through Whatsapp)

  Like

 7. ಕೇಶವ ನಿಮ್ಮ ಕಥೆ ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ ಹಾಗು ರಹಸ್ಯವನ್ನು ಕೊನೆಯವರೆಗೂ ಕಾಪಾಡುವಲ್ಲಿ ಸಫಲವಾಗಿದೆ. ದುರಾಸೆ ದುರಂತಕ್ಕೆ ಕಾರಣ ಎಂಬುದನ್ನು ತಿಳಿಯಬೇಕಾಗಿದೆ.

  – Rajkumar (through whatsapp)

  Like

 8. Wow, 💯 suspense. Part 2 bari, vandu end KoDu, feels like I want to read more.

  – Rajani (through Whatsapp)

  Like

 9. ಒಳ್ಳೆ ಕುತುಹಲಭರಿತ ಕಥೆ..ಒಂದು ಟಾರ್ಚ ಪರಿಚಯಿಸಿ ಕೊಡುವ ಕೆಳ ಮಧ್ಯಮ ವರ್ಗದ ಜೀವನ ಶೈಲಿ ಹಾಗು ಪಾತ್ರಗಳ ಉತ್ಕ್ರಷ್ಟ ಕಿರು ಪರಿಚಯ …ಮಧ್ಯಮ ವರ್ಗದ ಮುಸುಕು ಹೊದ್ದ ಆಸೆಗಳು… ನಿಜವಾಗಿಯೂ ಚಿಕ್ಕ ಚೊಕ್ಕ ಒಪ್ಪ ಕಿರುಗತೆ…👌🏻👍🏻🙏🏻

  ಕಲ್ಪನೆಗಳೊಂದಿಗೆ ಭಾವನೆಗಳ ಮಿಶ್ರಿತಗೊಳಿಸಿ ಬರವಣಿಗೆಯ ಊರುಗೋಲೊಂದಿಗೆ ಓದುಗರ ಮನ ತಟ್ಟಿ ಮುದಗೊಳಿಸುವ ಕಲೆ ಒಲಿದವನೇ ನಿಜವಾದ ಕವಿ‌ ಅಥವಾ ಸಾಹಿತಿ ಅಲ್ಲವೇ ಗೆಳೆಯಾ?

  ಬಿಡುವಿರದ ಕೋವಿಡ್ ೧೯ ನಿರ್ಮೂಲನಾ ಕಾಯಕದಲ್ಲಿಯೂ ವಿದೇಶದಲ್ಲಿ ಕನ್ನಡ ಸಾಹಿತ್ಯವ ಬಿತ್ತಿ ಬೆಳೆಯುವ ನಿನ್ನ ಸಾಮಾಜಿಕ‌ ಕಳಕಳಿ ನಿಜಕ್ಕೂ ಅಭಿನಂದನಾರ್ಹ..

  – N P Joshi (through Whatsapp)

  Like

 10. kathe tumba chennagittu .. manushyanige aase enella madsatte .. Nidhi topic itkond eshtu movies mad idaare I was imagining a movie only it was too good

  – Porrnima (through Whatsapp)

  Like

 11. ಒಂದು ಸಣ್ಣ ಆರ್ಟ್ ಮೂವಿ ನೋಡಿದಂತಾಯಿತು. ಹಳೆಮನೆಯ ಸುರಂಗ ಅನೇಕ ಅರ್ಥ ಕೊಡುತ್ತದೆ. ಪ್ರತಿ ಪಾತ್ರದ ತಲ್ಲಣ ಎದ್ದು ಕಾಣಿಸುತ್ತದೆ. ಯಾವುದೇ ಅನಾವಶ್ಯಕ ತಿರುವುಗಳಿಲ್ಲದ ಸರಳವಾಗಿ ಸಾಗುವ ಕಥೆ. ಅಂತ್ಯವು ಕಥೆಗೆ ಕಳಶವಾಗಿದೆ.

  – Madhav (through Whatsapp)

  Like

 12. I found great philosophy in this story. In our family, each one will be searching for light (battery) for our life path. We are not ready to learn from our history & we are very much greedy for more wealth without any effort & finally end up in tragedy. 👍

  Wadiraj (through Whatsapp)

  Like

 13. I think it deals with battling the feelings arising in your mind which is the tunnel guarded by the kaalinga sarpa which is the devils mind which kills people who go after worldly luxuries rather than the innerself

  – Vidyashankar (through Whatsapp)

  Like

 14. ಕತೆ ಓದಿಸಿಕೊಂಡು ಹೋಗ್ತದ. ಬಹಳ ದಿನಗಳಾಗಿತ್ತು ಕತೆ ಓದದೆ. ಶಾಲೆಯ ದಿನಗಳಲ್ಲಿ ಓದುತ್ತಿದ್ದ ಕುತೂಹಲಕಾರಿ ಪತ್ತೇದಾರಿ ಕತೆಗಳು ನೆನಪಾದವು.

  – Ravindra gadag (through Whatsapp)

  Like

 15. Just finished reading “ Suranga”
  Very well written! Very descriptive taking into account the nuances of everyday living and the complexities of yesteryears.
  Loved the climax!

  Many Congratulations once again for another feather in your cap.

  May Goddess Saraswathi bless always and may all your creative talent get unleashed. You are truly blessed!

  Felt like as if I was reading a. Gripping Story from “Kasturi” magazine.

  (Shridevi through Whatsapp)

  Like

 16. Wow
  beautifully narrated story
  it was like a movie story
  sakkath exciting aagi oduthiddhe
  lastalli suspense enappa sudden aagi mugisbitte
  u have left it to the readers imagination to decipher the end
  or u have plans to come back with further sequel? 😄
  but fantastic
  hats off to u

  (Shrikumar, from WhatsApp)

  Like

 17. ಕೇಶವ ಅವರೆ , ಕಥೆಯ ವಿಸ್ಮಯಕಾರಿ ಅಂತ್ಯ ನನ್ನ ಮನಸ್ಸಿನಲ್ಲಿ ಸಣ್ಣ -ಪುಟ್ಟ ಹಲವಾರು ಕಥೆಗಳನ್ನು ಹಣೆಯುವಂತೆ ಮಾಡಿತು ; ಅಂತ್ಯದಲ್ಲಿ ಕಾಳಿಂಗ ಸರ್ಪದ ಸುದ್ದಿಯಿಲ್ಲವಾದರೂ, ಈ ಕುಟುಂಬದ ವ್ಯವಹಾರದಲ್ಲಿಯಂತೂ ಅದರ ವಿಷಪೂರಿತ ಪ್ರಭಾವ ಅಂತರ್ಗಾಮಿ! ಅಂತ್ಯದ ಸ್ಮಶಾನ ಮೌನದ ಚಿತ್ರಣದಲ್ಲಿ ಅದರದ್ದೇ ದೊಡ್ಡ ಸದ್ದೇ ? ಸುರಂಗದ ಅಂತರಂಗದಲ್ಲಿ ಈ ರೀತಿಯ ಬಹಿರಂಗವೇ ? ಹೀಗೆಲ್ಲ ವಿಚಾರಗಳು ಬಂದವು – ತುಂಬಾ ಚೆನ್ನಾಗಿ ಕಟ್ಟಿದ ಕಥೆ , ಅಂತೆಯೇ ಲಕ್ಷ್ಮೀನಾರಾಯಣರ ಚಿತ್ರಗಳೂ ಕೂಡ 👏👏

  Like

 18. ಮಾನವನಾಸೆಗೆ ಕೊನೆಯೆಲ್ಲಿ? ಈ ಸಂದೇಶ ಚೆನ್ನಾಗಿ ಮೂಡಿಬಂದಿದೆ. ಹಾಗೆ ‘ಇತಿಹಾಸ ಮತ್ತೆ ಮರುಕಳಿಸುತ್ತದೆ’ ಎಂಬ ವಿಚಾರ ಕೂಡ ಗಮನಿಸಬಹುದು. ಸುರಂಗದಲ್ಲಿ ಸಂಪತ್ತು ನಿಜವಾಗಿಯೂ ಇತ್ತೇ ? ಅಥವಾ ಅದು ಬರಿ ಅಜ್ಜನ ಕಥೆಯೇ? ಈ ಒಂದು ಅಂಶವನ್ನು ಓದುಗರಿಗೆ ಕೇಶವ್ ಬಿಟ್ಟಿದ್ದಾರೆ . ಸುರಂಗದಲ್ಲಿ ಸಂಪತ್ತು ಇಲ್ಲವೆಂದು ಮೊದಲ ಪ್ರಯತ್ನದಲ್ಲಿ ಹೇಳಿದ್ದು ಅದು ಸುಳ್ಳೇ ? ನಿಜವೇ ? ಈ ವಿಚಾರಗಳು ಅಪೂರ್ಣವಾಗಿ ಉಳಿಯುತ್ತದೆ . ಮನುಷ್ಯನ ದುರಾಸೆ , ನಂಬಿಕೆ ಇವುಗಳ ಬಗ್ಗೆ ಚಿಂತಿಸಲು ಕಥೆ ಅನುವುಮಾಡಿ ಕೊಡುತ್ತದೆ.
  ಸಾಂಪ್ರದಾಯಿಕವಾಗಿ ಕಥೆಗೆ ಇರುವ ಒಂದು ಅಂತ್ಯ ಇಲ್ಲದಿರುವುದು ಈಗಿನ ಕಥೆಗಳ ಶೈಲಿ ಇರಬಹುದು .

  ಅಂದಹಾಗೆ American Wild West Eldorado ( Gold Rush) ಕಥೆಗಳು ಮತ್ತು ಅದನ್ನು ಆಧರಿಸಿ ತೆಗೆದ ಹಾಲಿವುಡ್ ಚಿತ್ರಗಳು ನೆನಪಿಗೆ ಬಂದವು.

  ಗುಡೂರ್ ಅವರ ರೇಖಾ ಚಿತ್ರಗಳು ಸೊಗಸಾಗಿವೆ, ಕಥೆಗೆ ಪೂರಕವಾಗಿದೆ.

  Like

  • ಸ್ವಾಭಾವಿಕವಾಗಿ, ಸರಳ ವಾಗಿ ಮೂಡಿ ಬಂದಿರುವಸುರಂಗದ ಗಭ೯ ಸುಂದರವಾಗಿಹೆಣದಿದ್ದಾರೆ ಕೇಶವ ಕುಲಕರ್ಣಿ ಯವರು. ಭಾಷೆಯಸ್ಪಷ್ಟತೆ ಎದ್ದು ಕಾಣುವಂತಿದೆ.ಕೂತೂಹಲಕಾರಿಯಾಗಿ ಹೆಣದಿದ್ದಾರೆ ಅಭಿನಂದನೆಗಳು

   Like

 19. ಕೇಶವ್ ರವರು ಈ ಕಥೆಯಲ್ಲಿ ಮೂಡಿಸಿರುವ ಪಾತ್ರಗಳು ಕಣ್ ಕಟ್ಟುತ್ತಾ , ಓದುಗನ ಕುತೂಹಲ ಕೆರಳಿಸುತ್ತಲೇ ಹೋಗುತ್ತವೆ. ಯುವಕ ಸುರಂಗದಲ್ಲಿ ಇಳಿದ ಕ್ಷಣದ ಬಣ್ಣನೆಯಂತೂ ನಾನು ಇತ್ತೀಚೆಗೆ ನೆಟ್ ಪ್ಲಿಕ್ಸ ನಲ್ಲಿ ನೋಡಿದ outer banks ಎಂಬ ಸೀರೀಸ್ ನ ಒಂದು ಸನ್ನಿವೇಶ ದಂತಿದೆ. ಲಕ್ಷ್ಮಿನಾರಾಯಣ ರವರ ಅಧ್ಬುತ ರೇಖಾ ಚಿತ್ರಗಳು, ಓದುಗನ ಕಲ್ಪನೆಗೆ ರೆಕ್ಕೆ ಪುಕ್ಕ ಬರಿಸುತ್ತವೆ. ಊಹಿಸಲಾಗದ ಕ್ಲೈಮ್ಯಾಕ್ಸ್ ಕಥೆಗೆ ಕಿರೀಟ ಪ್ರಾಯ ವಾಗಿದೆ.
  ಉತ್ತಮ ಕಥೆಯನ್ನು ಕೊಟ್ಟ ಕೇಶವ್ ರವರಿಗೆ ಅಭಿನಂದನೆಗಳು
  ಶ್ರೀನಿವಾಸ ಮಹೇಂದ್ರಕರ್

  Like

 20. ಡಾಕ್ಟರ ಒಳಗೊಬ್ಬ ಸಾಹಿತಿ… ನಿಜಕ್ಕೂ ಅಭಿನಂದನಾರ್ಹ..

  ಒಳ್ಳೆ ಕುತುಹಲಭರಿತ ಕಥೆ..ಒಂದು ಟಾರ್ಚ ಪರಿಚಯಿಸಿ ಕೊಡುವ ಕೆಳ ಮಧ್ಯಮ ವರ್ಗದ ಜೀವನ ಶೈಲಿ ಹಾಗು ಪಾತ್ರಗಳ ಉತ್ಕ್ರಷ್ಟ ಕಿರು ಪರಿಚಯ …ಮಧ್ಯಮ ವರ್ಗದ ಮುಸುಕು ಹೊದ್ದ ಆಸೆಗಳು… ನಿಜವಾಗಿಯೂ ಚಿಕ್ಕ ಚೊಕ್ಕ ಒಪ್ಪ ಕಿರುಗತೆ…👌🏻👍🏻🙏🏻

  Like

 21. Good narration Keshav. Reading short story after a long gap. Along with your profession, continued your passion. Impressive.

  Like

 22. Very well written story , the ease with which the story flows & the lucid language used is superb , climax is like a cherry on the cake 👌

  Like

 23. ಸುರಂಗದ ಕಥೆಯಲ್ಲಿ ನನಗೆ ಇಷ್ಟವಾದದ್ದು ಪಾತ್ರಗಳ ಸೃಷ್ಟಿ, ಕಥೆಗೆ ಎಷ್ಟು ಪಾತ್ರಗಳು ಇದ್ದರೆ ಚೆಂದ ಮತ್ತು ಅರ್ಥಪೂರ್ಣ ಎನ್ನುವುದು ಕಥೆಗಾರನ ಓದಿನ ಅನುಭವಕ್ಕೆ ಕನ್ನಡಿ ಹಿಡಿಯುವಂತಹದ್ದು.
  ಇಲ್ಲಿ ಯಾವ ಪಾತ್ರವೂ ಅಮುಖ್ಯವಲ್ಲ ಎನಿಸುವಷ್ಟು ಪಾತ್ರಗಳಿವೆ, ದುಡಿವ ಒಂದು ಕೈ ಆದರೆ ತಿನ್ನುವ ಹಲವು ಹೊಟ್ಟೆಗಳು,
  ಉದ್ಯೋಗವಿಲ್ಲದ ಗಂಡ ತನ್ನ ಹೆಂಡತಿಯ ದುಡಿಮೆಯನ್ನು ಅವಲಂಬಿಸುರುವ ಅಪ್ಪ, ಅಮ್ಮ, ತಂಗಿ, ಅಜ್ಜ, ಮಗಳು.
  ಅಜ್ಜನಿಲ್ಲದೆ ಸುರಂಗದ ರಹಸ್ಯ ಭೇದವಾಗುತ್ತಿರಲಿಲ್ಲ ಹೀಗೆಯೇ ಮುಂದುವರಿದು ತನ್ನ ಚಿಕ್ಕಪ್ಪನ ಮಗ ಬರದಿದ್ದರೆ ಕಥೆಗೆ ತಾರ್ಕಿಕ ಅಂತ್ಯ ಸಿಗುತ್ತಿರಲಿಲ್ಲ.
  ಕೇಶವ್ ಅವರ ಕಥೆ ಇಷ್ಟವಾಯಿತು.
  🙏

  ಕಾವ್ಯ ಅದ್ಯಯನಕ್ಕೆ ಹೋಲಿಸಿದರೆ ನಾನು ಕಥೆಗಳನ್ನು ಓದಿದ್ದು ಕಡಿಮೆ ಎಂದು ಪ್ರಾಮಾಣಿಕವಾಗಿ ತಿಳಿಸಲು ಬಯಸುತ್ತೇನೆ.
  😉

  Like

 24. ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ ಹಾಗು ಕೊನೆಯವರೆಗೂ ರಹಸ್ಯವನ್ನು ಕಾಪಾಡುವಲ್ಲಿ ಸಫಲವಾಗಿದೆ ಮನುಷ್ಯನ ದುರಾಸೆಯೇ ಎಂದೆಂದಿಗೂ ಹಾಗೆ ಇರುವಂಥದ್ದು ಇಂಥ ಕಥೆಗಳನ್ನು ಓದಿದರು ಮತ್ತೆ ಅದನ್ನೇ ಮಾಡುವುದು . ಅದೇ ದುರಂತ.

  Like

 25. ಬಹಳ ತಿಂಗಳುಗಳ ನಂತರ ‘ಅನಿವಾಸಿ’ ಯಲ್ಲಿ ಒಂದು ‘ಕಥೆಯನ್ನು ಓದುತ್ತಿದ್ದೇವೆ . ಆ ಸುರಂಗದ ಗರ್ಭದಲ್ಲಿ ಏನೇನು ರಹಸ್ಯ ಅಡಗಿದೆಯೋ? ಇದರ ಎಲ್ಲ ಪಾತ್ರಗಳು ಅನಾಮಿಕರಾಗಿಯೇ ಉಳಿಯುತ್ತಾರೆ. ಕತೆಯ ಕಾಲ ಹಳೆಯ ರಾಜರಕಾಲದಿಂದ ಇಂದಿನ ಮೊಬೈಲ್ ವರೆಗಿನದು. ಇದರ ಜೊತೆಗೆ ಮಾನವನ ದೌರ್ಬಲ್ಯ ಮತ್ತು ಅವನು ಬಲಿಬೀಳುವ ಷಡ್ರಿಪುಗಳು- ಇವೆಲ್ಲ ಮಸಾಲೆ ಸಾಮಾನುಗಳನ್ನು ಹಾಕಿ ಒಂದು classic story ಯನ್ನು ಹೆಣೆದಿದ್ದಾರೆ ಕೇಶವ ಕುಲಕರ್ಣಿ ಅವರು. ಕಥೆಯನ್ನು ಹೆಣೆಯುವದರಲ್ಲಿ ಅವರದು ಎತ್ತಿದಕೈ ಈ ಕಥೆಯ ಗೂಢತೆಯನ್ನು ಕಾಪಾಡಿಕೊಳ್ಳಲು ಇಲ್ಲಿಗೆ ವಿವರಗಳನ್ನು ಕೈ ಬಿಡಬೇಕಾಗಿದೆ. ಓದುಗನ ಕುತೂಹಲವನ್ನು ಕೊನೆಯವರೆಗೆ ಉಳಿಸಿಕೊಳ್ಳುವಂಥ ಕಥೆ. ಲೇಖಕರಿಗೆ ಅಭಿನಂದನೆಗಳು. ಶ್ರೀವತ್ಸ ದೇಸಾಯಿ

  Like

 26. ಕೇಶವರವರ ಕತೆ ತ೦ತಾನೆ ಓದಿಸಿಕೊ೦ಡು ಕೊನೆಯವರೆಗೆ ರಹಸ್ಯವನ್ನು ಉಳಿಸಿಕೊ೦ಡು ಹೋಗುತ್ತದೆ.
  ಡಾ ಗುಡೂರುರವರ ಚಿತ್ರಗಳು ಕತೆಗೆ ಅತ್ಯ೦ತ ಪೂರಕವಾಗಿದ್ದು ಅವರ ಪ್ರತಿಭೆಯನ್ನು ಮತ್ತೊಮ್ಮೆ ನೆನಸಿಕೊಡುತ್ತವೆ

  Like

 27. ಸುಂದರವಾಗಿ ಹೆಣೆದಿದ್ದೀಯ ಕಥೆಯನ್ನು ಕೇಶವ.
  ಯಾವ ಎಚ್ಚರಿಕೆಯೂ ಹಣ ಹಾಗೂ ಅಧಿಕಾರದ ದಾಹವನ್ನು ತಡೆಯದು. ಅಂತ್ಯ ಸೊಗಸಾಗಿದೆ.

  ಎಂದಿನಂತೆ ಲಕ್ಷ್ಮೀನಾರಾಯಣರ ಚಿತ್ರಗಳು ಕಥೆಗೆ ಸೂಕ್ತವಾದ ಅಲಂಕಾರವನ್ನು ಮಾಡಿವೆ.

  ರಾಮ್

  Like

  • ಕೇಶವ್ ನಿಮ್ಮ ಕಥೆ ಸೊಗಸಾಗಿದೆ ಸ್ಟಾರ್ಟ್ ಮಾಡಿದಮೇಲೆ ಮಧ್ಯೆ ನಿಲ್ಲಿಸುವುದಕ್ಕೆ ಮನಸ್ಸು ಬರಲಿಲ್ಲ, ಆದರೆ ending ಹೀಗಾಗಿದ್ದು ತುಂಬಾ ಅನ್ಯಾಯರೀ!!
   ಅನಿವಾಸಿನಲ್ಲಿ ಈ ತರಹ ಬರಹಗಳು ಮುಂದೆ ಬರಲಿ
   Ramamurthy

   Like

  • ಸರಳವಾಗಿ,ಸ್ವಾಭಾವಿಕವಾಗಿ ಮುಡಿ ಬಂದಿರುವ ಕೇಶವ ಕುಲಕರ್ಣಿ ಯವರ ಸುರಂಗದಲ್ಲಿನ ಸಂಪತ್ತು ಕುತೂಹಕಾರಿಯಾಗಿ ಮೂಡಿ ಬಂದಿದೆ.ಕನ್ನಡ ಭಾಷೆಯ ಸ್ಪಷ್ಟತೆ ಎದ್ದು ಕಾಣುವಂತಿದೆ ಅಭಿನಂದನೆಗಳು

   Like

 28. Keshav, a very good short story. When Srinivas asked me to draw the sketches, I read it without stopping! Very tight in plot, good narration and superb ending. The language is very good too. Well done.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.