ಕನ್ನಡದ ಶೆಕ್ಸ್-ಪಿಯರ್ – ಗಿರೀಶ್ ಕಾರ್ನಾಡ್: ಕೇಶವ್ ಕುಲಕರ್ಣಿ


ಜ್ಞಾನಪೀಠ ಪುರಸ್ಕೃತ ಪ್ರಖ್ಯಾತ ನಾಟಕಕಾರ, ಸಾಹಿತಿ, ಸಿನಿಮಾ ಮತ್ತು ರಂಗಭೂಮಿ ನಿರ್ದೇಶಕ ನಟ ಗಿರೀಶ್ ಕಾರ್ನಾಡ್ ಜೂನ್ ಹತ್ತನೇ ತಾರೀಕು 2019 ನಿಧನರಾದರು. ಕಳೆದ ಕೆಲವು ವರ್ಷಗಳಿಂದ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದರೂ ಮೂಗಿಗೆ ಆಮ್ಲಜನಕದ ಕೊಳವೆಯನ್ನೇರಿಸಿಕೊಂಡು ತಮ್ಮ ಬರವಣಿಗೆಯನ್ನು ಮುಂದುವರಿಸಿ ಸಾರ್ವಜನಿಕ ಸಭೆ, ಸಾಹಿತ್ಯ ಸಮಾರಂಭ ಮತ್ತು ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ತಮ್ಮ ಬದುಕಿನ ಪ್ರತಿ ಕ್ಷಣವನ್ನೂ ಸಾಹಿತ್ಯ ಮತ್ತು ಕಲೆಗೆ ಮುಡಿಪಾಗಿಟ್ಟವರು ಕಾರ್ನಾಡ್. ಅವರಿಗೆ ಸಾಮಾಜಿಕ ನ್ಯಾಯ, ಅಲ್ಪಸಂಖ್ಯಾತರ ಬಗ್ಗೆ ಕಾಳಜಿ, ವೈಚಾರಿಕ ಚಿಂತನೆಗಳು ಮತ್ತು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯವಾಗಿತ್ತು.

ಕರ್ನಾಟಕದಲ್ಲಷ್ಟೇ ಅಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ನಾಟಕಕಾರ ಕಾರ್ನಾಡ್ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕರ್ನಾಟಕದ ಗಡಿ ಆಚೆ ತಲುಪಿಸುವಲ್ಲಿ ಯಶಸ್ವಿಯಾದರು. ಕೇಶವ್ ಕುಲಕರ್ಣಿ ಕಾರ್ನಾಡರಿಗೆ ಅರ್ಪಿಸಿರುವ ಶ್ರದ್ಧಾಂಜಲಿಯ ಲೇಖನದಲ್ಲಿ ಅವರನ್ನು ಕನ್ನಡದ ಶೇಕ್ಸ್ ಪಿಯರ್ ಎಂದು ಕರೆದಿರುವುದು ಸಮಂಜಸವಾಗಿದೆ.

ಕಾರ್ನಾಡರು ಯುವಕರಾಗಿದ್ದಾಗ ತಾವು ಅಂತಾರಾಷ್ಟ್ರೀಯ ಮಟ್ಟದ ಕವಿಯಾಗಬೇಕೆಂಬ ಹಂಬಲದಿಂದ ಇಂಗ್ಲೆಂಡಿಗೆ ಹೊರಟು ನಿಂತಾಗ ತಮ್ಮ ಕುಟುಂಬದಲ್ಲಿನ ಕೆಲವು ಘಟನೆಗಳು ಅವರಿಗೆ ಕೆಲವು ಮಾನಸಿಕ ತುಮುಲಗಳನ್ನು ತಂದು ಯಯಾತಿ ಎಂಬ ನಾಟಕ ಅವರ ಲೇಖನಿಯಿಂದ ಹೊಮ್ಮಿತ್ತು. ಇದೇ ರಂಗಭೂಮಿಯ ಗೀಳು ಅವರನ್ನು ಸ್ವದೇಶಕ್ಕೆ ಮರಳಿ ತಲುಪಿಸಿದ್ದು ನಮ್ಮೆಲ್ಲರ ಅದೃಷ್ಟ!

ಮೇರು ವ್ಯಕ್ತಿತ್ವದ ಕಾರ್ನಾಡರ ಬದುಕು ಬರಹವನ್ನು ಒಂದು ಲೇಖನದಲ್ಲಿ ದಾಖಲಿಸುವುದು ಕಷ್ಟದ ಕೆಲಸ. ಅವರ ಬಗ್ಗೆ ಹೆಚ್ಚಿನ ವಿಚಾರ ತಿಳಿಯಬೇಕಾದರೆ ಅವರ ‘ಆಡಾಡತ ಆಯುಷ್ಯ’ ಎಂಬ ಆತ್ಮಕಥನವನ್ನು ಓದಿ ತಿಳಿಯಬೇಕು. ಒಂದು ಆತ್ಮಕಥೆಯೆಂದರೆ ಅದು ಪ್ರಾಮಾಣಿಕ ಪ್ರಯತ್ನವಾಗಿರಬೇಕು, ಅಲ್ಲಿ ಯಾವ ಮುಚ್ಚು ಮರೆಗೆ ಆಸ್ಪದ ಇರಬಾರದು ಎಂಬುದು ಅವರ ನಿಲುವಾಗಿತ್ತು. ಹೀಗಾಗಿ ಅಲ್ಲಿ ತಮ್ಮ ವೈಯಕ್ತಿಕ ಬದುಕನ್ನು ಎಲ್ಲರ ಮುಂದೆ ತೆರೆದಿಟ್ಟಿದ್ದಾರೆ. ಅವರು ಈ ಪುಸ್ತಕವನ್ನು ವೈದ್ಯರಾದ ಡಾ. ಮಧುಮಾಲತಿ ಗುಣೆ ಅವರಿಗೆ ಅರ್ಪಿಸಿರುವುದು ವಿಶೇಷ ಸಂಗತಿ. ಅವರ ತಾಯಿ ಕೃಷ್ಣಾಬಾಯಿ ಕಾರ್ನಾಡ್ ಗರ್ಭದಲ್ಲಿರುವಾಗ ತಮಗೆ ಇರುವ ಮಕ್ಕಳು ಸಾಕು ಎಂದು ನಿರ್ಧಾರ ತೆಗೆದುಕೊಂಡು ಗರ್ಭಕಳೆದುಕೊಳ್ಳಲು ಡಾ.ಗುಣೆ ಅವರನ್ನು ಕಾಣಲು ಹೋದಾಗ ವೈದ್ಯರ ಗೈರು ಹಾಜರಿಯಿಂದ ಆ ಉದ್ದೇಶ ಸಫಲವಾಗದೆ ನಂತರದಲ್ಲಿ ಕೃಷ್ಣಾಬಾಯಿ ಮನಸ್ಸು ಬದಲಾಯಿಸಿದ್ದರಿಂದ ತಾವು ಹುಟ್ಟಿಕೊಂಡ ವಿಚಾರವನ್ನು ಕಾರ್ನಾಡರು ತಮ್ಮ ಆತ್ಮಕಥೆ ಮತ್ತು ಸಾಕ್ಷ್ಯಚಿತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಅಂದು ಡಾ. ಗುಣೆ ಅವರು ಹಾಜರಾಗಿದ್ದಲ್ಲಿ  ಗಿರೀಶ್ ಕಾರ್ನಾಡ್ ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ! ಹುಟ್ಟು ಎಷ್ಟು ಆಕಸ್ಮಿಕ ಮತ್ತು ಬದುಕಿನ ಕೆಲವು ಘಟನೆಗಳು ಎಷ್ಟು ಅಸಂಗತವೆಂದು ( Absurd) ಕಾರ್ನಾಡರೇ ಸೋಜಿಗ ಪಡುತ್ತಾರೆ.

ಹುಟ್ಟು- ಕ್ರಿಯೆ ಆಕಸ್ಮಿಕವಾದರೆ ಸಾವು ನಿರ್ದಿಷ್ಟ. ಕಾರ್ನಾಡರು ತಮ್ಮ ಆತ್ಮಕಥೆಯ ಉತ್ತರಾರ್ಧ ಭಾಗವನ್ನು ‘ನೋಡತಾ ನೋಡತಾ ದಿನಮಾನ’ ಎಂಬ ಶೀರ್ಷಿಕೆಯಲ್ಲಿ ಬರಿಯುವ ಉದ್ದೇಶವಿಟ್ಟುಕೊಂಡಿದ್ದರು. ನಾವೆಲ್ಲಾ ಅದನ್ನು ನಿರೀಕ್ಷಿಸುತ್ತಿರುವಾಗ ಕಾರ್ನಾಡ್ ವಿಧಿವಶರಾಗಿದ್ದಾರೆ.
ಕಾರ್ನಾಡರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕ ಒಬ್ಬ ಮಹಾನ್ ಲೇಖಕನನ್ನು ಕಳೆದುಕೊಂಡಿದೆ. ಸಿನಿಮಾ ಪ್ರಪಂಚ ಒಬ್ಬ ಪ್ರತಿಭಾವಂತ ನಿರ್ದೇಶಕ ಮತ್ತು ನಟನನ್ನು ಕಳೆದುಕೊಂಡಿದೆ. ಕನ್ನಡ ಜನಸಾಮಾನ್ಯರು ಒಬ್ಬ ಮಾನವತಾವಾದಿಯನ್ನು ಕಳೆದುಕೊಂಡಿದ್ದಾರೆ.

ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು
ಕನಸುಗಳಿಲ್ಲದ ದಾರಿಯಲ್ಲಿ ನಡೆಯಲಾದಿತೇ ?
(ಗಿರೀಶ್ ಕಾರ್ನಾಡ್)

ಕನಸುಗಾರ ಕಾರ್ನಾಡ್ ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ ಮತ್ತು ಅವರ ಬರಹ ಎಲ್ಲರಿಗೂ ಸ್ಪೂರ್ತಿದಾಯಕವಾಗಲಿ ಎಂದು ಹಾರೈಸುತ್ತೇನೆ.
ಡಾ. ಶಿವಪ್ರಸಾದ್ ( ಸಂ )

ಕನ್ನಡದ ಶೆಕ್ಸ್-ಪಿಯರ್ – ಗಿರೀಶ್ ಕಾರ್ನಾಡ: ಕೇಶವ ಕುಲಕರ್ಣಿ

ಧಾರವಾಡದ ಬಸ್-ನಿಲ್ದಾಣದಿಂದ ಮಂಗಳವಾರ ಪೇಟೆಯಲ್ಲಿರುವ ನನ್ನ ಸೋದರಮಾವನ ಮನೆಗೆ ನಡೆದುಕೊಂಡು ಹೊರಟರೆ `ಮನೋಹರ ಗ್ರಂಥಮಾಲೆ` ಸಿಗುತ್ತದೆ. ನಾನು ಹುಬ್ಬಳ್ಳಿಯಲ್ಲಿ ಓದುವ ಸಮಯದಲ್ಲಿ ಧಾರವಾಡಕ್ಕೆ ಹಗಲೆಲ್ಲ (ಅಂದರೆ ತುಂಬಾ ಸಲ) ಹೋಗಿಬರುತ್ತಿದ್ದೆ. ಪ್ರತಿಸಲವೂ `ಮನೋಹರ ಗ್ರಂಥಮಾಲೆ` ಹತ್ತಿರ ಬಂದಾಗ ನನ್ನ ಹೆಜ್ಜೆಗಳು ನಿಧಾನವಾಗುತ್ತಿದ್ದವು, ಯಾರಾದರೂ ಸಾಹಿತಿಗಳು ಹೊರಗೆ ಬರಬಹುದು ಅಥವಾ ಒಳಗೆ ಹೋಗಬಹುದು ಎನ್ನುವ ಆಸೆಯಿಂದ. ಹಾಸ್ಟೇಲಿನ ದಿನಗಳವು. ತಿಂಗಳ ಖರ್ಚೆಲ್ಲ ಮಿಕ್ಕಿ ಒಂದಿಷ್ಟು ದುಡ್ಡು ಉಳಿದಿದ್ದರೆ, `ಮನೋಹರ ಗ್ರಂಥಮಾಲೆ`ಯ ಒಳಗೂ ಹೋಗುತ್ತಿದ್ದೆ, ನನಗೆ ಇಷ್ಟವಾದ ಒಂದೆರೆಡು ಪುಸ್ತಕಗಳನ್ನು ಕೊಳ್ಳುತ್ತಿದ್ದೆ. ಪುಸ್ತಕದ ರಾಶಿಗಳ ನಡುವೆ ರಮಾಕಾಂತ ಜೋಶಿ (ಮನೋಹರ ಗ್ರಂಥಮಾಲೆಯ ಮಾಲಿಕರು) ಕುಳಿತಿರುತ್ತಿದ್ದರು, ಅವರಿಗೆ ಪುಸ್ತಕದ ದುಡ್ಡುಕೊಟ್ಟು ಪೂಜ್ಯ ಭಾವದಿಂದ ನೋಡಿ ಹೊರಗೆ ಬರುತ್ತಿದ್ದೆ. ನಾನು ಕಾರ್ನಾಡರ ಬಹುತೇಕ ನಾಟಕಗಳನ್ನು ಕೊಂಡದ್ದು ಅಲ್ಲಿಯೇ. ಅಷ್ಟೇ ಅಲ್ಲ, ನಾನು ಕಾರ್ನಾಡರನ್ನು ನೋಡಿದ್ದು ಕೂಡ ಅಲ್ಲಿಯೇ. ಕಷ್ಟಪಟ್ಟು ನಾಕು ಮಾತು ಆಡಿದ್ದೆ. ನಿಮ್ಮ ನಾಟಕಗಳು ನನಗೆ ತುಂಬ ಇಷ್ಟ ಎಂತಲೂ ನಿಮ್ಮ ಸಿನೆಮಾಗಳು ತುಂಬ ಚೆನ್ನಾಗಿವೆ ಎಂತಲೂ ಏನೇನೋ ಹೇಳಿದ್ದೆ. ಅವರು ನನ್ನ ಬಗ್ಗೆ ವಿಚಾರಿಸಿ, ಚೆನ್ನಾಗಿ ಓದಿ ಒಳ್ಳೆಯ ಡಾಕ್ಟರಾಗು, ಅದರ ಜೊತೆ ಕನ್ನಡ ಸಾಹಿತ್ಯವನ್ನೂ ಓದು ಎಂದು ಹೇಳಿದ್ದರು.

ಪುರಾಣ, ಇತಿಹಾಸ ಮತ್ತು ಜನಪದದ ಕತೆಗಳನ್ನು ಎತ್ತಿಕೊಂಡು ಅವುಗಳಿಗೆ ಹೊಸ ದೃಷ್ಟಿಕೋನದಿಂದ ನೋಡಿ ಹೊಸ ಆಯಾಮಗಳನ್ನು ಕೊಟ್ಟು ನಾಟಕಗಳನ್ನು ಬರೆದವರಲ್ಲಿ ಮೊದಲಿಗರಲ್ಲದಿದ್ದರೂ ಮುಂಚೂಣಿಯಲ್ಲಿ ನಿಲ್ಲುವವರು ಕಾರ್ನಾಡರು. ಅವರ ನಾಟಕಗಳನ್ನು ಮೊದಲು ನೋಡಬೇಕು, ನೋಡಿದ ಮೇಲೆ ಓದಬೇಕು, ಆಗ ಅವರ ನಾಟಕಗಳು ಚೆನ್ನಾಗಿ ಅರ್ಥವಾಗುತ್ತವೆ, ಕಾರ್ನಾಡ್ ಎಂಬ ನಾಟಕಕಾರನ ಹಿರಿಮೆ ಅರ್ಥವಾಗುತ್ತದೆ. ಕಾರ್ನಾಡರ ನಾಟಕಗಳಲ್ಲಿ `ಮಾತಿ`ಗೆ ಎಷ್ಟು ಮಹತ್ವವೋ, `ಕ್ರಿಯೆ`ಗೂ `ತಂತ್ರ`ಕ್ಕೂ ಅಷ್ಟೇ ಮಹತ್ವ. ನಾಟಕಗಳನು ಓದಿದರೆ `ಮಾತು` ಅರ್ಥವಾಗಬಹುದು, ಆದರೆ ಅರ್ಥದ ಆಳ ನಾಟಕವನ್ನು ನೋಡಿದಾಗ ಮಾತ್ರ ಬಿಟ್ಟುಕೊಡುತ್ತದೆ. ಈ ಕಲೆ ಕಾರ್ನಾಡರಿಗೆ ಸಿದ್ಧಿಸಿತ್ತು. `ಯಯಾತಿ`ಯಿಂದ ಆರಂಭವಾದ ಕಾರ್ನಾಡರ ನಾಟಕ ರಚನೆ ಇದೇ ವರ್ಷ ಬಿಡುಗಡೆಯಾದ `ರಕ್ಷಸತಂಗಡಿ`ಯ ವರೆಗೆ ಒಟ್ಟು ೧೪ ನಾಟಕಗಳು, `ಮಾ ನಿಷಾಧ` ಎಂಬ ಏಕಾಂಕ ನಾಟಕವನ್ನೂ ಸೇರಿಸಿದರೆ ಹದಿನೈದು. ಬರೆದದ್ದು ಕಡಿಮೆ, ಆದರೆ ಪ್ರತಿ ನಾಟಕವೂ ವಿನೂತನ. ಕೊಂಕಣಿ, ಮರಾಠಿ ಮತ್ತು ಇಂಗ್ಲೀಷ್ ಭಾಷೆಗಳ ಮೇಲೆ ಪೂರ್ತಿ ಹಿಡಿತವಿದ್ದಾಗ್ಯೂ ಅವರು ಕನ್ನಡದಲ್ಲೇ ನಾಟಕಗಳನ್ನು ಬರೆದರು. ಅವರ ನಾಟಕದ ಅಗಲ ಆಳಗಳನ್ನು ನೋಡಿದರೆ ಅವರನ್ನು ಆಧುನಿಕ ಕನ್ನಡದ ಶೆಕ್ಸ್-ಪಿಯರ್ ಅನ್ನಬಹುದಲ್ಲವೇ?

ಮನೆಮಾತು ಕೊಂಕಣಿ, ಬೆಳೆದದ್ದು ಉತ್ತರ ಕರ್ನಾಟಕ, ನಂತರ ಓದಿಗೆ ಹೋಗಿದ್ದು ಇಂಗ್ಲಂಡಿಗೆ (ಆಕ್ಸ್-ಫರ್ಡ್), ನಂತರ ದಿಲ್ಲಿ ಮುಂಬೈಗಳಲ್ಲಿ ನಾಟಕ-ಸಿನೆಮಾಗಳ ಕೆಲಸ, ಇಳಿಗಾಲದಲ್ಲಿ ಬೆಂಗಳೂರು.

ಕನ್ನಡ ಸಿನೆಮಾಗೆ ಕಾರ್ನಾಡ್ ಚಿರಪರಿಚಿತರು. `ಸಂಸ್ಕಾರ`ದ `ಪ್ರಾಣೇಶಾಚಾರ್ಯ`ರ ಪಾತ್ರದಲ್ಲಿ ಕಾರ್ನಾಡರನ್ನಲ್ಲದೇ ಇನ್ನೊಬ್ಬರನ್ನು ಊಹಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. `ಸಂಸ್ಕಾರ` ಪಟ್ಟಾಭಿ ರಾಮರೆಡ್ಡಿ ನಿರ್ದೇಶನದ ಮೊದಲ ಚಿತ್ರ, ಅದಕ್ಕೆ ಚಿತ್ರಕತೆ ಬರೆದದ್ದು ಕಾರ್ನಾಡರು.

ಕನ್ನಡ ಅದ್ವಿತೀಯ ನಟ ನಿರ್ದೇಶಕ ಶಂಕರನಾಗ್ ಅವರನ್ನು ಪರಿಚಯಿಸಿದ್ದು ಕಾರ್ನಾಡರೇ, ಅವರ `ಒಂದಾನೊಂದು ಕಾಲದಲ್ಲಿ` ಚಿತ್ರದಿಂದ. ತಾತ್ವಿಕವಾಗಿ ಬೈರಪ್ಪನವರೊಡನೆ ಎಣ್ಣೆ ಸೀಗೆಕಾಯಿಯಂತಿದ್ದರೂ ಭೈರಪ್ಪನವರ ;ವಂಶವೃಕ್ಷ` ಮತ್ತು`ತಬ್ಬಲಿಯು ನೀನಾದೆ ಮಗನೇ` ಸಿನೆಮಾವನ್ನು ನಿರ್ದೇಶಿಸಿದರು. ಕುವೆಂಪು ಅವರ ಅಭೂತಪೂರ್ವ ಬೃಹತ್ ಕಾದಂಬರಿ` ಕಾನೂರು ಸುಬ್ಬಮ್ಮ ಹೆಗ್ಗಡತಿ`ಯನ್ನು ಸಿನೆಮಾ ಮಾಡುವ ಸಾಹಸವನ್ನೂ ಮಾಡಿದರು. ಶೂದ್ರಕನ `ಮೃಚ್ಛಕಟಿಕಾ` ಸಂಸ್ಕೃತ ನಾಟಕವನ್ನು `ಉತ್ಸವ್` ಎಂದು ಹಿಂದಿ ಸಿನೆಮಾ ಮಾಡಿದರು (ಮನ್ ಕ್ಯೂಂ ಬೆಹೆಕಾರೆ ಬೆಹೆಕಾ… ಹಾಡು ಅಜರಾಮರ). ನಾಟಕವಿರಲಿ ಸಿನೆಮಾ ಇರಲಿ, ದೃಶ್ಯ ಮಾಧ್ಯಮದ ಮೇಲೆ ಅವರದು ವಿಶೇಷ ಪರಿಣಿತಿ.

`ಆಡಾಡತ ಆಯುಷ್ಯ` ಎಂದು ಆತ್ಮಕತೆಯನ್ನೂ ಬರೆದಿದ್ದಾರೆ. ಕಾರ್ನಾಡರ ಮೊದಲರ್ಧದ ಬದುಕು ಇದರಲ್ಲಿ ತೆರೆದುಕೊಂಡಿದೆ.

ಹೆಚ್ಚಿನ ಜನರಿಗೆ ಕಾರ್ನಾಡ್ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಖ್ಯಾತ ನಾಟಕಕಾರ ಎನ್ನುವುದಕ್ಕಿಂತಲೂ, ಹಲವಾರು ಪ್ರಶಸ್ತಿಗಳನ್ನು ಪಡೆದ ಚಲನಚಿತ್ರ ನಿರ್ದೇಶಕ ಎನ್ನುವುದಕ್ಕಿಂತಲೂ, ಕಾರ್ನಾಡ ಸಿನೆಮಾ ನಟರಾಗಿ, `ಮಾಲ್ಗುಡಿ ಡೇಸ್`ನ ನಟರಾಗಿ ಚಿರಪರಿಚಿತರು. ಕಲಾತ್ಮಕ ಚಿತ್ರ ಮಾತ್ರವಲ್ಲದೇ ಕಮರ್ಷಿಯಲ್ ಸಿನೆಮಾಗಳಲ್ಲೂ ನಟಿಸಿದ್ದಾರೆ. ಕನ್ನಡವಲ್ಲದೇ ಹಿಂದಿ, ತಮಿಳು (ಕಾದಲನ್) ಸಿನೆಮಾಗಳಲ್ಲೂ ಅಭಿನಯಿಸಿದ್ದಾರೆ. ನನ್ನ ಮಗನಿಗೆ ಕಾರ್ನಾಡ್ ಬಗ್ಗೆ ಹೇಳುತ್ತಿದ್ದೆ, `ಯಾರವರು?` ಎಂದ. `ಏಕ್ ಥಾ ಟೈಗರ್` ಮತೂ `ಟೈಗರ್ ಜಿಂದಾ ಹೈ`ನಲ್ಲಿ ರಾ ದ ಚೀಫ್` ಎಂದೆ, ಅವನಿಗೆ ಅರ್ಥವಾಯಿತು. ಕನ್ನಡಿಗರ ಮನದಲ್ಲಿ `ಆನಂದ ಭೈರವಿ`ಯ ಭಾಗವತರಾಗಿ, `ಸಂತ ಶಿಶುನಾಳ ಶರೀಫ`ದಲ್ಲಿ ಗೋವಿಂದ ಭಟ್ಟರಾಗಿ ಮನಸ್ಸಿನಲ್ಲಿ ಉಳಿದಿದ್ದಾರೆ.

ಕನ್ನಡ ಸಾಹಿತ್ಯ ಮತ್ತು ಸಿನೆಮಾಗಳನ್ನು ಶ್ರೀಮಂತಗೊಳಿಸಿ, ನಾಟಕ-ಸಿನೆಮಾಗಳನ್ನು ಆಡಾಡುತ್ತಲೇ ಆಡಿಸಿ, ಭಾರತದ ಸಂಸ್ಕೃತಿಗೆ ಅಪಾರ ಕೊಡುಗೆಯನ್ನು ನೀಡಿ ತುಂಬು ಜೀವನವನ್ನು ನಡೆಸಿ ಆಯುಷ್ಯವನ್ನು ಮುಗಿಸಿದ್ದಾರೆ. ಅವರು ಬರೆದ ನಾಟಕಗಳಲ್ಲಿ, ನಟಿಸಿದ ನಿರ್ದೇಶಿಸಿದ ಸಿನೆಮಾಗಳಲ್ಲಿ ಇನ್ನೂ ಜೀವಂತವಾಗಿದ್ದಾರೆ. ಹೊಸ ಪೀಳಿಗೆ ಇದರಿಂದ ಸ್ಪೂರ್ತಿ ಪಡೆಯಲಿ, ಅವರ ನಾಟಕಗಳಿಗೆ ಪುನಜನ್ಮ ಬರಲಿ, ನಾಟಕಗಳು ಚಲನಚಿತ್ರಗಳಾಗಲಿ, ಅವರು ನಿರ್ದೇಶಿಸಿದ ಸಿನೆಮಾಗಳ ಬಗ್ಗೆ ಚರ್ಚೆಯಾಗಲಿ.

ತಬ್ಬಲಿಯು ನೀನಾದೆ ಮಗನೇ – ಕಾರ್ನಾಡ್ ನಿರ್ದೇಶನದ ಚಿತ್ರ: ಒಂದು ಅನಿಸಿಕೆ:


ಶಿಕ್ಶ್ಷಿತ-ಪಾಶ್ಚ್ಯಾತ್ಯ-ಆಧುನಿಕ-ಬಂಡವಾಳಶಾಹಿತನ ಮತ್ತು ಅಶಿಕ್ಷಿತ-ಭಾರತೀಯ-ಸನಾತನ-ಸಮಾಜವಾದಗಳ ನಡುವಿನ ಸಂಕೀರ್ಣ ತಿಕ್ಕಾಟವೇ ಈ ಸಿನೆಮಾದ ವಸ್ತು. ಭೈರಪ್ಪನವರ ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿದ ಚಿತ್ರ. ಚಿತ್ರ ಗೋವಿನ ಹಾಡಿನಿಂದ ಶುರುವಾಗುತ್ತದೆ ಮತ್ತು ಚಿತ್ರದ undercurrent ಸಂಕೇತವೂ ಆಗುತ್ತದೆ. ಅಮೇರಿಕದಲ್ಲಿ ಓದಿ, ಅಲ್ಲಿಯವಳನ್ನೇ ಮದುವೆಯಾಗಿ, ತನ್ನ ಹಳ್ಳಿಯಲ್ಲಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಧೃಡನಿಶ್ಚಯದಿಂದ ಭಾರತಕ್ಕೆ ನಾಯಕ ಮರಳುತ್ತಾನೆ. ತಂದೆ ಸತ್ತಾಗ ತಲೆ ಬೋಳಿಸಿಕೊಳ್ಳುವುದರಿಂದ ಶುರುವಾಗುವ ಈ ಘರ್ಷಣೆ, ನಾಯಕನ ಹೆಂಡತಿ ಹಳ್ಳಿಗೆ ಬರುವುದು, ನಾಯಕನ ತಾಯಿಯ ಮರಣ, ನಾಯಕನ ಹೆಂಡತಿ ಗೋಮಾಂಸ ತಿನ್ನುವುದು – ಈ ದೃಶ್ಯಗಳಲ್ಲಿ ಬಿಚ್ಚಿಕೊಳ್ಳುತ್ತ, ನಾಯಕನ ಮಗುವಿಗೆ ಹಾಲು ಬೇಕಾಗುವ ದೃಶ್ಯದಲ್ಲಿ ಪರಾಕಾಷ್ಟೆ ತಲುಪುತ್ತದೆ. ಇದೆಲ್ಲದರಿಂದ ಬೇಸತ್ತು, ಹಳ್ಳಿಯನ್ನು ಬಿಟ್ಟು ಮರಳಿ ಅಮೇರಿಕಕ್ಕೆ ಹೋಗುವ ನಿರ್ಧಾರ ಮಾಡುತ್ತಾನೆ ನಾಯಕ. ಅಂತ್ಯದಲ್ಲಿ, ಮರಳಿ ಮಣ್ಣಿಗೆ ಮರಳುವ ನಿಶ್ಚಯದಿಂದ ತನ್ನ ಮಾರಿದ ಗೋವುಗಳನ್ನು ಗುರುತಿಸಲಾಗದೇ ಗೋವಿಗಳ ಹೆಸರುಗಳನ್ನು ಕೂಗುವ ವ್ಯರ್ಥ ಪ್ರಯತ್ನದಲ್ಲಿ ಚಿತ್ರ ಮುಗಿಯುತ್ತದೆ. ಗೋವಿನ ಹಾಡಿನಲ್ಲಿ ಗೊಲ್ಲ ಕೂಗಿದರೆ ಎಲ್ಲ ಹಸುಗಳೂ ಬಂದು ನಿಲ್ಲುತ್ತವೆ, ಇಲ್ಲಿ ನಾಯಕನಿಗೆ ತನ್ನ ಹಸುಗಳು ಯಾವುವು, ಅವುಗಳ ಹೆಸರು ಗೊತ್ತಿಲ್ಲ, ಸುಮ್ಮನೇ ‘ಗಂಗೇ, ತುಂಗೇ…’ ಎಂದು ಕೂಗುತ್ತಾನೆ; ಚಿತ್ರದ ಆರಂಭದ ಗೋವಿನ ಹಾಡು, ಚಿತ್ರದ ಅಂತ್ಯದಲ್ಲಿ ಸಫಲಗೊಳ್ಳುತ್ತದೆ.

ನನ್ನ ಪ್ರಕಾರ ಚಿತ್ರ ಕಾದಂಬರಿಗಿಂತ ಹೆಚ್ಚು ದಟ್ಟವಾಗಿದೆ, ಸಂಕೀರ್ಣವಾಗಿದೆ. ಚಿತ್ರದ ನಿರ್ದೇಶನ ತುಂಬ ಸಂಯಮದಿಂದ ಪ್ರಬುದ್ಧವಾಗುತ್ತ ಸಾಗುತ್ತದೆ. ಚಿತ್ರದ ನಾಯಕನ ಹೊಸ ಮನೆ ಕೃತಕವಾಗಿ ಕಂಡರೂ, ಭಾರತದ ಹಳ್ಳಿಯಲ್ಲಿ ಪಶ್ಚಿಮದ ಆಧುನಿಕತೆಯನ್ನು ತರಲು ಹೆಣಗುವ ನಾಯಕನ ಮನಸ್ಥಿತಿಯ ಕನ್ನಡಿಯಂತಿದೆ. ಹಳ್ಳಿಯ ಹೊರಾಂಗಣ ಚಿತ್ರಣದಲ್ಲಿ ಎಲ್ಲೂ ಹಳ್ಳಿಯ ಅಥವಾ ನಿಸರ್ಗದ romantisism ಇಲ್ಲ; ಬದಲಿಗೆ ಹಳ್ಳಿಯ ದಾರಿದ್ರ್ಯ, ಬಿಸಿಲಿನ ಬೇಗೆ ಕಣ್ಣಿಗೆ ರಾಚುತ್ತದೆ. ಚಿತ್ರದ ಮಾತುಗಳು ಚಿತ್ರದ ಶಕ್ತಿ: ಶಾಸ್ತ್ರಿ ಮತ್ತು ನಾಯಕನ ಮಾತುಗಳಲ್ಲೇ ಭಾರತೀಯತೆ-ಪಾಶ್ಚ್ಯಾತತೆ, ಸಂಪ್ರದಾಯ-ನವ್ಯತೆ, ಸಮಾಜವಾದ-ಬಂಡವಾಳಶಾಹಿ, ಸನಾತನತೆ-ಆಧುನಿಕತೆಗಳ ಗೊಂದಲ, ಘರ್ಷಣೆಗಳ ಜೊತೆಜೊತೆಗೆ ಮನುಷ್ಯ ಸಹಜವಾದ ಈರ್ಷೆ, ದ್ವೇಷ, ಸ್ನೇಹ, ಮಾನವೀಯತೆಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ. ನಸೀರುದ್ದೀನ್ ಷಹಾ ಶಾಸ್ತ್ರಿಯ ಎಲ್ಲ ಗುಣಗಳನ್ನೂ, ಒಂಚೂರೂ ಸಿನಿಮೀಯತೆಯಿಲ್ಲದೇ ನಟಿಸುತ್ತಾನೆ, ಅಷ್ಟೇ ಚೆನ್ನಾಗಿ ಸುಂದರಕೃಷ್ಣ ಅರಸ್ ಧ್ವನಿ ಕೊಟ್ಟಿದ್ದಾನೆ.

ಗಿರೀಶ್ ಕಾರ್ನಾಡ್ ಅವರ ಬಗ್ಗೆ ಕರ್ನಾಟಕ ಸರ್ಕಾರ ವಾರ್ತಾ ಇಲಾಖೆಯ ಸಾಕ್ಷ್ಯಚಿತ್ರದ ಒಂದು ಭಾಗ; ನಿರ್ದೇಶನ ಕೆ. ಎಂ. ಚೈತನ್ಯ

9 thoughts on “ಕನ್ನಡದ ಶೆಕ್ಸ್-ಪಿಯರ್ – ಗಿರೀಶ್ ಕಾರ್ನಾಡ್: ಕೇಶವ್ ಕುಲಕರ್ಣಿ

 1. I wrote this as a stand alone article but it could not get published as such. Therefore I am posting this as a comment so the the “other” not so popular aspect of Karnad and also as a voice outside of the convenient path. Perhaps Karnad,who proposed openness would approve of the contents.
  ಗಿರೀಶ್ ಕಾರ್ನಾಡ್ – ಉಳಿದವರು(ನು..?) ಕಂಡಂತೆ

  ಕನ್ನಡ ಸಾರಸ್ವತ ಲೋಕ ಇತ್ತೀಚಿಗೆ ಬಹುಮುಖ ಪ್ರತಿಭೆಯಾದ ಗಿರೀಶ್ ಕಾರ್ನಾಡ ಅವರನ್ನು ಕಳೆದುಕೊಂಡಿದೆ. ಅವರನ್ನು ನೆನೆದು ಹಲವಾರು ಲೇಖನಗಳು ಅಲ್ಲಲ್ಲಿ ಪ್ರಕಟವೂ ಆಗಿವೆ. ದೇಶಿಯೂ ವಿದೇಶವಾಸಿಯೂ ಆಗಿ ನಾನು ಗಮನಿಸಿಕೊಂಡಂತೆ ಕರ್ನಾಡ್ ಕುರಿತ ನನ್ನ ಅಭಿಪ್ರಾಯ ಇಲ್ಲಿದೆ.

  ಹತ್ತನೇ ತರಗತಿಯವರೆಗೆ ಹಲವು ಹಳ್ಳಿಗಳಲ್ಲಿ ಹಾಗೂ ಬರಗೂರು ಎಂಬ ಕುಗ್ರಾಮದಲ್ಲಿದ್ದ ನನಗೆ ಕಾರನಾಡರ ಪರಿಚಯ ಆಗಿದ್ದು ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ ದೂರದರ್ಶನದಲ್ಲಿ “ಸ್ವಾಮಿ” ಎಂಬ ಹಿಂದೀ ಚಲನಚಿತ್ರ ನೋಡಿದಾಗ. ಆಗ ನನಗೆ ೧೨-೧೩ ವರ್ಷ ಇದ್ದಿರಬೇಕು. ಹಲವರ ಮನೋಜ್ಞ ಅಭಿನಯವೂ ,ಒಳ್ಳೆಯ ಚಿತ್ರಕಥೆಯೂ ಇದ್ದ ಈ ಹಿಂದಿ ಚಿತ್ರದಲ್ಲಿ ಬಹಳ ಕಡಿಮೆ ಮಾತಿರುವ ಗಿರೀಶರ ಪಾತ್ರ ನನಗೆ ಇಷ್ಟವಾಯಿತು. ಅದರಲ್ಲಿನ ಅವರ ಪಾತ್ರದ ಉದಾತ್ತಾತೆಯೂ ನನ್ನ ಮೆಚ್ಚುಗೆಯ ಹಿಂದಿನ ಕಾರಣ ಇರಬಹುದು. ಮುಂದೆ ಅವರ ಹಲವಾರು ಸಿನೆಮಾಗಳನ್ನು ನೋಡಿದ್ದೇನೆ. “ಅಪ್ನೆ ಪರಾಯೇ” ಎಂಬ ಚಿತ್ರದಲ್ಲಿ ಘಟಾನುಘಟಿಗಳಾದ ಉತ್ಪಲ್ ದತ್ತ್ ,ಅಮೋಲ ಪಾಳೇಕರ್, ಶಬಾನಾ ಅಜ್ಮಿ ಅವರ ಜತೆಗೆ ನಟಿಸಿದ್ದಾರೆ. ಅದರಲ್ಲಿ ಇವರದ್ದು negative ಸ್ವಾರ್ಥಪರ ವ್ಯಕ್ತಿತ್ವ. ಅಲ್ಲಿ ನಟನೆ ಅಷ್ಟಕ್ಕಷ್ಟೇ ಎನಿಸಿದ್ದೂ ಇದೆ. ಇನ್ನು ಆನಂದ ಭೈರವಿಯಲ್ಲಿ ಉತ್ತಮ ನಟನೆ, ಎರಡು ಮಾತಿಲ್ಲ. ಹೀಗೆ ಇವರ ಪಾತ್ರದ ಅಗಾಧತೆಯ ಮೇಲೆ ನಟನೆ ಇಷ್ಟ ಅಥವಾ ಇಲ್ಲ ಎಂದೆನಿಸಬಹುದಾದಂಥ ಏರಿಳಿತಗಳ ನಟ ಎಂದು ನನ್ನ ಅನಿಸಿಕೆ. ಹಿಂದಿಯ ಸಂಜೀವಕುಮಾರನಂತೆ, ಕನ್ನಡದ ರಾಜಕುಮಾರನಂತೆ, ಇಂಗ್ಲೀಷಿನ ಮಾರ್ಗನ್ ಫ್ರೀಮನ್ನಂತೆ ನೂರಕ್ಕೆ ನೂರು ಎನ್ನುವಂಥ ನಟನಾ ಕೌಶಲ್ಯ ಇದ್ದಿತ್ತೆ ಇಲ್ಲವೇ ಎಂಬುದು ನನ್ನ ಜಿಜ್ಞಾಸೆ. ಇಷ್ಟಾಗಿಯೂ ಕಾರ್ನಾಡರು ಕಡೆಯವರೆಗೆ ತಮ್ಮ ಪ್ರಸ್ತುತತೆಯನ್ನು ಉಳಿಸಿಕೊಂಡು ಬಂದಿದ್ದರು ಎಂಬುದು ಗಮನಾರ್ಹ. ಗಣಿತಶಾಸ್ತ್ರದಲ್ಲಿ ಪದವಿಗಳಿಸಿದ ಗಣಿತಜ್ಞ, ಸಾಹಿತ್ಯ ಕೃಷಿಯಲ್ಲಿಯೂ ಆ ಗಣಿತಶಾಸ್ತ್ರ ಬೇಡುವ ಶಿಸ್ತು,ಅಚ್ಚುಕಟ್ಟುತನಗಳನ್ನು ರೂಢಿಸಿಕೊಂಡಿದ್ದರು ಎಂಬುದು ಪ್ರಶಂಸನೀಯ,ಅನುಕರಣೀಯ ಹಾಗೂ ಅಪರೂಪವಾದ ಗುಣ.

  ಕಾರ್ನಾಡ್ರು ಹೆಚ್ಚು ಹೆಸರು ಮಾಡಿದ್ದು ತಮ್ಮ ನಾಟಕಗಳ ಮೂಲಕ ಎಂದು ಓದಿ ತಿಳಿದಿದ್ದೇನೆ. ನಾನು ಖುದ್ದಾಗಿ ಅವರ ನಾಟಕಗಳನ್ನು ನೋಡಿಲ್ಲವಾದರೂ ನಾನಾ ಸ್ನೇಹಿತರಿಂದ ಕೇಳಿದ್ದೇನೆ. ಮೆಚ್ಚುಗೆಯ ಮಾತುಗಳು ಬಹುತೇಕರದ್ದು. ಆ ಮಟ್ಟಿಗೆ ಅವರೊಬ್ಬ ಯಶಸ್ವೀ ನಾಟಕಕಾರ; ಲೋಕಮೆಚ್ಚಿದ ಬರಹಗಾರ. ತಾವೇ ಹೇಳಿದಂತೆ ಅವರು ತಮ್ಮ ನಾಟಕಗಳನ್ನು ನಿರ್ದೇಶಿಸಿರಲಿಲ್ಲವಂತೆ. ಇದು ಒಂದು ನಷ್ಟವೇ ಸರಿ. ನಮ್ಮ ಪುರಾಣಗಳ ಕಥೆಗಳನ್ನು ಯಥೇಚ್ಚವಾಗಿ ಬಳಸಿಕೊಂಡು ತಮಗೆ ಬೇಕಾದಂತೆ ಕಥಾವಸ್ತುವನ್ನು ಪ್ರತ್ಯಾತ್ಮಕ-ನೇತಾತ್ಮ್ಯಕ ಬಣ್ಣಗಳನ್ನೂ ಕೊಟ್ಟು ನಿರೂಪಿಸಿದ ಕಾರ್ನಾಡರು, ಅಷ್ಟೊಂದು ಸ್ವಾತಂತ್ರ್ಯವನ್ನು ಕೊಟ್ಟ ಸನಾತನ ಧರ್ಮದ ಬಗ್ಗೆ, ಭಾರತೀಯ ಸಂಸ್ಕೃತಿಯ ಬಗ್ಗೆ ತಿರಸ್ಕಾರ ಎನ್ನುವಂಥ ಮನೋಭಾವನೆಯನ್ನೇ ತಮ್ಮ ಮಾತು ಕೃತಿಗಳಲ್ಲಿ ಕಡೆಯವರೆಗೂ ತೋರುತ್ತಾ ಬಂದಿದ್ದು ವಿಪರ್ಯಾಸಕರ. ಒಂದು ಉದಾಹರಣೆ ನೋಡೋಣ: ಯಯಾತಿ ಎಂಬ ಚಂದ್ರವಂಶದ ಚಕ್ರವರ್ತಿಯೊಬ್ಬ ಮಹಾ ಪರಾಕ್ರಮಿಯೂ ,ಧರ್ಮಿಷ್ಟನೂ, ಕಾಮ ಲೋಲುಪನೂ, ಮಗನ ಯೌವ್ವನ ಕೇಳಬಲ್ಲ ಸ್ವಾರ್ಥಿಯೂ, ಕೊನೆಗೆ ಎಲ್ಲವನ್ನೂ ತ್ಯಜಿಸಿ ನಡೆವ ವಿರಾಗಿಯೂ ಆಗುವಂತಹ ಅದ್ಬುತ ಮಾನವ ರೂಪಕವನ್ನು ಕೊಟ್ಟ ನಮ್ಮ ಧರ್ಮ-ಪರಂಪರೆಯು ಕಾರ್ನಾಡರಿಗೆ ಹಾಲು ಹಿಂಡಬಲ್ಲ ಹಸುವಾಯಿತೇ ಹೊರತು ಪೂಜನೀಯವಾದ ಗೋವು ಆಗಲೇ ಇಲ್ಲ!! ಇದು ಅವರಲ್ಲಿ ನನಗೆ (ಅವರಂಥ ಇನ್ನೂ ಎಷ್ಟೋ) ಕಂಡು ಬರುವ ಬಹು ದೊಡ್ಡ ವಿರೋಧಾಭಾಸ. ಆದರೆ, ತುಘಲಕ್ ಹಾಗೂ ಟಿಪ್ಪುವನ್ನು ಕುರಿತು ಅವರು ರಚಿಸಿದ ನಾಟಕಗಳಲ್ಲಿ, ಆ ಇಬ್ಬರೂ ಮತಾಂಧ ರಾಜರ ಕ್ರೌರ್ಯ ಅಸಹಿಷ್ಣುತೆ, ಪರಧರ್ಮ ಪೀಡನೆಯ ಕುರಿತಾಗಿ ಸಾಕಷ್ಟು ಐತಿಹಾಸಿಕ ಪುರಾವೆಗಳಿದ್ದಾಗ್ಗ್ಯೂ ಅವುಗಳನ್ನು ಉದ್ದೇಶಪೂರ್ವಕ ನಿರ್ಲಕ್ಷಿಸಿ ಬೇರೆಯದೇ ಜಾಡಿನಲ್ಲಿ ನಾಟಕ ಬರೆದಿರುವುದನ್ನು ಕಾಣುತ್ತೇವೆ. ಆ ಧೈರ್ಯವಾಗಲೀ ಪ್ರಾಮಾಣಿಕತೆಯಾಗಲೀ ಹಲವು “ಪ್ರಶಸ್ತಿಗಳಿಗೆ’ ಭಾಜನರಾಗಿರುವ ಅವರಿಂದ ಅವರಿಂದ ನಿರೀಕ್ಷಿಸುವುದು ಅವಾಸ್ತವೇ ಇರಬಹುದು. ಗೋವಿನ ಮಾಂಸ ಭಕ್ಷಣೆಗೆ ತೋರಿದ ಆಸ್ಥೆಯನ್ನು ಹಂದಿಯ ಮಾಂಸದ ಭಕ್ಷಣೆಯಲ್ಲಿ ತೋರಿಸಲಿಲ್ಲ ಎಂಬುದು ಅದೇ ವಿರೋಧಾಭಾಸದ ಇನ್ನೊಂದು ಮುಖ. ಇಲ್ಲಿ ನಾವು ದೂರದರ್ಶನದ ಧಾರಾವಾಹಿಗಳಲ್ಲಿ ನಟಿಸಿ, ದಿಗ್ದರ್ಶಿಸಿ, ನಾಟಕಗಳನ್ನು ರಚಿಸಿ ರಂಗದಮೇಲೆ ನಟಿಸಿ ನಿರ್ದೇಶಿಸಿ ಕಾಯಾ ವಾಚಾ ಮನಸಾ ಏಕರೂಪವಾಗಿ ಬದುಕಿ ಬಾಳಿ ಇತರರನ್ನು ಬೆಳೆಸಿ ಸಮಾಜಮುಖಿಯಾಗಿ ಹಲವಾರು ಕಾರ್ಯಗಳನ್ನು ಮಾಡುತ್ತಿರುವ ನಾಟಕ ರಂಗದವರೇ ಆದ ಶ್ರೀ ಎಸ್.ಏನ್ ಸೇತೂರಾಂ ಅವರನ್ನು ಕಾರ್ನಾಡರ ಜತೆಗೆ ತೂಗಿ ನೋಡಬಹುದು.

  ಬಹುಮುಖ ಪ್ರತಿಭೆಯ ಕಾರ್ನಾಡರ ಮತ್ತೊಂದು ಕ್ಷೇತ್ರ ಸಿನೆಮಾ ನಿರ್ದೇಶನ. ಹಿಂದಿಯ ಉತ್ಸವ್ ನನ್ನ ಅಚ್ಚುಮೆಚ್ಚಿನ ಸಿನೆಮಾ. ಎಷ್ಟು ಸಾರಿ ನೋಡಿದರೂ ಏನೋ ಒಂದು ಹೊಸ ಅಂಶ ಗೋಚರಿಸುತ್ತದೆ. ಶಶಿ ಕಪೂರನ ನಟನೆಗೆ ಕೆಲವು ಸಾರಿ ನೋಡಿದ್ದೇನೆ. ಇನ್ನು ಕನ್ನಡದ ಒಂದಾನೊಂದು ಕಾಲದಲ್ಲಿ, ತಬ್ಬಲಿಯು ನೀನಾದೆ ಮಗನೆ ಎರಡೂ ಚೆನ್ನಾಗಿ ಮೂಡಿಬಂದಿವೆ. ಕಾಡು, ವಂಶವೃಕ್ಷ ನನಗೆ ಇಷ್ಟವಾಗಲಿಲ್ಲ. ಇಷ್ಟಾನಿಷ್ಟಗಳು ವ್ಯಕ್ತಿಗತ. ಕೆಲವು ಇಷ್ಟವಾಗಬಹುದು ಕೆಲವು ಇಲ್ಲ. ಶ್ರೀ ಭೈರಪ್ಪನವರ ಕಾದಂಬರಿಯಾಧರಿಸಿದ ಸಿನೆಮಾಗಳನ್ನು ಮಾಡಿ ಹೆಸರು, ಪ್ರಶಸ್ತಿ ಹಣ ಎಲ್ಲವು ಸಂದಮೇಲೆ ಅವರ ಸೈದ್ಧಾಂತಿಕ ವಿರೋಧಿಯಾಗಿ ಬದಲಾಗಿದ್ದೊಂದು ವಿಪರ್ಯಾಸ. ಹೊಳೆ ದಾಟಿದ ಮೇಲೆ ಅಂಬಿಗನಿಗೇನೋ ಅಂದರು ಎಂದೆನ್ನುವ ಗಾದೆಯೊಂದು ನಿಮ್ಮ ಮನಸ್ಸಿನಲ್ಲಿ ಸುಳಿದುಹೋಗಬಹುದು. ಏಣಿ ಏರಿದಂತೆ ಯಾವ ಬಣದ ಜತೆಗೆ ಗುರುತಿಸಿಕೊಂಡರೆ ತಮಗೆ ಸಲೀಸು ಎಂಬುದು ಅನಂತಮೂರ್ತಿಯಂತೆ ಇವರಿಗೂ ಕಂಡಿದ್ದಿರಬಹುದು!! ತಾವೇ ಹೇಳಿಕೊಂಡಂತೆ ಜ್ಞಾನಪೀಠಕ್ಕೆ ಲಾಬಿ ಮಾಡಿ ಪಡೆಯಬೇಕೆಂದಿದ್ದರೆ ಆಯಾ ಬಣದ ಜತೆಗೆ ಗುರುತಿಸಿಕೊಳ್ಳುವುದು ಅನಿವಾರ್ಯವಷ್ಟೇ.

  ಕಲಾವಿದರನ್ನು ಕಲೆಯ ಮಸೂರದ ಮೂಲಕವೇ ನೋಡಬೇಕು, ಅವರ ವೈಯಕ್ತಿಕ ಜೀವನವನ್ನಾಗಲೀ , ಕಲೆಯ ಆಚೆಗಿನ ಬದುಕನ್ನು ವಿಶ್ಲೇಷಿಸಲು ಹೋಗಬಾರದು. ಅದು ಅವರ ವ್ಯಕ್ತಿತ್ವಕ್ಕೆ ಮಾಡುವ ಅಪಮಾನ-ಅನ್ಯಾಯ ಎಂಬ ವಾದವಿದೆ. ಅಂತಹ ಹಲವರ ಜತೆಗೆ ಚರ್ಚೆ, ವಾದ, ಜಗಳ ಎಲ್ಲವನ್ನೂ ಮಾಡಿದ್ದೇನೆ. ಆದರೆ ಈ ಉದಾರವಾದಿಗಳು, ಪ್ರಶ್ನೆಯಲ್ಲಿರುವ ಕಲಾವಿದನ ಬದುಕು ಕಲೆಯ ಕ್ಷೇತ್ರಕ್ಕೆ (ಸಾಹಿತ್ಯವೂ ಸೇರಿ) ಮಾತ್ರ ಮೀಸಲಾಗಿತ್ತೆ ಅಥ್ವಾ ಅವರು ಸಮಾಜದೊಂದಿಗೆ ನೇರ ಅಥವಾ ಪರೋಕ್ಷ ಪರಿಣಾಮಗಳಲ್ಲಿ ಭಾಗಿಯಾಗಿದ್ದಾರೆಯೇ ಎಂದು ಕೇಳಿದಾಗ ಅದಕ್ಕೆ ಕಿವಿಗೊಡರು. ಕೆ.ಎಸ್. ಅಶ್ವಥ್, ಬಾಲಕೃಷ್ಣ, ಸಿದ್ಧಲಿಂಗಯ್ಯ, ವಿಜಯಭಾಸ್ಕರ್, ಪಿ.ಬಿ. ಶ್ರೀನಿವಾಸ್, ಎಸ್ ಜಾನಕಿ, ಇತ್ಯಾದಿ ಕಲಾವಿದರು, ತಣ್ಣಗೆ ಸಾಹಿತ್ಯ ಕೃಷಿ ಮಾಡಿ ಮರೆಯಾದ ಪು.ತಿ. ನರಸಿಂಹಾಚಾರ್, ಕೆ.ಎಸ. ನ ಇತ್ಯಾದಿ ನೇರವಾಗಿ ಸಮಾಜದ ಆಗು ಹೋಗುಗಳಲ್ಲಿ ತಲೆ ಹಾಕಲಿಲ್ಲ, ಪ್ರಕ್ಷುಬ್ಧತೆ ಉಂಟುಮಾಡಲಿಲ್ಲ, ವಿವಾದಗಳಲ್ಲಿ ಕೈಹಾಕಿ ಉರಿ ಹಚ್ಚಲಿಲ್ಲ. (ಅವರೆಲ್ಲರೂ ನೆಟ್ಟಗೆ ನೇರವಾಗಿ ಬದುಕಿದರು ಎಂಬುದು ಬೇರೆಯೇ ವಿಷಯ ,ಅದಿರಲಿ.) ಆದರೆ ಗಿರೀಶ್ ಕಾರ್ನಾಡು ಇದ್ಯಾವುದಕ್ಕೂ ಹಿಂಜರಿಯಲಿಲ್ಲ. ಅದರಲ್ಲೂ ಅವರ ನಿಲುವು ಒಂದು ಬಣದ ಕಡೆಗೆ ಇದ್ದುದು,ಸನಾತನಧರ್ಮ ವಿರೋಧಿಯಾಗಿದ್ದುದು ಎಲ್ಲರ ಅರಿವಿಗೂ ಬಂದಿರುವುದೇ ಆಗಿದೆ. ಹಾಗಾಗಿ ಅವರ ನಂಬಿಕೆ ನಿಲುವುಗಳನ್ನು ತೂಗಿನೋಡುವುದು ಸಹಜವೂ ನ್ಯಾಯಪರವೂ ಆಗಿದೆ..

  ಕನ್ನಡದಿಂದ ಬದುಕು ಕಟ್ಟಿಕೊಂಡ ಕಾರ್ನಾಡು ತಮ್ಮ ಬಳಗದ ಅನೇಕರಂತೆ ಅದನ್ನು ಹಾಲು ಹಿಂಡುವ ಹಸುವಾಗಿ (ಮಾಂಸದ ಆಕರ ಎಂದಾದರೂ ಅನ್ನಿ) ಬಳಸಿದರೇ ಹೊರತು ಮೇವು ಹಾಕಲಿಲ್ಲ. ಅವರ ಮೊದಲ ನಾಟಕ ಯಯಾತಿಯಿಂದ ಮಾ ನಿಷಾದ ಎಂಬುವುದರವರೆಗೆ ಅಷ್ಟು ವರ್ಷಗಳಲ್ಲಿ ಕನ್ನಡ ನಿರಂತರ ಶಾಲೆ ಕಾಲೇಜುಗಳಲ್ಲಿ ಸೊರಗುತ್ತಲೇ ಬಂತು. ಸಂವಹನದಲ್ಲಿ ಬೆರೆಕೆಯಾಗುತ್ತಲೇ ಹೋಯಿತು. ಅದರ ಬಗ್ಗೆ ಅವರಾಗಲೀ ಅವ್ರ ಬಳಗವಾಗಲೀ ಯಾವ ಹೋರಾಟವನ್ನೂ ಮಾಡಲಿಲ್ಲ,ಜಾಗೃತಿಯನ್ನೂ ಮೂಡಿಸಲಿಲ್ಲ. ನಕ್ಸಲರಿಗೆ ಮಿಡಿದ ಕರುಳು ಕನ್ನಡಕ್ಕೆ ಮಿಡಿಯದೇ ಹೋಗಿದ್ದು ಹೇಗೆ?ಸರಕಾರದ ಆಯಕಟ್ಟಿನ ಜಾಗಗಳಲ್ಲಿ ಇವರ ಮಾತು ಕೇಳುವ ಜನರಿದ್ದರೂ ಇವರು ಕನ್ನಡದ ದುಸ್ಥಿತಿಯನ್ನು ಕಂಡು ಕೊರಗಲಿಲ್ಲ,ಮರುಗಲಿಲ್ಲ,. ಜಾಗತಿಕ ರಂಗದಲ್ಲಿ ಕನ್ನಡಕ್ಕೆ ಸ್ಥಾನ ದೊರಕಿಸಿದರು ಎಂಬ ಹೊಗಳಿಕೆ ಕೇಳಿಬರುತ್ತದೆಯಾದರೂ ಬೇರು ಸಾಯುವಾಗ ಮನಮೋಹಕ ಚಿಗುರಿನ ಪ್ರಯೋಜನವಾದರೂ ಏನು. ಕಾರನಾಡರದ್ದು ಆ ಮಟ್ಟಿಗೆ “elite” ಗುಂಪಿನ ಕನ್ನಡವಷ್ಟೇ. ಇಲ್ಲಿ ಭೈರಪ್ಪನವರನ್ನು ನೆನೆಯಬೇಕು. ತಮ್ಮ ಪುಸ್ತಕದ ರಾಯಧನ ತಮ್ಮದು; ಅದಕ್ಕೆ ಗುರುತಿಸಿ ಬಂದ ಪ್ರಶಸ್ತಿ ಸಮಾಜದ್ದು ಎಂಬ ಭಾವ ಅವರದ್ದು (ಅಂತಹ ಬಹಳ ಜನರಿದ್ದಾರೆ). ಶಾಲೆ, ಕಾಲೇಜು, ಗ್ರಂಥಾಲಯ, ಸಮುದಾಯ ಭವನ , ಪ್ರಶಸ್ತಿ, ಕನ್ನಡ ಅಭಿವೃದ್ಧಿ ಹೀಗೆ ಅವರು ಎಲ್ಲ ಕೆರೆಯ ನೀರನ್ನು ಕೆರೆಗೆ ಚೆಲ್ಲಿದ ವರಪುರುಷರು. ಆ ಉದಾತ್ತತೆಯನ್ನು ಕಾರ್ನಾಡರಾಗಲೀ ಅನಂತಮೂರ್ತಿಯಾಗಲೀ, ಲಂಕೇಶ ಆಗಲೀ, ಆತನ ಮಗಳು ಗೌರಿಯಾಗಲೀ ಅಥವಾ ಆ ಬಣದ ಯಾರೇ ಅಗಲೀ ಮಾಡಲಿಲ್ಲ ಎಂಬುದು ಗಮನಾರ್ಹ. ಪ್ರಗತಿಪರ ಎಂದು ತಮಗೆ ತಾವೇ ಕರೆದುಕೊಂಡು ಸಮಾಜ ಸ್ವಾಸ್ಥ್ಯಕ್ಕಿಂತ ವ್ಯಕ್ತಿಸ್ವಾತಂತ್ರ್ಯವೇ ಪ್ರಮುಖವಾದದ್ದು ಎಂದು ಪ್ರತಿಪಾದಿಸುವ ಇವರು ನಿರ್ಲಕ್ಷಿಸುವ ಮತ್ತೊಂದು ಅಂಶವೆಂದರೆ ಇವರುಗಳು ಯಾರೂ ಒಂದು ಭಯೋತ್ಪಾದನೆಯ ಅಥವಾ ಇನ್ಯಾವುದೇ ಅಪರಾಧ -ಅನಾಚಾರಗಳಿಗೆ ಬಲಿಯಾದವರ ಪರವಾಗಿ ದನಿಯೆತ್ತದಿರುವುದು. ನಕ್ಸಲರೆಂದರೆ ಅಪ್ಯಾಯಮಾನವಾಗಿರುವ ಇವರು ಅವರ ಕುಕೃತ್ಯಗಳಿಗೆ ಬಲಿಯಾದ ನಾಗರೀಕರಿಗಾಗಲಿ, ಸೈನಿಕರಿಗಾಗಲೀ ಮಿಡಿಯಲಾರರು. ನಗರ ನಕ್ಸಲರ ಮೇಲೆ ದಾಳಿನಡೆದಾಗ ಮೂಗಿನಲ್ಲಿ ನಳಿಕೆಯಿದ್ದರೂ ಪ್ರತಿಭಟಿಸಿದ ಕಾರ್ನಾಡ್ ಬೇರೆ ಯಾವ ಸಮಾಜಮುಖಿಯಾದ ಚಳುವಳಿಯಲ್ಲಿ ಸಕ್ರಿಯರಾಗಿದ್ದರು ಎಂಬುದು ದುರ್ಬಿನ್ ಹಾಕಿ ಹುಡುಕಿದರೂ ಕಾಣಲಾರದು. ಸಮಾಜ ಪ್ರಜ್ಞೆ , ಸಮಾನತೆ ಇತ್ಯಾದಿ ಮಣ್ಣು ಮಸಿ ಎಂದು ಬಡಬಡಿಸುವ ಇವರು ತಮ್ಮ ಐಷಾರಾಮಿ ಜೀವನ ಬಿಟ್ಟು ಬದುಕಲಾರರು. ವ್ಹಿಸ್ಕಿ, ಸ್ಕಾಚು,ರಮ್ಮು, ಎಲ್ಲಾ ಬೇಕು!! ಸರಕಾರದ ಸಂಬಳ,ಸವಲತ್ತು, ಬಂಡವಾಳಶಾಹಿಯ ಸಿನೆಮಾ,ರಕ್ಷಣಾ ವ್ಯವಸ್ಥೆಯ ಪೋಲಿಸರ ಭದ್ರತೆ ಎಲ್ಲವೂ ಬೇಕು; ಆದರೂ ವ್ಯವಸ್ಥೆಯ ವಿರುದ್ಧದ ಚಟುವಟಿಕೆ ನಡೆಸುತ್ತಿರಬೇಕು!! ನಕ್ಸಲರನ್ನು ಬೆಂಬಲಿಸಿದ ಕಾರ್ನಾಡ್ ತಮ್ಮ ಮಕ್ಕಳನ್ನು ವಿದೇಶೀ ವಿದ್ಯಾಲಯಗಳಲ್ಲಿ ಓದಿಸಿ ಭದ್ರ ಮಾಡಿದರು ಎಂಬುದು ನೋವಿನ ಸಂಗತಿ. ಕಂಡವರ ಬಡವರ ಮಕ್ಕಳು ಕಾಡು ಪಾಲಾಗಿ ಬಂದೂಕು ಎತ್ತಿಕೊಂಡು ಒಂದಲ್ಲಾ ಒಂದುದಿನ ಪೋಲೀಸರ ಬಂದೂಕಿಗೋ ಇಲ್ಲಾ ತಮ್ಮವರದ್ದೇ ಗುಂಡಿಗೋ ಬಲಿಯಾಗಿ ಮಣ್ಣು ಪಾಲಾಗುತ್ತಿದ್ದರೆ ಈ ಎಲ್ಲ ನವ ಕಮ್ಮ್ಯುನಿಷ್ಟರ ಮಕ್ಕಳು ಬದುಕು ಕಟ್ಟಿಕೊಂಡಿದ್ದಾರೆ- ಬಂಡವಾಳಶಾಹಿಗಳ ಜಗತ್ತಿನಲ್ಲಿ!!.

  ಕನ್ನಡ ಒಂದು ಸಮೃದ್ಧವಾದ ಭಾಷೆ. ಕಾರ್ನಾಡರಿಗೆ ಮೊದಲೂ , ಅನಂತರವೂ ಸದ್ಯದ ೩೦-೬೦ ವರ್ಷದ ಪೀಳಿಗೆ ಇರುವವರೆಗೆ ಸಾಹಿತ್ಯ, ಕಲೆ, ಸಂಗೀತ, ನಾಟ್ಯ, ನಾಟಕ,ಚಲನಚಿತ್ರಗಳಲ್ಲಿ ಹೊಸ ಪ್ರತಿಭೆಗಳು, ಸಾಧಕರು ಬಂದು ಹೋಗುತ್ತಾರೆ. ಕಾರ್ನಾಡರ ಸಾವು ಒಂದು ನಷ್ಟವಾದರೂ ತುಂಬಲಾರದ್ದಲ್ಲ.ಒಬ್ಬರಲ್ಲಾ ಒಬ್ಬರು ಬಂದಾರು. ಆದರೆ ಇವರುಗಳ ನಿಲುವು ನಡತೆಗಳು ಮಾಡಿರುವ ಹಾನಿ ದೀರ್ಘಕಾಲಿಕವಾದದ್ದು. ಯಾವುದೇ ವ್ಯಕ್ತಿಯ ಚಿತ್ರಣವನ್ನು ನೀಡುವಾಗ ಸಮಗ್ರ ಪರಿಗಣನೆ ಅತಿ ಅವಶ್ಯಕ;ಆದ್ದರಿಂದಲೇ ಕಾರ್ನಾಡ್ ಎಂಬ ಕಲಾವಿದನನ್ನು ಅವೇ ಮೌಲ್ಯಗಳ ತೂಗುಕಲ್ಲಿನ ತಕ್ಕಡಿಯಲ್ಲಿಟ್ಟು ತೂಗಿನೋಡುವುದು ಅವರು ಮರೆಯಾದ ಈ ಸಂದರ್ಭದಲ್ಲಿ ಆದ್ಯತೆಯಾಗಬೇಕಿದೆ. ಬದುಕಿನುದ್ದಕ್ಕೂ ಹಿಂದೂಧರ್ಮವನ್ನು ಬೈಯುತ್ತಲೇ ವಾಯುಸ್ತುತಿ ಪಠಿಸಿ, ಮಾಧ್ವಸಂಪ್ರದಾಯದ ಪ್ರಕಾರ ಗಂಧದ ಕೊರಡುಗಳ ಜತೆಗೆ ಪರಂಧಾಮಗೈದ ಅನಂತಮೂರ್ತಿಯಷ್ಟು ಆಷಾಢಭೂತಿಯಲ್ಲದ, ಮಾತಿನಲ್ಲಿಯೇ ಮನೆ ಕಟ್ಟಡ ಕಾರ್ನಾಡರಿಗೆ ಒಂದು ಗಾಂಭೀರ್ಯತೆ ಜತೆಗೆ ಎತ್ತರದ ನಿಲುವು, ಸ್ಫುರದ್ರೂಪ, ತೀಕ್ಷ್ಣಮತಿ ಎಲ್ಲವೂ ಇತ್ತು ಹಾಗೂ ಅವುಗಳನ್ನು ಚೆನ್ನಾಗಿ ಬಳಸಿಕೊಂಡರು ಸಹ. ಕಾಲಕಾಲಕ್ಕೂ ಒಂದಲ್ಲಾ ಒಂದು ಪ್ರಶಸ್ತಿ, ಪುರಸ್ಕಾರ, ಹುದ್ದೆ, ಅಧಿಕಾರ ಅನುಭವಿಸುತ್ತಲೇ ನಡೆದ ಕಾರ್ನಾಡರು ಕೊಟ್ಟದ್ದಕ್ಕಿಂತಲೂ ಪಡೆದದ್ದೇ ಹೆಚ್ಚು. ಆ ಲೆಕ್ಕದಲ್ಲಿ ಅವರೂ ಸಹ ಒಬ್ಬ ಸಮಾಜ ಎಂಬ ಪುರುವಿನಿಂದ ಯೌವ್ವನವನ್ನು ಹೆಚ್ಚು ಹೆಚ್ಚು ಆಗ್ರಹಿಸಿದ “ಯಯಾತಿ”ಯೇ ಸರಿ !!

  Like

 2. “The day I usurped Karnad’s seat but not his place!”
  I happened to be in Dharwad at the time of ‘Sahitya Sambhrama2014’ organised by Manohar Granth Mala (MGM) at Karnatak University campus. It was Girish Karnad and Giraddi Govindraj who prevailed upon Samir Joshi of MGM, I learnt later on, to organise an event like Jaipur Book Fair, it seems. That morning’s Event had already started by the time I entered the Hall and saw a vacant aisle seat on 10th or 12th Row and sat down with my, then new, smart phone in my hand figuring out how to switch it off. I could see through the corner of my eye a tall gentleman approach my seat with a phone in his hand too. I looked up. He picked up my phone and said: “ಇದು ಆನ್ ಈ ಬಟನ್ ಆಫ್!” and walked past me looking for an empty seat. It was Karnad, I recognised. I was wondering why he picked me to show the button on my phone like that. My neighbour was silent. After a couple of minutes it dawned on me that he had just popped out to answer an incoming phone call and on his return found that his seat had been taken by me, which I was unaware of! But he didn’t ask me to give up the seat as it legitimately was ‘his.’ It is more than a week since his passing but I haven’t switched him off my head. I still keep reading about him and the tributes and counting the loss of a great talent and a giant of personality. Thank you Keshav and Prasad for the nice ‘involved’ write ups. As a school boy loitering the Karnatak College campus when off school, I remember reading a fresh note pinned on the college notice board proudly announcing that “Karnad had just been elected as president of debating Union in Oxford.” It was a thrilling moment, looking back.

  Liked by 1 person

 3. ಕೇಶವ್, ಗಿರೀಶ್ ಕಾರ್ನಾಡರ ಬಗ್ಗೆ ಈಗ ಒಂದು ವಾರದಿಂದಲೂ ಅನೇಕ ಶ್ರದ್ಧಾಂಜಲಿಯ ಲೇಖನಗಳನ್ನು ಅವರ ಆತ್ಮೀಯರು ಬರೆಯುತ್ತಿರುವುದನ್ನು ಓದುತ್ತಲೇ ಇದ್ದೇನೆ. ಅವರ ಬಗ್ಗೆ ಎಷ್ಟು ಓದಿದರೂ ಇನ್ನು ಅವರ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವ ಹಂಬಲವೇ ನನ್ನ ಮನದಲ್ಲಿ ನಿಂತಿದೆ. ಆತನಿಗೆ ೮೦ ವರ್ಷ ವಯಸ್ಸಾಗಿತ್ತು ಎನ್ನುವುದನ್ನು ನಂಬಲು ಸಾಧ್ಯವೇ ಆಗದು. ಸುಮಾರು ೭೦ರ ದಶಕದಿಂದಲೂ ಅವರ ಆಕರ್ಷಕ ನಿಲುವಿನ ಮುಖವನ್ನು ಸಿನಿಮಾಗಳಲ್ಲಿ, ಪೇಪರಿನಲ್ಲಿ, ಮ್ಯಾಗಝಿನ್ನುಗಳಲ್ಲಿ ನೋಡುತ್ತಲೇ ಇದ್ದ ನನಗೆ, ಆ ಚಿತ್ರವೇ ಮನಸ್ಸಿನಲ್ಲಿ ನಿಂತಿದೆ. ಸುಮಾರು ೪ ದಶಕದಿಂದ ಅವರ ಅಭಿಮಾನಿ. ಅವರ ಆತ್ಮಚರಿತ್ರೆಯನ್ನು ಮಾನ್ಯ ದೇಸಾಯಿ ಅವರ ಹತ್ತಿರ ಪಡೆದು ಓದಿದ ಮೇಲೆ, ಆತನ ಬಗ್ಗೆ ಇದ್ದ ಅಭಿಮಾನ ಮತ್ತಷ್ಟು ಹೆಚ್ಚಿತೆನ್ನಬಹುದು. ಕನ್ನಡ ಸಾಹಿತ್ಯ, ಚಲನಚಿತ್ರ ಮತ್ತು ನಾಟಕರಂಗಗಳು, ಇಂತಹ ಬಹುಮುಖ ಪ್ರತಿಭೆಯನ್ನು ಮತ್ತೊಮ್ಮೆ ನೋಡುವುದು ಇನ್ಯಾವಾಗಲೋ ಕಾಣೆ. ಕೇವಲ ಕಲಾತ್ಮಕ ಚಿತ್ರಗಳಲ್ಲಷ್ಟೇ ಅಲ್ಲ, ಇತರ ಕಮರ್ಷಿಯಲ್ ಚಿತ್ರಗಳಲ್ಲೂ ಅಷ್ಟೇ ಉತ್ತಮವಾದ ನಟನೆ ನೀಡಿದ್ದ ಕಲಾವಿದ ಆತ. ಇನ್ನು ಅವರ ಬರವಣಿಗೆಯ ಬಗ್ಗೆ ಹೇಳಲು ಮಾತುಗಳು ಸಾಲದು. ಅವರ ನಾಟಕಗಳು ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ಗಳಿಸಿತ್ತು. ಇಂತಹ ಪ್ರತಿಭೆಯನ್ನು ಕಳೆದುಕೊಂಡಿರುವುದು ಕನ್ನಡನಾಡಿಗೆ ನಿಜಕ್ಕೂ ದೊಡ್ಡ ನಷ್ಟ. ಆತ ಸಮಾರಂಭಗಳಿಗೆ, ಸನ್ಮಾನಗಳಿಗೆ ಹೋಗದೆ ನೇರವಾಗಿ ನಿರಾಕರಿಸುತ್ತಿದ್ದನ್ನು ಎಲ್ಲ ಲೇಖನಗಳಲ್ಲೂ ಓದಿದೆ. ಅವರ ಸೃಜನಶೀಲತೆಗೆ ಒಂದು ಜೀವನ ಸಾಲದು ಎನ್ನುವ ಬಗ್ಗೆ ಎರಡು ಮಾತಿಲ್ಲ. ಸಮಯ ಆತನ ಪಾಲಿಗೆ ನಿಜಕ್ಕೂ ಅಮೂಲ್ಯವಾಗಿತ್ತೆನ್ನುವುದು ಈಗ ಅರ್ಥವಾಗುತ್ತದೆ. ಕನ್ನಡ ನಾಡಿನ ಚರಿತ್ರೆಯಲ್ಲಿ ತಮ್ಮ ಛಾಪನ್ನು ಶಾಶ್ವತವಾಗಿ ಮೂಡಿಸಿ ಮರೆಯಾದ ಗಿರೀಶರು ಸಮಕಾಲೀನ ವ್ಯಕ್ತಿಗಳಲ್ಲಿ ಅಪರೂಪದವರು. ಅವರು ನಿರ್ದೇಶಿಸಿದ “ಕಾಡು” ಚಿತ್ರಕ್ಕೆ ಕ್ಯಾನ್ ಪ್ರಶಸ್ತಿ ಅಮರೀಶ್ ಪುರಿಗೆ ಲಭ್ಯವಾದಾಗ, ಅಮರೀಶ್ ಪುರಿ ಆ ಪ್ರಶಸ್ತಿಯನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗದೆ ಅದನ್ನು ಶಾಶ್ವತವಾಗಿ ಗಿರೀಶರಿಗೆ ಕೊಟ್ಟಿದ್ದರಂತೆ. ಅವರ ಮಟ್ಟಿಗೆ ಆ ಪ್ರಶಸ್ತಿ ಗಿರೀಶರಿಗೆ ಸಲ್ಲಿದ್ದು . ಇನ್ನು ಓಂ ಪುರಿಯಂತಹ ಪ್ರತಿಭೆಯನ್ನು ಪರಿಚಯಿಸಿದ ಕೀರ್ತಿಯು ಅವರಿಗೆ ಸಲ್ಲುತ್ತದೆ. ನಿಮ್ಮ ಲೇಖನ ಗಿರೀಶರ ಬಗ್ಗೆ ಮತ್ತಷ್ಟು ಯೋಚಿಸಲು ಎಡೆಮಾಡಿಕೊಟ್ಟಿದೆ. ಧನ್ಯವಾದಗಳು.
  ಉಮಾ ವೆಂಕಟೇಶ್

  Like

 4. ಉತ್ತರ ಕರ್ನಾಟಕದ ಮತ್ತೊಂದು ಪ್ರಖರ ಪ್ರತಿಭೆ ಗಿರೀಶ್ ಕಾರ್ನಾಡರು ತಮ್ಮ ಸಾವಿಗೂ ಅದೇ ಪ್ರಭುದ್ದತೆಯಿಂದ ಸಿದ್ದರಿದ್ದರೇನೋ? ಆದರೆ , ಅವರು ಬದುಕಿರಲಿ ಅವರ ಬದುಕಿನ ಉತ್ತರಾರ್ಧ ಆತ್ಮ ಕಥನ ಹೊರಬರಲಿ ಎಂದು ಕಾದವರೇ ಹೆಚ್ಚು.
  ಇಂತಹ ಒಬ್ಬೊಬ್ಬ ಸಾಮಾಜಿಕ ಚಿಂತಕರು ಸತ್ತಾಗಲೂ ಸಮಾಜದ ನೈತಿಕ ನಿಲುವಿನ ಬುನಾದಿಯೂ ಒಮ್ಮೆ ಅಲುಗುವುದು ಸುಳ್ಳಲ್ಲ. ಇವರ ಸಾವು ಒಬ್ಬ ವ್ಯಕ್ತಿ ಸತ್ತಾಗ ಅವರೊಡನೆ ಸಾಯುವ ಅವರದೇ ಹಲವು ಅಗಾಧ ಮತ್ತು ಆಳ ಪ್ರತಿಭೆ ಮತ್ತು ನಿಲುವುಗಳ ಜೊತೆಗೆ ಸಾಹಿತ್ಯ, ರಂಗ, ಸಿನಿಮಾ, ಸಮಾಜ ಎಲ್ಲವನ್ನೂ ಬಡಕಲು ಮಾಡಿಬಿಡುತ್ತದೆ. ಸಂವೇದನಾಶೀಲ, ವೈಚಾರಿಕ ಉದಾರ ನಿಲುವುಗಳ ಇಂತಹ ವ್ಯಕ್ತಿಗಳು ಸಮಾಜಕ್ಕೆ ಕೊಟ್ಟದ್ದಷ್ಟೇ ಕೊನೆಗೆ ಸಾಮಾನ್ಯ ಜನರಿಗೆ ತಲುಪುವುದು. ಅದನ್ನು ಉಳಿಸಿಕೊಳ್ಳುವುದಷ್ಟೇ ನಾವು ಅವರಿಗೆ ನೀಡಬಹುದಾದ ನಮನವಾಗುತ್ತದೆ.
  ಸಂಪಾದಕೀಯವೂ ಸೇರಿದಂತೆ ಆತ್ಮೀಯವಾದ ಎರಡು ಲೇಖನಗಳು ಮೂಡಿಬಂದಿವೆ. ಧನ್ಯವಾದಗಳು.

  Like

 5. Well-written, good overall analysis of his life and works, and his influence on Kannada literature, theatre. I met him and listened to him in several different contexts as a speaker, as a critic at Rangayana, Mysuru, and as a writer. Genius mind.
  Vinathe Sharma

  Like

 6. Very well written, succinct and crisp article. ಬಹುಮುಖ ಪ್ರತಿಭೆ ಕರ್ನಾಡರ ಸುಂದರ ಚಿತ್ರಣ. ನನ್ನ ಪಾಲಿಗಂತು ಅವರು ಆನಂದ ಭೈರವಿಯ ಭಾಗವತ ನಾರಾಯಣ ಶರ್ಮಾರಾಗಿ ಶಾಶ್ವತವಾಗಿ ಉಳಿಯುತ್ತಾರೆ.

  Like

 7. ಕಾರ್ನಾಡರ ಬದುಕು, ಬರಹ ಮತ್ತು ವಿಶಿಷ್ಟತೆಯ ಬಗ್ಗೆ ಮಾಹಿತಿಗಳನ್ನು ಒಳಗೊಂಡ ಉತ್ತಮ ಸಂಕ್ಷಿಪ್ತ ಲೇಖನಗಳು
  ಪ್ರಸಾದ್ ಮತ್ತು ಕೇಶವ್ ಅವರಿಗೆ ಧನ್ಯವಾದಗಳು.

  ವಿಜಯನರಸಿಂಹ

  Like

 8. Girish Karnad’s contribution to the intellectual and cultural life of Kannadigas of our generation will always be rememebered with pride. Your article itself is a proof of his positive influence on us . Thank you ,

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.