ಕರ್ತವ್ಯ ಮತ್ತು ಕರ್ಮ
ನಮ್ಮ ಸ್ಥಳೀಯ ಲೇಖಕಿ ಕವಯಿತ್ರಿ ಡಾ ಪ್ರೇಮಲತಾ ಅವರ ‘ಕರ್ತವ್ಯ ಮತ್ತು ಕರ್ಮ’ ಎಂಬ ಕವಿತೆ, ಇಂಗ್ಲೆಂಡಿನ ಅನಿವಾಸಿ ವೈದ್ಯ ಅಥವಾ ದಂತ ವೈದ್ಯರ ಬದುಕಿನ ಒಳನೋಟವನ್ನು ಒದಗಿಸುವ ಕವನ. ಕರ್ತವ್ಯದಲ್ಲಿ ಎದುರುಗೊಳ್ಳುವ ರೋಗಿಗಳ ಬಣ್ಣ ರೂಪು ಮತ್ತು ವೇಷ ಹಲವಾರು. ಹಾಗೆಯೇ ಅವರ ಕಥೆಗಳು ನೂರಾರು. ರೋಗಿಗಳ ನೋವು ಬಾಧೆಗಳ ಜೊತೆಗೆ ಅವರ ವೈಯುಕ್ತಿಕ ಬದುಕಿನ ವಿಚಾರಗಳನ್ನು ವೈದ್ಯರು ತಿಳಿದುಕೊಳ್ಳ ಬೇಕಾಗುವ ಪರಿಸ್ಥಿತಿ ಅನಿವಾರ್ಯ. ಕರ್ತವ್ಯ ಮುಗಿದ ಮೇಲೆ ಕರ್ಮವೆಂಬ ಒತ್ತಡಗಳ ಅಧ್ಯಾಯವೇ ಬೇರೆ!
ಈ ರೀತಿಯ ಕವನ ವೈದ್ಯಕೀಯ ವೃತ್ತಿಯಲ್ಲಿರುವ ಕವಿಗಳಿಂದಲೇ ಸಾಧ್ಯ ಎಂಬುದು ನನ್ನ ಅಭಿಪ್ರಾಯ
ಡಾ ಪತ್ತಾರರ ಐಸ್ಲ್ಯಾಂಡ್ ಚಿತ್ರಗಳ ಭಾಗ ೨ ಮುಂದುವರಿದಿದೆ. ವಿಸ್ಮಯ ಗೊಳಿಸುವ ಮೋಹಕ ಭಿತ್ತಿಗಳನ್ನು ಒದಗಿಸಿದ ಅವರಿಗೆ ಧನ್ಯವಾದಗಳು
(ಸಂ )
ಕರ್ತವ್ಯ ಮತ್ತು ಕರ್ಮ
ಡಾ.ಪ್ರೇಮಲತ ಬಿ.
“’ಹಲ್ಲೋ ಐ ಯಾಮ್ ಸೊ & ಸೊ.
ನೈಸ್ ಮೀಟಿಂಗ್ ಯು”..
ಇಪ್ಪತ್ತೊಂದನೇ ಸಲ ಹೇಳುತ್ತೇನೆ
ನಲವತ್ತಾಯ್ತೆಂಬ ಗತ್ತಿನಲಿ
ಬಂದವರು ಕೋಟು ಬಿಚ್ಚುತ್ತಾರೆ
ಕೈ ಕುಲುಕುತ್ತಾರೆ
“ಟೇಕ್ ಎ ಸೀಟ್ “ ಎನ್ನುತ್ತೇನೆ ಸ್ವೀಟಾಗಿ
ಹೇಳಿದ್ದ ಪಾಲಿಸುತ್ತಾರೆ ನೀಟಾಗಿ
ಬಾಯ್ತೆರೆದು ಬಡಬಡಿಸುತ್ತಾರೆ ಬಹುತೇಕರು
ಕೆಲವರಿಗೆ ಮಾತ್ರ ಮೈ ನಡುಕ
ಅನ್ನಿಸುತ್ತದೆ ಇವನು ಕುಡುಕ
ಮೂವತ್ತಾದರೂ ಸೇದುತ್ತಿರಬೇಕು ದಿನಕ್ಕೆ
ಅವನಂತೆ ಇವಳ ಚರ್ಮವೂ ಸುಕ್ಕೆ
ಜೀವಗಳು, ಜೀವಗಳು ಮತ್ತು ಜೀವಗಳು
ಎಷ್ಟೊಂದು ಬಣ್ಣ, ರೂಪು,ವೇಷ
ಅವನದೊಂದು ಕಥೆ, ಇವಳದಿನ್ನೊಂದು
ಕಳೆದುಕೊಂಡ ಸಂಗಾತಿ, ದಿಗ್ಭ್ರಾಂತಿ
ನೋವು,ಹೊಸ ಬಾಧೆ,ಭಯ ಮತ್ತು ರೋಗ
ಕೇಳುತ್ತ , ನಗುತ್ತ ಮಾಡುವುದು ಪರೀಕ್ಷೆ
ಮದ್ದು. ಮೈ ಬಾಯಿ ಮನಸ್ಸಿನ ಚಿಕಿತ್ಸೆ
“ಕಳೆದ ಭೇಟಿಯಿಂದ ಮುಂದಕ್ಕೆ ಏನಾದರೂ ಬದಲಾವಣೆ?.”
“ಮೊದಲಿಗಿಂತ ಆರು ತಿಂಗಳು ವಯಸ್ಸಾಗಿದೆ ಅಷ್ಟೆ
ನಾನಿನ್ನೂ ತೊಂಭತ್ತರ ಯುವಕ..”
ಬೊಚ್ಚು ಬಾಯಿ ಬಿಟ್ಟು ನಗುವ ಮುದುಕ…!
ದಿನವೊಂದಕ್ಕೆ ಇಪ್ಪತ್ತೈದು ಜೀವ, ಜೀವನ
ಮುಟ್ಟಿದ ಪ್ರತಿಬಾರಿ ಕೈ ತೊಳೆಯುತ್ತೇನೆ
ತಗುಲಿಕೊಂಡದ್ದನ್ನೆಲ್ಲ ಕೊಡವಿಕೊಳ್ಳುತ್ತ
ವೇಷ ಕಳಚುತ್ತೇನೆ
ಧಾವಿಸುತ್ತ ಮನೆಯ ಮುಟ್ಟಿ
“ ಯಾಕೆ ಲೇಟು? ಊಟ ಯಾವಾಗ? “
ಮತ್ತೊಂದೆರಡು ಜೀವ ,ಭಾವ
ಕರ್ತವ್ಯ ಮುಗಿದರೇನು? ಕರ್ಮ ಮೊರೆಯುತ್ತದೆ
ಮತ್ತೊಂದು ಬದುಕು ತೆರೆಯುತ್ತದೆ
ಒಂಟಿ ಬದುಕಿನ ಕನಸು ಕರೆಯುತ್ತವೆ
ಕಣ್ಣೀರು ಕರೆಯದಿದ್ದರೂ ಹೊರಟ ನಿಟ್ಟುಸಿರಿಗೆ
ಗೋಡೆಯ ಮೇಲಿನ ಹಲ್ಲಿ ಲೊಚಗುಡುತ್ತದೆ !
***
______________________________________________
ಕಣ್ಣೋಟ
ಪತ್ತಾರರ ಮಾತುಗಳಲ್ಲಿ:

ಅರೋರಾ ಬೆಳಕು ಕಾಣಿಸುವದಕ್ಕೆ ಸೌರಮಾರುತದ ಕಣಗಳ ಉತ್ತೇಜನವೆಂದು ವಿಜ್ಞಾನ ತಿಳಿಸಿದ್ದರೂ ಮನಸ್ಸೇಕೋ ನಾರ್ಡಿಕ್ ಸಮುದಾಯದ ದಂತಕಥೆಗಳನ್ನೇ ನಂಬಬಯಸುತ್ತದೆ. ತೀರಿ ಹೋದ ಪೂರ್ವಜರ ಮತ್ತು ಮಿತ್ರರ ಆತ್ಮಗಳು ಪುನಃ ಭೇಟಿ ಮಾಡಲು ಭೂಮಿಗೆ ಬರುವದರ ಚಿನ್ಹೆ ಎಂದು ಅವರ ನಂಬಿಕೆ. ಕೊರೆವ ಚಳಿ, ಬೀಸುವ ಗಾಳಿಯ ದಟ್ಟ ಕಪ್ಪು ರಾತ್ರಿಯಲ್ಲಿ ಮೋಡ ಸರಿದಾಕ್ಷಣ ಮಂದ ಹಸಿರಿನ ಬಣ್ಣದ ಬೆಳಕು ಘಾಡವಾಗುತ್ತ ಬಾನಂಗಳದಲ್ಲಿ ಕುಣಿದಾಡಿ ನೇರಳೆ, ಕೆಂಪು ಬೆಳಕಿನ ಸೆರಗು ತೋರಿಸಿ ವಿಸ್ಮಯಗೊಳಿಸುವ ಪರಿ ವರ್ಣಿಸಲು ಕಷ್ಟಕರ.
೧. ಟ್ರೈಪೋಡ್ ಅತ್ಯವಶ್ಯ.
೨. ಸಾಧ್ಯವಿದ್ದಷ್ಟು ಕಡಿಮೆ f ನಂಬರ್
೩. ಮಾನ್ಯುಯಲ್ ಫೋಕಸ್ ಇನ್ಫಿನಿಟಿ ಗೆ
೪. ೧೦ ರಿಂದ ೨೦ ಸೆಕೆಂಡ್ಸ್ exposure
೫. ರಿಮೋಟ್ ರಿಲೀಸ್ ಅಥವಾ ಟೈಮರ್
18mm, f/3.5, 15 Sec, ISO 800: ಹುಣ್ಣಿಮೆ ರಾತ್ರಿಯಲ್ಲಿ ಅರೋರಾ ಸ್ಪಷ್ಟವಾಗಿ ಕಾಣುವುದು ವಿರಳ. ನನ್ನ ಅದ್ರಷ್ಟ, ಗಾರ್ಡುರ್ ಎಂಬ ಮೀನುಗಾರ ಹಳ್ಳಿಯ ಕಡಲ ತೀರದಲ್ಲಿ ತೆಗೆದ ಚಿತ್ರ.
18mm f/3.5, 13 sec, ISO 800: ನೇರಳೆ ಹಾಗು ಕೆಂಪು ಸೆರಗಿನ ಹಸಿರು ಅರೋರಾ.
24mm, f/4, 25 sec, ISO 1600: ಈ ಅಮೇರಿಕಾ ಪ್ರವಾಸಿಗಳು ನನ್ನ ಚಿತ್ರ ತೆಗೆಯುವ ವಿಧಾನವನ್ನು ಕೇಳಿ ತಮ್ಮದೂ ಒಂದು ಚಿತ್ರವನ್ನು ಆರೋರಾದ ಜೊತೆ ತೆಗೆಯಲು ಕೇಳಿದರು. ಕತ್ತಲೆಯಲ್ಲಿ ಅವರ ಮುಖದ ಮೇಲೆ ಟಾರ್ಚ್ ಬೆಳಕು ಹರಿಸುತ್ತಾ ೨೫ ಸೆಕೆಂಡು ಅಲುಗಾಡದೆ ನಿಂತಿರಲು ಹೇಳಿದ್ದೆ. ನಾನು ಅವರಿಗೆ photo ಇಮೇಲ್ ಮಾಡಿದಾಗ ತುಂಬಾ ಧನ್ಯತಾ ಭಾವದಿಂದ ಚಿರಋಣಿಯಾಗಿದ್ದೇವೆ ಎಂದು ತಿಳಿಸಿದರು.
ದಂತವೈದ್ಯರ ಬಗ್ಗೆ ಕನ್ನಡದಲ್ಲಿ ಓದಿದ ಮೊದಲ ಕವಿತೆ ಇದು ಹಾಸ್ಯಭರಿತವಾಗಿದೆ. ಬೇರೆ ಭಾಷೆ, ಬೇರೆ ಶೈಲಿಯಲ್ಲಿ ಬರೆದಿದ್ದೀರಿ. ಮುದಕೊಟ್ಟಿತು ಕವಿತೆ.
ಪತ್ತಾರರ ಅರೋರ ಬೊರಲಿಸ್ ಫೋಟೋ ಚೆನ್ನಾಗಿ ಮೂಡಿಬಂದಿವೆ.
LikeLike
ಧನ್ಯವಾದ ಪ್ರಸಾದ್ ಅವರೆ.
ಪರಿಚಯ ವಿವರದಲ್ಲಿ ಬರುವ ‘ಸ್ಥಳೀಯ ‘ಪದ ಗೊಂದಲ ಹುಟ್ಟಿಸುತ್ತಿದೆ. ಇಡೀ ಬ್ಲಾ್ ಇರುವುದೇ
ಸ್ಥಳೀಯ ಅಥವಾ ex- ಸ್ಥಳೀಯ. ಬರಹಗಾರರಿಗಲ್ಲವೇ?
I think it is a direct translation of something like ‘ in house writer’? 😁
ಆದರೆ ನಾವ್ಯಾರೂ ಸ್ಥಳೀಯರಲ್ಲ ಬದಲು ’ಅನಿವಾಸಿ ’ಗಳು ಎನ್ನುವುದು ಇನ್ನೂ ಮುದ ತರುವ ವಿಚಾರವಲ್ಲವೇ?
LikeLike