ಮಾತುಮಾತಲ್ಲಿ ರೂಪಕಗಳ ಗಿರೀಶ ಕಾಸರವಳ್ಳಿ 

ವಿಶ್ವವಿಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಆಲೋಚನೆ, ಅನುಭವವನ್ನು  ಮಾತು-ಮಾತಿನಲ್ಲಿ ಎಲ್ಲರ ಜೊತೆ ಹಂಚಿಕೊಂಡಿದ್ದಾರೆ, ಅನಿವಾಸಿ ಬಳಗಕ್ಕೆ ಚಿರಪರಿಚಿತರಾದ ಡಾ. ಶಿವಪ್ರಸಾದ್. ಓದಿ. ನೋಡಿ. ನಿಮ್ಮ ಅನಿಸಿಕೆಯನ್ನು ಅನಿವಾಸಿಯಲ್ಲಿ ಹಂಚಿಕೊಳ್ಳಿ. 
ಇದರ ಜೊತೆಗೆ, ಪತ್ತಾರರು ಸೆರೆಹಿಡಿದ ಚೈತ್ರದ ಹೂಗಳ ಕಣ್ಣೋಟ.

 

image.png

 

ಪದ್ಮಶ್ರೀ ಡಾ. ಗಿರೀಶ್ ಕಾಸರವಳ್ಳಿ ಅವರು ಯು.ಕೆ. ಕನ್ನಡ ಬಳಗದ ಯುಗಾದಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಇಂಗ್ಲೆಂಡಿಗೆ ಆಗಮಿಸಿದಾಗ ಅವರನ್ನು ಸಂದರ್ಶಿಸುವ ಒಂದು ಅಪೂರ್ವ ಅವಕಾಶ ನನಗೆ ಒದಗಿ ಬಂದಿತು. ಗಿರೀಶ್ ಕಳೆದ ನಾಲ್ಕು ದಶಕಗಳಿಂದ ಉತ್ಕೃಷ್ಠ ಕಲಾತ್ಮಕ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ. ಅವರು ನಿರ್ದೇಶಿಸಿದ ಹದಿನಾಲ್ಕು ಚಿತ್ರಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮನ್ನಣೆ ದೊರಕಿದೆ. ಅವರು ತೆಗೆದ ನಾಲ್ಕು ಚಿತ್ರಗಳಿಗೆ ಸ್ವರ್ಣ ಕಮಲ ಪ್ರಶಸ್ತಿ ದೊರಕಿದೆ. ಇವುಗಳಲ್ಲದೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಕುವೆಂಪು ವಿ.ವಿ.ಯಿಂದ ಗೌರವ ಡಾಕ್ಟರೇಟ್ ಹೀಗೆ ಅನೇಕ ಪುರಸ್ಕಾರಗಳು ದೊರಕಿದೆ. ಇಂತಹ ಒಬ್ಬ ಮಹಾನ್ ನಿರ್ದೇಶಕರಾದ ಗಿರೀಶ್ ಅವರನ್ನು ಸಂದರ್ಶನದ ಬಗ್ಗೆ ವಿನಂತಿಸಿಕೊಂಡಾಗ ಅವರು ಯಾವ ಬಿಗುಮಾನಗಳಿಲ್ಲದೆ ಕೂಡಲೇ ಸಮ್ಮತಿಸಿದರು.

 

ಹಾಗೆ ನೋಡಿದರೆ ನಾನು ಪತ್ರಕರ್ತನೂ ಅಲ್ಲ ಅಥವಾ ಚಿತ್ರ ವಿಮರ್ಶಕನೂ ಅಲ್ಲ! ನಾನು ಉಳಿದವರಂತೆ ಅವರ ಕಲಾತ್ಮಕ ಚಿತ್ರಗಳ ಅಭಿಮಾನಿಯಷ್ಟೇ. ಗಿರೀಶ್ ಅವರು ಮಿತಭಾಷಿ, ಅಂತರ್ಮುಖಿ ಎಂದು ಕೇಳಿ ತಿಳಿದಿದ್ದ ನನಗೆ ಅವರೊಡನೆ ಕೆಲವು ಸಮಯ ಇಂಗ್ಲೆಂಡಿನಲ್ಲಿ ಕಳೆದಾಗ ನನ್ನ ಅನಿಸಿಕೆಗಳು ಬದಲಾದವು. ಅವರೊಡನೆ ರಾಜಕೀಯ, ಸಾಹಿತ್ಯ, ಸಿನೆಮಾ ಹೀಗೆ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿದಾಗ ಅವರ ಅರಿವಿನ ವಿಸ್ತಾರ ನನಗೆ ನಿಲುಕಿತು. ಅವರ ಸೌಜನ್ಯ ಮತ್ತು ನೇರ, ಸರಳ ವ್ಯಕ್ತಿತ್ವದಿಂದಾಗಿ ಅವರ ಸ್ನೇಹ, ಸಹವಾಸ ಸುಲಭವೆನಿಸಿತು. ಇಂಗ್ಲೆಂಡಿನ ಅನಿವಾಸಿ ಕನ್ನಡಿಗರೊಂದಿಗೆ ನಿಸ್ಸಂಕೋಚವಾಗಿ ಬೆರತ ಗಿರೀಶ್ ಎಲ್ಲರಿಗೂ ಹತ್ತಿರವಾಗಿಬಿಟ್ಟರು. ನನಗೆ ಹತ್ತಿರವಾದದ್ದು ಅವರ ಸ್ಥಿತಪ್ರಜ್ಞತೆ! ಯಾವುದೇ ವಿಚಾರದ ಬಗ್ಗೆ ಭಾವುಕರಾಗಿ ಅಥವಾ ಉದ್ವೇಗದಿಂದ ಹರಟಿದ್ದು ನಾನು ಕಾಣಲಿಲ್ಲ. ಅವರ ಸಿನಿಮಾ ಬಗ್ಗೆ ಮಾತನಾಡುವಾಗ ಅಲ್ಲಿ ತೀವ್ರ ಭಾವನೆಗಳನ್ನು ಆಸಕ್ತಿಯನ್ನು ಗುರುತಿಸಬಹುದಾಗಿತ್ತು. ನಿನ್ನೆ ಮತ್ತು ನಾಳೆಗಳ ಬಗ್ಗೆ ತಲೆ ಕೆಡೆಸಿಕೊಳ್ಳದೆ ವರ್ತಮಾನದಲ್ಲಿನ ಬದುಕನ್ನು ಅನುಭವಿಸಿ, ಇಂದಿನ ಆಗು-ಹೋಗುಗಳಿಗೆ ಸ್ಪಂದಿಸಿ ಅದನ್ನು ತಮ್ಮ ಚಿತ್ರಗಳ ಮೂಲಕ ದಾಖಲಿಸಿ ಪ್ರೇಕ್ಷಕರೊಂದಿಗೆ ಸಂವಾದದಲ್ಲಿ ತೊಡಗುವ ಹಂಬಲ ಗಿರೀಶ್ ಅವರದ್ದು. ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ನಿರ್ದೇಶಕನೆಂಬ ಯಶಸ್ಸಿನ ಅಮಲು ಅವರಲ್ಲಿ ಕಂಡುಬರುವುದಿಲ್ಲ. “ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನವೆಂಬ” ನಿರ್ಲಿಪ್ತ ಮನೋಭಾವ ತಳೆದವರು ಗಿರೀಶ್.

 

ಸ್ತ್ರೀ ಸ್ವಾತಂತ್ರ, ಸಾಮಾಜಿಕ ನ್ಯಾಯ, ಇಲ್ಲದವರ ಬಗ್ಗೆ ಅನುಕಂಪೆ, ಗೊಡ್ಡು ಸಂಪ್ರದಾಯಗಳನ್ನು ಧಿಕ್ಕರಿಸಿ, ವ್ಯವಸ್ಥೆಯ ಹುಳುಕುಗಳ ಬಗ್ಗೆ ಧ್ವನಿ ಎತ್ತಿ, ವೈಚಾರಿಕ ನಿಲುವನ್ನು ಪ್ರಚೋದಿಸುವ ಡಾ ಜಿ. ಎಸ್ ಎಸ್. ಅವರ ಕಾವ್ಯ ಮತ್ತು ಚಿಂತನೆಗಳ ಬಗ್ಗೆ ಅರಿವಿದ್ದ ನನಗೆ ಈ ಅಂಶಗಳನ್ನು ಗಿರೀಶ್ ಅವರ ಚಿತ್ರಗಳಲ್ಲಿ ಮತ್ತು ಅವರ ಸಂವಾದದಲ್ಲಿ ಗುರುತಿಸಲು ಸಾಧ್ಯವಾಯಿತು. “ಸ್ತ್ರೀ ಎಂದರೆ ಅಷ್ಟೇ ಸಾಕೆ” ಎಂಬ ಕವನದ ಸಾಲುಗಳ ಹಿನ್ನೆಲೆಯಲ್ಲಿ ದ್ವೀಪ ಚಿತ್ರದ ನಾಗಿಯನ್ನು ಕಾಣಬಹುದು. “ಜಲವಿಲ್ಲದ ನೆಲಗಳಲ್ಲಿ ಕಮರುತಿರುವ ಕುಡಿಗಳೇ” ಎಂಬ ಕವನದ ಸಾಲಿನಲ್ಲಿ ಕನಸೆಂಬ ಕುದುರೆಯನೇರಿ ಚಿತ್ರದ ಈರ್ಯನನ್ನು ಗುರುತಿಸಬಹುದು.

 

ಸಾಹಿತ್ಯಕ್ಕಿಂತ ಸಿನಿಮಾ ಹೆಚ್ಚು ಪ್ರಬಲವಾದ ಮಾಧ್ಯಮ ಎಂಬ ವಿಚಾರದ ಅರಿವು ಮತ್ತು ಅರವತ್ತು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಮತ್ತು ಕಲೆಗಳಲ್ಲಿ ಸಂಭವಿಸಿದ ನವೋದಯದ ಹೊಸ ಅಲೆ ಗಿರೀಶ್ ಅವರ ಸಿನಿಮಾ ಆಸಕ್ತಿಯನ್ನು ಕೆರಳಿಸಿತು ಎಂಬ ವಿಚಾರದೊಂದಿಗೆ ನಮ್ಮ ಸಂವಾದ ಶುರುವಾಯಿತು. ವಂಶವೃಕ್ಷ, ಸಂಸ್ಕಾರ ಈ ರೀತಿಯ ಚಿತ್ರಗಳು ಅವರನ್ನು ಫಾರ್ಮಸಿ ಕ್ಷೇತ್ರದಿಂದ ಸಿನಿಮಾದೆಡೆಗೆ ಸೆಳೆದಿದ್ದು ಸ್ವಾರಸ್ಯಕರವಾದ ಸಂಗತಿ. ಕಾಲಘಟ್ಟದ ಮಹಿಮೆ ಹಲವಾರು ಕವಿಗಳನ್ನು, ಸಾಹಿತಿಗಳನ್ನು ಮತ್ತು ಗಿರೀಶರಂಥ ಪ್ರತಿಭಾವಂತ ನಿರ್ದೇಶಕರನ್ನು ರೂಪಿಸಿರುವುದು ನಿಜವಾದ ಸಂಗತಿ.

 

ಶಬ್ದಗಳ ಮೂಲಕ ಅಭಿವ್ಯಕ್ತಗೊಂಡ ಸಾಹಿತ್ಯವನ್ನು ಸಿನಿಮಾಗಳಲ್ಲಿ ದೃಶ್ಯಗಳ ಮೂಲಕ ಕಟ್ಟುವ ಪ್ರಯತ್ನವಾದ್ದರಿಂದ ಸಾಕಷ್ಟು ಬದಲಾವಣೆಗಳನ್ನು ತರುವ ಅವಶ್ಯಕತೆ ಇದೆ ಎನ್ನುತ್ತಾರೆ ಗಿರೀಶ್. ಅವರ ಬಹುತೇಕ ಸಿನಿಮಾಗಳು ಕಥೆ ಕಾದಂಬರಿಗಳನ್ನು ಆಧರಿಸಿವೆ ಎಂಬ ವಿಚಾರವನ್ನು ಅವರ ಸಿನಿಮಾ ವೀಕ್ಷಕರು ಗಮನಿಸಬಹುದು. ಒಂದು ಕಾಲಘಟ್ಟಕ್ಕೆ ಸೀಮಿತವಾದ ಕಥೆಯನ್ನು ಸಮಕಾಲೀನ ಸ್ಥಿತಿಗೆ ಅನ್ವಯವಾಗುವಂತೆ ಅವರು ಮಾರ್ಪಾಡುಗಳನ್ನು ಮಾಡುತ್ತಾರೆ. ಒಂದು ಕಥೆ ಕಾಲದ ಚೌಕಟ್ಟಿನಲ್ಲಿ ಸ್ತಬ್ಧಗೊಳ್ಳದೆ ಸಂವಾದವನ್ನು ಮುಂದುವರಿಸುವ ಸಾಧನವಾಗಬೇಕೆಂಬುದು ಗಿರೀಶ್  ಅವರ ಉದ್ದೇಶ. ಈ ಮಾರ್ಪಾಡುಗಳು ಪ್ರಾಮಾಣಿಕ ಪ್ರಯತ್ನಗಳಾಗಿರಬೇಕು, ವ್ಯಾವಹಾರಿಕ ಅನುಕೂಲ ಕಾರಣಗಳಿಂದಾಗಿ ಬದಲಾಯಿಸಬಾರದು ಎನ್ನುವದು ಅವರ ನಂಬಿಕೆ.

 

ಒಂದು ಸಿನಿಮಾಗೆ ಸಮಾಜದಲ್ಲಿ ಪರಿವರ್ತನೆಗಳನ್ನು ತರುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ, ‘ಸಿನಿಮಾಗೆ ಪ್ರಬಲವಾದ ಶಕ್ತಿಯಿದೆ ಅದು ಅಭಿಪ್ರಾಯವನ್ನು ಬೇರೆಯವರ ಮೇಲೆ ಹೇರದೆ ಒಳ ಸಂವಾದವನ್ನು ಹುಟ್ಟು ಹಾಕಬೇಕು, ಒಂದು ಕಥೆ ಒಬ್ಬ ವ್ಯಕ್ತಿಯ ಆಲೋಚನಾ ಕ್ರಮವನ್ನು ಅರಳಿಸಬೇಕು ಹೊರತು ಕೆರಳಿಸಬಾರದು.  ಹೀಗಾಗದಿದ್ದಲ್ಲಿ ಅದು ಫ್ಯಾಸಿಸ್ಟ್ ಜೀವನಕ್ರಮದ ಸಿನಿಮಾ ಎಂದು ಗುರುತಿಸಬೇಕಾಗುತ್ತದೆ’ ಎನ್ನುತ್ತಾರೆ ಗಿರೀಶ್. ಸಿನಿಮಾ ಅಭಿಪ್ರಾಯಗಳು ನಮ್ಮನ್ನು ಅರಳಿಸಿದಾಗ ನಮ್ಮ ಆಲೋಚನಾ ಕ್ರಮದಿಂದ ಸಿನಿಮಾ ಕೂಡ ಬೆಳೆಯುವ ಸಾಧ್ಯತೆಯನ್ನು ಅವರು ಗಮನಿಸಿದ್ದಾರೆ. ಸಿನಿಮಾ ಒಂದು ಸಂಸ್ಕೃತಿಯ ಕನ್ನಡಿಯಾಗಿರಬೇಕು, ಅದು ವಾಣಿಜ್ಯ ದೃಷ್ಟಿಯಿಂದ ವಾಸ್ತವ ಬದುಕಿಗೆ ದೂರವಾಗಿ ಯಾವುದೋ ಕಾಲ್ಪನಿಕ ಪ್ರಪಂಚವನ್ನು ಕಟ್ಟುವ ಪ್ರಯತ್ನವಾಗಬಾರದು ಎಂದು ಇನ್ನೊಂದು ವೇದಿಕೆಯಲ್ಲಿ ಗಿರೀಶ್ ಪ್ರಸ್ತಾಪಿಸಿದ್ದನ್ನು ನಾನು ಇಲ್ಲಿ ನೆನೆಯುತ್ತೇನೆ.

 

ಒಂದು ಕಲಾತ್ಮಕ ಚಿತ್ರ ಒಂದೇ ನೋಟಕ್ಕೆ ಸಿಗದಿರುವುದರ ಬಗ್ಗೆ ಅವರಿಗೆ ಚಿಂತೆ ಇಲ್ಲ. ಮತ್ತೆ ಮತ್ತೆ ವೀಕ್ಷಿಸಿದಾಗ ಚಿತ್ರ ಬೇರೆ ಅರ್ಥಗಳನ್ನು ಕಂಡುಕೊಳ್ಳುವ ಅವಕಾಶ ತೆರೆದಾಗ ಅದು ಉತ್ಕೃಷ್ಟ ಕಲೆಯಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ. ಕಥೆಯಿಂದ ನೇರ ಉತ್ತರ ಪಡೆಯಲಿಲ್ಲ ಎಂದು ಟೀಕೆ ಮಾಡುವುದರ ಬದಲು ಪ್ರೇಕ್ಷಕನೇ ಉತ್ತರವನ್ನು ಕಂಡುಕೊಳ್ಳಬೇಕು, ಹೀಗೆ ಪ್ರೇಕ್ಷಕನಿಗೂ ಒಂದು ಜವಾಬ್ದಾರಿ ಇದೆ ಎಂಬ ಗಂಭೀರವಾದ ವಿಚಾರವನ್ನು ಅವರು ಸಂದರ್ಶನದಲ್ಲಿ ಪ್ರಸ್ತಾಪಿಸಿದರು.

 

image.png

 

ಗಿರೀಶ್ ಅವರು ತಮ್ಮ ಚಿತ್ರಗಳಲ್ಲಿ ಬಹಳಷ್ಟು ರೂಪಕಗಳನ್ನು ಬಳಸುತ್ತಾರೆ. ಅದು ಚಿತ್ರಕ್ಕೆ ಹೇಗೆ ಪೂರಕವಾಗುತ್ತದೆ ಎಂಬ ವಿಚಾರ ಬಂದಾಗ ರೂಪಕಗಳಿಗೆ ಒಂದು ವಿಶೇಷ ಶಕ್ತಿ ಇದೆ. ಅದು ಇಂದಿನ ಕಥೆಯನ್ನು ನೆನ್ನೆಯ ಕಥೆಯಾಗಿಸಬಹುದು ಅಥವಾ ನಾಳೆಯ ಕಥೆಯಾಗಿಸಬಹುದು. ಚೋಮ ಅಥವಾ ತಬರ ಎಂಬ ರೂಪಕಗಳ ಮೂಲಕ ಇಡೀ ಕಾಲಘಟ್ಟವನ್ನು ಪರಿಚಯಿಸುವ ಶಕ್ತಿ ಇದೆ. ರೂಪಕಗಳಿಲ್ಲದ ಚಿತ್ರಗಳು ಬರೀ ವಸ್ತು ಸ್ಥಿತಿಯನ್ನು ಹೇಳುವ ಸಾಕ್ಷ್ಯಚಿತ್ರಗಳಾಗುತ್ತವೆ ಎಂಬುದು ಅವರ ಅಭಿಪ್ರಾಯ.

 

ಗಿರೀಶ್ ಅವರು ಮಕ್ಕಳ ಪಾತ್ರಗಳನ್ನು ತಂದು ಅದಕ್ಕೆ ಮಾನ್ಯತೆ ನೀಡಿರುವುದನ್ನು ಸಾಮಾನ್ಯವಾಗಿ ಕಾಣಬಹುದು. ಅವರ ಪ್ರಕಾರ ದೊಡ್ಡವರ ಜಗತ್ತು ವ್ಯಾವಹಾರಿಕವಾದರೆ ಮಕ್ಕಳ ಜಗತ್ತು ಭಾವನಾತ್ಮಕ. ಮಕ್ಕಳು ಮುಗ್ಧ ಮಾನವೀಯ ನೆಲೆಯಲ್ಲಿ ಸಮಾಜವನ್ನು ಅರ್ಥಮಾಡಿಕೊಳ್ಳುತ್ತಾರೆ, ಅದು ಮನುಷ್ಯ ಸಂಬಂಧವಾದ ಜಗತ್ತು. ದೊಡ್ಡವರ ಮತ್ತು ಮಕ್ಕಳ ಗ್ರಹಿಕೆಗಳನ್ನು ಒಂದರ ಪಕ್ಕ ಇನ್ನೊಂದನ್ನಿಟ್ಟು ಒರೆಹಚ್ಚಿ ನೋಡಿದಾಗ ಯಾವುದು ಸರಿ ಯಾವುದು ತಪ್ಪು ಎಂದು ವಿಶ್ಲೇಷಿಸುವುದು ಕಷ್ಟ, ಈ ಸರಿ ತಪ್ಪುಗಳ ನಡುವೆ ಎಲ್ಲೋ ಸತ್ಯ ಅಡಗಿರಬಹುದು ಎಂಬ ನಿಗೂಢವಾದ ವಿಚಾರಗಳನ್ನು ಅವರ ಹೇಳಿದಾಗ ನನಗೆ ಮಧ್ಯಪೂರ್ವ ದೇಶದಲ್ಲಿ ನಡೆಯುತ್ತಿರುವ ಯುದ್ಧ, ಸಹಿಷ್ಣುತೆ, ಧರ್ಮ, ರಾಜಕೀಯ, ನಿರಾಶ್ರಿತರು ಹೀಗೆ ಹಲವಾರು ಚಿತ್ರಗಳು ಸ್ಮೃತಿಪಟಲದಲ್ಲಿ ಮೂಡಿ ಮಾಯವಾದವು.

 

ಗಿರೀಶ್ ಅವರ ಪ್ರಕಾರ ಒಂದು ಉತ್ತಮವಾದ ಹಾಗೂ ಪುರಸ್ಕಾರಗಳಿಗೆ ಯೋಗ್ಯವಾದ ಸಿನಿಮಾ ಎಂದರೆ ಆ ಚಿತ್ರದಲ್ಲಿನ ಕಥೆಯ ನಿರ್ವಹಣೆ ಯಾವ ರೀತಿ ಇದೆ? ಚಿತ್ರ ಪಾತ್ರಗಳನ್ನು ಎಳೆ ಎಳೆಯಾಗಿ ಬಿಡಿಸಿ ನೋಡಲು ಅವಕಾಶ ಮಾಡಿಕೊಟ್ಟಿದೆಯೇ? ಕಥೆಯಲ್ಲಿ ಅದರದೇ ಆದ ಪರಿಭಾಷೆ ಇದೆಯೇ? ಇದು ಎಷ್ಟರ ಮಟ್ಟಿಗೆ ಸಾರ್ವತ್ರಿಕವಾಗಿದೆ? ಎಷ್ಟರ ಮಟ್ಟಿಗೆ ಪ್ರಾಯೋಗಿಕವಾದ ಸ್ವರೂಪ ಪಡೆದುಕೊಂಡಿದೆ? ಈ ವಿಚಾರಗಳು ಅವರು ಚಿತ್ರೋತ್ಸವದ ನಿರ್ಣಯ ಮಂಡಳಿಯಲ್ಲಿ ಕುಳಿತಾಗ ಬಹಳ ಮುಖ್ಯವಾಗುತ್ತವೆ ಎಂದು ತಿಳಿಪಡಿಸಿದರು. ಉತ್ತಮ ದರ್ಜೆಯ ಪ್ರಾಯೋಗಿಕ ಸಿನೆಮಾ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಆದರೆ ಅದರ ಪ್ರದರ್ಶನಕ್ಕೆ ಅವಕಾಶ ಕಡಿಮೆಯಾಗಿರುವುದರ ಬಗ್ಗೆ ಅವರಿಗೆ ಅಸಮಾಧಾನವಿದ್ದಂತೆ ತೋರುತ್ತದೆ. ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳ ಮಹಾಪೂರದಲ್ಲಿ ಕಲಾತ್ಮಕ ಹಾಗೂ ಪ್ರಾಯೋಗಿಕ ಚಿತ್ರಗಳ ಅಳಿವು ಉಳಿವಿನ ಬಗ್ಗೆ ಗಿರೀಶ್ ಅವರಿಗೆ  ಹೆಚ್ಚಿನ ಕಾಳಜಿ ಇಲ್ಲದಿರುವುದು ಅವರ ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿದೆ.

 

ಕ್ರಿಯಾಶೀಲರಾದ ಗಿರೀಶ್ ಅವರಿಗೆ ನಿವೃತ್ತಿ ಎಂಬ ನಿಬಂಧನೆ ಇಲ್ಲ. ಗಿರೀಶ್ ಅವರು ಈ ವರ್ಷ ಒಂದು ಹೊಸ ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ನೆಮ್ಮದಿಯ ಸಂಗತಿಯಾಗಿದೆ. ‘A picture is worth a thousand words’ ಎಂಬ ಉಕ್ತಿ ನಮಗೆಲ್ಲ ತಿಳಿದಿದೆ. ಹೀಗಾಗಿ ನಾನು ಸಂದರ್ಶನದ ಬಗ್ಗೆ ಇನ್ನು ಹೆಚ್ಚು ಬರೆಯಬೇಕಿಲ್ಲ.  ಈ ಸಂದರ್ಶನವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಅದನ್ನು ಸಂಪೂರ್ಣವಾಗಿ ಯೂಟ್ಯೂಬಿನಲ್ಲಿ ವೀಕ್ಷಿಸಲು ಅನುವು ಮಾಡಿಕೊಟ್ಟ ನನ್ನ ಮಿತ್ರರಾದ ಡಾ.ದೇಸಾಯಿ ಅವರಿಗೆ ಮತ್ತು ಗಿರೀಶ್ ಅವರನ್ನು ಇಂಗ್ಲೆಂಡಿಗೆ ಆಹ್ವಾನಿಸಿದ ಯು.ಕೆ. ಕನ್ನಡ ಬಳಗಕ್ಕೆ ನನ್ನ ಧನ್ಯವಾದಗಳು. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಆಹ್ವಾನವನ್ನು ಮನ್ನಿಸಿ ಇಲ್ಲಿಗೆ ಆಗಮಿಸಿ ಈ ಸಂದರ್ಶನವನ್ನು ನಡೆಸಿಕೊಟ್ಟ ಗಿರೀಶಕಾಸರವಳ್ಳಿ ಅವರಿಗೆ ಅನಂತ ವಂದನೆಗಳು.

 

ಸಂದರ್ಶನದ ಯೂಟ್ಯೂಬ್ ವಿಡಿಯೋ ಕೊಂಡಿಗಳು (ಲಿಂಕ್): 

 

 

__________________________________________________________________________________
ಕಣ್ಣೋಟ
image.png
ಈ ವಾರದ ಚಿತ್ರಗಳು, ಟೆಲ್ಫರ್ಡ್ ವಾಸಿ, ಸರ್ಜನ್ ಜಯಪ್ರಕಾಶ್ ಪತ್ತಾರ, ಚೈತ್ರದ ಹೂಗಳ ಅಂದವನ್ನ ಅವರ ಕ್ಯಾಮೆರಾ ಕಣ್ಣಿಂದ ಕಂಡ ಚಿತ್ರಗಳು.

 

ಪತ್ತಾರರ ಚಿತ್ತಾರ ೧

image.png

70mm f/9 1/320 sec ISO 800

 

ಪತ್ತಾರರ ಚಿತ್ತಾರ ೨

image.png

70mm 1/160 sec f/22 ISO 100

11 thoughts on “ಮಾತುಮಾತಲ್ಲಿ ರೂಪಕಗಳ ಗಿರೀಶ ಕಾಸರವಳ್ಳಿ 

 1. ಪ್ರಸಾದ್ ಅವರ ಪ್ರಶ್ನೆಗಳು ತುಂಬ ಪ್ರಚಲಿತವಾಗಿವೆ ಮತ್ತು ಆಪ್ತವಾಗಿವೆ. ಕಾಸರವಳ್ಳಿಯವರ ಉತ್ತರಗಳು ಮನಮುಟ್ಟುತ್ತವೆ. – ಕೇಶವ

  Like

 2. ತುಂಬ ಸರಳವಾದ, ನೈಜವಾದ ಸಂದರ್ಶನ. ಅಭಿನಂದನೆಗಳು.
  ನೀವು ಹೇಳುವಂತೆ ಗಿರೀಶರದು ಮೇರು ವ್ಯಕ್ತಿತ್ವ . ಎಲ್ಲದ್ದಕ್ಕೂ ಅತ್ಯಂತ ಸಮಂಜಸ ಮತ್ತು ಆಡಂಬರವಿಲ್ಲದ , ಭಾವೋದ್ವೇಗಗಳಿಲ್ಲದ ಉತ್ತರಗಳನ್ನು ನೀಡಿದ್ದಾರೆ.
  ಹಬ್ಬದಷ್ಟೇ ಸಂತೋಷವಾಯಿತು. ದೇಸಾಯಿಯವರ ಕಾರಣ ಸಂದರ್ಶನ ನೋಡಲು ಸಿಕ್ಕಿದ್ದೂ ಚೆನ್ನಾಯಿತು. ಅವರಿಗೂ ಅಭಿನಂದನೆಗಳು.

  Liked by 1 person

 3. ಸಂದರ್ಶನ ಚೆನ್ನಾಗಿ ಮೂಡಿ ಬಂದಿದೆ. ಉದ್ದುದ್ದ ಪ್ರಶ್ನೆಗಳನ್ನು ಕೇಳದೆ ಅಥವಾ ಇಲ್ಲಿ ಬರೆಯದೆ ಪೂರ್ತಿ ಗಮನವನ್ನು ಗಿರೀಶ್ ಕಾಸರವಳ್ಳಿ ಎಂಬ ಕನ್ನಡ ಚಲನಚಿತ್ರ ನಿರ್ದೇಶಕನ ಗಾರುಡಿಗೇ ಮೀಸಲಿಟ್ಟಿರುವುದು ಇಷ್ಟವಾಯಿತು. ಕರ್ನಾಟಕ ರಾಜ್ಯದ ಹೊರಗಡೆ ಅದೂ ಪರದೇಶದಲ್ಲಿ ಅವರೊಡನೆ ಕೆಲದಿನಗಳು ಒಡನಾಡಿ ಅವರ ವ್ಯಕ್ತಿತ್ವವನ್ನೂ ಅದರ ಜೊತೆಗೆ ಅವರ ನಿರ್ದೇಶನದ ಹೈಲೈಟ್ಸ್ ಗಳನ್ನ ಹಂಚಿಕೊಂಡು, ವಿಮರ್ಶಿಸಿದ್ದು ಬಹಳ ಉತ್ತಮ ಪ್ರಯತ್ನ. ಅವರ ಚಿತ್ರಗಳ ಬಗ್ಗೆ ಮತ್ತೊಂದು ಭಿನ್ನ ದೃಷ್ಟಿಕೋನವನ್ನೂ ಒದಗಿಸಿದ್ದೀರಿ. ಒಟ್ಟಾರೆ ಹೇಳುವುದಾದರೆ ಈ ಸಂದರ್ಶನ ಸಾರಾಂಶ, ವಿಮರ್ಶೆ, ಮತ್ತು ಯು ಟ್ಯೂಬ್ ನಲ್ಲಿ ದಾಖಲಾದ ಸಂದರ್ಶನದ ವಿಡಿಯೋ ಚಿತ್ರಣ ಎಲ್ಲವೂ ಕನ್ನಡಿಗರಿಗೆ ಹಬ್ಬದ ಹೋಳಿಗೆ ಊಟವೇ ಸರಿ!
  ವಿನತೆ ಶರ್ಮ

  Liked by 1 person

 4. ತಮ್ಮ ಸಂದರ್ಶನದಲ್ಲಿ ಗಿರೀಶ್ ಕಾಸರವಳ್ಳಿ ಅವರು ಕನ್ನಡ ಚಿತ್ರರಂಗ ಎದುರಿಸುತ್ತ ಬಂದಿರುವ ಕೀಳರಿಮೆಯ ಭಾವ ಇನ್ನು ಅಳಿಸಿಲ್ಲ ಎನ್ನುವ ಮಾತು ನಿಜ. ಮೊದಲಿಂದ ಅಕ್ಕಪಕ್ಕ ನೋಡುತ್ತಾ ಚಿತ್ರಗಳನ್ನು ನಿರ್ಮಿಸುತ್ತಿದ್ದ ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಪ್ರತಿಭೆಗೇನೂ ಕೊರತೆಯಿಲ್ಲ. ಗಿರೀಶ್ ಅವರೇ ಇದಕ್ಕೆ ಸಾಕ್ಷಿ. ನಮ್ಮ ಶ್ರೀಮಂತ ಸಾಹಿತ್ಯವನ್ನಾಧರಿಸಿ ನಿರ್ಮಿಸಿದ ಚಿತ್ರಗಳು ಅಂತರರಾಷ್ಟ್ರೀಯ ಮನ್ನಣೆ ಗಳಿಸಿರುವುದು ಗೊತ್ತಿರುವ ಮಾತು. ಅನಂತಮೂರ್ತಿಯವರ ಸಂಸ್ಕಾರ, ಭೈರಪ್ಪನವನರ ವಂಶವೃಕ್ಷ, ಅಲನಹಳ್ಳಿಯವರ ಕಾಡು, ಎಂ.ಕೆ ಇಂದಿರಾರವರ ಫಣಿಯಮ್ಮ ಮತ್ತು ಗಿರೀಶ ಕಾಸರವಳ್ಳಿಯವರ ಹಲವಾರು ಚಿತ್ರಗಳು ಅಂತರರಾಷ್ಟ್ರೀಯ ಪ್ರಶಸ್ತಿ ಗಳಿಸುವುದರಲ್ಲಿ ಯಶಸ್ವಿಯಾಗಿವೆ. ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಥೆಯನ್ನಾಧರಿಸಿ ಚಿತ್ರಗಳಾಗಬೇಕೇ ಹೊರತು, ಕೇವಲ ಕುಣಿತ ಸೇರಿಸುವ ದೊಂಬರಾಟದ ಚಿತ್ರಗಳು ಅನುಕರಣೆ ಮಾಡುವುದರಲ್ಲಿ ನಿಸ್ಸಿಮವಾಗಿವೆ. ಈ ದುರದೃಷ್ಟ ಪರಿಸ್ಥಿತಿ ಬದಲಾಯಿಸಲು ಸಾಧ್ಯ. ಗಿರೀಶ್ ಅಂತಹ ಪ್ರತಿಭಾನ್ವಿತರನ್ನು ಕನ್ನಡ ಬಳಗಕ್ಕೆ ಆಹ್ವಾನಿಸಿ ಯು.ಕೆ ಕನ್ನಡಿಗರಿಗೆ ಅವರ ಅನುಭದ ದರ್ಶನ ಮಾಡಿಸಿ, ನಮ್ಮೆಲ್ಲರಿಗೂ ಅವರ ಸಂದರ್ಶನವನ್ನು ಕೇಳುವ ಅವಕಾಶ ನೀಡಿದ್ದಕ್ಕೆ ಮಾನ್ಯ ಶಿವಪ್ರಸಾದ್ ಮತ್ತು ಡಾ ದೇಸಾಯಿ ಅವರಿಗೆ ಅನಂತ ಧನ್ಯವಾದಗಳು. ನನ್ನ ಶಾಲೆಯ ದಿನಗಳಲ್ಲಿ ಬಿಡುಗಡೆಯಾಗಿದ್ದ ಗಿರೀಶರ ಅನೇಕ ಚಿತ್ರಗಳನ್ನು ಆಗ ನೋಡಲಾಗಿರಲಿಲ್ಲ. ಅದರ ಅವರ ತಬರನ ಕಥೆ ೮೦ರ ದಶಕದಲ್ಲಿ ಬಿಡುಗಡೆಯಾದಾಗ, ಅದನ್ನು ನೋಡಿ ನಿಜಕ್ಕೂ ಹೆಮ್ಮೆ ಪಟ್ಟಿದ್ದೆ. ಕನ್ನಡಿಗರೆಲ್ಲ ಗರ್ವ ಪಡುವ ವ್ಯಕ್ತಿ ಕಾಸರವಳ್ಳಿ ಅವರು.

  Uma Venkatesh

  Liked by 1 person

 5. ಪ್ರತಿಕ್ರಿಯೆ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದಗಳು
  ಈ ಸಂದರ್ಶನ ನನ್ನ ಮೊದಲ ( sorry my google kannada typing is not letting me type words correctly on my apple computer) ಪ್ರಯತ್ನ
  ನಿಮ್ಮೆಲ್ಲರ ಪ್ರೋತ್ಸಾಹ ಇನ್ನು ಹಲವಾರು ಸಂದರ್ಶನಕ್ಕೆ ಕೈ ಹಾಕುವ ವಿಶ್ವಾಸವನ್ನು ತಂದುಕೊಟ್ಟಿದೆ

  Like

 6. ಡಾ.ಶಿವಪ್ರಸಾದ ಅವರು ತಮ್ಮ ಹಾಗೂ ಗಿರೀಶ್ ಕಾಸರವಳ್ಳಿ ಅವರ ಮಾತುಕತೆ ರೂಪದ ಸಂದರ್ಶನವನ್ನು ಸೊಗಸಾಗಿ ನಿರೂಪಿಸಿದ್ದಾರೆ.ಆ ಆಪ್ತತೆ ಮನಸ್ಸಿಗೆ ತುಂಬಾ ಹತ್ತಿರವಾಗಿ ಬಿಡುವಂಥದು.ಗಿರೀಶ ಕಾಸರವಳ್ಳಿ ಅವರು ನಮ್ಮ ಕನ್ನಡ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕ ಅನ್ನುವಲ್ಲಿ ಎರಡು ಮಾತಿಲ್ಲ.ತಲೆತುಂಬ ವಿಚಾರಗಳು, ಎದೆ ತುಂಬ ಭಾವನೆಗಳನ್ನು ತುಂಬಿಕೊಂಡು , ಅವನ್ನು ಕ್ರೋಢೀಕರಿಸಿ ಅಪರೂಪದ ಚಿತ್ರಗಳನ್ನು ನೀಡುವಲ್ಲಿ ಅವರು ಸಿದ್ಧಹಸ್ತರು.ಅಬ್ಬರದ ಸಂಗೀತವಿಲ್ಲದ, ಉಬ್ಬರದ ಹೊಡೆದಾಟಗಳಿಲ್ಲದ
  ” ವಿಚಾರ ಗಳನ್ನು ಕೆರಳಿಸದೇ ಅರಳಿಸುವ” ಅವರ ಚಿತ್ರಗಳು ಅಮೂಲ್ಯ ಕೊಡುಗೆ . ಇಂತಹ ದಿಗ್ಗಜ ರೊಂದಿಗೆ ತಮ್ಮ ಯುಗಾದಿ ಹಬ್ಬದ ಸಂಭ್ರಮ ಸಡಗರದ ಆಚರಣೆಯನ್ನು ಆಯೋಜಿಸಿ ಅದನ್ನು ಎಲ್ಲರಿಗೂ ಮುಟ್ಟಿಸುವ ಕನ್ನಡ ಬಳಗ ಯುಕೆ ದ ವೈಖರಿ ನಿಜಕ್ಕೂ ಶ್ಲಾಘನೀಯ.ಶ್ರೀವತ್ಸ ದೇಸಾಯಿ ಅವರ ವಿಡಿಯೋ ಚಿತ್ರಣ ಈ ಸಂವಾದಕ್ಕೆ ವೈಶಿಷ್ಟ್ಯತೆ ತಂದಿದೆ ಅನಿಸ್ತು.ಶಿವಪ್ರಸಾದ ಅವರಿಗೂ, ದೇಸಾಯಿ ಅವರಿಗೂ ಅಭಿನಂದನೆಗಳು ಹಾಗೂ ಧನ್ಯವಾದಗಳು.ಕನ್ನಡಬಳಗ ಯುಕೆ ಗೂ ಧನ್ಯವಾದಗಳು ಅಂತ ಹೇಳದಿರಲಾರೆ.ಪತ್ತಾರ ಅವರ ಹಸಿರು ಎಲೆಗಳ ನಡುವೆ ಅರಳಿರುವ ಹೂಗಳು, ಆ ಹೂಗಳು ನಡುವೆ ನುಸುಳಿ ಹೊಂಬಣ್ಣ ದ ಹೊಳಪು ನೀಡಿರುವ ಉದಯಸೂರ್ಯ ಇಲ್ಲಿ ತುಂಬಾ ಸಂದರ್ಭೋಚಿತವಾಗಿ ಮೂಡಿ ಕನ್ನಡ ಬಳಗ ಯುಕೆ ಗೆ ಶುಭ ಹಾರೈಸ್ತದೆಯೇನೋ ಎಂಬ ಅನಿಸಿಕೆ.ತುಂಬ ಸುಂದರ ಚಿತ್ರಣ ಪತ್ತಾರ ಅವರೇ.ಅಭಿನಂದನೆಗಳು
  ಸರೋಜಿನಿ ಪಡಸಲಗಿ

  Liked by 2 people

 7. ಸಂದರ್ಶನ ಮಾಡುವುದೊಂದು ಕಲೆ; ಅದನ್ನು ಪ್ರಸ್ತುತ ಮಾಡುವುದಿನ್ನೊಂದು ತರದ್ದು. ಇಲ್ಲದಿದ್ದರೆ ಅದು ನೀರಸ ಪ್ರಶ್ನೋತ್ತರವಾಗಿ ಬಿಡುವ ಸಾಧ್ಯತೆಯಿದೆ..ಕೆಲವು ಸಲ ಆ ಶೈಲಿ ಸರಿಯೆನಿಸಿದರೂ ಈ ಸಂದರ್ಶನ-ಲೇಖನದಲ್ಲಿ ಗಿರೀಶ ಕಾಸರವಳ್ಳಿಯವರ ವ್ಯಕ್ತಿತ್ವ ಚೆನ್ನಾಗಿ ಮೂಡಿ ಬಂದಿದೆ. (ಸಂಪಾದಕರು ಆಯ್ದ ಮೊದಲನೆಯ ಚಿತ್ರ ನನಗೆ ಹಿಡಿಸಿತು). ಅವರೊಡನೆಯ ಕೆಲ ದಿನಗಳ ಒಡನಾಟದ ಒಳನೋಟ ಇಲ್ಲಿ ಒಂದು ಪರ್ಸನಲ್ ಟಚ್ ಕೊಟ್ಟಿದೆ. ಡಾ.ಶಿವಪ್ರಸಾದರಿಗೆ ಅಬಿನಂದನೆಗಳು. ಅಂದು ನಾನು ಅಲ್ಲಿ ಇದ್ದೆ ಎಂದೇ ಈ ಮುಂದಿನ ಮಾತುಗಳನ್ನು ಹೇಳ ಬಲ್ಲೆ. ಅದರೊಂದಿಗೆ ನನ್ನ ಒಂದು ಅಭಿಪ್ರಾಯವನ್ನೂ ಹೇಳಲೇ ಬೇಕು. ಏನೂ ಬಿಗುಮಾನವಿಲ್ಲದ ಸರಳ ವ್ಯಕ್ತಿ ಗಿರೀಶ ಅವರು, ಬೇಗನೆ ಹತ್ತಿರದವರಾಗಿ ಬಿಡುವಂಥ ಮೋಡಿ ಅವರಲ್ಲಿದೆ ಎಂದೆನೆಸಿತು.
  ಇನ್ನು, ನನ್ನ ಹವ್ಯಾಸಿ ವಿಡಿಯೋ ಪ್ರಯತ್ನದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ ಓದುಗರಿಗೆ ಕೃತಜ್ಜತೆಗಳು.
  ಆ ಚಿತ್ರಗಳ ಬಗ್ಗೆ: ಫೋಟೋದಲ್ಲಿ ಹೂಗಳನ್ನು ಕಿಲ ಕಿಲ ನಗಿಸಿದ್ದನ್ನು ನೋಡಿದ್ದೇನೆ. ಇಲ್ಲಿ ಒಂದು ಚಿತ್ರದಲ್ಲಿ ಜಯಪ್ರಕಾಶ್ ಪತ್ತಾರರು ಫಳಫಳನೆ ಪುಷ್ಪವನ್ನು ಹೊಳಪಿಸಿದ್ದಾರೆ! Kudos!

  Liked by 2 people

 8. It was very good to read the interview article by Dr Shivprasad. The interview filmed and edited by Dr Desai is an excellent documentary on Karnataka’s famous creative and award winning film director Dr Girish Kasaravalli . Well done .

  Liked by 1 person

 9. ಪ್ರಸಾದ್ ಅವರ ಲೇಖನ ಬಹಳ ಚೆನ್ನಾಗಿದೆ ಮತ್ತು ಕಾಸರವಳ್ಳಿ ಅವರ ವಿಡಿಯೋ ಸಂದರ್ಶನ ವಿಚಾರಪೂರ್ವಕವಾಗಿದೆ. ದೇಸಾಯಿ ಅವರ ವಿಡಿಯೋ ಪ್ರೊಡಕ್ಷನ್ is very professional

  ಗಿರೀಶ್ ಅವರು ಹಿಂದೆ ಲಂಡನ್ ಗೆ ಬಂದಾಗ ನೆಹರು ಸೆಂಟರ್ ನಲ್ಲಿ ಅವರನ್ನ ಭೇಟಿ ಮಾಡುವ ಅವಕಾಶ ನನಗಿತ್ತು. ಸಿನಿಮಾ ಮಾತ್ರ ವಲ್ಲ ನೀವು ನಮ್ಮ ಕರ್ನಾಟಕದ ವೈಭವ ಮತ್ತು ಚರಿತ್ರೆ ಬಗ್ಗೆ documantary ಮಾಡಿ ಅಂತ ಸಲಹೆ ಕೊಟ್ಟಿದ್ದೆ. ಆದರೆ ಇಂತಹ ಪ್ರೋಗ್ರಾಮ್ ಗಳು financially
  not viable ಅಂತ ತೋರತ್ತೆ.
  ಕನ್ನಡ ಬಳಗ ದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುವುದು ತುಂಬಾ ಸಂತೋಷದ ವಿಚಾರ

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.