ವೈವಿಧ್ಯಮಯ ಕ್ರಿಸ್ಮಸ್ ಹಬ್ಬ – ವಿನತೆ ಶರ್ಮ ಬರೆದ ಲೇಖನ

ಇ೦ಗ್ಲೆಡಿನ ಛಳಿಯ ಜೊತೆಗೆ ಶುರುವಾಗುತ್ತದೆ ಕ್ರಿಸ್ ಮಸ್ ನ ಗಾಳಿ. ಜನ ಹಬ್ಬಕ್ಕೆ ಉಳಿದಿರುವ ದಿನಗಳನ್ನೆಣಿಸಲು ಶುರುಮಾಡುತ್ತಾರೆ. ಎಲ್ಲಕ್ಕಿ೦ತ ಹೆಚ್ಚು ಕೇಳಿಬರುವ ಶಬ್ದ ”ಪ್ರೆಸೆ೦ಟ್ಸ್ ಅಥವಾ ಕಾಣಿಕೆ”. ದೂರದರ್ಶನದಲ್ಲಿ ಪ್ರಸಾರವಾಗುವ ಚಲನಚಿತ್ರಗಳು ಈ ಹಬ್ಬದ ಬಗೆಗಾದರೆ, ಜಾಹೀರಾತುಗಳೆಲ್ಲ ನೆ೦ಟರಿಗೆ, ಮಕ್ಕಳಿಗೆ ಮತ್ತು ಸ್ನೇಹಿತರಿಗೆ ಕೊಡಬೇಕಾಗುವ ಕಾಣಿಕೆಗಳ ಬಗೆಗೆ. ಪ್ರತಿ ಊರಿನ ಬೀದಿಗಳಲ್ಲಿ ಹಬ್ಬದ ಪ್ರಯುಕ್ತ ತಿ೦ಗಳಿಗೆ ಮೊದಲೆ ಬೆಳುಗುವ ದೀಪಾಲ೦ಕಾರ, ಮನೆಗಳ ಮು೦ದಿನ ದೀಪಗಳು, ಕೆಲಸ ಮಾಡುವ ಜಾಗ, ಅ೦ಗಡಿಗಳಲ್ಲಿ ಮತ್ತು ಮನೆಗಳಲ್ಲಿ ಅಲ೦ಕೃತ ಕ್ರಿಸ್ ಮಸ್ ನ ಮರ. ಇದನ್ನೆಲ್ಲಾ ನೋಡಿದಾಗ ಈ ಹಬ್ಬದ ಸ೦ಭ್ರಮವನ್ನು ತಪ್ಪಿಸಿಕೊಳ್ಳಲು ಯಾರಿ೦ದಲೂ ಸಾಧ್ಯವಿಲ್ಲವೆ೦ದೆನಿಸುತ್ತದೆ. ಧರ್ಮ ಯಾವುದಾದರೇನು, ನಮ್ಮ ಸುತ್ತಲಿನ ಸ೦ಭ್ರಮದಲ್ಲಿ ಭಾಗಿಗಳಾಗಿ ಆನ೦ದಿಸೋಣ. ಈ ಹಬ್ಬದ ಪರಿಚಯ ಮತ್ತು ವೈವಿಧ್ಯತೆಯನ್ನು ನಮ್ಮೊ೦ದಿಗೆ ಈ ವಾರದ ಲೇಖನದಲ್ಲಿ ಹ೦ಚಿಕೊ೦ಡಿದ್ದಾರೆ ವಿನುತೆ ಶರ್ಮ – ಸ೦

 

ವೈವಿಧ್ಯಮಯ ಕ್ರಿಸ್ಮಸ್ ಹಬ್ಬ

ಲೇಖಕಿ – ವಿನತೆ ಶರ್ಮ

ಕ್ರಿಸ್ಮಸ್ ಹಬ್ಬ ಬಂದಿದೆ.

ಬಹುಶಃ ಅನೇಕ ದೇಶಗಳಲ್ಲಿ ಮಕ್ಕಳು ತಮ್ಮ ಜನ್ಮ ದಿನವಲ್ಲದ ಮತ್ತೊಂದು ದಿನಕ್ಕೆ ಕಾದು ಎದುರು ನೋಡುವ ದಿನ ಈ ಕ್ರಿಸ್ಮಸ್ ಹಬ್ಬ. ಮಕ್ಕಳಷ್ಟೇ ಅಲ್ಲ, ಅವರ ಹಿರಿಯರಿಗೂ ಕ್ರಿಸ್ಮಸ್ ಹಬ್ಬದ ಜೊತೆಗಿನ ನಂಟು ದೂರದ ನೆಂಟನಿಗಿಂತಲೂ ಒಂದು ಕೈ ಜಾಸ್ತಿ!

ಧಾರ್ಮಿಕವಾಗಿ ಕ್ರಿಸ್ಮಸ್ ಹಬ್ಬಕ್ಕೆ ಇರುವ ವೈವಿಧ್ಯಮಯ ಹಿನ್ನೆಲೆ ಎಷ್ಟು ಕುತೂಹಲವಾದದ್ದೋ ಅದು ಸಾಂಸ್ಕೃತಿಕವಾಗಿ ಮತ್ತು ಸಮುದಾಯ ಹಬ್ಬವಾಗಿ ಭೂಗೋಳವನ್ನು ಆವರಿಸಿದ್ದು ಅಷ್ಟೇ ಅಚ್ಚರಿ ಹುಟ್ಟಿಸುವ ವಿಷಯ. ಬೆಂಗಳೂರಿನಲ್ಲಿ ಕೆಲ ಕಾಲ ಇದ್ದ ನಮ್ಮ ಪಕ್ಕದ ಮನೆಯವರು ಕ್ರೈಸ್ತ ಧರ್ಮ ಪಾಲಕರು. ಅವರಿಂದ ಕ್ರಿಸ್ಮಸ್ ಹಬ್ಬದ ಪರಿಚಯವಾಗಿತ್ತು. ಹತ್ತು ದಿನಗಳ ನಮ್ಮ ದಸರಾ ಹಬ್ಬಕ್ಕೆ ನಾವು ಹೋಲಿಸುತ್ತಿದ್ದೆವು. ನಂತರ ಆಸ್ಟ್ರೇಲಿಯಾದ ಕಡು ಬೇಸಗೆಯಲ್ಲಿ ಬರುವ ಕ್ರಿಸ್ಮಸ್ ತನ್ನ ವೈವಿಧ್ಯತೆಯ ಬೇರೆ ಮುಖವನ್ನು ಪರಿಚಯಿಸಿತ್ತು. ಈಗ ಇರುವ ಇಂಗ್ಲೆಂಡ್ ನಲ್ಲೋ ನಿಜವಾದ ‘ಬಿಳಿ ಕ್ರಿಸ್ಮಸ್’ ಹಬ್ಬದ ಠಾಕುಠೀಕು. 

ಪಾಶ್ಚಾತ್ಯ ದೇಶಗಳಲ್ಲಿ ಧಾರ್ಮಿಕ ಪದ್ಧತಿಯಂತೆ ಕ್ರಿಸ್ಮಸ್ ಹಬ್ಬದ ಮಾಸವನ್ನು ಹಲವಾರು ಸಂಕೇತಗಳಿಂದ ಬರಮಾಡಿಕೊಳ್ಳುತ್ತಾರೆ. ‘ಅಡ್ವೆಂಟ್’ ಕ್ಯಾಲೆಂಡರ್ ಪ್ರಕಾರ ದಿನಗಳನ್ನೆಣಿಸಿ, ಕ್ರಿಸ್ತ ಹುಟ್ಟುವ ಕಾಲಕ್ಕೆಂದು ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಕಡೆಯ ಹನ್ನೆರಡು ದಿನಗಳನ್ನು ಗುರುತರವಾಗಿ ಕಳೆದು ಹನ್ನೆರಡರ ಮಧ್ಯರಾತ್ರಿ ಮಗು ಜನನ ಕಾಲವನ್ನು ಚರ್ಚ್ ಗಳಲ್ಲಿ Mass ಮೂಲಕ ಆಚರಿಸುತ್ತಾರೆ. ಪಾಶ್ಚಾತ್ಯರು ತಾವು ಹೋಗಿ ನೆಲೆಸಿದ ವಿವಿಧ ದೇಶಗಳಲ್ಲಿ ಈ ಪದ್ಧತಿ ಹೆಚ್ಚು ಕಡಿಮೆ ಹಾಗೇ ಮುಂದುವರೆದಿದೆ. ಆದರೂ, ಕ್ರೈಸ್ತ ಧರ್ಮದಲ್ಲೂ ಇರುವ ಪಂಗಡಗಳು ಕ್ರಿಸ್ಮಸ್ ಆಚರಣೆಯಲ್ಲಿ ತಮ್ಮದೇ ಆದ ವಿವಿಧ ಛಾಪನ್ನು ಹೊಂದಿವೆ. ಅದಕ್ಕೆ ಅನುಗುಣವಾಗಿ  ಜೆರುಸಲೆಮ್ ನಲ್ಲಿ ಆಚರಿಸುವ ಕೆಲ ಪದ್ಧತಿಗಳು ಇಂಗ್ಲೆಂಡ್ ನಲ್ಲಿ ಬೇರೆ ರೂಪಗಳನ್ನು ತಾಳಬಹುದು. ರಷ್ಯಾ ದೇಶದ ಕೆಲ ಭಾಗಗಳಲ್ಲಿ ಈಗಲೂ ಜನವರಿ ೬ ಅಥವಾ ೭ ರಂದು ಕ್ರಿಸ್ಮಸ್ ಆಚರಿಸುತ್ತಾರೆ. ಆ ದಿನ Three Kings ಬಂದರು ಎಂಬ ನಂಬಿಕೆಯನ್ನಾಧರಿಸಿ. ಅವರವರ ಭಕುತಿಗೆ ಅವರವರ ಆಚರಣೆ ಎನ್ನಬಹುದೇನೋ!

ಹನ್ನೆರಡು ದಿನಗಳು ಏನೇನು ಉಡುಗೊರೆಗಳನ್ನು ಒಳಗೊಂಡಿವೆ ಅನ್ನೋದನ್ನ ಈ ಹಾಡು ತಿಳಿಸುತ್ತದೆ.

ಮಗು ಕ್ರಿಸ್ತನ ಜನ್ಮದಿನಾಂಕ ಖಚಿತವಾಗಿ ಯಾರಿಗೂ ತಿಳಿದಿಲ್ಲದಿದ್ದರೂ ಸುಮಾರು ನಾಲ್ಕನೇ ಶತಮಾನದಲ್ಲಿ ರೋಮನ್ನರು ಡಿಸೆಂಬರ್ ೨೫ ಕ್ರಿಸ್ಮಸ್ ಹಬ್ಬ ಎಂದು ಘೋಷಿಸಿದರು ಎಂದು ನಂಬಿಕೆ. ಈ ನಂಬಿಕೆಯ ಬುನಾದಿ ಎಂದರೆ ಡಿಸೆಂಬರ್ ೨೫ ರಂದು ಪಶ್ಚಿಮ ದೇಶಗಳ ಹವಾಮಾನದ ಪ್ರಕಾರ ಅತಿ ಕಡಿಮೆ ಬೆಳಕಿರುವ ದಿನ (ಆಗಿನ ನಂಬಿಕೆ; ಈ ವರ್ಷ ಡಿಸೆಂಬರ್ ೨೧ರಂದು). ಅಂದರೆ ಚಳಿಗಾಲದಲ್ಲಿ ಬರುವ ಒಂದು ಸಂಕ್ರಮಣದ ದಿನ. ಆ ದಿನದಿಂದ ಸೂರ್ಯನ ಬೆಳಕು ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಹೊಸ ಬೆಳಕನ್ನ, ಸೂರ್ಯ ರಶ್ಮಿಯನ್ನ ತರುವ ಚೇತನವೊಂದು ಪ್ರಕೃತಿಯಲ್ಲಿ ಮೂಡುತ್ತದೆ. ರೋಮನ್ನರು ಆ ದಿನವನ್ನೇ ಪ್ರಶಸ್ತವೆಂದು ಆರಿಸಿಕೊಂಡರು. ಅವರು ‘ಧರ್ಮಬಾಹಿರ’ವೆಂದು ತಿಳಿದಿದ್ದ ಪೇಗನ್ ಸಂಸ್ಕೃತಿಯ (ಪ್ರಕೃತಿ ಶಕ್ತಿಗಳನ್ನು ಪೂಜಿಸುವ ಸಮುದಾಯಗಳು) ಹಬ್ಬಗಳ ಹುಟ್ಟಡಗಿಸಲು ಕೂಡ ಡಿಸೆಂಬರ್ ತಿಂಗಳನ್ನು ರೋಮನ್ನರು ಆರಿಸಿಕೊಂಡರು ಎಂಬ ವಾದವೂ ಇದೆ. ಆ ಮೂಲಕ ದೈವಿಕ ಶಕ್ತಿಯನ್ನು ಮಾನವರೂಪದಲ್ಲಿ ನೋಡುವ ಪದ್ಧತಿಯನ್ನು ಹುಟ್ಟುಹಾಕಿದರೆಂದು ಕೂಡ ವಾದಿಗಳು ಹೇಳುತ್ತಾರೆ. ಪೇಗನ್ನರು ಪ್ರಕೃತಿ ಆರಾಧಕರು. ಅವರು ಚಳಿಗಾಲದ ಅತಿ ಕಡಿಮೆ ಸೂರ್ಯನ ಬೆಳಕಿರುವ ಸಂಕ್ರಮಣದ ದಿನವನ್ನು Winter Solstice ಎಂದು ಆಚರಿಸುತ್ತಿದ್ದರು. Holy, Ivy ಮತ್ತು ವಿವಿಧ ಫರ್ನ್ ಮರಗಳನ್ನು ಬಳಸಿ ಅಲಂಕಾರ ಮಾಡುತ್ತಿದ್ದರು. ಆ ಆಚರಣೆಗಳು ಇಂದಿಗೂ ಉಳಿದಿವೆ. ಉತ್ತರ ಯುರೋಪ್ ಕಡೆಯಿಂದಲೂ ಬಹಳಷ್ಟು ಪ್ರಭಾವವಿದೆ.

ಅಂತಹ ಭಿನ್ನಾಭಿಪ್ರಾಯಗಳು ಏನೇ ಆಗಿದ್ದರೂ, ಉಪವಾಸ ವ್ರತದ ಮಾಸದಲ್ಲಿ ಕಡೆಯ ಹನ್ನೆರಡು ದಿನಗಳಿಗೆ ಪ್ರಾಮುಖ್ಯತೆಯಿದೆ. ಕಾಲ ಸರಿದಂತೆ ಸಾಂಪ್ರದಾಯಿಕ ಕ್ರಿಸ್ಮಸ್ ಹಬ್ಬಕ್ಕೆ ಹಲವಾರು ಸೇರ್ಪಡೆಗಳಾಗಿವೆ. ಅವಲ್ಲಿ ಗುರುತರವಾದವು ಎಂದರೆ Advent ಕ್ಯಾಲೆಂಡರ್ ಪ್ರಕಾರ ದಿನ ಎಣಿಸಿ ನೇಮ ಪಾಲಿಸುವುದು, ಮನೆಮುಂದೆ ಅಡ್ವೆಂಟ್ ಹಾರವನ್ನು ಪ್ರದರ್ಶಿಸುವುದು, ಸಾಂಘಿಕ ಜೀವನದ ಎಲ್ಲೆಡೆ (ಮನೆಗಳಲ್ಲಿ, ಹಳ್ಳಿ ಚೌಕದಲ್ಲಿ, ಪಟ್ಟಣದ ಮಾರುಕಟ್ಟೆಗಳಲ್ಲಿ ಇತ್ಯಾದಿ ಕಡೆ) ಕ್ರಿಸ್ಮಸ್ ಮರವನ್ನಿಟ್ಟು ವಿವಿಧ ರೀತಿಯಲ್ಲಿ ಅಲಂಕರಿಸಿ, ಬಣ್ಣಗಳನ್ನು ತುಂಬಿ, ಝಗಮಗ ಲೈಟುಗಳನ್ನು ಹಾಕುವುದು, ಪರಸ್ಪರ ಉಡುಗೊರೆಗಳನ್ನು ಕೊಟ್ಟುಕೊಳ್ಳುವುದು, ಮತ್ತು ಕ್ರಿಸ್ತ ಹುಟ್ಟಿದ ಸನ್ನಿವೇಶವನ್ನು (ನೇಟಿವಿಟಿ ಶೋ) ಮರುಸೃಷ್ಟಿಸುವುದು.

Stevie Nicks ಹಾಡಿರುವ ಸೈಲೆಂಟ್ ನೈಟ್ ಹಾಡನ್ನು ಒಮ್ಮೆ ಕಣ್ಣುಮುಚ್ಚಿ ಕೇಳಿ – ಅರಿವಿಲ್ಲದಂತೆ ತಲೆ ತೂಗುತ್ತದೆ.

ಅಷ್ಟೇ ಅಲ್ಲ, ಕ್ರಿಸ್ಮಸ್ ಕ್ಯಾರೋಲ್ ಹಾಡುಗಾರಿಕೆ, ವಾದ್ಯಗಳ ಸಂಗೀತ, ಸಾಂಟಾ ಕ್ಲಾಸ್-ಧಾರಿಗಳು ಬಂದು ಶುಭಹಾರೈಕೆ ಹೇಳುವುದು, ಮತ್ತು ಮಕ್ಕಳಿಗೆ ವಿಶೇಷವಾಗಿ ಹರಸುವುದು ಕೂಡ ಬಲು ಚೆಂದ. ಬೀದಿಗಳಲ್ಲಿ ಸಾಂಟಾನ ಹಾಡುವ ಗಾಡಿ ಬಂತೆಂದರೆ ಮಕ್ಕಳು, ದೊಡ್ಡವರಿಗೂ ಏನೋ ಉಲ್ಲಾಸ. ಈ ಪದ್ಧತಿಗಳಲ್ಲೆವೂ ಬೇರೆ ಬೇರೆ ದೇಶಗಳಿಂದ, ಸಮಾಜ-ಸಂಸ್ಕೃತಿಯಿಂದ ಪರಸ್ಪರ ವಿನಿಮಯಗೊಂಡು ಕ್ರಿಸ್ಮಸ್ ಹಬ್ಬ ಎಂದರೆ ಈಗ ಕಲಸುಮೇಲೋಗರವಾಗಿದೆ. ಆದರೂ ಸಾಂಪ್ರದಾಯಿಕ ಕೆಲ ಪದ್ಧತಿಗಳು (ಉದಾಹರಣೆಗೆ ನೇಟಿವಿಟಿ ಶೋ) ಪ್ರತಿಯೊಂದು ದೇಶದಲ್ಲೂ ಹಾಗೆ ಉಳಿದುಕೊಂಡಿವೆ.


ಉತ್ತರ ಖಂಡಗಳಲ್ಲಿ ವಿಪರೀತವಿರುವ ಚಳಿ ಮತ್ತು ಕತ್ತಲು ಕಳೆದು ಸೂರ್ಯ ತರುವ ಬೆಳಕು, ಶಾಖದ ದಿನಗಳನ್ನು ಎಲ್ಲರೂ ಎದುರುನೋಡುತ್ತಾರೆ. ಆ ಕಾಯುವಿಕೆಯಲ್ಲಿ ಆಶಾದಾಯಕ  ಅರ್ಥವಿದೆ.   ಚಳಿಗಾಲದ ಹಿಮ ವಾತಾವರಣ “ವೈಟ್ ಕ್ರಿಸ್ಮಸ್” ಉಂಟುಮಾಡಿದೆ. ಮುಡಿಯಿಂದ ಅಡಿಯವರಗೆ ಪೂರ್ತಿ ಬಟ್ಟೆಗಳ ಪದರುಗಳನ್ನು ಧರಿಸಿಯೇ ಇಲ್ಲಿ ಕ್ರಿಸ್ಮಸ್ ಸಂಭ್ರಮ. ಮನೆಯೊಳಗೆ ಸೆಂಟ್ರಲ್ ಹೀಟಿಂಗ್ ಇಟ್ಟುಕೊಂಡು, ಬಿಸಿಬಿಸಿಯಾಗಿ ಬೇಯಿಸಿದ ಟರ್ಕಿ ಕೋಳಿಯ ಜೊತೆ ಬೇಯಿಸಿದ ಆಲೂಗಡ್ಡೆ, ತರಕಾರಿಗಳು, ಗ್ರೇವಿ, ಪುಡ್ಡಿಂಗ್ ಮುಂತಾದ ಭರ್ಜರಿ ಊಟ.

 

ಆಸ್ಟ್ರೇಲಿಯಾದಲ್ಲಿ ಬೇಸಗೆಯಾದ್ದರಿಂದ ಚಡ್ಡಿ, ಟಿ ಶರ್ಟ್, ತಂಪು ಕನ್ನಡಕ, ಒಂದಷ್ಟು ಸನ್ ಸ್ಕ್ರೀನ್ ಬಳಿದುಕೊಂಡು, ಹೊರಗಡೆ Barbeque ಸಮಾರಂಭಗಳು ನಡೆಯುತ್ತವೆ. ಜೊತೆಗೆ ಗಿಟಾರ್ ಹಾಡುಗಾರಿಕೆ. ಕ್ರಿಸ್ಮಸ್ ಹಬ್ಬದ ಹಾಡುಗಳೂ ಬಲು ಮೋಜು.

ಆಸ್ಟ್ರೇಲಿಯಾದಿಂದ  ಸಿಕ್ಸ್ ವೈಟ್ ಬೂಮರ್ಸ್ ಹಾಡು ನಿಮಗಾಗಿ! 

ಡಿಸೆಂಬರ್ ತಿಂಗಳು ಬಂತೆಂದರೆ ಜನರು ಬಣ್ಣಗಳು ತುಂಬಿಕೊಂಡು ಕಣ್ಮನ ಸೆಳೆಯುವ ಕ್ರಿಸ್ಮಸ್ ಲೈಟ್ಸ್ ನೋಡಲು ಲಂಡನ್ನಿಗೋ, ಮ್ಯಾಂಚೆಸ್ಟರ್, ಲೆಸ್ಟರ್, ಲೀಡ್ಸ್ ಅಥವಾ ಯಾರ್ಕ್ ನಗರಕ್ಕೊ, ಅಥವಾ ದೂರದ ಜರ್ಮನಿ, ಆಮ್ಸ್ಟರ್ಡಮ್, ಪ್ಯಾರಿಸ್ ಮುಂತಾದ ಸ್ಥಳಗಳಿಗೋ ಹೋಗುತ್ತಾರೆ. ತೀವ್ರ ಚಳಿಯಿರುವ ಈ ಹವಾಮಾನದಲ್ಲಿ ಕ್ರಿಸ್ಮಸ್ ಸಡಗರವೇ ಒಂದು ತರಹದ ಥೆರಪಿ – ಮನಕ್ಕೆ ಉಲ್ಲಾಸ, ಎಲ್ಲರೊಡನೆ ನಗು, ಹಾಡು, ಕುಣಿತ, ಕುಟುಂಬದ ಸದಸ್ಯರೆಲ್ಲ ಸೇರಿ ನಲಿಯುವ ಸಮಯ.

ಬರುಬರುತ್ತಾ ಕ್ರಿಸ್ಮಸ್ ಹಬ್ಬದ ಸೀಸನ್ ಎಂದರೆ ಮತ್ತಷ್ಟು ಕೊಳ್ಳುವುದು, ಸಂಗ್ರಹಿಸುವುದು, ಆ ಮೂಲಕ ಗ್ರಾಹಕೀಕರಣದಲ್ಲಿ ಪಾಲ್ಗೊಳ್ಳುವುದು ಎಂತಾಗಿದೆ. ವರ್ಷವಿಡೀ ಮುದುಡಿ ಮಲಗಿದ್ದ ಕ್ರಿಸ್ಮಸ್ ಮಾರುಕಟ್ಟೆಗಳು, ಅಂತರ್ಜಾಲ ಅಂಗಡಿಗಳು ಮೈಕೈಕೊಡವಿ, ಅಲಂಕಾರ ಮಾಡಿಕೊಂಡು ನಗುಮುಖ ಧರಿಸಿ ಸಜ್ಜಾಗುತ್ತವೆ. ಜನರು ತಿಂಗಳಾನುಗಟ್ಟಲೆ ತಲೆಕೆಡಿಸಿಕೊಂಡು ಯಾರಿಗೆ, ಯಾವ ಥರದ್ದು ಎಲ್ಲಿ ಎಂಬ ಯೋಜನೆಗಳನ್ನ ಮಾಡಿ, ಉಡುಗೊರೆಗಳನ್ನು ಕೊಳ್ಳುತ್ತಾರೆ. ಅವರ ಜೇಬು ಖಾಲಿ, ವ್ಯಾಪಾರಸ್ಥರ ತಿಜೋರಿ ಭರ್ತಿ! ಮತ್ತಷ್ಟು ಸಂಗ್ರಹಣೆ, ಆಡಂಬರ, ದಿವಾಳಿತನ – ಇದರ ಪರಿಣಾಮ ತಿಳಿಯುವುದು ಜನವರಿ ತಿಂಗಳಲ್ಲಿ. ಚಳಿ ಇನ್ನೂ ಹೆಚ್ಚಾಗಿ ದಿನ ಕಳೆಯುವುದು ದುಸ್ತರವಾದಾಗ ಜನ ವೈದ್ಯರ ಬಳಿಗೆ, ಅರೋಗ್ಯ, ಹಣಕಾಸು ಬಗ್ಗೆ ಸಲಹೆ-ಮಾರ್ಗದರ್ಶನ ನೀಡುವ ಸಂಸ್ಥೆಗಳಿಗೆ ಓಡುತ್ತಾರೆ – ಮನೋಖಿನ್ನತೆ, ಸಾಲ, ಆರೋಗ್ಯದಲ್ಲಿ ಏರುಪೇರು, ಖಾಲಿ ಮನೆ-ಮನಸ್ಸು, ಗುರಿಯಿಲ್ಲದ ಜೀವನಕ್ರಮ!

ಈ ದುಷ್ಪರಿಣಾಮಗಳನ್ನು ಕುರಿತು ಈಗ ಜಾಸ್ತಿ ಮಾತು ಕೇಳಿಬರುತ್ತಿದೆ. ಕ್ರಿಸ್ಮಸ್ ಸಮಯದಲ್ಲಿ ‘ಇಲ್ಲದವರ’ ನೆನಪಿಸಿಕೊಂಡು, ದಾನದತ್ತಿಗೆ ನೀಡಿ; ಹಬ್ಬದ ಸಂದರ್ಭದಲ್ಲಿ ಒಳ್ಳೆಯ ಕಾರ್ಯ ನಿಮಿತ್ತ ನಿಮ್ಮ ಹಣ, ಸಮಯ ಮತ್ತು ದೊಡ್ಡ ಮನಸ್ಸನ್ನು ಮುಡಿಪಾಗಿಡಿp ಎಂದು ಹೇಳುತ್ತಿದ್ದಾರೆ. ಕಾರಣ, ಮಾತು, ಉದ್ದೇಶ ಏನೇ ಆಗಿರಲಿ, ಜಾಗತಿಕ ಹಬ್ಬವಾದ ಕ್ರಿಸ್ಮಸ್ ಚಳಿದೇಶಗಳಲ್ಲಿ ಎಲ್ಲರಿಗೂ ಒಂದಲ್ಲಾ ಒಂದು ತರಹದ ಮುದ ಕೊಡುತ್ತದೆ. ನಿಮ್ಮೆಲ್ಲರಿಗೂ Merry Chrismas ಮತ್ತು ಹೊಸ ವರ್ಷದ ಶುಭಾಶಯಗಳು!

ಸರ್ ಎಲ್ಟನ್ ಜಾನ್ ಹಾಡಿರುವ ಈ ಹಾಡು Step into Christmas ನಮ್ಮೆಲ್ಲರಿಗಾಗಿ

—ವಿನತೆ ಶರ್ಮ

ಈಗ ಮಿಸಲ್ ಟೋ ಅಡಿ ಬರೆದ ಕ್ರಿಸ್ಮಸ್ ಕವನವನ್ನು ಓದಿರಿ!

ಕಿಸ್-ಮಿಸ್ ಕ್ಯಾರಲ್

Processed with MOLDIV
Processed with MOLDIV

ಯುಗ ಯುಗಾದಿ ಕಳೆದರೂ

ನಾತಾಳ ಮರಳಿ ಬರುತಿದೆ

ಅದರ ಬೆನ್ನು ಹತ್ತಿದ ಬೇತಾಳದಂತೆ

ಹೊಸವರ್ಷವು ಮರಳಿ ಬರುತಿದೆ

ಚಾಕಲೇಟು, ಪ್ರೆಸೆಂಟ್ ಬಿಲ್ ಹೊತ್ತು

ಬೆನ್ನೂ ಬಿಲ್ಲಾಗಿ ಬಾಗಿದೆ, ಕಿಸಿಗೆ ತೂತು ಬಿದ್ದಿದೆ

ಬ್ಯಾಂಕು ಬ್ಯಾಲನ್ಸ್ ಅಂತೂ ಪಾತಾಳ ಸೇರಿದೆ

ಅಲ್ಲಿ ಪಾರ್ಟಿಯಂತೆ, ಜನಜಂಗುಳಿ ಸೇರಿ ಹಂಗಾಮಾ ಮಾಡಿದೆ

ಆದರೆ ನಿಮಗೊಂದು ಎಚ್ಚರಿಕೆ!

ಮುತ್ತಿನಂಥ ನಿಮ್ಮ ಹಳೆಗೆಳತಿಯೊಬ್ಬಳು

‘ಮಿಸಲ್ ಟೋ’ ದಡಿ ಕಾದಿದ್ದಾಳೆ

ಅಪ್ಪಿ ಮುತ್ತುಗಳ ಮಳೆಗೆರೆದು

ನಿಮ್ಮ ನೆನಪನ್ನು ಕಾಡಿದ್ದಾಳೆ!

ಹೆಂಡತಿ ಕಿಡಿಕಿಡಿಯಾಗಿದ್ದಾಳೆ!

ಶ್ರೀವತ್ಸ ದೇಸಾಯಿ

 

7 thoughts on “ವೈವಿಧ್ಯಮಯ ಕ್ರಿಸ್ಮಸ್ ಹಬ್ಬ – ವಿನತೆ ಶರ್ಮ ಬರೆದ ಲೇಖನ

  1. ಮತ್ತೊಮ್ಮೆ ಇದೇ ವಿಚಾರದ ಬಗ್ಗೆ ಬರೆದಿದ್ದೀರಿ.
    ಆದರೆ ಯಾವುದೇ ರೀತಿಯಲ್ಲಿ ಬೇಜಾರಾಗದಂತೆ ಲೇಖನ ಓದಿಸಿಕೊಂಡು ಹೋಗುತ್ತದೆ.
    ಧನ್ಯವಾದಗಳು

    Like

  2. ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಯುಕೆ ಗೆ ಬಂದಾಗ ಕಂಡ 1974 ರ ಮೊದಲ ಕ್ರಿಸ್ಮಸ್ನ ನೆನಪು ಅಚ್ಚಳಿಯದೆ ಉಳಿದಿದೆ. ನಮಗೆ ಇಲ್ಲಿ ಯ ಜನ ನೀವು ಕ್ರಿಸ್ಮಸ್ ಆಚರಿಸುತ್ತೀರಾ ಎಂದು ಕೇಳುತ್ತಾರೆ. ಮೊಮ್ಮಕ್ಕಳು ಇಲ್ಲಿ ಹುಟ್ಟಿದ ಮೇಲಂತೂ ಕ್ರಿಸ್ಮಸ್ ದೀಪಾವಳಿಗಿಂತ ಹೆಚ್ಚು ವೃಜುಂಭಣೆಯ ಹಬ್ಬವಾಗುತ್ತದೆ ಮನೆಯಲ್ಲಿ. ಹೊರಗಡೆ ಆ ಕವನದ ದೃಶ್ಯ ಮರುಕಳಿಸುತ್ತಲಿರುತ್ತದೆ. ವಿನತೆಯವರ ಸುಂದರ ಲೇಖನದೊಂದಿಗೆ ಎಲ್ಲರಿಗೂ ಕ್ರಿಸ್ಮಸ್ cheers!

    Like

  3. ಕ್ರಿಸ್ಮಸ್ ಹಬ್ಬದ ಬಗ್ಗೆ ನೀವು ಬರೆದ ಅಚ್ಚುಕಟ್ಟಾದ ಲೇಖನ ಮನವನ್ನು ಮುದಗೊಳಿಸಿತು. ಬಾಲ್ಯದಲ್ಲಿ ನಮ್ಮ ಪಕ್ಕದಲ್ಲಿದ್ದ ಮನೆಯ ಕುಟುಂಬ ಕೇರಳದ ಕ್ರೈಸ್ತ ಮತೀಯರು. ನಮ್ಮೊಡನೆ ಬಹಳ ಸ್ನೇಹದಿಂದಿದ್ದ ಕುಟುಂಬ. ಪ್ರತಿ ಕ್ರಿಸ್ಮಸ್ ಹಬ್ಬದಲ್ಲೂ ನಮಗೆ ಕೇಕ್ ಕೊಡುತ್ತಿದ್ದದ್ದು ನೆನಪಿದೆ. ನಾವು ಹೋಗುತ್ತಿದ್ದ ಶಾಲೆ ಕ್ಯಾಥೋಲಿಕ್ ಕಾನ್ವೆಂಟ್. ಅಲ್ಲಿಯೂ ಕ್ರಿಸ್ಮಸ್ ಟ್ರೀ, ಮತ್ತಿತರ ಅಲಂಕಾರಗಳನ್ನೂ ನೋಡಿ ಮೆಚ್ಚಿಕೊಳ್ಳುತ್ತಿದ್ದೆವು. ಈಗಂತೂ ೨೨ ವರ್ಷಗಳಿಂದ, ಯುರೋಪ್ ಮತ್ತು ಅಮೆರಿಕೆಯಲ್ಲಿ ಕ್ರಿಸ್ಮಸ್ ಹಬ್ಬದ ವೈವಿಧ್ಯತೆ ನೋಡಿ ಈ ಸಂಸ್ಕೃತಿ ನಮ್ಮ ಜೀವನದಲ್ಲೂ ಹಾಸುಹೊಕ್ಕಿದೆ. ನಿಮ್ಮ ಲೇಖನ ಓದಿ ಬಹಳ ಹಿತವಾಯಿತು. ದೇಸಾಯಿ ಅವರ ಹಾಸ್ಯಭರಿತ ಕವನ, ಇಂದಿನ ಕೊಳ್ಳಬಾಕತನ ಮತ್ತು ಆಡಂಬರದ ಮತ್ತೊಂದು ಮುಖವನ್ನು ತೋರಿದೆ. ಒಟ್ಟಿನಲ್ಲಿ ಕ್ರಿಸ್ಮಸ್ ರಜೆಯಲ್ಲಿ ಓದಲು ಉತ್ತಮ ಲೇಖನ. ಧನ್ಯವಾದಗಳು.
    ಉಮಾ ವೆಂಕಟೇಶ್.

    Liked by 1 person

  4. ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಬಾಶಯಗಳು, ವಿನುತೆ. ನಿಮ್ಮ ಲೇಖನ ತುಂಬ ಹಿತವಾಗಿ ಕ್ರಿಸ್ಮಸ್ ಹಬ್ಬದ ಮಾಹಿತಿ ಕೊಟ್ಟಿದೆ. ಕೆಲವು ವಿಷಯಗಳು ನನಗೆ ಗೊತ್ತಿರಲಿಲ್ಲ. ವಿಡಿಯೋ ಕೊಂಡಿಗಳು ಚೆನ್ನಾಗಿವೆ. – ಕೇಶವ

    Liked by 1 person

  5. ಶ್ರೀವತ್ಸರಿಗೆ

    ಶುಭಾಶಯಗಳು. ನಿಮ್ಮ ಹಾಸ್ಯಭರಿತ,ಸೊಗಸಾದ ಕ್ರಿಸ್ಮಸ್ ಕವನ ನನಗಾದ ನಿರಾಶೆಯನ್ನು ದೂರಗೊಳಿಸಿತು.ತುಂಬಾ ಥ್ಯಾಂಕ್ಸ್.

    ಅರವಿಂದ ಕುಲ್ಕರ್ಣಿ

    Like

  6. ವಿನುತೆ ಅವರಿಗೆ
    ನಮಸ್ಕಾರ. ಕ್ರಿಸ್ಮಸ್ ಹಾಗು ಹೊಸ ವರುಷದ ಶುಭಾಶಯಗಳು. ನಿಮ್ಮ ಕ್ರಿಸ್ಮಸ್ ಲೇಖನ ತುಂಬಾ ಚೆನ್ನಾಗಿದೆ.ಓದಿ ಕಳೆದ ೪೯ ವರುಷಗಳಿಂದ ಕ್ರಿಸ್ಮಸ್ ಪ್ರತಿ ಕಾಲಕ್ಕೆ ವಿಚಾರಿಸುತ್ತಾ ಬಂದಿರುವ ದಿಗಿಲು ಪುನಃ ಜ್ಞಾಪಕಕ್ಕೆ ಬರುತ್ತಿದೆ. ಈ ಹಬ್ಬದ ಸಮಯದಲ್ಲಿ ಎಲ್ಲ ಜನರು ಸಂಭ್ರಮದಿಂದ,ಆನಂದದಿಂದ,ಆತ್ಮೀಯತೆ,ಸೌಹಾರ್ದತೆಗಳಿಂದ
    ತಮ್ಮ ಬಳಗದವರು,ಮಿತ್ರರೊಂದಿಗೆ ಕಾಲ ಕಳೆಯುವರು. ಇವೆಲ್ಲ ಸದ್ಗುಣಗಳನ್ನು ವರುಷದ ಎಲ್ಲ ೩೬೫ ದಿವಸಗಳಲ್ಲಿ ಅನ್ವಯಿಸಿಕೊಂಡು ಜೀವನ ಸಾಗಿಸಿಕೊಂಡರೆ ಜಗದಲ್ಲಿ
    ಶಾಂತತೆ,ಆನಂದದ ವಾತಾವರಣಗಳಿಂದ ಎಲ್ಲ ಜನರು ಸುಖದಿಂದ ಹಾಯಾಗಿ ಇರಲು ಸಾಧ್ಯವಿದೆಯಲ್ಲವೇ? ಈ ದಿಗುಳಿಗೆ ಇನ್ನು ವರೆಗೆ ನನಗೆ ಉತ್ತರ ಸಿಗುತ್ತಿಲ್ಲ. ನಾನು ಈ
    ವಿಷಯದ ಬಗ್ಗೆ ಸಾಕಷ್ಟು ನನ್ನ ಮಿತ್ರ,ಬಂಧುಗಳೊಂದಿಗೆ ಪ್ರಸ್ತಾಪನೆ ಮಾಡಿದರೂ ಉತ್ತರ ಸಿಗುತ್ತಿಲ್ಲ.ಯೆಂತಹ ಆನಂದ ಪಡುವ ಸಮಯದಲ್ಲಿ ನನಗೇಕೋ ಪ್ರತಿ ವರುಷ ಅಸಮಾಧಾನವಾಗುವದು. ಹೋಗಲಿ .ಅನಿವಾಸಿ ಮಿತ್ರರಿಗೆಲ್ಲ ಕ್ರಿಸ್ಮಸ್ ಹಾಗು ಹೊಸ ವರುಷದ ಶುಭಾಶಯಗಳು. ನಾವೆಲ್ಲರೂ ಈ ಹಬ್ಬವನ್ನು ನಲಿದು ಆನಂದಿಸೋಣ.

    ಅರವಿಂದ ಕುಲ್ಕರ್ಣಿ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.