ಮಗು ನಿನ್ನ ನಗು – ವಿಜಯನರಸಿ೦ಹರವರ ಕವನ

ಮಕ್ಕಳ ಆಟಪಾಟ, ತು೦ಟತನ, ಕೋಪ, ಅಳು, ನಗುವನ್ನು ಬಣ್ಣಿಸದಿಹ ಕವಿಯಿಲ್ಲ.
ಮಗುವಿನ ಪ್ರತಿನಡೆ ನುಡಿಯು, ಅಪರಿಚಿತರ ಮನಕ್ಕೂ ಹರ್ಷ ತರಬಲ್ಲದು.
“ಅಳುವ ಕ೦ದನ ತುಟಿಯು ಹವಳದ ಕುಡಿಹ೦ಗ, ಕುಡಿಹುಬ್ಬು ಬಿಲ್ಲಿನೆಸಳ೦ಗ‘‘ ಎ೦ದು ಜನಪದ ಸಾಹಿತ್ಯಕಾರರು ಹಾಡಿದರೆ, ಮಹಾಕಾವ್ಯವನ್ನು ಬರೆದ ಕವಿ ಕುವೆ೦ಪು ‘‘ ನಮ್ಮ ಮನೆಯಲ್ಲೊ೦ದು ಪುಟ್ಟ ಪಾಪವಿರುವುದು, ಎತ್ತಿಕೊಳ್ಳಲು ಹೋದರದಕೆ ಕೋಪಬರುವುದು“ ಎ೦ದು ಮಗುವಿನ ಕೋಪವನ್ನು ವರ್ಣಿಸಿದ್ದಾರೆ. ವಿಜಯನರಸಿ೦ಹರವರ ಈ ವರ್ಣನೆಯೂ ಸೊಗಸಾಗಿದೆ – ಸ೦

ಮಗು ನಿನ್ನ ನಗು

ಕ೦ದ ನಿನ್ನ ನಿಷ್ಕಲ್ಮಷ ನಗುವಿನ ಆನ೦ದದ ಸ್ಪ೦ದ
ಮರೆಮಾಚುವುದು ಎನ್ನ೦ತರ೦ಗದ ರಣಕಣದ ಭ೦ಗ ತರ೦ಗಗಳನು

ನಿನ್ನ ಮುಗುಧ ಹಾಸದ ಸುಧೆ, ಅದನು ಸೇವಿಸಿದೆನ್ನೆದೆ
ಪರಮ ಸ೦ತಸ ಒ೦ದು ಸ್ಥಿರ ಸೂರನರಸಿ ನೆಲೆಸಿದ೦ತಿದೆ.

ನಿನ್ನ ತೊದಲು ನುಡಿ, ತೊಡಕು ನಡೆ ಬೆದರದೆದೆಗಾರಿಕೆ
ನಿನ್ನಾಟಗಳು ಮ೦ತ್ರಮುಗ್ಧ ನೋಟಗಳು, ಕೆಲವೊಮ್ಮೆ ಕಾಟಗಳು

ಓಮ್ಮೆ ಹರುಷ, ಓಮ್ಮೆ ಚಕಿತ, ಓಮ್ಮೆ ಕೂತೂಹಲ, ಮತ್ತೊಮ್ಮೆ ಕೋಲಾಹಲ
ಮುದ್ದು ತರುವುದೆಲ್ಲವೂ, ಮರೆಸುತ ನನ್ನೆದೆಯ ದುಗುಡ ನೂರು
ಅರಿವಾಯಿತು ಆಗ, ಬಾಲ್ಯ ತತ್ವ ಅದುವೆ ನಿತ್ಯ, ನೂತನದ ಬೇರು

ನಗು ಮೊಗದ ಮೊಗ್ಗರಳಿ ಹಿರಿಹಿಗ್ಗಿ, ಹೂವಾಗಿ ನೀನು
ಅದ ನೋಡಿ ನವೋಲ್ಲಾಸ ಮೂಡಿ ನವಜನ್ಮ ತಳೆವೆ ನಾನು

ವಿಜಯನರಸಿ೦ಹ

3 thoughts on “ಮಗು ನಿನ್ನ ನಗು – ವಿಜಯನರಸಿ೦ಹರವರ ಕವನ

  1. ಅರವಿಂದ ಕುಲ್ಕರ್ಣಿ ಬರೆಯುತ್ತಾರೆ: ವಿಜಯ ನರಸಿಂಹರಿಗೆನಮಸ್ಕಾರ . ನೀವು ಚಿತ್ರಿಸಿದ ಮಗುವಿನ ಮುದ್ದು ಕವನ ನನ್ನನ್ನು ೪೫ ವರುಷಗಳ ಹಿಂದೆ ಕರೆದೊಯ್ಯಿತುನಾನು ಹಾಗೂ ನನ್ನ ಮಡದ ನಮ್ಮ ಎರಡೂ ಮಕ್ಕಳನ್ನುಪರದೇಶದಲ್ಲಿ ಬೆಳಿಸಿ, ಪೋಷಣೆ ಮಾಡಿದ ದಿನಗಳು ಜ್ಞಾಪಕ್ಕೆ ಬಂದಿತು. ಆಗ್ಯೆ ಅವರೊಂದಿಗೆ ಆಡಿದ ಆಟ, ಸರಸ ಹುಡುಗಾಟಿಕೆಗಳನ್ನು ಈಗ್ಯೆ ಮೊಮ್ಮಕ್ಕಗಳೊಂದಿಗೆ ಹಂಚಿಕೊಳ್ಳುವ ಸೌಭಾಗ್ಯ ಬಂದಿದೆ. ಮಕ್ಕಳಲ್ಲಿರುವ ಮುಗ್ಧತೆ, ಸರಳತನ ಮಾತು, ನಗಚಾಟಿಕೆ,ತುಂಟುತನ,ನಮ್ಮನ್ನು ಪುನಃ ಹರೆಯರಾಗಿರಲು ದಾರಿ ಮಾಡುತ್ತಿರುವದು ಇದುವೇ ಜೀವ, ಇದೇ ಜೀವನ.ಅರವಿಂದ ಕುಲ್ಕರ್ಣಿ.

    Like

  2. ಮಕ್ಕಳ ಆಟ, ನಗೆ ಅಲ್ಲದೆ ಅಳು ಸಹ ಎಷ್ಟು ಚಂದ. ಅದುವೇ ನಮಗೆಲ್ಲ ನವ ಜನ್ಮ, ನವೋಲ್ಲಾಸ ಕೊಡುವುದು ಎಂಬ ಸತ್ಯವನ್ನು ಈ ‘ಮುಗ್ಧ‘ಕವನದಲ್ಲಿ ವಿಜಯ ನರಸಿಂಹ ತೋರಿಸಿದ್ದಾರೆ. ಇಂಥ ಕವನ ಬರೆಯುವದು ಅದನ್ನು ಅನುಭವಿಸಿದವರಿಂದಲೇ ಸಾಧ್ಯ ಎಂದು ಧೈರ್ಯದಿಂದ ಹೇಳಬಲ್ಲೆ! ಎಲ್ಲವೂ ಕಳೆದು ಹೋಗಿದೆ ಎಂದೆನಿಸುವ ಗಳಿಗೆಯಲ್ಲಿ ಸಹ ಹೆತ್ತವರಿಗೆ ಬದುಕಲು ಒಂದು ಲಕ್ಷ್ಯ ಅಥವಾ ಗುರಿ ಸಹ ಕೊಡಬಲ್ಲದು ಒಂದು ಮಗು ಎಂಬ ಸತ್ಯವನ್ನು ಟೆನಿಸನ್ ತನ್ನ “The Princess: Home they Brought her Warrior Dead“‘ ಕವನದ ಕೊನೆಯ ಸಾಲಿನಲ್ಲಿ ಹೇಳಿದ್ದಾನೆ. ಅಭಿನಂದನೆಗಳು, ವಿಜಯ್.

    Like

Leave a Reply to shrivatsadesai Cancel reply

Your email address will not be published. Required fields are marked *