(ಡಾ. ವಾಸುದೇವ ಪಾಂಡುರಂಗಿಯವರ ಹೆಸರು ಕೇಳಿ ಗೊತ್ತಿತ್ತು. ಅವರನ್ನು ಸಂದರ್ಶಿಸಿ ಅವರ ಬಾಲ್ಯದಿಂದ ಹಿಡಿದು ಅವರು ಬೆಳೆದು ಆಲದಮರವಾಗುವವರೆಗಿನ ಕನ್ನಡಿಗನ ಹೃದಯದ ಕತೆಯನ್ನು ಡಾ ಶ್ರೀವತ್ಸ ದೇಸಾಯಿಯವರು ಅಷ್ಟೇ ಆಪ್ತವಾಗಿ ಸೆರೆ ಹಿಡಿದಿಟ್ಟಿದ್ದಾರೆ. ಡಾ ಪಾಂಡುರಂಗಿಯಂಥಹ ಸಾಧಕನ ಬಗ್ಗೆ ನಮಗೆಲ್ಲ ಪ್ರೇರಕ ಶಕ್ತಿಯಾಗುವಂತೆ ಈ ಲೇಖನವಿದೆ. ರಾಣೇಬೆನ್ನೂರಿನ ಕನ್ನಡಿಗ ವೈದ್ಯನಾಗಲು ಪಟ್ಟ ಕಷ್ಟ, ವೈದ್ಯನಾದ ಮೇಲೆ ಭಾರತದಲ್ಲಿ ಮಾಡಿದ ಕೆಲಸ, ಜೀವನದಲ್ಲಾದ ನೋವು, ಇಂಗ್ಲಂಡಿನ ಜೀವನ, ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ದೇಶ ದೇಶಗಳ ಪರ್ಯಟನ …ದೇಸಾಯಿಯವರು ಒಂದು ಪೂರ್ಣ ಜೀವನ ಚಿತ್ರವನ್ನು ಪೋಣಿಸಿ ಬರಹದ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಜಾಲದ ಓದಿಗೆ ಬರಹ ಸ್ವಲ್ಪ ದೊಡ್ಡದು ಎನ್ನಿಸಬಹುದು, ಆದರೆ ಒಮ್ಮೆ ಓದಲು ಆರಂಭಿಸಿ, ಮುಗಿಯುವವರೆಗೆ ನಿಲ್ಲಿಸುವುದಿಲ್ಲ ಎಂಬ ಭರವಸೆ ನನಗಿದೆ. ಹಾಗೆಯೆ ಓದಿ ಮುದಿದ ಮೇಲೆ, ತಲೆಬರಹದ ಪಕ್ಕದಲ್ಲಿರುವ `ಟಿಪ್ಪಣೆ`ಗಳ ಮೇಲೆ ಕ್ಲಿಕ್ಕಿಸಿ ನಿಮ್ಮ ಪ್ರತಿಕ್ರಿಯ ಹಾಕುವುದನ್ನು ಮರೆಯಬೇಡಿ – ಸಂ)
ಭಾಗ 1
ಒಬ್ಬ ಪ್ರಾಮಾಣಿಕ ವೈದ್ಯ, ಪರೋಪಕಾರಿ, ಮಕ್ಕಳ ಆರೋಗ್ಯ ಸುಧಾರಣೆಗಾಗಿ ಹೆಣಗಿ, ಅದಕ್ಕೆ ತನ್ನ ಜೀವನವನ್ನೇ ಮುಡುಪಾಗಿಟ್ಟವ, ಸಮಾಜ ಸೇವಕ, ಕನ್ನಡ ಬಳಗ ಯು ಕೆ ದ ಆಜೀವ ಸದಸ್ಯ- ಇಷ್ಟೆಲ್ಲ ಆಗಿದ್ದ ಡಾ. ವಾಸುದೇವ ರಾಮಾಚಾರ್ಯ ಪಾಂಡುರಂಗಿಯವರು ಕಳೆದ ಮೇ ತಿಂಗಳು (2017) ನಮ್ಮನ್ನಗಲಿದರು. ಈ ನಿಸ್ಪೃಹ ಜೀವಿಯ ಏರಿಳಿತದ ಜೀವನದ ಸಾಧನೆಯ ಅರಿವಾಗಲಿ ಅವರ ಅಪರೂಪದ ವ್ಯಕ್ತಿತ್ವದ ಪರಿಚಯವಾಗಲಿ ಬಹಳಷ್ಟು ಜನರಿಗೆ ಆಗಿರಲಿಕ್ಕಿಲ್ಲ ಎಂದು ಈ ಲೇಖನವನ್ನು ಬರೆಯುತ್ತಿದ್ದೇನೆ.
ಉತ್ತರ ಕರ್ನಾಟಕದ ರಾಣೆಬೆನ್ನೂರಿನಲ್ಲಿ ಜನಿಸಿ, ಮುಂಬಯಿಯ ಗ್ರಾಂಟ್ ಮೆಡಿಕಲ್ ಕಾಲೇಜಿನಿಂದ ಸ್ನಾತಕೋತ್ತರ ಪದವಿ (MD Ob&G) ಪಡೆದು, ಭಾರತದಲ್ಲಿ ಕೆಲವು ವರ್ಷ ಕೆಲಸ ಮಾಡಿ, ಇಡೀ ಜೀವನದಲ್ಲಿ ಸಿಹಿ-ಕಹಿ ಎರಡೂ ಅನುಭವಗಳನ್ನುಂಡೂ, ನಂತರ ಕಳೆದ ಶತಮಾನದ ಎಪ್ಪತ್ತರ ದಶಕದ ಮಧ್ಯದಲ್ಲಿ ಇಂಗ್ಲಂಡಿಗೆ ವಲಸೆ ಬಂದು ಯಾರ್ಕ್ ಶೈರ್ ದ ಶೆಫೀಲ್ಡ್ಡ್ ತಲುಪಿದರು. ಅಲ್ಲಿಯೇ ಮನೆಮಾಡಿ , NHS ಆಸ್ಪತ್ರೆ ಕೆಲಸ ಮಾಡುತ್ತ, ತಾವೆತ್ತಿಕೊಂಡ ಕೆಲಸಕ್ಕಾಗಿ ತಮ್ಮ ಸಂಸ್ಥೆಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ (World Health Organisation) ವತಿಯಿಂದ 37 ದೇಶಗಳನ್ನು ಸುತ್ತಾಡಿದರೂ ಮನೆಯನ್ನೇ ತಮ್ಮ ಕರ್ಮಭೂಮಿಯ ಕೇಂದ್ರವನ್ನಾಗಿ ಮಾಡಿ ತಮ್ಮ ಎಂಬತ್ತೇಳನೆ ವಯಸ್ಸಿನಲ್ಲಿ ಅದೇ ಊರಲ್ಲಿ ಕೊನೆಯುಸಿರೆಳೆದರು. ಈ ಸಂದರ್ಭದಲ್ಲಿ ಅವರು ಮಾಡಿದ ಸಾಧನೆಗಳೊಂದಿಗೆ ಅವರ ವೈಯಕ್ತಿಕ ಜೀವನದ ರೂಪರೇಷೆಯನ್ನೂ ಕೊಡುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡುತ್ತಿದ್ದೇನೆ.
ತಮ್ಮ ಜೀವನದಲ್ಲಿ ಕಂಡ ಎರಡು ದುರಂತಗಳ ಪ್ರೇರಣೇಯಿಂದಲೋ ಏನೋ, ತಾವು ಸೈಕಿಯಾಟ್ರಿಯಲ್ಲಿ ಕೆಲಸ ಮಾಡುತ್ತಿದ್ದರೂ ಕೂಡಾ ಹುಟ್ಟುತ್ತಿರುವ ಮತ್ತು ಹುಟ್ಟಿದ ಮಗುವಿನಲ್ಲಿ ಅಮ್ಲಜನಕದ ಕೊರತೆಯಿಂದ ಸಂಭವಿಸುವ (birth asphyxia) ಪರಿಣಾಮಗಳನ್ನು ಕಡಿಮೆ ಮಾಡುವ ಸಲುವಾಗಿ ಜನರಿಗೆ ತಿಳುವಳಿಕೆ ಹೆಚ್ಚಿಸಲು ಕೆಲವು ಜನರೊಂದಿಗೆ ಕೂಡಿ 1983ರಲ್ಲಿ CAMHADD ಎಂಬ ಸಂಸ್ಥೆ ಕಟ್ಟಿ ಅದರ ಏಕೈಕ ಸಂಚಾಲಕರಾಗಿ ಕಾಲು ಶತಮಾನಗಳ ವರೆಗೆ ಕೆಲಸ ಮಾಡಿ, ಮೊದಲು ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ನಂತರ ವಿಶ್ವ ಆರೋಗ್ಯ ಸಂಸ್ಥೆ (WHO) ಇವುಗಳ ಸಹಾಯದಿಂದ ಹತ್ತಾರು ಕಮ್ಮಟಗಳನ್ನು ದೇಶ-ವಿದೇಶಗಳಲ್ಲಿ ಸಡೆಸಿದಾಗ ಆ ಎರಡೂ ಸಂಸ್ಥೆಗಳು ಅವರನ್ನು ಕೊಂಡಾಡಿದ್ದಲ್ಲದೆ ಅಭಿವೃದ್ದಿಶೀಲ (ಡೆವಲಪಿಂಗ್) ದೇಶಗಳಲ್ಲಿ ಮಕ್ಕಳ ಮತ್ತು ಗರ್ಭಿಣಿಯರ ವೈದ್ಯ ತಜ್ಞರ ಮತ್ತು ಕಾರ್ಯಕರ್ತರ ಶ್ಲಾಘನೆಗೆ ಪಾತ್ರರಾದರು.

ಅವರು 1983ರಲ್ಲಿ ಕಾಮನ್ವೆಲ್ತ್ ಫೌಂಡೇಶನ್ನಿನ ಸರ್ ಕೆನ್ನೆಥ್ ಥಾಮ್ಸನ್, IMPACT ಸಂಸ್ಥೆಯ ಸರ್ ಜಾನ್ ವಿಲ್ಸನ್ ಇವರೊಂದಿಗೆ ಕೂಡಿ Commonwealth Association for Mental Health and Developmental Disabilities (CAMHADD) ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಆ ಕಾರ್ಯದ ವರದಿ ಓದಿ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರನ್ನು ದೆಹಲಿಗೆ ಆಮಂತ್ರಿಸಿ, ಈ ಕಾರ್ಯಕ್ಷೇತ್ರ ಅವರ ಅಚ್ಚುಮೆಚ್ಚಿನ ವಿಷಯವೆಂದೂ, ಈ ಸಂಸ್ಥೆಯನ್ನು ಭಾರತಕ್ಕೆ ಸ್ಥಳಾಂತರ ಮಾಡಬೇಕೆಂದೂ, ಅದಕ್ಕೆ ತಮ್ಮಿಂದಾದ ಎಲ್ಲ ಸಹಾಯವನ್ನು ಕೊಡುವದಾಗಿಯೂ ಆಶ್ವಾಸನವಿತ್ತರು. ಮುಂದೆ ನಾಲ್ಕೈದು ಸಲ ಅವರನ್ನು ಅಂತರ್ರಾಷ್ಟ್ರೀಯ ಪ್ರತಿನಿಧಿಗಳ ತಂಡದೊಂದಿಗೆ ಕಂಡಾಗ ಅದರ ಮುಂದಿನ ಅಧಿವೇಶನಕ್ಕೆ ನಾನು ಬರುತ್ತೇನೆ ಎಂದು ಭರವಸೆ ಕೊಟ್ಟರು. ದುರ್ದೈವ ವಶಾತ್ ಕೆಲ ದಿನಗಳಲ್ಲಿಯೇ ಪ್ರಧಾನಿಯವರ ಹತ್ಯೆಯಾಯಿತು, ಆದರೆ ಪಾಂಡುರಂಗಿಯವರು ಮಾತ್ರ ಧೃತಿಗೆಡದೆ ಮುಂದುವರಿದು ಜಗತ್ತಿನ ಮೂಲೆ ಮೂಲೆಗಳಲ್ಲಿ ನವಜಾತ ಶಿಶು ಉಸಿರುಗಟ್ಟಿದಾಗ (birth asphyxia) ಆಮ್ಲಜನಕದ ಅಭಾವದಿಂದ ಮಾನಸಿಕ ದೌರ್ಬಲ್ಯತೆ ಉಂಟಾಗಿ ಮುಂದೆಯೂ ಅದರ ಪರಿಣಾಮವಾಗಿ ಉಂಟಾಗುವ ದೈಹಿಕ ಮತ್ತು ಮಾನಸಿಕೆ ವೈಕಲ್ಯಗಳನ್ನು ಹೇಗೆ ತಡೆಗಟ್ಟ ಬಹುದು ಈ ವಿಷಯಗಳ ಬಗ್ಗೆ ಕಮ್ಮಟಗಳು, ಜಿಜ್ಞಾಸು ಕೂಟಗಳನ್ನು ಏರ್ಪಡಿಸಿದರು. ಅದರ ಸಲುವಾಗಿ ಪ್ರಪಂಚದಾದ್ಯಂತ ಐದು ವಲಗಳಲ್ಲಿ -ಯೂರೋಪ್, ಏಷಿಯಾ, ಆಫ್ರಿಕಾ, ಪೂರ್ವಪ್ರಾಚ್ಯ ಮತ್ತು ಪ್ಯಾಸಿಫಿಚ್ ದೇಶಗಳಲ್ಲಿ – ಎಷ್ಟೊಂದು ಓಡಾಡಿದರೆಂದರೆ, ವಾಸುದೇವ ಪಾಂಡುರಂಗಿಯವರ ಜಂಬೋ ಸೈಜಿನ ಪಾಸ್ಪೋರ್ಟಿನಲ್ಲೂ ”ಮುದ್ರೆ ಒತ್ತಲು ಖಾಲಿ ಜಾಗವೇ ಇಲ್ಲವಲ್ಲ!” ಎಂದು ಆಯಾ ದೇಶಗಳ ಏರ್ಪೋರ್ಟಿನ ಇಮ್ಮಿಗ್ರೇಷನ್ ಅಧಿಕಾರಿಗಳು ತಕರಾರು ಮಾಡುತ್ತಿದ್ದರಂತೆ! ಅವರ ಮನೆಯೇ CAMHADD ಸಂಸ್ಥೆಯ ಮುಖ್ಯ ಕಚೇರಿಯಾಗಿ ಆಗಿ ಇಂದಿಗೂ ಉಳಿದಿದೆ! ಇದರ ನಂತರ ಅವರು ಕೈಗೆತ್ತಿಕೊಂಡು ಸಾಧಿಸಿದ ಮುಂದಿನ ಕೆಲ ಅಯೋಜನೆಗಳ ವಿವರಗಳನ್ನು ಕೊಡುವ ಮೊದಲು ಅವರೊಂದಿಗೆ ನಡೆಸಿದ ಸಂದರ್ಶನದ ಸಾರಾಂಶವನ್ನು ಕೊಡುವೆ.
ಭಾಗ 2
ಡಾ ವಾಸುದೇವ ಪಾಂಡುರಂಗಿಯವರ ಬದುಕಿನ ಕಹಿ-ಸಿಹಿ – ಒಂದು ಸಂದರ್ಶನ
ಶೆಫೀಲ್ಡ್, 2015:
ಇದು ನಡೆದುದು ನವೆಂಬರ್ 2015 ರಲ್ಲಿ. ಆಗ ಅಸ್ವಸ್ಥರಾಗಿದ್ದ ಡಾ ಪಾಂಡುರಂಗಿ ಅವರು ಶೆಫೀಲ್ಡಿನ ಒಂದು ಆಸ್ಪತ್ರೆಯಲ್ಲಿ ಶುಶ್ರೂಷೆಗಾಗಿ ಕೆಲ ದಿನಗಳ ವರೆಗೆ ಅಡ್ಮಿಟ್ ಆಗಿದ್ದರು. ಆಗ ಅವರನ್ನು ನಾಲ್ಕೈದು ಸಲ ಭೇಟಿಯಾಗಿದ್ದೆ. ನನಗೆ 1982ರಿಂದಲೂ ಅವರ ಸ್ವಲ್ಪ ಪರಿಚಯವಿದ್ದರೂ ಅವರ ಕಾರ್ಯಕ್ಷೇತ್ರದ ವ್ಯಾಪ್ತಿ, ಅವರ ದುಡಿಮೆ, ಇದರ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಅವರು ವೈದ್ಯರಾಗುವದಕ್ಕೆ, ಮತ್ತು ಮೆಂಟಲ್ ಹ್ಯಾಂಡಿಕ್ಯಾಪ್ (ಮಾನಸಿಕ ದೌರ್ಬಲ್ಯತೆ) ವಿಷಯದಲ್ಲಿ ಅವರಿಗುಂಟಾದ ಆಸಕ್ತಿ, ಇದರ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲವೆಂದು ಹೇಳ ಬಹುದು, ಎಂತಲೇ ಅವರ ಬಾಯಿಂದಲೇ ಅವರ ಕಥೆ ಕೇಳಲು ಆತುರನಾಗಿದ್ದೆ. ಅವರ ಆರೋಗ್ಯಸುಧಾರಿಸಿ ಅವರು ಸ್ವಲ್ಪ ಚೇತರಿಸಿಕೊಂಡಂತೆ, ಸಮ್ಮ ಸಂಭಾಷಣೆಯ ಧ್ವನಿಮುದ್ರಿಕೆ ಮಾಡಿಕೊಂಡೆ. ಅವರ ಕಥೆ ರೋಚಕವಾಗಿದೆ, ಮನದಟ್ಟುವಂತಿದೆ. ಅದನ್ನು ನಾನು ಬರೆದಂತೆ ಓದಿ, ಆಮೇಲೆ ಅವರ ಬಾಯಿಯಿಂದಲೇ ಕೇಳಬಹುದು:
ರಾಣೆಬೆನ್ನೂರಿನಿಂದ ಮುಂಬಯಿ ವರೆಗೆ:
ಆಗ 1941ನೆಯ ಇಸವಿ, ಆಗ ಧಾರವಾಡ ಜಿಲ್ಹೆಯ ರಾಣೆಬೆನ್ನೂರು ಕುಗ್ರಾಮವಲ್ಲದಿದ್ದರೂ ಪಟ್ಟಣವಾಗಿರಲಿಲ್ಲ. ಜನವಸತಿ ಕಡಿಮೆ. ಹೀಗಾಗಿ ಅಕ್ಕಪಕ್ಕದವರೆಲ್ಲರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿದ್ದರು. ಎಲ್ಲ ಕುಟುಂಬದವರ ವೈಯಕ್ತಿಕ ಸುಖ ದುಃಖಗಳಲ್ಲಿ ಎಲ್ಲರೂ ಸಾಮೂಹಿಕವಾಗಿ ಭಾಗಿಯಾಗಿರುತ್ತಿದ್ದರು. ಆಗ ಅದೇ ಊರಲ್ಲಿ 1930ರಲ್ಲಿ ಹುಟ್ಟಿದ ವಾಸುದೇವ ಹನ್ನೊಂದು ತುಂಬಿ ಹನ್ನೆರಡರಲ್ಲಿ ಕಾಲಿಡುತ್ತಿರಬೇಕು.
ಆ ದಿನ ಸಂಜೆ ಆತ ಶಾಲೆಯ ನಂತರ ತನ್ನ ಮಿತ್ರರೊಂದಿಗೆ ಆಟವಾಡುತ್ತಿದ್ದ. ಪಕ್ಕದ ಓಣಿಯ ಮಧ್ಯವಯಸ್ಸಿನ ಹೆಂಗಸೊಬ್ಬಳು ತುಂಬು ಬಸಿರಿಯಾದದ್ದು ಎಲ್ಲರಿಗೂ ಗೊತ್ತಿತ್ತು. ಎರಡನೆಯ ಅಥವಾ ಮೂರನೆಯ ಮಗುವಿನ ಆಗಮನವನ್ನು ಎಲ್ಲರೂ ಎದುರು ನೋಡುತ್ತಿದ್ದರು. ಅವಳಿಗೆ ಒಮ್ಮೆಲೆ ಪ್ರಸವ ವೇದನೆ ಜೋರಾಯಿತು. ಜೊತೆಗೆ ಗರ್ಭಾಶಯದಿಂದ ರಕ್ತಸ್ರಾವ. ಮನೆಯವರಿಗೆ ಎಲ್ಲಿಲ್ಲದ ಕಾಳಜಿ. ರಕ್ತ ಹರಿಯುವದು ನಿಲ್ಲಲೊಲ್ಲದು. ಮನೆಯಲ್ಲಿ ಕೋಲಾಹಲ. ಆಕೆಯ ತಂದೆಯ ಜಂಘಾ ಬಲವೇ ಉಡುಗಿ ಹೋಗಿತ್ತು. ”ಡಾಕ್ಟರನ್ನು ತಕ್ಷಣ ಕರೆತರಿಸಿರಿ!” ಎಂಬ ಕೂಗು. ವಿಹ್ವಲಳಾದ ಅವಳ ತಾಯಿಯ ರೋದನ ಹೊರಗೆ ಕೇರಿಯಲ್ಲಿ ಆಟವಾಡುತ್ತಿದ್ದ ಹತ್ತಾರು ಮಕ್ಕಳಿಗೆ ಕೇಳಿಸಿತು. ಊರಲ್ಲಿ ಒಬ್ಬರೇ ಡಾಕ್ಟರು. ಅವರ ಮನೆಗೆ ವಾಸುದೇವ ಗೆಳೆಯರೊಂದಿಗೆ ಓಡಿ ಹೋಗಿ ಬಾಗಿಲು ಬಡಿದು ಏದುಸಿರಿನಿಂದ ”ತಾಬಡ್ ತೋಬ್ ಬರಬೇಕಂತ್ರಿ. ತುಂಬು ಗರ್ಭಿಣೀಗಽ ರಕ್ತ ಬೀಳಲಿಕ್ಕೆ ಹತ್ತೇದ್ರಿ” ಅಂತ ಹೇಳಿ ಅವರನ್ನು ಬರ ಹೇಳಿದನು. ಅವರು ”ಐದು ರೂಪಾಯಿ ನನ್ನ ಫೀಸು ತಂದೀರೇನು?” ಎಂದು ಕೇಳಿದರು. ಬರಿಗೈಯಲ್ಲಿ ಬಂದ ಮಕ್ಕಳು ಮತ್ತೆ ವಾಪಸ್ ಹೋಗಿ ಎಲ್ಲರ ಮನೆ ಬಾಗಿಲು ತಟ್ಟಿ ರೊಕ್ಕ ಜೋಡಿಸಿದರು. ಚಿಕ್ಕ ಹಳ್ಳಿ. ಎಲ್ಲರೂ ಬಡವರೇ. ಕೈಲಾದದ್ದು ಕೊಟ್ಟರು. ಮುಷ್ಠಿಯಲ್ಲಿ ಅದನ್ನು ಹಿಡಿದು ಡಾಕ್ಟರರ ಮುಂದೆ ಬಿಚ್ಚಿದಾಗ ನಾಲ್ಕು ರೂಪಾಯಿ ಎಂಟಾಣೆ ಆಗಿತ್ತು. ”ಬಾಕಿ ಎಂಟಾಣೆ ತರ್ರಿ, ಆಮೇಲೆ ಬರ್ತೀನಿ!” ಅಂದರು ಅವರು. ಪಾಪ ಮಕ್ಕಳು ಮತ್ತೆ ಭಿಕ್ಷಾಟನೆ ಮಾಡುತ್ತಿದ್ದಂತೆಯೇ ಆ ತಾಯಿ-ಮಕ್ಕಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು! ಈ ಘಟನೆ ಬಾಲಕನ ಮನಸ್ಸಿನ ಮೇಲೆ ಎಂಥ ಗಾಢ ಪರಿಣಾಮ ಬೀರಿತ್ತೆಂದರೆ ಆತ ಆಗಲೇ ತಾನು ಡಾಕ್ಟರ್ ಆಗುವೆ, ಪ್ರಸೂತಿಗೆಂದು ಬಂದ ಯಾವ ಗರ್ಭೀಣಿಯಿಂದಲೂ ಹಣ ತೆಗೆದುಕೊಳ್ಳುವದಿಲ್ಲ ಎಂದು ಗಟ್ಟಿ ಪ್ರತಿಜ್ಞೆ ಮಾಡಿದನು. ಅಂದೇ ಆತನ ಸಮಾಜ ಸೇವಾ ಜೀವನದ ಬೀಜ ಬಿತ್ತಿರಬೇಕು.
ಮಧ್ಯಮ ವರ್ಗದ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದ ವಾಸುದೇವ ಜಾಣ. ಮನೆಯಲ್ಲಿ ಒಳ್ಳೆಯ ಸಂಸ್ಕಾರ. ತಂದೆ ಸಂಸ್ಕೃತ ಕಲಿಸುವ ಪಂಡಿತರು. ಪೂಜೆ, ಅವರಿವರ ಮನೆಯಲ್ಲಿ ವಿಧಿ-ಕಾರ್ಯ ಮಾಡಿ ಬಂದ ಪುಡಿಕಾಸಿನಲ್ಲೇ ಚೊಕ್ಕ ಸಂಸಾರ. ಸ್ವಪ್ರಯತ್ನದಿಂದ ಚೆನ್ನಾಗಿ ಅಭ್ಯಾಸ ಮಾಡಿ ಒಳ್ಳೆಯ ತರಗತಿಯಲ್ಲಿ ಪಾಸು ಮಾಡಿ ವಾಸುದೇವ ಕಾಲೇಜು ಶಿಕ್ಷಣಕ್ಕೆಂದು ಧಾರವಾಡಕ್ಕೆ ಬಂದನು. ಆಗ ಧಾರವಾಡ ಮುಂಬಯಿ ಪ್ರೆಸಿಡೆನ್ಸಿಯಲ್ಲಿತ್ತು. ಕಾಲೇಜು ಸೇರಿ ಇಂಟರ್ ಪರೀಕ್ಷೆಯಲ್ಲೂ ಉತ್ತಮ ಗುಣಗಳನ್ನು ಗಳಿಸಿ ತನ್ನ ಮಹತ್ವಾಕಾಂಕ್ಷೆಯನ್ನೀಡೇರಿಸಲು ಮೊದಲು ಮೈಸೂರು ಮೆಡಿಕಲ್ ಕಾಲೇಜಿಗೆ ಅರ್ಜಿ ಸಲ್ಲಿಸಿದನು. ಆಗ ಇನ್ನೂ ಭಾಷಾವಾರು ಪ್ರಾಂತಗಳ ರಚನೆಯಾಗಿದ್ದಿಲ್ಲ. ಉತ್ತರ ಕರ್ನಾಟಕದ ಜನ ಕೆಲವರು ’ಹಳೆಯ ಮೈಸೂರು’ ಕಡೆಗೆಗಾಗಲಿ, ಉಳಿದವರು ಮುಂಬಯಿ ಕಡೆಗೆ ಆಗಲಿ ವೃತ್ತಿಪರ ಶಿಕ್ಷಣಕ್ಕೆ ಹೋಗುತ್ತಿದ್ದರು. ಮೈಸೂರಿನಿಂದ ವಾಸುದೇವನಿಗೆ ಒಂದು ಅಧಿಕೃತ ಪತ್ರ ಬಂದಿತು. ಅದು ಐತಿಹಾಸಿಕ ದಾಖಲೆ ಎನ್ನಬಹುದು! ಮೈಸೂರು ಮೆಡಿಕಲ್ ಕಾಲೇಜಿಗೆ ಅಡ್ಮಿಷನ್ನಿಗೆ ನಕಾರ. ಬರೆದ ಕಾರಣವನ್ನು ಓದಿ ಅವನಿಂದ ನಂಬಲಾಗಲಿಲ್ಲ. ಎಷ್ಟೋ ವರ್ಷಗಳ ವರೆಗೆ ಆತ ಆ ಕಾಗದವನ್ನು ಕಾಯ್ದಿಟ್ಟಿದ್ದ: “As you are a Brahmin, we refuse to give you admission to our medical college.” ಒಳ್ಳೆಯ ಮಾರ್ಕ್ಸ್ ಇರುವಾಗ ಜಾತಿ ಏಕೆ ಅಡ್ದ ಬಂತು? ಕೆಲವರು ಕೊಟ್ಟ ಸಲಹೆಯಂತೆ ಕೋರ್ಟಿನ ಕಟ್ಟೆ ಹತ್ತಲು ಆತನಲ್ಲಿ ಹಣವಿರಲಿಲ್ಲ. ನಿರಾಶನಾದರೂ ಮುಂಬಯಿ ಮೆಡಿಕಲ್ ಕಾಲೇಜಿಗೆ ಅರ್ಜಿ ಸಲ್ಲಿಸಿ ತನ್ನ ಅದೃಷ್ಟವನ್ನು ಪರೀಕ್ಷಿಸಿದ. ಇಂಟರ್ವ್ಯೂಗೆ ಕರೆ ಬಂತು. ಡಾ ಪಾಂಡುರಂಗಿ ಅವರ ಬಾಯಲ್ಲೇ ಮುಂದಿನ ಕಥೆಯನ್ನು ಕೇಳುವಾ:
”ನಾನು ಹಳ್ಳಿಯಿಂದ ಬಂದಿದ್ದೆ. ನಾವು ಬಡವರು. ಅಂಗಿ, ಹಾಫ್ ಪ್ಯಾಂಟ್ ಮತ್ತು ಚಪ್ಪಲಿ ಹಾಕ್ಕೋಂಡೇ ಮುಂಬಯಿಗೆ ಇಂಟರ್ವ್ಯೂಗೆ ಹೋದೆ. ಸರ್ಜನ್ ಜೆನರಲ್ ಆಫೀಸಿನೊಳಗಽ ಮೂವರು ಠೀವಿಯಿಂದ ಕುಳಿತಿದ್ದರು. ನನ್ನನ್ನು ನೋಡಿದ ಕೂಡಲೆ, ನೀನು ಲಂಡ ಚಣ್ಣ ಚಪ್ಪಲ್ ಹಾಕ್ಕೊಂಡು ಬಂದೀಯಲ್ಲಽ, ನಿನ್ನ ಇಂಟರ್ವ್ಯೂ ತೊಗೊಳ್ಳೋದಿಲ್ಲ. ಫುಲ್ ಪ್ಯಾಂಟ್ ಬೂಟು ಹಾಕ್ಕೊಂಡು ಬರಬೇಕು ಅಂತ ಅಂದು ಬಿಟ್ಟರು. ನಾನಂದೆ. ನಾನು ಹಳ್ಳಿಯವ, ನಾವು ಬಡವರು. ನನ್ನ ಬಟ್ಟೀನೇ (ಪೊಷಾಕೇ) ಹಿಂಗಽ. ಇನ್ನೊಬ್ಬರು ಮುಂದೆ ಕೇಳಿದರು. ’ನಿಮ್ಮ ಮನ್ಯಾಗ ಯಾರಾದರೂ ಡಾಕ್ಟರ್ ಅಗ್ಯಾರೇನು?” ನಾನಂದೆ, ”ಇಲ್ಲ; ನಮ್ಮಪ್ಪ ಮಕ್ಕಳಿಗೆ ಸಂಸ್ಕೃತ ಕಲಿಸಿ ತಿಂಗಳಕ್ಕಽ ಹತ್ತು ರೂಪಾಯಿ ಗಳಸ್ತಾನ. ಹಳ್ಳಿಯೊಳ್ಗ ಪಂಡಿತ. ಅವನ ಗಳಿಕೀನ ಅಷ್ಟ. ನನಗ ಡಾಕ್ಟರ್ ಆಗ ಬೇಕ್ಕಾಗೇದ. ನೀವು ಯಾರಾದರೂ ಹಳ್ಳಿ ಜೀವನ ನೋಡಿದ್ದೀರೇನು?” ಅಂತ ಹಿಂಗಽ ಕೇಳಿದೆ. ನಿಮಗ ಬಡತನದ್ದು ಕಲ್ಪನಾ ಅದ ಏನು? ಇಲ್ಲ, ನೀ ಹೇಳು ಅಂದ್ರು. ನಾನು ಅವರಿಗೆ ಎಲ್ಲ ಬಿಡಿಸಿ ಹೇಳಿದೆ. ಆಮೇಲೆ ಆ ಬಸಿರು ಹೆಂಗಸು ಹೆಂಗ ಮೆಡಿಕಲ್ ಹೆಲ್ಪ್ ಇಲ್ದ ಸತ್ಳಲ್ಲ ಆ ಕಥಿ ಹೇಳಿದೆ. ಎಲ್ಲರೂ ಇವಂಗ ಅಡ್ಮಿಷನ್ ಕೊಡಲೇ ಬೇಕು ಅಂದ್ರು. ಹಿಂಗ ನಾ ಮುಂಬಯಿ ಹೋಗಿ ಸೇರಿ ಕೊಂಡೆ.” ಅದು 1950ರ ಸುಮಾರು. ಮುಂದೆ 1954ರಲ್ಲಿ ಒಳ್ಳೆಯ ತರಗತಿಯಲ್ಲಿ ಡಾಕ್ಟರ್ ಆಗಿ ಹೊರಬಂದೆ.
ಮುಂಬಯಿಯಲ್ಲಿ ವೈದ್ಯನಾಗಿ, ಡಾ ಶಿರೋಡ್ ಕರ್ ಅವರ ಶಿಷ್ಯನಾಗಿ:
ಆದರೆ, ನನ್ನ ವಿದ್ಯಾರ್ಥಿ ದಿನಗಳು ಅಷ್ಟು ಸುಲಭವಾಗಿ ಕಳೆಯಲಿಲ್ಲ. ಆರ್ಥಿಕ ಪರಿಸ್ಥಿತಿಯಿಂದಾಗಿ ಫೀಸಿಗೆ ರಿಯಾಯಿತಿ ಇದ್ದರೂ ಇರಲು ವಾಸಕ್ಕೆ, ಹೊಟ್ಟೆಗೆ? ಆಗ ಮುಂಬಯಿಯ ಮಾತುಂಗಾದಲ್ಲಿದ್ದ ಮಾಹುಲಿ ಗೋಪಾಲಾಚರ್ಯರ ನೆರವಿನಿಂದ ಅಲ್ಲಿಯ ರಾಯಚೂರ ಟ್ರಸ್ಟಿನಿಂದ ವರ್ಷಕ್ಕೆ 500 ರೂಪಾಯಿಗಳ ಧನ ಸಹಾಯ ದೊರೆಯಿತು. ಅದಲ್ಲದೆ ಬ್ರಾಹ್ಮಣನಾದ್ದರಿಂದ ಯಾರಾದರೂ ಮನೆಯಲ್ಲಿ ಕ್ರಿಯಾ-ಕಾರ್ಯಗಳಿದ್ದಾಗ ಹೇಗೂ ಆಮಂತ್ರಣವಿರುತ್ತಿತ್ತು. ಅಲ್ಲಿ ಊಟವೂ ಆಗುತ್ತಿತ್ತು, ಮೇಲೆ, ಐದು ರೂಪಾಯಿಯ ದಕ್ಷಿಣೆ ಬೇರೆ! ಹೀಗೆಯೇ ನನ್ನ ವಿದ್ಯಾಭ್ಯಾಸ ಸಾಗಿತು. ಪ್ರಸೂತಿ ಮತ್ತು ಸ್ತ್ರೀರೋಗ ವಿಜ್ಞಾನದಲ್ಲಿ (Ob&G) ನನಗೆ ಮೊದಲಿನಿಂದಲೂ ಹೆಚ್ಚಿನ ಆಸ್ಥೆ ಇತ್ತು. ಆ ವಿಷಯದಲ್ಲಿ ಸ್ನಾತಕೋತ್ತರ ಡಿಗ್ರಿ ಪಡೆಯುವ ತವಕವಿದ್ದರೂ ಅದು ಕೈಗೂಡಲು 1968ರ ವರೆಗೆ ಕಾಯಬೇಕಾಯಿತು. MBBS ಡಿಗ್ರಿ ಗಳಿಸಿದ ಮೇಲೆ ಒಂದೆರಡು ವರ್ಷ ಅಲ್ಲಿಲ್ಲಿ ಕೆಲಸ ಮಾಡಿ ಜೀವನೋಪಾಯಕ್ಕಾಗಿ ಮುಂಬಯಿಯಲ್ಲೇ ಜನರಲ್ ಪ್ರಾಕ್ಟಿಸ್ ಶುರುಮಾಡಿದೆನು. ಅದು ಕುಂಟುತ್ತ ಸಾಗಿತ್ತು. ವಾಹನವಿರಲಿಲ್ಲ. ಹಾಗಾಗಿ ರೋಗಿಗಳನ್ನು ನೋಡಲು ಅವರ ಮನೆಗೆ ಕಾಲ್ನಡಿಗೆಯಿಂದಲೇ ಹೋಗಬೇಕಾದ ಪರಿಸ್ಠಿತಿ. ಈ ಮಧ್ಯೆ ನನ್ನ ಕೆಲಸ ಮೆಚ್ಚಿದ ಒಬ್ಬರು ನನ್ನನ್ನು ಕರೆದೊಯ್ದು ಆಗಿನ ಭಾರತಲ್ಲೇ ಪ್ರಸಿದ್ಧರಾದಂಥ ಮತ್ತು ಹೆರಿಗೆಯ ವಿಷಯದಲ್ಲಿ ತಮ್ಮ ’ಟಾಕಿ’ (ಹೊಲಿಗೆ)ಯಿಂದ (Shirodkar stitch or cervical cerclage 1951) ವಿದೇಶಗಳಲ್ಲೂ ಹೆಸರು ಮಾಡಿದ ಅವರಿಗೆ ಪರಿಚಯ ಮಾಡಿಸಿದರು.

ಅವರಿಗೆ ನಾನು ಯಾಕೋ ಹಿಡಿಸಿರಬೇಕು.ನನ್ನ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡರೋ ಏನೋ, ’ನಾಳೆಯಿಂದಲೇ ನನ್ನ ”ಕಾಲನಿ ಕ್ಲಿನಿಕ್’’ ನಲ್ಲಿ ಕೆಲಸಕ್ಕೆ ಸೇರಿಕೋ’ ಎಂದು ಆಜ್ಞೆ ಮಾಡಿದರು. ದೈವದ ಬಾಗಿಲು ತೆರೆಯಿತು! ಶಿರೋಡ್ಕರ್ ಅವರ ಮಾಸಿಕ ಗಳಿಕೆ ಎಷ್ಟಿತ್ತೆಂದರೆ ಸಿಕ್ಕಾಪಟ್ಟೆ ಇನ್ಕಂ ಟ್ಯಾಕ್ಸ್ ಕೊಡಬೇಕಾಗುತ್ತು! ನನ್ನಂಥ ಹಲವಾರು ಯುವ ಡಾಕ್ಟರನ್ನು ಹೀಗೆ ಕೆಲಸಕ್ಕೆ ನೇಮಿಸಿಕೊಂಡು ಪ್ರತಿಯೊಬ್ಬರಿಗೆ ತಿಂಗಳಿಗೆ 10ರಿಂದ 15,000 ರೂಪಾಯಿ ಸಂಬಳ ಕೊಟ್ಟು ಟ್ಯಾಕ್ಸ್ ಹೊರೆ ಇಳಿಸಿಕೊಳ್ಳುತ್ತಿದ್ದರು. ಆದರೆ ಆ ಮಹಾ ಪುರುಷ ಮುಂದೆಯೂ ನನಗೆ ದಾರಿದೀಪವಾದರು ಅಂದರೆ ಉತ್ಪ್ರೇಕ್ಷೆಯಲ್ಲ.
ವೆಲ್ಲೂರಿನಲ್ಲಾದ ಅನುಭವ: ನಾನು ಮುಂಬಯಿಯಲ್ಲಿದ್ದಾಗ ನನ್ನ ಬಗ್ಗೆ ಅಭಿಮಾನವಿದ್ದ ಒಬ್ಬ ಹಿತೈಷಿಗಳು ವೆಲ್ಲೂರ್ ಕ್ರಿಶ್ಚಯನ್ ಕಾಲೇಜಿನಲ್ಲಿ (CMC, Vellore)ನಲ್ಲಿ ಒಳ್ಳೆಯ ಸ್ತ್ರೀ ರೋಗ-ಪ್ರಸೂತಿ ವಿಜ್ಞಾನ ತಜ್ಞರ ಅಭಾವವಿದೆಯೆಂತಲೂ, ಅಲ್ಲಿ ಒಂದು ಕೆಲಸ ಲಭ್ಯವಿದೆ ಎಂದು ಹೇಳಿ ನನ್ನನ್ನು ಅಲ್ಲಿಗೆ ಕಳಿಸಿದರು. ನಾನು ಲೆಕ್ಚರರಾಗಿ (1969) ಚೆನ್ನಾಗಿಯೇ ಕೆಲಸ ಮಾಡಿದೆ. ಒಂದು ದಿನ ರಾತ್ರಿ ಎಲ್ಲ ಡಾಕ್ಟರುಗಳಿಗೆ ಔತಣಕೂಟ. ನನ್ನ ಮೇಲೆ ಕಾಳಜಿ ವಹಿಸಿದ್ದ ಹಿರಿಯ ಅಧಿಕಾರಿಗಳೊಬ್ಬರು ನನ್ನೊಡನೆ ಮಾತನಾಡಿ, ನನಗೆ ಪ್ರಮೋಷನ್ ಕೊಟ್ಟು ಗೈನಕಾಲಜಿ ವಿಭಾಗದ ಮುಖ್ಯಸ್ಥನ ಹುದ್ದೆಗೆ ಏರಿಸಲು ಶಿಫಾರಿಸು ಮಾಡುವದಾಗಿಯೂ ಆದರೆ ನಾನು ಕ್ರಿಸ್ತ ಮತವನ್ನು ಸ್ವೀಕರಿಸಿದರೆ ಮಾತ್ರ ಎಂದು ಕರಾರು ಹಾಕಿದರು. ಅದನ್ನು ಕೇಳಿ ನನಗೆ ಆಘಾತವೇ ಆಯಿತು. ಇದೆಂಥ ಆಮಿಷ ತೋರಿಸಿ ಸಿಲುಕಿಸುವ ಪ್ರಯತ್ನ, ಇದೆಂಥ ಉದ್ಧಟತನ ಎನಿಸಿತು, ಮರುದಿನವೇ ನನ್ನ ಕೆಲಸಕ್ಕೆರಾಜಿನಾಮೆಯಿತ್ತು ಮರಳಿ ಮನೆಗೆ ಬಂದೆ. ಹಿಂದೆ ಹೇಳಿದಂತೆ ಡಾ ಶಿರೋಡ್ ಕರ್ ಅವರು ನನಗೆ ಮಾಸಿಕ ವೇತನ ಕೊಟ್ಟು ಸಂಜೆಗೆ ಅವರ ಪ್ರೈವೇಟ್ ಆಸ್ಪತ್ರೆಯಲ್ಲಿ ಕೆಲಸ ಕೊಟ್ಟು ಕೈ ಹಿಡಿದಿದ್ದಲ್ಲದೆ, ತಾವು ತೀರಿಕೊಳ್ಳುವ ಹಿಂದಿನ ವರ್ಷ ನನ್ನನ್ನು ಕರೆದು ಬೆಂಗಳೂರಲ್ಲಿ ಒಳ್ಳೆಯ ಪ್ರಸೂತಿ ಗೃಹಗಳಿಲ್ಲವೆಂದೂ ನಾನು ಒಂದನ್ನು ಆರಂಭಿಸಬೇಕೆಂತಲೂ ಹೇಳಿ ಆಗಿನ ಕಾಲದಲ್ಲಿ 50,000ರೂಪಾಯಗಳನ್ನೂ ಕೊಟ್ಟು ಹರಸಿದರು! ಅವರನ್ನು ನನ್ನ ಜೀವನ ಪರ್ಯಂತ ಎಂದೆಂದಿಗೂ ಮರೆಯುವಂತಿಲ್ಲ. ಭರದಿಂದ ವೆಲ್ಲೂರಿನ ಜಾಲದಿಂದ ತಪ್ಪಿಸಿಕೊಂಡು ಬಂದವನು ಬೆಂಗಳೂರಲ್ಲಿ ಒಂದು ಮ್ಯಾಟರ್ನಿಟಿ ಹೋಮ್ ಪ್ರಾರಂಭ ಮಾಡಿದೆ. ಮನಸ್ಸಿನಲ್ಲಿ ಇಂಗ್ಲಂಡಿಗೆ ಬರುವ ವಿಚಾರ ಸುಳಿಯುತ್ತಲೇ ಇತ್ತು. ಮೊದಲು ಅದು ಹೊಳೆದುದು ನನ್ನ ಕೊನೆಯ ಮತ್ತು ನಾಲ್ಕನೆಯ ಮಗ ಅರವಿಂದನ ಕಾಯಿಲೆಯಿಂದ. ಆತ ಹುಟ್ಟುವಾಗ ಫೋರ್ಸೆಪ್ಸ್ (forceps) ಡೆಲಿವರಿ ಮಾಡಬೇಕಾಯಿತು. ಆತನ ಮೆದುಳಿಗೆ ಆಕ್ಸಿಜನ್ ಅಭಾವದಿಂದ ಧಕ್ಕೆಯಾಗಿ ಅವನು ಆಗಿನ ಕಾಲದಲ್ಲಿ ಅನ್ನುತ್ತಿದ್ದ ‘ಬುದ್ಧಿಮಾಂದ್ಯ’ದಿಂದ ಬಳಲುತ್ತಿದ್ದ. ಅವನ ಶುಶ್ರೂಷೆ ಮಾಡುತ್ತಿದ್ದವರು ಆಗಿನ ಪ್ರಸಿದ್ಧ ಮಕ್ಕಳ ಚಿಕಿತ್ಸಕರಾದ ಡಾ ಕೋಯೆಲ್ಹೋ. ಆತನನ್ನು ಇಂಗ್ಲಂಡಿಗೆ ಕರೆದೊಯ್ದು ಬೆಕೆಂತಲೂ ಆತನ ಚಿಕಿತ್ಸೆ, ಶಿಕ್ಷಣ ಮತ್ತು ಬೆಳವಣಿಗೆಗಳಿಗೆ ಅದು ಅನುವು ಮಾಡಿಕೊಡಬಹುದೆಂದಲೂ ಅವರು ನನಗೆ ಹೇಳಿದ್ದರು, ಆದರೆ ಹಿಂದೊಮ್ಮೆ ಪಾಶ್ಚಿಮಾತ್ಯ ದೇಶಗಳ ಅನಿಭವವಿದ್ದ ಡಾ ಶಿರೋಡ್ಕರ್ ಅವರು ನನಗೆ ಹೇಳಿದ ಕಿವಿಮಾತು ”ನೀನು ಇಂಗ್ಲಂಡಿನಲ್ಲಿ ಪ್ರಸೂತಿ ವಿಜ್ಞಾನದಲ್ಲಿ ಏನೂ ಕಲಿಯಲಾರೆ!” ನೆನಪಿಸುತ್ತಿದ್ದರಿಂದ ಆ ವಿಚಾರ ಹಿಂದಕ್ಕೆಬಿದ್ದಿತ್ತು. ಈಗ ಅವರೆಂದುದು ’ಹೋಗು, ಆದರೆ ಅಲ್ಲಿಯೇ ಉಳಿಯಬೇಡ’’ ಎಂದು ಎಚ್ಚರಿಸಿದರು. ಎಷ್ಟೋ ಜನರಂತೆ ’ಹೋಗುತ್ತೇನೆ, ತಿರುಗಿ ಬರುತ್ತೇನೆ’ ಎಂದು ಅಂದು ಕೊಳ್ಳುತ್ತಲೇ ಇಲ್ಲೆ ಉಳಿದವರಲ್ಲಿ ನಾನೂ ಒಬ್ಬ! (ಎಂದು ನಕ್ಕರು ಪಾಂಡುರಂಗಿಯವರು). ಮೇಲಿನ ಎರಡೂ ಮಾತುಗಳಲ್ಲಿ ಸತ್ಯಾಂಶವಿದೆಯಲ್ಲವೆ?.
ತಾಯಿ-ಮಕ್ಕಳನ್ನು ಬಲಿ ತೆಗಿದುಕೊಂಡ ದೈವ!:
ನಾಲ್ಕು ವರ್ಷ ಪ್ರಸೂತಿ ನರ್ಸಿಂಗ್ ಹೋಮ್ ನಡೆಸಿ, 1973 ರಲ್ಲಿ ಯುಕೆಗೆ ಬಂದೆ. ಮೊದಲು ಶುರು ಮಾಡಿದ್ದು ನನ್ನ ನೆಚ್ಚಿನ ಗೈನಕಾಲಜಿ ಮತ್ತು ಆಬ್ಸ್ಟೆಟ್ರಿಕ್ಸ್ ವಿಭಾಗದಲ್ಲೇ. ನಂತರ ಮಾತ್ರ ಮಗನ ಮಾನಸಿಕ ಕಾಯಿಲೆಯೆಂದಾಗಿ ನನ್ನ ಲಕ್ಷ್ಯವಷ್ಟೇ ಅಲ್ಲ, ನನ್ನ ಜೀವನದ ಧ್ಯೇಯವೂ ’ಮೆಂಟಲ್ ಡಿಸೆಬಿಲಿಟಿ” ಕಡೆಗೆ ಆಯಿತು. ಆ ವಿಷಯಕ್ಕೆ ಬರುವ ಮೊದಲು ನನ್ನ ಆರಂಭದ ದಿನಗಳಲ್ಲಾದ ಒಂದು ಸ್ವಾರಸ್ಯಕರ ಅನುಭವ ಹೇಳಿ ಬಿಡುತ್ತೇನೆ. ನಾನು ಮುಂಬಯಿಯಲ್ಲಿ ಆಗಲೇ ಎಮ್ ಡಿ (1968) ಪದವೀಧರನಾಗಿದ್ದರೂ ಈ ದೇಶದಲ್ಲಿ ಬಂದ ಎಲ್ಲ ಹೊಸಬರಂತೆ ನಾನೂ ಜೂನಿಯರ್ ಆಗಿ ಕೆಲಸ ಪ್ರಾರಂಭ ಮಾಡಿದೆ. ಒಂದು ದಿನ ಆಸ್ಪತ್ರೆಯಲ್ಲಿ ಒಬ್ಬ ಮಹಿಳೆಯ ಆಪರೇಷನ್ ಮಾಡಿ ನನ್ನ ಕನ್ಸಲ್ಟಂಟ್ ”ಈಗ ನಾನು ಮಾಡಿದ ಈ ಅಪರೂಪದ ಆಪರೇಷನ್ ಯಾವುದು ಗೊತ್ತಾ?” ಎಂದು ನನ್ನ ಪರೀಕ್ಷೆ ಮಾಡಿದರು. ಅಂದು ಆಪರೇಷನ್ ಆದ ಆ ಮಹಿಳೆಗೆ ಗರ್ಭ ನಿಲ್ಲುತ್ತಿರಲಿಲ್ಲ. ಅದಕ್ಕೆ ’ಸರ್ವೈಕಲ್ ಇನ್ ಕಾಂಪಿಟನ್ಸ್ ’ಎನ್ನುತ್ತಾರೆ. ಈ ಅಸ್ವಸ್ಠತೆಗೆ ನನ್ನ ಗುರುಗಳಾದ ಡಾ, ಶಿರೋಡ್ ಕರ್ ಅವರು ಸ್ವತಃ ಕಂಡು ಹಿಡಿದ ಸ್ಟಿಚ್ (cervical cerclage) ಹಾಕಿ ಗುಣಮಾಡಿದ ತಂತ್ರವನ್ನು ಛಾಯಾಗ್ರಹಣ ಮಾಡಿ ಎಲ್ಲ ಕಡೆ ಪ್ರದರ್ಶಿಸಿ ಜಗತ್ ಖ್ಯಾತಿ ಪಡೆದಿದ್ದರು ಎಂದ ಮೇಲೆ ನಾನು ಅದನ್ನು ಮಾಡುವ ವಿಧಾನವನ್ನು ಚೆನ್ನಾಗಿ ಅರಿತಿದ್ದೆ. ಅದಕ್ಕೇ ಹಿಂಜರಿಯದೆ ಹೇಳಿ ಬಿಟ್ಟೆ: ’’ನೀವು ಹಾಕಿದ ಹೊಲಿಗೆ ನನ್ನ ಗುರುಗಳೇ ಕಂಡು ಹಿಡಿದದ್ದು! ಅಷ್ಟೇ ಅಲ್ಲ ನೀವು ಅದನ್ನು ಹಾಕಿದ ವಿಧಾನದಲ್ಲಿ ಸ್ವಲ್ಪ ದೋಷವಿದೆ, ಅದು ಹಾಗಲ್ಲ, ಹೀಗೆ, ಸರ್!” ಅಂದೆ!
ಮುಂದೆ ಕೆಲವೇ ತಿಂಗಳಿಗಳಲ್ಲಿ ಆ ವಿಭಾಗ ಬಿಟ್ಟು ಸೈಕಿಯಾಟ್ರಿ ವಿಭಾಗದಲ್ಲಿ ಸೇರಿಕೊಂಡೆ. ಆಸ್ಪತ್ರೆ ಕೆಲಸದಿಂದ ನಿವೃತ್ತಿಯಾಗುವವರೆಗೆ ಹನ್ನೆರಡು ವರ್ಷಗಳ ವರೆಗೆ ಅಲ್ಲೇ ಇದ್ದೆ. ಹೊಸ ಕೆಲಸ ಸೇರಿದ ಕೆಲ ತಿಂಗಳ ನಂತರ ಭಾರತಕ್ಕೆ ಮರಳಿ ಆಗ ಭಾರತದಲ್ಲೇ ಉಳಿದ ನನ್ನ ಕುಟುಂಬದವರನ್ನು ಶೆಫೀಲ್ಡ್ ಗೆ ಕರಯುವ ಉದ್ದೇಶದಿಂದ ವೀಸಾ ಮಾಡಿಸಲು ಮದರಾಸಿಗೆ ಹೋಗಿ, ಕಾಗದ ಪತ್ರವಾದ ಮೇಲೆ ತಿರುಪತಿ ವೆಂಕಪ್ಪನಿಗೆ ಕೈ ಮುಗಿದು ಬರುವಾ ಎಂದು ಹೋದೆವು. ನನ್ನ ಮೂರು ಮಕ್ಕಳು, ಮತ್ತು ನಾನು ಬೇರೆ ಕಡೆಯಲ್ಲಿ ಪ್ರವಾಸದಲ್ಲಿದ್ದೆವೆ. ಕುಟುಂಬದ ಉಳಿಬ್ಬರು,-ನನ್ನ ಮಡದಿ ಮತ್ತು ಕೊನೆಯ ಮಗ ಅರವಿಂದ – ತಿರುಪತಿಯಿಂದ ಟ್ಯಾಕ್ಸಿಯಲ್ಲಿ ಬರುವಾಗ ರಸ್ತೆ ಅಪಘಾತದಲ್ಲಿ ಸಿಕ್ಕರು. ನನ್ನ ಮೊದಲ ಹೆಂಡತಿ, ನನ್ನ ಕೊನೆಯ ಕಾಯಿಲೆ ಮಗ ಮತ್ತು ಜೊತೆಗಿದ್ದ ನನ್ನ ಮಿತ್ರನ ಹೆಂಡತಿ ಮೂವರೂ ಅಲ್ಲೇ ಅಸು ನೀಗಿದರು. ನಮಗೆ ಹೊಡೆದ ಈ ಅನಿರೀಕ್ಷಿತ ಬರದಿಂದ ದಿಕ್ಕೇ ತೋಚದಂತಾಯಿತು. ನಮ್ಮ ಸಂಸಾರದ ಗತಿಯೇ ತಲೆಕೆಳಗಾಯಿತು!
ನಾನು ಹುಟ್ಟುಹಾಕಿದ CAMHADD ದ ಬೆಳವಣಿಗೆ, ಪ್ರಭಾವ:
ಈಗ ನನ್ನ ವೃತ್ತಿಯಲ್ಲೂ ಬದಲಾವಣೆಯಾಯಿತು. ಭಾರತದಿಂದ ಮರಳಿ ಬಂದ ನಂತರ ಶೆಫೀಲ್ಡ್ ನಲ್ಲಿ ಸೈಕಿಯಾಟ್ರಿ ವಿಭಾಗದಲ್ಲಿ ಕೆಲಸ ಮಾಡಲಾರಂಭಿಸಿದೆ. ಮೂರು ಮಕ್ಕಳನ್ನು ಹೊರುವ ಜವಾಬ್ದಾರಿಗೆ ನೆರವಾಗಲು ಸುಮಿತ್ರಾ ನನ್ನ ಬಾಳಸಂಗಾತಿಯಾಗಿ ಸೇರಿದಳು. ಸಂಸಾರ, ಹೊಟ್ಟೆ ಪಾಡಿನ ಕೆಲಸ ಇದರೊಡನೆ ಸಮಾಜ ಸೇವೆ ಮಾಡಲು ಮತ್ತು ಜನರಿಗೆ ತಿಳುವಳಿಕೆ ಹೆಚ್ಚಿಸಲು ಕಾಮೆನ್ವೆಲ್ತ್ ಫೌಂಡೇಷನ್ ದ ಬೆಂಬಲದಿಂದ ಒಂದು ಸಂಸ್ಥೆಯನ್ನು ಕಟ್ಟಿದೆ. ಅದರ ಹೆಸರು Commonwealth Association for Mental Health and Developmental Disability CAMHADD).
ಈ ಸಂಸ್ಥೆ ಹುಟ್ಟುವ ಮೊದಲು ಮತ್ತು ನವಜಾತ ಶಿಶುವಿಗೆ ಹುಟ್ಟಿದ ನಂತರದ ಮೊದಲನೆಯ ಗಂಟೆಯಲ್ಲಿ ಆಕ್ಸಿಜನ್ ಕೊಟ್ಟು (ಅಗಲಿದ ನನ್ನ ಮಗ ಅರವಿಂದನಿಗೆ ಬಂದಂಥ) ವ್ಯಾಧಿಯನ್ನು ಹೇಗೆ ತಡೆಗಟ್ಟ ಬಹುದು ಎನ್ನುವದರ ಬಗ್ಗೆ ಮಾಹಿತಿಯನ್ನು ಹರಡಿಸುವ ಕಾರ್ಯವನ್ನು ಹಮ್ಮಿಕೊಂಡಿತು. ಅದಕ್ಕೆ ಹಳ್ಳಿಯ ದಾಯಾಗಳು, ಆಸ್ಪತ್ರೆಯ ಸಿಬ್ಬಂದಿಗಳು ಇವರೆಲ್ಲರ ತಿಳುವಳಿಕೆ ಹೆಚ್ಚಿಸುವ ಸಲುವಾಗಿ ಶಿಕ್ಷಣ ಮತ್ತು ಟ್ರೇನಿಂಗ್ ಶಿಬಿರಗಳನ್ನು ರಚಿಸುವದರಲ್ಲಿ ಯಶಸ್ವಿಯಾಗಿತು. ಇಂಥ ಕಾರ್ಯದ ಅವಶ್ಯಕತೆ ಮುಂದುವರಿದ ರಾಷ್ಟ್ರಗಳಿಗಿಂತ ಭಾರತ, ಆಫ್ರಿಕ, ಪೂರ್ವ ಪ್ರಾಚ್ಯ ವಲಯಗಳಲ್ಲಿಯ ಬಡ ಮತ್ತು ಪ್ರಗತಿಪರ (ಡೆವಲಪಿಂಗ್) ರಾಷ್ಟ್ರಗಳಲ್ಲೇ ಹೆಚ್ಚು ಎಂದು ಮನವರಿಕೆ ಮಾಡಿಕೊಡಲು ವಿಶ್ವ ಆರೋಗ್ಯ ಸಂಘಟನೆಯ ಪರವಾಗಿ ಪ್ರಪಂಚದ ಮೂಲೆ ಮೂಲೆಯಲ್ಲಿ 20ಕ್ಕೂ ಹೆಚ್ಚಿನ ಕಮ್ಮಟಗಳನ್ನು ನನ್ನ ಧುರೀಣತ್ವದಲ್ಲಿ CAMHADD ಏರ್ಪಡಿಸಿದೆ. 25 ವರ್ಷಗಳ ಸತತ ಸೇವೆಯ ನಂತರ ಅದರ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿಕೊಡಲಾಗಿದೆ. ಕಾಮನ್ ವೆಲ್ತ್ ಫೌಂಡೇಷನ್ ದ ಸಲಹೆಯ ಮೇರೆಗೆ ಹೊಸದಾಗಿ ನಾಮಕರಣ ಹೊಂದಿ ಈಗ ಅದು COMHAD ಎಂಬ ಹೆಸರಿನಿಂದ ಕೆಲಸ ಮಾಡುತ್ತಿದೆ.
ಆರೋಗ್ಯದ ಸಾಮಾಜಿಕ ನಿರ್ದೇಶಿತ ತತ್ವಗಳು:
ನನಗೆ ಕಳೆದ ಮೂವತ್ತಕ್ಕೂ ಹೆಚ್ಚಿನ ವರ್ಷಗಳಿಂದ ಸತತವಾಗಿ WHO ದೊಡನೆ ಇರುವ ನಿಕಟ ಸಂಬಂಧದಿಂದ ಅವರು ನನಗೆ ಮಾನವ ಹಕ್ಕಿನ ಒಂದು ಅಂಗವಾದ ಆರೋಗ್ಯದ ಹಕ್ಕನ್ನು ಸ್ಥಾಪಿಸಲು ಮೇಲಿನ ಯೋಜನೆಯನ್ನು ಕೈಕೊಳ್ಳ ಬೇಕೆಂದು ಒತ್ತಾಯ ಪಡಿಸಿದರು, ಅಲ್ಲದೆ ಅದಕ್ಕಾಗಿ ಎಲ್ಲ ಸಹಾಯ ಒದಗಿಸಲಾಗುವದೆಂದು ಆಶ್ವಾಸನವಿತ್ತರು. ನಾನು ”ಬೆಂಗಳೂರು ಮಾದರಿ (Bangalore model)”ಎಂಬ ಯೋಜನೆಯನ್ನು ಕಳೆದ ಐದಾರು ವರ್ಷಗಳಿಂದ ಹಮ್ಮಿಕೊಂಡಿದ್ದೇನೆ. ಇದಕ್ಕೆ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (Rajiv Gandhi University of Health Sciences, RGUHS) ಹಾಗು CAMHADD ಮತ್ತು ಅದರ ಹೊಸ ಅಂಗವಾದ CTPHCF (CAMHADD Tri-Sector Preventive Health Care Foundation) ಪರವಾಗಿ ಹಮ್ಮಿಕೊಂಡ ಸಂಯುಕ್ತ ಯೋಜನೆ. ಇದರಲ್ಲಿ ಬೆಂಗಳೂರು ಮಹಾನಗರದ ಬಡಜನರ ಆರೋಗ್ಯದ ಮಾಪನ, ಹೃದ್ರೋಗ, ಮಧುಮೇಹ ಇವುಗಳ ಸರ್ವೆ, ಹಲ್ಲಿನ ಆರೋಗ್ಯದ ತಪಾಸಣೆ ನಡೆದಿದೆ. ಇದು WHO ಸಂಸ್ಥೆಯ Tri-Sector Preventive Health Care ಎಂಬ ಮಹತ್ವಾಕಾಂಕ್ಷೆಯ ಯೋಜನೆ. ವಿವಿಧ ದೇಶಗಳಲ್ಲಿ ಆಯಾ ದೇಶದ ಸರಕಾರ, ಅದರ ಸರಕಾರಿ ಮತ್ತು ಖಾಸಗಿ ಅಂಗಗಳು (NGO) ಮತ್ತು ಸಾಮುದಾಯಿಕ ಸಂಸ್ಥೆಗಳು ಈ ಮೂರರ ಸಹಕಾರದಿಂದ ರೋಗ ನಿವಾರಣೆಯ ಕಾರ್ಯವನ್ನು ಎತ್ತಿಕೊಳ್ಳಬೇಕೆಂಬದು ಅದರ ಉದ್ದೇಶ. ಭಾರತದಲ್ಲಿ ಬೆಂಗಳೂರಲ್ಲಿ ಈ ಕೆಲಸವನ್ನು ನಮ್ಮ ಎರಡು ಸಂಸ್ಥೆಗಳ ನೇತೃತ್ವದಲ್ಲಿ ಮೊದಲು ಆರಂಭಿಸಿಯಾಗಿದೆ. ಇದು ಪಟ್ಟಣಗಳಲ್ಲಿ ವಾಸಿಸುವ ಅನುಕೂಲಸ್ಠರಲ್ಲದ ಪೌರರ ಅರೋಗ್ಯವನ್ನು ಕಾಯ್ದುಕೊಳ್ಳುವ ಕೆಲಸ.. ಆದರೆ ಇದರ ಜೊತೆಗೆ ಈಗ ಭಾರತದಲ್ಲಿ ಮತ್ತು ಬೆಂಗಳೂರಲ್ಲಿ ಕಾಳ್ಗಿಚ್ಚಿನಂತೆ ಪಸರಿಸುತ್ತಿರುವ ಡೆಂಗಿ (Dengue fever) ಎನ್ನುವ ಸಾಂಕ್ರಾಮಿಕ ರೋಗದ ತಡೆಯ ಬಗ್ಗೆ ಇನ್ನೂ ಬಹಳಷ್ಟು ಕೆಲಸ ಮಾಡುವದಿದೆ. ನನ್ನ ಆರೋಗ್ಯ ಸುಧಾರಿಸಿದ ನಂತರ ಬೆಂಗಳೂರಿಗೆ ಹೋಗಿ ಅದನ್ನು ಮುಂದುವರಿಸುವ ನಿರ್ಧಾರ ಮಾಡಿದ್ದೇನೆ.
ನನ್ನ ಪ್ರಶ್ನೆ: ಸರಕಾರಿ ಕೆಲಸದಲ್ಲಿ, ರಾಜಕಾರಣದಲ್ಲಿ ಇಷ್ಟೊಂದು ಅಪ್ರಮಾಣಿಕತೆ, ಲಂಚ, ಸುಲಿಗೆ ಇರುವಾಗ ನೀವು ಅದು ಹೇಗೆ ಅದರ ’ಸೇವಕರ’ ಮನವೊಲಿಸಿ ಸಹಕಾರ, ಸಹಾಯ ದೊರಕಿಸಿ ಯಶಸ್ವಿಯಾಗಿದ್ದೀರ.ಇದರ ಗುಟ್ಟು ಏನು? ಪ್ರವಾಹದ ವಿರುದ್ಧ ಈಜಿ, ನಿಮ್ಮ ಕನಸಿನ ಕೂಸಾದ CAMHADD ಸಂಸ್ಥೆ ಸ್ಥಾಪಿಸಿ ನವಜಾತ ಶಿಶುವಿಗೆ ಆಕ್ಸಿಜನ್ ಕೊರತೆಯಿಂದಾಗುವ (Birth Asphyxia) ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ದೌರ್ಬಲ್ಯತೆ ನಿವಾರಿಸಲು ಆರೋಗ್ಯ ಸಿಬ್ಬಂದಿಗೆ ಟ್ರೇನಿಂಗ್ ಕೊಟ್ಟು ಜಗತ್ತಿನ ಮೂಲೆ ಮೂಲೆಗಳಲ್ಲಿ ನಿಮ್ಮ ಸಂದೇಶದ ಕಹಳೆ ಊದಿ ಸಫಲರಾದಿರಿ. ಇದರ ರಹಸ್ಯವೇನು? ನನಗೆ ನೀವು ಅಜಾತ ಶತ್ರುಗಳಂತೆ ಕಾಣಿಸುತ್ತೀರಿ! ನೀವು ಪ್ರಧಾನಿ ಇಂದಿರಾ ಗಾಂಧಿ, ಅಧ್ಯಕ್ಷ ಝೈಲ್ ಸಿಂಗ್, ಕರ್ನಾಟಕದ ಹಿಂದಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಇತ್ತೀಚೆಗೆ ನರೆಂದ್ರ ಮೋದಿ ಇವರ ಕಟಾಕ್ಷ್ಯ ದೊರಕಿಸಿದ್ದೀರೆಂದು ಕೇಳಿದ್ದೇನೆ.

ಡಾ ಪಾಂಡುರಂಗಿ: ನನ್ನ ಅನುಭವ ಹೇಳಿದ್ದೇನೆಂದರೆ ತಮ್ಮ ಕೆಲಸ, ಧ್ಯೇಯಕ್ಕೆ ಬದ್ಧವಾದ ಜನರು, ಉನ್ನತ ನೈತಿಕಮಟ್ಟದವರು ಇನ್ನೂ ನಮ್ಮ ಸಮಾಜದಲ್ಲಿ ಇದ್ದಾರೆ. ಅವರು ನನಗೆ ದೊರೆಕಿದ್ದಾರೆ. ಅವರೇ ನನ್ನ ಎಲ್ಲ ಯೋಜನೆಗಳ ಬೆನ್ನೆಲುಬು. ಅಂಥವರು ಎಲ್ಲ ಕಡೆ ಇರುತ್ತಾರೆ. ಅವರನ್ನು ಪತ್ತೆ ಹಚ್ಚಿ ನನ್ನೊಡನೆ ಸೇರಿಸಿಕೊಂಡಿದ್ದು ನನ್ನ ಸುದೈವ. ಅವರೆಲ್ಲರ ಬೆಂಬಲದಿಂದಲೇ ಕೆಲಸ, ಸಾಧನೆ ಆಗುತ್ತದೆ. ಉಳಿದವರೆಲ್ಲ – ಮಂತ್ರಿಗಳು, ಪಧಾಧಿಕಾರಿಗಳು, ರಾಜಕಾರಣಿಗಳು,-ಇವರೆಲ್ಲ ಬರಿ ಸ್ಲೋಗನ್ ಮೋಂಗರ್ಸ್ ಅಷ್ಟೇ!
ನಾನು: ನೀವು ಮತ್ತೊಮ್ಮೆ ’ಡಾಕ್ಟರ” ಆದಿರಿ ಎಂದು ಕೇಳಿದೆ. ಆ ವಿಷಯ?
ಡಾ ಪಾಂಡುರಂಗಿ: ಹೌದು. 2014 ರಲ್ಲಿ ರಾಜೀವ ಗಾಂಧಿ ವಿಶ್ವವಿದ್ಯಾಲಯ ನನಗೆ Doctorate of Science (honoris causa) -ಗೌರವ ಡಾಕ್ಟರೇಟ್ ಕೊಟ್ಟಿದ್ದು ನಿಜ.

ಭಾಗ 3
ಸೋಲರಿಯದ ಸಾಧಕ
ಮೇಲೆ ಹೇಳಿದಂತೆ ಡಾ ಪಾಂಡುರಂಗಿಯವರಿಗೆ ಮತ್ತೊಮ್ಮೆ ಡಾಕ್ಟರೇಟ್ ಸಿಕ್ಕಿದೆ. ಕಾಲು ಶತಮಾನಕ್ಕಿಂತಲೂ ಹೆಚ್ಚು ಕಾಲ ಜಗತ್ತಿನಲ್ಲಿ ಸಂಪನ್ಮೂಲಗಳ ಅಭಾವವಿರುವ ಅಭಿವೃದ್ದಿಶೀಲ ದೇಶಗಳಲ್ಲಿ ಹೇಗೆ ಮೆಂಟಲ್ ಹಾಂಡಿಕ್ಯಾಪ್ ತಡೆಗಟ್ಟ ಬಹುದು ಅಥವಾ ಕಡಿಮೆ ಮಾಡಬಹುದು ಎಂಬ ಬಗ್ಗೆ ತಮ್ಮ ಜೀವನದ ಕಾಲು ಭಾಗ ಸವೆದರು. ಗೌರವ ಪದವಿಗಳು, ಪ್ರಶಸ್ತಿಗಳು ಅವರನ್ನರಸಿ ಬಂದುದು ಆಶ್ಚರ್ಯವಲ್ಲ. 2005 ರಲ್ಲಿ ಅವರಿಗೆ ”ಭಾರತ ಗೌರವ” ಪ್ರಶಸ್ತಿಯನ್ನು India International Society for Global Friendship ಕೊಟ್ಟು ಸನ್ಮಾನಿಸಿದೆ. ಬೆಂಗಳೂರಿನ ಮಿಂಟೋ ಆಸ್ಪತ್ರ್, ಜಯದೇವ ಕಾರ್ಡಿಯೋಲಜಿ ಸಂಸ್ಥೆ, Indira Gandhi Institute for Child Health, Lakeside Educational Trust ಇವುಗಳಿಂದಲೂ ಜನಾರೋಗ್ಯಕ್ಕೆ ಇವರು ಸಂದ ಸೇವೆಗಾಗಿ ಪುರಸ್ಕಾರ ಸಿಕ್ಕಿದೆ.
ಮೇಲಿನ ಸಂದರ್ಶನ ನಡೆದ ಕೆಲವೇ ವಾರಗಳ ನಂತರ ಡಾ ವಾಸುದೇವ ಪಾಂಡುರಂಗಿ ಅವರು ಬೆಂಗಳೂರಿಗೆ ಕೆಲಸದ ನಿಮಿತ್ತ ಹೋಗಿ, ವಾಪಸ್ ಯು ಕೆ ಗೆ ತಮ್ಮ ಮನೆಗೆ ಬಂದ ಕೆಲವೇ ಗಂಟೆಗಳಲ್ಲಿ ಇದೆ ವರ್ಷ ಮೇ ತಿಂಗಳ ಹತ್ತನೆಯ ತಾರೀಕು ನಿಧನರಾದರು!
ಡಾ ಪಾಂಡುರಂಗಿಯವರ ಬಳುವಳಿ:
ಜಗತ್ತಿನ ಮೂಲೆ ಮೂಲೆಗಳಲ್ಲಿ ಹೋಗಿ ಶಿಶುವಿನ ಅರೋಗ್ಯರಕ್ಷಣೆಯ ಬಗ್ಗೆಯ ತಮ್ಮ ಸಂದೇಶವನ್ನು ಮುಟ್ಟಿಸಲು ಪ್ರಯತ್ನಿಸಿದವರನ್ನು ವಿಶ್ವ-ಮಾನವ ಎಂದು ಕರೆಯದಿರ ಬಹುದೆ? ಅವರ ಸಹೋದ್ಯೋಗಿಯಾಗಿ ಕೆಲಸ ಮಾಡಿದ ಮಕ್ಕಳ ರೋಗದ ತಜ್ಞ ಡಾ. I. B. ಸರ್ದಾರ್ವಾಲಾ ಅವರಿಗೆ ಮೇಲಿನ ಪ್ರಶ್ನೆಯನ್ನು ಕೇಳಿದೆ. ಅವರ ಉತ್ತರ: ”ಅಭಿವೃದ್ದಿಪರ ದೇಶಗಳಲ್ಲಿ ಹಣದ, ಸಂಪನ್ಮೂಲಗಳ ಕೊರತೆಯಿರುವದರಿಂದ ಆ ಪರಿಮಿತಿಯಲ್ಲಿ ಜನರ ಕಲ್ಯಾಣದ ಮಾಡಿದ ವಾಸುದೇವ ಪಾಂಡುರಂಗಿಯವರ ಸಾಧನೆ ಅಳತೆಗೆ ನಿಲುಕದು. ಅವರ ಅದಮ್ಯ ಉತ್ಸಾಹ, ನಿರಂತರ ದುಡಿಮೆ ನನಗೆ ಅಚ್ಚರಿಯನ್ನು ಕೊಟ್ಟಿದೆ.” ಅವರೆಂಥ ಮನುಷ್ಯ, ಎಂದು ಕೇಳಿದಿರಿ. ಎಂಟು ದಶಕಗಳ ನನ್ನ ಜೀವನದಲ್ಲಿ ಎಲ್ಲ ತರದ ಜನರನ್ನು ಕಂಡಿದ್ದೇನೆ, ಕೆಲವರು ಒಳ್ಳೆಯವರು, ಕೆಲವರು ಅಷ್ಟಕ್ಕಷ್ಟೇ. ಆದರೆ ’’ವಾಸ” ನನ್ನ ಎಣಿಕೆಯಲ್ಲಿ ಅತ್ಯಂತ ಉತ್ಕೃಷ್ಟ ಮಾನವರಲ್ಲೊಬ್ಬ ಎಂದು ಎಣಿಸುತ್ತೇನೆ.
ಇಂಥ ಯು ಕೆ ಕನ್ನಡಿಗನಿಗೆ, ಕನ್ನಡ ಬಳಗದ ಬೆಂಬಲಿಗನಿಗೆ, ಇದು ನನ್ನ ಸಣ್ಣ ಶ್ರದ್ದಾಂಜಲಿ ಸಹ.
ಚಿತ್ರ ಲೇಖನ- ಡಾ. ಶ್ರೀ ವತ್ಸ ದೇಸಾಯಿ
ಕೃತಜ್ಞತೆಗಳು: ಅರುಣಾ, ಆನಂದ ಪಾಂಡುರಂಗಿ, ದಾಮೋದರ ಕುಲಕರ್ಣಿ, ಸರೋಜಿನಿ ಪಡಸಲಗಿ, ಉಮಾ ವೆಂ, ರಾಬರ್ಟಾ ರಿಟ್ಸನ್, ರೂಡಿಗೆರ್ ಕ್ರೆಶ್ ಹಾಗು ಪ್ರೊ. ಟೆಸ್ಫಾಯೆ.
ದೇಸಯಿಯವರೇ, ಇಂಥ ಅದ್ಭುತ ಚೇತನವನ್ನು ನಮಗೆಲ್ಲ ಪರಿಚಯಿಸಿದ್ದಕ್ಕೆ ತುಂಬ ಧನ್ಯವಾದಗಳು. ಪಾಂಡುರಂಗಿಯಂಥ ಎಲೆಮರೆಯ ಕಾಯಿಗಳು ಯಾವುದೇ ಪ್ರಚಾರದ ಹಂಗಿಲ್ಲದೇ ವಿವಿಧ ದೇಶಗಳ ಮಕ್ಕಳ ಆರೋಗ್ಯ ವರ್ಧನೆಗೆ ಚಾಲನೆ ನೀಡುತ್ತಾರೆ. ಸತ್ಕಾರ ಸಮಾರಂಭಗಳಿಂದ ದೂರ ಉಳಿದು ಬಿಡುತ್ತಾರೆ. ಅವರ ಜೀವನಗಾಥೆ ಸ್ಫೂರ್ತಿದಾಯಕ. ನಿಮ್ಮ ಬರಹ ಮನಮೋಹಕ. – ಕೇಶವ
LikeLiked by 1 person
ಶ್ರೀವತ್ಸ ದೇಸಾಯಿ ಬರೆಯುತ್ತಾರೆ:
ಈ ಲೇಖನದ ಸಿದ್ಧತೆಯ ಅರಿವಾಗಿ ಅವರ ನಿಕಟವರ್ತಿಗಳಾದ WHO ದ (ವಿಶ್ವ ಆರೋಗ್ಯ ಸಂಸ್ಥ) ಇಬ್ಬರು ಗಣ್ಯರು ನನಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದು ಹೀಗೆ:
1) WHOದ Director of Health System and Innovation ಡಾ ರೂಡಿಗೇರ್ ಕ್ರೆಶ್ ಅವರು ಜೆನಿವಾದ Office of the Assistant Director-General ದಿಂದ ಫೋನಿನಲ್ಲಿ ನನ್ನೊಡನೆ ಮಾತನಾಡಿ ಈ ಅದಮ್ಯ ಉತ್ಸಾಹದ, ಮೃದುಭಾಷಿಯ ಡಾ ಪಾಂಡುರಂಗಿಯವರ ಅಗಲಿಕೆಗೆ ತಮ್ಮ ಅಶ್ರುತರ್ಪಣವಿತ್ತು ಹೇಳಿದ್ದೆಂದರೆ: ”ಈತ ವಿಶ್ವ ಅರೋಗ್ಯ ಸಂಸ್ಥೆ ಮತ್ತು ಕರ್ನಾಟಕ ಹಾಗು ಭಾರತ ಸರಕಾರ್ಗಳಿಗೆ ಕೊಂಡಿಯಾಗಿದ್ದರು. ಅವರು ಬಂದರೆ ಇವೆಲ್ಲವುಗಳ ಬಾಗಿಲಗಳು ತೆರೆದುಕೊಳ್ಳುತ್ತಿದ್ದವು! ಅವರಲ್ಲಿ ಜನರ ಮನವೊಲಿಸುವ ಮತ್ತು ಮನ ಬದಲಾಯಿಸುವ ಮೋಡಿ ಇತ್ತು. ಎಂದೂ ಸೋಲನ್ನೊಪ್ಪದೆ ತಮ್ಮ ಗುರಿಯನ್ನು ಸಾಧಿಸುತ್ತಿದ್ದರು. ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ.”
2) ವಿಶ್ವ ಆರೋಗ್ಯ ಸಂಸ್ಥೆಯೊಡನೆ ಡಾ ಪಾಂಡುರಂಗಿಯವರಿಗಿದ್ದ ಗಾಢ ಸಂಬಂಧವನ್ನು ಒತ್ತಿ ಹೇಳಿದವರೆಂದರೆ ಅದರ ನಿವೃತ್ತ ಹಿರಿಯ ಅಧಿಕಾರಿ ಶ್ರೀಮತಿ ರಾಬರ್ಟಾ ರಿಟ್ಸನ್ ಅವರು. ಎರಡು ದಶಕಗಳಿಗೂ ಹೆಚ್ಚು ಕಾಲ ಜೆನೀವಾದಲ್ಲಿ ಅವರ ಸಂಪರ್ಕವಿದ್ದುದರಿಂದ ಅವರನ್ನು ಹತ್ತಿರದಿಂದ ನೋಡಿದವರಾಗಿದ್ದರು. ನನ್ನೊಡನೆ ಫೋನಿನಲ್ಲಿ ಮಾತಾಡಿ, ಅವರ ಸ್ಮಾರಕವೆಂದರೆ ಅವರ ಸರಳತೆ, ನಿಸ್ವಾರ್ಥತೆ, ಮತ್ತು ಜಿಗುಟುತನ. ಅವರ ‘perseverance and gentle persuation’ ಅನ್ನು ನೆನೆಸಿಕೊಂಡರು. ಆ ವಿಶ್ವ ಸಂಸ್ಥೆ ಸುಲಭದಲ್ಲಿ ಯಾರಿಗೂ ಇವರಿಗೆ ದೊರಕಿದಂಥ ”ಅಧಿಕೃತ collaborator” ಎಂಬ ಸ್ಥಾನವನ್ನು ಕೊಡುವದಿಲ್ಲ. WHO ಜೊತೆಗೆ ಸ್ವಲ್ಪ ಸಂಬಂಧ ಬಂದರೆ ಸಾಕು, ಅದರ ಗುರುತು ಪಟ್ಟಿಯನ್ನು ತೋರಿಸಿ ತಮ್ಮ ಸ್ವಾರ್ಥ ಸಾಧಿಸುವವರೆಲ್ಲಿ, ನಿಸ್ವಾರ್ಥ ಜೀವಿಯಾದ ಇವರೆಲ್ಲಿ ಎಂದು ಉದ್ಗಾರ ತೆಗೆದರು.
LikeLiked by 1 person
ಡಾ ಪಾಂಡುರಂಗಿ ಅವರನ್ನು ಯಾರ್ಕ್ ಶೈರ್ ಕನ್ನಡ ಬಳಗದ ಸಮಾರಂಭದಲ್ಲಿ ಖುದ್ದಾಗಿ ಭೇಟಿಯಾಗುವ ಅವಕಾಶ ನನಗೆ ಒದಗಿಬಂದಿತು. ಅವರ ಬಗ್ಗೆ ದೇಸಾಯಿ ಅವರಿಂದ ಕೇಳಿ ತಿಳಿದಿದ್ದ ನನಗೆ ಅವರನ್ನು ಯು. ಕೆ . ಕನ್ನಡ ಬಳಗದಲ್ಲಿ ಸನ್ಮಾನ ಮಾಡುವ ಆಲೋಚನೆ ಮೂಡಿತ್ತು. ಅದು ಕಾರ್ಯಗತವಾಗಲಿಲ್ಲವೆಂಬ ವಿಚಾರದ ಬಗ್ಗೆ ನನಗೆ ಬೇಸರವಿದೆ. ಡಾ ಪಾಂಡುರಂಗಿ ಅವರ ಪೂರ್ಣ ಪರಿಚಯ ಒದಗಿಸಿದ ಶ್ರೀವತ್ಸ ಅವರಿಗೆ ಧನ್ಯವಾದಗಳು. ಮಕ್ಕಳ ತಜ್ಞ ನಾದ ನನಗೆ ವೈಯುಕ್ತಿಕವಾಗಿ ಅವರ ಸಾಧನೆ ಮಹತ್ತರವಾದದ್ದು. ಅಭಿವೃದ್ಧಿ
ಗೊಳ್ಳುತ್ತಿರುವ ದೇಶಗಳಲ್ಲಿ ನವಜಾತ ಶಿಶುಗಳ ತೊಂದರೆಗಳನ್ನು ನಿಭಾಯಿಸಲು ಬಹಳಷ್ಟು ಅರಿವು ಮತ್ತು ತರಬೇತಿಯ ಅವಶ್ಯಕತೆ ಇದೆ. ಪಾಂಡುರಂಗಿ ಅವರು ಆರಂಭಿಸಿದ ಈ ಪ್ರಯತ್ನ ಸಫಲವಾಗಲಿ ಹಾಗೂ ಅವರ ಕಂಡ ಕನಸು ನನಸಾಗಲಿ ಎಂದು ಹಾರೈಸುತ್ತೇನೆ
LikeLiked by 1 person
Dear Dr Desai
We are grateful that Anivassi has published this ‘life of our father’ for the benefit of readers of Kannada Balaga here in the UK and beyond. Readers can get a glimpse of his life’s struggles and triumphs. Growing up I was fortunate to be involved closely with his projects and travelled with him to different parts of the world. One such project ‘Birth Asphyxia’ which was very close to his heart comes to mind. I remember going with my father to a village in Haryana, India, where his team of health care professionals demonstrated methods of recognition of birth asphyxia (oxygen deprivation) in community settings to the local community midwives. This would have prevented brain damage and saved new born lives. Just one example of many projects I had witnessed first hand before I got married and got busy with my own life. We were blessed that he showed us that we need to play a role to bring succour to the less fortunate in society. We miss him terribly. May god rest his soul.
Thank you Dr Desai again for your effort.
Aruna Murthy/Pandurangi (daughter) USA
As I am not very proficient in kannada ,especially written kannada, I had to post the above comments in English to get my thoughts across.
LikeLiked by 1 person
Dear Aruna, your own personal experience reinforces all that is being said in these pages. Thank you for writing in.
LikeLiked by 1 person
A GREAT PERSONALITY NOT WITH US BUT MADE US TO REMEMBER EVERY MOMENT.
LikeLiked by 1 person
ಸಣ್ನವಯಸ್ಸಿನಲ್ಲಿ ಪ್ರತ್ಯಕ್ಷವಾಗಿ ಕಂಡ ಘಟನೆಯಿಂದ ಪ್ರಭಾವಿತನಾಗಿ, ತಮ್ಮ ಜೀವನವನ್ನೇ ತಾಯಿ-ಮಗುವಿನ ಆರೋಗ್ಯ ಕಲ್ಯಾಣಕ್ಕೆ ಮೀಸಲಿಟ್ಟ ದಿ. ಡಾ ಪಾಂಡುರಂಗಿಯವರ ಜೀವನ ಕಥೆಯಿಂದ ಕಲಿಯಬೇಕಾದ್ದು ಬಹಳಷ್ಟಿದೆ. ತಾನು ಹುಟ್ಟಿದ ದೇಶದಲ್ಲಿಇರದಿದ್ದರೂ ಸಹಾ, ವಿದೇಶದಲ್ಲಿದ್ದೇ ಪ್ರಪಂಚದ ಕಲ್ಯಾಣಕ್ಕಾಗಿ ಹೋರಾಡಿದ ಪಾಂಡುರಂಗಿಯವರು ನಿಜಕ್ಕೂ ವಿಶ್ವಮಾನವನೇ ಸರಿ! ಕೇವಲ ಬಾವುಟ ಹಿಡಿದು, ಘೋಷಣೆ ಕೂಗುವುದರಿಂದ ಪ್ರಪಂಚಕ್ಕೆ ಒಳಿತಾಗದು. ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ, ಉತ್ತಮ ಮಾನವನಾಗಿರು ಎನ್ನುವ ವಾಕ್ಯ ಪರಿಪಾಲನೆ ಮುಖ್ಯ. ವೃತ್ತಿ, ಭವಿಷ್ಯ ಮತ್ತು ವಿದ್ಯೆಯನ್ನರಸುತ್ತಾ ವಿದೇಶಕ್ಕೆ ಹೋಗುವ ಜನರೆಶ್ಟೋ! ಆದರೇನು? ತಾವು ವಿದೇಶದಲ್ಲಿ ಸಂಪಾದಿಸಿದ ಗ್ನಾನವನ್ನು ಪ್ರಪಂಚದ ಒಳಿತಿಗೆ ಬಳಸುವವನೇ ನಿಜಕ್ಕೂ ಉತ್ತಮ ಮಾನವ. ಪಾಂಡುರಂಗಿಯವರ ಜೀವನ ಸಾಧನೆ ಇದಕ್ಕೆ ಉತ್ತಮ ನಿದರ್ಶನ. ಇಂತಹ ಮಹಾನುಭಾವನ ಜೀವನ ವೃತ್ತಾಂತವನ್ನು ತಮ್ಮ ಲೇಖನದ ಮೂಲಕ ನಮಗೆಲ್ಲಾ ತಿಳಿಸಿರುವ ಡಾ ದೇಸಾಯಿಯವರಿಗೆ ಅಭಿನಂದನೆ ಮತ್ತು ಧನ್ಯವಾದಗಳು. ಡಾ ಪಾಂಡುರಂಗಿಯವರ ಬಗ್ಗೆ ಪುಸ್ತಕವೊಂದು ಹೊರಬಂದರೆ ಇನ್ನೂ ಉತ್ತಮ ಎಂದು ನನ್ನ ಅಭಿಪ್ರಾಯ.
ಉಮಾ ವೆಂಕಟೇಶ್
LikeLiked by 1 person
ಡಾ. ದೇಸಾಯಿಯವರಿಗೆ,
ನಿಮ್ಮ ಲೇಖನ ತುಂಬಾ ಹೃದಯ ಸ್ಪಶ೯ವಾಗಿದೆ. ತುಂಬಾ ಧನ್ಯವಾದಗಳು.
ಸೋದರಮಾವನಾದ ನನ್ನ ವಾಸಣ್ಣ ಎಂದೂ,ಎಂದೆಂದಿಗೂ ಪ್ರಚಾರ ಬಯಸಲಿಲ್ಲ.
ಕಳೆದಸಾರಿ ಬೆಂಗಳೂರಿನಲ್ಲಿದ್ದಾಗ್ಗೆ ಕನ್ನಡ ವಾಹಿನಿ ಯೊಂದರ ಸಾಧಕರ ಸಾಧನೆ ಎಂಬ ಕನ್ನಡ ಕಾಯ೯ಕೃಮಕ್ಕೆ ನಾವು ಪ್ರಯತ್ನಿಸುವೆವು ಎಂದಾಗ ಅದೆಲ್ಲ ಬೇಡ ಎಂದ ಮಹಾನ್ ಚೇತನ ವಾಸಣ್ಣ.
ಕಡೇತನಕ ಎಲೆಮರೆಯಕಾಯಿಯಂತೆ, ಮರೆಯಾದ ನಮ್ಮೆಲ್ಲರ ಪ್ರೀತಿಯ
ದಿವ್ಯ ಚೇತನ ವಾಸಣ್ಣ.
ಸತೀಶ್. ಸು. ಪುರೋಹಿತ.ಹಾಗೂ ಶ್ವೇತಾ.ಸ.ಪುರೋಹಿತ.
ಬೆಂಗಳೂರು.
LikeLike
ಸತೀಶ್ ಮತ್ತು ಶ್ವೇತಾ ಅವರೆ, ”ಅನಿವಾಸಿ”ಗೆ ಬರೆದು, ನಿಮ್ಮ ಅನುಭವವನ್ನು ದಾಖಲಿಸಿದ್ದಕ್ಕೆ ಧನ್ಯವಾದಗಳು.ಅವರ ನಿಸ್ಪೃಹತೆಯ ಬದುಕಿಗೆ ಇದೂ ಒಂದು ಸಾಕ್ಷಿ.
LikeLike
ಅರವಿಂದ ಕುಲ್ಕರ್ಣಿ ಬರೆಯುತ್ತಾರೆ:
ಶ್ರೀವತ್ಸರಿಗೆ
ಧನ್ಯವಾದಗಳು. ಡಾಕ್ಟರ್ ಪಾಂಡುರಂಗಿ ಅವರು ಜೀವನದಲ್ಲಿ ನಡೆದ ಬಂದ ದಾರಿ, ಸಾಧಿಸಿದ ಮಹಾ ಕಾರ್ಯಗಳ ಬಗ್ಗೆ ನೀವು ಚಿತ್ರಿಸಿದ ಶೃದ್ಧಾಂಜಲಿ ಓದಿದಾಗ್ಯೆ ನನ್ನ ಕಣ್ಣುಗಳು ಕಂಬನಿಗೊಂಡವು . ಅವರ ಕುಟುಂಬ ಹಾಗು ನನ್ನ ಕುಟುಂಬಗಳಲ್ಲಿ ಕಳೆದ ೪೦ ವರುಷಗಳಿಂದ ನಿಕಟ ಸಂಬಂಧ ಇದ್ದಿತು. ಆದರೂ ಅವರು ಸಾಧಿಸಿದ ಕೆಲವು
ಮಹಾ ಕಾರ್ಯಗಳ ಬಗ್ಗೆ ಇದು ವರೆಗೆ ಅರಿವು ಇದ್ದಿರಲಿಲ್ಲ. ತಾವು ಕೈಗೊಂಡ ಸಾಧನೆಗಳ ಬಗ್ಗೆ ಹೆಚ್ಚಿಗೆ ಪಬ್ಲಿಸಿಟಿ ಮಾಡುತ್ತಿರಲಿಲ್ಲ. ಹೀಗಾಗಿ ಅವರ ಬಗ್ಗೆ ನಮ್ಮ ಕನ್ನಡ ಬಳಗದ ಸದಸ್ಯರಿಗೆ ಮಾಹಿತಿ ಇದ್ದಿರಲಿಲ್ಲ. ನೀವು ನಿಮ್ಮ ಲೇಖನ ಮುಖಾಂತರ ಈಗ ಕನ್ನಡಿಗರಿಗೆ ತಿಳಿಸಿರುವಿರಿ. ಇದಕ್ಕೆ ಇಗಾಗಲೇ ಬಂದಿರುವ ಪ್ರತಿಕ್ರಿಯೆಗಳೇ ಸಾಕ್ಸಿ .
ಅವರನ್ನು ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ಆಹ್ವಾನಿಸಿ ಸನ್ಮಾನ ಮಾಡುವ ವಿಚಾರ ಕಾರ್ಯಗತವಾಗಲಿಲ್ಲ ಎಂದು ನೆನೆದಾಗ ಮನಸ್ಸಿಗೆ ಖೇದವಾಗುತ್ತಿದೆ.
1982ರಲ್ಲಿ ದಿ.ಡಾಕ್ಟರ್ ಗೋಪಾಲ ಕುಲ್ಕರ್ಣಿ ಅವರ ಮನೆಯಲ್ಲಿ ಡಾಕ್ಟರ್ ಪಾಂಡುರಂಗಿ ಅವರ ಕುಟುಂಬ, ನಿಮ್ಮ ಕುಟುಂಬ, ನನ್ನ ಹಾಗು ವಿಜಯಾ ಅಗಳಗತ್ತಿ ಕುಟುಂಬಗಳೆಲ್ಲ ದೀಪಾವಳಿ ಹಬ್ಬ ಆಚರಿಸಲು ಕೂಡಿದ್ದು, ಹರಟೆ ಹೊಡೆದಿದ್ದು, ಹೋಳಿಗೆ ಊಟ ಸವಿದಿದ್ದು ಹಾಗು ಮುಖ್ಯವಾಗಿ ಅಂದೇ ಕನ್ನಡ ಬಳಗದ ಸ್ಥಾಪನೆಗೆ ನಾಂದಿ ಇಟ್ಟದ್ದು
ಇಂದಿಗೂ ನೆನಪಿನಲ್ಲಿ ನಿಚ್ಚಳವಾಗಿ ಉಳಿದಿವೆ. ಡಾಕ್ಟರ್ ಪಾಂಡುರಂಗಿ ಅವರು ನೀಡಿದ ಸೂಕ್ತ ಸಲಹೆಗಳು ನಮಗೆಲ್ಲ ಮಾರ್ಗದರ್ಶಕವಾಗಿದ್ದವು. ಇಂಥ ಮಹಾನುಭಾವರು ಇನ್ನೂ ಸಾಧಿಸಬೇಕೆಂದುಕೊಂಡಿದ್ದ ಹಲವಾರು ಮಹಾ ಕಾರ್ಯಗಳನ್ನು ಅವರ ಬೆಂಬರಿಗಳು ಸಾಧಿಸಲಿ ಎಂದು ಆಶೆ.
ಡಾಕ್ಟರ್ ವಾಸುದೇವ ಪಾಂಡುರಂಗಿಯವರ ಆತ್ಮ ಚಿರ ಶಾಂತಿಯಾಗಿರಲಿ .
ಡಾಕ್ಟರ್ ಅರವಿಂದ ಕುಲ್ಕರ್ಣಿ
LikeLiked by 1 person
“ತಾನುರಿದು ಜಗಕೆಲ್ಲ ಜ್ಯೋತಿಯನು ನೀಡುವಾ ದೀಪದೊಲು ಎನ್ನನ್ನು ಅನುಗೊಳಿಸು ತಂದೆ” ಎಂಬಂತೆ ಬದುಕಿದ ಸಾಧಕನ ಶ್ರದ್ಧಾಂಜಲಿ ಬಹಳ ಅಚ್ಚುಕಟ್ಟಾಗಿ ನಿರೂಪಿತವಾಗಿದೆ. ದೇಸಾಯಿಯವರ ಈ ಪ್ರಯತ್ನ ನಿಜಕ್ಕೂ ಪ್ರಶಂಸಾರ್ಹ.
ಮೆಡಿಕಲ್ ಕಾಲೇಜಿಗೆ ಮೊದಲ ಕೆಲ ದಿನ ನಾನು ಸಹ ಹವಾಯಿ ಚಪ್ಪಲಿ ಹಾಕಿಕೊಂಡು ಹೋಗಬೇಕಾದ ಪರಿಸ್ಥಿತಿಯಲ್ಲಿ ನವ ಭಾವಗಳ ಪ್ರತಿಕ್ರಿಯೆ ಅನುಭವಿಸಿದ ನೆನಪು ಬಂತು.
ಪಾಂಡುರಂಗಿಯವರ ಅದಮ್ಯ ಚೇತನಕ್ಕೆ ನಮನಗಳು.
LikeLiked by 1 person
ಆತ್ಮೀಯ ದಾ. ದೇಸಾಯಿ,
ಇಂತಹ ಒಳ್ಳೆಯ ಲೇಖನ ಬರೆಯುವುದಕ್ಕೆ ತುಂಬಾ ಧನ್ಯವಾದಗಳು. ಡಾ. ವಾಸುದೇವ ಪಾಂಡುರಂಗಿ, ನನ್ನ ತಾತ, ತನ್ನ ಜೀವನದಲ್ಲಿ ಬಹಳಷ್ಟು ವಿಷಯಗಳನ್ನು ಸಾಧಿಸಿದ್ದಾನೆ. ಅವರ ಮೊಮ್ಮಗನಾಗಿದ್ದೇನೆ ಎಂದು ನನ್ನಗೆ ಹೆಮ್ಮೆಪಡುತ್ತೇನೆ. ನಾನು ಅವರು ಜೊತೆಗೆ
ಕಳೆದ ಸಮಯವನ್ನು ನೆನಪಿಸಿಕೊಳ್ಳುತ್ತೇನೆ ನನ್ನ ಕಣ್ಣಿನಲ್ಲಿ ಕಣ್ಣೀರು ತರುತ್ತದೆ, ಏಕೆಂದರೆ ನನ್ನ ಅಜ್ಜ ಅಂತಹ ಒಳ್ಳೆಯ ಮನುಷ್ಯನ ಇದ್ರು.
ಚಿಕ್ಕ ವಯಸ್ಸಿನಿಂದನೇ ನಾನು ಅವರ ಜೀವನದ ಕಥೆಗಳು ಕೇಳಿದೆ, ಮತ್ತು ಬೆಳೆಯುತ್ತಿರುವ ಸಂದರ್ಭದಲ್ಲಿ, ಅವರ
ಜೀವನದ ಹೋರಾಟಗಳು ಬಗ್ಗೆ ನಾನು ಹೊಸ ದೃಷ್ಟಿಯಿಂದ ನೋಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
ಅನಿರುದ್ಧ್ ಮೂರ್ತಿ
LikeLiked by 3 people
ಪ್ರಿಯ ಅನಿರುದ್ಧ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇಂಥ ಅಪರೂಪದ ಅಜ್ಜನನ್ನು ಪಡೆದ ಮಕ್ಕಳು, ನೀವೆಲ್ಲ ಮೊಮ್ಮಕ್ಕಳು ಎಲ್ಲರು ಧನ್ಯರು. ಆದರ್ಶಗಳ ಬೆನ್ನು ಹತ್ತಿ ಅವಿರತ ಪರಿಶ್ರಮ ಮತ್ತು ತಾಳ್ಮೆಯಿಂದ ಅವರು ಸಾಧಿಸಿದ್ದು ನಿಮ್ಮಂಥ ಎಳೆಯರಿಗಷ್ಟೇ ಅಲ್ಲ, ಎಲ್ಲರಿಗೂ ಸ್ಫೂರ್ತಿದಾಯಕ. ಅವರ ಸ್ನೇಹ, ಸಂಪರ್ಕ, ಸಂದರ್ಶನ ಪಡೆದ ನಾನು ಸುದೈವಿ ಎಂದು ಕೊಳ್ಳುತ್ತೇನೆ. ಸಾಧನೆಯ ಜೊತೆಗೆ ಸಜ್ಜನರಾಗಿ ಬಾಳಿದ ಅವರ ಸಂಗ ’ಹೆಜ್ಜೇನು ಸವಿದಂತೆ’. Best wishes.
ಲೇಖನ ಓದಿ ಬರೆದ ಉಳಿದ ವರಿಗೂ ಧನ್ಯವಾದಗಳು.
LikeLiked by 1 person
ಅದ್ಭುತ ವ್ಯಕ್ತಿಯ ಬಗ್ಗೆ ಬರೆದ ಅದ್ಭುತ ಲೇಖನ !! ಡಾ.ಪಾಂಡುರಂಗಿಯವರು ಕನ್ನಡಿಗರು , ಹಳೆಯ ಧಾರವಾಡ ಅಂದರೆ ನಮ್ಮ ಜಿಲ್ಲೆಯವರೇ ಎಂಬುದು ನಮ್ಮ ಹೆಮ್ಮೆ ,ಅಭಿಮಾನ.ಆದರೆ ವಿಪರ್ಯಾಸವೆಂದರೆ ನಮಗೆ ಏನೂ ಗೊತ್ತಿಲ್ಲದೇ ಇದ್ದದ್ದು ,ಬಹುತೇಕ ಬಹಳಷ್ಟು ಜನಕ್ಕೆ. ಶ್ರೀವತ್ಸ ದೇಸಾಯಿಯವರ ಈ ಲೇಖನ ಡಾ.ಪಾಂಡುರಂಗಿಯವರ ಬದುಕು,ಸಾಧನೆ ,ಕಾರ್ಯಕ್ಷೇತ್ರದ ವ್ಯಾಪ್ತಿಯ ಬಗ್ಗೆ ಬೆಳಕು ಚೆಲ್ಲಿ ಜನರಲ್ಲಿ ಅದರ ಅರಿವು ಮೂಡಿಸಿದ್ದು ತುಂಬಾ ಸ್ತುತ್ಯ.ಇನ್ನೂ ಇಂತಹ ಅದೆಷ್ಟು ಅಪರೂಪದ ವ್ಯಕ್ತಿತ್ವಗಳು ಬೆಳಕು ಕಾಣದೇ ಹೋಗಿವೆಯೋ ಬಲ್ಲವರಾರು ? ನಿಜಕ್ಕೂ ಡಾ.ವಾಸುದೇವ ಪಾಂಡುರಂಗಿಯವರು ಮನುಕುಲಕ್ಕಿತ್ತ ದೇಣಿಗೆ ಅತ್ಯಮೂಲ್ಯ.ಅವರು ಕೈಗೆತ್ತಿಕೊಂಡ ಎಲ್ಲ ಯೋಜನೆಗಳೂ ಯಾವ ತಡೆಯಿಲ್ಲದೇ ಮುಂದುವರೆ’ಯಲಿ ಎಂಬ ಹಾರೈಕೆ.ಇಂಥ ಅಪರೂಪದ ವ್ಯಕ್ತಿಯ ವಿಶಿಷ್ಟ ಪರಿಚಯ ಲೇಖನ ನೀಡಿದ ಡಾ.ಶ್ರೀವತ್ಸ ದೇಸಾಯಿಯವರಿಗೆ ಧನ್ಯವಾದಗಳು. ಡಾ.ವಾಸುದೇವ ಪಾಂಡುರಂಗಿಯವರಿಗೆ ನನ್ನದೂ ಒಂದು ಶ್ರದ್ಧೆಯ ಅಶ್ರುತರ್ಪಣ.ಸೋಲರಿಯದ ಈ ಸಾಧಕನಿಗೆ ನಮೋನ್ನಮಃ !!
ಸರೋಜಿನಿ ಪಡಸಲಗಿ
LikeLiked by 2 people
ವೈದ್ಯಕೀಯ ಕ್ಷೇತ್ರದಿಂದ ಬಹಳ ದೂರವಿರುವ ನನ್ನಂತಹವರಿಗೆ ಈ ಅದ್ಭುತ ವೈದ್ಯ ಅದಕ್ಕೂ ಮಿಗಿಲಾದ ಅದ್ಭುತ ವ್ಯಕ್ತಿ ಡಾ. ಪಾಂಡುರಂಗಿ ಪರಿಚಯವಿರಲಿ ಅವರ ಹೆಸರೂ
ಕೂಡ ಕೇಳಿರಲಿಲ್ಲ. ಶ್ರೀವತ್ಸ ದೇಸಾಯಿ ಅವರ ಲೇಖನ ಓದಿ ಈವಿಶ್ವಮಾನವನ ಹೋರಾಟ, ಸಾಧನೆ, ವ್ಯಕ್ತಿತ್ವ ಹಾಗೂ ಮಾನವಕುಲಕ್ಕಿತ್ತ ಕೊಡುಗೆಗಳ ಅರಿವಾಯಿತು.
ಉನ್ನತ ಧ್ಯೇಯಗಳಿಂದ ಕೈಗೆತ್ತಿಕೊಂಡು ಆಜೀವಪರ್ಯಂತ ಶ್ರಮಿಸಿದ ಇವರ ಎಲ್ಲ ಯೋಜನೆಗಳೂ ಅಡಚಣಿಯಿಲ್ಲದೆ ಮುಂದುವರಿಯಲಿ . ಇಂತಹ ಅಮೂಲ್ಯ ವ್ಯಕ್ತಿಯ ಪರಿಚಯ ಲೇಖನ ನೀಡಿದ ಶ್ರೀವತ್ಸ ದೇಸಾಯಿ ಅವರಿಗೆ ನನ್ನ ಧನ್ಯವಾದಗಳು.
LikeLiked by 1 person
Dear Desai Avare, Very interesting touching Hope Dr Pandurangi’s work will continue.
LikeLike
ಧನ್ಯವಾದಗಳು ರಾಮಮೂರ್ತಿಯವರೇ. ತಕ್ಷಣ ಓದಿ ಸ್ಪಂದಿಸಿದಿರಿ!
LikeLike