ಹಂಪೆ ಪ್ರವಾಸ ೨: ತುಂಗಭದ್ರ ಅಣೆಕಟ್ಟು – ಉಮಾ ವೆಂಕಟೇಶ್ ಬರೆದ ಲೇಖನ

ಉಮಾ ವೆಂಕಟೇಶ್ ತಮ್ಮ ಹಂಪೆ ಪ್ರವಾಸ ಲೇಖನ ಸರಣಿಯ ಎರಡನೇ ಭಾಗವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಮೊದಲನೆಯ ಲೇಖನದಲ್ಲಿ ದರೋಜಿ ಕರಡಿಧಾಮದ ಬಗ್ಗೆ ಕಣ್ಣಿಗೆ ಕಟ್ಟುವಂತೆ ಬರೆದು ವಿವರಗಳನ್ನು ಕೊಟ್ಟಿದ್ದರು (http://wp.me/p4jn5J-16s). ಇವತ್ತಿನ ಲೇಖನದಲ್ಲಿ ತುಂಗಭದ್ರ ಅಣೆಕಟ್ಟಿನ ಬಗ್ಗೆ ಉಮಾ ಉತ್ಸಾಹದಿಂದ ಬರೆದಿದ್ದಾರೆ. ಸಹೃದಯ ಓದು, ಹಂಚುವಿಕೆ ನಮ್ಮದಾಗಲಿ! -ಸಂ.

ಹಂಪೆ ಪ್ರವಾಸ- ಭಾಗ ೨: ತುಂಗಭದ್ರ ಅಣೆಕಟ್ಟು (T.B.Dam)

ಉಮಾ ವೆಂಕಟೇಶ್

tb-dam-5
ತುಂಗಭದ್ರ ಅಣೆಕಟ್ಟು

“ಒಂದೆ ಒಂದು ಹೊಸ ಹಾಡು, ಎಂದೂ ಮರೆಯದ ಈ ಹಾಡು…”

‘ಸಾಕು ಮಗಳು’ ಕನ್ನಡ ಚಲನಚಿತ್ರವನ್ನು ನೋಡಿದ್ದವರಿಗೆ, ಈ ಮೇಲಿನ ಹಾಡಿನ ಸನ್ನಿವೇಶವನ್ನು ಹಂಪೆ ಮತ್ತು ಹೊಸಪೇಟೆಯ ಸಮೀಪವಿರುವ ಪ್ರಸಿದ್ಧ ತುಂಗಭದ್ರ ಅಣೆಕಟ್ಟಿನ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿಯುತ್ತದೆ. ೧೯೬೩ನೆಯ ಇಸವಿಯಲ್ಲಿ ಬಿಡುಗಡೆಯಾದ ಈ ಚಿತ್ರದ ಹಾಡನ್ನು ನೋಡಿದಾಗ, ಟಿ.ಬಿ.ಡ್ಯಾಮ್ ಸುತ್ತಮುತ್ತಲ ರಮ್ಯವಾದ ಪ್ರಕೃತಿಯನ್ನು ಅಲ್ಲೇ ಹೋಗಿ ನೋಡಬೇಕೆನ್ನುವ ಬಯಕೆಯಾಗುವುದು ಸಹಜ. ಆದರೆ ಆ ಚಿತ್ರದಲ್ಲಿ ಎಲ್ಲವನ್ನೂ ಕಪ್ಪು-ಬಿಳುಪಿನಲ್ಲಿ ಚಿತ್ರೀಕರಿಸಲಾಗಿದೆ.

tb-dam-6
ನಯನಮನೋಹರ ಹಸಿರುರಾಶಿ

ಅದೇ ಸ್ಥಳವನ್ನು ನಿಸರ್ಗದ ವರ್ಣರಂಜಿತ ಪರಿಸರದಲ್ಲಿ ನೋಡಿದಾಗ, ಅದರ ಗಮ್ಮತ್ತೇ ಬೇರೆ. ಇದನ್ನೇ ನಮ್ಮ ಹಂಪೆ ಪ್ರವಾಸದ ಮೊದಲ ದಿನದ ಎರಡನೆಯ ಭಾಗದಲ್ಲಿ ನಾವು ನೋಡಿ ಆನಂದಿಸಿದೆವು. ಕಾರಿನ ಡ್ರೈವರ್ ನಮ್ಮನ್ನು ಅಣೆಕಟ್ಟಿನ ಹತ್ತಿರದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಬಿಟ್ಟು, “ಸಾರ್ ಇಲ್ಲಿಂದ ಪ್ರೈವೇಟ್ ಬಸ್ಸುಗಳಿವೆ, ಅವರು ನಿಮ್ಮನ್ನು ಡ್ಯಾಮ್ ಹತ್ತಿರಕ್ಕೆ ಕರೆದೊಯ್ಯುತ್ತಾರೆ”, ಎಂದು ತನ್ನ ಪಾಡಿಗೆ ಸಿಗರೇಟ್ ಸೇದುವುದರಲ್ಲಿ ಮಗ್ನನಾದ. ಸರಿ, ನಾವು ಅಲ್ಲಿರುವ ಸುರಕ್ಷಣಾ ದಳದ ಕ್ಷ-ಕಿರಣ ಯಂತ್ರದ ಮೂಲಕ ಹಾಯ್ದು ಒಳಹೊಕ್ಕೆವು. ಅಂದಹಾಗೆ, ಇತ್ತೀಚೆಗೆ ನಡೆದಿರುವ ಉಗ್ರಗಾಮಿ ಚಟುವಟಿಕೆಗಳ ಹಿನ್ನೆಲೆಯಲ್ಲಿ, ಈ ಸ್ಥಳದಲ್ಲಿ ಸುರಕ್ಷಣಾ ಕ್ರಮಗಳನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂತು.

tb-dam-7
ಅಣೆಕಟ್ಟನ್ನು ಪ್ರವೇಶಿಸುತ್ತಾ…

ತುಂಗಭದ್ರ ನದಿ ಕರ್ನಾಟಕದ ಜೀವನಾಡಿ ನದಿಗಳಲ್ಲಿ ಒಂದು. ಕೃಷ್ಣಾ ನದಿಯ ಉಪನದಿಗಳಲ್ಲಿ ಒಂದಾದ ಈ ನದಿಗೆ, ಹೊಸಪೇಟೆಯ ಹತ್ತಿರದಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ. ನೀರಾವರಿ, ವಿದ್ಯುಚ್ಛಕ್ತಿ ಮತ್ತು ಪ್ರವಾಹ ನಿರ್ವಹಣೆಗಳ ಬಹುಪಯೋಗಿ ಕಾರ್ಯನಿರ್ವಹಿಸುವ ಈ ಅಣೆಕಟ್ಟನ್ನು ನೋಡಿದಾಗ ಮನಸ್ಸಿನಲ್ಲಿ ಬಹಳ ಹೆಮ್ಮೆ ಗೌರವಗಳು ಮೂಡುತ್ತವೆ. ಅಣೆಕಟ್ಟಿನ ಬಲಬದಿಯಲ್ಲಿರುವ ಸಂಡೂರಿನ ಬೆಟ್ಟವು ಸಂಜೆಯ ಸೂರ್ಯನ ಬೆಳಕಿನಲ್ಲಿ ಲಕಲಕಿಸುತ್ತಿತ್ತು. ಸುತ್ತಲಿನ ಹಸಿರುರಾಶಿ ನಯನಮನೋಹರವಾಗಿ ಮನಸ್ಸಿಗೆ ಮುದನೀಡಿತ್ತು. ತುಂಗೆ ಮತ್ತು ಭದ್ರ ನದಿಗಳ ಸಂಗಮದಿಂದ ಉತ್ಪತ್ತಿಯಾದ ಈ ನದಿ, ಕರ್ನಾಟಕದ ಜೀವಿಗಳ ಜೀವನಾಡಿಯೇ ಸರಿ!

ಬಸ್ಸಿನಲ್ಲಿ ಕುಳಿತು ಅದರ ಜೊತೆಗೆ ಚೆನ್ನಾಗಿ ಕುಲುಕಾಡುತ್ತಾ ಟಿ.ಬಿ. ಅಣೆಕಟ್ಟಿನ ಸಮೀಪದ ಜಾಗಕ್ಕೆ ತಲುಪಿದೆವು. ನನ್ನ ಬಾಲ್ಯದಲ್ಲಿ ಇಲ್ಲಿ ಬಂದಾಗ ನನಗೆ ನೆನಪಿರುವಂತೆ, ಇಲ್ಲಿ ಕೈಲಾಸ ಮತ್ತು ವೈಕುಂಠ ಎಂಬ ಎರಡು ಎತ್ತರದ ಜಾಗಗಳಿವೆ. ಅಲ್ಲಿ ನಿಂತು ಅಣೆಕಟ್ಟನ್ನು ವೀಕ್ಷಿಸುವುದು ಒಂದು ಅಪೂರ್ವ ಅನುಭವ!tb-dam-2

ವಿಶಾಲವಾದ ತುಂಗಭದ್ರೆಯ ಜಲರಾಶಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಅಣೆಕಟ್ಟನ್ನು ನೋಡಿದಾಗ, ಇದರ ಹಿಂದಿರುವ ಸಾವಿರಾರು ಕಾರ್ಮಿಕರು, ಇಂಜಿನೀಯರುಗಳ ಬಗ್ಗೆ ಮನಸ್ಸಿನಲ್ಲಿ ಗೌರವ ಮತ್ತು ಹೆಮ್ಮೆಯ ಭಾವಗಳು ಉಕ್ಕುವುದರಲ್ಲಿ ಆಶ್ಚರ್ಯವೇನಿಲ್ಲ. ನನ್ನ ತವರೂರು ಮೈಸೂರಿನಲ್ಲಿರುವ ಪ್ರಸಿದ್ಧ ಜಲಾಶಯ ಕೆ.ಆರ್.ಎಸ್ ಅಣೆಕಟ್ಟನ್ನು ನೋಡಿದಾಗ ಮನದಲ್ಲಿ ಒಮ್ಮೆಗೆ ಸರ್.ಎಮ್. ವಿಶ್ವೇಶ್ವರಯ್ಯನವರ ಚಿತ್ರ ಕಣ್ಣಮುಂದೆ ನಿಲ್ಲುತ್ತದೆ. ಇಲ್ಲಿ ಈ ಅಣೆಕಟ್ಟಿನ ರಚನೆಗೆ ಕಾರಣರಾದ ಮುಖ್ಯ ಇಂಜಿನಿಯರ್ ಶ್ರಿ ಎಮ್.ಎಸ್. ತಿರುಮಲೆ ಅಯ್ಯಂಗಾರ್ ಅವರ ಪ್ರತಿಮೆಯನ್ನು ನಿಲ್ಲಿಸಲಾಗಿದೆ.

ಇಳಿ ಸಂಜೆಯ ಸೂರ್ಯನ ಕಿರಣಗಳ ಹಿನ್ನೆಲೆಯಲ್ಲಿ, ಈ ಅಣೆಕಟ್ಟಿನ ಸುತ್ತಮುತ್ತಾ ನಿರ್ಮಿಸಿರುವ ಉದ್ಯಾನವನ, ದೂರದ ಸಂಡೂರಿನ ಗುಡ್ಡಗಳು, ಜುಲೈ ತಿಂಗಳ ಮಳೆಗಾಲದ ಮೋಡಗಳು, ಎಲ್ಲವೂ ಕಣ್ಣಿಗೆ ಮನೋಹರವೆನಿಸಿತ್ತು. ಇಲ್ಲಿನ ಉದ್ಯಾನವನದಲ್ಲಿ ಸಂಗೀತದ ಕಾರಂಜಿಗಳು ಪ್ರೇಕ್ಷಕರಿಗೆ ಮತ್ತೊಂದು ಆಕರ್ಷಕ ಸ್ಥಳವಾಗಿದೆ. ಅಣೆಕಟ್ಟಿನ ಬಲಬದಿಯಲ್ಲಿರುವ ಜಲಾಶಯದ ನೀರಿನ ರಾಶಿ ನೋಡುಗರ ಕಣ್ಣಿಗೆ ಅಪಾರವೆನಿಸಿ, ಅದರ ಉಪಯುಕ್ತತೆಯ ಬಗ್ಗೆ ಮನಸ್ಸಿನಲ್ಲಿ ಆಲೋಚನಾ ತರಂಗಗಳನ್ನೆಬ್ಬಿಸುವಲ್ಲಿ ಸಫಲವಾಗುತ್ತದೆ. ಸಂಜೆಯ ತಂಪಾದ ಗಾಳಿಯಲ್ಲಿ ತೊನೆದಾಡುವ ಸರ್ವೆ ಮರಗಳ ಸುಯ್ ಸುಯ್ ಸದ್ದು, ಅಲ್ಲಿಯೇ ಗಂಭೀರವಾಗಿ ನಿಂತ ಅಶೋಕ ವೃಕ್ಷಗಳು, ಬೆಳ್ಳನೆಯ ಪುಷ್ಪಗಳಿಂದ ರಂಜಿತವಾದ ದೇವಕಣಿಗೆಲೆ ಮರಗಳು, ಜಲಾಶಯದ ಅಪಾರವಾದ ನೀರಿನಲ್ಲಿ ಅಲ್ಲಲ್ಲೇ ತೇಲಾಡುವ ದೋಣಿಗಳು ನೋಡುಗರ ಮನದಲ್ಲಿ ಕವಿತಾ ಭಾವವನ್ನು ಉಕ್ಕಿಸುತ್ತವೆ. ಸಂಜೆಯ ಸೂರ್ಯ ಅಸ್ತಂಗತನಾಗುತ್ತಿದ್ದ. ಸಂಧ್ಯೆಯ ಹೊಂಬಣ್ಣದ ಹಿನ್ನೆಲೆಯಲ್ಲಿ ಶೋಭಿಸುತ್ತಿದ್ದ ನೀರರಾಶಿ, ಗಿಡಮರಗಳ ನೆರಳುತಿಟ್ಟಗಳು, ಆಗಸದಲ್ಲಿ ಹಾರಾಡುತ್ತಿದ್ದ ಪಕ್ಷಿಗಳ ಕಲರವ ಮನಸ್ಸಿಗೆ ಒಂದು ನಿರಾಳವಾದ ನೆಮ್ಮದಿಯನ್ನು ಉಂಟುಮಾಡಿತ್ತು.

tb-dam-4
ಸಂಜೆಯ ಸೂರ್ಯನ ನೆರಳು-ಬೆಳಕಿನಾಟ

ಹಿಂದೆ ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯವನ್ನಾಳುವಾಗ ಇಲ್ಲಿಯೇ ಹರಿಯುತ್ತಿದ್ದ ಈ ನದಿಗೆ, ಅಂದು ಯಾರೂ ಅಣೆಕಟ್ಟನ್ನು ನಿರ್ಮಿಸಿದ ದಾಖಲೆಗಳಿಲ್ಲ. ಆದರೂ ಈ ನದಿ ಅಂದಿನ ಜನಜೀವನದಲ್ಲಿ ಒಂದು ಮುಖ್ಯವಾದ ಪಾತ್ರವನ್ನಂತೂ ವಹಿಸಿತ್ತು. ಸುಮಾರು 49.39 ಅಡಿಗಳ ಎತ್ತರವಿರುವ ಈ ಅಣೆಕಟ್ಟು, 101 tmcft ಗಳಷ್ಟು ಮೊತ್ತದ ನೀರನ್ನು ಶೇಖರಿಸುವ ಜಲಾಶಯವನ್ನು ನಿರ್ಮಿಸಿದೆ. ಇದರಿಂದ ಪೂರ್ಣ ಕರ್ನಾಟಕ ರಾಜ್ಯದ ನೀರಾವರಿ, ಮತ್ತು ನೆರೆಯ ಆಂದ್ರಪ್ರದೇಶದ ವಿದ್ಯುಚ್ಛಕ್ತಿ ಪೂರೈಕೆಯಲ್ಲಿ ಗಮನಾರ್ಹವಾದ ಪಾತ್ರವಹಿಸಿರುವ ಈ ನದಿಯ ಅಣೆಕಟ್ಟಿನ ಪಾತ್ರ ಬಹಳ ಹಿರಿದು. ೧೬ನೆಯ ಶತಮಾನದವರೆಗೂ ತನ್ನ ಸುವರ್ಣಾಳ್ವಿಕೆಯಲ್ಲಿ ಮೆರೆದ ವಿಜಯನಗರ ಸಾಮ್ರಾಜ್ಯದ ಹಿರಿಮೆ-ಗರಿಮೆ ಮತ್ತು ಸಂಸ್ಕೃತಿಗಳ ನೆನಪನ್ನು ಹೊತ್ತು ಗಂಭೀರವಾಗಿ ಇಂದಿಗೂ ಹರಿಯುತ್ತಿರುವ, ತುಂಗಭದ್ರೆಯ ಚೆಲುವು ನಮ್ಮ ಮನಗಳನ್ನು ಪೂರ್ಣವಾಗಿ ಅಪಹರಿಸಿತ್ತು.

ಕತ್ತಲಾವರಿಸುತ್ತಾ ಸುತ್ತಲಿನ ಮರಗಳು ಕ್ರಮೇಣವಾಗಿ ಮಸುಕಾಗುತ್ತಿತ್ತು. ಅಲ್ಲಿ ನೆರೆದ ಜನವೃಂದ ಸಂಗೀತ ಕಾರಂಜಿಯ ವೈಭವನ್ನು, ವಿದ್ಯುದ್ದೀಪಗಳ ಹಿನ್ನೆಲೆಯಲ್ಲಿ ಸವಿಯಲು ಜಮಾಯಿಸುತ್ತಿರುವಾಗಲೇ ನಾವು ಅಲ್ಲಿಂದ ಕಾಲ್ತೆಗೆದೆವು. ಮರುದಿನ ಹಂಪೆಯ ಶಿಲ್ಪಕಲೆ, ಚರಿತ್ರೆಯ ವೈಭವನ್ನು ಒಂದು ಪೂರ್ಣದಿನ ನೋಡುವ ಆಸೆ ನಮ್ಮಲ್ಲಿತ್ತು. ಹಾಗಾಗಿ ಆಯಾಸಗೊಂಡ ದೇಹಗಳು ಹೊಸಪೇಟೆಯ ಹೋಟಲಿನ ಹಾಸಿಗೆಯನ್ನು ಆಗಲೆ ಬಯಸುತ್ತಿದ್ದರಿಂದ, ತುಂಗಭದ್ರೆ ಅಣೆಕಟ್ಟಿನ ಪ್ರವಾಸಕ್ಕೆ ಮುಕ್ತಾಯ ಹಾಡಿ, ನಮ್ಮ ಕಾರಿನತ್ತ ಹೆಜ್ಜೆ ಹಾಕಿದೆವು.

tb-dam-1
ಸಂಗೀತ ಕಾರಂಜಿ

 – ಎಲ್ಲಾ ಚಿತ್ರಗಳು: ಉಮಾ ವೆಂಕಟೇಶ್

5 thoughts on “ಹಂಪೆ ಪ್ರವಾಸ ೨: ತುಂಗಭದ್ರ ಅಣೆಕಟ್ಟು – ಉಮಾ ವೆಂಕಟೇಶ್ ಬರೆದ ಲೇಖನ

  1. ಸೊಗಸಾದ ಲೇಖನ. ಮತ್ತೊಮ್ಮೆ ನೋಡಿಬಂದಂಗಾಯಿತು. ಇನ್ನೂ ಬರೆಯುತ್ತಿರಿ

    Liked by 1 person

  2. ಚೊಕ್ಕದಾಗಿ, ಚಿಕ್ಕದಾದ ಲೇಖನ, ನಮ್ಮನ್ನು ತುಂಗಭದ್ರೆಯ ತಟಕ್ಕೊಯ್ದು, ಮರಳಿಸುವುದರಲ್ಲಿ ಸಾರ್ಥಕವಾಗಿದೆ.

    Liked by 1 person

  3. ಹಂಪಿಗೆ ಹಾಳು ಹಂಪಿ ಅಂತ ಯಾಕೆ ಅಂತಾರೆ ಅಂತ ನನ್ನ ಯೋಚನೆ. ಅಲ್ಲಿನ ಶಿಲ್ಪಕಲೆಯ ವೈಭವ ಎಲ್ಲಿ ಸಿಕ್ಕೀತು ? ಈಗ ಉಮಾ ಅವರ ತುಂಗಭದ್ರಾ ಆಣೆಕಟ್ಟೆಯ ವರ್ಣ ರಂಜಿತ ಲೇಖನ ಆ ವೈಭವಕ್ಕೆ ರಂಗು ತುಂಬಿದೆ. ನೋಡಿದ ಸ್ಥಳವೇ ಆದರೂ ಅದರ ರಮಣೀಯತೆ ಹೆಚ್ಚಿದಂತನಿಸುತ್ತಿದೆ ಉಮಾ ಅವರ ಕಣ್ಣಿಂದ ಆ ಡ್ಯಾಮ .ನೋಡಿದಾಗ . ಕಣ್ಣಿಗೆ ಕಟ್ಟುವಂಥ ವರ್ಣನೆ, ಬರಹ.ಮನ ಮೋಹಕ ಲೇಖನಕ್ಕೆ ಧನ್ಯವಾದಗಳು ಉಮಾ ಅವರೇ.
    ಸರೋಜಿನಿ ಪಡಸಲಗಿ.

    Liked by 2 people

  4. ಅಣೆಕಟ್ಟಿನ ಬಳಿ ನೀವು ಕಳೆದ ಸಂಜೆಯ ವರ್ಣನೆ ರಮ್ಯವಾಗಿಯೂ ಹಾಗು ಕಾವ್ಯಮಯವಾಗಿದೆ, ಚಿತ್ರಗಳು ನಿಮ್ಮ ಸೊಗಸಾದ ವರ್ಣನೆಗೆ ಪೂರಕವಾಗಿವೆ.
    ನೀರು ಹಸಿರು ಯಾವಾಗಲೂ ಕಣ್ಣಿಗೆ ತಂಪು! ಜೊತೆಗೆ ಸಂಜೆಯ ರಂಗು ಹಾಗು ಹಿತವಾದ ಬಿಸಿಲಿದ್ದರೆ ಇನ್ನೂ ಮಿಗಿಲು. ಇಂಗ್ಲೆಂಡಿನಲ್ಲಿ ಈ ಹಸಿರಿದ್ದರೂ ಆ ಬಿಸಿಲು ಬೆಚ್ಚನೆ ಅನುಭವ ಸಿಗುವುದು ಕಡಿಮೆ. ಒಟ್ಟಿನಲ್ಲಿ… short and sweet report!

    Liked by 1 person

  5. ನಾನು ಎಷ್ಟೋ ದಶಕಗಳ ಹಿಂದೆ ಹಂಪಿಗೆ ಹೋಗಿದ್ದೆ. ಆಗ ಅದು ’ಹಂಪಿ. ಹಾಳು ಕೊಂಪಿ’ ಗೆ ಅನ್ವರ್ಥಕವಾಗಿ ಇದ್ದ ನೆನಪು. ಮಸುಕು ಮಸುಕಾಗಿದೆ. ಇತ್ತೀಚೆಗೆ ಹೋಗುವ ಅವಕಾಶ ಬಂದಿಲ್ಲ. ಎಷ್ಟೊಂದು ಬಲಾಯಿಸಿದೆ, ಎಷ್ಟೂ ರಮಣೀಯವಾಗೆದೆ ಎಂಬುದನ್ನು ಅತಿ ಸುಂದರನಾಗಿ ತಮ್ಮ ಶಬ್ದಗಳಲ್ಲಷ್ಟೇ ಅಲ್ಲ, ಆಕರ್ಷಕ ಫೋಟೋಗಳನ್ನೂ ಕ್ಲಿಕ್ಕಿಸಿ ಲೇಖನದ ಸೊಬಗನ್ನು ಹೆಚ್ಚು ಮಾಡಿದ್ದಕ್ಕೆ ಉಮಾ ಅವರಿಗೆ ಅಭಿನಂದನೆಗಳು. ಮತ್ತೆ ಅಲ್ಲಿಗೆ ಹೋಗುವ ಅವಕಾಶ ದೊರೆಯುವವರೆಗೆ ಈ ಚಿತ್ರ ಕಣ್ಣಲ್ಲಿರುತ್ತದೆ. ಈ ಸರಣಿಯಲ್ಲಿ ಮುಂದಿನದೊಂದು ಭಾಗವಿದೆಯೇನೋ ಎಂದು ಎದುರು ನೋಡುವೆ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.