ಕ್ಲಿಕ್ ಕವನ, “ನೀ ಹಿಡಿದ ಚಿತ್ರಗಳ ಸಾಲು” – ಡಾ. ಶ್ರೀವತ್ಸ ದೇಸಾಯಿ.

ಇಣುಕುವ ಕ್ಯಾಮೆರಾದ ಹಿಂದೆ ನಿಂತು ಪ್ರತಿಫಲಿಸುವ ಆ ಮನಸ್ಸು ಯಾವುದೋ?

ಕನ್ನಡದ ಅಂತರ್ ಜಾಲ ಪತ್ರಿಕೆ ‘ಅವಧಿ’ ನಡೆಸುತ್ತಿರುವ ‘ಕ್ಲಿಕ್ ಆಯ್ತು ಕವಿತೆ’ ಸರಣಿಯಲ್ಲಿ ಇತ್ತೀಚಿಗೆ ಒಂದು ಕ್ಯಾಮೆರಾದ ಛಾಯಾಚಿತ್ರವನ್ನು ಪ್ರಕಟಿಸಿ ಕವಿತೆಗಳನ್ನು ಆಹ್ವಾನಿಸಿದ್ದರು. ಆ ಫೋಟೋ ನೋಡಿ ಪ್ರಭಾವಿತರಾದ ನಮ್ಮ ‘ಅನಿವಾಸಿ’ ಬಳಗದ ಸಂಚಾಲಕ ಡಾ. ಶ್ರೀವತ್ಸ ದೇಸಾಯಿ ತಮ್ಮದೇ ಕ್ಯಾಮೆರಾ ಲೋಕಕ್ಕೆ ಜಾರಿದ್ದರು – ಕಾರಣ, ಅವರು ಛಾಯಾಗ್ರಹಣ, ಕ್ಯಾಮೆರಾ ಕಲೆ, ಲೆನ್ಸುಗಳು, ವಿಡಿಯೋಗ್ರಫಿಗಳಲ್ಲಿ ಪಳಗಿದವರು, ಅವುಗಳ ಬಗ್ಗೆ ಬಹಳಾ ಪ್ರೀತಿಯಿಟ್ಟವರು. ಅಷ್ಟೇ ಅಲ್ಲ, ಆ ಮಣ್ಣು ಮೆತ್ತಿದ ಹಳೆಯ ಕ್ಯಾಮೆರಾವನ್ನು ನೋಡಿದಾಗ ಅವರಿಗೆ ಮೊದಲು ಹೊಳೆದಿದ್ದು ಆ ಒಂದು ಕ್ಯಾಮೆರಾ ಒಬ್ಬ ವರದಿಗಾರನ ಹಚ್ಛೆಯೇನೋ ಎಂದು. ಅವರ ಬಳಿಯೂ ಹಿಂದೊಮ್ಮೆ ಎಕ್ಸಾಕ್ಟಾ ಮತ್ತು ಇತರೆ ೪೯ ಮಿಮಿ ಲೆನ್ಸ್ ಕ್ಯಾಮೆರಾಗಳು ಇದ್ದವಂತೆ. ಅಂತಹ ಆಸಕ್ತಿಯಿಂದಲೇ ಅವರು ಪತ್ರಿಕಾ ವರದಿಗಾರರ ಕೆಲ ಜಗತ್ ಪ್ರಸಿದ್ಧ ಚಿತ್ರಗಳನ್ನು ನೋಡುತ್ತಾ ಅವುಗಳ ಹಿಂದಿರುವ ಮನಸ್ಸುಗಳ ಬಗ್ಗೆ ಕೂಡ ಪರ್ಯಾಲೋಚಿಸಿದ್ದಾರೆ. “ಎಷ್ಟೋ ಬಾರಿ ಆ ಛಾಯಾಚಿತ್ರಗಾರರು, ಅಜರಾಮರ ಚಿತ್ರಗಳನ್ನು ತೆಗೆದ ಅವರ ಸೂಕ್ಮ ಒಳಗಣ್ಣು, ಕ್ಲಿಕ್ ಮಾಡಿದ ಕ್ಯಾಮೆರಾಗಳು ಏನಾದವೋ ಎಂದು ಕೂಡ ನಾನು ಆಲೋಚಿಸಿದ್ದಿದೆ”, ಅನ್ನುತ್ತಾರೆ ಶ್ರೀವತ್ಸ.

ಕ್ಯಾಮೆರಾ ಲೋಕದಲ್ಲಿದ್ದ ಡಾ. ಶ್ರೀವತ್ಸ ದೇಸಾಯಿ ಕೆಲವು ದಿನಗಳಾದ ಮೇಲೆ ಆ ಎಕ್ಸಾಕ್ಟಾದ ಬಗ್ಗೆ ಮನದಲ್ಲಿ ಮೂಡಿದ್ದ ಮಾತನ್ನ ಕಾಗದದ ಮೇಲೆ ಬಿಡಿಸಿಯೇಬಿಟ್ಟರು. ಆ ಕವನ ಮತ್ತು ಅವರ ಆಯ್ಕೆಯ ಪತ್ರಿಕಾಪ್ರಪಂಚದ ಕೆಲ ಸಾಂಕೇತಿಕ ಛಾಯಾಚಿತ್ರಗಳು ಈ ಶುಕ್ರವಾರದ ಪ್ರಕಟಣೆಯಲ್ಲಿ.

ಜೊತೆಗೆ ಇನ್ನೊಂದು ಬೋನಸ್! ‘ಅನಿವಾಸಿ’ಯ ಹಿತೈಷಿಗಳೂ, ಸಹೃದಯ ಓದುಗರೂ ಆದ ಶ್ರೀಮತಿ ಸರೋಜಿನಿ ಪಡಸಲಗಿ ಕೂಡ ಅದೇ ಎಕ್ಸಾಕ್ಟ ಕ್ಯಾಮೆರಾ ಚಿತ್ರ ನೋಡಿ ಕವನ ಬರೆದಿದ್ದಾರೆ. ಒಂದೇ ಚಿತ್ರ, ಭಿನ್ನ ಭಾವನೆ – ಅದೇ ಈ ‘ಕ್ಲಿಕ್ ಕವನ’ ದ ಕಿಕ್!  -ಸಂ.

 ಕ್ಲಿಕ್ ಕವನ “ನೀ ಹಿಡಿದ ಚಿತ್ರಗಳ ಸಾಲು”

ಅಲೆ ಅಲೆಯಾಗಿ ತೇಲಿ ಬರುತ್ತಿವೆ

ನೀ ಹಿಡಿದ ಚಿತ್ರಗಳ ಸಾಲು

ಕ್ಷಣಾರ್ಧದಲ್ಲಿ ಸೆರೆಹಿಡಿದವು

ಜಗವೆಲ್ಲ ಪ್ರದಕ್ಷಿಣೆ ಮಾಡಿದವು

ಪ್ರೇಮಿಗಳ ಕಳುವಿನ ಚುಂಬನ

ಕಳ್ಳ ಧುರೀಣರ ಹಣದ ಹಗರಣ

ಧರ್ಮಗುರುಗಳ ಅಧರ್ಮ ವರ್ತನೆ

ಧರ್ಮಾಂಧರ ಅಧಮ ಕೃತಿಗಳು

ಗಿರಿಕಂದರಗಳ ಸುಂದರ ಸ್ಮೃತಿಗಳು ಸಹ!

ಈಗೇಕೀ ನಿನ್ನವಸ್ಥೆ?

ಹಿಮಪರ್ವತದಿಂದ ಉರುಳಿದೆಯೋ?

ನಿನ್ನೊಡೆಯನ ಗುಂಡಿಕ್ಕಿ ತುಳಿದರೋ?

ಸೆರೆಮನೆಯಲ್ಲಿ ಕೊಳೆತನೋ?

ಆತನಿಗೇ ಸ್ಮಾರಕವಿಲ್ಲದಾಗ

ಮ್ಯೂಸಿಯಮ್ಮಿನಲ್ಲಿ ನಿನಗಿಲ್ಲ ಜಾಗ!

ಅಕಟಕಟ, ನನ್ನ ಪ್ರೀತಿಯ ಎಕ್ಸಾಕ್ಟಾ!

– ಶ್ರೀವತ್ಸ ದೇಸಾಯಿ

images
ಎಕ್ಸಾಕ್ಟಾ!

ಕ್ಲಿಕ್ ಕವನ “ಕಾಲಾಯ  ತಸ್ಮೈ  ನಮಃ”

ಮುಪ್ಪು ಆವರಿಸಿಯೇ  ಬಿಟ್ತಲ್ಲಓ ಚಲುವೆ!
ಕಾಲನ ದಾಳಿ  ನಿನ್ನ  ನುಜ್ಜುಗುಜ್ಜು  ಮಾಡಿಯೇ ಬಿಟ್ತಲ್ವೇ

ನಿನ್ನ ಹೊಳಪುಗಣ್ಣು  ನಾಚಿಸಿತ್ತು ಆಗ ನವ ವಧುವನ್ನು
ಅರಳುವ ಹೃದಯಗಳಲ್ಲಿ  ಹುಟ್ಟು  ಹಾಕುತಿತ್ತು  ಕನಸೊಂದನ್ನು
ಅಲ್ಲಿಇಲ್ಲಿ ಅತ್ತ ಇತ್ತ ಸುತ್ತಲಿನ ಬೆಳಕನ್ನು
ಬಿಡದೆ  ಒಂದಿನಿತೂ  ತುಂಬಿಸಿದೆ  ನಿನ್ನ ಎದೆಯನ್ನು

ಆ ಗುಡ್ಡ ಆ ಬೆಟ್ಟ  ಆ ಕಾಡು  ಆ ನಾಡು
ಆ ಸೂರ್ಯ  ಆ ಚಂದ್ರ ಚುಕ್ಕಿ ಬೆಳ್ಳಿ ಪಥದ ಜಾಡು
ಆ ನೀಲ ನಭದ  ಪಾರವಿಲ್ಲದ  ನಿಸ್ಸೀಮ ಹರವು
ತನ್ನದಾಗಿಸಿತ್ತಲ್ಲ ನಿನ್ನ  ಮಿಂಚುಗಣ್ಣಿನ  ಹೊಳವು

ಪ್ರೀತಿಯ ಹೃದಯಗಳ ಕನಸಾಗಿ ವಿರಹಿಯ ಉಸಿರಾಗಿ
ಪ್ರೀತಿ, ಮಮತೆ ವಾತ್ಸಲ್ಯಕೆ  ಕಣ್ಣಾಗಿ
ಬಾಳ ನೆನಪುಗಳ  ಆಗರವು  ನೀನಾಗಿ
ಸರಿಯಿತಲ್ಲ ನಿನ್ನ ಬಾಳು.

ಎತ್ತಿದವರ  ‌ಕೂಸಾಗಿ ಯಾಕೆ ಸುಯ್ಯುತಿಹೆ?

ಬೇಕಿಲ್ಲ  ನಿಟ್ಟುಸಿರು
ತುಂಬು ಜೀವನ ನಿನ್ನದು ಸಿಗದಲ್ಲ ಒಂದು ಕಸರು
ಭೂತ, ವರ್ತಮಾನ, ಭವಿಷ್ಯತ್ತಿನ ತುಂಬ ನಿನ್ನ  ನೆರಳು
ಕಾಲಾಯ ತಸ್ಮೈ ನಮಃ ಅನ್ನದಿರಲಾದೀತೆ ನೀ  ಹೇಳು

 ಸರೋಜಿನಿ  ಪಡಸಲಗಿ
ಆ ಹಳೆಯ ಎಕ್ಸಾಕ್ಟ ಕ್ಯಾಮೆರಾದ ರೋಚಕ ಹಿನ್ನಲೆ ಬಗ್ಗೆ ಓದಿ – http://www.oregonlive.com/geek/2016/02/watch_oregon_hikers_find_myste.html

 

ಈ ಛಾಯಾ ಚಿತ್ರಗಳ ಹಿಂದೆ ಇರುವ ನಿಜ ಘಟನೆಗಳ ವಿವರಗಳು? ನಿಮ್ಮ ಹುಡುಕಾಟಕ್ಕಾಗಿ!!

vietnamese-girl-running
ವಿಯೆತ್ನಾಮ್ ಹುಡುಗಿ – ನಿಕ್ ಉಟ್ ತೆಗೆದದ್ದು
alan-kurdi
ಸಿರಿಯನ್-ಕರ್ದಿಷ್ ಮಗು – ನಿಲುಫರ್ ಡಿಮಿರ್ ತೆಗೆದದ್ದು
250px-capa_death_of_a_loyalist_soldier
ಬೀಳುತ್ತಿರುವ ಯೋಧ – ರಾಬರ್ಟ್ ಕಾಪಾ ತೆಗೆದದ್ದು
the-vulture-and-the-little-girl
ಸುಡಾನ್ ಮಗು ಮತ್ತು ಹದ್ದು – ಕೆವಿನ್ ಕಾರ್ಟರ್ ತೆಗೆದದ್ದು
sharbat_gula
ಆಫ್ಘಾನ್ ಹುಡುಗಿ – ಸ್ಟೀವ್ ಮ್ಯಾಕ್ಕರ್ರಿ ತೆಗೆದದ್ದು

4 thoughts on “ಕ್ಲಿಕ್ ಕವನ, “ನೀ ಹಿಡಿದ ಚಿತ್ರಗಳ ಸಾಲು” – ಡಾ. ಶ್ರೀವತ್ಸ ದೇಸಾಯಿ.

  1. ಎರಡೂ ಕವನಗಳನ್ನ ಓದಿದ ಮೇಲೆ ನನ್ನ ಪ್ರೀತಿಯ ಫ್ಯೂಜಿಕ ಕ್ಯಾಮೆರವನ್ನ ಪೆಟ್ಟಿಗೆಯಿಂದ ಹೊರ ತೆಗೆದೆ. ಅದು ನನ್ನ ಹತ್ತಿರಕ್ಕೆ ಬಂದು ಮೂವತ್ತು ವರ್ಷವಾಯ್ತು. ಸಧ್ಯ, ಎಲ್ಲೂ ಮಣ್ಣು ಅಂಟಿಲ್ಲ ಅಂತ ಸಮಾಧಾನವಾಯ್ತು. ಶ್ರೀವಾಸ್ತವ ಮತ್ತು ಸರೋಜಿನಿಯವರಿಗೆ ಕೃತಜ್ಞತೆಗಳು.

    Like

  2. ಚಿತ್ರಕವನಗಳ ಸರಣಿ ಲೇಖನ ಇತ್ತೀಚೆಗೆ ಸ್ತಬ್ಧವಾಗಿತ್ತು. ಈ ಶುಕ್ರವಾರ ಶ್ರಿವತ್ಸ ದೇಸಾಯಿ ಮತ್ತು ಸರೋಜಿನಿ ಅವರು ಮತ್ತೊಮ್ಮೆ ನಮಗೆ ಈ ಸರಣಿಯನ್ನು ಪ್ರಾರಂಭಿಸಿ ಅದರ ಸೊಗಸನ್ನು ಎತ್ತಿಹಿಡಿದಿದ್ದಾರೆ. ದೇಸಾಯಿ ಅವರಿಗೆ ಕ್ಯಾಮೆರ ಜೊತೆಗಿರುವ ಮಧುರ ಸಂಬಂಧ ಈ ಕ್ಲಿಕ್ ಕವನದಲ್ಲಿ ಚೆನ್ನಾಗಿ ವ್ಯಕ್ತವಾಗಿದೆ. ಜಗತ್ತಿನ ವಿದ್ಯಮಾನಗಳನ್ನು ಚಿತ್ರಗಳಲ್ಲಿ ಜೀವಂತವಾಗಿ ಸೆರೆಹಿಡಿದಿಟ್ಟಿರುವ ಈ ಸಾಧನವನ್ನು ಪ್ರೀತಿಸದ ಮಂದಿ ಬಹಳ ಕಡಿಮೆ. ಮಾಧ್ಯಮ ಜಗತ್ತಿನ ದಾರಿದೀಪದಂತಿರುವ ಕ್ಯಾಮೆರಾ ನಡೆದು ಬಂದ ದಾರಿಯೂ ರೋಚಕ ವಿಷಯವೇ! ವಿಯಟ್ನಾಮ್, ಸಿರಿಯಾ, ಆಫ಼್ಘಾನಿಸ್ತಾನ ದೇಶಗಳಲ್ಲಿ ನಡೆದ ಕರಾಳ ಘಟನೆಗಳಿಂದ ಹಿಡಿದು, ಆಫ಼್ರಿಕಾ ಜನತೆಯ ಬವಣೆ, ಜಗತ್ತಿನ ಎಲ್ಲಾ ವಿದ್ಯಮಾನಗಳನ್ನ ಶಾಶ್ವತವಾಗಿ ಸೆರೆಹಿಡಿಯುವ ಈ ಸಾಧನ, ಜೀವನದ ಸುಂದರ ಸನ್ನಿವೇಶಗಳು, ನಿಸರ್ಗದ ಸುಂದರ ಚಿತ್ರಗಳನ್ನೂ ನಮ್ಮ ಮುಂದಿಟ್ಟಿವೆ. ಇಂತಹ ಹಲವು ಹತ್ತು ಮುಖಗಳನ್ನು ನಮ್ಮ ಮುಂದಿಟ್ಟು, ಭೂತ ಭವಿಷ್ಯ ಮತ್ತು ವರ್ತಮಾನಗಳ ಸೂತ್ರಧಾರನಾದ ಈ ಕ್ಯಾಮೆರಾ ಮಹಿಮೆಯನ್ನು ತಮ್ಮದೇ ಆದ ರೀತಿಯಲ್ಲಿ, ಸುಂದರ ಪದಗಳಲ್ಲಿ ಹೆಣೆದು ಕೊಟ್ಟ ದೇಸಾಯಿ ಮತ್ತು ಸರೋಜಿನಿ ಅವರಿಗೆ ನನ್ನ ಧನ್ಯವಾದಗಳು. ಸರೋಜಿನಿ ಅವರ ಕವನದಲ್ಲಿ ಜೀವನವನ್ನು ಅವರು ನೋಡುವ ಬಗೆಯೇ ಬೇರೆ ಎನ್ನುವುದು ವ್ಯಕ್ತವಾಗಿದೆ. ಕವನದ ಮೂರನೆಯ ಭಾಗದಲ್ಲಿರುವ “ಆ ಗುಡ್ಡ ಆ ಬೆಟ್ಟ ಆ ಕಾಡು ಆ ನಾಡು
    ಆ ಸೂರ್ಯ ಆ ಚಂದ್ರ ಚುಕ್ಕಿ ಬೆಳ್ಳಿ ಪಥದ ಜಾಡು
    ಆ ನೀಲ ನಭದ ಪಾರವಿಲ್ಲದ ನಿಸ್ಸೀಮ ಹರವು
    ತನ್ನದಾಗಿಸಿತ್ತಲ್ಲ ನಿನ್ನ ಮಿಂಚುಗಣ್ಣಿನ ಹೊಳವು“ ಸಾಲುಗಳು ಮಾನವ ಕ್ಯಾಮೆರಾ ಮೂಲಕ ನಿಸರ್ಗದ ಸುಂದರ ಚಿತ್ರಗಳನ್ನು ನಮ್ಮ ಮುಂದಿಡುತ್ತಾ ಬಂದಿರುವ ಎನ್ನುವುದನ್ನು ಬಹಳ ಚೆನ್ನಾಗಿ ತಮ್ಮ ಪದಗಳಲ್ಲಿ ವ್ಯಕ್ತಪಡಿಸಿದ್ದಾರೆ.
    ಈ ಚಿತ್ರ-ಕವನ ಸರಣಿ ಮುಂದುವರೆಯಲಿ!
    ಉಮಾ ವೆಂಕಟೇಶ್

    Liked by 3 people

    • ಉಮಾ ಮತ್ತು ವಿನತೆಯವರಿಗೆ ಧನ್ಯವಾದಗಳು.ಉಮಾ ಅವರು ಹೇಳಿದಂತೆ ನಾನು ನಿಸರ್ಗಪ್ರಿಯಳು,ಮಾಧುರ್ಯಪ್ರಿಯಳು.ಆದರೆ ” ಆ ಗುಡ್ಡ ಆ ಬೆಟ್ಟ ಆ ಕಾಡು ಆ ನಾಡು
      ಆ ಸೂರ್ಯ ಆ ಚಂದ್ರ ಚುಕ್ಕಿ ಬೆಳ್ಳಿ ಪಥದ ಜಾಡು ” ಎಂಬಲ್ಲಿ ಬರೀ ನಿಸರ್ಗವಲ್ಲ , ಅದರ ಜೊತೆ ಈ ನಾಡು ,ಈ ವಿಶ್ವದ ಎಲ್ಲ ಆಗು ಹೋಗುಗಳನ್ನೂ ಅದು ಒಳಗೊಂಡಿದೆ ನನ್ನ ದೃಷ್ಟಿಯಲ್ಲಿ , ತನ್ನದೇ ರೀತಿಯಲ್ಲಿ. ನನ್ನ ದೃಷ್ಟಿಕೋನದ ಬಗ್ಗೆ ಹೇಳುವ ಅವಕಾಶ ಕೊಟ್ಟ ಉಮಾ ಅವರ ಅನಿಸಿಕೆಗೆ ಧನ್ಯವಾದಗಳು
      ಸರೋಜಿನಿ ಪಡಸಲಗಿ

      Liked by 2 people

Leave a Reply to Sarojini Padasalagi Cancel reply

Your email address will not be published. Required fields are marked *